Jan 17, 2014

ಆದರ್ಶವೇ ಬೆನ್ನು ಹತ್ತಿ .... ಭಾಗ 15



ಡಾ ಅಶೋಕ್ ಕೆ ಆರ್
ಆದರ್ಶವೇ ಬೆನ್ನು ಹತ್ತಿ ಭಾಗ 14 ಓದಲು ಇಲ್ಲಿ ಕ್ಲಿಕ್ಕಿಸಿ
ಮಾರನೆಯ ದಿನ ಗೌತಮ್ ಕಾಲೇಜಿಗೆ ಬಂದರೂ ತರಗತಿಗಳಿಗೆ ಬರಲಿಲ್ಲ. ಮಧ್ಯಾಹ್ನ ಕ್ಯಾಂಟೀನಿನಲ್ಲಿ ಕುಳಿತಿದ್ದಾಗ ದೂರದಲ್ಲಿ ಸಿಂಚನಾ ಪೂರ್ಣಿಮಾಳ ಜೊತೆ ಕ್ಯಾಂಟೀನಿನ ಕಡೆಯೇ ಬರುತ್ತಿದ್ದುದನ್ನು ನೋಡಿದ. ಎದೆ ಡವಗುಟ್ಟಲಾರಂಭಿಸಿತು. ‘ಆಕೆ ಏನು ಹೇಳಬಹುದು. ದೂರದಿಂದ ಅವಳ ಮುಖ ಬೇರೆ ಕಾಣುತ್ತಿಲ್ಲ. ಅವಳ ಮುಖದಲ್ಲಿ ಕೋಪ? ಊಹ್ಞೂ ಕಾಣ್ತಿಲ್ಲ. ಜೊತೆಯಲ್ಲಿ ಪೂರ್ಣಿಮಾಳನ್ನು ಯಾಕೆ ಕರೆದುಕೊಂಡು ಬರ್ತಾ ಇದ್ದಾಳೆ. ನಾನು ಪತ್ರ ಕೊಟ್ಟಿರೋ ವಿಷಯ ಆಕೆಗೂ ಹೇಳಿಬಿಟ್ಟಿದ್ದಾಳೆ ಅನ್ಸುತ್ತೆ. ಛೇ! ಏನು ಹುಡುಗೀನಪ್ಪ; ಪ್ರೀತಿ ಪ್ರೇಮದಂಥ ಖಾಸಗಿ ವಿಷಯಗಳನ್ನು ಕೂಡ ಆಕೆಗೆ ಹೇಳಿಬಿಟ್ಟಿದ್ದಾಳಲ್ಲ. ಇವರಿಬ್ಬರ ಮಧ್ಯೆ ಗೌಪ್ಯತೆಯೇ ಇಲ್ಲವಾ?’ ಗೌತಮನಿಗೆ ಪೂರ್ಣಿಮಾಳನ್ನು ಕಂಡು ಈರ್ಷ್ಯೆ ಉಂಟಾಯಿತು. ಸಿಂಚನಾ ನನಗಿಂತ ಇವಳಿಗೇ ಆಪ್ತಳಲ್ಲಾ ಅನ್ನೋ ಕಾರಣಕ್ಕೆ.

ಸಿಂಚನಾ, ಪೂರ್ಣಿಮಾಳೊಡನೆ ಕ್ಯಾಂಟೀನಿನ ಒಳಬಂದಳು. ಆಕೆಯ ಮುಖಭಾವ ಎಂದಿನಂತೆ ಇತ್ತು. ಅದರಲ್ಲಿ ಕೋಪವಾಗಲಿ ಖುಷಿಯಾಗಲಿ ಉದ್ವೇಗವಾಗಲಿ ಕಂಡು ಬರಲಿಲ್ಲ. ಇಬ್ಬರೂ ಬಂದು ಗೌತಮ್ ಎದುರಿಗೆ ಕುಳಿತರು.

ಇದೇ ಸಮಯದಲ್ಲಿ ಲೋಕಿ ಗೃಂಥಾಲಯದೊಳಕ್ಕೆ ಹೋದ. ಕಣ್ಣು ಆ ‘ಹುಚ್ಚ’ನನ್ನು ಹುಡುಕಿದವು. ನಾಲ್ಕು ಕಣ್ಣುಗಳು ಲೋಕಿಯ ಮೇಲಿತ್ತು. ‘ಹುಚ್ಚ’ ತನ್ನ ಮಾಮೂಲಿ ಜಾಗದಲ್ಲಿ ಓದುತ್ತಾ ಕುಳಿತಿದ್ದ. ‘ಸದ್ಯ ಬಂದಿದ್ದಾನಲ್ಲ!’ ಇವತ್ತು ಆತನನ್ನು ಮಾತನಾಡಿಸಲೇಬೇಕೆಂದು’ ಅವನತ್ತ ಹೋದ ಲೋಕಿ. ‘ಹುಚ್ಚ’ ಗೊರೂರು ರಾಮಸ್ವಾಮಿ ಅಯ್ಯಂಗಾರ್ ಕನ್ನಡಕ್ಕೆ ಅನುವಾದಿಸಿರುವ ‘ಗಾಂಧೀಜಿಯ ಆತ್ಮಕಥೆ – ನನ್ನ ಸತ್ಯಾನ್ವೇಷಣೆ’ ಓದುತ್ತಿದ್ದ; ಹದಿನಾಲ್ಕನೇ ಬಾರಿ.
* * *
“ಏನು ಗೌತಮ್ ಇದು?” ಆತ ಕೊಟ್ಟ ಪತ್ರವನ್ನು ಟೇಬಲ್ ಮೇಲಿಡುತ್ತಾ ಕೇಳಿದಳು ಸಿಂಚನಾ.

“ಅದು.....ಅದೂ......”ಗೌತಮ್ ತೊದಲುತ್ತಿದ್ದ. ಹಣೆಯ ಮೇಲೆ ಬೆವರಿನ ಸಾಲುಗಳು

ಸಿಂಚನಾ ಪತ್ರವನ್ನು ಟೇಬಲ್ಲಿನ ಮೇಲಿಟ್ಟಿದ್ದು, ಗೌತಮ್ ಅದನ್ನು ನೋಡಿ ಗಾಬರಿಯಾಗಿದ್ದು – ಇದೆಲ್ಲಾ ಪೂರ್ಣಿಮಾಳಿಗೆ ವಿಚಿತ್ರವಾಗಿ ತೋರುತ್ತಿತ್ತು. ಯಾವ ಪತ್ರ ಅದು? ಬಹುಶಃ ಪ್ರೇಮಪತ್ರವೇ ಇರಬೇಕು. ಈ ವಿಷಯವನ್ನು ಇವಳು ನಿನ್ನೆ ರಾತ್ರಿ ಹೇಳಲೇ ಇಲ್ಲವಲ್ಲ.

“ನೋಡು ಗೌತಮ್, ನೀನು ನನ್ನನ್ನು ಪ್ರೀತಿಸ್ತಿರೋದು, ಈ ಪತ್ರ ಕೊಟ್ಟಿದ್ಯಾವುದೂ ತಪ್ಪು ಅಂತ ತೋರೋದಿಲ್ಲ ನನಗೆ. ನನ್ನನ್ನು ಇಷ್ಟಪಟ್ಟಿದ್ದಕ್ಕೆ ಪ್ರೀತಿಸಿದ್ದಕ್ಕೆ ಥ್ಯಾಂಕ್ಸ್. ಜೊತೆಗೆ ಸಾರಿ! ನಾನು ನಿನ್ನನ್ನು ಪ್ರೀತಿಸೋದಿಕ್ಕೆ ಸಾಧ್ಯಾನೇ ಇಲ್ಲ. ನನಗೀಗಾಲೇ ನಿಶ್ಚಿತಾರ್ಥವಾಗಿದೆ. ನಮ್ಮವರು ಬೆಂಗಳೂರಿನಲ್ಲಿ ಓದ್ತಾ ಇದ್ದಾರೆ. ಅವರ ಓದು ಮುಗಿದ ತಕ್ಷಣ ನಾವಿಬ್ಬರು ಮದುವೆಯಾಗ್ತೀವಿ ದಯವಿಟ್ಟು ನಿನ್ನ ಮನಸ್ಸಿನಲ್ಲಿರೋ ಭಾವನೆಗಳನ್ನು ಬದಲಾಯಿಸಿಕೋ, ಪ್ಲೀಸ್”

“ಭಾವನೆಗಳು ನಮ್ಮ ಮಾತು ಎಲ್ಲಿ ಕೇಳ್ತಾವೆ? ಸಿಂಚನಾ, ನಿಶ್ಚಿತಾರ್ಥ ಮಾತ್ರ ಆಗಿರೋದಲ್ವಾ. ಅದೂ ನಿಮ್ಮ ಮನೆಯವರು ನಿಶ್ಚಯ ಮಾಡಿರೋದು. ನಿನಗೆ ನನ್ನ ಮೇಲೆ ಸ್ವಲ್ಪ ಪ್ರೀತಿ ಇದ್ದರೂ ತಿಳಿಸು. ನಿಮ್ಮ ಮನೆಯವರನ್ನು ಒಪ್ಪಿಸಿ ನಾನು ನಿನ್ನನ್ನು ಮದುವೆಯಾಗ್ತೀನಿ”

ಸಿಂಚನಾ ನಕ್ಕು “ತಪ್ಪು ತಿಳಿದಿದ್ದೀಯ ಗೌತಮ್. ನಾನು ಪ್ರೀತಿಸಿದ ಹುಡುಗನೊಟ್ಟಿಗೆ ನನ್ನ ನಿಶ್ಚಿತಾರ್ಥ ಆಗಿರೋದು. ಆತ ಬೇರೆ ಯಾರೋ ಅಲ್ಲ. ನಮ್ಮ ಅತ್ತೆ ಮಗ ವಿವೇಕ್”

ಮತ್ತೇನು ಹೇಳಬೇಕೆಂದು ತೋಚದೆ ಮೇಲೆದ್ದು ಕುರ್ಚಿಯನ್ನು ದೂರ ತಳ್ಳಿ ಹೊರಟುಹೋದ.

“ಏನೇ ಸಿಂಚು ಇದೆಲ್ಲಾ?”

“ಈ ಪತ್ರ ಓದು ನಿನಗೇ ತಿಳಿಯುತ್ತೆ”

ಓದಿ ಮುಗಿಸಿ “ಈ ವಿಷಯಾನೆಲ್ಲ ನನಗೆ ಹೇಳಲೇಇಲ್ಲ” ಹುಸಿಮುನಿಸು ತೋರಿಸುತ್ತಾ ಹೇಳಿದಳು.

“ಕೋಪಿಸ್ಕೋಬೇಡ್ವೇ! ಸುಮ್ಮನೆ ನಿನಗೊಂದು ಸರ್ ಪ್ರೈಸ್ ಕೋಡೋಣ ಅಂತ ಹೇಳಲಿಲ್ಲ. ಪತ್ರ ಎಷ್ಟು ಚೆಂದ ಬರೆದಿದ್ದಾನಲ್ವಾ? ಯಾವುದಾದ್ರೂ ಪತ್ರಿಕೆಗೆ ಕಳುಹಿಸಿದ್ದರೆ ದುಡ್ಡಾದರೂ ಬಂದಿರುತ್ತಿತ್ತೇನೋ”

“ವ್ಯಂಗ್ಯ ಬೇಡ ಕಣೇ. ಪಾಪ! ಅವನ ಮನಸ್ಸಿನಲ್ಲಿರೋದನ್ನ ಬರೆದಿದ್ದಾನೆ. ನಿನ್ನ ಅಭಿಪ್ರಾಯ ಏನೂಂತ ಸ್ಪಷ್ಟವಾಗಿ ತಿಳಿಸಾಯ್ತಲ್ಲ. ಇನ್ನು ಅವನು ನಿನ್ನನ್ನು ಪ್ರೀತಿಸೋದಿಲ್ಲ ಬಿಡು”

“ಏನು? ಅವನು ಕಾಲೇಜಿಗೆ ಬಂದ ಹೊಸತರಲ್ಲಿ ನಿನ್ನನ್ನು ನೋಡಿ ಆಕರ್ಷಿತನಾಗಿದ್ದ ಅನ್ನೋ ಕಾರಣಕ್ಕೆ ಅವನ ಬಗ್ಗೆ ಅಮ್ಮಾವ್ರಿಗೆ ಕರುಣಾರಸ ಉಕ್ಕಿ ಹರೀತಾ ಇರೋ ಹಾಗಿದೆ”

“ಹಾಗೇನಿಲ್ಲ. ನೀನು ಏನೇನೋ ಕಲ್ಪಿಸಿಕೋಬೇಡ”

“ಅದೂ ಸರಿ ಬಿಡು. ಲೋಕಿ ಇದ್ದಾಗ ಬೇರೆಯವರ್ಯಾಕೆ?”

“ಏಯ್ ಸುಮ್ನಿರೆ” ಸುಮ್ಮನಾದಳು ಸಿಂಚನಾ.


ಲೋಕಿ ನೆಪಕ್ಕೊಂದು ಪುಸ್ತಕ ಹಿಡಿದುಕೊಂಡು ‘ಹುಚ್ಚ’ ಇವತ್ತು ಯಾವ ಪುಸ್ತಕ ಓದ್ತಾ ಇದ್ದಾನೆ ಅಂತ ನೋಡಿದ. ಆತ ಗಾಂಧೀಜಿಯ ಆತ್ಮಕಥೆ ಓದುತ್ತಿದ್ದುದನ್ನು ಕಂಡು ಬೇಸರವಾಗಿ ಆತನಿಂದ ಕೊಂಚ ದೂರದಲ್ಲಿದ್ದ ಕುರ್ಚಿಯ ಮೇಲೆ ಕುಳಿತು ತಾನು ತಂದ ಪುಸ್ತಕವನ್ನು ಓದಲಾರಂಭಿಸಿದ. ಕಣ್ಣುಗಳು ಮಾತ್ರ ಅಕ್ಷರದ ಮೇಲೆ ಓಡುತ್ತಿದ್ದವು, ಮನಸ್ಸೆಲ್ಲಾ ಆ ಹುಚ್ಚನ ಕಡೆಗೇ ಇತ್ತು. ‘ಅವತ್ತು ಈತ ಮಾರ್ಕ್ಸಿಸಂ ಬಗೆಗಿನ ಪುಸ್ತಕ ಓದುತ್ತಿದ್ದುದನ್ನು ನೋಡಿ ನಿಜಕ್ಕೂ ಈತ ಯಾರೋ ಕ್ರಾಂತಿಕಾರಿಯೇ ಇರಬೇಕು ಎಂದೆಣಿಸಿದ್ದೆ. ಆದರಿವತ್ತು ಗಾಂಧೀಜಿಯ ಬಗ್ಗೆ ಓದ್ತಾ ಇದ್ದಾರಲ್ಲ. ಗಾಂಧೀಜಿ ಸಾರಿದ ಅಹಿಂಸಾ ಹೋರಾಟ ಈಗಿನ ಕಾಲಕ್ಕೆ ಎಷ್ಟರ ಮಟ್ಟಿಗೆ ಸರಿ ಹೊಂದುತ್ತೆ. ಸ್ವಾತಂತ್ರ್ಯ ಬಂದು ಐವತ್ತು ವರ್ಷಗಳಾಯಿತು, ಅವತ್ತು ಬ್ರಿಟೀಷರು ದಬ್ಬಾಳಿಕೆ ನಡೆಸುತ್ತಿದ್ದರು. ಈಗ ಅದೇ ಕೆಲಸವನ್ನು ನಮ್ಮ ಜನರು ಮಾಡುತ್ತಿದ್ದಾರೆ. ಸ್ವಾತಂತ್ರ್ಯ ನಿಜಕ್ಕೂ ಸಿಕ್ಕಿದೆಯಾ? ನೇತಾಜಿ, ಭಗತ್ ಸಿಂಗ್, ಆಜಾದ್ ರವರ ಮಾರ್ಗದಿಂದ ದೇಶ ಸ್ವತಂತ್ರವಾಗಿದ್ದರೆ ಇವತ್ತಿನ ರೂಪುರೇಷೆ ಉತ್ತಮವಾಗಿರುತ್ತಿತ್ತಾ ಅಥವಾ ಮತ್ತಷ್ಟು ಹದಗೆಡುತ್ತಿತ್ತಾ? ಬ್ರಿಟೀಷರ ದೌರ್ಜನ್ಯದ ವಿರುದ್ಧ ಹೋರಾಡಿದವರೂ ಈಗ ಸುಮ್ಮನಾಗಿಹೋಗಿದ್ದಾರೆ. ಇನ್ನು ನನ್ನ ವಯಸ್ಸಿನವರಿಗಂತೂ ಹೋರಾಟ ಮಾಡೋ ಶಕ್ತೀನೇ ಇಲ್ಲವಾಗಿದೆ. ಅಷ್ಟಕ್ಕೂ ಆತ ಗಾಂಧೀಜಿಯ ಆತ್ಮಚರಿತ್ರೆ ಓದುವುದರಲ್ಲಿ ತಪ್ಪೇನಿದೆ. ಬಹುಶಃ ಭಾರತ ಮತ್ತು ವಿಶ್ವ ಕಂಡ ಅತಿದೊಡ್ಡ ಕ್ರಾಂತಿಕಾರಿ ಎಂದರೆ ಗಾಂಧೀಜಿಯೇ. ‘ಹುಚ್ಚ’ನನ್ನು ಮಾತನಾಡಿಸದೇ ಬಂದುಬೆಟ್ಟೆನಲ್ಲಾ? ಈಗಲಾದರೂ ಅವನನ್ನು ಮಾತನಾಡಿಸೋಣ ಎಂದುಕೊಂಡು ಅವನತ್ತ ತಿರುಗಿದ. ಆತ ಬೇರೆ ಪುಸ್ತಕವನ್ನು ತೆಗೆದುಕೊಳ್ಳಲು ಪುಸ್ತಕದ ರಾಕುಗಳ ಬಳಿ ಹೋದ. ‘ಇದೇ ಸರಿಯಾದ ಸಮಯ’ ಎಂದು ಲೋಕಿ ಆತನನ್ನು ಹಿಂಬಾಲಿಸಿದ.

ಅಕ್ಕ ಪಕ್ಕ ಎತ್ತರವಾದ ಎರಡು ರ್ಯಾಕುಗಳಿದ್ದವು. ಅವರೆಡರ ಮಧ್ಯೆ ಇಬ್ಬರು ವ್ಯಕ್ತಿಗಳು ನಿಲ್ಲುವಷ್ಟು ಜಾಗವಿತ್ತು. ಆ ಮೂಲೆಯಲ್ಲೊಬ್ಬ ಮೂವತ್ತರ ಆಸುಪಾಸಿನ ವ್ಯಕ್ತಿ ನಿಂತಿದ್ದ. ಈ ಮೂಲೆಯಲ್ಲಿ ಸಣಕಲು ವ್ಯಕ್ತಿಯೊಬ್ಬ ನಿಂತಿದ್ದ. ಮಧ್ಯದಲ್ಲಿ ‘ಹುಚ್ಚ’ ಯಾವುದೋ ಪುಸ್ತಕ ಹುಡುಕುವುದರಲ್ಲಿ ಮಗ್ನನಾಗಿದ್ದ. ಲೋಕಿ ಸಣಕಲು ವ್ಯಕ್ತಿಯನ್ನು ದಾಟಿಕೊಂಡು ಬಂದು ಹುಚ್ಚನ ಬಳಿ ನಿಂತು ಪುಸ್ತಕಗಳ ಮೇಲೆ ಕೈಯಾಡಿಸುತ್ತಿದ್ದ ‘ಹೇಗೆ ಮಾತು ಪ್ರಾರಂಭಿಸೋದು?’ ಎಂದು ಯೋಚಿಸುತ್ತಾ...

ಹುಚ್ಚ ಸಣಕಲು ವ್ಯಕ್ತಿಯ ಕಡೆಗೆ ನೋಡಿದ. ಆತ ‘ಯಾರೂ ನೋಡ್ತಾ ಇಲ್ಲ’ ಎಂಬಂತೆ ಸನ್ನೆ ಮಾಡಿದ. ‘ಹುಚ್ಚ’ ಫಕ್ಕನೆ ಲೋಕಿ ಕಡೆ ತಿರುಗಿ “ಏನು ಲೋಕೇಶ್, ನನ್ನನ್ನು ಕಂಡರೆ ನಿನಗ್ಯಾಕೆ ಇಷ್ಟೊಂದು ಕುತೂಹಲ?”

ಇದ್ದಕ್ಕಿದ್ದಂತೆ ‘ಹುಚ್ಚ’ ತನ್ನನ್ನು ಮಾತನಾಡಿಸಿದ್ದು, ಅದೂ ತನ್ನ ಹೆಸರು ಹಿಡಿದು ಕರೆದದ್ದು – ಲೋಕಿ ಗರಬಡಿದವನಂತೆ ನಿಂತುಬಿಟ್ಟ. ‘ಹುಚ್ಚ’ ಪುಸ್ತಕ ಹುಡುಕುವುದರಲ್ಲೇ ತೊಡಗಿದ್ದ.
 

No comments:

Post a Comment