ಅದು ಹುಟ್ಟುವುದು ನೋವಿನ ಛೀತ್ಕಾರಗಳಲ್ಲಿ...!!
ಕು.ಸ.ಮಧುಸೂದನ ರಂಗೇನಹಳ್ಳಿ ಯವರ’ದುರಿತಕಾಲದ ದನಿ’ ಹೆಸರೇ ಹೇಳುವಂತೆ ವರ್ತಮಾನದ ವಾಸ್ತವವನ್ನೆಲ್ಲಾ ಸಾರಾಸಗಟಾಗಿ, ತುಸು ಕಟುವೇ ಎನಿಸುವ ಶೈಲಿಯಲ್ಲಿ ಭಟ್ಟೀ ಇಳಿಸಿದ ಸಂಕಲನ.ಈ ದನಿಯ ಹಿಂದಿನ ಕಾಳಜಿ ದೀನದಲಿತರ ಕಷ್ಟ ಸಂಕಷ್ಟಗಳಿಗೆ ಮಿಡಿಯುವ ಹೃದಯದ ಸ್ವಚ್ಛ ಶುದ್ಧ ಮಾನವೀಯತೆ ಮನಕಲಕುವಂತಿದೆ.
‘ನನ್ನ ಕವಿತೆ ಕುರಿತಂತೆ’ ಎ಼ಂದು ತಮ್ಮ ಕವಿತೆಗಳ ಬಗ್ಗೆ ತಮ್ಮದೇ ಶೈಲಿಯ ವಿವರಣೆಯೇ ಅದ್ಭುತವಾಗಿದೆ.. ಅವರ ಮಾತುಗಳಲ್ಲೇ ಹೇಳಬೇಕೆಂದರೇ...
"ಒಂದು ಕಡೆ ಜಾಗತೀಕರಣವು ನಮ್ಮ ಸ್ಥಳೀಯ ಸಂಸ್ಕೃತಿಯನ್ನು ನಾಶಪಡಿಸುತ್ತ ನೆಡೆದಿದ್ದರೇ, ಇನ್ನೊಂದೆಡೆ ಮತೀಯ ಮೂಲಭೂತವಾದ ನಮ್ಮ ಬಹುಸಂಸ್ಕೃತಿಯ ಪರಂಪರೆಯ ಮನೆಯ ಹಂದರವನ್ನು ಕೆಡವಲು ಹೊಂಚು ಹಾಕುತ್ತಿದೆ, ಪ್ರಭುತ್ವ ಧರ್ಮದ ಆಸರೆಯೊಂದಿಗೆ ಅಧಿಕಾರ ಚಲಾಯಿಸುವ ಮಾತಾಡುತ್ತಿದ್ದರೇ ಧರ್ಮವೋ ಸ್ವತಃ ತಾನೇ ಪ್ರಭುತ್ವವಾಗುವ ದಿಸೆಯಲ್ಲಿ ತನ್ನನ್ನು ಅಣಿಗೊಳಿಸಿಕೊಳ್ಳುತ್ತಿದೆ. ಹೀಗೆ ಬಂಡವಾಳ, ಧರ್ಮ , ಪ್ರಭುತ್ವಗಳು ಒಟ್ಟಾಗಿ ಛಿದ್ರಗೊಳಿಸಲು ಹೊರಟಿರುವ ಒಂದು ಸಮಾಜವನ್ನು ಎಚ್ಚರಿಕೆಯ ಸ್ಥಿತಿಯಲ್ಲಿಡಲು ಸಾಹಿತ್ಯ ಮತ್ತು ಸೃಜನಶೀಲ ಕಲಾಪ್ರಕಾರಗಳು ಮುಂದಾಗಬೇಕಿದೆ.""