Sep 5, 2020

ಒಂದು ಬೊಗಸೆ ಪ್ರೀತಿ - 78

ದಾರಿಯಲ್ಲೆಲ್ಲೋ ಗಾಡಿ ಕೈಕೊಟ್ಟು ಮೈಸೂರು ತಲುಪುವುದು ಎರಡು ಘಂಟೆ ತಡವಾಯಿತು. ಹೇಗಿದ್ರೂ ಅವತ್ತೂ ಆಸ್ಪತ್ರೆಗೆ ರಜೆ ಹಾಕಿದ್ದರಿಂದ ಮನೆಗೆ ಹೋಗಿ ರೆಸ್ಟ್ ಮಾಡುವುದಷ್ಟೇ ಕೆಲಸ. ಸುಸ್ತಾಗಿ ಮನೆ ತಲುಪಿದಾಗಲೇ ಮಗಳು ಮನೆಯಲ್ಲಿದ್ದಾಳೆ, ಅವಳ ಕೆಲಸವಿರ್ತದೆ ಅನ್ನುವುದು ನೆನಪಾಗಿದ್ದು. ಬಾಗಿಲು ತೆರೆಯುತ್ತಿದ್ದಂತೆಯೇ ರಾಜೀವನಿಗೆ ʻಮಗಳನ್ನು ಅಮ್ಮನ ಮನೆಗೆ ಕರೆದುಕೊಂಡು ಹೋಗ್ಬಿಡಿ. ನಂಗ್ ಪೂರಾ ಸುಸ್ತಾಗಿಬಿಟ್ಟಿದೆ. ರಾತ್ರಿ ನಿದ್ರೆಯೂ ಸರೀ ಆಗಿಲ್ಲ. ಮಧ್ಯಾಹ್ನದವರೆಗೆ ಮಲಗಿ ಬರ್ತೀನಿ ನಾನು' ಎಂದು ಕೇಳಿಕೊಂಡೆ. 

"ಸುಸ್ತಾಗೋ ಕೆಲಸಗಳನ್ನೇ ಮಾಡ್ತೀಯಲ್ಲ.... ಸುಸ್ತಾಗದೇ ಇರ್ತದಾ.... ರೆಸ್ಟ್ ಮಾಡು ರೆಸ್ಟ್ ಮಾಡು" ಎಂದು ವ್ಯಂಗ್ಯವಾಗಿ ಹೇಳಿ ಪರೀಕ್ಷೆಯ ಬಗ್ಗೆ ನೆಪ ಮಾತ್ರಕ್ಕೂ ವಿಚಾರಿಸದೆ ಒಳಹೋದರು. ಅರೆರೆ ಇವರು ಬದಲಾಗಿದ್ದು ತಿಂಗಳೊಪ್ಪತ್ತಿಗೆ ಮಾತ್ರವಾ?!? ಯೋಚಿಸುವುದಕ್ಕೂ ಆಸ್ಪದ ಕೊಡದಷ್ಟು ಕಣ್ಣಿನೆಳೆತ. ಅವರೇನೋ ಗೊಣಗುತ್ತಲೇ ಇದ್ದಂತಿತ್ತು, ಅಥವಾ ಅದು ನನ್ನ ಮನದ ಕಲ್ಪನೆಯೂ ಇದ್ದಂತಿತ್ತು. ಅವರು ಮಗಳನ್ನೆಬ್ಬಿಸಿಕೊಂಡು ಯಾವಾಗ ಮನೆಯಿಂದ ಹೊರಟರೆಂಬುದೂ ನನ್ನರಿವಿಗೆ ಬಂದಿರಲಿಲ್ಲ. ಪಾಸೋ ಫೇಲೋ ಮೂರು ವರ್ಷದ ಪಿಜಿ ಜೀವನಕ್ಕೊಂದು ತೆರೆ ಬಿದ್ದ ಸಂಭ್ರಮವೇ ನನ್ನನ್ನು ಗಾಢ ನಿದ್ರೆಗೆ ದೂಡಿತ್ತು. ಎಚ್ಚರವಾದಾಗ ಸಮಯ ಮೂರುವರೆ! ಅಬ್ಬಬ್ಬಾ.... ಬೆಳಿಗ್ಗೆ ಏಳಕ್ಕೆ ಮಲಗಿದ್ದವಳು. ತಿಂಡಿ ಇಲ್ಲ, ಊಟ ಇಲ್ಲ. ಬಂದಾಗ ಒಂದು ಲೋಟ ನೀರು ಕುಡಿದಿದ್ದೆಷ್ಟೋ ಅಷ್ಟೇ. ಅಪಾರ ಹಸಿವಾಯಿತು. ವಾರದಿಂದ ಮನೆಯಲ್ಲಿ ಅಡುಗೆ ಮಾಡಿಲ್ಲ, ತಿನ್ನುವ ಸಾಮಗ್ರಿಗಳ್ಯಾವುದೂ ಕಾಣಿಸಲಿಲ್ಲ. ಬಿಸ್ಕೆಟ್ಟಿಲ್ಲ, ಹಾಲಿಲ್ಲ, ರಸ್ಕು ಬ್ರೆಡ್ಡು ಮಿಕ್ಸ್‌ಚರ್ರು ಡ್ರೈ ಫ್ರೂಟ್ಸು.... ಉಹ್ಞೂ.... ಏನೆಂದರೆ ಏನೂ ಇಲ್ಲ. ಕೊನೆಗೆ ಕೈಗೆ ಸಿಕ್ಕ ಕಡಲೆಕಾಯಿ, ಉರುಗಡಲೆಯನ್ನೇ ಒಂದೊಂದು ಹಿಡಿ ಎರಡು ಸ್ಪೂನು ಸಕ್ಕರೆಯನ್ನು ಬಾಯಿಗಾಕಿಕೊಂಡ ಮೇಲೇ ಒಂದಷ್ಟು ಸಮಾಧಾನ. ಇನ್ನೇನು ಸ್ನಾನ ಮಾಡಿ ಹೊರಟುಬಿಡುವ ಎಂದುಕೊಂಡೆ ʻಅಯ್ಯೋ ಧರು. ನಾಳೆಯಿಂದ ಗಂಡ ಮಗಳು ಅಮ್ಮ ವಗೈರೆ ಎಲ್ಲಾ ಇದ್ದಿದ್ದೇ.... ಅಪರೂಪಕ್ಕೆ ಮಿ ಟೈಮ್ ಸಿಕ್ಕಿದೆ. ಆರಾಮಾಗಿ ಕಾಲ ಕಳಿ' ಅಂದಿತು ಮನಸ್ಸು. 

ಮೊಬೈಲ್ ಕೈಗೆತ್ತಿಕೊಂಡು ವಾಟ್ಸಪ್ ಗ್ರೂಪುಗಳಲ್ಲಿ ಉದುರಿ ಬಿದ್ದಿದ್ದ ಸಾವಿರಾರು ಮೆಸೇಜುಗಳ ಮೇಲೊಂದಷ್ಟು ಕಣ್ಣಾಡಿಸಿ ಯೂಟ್ಯೂಬಿನಲ್ಲಿ ಒಂದರ್ಧ ಘಂಟೆ ಮೆಚ್ಚಿನ ಹಾಡುಗಳನ್ನು ನೋಡಿ ಫೇಸ್‍ಬುಕ್ ತೆರೆದು ಹೆಬ್ಬೆರಳಿಗೊಂದಷ್ಟು ಕೆಲಸ ಕೊಡುವಷ್ಟರಲ್ಲಿ ಗೀಸರ್ ನೀರು ಕಾದಿತ್ತು. ಸ್ನಾನ ಮಾಡಿಕೊಂಡ ಮೇಲೂ ಅಮ್ಮನ ಮನೆಗೆ ಹೋಗಲು ಸೋಂಬೇರಿತನ. ಇನ್ನೊಂದು ಘಂಟೆ ಬಿಟ್ಟು ಹೋಗುವ ಎಂದುಕೊಂಡೆ, ಹೊಟ್ಟೆ ಕೇಳಲಿಲ್ಲ.... ʻಹೋಗವ್ವ ಮೊದಲು.... ಹಸಿವು ತಡಿಯೋಕಾಗ್ತಿಲ್ಲ' ಎಂದಬ್ಬರಿಸಿತು. ಹೊರಟು ಅಮ್ಮನ ಮನೆಗೆ ತಲುಪಿದೆ. 

ಹಾಲಿನಲ್ಲಿ ಕುಳಿತು ಜೋರು ಕೇಕೆ ಹಾಕಿಕೊಂಡು ಸೋನಿಯಾ ರಾಜೀವ ಹರಟುತ್ತಿದ್ದವರು ನನ್ನನ್ನು ಕಂಡೊಡನೆ ಮೌನದ ಮೊರೆಹೊಕ್ಕಿಬಿಟ್ಟರು. ಕಳೆದೆರಡು ದಿನದಿಂದ ರಾಜೀವ ವರ್ತಿಸುತ್ತಿದ್ದ ರೀತಿ, ನಿನ್ನೆ ಥ್ಯಾಂಕ್ಸ್ ಎಂಬ ಅವರ ಮೆಸೇಜು, ಇವತ್ತವರು "ಸುಸ್ತಾಗೋ ಕೆಲಸಗಳನ್ನೇ ಮಾಡ್ತೀಯಲ್ಲ.... ಸುಸ್ತಾಗದೇ ಇರ್ತದಾ.... ರೆಸ್ಟ್ ಮಾಡು ರೆಸ್ಟ್ ಮಾಡು" ಎಂದು ಹೇಳಿದ್ದಕ್ಕೆಲ್ಲ ಸೋನಿಯಾ ಜೊತೆಗೆ ಅವರೂ ಮೌನದ ಮೊರೆಹೊಕ್ಕಿದ್ದು ಹೊಸ ಹೊಸ ಅರ್ಥಗಳನ್ನು ನನ್ನಲ್ಲಿ ಸ್ಪುರಿಸಿತು. ಪರೀಕ್ಷೆಯ ಗಡಿಬಿಡಿಯಲ್ಲಿ ಆಸ್ಪತ್ರೆಯಲ್ಲಿ ಸೋನಿಯಾ ಮತ್ತು ನನ್ನ ನಡುವೆ ನಡೆದಿದ್ದ ಘಟನೆಗಳನ್ನೆಲ್ಲ ಮರೆತೇಬಿಟ್ಟೆನಲ್ಲ. ಎರಡು ವಾರವಾದರೂ ಸೋನಿಯಾ ಈ ವಿಷಯವನ್ನು ರಾಜೀವನಿಗೆ ಹೇಳದೇ ಉಳಿದದ್ದು ಅವಳಿನ್ನು ಆ ವಿಷಯವನ್ನು ರಾಜೀವನಿಗೆ ಹೇಳುವುದಿಲ್ಲ ಎಂಬ ನಂಬುಗೆಯೊಂದನ್ನು ನನ್ನಲ್ಲಿ ಸೃಜಿಸಿದ್ದು ಹೌದು. ಆದರದು ತಾತ್ಕಾಲಿಕವಾಗಿದ್ದಿರಬಹುದು. ನಾ ಪರೀಕ್ಷೆಗೆಂದು ಊರು ಬಿಟ್ಟು ಹೋಗುವುದನ್ನೇ ಕಾಯುತ್ತಿದ್ದಳೆನ್ನಿಸುತ್ತೆ. ರಾಜೀವ ಚೆನ್ನೈಗೆ ಬರಲು ತಯಾರಾಗಿದ್ದರು. ಸುಮ್ಮನೆ ಕರೆದುಕೊಂಡು ಹೋಗೇ ಬಿಡಬೇಕಿತ್ತಾ? ಅವರಿಬ್ರು ಏನು ಹರಟುತ್ತಿದ್ದರೋ, ಯಾಕಾಗಿ ನನ್ನನ್ನು ಕಂಡು ಮೌನಕ್ಕೆ ಶರಣಾದರೋ ಎಂಬುದೇ ಗೊತ್ತಿಲ್ಲದೆ ನಾ ಇಷ್ಟೆಲ್ಲ ಯೋಚಿಸುವುದು ಎಷ್ಟರ ಮಟ್ಟಿಗೆ ಸರಿ ಎನ್ನುವ ಪ್ರಶ್ನೆಯೂ ಮೂಡಿ ಮರೆಯಾಯಿತು. 

ಒಳಗೆ ಕಾಲಿಡುತ್ತಾ ʻಹೇಗಿದ್ದಿ ಸೋನಿಯಾ?' ಎಂದು ಕೇಳಿದೆ. 

ಬದಲು ಉತ್ತರಿಸದೆ "ಬರ್ತೀನಿ ಅಣ್ಣ. ಸಿಗುವ ನಾಳೆ" ಎಂದೇಳಿ ಸೋನಿಯಾ ರೂಮು ಸೇರಿಕೊಂಡು ಬಾಗಿಲು ಹಾಕಿಕೊಂಡಳು. ಸರಿ ಮಾತನಾಡಿಸುತ್ತಿರಲಿಲ್ಲ, ಹೌದು. ಆದರೆ ಟಪ್ಪಂತ ಬಾಗಿಲು ಹಾಕಿಕೊಂಡು ನನ್ನನ್ನು ಅವಮಾನಿಸುವಂತದ್ದೇನು ಮಾಡಿದ್ದೇನೆ ನಾನು? ಇರಲಿ, ಈ ಮನೆ ಸದ್ಯಕ್ಕೆ ನನಗೇ ಅನಿವಾರ್ಯ, ಮಗಳು ಇನ್ನೊಂದಷ್ಟು ದೊಡ್ಡವಳಾಗುವವರೆಗಂತೂ ಈ ಮನೆಯ ಮೇಲಿನ ನನ್ನ ಅವಲಂಬನೆ ತಪ್ಪುವುದಿಲ್ಲ. ಆಮೇಲೆ ಇತ್ಲಾಕಡೆ ತಲೆ ಹಾಕದಿದ್ದರಾಯಿತು. "ಬೇಸಿಕಲಿ ಹೆಣ್ಣು ಸ್ವಾರ್ಥಿ" ಸಾಗರನ ದನಿ ತಲೆಯಲ್ಲಿ ಮಾರ್ದನಿಸಿತು. ಯಾಕೋ ಸಾಗರನ ಮಾತುಗಳೆಲ್ಲ ಪದೇ ಪದೇ ನೆನಪಾಗುವುದು ಹೆಚ್ಚುತ್ತಿದೆಯಲ್ಲ. ಅವನನ್ನು ತುಂಬಾ ಮಿಸ್ ಮಾಡ್ಕೋತಿದ್ದೀನಾ? 

ʻಏನ್ರೀ... ಇನ್ನೂ ಇಲ್ಲೇ ಇದೀರಾ... ಎಲ್ಲೂ ಹೋಗಲಿಲ್ವಾ ಇವತ್ತು?' ರಾಜೀವನಿಗೆ ಪ್ರಶ್ನಿಸುತ್ತಾ ಅಲ್ಲೇ ನೆಲದ ಮೇಲೆ ಕುಳಿತು ಬೊಂಬೆಯೊಂದರ ಜುಟ್ಟು ಕೀಳುತ್ತಿದ್ದ ಮಗಳನ್ನು ಎತ್ತಿಕೊಳ್ಳಲು ಹೋದೆ. ಮಗಳು ನನ್ನ ಮೇಲೆ ಮುನಿಸುಕೊಂಡಿದ್ದಳು, ನನ್ನ ಕಂಡರೂ ಹತ್ತಿರಕ್ಕೆ ಬರುವ ಮನಸ್ಸು ಮಾಡಲಿಲ್ಲ. ಎತ್ತಿಕೊಳ್ಳಲೋದಾಗ ಕೊಸರಿದಳು. ಬಿಡದೆ ಎತ್ತಿಕೊಂಡು ಮುದ್ದು ಮಾಡಿದೆ. ನನ್ನ ಜುಟ್ಟಿಡಿದೆಳೆದಳು. ಕೆಳಗಿದ್ದ ಬೊಂಬೆ ನನ್ನನ್ನು ನೋಡಿ ನಗಾಡಿತು. 

"ಇನ್ನೆಲ್ಲಿಗೆ ಹೋಗಬೇಕಿತ್ತು.... " ಯಾಕೋ ಅವರ ಉತ್ತರದಲ್ಲೇ ಅಪಾಯದ ಎಲ್ಲಾ ಮುನ್ಸೂಚನೆಯೂ ಕಂಡಿತು. ಸುಮ್ಮನಿದ್ದು ಬಿಟ್ಟರೂ ತೊಂದರೆ, ಮಾತನಾಡಿದರೂ ತೊಂದರೆ. ಸುಮ್ಮನಿರುವುದು ಹೆಚ್ಚು ತೊಂದರೆ ಎಂದು ಅರ್ಧಂಬರ್ಧ ನಿರ್ಧರಿಸುತ್ತಾ ʻಅಲ್ಲಾ... ಮಾಮೂಲಿ ಮಧ್ಯಾಹ್ನದಂಗೆ ಹೊರಟುಬಿಡ್ತಿದ್ರಲ್ಲ ನೀವು.... ಅದಿಕ್ಕೇ ಕೇಳ್ದೆ ಅಷ್ಟೇ.... ' ಇರೋಬರೋ ಪ್ರೀತಿಯನ್ನೆಲ್ಲ ಒಟ್ಟುಮಾಡಿಕೊಂಡು ಪ್ರತಿ ಅಕ್ಷರದಲ್ಲೂ ಪ್ರೀತಿಯನ್ನು ತುಂಬಿ ದನಿಯಾಗಿಸಿದೆ. 

"ನಂಗೇನ್ ನಿನ್ ತರ ಹೊರಗಡೆ ಏನೇನೋ ಕೆಲಸಗಳಿರ್ತಾವಾ? ಇಲ್ಲವಲ್ಲ..... " 

ಸುಮ್ಮನಿದ್ದರಾಗಿರೋದು ಎಂದಂದುಕೊಳ್ಳುವಷ್ಟರಲ್ಲಿ ʻಅಂದ್ರೆ ಅರ್ಥವಾಗಲಿಲ್ಲ' ಅನ್ನುವ ಪದಗಳು ಬಾಯಿಂದೊರಬಿದ್ದಿದ್ದಾಗಿತ್ತು. 

"ಏನು ಗೊತ್ತಿಲ್ಲದಂತೆ ಆಡೋದು ನೋಡು..... ಚಿನಾಲಿ ತಕಂಬಂದು" ಎಂದವರ ಜೋರು ದನಿಗೆ ರಾಧ ಬೆಚ್ಚಿದಳು. ಅಡುಗೆ ಮನೆಯಲ್ಲೇನೋ ಕೆಲಸ ಮಾಡುತ್ತಿದ್ದ ಅಮ್ಮ ಮಗಳ ಅಳು ಕೇಳಿ ಹೊರಬಂದರು. 

"ಓ! ಯಾವಾಗ ಬಂದೆ. ದೋಸೆಗ್ ಹಾಕಿದ್ದೆ. ಮಿಕ್ಸಿ ಶಬ್ದಕ್ಕೆ ನೀ ಬಂದಿದ್ದೇ ಗೊತ್ತಾಗಲಿಲ್ಲ..... ಪಾಪು ಯಾಕ್ ಅಳ್ತಿದೆ? ನಿನ್ನ ಮೇಲಿನ ಕೋಪಕ್ಕೇನೋ" ನಗುತ್ತಾ ಕೇಳಿದರು ಅಮ್ಮ. 

"ಇವಳ ಮೇಲ್ಯಾಕೆ ಅದಕ್ ಕೋಪ? ಇಂತ ಚಿನಾಲಿ ನನ್ ಅಮ್ಮ ಆಗಿಬಿಟ್ಟಳಲ್ಲಾ ಅನ್ನೋ ದುಃಖಕ್ಕೆ ಅಳ್ತಿದೆ" ರಾಜೀವ ಮಾತು ಕೇಳಿ ಎಲ್ಲಿಲ್ಲದ ಅಚ್ಚರಿ ನನಗೆ. ನಮ್ಮಿಬ್ಬರ ಮಧ್ಯೆ ಎಂಥದೇ ಜಗಳವಾಗಿದ್ದರೂ ಅದು ನಾವಿಬ್ಬರೇ ಇದ್ದಾಗಾಗುತ್ತಿತ್ತು. ಇತ್ತೀಚೆಗೆ ಕೆಲವೊಂದಷ್ಟು ಸಲ ಮಗಳ ಮುಂದೆ ಜಗಳವಾಡಿರುವುದು ಹೌದು, ಆದರೆ ಮಗಳಿಗಿನ್ನೂ ನಮ್ಮಿಬ್ಬರ ಜಗಳ ಅರ್ಥ ಮಾಡಿಕೊಳ್ಳುವಷ್ಟೆಲ್ಲ ಬುದ್ಧಿ ಬೆಳೆದಿಲ್ಲ ಎನ್ನುವ ಹುಸಿ ನಂಬಿಕೆ, ಅವಳು ದೊಡ್ಡವಳಾದ ಮೇಲೆ ಅವಳ ಮುಂದೆ ಜಗಳವಾಡುವುದಿಲ್ಲ ಎಂದು ಮನಸಿನಲ್ಲೇ ಅಂದುಕೊಂಡಿದ್ದೆ. ರಾಜೀವ ಕೂಡ ಅದೇ ರೀತಿ ಅಂದುಕೊಂಡಿರಬಹುದು. ನಮ್ಮಪ್ಪ ಅಮ್ಮನ ಮುಂದೆ ನಾವು ಕಪಟ ಜಗಳವಾಡಿದ ನಾಟಕವನ್ನೂ ಆಡಿದವರಲ್ಲ. ಅಂತದ್ರಲ್ಲಿ ರಾಜೀವ್ ಯಾಕಿವತ್ತು ಈ ರೀತಿ.... ಸೋನಿಯಾಳ ಮಾತುಗಳು - ಸುಳ್ಮಾತುಗಳು ದೊಡ್ಡ ಮಟ್ಟದಲ್ಲೇ ಕೆಲಸ ಮಾಡಿರುವ ಎಲ್ಲಾ ಸೂಚನೆಗಳು ಕಾಣಿಸುತ್ತಿವೆ. ನನಗಾದ ಅಚ್ಚರಿಯ ನೂರು ಪಟ್ಟು ಅಚ್ಚರಿ, ಅದರ ನೂರು ಪಟ್ಟು ಆಘಾತ ಅಮ್ಮನಿಗಾಗಿತ್ತು. ಅವರ ಮಗಳನ್ನು ಚಿನಾಲಿ ಎಂದು ಕರೆದುದನ್ನು ಕೇಳಿಸಿಕೊಂಡಿದ್ದು ಇದೇ ಮೊದಲೇನಲ್ಲವೆಂದರಿಗೆ ಗೊತ್ತೇ ಇತ್ತಲ್ಲ. ಪುರುಷೋತ್ತಮ ಹಂಗೇ ಕರೆದಿದ್ದ, ಹೆತ್ತಪ್ಪನೇ ಚಿನಾಲಿ ಎಂದಿದ್ದರು. ಸಾಗರ ಚಿನಾಲಿ ಅಂದಿದ್ದನ್ನು ಪುಣ್ಯಕ್ಕೆ ಕೇಳಿಸಿಕೊಂಡಿರಲಿಲ್ಲ. ಈಗ ರಾಜೀವನ ಬಾಯಿಂದ, ಅದೂ ವಿಪರೀತ ಸಾಧು ಸ್ವಭಾವದವರೆಂದು ಖ್ಯಾತಿ ಗಳಿಸಿದ್ದ ರಾಜೀವನ ಬಾಯಿಂದ ಚಿನಾಲಿಯೆಂಬ ಪದ ಹೊರಹೊಮ್ಮಬಹುದೆನ್ನುವುದನ್ನೂ ಅವರು ಊಹಿಸಿರಲಾರರು. 

"ಇದೇನಂತ ಮಾತಾಡ್ತಿದ್ದೀರ ರಾಜೀವ್? ಅದೂ ಮಗಳ ಮುಂದೆ" ಅಳಿಯನೆಂಬ ಮರ್ಯಾದೆಯನ್ನು ಕಾಪಾಡಿಕೊಂಡೇ ಕೇಳಿದರು. 

"ಯಾರಿಗ್ ಹುಟ್ಟಿದ್ ಮಗಳೋ ಏನೋ" ಅಷ್ಟೇ ಅವಮರ್ಯಾದೆಯಿಂದ ರಾಜೀವ್ ಪ್ರತ್ಯುತ್ತರಿಸುವಾಗ ಅಪ್ಪ ಒಳಬಂದರು. ಎಲ್ಲರ ಮುಖಗಳನ್ನು ನೋಡಿಯೇ ಗಂಭೀರವಾದುದ್ದೇನೋ ನಡೆದಿದೆಯೆಂದು ಊಹಿಸಿ ಯಾರೊಂದಿಗೂ ಕೊನೆಗೆ ಮೊಮ್ಮಗಳೊಂದಿಗೂ ಒಂದು ಮಾತನಾಡದೆ ರೂಮು ಸೇರಿದರು. ಸದ್ಯ, ಅಪ್ಪ ರೂಮಿನಿಂದ ಹೊರಬರದಿರುವುದೇ ಒಳ್ಳೆಯದು. ಇಲ್ಲಾಂದರೆ ಅವರ ಬಾಯಿಂದ ಮತ್ತಿನ್ನಿನ್ನೆಂತ ಮಾತುಗಳನ್ನು ಕೇಳಬೇಕಾಗ್ತದೋ ಏನೋ. 

ʻಏನ್ರೀ? ಏನಾಯ್ತು ನಿಮಗೆ? ಇದ್ಯಾಕಿಂಗೆ ಏನೇನೋ ಮಾತಾಡ್ತಿದ್ದೀರ?' ಅವರು ಯಾರ ಮಾತುಗಳನ್ನ ಕೇಳಿ ಈ ರೀತಿ ಮಾತಾಡ್ತಿದ್ದಾರೆ ಅಂತ ಗೊತ್ತಿತ್ತಲ್ಲ, ತಾಳ್ಮೆಯಿಂದ ಕೇಳಿದೆ. 

"ಓಹೋ! ಏನೂ ಗೊತ್ತಿಲ್ಲದಂತೆ ನಾಟಕವಾಡೋ ಕಲೆಯನ್ನು ನಿನ್ನಿಂದ ಕಲೀಬೇಕು ನೋಡು" 

"ಅದೇನಾಯ್ತೂಂತ ಹೇಳಪ್ಪ. ಹಿಂಗೆ ಒಗಟೊಗಟಾಗಿ ಮಾತನಾಡಿದ್ರೆ ಹೇಗೆ" ಅಮ್ಮ ಹೆಚ್ಚು ಕಮ್ಮಿ ಅತ್ತೇ ಬಿಡುವಂತಾಗಿದ್ದರು. 

"ನಿಮ್ಮ ಮುತ್ತಿನಂಥ ಮಗಳನ್ನೇ ಕೇಳಿ ಅತ್ತೆ. ನನ್ನನ್ಯಾಕೆ ಕೇಳ್ತೀರಾ...." 

ಅಮ್ಮ ನನ್ನ ಕಡೆಗೆ ದೈನ್ಯತೆಯಿಂದ ನೋಡಿದರು. ನನಗೇನೂ ಗೊತ್ತಿಲ್ಲಮ್ಮ ಅಂತ ತಲೆಯಾಡಿಸಿದೆ. 

"ಮಾಡೋದೆಲ್ಲ ಮಾಡ್ಕಂಡು ಗೊತ್ತಿಲ್ಲದ ಮಳ್ಳಿಯಂತೆ ನಿಂತಿರೋದ್ ನೋಡು" ಜೋರು ದನಿಯಲ್ಲಿ ರಾಜೀವ್ ಹೇಳಿದ್ದು ಅಕ್ಕಪಕ್ಕದ ಮೂರ್ನಾಲ್ಕು ಮನೆಗಳಿಗಾದರೂ ಕೇಳಿಸಿರಲೇಬೇಕು. 

"ಮೆಲ್ಲಗೆ ಮಾತನಾಡಿ ರಾಜೀವ್. ಒಳಗೆ ಸೋನಿಯಾಗೆ ಕೇಳಿಸಿ ಗೀಳಿಸಿತು" ಅಂತ ಅಮ್ಮ ಸೊಸೆಯ ಮುಂದೆ ಮಗಳ ಸಂಸಾರದ ಮರ್ಯಾದೆ ಉಳಿಸಲು ಹೇಳಿದ ಮಾತುಗಳು ಆ ಸನ್ನಿವೇಶದಲ್ಲೂ ನನ್ನ ಮನಸಲ್ಲಿ ನಗು ತರಿಸಿತು. ಸೊಸೆಯ ಕಾರಣದಿಂದಲೇ ಇಷ್ಟೆಲ್ಲ ಆಗಿರೋದು ಅಂತ ಕೂಗಿ ಕೂಗಿ ಹೇಳಬೇಕೆನ್ನಿಸಿತು, ಹೇಳಲಿಲ್ಲ. 

"ಸೋನಿಯಾಗೆ ಗೊತ್ತಿಲ್ಲದ ವಿಷಯವೇನಲ್ಲ ಬಿಡಿ ಅತ್ತೆ. ಇಡೀ ಊರಿಗೆಲ್ಲ ಗೊತ್ತಿರೋ ವಿಷಯಗಳೇ. ನಾವು ಮನೆಯವರಿಗೆ ಗೊತ್ತಿರಲಿಲ್ಲ ಅಷ್ಟೇ" 

"ಯಾವ ವಿಷಯ ಮಾತಾಡ್ತಿರೋದು ನೀವು...." 

"ನಿಮ್ಮ ಮಗಳಿಗಿರೋ ಕಳ್ಳ ಸಂಬಂಧಗಳ ವಿಷಯ" ಎಂದು ಮತ್ತದೇ ಪಕ್ಕದ ಮೂರ್ನಾಲ್ಕು ಮನೆಗಳಿಗೆ ಕೇಳಿಸುವಷ್ಟು ಜೋರು ದನಿಯಲ್ಲಿ ರಾಜೀವ ಹೇಳುವ ಹೊತ್ತಿನಲ್ಲಿ ಕಳ್ಳೆಜ್ಜೆಗಳನ್ನಿಟ್ಟುಕೊಂಡು ಸೋನಿಯಾ ರೂಮಿನಿಂದ ಹೊರಬಂದಳು. ಯಾವ ಸಮಯಕ್ಕೆ ಹೊರಬರಬೇಕು ಅಂತ ಕೂಡ ಇಬ್ಬರೂ ಮೊದಲೇ ಮಾತನಾಡಿಕೊಂಡು ನಿರ್ಧರಿಸಿದಂತಿತ್ತು. 

"ಏನೇಳ್ತಿದ್ದೀರ ರಾಜೀವ್?" ಅಮ್ಮನ ಕಣ್ಣಲ್ಲಿ ನೀರು ಹರಿಯದೆ ಇರಲಿಲ್ಲ. ಏನು ಮಾತನಾಡಬೇಕು ಏನು ಮಾತನಾಡಬಾರದು ಎನ್ನುವುದೇ ಅರಿವಾಗದೆ ನಾ ಸುಮ್ಮನೆ ಮಗಳನ್ನೆತ್ತಿಕೊಂಡು ಕುರ್ಚಿಯ ಮೇಲೆ ಕುಳಿತೆ. ಸುಸ್ತಾಗಿಹೋಗಿತ್ತು. 

"ಇರೋ ಒಬ್ಬ ಗಂಡ ಸಾಲಲ್ವಂತೆ ನಿಮ್ಮ ಮಗಳಿಗೆ. ನಮ್ಮ ಮನೆಯವರೆಲ್ಲ ಗಿಣಿಗ್ ಹೇಳಿದಂಗೆ ಹೇಳಿದರು ಮದುವೆ ಸಮಯದಲ್ಲಿ. ಅದ್ಯಾರೋ ಹುಡುಗ ಬಂದು ಅಷ್ಟು ಗಲಾಟೆ ಮಾಡಿರೋ ಹುಡುಗೀನ ಯಾಕ್ ಮದುವೆಯಾಗ್ತಿ. ನಮಗೇನು ಕಮ್ಮಿಯಾಗಿರೋದು, ಯಾರಾದ್ರೂ ಒಳ್ಳೇ ಹುಡುಗಿ ಸಿಗ್ತಾಳೆ ಅಂತ. ಕೇಳಬೇಕಿತ್ತು ಅವರ ಮಾತನ್ನ.... " ರಾಜೀವನೂ ಕಣ್ಣೀರಾದದನ್ನು ನೋಡಿ ಖಂಡಿತವಾಗಿ ಅಮ್ಮನ ಮನಸ್ಸು ಚುರುಕ್ಕೆಂದಿರುತ್ತೆ. 

"ಏನು? ಮತ್ತೆ ಆ ಕಿತ್ತೋದ್ ಹುಡುಗನೊಡನೆ ಸಂಬಂಧ ಬೆಳೆಸಿಕೊಂಡ್ಯೇನೆ ಕಿತ್ತೋದೋಳೆ...." ಅಮ್ಮನ ಪೂರಾ ಸಿಟ್ಟು ನನ್ನೆಡೆಗೆ ತಿರುಗಿತ್ತು. 

"ಅವನು ಹಳಬನಾದನಲ್ಲ. ಅವನ ಜೊತೆ ಯಾಕ್ ಬೆಳಿಸ್ಕೋತಾಳೆ.... ವರ್ಷಕ್ಕೊಬ್ಬರು ಹೊಸಬರು ಬೇಕು ಇವಳ ತೀಟೆ ತೀರಿಸೋಕೆ" 

ʻಹೌದೌದು. ನೀವ್ ನೆಟ್ಟುಗ್ ಸೆಕ್ಸ್ ಮಾಡ್ತಿರಲಿಲ್ವಲ್ಲ. ಅದಕ್ಕೇ ದಿನಾ ಒಬ್ಬೊಬ್ಬರ ಹತ್ತಿರ ಮಲಗ್ತಿದ್ದೆ' ಎಂದು ಹೇಳದೆ ಸುಮ್ಮನೆ ಕುಳಿತೆ. 

"ಯಾರ್ ಜೊತೆ ಸಂಬಂಧ ಬೆಳೆಸಿಕೊಂಡ್ಯೇ ಕಿತ್ತೋದೋಳೆ....." ಚಿನಾಲಿ ಪದಕ್ಕಿಂತ ಕಿತ್ತೋದೋಳೆ ಪದ ಒಂದಷ್ಟು ಸಭ್ಯವಾಗಿದೆಯಲ್ಲವೇ? 

ಈ ಪ್ರಶ್ನೆಗೇ ಕಾಯುತ್ತಿದ್ದವಳಂತೆ ಸೋನಿಯಾ ಬಾಯಿ ತೆರೆದಳು. ಆಸ್ಪತ್ರೆಯಲ್ಲಿ ಕೇಳಿಸಿಕೊಂಡದ್ದನ್ನೆಲ್ಲಾ ಹೇಳಿದಳು. ಅವರಿವರು ಹೇಳಿದ್ದನ್ನ ಕೇಳಿಸಿಕೊಂಡು ನನ್ನ ಮಗಳ ಮೇಲೆ ಇಲ್ಲಸಲ್ಲದ್ದು ಹೇಳ್ತೀಯಲ್ಲ ಅಂತ ಬಯ್ದು ಬಿಟ್ಟರೆ ಎಂಬ ಮುಂದಾಲೋಚನೆಯಿಂದ ಫೇಸ್ ಬುಕ್ ತೆರೆದು ಆಯ್ದ ಫೋಟೋಗಳನ್ನು ತೋರಿದಳು. ಯಾವುದೇ ಅನುಮಾನದ ಎಳೆಯೂ ಅಮ್ಮನ ಮನದಲ್ಲಿ ಸುಳಿಯಲಿಲ್ಲ ಎಂದವರ ಮುಖಭಾವವೇ ಹೇಳುತ್ತಿತ್ತು. 

"ಅವನು ನಮ್ಮ ಪಾಪು ಹುಷಾರಿಲ್ಲದಿದ್ದಾಗ ಅಷ್ಟೆಲ್ಲ ಇದ್ದು ನೋಡಿಕೊಂಡಾಗಲೇ ನನಗೆ ಅನುಮಾನ ಬಂದಿತ್ತು.... ಅಂತ ಕಿತ್ತೋದೋಳೇ ಇವಳು" ಅಮ್ಮನ ತೀರ್ಪು ನಿರಾಯಾಸವಾಗಿ ಹೊರಬಿತ್ತು. 

ʻಅವತ್ತು ರಾಮ್ ಪ್ರಸಾದ್ ಆಸ್ಪತ್ರೆಗೆ ಮಗು ನೋಡಿಕೊಳ್ಳಲು ಯಾಕೆ ಬಂದಿದ್ರು ಅಂತ ನಾನೇ ಹೇಳ್ಬೇಕಾ ಅಥವಾ ನೀವೇ ಹೇಳ್ತೀರಾ ರಾಜೀವ್' ಮೌನ ಮುರಿಯುತ್ತಾ ಕೇಳಿದೆ. ಪದಗಳಿಗೆ ವ್ಯಂಗ್ಯ ತುಂಬಿಸಿಯೇ ಕೇಳಿದೆ. ರಾಜೀವ್ ತಲೆತಗ್ಗಿಸಿದರು, ಕ್ಷಣಮಾತ್ರ. 

"ಮಗಳನ್ನು ನೋಡ್ಕೋಳ್ಳೊಕೆ ಕರೆಸಿಕೊಂಡವರ ಜೊತೆಯೇ ಮಲಗೋ ಹೆಂಗಸು ನೀನು ಅಂತ ನನಗೇನು ಗೊತ್ತಿತ್ತು. ಆ ಮಗಳಾದರೂ ಯಾರದೋ ಏನೋ ಯಾರಿಗೊತ್ತು" 

ʻಓ! ನಡೀರಿ. ಡಿ.ಎನ್.ಎ ಟೆಸ್ಟ್ ಮಾಡಿಸುವ. ಪಕ್ಕಾ ಗೊತ್ತಾಗ್ತದೆ' 

"ಮಾಡೋದೆಲ್ಲ ಮಾಡ್ಬಿಟ್ಟು ವಾದ ಮಾಡ್ತೀಯೇನೇ ಕಿತ್ತೋದೋಳೆ" 

ʻಯಾರ್ಯಾರೋ ಆಡೋ ಮಾತು ಕೇಳಿಕೊಂಡು ನನ್ನ ಕಿತ್ತೋದೋಳು ಅಂತ ನಿರ್ಧಾರ ಮಾಡ್ತಿ ಅಂದರೆ ಸರಿ ಕಣಮ್ಮ. ನಾ ಕಿತ್ತೋದೋಳೇ. ಏನಿವಾಗ?' ನಿಜ್ಜ ಕಿತ್ತೋದವಳಂತೆಯೇ ಮಾತನಾಡಿಬಿಡುವ ಹುಂಬತನ ತುಂಬಿಕೊಳ್ಳಲಾರಂಭಿಸಿತ್ತು. 

"ಯಾರ್ಯಾರೋ ಅಲ್ಲ. ಸೋನಿಯಾ ಹೇಳ್ತಿರೋದು..." 

ʻಸೋನಿಯಾ ನೋಡಿದ್ಲಂತ ನಾನೂ ರಾಮ್ ಪ್ರಸಾದೂ ಜೊತೇಲಿ ಲಲ್ಲೆ ಹೊಡ್ದಿರೋದ್ನ... ಅಥವಾ ನಾವಿಬ್ರೂ ಬೆತ್ತಲಾಗಿ ಮಲಗಿರೋದ್ನ' 

"ಥೂ ಥೂ... ಮಾತಾಡೋ ಚೆಂದ ನೋಡಿದ್ರೆ ಗೊತ್ತಾಗಲ್ವ.... ಕಂಡ ಕಂಡೋರ ಜೊತೇಲಿ ಮಲಗಿರೋರಿವರು ಅಂತ" ಸೋನಿಯಾ ಮಾತುಗಳು ಅಪ್ಪನ ಕಿವಿಗೆ ಅಪ್ಪಳಿಸಿರಬೇಕು. ಅಥವಾ ಎಲ್ಲವನ್ನೂ ಕೇಳಿಸಿಕೊಳ್ಳುತ್ತಾ ಬಾಗಿಲಿಗೇ ಕಿವಿಯಂಟಿಸಿಕೊಂಡು ನಿಂತಿದ್ದರೋ ಏನೋ. ಬಿರುಸಿನ ಹೆಜ್ಜೆಗಳನ್ನಾಕಿಕೊಂಡು ನನ್ನ ಬಳಿ ಬಂದರು. ಇನ್ನು ಅಪ್ಪನ ಕೆಟ್ಟ ಕೆಟ್ಟ ಮಾತುಗಳನ್ನು ಕೇಳುವ ಸಮಯವಿದು. ಕೆನ್ನೆಗೊ ಬೆನ್ನಿಗೊ ಬೀಳುವ ಒಂದೆರಡು ಏಟುಗಳನ್ನು ತಡೆದುಕೊಳ್ಳುವ ಸ್ಥೈರ್ಯ ತಂದುಕೊಂಡು ನೆಟ್ಟಗೆ ಕುಳಿತೆ. ಮಗಳು ಧಾರವಾಹಿಗಳ ಕ್ಯಾಮೆರಾ ತರ ಎಲ್ಲರ ಮುಖವನ್ನು ಘಳಿಗೆಗೊಮ್ಮೆ ನೋಡುತ್ತಿದ್ದಳು. 

"ಇದೇನ್ ಮನೇನಾ ಏನು..... ಎಲ್ರೂ ಬಾಯಿಗ್ ಬಂದಂಗ್ ಮಾತಾಡ್ತಿದ್ದೀರಲ್ಲ ನನ್ನ ಮಗಳ ಬಗ್ಗೆ.... ಹೌದು ನನ್ನ ಮಗಳು ಮದುವೆಗೆ ಮುಂಚೆ ಒಬ್ಬನನ್ನು ಪ್ರೀತಿಸಿದ್ದಳು. ನೀವ್ಯಾರೂ ಪ್ರೀತಿಸಲೇ ಇಲ್ವಾ? ಏನಪ್ಪ ರಾಜೀವ್ ನೀ ಸ್ಕೂಲಿನ ದಿನಗಳಲ್ಲೇ ನನ್ನ ಮಗಳಿಗೆ ಪ್ರಪೋಸ್ ಮಾಡಿದ್ದೌದು ಅಲ್ವೇ? ನಂಗ್‌ ಗೊತ್ತಿಲ್ಲ ಆ ವಿಷ್ಯ ಅಂದ್ಕೊಂಡಿದ್ದ? ಏನಮ್ಮ ಸೋನಿಯಾ ನಿನ್ನ ಮದುವೆ ಕೂಡ ಲವ್ ಮ್ಯಾರೇಜೇ ತಾನೇ? ಇನ್ನು ನೀನು.... ನಮ್ದು ಲವ್ ಮ್ಯಾರೇಜೇ ಅಲ್ವಾ? ನಮಗೆ ಪ್ರೀತಿಸಿದವರನ್ನೇ ಮದುವೆಯಾಗೋ ಅದೃಷ್ಟವಿತ್ತು..... ಅವಳಿಗಿರಲಿಲ್ಲ. ಮದುವೆಯಾದ ಮೇಲೇನಾದರೂ ಅದೇ ಹುಡುಗನೊಂದಿಗೆ ಸಂಬಂಧ ಬೆಳೆಸಿದ್ದಾಳಾ ನನ್ನ ಮಗಳು... ಇಲ್ಲವಲ್ಲ... ಇನ್ನು ರಾಮ್ ಪ್ರಸಾದ್ ಜೊತೆ ಸಂಬಂಧ ಇದೆ ಅಂತ ಅದ್ಯಾರೋ ಮಾತಾಡ್ತಿದ್ರು ಅಂತ ಬಾಯಿ ಬಡ್ಕೋತೀರಲ್ಲ ನಾಚಿಕೆಯಾಗಲ್ವ ನಿಮಗೆ. ಆಫೀಸು ಅಂದ ಮೇಲೆ ಸ್ನೇಹ ಇರುತ್ತೆ, ಕಾಳಜೀನೂ ಇರುತ್ತೆ. ಅದನ್ನ ತಪ್ಪು ತಿಳ್ಕೋಳ್ಳೋರೂ ಇದ್ದೇ ಇರ್ತಾರೆ. ಏನಪ್ಪ ರಾಜೀವ್ ಇಲ್ಲಿ ನನ್ನ ಮಗಳು ಪಾಪು ನೋಡ್ಕಂಡು ಕೆಲಸಕ್ ಹೋಗಿಕೊಂಡು ಓದಿಕೊಂಡು ಕಷ್ಟ ಪಡುವ ಸಮಯದಲ್ಲಿ ನೀನು ಅದ್ಯಾವುದೋ ಒಂದೇ ಹುಡುಗಿಯೊಂದಿಗೆ ಫಿಲಮ್ಮು ಊಟ ಅಂತ ಸುತ್ತುತ್ತಿದ್ದದ್ದು ಸುಳ್ಳಾ.... ಇಲ್ಲವಲ್ಲ..... ನಾನ್ಯಾವತ್ತಾದರೂ ಬಂದು ಮನೆಯವರಿಗೆಲ್ಲ ವಿಷಯ ತಿಳಿಸಿ ಗಲಾಟೆ ಎಬ್ಬಿಸಿದ್ನಾ?" ಅಪ್ಪನ ಮಾತುಗಳಿಗೆ ಸ್ಪಷ್ಟೀಕರಣ ಕೊಡಲೆತ್ನಿಸಿದ ರಾಜೀವನಿಗೆ "ನಂದಿನ್ನೂ ಮಾತುಗಳು ಮುಗಿದಿಲ್ಲ ಇರಪ್ಪ. ಅವಳು ನನ್ನ ಫ್ರೆಂಡು ಅಂತೀಯ. ಇರಬಹುದು. ಇಲ್ಲದೆಯೂ ಇರಬಹುದು. ನೀವಿಬ್ಬರೂ ಸ್ನೇಹಿತರು ಅನ್ನೋ ನಂಬಿಕೆಯಿಂದಾನೇ ನಾನೂ ಮನೆಯಲ್ಲಿ ಯಾರಿಗೂ ಕೊನೆಗೆ ನಿನ್ನ ಹೆಂಡತಿಗೂ ವಿಷಯ ಹೇಳಲಿಲ್ಲ. ಯಾಕೆಂದರೆ ತೀರ ಹೇಳಬೇಕಾದ ವಿಷಯವದೆಂದು ನನಗೆ ಅನ್ನಿಸಿರಲಿಲ್ಲ. ರಾಮ್ ಪ್ರಸಾದ್ಗೂ ನನ್ನ ಮಗಳಿಗೂ ಯಾವ ಸಂಬಂಧವೂ ಇಲ್ಲ, ಸ್ನೇಹವೊಂದನ್ನು ಹೊರತುಪಡಿಸಿ ಅನ್ನೋದು ನನ್ನ ಬಲವಾದ ನಂಬಿಕೆ. ಓದು ಮಗಳ ಮಧ್ಯೆ ನನ್ನ ಮಗಳಿಗೆ ಇನ್ಯಾರನ್ನೋ ಲವ್ ಮಾಡ್ಕಂಡು ಕೂರುವಷ್ಟು ಸಮಯವಿತ್ತು ಎಂದೂ ನನಗನ್ನಿಸೋದಿಲ್ಲ. ಒಂದ್ವೇಳೆ ಅವಳು ತಪ್ಪೇ ಮಾಡಿದ್ರೂ ಅವಳನ್ನು ಈ ರೀತಿಯಾಗಿ ಹೀಯಾಳಿಕೆಗೆ ಒಳಪಡಿಸೋ ಅರ್ಹತೆ ನಿಮಗ್ಯಾರಿಗೂ ಇಲ್ಲ. ಏನಮ್ಮ ಸೋನಿಯಾ.... ನೀ ಘಂಟೆಗಟ್ಲೆ ಫೋನಿನಲ್ಲಿ ಹರಟ್ತೀಯಲ್ಲ.....ಶಶಿ ಇಲ್ಲದಾಗ...... ನಿನ್ನ ಹಳೇ ಕ್ಲಾಸ್ ಮೇಟ್ಸ್ ಹುಡುಗರ ಜೊತೆ.... ಅದು ಕಳ್ಳ ಸಂಬಂಧ ಅಂತಂದುಬಿಟ್ರೆ ನಿನ್ನ ಮನಸ್ಸಿಗೆ ಹೇಗಾಗಬಹುದು ಅಂತ ಊಹೆಯಾದ್ರೂ ಮಾಡ್ಕಂಡಿದ್ದೀಯ?" ಅಪ್ಪನ ಕಡೆಯಿಂದ ನನಗೆ ಬೆಂಬಲ ದೊರಕುತ್ತದೆ ಅದೂ ಇಷ್ಟು ದೊಡ್ಡ ಮಟ್ಟದಲ್ಲಿ ಎಂದು ಕನಸು ಮನಸಿನಲ್ಲೂ ಎಣಿಸಿರಲಿಲ್ಲ. ಯಾರ ಬಳಿಯೂ ಅಪ್ಪನ ಪ್ರಶ್ನೆಗಳಿಗೆ ಉತ್ತರಗಳಿರಲಿಲ್ಲ. ಎಲ್ಲರೂ ಮೌನದ ಮೊರೆಹೊಕ್ಕಿದ್ದರು. 

"ಸುಖಾ ಸುಮ್ಮನೆ ಏನೇನೋ ಮಾತನಾಡಿ ಮನಸ್ಸನ್ನು ಮತ್ತಷ್ಟು ಕೆಡಿಸಿಕೊಳ್ಳಬೇಡಿ. ಒಂದಷ್ಟು ದಿನ ಕಳೆದ ಮೇಲೆ ಸಾವಧಾನವಾಗಿ ಕುಳಿತು ಮಾತನಾಡಿಕೊಳ್ಳಿ" ನನಗೂ ರಾಜೀವನಿಗೂ ಉದ್ದೇಶಿಸಿ ಹೇಳಿ ರೂಮಿಗೋದರು. ಸೋನಿಯಾ ಕಣ್ಣಲ್ಲಿ ನೀರು ತುಂಬಿಕೊಂಡು ರೂಮು ಸೇರಿದಳು. ಅಮ್ಮ ಗೊಣಗಿಕೊಳ್ಳುತ್ತಾ ಅಡುಗೆ ಮನೆಯ ಕಡೆಗೆ ಹೋದರು. ರಾಜೀವ ನನ್ನ ಕಡೆಗೊಮ್ಮೆ ನೋಡಿ ಮನಸಲ್ಲಿ ಚಿನಾಲಿ ಎಂದು ಬಯ್ದುಕೊಂಡು ಹೊರಗೆ ಹೋದರು. ಕೊನೆಗುಳಿದಿದ್ದು ನಾನೂ ರಾಧ ಇಬ್ಬರೇ. ಕೂಗಾಡುತ್ತಿದ್ದವರೆಲ್ಲ ಹೊರಟುಹೋಗಿದ್ದನ್ನು ಕಂಡು ಮಗಳಿಗೂ ಖುಷಿಯಾಗಿ ನಕ್ಕಳು. 

ಅದ್ಸರಿ ರಾಜೀವ ಯಾವ ಹುಡುಗಿ ಜೊತೆ ಸುತ್ತುತ್ತಿರೋದು? ಅಶ್ವಿನಿ? ಕುತೂಹಲವೊಂದು ಗರಿಗೆದರಿತು.

ಮುಖಪುಟ ಚಿತ್ರ: ಚೇತನ ತೀರ್ಥಹಳ್ಳಿ. 
ಮುಂದುವರೆಯುವುದು

No comments:

Post a Comment