Apr 4, 2015

ಅಸಹಾಯಕ ಆತ್ಮಗಳು - ಬಾಣಲೆಯಿಂದ ಬೆಂಕಿಗೆ.

asahayaka aatmagalu
ಕು.ಸ.ಮಧುಸೂದನ
ನಾನು ಹುಟ್ಟಿದ್ದು ಉತ್ತರ ಕರ್ನಾಟಕದ ಒಂದು ಹಳ್ಳಿ. ಈಗ ಹೆಸರು ಹೇಳಿ ಅದಕ್ಯಾಕೆ ಮಸಿ ಬಳೀಲಿ? ನಮ್ಮಪ್ಪ ಊರಿನ ಸಾಹುಕಾರನ ಹತ್ತಿರ ಜೀತ ಮಾಡ್ತಿದ್ದ. ನಮ್ಮ ತಾತನಿಗೆ ಐದು ಜನ ಹೆಣ್ಣುಮಕ್ಕಳಂತೆ.ಅಷ್ಟೂ ಜನರ ಮದುವೆಗೆ ಅಂತ ಅವನು ಮಾಡಿದ ಸಾಲಕ್ಕೆ ಅಪ್ಪ ಒಬ್ಬನೇ ಅಲ್ಲದೇ ನಮ್ಮಮ್ಮನೂ ಸಾಹುಕಾರನ ಹೊಲದಲ್ಲಿ,ಮತ್ತವನ ಮನೇಲಿ ಹಗಲುರಾತ್ರಿ ದುಡಿಬೇಕಾಗಿತ್ತು.ವರ್ಷಕ್ಕೊಂದು ಸಾರಿ ಅವರು ಕೊಡೊ ಕಾಳು ಕಡ್ಡಿ, ಹಬ್ಬ ಹುಣ್ಣಿಮೆಗಳಿಗೆ ಬಟ್ಟೆಬರೆ ಬಿಟ್ರೆ ಬೇರೇನು ಕೊಡ್ತಿರಲಿಲ್ಲ. ನನಗೆ ಎಂಟೊಂಭತ್ತು ವರ್ಷವಾಗೋತನಕ ನಮ್ಮ ಕೇರಿಯಲ್ಲೇ ಆಟ ಆಡಿಕೊಂಡು ನೆಮ್ಮದಿಯಾಗಿದ್ದೆ. ಬಹುಶ: ನನಗೆ ಹತ್ತೊ ಹನ್ನೊಂದೋ ವರ್ಷವಾದಾಗ ಅಮ್ಮ ನನ್ನ ಸಾಹುಕಾರನ ಮನೆಗೆ ಕರೆದುಕೊಂಡು ಹೋದಳು. ಅಲ್ಲಿ ನಾನು ಮನೆಗೆಲಸದವಳಾಗಿ ಹೆಂಗಸರು ಹೇಳೊ ಕೆಲಸ ಮಾಡಿಕೊಂಡು ಇರಬೇಕಾಯಿತು. ಊಟ,ತಿಂಡಿ ಕೊನೆಗೆ ಮಲಗೋದು ಸಹ ಅಲ್ಲೇ ಆಗ್ತಿತ್ತು.ನಮ್ಮೂರಲಿ ಸ್ಕೂಲ್ ಇಲ್ದೇ ಇದ್ದಿದ್ದರಿಂದ ಅವರ ಮಕ್ಕಳೆಲ್ಲ ಹತ್ತಿರದ ಪಟ್ಟಣದಲ್ಲಿ ಓದ್ತಾ ಇದ್ದರು.

ಹೀಗೇ ಒಂದು ವರ್ಷ ಕಳೆದ ಮೇಲೆ ಬೇಸಿಗೆ ರಜಕ್ಕೆ ಅಂತ ಸಾಹುಕಾರನ ಮಕ್ಕಳು ಊರಿಗೆ ಬಂದರು. ಅದರಲ್ಲಿ ದೊಡ್ಡವನಿಗಾಗಲೆ ಮೀಸೆ ಬಂದು ಕಾಲೇಜಲ್ಲಿ ಓದ್ತಾ ಇದ್ದ. ಒಂದು ಮದ್ಯಾಹ್ನ ನಾನು ಅಟ್ಟದ ಮೇಲೆ ದೂಳು ಹೊಡೆಯುತ್ತ ಇರಬೇಕಾದರೆ ಅವನು ಮೇಲೆ ಬಂದ. ನಾನು ಏನು ಬೇಕು ಅಂತ ಕೇಳುವಷ್ಟರಲ್ಲಿ ನನ್ನ ಗಟ್ಟಿಯಾಗಿ ತಬ್ಬಿಕೊಂಡು ಬಾಯಿ ಮುಚ್ಚಿ ಬಟ್ಟೆಗಳನ್ನೆಲ್ಲ ಕಿತ್ತು ಹಾಕಿದ.ಕೂಗೋಕೆ ಅಂತ ಬಾಯಿ ತೆಗೆದರೆ ಬಾಯಿಮುಚ್ಚಿಕೊಂಡು ಹೇಳಿದ ಹಾಗೆ ಕೇಳು ಇಲ್ಲಾಂದರೆ ಸಾಯಿಸಿಬಿಡ್ತೀನಿ ಅಂತ ನನ್ನ ಕೆಳಗೆ ತಳ್ಳಿ ಮೇಲೆ ಬಿದ್ದ. ಪ್ರಾಣಭಯದಿಂದ ಹಲ್ಲುಕಚ್ಚಿಕೊಂಡು ಸುಮ್ಮನೇ ಬಿದ್ದಿದ್ದೆ. ಅವನೇನು ಮಾಡಿದನೊ ಗೊತ್ತಾಗಲಿಲ್ಲ. ಅರ್ದ ಗಂಟೆಯ ನಂತರ ಅವನು ಎದ್ದು ಹೋದಾಗ ಮೈಯೆಲ್ಲ ಗಾಯದಂತೆ ನೋಯ್ತಾ ಇತ್ತು. ಇನ್ನೂ ಮೈ ನೆರೆಯದ ನನ್ನ ಮೀಸಲು ಮುರಿದಿದ್ದ. ಎಲ್ಲಿ ಯಾರಿಗಾದರು ಹೇಳಿದರೆ ನನಗೇ ಹೊಡೆದು ಬಡಿದೂ ಮಾಡುತ್ತಾರೋ ಅನ್ನೋ ಭಯದಲ್ಲಿ ನಾನು ಯಾರಿಗೂ ಹೇಳೋಕೆ ಹೋಗಲಿಲ್ಲ.

ಆಮೇಲೆ ಎರಡು ಮೂರು ತಿಂಗಳಿಗೊಮ್ಮೆ ಊರಿಗೆ ಬರ್ತಿದ್ದ ಅವನು ಬಂದಾಲೆಲ್ಲ ನನ್ನ ಮೇಲೆ ದಾಳಿ ಮಾಡ್ತಿದ್ದ. ಆಮೇಲೆ ಮತ್ತೊಂದು ವರ್ಷಕ್ಕೆ ನಾನು ಮೈನೆರೆದೆ. ನನ್ನಂತ ಕೆಲಸದಾಳುಗಳಿಗೆ ಆರೈಕೆ ಮಾಡೋರ್ಯಾರು? ಅಮ್ಮ ಮನೆಗೆ ಕರಕೊಂಡು ಹೋಗಿ ಅರಿಶಿನದ ನೀರಿನ ಸ್ನಾನ ಮಾಡಿಸಿ, ಗುಡಿಯಿಂದ ತಂದ ಭಂಡಾರ ಬಳಿದು ಮೂಲೆಯಲ್ಲಿ ಕೂರಿಸಿದಳು. ಆಮೇಲೆ ಒಂದು ಹದಿನೈದು ದಿನ ಸಾಹುಕಾರನ ಮನೆಯ ಕಡೆ ತಲೆ ಹಾಕದೆ ಸುಖವಾಗಿದ್ದೆ. ಆಮೇಲಾದರು ಹೋಗದೇ ಇರೋಕೆಲ್ಲಿ ಸಾದ್ಯವಿತ್ತು? ಹದಿನಾರನೆ ದಿನ ಸಾಹುಕಾರನ ಮನೆಗೆ ಹೋಗಿ ಯಥಾಪ್ರಕಾರ ಕೆಲಸ ಮಾಡೋಕೆ ಶುರು ಮಾಡಿದೆ. ಅದೇನು ಬಡವರ ಹೆಣ್ಣುಮಕ್ಕಳ ಗ್ರಹಚಾರನೋ ದೊಡ್ಡವಳಾದ ಮೂರೇ ತಿಂಗಳಿಗೆ ದೊಡ್ಡ ಹೆಂಗಸಿನ ತರ ಬೆಳೆದು ಬಿಟ್ಟೆ. ಸಾಹುಕಾರನ ಮಗಳ ಹಳೆ ಲಂಗ ಜಾಕೀಟಲ್ಲೂ ಚೆನ್ನಾಗೇ ಕಾಣ್ತಿದ್ದೆ. ನನ್ನ ಪುಣ್ಯಕ್ಕೆ ಮೈನೆರದು ನಾಲ್ಕು ತಿಂಗಳಾಗಿದ್ದರೂ ಸಾಹುಕಾರನ ಮಗ ಊರಿನ ಕಡೆ ತಲೆ ಹಾಕಲಿಲ್ಲ. ಸದ್ಯ ಬದುಕಿದೆ ಅಂತ ಅಂದು ಕೊಂಡು ಸುಮ್ಮನಾಗಿ ನೆಮ್ಮದಿಯಾಗಿದ್ದೆ.

ಆದರೆ ನಮ್ಮಂತೋರಿಗೆ ದೇವರು ಕರುಣೆ ತೋರಿಸಲ್ಲ. ಒಂದು ದಿನ ಯಾರೋ ತೀರಿಕೊಂಡರು ಅಂತ ಸಾಹುಕಾರನ ಹೆಂಡತಿ ಆಕೆಯ ತವರಿಗೆ ಹೋಗಿದ್ದಳು. ಅವತ್ತು ರಾತ್ರಿ ಅಷ್ಟು ದೊಡ್ಡ ಮನೆಯಲ್ಲಿ ನಾನು ಸಾಹುಕಾರ ಇಬ್ಬರೇ ಇರಬೇಕಾಗಿ ಬಂತು. ಗಂಡಾಳುಗಳೆಲ್ಲ ಮನೆ ಹಿಂದಿನ ಕೊಟ್ಟಿಗೆಯಲ್ಲಿ, ಅದರ ಪಕ್ಕದ ಶೆಡ್ಡಿನಲ್ಲಿ ಮಲಗ್ತಾ ಇದ್ದರು. ಇನ್ನು ಅಡುಗೆ ಮಾಡುವ ರಾಮಕ್ಕ ರಾತ್ರಿ ಎಂಟುಗಂಟೆಗೆಲ್ಲ ಅಡುಗೆ ಮುಗಿಸಿ ಸಾಹುಕಾರನಿಗೂ ಬಡಿಸಿ ಅವಳ ಕೇರಿಗೆ ಹೋಗಿಬಿಡೋಳು. ಮತ್ತವಳು ಬರೋದು ಬೆಳಗಿನ ಜಾವ ಐದು ಗಂಟೆಗೆ.

ಇನ್ನೇನು ನಾನೂ ಊಟ ಮುಗಿಸಿ ಮಲಗಬೇಕು ಅನ್ನುವಷ್ಟರಲ್ಲಿ ಸಾಹುಕಾರ ಕರೆದದ್ದು ಕೇಳಿಸಿತು. ಹೆದರಿಕೊಂಡೆ ಅವನ ರೂಮಿಗೆ ಹೋದೆ. ಹೋದ ಕೂಡಲೇ ರೂಮಿನ ಬಾಗಿಲು ಹಾಕು ಅಂದ. ನನಗೇನು ಮಾಡಲು ಗೊತ್ತಾಗದೆ ಗಾಬರಿಯಿಂದ ಆ ಕಡೆ ಈ ಕಡೆ ನೋಡ ತೊಡಗಿದೆ. ಸಿಟ್ಟಿಗೆದ್ದ ಸಾಹುಕಾರ ಎದ್ದು ಬಂದವನೇ ನನ್ನ ಕಪಾಳಕ್ಕೊಂದು ಹೊಡೆದು ನನ್ನ ಮೈಮೇಲಿನ ಬಟ್ಟೆಯನ್ನೆಲ್ಲ ಬಿಚ್ಚಿ ಎಸೆದು ಹಾಸಿಗೆಗೆ ಎಳೆದೊಯ್ದು ಇಡೀ ರಾತ್ರಿ ನನ್ನ ಹೇಗೆ ಬೇಕೋ ಹಾಗೆಲ್ಲ ಉಪಯೋಗಿಸಿಕೊಂಡ. ಬೆಳಗಿನ ಜಾವ ಇದನ್ನ ಹೊರಗೆ ಯಾರಿಗಾದರು ಹೇಳಿದರೆ ನಿಮ್ಮ ಮನೆಯವರನ್ನೆಲ್ಲ ಕೊಂದು ಹಾಕಿಬಿಡ್ತೀನಿ ಅಂತ ಹೆದರಿಸಿ ಅವನ ರೂಮಿನಿಂದಾಚೆ ಕಳಿಸಿದ. ನಾನು ಸೀದಾ ಅಲ್ಲಿಂದ ನಮ್ಮ ಕೇರಿಗೆ ಬಂದು ಮನೆಯಲ್ಲಿ ಅಮ್ಮನಿಗೆ ನಡೆದದ್ದನ್ನೆಲ್ಲ ಹೇಳಿದೆ. ಇದನ್ನು ಕೇಳಿ ಅಮ್ಮ ಅಳೋಕೆ ಶುರು ಮಾಡಿದರೆ ಅಪ್ಪ ದೆವ್ವ ಬಡಿದವನಂತೆ ಕೂತಿದ್ದ. ಬೆಳಗಾದ ಮೇಲೆ ಅಮ್ಮ ನನಗೆ ಸ್ನಾನ ಊಟ ಮಾಡಿಸಿ,ಮಗಳಿಗೆ ಹುಷಾರಿಲ್ಲ ಎರಡು ದಿನ ಕೆಲಸಕ್ಕೆ ಬರಲ್ಲ ಅಂತ ಸಾಹುಕಾರನ ಮನೆಗೆ ಹೋಗಿ ಹೇಳಿಬಂದಳು. ಆದರೆ ಮಾರನೇ ದಿನ ಮದ್ಯಾಹ್ನಕ್ಕೇ ಊರಿಗೆ ಬಂದ ಸಾಹುಕಾರನ ಹೆಂಡತಿ ನನ್ನ ಕರೆಸಿಕೊಂಡಳು.ಮತ್ತೆ ಆ ಮನೆಗೆ ಕಾಲಿಡಬೇಕಾದ ನನ್ನ ಅವಸ್ಥೆಗೆ ಅಪ್ಪ ಅಮ್ಮನ ಮೇಲೆ ಸಿಟ್ಟು ಬಂದರೂ ಅವರ ಕೈಲಿ ಏನೂ ಮಾಡೋಕ್ಕಾಗಲ್ಲ ಅನ್ನೋದು ಗೊತ್ತಿದ್ದರಿಂದ ದು:ಖಾನೆಲ್ಲ ನುಂಗಿಕೊಂಡು ಕೆಲಸ ಮಾಡತೊಡಗಿದೆ.

ಗ್ರಹಚಾರ ನೋಡಿ ಇದೆಲ್ಲ ಆಗಿ ಒಂದೇ ವಾರಕ್ಕೆ ಸಾಹುಕಾರನ ಮಗ ಊರಿಂದ ಬಂದುಬಿಟ್ಟ.ಹೇಗೋ ಮಾಡಿ ಒಂದೆರಡು ದಿನ ಅವನಿಂದ ತಪ್ಪಿಸಿಕೊಂಡು ಓಡಾಡಿದರೂ ಮೂರನೇ ದಿನ ಅವನ ಕೈಗೆ ಸಿಕ್ಕಿ ಹಾಕಿಕೊಂಡೆ.ಮತ್ತದೇ ನರಕ, ಕಣ್ಣಿಗೇ ಕಾಣಿಸುವ ಯಾತನೆ ಅನುಭವಿಸಿದೆ. ಒಂದು ರೀತಿಯಲ್ಲಿ ನನ್ನದು ನಾಯಿಪಾಡಾಗಿತ್ತು. ಏನೂ ಮಾಡಲಾಗದ ಅಪ್ಪ ಅಮ್ಮ, ಸಾಹುಕಾರನ ಎದುರು ನಿಂತು ಮಾತಾಡೋಕು ಹೆದರೋ ಜನಗಳ ನಡುವೆ ಬಂದಿದ್ದನ್ನೆಲ್ಲ ಅನುಭವಿಸಲೇ ಬೇಕಾಗಿತ್ತು. ಹೇಗೋ ದಿನ ದೂಡ್ತಾ ಇರಬೇಕಾದರೆ ಎರಡು ತಿಂಗಳು ನಾನು ಮುಟ್ಟಾಗಲಿಲ್ಲ. ಅಪ್ಪನದೋ ಮಗನದೋ ಒಟ್ಟಿನಲ್ಲಿ ಅವರ ಪಾಪದ ಪಿಂಡ ನನ್ನ ಹೊಟ್ಟೇಲಿ ಬೆಳೆಯೋಕೆ ಶುರುವಾಗಿತ್ತು. ಇದು ಗೊತ್ತಾದ ಸಾಹುಕಾರನ ಹೆಂಡತಿ ನನ್ನ ಜುಟ್ಟು ಹಿಡಿದು ಇದಕ್ಕೆ ಯಾರು ಕಾರಣ ಹೇಳು ಅಂದಾಗ, ಅವಳಿಗೆ ಹೇಳಿದರೆ ನನ್ನ ಕಷ್ಟ ಪರಿಹಾರವಾಗಬಹುದೇನೊ ಅನ್ನೊ ನಂಬಿಕೆಯಿಂದ ಅವಳ ಗಂಡ ಮಗ ಮಾಡಿದ್ದನ್ನೆಲ್ಲ ಹೇಳಿಬಿಟ್ಟೆ. ಆದರೆ ನನ್ನ ಲೆಕ್ಕಾಚಾರ ತಪ್ಪಿತ್ತು. ಅದನ್ನು ಕೇಳಿ ರಾಕ್ಷಸಿಯಂತಾದ ಅವಳು ಇದನ್ನ ಯಾರಿಗಾದರು ಹೇಳಿದರೆ ಸಾಯಿಸಿಬಿಡ್ತೀನಿ, ಬಾಯಿಮುಚ್ಕೊಂಡು ಕೆಲಸ ಮಾಡಿಕೊಂಡಿರು ಅಂತ ನಾಲ್ಕು ಹೊಡೆದು ಸುಮ್ಮನಾದಳು. ಆಮೇಲೆರಡು ದಿನದಲ್ಲಿ ಅಪ್ಪ ಅಮ್ಮನ್ನ ಕರೆದು ಕೂರಿಸಿ ಗುಟ್ಟಾಗಿ ಮಾತಾಡಿ, ಅದೇ ಸಾಹುಕಾರನ ಮನೇಲಿ ಜೀತಕ್ಕಿದ್ದ ಹನುಮಂತ ಅನ್ನೋ ಅರವತ್ತು ವರ್ಷದ ಮುದುಕನ ಜೊತೆ ನನ್ನ ಮದುವೆ ಮಾಡಿಸಿಬಿಟ್ಟರು. ಊರಾಚೆಯಿದ್ದ ಹಳೇ ದೇವಸ್ಥಾನದಲ್ಲಿ ನನಗೆ ತಾಳಿ ಕಟ್ಟಿದ ಮುದುಕ ಹನುಮಂತನಿಗೆ ಇದು ಮೂರನೇ ಮದುವೆಯಾಗಿತ್ತು. ಮೊದಲಿನಿಬ್ಬರೂ ಸತ್ತು ಹೋಗಿದ್ದರು.

ಸಾಹುಕಾರನ ಅಪ್ಪಣೆಯಂತೆ ಅವನ ಮನೆ ಹಿಂದಿನ ಶೆಡ್ಡಿನಲ್ಲಿ ನನ್ನ ಹೊಸ ಸಂಸಾರ ಶುರುವಾಯಿತು.ನಾನು ಬೆಳಿಗ್ಗೆಯಿಂದ ರಾತ್ರಿಯವರೆಗೂ ಸಾಹುಕಾರನ ಮನೆಯಲ್ಲಿ ಕೆಲಸ ಮಾಡಿ ಶೆಡ್ಡಿಗೆ ಬಂದರೆ ಗಂಡ ಅನಿಸಿಕೊಂಡೋನು ಹೊಟ್ಟೆತಂಬಾ ಕುಡಿದು ಪ್ರಜ್ಞೆ ಇಲ್ಲದೆ ಬಿದ್ದಿರುತ್ತಿದ್ದ. ಒಂದು ದಿನವೂ ಅವನು ನನ್ನ ಮೈ ಮುಟ್ಟಲಿಲ್ಲ.ಅದೇನು ವಿದಿಯಾಟವೋ ನನ್ನ ಮದುವೆಯಾದ ಮೂರೇ ವಾರಕ್ಕೆ ನನ್ನ ಬಸಿರು ಕಲಸಿ ಹೋಯಿತು.

ಹೀಗೇ ಎಲ್ಲ ನೋವು ನುಂಗಿಕೊಂಡು ಕೆಲಸ ಮಾಡ್ಕೊಂಡು ನನ್ನ ಪಾಡಿಗೆ ನಾನು ಬದುಕ್ತಾ ಇರಬೇಕಾದರೂ ಸಾಹುಕಾರನ ಕಾಟ ತಪ್ಪಲಿಲ್ಲ. ಆರೋಗ್ಯ ಸುದಾರಿಸಿಕೊಳ್ಳುವಷ್ಟರಲ್ಲಿ ಬಲವಂತವಾಗಿ, ನನ್ನ ಗಂಡನ ಸಹಕಾರದಿಂದ ನಾನು ಇನ್ನುಮುಂದೆ ರಾತ್ರಿ ಸಾಹುಕಾರನ ಮನೇಲೇ ಮಲಗಬೇಕು ಅನ್ನೊ ಅಪ್ಪಣೆಯಾಯಿತು. ಅವತ್ತಿಂದ ಮತ್ತೆ ನರಕ ಶುರುವಾಯಿತು. ರಾತ್ರಿ ಯಾವಾಗೆಂದರೆ ಅವಾಗ ಸಾಹುಕರನ ರೂಮಿಗೆ ಹೋಗಬೇಕಾಗಿತ್ತು. ನಾನು ಹೋದ ತಕ್ಷಣ ಸಾಹುಕಾರನ ಹೆಂಡತಿ ರೂಮಿನಿಂದ ಹೊರಗೆ ಹೋಗಿಬಿಡೋಳು. ಇದೆಲ್ಲ ಅಸಹ್ಯ ಅನಿಸಿದರೂ ಏನೂ ಮಾಡೋಕೆ ಗೊತ್ತಾಗಲಿಲ್ಲ.

ಇಂತ ಟೈಮಲ್ಲೇ ಮತ್ತೊಂದು ಕೇಡುಗಾಲ ಎದುರಾಯಿತು. ಓದು ಮುಗಿಸಿದ ಸಾಹುಕಾರನ ಮಗ ಶಾಶ್ವತವಾಗಿ ಊರಿಗೇ ಬಂದುಬಿಟ್ಟ. ಅಲ್ಲಿಂದ ನಾನು ಅಪ್ಪ ಮಕ್ಕಳಿಬ್ಬರ ಕಾಮದಾಟಕ್ಕೆ ಗೊಂಬೆಯಾಗಿಬಿಟ್ಟೆ. ರಾತ್ರಿಯ ಹೊತ್ತು ಸಾಹುಕಾರನ ಮಗ ಅದೇ ಊರಲ್ಲಿದ್ದ ಇನ್ನೊಂದು ಹೊಸಮನೆಯಲ್ಲಿ ಮಲಗ್ತಿದ್ದ. ಹೀಗಾಗಿ ಹಗಲು ಮಗನ ಜೊತೆ ಮಲಗಿದರೆ, ರಾತ್ರಿ ಅಪ್ಪನ ಜೊತೆ ಮಲಗಬೇಕಾಗ್ತಿತ್ತು. ಸಾಹುಕಾರನ ಹೆಂಡತಿಗೆ ಇದೆಲ್ಲ ಗೊತ್ತಿದ್ದರು, ಗೊತ್ತಿಲ್ಲದವರ ತರ ಇರ್ತಿದ್ದಳು. ಹೀಗೆ ಒಂದು ವರ್ಷ ಪ್ರಾಣಿಯ ತರ ಬದುಕಿದೆ.

ಆಮೇಲೊಂದು ದಿನ ದೈರ್ಯಮಾಡಿ ಸಾಹುಕಾರ ಊರಲ್ಲಿಲ್ಲದ ರಾತ್ರಿ ಯಾರಿಗೂ ಕಾಣದಂತೆ ಮನೆ ಬಿಟ್ಟು ಓಡಿಬಂದುಬಿಟ್ಟೆ. ಊರಿಂದಾಚೆ ಇದ್ದ ಪಟ್ಟಣದ ರಸ್ತೇಲಿ ನಿಂತವಳು ಬಂದ ಯಾವುದೋ ಲಾರಿಗೆ ಕೈ ಅಡ್ಡಹಾಕಿ ನಿಲ್ಲಿಸಿ,ಹತ್ತಿಕೊಂಡೆ.ಹುಬ್ಬಳ್ಳಿ ಕಡೆ ಹೋಗುತ್ತಿದ್ದ ಲಾರಿಯ ಡ್ರೈವರ್ ದುಡ್ಡು ಕೇಳಿದಾಗ ನನಗೇ ಗೊತ್ತಾಗದ ಹಾಗೆ ನನ್ನ ಕಥೆಯನ್ನೆಲ್ಲ ಹೇಳಿ ಹಗುರಾಗಿ ಬಿಟ್ಟೆ. ಅದು ನಾನು ಮಾಡಿಕೊಂಡ ತಪ್ಪು ಅಂತ ಆಮೇಲೆ ಗೊತ್ತಾಯಿತು. ಬೆಳಗಿನ ಜಾವ ಹುಬ್ಬಳ್ಳಿ ತಲುಪುತ್ತಲೇ ಅವನು ನನ್ನ ಮನೇಲಿ ಬಂದು ಇರ್ತಿಯಾ ನಾನು ನೋಡಿಕೊಳ್ಳೀನಿ ಅಂದಾಗ ವಿದಿಯಿಲ್ಲದೆ ಒಪ್ಪಿಕೊಂಡುಬಿಟ್ಟೆ. ಊರಾಚೆಯ ಯಾವುದೋ ದೇವಸ್ಥಾನದಲ್ಲಿ ನನ್ನ ಕೂರಿಸಿ ಹೋದವನು, ಲಾರಿಯನ್ನು ಅದರ ಓನರ್ ಮನೆಗೆ ಬಿಟ್ಟು ಎರಡು ಹೂವಿನ ಹಾರ ತೆಗೆದುಕೊಂಡು ಬಂದ. ದೇವರ ಎದುರು ಹಾರ ಬದಲಾಯಿಸಿ ನಾವು ಗಂಡ ಹೆಂಡತಿಯರಾದೆವು. ಆಮೇಲೆ ಊರೊಳಗಿನ ಯಾವುದೊ ಗಲ್ಲಿಯಲ್ಲಿದ್ದ ತನ್ನ ಸಣ್ಣ ಮನೆಯೊಂದಕ್ಕೆ ಕರೆದುಕೊಂಡು ಹೋದ. ನಮ್ಮ ಅಪ್ಪ ಅಮ್ಮ ಹಳ್ಳಿಯಲ್ಲಿದ್ದಾರೆ ಇಲ್ಲಿ ನಾನೊಬ್ಬನೇ ಇರೋದು ಅಂತ ಹೇಳಿದವನು, ರಾತ್ರಿಗೂ ಕಾಯದೆ, ಆಗಲೇ ಅವನೊಂದಿಗೆ ಮಲಗುವಂತೆ ಬಲವಂತ ಮಾಡಿದ. ಅದಕ್ಕೂ ಮೊದಲು ಗಂಡಸರ ಜೊತೆ ಮಲಗಿದ್ದರೂ ನಿಜವಾದ ಸುಖದ ಅರಿವಾಗಿದ್ದು ಅವತ್ತೇ!

ಆಮೇಲವನು ಮನೆಗೆ ಬೇಕಾದ ಸಾಮಾನುಗಳನ್ನು ಸ್ವಲ್ಪಸ್ವಲ್ಪವೇ ತಂದು ಹಾಕಲು ಶುರು ಮಾಡಿದ. ಅವನು ಬೆಳಿಗ್ಗೆ ಏಳು ಗಂಟೆಗೇ ಲಾರಿಗೆ ಹೋಗಬೇಕಾಗುತ್ತಿತ್ತು. ನಾನು ಐದು ಗಂಟೆಗೆಲ್ಲ ಎದ್ದು ಅಡುಗೆ ಮಾಡಿ ಕೊಡುತ್ತಿದ್ದೆ. ರಾತ್ರಿ ಮಾತ್ರ ಅವನು ಬರೋಕೆ ಒಂದು ಟೈಮ್ ಅಂತ ಇರಲಿಲ್ಲ. ವಾರಕ್ಕೊಂದು ರಜಾಮಾಡಿ ಸಿನಿಮಾ ದೇವಸ್ಥಾನ ಅಂತ ತಿರುಗಾಡುತ್ತಿದ್ದೆವು. ನನಗೆ ಊರಿನ ನೆನಪೇ ಆಗುತ್ತಿರಲಿಲ್ಲ. ಬಹುಶ: ಸ್ವರ್ಗ ಅಂದರೆ ಅದೇ ಅಂದುಕೊಂಡಿದ್ದೆ. ಅವನ ವಿಷಯದಲ್ಲಿ ನನಗಿದ್ದ ಒಂದೇ ಬೇಜಾರೆಂದರೆ ಅವನು ದಿನವೂ ಕುಡಿದು ಬರುತ್ತಿದ್ದ. ಹಾಗೆ ಕುಡಿದಾಗೆಲ್ಲ ತೀರಾ ಒರಟಾಗಿ ನಡೆದುಕೊಳ್ಳುತ್ತಿದ್ದ. ಒಂದೈದಾರು ತಿಂಗಳು ಕಳೆದ ಮೇಲೆ ಅವನು ಇದ್ದಕ್ಕಿದಂತೆ ಲಾರಿಗೆ ಹೋಗೋದನ್ನು ನಿಲ್ಲಿಸಿದ. ಕೇಳಿದರೆ ಓನರ್ ಲಾರಿ ಮಾರಿ ಬಿಟ್ಟರು ಬೇರೆ ಕೆಲಸ ನೋಡಬೇಕು ಅನ್ನುತ್ತಿದ್ದ. ದಿನ ಕಳೆದಂತೆ ಅದೆಲ್ಲ ಸುಳ್ಳು ಅಂತ ನನಗೆ ಗೊತ್ತಾಗತೊಡಗಿತು. ಕೆಲಸ ಮಾಡಲು ಇಷ್ಟವಿಲ್ಲದೆ ಸೋಮಾರಿಯಾಗಿ ಇರೋದ್ರಲ್ಲಿ ಸಂತೋಷ ಪಡೋ ಅವನ ನಡತೆ ಬಗ್ಗೆ ನಮ್ಮ ನಡುವೆ ಬೇಕಾದಷ್ಟು ಸಾರಿ ಜಗಳಗಳೂ ಆದವು. ಅವನು ಯಾಕೋ ಬದಲಾಗಿದ್ದ. ಮುಂಚೆ ರಾತ್ರಿ ಮಾತ್ರ ಕುಡೀತಾ ಇದ್ದೋನು ಈಗ ಹಗಲೂ ಕುಡಿಯೋಕೆ ಶುರು ಮಾಡಿದ್ದ. ಮನೆ ಸಾಮಾನಿಗೆ,ಕುಡಿಯೋಕೆ ಅಂತಾ ಊರೆಲ್ಲ ಸಾಲಮಾಡಿಕೊಂಡಿದ್ದ. ಸಾಲ ಕೊಟ್ಟವರು ಮನೆಗೆ ಬಂದರೆ ಜಗಳವಾಡಿ ಕಳಿಸೋನು. ಅವರ ಮೇಲಿನ ಎಲ್ಲ ಸಿಟ್ಟನ್ನೂ ನನ್ನ ಮೇಲೆ ತೋರಿಸುತ್ತ ದಿನಾ ಹೊಡೆಯೋನು. ಕೊನೆಕೊನೆಗೆ ಊಟಕ್ಕೂ ಗತಿಯಿಲ್ಲದಂತ ದಿನವೂ ಬಂದು ಬಿಡ್ತು. ಅಂತ ಒಂದಿನ ಸಾಯಂಕಾಲ ಮನೆಗೆ ಬರುವಾಗ ಜೊತೆಗೆ ಯಾರೊ ಒಬ್ಬನ್ನು ಕರೆದುಕೊಂಡು ಬಂದಿದ್ದ. ಬಂದವನನ್ನು ಮನೆಯೊಳಗೆ ಕೂರಿಸಿ, ನನ್ನ ಹಿತ್ತಲಿಗೆ ಕರೆದುಕೊಂಡು ಹೋಗಿ, ನೋಡು ಇವತ್ತು ರಾತ್ರಿ ನೀನು ಅವನ ಜೊತೆಯಿರಬೇಕು. ನಮ್ಮ ಸಾಲ ಎಲ್ಲ ತೀರಿಸೋವಷ್ಟು ದುಡ್ಡು ಕೊಟ್ಟಿದ್ದಾನೆ ಅಂದಾಗ ಆಕಾಶವೇ ತಲೆ ಮೇಲೆ ಬಿದ್ದಂತಾಯಿತು. ನನ್ನ ಕಷ್ಟ ತೀರಿತು ಅನ್ನೋವಾಗಲೇ ದುಡ್ಡಿಗಾಗಿ ಬೇರೊಬ್ಬನೊಡನೆ ಮಲಗೋಕ್ಕೆ ಗಂಡನಾದವನೇ ಹೇಳ್ತಿದಾನಲ್ಲ ಅನ್ನುವ ದು:ಖದಲ್ಲಿ ನಾನೂ ಜೋರು ದನಿಯಲ್ಲೇ ಆಗಲ್ಲ ಅಂದೆ. ಅದಕ್ಕವನು ನಿನಗೇನಿದು,ಹೊಸದಾ? ಮುಚ್ಕೊಂಡು ಹೇಳಿದ ಹಾಗೆ ಕೇಳು ಅಂತ ಹೇಳಿ ಬಂದವನನ್ನು ಮನೇಲೆ ಬಿಟ್ಟು ಹೊರಗೆಲ್ಲೊ ಹೊರಟುಹೋದ. ಆ ರಾತ್ರಿ ಸಾಹುಕಾರನ ಮನೆಗೂ ಈ ಮನೆಗೂ ವ್ಯತ್ಯಾಸವಿಲ್ಲ ಅನಿಸಿತು.

ಮುಂದೆ ಇದು ಮಾಮೂಲಿಯಾಗಿ ಬಿಡ್ತು. ಅವನು ದುಡ್ಡು ತಗೊಂಡು ಕರಕೊಂಡು ಬರೋರ ಜೊತೆ ನಾನು ಮಲಗಲೇ ಬೇಕಾಗಿತ್ತು. ಹೀಗಿರುವಾಗ ಒಂದು ದಿನ ಪೂನಾದವನೊಬ್ಬನನ್ನು ಕರೆದುಕೊಂಡ ಬಂದ. ಬಂದವನು ನನ್ನ ವಯಸ್ಸಿನವನು ತುಂಬಾ ಒಳ್ಳೆಯ ಹುಡುಗ. ಅವತ್ತು ರಾತ್ರಿ ನನ್ನ ಜೊತೆಯಿದ್ದವನು ಬೆಳಿಗ್ಗೆ ಹೋಗುವಾಗ ನೀನು ದುಡಿದು ಈ ಕುಡುಕನಿಗ್ಯಾಕೆ ಕೊಡ್ತೀಯಾ? ನನ್ನ ಜೊತೆ ಪೂನಾಗೆ ಬಂದು ಬಿಡು. ಅಲ್ಲಿ ನನ್ನ ಪರಿಚಯದವಳೊಬ್ಬಳಿದ್ದಾಳೆ. ಅವರ ಮನೆಯಲ್ಲಿ ಕೆಲಸ ಮಾಡಿಕೊಂಡಿರಬಹುದು ಅಂತ ಆಸೆ ಹುಟ್ಟಿಸಿದ. ಸರಿ, ಅವನ ಮಾತು ಕೇಳಿ ಅವತ್ತು ಮದ್ಯಾಹ್ನವೇ ಅವನ ಜೊತೆ ಗಂಡನಿಗೆ ಗೊತ್ತಾಗದ ಹಾಗೆ ಪೂನಾ ಬಸ್ಸು ಹತ್ತಿಬಿಟ್ಟೆ. ಪೂನಾ ತಲುಪಿದ ಮೇಲೆ ಅವನು ಕನ್ನಡ ಬರ್ತಿದ್ದ ಸುಮಿತ್ರಾಬಾಯಿ ಅನ್ನುವವಳ ಮನೆಯಲ್ಲಿ ನನ್ನನ್ನು ಬಿಟ್ಟು ಹೋದ. ಆಮೇಲೆ ಗೊತ್ತಾಗಿದ್ದು ನನ್ನ ಕರೆದುಕೊಂಡು ಹೋಗಿದ್ದು ಅವಳ ಮನೆಯಲ್ಲಿ ಕೆಲಸ ಮಾಡೋಕ್ಕಲ್ಲ,ದಂದೆ ಮಾಡೋಕೆ ಅಂತ. ಅಲ್ಲಿಗೆ ಅಂದುಕೊಂಡೆ ,ಇಲ್ಲ ಇನ್ನು ನನ್ನ ಜೀವನ ಮುಗಿಯಿತು. ಎಲ್ಲಿ ಹೋದರು ಇದೇ ಕಸುಬು ಮಾಡಬೇಕಾಗುತ್ತೆ ಅಂತ. ಹಾಗಂದುಕೊಂಡವಳು ದೈರ್ಯವಾಗಿ ಕಲ್ಲಿನಂತೆ ನಿಂತುಬಿಟ್ಟೆ. ದಂದೇನೇ ಮಾಡೋದಾದ್ರೆ ನನಗೋಸ್ಕರ ಸಂತೋಷದಿಂದ ಮಾಡೋಣ ಅನಿಸಿ ಅದಕ್ಕೆ ದುಮುಕಿಬಿಟ್ಟೆ.

ಏನೇ ಅಗಲಿ, ದಂದೇಲಿದ್ದರೂ ಸುಮಿತ್ರಾ ಬಾಯಿ ಮನುಷ್ಯತ್ವ ಇದ್ದ ಒಳ್ಳೆ ಹೆಂಗಸು! ಅವಳ ಮನೆಯಲಿದ್ದ ನಾವು ಐದಾರು ಹೆಂಗಸರು ದುಡಿದ ದುಡ್ಡಲ್ಲಿ ಮನೆ ಖರ್ಚನ್ನೆಲ್ಲ ಕಳೆದು ಉಳಿದದ್ದನ್ನು ಅವರವರ ಹೆಸರಲ್ಲಿ ಹತ್ತಿರದ ಬ್ಯಾಂಕಿಗೆ ಹಾಕಿಡುತ್ತಿದ್ದಳು. ಉಳಿದವರೆಲ್ಲ ವರ್ಷಕ್ಕೊಂದು ಸಾರಿಯಾದರು ಅವರವರ ಊರಿಗೆ ಹೋಗಿ ಬರೋರು. ನಾನು ಮಾತ್ರ ಎಲ್ಲಿಗೂ ಹೋಗದೆ ಅವಳ ಆಪ್ತಳಾಗಿಬಿಟ್ಟೆ. ಆ ಮನೆಯಲ್ಲಿ ಸುಮಾರು ಹದಿನಾಲ್ಕು ವರ್ಷ ಕಳೆದೆ. ಆಮೇಲೊಂದು ದಿನ ಅದೆಂತಹುದೋ ಕಾಯಿಲೆ ಬಂದು ಸುಮಿತ್ರಾಬಾಯಿ ಸತ್ತುಹೋದಳು. ಸಾಯುವ ಮುಂಚೆ ನನ್ನ ಹತ್ತಿರ ಕರೆದು, ನಿನಗಿಷ್ಟವಿದ್ದರೆ ನೀನೇ ಈ ಮನೆ ನಡೆಸಿಕೊಂಡು ಹೋಗು. ಇಲ್ಲ ಅಂದ್ರೆ ಅವರವರ ದುಡ್ಡು ಅವರವರಿಗೆ ಕೊಟ್ಟು ಅವರೆಲ್ಲಿಗೆ ಹೋಗುತ್ತಾರೊ ಅಲ್ಲಿಗೆ ಹೋಗಲು ಬಿಡು ಅಂತ ಹೇಳಿದ್ದಳು. ಆಕೆ ಸತ್ತಮೇಲೆ ಆಕೆಯ ಕಾರ್ಯವನ್ನೆಲ್ಲ ನಾವೇ ಹೆಂಗಸರು ಸೇರಿ ಮಾಡಿದೆವು. ನಂತರ ಅವರವರ ದುಡ್ಡನ್ನೆಲ್ಲ ಅವರವರಿಗೆ ಕೊಟ್ಟು ನಿಮಗೆ ಇಷ್ಟಬಂದ ಕಡೆ ಹೋಗಿ ಅಂತ ಕಳಿಸಿಬಿಟ್ಟೆ. ನಾನು ದುಡಿದ ದುಡ್ಡನ್ನು ತೆಗೆದುಕೊಂಡು ಅಲ್ಲಿ ಯಾರಿಗೂ ಹೇಳದೆ ಈ ಊರಿಗೆ ಬಂದುಬಿಟ್ಟೆ.

ಇಲ್ಲಿಗೆ ಬಂದಾಗ ನನಗೆ ಮೊದಲು ಪರಿಚಯವಾದವರೇ ನಿಮ್ಮನ್ನು ಈ ಮನೆಗೆ ಕರೆದುಕೊಂಡುಬಂದ ಬಾಲಣ್ಣ. ಸಮಾಜಸೇವೆ ಅದೂ ಇದೂ ಅಂತ ಮಾಡಿಕೊಂಡಿದ್ದ ಅವರೇ ನನಗೀ ಮನೆ ಕೊಡಿಸಿದರು. ಜೊತೆಗೆ ಇಲ್ಲಿಂದ ಎರಡು ಮೈಲಿ ದೂರವಿರೊ ಒಂದು ಬುದ್ದಿಮಾಂದ್ಯ ಮಕ್ಕಳ ಶಾಲೆಯಲ್ಲಿ ಆಯಾ ಕೆಲಸವನ್ನೂ ಕೊಡಿಸಿದರು. ಆ ಶಾಲೆಯಲ್ಲಿ ಸುಮಾರು ಆರು ವರ್ಷ ಕೆಲಸ ಮಾಡಿ ಕೊನೆಗೆ ಆರೋಗ್ಯ ಸರಿಯಿರದೆ ಕೆಲಸ ಬಿಟ್ಟೆ. ಈಗ ಈ ಮನೆಯನ್ನು ಎರಡು ಪೋಷನ್ ಮಾಡಿ ಹಿಂದುಗಡೆಯದನ್ನು ಬಾಡಿಗೆಗೆ ಕೊಟ್ಟಿದೀನಿ. ಬ್ಯಾಂಕಲ್ಲಿರೋ ಒಂದಷ್ಟು ದುಡ್ಡಿಂದ ಬಡ್ಡಿ ಬರುತ್ತೆ, ನನ್ನೊಬ್ಬಳ ಜೀವನಕ್ಕೆ ಇಷ್ಟು ಸಾಕು. ಒಂದು ಸಾರಿ ನನಗೆ ಆರೋಗ್ಯ ಸರಿಯಿರದೆ ಮಲಗಿದಾಗ ಈ ಬೀದಿಯ ಹೆಣ್ಣುಮಕ್ಕಳು ನನ್ನ ಆಸ್ಪತ್ರೆಗೆ ಕರೆದುಕೊಂಡು ಹೋಗಿ ತೋರಿಸಿ, ಗಂಜಿಯೆಲ್ಲ ಮಾಡಿಕೊಟ್ಟು ಉಪಚಾರ ಮಾಡಿದ್ದರು. ಪಾಪ ಅವರಿಗೆ ನಾನೆಂತ ಕಸುಬು ಮಾಡ್ತಿದ್ದೆ ಅಂತ ಗೊತ್ತಿಲ್ಲ.ಪಾಪ ಯಾರೋ ಗಂಡ ಸತ್ತ ಹೆಂಗಸು ಅನಾಥೆ ಅಂದುಕೊಂಡಿದ್ದಾರೆ. ಅವರ ಒಳ್ಳೆಯತನ ನನ್ನ ಮನಸ್ಸಿಗೆ ನಾಟಿ ಹೋಯಿತು. ಅವತ್ತಿಂದ ಈ ಬೀದೀಲಿ ಯಾರಿಗೇ ಆರೋಗ್ಯ ಸರಿಯಿಲ್ಲ ಅಂದ್ರು ನಾನವರ ಮನೆಗೊ ಆಸ್ಪತ್ರೆಗೊ ಹೋಗಿ ಅವರ ಉಪಚಾರ ಮಾಡ್ತೀನಿ. ಈಗ ಈ ಬೀದಿಯ ಎಪ್ಪತ್ತು ಎಂಭತ್ತು ಕುಟುಂಬಗಳೂ ನನ್ನದೇ ಅನಿಸಿಬಿಟ್ಟಿದೆ. ದೊಡ್ಡವರು ಚಿಕ್ಕವರು ಅನ್ನದೆ ಎಲ್ಲರ ಜೊತೆ ಹೊಂದಿಕೊಂಡು ಬದುಕ್ತಾ ಇದೀನಿ. ಅವರ ಮನೆಯ ಮದುವೆ ಮುಂಜಿ ನಾಮಕರಣಗಳಿಗೆ ನನಗೊಂದು ಆಮಂತ್ರಣವಿದ್ದೇ ಇರುತ್ತೆ. ದಿನಾ ಸಾಯಂಕಾಲ ನನ್ನ ವಯಸ್ಸಿನ ಹೆಂಗಸರೆಲ್ಲ ಸೇರಿ ಈ ಮನೆಯಲ್ಲೇ ಸಾಯಿಭಜನೆ ಮಾಡ್ತೀವಿ.

ಹೀಗೇ ಕಾಲ ನೂಕ್ತಾ ಇದೀನಿ. ಮರೆತೇ ಹೋಗಿದ್ದ ಕಥೆ ಇವತ್ತು ನಿಮ್ಮಿಂದ ಮತ್ತೆ ನೆನಪಾಯಿತು. ನನ್ನಂತೋರು ಈ ಭೂಮಿ ಮೇಲೆ ಬಹಳ ಜನ ಇದಾರೆ. ಆದರೆ ಅವರೆಲ್ಲ ನನ್ನ ಹಾಗೆ ಕೊನೆಗಾಲದಲ್ಲಿ ನೆಮ್ಮದಿಯಾಗಿರೋದು ತುಂಬಾ ಕಷ್ಟ. ಈ ವಿಚಾರದಲ್ಲಿ ನಾನು ಪುಣ್ಯವಂತಳು. ನನ್ನ ಕಥೆಯನ್ನ ನೀವು ಪುಸ್ತಕ ಬರೀತೀರೊ ಸಿನಿಮಾ ಮಾಡ್ತೀರೋ ನನಗೆ ಗೊತ್ತಿಲ್ಲ. ಆದರೆ ಇದರಿಂದ ಬೇರೆ ಹೆಣ್ಣುಮಕ್ಕಳು ಇಂತ ನರಕಕ್ಕೆ ಬಂದುಬೀಳೋದು ನಿಂತರೆ ಸಾಕು. 

ಪೂರಾ ಕಥೆ ಹೇಳಿದರೆ ಒಂದಿಷ್ಟು ದುಡ್ಡು ಕೊಡ್ತೀನಿ ಅಂತ ಬಾಲಣ್ಣನಿಗೆ ಹೇಳಿದ್ರಂತೆ.ನಿಮ್ಮ ದುಡ್ಡು ನನಗೆ ಬೇಡ. ನೀವು ಕೊಡಬೇಕು ಅಂತಿರೋ ದುಡ್ಡನ್ನು ಆಗಲೆ ಹೇಳಿದ್ನಲ್ಲ ಆ ಬುದ್ದಿಮಾಂದ್ಯ ಮಕ್ಕಳ ಶಾಲೆಗೆ ಕೊಟ್ಟುಬಿಡಿ.ಅವರು ಬಹಳ ಕಷ್ಟಪಟ್ಟು ಆ ಶಾಲೆ ನಡೆಸ್ತಾ ಇದಾರೆ. ಪಾಪ ಯಾರೂ ದಿಕ್ಕಿರದ ಮಕ್ಕಳನ್ನು ನೋಡಿಕೊಳ್ತಿರೊ ಆ ಕಮಿಟಿಯವರಿಗಾದರು ಸಹಾಯವಾಗುತ್ತೆ.

ಎದುರಿಗೆ ಕೂತಿದ್ದವಳು ಮಾತು ನಿಲ್ಲಿಸಿ ಮೇಲೆದ್ದು, ಮನೆಗೆ ಬಂದವರನ್ನು ಬರೀ ಹೊಟ್ಟೇಲಿ ಕಳಿಸಬಾರದಂತೆ ಅನ್ನುತ್ತ ಒಳಗೆ ಹೋಗಿ ಒಂದು ಲೋಟ ಹಾಲು ತಂದು ಕೊಟ್ಟಳು.ಹಾಲು ಕುಡಿದ ನಾನು,ನಿಮ್ಮದೊಂದು ಫೋಟೊ ತೆಗೆಯಲಾ ಎಂದದ್ದಕ್ಕೆ, ಅದೊಂದು ಮಾತ್ರ ಬೇಡ. ಇನ್ನೊಂದ್ಸಲ ಈ ಕಡೆ ಬಂದ್ರೆ ನಿಮ್ಮ ಹೆಂಡತಿ ಮಕ್ಕಳನ್ನು ಕರೆದುಕೊಂಡು ಬನ್ನಿ. ಒಂದು ದಿನವಿದ್ದು ಊಟ ಮಾಡಿಕೊಂಡು ಹೋಗಬಹುದು ಅಂದಳು.

ಗೇಟಿನ ಬಾಗಿಲು ದಾಟಿದವನಿಗೆ ಯಾಕೊ ಮನಸ್ಸು ಬಾರವಾದಂತಾಯಿತು. ಶಾಲೆಗೆ ದುಡ್ಡು ಕೊಡಲು ಕೇಳಿಕೊಂಡ ಅವಳ ಮುಂದೆ ನಾನು ತುಂಬ ಸಣ್ಣವನೆನಿಸಿ ನಾಚಿಕೆಯಾಯಿತು.ನಂತರ ಅವಳು ಹೇಳಿದ ಶಾಲೆಗೆ ಹೋಗಿ ಒಂದಿಷ್ಟುದುಡ್ಡು ಕೊಟ್ಟು ಊರಿಗೆ ಬಂದರೂ ಬಹಳ ದಿನ ಅವಳು ನೆನಪಾಗುತ್ತಲೇ ಇರುತ್ತಿದ್ದಳು.

No comments:

Post a Comment