Mar 26, 2014

ಆದರ್ಶವೇ ಬೆನ್ನು ಹತ್ತಿ .... ಭಾಗ 23

ಡಾ ಅಶೋಕ್ ಕೆ ಆರ್
ಆದರ್ಶವೇ ಬೆನ್ನು ಹತ್ತಿ ಭಾಗ 22 ಓದಲು ಇಲ್ಲಿ ಕ್ಲಿಕ್ಕಿಸಿ
ಇವೆಲ್ಲವೂ ನಡೆದುಹೋಗಿ ಆಗಲೇ ಏಳು ತಿಂಗಳಾಗಿ ಹೋಯಿತಲ್ಲ. ಕಾಲನ ವೇಗದಲ್ಲಿ ಚಲಿಸುವ ಶಕ್ತಿ ಯಾರಿಗೂ ಇಲ್ಲ ಎನ್ನಿಸಿತು ಲೋಕಿಗೆ. ಇವತ್ತಿಗೆ ನಾನು ಪೂರ್ಣಿ ಮಾತನಾಡಿ ಒಂದು ವರುಷವಾಯಿತಂತೆ. ಇವತ್ತಿನ ದಿನವೇ ಅವಳ ಜೊತೆ ಸರಿಯಾಗಿ ಮಾತನಾಡಲಿಲ್ಲವಲ್ಲ. ವಿಜಯ್ ಗಾದ ಅನ್ಯಾಯ; ತಂದೆ ದೊಡ್ಡವರೆನಿಸಿಕೊಂಡವರಿಗೆ ಹೆದರಿ ನಡೆದುಕೊಂಡ ರೀತಿ; ಆದರ್ಶಗಳಿಗೆ ವಿರುದ್ಧವಾಗಿ ನಿಂತು ಏನೊಂದೂ ಮಾತನಾಡದೆ ನಾನು ಸುಮ್ಮನಾಗಿಬಿಟ್ಟದ್ದು – ಇವೆಲ್ಲಾ ಮನಸ್ಸನ್ನು ಬಹಳ ತಿಂಗಳುಗಳ ನಂತರ ಮತ್ತೆ ಬೇಸರಕ್ಕೆ ದೂಡಿ ಬಿಟ್ಟಿತು.


ಕಳೆದೇಳು ತಿಂಗಳಿನಿಂದ ಲೋಕಿ ಖುಷಿಯಲ್ಲಿದ್ದ. ಪೂರ್ಣಿಮಾಳೊಡನೆ ಕಳೆಯುತ್ತಿದ್ದ ಒಂದೊಂದು ಕ್ಷಣವೂ ಸಂತಸ ಹೆಚ್ಚಿಸುತ್ತಿತ್ತು. ತಂದೆ ಮತ್ತು ವಿಜಿ ಬೆಂಗಳೂರಿಗೆ ಮದುವೆಗೆಂದು ಹೋಗಿದ್ದಾಗ ಪೂರ್ಣಿಮಾಳನ್ನು ಮನೆಗೆ ಕರೆತಂದು ಸ್ನೇಹಾಳಿಗೆ ಪರಿಚಯ ಮಾಡಿಸಿದ್ದ. ಸ್ನೇಹಳಿಗೆ ‘ಅತ್ತಿಗೆ’ ಬಹಳವಾಗಿ ಇಷ್ಟವಾಗಿದ್ದಳು. ಇಬ್ಬರೂ ಆಗಾಗ್ಯೆ ಭೆಟ್ಟಿಯಾಗುತ್ತಿದ್ದರು.
ಕಾಂತರಾಜ್ ಸರ್ ‘ಸಧನ್ಯಾ’ ಪತ್ರಿಕೆ ಶುರುಮಾಡಿ ಮೂರು ತಿಂಗಳಾಗಿತ್ತು. ಮೂರು ತಿಂಗಳಲ್ಲಿ ಲೋಕಿ ಕೂಡ ಐದಾರು ಲೇಖನಗಳನ್ನು ಖುದ್ದಾಗಿ ಪತ್ರಿಕೆಯ ಕಛೇರಿಗೆ ಹೋಗಿ ಕೊಟ್ಟು ಬಂದಿದ್ದ. ಮೊದಲೆರಡು ಬಾರಿ ಹೋದಾಗ ಅಲ್ಲೇ ಕೆಲಸ ಮಾಡುತ್ತಿದ್ದ ಸಯ್ಯದ್ ಮಾತನಾಡಿಸಿದ್ದ. ಲೋಕಿ ಪ್ರತಿಕ್ರಿಯಿಸುವ ಗೋಜಿಗೆ ಹೋಗಿರಲಿಲ್ಲ. ಮೂರನೇ ಬಾರಿಗೆ ಕಛೇರಿಗೆ ಹೋಗಿದ್ದಾಗ ಕಾಂತರಾಜ್ ಸರ್ ಇರಲಿಲ್ಲ. ಸಯ್ಯದನನ್ನು ಬಿಟ್ಟರೆ ಇನ್ನಿಬ್ಬರು ವರದಿಗಾರರಷ್ಟೆ ಅಲ್ಲಿದ್ದದ್ದು. ಸಯ್ಯದ್ ಲೋಕಿಯ ಬಳಿ ಬಂದು ಅವನ ಕೈಯಿಡಿದುಕೊಂಡು ಅಳಲಾರಂಭಿಸಿದ. ಅಳುವಿನ ನಡುವೆಯೇ “ನಾನು ತಪ್ಪು ಮಾಡಿಬಿಟ್ಟೆ ಲೋಕಿ. ಆದರೆ ನನ್ನ ತಪ್ಪಿಗೆ ನೀನು ಇಷ್ಟೊಂದು ದೊಡ್ಡ ಶಿಕ್ಷೆ ಕೊಡ್ತಾ ಇರೋದು ಸರಿ ಅಂತ ಅನ್ನಿಸುತ್ತಾ ನಿನಗೆ?”
“ನಿನಗೆ ಶಿಕ್ಷೆ ಕೊಡೋದಿಕ್ಕೆ ನಾನ್ಯಾರು?” ಒಂದೂವರೆ ವರ್ಷದ ಮೌನ ಮುರಿದು ಮಾತನಾಡಿದ ಲೋಕಿ.
“ನಾನು ಮೋಸ ಮಾಡಿದ್ದು ಕಾಂತರಾಜ್ ಸರ್ ಗಿರಬಹುದು. ಅದಕ್ಕಿಂತ ಹೆಚ್ಚಾಗಿ ನಿನ್ನ ನಂಬಿಕೆಗೆ ನಾನು ದ್ರೋಹ ಮಾಡಿಬಿಟ್ಟೆ. ನೀನಲ್ಲದೆ ಇನ್ಯಾರು ನನಗೆ ಶಿಕ್ಷೆ ಕೊಡಬೇಕು ಹೇಳು”
“ಅಷ್ಟೊಂದು ದೊಡ್ಡ ದೊಡ್ಡ ಮಾತನ್ನೆಲ್ಲಾ ಆಡಬೇಡ ಸಯ್ಯದ್. ತಪ್ಪು ಮಾಡಿದ್ದಕ್ಕೆ ನೀನು ಕ್ಷಮೆ ಕೇಳಿದೆ, ಕಾಂತರಾಜ್ ಸರ್ ಕ್ಷಮಿಸಿದರು. ಕ್ಷಮೆ ಕೇಳಿದವನನ್ನು ಕ್ಷಮಿಸಲಾರದಷ್ಟು ಸಣ್ಣವನಾಗಿಬಿಟ್ಟಿದ್ದು ನಾನು. ನಿಜ ಹೇಳಬೇಕೆಂದರೆ ನಾನು ನಿನ್ನ ಕ್ಷಮೆ ಕೇಳಬೇಕು”
“ನೀನ್ಯಾಕೆ ಕ್ಷಮೆ ಕೇಳಬೇಕು? ಇಷ್ಟು ದಿನಗಳ ನಂತರ ನನ್ನೊಡನೆ ಮಾತನಾಡಿದೆಯಲ್ಲಾ ಅಷ್ಟು ಸಾಕು ಬಿಡು. ನಾವು ಮೊದಲಿನಂತೆ ಸ್ನೇಹಿತರಾಗಿಬಿಡುತ್ತೀವಿ”
ಹೌದೆಂಬಂತೆ ತಲೆಯಾಡಿಸಿದ ಲೋಕಿ.
* * *
ಅಧ್ಯಾಯ – 10
“ನಿನ್ನಂಥ ಹುಡುಗನನ್ನು ಕಳೆದುಕೊಳ್ಳೋದಿಕ್ಕೆ ನನಗೂ ಬೇಸರವಾಗುತ್ತೆ ಗೌತಮ್. ಆದರೆ ನಾನು helpless ಅಂತ ನಿನಗೂ ಗೊತ್ತಲ್ಲ” ಸಿಂಚನ ಕಾಲೇಜಿನ ಕ್ಯಾಂಟೀನಿನ ಬಳಿ ಹೇಳಿದ ಮಾತುಗಳೇ ಕಿವಿಯಲ್ಲಿ ಗುಂಯ್ ಗುಟ್ಟುತ್ತಿತ್ತು. ಸಗರದ ಹೊರವಲಯದಲ್ಲಿರುವ ಡಾಬಾವೊಂದರಲ್ಲಿ ಒಂಟಿಯಾಗಿ ಕುಳಿತಿದ್ದ ಗೌತಮ್. ಮಂದ ಬೆಳಕಿನ ದೀಪದ ಕೆಳಗಿದ್ದ ಮೇಜಿನ ಮುಂದೆ ಕುಳಿತಿದ್ದ. ಮೇಜಿನ ಮೇಲಿದ್ದ ಪ್ಲೇಟಿನಲ್ಲಿ ಚಿಕನ್ ಕಬಾಬ್ ಇತ್ತು, ಪಕ್ಕದಲ್ಲಿ ಮಿರಿಂಡಾ ಬಾಟಲಿ, ಅದರ ಮುಂದೆ ಸ್ಮಿರ್ನ್ ಆಫ್ ವೋಡ್ಕಾ ಇತ್ತು, ಒಂದು ಕ್ವಾರ್ಟರ್. ನಾನೂ ಕುಡಿಯೋದಿಕ್ಕೆ ಶುರುಮಾಡಿಬಿಟ್ಟೆನಲ್ಲಾ ಎಂದು ಕೆಲವೊಮ್ಮೆ ಬೇಸರವಾಗುತ್ತಿತ್ತು. ಬೇಸರ ಮರೆಯೋದಿಕ್ಕೆ ಕುಡಿಯುತ್ತೇನೆ; ಅದರಿಂದ ಮತ್ತೆ ಬೇಸರವಾಗುತ್ತೆ. ಈ ವಿಷಸುಳಿಯಲ್ಲಿ ಸಿಕ್ಕಿಹಾಕಿಕೊಳ್ಳೋ ಅವಶ್ಯಕತೆಯಿತ್ತಾ ನನಗೆ? ಪ್ರತಿ ಬಾರಿ ಕುಡಿಯಲು ಬಂದಾಗಲೂ ಇದೇ ಪ್ರಶ್ನೆಯನ್ನು ಕೇಳಿಕೊಳ್ಳುತ್ತಾನೆ ಗೌತಮ್. ಇದುವರೆವಿಗೂ ಉತ್ತರ ಸಿಕ್ಕಿಲ್ಲ. ಉತ್ತರವಿರದ ಪ್ರಶ್ನೆಗಳೇ ನಮ್ಮನ್ನು ಬಹಳಷ್ಟು ಕಾಡುತ್ತವೆ. ಮಧುರೈ ಪ್ರವಾಸಕ್ಕೆ ಹೋದ ನಂತರ ಮತ್ತೆ ಸಿಂಚನಾಳೊಡನೆ ಮಾತನಾಡಲಾರಂಭಿಸಿದ್ದ. ವಾರದ ಹಿಂದೆ ಕ್ಯಾಂಟೀನಿನ ಬಳಿ ಆಕೆಯೊಂದಿಗೆ ಮಾತನಾಡುತ್ತಿದ್ದಾಗ ಯಾಕೋ ಕೇಳಬೇಕೆನ್ನಿಸಿತ್ತು. “ನನ್ನ ಲವ್ ಮಾಡಬೇಕು ಅಂತ ಈಗಲೂ ನಿನಗೆ ಅನ್ನಿಸುತ್ತಿಲ್ವಾ?” ಕೇಳಿಬಿಟ್ಟಿದ್ದ. “ನಿನ್ನಂಥ ಹುಡುಗನನ್ನು ಕಳೆದುಕೊಳ್ಳೋದಿಕ್ಕೆ ನನಗೂ ಬೇಸರವಾಗುತ್ತೆ ಗೌತಮ್. ಆದರೆ ನಾನು helpless ಅಂತ ನಿನಗೂ ಗೊತ್ತಲ್ಲ” ಎಂದವಳು ಹೇಳಿದ ಮೇಲೆ ಪ್ರತಿ ದಿನ ಕುಡಿಯುತ್ತಿದ್ದಾನೆ. ಕುಡಿದರೂ ಮನಸ್ಸಿನ ದುಃಖ ಕಡಿಮೆಯಾಗುವುದಿಲ್ಲವಲ್ಲ ಎಂದು ವ್ಯಥಿಸುತ್ತಾನೆ. ದುಃಖ ಶಮನ ಮಾಡುವ ಶಕ್ತಿ ಇದ್ದಿದ್ದರೆ ಪ್ರತೀ ಆಸ್ಪತ್ರೆಯಲ್ಲಿ ಒಂದು ಬಾರ್ ತೆಗೆದಿರುತ್ತಿದ್ದರು; ಪ್ರತೀ ಮೆಡಿಕಲ್ ಸ್ಟೋರಿನ ಪ್ರಿಡ್ಜಿನಲ್ಲಿ ವಿಸ್ಕಿ ಬಾಟಲ್ಲುಗಳು!
ಹಲವು ತಿಂಗಳುಗಳ ನಂತರ ಮತ್ತೆ ಸ್ನೇಹ ಚಿಗುರಿದಕ್ಕಾಗಿ ಸಯ್ಯದ್ ಲೋಕಿಗೆ ಪಾರ್ಟಿ ಕೊಡಿಸಲು ಅದೇ ಡಾಬಾಕ್ಕೆ ಕರೆದುಕೊಂಡು ಬಂದಿದ್ದ. ಡಾಬಾದ ಹೊರಗೆ ಗೌತಮ್ ಗಾಡಿ ನೋಡಿ ಸ್ನೇಹಿತರೊಡನೆ ಬಂದಿರಬೇಕು ಎಂದುಕೊಂಡ. ಡಾಬಾದಲ್ಲಿ ಗೌತಮ್ ಒಬ್ಬನೇ ಕುಳಿತಿದ್ದ. ಲೋಕಿಗೆ ಅಚ್ಚರಿಯೆನಿಸಿದ್ದು ಗೌತಮ್ ಮುಂದಿನ ಮೇಜಿನ ಮೇಲಿದ್ದ ವೋಡ್ಕಾ ಬಾಟಲ್. ‘ಇವನ್ಯಾವಾಗ ಕುಡಿಯೋದಿಕ್ಕೆ ಶುರುಮಾಡಿದ’ ಎಂದು ಯೋಚಿಸುತ್ತಾ ಸಯ್ಯದನ ಜೊತೆ ಅವನ ಬಳಿಗೆ ಹೋದ ಲೋಕಿ. ಲೋಕಿ ಮತ್ತು ಸಯ್ಯದನನ್ನು ನೋಡಿ ಒಂದರೆಕ್ಷಣ ಮುಜುಗರವಾಯಿತು. ‘ಛೇ! ನಾನು ಕುಡಿಯೋದು ಯಾರಿಗೂ ತಿಳಿಯಬಾರದೆಂದು ನಗರದ ಹೊರವಲಯಕ್ಕೆ ಬಂದಿದ್ದೇನೆ. ಇಲ್ಲಿಯವರೆಗೂ ಯಾರಿಗೂ ನಾನು ಡ್ರಿಂಕ್ಸ್ ಮಾಡೋದು ತಿಳಿದಿರಲಿಲ್ಲ. ಇವತ್ತು ಲೋಕಿಗೆ ಗೊತ್ತಾಗಿ ಹೋಗುತ್ತಲ್ಲಾ. ಇವ ಖಂಡಿತವಾಗಿ ಈ ವಿಷಯವನ್ನು ಪೂರ್ಣಿಮಾಳಿಗೆ ತಿಳಿಸುತ್ತಾನೆ. ಆಕೆ ಸಿಂಚನಾಳಿಗೆ ಹೇಳಿಬಿಟ್ಟರೆ ಅವಳು ಎಷ್ಟು ಬೇಸರಮಾಡಿಕೊಳ್ಳುತ್ತಾಳೆ’ ಮನಸ್ಸಿನ ಯೋಚನೆಗಳನ್ನು ಮುಖದಲ್ಲಿ ತೋರಗೊಡದೆ ಅವರೆಡೆಗೆ ನೋಡಿ ನಕ್ಕ.
“ಏನು ಗೌತಮ್ ಒಬ್ಬನೇ ಬಂದಿದ್ದೀಯಾ?”
“ಹ್ಞೂ. ಹೀಗೇ ಸುಮ್ಮನೆ ಬಂದಿದ್ದೆ”
ಸಯ್ಯದ್ ನೆಡೆಗೆ ಕೈತೋರಿಸಿ “ಇವನ ಪರಿಚಯವಿರಬೇಕಲ್ಲ”
“ಗೊತ್ತು. ಸಯ್ಯದ್ ತಾನೆ” ಎನ್ನುತ್ತಾ ಕೈಚಾಚಿದ. “ಇಲ್ಲೇ ಕೂರಿ” ಎಂದ. ಇಬ್ಬರೂ ಗೌತಮನೆದುರಿಗಿದ್ದ ಕುರ್ಚಿಯಲ್ಲಿ ಕುಳಿತರು. ಸಪ್ಲೈಯರ್ ಬಂದು ಆರ್ಡರ್ ತೆಗೆದುಕೊಂಡು ಹೋದ ನಂತರ ಲೋಕಿ “ನೀನ್ಯಾವಾಗಿಂದ ಕುಡಿಯೋದಿಕ್ಕೆ ಶುರು ಮಾಡಿದೆ ಗೌತಮ್. ನಮಗ್ಯಾರಿಗೂ ಗೊತ್ತೇ ಇರಲಿಲ್ಲ”
“ನಾಲ್ಕು ತಿಂಗಳಾಗಿರಬೇಕು ಲೋಕಿ”
“ನಾಲ್ಕು ತಿಂಗಳು? ಅಂದ್ರೆ ನಾವು ಪ್ರವಾಸ ಹೋಗಿ ಬಂದ ಮೇಲೆ?”
“ಹೌದು” ತಲೆತಗ್ಗಿಸಿ ಕುಳಿತ.
“ಸಿಂಚನಾಳನ್ನು ಮರೆಯಬೇಕು ಅಂತ ಕುಡಿಯುತ್ತಿದ್ದೀಯಾ?”
“ಬಹುಶಃ ಅದಕ್ಕೇ ಇರಬೇಕು”
“ಮರೆತೆಯಾ?”
“ಉಹ್ಞೂ ಕುಡಿತದಿಂದ ಅವಳನ್ನು ಮರೆಯೋದಿಕ್ಕಾಗುತ್ತಾ? ಇನ್ನಷ್ಟು ನೆನಪಾಗುತ್ತಾಳೆ ಕುಡಿದ ಮೇಲೆ. ಮತ್ತಷ್ಟು ಕುಡಿಯುತ್ತೇನೆ”
“ನೀನು ತಪ್ಪು ಮಾಡಿಬಿಟ್ಟೆ ಗೌತಮ್”
“ಪ್ರೀತಿಸೋದು ತಪ್ಪಾ?”
“ನೀನು ಸಿಂಚನಾಳನ್ನು ಪ್ರೀತಿಸಿದ್ದು ತಪ್ಪಲ್ಲ. ನಿನ್ನ ಪ್ರೀತಿಯನ್ನು ವ್ಯಕ್ತಪಡಿಸಿದ ಮೇಲೆ ಅವಳಿಗಾಗಲೇ ಮದುವೆ ನಿಶ್ಚಯವಾಗಿದೆ ಅಂತ ನಿನಗೆ ತಿಳಿಯಿತು. ಅದಾದ ಮೇಲೆ ಮತ್ತೆ ಅವಳೊಡನೆ ಮುಂಚಿನಂತೆ ಸ್ನೇಹದಿಂದ ಮಾತನಾಡಿಸಬಾರದಿತ್ತು”
“ಯಾಕೆ?”
“ಒಂದು ಪ್ರಶ್ನೆ ಗೌತಮ್. ನೀನು ಸಿಂಚನಾಳೊಡನೆ ಮುಂಚೆ ಮಾತನಾಡುತ್ತಿದುದಕ್ಕೂ ಈಗ ಮಾತನಾಡುವುದಕ್ಕೂ ಏನಾದರೂ ವ್ಯತ್ಯಾಸವಿದೆ ಅಂತ ಅನ್ನಿಸುತ್ತಾ?”
“ಬಹಳ ವ್ಯತ್ಯಾಸವಿದೆ. ಮುಂಚಿನಂತೆ ಮುಕ್ತವಾಗಿ ಮಾತನಾಡುವುದು ಸಾಧ್ಯವಾಗುತ್ತಿಲ್ಲ; ಮೊದಲಿನ ಸ್ನೇಹ ಉಳಿದಿಲ್ಲ”
“ಒಂದು ಬಾರಿ ಪ್ರೇಮದ ಭಾವನೆ ಮನದಲ್ಲಿ ಮೂಡಿಬಿಟ್ಟರೆ ಮತ್ಯಾವತ್ತೂ ಮುಂಚಿನ ರೀತಿಯ ಸ್ನೇಹ ಉಳಿಯೋದಿಲ್ಲ”
“ಅವಳ ಜೊತೆಗಿನ ಸ್ನೇಹವನ್ನೂ ಕಳೆದುಕೊಳ್ಳಬೇಕು ಅಂತೀಯಾ?”
“ನನ್ನ ಪ್ರಕಾರ ಹೌದು. ಇವಳ ಮೇಲೆ ನನಗೀಗ ಪ್ರೇಮದ ಭಾವನೆಯಿಲ್ಲ. ಇವಳೀಗ ನನ್ನ ಸ್ನೇಹಿತೆ ಮಾತ್ರ ಅಂತ ಮನಸ್ಸಿಗೆ ಎಷ್ಟು ಬಾರಿ ಹೇಳಿದರೂ ಮೊಂಡ ಮನಸ್ಸು ನಮ್ಮ ಮಾತು ಕೇಳುವುದಿಲ್ಲ. ಆಕೆಯೊಡನೆ ಹೆಚ್ಚೆಚ್ಚು ಇದ್ದಷ್ಟು ಮನದ ಪ್ರಶಾಂತತೆ ಕದಡುತ್ತಾ ಹೋಗುತ್ತೆ. ಬೇಸರದ ಅಲೆ ಹುಟ್ಟುತ್ತೆ. ಬೇಸರದಲೆಗೆ ಮೈಯೊಡ್ಡಿ ನಿಲ್ಲುವುದಕ್ಕಿಂತ ಮನದ ಪ್ರಶಾಂತತೆ ಕಾಪಾಡಿಕೊಳ್ಳೋದೆ ಉತ್ತಮ ಅಂತ ನನ್ನ ಅಭಿಪ್ರಾಯ”
ಗ್ಲಾಸಿನಲ್ಲಿ ಉಳಿದಿದ್ದ ಧರ್ಟಿಯನ್ನು ಕುಡಿದು ಖಾಲಿ ಗ್ಲಾಸನ್ನು ಮೇಜಿನ ಮೇಲಿಟ್ಟು “ನನಗೂ ಪ್ರತೀ ದಿನ ಹೀಗೇ ಅನ್ನಿಸುತ್ತೆ ಲೋಕಿ. ಮನಸ್ಸಿಗೆ ಸ್ವಲ್ಪ ಕಷ್ಟವಾದರೂ ಸರಿಯೇ ನಾಳೆಯಿಂದ ಅವಳೊಡನೆ ಮಾತನಾಡುವುದು ಬೇಡ ಎಂದು ನಿರ್ಧರಿಸಿರುತ್ತೇನೆ. ಕಾಲೇಜಿನಲ್ಲಿ ಆಕೆಯನ್ನು ನೋಡುತ್ತಿದ್ದಂತೆಯೇ ನನ್ನ ನಿರ್ಧಾರಗಳೆಲ್ಲಾ ಗಾಳಿಗೆ ತೂರಿಕೊಂಡು ಹೋಗುತ್ತೆ. ಬೆಳಗಿನಿಂದ ಸಂಜೆಯವರೆಗೆ ಅವಳೊಡನೆ ಖುಷಿಯಿಂದ ಮಾತನಾಡುತ್ತೇನೆ. ರಾತ್ರಿ ಮತ್ತೆ ಬೇಸರ...... ಏನು ಮಾಡಬೇಕು ಅಂತಾನೇ ತಿಳಿಯುತ್ತಿಲ್ಲ”
“ನಾನು ಇವತ್ತೆಲ್ಲಾ ಭಾಷಣ ಕೊಡಬಹುದು. ಆದರೆ ಕೊನೆಯಲ್ಲಿ ನಿರ್ಧಾರ ತೆಗೆದುಕೊಳ್ಳಬೇಕಾಗಿರೋದು ನೀನೆ. ನಾಳೆ ಅನ್ನೋದು ಯಾವತ್ತಿದ್ದರೂ ಹಾಳು. ಈ ಕ್ಷಣವೇ ನಿರ್ಧಾರ ಮಾಡು. ಇವಾಗಿನಿಂದ ಸಿಂಚನಾಳ ಬಗ್ಗೆ ಯೋಚಿಸೋದಿಲ್ಲ, ಆಕೆಯೊಡನೆ ಮಾತನಾಡುವುದನ್ನು ಆದಷ್ಟು ಕಡಿಮೆಮಾಡುತ್ತೇನೆ ಅಂತ. ನೀನು ತೆಗೆದುಕೊಳ್ಳುವ ನಿರ್ಧಾರ ನಿನಗೆ ಗೆಲವು ತಂದುಕೊಟ್ಟರೆ ಈ ವಿಸ್ಕಿ ಕುಡಿಯುವುದರ ಅವಶ್ಯಕತೆಯಾದರೂ ಏನಿರುತ್ತೆ ಹೇಳು. ಮನಸ್ಸು ಸರಿಯಿಲ್ಲ ಅನ್ನೊ ಕಾರಣಕ್ಕೆ ದೇಹಕ್ಯಾಕೆ ಶಿಕ್ಷೆ?”
          “ಸರಿ ಲೋಕಿ. ನಾಳೆಯಿಂದ ಅಕಾರಣವಾಗಿ ಸಿಂಚನಾಳೊಡನೆ ಮಾತನಾಡುವುದಿಲ್ಲ” ಎಂದ್ಹೇಳಿ ಬಿಲ್ ತೆಗೆದುಕೊಂಡು ಕೌಂಟರ್ರಿನ ಕಡೆ ಹೊರಟ ಗೌತಮ್. ಆತ ಹೋದ ಮೇಲೆ ಲೋಕಿ “ಸಾರಿ ಸಯ್ಯದ್. ಗೌತಮನೊಂದಿಗೆ ಮಾತನಾಡುತ್ತ ನಿನ್ನ ಇರುವಿಕೆಯನ್ನೇ ಮರೆತುಬಿಟ್ಟಿದ್ದೆ”
“ಇರಲಿ ಬಿಡು. ಪಾಪ ಪ್ರೀತಿ ವಿಷಯದಲ್ಲಿ ತುಂಬಾ ನೊಂದುಬಿಟ್ಟಿದ್ದಾನೆ ಅಂತ ಕಾಣುತ್ತೆ” ಸಪ್ಲೈಯರ್ ಬಂದ. ಸಯ್ಯದ್ ವಿಸ್ಕಿ ಹೇಳಿದ.
“ನಿನಗೇನಪ್ಪ ಸಯ್ಯದ್ ವಿಸ್ಕಿ ಕುಡಿಯುವಷ್ಟು ಬೇಸರವಾಗಿರೋದು?” ನಗುತ್ತಾ ಕೇಳಿದ ಲೋಕಿ.
“ಮುಂದಿನ ವಾರ ರೂಪಾಳ ಮದುವೆ” ಸಯ್ಯದ್ ದನಿಯ ವಿಶಣ್ಣತೆ ಮೊದಲೇ ಇದನ್ನು ನಿರೀಕ್ಷಿಸಿದ್ದ ಲೋಕಿಯನ್ನೂ ಒಂದು ಕ್ಷಣ ವಿಹ್ವಲಗೊಳಿಸಿತು.

ಮುಂದುವರೆಯುವುದು...
 

No comments:

Post a Comment