Feb 9, 2015

ಹುಲಿಯ ನೆರಳಿನೊಳಗೆ ಪ್ರಖರವಾಗಿ ಬೆಳಗಿದ ನಾಮದೇವ ನಿಮ್ಗಾಡೆ

in the tigers shadow
ಹುಲಿಯ ನೆರಳಿನೊಳಗೆ
Dr Ashok K R
ಗೌಡ, ಜಮೀನ್ದಾರ, ಪೋಲೀಸ್ ಪಾಟೀಲ್, ಮಾಲಿ ಪಾಟೀಲ್, ಪೂಜಾರಿ, ಅಯ್ಯಂಗಾರಿ ಇನ್ನೂ ಹತ್ತಲವು ಪದಗಳು ನಮ್ಮಲ್ಲನೇಕರ ಹೆಸರುಗಳನ್ನಲಂಕರಿಸುತ್ತವೆ. ಈಗವುಗಳಲ್ಲಿ ಬಹುತೇಕವು ತಲೆಮಾರಿನ ಮುಂದುವರಿಕೆಗೆ ಇದ್ದರೆ ಮುಂಚಿನ ದಿನಗಳಲ್ಲಿ ಅವರ ಸುಪರ್ದಿಯಲ್ಲಿದ್ದ ದೇವಸ್ಥಾನ, ಜಮೀನು, ಕೆಲಸವನ್ನು ಸೂಚಿಸುತ್ತಿದ್ದವು, ಜೊತೆಗೆ ಜಾತಿ ಸೂಚಕವಾಗಿದ್ದವು. ದೇವಸ್ಥಾನದ ಒಳಗೆ ಕಾಲಿಡಲಾಗದ, ಜಮೀನಿನ ಒಡೆತನವೇ ಇಲ್ಲದ, ಮಾಡುವ ಕೆಲಸವನ್ನು ಹೇಳಿಕೊಳ್ಳಲಾಗದ, ಹೆಸರೇ ಕೀಳರಿಮೆ ಹುಟ್ಟಿಸುವ ಜಾತಿಯಲ್ಲಿ ನರಳಿದ ಜನರು ಸರ್ ನೇಮಿಗಾಗಿ ಏನು ಮಾಡುತ್ತಿದ್ದರು?! ಆಸ್ತಿ ಪಾಸ್ತಿ ಇಲ್ಲದ ಜನರು ಪ್ರಕೃತಿಯಲ್ಲಿ ಉಳಿದವರಿಗಿಂತ ಹೆಚ್ಚಾಗಿ ಒಡನಾಡಿದವರು. ಅಂಥಹ ಪ್ರಕೃತಿಯೊಂದಿಗೇ ತಮ್ಮನ್ನು ಗುರುತಿಸಿಕೊಳ್ಳುವ ಅತ್ಯದ್ಭುತ ವಾಸ್ತವಾತ್ಮಕ ಕಲ್ಪನೆಯೊಂದಿಗೆ ಕನ್ನಡಕ್ಕೆ ಭಾವಾನುವಾದಗೊಂಡಿರುವ ನಾಮದೇವ ನಿಮ್ಗಾಡೆಯವರ ಆತ್ಮಕಥನ ‘ಹುಲಿಯ ನೆರಳಿನೊಳಗೆ – ಅಂಬೇಡ್ಕರ್ ವಾದಿಯ ಆತ್ಮಕಥೆ’ ಪ್ರಾರಂಭವಾಗುತ್ತದೆ. ನಿಮ್ಗಾಡೆಯ ಅರ್ಥ ಬೇವಿನ ಮರ! ಇದೇ ರೀತಿ ತೆಂಗಿನ ಮರ(ಕೋಬ್ರಗಾಡೆ), ಮಾವಿನ ಗಿಡ (ಅಂಬಗಾಡೆ), ಸೀಬೆ ಮರ (ಜಮಗಾಡೆ), ಚೆಕ್ಕಕಾಯಿ (ಬೋರ್ಕರ್) ಎಂಬ ಹೆಸರುಗಳೂ ಇವೆಯಂತೆ. ಪ್ರಕೃತಿಯೊಂದಿಗೆ ಇದಕ್ಕಿಂತ ಹೆಚ್ಚಿನ ರೀತಿಯ ಸಹಬಾಳ್ವೆಯ ಉದಾಹರಣೆಯನ್ನು ನಾನಂತೂ ಇದುವರೆಗೆ ಓದಿರಲಿಲ್ಲ.

ನೂರರ ಹತ್ತಿರದಷ್ಟು ಪುಟಗಳಿರುವ ‘ಹುಲಿಯ ನೆರಳಿನೊಳಗೆ’ ಪುಸ್ತಕ ಕೊಂಡು ಓದಲಾರಂಭಿಸಿದಾಗ ಒಂದಷ್ಟು ಬೇಸರವೇ ಆಯಿತು. ಕಾರಣ ನೂರು ಪುಟದ ಪುಸ್ತಕದಲ್ಲಿ ಮೊದಲ ಮೂವತ್ತೈದು ಪುಟಗಳು ಲೇಖಕರ, ಪ್ರಕಾಶಕರ, ಪ್ರಸ್ತಾವನೆಯ, ಮುನ್ನುಡಿಯ ಪುಟಗಳಿಗೇ ಮೀಸಲಾಗಿಬಿಟ್ಟಿದೆ! ಆಮೂವತ್ತೈದು ಪುಟಗಳ ಬರಹ ಚೆಂದಿದ್ದರೂ ಮೂಗಿಗಿಂತ ಮೂಗುತಿ ಬಾರವೆಂಬಂತೆ ಭಾಸವಾಯಿತು. ನಾಮದೇವ ನಿಮ್ಗಾಡೆಯವರ In the Tiger’s shadow ಪುಸ್ತಕದಲ್ಲಿ ತಮಗೆ ಮೆಚ್ಚುಗೆಯಾದ, ಕಾಡಿದ ಭಾಗಗಳನ್ನಷ್ಟೇ ಅನುವಾದಿಸಿದ್ದಾರೆ. ‘ದನಗಳೊಂದಿಗೆ ಓಟ’, ‘ನೀರಿನ ಹಕ್ಕಿಗಾಗಿ ಹೋರಾಟ’, ‘ಅಸ್ಪ್ರಶ್ಯ ಅನುಭವ ಮುಂದಿಟ್ಟುಕೊಂಡು’, ‘ನಾಗಪುರದಲ್ಲಿನ ಗಲಭೆಗ್ರಸ್ತ ಕಾಲೇಜು ದಿನಗಳು’, ಸ್ಕಾಲರ್ ಶಿಪ್ ಗಾಗಿ ಹೋರಾಟ’, ‘ಐವತ್ತರ ದಶಕದ ದೆಹಲಿ’, ‘ಬಾಬಾ ಸಾಹೇಬ್ ಕಿಕ್’, ‘ಅಂಬೇಡ್ಕರ್ ಅಸ್ತಂಗತ’, ‘ಅಮೆರಿಕನ್ನರು ಅಸ್ಪ್ರಶ್ಯತೆಯ ಪದದ ಅರ್ಥ ಬ್ರಾಹ್ಮಣವೆಂದೇ ಭಾವಿಸಿದ್ದರು’, ‘ಶಾಶ್ವತ ಐಡೆಂಟಿಟಿ ಕಾರ್ಡ್’ ಎಂಬ ಹತ್ತು ಭಾಗಗಳಲ್ಲಿ ಪುಸ್ತಕವನ್ನು ಭಾವಾನುವಾದ ಮಾಡಿದ್ದಾರೆ.

ಹೆಸರೇ ಸೂಚಿಸುವಂತೆ ಇದು ಅಂಬೇಡ್ಕರ್ ವಾದಿಯ ಆತ್ಮಕಥೆ. ನಾಮದೇವ ನಿಮ್ಗಾಡೆಯವರ ಕಥನವಾದರೂ ಪ್ರತಿ ಭಾಗದಲ್ಲೂ ಅಂಬೇಡ್ಕರರ ಛಾಪಿದೆ. ಆ ಛಾಪಿನ ನೆರಳಿನಲ್ಲಿ ಅವಮಾನದ ಕಲ್ಲುಗಳನ್ನೇ ಮೆಟ್ಟಿಲುಗಳನ್ನಾಗಿಸಿ ಯಶಸ್ಸಿನ ಶಿಖರವೇರಿದ ನಾಮದೇವರ ಕಥೆಯಿದೆ. ಇಡೀ ಪುಸ್ತಕದಲ್ಲಿ ಒಂದು ಸಹಜ ಪ್ರಾಮಾಣಿಕತೆಯಿದೆ. ನೀರು ಕುಡಿಯಲು ಕೊಡದವರನ್ನು, ದೇಗುಲ ಪ್ರವೇಶ ಮಾಡಲು ಬಿಡದವರ ಬಗ್ಗೆ ಬರೆಯುವಾಗಲೂ ದ್ವೇಷದ ಭಾವವಿಲ್ಲ, ಅವರು ಹೀಗೆಲ್ಲ ಮಾಡಿದರು ಎಂದು ನಿರ್ಭಾವುಕವಾಗಿ ವರದಿ ಒಪ್ಪಿಸುವ ವರದಿಗಾರನ (ಈಗಿನ ವರದಿಗಾರರು ಬೇರೆ ರೀತಿ ಮಾತಾಡುತ್ತಾರೆ ಬಿಡಿ!) ಶಿಸ್ತಿದೆ. ಫಾರಿನ್ ಟೋಪಿಯನ್ನು ಬೆಂಕಿಗೆ ಬಿಸಾಕುವುದು ಗಾಂಧಿ ಅನುಯಾಯಿಗಳಿಗೆ ದೇಶಪ್ರೇಮದ ರೀತಿ ಕಂಡರೆ, ಊರ ಜನರ ಜಾತಿ ದೌರ್ಜನ್ಯದ ನಡುವೆ ಬಳಲಿದ ನಾಮದೇವರಿಗೆ ಟೋಪಿಯೆಂಬುದು ತನ್ನ ಘನತೆ ಎತ್ತಿ ಹಿಡಿಯುವ ಅಸ್ತ್ರವಾಗಿತ್ತು. ಅದನ್ನು ಗಾಂಧಿ ಅನುಯಾಯಿಗಳು ಸುಟ್ಟ ಕಾರಣದಿಂದ ಚಿಕ್ಕ ವಯಸ್ಸಿನ ನಾಮದೇವರಿಗೆ ಗಾಂಧಿಯೆಂದರೆ ಯಾರೋ ರಾಕ್ಷಸ ಎಂಬ ಭಾವ ಮೂಡಿತ್ತಂತೆ! ವೈಚಾರಿಕ ವಿರೋಧಗಳು ಸಾವಿರಗಳಿದ್ದಾಗ್ಯೂ ಗಾಂಧೀಜಿಯ ಬಗ್ಗೆ ಗೌರವದ ಮಾತುಗಳನ್ನೇ ಬರೆದಿದ್ದಾರೆ ನಿಮ್ಗಾಡೆ. ಇವತ್ತಿನ ಅಂಬೇಡ್ಕರ್ ವಾದಿಗಳು ಇದನ್ನು ಗಮನಿಸಬೇಕು.

ದಲಿತರ ರಾಜಕೀಯ ಏಳ್ಗೆಯ ಬಗ್ಗೆ ಮಾತನಾಡುತ್ತಿದ್ದ ಅಂಬೇಡ್ಕರ್ ಅದರ ಜೊತೆಜೊತೆಗೇ ನಾಮದೇವರಂತಹ ಪ್ರಖರ ವಿದ್ಯಾರ್ಥಿಗಳಿಗೆ ಹೆಚ್ಚೆಚ್ಚು ಓದಿ ರಜಾ ದಿನಗಳನ್ನೂ ಸಂಶೋಧನೆಗೇ ಮೀಸಲಿಡುವಂತೆ ಒತ್ತಾಯಿಸುತ್ತಿದ್ದರು. ‘ನೀವು ವಿದ್ಯಾವಂತರು ತಿಂಗಳ ಸಂಬಳಕ್ಕಾಗಿ ಕೆಲಸವೊಂದನ್ನು ಗಳಿಸಿ ನಂತರ ನಿಮ್ಮ ಸಮಾಜ ಹಾಗೂ ನೀವು ನಡೆದು ಬಂದ ದಾರಿಯನ್ನು ಮರೆತುಬಿಡುತ್ತಿರಿ’ ಎಂಬ ಅಂಬೇಡ್ಕರರ ಕಾಳಜಿ ದಲಿತ ಚಳುವಳಿಯ ಜೊತೆಜೊತೆಗೆ ಎಲ್ಲಾ ಚಳುವಳಿಯ ವಿಫಲತೆಗೂ ಕಾರಣ ಸೂಚಿಸುತ್ತದೆ. ಕಂಫರ್ಟ್ ಝೋನು ಸೇರಿದ ಮನುಷ್ಯ ಚಳುವಳಿಯ ಬದಲಾವಣೆಯ ಭಾಗವಾಗುವುದು ಕಡಿಮೆ. ದಲಿತನೊಬ್ಬ ವಿಜ್ಞಾನಿಯಾಗುವುದು ವಿಧಾನಸಭೆಯ ಸದಸ್ಯನಾಗುವುದಕ್ಕಿಂತ ಉತ್ತಮ ಎಂದು ಅಂಬೇಡ್ಕರ್ ಹೇಳದಿದ್ದರೆ ಕೃಷಿ ವಿಜ್ಞಾನಿಯ ಪಟ್ಟ ಪಡೆಯದೆ ನಾಮದೇವ ನಿಮ್ಗಾಡೆಯವರು ರಾಜಕಾರಣಿಯಾಗುತ್ತಿದ್ದರು. ಅಂಬೇಡ್ಕರ್ ನಿಧನಾನಂತರ ಉನ್ನತ ವ್ಯಾಸಂಗಕ್ಕೆ ಅಮೆರಿಕೆಗೆ ತೆರಳುವ ನಿಮ್ಗಾಡೆ ಅಲ್ಲಿನ ವಿಶ್ವವಿದ್ಯಾಲಯದಲ್ಲಿ ಪಿ.ಎಚ್.ಡಿ ಪಡೆದ ಎರಡನೇ ದಲಿತರು. ಮೊದಲನೆಯವರು ಅಂಬೇಡ್ಕರ್! ಭಾರತಕ್ಕೆ ಮರಳಿದ ನಂತರ ಕೃಷಿ ಕ್ಷೇತ್ರದಲ್ಲಿ ವಿಜ್ಞಾನಿಯಾಗಿ ಕೆಲಸಮಾಡಿದರು. ತಲ್ಲೀನಗೊಳಿಸುವ ಓದಿಗೆ ಬ್ರೇಕು ಬೀಳುವುದಕ್ಕೆ ಕಾರಣ ಪುಸ್ತಕವನ್ನು ಕನ್ನಡಕ್ಕೆ ಅನುವಾದಿಸಿರುವ ಶ್ರೀಪಾದರು ಎಂದರೆ ತಪ್ಪಿಲ್ಲ! ಇಷ್ಟು ಚೆಂದದ ಪುಸ್ತಕವನ್ನು ಆಪ್ತತೆ ಮರೆಯಾಗದ ಹಾಗೆ ಕನ್ನಡಕ್ಕೆ ಅನುವಾದಿಸಿರುವ ಶ್ರೀಪಾದರು ಪೂರ್ತಿ ಪುಸ್ತಕವನ್ನು ಅನುವಾದಿಸದೆ ಕನ್ನಡ ಓದುಗರಿಗೆ ಮೋಸ ಮಾಡಿದ್ದಾರೆಂದೇ ಹೇಳಬಹುದು! ಲೇಖಕರ ಮಾತಿನಲ್ಲಿ “ಈ ಅನುವಾದದ ಭಾಗಗಳನ್ನು ಓದಿದಾಗ ಓದುಗರಿಗೆ ಮೂಲ ಕೃತಿ In The Tiger’s Shadow: The Autobiography Of An Ambedkarite ಅನ್ನು ಓದಬೇಕೆನಿಸಿದರೆ ಅದು ನಿಜಕ್ಕೂ ಖುಷಿಯ ಸಂಗತಿ” ಎಂದು ಬರೆದುಕೊಂಡಿದ್ದಾರೆ. ಇವತ್ತಷ್ಟೇ ಮೂಲ ಪುಸ್ತಕ ಅಂಚೆ ಮುಖಾಂತರ ತಲುಪಿದೆ. ಓದಲಾರಂಭಿಸಬೇಕಷ್ಟೇ!
ಹುಲಿಯ ನೆರಳಿನೊಳಗೆ: ಅಂಬೇಡ್ಕರ್ ವಾದಿಯ ಆತ್ಮಕಥೆ
- ನಾಮದೇವ ನಿಮ್ಗಾಡೆ
ಭಾವಾನುವಾದ: ಬಿ. ಶ್ರೀಪಾದ
ಲಡಾಯಿ ಪ್ರಕಾಶನ, ಗದಗ.
ಬೆಲೆ: 90

No comments:

Post a Comment