ಚಿತ್ರಕಲಾವಿದೆ, ವಿನ್ಯಾಸಕಿ, ರಂಗನಟಿಯಾಗಿದ್ದ ಅಮೃತಾ ರಕ್ಷಿದಿ ತನ್ನ ಬದುಕಿನ ಅನುಭವಗಳನ್ನು "ಅಮೃತ ಯಾನ" ಎಂಬ ಹೆಸರಿನಲ್ಲಿ ಪುಟಗಳ ಮೇಲಿಳಿಸಿದ್ದಾಳೆ. ಆತ್ಮಕತೆ ಬರೆದಾಯ್ತಲ್ಲ ಇನ್ನೇನು ಕೆಲಸ ಎನ್ನುವಂತೆ ತುಂಬಾ ಚಿಕ್ಕ ವಯಸ್ಸಿಗೇ ಅನಾರೋಗ್ಯದಿಂದ ಅಸುನೀಗಿಬಿಟ್ಟಳು ಅಮೃತಾ. ಅವಳ ಅನುಪಸ್ಥಿತಿಯಲ್ಲಿ ಐದು ಸಂಪುಟಗಳ "ಅಮೃತ ಯಾನ" ಇದೇ ಭಾನುವಾರ (19/11/2017) ಬೆಂಗಳೂರಿನ ಚಿತ್ರಕಲಾ ಪರಿಷತ್ತಿನ ಬೇಸ್ ಮೆಂಟ್ ಗ್ಯಾಲರಿಯಲ್ಲಿ ಬಿಡುಗಡೆಗೊಳ್ಳಲಿದೆ. ಬಿಡುವು ಮಾಡಿಕೊಂಡು ಬನ್ನಿ.
ಅಮೃತಯಾನದ ಒಂದು ಪುಟ್ಟ ಅಧ್ಯಾಯ ಹಿಂಗ್ಯಾಕೆಯ ಓದುಗರಿಗಾಗಿ.
ಅಜ್ಜಮನೆ
ಅಣ್ಣಯ್ಯನಿಗೆ ಅಕ್ಟೋಬರ್ ರಜೆ ಪ್ರಾರಂಭವಾಗಿತ್ತು. ಮಳೆಗಾಲ ಕಳೆದು ಬಿಸಿಲು ಬಂದಿತ್ತು. ಈ ನಡುವೆ ಅಪ್ಪ ದೇವಾಲದ ಕೆರೆಯಲ್ಲಿನ ಕೆಲಸವನ್ನು ಬಿಟ್ಟು ಹಾರ್ಲೆಗೆ ಕೆಲಸಕ್ಕೆ ಸೇರಿದ್ದರು. ಒಮ್ಮೆ ಅಜ್ಜಮನೆಗೆ ಹೋಗಿಬರಬೇಕೆಂದು ಅಮ್ಮ ಅಪ್ಪನಲ್ಲಿ ಹೇಳುತ್ತಿದ್ದುದು ಅಣ್ಣಯ್ಯ ಮತ್ತು ಅಮೃತಾರ ಕಿವಿಗೆ ಬದ್ದಿತ್ತು. ರಜೆ ಬಂದ ಕೂಡಲೇ ಅಣ್ಣಯ್ಯ ಮತ್ತು ಅಮೃತಾ “ಅಮ್ಮ ಅಜ್ಜಮನೆಗೋಗದು ಯಾವಾಗ?” ಎಂದು ಗೋಗರೆಯಲಾರಂಭಿಸಿದರು. ಆದರೆ ಅಮ್ಮ “ಅಪ್ಪನ ಕೇಳ್ಬೇಕಷ್ಟೆ” ಎನ್ನುತ್ತಿದ್ದಳು. ಅಜ್ಜಿಯನ್ನು ಬಿಟ್ಟು ಅಮ್ಮನಿಗೆ ತಕ್ಷಣ ಹೊರಡಲಾಗುತ್ತಿರಲಿಲ್ಲ. ಅಮ್ಮ ಇಲ್ಲದಿದ್ದಾಗ ಒಬ್ಬರೇ ಮನೆಕೆಲಸಗಳನ್ನು ಮಾಡಲು ಅಜ್ಜಿಗೆ ಆಗುತ್ತಿರಲಿಲ್ಲ. ಅಪ್ಪ ಯಾವಾಗಲೂ ಹೊರಗಡೆ ದುಡಿಯಲು ಹೋಗುತ್ತಿದ್ದರು. ಹಾಗಾಗಿ ಅಪ್ಪ ಒಪ್ಪಿದ ಮೇಲೆಯೇ ಅವರೆಲ್ಲರೂ ಹೊರಡುವುದು. ಅಣ್ಣಯ್ಯ ಅಪ್ಪ ಮನೆಯಲ್ಲಿಲ್ಲದಾಗ ಅಮ್ಮನೊಂದಿಗೆ ಹಟ ಮಾಡುತ್ತಿದ್ದ. ಆದರೆ ಅಮೃತಾಳಿಗಾಗಲೀ ಅಣ್ಣಯ್ಯನಿಗಾಗಲೀ ಅಪ್ಪನಲ್ಲಿ ಕೇಳಲು ಧೈರ್ಯವಿರಲಿಲ್ಲ.