Sep 29, 2019

ಒಂದು ಬೊಗಸೆ ಪ್ರೀತಿ - 33

ಡಾ. ಅಶೋಕ್.‌ ಕೆ. ಆರ್.‌
ರಾತ್ರಿ ಮಲಗಲೋಗುವಷ್ಟರಲ್ಲಿ ಪುರುಷೋತ್ತಮ ಮತ್ತೈದು ಬಾರಿ ಕರೆ ಮಾಡಿದ್ದ. ನಾ ತೆಗೆಯಲಿಲ್ಲ. ಕೊನೆಗೆ "ಇನ್ನೂ ಕೋಪ ಹೋಗಿಲ್ವೇನೇ ಧರು" ಎಂದು ಮೆಸೇಜು ಮಾಡಿದ. 

'ಕೋಪಾನಾ? ಹಂಗೇನಿಲ್ಲಪ್ಪ' ಒಂದು ಸುಳ್ಳನ್ನ ಹಂಗೇ ವಗಾಯಿಸಿದೆ. 

“ಮತ್ಯಾಕೆ ಫೋನ್ ರಿಸೀವ್ ಮಾಡ್ಲಿಲ್ಲ" 

'ಹಂಗೇನಿಲ್ವೋ. ಮನೆಗ್ಯಾರೋ ಬಂದಿದ್ರು. ಅದಿಕ್ಕೆ ನೋಡಲಿಲ್ಲ ಫೋನ್ ನ' 

“ಓಹೋ! ಅಪ್ಪ ಅಮ್ಮ ಹೊರಗೋಗಿದ್ರೇನೋ....ನನ್ ತರ ಇನ್ಯಾವುದೋ ಬಕ್ರಾನ ಮನೆಗೆ ಕರೆಸಿಕೊಂಡಿದ್ದೇನೋ ತೆವಲು ತೀರಿಸಿಕೊಳ್ಳೋಕೆ....” ಕೆಟ್ಟ ಕೆಟ್ಟ ಪದಗಳನ್ನೆಲ್ಲ ಬಳಸಿ ಬಯ್ಯಬೇಕೆನ್ನಿಸಿತು. ಬಯ್ಯಲಿಲ್ಲ. 

'ಓ! ನಿನ್ನನ್ನು ಮನೆಗೆ ಕರೆದುಕೊಂಡು ಬರ್ತಿದ್ದದ್ದು ತೆವಲು ತೀರಿಸಿಕೊಳ್ಳೋಕೆ ಅಂತ ಗೊತ್ತಿರಲಿಲ್ಲ. ಥ್ಯಾಂಕ್ಸ್ ತಿಳಿಸಿಕೊಟ್ಟಿದ್ದಕ್ಕೆ. ಬಾಯ್' ಎಂದು ಮೆಸೇಜು ಮಾಡಿದೆ. 

“ಹಂಗಲ್ವೇ.... ಸಾರಿ” ಅಂತ ಆರು ಸಲ ಕಳುಹಿಸಿದ. ಪ್ರತಿಕ್ರಿಯಿಸಲಿಲ್ಲ. ಕೊನೆಗೆ "ಸರಿ ನಾಳೆ ಸಿಗುವ" ಎಂದ್ಹೇಳಿದ. ಮೊಬೈಲನ್ನು ಬದಿಗಿಟ್ಟು ಮಲಗಲು ಹೋದಾಗ ಮತ್ತೊಮ್ಮೆ ಮೊಬೈಲ್ ಶಬ್ದ ಮಾಡಿತು. ಇವನದೇ ಮತ್ತೊಂದು ಮೆಸೇಜು ಬಂದಿರ್ತದೆ ಅಂತ ನೋಡಿದವಳಿಗೆ "ಹಾಯ್. ಊಟ ಆಯ್ತ" ಎಂಬ ಮೆಸೇಜು ಕಾಣಿಸಿತು. ರಾಜೀವನದು! 

'ಹು. ಆಯ್ತು. ನಿಮ್ಮದು'

ಒಂದೊಂದೇ ಎಪಿಸೋಡು ಹುಡುಕುಡುಕಿ ಓದೋಕೆ ಬೇಸರವಾ? ಪೂರ್ತಿ ಇ - ಪುಸ್ತಕ ತೆಗೆದುಕೊಳ್ಳಲು ಇಲ್ಲಿ ಕ್ಲಿಕ್ಕಿಸಿ.

“ಈಗ ಆಯ್ತು. ಗೊತ್ತಾಯ್ತ ಯಾರಂತ?” 

'ಸಂಜೆ ನಂಬರ್ ಕೊಟ್ಟು ಗೊತ್ತಾಯ್ತ ಅಂತೀರ!' 

“ಹ ಹ. ಅಲ್ವ. ನೆನಪಿದ್ದೀನ ನಾ ಯಾರಂತ" 

'ನೆನಪಿಲ್ಲದೆ ಏನು. ನಾವೆಲ್ಲ ಚಿಕ್ಕಂದಿನಲ್ಲಿ ಜೊತೆಯಲ್ಲೇ ಆಡ್ತಿದ್ದೆವಲ್ಲ' 

“ಪರವಾಗಿಲ್ಲ. ನೆನಪಿಟ್ಟಿದ್ದಿ. ಇನ್ನೇನು ನೆನಪಿಲ್ವ" 

'ಇನ್ನೇನು?' 

“ಏನಿಲ್ಲ …. ಹೋಗ್ಲಿ ಬಿಡು" 

'ಹ...ಹ... ಅದೂ ನೆನಪಿದೆ' 

“ಯಾವ್ದು?” 

'ಅದೇ ನಾ ಒಂಭತ್ತನೇ ಕ್ಲಾಸಿನಲ್ಲಿದ್ದಾಗ ನೀವು ನಂಗೆ ಪ್ರಪೋಸ್ ಮಾಡಿದ್ದು!' 

“ಓ ಪರವಾಗಿಲ್ಲ. ನೆನಪಿಟ್ಟಿದ್ದೀಯ" 

'ನೆನಪಿಲ್ದೆ ಇರ್ತದಾ! ನಂಗ್ ಮೊದಲ ಸಲ ಪ್ರಪೋಸ್ ಮಾಡಿದ್ದು ನೀವೇ' 

“ಹೌದಾ! ಇಲ್ಲಿಯವರೆಗೂ ಅದಕ್ಕೆ ನೀ ಉತ್ತರಾನೇ ಹೇಳಲಿಲ್ಲಪ್ಪ" 

'ಏನೋ ಇನ್ನೂ ಲವ್ ಮಾಡೋರ ತರ ಕೇಳ್ತಿದ್ದೀರ!' 

“ಮಾಡ್ತಿಲ್ಲ ಻ಅಂದ್ಕೋತೀಯ" 

'ಮಾಡಿದ್ದಿದ್ದರೆ ಕಾಲೇಜಲ್ಲಿ ಎದುರಾಬದುರು ಸಿಕ್ಕಾಗಲೇ ಕೇಳುತ್ತಿರಲಿಲ್ಲವಾ?!' ಯಾಕೋ ಮಾತು ಎಲ್ಲೆಲ್ಲಿಗೋ ಹೋಗ್ತಿದೆಯಲ್ಲ....... 

“ಕೇಳೋ ಧೈರ್ಯವಾಗಲಿಲ್ಲ" 

'ಮ್' 

“ಈಗ ಕೇಳ್ಬೋದಾ?!” 

'ಈಗ ಕೇಳೇನು ಮಾಡ್ತೀರ! ಲವ್ ಮಾಡೋ ವಯಸ್ಸೆಲ್ಲ ಮುಗಿದಂತಾಗಿದೆ. ಇನ್ನೇನಿದ್ರೂ ಅಪ್ಪ ಅಮ್ಮ ತೋರಿಸಿದ ಹುಡುಗನನ್ನು ಕಣ್ಣು ಮುಚ್ಚಿ ಮದುವೆಯಾಗೋದಷ್ಟೇ' ಮೆಸೇಜುಗಳಲ್ಲಿ ಎಷ್ಟು ಚೆಂದ ನಾಟಕದ ಮಾತುಗಳನ್ನಾಡಬಹುದಲ್ಲ...... 

“ಓ! ನಿಮ್ಮಪ್ಪ ಅಮ್ಮ ಒಪ್ಪಿದರೆ ಮದುವೆಯಾಗೋ ಹಂಗೆ ಹೇಳ್ತಿದ್ದೀಯ" 

'ಬಂದು ನಮ್ಮಪ್ಪ ಅಮ್ಮನ ಜೊತೆ ಮಾತಾಡಿ ಒಪ್ಪಿಸುವವರಂತೆ ಹೇಳ್ತಿದ್ದೀರ' 

“ಸರಿ ಬಿಡು. ನಮ್ಮಪ್ಪ ಅಮ್ಮನ ಜೊತೆ ಬಂದು ನಿಮ್ಮ ಮನೆಯವರ ಜೊತೆ ಮಾತಾಡ್ತೀನಿ" ಒಂದಿಡೀ ಸಾಲು ಸ್ಮೈಲಿ ಕಳುಹಿಸಿದ. "ಗುಡ್ ನೈಟ್. ಸಿಗುವ ನಿಮ್ಮ ಮನೆಯಲ್ಲೇ, ಅತಿ ಶೀಘ್ರದಲ್ಲಿ" ಎಂದು ಮೆಸೇಜು ಮಾಡಿದ. ನನಗೆ ಜೀವ ದಸಕ್ಕೆಂದಂತಾಯಿತು. ನಿನಗೆ ಗೊತ್ತಾ ಸಾಗರ.... ಪುರುಷೋತ್ತಮನನ್ನು ಬಿಟ್ಟು ಬೇರೆ ಹುಡುಗನೊಟ್ಟಿಗೆ ಮಾಡಿದ ಮೊದಲ ಚಾಟ್ ಅದು. ನಮ್ ಮೆಡಿಕಲ್ ಕ್ಲಾಸ್ ಮೇಟ್ಸ್ ಜೊತೆ ಕೂಡ ಒಮ್ಮೆಯೂ ಚಾಟ್ ಮಾಡಿದವಳಲ್ಲ ನಾನು. ವಿಷಯವೇನಾದರೂ ಇದ್ದರೆ ಫೋನಿನಲ್ಲಿ ಮಾತನಾಡುತ್ತಿದ್ದೆ ಅಷ್ಟೆ. ಅವತ್ತು ರಾಜೀವನ ಜೊತೆ ಯಾಕೆ ಹರಟಿದೆ? ಇನ್ನೂ ನಿನ್ನ ಪ್ರೀತಿಸ್ತಿದ್ದೀನಿ ಅಂದಾಗ 'ಹೌದಾ ನನ್ನ ಮನಸ್ಸಲ್ಲಿ ಆ ಭಾವನೆ ಇಲ್ಲ' ಎಂದು ಹೇಳದೆ ಮನೆಯವರು ಒಪ್ಪಿದರೆ ಮದುವೆಗೆ ತಯಾರಿದ್ದೀನಿ ಎನ್ನುವರ್ಥದ ಮಾತುಗಳನ್ನೇಕೆ ಆಡಿದೆ ಎನ್ನುವುದರ ಕುರಿತು ಬಹಳಷ್ಟು ಯೋಚಿಸಿದ್ದೀನಿ. ಉತ್ತರ ಹೊಳೆದಿಲ್ಲ' 

“ನನಗೊಂಚೂರ್ಚೂರು ಹೊಳೀತಿದೆ. ಸ್ಪಷ್ಟವಾಗಿಲ್ಲ. ಪೂರ್ತಿ ಕೇಳಿದ ಮೇಲೆ ಹೇಳ್ತೀನಿ" 

'ಮ್. ನಾನು ಪರಶು ಅಷ್ಟೆಲ್ಲ ಕಿತ್ತಾಡಿಕೊಳ್ಳುತ್ತಿದ್ದರೂ ಮತ್ತೆ ಮತ್ತೆ ಭೇಟಿಯಾಗ್ತಿದ್ದಿದ್ದು ತಪ್ಪಿರಲಿಲ್ಲ. ಭೇಟಿಯಾದಾಗಲೂ ಬರೀ ಜಗಳವೇ ಹೆಚ್ಚು ನಡೆಯುತ್ತಿತ್ತು. ಆದರೂ ಭೇಟಿಯಾಗುತ್ತಿದ್ದೊ. ಇಬ್ಬರಿಗೂ ಗೊತ್ತಿತ್ತು ಈ ಜಗಳವೆಲ್ಲ ನಾವಿಬ್ಬರು ಮದುವೆಯಾಗುತ್ತಿಲ್ಲವಲ್ಲ ಻ಅನ್ನೋ ಕಾರಣಕ್ಕೆ ನಡೆಯುತ್ತಿತ್ತು ಅಂತ. ಻಻ಅವನದು ಒಂದೇ ವರಾತ; ಮನೆ ಬಿಟ್ಟು ಓಡಿಹೋಗಿ ಮದುವೆಯಾಗೋಣ ನಡಿ. ಏನಾಗ್ತದೋ ಆಗಲಿ ಅಂತ' 

“ಅಲ್ವೇ ಧರು. ಅವನೇಳ್ತಿದ್ದಿದ್ದೂ ಸರೀನೇ ಅಲ್ವ. ಅಷ್ಟೆಲ್ಲ ವರ್ಷ ಪ್ರೀತಿಸಿದ ಮೇಲೆ ಮನೆಯವರು ಒಪ್ಪಲಿಲ್ಲ ಅನ್ನೋ ಕಾರಣಕ್ಕೆ ಪ್ರೀತೀನ ಬಲಿ ಕೊಡೋ ಬದಲು ನಿಮ್ಮ ಪಾಡಿಗೆ ನೀವು ಮದುವೆಯಾಗೋದೇ ಒಳ್ಳೇದಿತ್ತಲ್ವ...” 

'ಮ್. ನಂಗೂ ಹಂಗೇನೆ ಅನ್ಸೋದು. ಆದರೆ ಆ ರೀತಿ ಮದುವೆಯಾಗೋಕೆ ನಂಗೆ ಸುತಾರಾಂ ಇಷ್ಟವಿರಲಿಲ್ಲ' 

“ಅದ್ಯಾಕೆ?” 

'ಸುಮಾರ್ ಕಾರಣಗಳಿದ್ವು. ನಮ್ಮಪ್ಪ ಅಮ್ಮ ಓಡಿಹೋಗಿ ಮದುವೆಯಾಗಿದ್ದು. ಅವರು ಅನುಭವಿಸಿದ ಕಷ್ಟವನ್ನು ಕೇಳಿದ್ದೆ ನೋಡಿದ್ದೆ. ಇವತ್ತಿಗೂ ನಮ್ಮಮ್ಮನ ಕಡೆಯವರು ಆವಾಗಿವಾಗ ಆ ಹಳೆ ವಿಷಯವನ್ನೆತ್ತಿಕೊಂಡು ಕುಹಕದ ಮಾತಾಡ್ತಾರೆ. ಆ ರೀತಿಯ ಮಾತುಗಳಿಗೆ ಈಡಾಗೋದು ನನಗಿಷ್ಟವಿರಲಿಲ್ಲ. ಜೊತೆಗೆ ನಂಗೆ ಮದುವೆ ಅಂದ್ರೆ ಸಡಗರ ಸಂಭ್ರಮದ ಸಂಗತಿಯಾಗೇ ಬೇಕಿತ್ತು. ಸೀರೆ ಒಡವೆ ಮೇಕಪ್ಪು ರಿಸೆಪ್ಷನ್ನು, ಬೀಗ್ರೂಟ ಎಲ್ಲಾ ದೊಡ್ಡದಾಗೇ ನಡೀಬೇಕು ಅಂತಿತ್ತು. ಇದೆಲ್ಲದರ ಜೊತೆಗೆ ಮತ್ತೊಂದು ಕಾರಣವೂ ಇದ್ದಿರಬೇಕು' 

“ಏನು?” 

'ಪರಶುವಿನ ಪ್ರೀತಿ ಉಸಿರು ಕಟ್ಟಿಸಲಾರಂಭಿಸಿತ್ತು ಕಣೋ. ನಿನಗೆ ಹೇಳಿದ್ದೆನಲ್ಲ ಅವನ ಪೊಸೆಸಿವ್ ನೆಸ್ ಬಗ್ಗೆ. ನನ್ನ ಜೀವನ ಬಂಧನಕ್ಕೊಳಗಾಗಿಬಿಡ್ತದೇನೋ ಅನ್ನೋ ಭಯ ಎದೆಯೊಳಗೆ ಗಟ್ಟಿಯಾಗುತ್ತಿತ್ತು. ನಿನ್ನನ್ನ ಕೆಲಸಕ್ಕೆಲ್ಲ ಕಳಿಸೋಲ್ಲ ನಾನು ಅಂತ ಮುಂಚೆಯೆಲ್ಲ ಅವನು ಹೇಳುವಾಗ ಖುಷೀನೇ ಆಗ್ತಿತ್ತು. ಎಷ್ಟು ಪ್ರೀತಿ ಇವನಿಗೆ ನನ್ನ ಮೇಲೆ ಅಂತ. ಇಂಟರ್ನ್ ಶಿಪ್ ಮುಗಿಸಿ ಫಸ್ಟ್ ಹೆಲ್ತ್ ನಲ್ಲಿ ಕೆಲಸಕ್ಕೆ ಸೇರಿ ರೋಗಿಗಳಿಗೆ ಚಿಕಿತ್ಸೆ ಕೊಡಲಾರಂಭಿಸಿದ ಮೇಲೆ ಏನೋ ಒಂದು ಆತ್ಮಸಂತೃಪ್ತಿ ಸಿಗ್ತಿತ್ತು. ಖಾಸಗಿ ಜೀವನದಲ್ಲಿನ ಅಷ್ಟೂ ಕೋಟಲೆಗಳನ್ನು ನಾನು ಮರೆಯುತ್ತಿದ್ದಿದ್ದು ರೋಗಿಗಳ ಜೊತೆಗಿನ ಸಂವಾದದಲ್ಲಿ ಮಾತ್ರ. ಪುರುಷೋತ್ತಮನನ್ನು ಮದುವೆಯಾದರೆ ಈ ಸಂತೃಪ್ತಿಯೂ ಮರೆಯಾಗಿ ಹೋಗ್ತದೆ, ಖಂಡಿತ಻ವಾಗಿ ಅಂತ ಅನ್ನಿಸಲು ಪ್ರಾರಂಭವಾಗಿಬಿಟ್ಟಿತು. ನನ್ನತನವನ್ನು ನನ್ನಿಚ್ಛೆಯನ್ನು ಪೂರ್ಣವಾಗಿ ಬಿಟ್ಟುಕೊಡಬೇಕಾಂದಹ ಪ್ರೀತಿಯ ಬಂಧನ ನನಗೆ ನಿಜಕ್ಕೂ ಬೇಕಾ ಅನ್ನೋ ಪ್ರಶ್ನೆ ಪದೇ ಪದೇ ಕಾಡೋದು. ಆರು ವರ್ಷದ ಪ್ರೀತಿಯ ಮುಂದೆ ಇದನ್ನೆಲ್ಲ ಪರಿಗಣಿಸಬಾರದು ಎಂದು ಸಮಾಧಾನ ಮಾಡಿಕೊಳ್ಳುತ್ತಿದ್ದೆ. ಅವನಮ್ಮ ಮಾಡಿದ ಅವಮಾನದ ನಂತರ, ಇವನ ವರ್ತನೆಗಳನ್ನು ನೋಡಿದ ನಂತರ ಜೀವನವೆಂಬ ಕ್ಯಾನ್ವಾಸಿನ ಮುಂದೆ ಆರು ವರ್ಷದ ಪ್ರೀತಿ ದೊಡ್ಡದೇನಲ್ಲ ಎನ್ನಿಸಲಾರಂಭಿಸಿತು. ಪರಶುನನ್ನು ಮದುವೆಯಾಗದೇ ಇದ್ದರೇ ನನಗೆ ಒಳಿತಾಗ್ತದೇನೋ ಅನ್ನುವ ನಂಬುಗೆ ಧೃಡವಾಗುತ್ತಿತ್ತು.. ಅವಾಗೆಲ್ಲ ಇದು ಮುಖ್ಯ ಕಾರಣ ಅನ್ನಿಸ್ತಿರಲಿಲ್ಲವಾದರೂ ಈಗ ಹಿಂದಿರುಗಿ ನೋಡಿದಾಗ ಸುಪ್ತ ಮನಸ್ಸಿನಲ್ಲಿದ್ದ, ಆವಾಗವಾಗ ಪ್ರಕಟಗೊಳ್ಳುತ್ತಿದ್ದ ಈ ಚಿಂತೆಯೇ ಮುಖ್ಯ ಕಾರಣ, ಮಿಕ್ಕಿದ್ದೆಲ್ಲ ನೆಪಗಳಷ್ಟೇ ಅಂತ ತೋರ್ತದೆ' 

“ಜೊತೆಗೆ ಇನ್ನೊಂದು ಕಾರಣಾನೂ ಇರ್ಬೋದು ಅನ್ಸುತ್ತೆ ನನಗೆ"

ನಿಮಗೀ ಕಾದಂಬರಿ ಮೆಚ್ಚುಗೆಯಾಗುತ್ತಿದ್ದಲ್ಲಿ 'ಹಿಂಗ್ಯಾಕೆ' ವೆಬ್ ಪುಟಕ್ಕೆ ಬೆಂಬಲವಾಗಿ ನಿಮ್ಮಿಂದ ಸಾಧ್ಯವಾದಷ್ಟು ಹಣವನ್ನು ಕಳಿಸಿಕೊಡಲು ಕೆಳಗಿರುವ ಲಿಂಕ್ ಕ್ಲಿಕ್ಕಿಸಿ.  ನಿಮ್ಮ ಬೆಂಬಲ ಮುಂದಿನ ದಿನಗಳಲ್ಲಿ ಕಾದಂಬರಿಯ - ಪುಸ್ತಕ ಉಚಿತವಾಗಿ ಲಭ್ಯವಾಗಿಸಲು ಸಹಕಾರಿಯಾಗಲಿದೆ.

'ಏನು? ಓ! ತಡಿ ತಡಿ ಪ್ರಕೃತಿ ಲೆಕ್ಕದಲ್ಲಾ......' ಮನಸ್ಸು ಕ್ಷೋಭೆಗೊಳಪಟ್ಟಿದ್ದರೂ ಸಾಗರನ ಜೊತೆಗೂಡಿ ನಕ್ಕಿದ್ದೆ. 

“ಹು. ಪ್ರಕೃತಿ ಲೆಕ್ಕದಲ್ಲೇ" 

'ಹೇಳಪ್ಪ. ಅದೇನಂತ' 

“ನಾ ಕಂಡುಕೊಂಡಿರೋ ಪ್ರಕಾರ ಪ್ರಕೃತಿ ಪ್ರಕಾರ ಹೆಣ್ಣಿನ ಬಹುಮುಖ್ಯ ಕಾರ್ಯ ಮಕ್ಕಳನ್ನು ಹಡೆದು ಅವರನ್ನು ಸರಿ ರೀತಿಯಲ್ಲಿ ಸಾಕಿ ಸಂತತಿಯ ಮುಂದುವರಿಕೆಗೆ ಕಾರಣಕರ್ತರಾಗುವುದು. ಬಹುತೇಕ ಪ್ರಾಣಿಗಳಲ್ಲಿ ಗಂಡಿನ ಕೆಲಸ ಸೆಕ್ಸ್ ಮೂಲಕ ವೀರ್ಯ ಕೊಡುವುದಷ್ಟೇ ಆಗಿರ್ತದೆ. ಅಫ್ ಕೋರ್ಸ್ ಗಂಡೂ ಕೂಡ ಮಕ್ಕಳ ಬೆಳವಣಿಗೆಯಲ್ಲಿ ಮುಖ್ಯ ಪಾತ್ರ ವಹಿಸುತ್ತಾನೆ, ಆದರೂ ಹೆಣ್ಣಿನಷ್ಟಲ್ಲ. ಪ್ರಾಣಿ ಪ್ರಪಂಚವನ್ನು ಗಮನಿಸಿದಾಗ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯ ಇರುವುದು ಹೆಣ್ಣಿಗೇ. ಯಾವ ಗಂಡು ಪ್ರಾಣಿ ಬಲಿಷ್ಠವಾಗಿದೆ, ಯಾವ ಪ್ರಾಣಿ ನನ್ನನ್ನು ನನ್ನ ಮಕ್ಕಳನ್ನು ಜವಾಬ್ದಾರಿಯಿಂದ ನೋಡಿಕೊಳ್ಳುತ್ತದೆ ಎನ್ನುವುದನ್ನೆಲ್ಲ ಕೂಡಿ ಕಳೆದು ಗಂಡನ್ನು ಆಯ್ಕೆ ಮಾಡಿಕೊಳ್ಳುತ್ತವೆ. ಮಾನವ ಪ್ರಕೃತಿಯಿಂದ ದೂರಾಗಿ ಬಂದುಬಿಟ್ಟಂತೆ ತೋರಿದರೂ ಸಾವಿರಾರು ವರುಷಗಳಿಂದ ರೂಪುಗೊಂಡ ನಮ್ಮ ದೇಹ – ಮನಸ್ಸು ಪ್ರಕೃತಿಗೆ ಪೂರಕವಾಗೇ ಕೆಲಸ ಮಾಡ್ತಿರ್ತದೆ. ಈ ಹುಡುಗನನ್ನು ಮದುವೆಯಾದರೆ ನಾನು ಜೀವನದಲ್ಲಿ ಸೆಟಲ್ ಆಗ್ತೀನಾ? ಈ ಹುಡುಗ ಜವಾಬ್ದಾರಿಯಿಂದ ಸಂಸಾರ ನಿರ್ವಹಿಸುತ್ತಾನಾ? ಇವನಿಗೆ ಉತ್ತಮ ಕೆಲಸವಿದೆಯಾ? ಸಂಬಳ ಹೇಗಿದೆ? ಮನೆ ಕಡೆ ಅನುಕೂಲಸ್ಥರ ಹೇಗೆ ಅನ್ನುವುದನ್ನೆಲ್ಲ ಹುಡುಗಿಯಾದವಳು ಯೋಚಿಸಿಯೇ ಯೋಚಿಸುತ್ತಾಳೆ. ಯೋಚಿಸದಿದ್ದರೂ ಹುಡುಗನನ್ನು ಆಯ್ದುಕೊಳ್ಳುವ ಅವಕಾಶವಿದ್ದಾಗಲೆಲ್ಲ ಅವಳ ಸುಪ್ತ ಮನಸ್ಸು ಮಿಲಿಯಾಂತರ ವರುಷಗಳಿಂದ ರೂಪುಗೊಂಡು ವಂಶವಾಹಿನಿಯಲ್ಲಿ ಹರಿದು ಬಂದ ಮನಸ್ಸು ಅದನ್ನೆಲ್ಲ ತನ್ನೊಳಗೆ ಕೂಡಿ ಕಳೆದು ಹೆಣ್ಣು ಒಂದು ನಿರ್ಧಾರಕ್ಕೆ ಬರುವಂತೆ ಮಾಡುತ್ತದೆ. ಅದೇ ರೀತಿ ನಿನ್ನ ಮನಸ್ಸಿಗೆ ಪರಶು ಸಂಸಾರದ ಹೊಣೆಯನ್ನು ಸೂಕ್ತ ರೀತಿಯಲ್ಲಿ ಹೊರುವಷ್ಟು ಯೋಗ್ಯನಲ್ಲ, ನನ್ನ ಮಕ್ಕಳನ್ನು ಸರಿಯಾದ ರೀತಿಯಲ್ಲಿ ಸಾಕುವುದಕ್ಕೆ ಅವನಿಗಾಗುವುದಿಲ್ಲ ಎಂದು ನಿನ್ನ ಸುಪ್ತ ಮನಸ್ಸು ಹೇಳಿರಬೇಕು. ಸುಪ್ತ ಮನಸ್ಸಿನ ಮಾತುಗಳನ್ನು ಕೇಳಿಸಿಕೊಂಡ ನಿನ್ನ ಮನಸ್ಸು ಕಾರಣಗಳ ಪಟ್ಟಿಯನ್ನು ಬಿಡುಗಡೆ ಮಾಡಿ ಅವನಿಂದ ದೂರಾದರೆ ತಪ್ಪೇನಿಲ್ಲ ಎಂಬ ಸಂದೇಶವನ್ನು ಸೃಷ್ಟಿಸಿರಬೇಕು" 

'ಮ್. ಇದ್ಯಾವುದೋ ಹೊಸ ಚಿಂತನೆ ನೋಡು. ಆದರೆ ಪೂರ್ತಿಯಾಗಿ ಒಪ್ಪುವುದು ಕಷ್ಟವಾಗ್ತದೆ. ಹೆಣ್ಣು ಸಂಸಾರದ ಸುರಕ್ಷತೆಯನ್ನಷ್ಟೇ ಬಯಸಿ ಗಂಡನ್ನಾರಿಸಿಕೊಳ್ಳುತ್ತಾಳೆ ಎಂದುಬಿಟ್ಟರೆ ನಮ್ಮ ಭಾವನೆಗಳು ನಮ್ಮ ಪ್ರೀತಿ ಕೋಪ ತಾಪಕ್ಕೆಲ್ಲ ಅರ್ಥವೇ ಇಲ್ಲವೆಂದರ್ಥವಾ?' 

“ಅರ್ಥವೇ ಇಲ್ಲ ಅಂತೆಲ್ಲ ಹೇಳೋದಿಕ್ಕಾಗಲ್ಲ. ಪ್ರೀತಿ ಕೋಪ ತಾಪದ ಭಾವನೆಗಳನ್ನೆಲ್ಲ ಪ್ರಕೃತಿಯೇ ನಮ್ಮಲ್ಲಿ ತುಂಬುತ್ತಿರಬೇಕಲ್ಲವೇ? ಇದು ವಿಕಸನದ ಒಂದು ಮಾರ್ಗವೇ ಇರಬಹುದು. ಆದರೆ ಮೂಲಕ್ಕೆ ಹೊರಳಿ ನೋಡಿದಾಗ ಗಂಡಿಗೆ ತನ್ನ ಸಶಕ್ತ ವೀರ್ಯಾಣುವನ್ನು ಹೆಣ್ಣಿಗೆ ವರ್ಗಾಯಿಸುವ ತನ್ಮೂಲಕ ವಂಶವಾಹಿನಿಯನ್ನು ಮುಂದುವರೆಸುವ ಮನಸ್ಥಿತಿಯಿದ್ದರೆ ಹೆಣ್ಣಿನಲ್ಲಿ ಸುಭದ್ರ ಸಂಸಾರ ರೂಪಿಸಿಕೊಳ್ಳುವ ಮನೋಭಾವವೇ ಪ್ರಾಮುಖ್ಯತೆ ಪಡೆದುಕೊಂಡಿರ್ತದೆ" 

'ಅಷ್ಟೊಂದೆಲ್ಲ ಸರಳವಾಗಿದೆ ಅಂತನ್ನಿಸೋಲ್ಲ ನನಗೆ. ಈಗ ನಮ್ಮದೇ ಲೆಕ್ಕ ತಗೋ, ನಾವ್ಯಾಕೆ ಒಬ್ಬರನ್ನೊಬ್ಬರು ಪ್ರೀತಿಸ್ತಿದೀವಿ? ಅದೂ ಇಷ್ಟು ದೂರದಲ್ಲಿದ್ದುಕೊಂಡು? ಇದನ್ನು ಪ್ರಕೃತಿ ಲೆಕ್ಕದಲ್ಲಿ ಹೇಗೆ ವಿವರಿಸೋದು?' 

"ಸರಳ ವಿಷಯವಂತೂ ಖಂಡಿತ ಅಲ್ಲ. ಜೊತೆಗೆ ನನ್ನರಿವಿಗೆ ಬಂದಿದ್ದು ಸತ್ಯವೇ ಇರಬೇಕೆಂದೇನೂ ಇಲ್ಲ. ನಾವಿಬ್ಬರೂ ಭೇಟಿಯಾಗ್ತೀವೋ ಇಲ್ಲವೋ ಎಂದು ಗೊತ್ತಿಲ್ಲದೆಯೂ ನಮ್ಮಿಬ್ಬರ ಮಧ್ಯದ ಆತ್ಮೀಯತೆಯನ್ನು ಪ್ರಕೃತಿ ಲೆಕ್ಕದಲ್ಲಿ ಹೇಗೆ ಸಮರ್ಥಿಸಿಕೊಳ್ಳೋದು ಅನ್ನುವ ಗೋಜಲು ನನಗೂ ಇದೆ. ಯಾರಿಗ್ ಗೊತ್ತು ನಿನ್ನ ಸುಪ್ತ ಮನಸ್ಸು 'ನಿನ್ನ ಸಂಗಾತಿ ನಿನ್ನ ಜೊತೆ ಸರಿಯಾಗಿ ಸೆಕ್ಸ್ ಮಾಡ್ತಿಲ್ಲ. ಆತನನ್ನು ನಂಬಿಕೊಂಡರೆ ಸಂಸಾರದ ಮುಂದುವರಿಕೆ ಕಷ್ಟ ಕಷ್ಟ. ಹೊಸ ಸಧೃಡ ಸಂಗಾತಿಯನ್ನು ಹುಡುಕಿಕೊ' ಎಂದು ಸೂಚನೆ ಕೊಟ್ಟಿದ್ದರೂ ಕೊಟ್ಟಿರಬಹುದೇನೋ. ನನ್ನ ಸುಪ್ತ ಮನಸ್ಸು 'ಈ ಹುಡುಗಿ ದಷ್ಟಪುಷ್ಟವಾಗಿದ್ದಾಳೆ. ಉತ್ತಮ ಮೊಲೆಗಳನ್ನೊಂದಿದ್ದಾಳೆ. ನಿನ್ನ ವಂಶ ಬೆಳೆಸಲು ಸೂಕ್ತವಾದವಳಿವಳು' ಎಂಬ ಸಂದೇಶ ಕೊಟ್ಟಿರಬಹುದು. ಅದಿಕ್ಕೆ ನಾವು ಹತ್ತಿರವಾದೆವೋ ಏನೋ" 

'ಏನೋಪ್ಪ. ನಾವಿಬ್ಬರೂ ಹತ್ತಿರವಾಗೋದಿಕ್ಕೆ ಸೆಕ್ಸ್ ಅಷ್ಟೇ ಕಾರಣ ಅಂತ ನನಗಂತೂ ಅನ್ನಿಸೋದಿಲ್ಲ. ಅದೇ ಕಾರಣವಾಗಿದ್ದರೆ ಮೈಸೂರಿನಲ್ಲಿ ಹುಡುಗರಿಗೆ ಬರವಾ ಮಂಗಳೂರಿನಲ್ಲಿ ಹುಡುಗೀರಿಗೆ ಬರವಾ ಹೇಳು' 

“ಮ್. ಅದೂ ಸರೀನೇ. ಪ್ರಕೃತಿ ಲೆಕ್ಕದ ಜೊತೆಗೆ ಮತ್ಯಾವುದೋ ನಮಗೇ ತಿಳಿಯದ ಅಗೋಚರ ಲೆಕ್ಕಗಳೂ ಇರಬೇಕು ಅಷ್ಟೇ. ಅಂದಹಾಗೆ ಸೆಕ್ಸ್ ಅಷ್ಟೇ ಕಾರಣವಾಗಿದ್ದರೂ ತಪ್ಪೇನಲ್ಲ. ಪ್ರೀತಿ ಪ್ರೇಮ ಗ್ರೇಟು ಸೆಕ್ಸು ಬ್ಯಾಡು ಅಂತೆಲ್ಲ ಅಂದ್ಕೋಬಾರದಲ್ವ" 

'ನಾನ್ಯಾವತ್ತು ಹಂಗೆಲ್ಲ ಅಂದುಕೊಳ್ಳೋಳೇ ಅಲ್ಲ. ಹಂಗ್ ನೋಡಿದ್ರೆ ನೀನೇ ಸೆಕ್ಸ್ ಚಾಟ್ ಮಾಡ್ದಾಗೆಲ್ಲ ನಮ್ಮಿಬ್ಬರ ಸಂಬಂಧ ಬರೀ ಸೆಕ್ಸಿಗೋಸ್ಕರ ಮಾತ್ರವೇನೋ ಅಂತ ಹಲುಬೋದು' 

“ಹ ಹ ಅಲ್ವ! ಏನೋಪ. ಪ್ರಕೃತಿ ಲೆಕ್ಕದಲ್ಲೇ ಯೋಚಿಸಿದರೆ ಯಾವುದೂ ತಪ್ಪಲ್ಲ ಅನ್ನಿಸ್ತದೆ. ಆದರೆ ಸಮಾಜದ ಕಟ್ಟುಪಾಡು, ಸಮಾಜ ರೂಪಿಸಿದ ನಿಯಮಗಳನ್ನು ಒಪ್ಪಿ ಬದುಕುವಾಗ ಇವೆಲ್ಲ ತಪ್ಪು ಅಂತಲೂ ಅನ್ನಿಸ್ತದೆ" 

'ಏನೋಪ. ನಿನಗೇ ಗೊತ್ತಲ್ಲ. ತಪ್ಪು ಸರಿ ಅಂತೆಲ್ಲ ಜಾಸ್ತಿ ಯೋಚಿಸೋಳಲ್ಲ ನಾನು' 

“ಒಂದ್ ರೀತಿ ಅದೇ ಆರಾಮು ಅಲ್ವ" 

'ಹೂನೋ....ಇಲ್ಲಾಂದ್ರೆ ನಾ ಅಷ್ಟೆಲ್ಲ ಆದ್ರೂ ಆರಾಮಾಗಿ ಇರ್ತಿದ್ನ. ಬೇರೆಯವರಾಗಿದ್ರೆ ಸತ್ತೇ ಹೋಗ್ತಿದ್ದರೇನೋ.....' 

“ನಿನಗೆ ಸಾಯಬೇಕು ಅಂತ ಯಾವಾಗ್ಲೂ ಅನ್ನಿಸಿರಲಿಲ್ವ" 

'ಒಮ್ಮೆ ಅನ್ಸಿತ್ತು. ಸಾಯೋಕಂತ ಒಂದತ್ತು ಮಾತ್ರೆ ತಗಂಡು ಬಚ್ಚಲುಮನೆಯ ಒಳಹೊಕ್ಕೆ. ಭಯ ಆಯ್ತು. ಮಾತ್ರೆಗಳಷ್ಟನ್ನೂ ಬಚ್ಚಲಿಗೆ ಹಾಕಿ ಹೊರಬಂದೆ' 

“ಪುಕ್ಲಿ!” 

'ಅಲ್ವ!' 

“ಸರಿ ಸರಿ ಮಾತು ಎಲ್ಲೆಲ್ಲಿಗೋ ಹೋಯ್ತು. ಮುಂದಕ್ಕೇನಾಯ್ತು ಅಂತ ಹೇಳು" 

'ಟೈಮ್ ನೋಡ್ದೇನೋ ಗೂಬೆ. ಹತ್ತಾಯ್ತ ಬಂತು.....' 

“ಹತ್ತಾಗೋಯ್ತ" 

'ಹು. ಇವರೂ ಇನ್ನೇನು ಬರಬಹುದು. ಊಟ ಗೀಟ ಮಾಡ್ಕಂಡು ಮಲಕ್ಕೊ' 

“ಸರಿ ಕಣೇ. ನಾಳೇನೋ ನಾಡಿದ್ದೋ ಬಿಡುವು ಮಾಡಿಕೊಂಡು ಫೋನ್ ಮಾಡು. ಏನೇನಾಯ್ತು ಅಂತ ತಿಳ್ಕೊಳ್ಳೋ ಕುತೂಹಲವಿದೆ ನಂಗೆ" 

'ಇಲ್ಲಪ್ಪ ಫೋನಿನಲ್ಲಿನ್ನು ಹೇಳಲ್ಲ' 

“ಯಾಕೆ?” ದನಿ ಸಪ್ಪಗಾಗಿತ್ತು. 

'ಮುಂದಿನ ಬುಧವಾರ ಬರ್ತೀಯಲ್ಲೋ ಆಗ ನಿನ್ನ ತಬ್ಬಿ ಮಲಗಿ ಹೇಳ್ತೀನಿ. ಹೇಳೋಕ್ ನೀ ಸಮಯ ಕೊಟ್ರೆ' ಎಂದು ನಕ್ಕೆ. ನಗುವಿನ ಹಿಂದಿನ ಪೋಲಿತನದ ಅರಿವಾಯಿತವನಿಗೆ "ಥೂ ತರ್ಲೆ. ಸರಿ ಹಂಗಾದ್ರೆ. ನಾ ನಾಳೇನೇ ಟಿಕೇಟ್ ಬುಕ್ ಮಾಡಿಸಿಬಿಡ್ತೀನಿ. ಅಕಸ್ಮಾತ್ ನಿನಗೆ ಆ ದಿನ ಭೇಟಿಯಾಗೋದಿಕ್ಕೆ ಆಗಲ್ಲ ಅಂದ್ರೆ ಒಂದ್ ದಿನ ಮುಂಚಿತವಾಗೇ ತಿಳಿಸಿಬಿಡು. ಟಿಕೇಟ್ ಕ್ಯಾನ್ಸಲ್ ಮಾಡ್ಕೋತೀನಿ" 

'ನನ್ನ ಕಡೆಯಿಂದ ಕ್ಯಾನ್ಸಲ್ ಆಗಲ್ಲ. ನೀನೇ ಭಯ ಬಿದ್ದು ಕ್ಯಾನ್ಸಲ್ ಮಾಡ್ಬೋದೇನೋಪ್ಪ' 

“ಇಲ್ವೇ. ಖಂಡಿತ ಬರ್ತೀನಿ. ಸೆಕ್ಸ್ ಮಾಡ್ತೀನೋ ಇಲ್ವೋ ಬರೋದಂತೂ ಖಂಡಿತ" 

'ಹ ಹ. ಸರಿ ಕಣೋ ಬಂಗಾರ. ಬಾಯ್. ಲವ್ ಯು ಲವ್ ಯು ಲವ್ ಯು' ಮುತ್ತಿನ ಸುರಿಮಳೆಗೆರೆದೆ. 

“ಏನವ್ವ ಇಷ್ಟೊಂದು ಪ್ರೀತಿ" 

'ಯಾಕೋ ನನ್ ಚಿನ್ನು ಮೇಲೆ ವಿಪರೀತ ಲವ್ ಆಗೋಗಿದೆ ಇವತ್ತು' 

“ಲವ್ ಯು ಮಿಸ್ ಯು ಹನಿ. ಬಾಯ್" ಎಂದ್ಹೇಳಿ ಫೋನಿಟ್ಟ.

ಮುಂದಿನ ಭಾಗವನ್ನು ಓದಲು ಇಲ್ಲಿ ಕ್ಲಿಕ್ಕಿಸಿ. 

No comments:

Post a Comment