Oct 22, 2014

ಅಂಬೇಡ್ಕರ್ ವಾದಿಯ ಕಣ್ಣಲ್ಲಿ ಬಾಬಾಸಾಹೇಬ್

ladai prakashana
ಬಿ. ಶ್ರೀಪಾದ್ ಭಾವಾನುವಾದ ಮಾಡಿರುವ ನಾಮದೇವ ನಿಮ್ಗಾಡೆ ಬರೆದಿರುವ "ಹುಲಿಯ ನೆರಳಿನೊಳಗೆ - ಅಂಬೇಡ್ಕರ್ ವಾದಿಯ ಆತ್ಮಕಥೆ" ಪುಸ್ತಕದ ಬಗ್ಗೆ ಡಾ.ಎಚ್.ಎಸ್. ಅನುಪಮರವರ ಬರಹ. ಲಡಾಯಿ ಪ್ರಕಾಶನದಿಂದ ಮುದ್ರಣ ಕಂಡಿರುವ ಪುಸ್ತಕ ನವೆಂಬರ್ ಎರಡರಂದು ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿನ ಕೃಷ್ಣರಾಜ ಪರಿಷನ್ಮಂದಿರದಲ್ಲಿ ಪುಸ್ತಕ ಬಿಡುಗಡೆಗೊಳ್ಳಲಿದೆ.



 ಮಧ್ಯಪ್ರದೇಶದ ಸಾತಗಾಂವ್ ಎಂಬ ಹಳ್ಳಿಯ ಮಹಾರ್ ಕೇರಿಯಲ್ಲಿ 1920ನೇ ಇಸವಿಯ `ಮಳೆಗಾಲದ ಯಾವುದೋ ಒಂದು ದಿನ ಹುಟ್ಟಿದ ನಾಮದೇವನೆಂಬ ಹುಡುಗನೊಬ್ಬ, ತನ್ನ 14ನೇ ವರ್ಷಕ್ಕೆ ಶಾಲೆ ಸೇರಿ ಓದಿ, ಪದವೀಧರನಾಗಿ, ಅಮೆರಿಕದ ವಿಸ್ಕಾನ್ಸಿನ್ ವಿಶ್ವವಿದ್ಯಾಲಯಕ್ಕೆ ಉನ್ನತ ವಿದ್ಯಾಭ್ಯಾಸಕ್ಕಾಗಿ ಹೋಗಿ, ನಂತರ ಭಾರತೀಯ ಕೃಷಿ ಸಂಶೋಧನಾ ಸಂಸ್ಥೆಯ ಹಿರಿಯ ವಿಜ್ಞಾನಿ ಡಾ. ನಾಮದೇವ್ ನಿಮ್ಗಾಡೆಯಾಗಿ ಬೆಳೆದ ಕತೆಯೇ, `ಇನ್ ಟೈಗರ್ಸ್ ಶಾಡೋ.’
ಉಳಿದ ದಲಿತ ಆತ್ಮಕಥೆಗಳಲ್ಲಿರುವಂತೆಯೇ ಇಲ್ಲೂ ನಿಮ್ಗಾಡೆ ತಾವು ಎದುರಿಸಿದ ಅಸ್ಪೃಶ್ಯತೆಯ ಅವಮಾನ, ಜಾತೀಯತೆಯ ಕ್ರೌರ್ಯಗಳು, ಮಾನವೀಯ ಅನುಕಂಪದ ಸಹಾಯಗಳು ಇವನ್ನೆಲ್ಲ ನೆನೆದು ದಾಖಲಿಸುತ್ತಲೇ, ಅಂಬೇಡ್ಕರ್ ಅವರ ವ್ಯಕ್ತಿತ್ವ-ವೈಯುಕ್ತಿಕ ಜೀವನದ ಬಗೆಗೊಂದು ಆಪ್ತ ಮತ್ತು ಖಾಸಾ ಆದ ಫಸ್ಟ್ಹ್ಯಾಂಡ್ ನೋಟವೊಂದನ್ನು ಕೊಟ್ಟಿದ್ದಾರೆ. ಕಳೆದ ಶತಮಾನದ 40-50 ದಶಕವು ನಮ್ಮ ದೇಶದ ಮಟ್ಟಿಗೆ ಮಹಾಸಂಕ್ರಮಣದ ಕಾಲ. ದಿನಗಳಲ್ಲಿ ಅಂಬೇಡ್ಕರರೊಡನೆ ಹತ್ತಿರದಿಂದ ಒಡನಾಡಿದ ನಾಮದೇವ ನಿಮ್ಗಾಡೆ, ತಮ್ಮ ಗುರು-ಸ್ಪೂರ್ತಿ-ಸಲಹಾಕಾರ-ಆಪದ್ಭಾಂಧವ ಎಲ್ಲವೂ ಆಗಿದ್ದ ಬಾಬಾಸಾಹೇಬ್ ಅವರನ್ನು ಹೆಜ್ಜೆಹೆಜ್ಜೆಗೂ ನೆನಪಿಸಿಕೊಂಡಿದ್ದಾರೆ. ತಮ್ಮ ಯಶಸ್ಸಿನ ರೂವಾರಿ ಅವರೇ ಎಂದು ಹುಲಿ ನಡೆದ ಜಾಡಿನಲ್ಲಿ ನಡೆಯುತ್ತಾರೆ.
ಪುಸ್ತಕದ ಬಗೆಗೆ ಹೆಚ್ಚು ಬರೆಯುವುದಕ್ಕಿಂತ ಅದರ ಇಣುಕುನೋಟವನ್ನು ಕೊಡುವುದು ಸೂಕ್ತ. ಅದರಲ್ಲೂ ಮತ್ತೆಮತ್ತೆ ಬರುವ ಅಂಬೇಡ್ಕರ್ ಕುರಿತಾದ ಘಟನೆಗಳ ಸಾರಸಂಗ್ರಹ ಇಲ್ಲಿದೆ..

***
`ಅಹಿಂಸೆಯೆಂಬ ತತ್ವವನ್ನು ಗಾಂಧಿ ಸರಿಯಾಗಿ ಅರ್ಥಮಾಡಿಕೊಂಡಿಲ್ಲ. ಆದರೆ ಬುದ್ಧನ ಅಹಿಂಸಾ ತತ್ವ ಪರಿಪೂರ್ಣ ಎಂಬುದು ಅಂಬೇಡ್ಕರ್ ಅಭಿಪ್ರಾಯ. ಹೀಗೆ ಹೇಳುತ್ತಾ ಬುದ್ಧನ ಅಹಿಂಸಾ ಮಾರ್ಗದ ಒಂದು ಉಪದೇಶ ಉದಾಹರಿಸುತ್ತಾರೆ:
ಒಮ್ಮೆ ಸೇನಾ ದಂಡನಾಯಕನೊಬ್ಬ ಬುದ್ಧನ ಬಳಿ ಬಂದು ಕೇಳುತ್ತಾನೆ, `ದೇವ, ನಾನೊಂದು ಪ್ರಬಲ ಸೇನೆಯ ನಾಯಕ. ನಮ್ಮ ನೆಲ ರಕ್ಷಿಸುತ್ತೇವೆಂದು ಪಣ ತೊಟ್ಟಿದ್ದೇವೆ. ಆದರೆ ನಾನೀಗ ಅಹಿಂಸೆಯ ವ್ರತದಲ್ಲಿ ನಂಬಿಕೆಯಿಟ್ಟು ತುಂಬ ಗೊಂದಲಗೊಂಡಿದ್ದೇನೆ. ನೆರೆ ರಾಜ್ಯದವರು ನಮ್ಮ ಮೇಲೆ ದಾಳಿ ಮಾಡಿದ್ದೇ ಆದರೆ ನಾನೇನು ಮಾಡಬೇಕು?’ ಬುದ್ಧ ಉತ್ತರಿಸುತ್ತಾನೆ, `ತಪ್ಪಿತಸ್ಥನನ್ನು ಶಿಕ್ಷಿಸುವುದು ಅಪರಾಧವಲ್ಲ. ನೀನು ನ್ಯಾಯವನ್ನು ಪಾಲಿಸುತ್ತಿದ್ದೀ ಅಷ್ಟೇ. ಮೊದಲು ಶಾಂತಿಯುತ ವಿಧಾನಗಳನ್ನು ಪರೀಕ್ಷಿಸು. ಅದು ಸಫಲವಾಗದಿದ್ದರೆ ನ್ಯಾಯದ ನಿಯಮಾವಳಿಯಂತೆ ನಡೆದುಕೋ. ಪ್ರಪಂಚದಲ್ಲಿ ಒಳ್ಳೆಯದು ತುಂಬ ಕಮ್ಮಿಯಿದೆ ಮತ್ತು ಕೆಟ್ಟದ್ದು ಹೇರಳವಾಗಿದೆ. ಒಳಿತಿನ ರಕ್ಷಣೆಗಾಗಿ ನಿನ್ನ ಬಳಿ ಸಾಧ್ಯವಿರುವ ಎಲ್ಲ ಉಪಾಯವನ್ನೂ ಬಳಸಿಕೊಳ್ಳಬೇಕು.’
ಇಂಥ ಅಹಿಂಸಾ ತತ್ವ ನಂಬಿದ್ದರಿಂದಲೇ ಅಂಬೇಡ್ಕರ್ ಅನ್ಯಾಯ ಸಹಿಸುತ್ತಿರಲಿಲ್ಲ. ಕೆಳಜಾತಿ ಹೆಣ್ಣುಮಕ್ಕಳ ಮೇಲೆ ಮೇಲ್ಜಾತಿಯವರಿಂದ ಅತ್ಯಾಚಾರವಾಗುತ್ತಿದೆ ಎಂಬ ವಿಷಯ ಕಿವಿಗೆ ಬಿದ್ದರೆ ಕೆಂಡಾಮಂಡಲವಾಗುತ್ತಿದ್ದರು. `ನಾನೇನಾದರೂ ತರುಣನಾಗಿದ್ದರೆ ಅವರನ್ನೆಲ್ಲ ಬಂದೂಕಿನಿಂದ ಸುಟ್ಟು ಬರುತ್ತಿದ್ದೆ ಎನ್ನುತ್ತಿದ್ದರು. ಒಮ್ಮೆ ಕೆಲವರು ತಮ್ಮ ಮೇಲಾದ ದೌರ್ಜನ್ಯದ ಬಗ್ಗೆ ಹೇಳಿಕೊಳ್ಳಲು ತುಂಬ ದೂರದಿಂದ ಅಂಬೇಡ್ಕರ್ ಬಳಿ ಬಂದರು. ಅವರು ಹೇಳಿದ್ದನ್ನೆಲ್ಲ ಕೇಳಿದ ಅಂಬೇಡ್ಕರ್, `ನಿಮ್ಮ ಮೇಲೆ ಹಲ್ಲೆಯಾದರೆ ಹೇಡಿಗಳಂತೆ ನನ್ನ ಬಳಿ ಏಕೆ ಓಡಿಬಂದಿರಿ? ಡರೋಗೆ ತೋ ಮರೋಗೆ. ಅನ್ಯಾಯದ ವಿರುದ್ಧ ಅಲ್ಲೇ ಏಕೆ ಪ್ರತಿಭಟಿಸಲಿಲ್ಲ. ನೆನಪಿಡಿ, ಯಾವಾಗಲೂ ಕುರಿಮೇಕೆಗಳನ್ನು ಬಲಿ ಕೊಡಲಾಗುವುದೇ ಹೊರತು ಹುಲಿಸಿಂಹಗಳನ್ನಲ್ಲ. ನೀವು ಸಿಂಹಗಳಾಗಬೇಕು.’
***
ಅಂಬೇಡ್ಕರ್ ಭೇಟಿಗೆ ಒಬ್ಬರು ಬಂದಾಗ ನಡೆದ ಸಂಭಾಷಣೆ: 
`ನಿಮ್ಮ ಹೆಸರೇನು?’
`ಮಿ. ಸಿಂಗ್
`ಓಹ್, ಸಿಂಗ್ ಎಂದರೆ ಸಿಂಹ ಅಲ್ಲವೇ? ನನಗಂತೂ ಸಿಂಹವೆಂದರೆ ತುಂಬ ಹೆದರಿಕೆ. ಇರಲಿ, ಸಿಂಹ ನನ್ನನ್ನು ಹುಡುಕಿಕೊಂಡು ಬಂದ ಕಾರಣವೇನು?’
`ನಾನು ನಿಮ್ಮ ದರ್ಶನಕ್ಕೆ ಬಂದೆ.’
`ನಾನು ದರ್ಶನ ಕೊಡುವವನಲ್ಲ ಮಿ. ಸಿಂಗ್. ನಾನು ಸಾಮಾನ್ಯ ಮನುಷ್ಯ. ನನ್ನ ತಾಯ್ತಂದೆಯರೂ ಸಾಮಾನ್ಯ ಮನುಷ್ಯರೇ. ಹಾಗೆ ನೀವು ದರ್ಶನ ಮಾಡಬಯಸಿದರೆ ಆಶೀರ್ವದಿಸಲು ಕೈ ಮೇಲೆತ್ತಿ ಕುಳಿತ ಹಾಗೂ ನಮಸ್ಕಾರ ಸ್ವೀಕರಿಸಲು ಕಾಲು ಮುಂಚಾಚಿ ಕುಳಿತ ಬಹಳಷ್ಟು ರಾಜಕಾರಣಿಗಳಿದ್ದಾರೆ, ಅವರ ಬಳಿ ಹೋಗಿ. ದರ್ಶನಕ್ಕೆ ನನ್ನ ಬಳಿ ಬರಬೇಡಿ. ನನ್ನಿಂದ ನಿಮಗೇನಾಗಬೇಕು? ನನಗೇನಾದರೂ ಕೆಲಸವಿದೆಯೆ ಹೇಳಿ.’
***
ಸಂಸ್ಕೃತದಲ್ಲಿ ಆಳ ಪಾಂಡಿತ್ಯ ಹೊಂದಿದ್ದ, ಸಂಭಾಷಿಸಬಲ್ಲವರಾಗಿದ್ದ ಅಂಬೇಡ್ಕರ್ ಸಂಸ್ಕೃತ ರಾಷ್ಟ್ರಭಾಷೆಯಾಗಲಿ ಎಂದು ಸಂಸತ್ತಿನಲ್ಲಿ ಅನುಮೋದಿಸಿದ್ದರು. `ಸಂಸ್ಕೃತ ಬಹುತೇಕ ಭಾರತೀಯ ಭಾಷೆಗಳ ತಾಯಿ. ಅದನ್ನು ಬ್ರಾಹ್ಮಣರು ತಾವೂ ಸರಿಯಾಗಿ ಬಳಸಿಕೊಳ್ಳಲಿಲ್ಲ. ಉಳಿದವರು ಬಳಸಲೂ ಅವಕಾಶ ಕೊಡಲಿಲ್ಲ. ಅದು ಸಾಹಿತ್ಯದ ಗಣಿ. ಸಂಸ್ಕೃತ ನಮ್ಮ ರಾಷ್ಟ್ರೀಯ ಭಾಷೆಯಾಗಲಿ.’
***
ಸಂಸತ್ತಿನಲ್ಲೊಮ್ಮೆ ಶೆಡ್ಯೂಲ್ ಕ್ಯಾಸ್ಟ್ ಕಮಿಷನ್ ರಿಪೋರ್ಟ್ ಸರಿಯಿಲ್ಲ ಎಂದ ಅಂಬೇಡ್ಕರರಿಗೆ, ನೆಹರೂ ಸಂಬಂಧಿಯಾಗಿದ್ದ ಗೃಹಮಂತ್ರಿ ಕೆ.ಎನ್. ಕುಟ್ಜು ಅವರು, `ಡಾ. ಅಂಬೇಡ್ಕರ್ ಅದನ್ನು ಸರಿಯಾಗಿ ಓದಿರಲಿಕ್ಕಿಲ್ಲ. ಬರಿಯ ಕವರ್ ಪೇಜ್ ಮಾತ್ರ ನೋಡಿರಬೇಕು ಎನ್ನುತ್ತಾರೆ. ಅದಕ್ಕೆ ಅಂಬೇಡ್ಕರ್, `ಇದು ಕಮಿಷನ್ ರಿಪೋರ್ಟಿನಂತಿಲ್ಲ, ಯಾರೋ ನೌಕರ ಬರೆದ ರಿಪೋರ್ಟಿನಂತಿದೆ. ಕುಟ್ಜು ಅವರೇ, ನಾನು ರಿಪೋರ್ಟಿನ ಕವರ್ ಪೇಜನ್ನಷ್ಟೇ ಓದಿರಬೇಕು ಎಂದಿರಿ, ನಾನು ಕವರ್ ಟು ಕವರ್ ಓದಿರುವೆ. ನನ್ನ ಓದುವ ಹವ್ಯಾಸ ನಿಮಗೆ ತಿಳಿದಂತಿಲ್ಲ. ನಿಮ್ಮ ತಾತ ಮುತ್ತಾತಂದಿರು, ಮಕ್ಕಳು ಮೊಮ್ಮಕ್ಕಳು ಓದುವುದನ್ನೆಲ್ಲ ಸೇರಿಸಿದರೂ ನಾನು ಓದಿದಷ್ಟು ಆಗುವುದಿಲ್ಲ, ತಿಳಿದಿರಲಿ ಎಂದುತ್ತರಿಸುತ್ತಾರೆ.
***
`ಮಿ. ಸಿಂಗ್, ನೀವು ನಮ್ಮ ರಿಪಬ್ಲಿಕನ್ ಪಾರ್ಟಿ ಸೇರುತ್ತಿರುವುದೇನೋ ತುಂಬ ಸಂತೋಷದ ವಿಷಯ. ಆದರೆ ಯಾವಾಗ ನಮಗೆ ಕೈಕೊಟ್ಟು ಹೋಗುತ್ತೀರಿ ಎಂದೂ ಮೊದಲೇ ತಿಳಿಸಿಬಿಟ್ಟರೆ ಒಳ್ಳೆಯದು.’ ಇದು ಪಂಜಾಬಿನ ಒಬ್ಬರು ಅಂಬೇಡ್ಕರರ ರಿಪಬ್ಲಿಕನ್ ಪಕ್ಷ ಸೇರುತ್ತೇನೆಂದು ಕರೆ ಮಾಡಿ ತಿಳಿಸಿದಾಗ ಅವರು ಪ್ರತಿಕ್ರಿಯಿಸಿದ ರೀತಿ.
***
ಅಂಬೇಡ್ಕರರನ್ನು ಅಮೆರಿಕದ ಪತ್ರಕರ್ತನೊಬ್ಬ ಭೇಟಿಯಾಗಲು ಬಯಸುತ್ತಾನೆ. ಎಷ್ಟೊತ್ತಿಗೆ ಬರಲಿ ಎಂದು ಕೇಳಿದರೆ, `ಎಷ್ಟೊತ್ತಿಗೆ ಬೇಕಾದರೂ ಬನ್ನಿ ಎನ್ನುತ್ತಾರೆ. ಆತ ನಡುರಾತ್ರಿಯ ವೇಳೆ ಬಂದರೂ ಅವರ ಬಂಗಲೆಯ ದೀಪ ಉರಿಯುತ್ತಿರುತ್ತದೆ. ` ವೇಳೆಗೆ ಉಳಿದ ನಾಯಕರೆಲ್ಲ ಮಲಗಿರಬಹುದು ಡಾ. ಅಂಬೇಡ್ಕರ್, ನೀವು ಮಾತ್ರ ಇನ್ನೂ ಎಚ್ಚರವಾಗೇ ಇದ್ದೀರಲ್ಲ?’ ಎಂಬ ಅವನ ಪ್ರಶ್ನೆಗೆ, ` ನಾಯಕರ ಅನುಯಾಯಿಗಳು ಎಚ್ಚೆತ್ತಿದ್ದಾರೆ. ಹಾಗಾಗಿ ಅವರು ಸುಖನಿದ್ರೆ ಮಾಡಬಹುದು. ಆದರೆ ನನ್ನ ಜನ ಇನ್ನೂ ನಿದ್ರಿಸುತ್ತಿದ್ದಾರೆ, ಆದ್ದರಿಂದ ನಾನು ಯಾವಾಗಲೂ ಎಚ್ಚರವಾಗಿರಬೇಕಾಗಿದೆ ಎಂದು ಉತ್ತರಿಸುತ್ತಾರೆ.  
***
ಅವರ ಮನೆ `ರಾಜಗೃಹ ಹೊರಗಿನಿಂದ ನೋಡಲು ಎಲ್ಲ ಉನ್ನತ ದರ್ಜೆಯ ಮಂತ್ರಿಗಳ ಬಂಗಲೆಯಂತೇ ಇದ್ದರೂ, ಒಳಗೆ ಹಲವು ವ್ಯತ್ಯಾಸಗಳು ಎದ್ದು ಕಾಣುತ್ತಿದ್ದವು. `ರಾಜಗೃಹ ಯಾವಾಗಲೂ ಸಹಾಯ ಕೇಳಿ ಬಂದ ದೀನದಲಿತರಿಂದ ತುಂಬಿರುತ್ತಿತ್ತು. ಇನ್ನೊಂದು ಎದ್ದುಕಾಣುವ ವ್ಯತ್ಯಾಸ ಪುಸ್ತಕಗಳು. ತನ್ನ ಬಂಗಲೆಯ ಹೆಚ್ಚೂಕಮ್ಮಿ ಎಲ್ಲಾ ಕೋಣೆಗಳ ಕಪಾಟುಗಳನ್ನೂ ಪುಸ್ತಕಗಳಿಂದ ತುಂಬಿಸಿದ್ದರು. ಕಪಾಟುಗಳ ಗಾಜಿನ ಬಾಗಿಲ ಮೇಲೆ ಸಂಖ್ಯೆಯ ಗುರುತುಗಳಿದ್ದವು. 33000 ಅಪರೂಪದ, ಅಮೂಲ್ಯ ಪುಸ್ತಕಗಳ ಒಡೆಯರಾಗಿದ್ದ ಅವರ ಬಹುಪಾಲು ಪುಸ್ತಕಗಳು ಮುಂಬಯಿಯಲ್ಲಿದ್ದರೆ, ಉಳಿದವು ದೆಹಲಿಯಲ್ಲಿದ್ದವು. ರಾಜಕಾರಣದಿಂದ ಕೋಳಿಸಾಕಣೆಯ ತನಕ, ಕಟ್ಟಡ ವಿನ್ಯಾಸದಿಂದ ಕೃಷಿ ಆರ್ಥಿಕತೆಯ ತನಕ, ಸಾಪೇಕ್ಷ ಸಿದ್ಧಾಂತದಿಂದ ಬೌದ್ಧ ಧರ್ಮದ ತನಕ, ಪರಮಾಣು ಶಕ್ತಿಯಿಂದ ಕಲ್ಲಿದ್ದಲು ಗಣಿಮಾಹಿತಿಯ ತನಕ - ಹೀಗೇ ಅವರ ಬಳಿಯ ಸಂಗ್ರಹದಲ್ಲಿ ಎಲ್ಲ ಪುಸ್ತಕಗಳಿಗೂ ಸ್ಥಾನವಿತ್ತು. ಅಲ್ಲದೇ ಅವನ್ನೆಲ್ಲ ಓದಿ, ನೆನಪಿನಲ್ಲಿಟ್ಟುಕೊಂಡು, ಬೇಕಾದಾಗ ಉಲ್ಲೇಖಿಸಿ, ಯಾವ ವಿಷಯದ ಬಗೆಗಾದರೂ ನಿರರ್ಗರಳವಾಗಿ ಮಾತಾಡಬಲ್ಲ ಜ್ಞಾನ ಹೊಂದಿದ್ದರು. `ಇಷ್ಟು ಬಿಡುವಿಲ್ಲದ ಓದಿನಿಂದ ಹೇಗೆ ರಿಲ್ಯಾಕ್ಸ್ ಮಾಡುವಿರಿ?’ ಎಂದು ಕೇಳಿದರೆ, `ಒಂದು ವಿಷಯದಿಂದ ಸಂಪೂರ್ಣ ಭಿನ್ನವಾದ ಇನ್ನೊಂದು ವಿಷಯದ ಬಗೆಗೆ ಓದು ಶುರುಮಾಡುವುದು ನಿಜವಾಗಿ ರಿಲ್ಯಾಕ್ಸ್ ಮಾಡಿದಂತೆ ಎನ್ನುತ್ತಿದ್ದರು.
***
ಅಂಬೇಡ್ಕರರ ತಂದೆ ತುಂಬ ಧಾರ್ಮಿಕ ಮನುಷ್ಯ. ಅವರಿಂದ ಅಂಬೇಡ್ಕರ್ ಹಿಂದೂ ಪುರಾಣದ ಕತೆಗಳು, ಭಜನೆಗಳು, ನೀತಿಗಳನ್ನೆಲ್ಲ ಪೂರಾ ತಿಳಿದಿದ್ದರು. ಅಂಬೇಡ್ಕರರಿಗೆ ಮ್ಯಾಟ್ರಿಕ್ಯುಲೇಷನ್ ಪಾಸಾದ ದಲಿತ ಹುಡುಗ ಎಂದು ಸನ್ಮಾನ ಮಾಡುವೆವೆಂದು ಹೇಳಿದಾಗ ಅದೆಲ್ಲ ಬೇಡವೆಂದೇ ಅವರ ತಂದೆ ಹೇಳಿದ್ದರಂತೆ. ಕೊನೆಗೂ ಸನ್ಮಾನ ಸಮಾರಂಭ ಏರ್ಪಾಡಾಗುತ್ತದೆ. ಆಗ ಗುರುಗಳಾಗಿದ್ದ ಕೇಳುಸ್ಕರ್ ಅಂಬೇಡ್ಕರ್ ಅವರಿಗೆ ಗೌತಮ ಬುದ್ಧನ ಬಗೆಗಿನ ಪುಸ್ತಕ ನೀಡುತ್ತಾರೆ. ಅಲ್ಲಿಂದ ಅಂಬೇಡ್ಕರ್ ಅವರ ಬೌದ್ಧ ಧರ್ಮದೊಂದಿಗಿನ ಒಡನಾಟ ಶುರುವಾಗಿ ನಂತರ ಅದರಲ್ಲಿ ಆಸಕ್ತಿ ಬೆಳೆಯುತ್ತಲೇ ಹೋಯಿತು.
ಅವರ ಪ್ರಕಾರ. `ಬುದ್ಧ ಒಬ್ಬ ವಿಜ್ಞಾನಿ. ತನ್ನ ಬಳಿ ಸಾಕ್ಷಿ ಪುರಾವೆ ಇಲ್ಲದ ವಿಷಯದ ಬಗೆಗೆ ಅವನು ಮಾತನಾಡಲಿಲ್ಲ. ಹಾಗಾಗಿಯೇ ಬುದ್ಧ `ಇಷ್ಟು ದಿನಗಳಲ್ಲಿ ಪ್ರಪಂಚ ಸೃಷ್ಟಿಯಾಯಿತು ಎನ್ನುವಂತಹ ಸುಳ್ಳನ್ನು ಹೇಳಲಿಲ್ಲ. ಜಗತ್ತನ್ನು ಯಾರು ಸೃಷ್ಟಿಸಿದರು ಎಂಬ ಬಗ್ಗೆ ನಾನೇನೂ ಹೇಳಲಾರೆ ಎಂದೇ ಹೇಳಿದ. ಆತ್ಮ ಅಥವಾ ದೇವರು ಇದ್ದಾನೆಯೇ ಎನ್ನುವುದೂ ಅವನಿಗೆ ಮುಖ್ಯ ಪ್ರಶ್ನೆಯಾಗಿರಲಿಲ್ಲ. ಅವೈಜ್ಞಾನಿಕವಾದದ್ದನ್ನು ಆತ ನಂಬಲಿಲ್ಲ.’ ನಂಬಿಕೆ ಅಂಬೇಡ್ಕರ್ ಅವರಿಗೂ ಇತ್ತು. ಒಮ್ಮೆ ಸಂಸತ್ತಿನಲ್ಲಿ ಯಾರೋ `ದೇವರು ನಿಮ್ಮ ಆತ್ಮವನ್ನು ಕಾಪಾಡಲಿ ಎಂದರಂತೆ. ಅದಕ್ಕೆ ಅಂಬೇಡ್ಕರ್ `ನಿಮಗೆ ಸ್ವಲ್ಪ ಕಷ್ಟವಿದೆ. ನನಗೆ ದೇವರು ಮತ್ತು ಆತ್ಮ ಎರಡರಲ್ಲೂ ನಂಬಿಕೆಯಿಲ್ಲವಲ್ಲ ಎಂದರಂತೆ.
***
 ಉನ್ನತ ವಿದ್ಯಾಭ್ಯಾಸಕ್ಕಾಗಿ ಅಮೆರಿಕಕ್ಕೆ ಹೊರಟು, ರಾಕಿಫೆಲ್ಲರ್ ಫೌಂಡೇಷನ್ನಿನ ಸ್ಕಾಲರ್ಶಿಪ್ ದೊರಕಿಸಿಕೊಂಡ ನಿಮ್ಗಾಡೆ ಒಂದು ಕ್ಯಾರೆಕ್ಟರ್ ಸರ್ಟಿಫಿಕೇಟ್ ಬೇಕೆಂದು ಅಂಬೇಡ್ಕರ್ ಬಳಿ ಕೇಳುತ್ತಾರೆ. ಆಗವರು `ಅರೆ, ಮನುಷ್ಯನ ಕ್ಯಾರೆಕ್ಟರ್ ಆರು ತಿಂಗಳಿಗೊಮ್ಮೆ ಬದಲಾಗುತ್ತಿರುತ್ತದಂತಲ್ಲ?! ನಿನಗೆ ಕ್ಯಾರೆಕ್ಟರ್ ಸರ್ಟಿಫಿಕೇಟ್ ಹೇಗೆ ಕೊಡಲಿ? ನಾನದನ್ನು ಇನ್ನೂವರೆಗೂ ಯಾರಿಗೂ ಕೊಟ್ಟಿಲ್ಲ.’ ಎಂದು ಗೇಲಿ ಮಾಡುತ್ತಾರೆ. ಕೊನೆಗೆ ಅಲ್ಲೇ ಸರಿದು ಹೋಗುತ್ತಿದ್ದ ಸವಿತಾ ಅಂಬೇಡ್ಕರ್, `ನಿಮ್ಗಾಡೆ ಒಳ್ಳೆಯ ವಿದ್ಯಾರ್ಥಿಯಲ್ಲವೇ? ಅವರಿಗೆ ನೀವು ಕ್ಯಾರೆಕ್ಟರ್ ಸರ್ಟಿಫಿಕೇಟ್ ಕೊಡಬಹುದು ಎಂದು ತಮಾಷೆಯಾಗಿ ಹೇಳುತ್ತಾರೆ. ಅಂತೂ ಇವರಿಗದು ಸಿಗುತ್ತದೆ. `ಮಹಾರಾಷ್ಟ್ರದ ಗೌರವಾನ್ವಿತ ಮಹಾರ್ ಸಮುದಾಯದ ಸನ್ನಡತೆಯ ವ್ಯಕ್ತಿ ಇವರು ಎಂದು ಅವರ ಸಹಿ ಹೊತ್ತ ಸರ್ಟಿಫಿಕೇಟ್ ಪುಸ್ತಕದಲ್ಲಿ ಅಚ್ಚಾಗಿದ್ದು ನೋಡಬಹುದು.
***
`ವಿಧಾನಸಭೆ ಸದಸ್ಯನಾಗುವುದು ತುಂಬ ಸಾಧಾರಣ ಸಂಗತಿ ನಿಮ್ಗಾಡೆ. ನೀನು ಇನ್ನೂ ಓದಬೇಕು, ನಮ್ಮ ಸಮುದಾಯಕ್ಕೆ ಮಾದರಿ ವಿಜ್ಞಾನಿಯಾಗಬೇಕು. ಸಾಮಾಜಿಕವಾಗಿ, ಆರ್ಥಿಕವಾಗಿ ದುರ್ಬಲರಾದ ನಾವು ಎಲ್ಲ ಕ್ಷೇತ್ರಗಳಲ್ಲೂ ಮುನ್ನಡೆ ಸಾಧಿಸಬೇಕು. ರಾಜಕಾರಣ ಮತ್ತು ಅಧಿಕಾರದ ಆಮಿಷಕ್ಕೆ ಬಲಿಯಾಗಬೇಡ. ಏನೋ ಸ್ವಲ್ಪ ಓದಿ, ಒಂದು ಸಣ್ಣ ಸಂಬಳದ ಉದ್ಯೋಗ ಪಡೆಯುವುದಕ್ಕೆ ತೃಪ್ತನಾಗದೇ, ಮಹತ್ವಾಕಾಂಕ್ಷೆಯನ್ನಿಟ್ಟುಕೊಂಡು ಓದು. ಪದವಿ, ಸ್ನಾತಕೋತ್ತರ ಪದವಿ, ಪಿಎಚ್ಡಿ ಎಲ್ಲ ಮಾಡಬೇಕು ನೀನು. ಪದವಿಗಳು ನಮ್ಮ ಮೆಟ್ಟಿಲುಗಳು. ಆದರೆ ಸ್ವಲ್ಪ ಓದಿದ ಕೂಡಲೇ ಬಹಳ ಜನರು ಓದು, ತಮ್ಮ ಸಮಾಜ ಎಲ್ಲವನ್ನು ಮರೆತುಬಿಡುತ್ತಾರೆ. ನಾನೂ ಕೂಡಾ ಅವಿದ್ಯಾವಂತ, ಸಾಮಾನ್ಯ ಮನುಷ್ಯನಿಗಾಗಿ ಏನೂ ಮಾಡಲಿಲ್ಲವಲ್ಲ ಎಂದು ಈಗ ಅನಿಸುತ್ತಿದೆ. ನಾನು ಮತ್ತಷ್ಟು ಸಮಯವನ್ನು ಅನಕ್ಷರಸ್ಥ ಅಸ್ಪೃಶ್ಯರಿಗಾಗಿ ಮೀಸಲಿಡಬೇಕಿತ್ತು.’
ಇದು ನಿಮ್ಗಾಡೆಯವರಿಗೆ ಅನಾಯಾಸವಾಗಿ ಮಹಾರಾಷ್ಟ್ರ ವಿಧಾನಸಭಾ ಸ್ಥಾನಕ್ಕೆ ಟಿಕೆಟ್ ದೊರಕುವ ಅವಕಾಶ ಬಂದು, ಅವರು ಬಾಬಾ ಬಳಿ ಸಲಹೆ ಕೇಳಿದಾಗ ಹೇಳಿದ ಮಾತು.  ಇನ್ನೊಮ್ಮೆ ಅಂಬೇಡ್ಕರರು 1952 ಲೋಕಸಭಾ ಚುನಾವಣೆಗೆ ಸ್ಪರ್ಧಿಸಿದ್ದಾಗ ನಿಮ್ಗಾಡೆ ಅವರ ಪರವಾಗಿ ಚುನಾವಣಾ ಪ್ರಚಾರಕ್ಕೆ ಮುಂಬಯಿಗೆ ಹೋಗುವ ಇಚ್ಛೆ ವ್ಯಕ್ತಪಡಿಸುತ್ತಾರೆ. ಆಗ ಅದಕ್ಕೆ ಸುತರಾಂ ಒಪ್ಪದ ಅಂಬೇಡ್ಕರ್, `ವಿದ್ಯಾರ್ಥಿಗಳ ಓದು - ಸಮಯ ಬಲಿಕೊಟ್ಟು ಚುನಾವಣೆ ಗೆಲ್ಲುವ ಆಸೆ ನನಗಿಲ್ಲ. ಉತ್ತಮ ವಿದ್ಯಾರ್ಥಿಗಳು ಇಂಥವಕ್ಕೆಲ್ಲ ಸಮಯ ಹಾಳುಮಾಡಬಾರದು ಎನ್ನುತ್ತಾರೆ.  `ಹುಶಾರಾಗಿರು ಮತ್ತು ಕಠಿಣಶ್ರಮ ಪಡು. ನಿನ್ನ ಸ್ವಂತ ಸಂಶೋಧನಾ ಕೆಲಸಕ್ಕೆ ಸಾಕಷ್ಟು ಸಮಯ ಕಲ್ಪಿಸಿಕೋ. ಉಳಿದ ದಿನ ಸಮಯ ಸಿಗದಿದ್ದರೆ, ರಜಾದಿನಗಳಲ್ಲಾದರೂ ಕೆಲಸ ಮಾಡು. ಇನ್ನೂ ಹೆಚ್ಚಿನ ಪದವಿ ಗಳಿಸಬೇಕು. ನಿಧಾನವಾದರೂ ಪರವಾಗಿಲ್ಲ. ಆಳನೀರಿನಲ್ಲಿ ಮುಳುಗಿದ ಈಜುಗಾರನ ಹಾಗೆ ನಿಧಾನವಾಗಿಯಾದರೂ ಆಚೆ ತೀರದಲ್ಲಿ ಮೇಲೇಳಬೇಕು.’ ಇದು ಶಿಕ್ಷಣವೆಂಬ ಶಕ್ತಿಯ ಬಗೆಗೆ ಅವರಿಗಿದ್ದ ಅಚಲ ವಿಶ್ವಾಸ.
***
`ನನಗೆಷ್ಟೇ ವೈಜ್ಞಾನಿಕ ದೃಷ್ಟಿಯಿದ್ದರೂ ಎರಡು ಕುರುಡು ನಂಬಿಕೆಗಳು ನನಗೂ ಇವೆ. ಮೊದಲನೆಯದು- ನನ್ನ ತಾಯ್ತಂದೆಯರ ಚೇತನ ನನ್ನ ಮೇಲೆ ಸದಾ ಸುಳಿದಾಡುತ್ತಾ ಇರುತ್ತದೆ ಹಾಗೂ ಅದು ನನ್ನನ್ನು ಅಪಾಯದಿಂದ ಪಾರುಮಾಡುತ್ತದೆನ್ನುವುದು. ಎರಡನೆಯದು ಬುದ್ಧದೇವ ನನ್ನನ್ನು ರಕ್ಷಿಸುವನೆನ್ನುವುದು. ನನ್ನ ನಂಬಿಕೆ ಬುದ್ಧನನ್ನು ದೇವರೆಂದು ನಂಬುವಂತೆ ಮಾಡಿದೆ. ನಂಬಿಕೆಯೇ ಇಲ್ಲದೇ ಮಾನವ ಸರಿಯಾದ ದಾರಿ ಹೇಗೆ ಕಂಡುಕೊಳ್ಳಬಲ್ಲ? ದಾರಿ ತಿಳಿಯದವನ ಗತಿ ಕತ್ತಲಲ್ಲಿ ತಡವರಿಸುತ್ತ ನಡೆಯುತ್ತಿರುವಂತೆ.’
***
ತಮ್ಮ ಮೊದಲ ಮಗುವಿಗೆ ಭೀಮರಾವ್ ಎಂದು ಹೆಸರಿಡುವ ನಿಮ್ಗಾಡೆ ಮಗುವನ್ನು ಅಂಬೇಡ್ಕರ್ ಬಳಿಗೊಯ್ಯುತ್ತಾರೆ. ಅಂಬೇಡ್ಕರ್ `ಹೆಸರಿನಲ್ಲೇನಿದೆ? ಇಲ್ಲಿ ಪಾತ್ರೆ ತಿಕ್ಕಲು ಲಕ್ಷ್ಮಿ ಬರುತ್ತಾಳೆ. ಸುಭಾಶ್ಚಂದ್ರ ಹೇರ್ ಕಟಿಂಗ್ ಸಲೂನ್ ಇದೆ. ಶಿವಾಜಿ ಬ್ರಾಂಡ್ ಬೀಡಿಯಿದೆ.’
`ನಾವು ಭಾರತೀಯರು ಮಕ್ಕಳು ಹುಟ್ಟಿದ ಮೇಲೆ ಅವರಿಗೆ ಬಟ್ಟೆ ಹೊಲಿಯುತ್ತೇವೆ. ವಿದೇಶದಲ್ಲಿ ಹಾಗಲ್ಲ, ಮಗು ಬರುವ ಮೊದಲೇ ಎಲ್ಲ ತಯಾರಿ ಮಾಡಿಕೊಂಡಿರುತ್ತಾರೆ. ನನ್ನ ಸ್ವಂತ ಅನುಭವವನ್ನೇ ಹೇಳಬೇಕೆಂದರೆ ವಿದೇಶದಿಂದ ಓದು ಮುಗಿಸಿ ವಾಪಸಾದ ಮೇಲೂ ಜಾತಿಯ ಕಾರಣದಿಂದ ಲಾಯರ್ ವೃತ್ತಿ ಕಷ್ಟವಾಯಿತು. ಬರಿಯ ನುಚ್ಚಿನ ಅನ್ನ ಉಂಡು ಬದುಕುತ್ತಿದ್ದೆವು. ನಾನೂ ದುರ್ಬಲನಾದೆ. ನನ್ನ ಮಗುವೊಂದು ಕಾಯಿಲೆ ಬಂದು ತೀರಿಕೊಂಡಿತು. ಅದರ ಅಂತ್ಯ ಸಂಸ್ಕಾರ ಮಾಡಲು ಹಣಕ್ಕೆ ಬಹಳ ತೊಂದರೆಯಾಯಿತು. ನಂತರ ಹೆಂಡತಿ ರಮಾ ತೀವ್ರ ಅಸ್ವಸ್ಥಗೊಂಡಳು. ವೈದ್ಯರು ಇನ್ನೊಂದು ಮಗುವಾದರೆ ಅವಳ ಜೀವಕ್ಕೆ ಅಪಾಯ ಎಂದರು. ನಾವು ಬ್ರಹ್ಮಚರ್ಯ ಪಾಲಿಸತೊಡಗಿದೆವು. ನನ್ನ ಬಳಿ ಸಾಧ್ಯವಾದ ಪ್ರಯತ್ನವನ್ನೆಲ್ಲ ಮಾಡಿದೆ. ಆದರೆ ನಮ್ಮೆಲ್ಲ ಪ್ರಯತ್ನ, ಚಿಕಿತ್ಸೆ ಫಲಿಸದೇ ಅವಳು ನನ್ನ ಬಿಟ್ಟೇ ಹೋದಳು.’ ಇಷ್ಟು ಹೇಳೇಳುತ್ತ ಅಂಬೇಡ್ಕರ್ ಗದ್ಗದಿತರಾಗಿ ಕಣ್ಣೀರಿಡುತ್ತಾರೆ. ರಾಜಕೀಯ ವಿರೋಧಿಗಳನ್ನು ಸಿಂಹವಾಗಿ ಎದುರಿಸಿದ ಮನುಷ್ಯ ತನ್ನ ಗತಿಸಿದ ಹೆಂಡತಿಯ ನೆನಪಿನಲ್ಲಿ ಅಸಹಾಯಕರಾಗುತ್ತಾರೆ.
***
`ನನಗೀಗ ವಯಸ್ಸಾಗುತ್ತಿದೆ. ಸಲಹೆ ಕೊಡುವುದಕ್ಕಿಂತ ಹೆಚ್ಚೇನೂ ಮಾಡಲಾರೆ. ಆದರೆ ನನಗೆ ತೀರಿಸಬೇಕಾದ ದೊಡ್ಡ ಮೊತ್ತದ ಸಾಲ ಇದೆ ಎಂದರೆ ನೀನು ಅಚ್ಚರಿಗೊಳ್ಳಬಹುದು. ಹೌದು, ನನಗೆ 22 ಲಕ್ಷ ಸಾಲವಿದೆ. ಆರೋಗ್ಯ ಸುಧಾರಿಸಿದ ಮೇಲೆ ಮತ್ತೆ ಲಾ ಪ್ರಾಕ್ಟೀಸ್ ಶುರುಮಾಡಿ ಸಾಲ ತೀರಿಸಬೇಕು.’
ಅಂಬೇಡ್ಕರ್ ಹೀಗೆ ಹೇಳಿದಾಗ ತರುಣ ನಿಮ್ಗಾಡೆಗೆ ಬರುತ್ತಿದ್ದಿದ್ದು ಬರಿಯ 240 ರೂ. ಸಂಬಳ. ಅವರ ಸಾಲದ ಮೊತ್ತ ಕೇಳಿ ಕಂಗಾಲಾಗುತ್ತಾರೆ. ಮುಂಬಯಿಯ ಸಿದ್ಧಾರ್ಥ ಕಾಲೇಜು, ಔರಂಗಾಬಾದಿನ ಮಿಲಿಂದ ಕಾಲೇಜಿನ ಸಂಸ್ಥಾಪಕರಾಗಿದ್ದ ಅಂಬೇಡ್ಕರ್ ಅವುಗಳಿಗಾಗಿ ಹಾಗೂ ಚುನಾವಣೆಗಳಿಗಾಗಿ ಹಣ ಖರ್ಚು ಮಾಡಿರುತ್ತಾರೆ. ಅಲ್ಲದೇ ದೊಡ್ಡ ಮೊತ್ತವನ್ನು ಪುಸ್ತಕಗಳಿಗಾಗಿ ಖರ್ಚುಮಾಡಿರುತ್ತಾರೆ. ಒಮ್ಮೆ ಮುಸ್ಲಿಮ್ ಜಮೀನ್ದಾರರ ಮನೆಗೆ ಹೋದಾಗ ಅಲ್ಲಿ ಬಂಗಾರದ ಅಕ್ಷರಗಳ ಕುರಾನ್ ನೋಡಿ ಅದನ್ನು ಎಷ್ಟು ಇಷ್ಟಪಡುತ್ತಾರೆಂದರೆ, ಪುಸ್ತಕಕ್ಕೆ 8000 ರೂ. ಕೊಟ್ಟು ಖರೀದಿಸಿಯೇಬಿಡುತ್ತಾರೆ!
***
ತನ್ನ ಸ್ವಭಾವದಂತೆಯೇ ಬುದ್ಧ ಧರ್ಮದ ಬಗೆಗೆ ಪೂರ್ಣ ತಿಳಿದುಕೊಳ್ಳುವವರೆಗೆ ಅವರು ಬೌದ್ಧರಾಗಲಿಲ್ಲ. ಅದರ ಬಗ್ಗೆ ಅಪಾರವಾಗಿ ಓದಿ, ಮಾಹಿತಿ ಸಂಗ್ರಹಿಸಿ, ವಿಸ್ತಾರವಾದ ಬೌದ್ಧ ಧರ್ಮದ ಸಾರವನ್ನೆಲ್ಲ ಸುಲಭ ಗ್ರಾಹ್ಯವಾಗುವಂತೆ ಸಂಗ್ರಹಿಸಿ, `ಬುದ್ದ ಮತ್ತು ಧಮ್ಮ ಪುಸ್ತಕ ಬರೆದು, ಅಕಸ್ಮಾತ್ ತಾನು ಬದುಕಿಲ್ಲದಿದ್ದರೆ ಅದರ ಪ್ರಕಟಣೆಗೆ ಹಸ್ತಪ್ರತಿ ಎಲ್ಲಿದೆಯೆಂದು ಹೆಂಡತಿ ಸವಿತಾಗೆ ತಿಳಿಸಿ, ನಂತರವೇ ಮತಾಂತರ ಹೊಂದುತ್ತಾರೆ. ಅವರೇ ಹೇಳುವಂತೆ, `ನಾನು ಟೆಂಟಿನ ಸೆಂಟ್ರಲ್ ಪೋಲ್ ಹಾಗೆ ನಿಂತಿದ್ದೇನೆ. ನಾನು ಇಲ್ಲವಾದದ್ದೇ ಟೆಂಟ್ ಬಿದ್ದುಹೋಗಬಾರದು. ಅದಕ್ಕಾಗಿ ಭವಿಷ್ಯದ ಜನಾಂಗವು ಸುರಕ್ಷಿತವಾಗಲು ಪರ್ಯಾಯವೊಂದನ್ನು ಕಂಡುಹಿಡಿದಿದ್ದೇನೆ. ನನ್ನ ಸ್ಥಾನದಲ್ಲಿ ಬೌದ್ಧ ಧರ್ಮ ನಿಲ್ಲಬೇಕು.’
ಉದಾತ್ತ ಆಶಯಗಳಿದ್ದರೂ ಭವಿಷ್ಯದ ದಾರಿ ಹೇಗಿರಬೇಕೆಂಬುದರ ಬಗ್ಗೆ ತನ್ನ ಅನುಯಾಯಿಗಳಲ್ಲಿ ತಲೆಯೆತ್ತಿದ್ದ ಭಿನ್ನಮತದ ಬಗೆಗೆ ಅರಿವಿದ್ದ ಅವರು `ಟೆಂಟ್-ಸೆಂಟ್ರಲ್ ಪೋಲ್ ರೂಪಕವನ್ನು ಬಳಸಿ ಮಾತು ಹೇಳಿದ್ದರು.
***
ನಿಮ್ಗಾಡೆಯವರ ಪುಸ್ತಕವು ಹೇಳುವ ದೊಡ್ಡ ನೀತಿ: ಶಿಕ್ಷಣವೆಂಬುದು ಕೇವಲ 50 ವರ್ಷಗಳ ಅಂತರದಲ್ಲಿ, ಸಾವಿರಾರು ವರ್ಷಗಳಿಂದ ತರಲಾಗದ ಬದಲಾವಣೆಯನ್ನು ಹೇಗೆ ಸಾಧ್ಯಗೊಳಿಸಿತು ಎಂಬುದು. ಎರಡು ತಲೆಮಾರುಗಳ ಅಂತರದಲ್ಲಿ ಕುಟುಂಬವೊಂದರ ಆರ್ಥಿಕ-ಸಾಮಾಜಿಕ ಸ್ಥಾನಮಾನವನ್ನೇ ಬದಲಾಯಿಸಿದ್ದು ಶಿಕ್ಷಣ. ಕಿಟಕಿಯ ಹೊರಗಿನಿಂದಲೇ ಪಾಠ ಕೇಳಿಸಿಕೊಂಡು, ಪಾಸಾದ ಖುಷಿಗೆ ಮೇಷ್ಟ್ರ ಕಾಲು ಮುಟ್ಟಿ ನಮಸ್ಕರಿಸಲಾಗದ ಅಸ್ಪøಶ್ಯ ಹುಡುಗನೊಬ್ಬ ವಿಜ್ಞಾನಿಯಾಗಿ ಹೊಮ್ಮಿದ್ದು ಶಿಕ್ಷಣವೆಂಬ ಮಾಯೆಯಿಂದಲೇ. ಅವರ ಮೂವರು ಮಕ್ಕಳು ಎಳವೆಯಲ್ಲೇ ಅಮೆರಿಕದ ಸ್ಕಾಲರ್ಶಿಪ್ ಗಳಿಸಿ ಶಿಕ್ಷಣ ಪಡೆದು ಈಗ ವಿಜ್ಞಾನಿ - ವೈದ್ಯರಾಗಿದ್ದಾರೆ. ಪೂರ್ವಿಕರು ಅನುಭವಿಸಿದ್ದ ಅವಮಾನ, ಕೀಳರಿಮೆಗಳೆಲ್ಲ ಇಂದು ಅವರಿಗೆ ಇತಿಹಾಸವಾಗಿದೆ.
ಶಿಕ್ಷಣವೇ ಶಕ್ತಿ ಎಂಬ ಮಾತು ಅಕ್ಷರಶಃ ನಿಜವಾದ ಜೀವಂತ ಉದಾಹರಣೆಯು, ತಳಸಮುದಾಯಗಳಲ್ಲಿ ಶಿಕ್ಷಣದ ಹಂಬಲ ಹುಟ್ಟಿಸಿದ್ದೇ ಆದಲ್ಲಿ ನಿಮ್ಗಾಡೆಯವರ ಬರಹದ ಶ್ರಮ ಸಾರ್ಥಕವಾದಂತೆಯೇ. ಸಾಮಾಜಿಕ ನ್ಯಾಯಕ್ಕಾಗಿ 60 ವರ್ಷಗಳಲ್ಲಿ ತೆಗೆದುಕೊಂಡ ಕ್ರಮಗಳ ಹೊರತಾಗಿಯೂ ದೊಡ್ಡ ಜನಸಮುದಾಯ ಇನ್ನೂ ಅವಕಾಶ ವಂಚಿತವಾಗಿರುವಾಗ ಅಂಬೇಡ್ಕರ್ ಹಾಗೂ ಅವರ ಚಿಂತನೆಗಳನ್ನು ಹೊಸ ದೃಷ್ಟಿಕೋನದಿಂದ ನೋಡುವ, ಹರಡುವ ಅವಶ್ಯಕತೆ ಇಂದು ಹಿಂದೆಂದಿಗಿಂತ ಹೆಚ್ಚಿದೆ. ನಿಟ್ಟಿನಲ್ಲಿ ಅಂಬೇಡ್ಕರ್ ವಿಚಾರಧಾರೆಯ ಪುನರಾವಲೋಕನಕ್ಕೆ ಇಂಥ ಅನುಭವ-ಆತ್ಮಕಥನಗಳು ಉಪಯುಕ್ತವಾಗುತ್ತವೆ.
ನಿಮ್ಗಾಡೆ ಅವರ ಆತ್ಮಕಥೆಯ ಭಾಗಶಃ ಅನುವಾದÀವನ್ನು ಪ್ರಕಟಿಸಲು ಅನುಮತಿಸಿದ ಶ್ರೀಪಾದ ಅವರಿಗೂ, ಪುಸ್ತಕದ ಒಳಪುಟ ವಿನ್ಯಾಸ ಮತ್ತು ಮುಖಪುಟ ಮಾಡಿದ ಗೆಳೆಯ ಜಿ ಅರುಣಕುಮಾರ, ಪ್ರಕಾಶನದ ಕೆಲಸ ಕಾರ್ಯಗಳಲಿ ನೆರವಾಗುವ ಎಲ್ಲ ಮನಸುಗಳನ್ನು ಸ್ಮರಿಸಿಕೊಳ್ಳುತ್ತೇವೆ

No comments:

Post a Comment