Feb 13, 2020

ಒಂದು ಬೊಗಸೆ ಪ್ರೀತಿ - 52

ಡಾ. ಅಶೋಕ್.‌ ಕೆ. ಆರ್.‌
ಒಂದು ಬೊಗಸೆ ಪ್ರೀತಿಯ ಹಿಂದಿನ ಅಧ್ಯಾಯಗಳನ್ನು ಓದಲು ಇಲ್ಲಿ ಕ್ಲಿಕ್ಕಿಸಿ.
ಒಳ್ಳೆದಿನ ಕೂಡಿ ಬಂದಿಲ್ಲವಿನ್ನು ಎಂಬ ನೆಪದಿಂದ ಮುಂದೂಡುತ್ತಲೇ ಹೋಗಲಾಗಿದ್ದ ಶಶಿ ಸೋನಿಯಾಳ ಮದುವೆ ಅಂತೂ ಇಂತೂ ಇನ್ನೊಂದು ತಿಂಗಳಿಗೆ ನಿಕ್ಕಿಯಾಗಿತ್ತು. ಪ್ರೀತಿ ಹುಟ್ಟಲನವಶ್ಯಕವಾದ ಮುಹೂರ್ತ ಮದುವೆಗಾಗಿ ಅನಿವಾರ್ಯವಾಗಿದ್ಯಾಕೆ ಅಂತ ಯಾರಿಗೂ ತಿಳಿದಿರಲಿಲ್ಲ. ಪ್ರೀತಿ ಹುಟ್ಟಿದ್ದೂ ಒಂದು ಸುಮುಹೂರ್ತದಲ್ಲೇ, ಅದು ನಮ್ಮರಿವಿನ ಪರಿಧಿಯಲ್ಲಿರಲಿಲ್ಲ ಎಂಬ ಉತ್ತರ ಸಿಗುತ್ತಿತ್ತೋ ಏನೋ. ಬಹುಶಃ ನನ್ನ ಪುರುಷೋತ್ತಮನ ಪ್ರೀತಿ ಯಾವುದೋ ದುರ್ಮುಹೂರ್ತದಲ್ಲಿ ಜನಿಸಿದ್ದಿರಬೇಕು. ಒಂದು ಮಟ್ಟಿಗೆ ಶಶಿ ಸೋನಿಯಾರ ಮದುವೆ ತಡವಾಗಿದ್ದೇ ಒಳಿತಾಯಿತು. ಯಾರಿಗಲ್ಲದಿದ್ದರೂ ಸೋನಿಯಾಳ ತಾಯಿಗೆ ಈ ಮದುವೆಯನ್ನು ಮನಸಾರೆ – ಪೂರ್ಣವಾಗಲ್ಲದಿದ್ದರೂ ಅಪೂರ್ಣವಾಗಿಯಾದರೂ ಒಪ್ಪಿಕೊಳ್ಳುವುದಕ್ಕೆ – ಈ ಸಮಯದಲ್ಲಿ ಸಾಧ್ಯವಾಯಿತು. ಬಯ್ಕಂಡು ಬಯ್ಕಂಡೇ ಅವರ ಹತ್ತಿರದ ನೆಂಟರೂ ʼಏನಾದ್ರೂ ಮಾಡ್ಕಂಡು ಹಾಳಾಗೋಗಿʼ ಎಂದು ಹರಸಲೂ ಈ ಕಾಲಾವಧಿ ಸಹಾಯ ಮಾಡಿತು. ನಮ್ಮಪ್ಪ ಅಮ್ಮನದೇ ಲವ್‌ ಮ್ಯಾರೇಜ್‌ ಆಗಿದ್ದರಿಂದ ನಮ್ಮ ಮನೆಯ ಕಡೆ ಯಾರದೂ ಅಂತಹ ವಿರೋಧವೇನಿರಲಿಲ್ಲ. ʼಮತ್ತೊಂದ್‌ ಗೌಡ್ರುಡಿಗೆಗೆ ಈ ಗತಿ ಬಂತಾʼ ಅಂತ ನಮ್ಮಮ್ಮನ ಕಡೆಯ ಜಾತಿನಿಷ್ಠ ಬಂಧುಗಳು ಒಂದಷ್ಟು ಲೊಚಗುಟ್ಟಿರಬಹುದು. ಮನೆಯಲ್ಲಿ ಮದುವೆಯ ತಯಾರಿ ಜೋರಾದಷ್ಟು ಅಮ್ಮನ ಓಡಾಟ ಜಾಸ್ತಿಯಾಗಿ ರಾಧಳನ್ನು ನೋಡಿಕೊಳ್ಳುವ ಹೆಚ್ಚಿನ ಜವಾಬ್ದಾರಿ ನನ್ನ ತಲೆಯ ಮೇಲೇ ಬೀಳುತ್ತಿತ್ತು. ಎಷ್ಟು ಬೇಗ ಈ ಮದುವೆ ಮುಗಿದು ನಾ ಹೆಚ್ಚು ಓದಲು ಪ್ರಾರಂಭಿಸುತ್ತೀನೋ ಎನ್ನಿಸಲಾರಂಭಿಸಿತ್ತು.

ಮದುವೆಗಿನ್ನು ಇಪ್ಪತ್ತು ದಿನಗಳಿರುವಾಗ ಸಾಗರನಿಗೆ ಮೆಸೇಜು ಮಾಡಿದ್ದೆ. ʼಮುಂದಿನ ತಿಂಗಳ ಹತ್ತನೇ ತಾರೀಖು, ಭಾನುವಾರ ಬಿಡುವು ಮಾಡಿಕೋʼ

“ಯಾಕೆ? ನಿಮ್ಮನೇಲ್ಯಾರೂ ಇರೋದಿಲ್ವಾ? ಬಂದು ನಿನ್ನ ಸೆಕ್ಸ್‌ ನೀಡ್ಸ್‌ ಪೂರೈಸಬೇಕಿತ್ತಾ? ಈ ಸಲ ದುಡ್ಡಾಗ್ತದೆ” ಸಾಗರ ಮೆಸೇಜು ನೋಡಿ ಜಿಗುಪ್ಸೆಯಾಯಿತು, ಅಸಹ್ಯ ಮೂಡಿತು. ಅವನ ಮೇಲಲ್ಲ. ನನ್ನ ಮೇಲೆ. ಇಷ್ಟೊಂದು ಕೆಟ್ಟ ವ್ಯಕ್ತಿತ್ವವಾ ನನ್ನದು? ಬೇಸರವಾಯಿತು. ಯಾರೇ ನನ್ನನ್ನು ಅಪಾರ್ಥ ಮಾಡಿಕೊಂಡರೂ ಸಾಗರ ನನ್ನನ್ನು, ನನ್ನ ಮನಸ್ಸಿನ ಏರಿಳಿತಗಳನ್ನು ಸೂಕ್ತ ರೀತಿಯಲ್ಲಿ ಅರ್ಥೈಸಿಕೊಳ್ಳುತ್ತಾನೆ ಏನೋ ನನ್ನ ಜೊತೆ ಅವನು ಜಗಳವಾಡಿದರೂ ಹೆಚ್ಚಿನಂಶ ಆ ಜಗಳ ನಾ ಅವನಿಗೆ ಸಿಗಲಿಲ್ಲ, ಪೂರ್ಣವಾಗಿ ಅವನವಳಾಗಲಿಲ್ಲ ಅನ್ನೋ ಸಿಟ್ಟಿಗೆ ಅಂತಂದುಕೊಂಡಿದ್ದು ಇವತ್ತಿನವನ ಮೆಸೇಜಿನಿಂದ ನುಚ್ಚುನೂರಾಯಿತು. ನನ್ನ ತಾಳ್ಮೆಗೂ ಒಂದು ಮಿತಿ ಇರಲೇಬೇಕಲ್ಲ.

ಒಂದೊಂದೇ ಎಪಿಸೋಡು ಹುಡುಕುಡುಕಿ ಓದೋಕೆ ಬೇಸರವಾ? ಪೂರ್ತಿ ಇ - ಪುಸ್ತಕ ತೆಗೆದುಕೊಳ್ಳಲು ಇಲ್ಲಿ ಕ್ಲಿಕ್ಕಿಸಿ.

ʼಸೆಕ್ಸ್‌ ನೀಡ್ಸ್‌ ಅಷ್ಟೇ ನನ್ನವಶ್ಯಕತೆಯಾಗಿದ್ರೆ ದೂರದ ಮಂಗಳೂರಿನಲ್ಲಿದ್ದ ಈಗಲೂ ದೂರದ ಬೆಂಗಳೂರಿನಲ್ಲಿರುವ ನೀನೇ ಬೇಕಿರಲಿಲ್ಲ ಕಣೋ. ಮೈಸೂರಿನಲ್ಲೇ ಬೇಕಾದಷ್ಟು ಜನ ಸಿಗೋರುʼ

“ಮ್.‌ ಮೈಸೂರಲ್ಲೇ ಸಿಕ್ತಿದ್ರಲ್ಲ. ನನ್ನನ್ಯಾಕೆ ನಿನ್ನ ಬಲೆಗೆ ಬೀಳಿಸಿ ಹಾಳುಮಾಡಿದೆ. ನೆಮ್ಮದಿಯಾಗಿರೋರನ್ನ ಕಂಡ್ರೆ ಆಗಲ್ವೇನೋ ನಿನಗೆ. ನಿನ್ನೀ ಚಟ ಗೊತ್ತಿದ್ದೇ ಆ ನಿನ್‌ ಹಳೇ ಲವರ್ರು ನೀ ಬೇರೆ ಹುಡುಗ್ರನ್ನ ಮಾತಾಡಿಸಿದ್ರೆ ಕೆರಳ್ತಿದ್ನೇನೋ ಯಾರಿಗೊತ್ತು” ಪುರುಷೋತ್ತಮ, ಅವರಮ್ಮ, ರಾಜೀವ, ರಾಜೀವನ ಮನೆಯವರೆಲ್ಲ ಹೇಳಿ ಹೇಳಿ ಸವಕಲಾಗಿಸಿದ್ದ ʼನಿನ್ನಿಂದ ಹಾಳಾಗೋಯ್ತುʼ ಅನ್ನೋ ಮಾತು ಸಾಗರನ ಬಾಯಿಂದಲೂ ಉದುರಿದಾಗ ಹೆಚ್ಚು ಬೇಸರವೇನಾಗಲಿಲ್ಲ. ಒಬ್ಬರೋ ಇಬ್ಬರೋ ಹೇಳಿದರೆ ಅವರ ಗ್ರಹಿಕೆ ತಪ್ಪೇನೋ ಅಂತಂದುಕೊಂಡು ಸಮಾಧಾನದಿಂದಿರಬಹುದಿತ್ತು. ನನ್ನ ಜೀವನದಲ್ಲಿ ಬಂದ ಎಲ್ಲರೂ ಇದೇ ಮಾತುಗಳನ್ನೇಳುವುದನ್ನು ಕೇಳಿದರೆ ಅವರ ಅಭಿಪ್ರಾಯವೇ ಸರಿ ಇರಬಹುದು. ಮೂಲತಃ ನಾನೇ ಸರಿಯಿಲ್ಲವೇನೋ ಎಂದನ್ನಿಸಿಬಿಡುತ್ತೆ. ಇರಬಹುದೇನೋ

ʼಥ್ಯಾಂಕ್ಸ್‌ ಕಣೋ. ನಿನ್ನ ಹಾಳುಮಾಡಿದ್ದಕ್ಕೆ ಸಾಧ್ಯವಾದರೆ ಕ್ಷಮಿಸುʼ

“ನಿನ್ನ ಈ ಸೆಲ್ಫ್‌ ಪಿಟಿ ಇದ್ಯಲ್ಲ. ಅಸಹ್ಯ ಅದು.…. ಅದೇ ನಿನ್ನೆಡೆಗೆ ನನ್ನನ್ನು ಸೆಳೆದುಬಿಡ್ತೋ ಏನೋ…..”

ʼಇರಬಹುದು. ನೀ ಬುದ್ವಂತ ನನಗಿಂತ. ನೀ ಹೇಳಿದ ಮೇಲೆ ಸರೀನೇ ಇರಬಹುದುʼ

“ಹ….ಹ… ನನ್ನನ್ನು ನೀ ದೂರ ಮಾಡೋಕೆ ನಾ ಬುದ್ವಂತ ಅನ್ನೋದು ಕೂಡ ಕಾರಣ ಅಲ್ವ”

ʼಅದೆಂಗೆʼ

“ನಿನ್ನ ಲೈಫಲ್ಲಿ ನೀ ಇಷ್ಟಪಟ್ಟು ಒಪ್ಕಂಡ ಇಬ್ಬರು ಗಂಡಸರೂ ನಿನಗಿಂತ ಕಡಿಮೆ ಓದಿದೋರು. ಎಲ್ಲಾ ಲೆಕ್ಕದಲ್ಲೂ ನೀ ಅವರಿಗಿಂತ ಮೇಲಿದ್ದೆ. ಕೆಳಗೆ ಬಿದ್ದಂತಿದ್ದ ಗಂಡಸರನ್ನು ಹಿಡಿದು ಮೇಲೆತ್ತಬೇಕು, ಮೇಲೆತ್ತಿ ದೊಡ್ಡವಳೆನ್ನಿಸಿಕೊಳ್ಳಬೇಕು ಅನ್ನೋ ಚಟ ನಿಂಗೆ. ನಾ ಅವರ ತರ ಕೆಳಗಿಲ್ಲವಲ್ಲ. ಅದಕ್ಕೇ ತಾತ್ಸಾರ ನಿನಗೆ. ನಿನ್‌ ಲವ್ವಲ್‌ ಬಿದ್ದು ನಾ ಓದೋದ್‌ ಬಿಟ್ಟು ಪರೀಕ್ಷೇಲಿ ಫೇಲಾಗಿದ್ರೆ ನಿಂಗ್‌ ಹೆಚ್ಚು ಖುಷಿಯಾಗಿರೋದು. ಆಗ ನನ್ನೂ ಕಮರಿಯಾಳದಿಂದ ಮೇಲೆತ್ತೋ ನೆಪದಲ್ಲಿ ಇನ್ನೂ ಲವ್‌ ಮಾಡ್ತಿದ್ಯೋ ಏನೋ”

ʼನಿನ್ನ ಮೇಲೆ ನನಗೆ ಪ್ರೀತಿ ಇಲ್ಲ ಅಂತ ಹೇಳಿದ್ಯಾರುʼ

“ಇನ್ನೂ ನನ್ನನ್ನು ಪ್ರೀತಿಸುತ್ತಿದ್ದೀಯಾ?!”

ʼಹೌದುʼ

“ಹ….ಹ….ಹ ಇದು ನಾ ಇತ್ತೀಚೆಗೆ ಕೇಳಿದ ಬಲುದೊಡ್ಡ ಜೋಕು”

ʼಸಾಕು ನಿಲ್ಲಿಸು ಸಾಗರ. ನನಗೂ ಗೊತ್ತಿತ್ತು…..ನಿನಗೂ ಗೊತ್ತಿತ್ತು…..ನಮ್ಮಿಬ್ಬರ ನಡುವಿನ ಸಂಬಂಧ ಯಾವತ್ತೂ ಅಪೂರ್ಣ ಅಂತ. ನಿನ್ನ ಜೊತೆ ಮುಂಚಿನಷ್ಟು ಸಮಯ ಕಳೆಯುತ್ತಿಲ್ಲ ಅಂದಮಾತ್ರಕ್ಕೆ ಪ್ರೀತಿ ಸತ್ತೋಗಿದೆ ಅಂತೇನಲ್ಲ. ನೀನೇ ಹೇಳ್ತಿದ್ಯಲ್ಲಾ ಪ್ರಕೃತಿ ಲೆಕ್ಕದಲ್ಲಿ ಹೆಣ್ಣಿಗೆ ವಂಶದ ಕುಡಿಯ ಲಾಲನೆ ಪಾಲನೆಯೇ ಮುಖ್ಯ ಅಂತ, ನಾ ಆಗ ಒಪ್ತಿರಲಿಲ್ಲ. ಎಲ್ಲವೂ ಮುಖ್ಯ ಅಂತಿದ್ದೆ. ರಾಧ ಹುಟ್ಟಿದ ಮೇಲೆ ನನಗೆ ನಿನ್ನ ಮಾತಿನ ಸತ್ಯದ ಅರಿವಾಯಿತು. ರಾಧ ಮೊದಲು, ಮಿಕ್ಕವರೆಲ್ಲ ನಂತರ ಅಂತ ತಿಳಿಯಿತು…… ದಿನದ ಹೆಚ್ಚಿನ ಸಮಯ ಅವಳಿಗೇ ಮೀಸಲಾಯಿತು. ಮೇಲಾಗಿ……..ʼ ಹೇಳುವುದೇಗೆ ತಿಳಿಯಲಿಲ್ಲ.

“ಮ್‌. ಹೇಳು..ಮೇಲಾಗಿ…..”

ʼಮೇಲಾಗಿ…… ನಾಳೆ ದಿನ ನನ್ನ ಮಗಳು ಬೆಳೆದು ದೊಡ್ಡವಳಾದ ಮೇಲೆ ಅಮ್ಮನದು ಕೀಳು ವ್ಯಕ್ತಿತ್ವ ಅಂತಂದುಕೊಳ್ಳಬಾರದೆಂದು ನಿನ್ನ ಜೊತೆಗಿನ ಸಂಬಂಧವನ್ನು ಸ್ವಲ್ಪ ದೂರಮಾಡಿದೆ. ಪ್ರೀತಿ ಇದ್ದೇ ಇದೆ ಕಣೋ…..ಮುಂಚಿನ ತರ ವ್ಯಕ್ತಪಡಿಸೋಕಾಗಲ್ಲ ಅಷ್ಟೇ. ನಾಳೆ ದಿನ ನಿನ್ನ ಮದುವೆಯಾದ ಮೇಲೂ ನೀ ನನ್ನ ಜೊತೆ ಮುಂಚಿನ ತರಾನೇ ಇರೋದಿಕ್ಕೆ ಸಾಧ್ಯವಾ ಹೇಳು?ʼ ಬಹಳ ಸಮಯ ಅವನಿಂದ ಯಾವ ಪ್ರತಿಕ್ರಿಯೆಯೂ ಬರಲಿಲ್ಲ.

“ಮ್‌. ನನ್ನೆಂಡತಿಗೆ ಮೋಸ ಮಾಡೋಕೆ ನಂಗಿಷ್ಟವಿಲ್ಲ ಕಣೋ…” ಅಂದವನ ಮೇಲೆ ನನ್ನಲ್ಲವನ ಬಗ್ಗೆ ಎಷ್ಟು ಪ್ರೀತಿ ಸ್ಪುರಿಸಿತು ಅಂದರೆ ಅಷ್ಟು ಸ್ಪುರಿಸಿತು. ಒಂದು ಸಾಲಿಡೀ ಸ್ಮೈಲಿ ಕಳುಹಿಸಿದೆ. ಕೊನೆಯಲ್ಲೊಂದು, ಒಂದೇ ಒಂದು ಬೇಸರದ ಸ್ಮೈಲಿ ಕಳುಹಿಸಿದೆ.

“ಅರ್ಥ?”

ʼಇನ್ನೂ ಮದುವೆಯೇ ಆಗಿಲ್ಲ. ಮದುವೆ ಬಿಡು ಹುಡುಗಿಯೂ ಗೊತ್ತಾಗಿಲ್ಲ. ಆಗಲೇ ಅವಳಿಗೆ ಮೋಸ ಮಾಡೋಕೆ ಇಷ್ಟವಿಲ್ಲ ಅಂದ್ಯಲ್ಲ. ಆ ಹುಡುಗಿ ಎಷ್ಟು ಅದೃಶ್ಟವಂತಳು ಅಂತ ಖುಷಿಗೆ….ʼ

“ಕೊನೇದು?”

ʼಆ ಅದೃಶ್ಟವಂತ ಹುಡುಗಿ ನಾನಾಗಲಿಲ್ಲವಲ್ಲ ಅಂತ….ʼ

“ಮ್.‌ ನಮ್ಮ ನಡುವೆ ಒಂದು ಸಹಜ ಸ್ನೇಹ ಕೂಡ ಉಳಿಯಲಿಲ್ಲವಲ್ಲ ಅಂತ ಬೇಸರ ನನಗೆ”

ʼಒಂದು ಸಲ ಪ್ರೀತಿ ಮೂಡಿದ ಮೇಲೆ ಸಹಜ ಸ್ನೇಹಿತರಂತೆ ಇರೋದು ಸುಲಭವಲ್ಲ. ಯಾರಿಗೊತ್ತು, ಬಹುಶಃ ಮುಂದಕ್ಕೆ….. ನಮ್ಮಿಬ್ಬರಿಗೂ ಇನ್ನೊಂದಷ್ಟು ಪ್ರಬುದ್ಧತೆ ಬಂದ ಕಾಲಕ್ಕೆ ಸಾಧ್ಯವಾದರೂ ಆಗಬಹುದುʼ

“ಮ್.‌ ಏನೋ. ನಿನಗೆ ಬೇಕ್‌ ಬೇಕಾದಾಗಲೆಲ್ಲ ನಾ ಸಿಕ್ತಿದ್ದೆ. ಮೆಸೇಜಲ್ಲಿ, ಫೋನಲ್ಲಿ. ಯಾಕೋ ಮನಸ್ಸು ತುಂಬಾ ಅಸ್ತವ್ಯಸ್ತವಾಗಿದೆ ಅಂತಂದುಕೊಂಡಾಗಲೂ ನೀ ನನಗೆ ರಿಪ್ಲೈ ಮಾಡಲ್ಲವಲ್ಲ….. ತುಂಬಾ ಕೋಪ ಮೂಡ್ತದೆ” ಅವನೇಳಿದ್ದರಲ್ಲಿ ಸುಳ್ಳೇನಿರಲಿಲ್ಲ. ಬೇಕು ಬೇಕಂತಲೂ ರಿಪ್ಲೈ ಮಾಡದೇ ಇರೋಳಲ್ಲ ನಾನು. ಅವನ ಮೆಸೇಜುಗಳು ಬಂದಾಗ ಒಂದೋ ಆಸ್ಪತ್ರೆಯಲ್ಲಿರುತ್ತಿದ್ದೆ, ಇಲ್ಲಾ ಮಗಳ ಕೆಲಸಗಳಲ್ಲಿ ಮುಳುಗಿಹೋಗಿರುತ್ತಿದ್ದೆ. ಬಹಳಷ್ಟು ಸಲ ಅವನ ಮೆಸೇಜುಗಳನ್ನು ನಾ ನೋಡುತ್ತಿದ್ದದ್ದೇ ಎಷ್ಟೋ ಘಂಟೆಯ ಬಳಿಕ. ಆಗ ಒಂದೋ ಸುಸ್ತಾಗಿರ್ತಿದ್ದೆ. ಇಲ್ಲಾ ಇಷ್ಟು ತಡವಾಗಿ ರಿಪ್ಲೈ ಮಾಡೋದ್ರಿಂದ ಏನುಪಯೋಗ ಅಂತ ಸುಮ್ಮನಾಗುತ್ತಿದ್ದೆ. ಇಲ್ವೋ ಹಿಂಗಿಂಗೆ ಅಂತ ವಿವರವಾಗಿಯೇ ಹೇಳಿದೆ.

“ನೀ ಬ್ಯುಸಿ ಇರ್ತಿ ಅಂತ ನನಗೆ ಗೊತ್ತಿರೋದಿಲ್ವಾ? ನೀ ಆಗಲೇ ರಿಪ್ಲೈ ಮಾಡಬೇಕು ಅಂತಾನೂ ಬಯಸೋನಲ್ಲ ನಾನು. ನೋಡಿದಾಗ – ಬಿಡುವಾದಾಗಲಾದರೂ ಮೆಸೇಜ್‌ ಮಾಡಬಹುದಲ್ವ"

ʼಮೊಬೈಲ್‌ ನೋಡಲೂ ಸಮಯವಾಗೋದಿಲ್ವೋʼ ಇದು ಸುಳ್ಳು.

“ಹ…..ಹ……ಮೊಬೈಲ್‌ ನೋಡೋಕೂ ಸಮಯವಿಲ್ದೆ ಎಫ್.ಬೀಲಿ ಅಷ್ಟೆಲ್ಲ ಬೇಡದೇ ಇರೋ ಕಿತ್ತೋಗಿರೋ ಅಪ್‌ಡೇಟ್ಸ್‌ ಹಾಕ್ತೀಯೇನೋ..." ನನ್ನ ಸ್ಪೇಸ್‌ ನನಗೆ ಬೇಕಲ್ಲವಾ ಅನ್ನಿಸಿದರೂ ಅವನ ವಾದಕ್ಕೆ ಸೂಕ್ತವಾದ ಯಾವ ಪ್ರತಿವಾದವೂ ನನ್ನಲ್ಲಿರಲಿಲ್ಲ. ಬೆಳಿಗ್ಗೆ ಒಂದ್‌ ನಾಲಕ್‌ ಕೋಟ್ಸೂ, ಸಂಜೆಗೊಂದು ನಾಲಕ್ಕು. ಮೂರ್ನಾಲ್ಕು ದಿನಕ್ಕೊಂದು ಹೊಸ ಪ್ರೊಫೈಲ್‌ ಫೋಟೋ. ನನ್ನ ಫೇಸ್ಬುಕ್‌ ಪ್ರೊಫೈಲ್‌ ನೋಡಿಬಿಟ್ಟರೆ ಇವಳೆಷ್ಟು ಪುರುಸೊತ್ತಾಗಿದ್ದಾಳೆ ಅನ್ನಿಸಬೇಕು.

ʼಮ್‌ʼ ಅಂತಷ್ಟೇ ಕಳಿಸಿದೆ.

“ಹೋಗ್ಲಿಬಿಡು. ನೀ ನನ್ನ ಮೆಸೇಜುಗಳಿಗೆ ಪ್ರತಿಕ್ರಿಯೆ ನೀಡದೆ ಅದೇ ಸಮಯದಲ್ಲೇ ಎಫ್.ಬೀಲಿ ಏನಾದ್ರೂ ಅಪ್‌ಡೇಟ್‌ ಮಾಡ್ದಾಗೆಲ್ಲ ನನ್ನ ಕ್ಯಾಣ ಕೆರಳೋದು. ಎಫ್.ಬಿ ನೋಡಿದ್ರೇ ಈ ಸಮಸ್ಯೆ ತಾನೇ ಅಂತ ಅನ್‌ಫ್ರೆಂಡ್‌ ಮಾಡ್ಬಿಟ್ಟೆ”

ʼಹೌದಾ! ಅದ್ಯಾವಾಗ ಮಾಡಿದೆ. ನನಗೆ ನಿನ್ನ ಅಪ್‌ಡೇಟ್ಸ್‌ ಎಲ್ಲಾ ಕಾಣ್ತಾನೇ ಇದಾವಲ್ಲʼ

“ಅನ್‌ಫ್ರೆಂಡ್‌ ಮಾಡಿರೋದು. ಬ್ಲಾಕ್‌ ಮಾಡಿಲ್ಲ”

ಏನಿವನು ಇಷ್ಟು ಇಮೆಚ್ಯೂರ್‌ ಆಗಿ ವರ್ತಿಸ್ತಿದಾನಲ್ಲ? ನನ್ನ ಸಾಗರ ಹಿಂಗಿರಲಿಲ್ಲ. ನಮ್ಮಿಬ್ಬರ ಗೆಳೆತನ ಮೂಡಿ ಬೆಳೆದದ್ದೇ ಎಫ್.ಬಿ ಮೂಲಕ. ಅಲ್ಲೇ ಅನ್‌ಫ್ರೆಂಡ್‌ ಮಾಡ್ತಾನೆ ಅಂದ್ರೆ.…..

ʼಹೋಗ್ಲಿ ಬಿಡು. ಎಫ್.ಬೀಲಿ ಸ್ನೇಹಿತರಾಗಿಲ್ಲದಿದ್ದರೂ ನಿಜ ಜೀವನದಲ್ಲಿ ಸ್ನೇಹಿತರಾಗುಳಿಯಬಹುದಲ್ಲʼ

“ಏನ್‌ ಉಳೀತದೋ ಏನೋ? ಮ್.….ನಿಂಗಿಷ್ಟೊಂದೆಲ್ಲ ತಲೆ ತಿನ್ಬಾರ್ದು….. ನನ್ನ ಮನಸ್ಸಿನ ಗೊಂದಲಗಳನ್ನೆಲ್ಲ ನಿನಗೆ ಹೇಳಬಾರದು ಅಂದ್ಕೋತೀನಿ…..ವದರೇ ಬಿಡ್ತೀನಿ”

ʼಹೇಳದೇ ಇರೋಕಾಗ್ತದಾ? ಎಷ್ಟೇ ಆಗ್ಲಿ ಸೋಲ್‌ ಮೇಟ್‌ ಅಲ್ವ...ʼ

“ಹ…ಹ…. ಆ ಪದದ ಅರ್ಥ ಹಾಳು ಮಾಡಬೇಡ……ಹೋಗ್ಲಿ ಮುಂದಿನ ತಿಂಗಳ ಹತ್ತಕ್ಕೆ ಏನ್‌ ವಿಶೇಷ"

ʼಅದೇ ಹೇಳಿದ್ಯಲ್ಲ……ನನ್ನ ಸೆಕ್ಸ್‌ ನೀಡ್ಸ್‌ ಪೂರೈಸೋಕೆ ಬಾ.….ʼ

“ಸಾಕು ಸಾಕು. ಏನ್‌ ಹೇಳು.….ಮಗಳ ನಾಮಕರಣವಾ?”

ʼಇಲ್ವೋ ಅದಿನ್ನೂ ಮುಂದಕ್ಕೆ. ನಾಮಕರಣ ಮೊದಲ ವರ್ಷದ ಹುಟ್ಟಿದಬ್ಬ ಒಟ್ಟಿಗೇ ಮಾಡೋಣಾಂತ…. ಮುಂದಿನ ತಿಂಗಳು ನನ್ನ ತಮ್ಮನ ಮದುವೆʼ

“ಆವಾಗ್ಲೇ ಯಾವಾಗ್ಲೋ ಫಿಕ್ಸ್‌ ಆಗಿತ್ತಲ್ವ? ಮದುವೆಯಾಗಿರಲಿಲ್ಲವಾ ಇನ್ನೂ….ʼ

ʼಹ್ಞೂ. ಏನೋ ಡೇಟ್‌ ಸಿಕ್ಕಿರಲಿಲ್ಲʼ

"ಹೌದಾ! ನಾನೆಲ್ಲೋ ನಿನ್ನ ತಮ್ಮನ ಮದುವೆ ಆಗೋಗಿದೆ. ನನಗೆ ನೀ ಹೇಳೇ ಇಲ್ಲ……ಮರೆತುಹೋದಳೋ ಏನೋ ಅಂದ್ಕಂಡಿದ್ದೆ”

ʼಇದ್ಯಾಕೋ ಜಾಸ್ತಿಯಾಗಲಿಲ್ಲವಾ?ʼ

“ಯಾಕೋ?”

ʼನನ್ನ ತಮ್ಮನ ಮದುವೆಗೆ ನಿನಗೆ ಹೇಳದೇ ಇರ್ತೀನೇನೋ? ನಾ ಕೆಟ್ಟವಳೇ ಹೌದು….ಆದರೆ ಅಷ್ಟೊಂದು ಕೆಟ್ಟವಳೇನಲ್ಲʼ

“ನೀ ಕೆಟ್ಟವಳೇನಲ್ವೇ…. ಸಂಬಂಧಗಳನ್ನು ಸರೀ ರೀತಿ ಉಳಿಸಿಕೊಳ್ಳೋದರಲ್ಲಿ ಸ್ವಲ್ಪ ವೀಕಿದ್ದಿ ಹೌದು…. ಆದರೂ ನನ್ನ ದೇವತೆ ಕೆಟ್ಟವಳೇನಲ್ಲ” ಇಷ್ಟೆಲ್ಲ ಬಯ್ದು ಉಪ್ಪಿನಕಾಯಾಕಿ ಇನ್ನೂ ನನ್ನನ್ನು ದೇವತೆ ಅಂತಾನಲ್ಲ!

ʼನೀನೇ ಹೇಳಿದ್ದಪ್ಪ ಆಗʼ

“ಏನೋ ಸಿಟ್ಟಲ್ಲಿ ಹೇಳಿದೆ ಅಷ್ಟೇ”

ʼಸಿಟ್ಟಲ್ಲೇ ಅಲ್ವ ನಮ್‌ ಮನಸಲ್ಲಿರೋ ಸತ್ಯ ಯಾವ ಮುಜುಗರವೂ ಇಲ್ಲದೆ ಹೊರಬರೋದುʼ

“ಇರಬಹುದು. ನಾ ಬೇಕೂ ಬೇಕೂಂತ ನಿನಗೆ ನೋವಾಗಲಿ ಅನ್ನೋ ಉದ್ದೇಶದಿಂದಲೇ ಹಂಗೇಳಿದ್ದು. ಐ ಡಿಡ್‌ ನಾಟ್‌ ಮೀನ್‌ ಇಟ್"

ʼಗೊತ್ತುʼ

“ಎಲ್ಲಾ ಗೊತ್ತು ಬಿಡವ್ಬ ಬುದ್ವಂತೆ”

ʼಮತ್ತೆ…. ಬುದ್ವಂತೇನೆʼ

“ಸರಿ ಸರಿ. ಮದುವೆಗೇನು ಬರಲೇಬೇಕಾ”

ʼಕಣಿ ಕೇಳು. ಅವತ್ತಿಗೆ ರಜಾ ಹೊಂದಿಸಿಕೊಳ್ಳಲಿ ಅಂತಾನೇ ಊರಿಗೆ ಮುಂಚೆ ಕರೀತಿರೋದುʼ

“ಮ್.‌ ಬರ್ದೇ ಇರ್ತೀನೇನೇ….ಕಡೇ ಪಕ್ಷ ನಿನ್ನ ದೂರದಿಂದನಾದ್ರೂ ನೋಡೋ ಭಾಗ್ಯ ಬಿಡೋದುಂಟಾ….”

ʼಓ….ಓ…..ಹತ್ತಿರದಲ್ಲೇ ನಿಂತ್ಕಂಡ್‌ ಫೋಟೋ ತೆಗೆಸಿಕೊಳ್ಳುವಂತೆ ಬಾʼ

"ನಿನ್ನ ಜೊತೆ ನಿಂತ್ಕಂಡ್ ಫೋಟೋ ತೆಗುಸ್ಕೊಂಡ್‌ ನಾನೇನ್‌ ಮಾಡ್ಲಿ? ಮಗಳನ್ನೆತ್ತಿಕೊಂಡು ಒಂದು ಫೋಟೋ ತೆಗೆಸಿಕೋಬೇಕು ಸಾಧ್ಯವಾದರೆ....."

ʼಯಾಕ್‌ ಸಾಧ್ಯವಾಗಲ್ಲ? ಆಗ್ತದೆ ಬಾ….ʼ

“ಮ್”‌

ʼಸರಿ ಕಣೋ. ಮತ್ತೆ ಮೆಸೇಜ್‌ ಮಾಡ್ತೀನಿʼ

“ಹ…..ಹ…..ಹ”

ʼ?ʼ

“ಮತ್ತೆ ಮೆಸೇಜ್‌ ಮಾಡ್ತೀನಿ ಅಂತ ಸುಮ್ಮನೆ ಫಾರ್ಮ್ಯಾಲಿಟೀಸ್ಗೆ ಒಂದು ಸುಳ್ಳು ಹೇಳ್ದಲ್ಲ ಅದಕ್ಕೆ.….” ನನ್ನನ್ನು ಇಷ್ಟು ಚೆನ್ನಾಗಿ ಅರ್ಥ ಮಾಡ್ಕಂಡಿರೋದಿಕ್ಕೇ ಅಲ್ವ ಇವನು ನನ್ನ ಸೋಲ್‌ಮೇಟು.

ಕ್ಷಣ ಬಿಟ್ಟು ಎಫ್.ಬೀಲಿ ಫ್ರೆಂಡ್‌ ರಿಕ್ವೆಷ್ಟ್‌ ಕಳುಹಿಸಿದ. ಪಾಪ ನನ್ನಿಂದ ಇವನಿಗೆ ಎಷ್ಟೆಲ್ಲ ಗೊಂದಲಗಳು ಅಂತ ಬಯ್ದುಕೊಂಡು ಫ್ರೆಂಡ್‌ ರಿಕ್ವೆಷ್ಟ್‌ ಒಪ್ಪಿಕೊಂಡೆ.

ಮುಖಪುಟ ಚಿತ್ರ: ಚೇತನ ತೀರ್ಥಹಳ್ಳಿ. 
ಮುಂದುವರೆಯುವುದು

No comments:

Post a Comment