May 7, 2014

ಆದರ್ಶವೇ ಬೆನ್ನು ಹತ್ತಿ .... ಭಾಗ 29

 ಡಾ ಅಶೋಕ್ ಕೆ ಆರ್
ಆದರ್ಶವೇ ಬೆನ್ನು ಹತ್ತಿ ಭಾಗ 28 ಓದಲು ಇಲ್ಲಿ ಕ್ಲಿಕ್ಕಿಸಿ

ತರಗತಿಗಳನ್ನು ಮುಗಿಸಿಕೊಂಡು ಎಲ್ಲರೂ ಮನೆಯತ್ತ ಹೊರಟಿದ್ದರು. ಪೂರ್ಣಿಮಾ ಲೋಕಿಯೊಡನೆ ಕಾರಿಡಾರಿನಲ್ಲಿ ಮೆಲ್ಲಗೆ ಹೆಜ್ಜೆ ಹಾಕುತ್ತಿದ್ದಳು.
“ಥ್ಯಾಂಕ್ಸ್ ಲೋಕಿ” ಎಂದಳು.
“ಯಾಕೆ?”
“ಸಿಂಚನಾ ನಿನ್ನ ಜೊತೆ ಮಾತನಾಡಿದ್ದನ್ನೆಲ್ಲಾ ಹೇಳಿದಳು. ಅವಳ ಮನದ ದ್ವಂದ್ವಗಳನ್ನು ತೊಡೆದುಹಾಕುವುದಕ್ಕೆ ನಿನ್ನ ಮಾತುಗಳು ಬಹಳ ಉಪಯೋಗಕ್ಕೆ ಬಂತಂತೆ. ಅದಿಕ್ಕೆ ಥ್ಯಾಂಕ್ಸ್ ಹೇಳಿದ್ದು” “ಮತ್ತೆ ಪರೀಕ್ಷೆಗಳಿಗೆ ಹೇಗೆ ತಯಾರಾಗ್ತ ಇದ್ದೀಯಾ?”
‘ಹೌದಲ್ಲ!! ಪರೀಕ್ಷೆಗಳಿರೋದನ್ನೇ ಮರೆತುಬಿಟ್ಟಿದ್ದೀನಿ’ ಎಂದು ಯೋಚಿಸುತ್ತಾ “ಇನ್ನೂ ಶುರು ಮಾಡಿಲ್ಲ ಪೂರ್ಣಿ. ಇನ್ನೂ ಒಂದೂವರೆ ತಿಂಗಳಿದೆಯೆಲ್ಲಾ. ಓದಿದರಾಯಿತು” ಎಂದ್ಹೇಳಿದ.
“ನಾನು ಹೋದ ಶುಕ್ರವಾರವೇ ಶುರು ಮಾಡಬೇಕು ಅಂತಿದ್ದೆ. ನಾಳೆ ಓದೋಣ ಎಂದು ದಿನ ತಳ್ತಾನೇ ಇದ್ದೀನಿ. ಆಗಲೇ ಮಂಗಳವಾರ ಬಂದುಬಿಟ್ಟಿದೆ. ಇವತ್ತಾದರೂ ಓದಲು ಪ್ರಾರಂಭಿಸಬೇಕು”
“ಇವತ್ತು ಮಂಗಳವಾರಾನಾ?”
“ದಿನಾನೂ ಮರೆತುಬಿಟ್ಟಾ? ಒಳ್ಳೆ ಮರೆಗುಳಿ ಪ್ರೊಫೆಸರ್ರನ್ನು ಪ್ರೀತಿಸಿದ ಹಾಗಾಯಿತು”
“ಥ್ಯಾಂಕ್ಸ್ ಪೂರ್ಣಿ; ಇವತ್ತೊಂದು ಅರ್ಜೆಂಟ್ ಕೆಲಸವಿತ್ತು. ನಾಳೆ ಸಿಗ್ತೀನಿ” ಎಂದ್ಹೇಳಿ ಗೃಂಥಾಲಯದ ಕಡೆಗೆ ದೌಡಾಯಿಸಿದ.
‘ಛೇ! ಎಂಥ ಕೆಲಸ ಮಾಡಿಕೊಂಡುಬಿಟ್ಟೆ. ಈಗಾಗಲೇ ಒಂದು ಘಂಟೆ ಆಗಿಬಿಟ್ಟಿದೆ. ‘ಆಜಾದ್’ ಈಗಾಗಲೇ ಬಂದು ಹೊರಟು ಹೋಗಿದ್ದರೆ? ಯಾವುದಕ್ಕೂ ಸಂಜೆಯವರೆಗೆ ಕಾಯೋಣ’ ಎಂದುಕೊಂಡು ‘ಅಲ್ಲೇ ಮೇಜಿನ ಮೇಲಿದ್ದ ಪುಸ್ತಕವೊಂದನ್ನು ತೆಗೆದುಕೊಂಡು ಪುಸ್ತಕಗಳ ಸಾಲಿನೆಡೆಗೆ ಮುಖ ಮಾಡಿ ಓದುತ್ತಿರುವವನಂತೆ ನಟಿಸುತ್ತಾ ಕುಳಿತ. ಸಂಜೆಯವರೆಗೂ ಯಾರೂ ಪುಸ್ತಕಗಳ ಮಧ್ಯೆ ಕೈಬರಹ ಪತ್ರಿಕೆಯನ್ನು ಇಟ್ಟಂತೆ ಕಾಣಲಿಲ್ಲ. ಮಧ್ಯೆ ಎರಡು ಮೂರು ಬಾರಿ ಎದ್ದು ಹೋಗಿ ಹುಡುಕಾಡಿದ್ದೂ ಆಯಿತು. ಎಲ್ಲೂ ‘ಆಜಾದ್’ ಸಿಗಲಿಲ್ಲ. ಇಷ್ಟೊತ್ತಿಗಾಗಲೇ ಯಾರದರೂ ತೆಗೆದುಕೊಂಡು ಹೋಗಿಬಿಟ್ಟೀದ್ದಾರಾ? ಅನುಮಾನವಾಯಿತು. ಹೋಗಿಬಿಡ್ಲಾ ಎಂಬ ಯೋಚನೆ ಬಂದರೂ ತಾಳ್ಮೆ ಮುಖ್ಯ, ಎಂಟು ಘಂಟೆಯವರೆಗೂ ಕಾಯೋಣ ಎಂದುಕೊಳ್ಳುತ್ತಾ ಮೊದಲಿನ ಜಾಗದಲ್ಲೇ ಬಂದು ಕುಳಿತ.
ಸಂಜೆ ಐದೂವರೆಯ ಸಮಯದಲ್ಲಿ ನೇರಳೆ ಬಣ್ಣದ ಚೂಡಿಯನ್ನು ಧರಿಸಿ ಬಿಳಿಯ ದುಪ್ಪಟ್ಟವನ್ನು ಎದೆಯ ಮೇಲೆ ಹಾಕಿಕೊಂಡು ಕೈಯಲ್ಲಿ ಆಜಾದಿಯಿದ್ದ ಪುಟ್ಟ ಪರ್ಸೊಂದನ್ನು ಹಿಡಿದು ಗೃಂಥಾಲಯದೊಳಕ್ಕೆ ಆಗಮಿಸಿದಳು ಕೀರ್ತನಾ. ಮೊದಲ ಬಾರಿ ಮತ್ತು ಎರಡನೆಯ ಸಲ ಬಂದಿದ್ದ ಗಾಬರಿ ಈಗಿರಲಿಲ್ಲ. ಮನದ ಪ್ರಶಾಂತತೆ ಮುಖದಲ್ಲೂ ಗೋಚರಿಸುತ್ತಿತ್ತು. ಸುತ್ತಮುತ್ತ ಒಮ್ಮೆ ನೋಡಿ ತನ್ನನ್ನು ಯಾರೂ ವಿಶೇಷವಾಗಿ ಗಮನಿಸುತ್ತಿಲ್ಲ ಎಂದು ಖಾತರಿ ಪಡಿಸಿಕೊಂಡು ಪುಸ್ತಕಗಳ ಸಾಲಿನತ್ತ ಹೋದಳು. ಸಂಜೆಯ ಸಮಯವಾದ್ದರಿಂದ ಅವತ್ತಿನಷ್ಟು ಜನರಿರಲಿಲ್ಲ. ಯಾವುದೇ ಉದ್ವೇಗವಿಲ್ಲದೆ ‘ಆಜಾದಿ’ಯ ಎರಡನೆಯ ಸಂಚಿಕೆಯನ್ನು ಪುಸ್ತಕಗಳ ನಡುವಿಟ್ಟು ತಿರುಗಿ ಗೃಂಥಾಲಯದಿಂದ ಹೊರಹೊರಟಳು. ‘ಇವಳ್ಯಾರು? ಒಂದೂ ಪುಸ್ತಕವನ್ನು ಓದದೇ ಅಥವಾ ತೆಗೆದುಕೊಳ್ಳದೇ ಬಂದಷ್ಟೇ ವೇಗವಾಗಿ ಹೊರಹೋಗುತ್ತಿದ್ದಾಳಲ್ಲ’ ಎಂಬ ಅನುಮಾನ ಬಂದು ಆಕೆ ಹೋಗಿದ್ದ ಪುಸ್ತಕಗಳ ಸಾಲಿನೆಡೆಗೆ ವೇಗವಾಗಿ ಹೋದ ಲೋಕಿ. ಮೇಲಿನಿಂದ ಕೆಳಗೆ ಎಲ್ಲಾ ಸಾಲುಗಳನ್ನೂ ಪರಿಶೀಲಿಸಿದ. ಕೆಳಗಿನ ಸಾಲಿನ ಮೇಲಿತ್ತು ‘ಆಜಾದಿ’ ಪತ್ರಿಕೆ! ‘ಇವಳೇ ಆಜಾದ್. ಸದ್ಯ ಬೇಗಾನೇ ಸಿಕ್ಕಿದರಲ್ಲ’ ಎಂದುಕೊಳ್ಳುತ್ತಾ ‘ಆಜಾದಿ’ ಪತ್ರಿಕೆಯನ್ನು ಜೇಬಿನೊಳಗೆ ಹಾಕಿಕೊಳ್ಳುತ್ತಾ ಓಡುವ ರೀತಿಯಲ್ಲಿ ನಡೆದು ಗೃಂಥಾಲಯದೊಳಗೆ ಹಾಕಿದ್ದ ಕಾರ್ಪೆಟ್ಟಿನಲ್ಲೊಮ್ಮೆ ಎಡವಿ ಮೆಟ್ಟಿಲುಗಳನ್ನು ಇಳಿದು ಕೆಳಗೆ ನಿಂತು ಅತ್ತಿತ್ತ ನೋಡಿದ. ನೇರಳೆ ಬಣ್ಣದ ಚೂಡಿದಾರ ಸಿಟಿ ಬಸ್ ನಿಲ್ದಾಣದ ಕಡೆಗೆ ಹೋಗುತ್ತಿತ್ತು. ಬಿರುಸಾಗಿ ನಡೆದ ಲೋಕಿ ಅವಳಿಂದ ಹತ್ತು ಹೆಜ್ಜೆ ಅಂತರವನ್ನು ಕಾಯ್ದುಕೊಂಡು ಅವಳನ್ನು ಹಿಂಬಾಲಿಸಿದ.
ಗೃಂಥಾಲಯದಿಂದ ಹೊರಬಂದಾಗ ಆಟೋ ಹತ್ತಬೇಕೆಂದಿದ್ದವಳು ‘ಹೋದ ಬಾರಿ ಗಾಬರಿಯಾಗಿತ್ತು ಅದಿಕ್ಕೆ ಆಟೋ ಹತ್ತಿ ಬೇಗ ಹೋಗಿಬಿಟ್ಟೆ. ಈ ಸಲ ಯಾಕೆ ಸುಮ್ನೆ ಮೂವತ್ತು ರುಪಾಯಿ ದಂಡ ಮಾಡೋದು; ಐದು ನಿಮಿಷದ ದಾರಿ ಸವೆಸಿದರೆ ಸಿಟಿ ಬಸ್ ನಿಲ್ದಾಣ ಸಿಗುತ್ತದೆ. ಅಲ್ಲಿಂದ ಕಾಲೇಜಿಗೆ ನಾಲ್ಕೂವರೆ ಕೊಟ್ಟು ಹೋಗಬಹುದಲ್ಲಾ?’ ಎಂದು ಯೋಚಿಸಿ ಸಿಟಿ ಬಸ್ಸಿನೆಡೆಗೆ ನಡೆಯುತ್ತಿದ್ದಳು ಕೀರ್ತನಾ, ತನ್ನನ್ನೊಬ್ಬ ಅನಾಮಿಕ ಹಿಂಬಾಲಿಸುತ್ತಿದ್ದಾನೆ ಎಂದು ಕಿಂಚಿತ್ತೂ ಅನುಮಾನ ಪಡದೆ.
ಸಿಟಿ ಬಸ್ ನಿಲ್ದಾಣಕ್ಕೆ ಹೋಗಿ ಸಂಗಂ ಕಡೆಗೆ ಹೋಗುವ ಬಸ್ಸನ್ನೇರಿದಳು. ಹಿಂದಿನ ಬಾಗಿಲಿನಿಂದ ಲೋಕಿ ಕೂಡ ಅದೇ ಬಸ್ ಏರಿದ. ಅವಳು ಎಲ್ಲಿ ಇಳಿಯುತ್ತಾಳೆ ಅನ್ನೋದನ್ನು ಹೇಗೆ ತಿಳಿದುಕೊಳ್ಳೋದು? ಹೇಗೆಂದು ಹೊಳೆಯಲಿಲ್ಲ. ಪಕ್ಕದಲ್ಲಿ ಕುಳಿತಿದ್ದವನನ್ನು “ಈ ಬಸ್ ಯಾವ ಊರಿಗೆ ಹೋಗುತ್ತೆ?” ಎಂದು ಕೇಳಿದ.
“ಸಂಗಂ”
“ಅದೇ ಕೊನೆಯ ಸ್ಟಾಪಾ?”
“ಹ್ಞೂ”
ಕಂಡಕ್ಟರ್ ಬಂದಾಗ ಕೊನೆಯ ಸ್ಟಾಪಾದ ಸಂಗಂಗೆ ಟಿಕೆಟ್ ತೆಗೆದುಕೊಂಡ. ಜೆ.ಎಸ್.ಎಸ್ ಮೆಡಿಕಲ್ ಕಾಲೇಜಿನ ಬಳಿ ಕೀರ್ತನಾ ಇಳಿದುಕೊಂಡಳು. ಅವಳನ್ನು ಗಮನಿಸಿದ ಲೋಕಿ ಕೂಡ ಇಳಿಯಲು ಮೇಲೆದ್ದ. ಲೋಕಿಯ ಪಕ್ಕದಲ್ಲಿ ಕುಳಿತಿದ್ದವನು
“ಇದೇನಪ್ಪಾ? ಸಂಗಂಗೆ ಟಿಕೆಟ್ ತೆಗೆದುಕೊಂಡು ಇಲ್ಲೇ ಇಳೀತಾ ಇದ್ಯಲ್ಲಾ?” ಎಂದು ಕೇಳಿದ.
“ಇಲ್ಲಿ ಒಬ್ಬರನ್ನು ನೋಡಬೇಕಿತ್ತು. ಮರೆತು ಸಂಗಂತೆ ಟಿಕೆಟ್ ತೆಗೆದುಕೊಂಡುಬಿಟ್ಟೆ” ಎಂದು ತಡವರಿಸಿ ಹೇಳುತ್ತಾ ಅವಸರವಸರವಾಗಿ ಬಸ್ಸಿಳಿದ.
ಕೀರ್ತನಾ ಜೆ.ಎಸ್.ಎಸ್ ಮೆಡಿಕಲ್ ಕಾಲೇಜಿನ ಆವರಣದೊಳಕ್ಕೆ ಕಾಲಿಟ್ಟಳು. ಇವಳು ಮೆಡಿಕಲ್ ಸ್ಟೂಡೆಂಟಾ? ಅವಳಿಂದೆಯೇ ಆವರಣದೊಳಕ್ಕೆ ಕಾಲಿಟ್ಟ. ಬಲಭಾಗದಲ್ಲಿ ಮೆಡಿಕಲ್ ಕಾಲೇಜಿದ್ದರೆ, ಎಡಭಾಗದಲ್ಲಿ ದಂತ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ. ಎರಡರ ನಡುವಿನ ನೇರವಾದ ರಸ್ತೆಯೊಂದು ಹುಡುಗಿಯರ ಹಾಸ್ಟೆಲ್ಲಿಗೆ ಹೋಗುತ್ತದೆ. ಅದೇ ರಸ್ತೆಯ ಮಧ್ಯಭಾಗದಿಂದ ಬೇರ್ಪಡುವ ಮತ್ತೊಂದು ರಸ್ತೆ ಹುಡುಗರ ಹಾಸ್ಟೆಲ್ಲಿಗೆ ಹೋಗುತ್ತದೆ. ಸೂರ್ಯನಾಗಲೇ ಮಲಗಲು ಅಣಿಯಾಗುತ್ತಿದ್ದ. ಸಂಜೆಗೆಂಪಿನ ಪ್ರಕಾಶದಲ್ಲಿ ಕಾಲೇಜಿನ ಆವರಣ ಬಹು ಅಂದವಾಗಿ ಕಾಣುತ್ತಿತ್ತು. ಮುಖ್ಯದ್ವಾರ ಮತ್ತು ಹಾಸ್ಟೆಲ್ಲಿಗೆ ನಡುವೆ ಇದ್ದಳು ಕೀರ್ತನಾ. ಹತ್ತಿರದಲ್ಲಿ ಯಾರೂ ಇಲ್ಲದುದನ್ನು ಗಮನಿಸಿ ಲೋಕಿ ಮತ್ತಷ್ಟು ವೇಗವಾಗಿ ನಡೆದು ಅವಳಿಂದ ಎರಡು ಮೂರು ಹೆಜ್ಜೆ ಅಂತರದಲ್ಲಿರುವಾಗ ಅವಳಿಗೆ ಮಾತ್ರ ಕೇಳುವಂತೆ “ಆಜಾದ್” ಎಂದು ಕೂಗಿದ. ಆಕೆಗೆ ಕೇಳಿಸಲಿಲ್ಲ ಅನ್ನಿಸುತ್ತೆ. ತಿರುಗಲಿಲ್ಲ. ಮತ್ತೊಮ್ಮೆ ಸ್ವರವನ್ನು ಕೊಂಚ ಏರಿಸಿ “ಆಜಾದ್” ಎಂದ. ಕೀರ್ತನಾ ತಿರುಗಿ ನೋಡಿದಳು. ‘ಇಷ್ಟು ಬೇಗ ಸಿಕ್ಕು ಹಾಕಿಕೊಂಡುಬಿಟ್ಟೆನಾ?’ ಎಂಬ ಗಾಬರಿಯಿತ್ತು. ಅವಳ ಮುಖದ ಭಾವನೆ ಲೋಕಿಗೆ ಇವಳೇ ಆಜಾದ್ ಎಂಬುದನ್ನು ದೃಡಪಡಿಸುವಂತಿತ್ತು.
“ನೀವ್ಯಾರು? ಏನದು ಆಜಾದ್ ಅಂದ್ರೆ?”
ಜೇಬಿನಲ್ಲಿದ್ದ ‘ಆಜಾದಿ’ಯನ್ನು ತೆಗೆದು ಆಕೆಗೆ ತೋರಿಸಿ “ನೀವೇ ತಾನೇ ಆಜಾದ್” ಎಂದ.
“ನೀವ್ಯಾರು?” ಮತ್ತಷ್ಟು ಗಾಬರಿಗೊಂಡು ಕೇಳಿದಳು.
“ಗಾಬರಿಯಾಗಬೇಡಿ. ನಾನು ಪೋಲೀಸನವನೇನೂ ಅಲ್ಲ. ನನ್ನ ಹೆಸರು ಲೋಕೇಶ್. ಪತ್ರಿಕೋದ್ಯಮದಲ್ಲಿ ಬಿ.ಎ ಮಾಡ್ತಾ ಇದ್ದೀನಿ” ಎಂದ್ಹೇಳಿ ತನ್ನ ಪರಿಚಯ ಮಾಡಿಕೊಂಡ.
ಕೊಂಚ ಮಟ್ಟಿಗೆ ಸಮಾಧಾನವಾಯಿತು ಕೀರ್ತನಾಳಿಗೆ. “ಬನ್ನಿ ಕುಳಿತು ಮಾತನಾಡೋಣ” ಎಂದು ಆತನನ್ನು ಅಲ್ಲೇ ಮರದ ಕೆಳಗಿದ್ದ ಬೆಂಚಿನ ಬಳಿ ಕರೆದುಕೊಂಡು ಹೋದಳು.
‘ಏನಾಗಲಿಕ್ಕೆ ಸಾಧ್ಯ? ಹೆಚ್ಚೆಂದರೆ ಪೋಲೀಸಿನವರು ಬಂಧಿಸಬಹುದು. ಅಷ್ಟೇ ತಾನೇ. ಅದಕ್ಯಾಕೆ ಗಾಬರಿಯಾಗಬೇಕು’ ಎಂದುಕೊಂಡು ಮುಖದ ಮೇಲೆ ಮತ್ತೆ ನಗು ತಂದುಕೊಂಡು “ಹೌದು ನಾನೇ ಆಜಾದ್ ಹೆಸರಿನಲ್ಲಿ ಆಜಾದಿ ಪತ್ರಿಕೆ ಶುರುಮಾಡಿರೋದು. ನನ್ನಿಂದ ನಿಮಗೇನಾಗಬೇಕು? ಪೋಲೀಸಿನವರಿಗೆ ಹಿಡಿದುಕೊಡಬೇಕು ಅಂತ ಬಂದಿದ್ದರೆ ನಡೀರಿ ಹೋಗೋಣ” ದೃಡ ನಿರ್ಧಾರದಂತೆ ಯಾವುದೇ ಅಳುಕಿಲ್ಲದೆ ಲೋಕಿಯ ಕಣ್ಣುಗಳನ್ನೇ ದಿಟ್ಟಿಸುತ್ತಾ ಹೇಳಿದಳು.
“ನೀನು ನಕ್ಸಲೈಟಾ?” ಅನವಶ್ಯಕ ಮಾತುಗಳಿಂದ ಏನೂ ಪ್ರಯೋಜನವಿಲ್ಲವೆಂದರಿತ ಲೋಕಿ ನೇರವಾಗಿಯೇ ಕೇಳಿದ.
“ಇರಬಹುದೇನೋ. ನಿಮಗ್ಯಾಕೆ?”
“ನೋಡಿ ನನ್ನ ತಾಳ್ಮೆ ಪರೀಕ್ಷೆ ಮಾಡಬೇಡಿ. ಈಗಾಗಲೇ ಕ್ರಾಂತಿಕಾರಿ ಸಂಘಟನೆಯೊಂದನ್ನು ಸೇರಬೇಕೆಂದಿದ್ದ ನನ್ನ ಕನಸು ನುಚ್ಚು ನೂರಾಗಿದೆ. ನಿನ್ನ ಆಜಾದಿ ಪತ್ರಿಕೆ ಓದಿದ ಮೇಲೆ ಆ ಕನಸು ಮತ್ತೆ ನನಸಾಗಬಹುದೇನೋ ಎಂಬ ಆಸೆ ಮನದಲ್ಲಿ ಮೂಡಿದೆ. ಅದಕ್ಕೋಸ್ಕರವೇ ಇವತ್ತು ಮಧ್ಯಾಹ್ನದಿಂದ ಯಾರೀ ಪತ್ರಿಕೆ ಶುರುಮಾಡಿರಬಹುದು ಎಂಬ ಕುತೂಹಲದಿಂದ ನಿಮಗಾಗಿ ಕಾಯುತ್ತಾ ಕುಳಿತಿದ್ದೆ. ಅದೃಷ್ಟವಶಾತ್ ಮೊದಲ ದಿನದ ಕಾಯುವಿಕೆಯಲ್ಲೇ ನೀವು ಸಿಕ್ಕಿದಿರಿ”
ಇಷ್ಟೊತ್ತು ಮುಖದ ಮೇಲಿದ್ದ ಬಲವಂತದ ನಗುವಿನ ಜಾಗದಲ್ಲೀಗ ನಿರ್ಮಲ ನಗೆ ಮೂಡಿತು. ಅವಳ ನಿರ್ಮಲ ನಗುವನ್ನು ನೋಡಿ ಲೋಕಿಯ ಮುಖದಲ್ಲೂ ನಗು ಮೂಡಿತು.
“ನೀವು ಹೇಳೋದು ಸತ್ಯ ಅಂತ ನಂಬಬಹುದಾ ಲೋಕೇಶ್”
“ಖಂಡಿತವಾಗಿ ನಂಬಬಹುದು”
ಲೋಕಿಯೆಡೆಗೆ ಕೈಚಾಚಿದಳು. “ನಂಬದೆ ಬೇರೆ ದಾರಿಯಾದರೂ ಏನಿದೆ ಅಲ್ಲವಾ? ಅಂದ್ಹಾಗೆ ನನ್ನ ಹೆಸರು ಕೀರ್ತನಾ. ಇದೇ ಕಾಲೇಜಿನಲ್ಲಿ ಫೈನಲ್ ಎಂ.ಬಿ.ಬಿ.ಎಸ್ ಮಾಡ್ತಿದ್ದೀನಿ” ಎಂದ್ಹೇಳಿದಳು.
“ನಿನ್ನ ಭೇಟಿಯಾಗಿದ್ದು ತುಂಬಾ ಖುಷಿಯಾಯ್ತು ಕೀರ್ತನಾ. ನಮ್ಮಿಬ್ಬರ ಭೇಟಿಯ ಸಂಭ್ರಮಕ್ಕೆ ನಡೀರಿ ಒಂದು ಕಾಫಿ ಕುಡಿದು ಬರೋಣ” ಎಂದ್ಹೇಳಿ ಆವರಣದಲ್ಲಿದ್ದ ನೆಸ್ ಕೆಫೆಯ ಕಡೆ ಕೈತೋರಿಸಿದ.
“ಅಲ್ಲಿಗೆ ಬೇಡ. ನಮ್ಮ ಕ್ಯಾಂಟೀನಿಗೆ ಹೋಗೋಣ”
“ಯಾಕೆ?”
“ನೆಸ್ ಕೆಫೆ ವಿದೇಶಿ ಕಂಪೆನಿ ಅದಿಕ್ಕೆ”
ಕ್ಯಾಂಟೀನಿನೆಡೆಗೆ ಹೋಗುತ್ತಿದ್ದಾಗ “ನಕ್ಸಲ್ ವಿಚಾರವನ್ನೆಲ್ಲಾ ಕ್ಯಾಂಟೀನಿನೊಳಗೆ ಮಾತನಾಡಬೇಡ ಲೋಕಿ. ಒಂದು ಮಾತು ಈಗಲೇ ತಿಳಿಸಿಬಿಡ್ತೀನಿ. ನಾನು ಬಂದೂಕಿಡಿದಿರೋ ನಕ್ಸಲೀಯಳಲ್ಲ. ಯಾವೊಬ್ಬ ನಕ್ಸಲನ ಪರಿಚಯವೂ ನನಗಿಲ್ಲ. ಆದರೆ ನಕ್ಸಲಳಾಗಬೇಕೆಂಬ ಆಸೆಯಂತೂ ಇದೆ. ದಾರಿ ಯಾವುದೆಂದು ತಿಳಿಯಲಿಲ್ಲ. ಅಲ್ಲಿಯವರೆಗೆ ಏನು ಮಾಡೋದು ಎಂದು ಯೋಚಿಸಿದಾಗ ಈ ಆಜಾದಿ ಪತ್ರಿಕೆ ಜೀವ ತಳೆಯಿತು. ಇವತ್ತಿಗಿಷ್ಟು ಸಾಕು ಮಿಕ್ಕಿದ್ದನ್ನು ಮತ್ತೊಂದು ದಿನ ಮಾತನಾಡುವ” ಎಂದ್ಹೇಳುವಷ್ಟರಲ್ಲಿ ಇಬ್ಬರೂ ಕ್ಯಾಂಟೀನಿನ ಬಾಗಿಲ ಬಳಿ ಬಂದರು.
ಹೀಗೆ ಶುರುವಾಗಿತ್ತು ಕೀರ್ತನಾ ಮತ್ತು ಲೋಕಿಯ ಸ್ನೇಹ.

ಮುಂದುವರೆಯುವುದು

No comments:

Post a Comment