Jun 30, 2014

ಆದರ್ಶವೇ ಬೆನ್ನು ಹತ್ತಿ .... ಭಾಗ 30



ಡಾ ಅಶೋಕ್ ಕೆ ಆರ್
ಆದರ್ಶವೇ ಬೆನ್ನು ಹತ್ತಿ ಭಾಗ 29 ಓದಲು ಇಲ್ಲಿ ಕ್ಲಿಕ್ಕಿಸಿ
“ಇನ್ನೂ ಒಂದು ತಿಂಗಳು ಏನು ಮಾಡೋದು ಲೋಕಿ?” ದುಗುಡ ತುಂಬಿದ ದನಿಯಲ್ಲಿ ಕೇಳಿದಳು ಪೂರ್ಣಿಮಾ.
“ಯಾವ ವಿಷಯವಾಗಿ ಮಾತನಾಡ್ತಾ ಇದ್ದೀಯಾ ಪೂರ್ಣಿ?” ಸಂಜೆ ಸಿಗುತ್ತೇನೆಂದು ಕೀರ್ತನಾ ನಿನ್ನೆಯ ರಾತ್ರಿ ಮನೆಗೆ ಫೋನ್ ಮಾಡಿದ್ದಳು. ಅದರ ಬಗ್ಗೆಯೇ ಯೋಚಿಸುತ್ತಿದ್ದ ಲೋಕಿ. ಆಗಲೇ ಕೀರ್ತನಾಳನ್ನು ಭೇಟಿಯಾಗಿ ಹತ್ತು ದಿನಗಳಾಗಿದ್ದವು. ಭೆಟ್ಟಿಯಾಗಿದ್ದ ಮೊದಲ ದಿನ ಜೆ.ಎಸ್.ಎಸ್ ಕಾಲೇಜಿನಿಂದ ಲೋಕಿ ಹೊರಡುವಾಗ ಲೋಕಿಯ ಮನೆಯ ಫೋನ್ ನಂಬರ್ ತೆಗೆದುಕೊಂಡಿದ್ದಳು. ‘ನನಗೆ ಮುಂದಿನ ವಾರ internals ಇದೆ. ಅದಾದ ನಂತರ ನಿನಗೆ ಫೋನ್ ಮಾಡಿ ಭೇಟಿಯಾಗ್ತೀನಿ’ ಎಂದ್ಹೇಳಿದ್ದಳು. ಇವತ್ತೇನೇನು ಮಾತನಾಡಬೇಕು ಅವಳೊಟ್ಟಿಗೆ ಎಂದು ಚಿಂತಿಸುತ್ತಿದ್ದವನು ಪೂರ್ಣಿಮಾಳ ಪ್ರಶ್ನೆಗೆ ಯಾಂತ್ರಿಕವಾಗಿ ಉತ್ತರಿಸಿದ.
“ಇದೇನೋ ಲೋಕಿ ಹೀಗೆ ಕೇಳ್ತೀಯಾ? ಮುಂದಿನ ತಿಂಗಳು ಪರೀಕ್ಷೆಗಳಿರೋದ್ರಿಂದ ನಾಳೆಯಿಂದ ಕಾಲೇಜಿಗೆ ರಜೆ. ನಾವಿಬ್ಬರು ಇನ್ನು ಭೇಟಿಯಾಗೋದು ಯಾವಾಗ?”
“ಸಾರಿ ಪೂರ್ಣಿ. ಯಾವುದೋ ವಿಷಯವಾಗಿ ಯೋಚಿಸ್ತಾ ಇದ್ದೆ. ಅದಿಕ್ಕೆ ಬೇಗ ಹೊಳೆಯಲಿಲ್ಲ. ದಿನಾ ಹೊರಗೆ ಸಿಕ್ಕಿ ಮಾತನಾಡೋದು ಕಷ್ಟ ಆಗುತ್ತೆ”
“ಹ್ಞೂ ಕಣೋ. ಸಿಂಚು ಬೇರೆ ಮನೆಯಲ್ಲೇ ಇರ್ತಾಳೆ. ನಾನೊಬ್ಬಳೇ ದಿನಾ ಏನಾದ್ರೂ ನೆಪ ಮಾಡಿಕೊಂಡು ಮನೆಯಿಂದ ಹೊರಬಿದ್ರೆ ಅನುಮಾನ ಬರುತ್ತೆ. ಪರೀಕ್ಷೆ ಪಾಸ್ ಆದ ಮೇಲೆ ಮನೆಯವರಿಗೆ ತಿಳಿದರೆ ಓಕೆ. ಹೇಗಾದ್ರೂ ಮಾಡಿ ಮನೆಯವರನ್ನು ನಮ್ಮಿಬ್ಬರ ಮದುವೆಗೆ ಒಪ್ಪಿಸಬಹುದು.”
“ಈಗ ತಿಳಿದರೂ ಒಪ್ಪಿಸಬಹುದಲ್ವಾ?”
“ಒಪ್ಪಿಸಬಹುದು. ಆದ್ರೆ ಅಪ್ಪಿ ತಪ್ಪಿ ನಾನೀ ಪರೀಕ್ಷೆಯಲ್ಲಿ ಫೇಲ್ ಆಗಿಬಿಟ್ಟರೆ ಮನೆಯವರೆಲ್ಲಾ ಲವ್ ಗಿವ್ ಮಾಡಿಕೊಂಡು ಹುಡುಗಿ ಓದೋದನ್ನೇ ಬಿಟ್ಟು ಬಿಟ್ಟಳು ಅಂದುಕೊಳ್ತಾರಲ್ವಾ?”
“ನೀನು ಫೇಲ್ ಆಗೋದಾ? ಒಳ್ಳೇ ತಮಾಷೆ ಮಾಡ್ತೀಯ....” ನಗುತ್ತಾ ಹೇಳಿದ ಲೋಕಿ.
“ನಾನೇನ್ ಬೃಹಸ್ಪತೀನಾ! ಫೇಲಾಗದೇ ಇರೋದಿಕ್ಕೆ. ವಿಷಯ ಎಲ್ಲಿಂದ ಎಲ್ಲಿಗೋ ಹೋಗ್ತಿದೆ. ಇನ್ನೂ ಒಂದು ತಿಂಗಳು ಹೇಗೆ ಭೇಟಿಯಾಗೋದು ಹೇಳೋ”
“ವಾರಕ್ಕೆ ಒಂದು ಅಥವಾ ಎರಡು ಬಾರಿ ಕಾಲೇಜ್ ಬಳಿ ಸಿಗೋಣ. ಓಕೆನಾ?”
“ಒಂದೆರಡು ಬಾರಿ ಮನೆಯಿಂದ ಹೊರಬರಬಹುದು. ಇನ್ನುಳಿದೈದು ದಿನ ನಿನ್ನ ನೋಡದೆ ಹೇಗಿರೋದೋ?” ಹಾಳಾದ ಪರೀಕ್ಷೆ ಯಾಕಾದ್ರೂ ಬಂತೋ ಎಂದುಕೊಳ್ಳುತ್ತಾ ಹೇಳಿದಳು.
“ಹುಟ್ಟಿದಾಗಿನಿಂದ ಜೊತೆಯಲ್ಲೇ ಇದ್ದವಳ ಹಾಗೆ ಮಾತನಾಡ್ತೀಯಲ್ಲಾ?! ಈ ತರಹದ ವಿರಹ ವೇದನೆಯನ್ನು ಅನುಭವಿಸಿದಾಗಲೇ ನಮ್ಮಿಬ್ಬರ ನಡುವಿನ ಪ್ರೇಮ ಬಲವಾಗಿ ಬೇರೂರೋದು!”
“ಥೂ. ನಾನೊಬ್ಳು. ನಿನ್ನ ಬಳಿ ಈ ರೀತಿಯೆಲ್ಲ ಮಾತಾಡ್ತ ಇದ್ದೀನಲ್ಲ. ನಿನಗೇನ್ ಅರ್ಥವಾಗಬೇಕು, ಕಲ್ಲು ನೀನು”
“ಕಲ್ಲು ಮನಸ್ಸೇ ಆಗಿದ್ದರೆ ನಿನ್ನ ಪ್ರೀತಿಸುತ್ತಿದ್ದೆನಾ ಪೂರ್ಣಿ” ಲೋಕಿ ಕೇಳಿದ ಪ್ರಶ್ನೆಗೆ ಪೂರ್ಣಿಮಾಳ ಬಳಿ ಉತ್ತರವಿರಲಿಲ್ಲ. ಸ್ವಲ್ಪ ಸಮಯದ ಮೌನದ ನಂತರ ಲೋಕಿಯ ಕೈಹಿಡಿದು “ಸಾರಿ” ಎಂದ್ಹೇಳಿ “ಯಾವತ್ತು ಲೈಬ್ರರಿಗೆ ಬರಲಿ ಎಂದು ಸಿಂಚನಾಳ ಮೊಬೈಲಿಗೆ ಫೋನ್ ಮಾಡಿ ತಿಳಿಸು ಲೋಕಿ” ಎಂದು ಕಣ್ಣು ತುಂಬಿಕೊಂಡು ಹೋದಳೂ ಪೂರ್ಣಿಮಾ.
‘ಈ ಹುಡುಗಿ ಯಾಕೆ ಯಾರೂ ಸಿಗಲಿಲ್ಲ ಅಂತ ನನ್ನನ್ನು ಪ್ರೀತಿಸಿದಳು. ನಾನಾದರೂ ಏಕೆ ಇವಳನ್ನು ಪ್ರೀತಿಸಿದೆ? ಯಾವತ್ತಿದ್ದರೂ ನಾನೀ ಲೌಕಿಕತೆಯಿಂದ ಹೊರಹೋಗುವವನು ಎಂಬುದು ನನಗೆ ಗೊತ್ತಿದ್ದರೂ ಪೂರ್ಣಿಯ ಮನಸ್ಸಿನಲ್ಲಿ ಪ್ರೀತಿ ಪ್ರೇಮ ಮದುವೆಯ ಭಾವನೆಗಳನ್ಯಾಕೆ ಹುಟ್ಟಿಸಿದೆ? ಕೊನೆಗಿವಳನ್ನು ಬಿಟ್ಟು ಹೋಗೋದಂತೂ ನಿಶ್ಚಯ ಎಂದು ನನಗೇ ಹಲವಾರು ಬಾರಿ ಅನ್ನಿಸುತ್ತೆ. ಅದರಲ್ಲೂ ಕೀರ್ತನಾ ಸಿಕ್ಕಿದ ಮೇಲಂತೂ ಪೂರ್ಣಿಯನ್ನು ಬಿಟ್ಟು ನಾ ನಂಬಿರೋ ಆದರ್ಶದ ದಾರಿಯಲ್ಲಿ ಹೋಗೋದು ಖಂಡಿತ ಎಂದನ್ನಿಸಲು ಶುರುವಾಗಿದೆ. ಪೂರ್ಣಿಗೆ ಮೋಸ ಮಾಡಲೇಬೇಕಾ? ವಿಧಿಯಿಲ್ಲ ಅಲ್ವಾ?’ ಎಂದು ತನ್ನ ಮನಸ್ಸಿಗೆ ತಾನೇ ಸಮಾಧಾನ ತಂದುಕೊಳ್ಳುತ್ತಾ ಮನೆಯ ಕಡೆ ಹೊರಟ. ಮನೆಯಲ್ಯಾರೂ ಇರಲಿಲ್ಲ. ಪಕ್ಕದ ಮನೆಯಲ್ಲಿ ಕೊಟ್ಟಿದ್ದ ಬೀಗದ ಕೈಯನ್ನು ತೆಗೆದುಕೊಂಡು ಮನೆಯೊಳಗೆ ಹೋದ. ಸ್ನೇಹಾ ಬೆಳಿಗ್ಗೆಯೇ ಮಾಡಿಟ್ಟಿದ್ದ ಅಡುಗೆಯನ್ನು ತಿಂದು ಹಾಸಿಗೆಯಲ್ಲಿ ಅಡ್ಡಾದ. ನಿದ್ದೆ ಹತ್ತಲಿಲ್ಲ. ಕೀರ್ತನಾಳೊಡನೆ ಏನೇನು ಮಾತನಾಡಬೇಕು ಎಂದು ಚಿಂತಿಸುತ್ತ ಮಲಗಿದ್ದ. ಮೊದಲು ಮಹಾರಾಜ ಪದವಿ ಪೂರ್ವ ಕಾಲೇಜಿನ ಸ್ಕೇಟಿಂಗ್ ಗ್ರೌಂಡಿನ ಬಳಿ ಭೇಟಿಯಾಗೋಣ ಎಂದು ಹೇಳಿದ್ದವನು ನಂತರ ‘ಅಲ್ಲಿ ಬೇಡ. ನನ್ನ ಸ್ನೇಹಿತರು ನೋಡೋ ಸಾಧ್ಯತೆಗಳು ಅಧಿಕ. ಕುಕ್ಕನಹಳ್ಳಿ ಕೆರೆಯಲ್ಲಿ ಬೋಟುಗಳನ್ನು ನಿಲ್ಲಿಸುವ ಜಾಗದಲ್ಲಿ ಭೇಟಿಯಾಗೋಣ ಎಂದು ತಿಳಿಸಿದ’. ಕೀರ್ತನಾ ಅದಕ್ಕೊಪ್ಪಿ ಸಂಜೆ ಐದು ಘಂಟೆಯ ಸುಮಾರಿಗೆ ಬಾ ಎಂದ್ಹೇಳಿದ್ದಳು. ನಾಲ್ಕೂವರೆಗೆ ಲೋಕಿ ಕುಕ್ಕನಹಳ್ಳಿ ಕೆರೆಗೆ ಬಂದಿದ್ದನು. ಬಿಸಿಲಿನ ಝಳದಲ್ಲಿ ಬೆವರುತ್ತಿದ್ದವನಿಗೆ ಕೆರೆಯ ಮೇಲಿನಿಂದ ಅಲೆಅಲೆಯಾಗಿ ತೇಲಿಬರುತ್ತಿದ್ದ ಗಾಳಿ ತಂಪನ್ನೀಯುತ್ತಿತ್ತು. ಕೆರೆಯ ಏರಿಯಲ್ಲಿ ಹಲವರು ವಾಕಿಂಗಿನಲ್ಲಿ ನಿರತರಾಗಿದ್ದರು. ಮರದ ಮರೆಯಲ್ಲಿರುವ ಕಲ್ಲುಬೆಂಚುಗಳಲ್ಲಿ ಪ್ರೇಮಿಗಳು ಕುಳಿತಿದ್ದರು. ಯಾರಾದ್ರೂ ಪರಿಚಯದವರು ನೋಡುತ್ತಾರೇನೋ ಎಂಬ ಭಯದ ಭಾವನೆ ಬಹಳಷ್ಟು ಜನರ ಮುಖದಲ್ಲಿ ಎದ್ದು ಕಾಣುತ್ತಿತ್ತು. ಆ ಯುವ ಜೋಡಿಗಳನ್ನು ತಿಂದುಬಿಡುವಂತೆ ನೋಡುತ್ತಾ ‘ನಮಗ್ಯಾವಾಗ್ ಗುರೂ ಈ ರೀತಿ ಹುಡುಗಿಯರೊಂದಿಗೆ ಕುಳಿತು ಹರಟೆ ಹೊಡೆಯೋ ಅವಕಾಶ ಸಿಗೋದು’ ಎಂದು ಮಾತನಾಡುತ್ತಾ ಹುಡುಗರ ಗುಂಪು ನಗುತ್ತಾ ಕೇಕೆ ಹಾಕುತ್ತಾ ಅವರ ಮುಂದೆ ಹೋಗುತ್ತಿದ್ದರು. ಐದು ಘಂಟೆಗೆ ಇನ್ನೂ ಐದು ನಿಮಿಷಗಳಿರುವಾಗ ಕೆರೆಗಿರುವ ಮುಖ್ಯದ್ವಾರದಿಂದ ಕೀರ್ತನಾ ಒಳಬಂದಳು. ದೂರದಿಂದಲೇ ಅವಳನ್ನು ಗಮನಿಸಿದ ಲೋಕಿ ಅವಳೆಡೆಗೆ ನಡೆಯಲಾರಂಭಿಸಿದ. ಕಪ್ಪು ಚೂಡಿದಾರಿನ ಮೇಲೊಂದು ತೆಳು ಹಳದಿ ಬಣ್ಣದ ದುಪ್ಪಟ್ಟಾವನ್ನು ತೊಟ್ಟು ಬಂದಿದ್ದಳು ಕೀರ್ತನಾ. ಮುಖದ ಮೇಲೊಂದು ಮಧುರ ಮಂದಹಾಸ. ಹುಡುಗಿ ಕೊಂಚ ಕಪ್ಪು, ಬಹಳ ಲಕ್ಷಣವಾಗಿದ್ದಾಳಲ್ವಾ? ಅನ್ನಿಸಿತು ಲೋಕಿಗೆ. ಹಾಳಾದ್ದು ಈ ಹುಚ್ಚು ಕುದುರೆಗೆ ಹೊತ್ತುಗೊತ್ತು ಒಂದೂ ಗೊತ್ತಾಗೋದಿಲ್ಲ ಎಂದು ಬೈದುಕೊಂಡು ಅವಳ ಬಳಿ ಸಾಗಿ “ಹಾಯ್ ಕೀರ್ತನಾ” ಎಂದ.
“ಹಾಯ್ ಲೋಕಿ. ಬಹಳ ಸಮಯವಾಯ್ತ ಬಂದು?”
“ಈಗೊಂದು ಹತ್ತದಿನೈದು ನಿಮಿಷವಾಯ್ತಷ್ಟೆ”
“ಹೌದಾ ನಡಿ. ಅತ್ತಕಡೆ ಹೋಗಿ ಕುಳಿತು ಮಾತನಾಡೋಣ” ಎಂದು ಬಲಬದಿಗೆ ಕೈ ತೋರಿದಳು. ಇಬ್ಬರೂ ಜೊತೆಯಲ್ಲಿ ನಡೆದರು. ಕೊಂಚ ದೂರ ಸಾಗಿದರೆ ಪುಟ್ಟ ಕಾಡಿನೊಳಗೆ ಹೋದ ಅನುಭವವಾಗುತ್ತದೆ. ಎತ್ತರದ ಮರಗಳು ಸೂರ್ಯ ಮತ್ತು ನೆಲದ ನಡುವೆ ಗೋಡೆಯಂತೆ ನಿಂತಿದ್ದವು. ಗೂಡಿಗೆ ಮರಳುತ್ತಿದ್ದ ಹಕ್ಕಿಗಳ ಕಲರವ, ಕೆರೆಯ ನೀರು ಗಾಳಿಗೆ ತೊಯ್ದಾಡುವಾಗಿನ ಶಬ್ದ, ಕೆರೆಯನ್ನು ದಾಟಿ ಬರುವ ಆ ಗಾಳಿಗೆ ಚರಪರ ಹೊಯ್ದಾಡುವ ಎಲೆಗಳು, ದೂರದಲ್ಲೆಲ್ಲಿಂದಲೋ ಕ್ಷೀಣ ಸ್ವರದಲ್ಲಿ ಕೇಳೀ ಬರುತ್ತಿದ್ದ ವಾಹನಗಳ ಸದ್ದು; ಇವುಗಳ ನಡುವೆ ಓಡಾಡುವ ದಾರಿಯಿಂದ ದೂರವಿರುವ ಬೊಂಬಿನ ಗಿಡನ ಮುಂದಿದ್ದ ಬೆಂಚಿನ ಮೇಲೆ ಕುಳಿತರು ಲೋಕಿ ಮತ್ತು ಕೀರ್ತನಾ. ಪ್ರೇಮಿಗಳ ಮುಖದಲ್ಲಿದ್ದ ಭಯವಿರಲಿಲ್ಲ; ನನ್ನದೇ ಮನಸ್ಥಿತಿಯ ವ್ಯಕ್ತಿ ಸಿಕ್ಕ ಸಂತಸವಿತ್ತು. ಯಾವ ವಿಷಯದಿಂದ ಮಾತನ್ನಾರಂಭಿಸಬೇಕು ಎಂಬ ಗೊಂದಲವಿತ್ತು. ಮೊದಲು ಲೋಕಿಯೇ ಮಾತನಾಡಿದ “ಅಲ್ಲಾ ಕೀರ್ತನಾ. ನಾವೇನೋ ಬಿ.ಎ ವಿದ್ಯಾರ್ಥಿಗಳು. ದಿನಾ ಬೆಳಗಾದರೆ ಭಾರತದ ಇತಿಹಾಸ, ಆರ್ಥಿಕ ಸ್ಥಿತಿಗತಿ, ಸ್ವಾತಂತ್ರ್ಯ ಸಂಗ್ರಾಮದ ಬಗ್ಗೇನೇ ಹೆಚ್ಚು ಓದುತ್ತೀವಿ. ಅದರಿಂದ ಮನದಲ್ಲಿ ಆದರ್ಶದ ಭಾವನೆಗಳು ಹೆಚ್ಚಾಗಿರ್ತವೆ. ಆದ್ರೆ ನೀನು ಮೆಡಿಕಲ್ ವಿದ್ಯಾರ್ಥಿ. ನಿನಗ್ಯಾಕೆ ಈ ಆದರ್ಶ, ನಕ್ಸಲ್ ತತ್ವಗಳಲ್ಲಿ ನಂಬಿಕೆ ಬಂತು?”
“ಆದರ್ಶಗಳನ್ನು ನೀವೇನು ಪೇಟೆಂಟ್ ಮಾಡಿಸಿಕೊಂಡಿಲ್ವಲ್ಲಾ?” ಎಂದ್ಹೇಳಿ ನಕ್ಕು “ನನ್ನ ಮನದಲ್ಲಿ ಆದರ್ಶಗಳು ಯಾವಾಗ ಮನೆ ಮಾಡಿಕೊಳ್ತೋ ನನಗಂತೂ ಗೊತ್ತಿಲ್ಲ. ಇತಿಹಾಸವನ್ನು ಹೆಚ್ಚು ಓದಿದವಳೂ ಅಲ್ಲ; ಹತ್ತನೆಯ ತರಗತಿಯವರೆಗೆ ಇತಿಹಾಸ ಎಂದರೆ ಕಬ್ಬಿಣದ ಕಡಲೆಯೆನ್ನಿಸುತ್ತಿತ್ತು. ಬಹುಶಃ ಆದರ್ಶದ ಬೀಜಗಳು ನನ್ನ ಮನದಲ್ಲಿ ಮೊಳಕೆಯೊಡೆದಿದ್ದು ಆಜಾದಿ ಬಚಾವೋ ಆಂದೋಲನದ ರಾಜೀವ್ ದೀಕ್ಷಿತ್ ಅವರ ಭಾಷಣಗಳನ್ನು ಕೇಳಿದಾಗ, ಅವರ ಬರಹಗಳನ್ನು ಓದಿದಾಗ”
“ರಾಜೀವ್ ದೀಕ್ಷಿತ್ ಅಂದ್ರೆ ‘ಸ್ವದೇಶಿ ವಸ್ತುಗಳನ್ನು ಮಾತ್ರ ಉಪಯೋಗಿಸಿ’ ಅಂತ ಹೇಳ್ತಾರಲ್ಲ ಅವರು ತಾನೇ?”
“ಹೌದು. ನಿನಗೆ ಗೊತ್ತಾ ಅವರ ಬಗ್ಗೆ”
“ಜಾಸ್ತಿ ತಿಳಿದಿಲ್ಲ. ಪತ್ರಿಕೆಗಳಲ್ಲಿ ಎಷ್ಟು ಓದಿದ್ದೀನೋ ಅಷ್ಟೇ ತಿಳಿದಿರೋದು”
“ಅಂದ್ರೆ ನೀನು ಫಾರಿನ ವಸ್ತುಗಳನ್ನೆಲ್ಲಾ ಉಪಯೋಗಿಸ್ತೀಯಾ?” ಸ್ವಲ್ಪ ಬೇಸರದ ದನಿಯಲ್ಲಿ ಕೇಳಿದಳು ಕೀರ್ತನಾ.
“ಉಪಯೋಗಿಸ್ತೀನಿ ಅನ್ಸುತ್ತೆ. ಯಾಕೆ ತಪ್ಪಾ?”
“ತಪ್ಪು ಸರಿ ಎಲ್ಲಾ ನಮ್ಮ ನಮ್ಮ ಮೂಗಿನ ನೇರಕ್ಕೆ. ಅದರ ಬಗ್ಗೆ ನಾನೀಗ ಮಾತನಾಡಿದರೆ ಒಣ ಭಾಷಣವಾಗುತ್ತದೆ. ಮುಂದಿನ ಬಾರಿ ಸಿಕ್ಕಿದಾಗ ಅವರ ಭಾಷಣದ ಕ್ಯಾಸೆಟ್ಟನ್ನು, ಪುಸ್ತಕಗಳನ್ನೂ ತಂದು ಕೊಡುತ್ತೀನಿ. ಅದನ್ನು ಓದಿದ ಮೇಲೆ ನೀನು ಫಾರಿನ್ ವಸ್ತುಗಳನ್ನು ಉಪಯೋಗಿಸುವುದಕ್ಕೆ ಹಿಂದೇಟು ಹಾಕುವುದಂತು ಖಂಡಿತ”
“ಅದೇಗೆ ಅಷ್ಟು ಖಚಿತವಾಗಿ ಹೇಳ್ತೀಯಾ?”
“ನನ್ನ ರೀತಿಯ ಮನಸ್ಥಿತಿ ಇರುವವನ ಮನಸ್ಸನ್ನು ಅರಿತುಕೊಳ್ಳಲಾರದಷ್ಟು ದಡ್ಡಿಯೇನಲ್ಲ ನಾನು. ಅಂದು ಕಾಲೇಜಿನ ಬಳಿ ಸಿಕ್ಕಿದಾಗ ಹೇಳಿದ್ಯಲ್ಲಾ ಕ್ರಾಂತಿಕಾರಿ ಸಂಘಟನೆಯೊಂದನ್ನು ಸೇರಬೇಕೆಂದಿದ್ದ ಕನಸು ಹಾಳಾಯಿತು ಅಂತ. ಅದೇನಂತ ಪೂರ್ತಿ ಬಿಡಿಸಿ ಹೇಳ್ತೀಯಾ?” ಎಂದು ಕೇಳಿದಳು.
ಕೀರ್ತನಾಳಿಗೆ ಹೇಳುವುದಕ್ಕೋಸ್ಕರ ಹಳೆಯ ಘಟನೆಗಳನ್ನು ಸ್ಮೃತಿಪಟಲಕ್ಕೆ ತಂದುಕೊಂಡಂತೆ ಬೇಸರದ ಭಾವ ಉಂಟಾಯಿತು. ಜೇಬಿನಿಂದ ಸಿಗರೇಟೊಂದನ್ನು ತೆಗೆದು ಇನ್ನೇನು ಹಚ್ಚಬೇಕೆನ್ನುವಷ್ಟರಲ್ಲಿ ಕೀರ್ತನಾ ಲೋಕಿಯ ಬಾಯಲ್ಲಿದ್ದ ಸಿಗರೇಟನ್ನು ಹೊರಗೆಳೆದು “I hate smoking Loki. ಅದರಲ್ಲೂ ಈ ಸಿಗರೇಟಿನ ಹೊಗೆಯಿಂದ ಈ ಸುಂದರ ಪರಿಸರ ಹಾಳು ಮಾಡೋದು ಒಪ್ಪೋ ಮಾತಲ್ಲಾ ಅಲ್ವಾ?” ಎಂದ್ಹೇಳಿ ಆತನ ಉತ್ತರಕ್ಕೂ ಕಾಯದೆ ಸಿಗರೇಟನ್ನು ಲೋಕಿಯ ಜೇಬಿನೊಳಗೆ ಹಾಕಿದಳು. ಕೀರ್ತನಾಳ ಧೈರ್ಯಕ್ಕೆ ಮನದಲ್ಲೇ ವಂದಿಸಿ ಲೋಕಿ ಗೃಂಥಾಲಯದಲ್ಲಿ ನೋಡಿದ ಹುಚ್ಚನಿಂದ ಹಿಡಿದು ಸ್ಕೇಟಿಂಗ್ ಗ್ರೌಂಡಿನಲ್ಲಿ ಭೇಟಿಯಾದ ಮಹಿಳೆ, ಆಟೋದವನು ತಿಳಿಸಿದ ವಿವರ, ಕೊಡೈಕೆನಾಲಿನಲ್ಲಿ ಸಿಕ್ಕ ಫಿಯೆಟ್ ಕಾರು, ಅದೇ ಮಹಿಳೆ ಮತ್ತೆ ತನ್ನನ್ನು ಭೇಟಿಯಾಗಿ ISRAದ ಗಣೇಶ್ ಬಂಧಿತನಾದ ವಿಷಯವನ್ನು ತಿಳಿಸಿದ್ದು, ಆ ಸಂದರ್ಭದಲ್ಲಿ ತಾನು ಪೂರ್ಣಿಗೆ ಸಿಕ್ಕಿಹಾಕಿಕೊಂಡಿದ್ದು ಎಲ್ಲವನ್ನೂ ತಿಳಿಸಿದ. ಎಲ್ಲಾ ಹೇಳಿ ಮುಗಿಸುವಷ್ಟರಲ್ಲಿ ಲೋಕಿಗೆ ಅರಿವಾಗದಂತೆಯೇ ಕಣ್ಣಿಂದುದುರಿದ ಬಿಂದುಗಳು ಕೆನ್ನೆಯ ಮೇಲಿನಿಂದ ನಿಧಾನ ಜಾರುತ್ತಿದ್ದವು. ಇಂಥ ಸಂದರ್ಭದಲ್ಲಿ ಮಾತಿಗಿಂತ ಮೌನಕ್ಕೇ ಹೆಚ್ಚು ಶಕ್ತಿಯಿರುತ್ತದೆ ಎಂದರಿತಿದ್ದ ಕೀರ್ತನಾ ಸಮಾಧಾನ ಮಾಡ್ಕೋ ಎಂಬಂತೆ ಆತನ ಅಂಗೈಯನ್ನು ತನ್ನ ಕೈಯಲ್ಲಿಟ್ಟುಕೊಂಡಳು. ಆ ಹಿಡಿತದಲ್ಲಿ ನಿನ್ನೊಂದಿಗೆ ಇನ್ನು ನಾನೂ ಇರ್ತೀನಿ ಲೋಕಿ ಎಂಬ ಭರವಸೆಯಿತ್ತು. ಕೊಂಚ ಸಮಯದ ನಂತರ ಭಾವನೆಗಳಿಂದ ಹೊರಬಂದ ಲೋಕಿ.
ಮುಂದುವರೆಯುವುದು

No comments:

Post a Comment