Jul 1, 2020

ಒಂದು ಬೊಗಸೆ ಪ್ರೀತಿ - 69

"ಇಲ್ಲೇ ಇದ್ದು ಓದ್ಕೋಬಾರ್ದಾ? ಪಾಪು ನನ್ಜೊತೆ ಮಲಗಿರುತ್ತಪ್ಪ, ನಿನ್ನ ಪಾಡಿಗೆ ನೀನು ಓದ್ಕೊಂಡ್ರಾಗದಾ?" ಅಮ್ಮ ಹೇಳುವಾಗ ಬಾಯಲ್ಲಿದ್ದದ್ದನ್ನು ಗಬಗಬನೆ ತಿನ್ನುತ್ತಾ ತೊಡೆಯಮೇಲಿಟ್ಟುಕೊಂಡಿದ್ದ ಪುಸ್ತಕವನ್ನು ತಿರುವಿಹಾಕುತ್ತಿದ್ದೆ. ಅಮ್ಮನ ಮಾತು ಕೇಳಿಸಿದ್ದೌದು. ಉತ್ತರಿಸಿದರೆಲ್ಲಿ ಎರಡು ಸಾಲು ಓದುವುದು ತಪ್ಪಿಹೋಗ್ತದೋ ಅಂತ ಸುಮ್ಮನಿದ್ದೆ. 

"ನಾನೇಳಿದ್ದು ಕೇಳಿಸ್ತಾ ಇಲ್ವಾ?" ನನ್ನ ಮೌನಕ್ಕೆ ಅಮ್ಮನ ಜೋರಿನ ಮಾತುಗಳು. 

"ಶ್.‌ ಮೆಲ್ಲಗೆ. ಪಾಪು ನಿದ್ರೆ ಮಾಡ್ತಿದೆ" ಅಪ್ಪನ ಗದರಿಕೆ. 

"ನನಗೆ ಮಾತ್ರ ರೇಗಿ. ಅವಳು ನಾ ಕೇಳಿದ್ರೆ ಬದಲೂ ಹೇಳ್ತಿಲ್ಲ. ಕಾಣಲ್ವ ನಿಮಗೆ" ಅಮ್ಮನ ಗೋಳಾಟ. 

ʻಅಯ್ಯೋ ಅಮ್ಮ. ಸುಮ್ನಿರಿ. ಇಲ್ಲೇನೋ ಓದ್ತಿಲ್ವ! ಇಷ್ಟು ದಿನ ಮಗಳನ್ನೂ ಜೊತೆಗೇ ಕರೆದುಕೊಂಡು ಹೋಗ್ತಿರಲಿಲ್ವ? ಇನ್ನೊಂದೇ ವಾರ ಇರೋದು. ಈಗಷ್ಟೇ ರಿವಿಷನ್‌ ಶುರು ಹಚ್ಕೊಂಡಿದ್ದೀನಿ. ಓದೋಕೆ ಇನ್ನೂ ಬೆಟ್ಟದಷ್ಟಿದೆ. ಎರಡ್‌ ತಿಂಗಳಿಂದ ಓದಿರೋದು ಅದೆಷ್ಟು ನೆನಪಿದೆಯೋ ಏನೋ ಅನ್ನೋದು ಗೊತ್ತಿಲ್ಲ. ಸುಮ್ನೆ ಟೆನ್ಶನ್‌ ಕೊಡ್ಬೇಡಿ ಈಗ. ನಾ ಪಾಸಾಗ್ಬೇಕೋ ಬೇಡ್ವೋ?ʼ 

"ಪಾಸಾಗ್ದೇ ಫೇಲ್‌ ಆಗ್ಲಿ ಅಂತ ಬಯಸ್ತೀನಾ? ಇಲ್ಲೆ ಇನ್ನೊಂದ್‌ ರೂಮಲ್‌ ಓದ್ಕೋ. ನಿನ್ನತ್ರ ಮಗಳನ್ನ ಮಲಗಿಸಿಕೋ ಅಂತೇನೂ ಹೇಳ್ತಿಲ್ಲವಲ್ಲ ನಾನು" ಅಮ್ಮನದೂ ಮತ್ತದೇ ಸಾಲುಗಳು. ಏನಾದ್ರೂ ಮಾತಾಡ್ಕೊಳ್ಳಲಿ, ನನ್ನ ಪಾಡಿಗೆ ನಾ ತಿಂದು ಮುಗಿಸಿ ಎದ್ದು ಹೋಗ್ತೀನಿ ಅಂತ ಸುಮ್ಮನಾದೆ. 

"ಅದೇನೂಂತ ಮಾತಾಡ್ತಿ. ಅವಳು ಹೇಳ್ತಿದ್ದಾಳಲ್ಲ ಓದೋದಿದೆ ಇನ್ನೂ ಬಹಳಷ್ಟು ಅಂತ. ಇಲ್ಲೇ ಉಳ್ಕಂಡ್ರೆ, ಪಾಪು ಅತ್ತರೆ ನೀ ಬೇಡ ಬೇಡ ಅಂದ್ರೂ ಅವಳ ಮನಸ್ಸು ಸುಮ್ಮನಿರ್ತದಾ? ಒಂದ್‌ ಸಲ ಸಮಾಧಾನಿಸಿ ಹೋಗೋಣ ಅಂತ ಬಂದೇ ಬರ್ತಾಳೆ ಪಾಪ. ಆಮೇಲೆ ಒಂದಷ್ಟು ಸಮಯ ಹಾಳಾಗ್ತದೆ. ಇನ್ನೊಂದ್‌ ಹತ್ತು ದಿನ ಪರೀಕ್ಷೆ ಮುಗಿಸೋವರ್ಗೂ ಹೆಂಗೋ ನಿಭಾಯಿಸಿಕೊಂಡ್ರಾಯ್ತು ಬಿಡು. ಬೇಕಿದ್ರೆ ನಾನೂ ಒಂದ್‌ ವಾರ ರಜಾ ಮಾಡ್ಲಾ?" ಪುಣ್ಯಕ್ಕೆ ಅಪ್ಪ ನನ್ನ ಪರವಾಗಿ ಮಾತಾಡಿದರು. ಅಪ್ಪ ಹೇಳಿದ ಲಾಜಿಕ್ಕಿಗೆ ಅಮ್ಮನ ಬಳಿ ಪ್ರತಿವಾದಗಳಿರಲಿಲ್ಲ. "ನೀವೇನ್‌ ರಜಾ ಹಾಕೋದ್‌ ಬೇಡ. ಆಮೇಲ್‌ ಮಗೂ ಜೊತೆ ನಿಮ್ನೂ ನೋಡ್ಕೋಬೇಕಾಗುತ್ತೆ. ನಿಮ್‌ ಪಾಡಿಗ್‌ ನೀವ್‌ ಹೋಗಿ. ನಾನೂ ಪಾಪು ಹೆಂಗೋ ಇರ್ತೀವಿ" ಎಂದು ರೂಮಿನೊಳಗೋದರು ಅಮ್ಮ. ಅಷ್ಟರಲ್ಲಿ ನನ್ನ ಊಟವೂ ಮುಗಿದಿತ್ತು. ಹೆಂಗೋ ಅಮ್ಮನಿಗೆ ವಿವರಿಸೋ ಕಷ್ಟ ತಪ್ಪಿಸಿದ್ದಕ್ಕೆ ಅಪ್ಪನಿಗೆ ಕಣ್ಣಲ್ಲೇ ಥ್ಯಾಂಕ್ಸ್‌ ಹೇಳಿ ಹೊರಟೆ. "ಹುಷಾರಾಗೋಗು" ಗೇಟ್‌ ಹಾಕಿಕೊಳ್ಳುತ್ತಾ ಹೇಳಿದರು ಅಪ್ಪ. 

ರಾಜೀವ್ ಇನ್ನೂ ಬಂದಿರಲಿಲ್ಲ. ಒಂಭತ್ತೂವರೆ ಆಗಿದೆ. ಇನ್ನೂ ಬರದೇ ಎಲ್ಲಿ ಹೋದರಿವರು ಎಂದುಕೊಳ್ಳುತ್ತಾ ಓದಲು ಕುಳಿತುಕೊಂಡೆ. ಎರಡು ತಿಂಗಳಿಂದಿನ ದಿನಗಳಿಗೆ ಹೋಲಿಸಿದರೆ ಈಗ ಹೆಚ್ಚು ಗಮನವಿಟ್ಟು ಓದಲು ಸಾಧ್ಯವಾಗಿದೆ. ಘಂಟೆಗಳ ಕಾಲ ಗಮನ ಅತ್ತಿತ್ತ ಸರಿಯದೇ ಓದಿಕೊಳ್ಳಲು ಸಾಧ್ಯವಾಗಿದೆ. ಡಿ.ಎನ್.ಬಿ ಪೀಡಿಯಾಟ್ರಿಕ್ಸ್ ಮುಗಿಸಿದ ಮೇಲೆ ಸೂಪರ್ ಸ್ಪೆಷಾಲಿಟಿ ಯಾಕೆ ಮಾಡಬಾರದು ಅನ್ನಿಸುವಷ್ಟರ ಮಟ್ಟಿಗೆ ಕಾನ್ಫಿಡೆನ್ಸ್ ಪಡಿಮೂಡಿದೆ. "ಓದಬೇಕಾದರೆ ಪಟಪಟಾಂತ ಓದಿ ಮುಗಿಸಿಬಿಡಬೇಕು ಕಣಮ್ಮ. ಮುಂದಕ್ ಓದೋಣ ಅಂತ ಬಿಟ್ಟರೆ ಅಲ್ಲಿಗೇ ನಿಂತುಹೋಗ್ತದೆ" ಅನ್ನೋ ಮಾತನ್ನ ನಮ್ಮ ಸರ್ರು ಪದೇ ಪದೇ ಹೇಳ್ತಾನೇ ಇರ್ತಾರೆ. ಅದರನುಭವ ನನಗೇ ಇದೆಯಲ್ಲ, ಎಂಬಿಬಿಎಸ್ ಮುಗಿದ ಮೇಲೆ ನೂರಾರು ನೆಪ ಮಾಡಿಕೊಂಡು ಪಿಜಿ ಸೇರಲು ತಡ ಮಾಡಿದ್ದಕ್ಕೆ ಡಿ.ಎನ್.ಬಿಗೆ ಸೇರುವುದೇ ಕಷ್ಟದ ಕೆಲಸವಾಗಿಬಿಟ್ಟಿತ್ತಲ್ಲ. ಇನ್ನು ಮುಂದಕ್ಕೂ ಅದೇ ರೀತಿ ಆಗ್ತದೋ ಏನೋ. ಅಯ್ಯೋ ಧರು! ಇದೇನಿದು, ಇನ್ನೂ ಥಿಯರಿ ಪರೀಕ್ಷೆ ಪಾಸಾಗಬೇಕು, ಥಿಯರಿ ಹೆಂಗೋ ಪಾಸಾಗಿಬಿಡಬಹುದು, ಆದರೆ ಈ ಹಾಳು ಡಿ.ಎನ್.ಬಿಯಲ್ಲಿ ಪ್ರಾಕ್ಟಿಕಲ್ಸ್ ಪಾಸಾಗುವುದೇ ಕಷ್ಟದ ಕೆಲಸ. ಮೊದಲು ಇದೆಲ್ಲ ದಾಟುವ, ನಂತರ ಸೂಪರ್ ಸ್ಪೆಷ್ಯಾಲಿಟಿ ಬಗ್ಗೆಯೆಲ್ಲ ಯೋಚಿಸಿದರಾಯಿತು ಎಂದುಕೊಂಡು ಓದಲು ತೊಡಗಿದೆ. ಓದಲು ಶುರುಮಾಡಿ ಸ್ವಲ್ಪ ಸಮಯವಾಗಿತ್ತಷ್ಟೆ. ಕಣ್ಣೆಳೆಯಲು ಪ್ರಾರಂಭಿಸಿತ್ತು. ಅರೇ ಇಷ್ಟು ಬೇಗ ನಿದ್ರೆ ಮಾಡಿಬಿಟ್ಟರೆ ಓದಿ ಮುಗಿಸುವುದೇಗೆ ಎಂದುಕೊಂಡು ಮೊಬೈಲಿನಲ್ಲಿ ಸಮಯ ನೋಡಿದೆ. ಅಯ್ಯೋ! ಅದಾಗಲೇ ಹನ್ನೊಂದಾಗಿದೆ. ಈ ರಾಜೀವ್ ಎಲ್ಲೋದ್ರು ಎಂದುಕೊಳ್ಳುತ್ತಾ ಫೋನ್ ಮಾಡಿದೆ. ಎರಡು ರಿಂಗಿಗೇ ಎತ್ತಿಕೊಂಡರು. 

"ಹೇಳು ಡಾರ್ಲಿಂಗ್" ಅಂದಾಗಲೇ ಗೊತ್ತಾಯಿತು ಹೊಟ್ಟೆಗೊಂದಷ್ಟು ಬಿದ್ದಿದೆ ಅಂತ! 

ʻಎಲ್ರೀ, ಪತ್ತೇನೇ ಇಲ್ಲ. ಎಲ್ಲೋದ್ರೀ' 

"ಇಲ್ಲೇ ಬಂದೆ. ಎರಡ್ ಕ್ರಾಸ್ ಅಷ್ಟೇ" 

ʻಸರಿ ಸರಿ ಬನ್ನಿ' ಎಂದೇಳಿ ಫೋನಿಟ್ಟರೆ ಕಣ್ಣುಗಳು ಮತ್ತೆ ಪದ ಹಾಡಲು ತೊಡಗಿದವು. ಒಂದ್ ಕಪ್ ಕಾಫಿನಾದ್ರೂ ಮಾಡಿಕೊಳ್ಳುವ ಎಂದು ಅಡುಗೆಮನೆಗೆ ಹೋಗಿ ಕಾಫಿಗಿಟ್ಟೆ. ಕಾಫಿಯಾಗುವಷ್ಟರಲ್ಲಿ ರಾಜೀವ ಬಂದರು. ಕಂಠಮಟ್ಟ ಕುಡಿದಿದ್ದರೆಂದು ಅವರ ನಡಿಗೆಯಿಂದಲೇ ಹೇಳಿಬಿಡಬಹುದಿತ್ತು. ಕುಡಿತದ ಬಗ್ಗೆಯೆಲ್ಲ ಚರ್ಚೆ ಮಾಡುವಷ್ಟು ವ್ಯವಧಾನವಿರಲಿಲ್ಲ ನನಗೆ. ಮನೇಲಿದ್ದು ಜಗಳವಾಡಿಕೊಂಡಿರುವುದರ ಬದಲು ಚೆಂದ ಕುಡಿದು ಬಂದು ಬಿದ್ಕೊಂಡ್ರೆ ಸಾಕು ಅಂತೆಲ್ಲ ಅನ್ನಿಸೋಕೂ ಶುರುವಾಗಿಬಿಟ್ಟಿತ್ತಾ, ಗೊತ್ತಿಲ್ಲ. ಇಷ್ಟೆಲ್ಲ ಕುಡಿದಾಗ ಅವರು ಬಟ್ಟೆ ಕೂಡ ಬದಲಿಸದೆ ಹೋಗಿ ಮಲಗಿಬಿಡುವವರು ಇವತ್ಯಾಕೋ ಹಾಲಿನಲ್ಲೇ ಕುಳಿತರು. ಅಯ್ಯಯ್ಯೋ ಬೇಡಿ ಬಾಸ್, ಮೊದಲು ಹೋಗಿ ಮಲಗಿ; ಜಗಳ ಗಿಗಳ ಮಾಡ್ಕಂಡು ಓದೋ ನನ್ನ ಮೂಡನ್ನು ಹಾಳುಗೆಡವಬೇಡಿ ಎಂದು ಮನದಲ್ಲೇ ಬೇಡಿಕೊಂಡೆ. 

"ನಿನಗೊಂದು ವಿಷಯ ಹೇಳಬೇಕಿತ್ತು" ಪೀಠಿಕೆ ಹಾಕಿದರು. 

ಅಯ್ಯಯ್ಯೋ ಎಂದು ಮತ್ತೊಮ್ಮೆ ಅಂದುಕೊಳ್ಳುತ್ತಾ ʻಕಾಫಿ ಕುಡೀತೀರಾ, ಇನ್ನೊಂದ್ ಕಪ್ ಇದೆ ಒಳಗೆ' ಎಂದು ಮಾತು ಮರೆಸಲು ಪ್ರಯತ್ನಿಸಿದೆ. ಪ್ರಯೋಜನವಾಗಲಿಲ್ಲ. 

"ಕುತ್ತಿಗೆವರ್ಗೂ ಕುಡಿದಿದ್ದೀನಿ. ಇನ್ ಕಾಫಿ ಬೇರೆ ಕೇಡು. ನಿನಗೊಂದು ವಿಷಯ ಹೇಳಬೇಕಿತ್ತು" 

ಇನ್ನಿದರಿಂದ ತಪ್ಪಿಸಿಕೊಳ್ಳುವ ಯಾವ ಮಾರ್ಗವೂ ಇಲ್ಲ. ಮೌನದಿಂದಿದ್ದುಬಿಡುವ. 'ಹು. ಹೇಳಿ' 

"ಕೆಲಸ ಬಿಟ್ಟೆ" 

ʻಏನು!' 

"ಕೆಲಸ ಬಿಟ್ಟೆ ಅಂದೆ" 

ʻಅಯ್ಯ! ಯಾಕೆ? ಇಷ್ಟು ಸಡನ್ನಾಗಿ' ಮೌನದಿಂದಿರುವ ತೀರ್ಮಾನ ಮುರಿದುಹೋಯಿತು. 

"ಸಡನ್ನಾಗೆಲ್ಲಿ? ತಿಂಗಳ ಮುಂಚೆಯೇ ಹೇಳಿದ್ದೆನಲ್ಲ" 

ʻಅದ್ ಸರಿ. ಅವತ್ತೇ ಮಾತನಾಡಿದ್ದೆವಲ್ಲ. ಕೊನೇ ಪಕ್ಷ ನನ್ನ ಪರೀಕ್ಷೆಗಳೆಲ್ಲವೂ ಮುಗಿಯುವವರೆಗೂ ಕೆಲಸ ಬಿಡುವುದು ಬೇಡವೆಂದು' 

"ಅದು ಮಾತನಾಡಿಕೊಂಡಿದ್ದಲ್ಲ. ನೀ ಹೇಳಿದ್ದು. ನಾ ಒಪ್ಪಿರಲಿಲ್ಲ" 

ʻಒಪ್ಪದೆಯೂ ಇರಲಿಲ್ಲವಲ್ಲ' 

"ಮೌನ ಒಪ್ಪಿಗೆಯ ಸಂಕೇತವೇನಲ್ಲ" 

ʻಮ್. ಅಂದ್ರೂ ನನ್ನ ಪರೀಕ್ಷೆ ಮುಗಿಯುವವರೆಗೆ ಕಾಯಬೇಕಿತ್ತಲ್ವ' 

"ಇನ್ನೇನ್ ಮುಗೀತಲ್ಲ ಇನ್ ಹತ್ತು ದಿನಕ್ಕೆ" 

ʻಯಾರ್ ಹೇಳಿದ್ದು! ಇನ್ ಹತ್ ದಿನಕ್ಕೆ ಮುಗಿಯೋದು ಥಿಯರಿ ಪರೀಕ್ಷೆ ಅಷ್ಟೇ. ಅದಾದ ಮೇಲೆ ಇನ್ನೂ ಮೂರು ನಾಲ್ಕು ತಿಂಗಳು ಡಿ.ಎನ್.ಬಿ ಸ್ಟೂಡೆಂಟ್ ತರಾನೇ ಕೆಲಸ ಮಾಡ್ಬೇಕು. ಅದಾದ ಮೇಲೆ ಪ್ರಾಕ್ಟಿಕಲ್ಸು. ಅದಾದ ಮೇಲೆ ರಿಸಲ್ಟು ಬರೋಕ್ ಕನಿಷ್ಟ ಅಂದ್ರೂ ಒಂದು ತಿಂಗಳು' 

"ಕರ್ಮ" 

ʻಬಿಡೋದ್ ಬಿಟ್ಟು ಈಗ ಕರ್ಮ ಅಂದ್ರೆ? ಬಿಡೋಕ್ ಮುಂಚೆ ಒಂದ್ ಮಾತು ಕೇಳಬೇಕಿತ್ತಲ್ವ?' 

"ಎಲ್ಲಾ ನಿನಗೆ ಕೇಳ್ಕಂಡೇ ಮಾಡ್ಬೇಕೇನು..... ನಂಗಿಂತ ಜಾಸ್ತಿ ದುಡೀತೀನಿ ಅನ್ನೋ ಕೊಬ್ಬು ನಿಂಗೆ" 

ʻಉಶ್ಶಪ್ಪ. ಮತ್ತೆ ಶುರು ಮಾಡಬೇಡಿ. ಈಗೇನು ಬಿಟ್ಟಾಯ್ತಲ್ಲ. ಸರಿ ಬಿಡಿ. ಹೆಂಗೋ ಆಗುತ್ತೆ. ನನಗೀಗ ಓದೋದಿದೆ' 

"ನಿಂಗ್ ನಿಂದೇ ಜಾಸ್ತಿ. ನಿನ್ ಓದು ನಿನ್ ಜೀವನ ನಿನ್ ಮಗಳು..... " 

ʻನಮ್ ಮಗಳು' 

"ಹು. ನಮ್ ಮಗಳು. ಕೆಲಸ ಬಿಟ್ಟಮೇಲೆ ಮುಂದಕ್ಕೇನು, ಏನ್ ಮಾಡ್ಬೇಕು ಅಂತಿದ್ದೀರ ಅಂತೆಲ್ಲ ಕೇಳಬೇಕು ಅಂತಾನೂ ಅನ್ನಿಸಲ್ವಲ್ಲ ನಿನಗೆ" 

ಆ ತರ ಎಲ್ಲಾ ಸುಮಾರು ಸಲ ಕೇಳಿ ನಗೆಪಾಟಲಿಗೆ ಈಡಾಗಿದ್ದೀನಿ ಅನ್ನೋ ಮಾತುಗಳನ್ನು ತಡೆದುಕೊಂಡು ʻಕೇಳ್ದೇ ಇರ್ತೀನೇನ್ರೀ? ಇನ್ನೊಂದು ವಾರಕ್ಕೆ ಪರೀಕ್ಷೆಗಳಿವೆ. ಅದನ್ನು ಬಿಟ್ಟು ಬೇರೆ ಯಾವ ಸಂಗತಿಯ ಕುರಿತೂ ಯೋಚಿಸೋಕೆ ಸದ್ಯಕ್ಕೆ ನನ್ನಿಂದಾಗೋಲ್ಲ. ಇನ್ ಹತ್ತು ದಿನಕ್ಕೇನು ಪ್ರಪಂಚ ಮುಳುಗಿಹೋಗ್ತದಾ? ಹತ್ತು ದಿನ ಬಿಟ್ಟು ಪುರುಸೊತ್ತಾಗಿ ಮಾತನಾಡುವ ಬಿಡಿ' ಹತ್ತಿರಪತ್ತಿರವೆಲ್ಲೂ ಸುಳಿಯಲೊಪ್ಪದ ತಾಳ್ಮೆಯನ್ನು ಬಲವಂತದಿಂದಿಡಿದು ಎಳೆದು ತಂದು ಮೊಗದಲ್ಲೊಂದು ನಗು ಮೂಡಿಸಿಕೊಂಡು ಮಾತನಾಡಿದೆ. ನನ್ನ ತಾಳ್ಮೆಯ ಮಾತೋ, ಮೊಗದ ಮೇಲಿನ ಕೃತಕ ನಗುವೋ ಕೆಲಸ ಮಾಡಿತು. 

"ನೀನೇಳೋದೂ ಸರಿ. ಓದ್ಕೋ ನೀನು ಆರಾಮಾಗಿ. ಇನ್ ಹತ್ ದಿನ ಅಷ್ಟೇ ಅಲ್ಲ. ಮಾತನಾಡುವ" ಎಂದೇಳಿ ರೂಮು ಸೇರಿಕೊಂಡರು. 

ಉಫ್. ನಿಟ್ಟುಸಿರು ಬಿಟ್ಟೆ. ಕಾಫಿ ತಣ್ಣಗಾಗಿತ್ತು. ಮತ್ತೊಮ್ಮೆ ಅದೇ ಕಾಫಿಯನ್ನು ಬಿಸಿ ಮಾಡಿಕೊಂಡು ಬಂದು ಓದಲು ಕುಳಿತೆ.

ಮುಖಪುಟ ಚಿತ್ರ: ಚೇತನ ತೀರ್ಥಹಳ್ಳಿ. 
ಮುಂದುವರೆಯುವುದು

No comments:

Post a Comment