Sep 22, 2019

ಒಂದು ಬೊಗಸೆ ಪ್ರೀತಿ - 32

ಡಾ. ಅಶೋಕ್.‌ ಕೆ. ಆರ್.‌
ಇಬ್ಬರೂ ರೂಮಿನಿಂದ ಖುಷಿಖುಷಿಯಾಗಿ ಹೊರಬಂದೋ. ನಾ ಅಪ್ಪನ ತೋಳಿನಲ್ಲಿದ್ದೆ. ಅಮ್ಮ ಇಬ್ಬರನ್ನೂ ನೋಡಿ ಮುಸಿನಕ್ಕರು. ತಮ್ಮ ಕೂಡ ಒಮ್ಮೆ ನಕ್ಕ. ತಮ್ಮ ಮೊದಲೇ ಹೆಚ್ಚು ಮಾತನಾಡುವವನಲ್ಲ. ಈಗಂತೂ ಮೂಗನಂತಾಗಿಬಿಟ್ಟಿದ್ದ. “ನಿಮ್ಮ ಸಂಭ್ರಮ ಸಡಗರವೆಲ್ಲ ಮುಗಿದಿದ್ರೆ ಬನ್ನಿ ಊಟಕ್ಕೆ" ಅಮ್ಮ ಕರೆದಳು. 

“ಏನ್ ಮಾಡಿದ್ದಿ?” ಅಪ್ಪನ ಪ್ರಶ್ನೆ. 

“ಅವರೆಕಾಳು ಉಪ್ಸಾರು" 

“ಥೂ ಥೂ. ಅಷ್ಟು ದಿನದಿಂದ ಅದೇ ಉಪ್ಸಾರು, ತಿಳಿಸಾರು ಬಿಟ್ರೆ ಬೇಳೆಸಾರು. ಬಾಯಿ ಕೆಟ್ಟೋಗದೆ. ನೀವದನ್ನೇ ತಿಂದುಕೊಳ್ಳಿ. ನಾನೂ ನನ್ನ ಮಗಳು ಬಾಯ್ರುಚಿಗೇನಾದ್ರೂ ತಿಂದ್ಕೊಂಡು ಬರ್ತೀವಿ" ಅಂದರು ಅಪ್ಪ. 

“ನಮ್ ಬಾಯಿಯೇನು ರುಚಿಗೆ ಹಂಬಲಿಸೋದಿಲ್ಲಾಂತಾನಾ? ನಾವೇನ್ ಪಾಪ ಮಾಡಿದ್ದೊ. ನಾವೂ ಬರ್ತೀವಿ" ಅಮ್ಮ ಅಂದರು. ನಾಲ್ಕೂ ಮಂದಿ ಹೊರಗೆ ಊಟಕ್ಕೆ ಹೋದೋ' 

“ಹೆಂಗೋ ಕೊನೇಪಕ್ಷ ನಿಮ್ಮ ಮನೆಯವರಾದ್ರೂ ಸರಿ ಹೋದ್ರಲ್ಲ ಬಿಡು" ಸಾಗರ ನಿಟ್ಟುಸಿರುಬಿಟ್ಟ. 

'ಅ‍ಯ್ಯೋ ಅಷ್ಟು ಬೇಗ ನಿರ್ಧಾರ ಮಾಡಿಬಿಡಬೇಡಪ್ಪ. ಇನ್ನೂ ಬಹಳಷ್ಟು ನಡೆದಿದೆ' 

“ಒಳ್ಳೆ ಮೆಗಾಸೀರಿಯಲ್ ಆಯ್ತಲ್ಲೇ ನಿನ್ನ ಕತೆ" 

'ಅಲ್ವ! ಈಗ ಯೋಚಿಸಿದ್ರೆ ನಂಗೂ ಹಂಗೇ ಅನ್ಸುತ್ತೆ. ಎಷ್ಟೆಲ್ಲ ನಡೆದುಹೋಯ್ತಲ್ಲ ಅಂತ. ಬೋರಾಯ್ತೇನೋ? ಬೋರಾಗಿದ್ರೆ ಇನ್ನೊಂದಿನ ಹೇಳ್ತೀನಿ ಬಿಡು' 

“ಹಂಗೇನಿಲ್ವೇ. ಇದೆಲ್ಲ ಹೇಳಿ ಮುಗಿಸಾಗಬೇಕಿತ್ತು ಇಷ್ಟೊತ್ತಿಗೆ. ಎಲ್ಲಿ.... ನಾವಿಬ್ರು ಇತ್ತೀಚೆಗೆ ಮಾತು ಶುರು ಮಾಡಿದಾಗೆಲ್ಲ ಸೆಕ್ಸು ಕಡೆಗೇ ಹೋಗಿಬಿಡ್ತಿದ್ದೋ ಪಟ್ಟಂತ. ಎಷ್ಟೋ ದಿನದ ಮೇಲೆ ಸೆಕ್ಸ್ ಬಿಟ್ಟು ಬೇರೆ ವಿಷಯ ಮಾತಾಡ್ತಿರೋದು ನಾವಿಬ್ರು. ಐ ಯ್ಯಾಮ್ ಹ್ಯಾಪಿ ಫಾರ್ ದಟ್" ಅಂದ. ಹುಡುಗ್ರು ಹಿಂಗೂ ಇರ್ತಾರಾ! ಇದ್ದಾನಲ್ಲ ನನ್ನ ಸಾಗರ....... 

“ನಿನ್ ಹಸ್ಬಂಡ್ ಇನ್ನೂ ಬರಲಿಲ್ಲವೇನೇ?”

ಒಂದೊಂದೇ ಎಪಿಸೋಡು ಹುಡುಕುಡುಕಿ ಓದೋಕೆ ಬೇಸರವಾ? ಪೂರ್ತಿ ಇ - ಪುಸ್ತಕ ತೆಗೆದುಕೊಳ್ಳಲು ಇಲ್ಲಿ ಕ್ಲಿಕ್ಕಿಸಿ.

'ಇನ್ನೂ ಇಲ್ವೋ. ಇವತ್ತು ಜಗಳ ಸ್ವಲ್ಪ ಜೋರಾಗೇ ಆಯ್ತಲ್ಲ. ಬರ್ತಾರೆ ರಾತ್ರಿ ಫ್ರೆಂಡ್ಸ್ ಜೊತೆ ಎಣ್ಣೆ ಹೊಡೆದಾದ ಮೇಲೆ' 

“ಮ್. ಸರಿ ಬಿಡು. ಒಳ್ಳೇದೇ ಆಯ್ತು. ಆಮೇಲೇನಾಯ್ತೆ" 

'ಆಮೇಲಿನ್ನೇನು ದಿನಾ ಪರಶು ಜೊತೆ ಮಾತಾಡು ನಿಮ್ಮಮ್ಮನ ಹತ್ತಿರ ಹೆಂಗಾರೂ ಮಾಡಿ ಒಪ್ಪಿಸು ಅಂತ ಗೋಗರೆಯೋದು, ಇಲ್ವೇ ಒಪ್ತಿಲ್ಲ ನಡಿ ಓಡೋಗಿ ಮದುವೆಯಾಗೋಣ ಅಂತ ಅವನನ್ನೋದು ನಡೀತಾನೇ ಇತ್ತು. ನಂಗೇನೋ ಅವನು ಅವರಮ್ಮನ ಬಳಿ ಮಾತನಾಡ್ತಿದ್ದಾನಾ ಅನ್ನೋದೇ ಅನುಮಾನವಾಗಿಬಿಟ್ಟಿತ್ತು. ಕೊನೆಗೊಂದು ದಿನ ಬೇಸತ್ತು ನಡಿಯೋ ನಾನೇ ನಿಮ್ಮಮ್ಮನ ಬಳಿ ಮಾತನಾಡ್ತೀನಿ ಅಂದೆ. ಮೊದಮೊದಲು ಹಿಂಜರಿದ. ಕೊನೆಗೆ ನನ್ನ ಬಲವಂತ ವಿಪರೀತವಾಗಿ ಒಪ್ಪಿಕೊಂಡ. ಡ್ಯೂಟಿ ಮುಗಿಸಿ ಅವನ ಗಾಡಿಯಲ್ಲೇ ಅವರ ಮನೆಗೆ ಹೋದೆ. ಅವರಮ್ಮ ಅಕ್ಕ ಇಬ್ಬರೂ ಮನೆಯಲ್ಲಿದ್ದರು. ನಾ ಒಳಗೆ ಕಾಲಿಡುತ್ತಿದ್ದಂತೆಯೇ ಅಮ್ಮ ರೂಮು ಸೇರಿಕೊಂಡು ಬಾಗಿಲು ಹಾಕಿಕೊಂಡರು. ಅಕ್ಕನ ಜೊತೆ ಒಂದಷ್ಟೊತ್ತು ಮಾತನಾಡಿದೆ. ಅಕ್ಕನಿಗೇನೋ ನಮ್ಮಿಬ್ಬರ ಮದುವೆ ನಡೆದರೆ ಚೆನ್ನ ಎಂದಿತ್ತು. ಆದರೆ ಅಮ್ಮನಿಗೆ ಎದುರಿಗೆ ಮಾತನಾಡಲಾರರು. ಅರ್ಧ ತಾಸು ಕಳೆಯಿತು, ಅಮ್ಮ ಹೊರಬರಲಿಲ್ಲ. ಪರಶು ಕಡೆ ನೋಡಿದೆ, ಮೊಬೈಲಿಡಿದುಕೊಂಡು ಸ್ನೇಕ್ ಗೇಮ್ ಆಡುತ್ತಾ ಕುಳಿತಿದ್ದ. 'ಕರಿಯೋ ಅಮ್ಮನ್ನ' ಮೆಲ್ಲಗಿನ ದನಿಯಲ್ಲಿ ಪುರುಷೋತ್ತಮನಿಗೆ ಹೇಳಿದೆ. ಮೊಬೈಲಿನಿಂದ ಕತ್ತು ಮೇಲೆತ್ತದೆ "ಅಮ್ಮ. ಈಚೆ ಬಾ. ಒಳಗೇನು ಮಾಡ್ತಿದ್ದೀಯ?” ಎಂದ. 

ಅವರಮ್ಮ ಬಾಗಿಲಿಂದೆಯೇ ಕಿವಿಯನ್ನು ಆನಿಸಿಕೊಂಡು ನಿಂತಿದ್ದರೆನ್ನಿಸುತ್ತೆ. “ಹೋದ್ಲಾ ಅವಳು" ಎಂದಳು. 

“ಇಲ್ಲ. ನಿನ್ನ ಜೊತೆ ಮಾತನಾಡಬೇಕಂತೆ ಬಾ ಹೊರಗೆ" ಅಕ್ಕ ಹೇಳಿದಳು, ಪರಶುವಿನ ಪರವಾಗಿ. 

“ಆ ಚಿನಾಲಿ ಜೊತೆ ನಂದೇನಂತೆ ಮಾತುಕತೆ. ಅವಳು ಹೋದ ಮೇಲೆ ಹೇಳು ಬರ್ತೀನಿ" ಮೂರನೇ ಸಲ ನಾನು ಚಿನಾಲಿ ಅನ್ನೋ ಪದ ಕೇಳಿಸಿಕೊಂಡಿದ್ದು. ಪರಶು ಕಡೆಗೆ ನೋಡಿದೆ. ಮೊಬೈಲು ಕೆಳಗಿಟ್ಟಿದ್ದ. ಅಮ್ಮ ಇದ್ದ ರೂಮಿನ ಬಾಗಿಲಿನ ಕಡೆಗೊಮ್ಮೆ ನೋಡಿ ನನ್ನೆಡೆಗೆ ನೋಡಿದ. ಏನೂ ಮಾತನಾಡಲಿಲ್ಲ. ಅವನ ಮನದಲ್ಲಿರಬಹುದಾದ ಯೋಚನಾಲಹರಿ ನನ್ನರಿವಿಗೆಟುಕಲಿಲ್ಲ. ದುಃಖವೋ ಸಿಟ್ಟೋ ಮೂಡಿತು. ಎದ್ದು ಸೀದಾ ಅವರಿದ್ದ ರೂಮಿನ ಬಾಗಿಲ ಬಳಿ ಹೋದೆ. 

'ನಾ ಬಂದಿದ್ದು ನಿಮ್ಮ ಜೊತೆ ಮಾತಾಡೋಕೆ ಅಂತ ಅಮ್ಮ. ಚಿನಾಲಿ ಅಂತೆಲ್ಲ ಬಯ್ಯಿಸಿಕೊಳ್ಳೋಕಲ್ಲ. ಬರ್ತೀನಿ' ಎಂದೇಳಿದೆ. 

“ಬಿಟ್ ಬರ್ತೀನಮ್ಮ" ನನ್ನಿಂದೆಯೇ ನಿಂತಿದ್ದ ಪರಶು ಹೇಳಿದ. 

“ಪೂರ್ತಿ ಬಿಟ್ಟು ಬಾ. ಇಷ್ಟು ದಿನ ಎಷ್ಟು ಮಜಾ ಮಾಡ್ಕಂಡ್ಯೋ ಅಷ್ಟು ಸಾಕು....ಲೇ ಇವಳೇ. ಆ ಚಿನಾಲಿಮುಂಡೆ ಕುಳಿತಿದ್ದ ಸೋಫಾದ ಬೆಡ್ ಶೀಟ್ ಬದಲಿಸು" ಎಂದು ಅಕ್ಕನಿಗೆ ಕೂಗಿ ಹೇಳಿದರು. ನನಗಿಷ್ಟು ಅವಮಾನವಾಗುತ್ತಿದ್ದರೂ ಪರಶು ಅಮ್ಮನಿಗೆ ಕಡೇಪಕ್ಷ 'ಸುಮ್ಮನಿರಮ್ಮ. ಏನ್ ಅಸಂಬದ್ಧ ಮಾತಾಡ್ತಿದ್ದಿ' ಅಂತಲಾದರೂ ಹೇಳುತ್ತಾನೆಂದು ಕೊಂಡಿದ್ದೆ. ನನ್ನ ನಿರೀಕ್ಷೆ ನಿರೀಕ್ಷೆಯಾಗಷ್ಟೇ ಉಳಿಯಿತು. 

ಹೊರಗೆ ಬಂದೋ. ಬೈಕನ್ನೇರಿ ಸ್ಟಾರ್ಟ್ ಮಾಡಿದ ಪುರುಷೋತ್ತಮ. ಬೈಕ್ ದಾಟಿ ಮುಂದೆ ನಡೆದೆ. “ಹತ್ಕೊಳ್ಳೆ" ಎಂದ. 'ಪರವಾಗಿಲ್ಲ ಕಣೋ. ಈ ಚಿನಾಲೀನ ಹತ್ತಿಸಿಕೊಳ್ಳೋಕೆ ಯಾರಾದ್ರೂ ಇದ್ದೇ ಇರ್ತಾರೆ ಬಿಡು' ಎಂದ್ಹೇಳಿ ಮುಂದೆ ನಡೆದೆ. ಅವನು ಆಗಲಾದರೂ ಒಂದು ಸಾರಿ ಕೇಳಿದ್ದರೆ ಮನ ಸಮಾಧಾನಗೊಳ್ಳುತ್ತಿತ್ತೇನೋ. ಉಹ್ಞೂ, ಕ್ಷಮಿಸು ಎನ್ನುವ ಪದ ಅವನಲ್ಲಿರಲಿಲ್ಲ ಅಂದು. ತಲೆ ತಗ್ಗಿಸಿ ನಿಂತಿದ್ದನಷ್ಟೇ.

ನಿಮಗೀ ಕಾದಂಬರಿ ಮೆಚ್ಚುಗೆಯಾಗುತ್ತಿದ್ದಲ್ಲಿ 'ಹಿಂಗ್ಯಾಕೆ' ವೆಬ್ ಪುಟಕ್ಕೆ ಬೆಂಬಲವಾಗಿ ನಿಮ್ಮಿಂದ ಸಾಧ್ಯವಾದಷ್ಟು ಹಣವನ್ನು ಕಳಿಸಿಕೊಡಲು ಕೆಳಗಿರುವ ಲಿಂಕ್ ಕ್ಲಿಕ್ಕಿಸಿ.  ನಿಮ್ಮ ಬೆಂಬಲ ಮುಂದಿನ ದಿನಗಳಲ್ಲಿ ಕಾದಂಬರಿಯ - ಪುಸ್ತಕ ಉಚಿತವಾಗಿ ಲಭ್ಯವಾಗಿಸಲು ಸಹಕಾರಿಯಾಗಲಿದೆ.

* * *

ಪುರುಷೋತ್ತಮನ ಪೊಸೆಸಿವ್ ನೆಸ್ ಅತಿಯಾದಾಗಲೆಲ್ಲ ಹೇಗಪ್ಪ ಇವನ ಜೊತೆ ಸಂಸಾರ ಸಾಗಿಸೋದು ಅಂತ ಭಯವಾಗ್ತಿತ್ತು. ಆದರದು ತಾತ್ಕಾಲಿಕವಾಗಿರ್ತಿತ್ತು. ಆದರೆ ಅವತ್ತು ಅವನು ನಡೆದುಕೊಂಡ ರೀತಿ ಇವನೇನಾ ನನ್ನ ಪರಶು ಎಂದುಕೊಳ್ಳುವ ಹಾಗೆ ಮಾಡಿಬಿಟ್ಟಿತು. ನನ್ನ ಕಡೆ ಯಾರಾದ್ರೂ ಕೆಟ್ಟ ದೃಷ್ಟಿ ಬೀರಿದರೆ, ನನ್ನ ಬಗೆಗೆ ಕೆಟ್ಟ ಮಾತುಗಳನ್ನಾಡಿದರೆ ತಡೆದುಕೊಳ್ಳದ ಪರಶುನನ್ನು ಇಷ್ಟು ದಿನಗಳ ಕಾಲ ನೋಡಿದ್ದೆ, ಇವತ್ತು ನೋಡಿದ ಪರಶು ಅವನಾಗಿರಲಿಲ್ಲ. ಇಂತವನನ್ನು ಮದುವೆಯಾಗದೆ ಇರೋದೆ ಒಳ್ಳೇದು ಅನ್ನೋ ಭಾವನೆ ಮೊಟ್ಟ ಮೊದಲ ಬಾರಿಗೆ ಅವತ್ತು ನನ್ನಲ್ಲಿ ಮೊಳಕೆಯೊಡೆಯಿತು. ಅವನಲ್ಲೇಳಲಿಲ್ಲ ಅಷ್ಟೇ. ಮದುವೆಯಾದರೆ ಪರಶುನನ್ನು ಮಾತ್ರ ಎಂದಿದ್ದ ನಿರ್ಧಾರ ಪರಶುನನ್ನು ಮದುವೆಯಾದರೆ ಸಂತೋಷ ಇಲ್ಲಾಂದ್ರೆ ಏನು ಮಾಡೋಕಾಗುತ್ತೆ ಅಪ್ಪ ತೋರಿಸಿ ಒಪ್ಪಿದ ಹುಡುಗನನ್ನೇ ಮದುವೆಯಾದರಾಯಿತು ಎಂದು ಬದಲಾಯಿತು. ಅವರಮ್ಮನ ವರ್ತನೆ, ಅದಕ್ಕೆ ಪರಶು ತೋರಿದ ಪ್ರತಿಕ್ರಿಯೆ ಪುರುಷೋತ್ತಮನ ಕುರಿತು ನನ್ನಲ್ಲಿದ್ದ ಪ್ರೀತಿ ಕಾಳಜಿಯೆಲ್ಲ ಪಾತಾಳಕ್ಕೆ ಸರಿದು ಬಿಡುವಂತೆ ಮಾಡಿತು ಎಂದರದು ಸುಳ್ಳಲ್ಲ. 

ಮನೆಗೆ ಬಂದಾಗ ನನ್ನ ಮುಖ ನೋಡಿದಾಕ್ಷಣ ಅಪ್ಪನಿಗೆ ಏನೋ ಅವಮಾನಕರ ಪ್ರಸಂಗ ಜರುಗಿದೆ ಎಂದರಿವಾಯಿತು. 'ಇದೆಲ್ಲ ಮಾಮೂಲು. ತಲೆ ಕೆಡಿಸಿಕೊಳ್ಳಬೇಡ' ಎನ್ನುವಂತೆ ನಸು ನಕ್ಕರು. ಸಮಾಧಾನವಾಯಿತು. 

ಇನ್ನು ಮೇಲೆ ಪರಶು ಸಿಕ್ಕಾಗ ಮಾತೇ ಆಡಬಾರದೆಂದು ಕೊಳ್ಳುತ್ತಿದ್ದೆ. ಅವ ಭೇಟಿಯಾದಾಗ ಎಲ್ಲಾ ಮ಻ರೆತಂತಾಗುತ್ತಿತ್ತು. ಅವನಿಂದೆ ಬೈಕಿನಲ್ಲಿ ಕುಳಿತು ಸುತ್ತುವಾಗ ಮದುವೆ ತೊಂದರೆ ಜಾತಿ ಎಲ್ಲ ಮರೆತುಹೋಗುತ್ತಿತ್ತು. ಮತ್ತದೇ ನನ್ನವು ಓತಪ್ರೋತ ಮಾತುಗಳು. ನಿಮ್ಮನೇಲಿ ಮಾತನಾಡಿದಾ ಅಂತ ಕೇಳುವುದನ್ನು ಹೆಚ್ಚು ಕಡಿಮೆ ನಿಲ್ಲಿಸಿಯೇ ಬಿಟ್ಟಿದ್ದೆ. ಅದು ಅವನಿಗೂ ಸಮಾಧಾನ ನೀಡಿರಬೇಕು. ಮತ್ತೆ ಮೊದಲಿನಂತೆಯೇ ಇದ್ದೆವು, ಅಥವ ಹಾಗಂದುಕೊಂಡಿದ್ದೆವು' 

“ಅಲ್ವೇ ಧರು. ನಿನ್ನ ಮನಸ್ಸಲ್ಲಿ ಏನು ಓಡ್ತಿತ್ತಾಗ. ಇವನ ಜೊತೆ ಮದುವೆಯಾಗದೇ ಇದ್ರೆ ಅಷ್ಟೇ ಹೋಯ್ತು ಅಂದುಕೊಂಡವಳು ಅದನ್ನು ಅವನಿಗೆ ತಿಳಿಸಿ ಸಂಬಂಧ ಮುರಿದುಕೊಳ್ಳಬೇಕಿತ್ತಲ್ವ" 

'ಹೌದು ಕಣೋ. ಅದೇನು ಚಿಂತಿಸುತ್ತಿದ್ನೋ, ಅದೇನು ಯೋಚಿಸುತ್ತಿದ್ನೋ ನನಗೇ ಗೊತ್ತಿಲ್ಲ. ಅಷ್ಟೆಲ್ಲ ಆದ್ರೂ ಆರು ವರ್ಷದಿಂದ ಲವ್ ಮಾಡ್ತಿದ್ದೀವಿ ನಾವ್ ಮದ್ವೆಯಾಗದೇ ಇರ್ತೀವಾ ಅನ್ನೋ ಹುಂಬ ಧೈರ್ಯ, ಎಷ್ಟೇ ಆಗಲಿ ನನ್ನ ಪರಶು ಎಲ್ಲರನ್ನೂ ಒಪ್ಪಿಸಿ ಮದುವೆಯಾಗೇ ತೀರುತ್ತಾನೆಂಬ ಹುಸಿ ನಂಬಿಕೆಯಿತ್ತೋ ಏನೋ ಗೊತ್ತಿಲ್ವೋ. ಅದೆಲ್ಲ ಆಗಿ ಮೂರೋ ನಾಲ್ಕೋ....ಎಷ್ಟು ವರ್ಷ ಆಯ್ತು ಅನ್ನೋದೇ ಮರೆತಂತಾಗಿದೆ. ಈಗ ನೆನಪಿಸಿಕೊಂಡರೂ ಅವತ್ತು ನನ್ನ ಮನದಲ್ಲೇನಿತ್ತು ಅನ್ನೋದರ ಕುರಿತು ಸ್ಪಷ್ಟತೆಯಿಲ್ಲ. ಮದುವೆಯಾಗದೇ ಇದ್ದರೇನಂತೆ ನಾವಿಬ್ಬರೂ ಕೊನೆಯವರೆಗೂ ಒಳ್ಳೇ ಸ್ನೇಹಿತರಾಗಿ ಉಳಿದುಕೊಳ್ತೀವಿ, ಒಬ್ಬರಿಗೊಬ್ಬರ ಕಷ್ಟಕ್ಕಾಗುತ್ತೀವಿ ಅಂದುಕೊಂಡುಬಿಟ್ಟಿದ್ನೋ ಏನೋ. ಅದೇ ನಾನು ಮಾಡಿದ ದೊಡ್ಡ ತಪ್ಪು ಅಂತ ಗೊತ್ತಾಗಲಿಕ್ಕೆ ಬಹಳ ದಿನವೇನೂ ಆಗಲಿಲ್ಲ. 

ಅಪ್ಪ ವಿರಾಮದ ವೇಳೆಯಲ್ಲೊಮ್ಮೆ "ದಾವಣಗೆರೇಲಿ ನನ್ನ ಫ್ರೆಂಡ್ ಒಬ್ಬನಿದ್ದಾನೆ. ಅವನ ಪರಿಚಯದ ಹುಡುಗನೊಬ್ಬನಿದ್ದಾನಂತೆ, ಮೈಸೂರಿನವರೇ. ಸದ್ಯ ಹುಡುಗ ದಾವಣಗೆರೇಲಿ ಮೆಡಿಸಿನ್ ಪಿ.ಜಿ ಮಾಡ್ಕಂಡಿದ್ದಾನಂತೆ. ನೀ ಸರಿ ಅಂದ್ರೆ ಕರೆಸ್ತೀನಿ" ಅಂದರು. ಮನಸ್ಸಿನಲ್ಲೇ ನಾ ತೆಗೆದುಕೊಂಡ ನಿರ್ಧಾರ ಅವರಿಗೆ ಹೇಗೆ ಗೊತ್ತಾಗಿತ್ತೋ? 

'ಸರಿ ಕರೆಸಿ' ಅಂದೆ. 

“ನೀ ಮುಂಚಿನ ತರವೆಲ್ಲ ಮಾಡಬಾರದು ಮತ್ತೆ" ಭಯದಿಂದಲೇ ಕೇಳಿದರು. 

'ಇಲ್ಲಪ್ಪ. ಈ ಮುಂಚೆ ಯಾವತ್ತಾದ್ರೂ ಕರೆಸಿ ಅಂತ ನಾನೇ ಬಾಯಿ ಬಿಟ್ಟು ಹೇಳಿದ್ದುಂಟಾ? ಇಲ್ಲವಲ್ಲ. ಕರೆಸಿ' ಎಂದೆ. ಅವರಿಗೆ ಖುಷಿಯಾಯಿತು. 

ಹುಡುಗ ಬಂದ. ಮೊದಲ ಬಾರಿಗೆ ಸಂಯಮದಿಂದ ಹುಡುಗನನ್ನು ನೋಡಿದೆ. ಅವರ ಕಡೆಯವರಿಗೆ ಅವಮಾನವಾಗುವ ರೀತಿಯಲ್ಲಿ, ನಮ್ಮ ಮನೆಯವರಿಗೆ ಅವಮಾನವಾಗುವ ರೀತಿಯಲ್ಲಿ ವರ್ತಿಸಲಿಲ್ಲ. ಮನಸ್ಸೇನೂ ಶಾಂತವಾಗಿರಲಿಲ್ಲ. 'ಏನ್ ಮಾಡ್ತಿದ್ದಿ ಧರು? ಆರು ವರ್ಷದ ಪ್ರೀತಿ. ಹುಡುಗಾಟವಾಡ್ತಾ ಇದ್ದೀಯ?' ಎಂದು ಪಟ್ಟು ಬಿಡದೆ ಪ್ರಶ್ನಿಸುತ್ತಿತ್ತು. ಉತ್ತರ ಕೊಡುವ ಅನಿವಾರ್ಯತೆ ನನಗೆ ಕಾಣಲಿಲ್ಲ. ಬಂದ ಹುಡುಗನಿಗೆ ನಾ ಮೆಚ್ಚುಗೆಯಾದಂತೆ ತೋರಿತು. ತಿಳಿಸ್ತೀವಿ ಎಂದಷ್ಟೇ ಹೇಳಿ ಹೊರಟರವರು. 

ಸಂಜೆ ಪರಶು ಸಿಕ್ಕಾಗ ವಿಷಯ ತಿಳಿಸಿದೆ. 'ನೋಡು ಗಂಡು ಮತ್ತೆ ಬರ್ತಿದ್ದಾರೆ. ಏನಾದ್ರೂ ಮಾಡು ಬೇಗ' ಎಂದೆಲ್ಲ ಬೇಡಲಿಲ್ಲ ಈ ಬಾರಿ. 'ಹುಡುಗ ನೋಡೋಕ್ ಬಂದಿದ್ದ ಇವತ್ತು. ದಾವಣಗೆರೇಲಿ ಮೆಡಿಸಿನ್ ಪಿಜಿ ಅಂತೆ' ಎಂದು ಹೇಳಿದೆ. ಬದಲಾದ ನನ್ನ ವರ್ತನೆ ಆರು ವರ್ಷಗಳಿಂದ ನನ್ನನ್ನು ನೋಡಿರುವ ಪರಶುಗೆ ಅರ್ಥವಾಗದೇ ಇರ್ತದಾ? 

“ನನ್ನನ್ನು ಬಿಟ್ಟು ಬೇರೆಯವರನ್ನು ಹೇಗೆ ಮದುವೆಯಾಗ್ತಿ ನೀನು?” ಅವನ ಕಣ್ಣಲ್ಲಿ ನೀರು ಮೂಡೋದು ಅಪರೂಪದಲ್ಲಿ ಅಪರೂಪ. ಅವತ್ತು ಆ ಅಪರೂಪದ ದಿನವಾಗಿತ್ತು. 

'ನಂಗೇನ್ ಖುಷೀನೇನೋ ನಿನ್ನ ಬಿಟ್ಟು ಬೇರೆಯವರನ್ನು ಮದುವೆಯಾಗೋಕೆ. ನಿಂಗೆಷ್ಟು ಹಿಂಸೆಯಾಗ್ತದೋ ನಂಗೂ ಅಷ್ಟೇ ಹಿಂಸೆಯಾಗ್ತದೆ. ನೀ ಜವಾಬ್ದಾರಿಯಿಂದ ನಡೆದುಕೊಂಡಿದ್ದರೆ, ಕೊನೇಪಕ್ಷ ಇನ್ನು ಮೇಲಾದ್ರೂ ನಡೆದುಕೊಂಡರೆ ಇಬ್ಬರೂ ಆ ಹಿಂಸೆಯಿಂದ ಬಚಾವಾಗಬಹುದು. ನೋಡು ನಿನ್ನಿಷ್ಟ' 

“ನಿನ್ನಿಷ್ಟ ನಿನ್ನಿಷ್ಟ ಅಂದ್ರೆ? ನಿಂಗೇನಿಷ್ಟ ಅನ್ನೋದನ್ನು ಹೇಳಿ ಸಾಯಿ" 

'ಕೋಪ ಮಾಡಿಕೊಂಡರೆ ಏನುಪಯೋಗ? ಒಂದು ಕೆಲಸ ಹುಡುಕು, ಅಮ್ಮನನ್ನು ಒಪ್ಪಿಸು ಅನ್ನೋದಷ್ಟೇ ನನ್ನ ಬೇಡಿಕೆ ಅಲ್ವ. ನಿಮ್ಮಮ್ಮ ಒಪ್ಪಿದರೆ ನಮ್ಮ ಮದುವೆ ಖಂಡಿತ ಆಗ್ತದೆ' 

“ಮೂರೊತ್ತೂ ಅದನ್ನೇ ಬಡ್ಕೋ. ನೀನೂ ನೋಡಿದ್ದಿ, ನಾನೂ ಹೇಳ್ತಾನೇ ಇದ್ದೀನಿ ಅಮ್ಮ ಒಪ್ಪಲ್ಲ ಻ಅಂತ. ನಾ ಒಂದು ಕೆಲಸ ಹುಡಿಕಿಕೊಳ್ತೀನಿ. ಓಡಿ ಹೋಗಿ ಮದುವೆಯಾಗೋಣ. ಅದೊಂದೇ ದಾರಿ ಈಗ ಉಳಿದಿರೋದು" 

'ನಾ ಅಪ್ಪ ತೋರಿಸಿದ ಹುಡುಗನ್ನ ಮದುವೆಯಾಗೋಕೆ ಹೆಚ್ಚು ಇಷ್ಟ ಪಡ್ತೀನೇ ಹೊರತು ಪ್ರೀತಿಸಿದವನ ಜೊತೆ ಓಡಿ ಹೋಗಿ ಮದುವೆಯಾಗೋದು ಸುತಾರಾಂ ಒಪ್ಪಿತವಲ್ಲ' ಹೊರಡಲನುವಾದೆ. 

“ಹೋಗು ಹೋಗು. ಪಿಜಿ ಮಾಡ್ತಿರೋ ಡಾಕ್ಟ್ರು ಸಿಕ್ತಿದ್ದಾನಲ್ಲ ಇನ್ನು ಈ ಬಿಎ ಮಾಡಿರೋನ್ಯಾಕೆ ಬೇಕು ನಿಂಗೆ? ನಮ್ ಫ್ರೆಂಡ್ಸ್ ಹೇಳ್ತಾನೇ ಇದ್ರು ಡಾಕ್ಟ್ರುಡುಗಿ ನಿನ್ನ ಮದುವೆಯಾಗ್ತಾಳೇನ್ಲಾ ಅಂತ. ಅವರ ಮಾತನ್ನ ಸತ್ಯ ಮಾಡ್ತಿದ್ದಿ ಅಷ್ಟೇ" ವ್ಯಂಗ್ಯದಿಂದ ಹೇಳಿದ. ಅವನೆಡೆಗೆ ತಿರುಗಿ ನೋಡಿದೆ. ವ್ಯಂಗ್ಯದ ನಗು ವಿಸ್ತಾರಗೊಳ್ಳುತ್ತಿತ್ತು. 'ಆ ಮನೋಭಾವ ಇದ್ದಿದ್ದರೆ ಮೆಡಿಕಲ್ ಗೆ ಸೇರಿದ ದಿನವೇ ನಿನ್ನ ಜೊತೆ ಬ್ರೇಕ್ ಅಪ್ ಮಾಡಿಕೋಬೋದಿತ್ತಲ್ವ? ನೀ ಮರೆತಿರಬೇಕು. ನಾ ಬೆಂಗಳೂರಿನಲ್ಲಿ ಇಂಜಿನಿಯರಿಂಗ್ ತೆಗೆದುಕೊಳ್ಳುವವಳಿದ್ದೆ. ನಿನ್ನಿಂದ ದೂರಾಗ್ತೀನಿ ಅನ್ನೋ ಕಾರಣಕ್ಕೆ ಮೈಸೂರಿನಲ್ಲಿ ಮೆಡಿಕಲ್ ಆರಿಸಿಕೊಂಡಿದ್ದು. ನಾ ಬೇರೆ ಹುಡುಗನ ಕೈಲಿ ತಾಳಿ ಕಟ್ಟಿಸಿಕೊಳ್ಳುವವರೆಗೂ ನಿನ್ನ ಜೊತೆ ಮದುವೆಯಾಗುವುದನ್ನೇ ಬಯಸ್ತೀನಿ. ನೀ ನಿಮ್ಮಮ್ಮನನ್ನು ಒಪ್ಪಿಸಿ ನಮ್ಮ ಮನೆಗೆ ಬರಬೇಕಷ್ಟೇ' 

“ಹೋಗು ಹೋಗು. ನಿಮ್ಮಪ್ಪ ತೋರಿಸಿದ ಆ ಪಿಜಿ ಡಾಕ್ಟರನ್ನೇ ಮದುವೆಯಾಗೋಗು. ಆರು ವರ್ಷ ನನ್ನ ಜೊತೆ ಮಜಾ ಮಾಡಾಯ್ತಲ್ಲ ಇನ್ಯಾಕೆ ನಾನು. ತಪ್ ನಂದೇ ಪೂರ್ತಿ ಸುಖ ಅನುಭವಿಸದೇ ಬಿಟ್ಟುಬಿಟ್ಟೆ ನಿನ್ನ. ಚಿನಾಲಿ ತಕೊಂಬಂದು....” ಪ್ರತಿಕ್ರಿಯಿಸುವ ಮನಸ್ಸಾಗದೆ ತಿರುಗಿ ಬಂದುಬಿಟ್ಟೆ. 

ಅವತ್ತೆಲ್ಲ ನನ್ನೊಳಗೆ ತಳಮಳ. ಹೌದು ಆರು ವರ್ಷ ಇಬ್ಬರೂ ಜೊತೆಗಿದ್ದೊ. ಜೊತೆಗಿದ್ದು ಮನಸ್ಸು ದೇಹ ಹಂಚಿಕೊಂಡಿದ್ದಕ್ಕೆ ಮಜಾ ಅನ್ನುವ ಪದ ಬಳಕೆ ಎಷ್ಟರಮಟ್ಟಿಗೆ ಸರಿಯಾಗ್ತದೆ? ಪೂರ್ತಿ ಸುಖ ಅನುಭವಿಸದೇ ಬಿಟ್ಟುಬಿಟ್ಟೆ ಅಂದರೇನರ್ಥ? ನಂಗೇನೋ ಅವನ ಜೊತೆ ಸೆಕ್ಸ್ ಮಾಡೋಕೆ ಹಿಂಜರಿಕೆಯಿರಲಿಲ್ಲ. ಪ್ರೀತಿಸಿದ ಮೇಲೆ ದೇಹ ಹಂಚಿಕೊಂಡರೇನು ತಪ್ಪು ಅನ್ನೋದು ನನ್ನ ಯಾವತ್ತಿನ ಅಭಿಪ್ರಾಯ. ಅವನಿಗೇ ಮದುವೆಗೆ ಮುಂಚೆ ಸೆಕ್ಸ್ ಮಾಡೋಕೆ ಇಷ್ಟವಿರಲಿಲ್ಲ. ಅದನ್ನೇ ಈಗ ತನ್ನ ಬೆಂಬಲಕ್ಕೆ ಬಳಸಿಕೊಂಡು ನನ್ನ ನಡತೆಗೆ ಅವಮಾನಿಸುವ ಅಸ್ತ್ರವನ್ನಾಗಿ ಬಳಸುತ್ತಾನೆ ಎಂದೆಣಿಸಿರಲಿಲ್ಲ. ಬಹುಶಃ ಅವತ್ತೇ ನನಗೆ ನಮ್ಮಿಬ್ಬರ ಪ್ರೀತಿ ಪ್ರೇಮ ಸಂಬಂಧ ಪೂರ್ಣವಾಗಿ ಮುಗಿದುಹೋಗ್ತದೆ ಅಂತ ಅರಿವಾಯಿತನ್ನಿಸುತ್ತೆ. 

ಅಲ್ವೋ ಸಾಗರ್ ನೀ ಈ ಕೋ ಇನ್ಸಿಡೆನ್ಸು ಕಾಕತಾಳೀಯ ಫೇಟು ಅನ್ನೋದನ್ನೆಲ್ಲ ನಂಬ್ತೀಯ?' 

“ನಂಬ್ತಿರಲಿಲ್ಲ. ನೀ ಸಿಕ್ಕ ಮೇಲೆ ನಂಬಲ್ಲ ಅನ್ನೋಕೆ ಆಗಲ್ವೇ. ನೀ ಸಿಕ್ಕಿದ್ದು ಕೂಡ ಕಾಕತಾಳೀಯಾನೇ ಫೇಟೇ ಅಲ್ವ?” 

'ಹು. ಅಲ್ವ. ನಂಬೋದಿಕ್ಕೇ ಕಷ್ಟವಾಗುವಂತಹ ಘಟನೆಗಳಿಗೆ ಅವತ್ತು ನಾ ಸಾಕ್ಷಿಯಾದೆ ನೋಡು. ಪುರುಷೋತ್ತಮನ ಅಮ್ಮನ ವರ್ತನೆ, ಅವನ ನಡವಳಿಕೆ ನೋಡಿ ಬೇಸತ್ತು ಮನೆಗೆ ಬಂದಾಗ ಅಚ್ಚರಿ ಕಾದಿತ್ತು. ರಾಜೀವ ಮತ್ತವನ ಅಮ್ಮ ಅಕ್ಕ ನಮ್ಮ ಮನೆಯಲ್ಲಿ ಕುಳಿತಿದ್ದರು! ನಿಂಗ್ ಹೇಳಿದ್ನೋ ಏನೋ ನೆನಪಿಲ್ಲ. ನಾವು ಮುಂಚೆ ಇದ್ದ ಬಾಡಿಗೆ ಮನೆಯ ಬಳಿಯೇ ಅವರೂ ವಾಸವಿದ್ದರು. ಆಗೆಲ್ಲ ನಾವು ಹುಡುಗರೆಲ್ಲ ಜೊತೆಯಲ್ಲೇ ಆಡುತ್ತಿದ್ದೆವು. ನಾವು ಸ್ವಂತ ಮನೆಗೆ ಬಂದ ಮೇಲೆ ಅವರ ಜೊತೆಗೆ ಸಂಪರ್ಕವಿರಲಿಲ್ಲ. ಪುರುಷೋತ್ತಮನನ್ನು ಮದುವೆಯಾಗುವುದಿನ್ನು ಕನಸಷ್ಟೇ ಅಂತ ನನಗೆ ಮನವರಿಕೆಯಾದ ದಿನವೇ ಅವರು ನಮ್ಮ ಮನೆಯಲ್ಲಿದ್ದರು. ನನಗೆ ಹೇಳದೆ ಅಪ್ಪ ಕರೆಸಿಬಿಟ್ಟರಾ ಅಂತ ಕೂಡ ಅನುಮಾನ ಮೂಡಿತು. ಮನೆಗೆ ಹೋದ ಮೇಲೆ ತಿಳಿದದ್ದೆಂದರೆ ನಮ್ಮ ಏರಿಯಾದಲ್ಲೇ ಇರುವ ನೆಂಟರ ಮನೆಗೆ ಬಂದಿದ್ದರಂತೆ. ದಾರಿಯಲ್ಲಿ ನಮ್ಮಮ್ಮ ಆಕಸ್ಮಿಕವಾಗಿ ಸಿಕ್ಕಿ ಮನೆಗೆ ಕರೆದುಕೊಂಡು ಬಂದಿದ್ದರು. ಒಂದಷ್ಟು ಸಮಯ ಹರಟಿ ಹೊರಡುವ ಸಮಯದಲ್ಲಿ ರಾಜೀವ ನನ್ನ ಬಳಿ "ಧರಣಿ, ಮೊಬೈಲ್ ಬದಲಿಸುವಾಗ ನಿನ್ನ ನಂಬರ್ ಮಿಸ್ ಆಗೋಗಿದೆ. ನಂಬರ್ ಕೊಡು" ಎಂದ. ನನಗೋ ಆಶ್ಚರ್ಯ! ಅವನ ನಂಬರ್ ನನ್ನತ್ರ ಇರಲಿಲ್ಲ, ನನ್ನ ನಂಬರ್ ಅವನಿಗೆ ಕೊಟ್ಟಿದ್ದೂ ಇಲ್ಲ. ಅವ ನಮ್ಮ ಕಾಲೇಜಿಗೆ ಸೇರಿದ ಫಾರ್ಮಸಿ ಕಾಲೇಜಿನಲ್ಲೇ ಓದಿದ್ದು. ಅಪರೂಪಕ್ಕೆ ಕಾಲೇಜಿನ ಬಳಿ ಸಿಗ್ತಿದ್ದ. ಹಾಯ್ ಹಲೋದಲ್ಲಿ ಮಾತು ಮುಗಿಯುತ್ತಿತ್ತು. ನಾ ಪರಶು ಜೊತೆಗಿದ್ದಾಗಲೂ ಒಂದೆರಡು ಬಾರಿ ಸಿಕ್ಕಿದ್ದ. ಮನೆಯಲ್ಲಿ ಹೇಳಿಬಿಡುತ್ತಾನಾ ಅಂತ ಆಗೆಲ್ಲ ಅನುಮಾನ ಮೂಡುತ್ತಿತ್ತು. ಪುಣ್ಯಕ್ಕೆ ಅನುಮಾನ ನಿಜವಾಗಿರಲಿಲ್ಲ. ಇವಾಗ ನೋಡಿದರೆ ನಂಬರ್ ಮಿಸ್ ಆಗೋಗಿದೆ ಕೊಡು ಅಂತಿದ್ದಾನೆ! ನಗು ತಡೆದುಕೊಂಡು ನಂಬರ್ ಕೊಟ್ಟೆ. ಅಲ್ಲೇ ಮಿಸ್ಡ್ ಕಾಲ್ ಕೊಟ್ಟ. ಹೆಸರು ಸೇವ್ ಮಾಡಿಕೊಂಡೆ.

ಮುಂದಿನ ಭಾಗವನ್ನು ಓದಲು ಇಲ್ಲಿ ಕ್ಲಿಕ್ಕಿಸಿ. 

No comments:

Post a Comment