Feb 1, 2014

ಆದರ್ಶವೇ ಬೆನ್ನು ಹತ್ತಿ .... ಭಾಗ 17ಡಾ ಅಶೋಕ್ ಕೆ ಆರ್
ಆದರ್ಶವೇ ಬೆನ್ನು ಹತ್ತಿ ಭಾಗ 16 ಓದಲು ಇಲ್ಲಿ ಕ್ಲಿಕ್ಕಿಸಿ
‘ಜೀವನದಲ್ಲಿ ಇವತ್ತು ಮಹತ್ವವಾದ ದಿನ’ ಎಂಬುದು ತಿಳಿದಿದ್ದ ಲೋಕಿ ಉತ್ಸಾಹದಿಂದ ಗ್ರೌಂಡಿಗೆ ಬಂದು ಅಲ್ಲೇ ಇದ್ದ ಕಲ್ಲು ಬೆಂಚಿನ ಮೇಲೆ ಕುಳಿತ. ಗಡಿಯಾರ ನೋಡಿದ, ಆರು ಘಂಟೆಯಾಗಿ ಎರಡು ನಿಮಿಷಗಳಾಗಿದ್ದವು. ಸುತ್ತಮುತ್ತ ನೋಡಿದ ಆ ‘ಹುಚ್ಚ’ನಾಗಲೀ ಆ ಇಬ್ಬರು ವ್ಯಕ್ತಿಗಳಾಗಲೀ ಅಲ್ಲಿ ಕಾಣಲಿಲ್ಲ. ಲೋಕಿಯ ಪಕ್ಕದಲ್ಲಿ ಮೂವತ್ತರ ಆಸುಪಾಸಿನ ಮಹಿಳೆಯೊಬ್ಬಳು ಬಂದು ಕುಳಿತಳು. ‘ಎಲ್ಲೂ ಜಾಗವಿಲ್ಲವೆಂಬಂತೆ ಈಕೆ ಇಲ್ಲೇ ಬಂದು ಕೂರಬೇಕೆ?’ ಎಂದುಕೊಂಡು ಲೋಕಿ ಮೇಲೆದ್ದ.
“ನಿನ್ನ ಜೊತೆ ಮಾತನಾಡೋದಿಕ್ಕೆ ನಾನೇ ಬಂದಿರೋದು ಕುಳಿತಿಕೋ ಲೋಕೇಶ್”
ಲೋಕಿ ಕುಳಿತುಕೊಳ್ಳುತ್ತಾ “ನೀವು....”
“ನಾನ್ಯಾರು ಅನ್ನೋದನ್ನು ತಿಳಿದು ನಿನಗೇನು ಉಪಯೋಗವಿಲ್ಲ. ನೀನ್ಯಾರು ಅಂತ ಮೊದಲು ಸರಿಯಾಗಿ ತಿಳಿದುಕೋ”
“ನನಗೆ ಅರ್ಥವಾಗಲಿಲ್ಲ”
“ನಿನ್ನ ವ್ಯಕ್ತಿತ್ವವನ್ನು ಸರಿಯಾಗಿ ತಿಳಿ ಲೋಕಿ. ಒಂದು ದಿನ ಕ್ರಾಂತಿಕಾರಿಯಂತೆ ಇರುತ್ತೀಯ, ಮತ್ತೊಂದು ದಿನ ವಿರಹಿಪ್ರೇಮಿಯಂತೆ ವರ್ತಿಸುತ್ತೀಯ. ಅಫ್ ಕೋರ್ಸ್ ನಿನ್ನ ವಯಸ್ಸಿಗೆ ಅದೆಲ್ಲ ಸಹಜ ವಿಷಯಗಳೇ ಇರಬಹುದು. ಆದರೆ ಗೊಂದಲದ ಮನಸ್ಥಿತಿಯಲ್ಲಿರುವವರನ್ನು ನಮ್ಮ ಸಂಘಟನೆಗೆ ಸೇರಿಸಿಕೊಳ್ಳಬಹುದಾ ಎಂಬುದೇ ಪ್ರಶ್ನೆ. ಎಲ್ಲವುಗಳ ಬಗ್ಗೆ ಅಲ್ಲದೇ ಹೋದರೂ ಬಹಳಷ್ಟು ವೈಯಕ್ತಿಕ ವಿಷಯಗಳ ಕಡೆಗೆ ಗಮನ ಕಡಿಮೆಯಾಗಲೇಬೇಕು ನಮ್ಮ ಸಂಘಟನೆಗೆ ಒಮ್ಮೆ ಸೇರಿದ ಮೇಲೆ”
“ನಿಮ್ಮ ಸಂಘಟನೆ ಅಂದರೆ ಯಾವುದು?”
“Indian Secret Revolutionary Agency”
ಲೋಕಿ ಕೆಲಕ್ಷಣ ಯೋಚಿಸಿದ. ಆ ಹೆಸರಿನ ಸಂಘಟನೆಯ ಬಗ್ಗೆ ಪತ್ರಿಕೆಗಳಲ್ಲಾಗಲೀ ಟಿವಿಯಲ್ಲಾಗಲೀ ಕೇಳಿದ ಹಾಗಿರಲಿಲ್ಲ.
“ಈ ಹೆಸರನ್ನು ನಾನು ಯಾವತ್ತೂ ಕೇಳೇ ಇಲ್ಲವಲ್ಲ”
“ಕೇಳೋದಿಕ್ಕೆ ಹೇಗೆ ಸಾಧ್ಯ? ಇದು ಈಗ ಹೊಸದಾಗಿ ಪ್ರಾರಂಭವಾಗುತ್ತಿರೋ ಒಂದು ಸಂಘಟನೆ. ಇನ್ನೂ ಕಾರ್ಯಾಚರಣೆ ಸಂಪೂರ್ಣವಾಗಿ ಆರಂಭವಾಗಿಲ್ಲ”
“ನಿಮ್ಮ ಮಾತನ್ನು ನಾನು ನಂಬಬಹುದಾ?”
“ಅದು ನಿನ್ನಿಚ್ಛೆ”
“ಇದರ ನಾಯಕ?”
“ಅದೆಲ್ಲಾ ನನಗೂ ತಿಳಿದಿಲ್ಲಾ. ಸಾಮಾನ್ಯ ಕಾರ್ಯಕರ್ತಳಾಗಿ ಈ ಸಂಘಟನೆಗೆ ಸೇರಿದ್ದೀನಿ. ಮೈಸೂರು ಜಿಲ್ಲೆಗೆ – ಗೃಂಥಾಲಯದಲ್ಲಿ ನೋಡಿದೆಯಲ್ಲಾ ‘ಹುಚ್ಚ’ರನ್ನು ಅವರೇ ನಾಯಕರು.
“ಈ ಸಂಘಟನೆಯ ಧ್ಯೇಯ ಉದ್ದೇಶ ಒಂದು ತಿಳಿಯದೆ ನಾನು ಹೇಗೆ ಸೇರಲಿ?”
“ನಮ್ಮ ಸಂಘಟನೆಯಲ್ಲಿ ಹಿಂದೆ ನಕ್ಸಲಿಸಂ ಸಿದ್ಧಾಂತ ಒಪ್ಪಿಕೊಂಡವರಿದ್ದಾರೆ, ಗಾಂಧೀಜಿಯ ಅಹಿಂಸಾವದವೇ ಶ್ರೇಷ್ಟ ಎನ್ನುವವರಿದ್ದಾರೆ. ಇವೆರಡರ ಮಧ್ಯಮಾರ್ಗದಲ್ಲಿ ಕ್ರಾಂತಿಯಾಗಲು ಸಾಧ್ಯ ಎಂಬುದು ನಮ್ಮ ನೀತಿ. ಇಡೀ ದೇಶವನ್ನಲ್ಲದಿದ್ದರೂ ಕೊನೇ ಪಕ್ಷ ಒಂದು ಪ್ರದೇಶವನ್ನಾದರೂ ಬದಲಿಸಬೇಕೆಂಬುದೇ ನಮ್ಮ ಗುರಿ”
“ನಾನು ನಿಮ್ಮ ಸಂಘಟನೆಗೆ ಸೇರಬೇಕೆಂದರೆ ಮನೆ, ಕಾಲೇಜು ಎಲ್ಲವನ್ನೂ ಬಿಟ್ಟು ಬರಬೇಕಾ?”
“ಸದ್ಯಕ್ಕೆ ಅದರ ಅವಶ್ಯಕತೆ ಇಲ್ಲ. ಕೆಲವರು ಭೂಗತರಾಗಿ ಕಾರ್ಯನಿರ್ವಹಿಸಲೇಬೇಕಾದ ಒತ್ತಡದಲ್ಲಿರುತ್ತಾರೆ. ಬಹುತೇಕರು ನಮ್ಮ ಸಾಂಸಾರಿಕ ಜವಾಬುದಾರಿಗಳ ಜೊತೆಜೊತೆಗೆ ಈ ಕ್ರಾಂತಿಯಲ್ಲಿ ಭಾಗವಹಿಸುತ್ತೇವೆ. ನಮ್ಮ ಮನೆಯವರಿಗೆ ಬುದ್ಧಿ ಹೇಳಲು ನಾವ್ಯಾಕೆ ವೇಷ ಬದಲಿಸಿಕೋಬೇಕು ಹೇಳು”
“ಮತ್ತೆ ಸಂಘಟನೆಯ ಹೆಸರಿನಲ್ಲಿ ರಹಸ್ಯ ಅಂತ ಇದೆ”
“ಅದು ಸದ್ಯದ ಮಟ್ಟಿಗೆ ಅದರಲ್ಲೂ ಭೂಗತರಾಗಿ ಕಾರ್ಯನಿರ್ವಹಿಸುತ್ತಿರುವವರಿಗೆ ಮಾತ್ರ. ನಮ್ಮ ಕಾರ್ಯಾಚರಣೆಗಳು ಶುರುವಾಗುವ ಸಮಯದಲ್ಲಿ ಭೂಗತರಾಗದೇ ಕಾರ್ಯನಿರ್ವಹಿಸುವವರೆಲ್ಲ Indian Revolutionary Armyಯ ಹೆಸರಿನಡಿಯಲ್ಲಿ ಬರುತ್ತೇವೆ. ಇವತ್ತಿಗೆ ಇಷ್ಟು ಚರ್ಚೆ ಸಾಕೆನ್ನಿಸುತ್ತೆ. ನಿನಗೆ ನಮ್ಮ ಸಂಘಟನೆ ಸೇರಬೇಕು ಅನ್ನೋ ಮನಸ್ಸಿದ್ದರೆ ನಾಳೆ ಬೆಳಿಗ್ಗೆ ಕಾಲೇಜಿಗೆ ಸಿಟಿ ಬಸ್ಸಿನಲ್ಲಿ ಹೋಗಬೇಡ. ನಿಮ್ಮ ಮನೆಯಿಂದ ಹೊರಗೆ ಬಂದಾಗ ಸಿಗುವ ರಸ್ತೆಯಲ್ಲಿ ಎಡಕ್ಕೆ ಹೋದರೆ ಒಂದು ಆಟೋ ನಿಲ್ದಾಣ ಸಿಗುತ್ತೆ. ಹೌದಾ?”
“ಹೌದು”
“ಅಲ್ಲಿಗೆ ಹೋಗಿ Ka 09 F 2817 ನಂಬರಿನ ಆಟೋದಲ್ಲಿ ಕುಳಿತಿಕೋ. ಬಹುಶಃ ಬೆಳಗಿನ ಸಮಯ ಅದೊಂದೇ ಆಟೋ ನಿಂತಿರುತ್ತೆ. ನಂತರ ಏನು ಮಾಡಬೇಕು ಅನ್ನೋದನ್ನ ಆಟೋ ಚಾಲಕ ಹೇಳ್ತಾನೆ” ಎಂದ್ಹೇಳಿ ಆ ಮಹಿಳೆ ಹೊರಟುಹೋದಳು. ಮಹಿಳೆ ಹೇಳಿದ ಮಾತುಗಳ ಗುಂಗಿನಲ್ಲಿ ಸಿಗರೇಟ್ ಹಚ್ಚಿದ. ಜೇಬಿನಲ್ಲಿದ್ದ ಸಿಗರೇಟುಗಳೆಲ್ಲಾ ಮುಗಿದು ಮನೆಗೆ ಹೋಗುವಷ್ಟರಲ್ಲಿ ರಾತ್ರಿ ಎಂಟಾಗಿತ್ತು. ಊಟ ಮಾಡಲು ಮನಸ್ಸಿಲ್ಲದಿದ್ದರೂ ಸ್ನೇಹಾಳ ಬಲವಂತಕ್ಕೆ ಎರಡು ತುತ್ತು ತಿಂದು ಹೋಗಿ ಮಲಗಿದನು. ನಿದ್ರೆ ಬರಲಿಲ್ಲ. ಬಂದದ್ದೆಲ್ಲಾ ಈ ವ್ಯವಸ್ಥೆ ಕೊಡುತ್ತಿರೋ ಕಹಿ ನೆನಪುಗಳು...
‘ಏನು ಮಾಡಲಿ? ಸಂಘಟನೆಗೆ ಸೇರಿಬಿಡಲಾ? ಈ ವ್ಯವಸ್ಥೆ ಬದಲಾಗಬೇಕು, ಹುಳುಕುಗಳನ್ನೆಲ್ಲಾ ತೆಗೆದುಹಾಕಬೇಕು ಅನ್ನೋದೇನೋ ಮನಸ್ಸಿನಲ್ಲಿದೆ; ಬಹುಶಃ ಕಾಲೇಜಿನ ಬಹುತೇಕ ವಿದ್ಯಾರ್ಥಿಗಳಿಗೆ ಆ ಭಾವನೆ ಇರುತ್ತೆ. ಏನೂ ಮಾಡೋದಿಕ್ಕಾಗೋದಿಲ್ಲ ಅಂತ ತೀರ್ಮಾನಿಸಿ ವ್ಯವಸ್ಥೆಯೊಳಗೊಂದಾಗಿಬಿಡುವವರೇ ಅಧಿಕ. ನಾನೂ ಹಾಗೇ ಆಗಬೇಕಾ? ಊಹ್ಞೂಂ... ಈ ವ್ಯವಸ್ಥೆ ಬದಲಾಯಿಸೋದಿಕ್ಕೆ ನಾನು ಏನಾದರು ಮಾಡಬೇಕು. ನನ್ನ ಗುರಿ ಸಾಧಿಸೋಕೆ ಈ ಸಂಘಟನೆಗೆ ಸೇರೋದೆ ಸರಿ. ಆದರೆ... ತಂದೆ... ಈಗಾಗಲೇ ಸಿಗರೇಟಿನ ವಿಷಯದಲ್ಲಿ ಅವರ ಮನಸ್ಸಿಗೆ ನೋವುಂಟು ಮಾಡಿದ್ದೀನಿ. ಭೂಗತ ಸಂಘಟನೆಗಳಿಗೆ ಸೇರಿ ನಮ್ಮ ದೇಶದ ಕಾನೂನು ಹೇಳೋ ಹಾಗೆ ಸಮಾಜದ್ರೋಹದ ಕೆಲಸ ಮಾಡಿದರೆ ಅವರು ಬದುಕಿರುತ್ತಾರಾ? ಹೇಗಿದ್ದರೂ ನಾನವರ ಮೆಚ್ಚಿನ ಮಗನಾಗಲಿಲ್ಲ. ಅವರ ವಿರೋಧ ಕಟ್ಟಿಕೊಂಡು ಪತ್ರಿಕೋದ್ಯಮಕ್ಕೆ ಬಂದೆ. ಅವರ ಬೇಕು ಬೇಡಗಳನ್ನು ನೋಡಿಕೊಳ್ಳೋಕೆ ವಿಜಿ ಇದ್ದಾನೆ. ಅವನು ತಂದೆಯ ಮಗನಾಗಲಿ, ನಾನು ದೇಶದ ಮಗನಾಗೋ ನಿಟ್ಟಿನಲ್ಲಿ ಈ ಸಂಘಟನೆಗೆ ಸೇರ್ತೀನಿ. ಪೂರ್ಣಿ? ಅವಳ ಬಗ್ಗೆ ಯೋಚಿಸೋಕೆ ಏನಿದೆ? 20 ವರುಷದಿಂದ ಸಾಕಿ ಸಲಹಿರೋ ತಂದೆಯಿಂದ ದೂರವಾಗಲು ನಿರ್ಧರಿಸಿದ ಮೇಲೆ ಕೆಲವು ದಿನಗಳಿಂದ ಪರಿಚಯವಾಗಿರೋ ಪೂರ್ಣಿ ಬಗ್ಗೆ ತಲೆಕೆಡಿಸಿಕೊಳ್ಳುವುದರಲ್ಲಿ ಅರ್ಥವಿಲ್ಲ. ಇನ್ನೇನೂ ಯೋಚಿಸೋದೂ ಬೇಡ. ನಾಳೆ ಬೆಳಿಗ್ಗೆ ಎದ್ದು ಆಟೋ ನಿಲ್ದಾಣದ ಬಳಿ ಹೋಗೋಣ. ಅದರ ನಂಬರ್ ಏನು? ಹ್ಞಾ KA – 09 F 2817’ ಲೋಕಿ ನಿದ್ರೆಗೆ ಶರಣಾದ.
* * *
ಕನ್ಯಾನ್ವೇಷಣೆಗೆ ಹೊರಟ ಮದುಮಗನನ್ನು ಸ್ನೇಹಿತರು ರೇಗಿಸಿದ ಕಾರಣಕ್ಕೆ ನಾಚಿ ಕೆಂಪಾಗಿ ಹುಡುಗಿಯನ್ನು ನೋಡಲು ನಿಧಾನವಾಗಿ ಕತ್ತೆತ್ತುವಂತೆ ಸೂರ್ಯ ಭೂಮಿಯನ್ನು ನೋಡಲು ಮೋಡಗಳ ಮರೆಯಿಂದ ಹೊರಬರುತ್ತಿದ್ದ, ಮೆಲ್ಲಮೆಲ್ಲಗೆ. ಮನಸ್ಸಿಗೆ ಉತ್ಸಾಹ ತುಂಬುವ ಸೂರ್ಯನ ಪ್ರಥಮ ಕಿರಣಗಳು ಭೂಮಿಯನ್ನು ತಲುಪುವ ಮೊದಲೇ ಲೋಕಿ ಎದ್ದು ಬೆಳಗಿನ ಕಾರ್ಯಗಳನ್ನೆಲ್ಲಾ ಮುಗಿಸಿ ಸ್ನಾನಕ್ಕೆ ಹೋಗಲು ಅಣಿ ಮಾಡಿಕೊಳ್ಳುತ್ತಿದ್ದ. ಮನೆಯೊಳಗಾದ ಶಬ್ದದಿಂದ ಎಚ್ಚರವಾಗಿ ಶಿವಶಂಕರ್ ಹೊರಬಂದರು.
“ಏನೋ ಲೋಕಿ ಇವತ್ತು ಇಷ್ಟು ಬೇಗ ಸ್ನಾನಕ್ಕೆ ಹೋಗ್ತಾ ಇದ್ದೀಯಾ?”
“ಇವತ್ತು ಬೆಳಿಗ್ಗೆ ಏಳು ಘಂಟೆಗೇ ಕ್ಲಾಸಿದೆ”
“ಏಳರ ಕ್ಲಾಸಿಗೆ ಐದುವರೇಗೆ ರೆಡಿಯಾಗಬೇಕಾ?” ಎಂದ್ಹೇಳಿ ಒಳಹೋದರು. ಅವಸರದಲ್ಲಿ ಸಮಯವನ್ನೂ ಗಮನಿಸಿರಲಿಲ್ಲ ಲೋಕಿ. ಸ್ನಾನ ಮುಗಿಸಿ ರೂಮಿಗೆ ಹೋಗಿ ಪುಸ್ತಕ ಹಿಡಿದು ಕುಳಿತ. ಕಣ್ಣು ಎದುರಿಗಿದ್ದ ಗಡಿಯಾರದತ್ತಲೇ ನೆಟ್ಟಿತ್ತು. ಆರೂ ಐವತ್ತಾಗುತ್ತಿದ್ದ ಹಾಗೆ ತಂದೆಗೆ ಹೇಳಿ ಮನೆಯಿಂದ ಹೊರಟ. ಹೊರಗೆ ಬಂದು ಎಡಕ್ಕೆ ನೋಡಿದವರಿಗೆ ದೂರದಲ್ಲಿ ನಿಂತಿದ್ದ ಆಟೋ ಅಸ್ಪಷ್ಟವಾಗಿ ಕಾಣುತ್ತಿತ್ತು. ಈ ಆಟೋ ಇವತ್ತು ನನ್ನ ಜೀವನದ ಮಾರ್ಗವನ್ನೇ ಬದಲಿಸಬಲ್ಲದಾ? ನಂಬರ್ ಕಾಣಿಸಿತು. KA 09 F2817. ಏನೂ ಮಾತನಾಡದೆ ಅದರ ಒಳಗೆ ಕುಳಿತ. ಆಟೋ ಚಾಲಕ ಮೊದಲೇ ಇವನನ್ನು ನೋಡಿದ್ದರಿಂದ ‘ಎಲ್ಲಿಗೆ?’ ಎಂದು ಕೇಳದೆ ಹೊರಟ.
ಸ್ವಲ್ಪ ದೂರ ಹೋದ ಮೇಲೆ ಆಟೋ ವೇಗವನ್ನು ಕೊಂಚ ತಗ್ಗಿಸಿ “ಏನು ತೀರ್ಮಾನ ಮಾಡಿದೆ ಲೋಕಿ?”
“ಸೇರಬೇಕು ಅಂತಿದ್ದೀನಿ”
“ಸರಿಯಾಗಿ ಯೋಚನೆ ಮಾಡಿದ್ದೀಯ ತಾನೆ? ನಂತರ ಬಿಟ್ಟುಬಿಡ್ತೀನಿ ಎಂದರೆ ಆಗೋದಿಲ್ಲ”
“ನಾನಿದುವರೆಗೂ ಯಾವ ವಿಷಯದಲ್ಲೂ ತಪ್ಪು ತೀರ್ಮಾನ ತೆಗೆದುಕೊಂಡಿಲ್ಲ”
“ಒಳ್ಳೇದು. ಮುಂದಿನ ತಿಂಗಳು ಏಳನೇ ತಾರೀಖು ನಿಮ್ಮ ತರಗತಿಯಿಂದ ಮಧುರೈ ಮತ್ತು ಕೊಡೈಕೆನಾಲಿಗೆ ಟ್ರಿಪ್ ಹೋಗ್ತಿದ್ದಾರೆ. ನೀನು ಅವರ ಜೊತೆಗೆ ಹೋಗು. ಅಲ್ಲಿ ಏನೇನು ಮಾಡಬೇಕು ಅನ್ನೋದನ್ನ ಆರನೇ ತಾರೀಖು ನಿನಗೆ ತಿಳಿಸ್ತಾರೆ”
“ಸರ್. ನೀವು ತಪ್ಪು ತಿಳಿದುಕೊಂಡಿದ್ದೀರ. ನಮ್ಮ ಕ್ಲಾಸಿನವರು ಹೋಗ್ತಿರೋದು ಶಿವಮೊಗ್ಗಕ್ಕೆ”
ಚಾಲಕ ಒಮ್ಮೆ ನಕ್ಕು “ನಿನಗೆ ಗೊತ್ತಿರೋದು ನಿನ್ನೆ ಮಧ್ಯಾಹ್ನ ಪೂರ್ಣಿಮಾ ನಿನಗೆ ಹೇಳಿದ ವಿಷಯ. ಆದರೆ ನಾನು ಹೇಳ್ತಿರೋದು ನಿನ್ನೆ ರಾತ್ರಿ ಹುಡುಗಿಯರ ಹಾಸ್ಟೆಲ್ಲಿನಲ್ಲಿ ಅವರು ಮಾಡಿದ ನಿರ್ಧಾರ. ನೀನು ಶಿವಮೊಗ್ಗಕ್ಕೆ ಬರಲ್ಲ ಅಂತ ಹೇಳಿದ್ದೆ. ಇವತ್ತು ಸಿಂಚನಾಳನ್ನು ಭೇಟಿಯಾಗಿ ನಿನ್ನ ಹೆಸರು ಬರೆಸಿಬಿಡು, ಮಧುರೈ ಪ್ರವಾಸಕ್ಕೆ” ಎಂದ್ಹೇಳಿ ಆಟೋ ನಿಲ್ಲಿಸಿ “ಇನ್ನು ನೀನು ಇಳಿಯಬಹುದು. ಬಹುಶಃ ಇನ್ನೇನು ಪ್ರಶ್ನೆಗಳುಳಿದಿಲ್ಲ ಅನ್ಸುತ್ತೆ” ಎಂದ.
ಲೋಕಿ ಕೆಳಗಿಳಿಯುತ್ತಿದ್ದಂತೆ ಆಟೋ ವೇಗವಾಗಿ ಹೊರಟುಹೋಯಿತು. ಲೋಕಿಯ ಮೊಗದಲ್ಲಿ ಈ ಸಂಘಟನೆಯ ಗುಪ್ತಚಾರ ವಿಭಾಗದ ಬಗ್ಗೆ ಮೆಚ್ಚುಗೆ ಬೆರೆತ ಅಚ್ಚರಿಯಿತ್ತು.

No comments:

Post a Comment