Jul 31, 2012

ಒಂದು ತಪ್ಪನ್ನು ಮತ್ತೊಂದು ತಪ್ಪಿನಿಂದ ಸಮರ್ಥಿಸಿಕೊಳ್ಳುತ್ತ....

ಮಂಗಳೂರಿನ ಪಡೀಲಿನಲ್ಲಿ ನಡೆದ ಘಟನೆಯ ಬಗ್ಗೆ ನೀವೀಗಾಗಲೇ ಬಹಳಷ್ಟು ಓದಿ ನೋಡಿರುತ್ತೀರಿ. ಹಿಂದೂ ಜಾಗರಣ ವೇದಿಕೆ ಸಂಸ್ಕೃತಿಯ ಹೆಸರಿನಲ್ಲಿ ನಡೆಸಿದ್ದು ಕ್ಷಮಿಸಲಾಗದ ತಪ್ಪು. ಇದ್ದ ಹುಡುಗರಲ್ಲಿ ಅತಿ ಹೆಚ್ಚು ಹೊಡೆಸಿಕೊಂಡವನು ಮುಸ್ಲಿಮನಂತೆ ಕಾಣುತ್ತಿದ್ದನೆನ್ನುವುದೇ ಇವರ ಪುಂಡಾಟಕ್ಕೆ ಕಾರಣವಾಯಿತಾ? ಆ ಹುಡುಗ ಕೂಡ ದಕ್ಷಿಣ ಕನ್ನಡದಲ್ಲಿ ಬಿಜೆಪಿಯನ್ನು ಹಿಂದಿನಿಂದಲೂ ಬಹಳವಾಗಿ ಬೆಂಬಲಿಸುತ್ತಿರುವ ಹಿಂದು ಧರ್ಮದ ಒಂದು ಜಾತಿಗೆ ಸೇರಿದವನು! ಯಾವುದೇ ಧರ್ಮದ ಮತೀಯವಾದ ಅಪಾಯಕಾರಿ. ದುರದೃಷ್ಟವಶಾತ್ ದಕ್ಷಿಣ ಕನ್ನಡದಲ್ಲಿ ಹಿಂದು ಮುಸ್ಲಿಂ ಸಂಘಟನೆಗಳು ಮತೀಯವಾದದಲ್ಲಿ ತೊಡಗುತ್ತ ದಕ್ಷಿಣ ಕನ್ನಡದ ನೈಜ ಸಮಸ್ಯೆಗಳನ್ನೇ ಮರೆಸುತ್ತಿವೆ. ಈಗ ನಡೆದಿರುವ ಪುಂಡಾಟಿಕೆಗಳಿಗಿಂತಲೂ ಹೆಚ್ಚಿನ ಅಪಾಯಕಾರಿ ಪ್ರವೃತ್ತಿ ಈ ಮತೀಯವಾದಿಗಳನ್ನು ಸಮರ್ಥಿಸಿಕೊಳ್ಳುತ್ತಿರುವ ವಿದ್ಯಾವಂತರೆನ್ನಿಸಿಕೊಂಡವರಲ್ಲಿ ಕಾಣಿಸುತ್ತಿರುವುದು ಬರಲಿರುವ ಕೆಟ್ಟ ದಿನಗಳ ಮುನ್ಸೂಚನೆಯಾ?


ಅಂತರ್ಜಾಲದ ಪರಿಣಾಮವಾಗಿ ಪ್ರತಿಯೊಬ್ಬರಿಗೂ ತಮ್ಮ ಅಭಿಪ್ರಾಯ ವ್ಯಕ್ತಪಡಿಸುವುದು ಸುಲಭವಾಗಿದೆ. ಫೇಸ್ ಬುಕ್ಕಿನಲ್ಲಿ, ವಿವಿಧ ಬ್ಲಾಗುಗಳಲ್ಲಿ, ಹೊಸ ದಿಗಂತದಂತಹ ಪತ್ರಿಕೆಗಳಲ್ಲಿ ಪಡೀಲಿನ ಘಟನೆಯ ಬಗ್ಗೆ ಬಹುತೇಕ ವಿದ್ಯಾವಂತರೇ ಬರೆಯುತ್ತಿರುವ ಲೇಖನ, ಕಮೆಂಟುಗಳನ್ನು ಗಮನಿಸಿದರೆ ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿಯೇ ದೋಷವಿದೆಯೇನೋ ಎಂಬ ಅನುಮಾನ ಕಾಡುತ್ತದೆ. "ಮಂಡ್ಯದಲ್ಲಿ 'ಹಿಂದೂ' ಹೆಣ್ಣುಮಗಳನ್ನು ನಾಲ್ವರು 'ಮುಸ್ಲಿಮರು' ಚಲಿಸುವ ರೈಲಿನಿಂದ ಹೊರತಳ್ಳಿದುದನ್ನು ಯಾಕೆ ದೊಡ್ಡ ಸುದ್ದಿ ಮಾಡಲಿಲ್ಲ? ಅಸ್ಸಾಮಿನಲ್ಲಿ ಬೋಡೋ ಹಿಂದೂಗಳನ್ನು ಬಾಂಗ್ಲಾ ಮುಸ್ಲಿಮರು ಶೋಷಿಸುತ್ತಿರುವುದ್ಯಾಕೆ?" ಎಂಬಂಥಹ ಪ್ರಶ್ನೆಗಳನ್ನು ಕೇಳುತ್ತಿದ್ದಾರೆ!

ಇಂಥ ಮನೋಭಾವ ಹೊಸದಲ್ಲ. ನರೇಂದ್ರ ಮೋದಿಯ ಅಪರೋಕ್ಷ ನೇತೃತ್ವದಲ್ಲಿ ನಡೆದ ನರಮೇದವನ್ನು ಪ್ರಸ್ತಾಪಿಸಿದಾಗ ಮೋದಿ ಬೆಂಬಲಿಗರು ಮೋದಿಯ ಅಭಿವೃದ್ಧಿ ಹಿಂದೆ ನಡೆದ ಸಿಖ್ ಹಿಂಸಾಚಾರದ ಬಗ್ಗೆ ಮಾತನಾಡುತ್ತಾರೆ, ಮೋದಿಯನ್ನು ಖಂಡಿಸಿ ಮಾತನಾಡಿದವನು ಕಮ್ಯುನಿಷ್ಟನಾಗಿದ್ದರೆ ಮಾವೋ ನಡೆಸಿದ ಸಾಂಸ್ಕೃತಿಕ ಕ್ರಾಂತಿ ಹೆಸರಿನ ಹತ್ಯಾಕಾಂಡವನ್ನು ಕೆದಕುತ್ತ ಮೂದಲಿಸುತ್ತಾರೆ. ದಾವೂದ್ ಇಬ್ರಾಹಿಂ ಪ್ರಾಯೋಜಿಸಿದ ಮುಂಬೈ ಬಾಂಬ್ ಸ್ಪೋಟವನ್ನು ಖಂಡಿಸಿದರೆ ಅದಕ್ಕೆ ಕಾರಣವಾದ ಬಾಬರಿ ಮಸೀದಿ ದ್ವಂಸವನ್ನು ನೆನಪಿಸುತ್ತಾರೆ! ಈ ಸಮರ್ಥನೆಗಳಿಗೆ ಕೊನೆಯಿದೆಯೇ? ಒಂದು ತಪ್ಪನ್ನು ತಪ್ಪಾಗಿ ಕಾಣುತ್ತ ಅದರ ಮೂಲಕಾರಣವನ್ನು ಹುಡುಕುವುದು ಬೇರೆ, ಆದರೆ ತಪ್ಪನ್ನು ಇನ್ನೊಂದು ತಪ್ಪಿನಿಂದ ಸಮರ್ಥಿಸಿಕೊಳ್ಳುವುದು ಎಷ್ಟರ ಮಟ್ಟಿಗೆ ಸಮರ್ಥನೀಯ?

ಇನ್ನು ಮಂಡ್ಯದಲ್ಲಿ ನಡೆದ ಘಟನೆಯನ್ನು ಅವಲೋಕಿಸಿದರೆ ಅಲ್ಲಿ ಅಪರಾಧಿಗಳನ್ನು ತತ್ ಕ್ಷಣ ಇಪ್ಪತ್ತು ನಿಮಿಷದೊಳಗಾಗಿ ಬಂಧಿಸಲಾಯಿತು. ಯಾರೊಬ್ಬರಿಗೂ ಇನ್ನೂ ಜಾಮೀನು ಸಿಕ್ಕಿಲ್ಲ. ಪತ್ರಿಕೆಗಳಲ್ಲಿ ಫಾಲೋ ಅಪ್ ವರದಿಗಳೂ ಪ್ರಕಟವಾದವು. ಇದೆಲ್ಲದರ ಪರಿಣಾಮವಾಗಿ ಇಂದು ರೈಲ್ವೆ ಇಲಾಖೆ ತನ್ನ ಪ್ರಕಟಣೆಯಲ್ಲಿ ಮಹಿಳೆಯರಿಗಾಗಿಯೇ ಮತ್ತೊಂದು ಬೋಗಿಯನ್ನು ಮೀಸಲಿರುಸುವುದಾಗಿ ತಿಳಿಸಿದೆ. ಮಹಿಳಾ ಸಹಾಯವಾಣಿಯನ್ನು ಆರಂಭಿಸಿದೆ. ಮಂಡ್ಯ ಮತ್ತು ಮಂಗಳೂರಿನಲ್ಲಿ ನಡೆದ ಘಟನೆಗಳನ್ನು ಅವಲೋಕಿಸಿದಾಗ ಕಂಡುಬರುವ ಬಹುದೊಡ್ಡ ವ್ಯತ್ಯಾಸವೆಂದರೆ ಪೋಲೀಸರ ಮತ್ತು ರಾಜಕಾರಣಿಗಳ ಪಾತ್ರ. ಮಂಡ್ಯದಲ್ಲಿ ಅಪರಾಧಿಗಳನ್ನು ಬಂಧಿಸುವಲ್ಲಿ ಯಾವುದೇ ವಿಳಂಬವೂ ಆಗಿಲ್ಲ, ಅಪರಾಧಿಗಳನ್ನು ಜಾಮೀನಿನ ಮೇಲೆ ಬಿಟ್ಟು ಬಿಡುವ ಕೆಲಸವೂ ನಡೆದಿಲ್ಲ. ಇವೆರಡೂ ಮಂಗಳೂರಿನಲ್ಲಿ ನಡೆಯಿತಲ್ಲ ಯಾಕೆ? ಪೋಲೀಸರು ತಮ್ಮ ಕರ್ತವ್ಯವನ್ನು ನಿಷ್ಟೆಯಿಂದ ನಿರ್ವಹಿಸುವ ವಾತಾವರಣ ಇದೆಯೇ ಮಂಗಳೂರಿನಲ್ಲಿ?

ಕೊನೆಗೆ ಅಸ್ಸಾಮಿನ ವಿಷಯ. ಭಾರತದ ಈಶಾನ್ಯ ಭಾಗದ ರಾಜ್ಯಗಳಾದ ಅಸ್ಸಾಂ, ಮಿಜೋರಾಂ, ಅರುಣಾಚಲ ಪ್ರದೇಶ, ಮೇಘಾಲಯ, ಮಣಿಪುರ, ತ್ರಿಪುರಾದ ಸುದ್ದಿ ಘಟನೆಗಳು ಭಾರತದ ಮುಖ್ಯ ಭಾಗದ ಜನರಿಗೆ ಯಾವತ್ತೂ ಪ್ರಮುಖವಾಗಿ ಕಂಡಿಲ್ಲ. ಅರುಣಾಚಲ ಪ್ರದೇಶದಲ್ಲಿ ಚೀನಾದ ದುರ್ವರ್ತನೆ, ಅಸ್ಸಾಮಿನಲ್ಲಿ ಬಾಂಗ್ಲ ನುಸುಳುಕೋರರ ಸಮಸ್ಯೆಯಿಂದ ಒಂದಷ್ಟು ಸುದ್ದಿ ಮಾಡುತ್ತವೆಯೇ ಹೊರತು ಅಲ್ಲಿನ ಇತರ ಸಮಸ್ಯೆಗಳ ಬಗ್ಗೆ ಮಾಧ್ಯಮದ್ದೂ ಸೇರಿದಂತೆ ನಮ್ಮೆಲ್ಲರದೂ ದಿವ್ಯ ಮೌನ. ಈ ಕಾರಣ ಮತ್ತಲವು ಐತಿಹಾಸಿಕ ಕಾರಣಗಳಿಂದಾಗಿ ಅಲ್ಲಿನ ಜನರು ದಶಕಗಳಿಂದ ಪ್ರತ್ಯೇಕ ರಾಷ್ಟ್ರಕ್ಕಾಗಿ ಶಸ್ತ್ರಾಸ್ತ್ರ ಹೋರಾಟ ಕೈಗೊಂಡಿದ್ದು ಸತ್ಯ, ಅದನ್ನು ತನ್ನ ಬಲಾಡ್ಯ ಸೇನೆಯಿಂದ ಭಾರತ ಹತ್ತಿಕ್ಕಿರುವುದೂ ಸತ್ಯ. ಈಗಲೂ ಅಲ್ಲಿ ಅನೇಕ ಪ್ರತ್ಯೇಕವಾದಿ ಸಂಘಟನೆಗಳು ಚಾಲ್ತಿಯಲ್ಲಿವೆ ಆದರೆ ಇವ್ಯಾವೂ ಕಾಶ್ಮೀರದಷ್ಟು ಸದ್ದು ಮಾಡುವುದಿಲ್ಲ. ಕಾಶ್ಮೀರದ ವಿಷಯದಲ್ಲಿ ಶತ್ರು ರಾಷ್ಟ್ರವನ್ನು ದೂಷಿಸಬಹುದು; ಈ ರಾಜ್ಯಗಳಲ್ಲಿ ದೂಷಿಸಬೇಕಾಗಿರುವುದು ಯಾರನ್ನು? ನಮ್ಮದೇ ಪ್ರಜೆಗಳನ್ನು ದೂಷಿಸಬೇಕೆ ಅಥವಾ ಅವರಿಗೆ ಭಾರತವೆಂಬೋ ದೇಶದಲ್ಲಿ ಇರಲು ಇಷ್ಟವಿಲ್ಲದಂತೆ ಮಾಡಿದ ನಮ್ಮನ್ನೇ ದೂಷಿಸಿಕೊಳ್ಳಬೇಕೇ?

ಸೋನಿ ಸೋರಿ
ಇವೆಲ್ಲ ಸಂಘಟನೆಗಳು ವ್ಯಕ್ತಿಗಳು ನಡೆಸಿದ ಕ್ರೌರ್ಯದ ಮಾತಾಯಿತು. ಸರಕಾರಿ ಕ್ರೌರ್ಯ? ಸೋನಿ ಸೋರಿ ಎಂಬ ಆದಿವಾಸಿ ಹೆಣ್ಣುಮಗಳಿಗೆ ಮಾವೋವಾದಿಯೆಂಬ ಪಟ್ಟ  ಕಟ್ಟಿ ಬಂಧಿಸಲಾಗುತ್ತದೆ. ವಿಪರ್ಯಾಸವೆಂದರೆ ಆಕೆಯ ತಂದೆಯನ್ನು ಪೋಲೀಸ್ ಮಾಹಿತಿದಾರನೆಂಬ ಆರೋಪ ಹೊರಿಸಿ ಮಾವೋಗಳೇ ಹಲ್ಲೆ ನಡೆಸುತ್ತಾರೆ. ಇಂಥ ಖೊಟ್ಟಿ ಬಂಧನಗಳು ನಕ್ಸಲ್ ಪ್ರದೇಶಗಳಲ್ಲಿ ಹೊಸದಲ್ಲ. ಬಂಧನದ ನಂತರ ನಡೆದಿದ್ದು ನಿಜವಾದ ನಾವು ಊಹಿಸಲಾಗದ ಕ್ರೌರ್ಯ. ಪೋಲೀಸ್ ಅಧಿಕಾರಿಗಳು ಆಕೆಗೆ ದೈಹಿಕವಾಗಿ ಹಿಂಸಿಸುತ್ತಾರೆ. ಆಕೆಗೆ ಮರ್ಮಾಂಗದ ಒಳಗೆ ಕಲ್ಲು ತುರುಕುವ ಹೀನ ಕೆಲಸ ಮಾಡುತ್ತಾರೆ. ಅದನ್ನು ಪತ್ರಿಕೆಗಳಾಗಲೀ ಮಾಧ್ಯಮದವಾರಗಲೀ ಎಷ್ಟರಮಟ್ಟಿಗೆ ಬ್ರೇಕಿಂಗ್ ನ್ಯೂಸ್ ಮಾಡಿದ್ದಾರೆ? ಕೆಲವು ಪತ್ರಿಕೆಗಳು, ಮಾಧ್ಯಮದವರು ಅದನ್ನು ಪ್ರಚುರಪಡಿಸಿದರೂ ಈ ಸಂಸ್ಕೃತಿ ರಕ್ಷಕರೆಂಬ ದೇಶಭಕ್ತರು ನಕ್ಸಲರಿಗೆ ಇನ್ನೇನು ಮಾಡಬೇಕೆಂದು ಅಸಡ್ಡೆಯಿಂದಲೇ ಮಾತನಾಡುತ್ತಾರೆ. ಇನ್ನು ವಿಪರ್ಯಾಸದ ಸಂಗತಿಯೆಂದರೆ ಸುಪ್ರೀಂಕೋರ್ಟಿನಲ್ಲಿ ಸೋನಿ ಸೂರಿಯ ಕೇಸಿನ ವಿಚಾರಣೆ ನಡೆಯುತ್ತಿರುವಾಗ, ಆಕೆ ಮೇಲೆ ನಡೆದ ಲೈಂಗಿಕ ಹಲ್ಲೆಗಳು ನಿಜವೆಂದು ವೈದ್ಯಕೀಯ ಪರೀಕ್ಷೆಯಿಂದ ಸಾಬೀತಾದ ನಂತರವೂ ಆ ಘಟನೆ ನಡೆದಾಗ ಎಸ್.ಪಿ ಆಗಿದ್ದ ಅಂಕಿತ್ ಗರ್ಗನಿಗೆ ಗ್ಯಾಲಂಟ್ರಿ ಪದಕ ನೀಡುತ್ತದೆ! ಇಲ್ಲಿ ಹಲ್ಲೆಗೊಳಗಾಗಿದ್ದು ಆದಿವಾಸಿ ಮಹಿಳೆ, ಹಲ್ಲೆ ನಡೆಸಿದ್ದು ಹಿಂದೂ. ಈ ಘಟನೆಯನ್ನು ಮದ್ದೂರಿನ ದುರ್ಘಟನೆಗೆ ಅಸ್ಸಾಮಿನಲ್ಲಿ ನಡೆಯುತ್ತಿರುವ ಕ್ರೌರ್ಯಕ್ಕೆ ಸಮರ್ಥನೆಯಾಗಿ ಬಳಸಲಾದೀತೇ?

ಮಂಗಳೂರು, ಮದ್ದೂರು, ಅಸ್ಸಾಂ, ಸೋನಿ ಸೋರಿ -  ಈ ಎಲ್ಲ ಘಟನೆಗಳೂ ಖಂಡಿಸಲು ಅರ್ಹವಾದದ್ದೇ. ಯಾವುದೇ ಕೋಮಿನವರು ಇದರಲ್ಲಿ ಪಾಲ್ಗೊಳ್ಳಲಿ ಅವರು ಶಿಕ್ಷಾರ್ಹರೇ. ಆದರೆ ಒಂದು ದುರ್ಘಟನೆಯ ಆಶ್ರಯದಲ್ಲಿ ಇನ್ನೊಂದು ದುರ್ಘಟನೆಯನ್ನು ಮರೆಮಾಚುವ ನೀಚ ವಂಚಕತನವ್ಯಾಕೆ?

1 comment:

  1. ಲೇಖನ ಸಮರ್ಥವಾಗಿದೆ. ಒಂದು ತಪ್ಪನ್ನ ಇನ್ನೊಂದರಿಂದ ಸಮರ್ಥಿಸುವುದು ತಪ್ಪು ಮಾಡಿದವರ ಜಾಯಮಾನ. ಯಡ್ಡಿ ಯಕ್ಕಾಮಕ್ಕಾ ತಿಂದು ಸಿಕ್ಕಿ ಹಾಕಿಕೊಂಡಾಗಲೂ ಅವನೂ ಮತ್ತವನ ಅನುಯಾ(ನಾ)ಯಿಗಳೂ ಸಹ "ಅವರು ತಿಂದಿಲ್ವಾ? ಇವರು ತಿಂದಿಲ್ವಾ?" ಎಂದು ಹೇಳಿ ಸಮರ್ಥಿಸಿಕೊಂಡಿದ್ದನ್ನು ನೋಡಿಲ್ಲವೇ ? ಅಷ್ಟ್ಯಾಕೆ, ಪೇಜಾವರ ಸ್ವಾಮಿಯೇ "ಯಡಿಯೂರಪ್ಪ ಮಾತ್ರ ಅಲ್ಲ, ಎಲ್ಲರೂ ದುಡ್ಡು ಮಾಡಿದ್ದಾರೆ, ಇವರು ಅಪರಾಧಿಯಲ್ಲ, ಆರೋಪಿ ಅಷ್ಟೇ" ಎಂದೆಲ್ಲಾ ಮಾತಾಡಿ ಬಣ್ಣ ಕೆಡಿಸಿಕೊಳ್ಳಲಿಲ್ಲವೇ ? ಅದೇ ರೀತಿ ಈಗ ಹೆಣ್ಣಿನ ಮೇಲೆ ಕೈ ಮಾಡಿರುವವರನ್ನೂ ಸಮರ್ಥಿಸುವ ಮೂಢರೂ ಇದ್ದಾರೆ.
    ಅಲ್ಲಿದ್ದ ಹುಡುಗಿಯರು ಸಭ್ಯ ಉಡುಗೆ ಹಾಕಿರಲಿಲ್ಲ ಎಂದೆನ್ನುತ್ತಾರೆ. ಹುಡುಗಿಯರು ಇದ್ದದ್ದು ಸ್ಟೇ ಹೋಮ್ ಒಳಗೆ, ಅಲ್ಲಿ ಹೇಗಿದ್ದರೆ ಇವರಿಗೆ ಏನಂತೆ ? ಅಷ್ಟು ಅಸಭ್ಯವಾಗಿದ್ದರೆ ಪೊಲೀಸ್ ದೂರು ನೀಡಬೇಕಾಗಿತ್ತು. ತಾವೇ ಹಿಡಿದು ಪೊಲೀಸರಿಗೆ ಒಪ್ಪಿಸಿದರೂ ಜನರ ಬೆಂಬಲ ಸಿಗುತ್ತಿತ್ತು. ತಾನು ಸಹ್ಯ ತಿಂದು ಇನ್ನೊಬ್ಬ ತಿಂದಿಲ್ಲವೇ ಎಂದು ಕೇಳುತ್ತಿರುವುದು ಇನ್ನೂ ಅಸಹ್ಯವಾಗಿ ಕಾಣಿಸುತ್ತಿದೆ.

    ReplyDelete