Jan 29, 2020

ಒಂದು ಬೊಗಸೆ ಪ್ರೀತಿ - 50

ಡಾ. ಅಶೋಕ್.‌ ಕೆ. ಆರ್.‌
ಓಪಿಡಿಯಲ್ಲಿ ಬಿಡುವಿನ ವೇಳೆಯಲ್ಲಿ ಓದುತ್ತಾ ಕುಳಿತಿದ್ದಾಗ ರಾಮ್‌ಪ್ರಸಾದ್‌ ಒಳಬರುವುದು ಕಾಣಿಸಿತು. ರಿತಿಕಾಳನ್ನು ವಾರ್ಡಿನಲ್ಲಿ ನೋಡಲೋಗುತ್ತಿದ್ದಾಗ ಆಗೊಮ್ಮೆ ಈಗೊಮ್ಮೆ ಎದುರಿಗೆ ಸಿಕ್ಕು ಹಾಯ್‌ ಬಾಯ್‌ ಹೇಳಿದ್ದರು. ಇವತ್ತೇನು ಓಪಿಡೀಗೆ? ಅದೂ ನಿನ್ನೆ ರಿತಿಕಾ ಡಿಸ್ಚಾರ್ಜ್‌ ಆಗಿದ್ದಳಲ್ಲ? ಅವರ ಬೆನ್ನ ಹಿಂದೆಯೇ ರಿತಿಕಾ ಅಮ್ಮನ ಜೊತೆ ಪುಟ್ಟ ಪುಟ್ಟ ಹೆಜ್ಜೆಹಾಕುತ್ತಾ ನಡೆದು ಬರುತ್ತಿದ್ದರು. ಹೆಜ್ಜೆ ಎತ್ತಿಡುವುದರಲ್ಲಿ ಸುಸ್ತಿರುವುದು ಎದ್ದು ಕಾಣಿಸುತ್ತಿತ್ತಾದರೂ ಮುಖದಲ್ಲಿ ಉತ್ಸಾಹದ ಲೇಪನವಿತ್ತು, ಹತ್ತು ದಿನದ ಆಸ್ಪತ್ರೆವಾಸ ಮೂಡಿಸಿದ ಬೇಸರದ ಮೇಲೆ. ಎರಡ್ಮೂರು ದಿನ ಅಥವಾ ನಾಲ್ಕೈದು ದಿನಕ್ಕೆ ಡಿಸ್ಚಾರ್ಜ್‌ ಮಾಡುವ ಎಂದಿದ್ದರು ಮೋಹನ್‌ ಸರ್.‌ ಆದರೆ ಹೊಟ್ಟೆ ನೋವು ಕಡಿಮೆಯಾಗುವುದಕ್ಕೇ ವಾರ ತೆಗೆದುಕೊಂಡಿತ್ತು. ಪುಣ್ಯಕ್ಕೆ ಕಿಡ್ನಿಗೇನೂ ಹಾನಿಯಾಗಿರಲಿಲ್ಲ. ಹೆಚ್ಚೇ ರಿಸ್ಕಿದೆ ಅನ್ನಿಸಿದರೂ ಹೆಚ್ಚಿನ ಪ್ರಮಾಣದ ಸ್ಟಿರಾಯ್ಡ್‌ ಮಾತ್ರೆಗಳನ್ನು ಕೊಡಲಾರಂಭಿಸಿದ ಮೇಲಷ್ಟೇ ಹೊಟ್ಟೆ ನೋವು ಕಡಿಮೆಯಾಗಿದ್ದು. ರಕ್ತ ಪರೀಕ್ಷೆಗೆ ಬ್ಲಡ್‌ ತೆಗೆದುಕೊಳ್ಳಲು ಚುಚ್ಚುವ ಸೂಜಿ, ಡ್ರಿಪ್‌ಗಾಗಿ ಹಾಕಲಾದ ವ್ಯಾಸೋಫಿಕ್ಸ್‌ ಮೂರು ದಿನಕ್ಕೊಮ್ಮೆ ಬ್ಲಾಕ್‌ ಆಗುತ್ತಿತ್ತು, ಹೊಸ ವ್ಯಾಸೋಫಿಕ್ಸ್‌ ಹಾಕುವಾಗಾಗುತ್ತಿದ್ದ ನೋವೇ ಮಕ್ಕಳಿಗೆ ಆಸ್ಪತ್ರೆಯೆಂದರೆ ಭಯ.…… ಭಯಕ್ಕಿಂತ ಹೆಚ್ಚಾಗಿ ವಾಕರಿಕೆ ಮೂಡಿಸಿಬಿಡುತ್ತದೆ. ನೋವಾಗದಂತೆ ವ್ಯಾಸೋಫಿಕ್ಸ್‌ ಹಾಕುವಂತ, ಸೂಚಿ ಚುಚ್ಚುವಂತ ಔಷಧವ್ಯಾಕಿನ್ನೂ ಕಂಡುಹಿಡಿದಿಲ್ಲವೋ? 

ಫಾಲೋ ಅಪ್‌ಗೆ ಬಂದಿರಬೇಕೇನೋ, ಮೋಹನ್‌ ಸರ್‌ ಬರ ಹೇಳಿರಬೇಕೇನೋ ಅಂದುಕೊಂಡು ಪುಸ್ತಕದಲ್ಲಿ ತಲೆತಗ್ಗಿಸಿದೆ. ಉಹ್ಞೂ.. ಅವರು ನಾನಿದ್ದ ಕೊಠಡಿಗೇ ಬಂದರು. ನೋಡಿ ನಕ್ಕು ಮೇಲೆದ್ದೆ. ಎಷ್ಟೇ ಆಗ್ಲಿ ಹೆಚ್.ಆರ್‌ ಮ್ಯಾನೇಜರ್ರು. ಮುಂದೆ ನಾ ಡಿ.ಎನ್.ಬಿ ಮುಗಿಸಿ ಕೆಲಸಕ್ಕೆ ಸೇರಿದಾಗ ಇವರ ಸಹಾಯವೆಲ್ಲ ಆಗೀಗ ಬೇಕೇ ಆಗ್ತದಲ್ಲ ಅಂತ ನಿಂತೆನೋ ಏನೋ. 

“ಹಲೋ ಡಾಕ್ಟರ್‌ ಡಿಸ್ಟರ್ಬ್‌ ಮಾಡಿದ್ನಾ.…” 

ʼಹಂಗೇನಿಲ್ಲ ಸರ್.‌ ಓಪಿಡಿ ಬಿಡುವಾಗಿತ್ತಲ್ಲ. ಓದ್ತಿದ್ದೆʼ 

ಓದ್ತಿರೋದು ನನ್ನ ಕಣ್ಣಿಗೂ ಕಾಣಿಸಿತ್ತಲ್ಲ ಎನ್ನುವಂತೆ ನಕ್ಕು ರಿತಿಕಾ ಕಡೆಗೆ ನೋಡಿದರು. ರಿತಿಕಾ ತನ್ನ ಕೈಯಲ್ಲಿದ್ದ ಕವರನ್ನು ತಂದು ನನ್ನ ಕೈಗಿತ್ತಳು. ಕವರ್‌ ತೆಗೆದುಕೊಳ್ಳುತ್ತಾ ʼಏನಿದು?ʼ ಎಂದು ರಾಮ್‌ಪ್ರಸಾದ್‌ ಕಡೆಗೆ ನೋಡಿದೆ. 

"ನಮ್ಮಕ್ಕ ನಿಮಗೊಂದು ಬಾಕ್ಸ್‌ ಸ್ವೀಟ್‌ ಕೊಡಲೇಬೇಕೆಂದು ಹೇಳಿದರು. ನಿನ್ನೆ ಡಿಸ್ಚಾರ್ಜ್‌ ಆಗೋದು ತಡವಾಯ್ತು. ಇನ್ಶೂರೆನ್ಸ್‌ ಇತ್ತಲ್ಲ. ಹಾಗಾಗಿ ತಡವಾಯ್ತು. ಆಗಲೇ ನೀವಿದ್ದೀರ ಹೆಂಗೆ ಅಂತ ವಿಚಾರಿಸಿದೆ. ಹೊರಟೋಗಿದ್ರಿ ಮನೆಗೆ” 

ʼಅಯ್ಯೋ ಸ್ವೀಟೆಲ್ಲ ಯಾಕ್‌ ತರೋಕೋದ್ರಿʼ ರಿತಿಕಾಳ ಅಮ್ಮನ ಕಡೆಗೆ ನೋಡುತ್ತಾ ಕೇಳಿದೆ. ಮೇಲ್ಮೇಲ್‌ ಹಂಗ್‌ ಹೇಳಿದ್ರೂ ಒಳಗೊಳಗೇ ಖುಷಿಯಾಗಿತ್ತು. ಏನೋ ಸ್ವಲ್ಪ ಅಪರೂಪದ ರೋಗವನ್ನು ಶೀಘ್ರವಾಗಿ ಕಂಡುಹಿಡಿದದ್ದಕ್ಕೆ ಇಷ್ಟಾದರೂ ಪುರಸ್ಕಾರ ಸಿಕ್ಕಿತಲ್ಲ ಎಂದು. ಅದನ್ನೆಲ್ಲಾ ತೋರಿಸಿಕೊಳ್ಳಲಾದೀತೇ. ʼತಗೊಳಿ ತಗೊಳಿ. ಮಗಳಿಗೇ ಕೊಡಿʼ ಎಂದು ವಾಪಸ್ಸು ರಿತಿಕಾಳ ಕೈಗೇ ಕವರನ್ನು ಕೊಡಲೆತ್ನಿಸಿದೆ. ತನ್ನೆರಡೂ ಕೈಗಳನ್ನು ತಟ್ಟಂತ ಬೆನ್ನಹಿಂದೆ ಕಟ್ಟಿಕೊಂಡ ರಿತಿಕಾ “ಇಲ್ಲ ಆಂಟಿ. ಇದು ನಿಮಗೇಂತಲೇ ತಂದಿದ್ದು. ನೀವೇ ತಿನ್ನಬೇಕು. ಮೇಲಾಗಿ ನೀವ್‌ ನಂಗ್‌ ವಾಪಸ್‌ ಕೊಟ್ರೂ ನಾನಿದನ್ನ ತಿನ್ನೋ ಹಂಗಿಲ್ಲ" ಎಲಾ ಚುರುಕ್‌ ಮೆಣಸಿನಕಾಯಿ ಅಂದ್ಕೋತಾ ʼಯಾಕ್‌ ತಿನ್ನಂಗಿಲ್ವೋ ಮೇಡಮ್ಮೋರುʼ ಎಂದಾಕೆಯ ಕೆನ್ನೆ ಚಿಗುಟಿದೆ. ಹತ್ತು ದಿನದ ಖಾಯಿಲೆಯಿಂದ ಪಾಪ ಕೆನ್ನೆಯೆಲ್ಲ ಒಳಗೋಗಿಬಿಟ್ಟಿತ್ತು. 

“ಬೇಕರಿ ಐಟಮ್ಸು, ಐಸ್‌ಕ್ರೀಮು, ತುಪ್ಪ, ಬೆಣ್ಣೆ – ಎಣ್ಣೆ, ಮೊಟ್ಟೆ – ಮೀನು – ಮಾಂಸ ಏನೂ ತಿನ್ನಬಾರದು ಅಂತ ಹೇಳಿದ್ದಾರಲ್ಲ. ತಿಂದ್ರೆ ಮತ್ತೆ ಹುಷಾರು ತಪ್ತೀನಂತಲ್ಲ. ಮತ್ತೆ ಹುಷಾರು ತಪ್ಪಿ ಅಷ್ಟೆಲ್ಲ ಹೊಟ್ಟೆ ನೋವಾಗೋದಕ್ಕಿಂತ ತಿನ್ನದೇ ಇರೋದೇ ಗುಡ್‌ ಅಲ್ವ ಅಮ್ಮ”. ಹು ಮಗಳೆ ಅಂತ ಅವರಮ್ಮ ತಲೆಯಾಡಿಸಿದರು. 

ಅಮ್ಮನ ಕಡೆಗೆ ತಿರುಗಿದವಳ ತಲೆ ಸವರುತ್ತಾ ʼಸರಿ ಪುಟ್ಟ. ನಾನೇ ತಕೋತೀನಿ. ನೀ ಪೂರ್ತಿ ಹುಷಾರಾದ ಮೇಲೊಂದು ದಿನ ಬರ್ಬೇಕು. ಆಗ ನೀ ಹೇಳಿದ್ದೆಲ್ಲ ಕೊಡಿಸ್ತೀನಿʼ

ಒಂದೊಂದೇ ಎಪಿಸೋಡು ಹುಡುಕುಡುಕಿ ಓದೋಕೆ ಬೇಸರವಾ? ಪೂರ್ತಿ ಇ - ಪುಸ್ತಕ ತೆಗೆದುಕೊಳ್ಳಲು ಇಲ್ಲಿ ಕ್ಲಿಕ್ಕಿಸಿ.

“ಆಗ ಅದೆಲ್ಲಾ ತಿನ್ನಬೋದಾ?” ಆಸೆ ಮೂಡಿಸಿದ ಪ್ರಶ್ನೆ. 

ʼಎಲ್ಲಾ ಒಂದೇ ಸಲ ತಿನ್ನಂಗಿಲ್ಲ. ಸ್ವಲ್ಪ ಸ್ವಲ್ಪ ತಿನ್ನಬೇಕು. ಹುಷಾರಾಗಿರೋದ್‌ ಮುಖ್ಯ ಅಲ್ವʼ. ಇದರಲ್ಲೇನೂ ಅನುಮಾನೇ ಇಲ್ಲ ಬಿಡಿ ಎನ್ನುವಂತೆ ತಲೆಯನ್ನತ್ತಿತ್ತ ತೂಗಾಡಿಸಿದಳು. 

ಅವರಮ್ಮ ಎರಡು ಸಲ ಧನ್ಯವಾದಗಳನ್ನೇಳಿದರು. “ನಮ್ಮೋರೂ ಬರಬೇಕಿತ್ತು. ಸುಮಾರ್‌ ದಿನ ರಜೆ ಮಾಡಿಬಿಟ್ಟಿದ್ರಲ್ಲ. ಹಂಗಾಗಿ ಕೆಲಸದ ಒತ್ತಡ. ಮುಂದಿನ ಸಲ ಬಂದಾಗ ಸಿಗ್ತೀನಿ ಅಂತ ಹೇಳು ಅಂದ್ರು” ಅರೆಕ್ಷಣ ಬಿಟ್ಟು “ಯಾವಾಗಾದ್ರೂ ಬಿಡುವು ಮಾಡಿಕೊಂಡು ಬನ್ನಿ ಮನೆ ಕಡೆಗೆ. ಇಲ್ಲೇ ರೈಲ್ವೇ ಸ್ಟೇಷನ್‌ ಹಿಂಭಾಗ ನಮ್ಮ ಮನೆ" ಅಂದಾಗ ಇದ್ಯಾಕೋ ತೀರಾನೇ ಜಾಸ್ತಿ ಆಗಲಿಲ್ವಾ? ಅಂತ ನನಗೇ ಅನ್ನಿಸಿತು. ಹೊರಡುವಾಗ ರಾಮ್‌ಪ್ರಸಾದ್‌ ಒಂದು ಥ್ಯಾಂಕ್ಸ್‌ ಹೇಳಿ ಹೊರಟರು. ಅಕ್ಕ ತೀರ ಮನೆಗೇ ಕರೆದುಬಿಟ್ಟಿದ್ದಕ್ಕೆ ಅವರಿಗೂ ಮುಜುಗರವಾಯ್ತೋ ಏನೋ. ಅವರು ಅತ್ತ ಹೋಗುತ್ತಿದ್ದಂತೆ ಲೈಬ್ರರಿಗೆಂದು ಹೋಗಿದ್ದ ಸುಮ ವಾಪಸ್ಸಾದಳು. ಒಳಗೆ ಬರುತ್ತಿದ್ದಂತೆಯೇ “ಏನ್‌ ಚಳಿಯಲ್ವ ಇಲ್ಲಿ” ಎಂದು ಹೇಳಿ ಎರಡೂ ಕೈಗಳನ್ನುಜ್ಜಿಕೊಂಡಳು. ಇಡೀ ಆಸ್ಪತ್ರೆಯಲ್ಲಿ ಸೆಂಟ್ರಲೈಸ್ಡ್‌ ಏಸಿ ಇದೆ ಅನ್ನೋದೇನೋ ನಿಜಾನೇ, ಆದರದು ತೀರ ಚಳಿ ಹುಟ್ಟಿಸುವಷ್ಟೇನಿರುವುದಿಲ್ಲವಲ್ಲ ಅಂದುಕೊಳ್ಳುತ್ತಾ ʼಚಳೀನಾ? ನಂಗೇನೋ ಹಂಗ್‌ ಅನ್ನಿಸುತ್ತಿಲ್ಲವಲ್ಲ. ಹುಷಾರಿಲ್ವಾ ಹೆಂಗೆ ನಿಂಗೆʼ ಅಂದೆ. 

“ಏಸಿ ಅಷ್ಟೇ ಇದ್ರೆ ಚಳಿ ಆಗ್ತಿರಲಿಲ್ಲವೇನೋ. ಏಸಿ ಜೊತೆ ಫ್ಯಾನೂ ಇದ್ರೆ ಚಳಿ ಆಗ್ತದಲ್ಲ” ಇಲ್ಲೆಲ್ಲಿ ಫ್ಯಾನ್‌ ಹಾಕಿದ್ದಾರೆ ಎಂದೊಂದು ರೌಂಡು ನೋಡಿ ʼಇಲ್ಲೆಲ್ಲೇ ಫ್ಯಾನುʼ ಎಂದು ಕೇಳಿದೆ. 

“ಇಲ್ಲೆಲ್ಲಿದೆ ಫ್ಯಾನು? ಈಗಷ್ಟೇ ಹೊರಗೋಯ್ತಲ್ಲ” ಇವಳೇನು ಹೇಳ್ತಿದ್ದಾಳೆ ಅಂತೊಂದು ಕ್ಷಣ ಹೊಳೆಯಲೇ ಇಲ್ಲ. ಕೊನೆಗೊಮ್ಮೆ ಹೊಳೆದು ʼಅಯ್ಯೋ ಗೂಬೆ ತಗಂಡ್‌ಬಂದುʼ ಅಂತ ಸಿಡುಕಿದೆ. 

"ನೋಡಪ್ಪ! ನಿಜ ಹೇಳಿದ್ರೆ ಜನರಿಗೆ ಮೂಗಿನ್‌ ತುದೀಲೇ ಸಿಟ್ಟು" 

ʼಏನ್‌ ನಿಜ?! ಅವರಕ್ಕನಿಗೇನೋ ನನ್ನ ಕಂಡು ಥ್ಯಾಂಕ್ಸ್‌ ಹೇಳಿ ಹೋಗಬೇಕಿತ್ತಂತೆ. ಅದಕ್ಕೆ ಬಂದಿದ್ರು ಅಷ್ಟೇʼ 

“ಅವರಕ್ಕ ಥ್ಯಾಂಕ್ಸ್‌ ಹೇಳಿದ್ರು ಸರಿ. ಸ್ವೀಟು ಸ್ಮಾರ್ಟಿ ಕೊಟ್ಟಿದ್ದಾ….” 

ʼಥತ್ ನಿನ್ನ. ಸ್ವೀಟ್‌ ಕೊಟ್ಟಿದ್ದು ರಿತಿಕಾ ಬಾಸುʼ 

“ಓ ಹಂಗೆ ಹಂಗೆ! ಮತ್ಯಾಕೆ ಆ ಸ್ಮಾರ್ಟಿ ಧರಣಿ ಹೆಂಗೆ. ಅವರಿಗೆ ಮದುವೆಯಾಗಿದೆಯಾ ಅಂತೆಲ್ಲ ವಿಚಾರಿಸ್ಕೋತಿರೋದು ಆಸ್ಪತ್ರೇಲಿ” ಅಯ್ಯಪ್ಪ! ಇವಳೇಳಿದಂತೆ ನಿಜ್ಜ ಅವರು ನನ್ನ ಫ್ಯಾನ್‌ ಆಗೋಗಿದ್ದಾರಾ? ಒಂದ್‌ ಮಗು ಆಗಿದ್ರೂ ಇನ್ನೂ ಗಂಡಸರಲ್ಲಿ ನನ್ನನ್ನು ಮದುವೆಯಾಗೋ ಆಸಕ್ತಿ ಕೆರಳಿಸುವಷ್ಟು ತಾಕತ್ತಿದೆ ನನ್ನಲ್ಲಿ! ಅಂತೆಲ್ಲ ಮನಸ್ಸು ಖುಷಿ ಪಡುತ್ತಿದ್ದಾಗ ಆ ಖುಷಿಯ ಗುಳ್ಳೆಯನ್ನೊಡೆದಿದ್ದು ಸುಮಳ ನಗು. 

“ಏನ್‌ ಮೇಡಂ! ಯಾವುದೋ ಕಲ್ಪನಾಲೋಕಕ್ ಹೋಗ್ಬಿಟ್ರಾ ಅಂತ. ಅವರೇನೂ ವಿಚಾರಿಸಿಲ್ಲ. ಸುಮ್ಮನೆ ನಿನ್ನ ಕಾಲೆಳೆಯುವುದಕ್ಕೆ ಹೇಳಿದ್ದು” 

ಇವಳಜ್ಜಿ! ಒಂದ್‌ಕ್ಷಣ ಖುಷಿಯಾಗೋಗಿತ್ತು ನನ್ನ ಸೌಂದರ್ಯದ ಮೇಲೆ. ವ್ಯಕ್ತಿತ್ವ ಮುಖ್ಯ, ವ್ಯಕ್ತಿತ್ವ ಶಾಶ್ವತ ಸೌಂದರ್ಯವಲ್ಲ ಅನ್ನೋದರ ಅರಿವಿದ್ರೂ ಸೌಂದರ್ಯದ ಬಗ್ಗೆ ಯೋಚಿಸೋದು, ಸುಂದರತೆಯನ್ನು ವಿನಾಕಾರಣ ಹೊಗಳೋದು, ಹೊಗಳಿಕೊಳ್ಳೋದನ್ನು ತಪ್ಪಿಸೋಕಾಗಲ್ಲ. ಇವಳಿಗೇನಾದ್ರೂ ಉತ್ತರ ಹೇಳಬೇಕಲ್ಲ…….. 

ʼಯಾವ್‌ ಕಲ್ಪನಾ ಲೋಕವೂ ಇಲ್ಲ. ನನ್‌ ಎಫ್‌.ಬಿ ಪ್ರೊಫೈಲಲ್ಲಿ ಗಂಡ ಮಗಳ ಜೊತೆಗಿರೋ ಫೋಟೋನೆ ಹಾಕಿದ್ದೀನಿ. ಫ್ರೆಂಡ್‌ ರಿಕ್ವೆಷ್ಟ್‌ ಕಳಿಸುವಾಗ ಆ ಫೋಟೋ ಕಂಡೇ ಇರುತ್ತೆ. ಮತ್ತಿನ್ಯಾಕೆ ವಿಚಾರಿಸಿರ್ತಾರೆ ಅಂತ ಯೋಚಿಸ್ತಿದ್ದೆʼ. 

“ಓಹ್!‌ ಹಂಗೆ! ಹೋಗ್ಲಿ ಬಿಡಮ್ಮ ನಮಗ್ಯಾಕೆ ನಿಮ್ಮ ನಿಮ್‌ ಫ್ಯಾನುಗಳ ವಿಷಯ. ನಿಮ್‌ ಫ್ಯಾನ್ಸ್‌ ತಂದುಕೊಟ್ಟ ಸ್ವೀಟ್ಸು ತಿನ್ನಬಹುದಾ ಹೇಗೆ?” ಅವಳ ನಾಟಕೀಯ ವರ್ತನೆಗೆ ನಗಾಡುತ್ತಾ ʼತಗಳಮ್ಮ ತಾಯಿʼ ಎಂದೆನ್ನುತ್ತಾ ಸ್ವೀಟ್ಸ್‌ ಬಾಕ್ಸ್‌ ತೆರೆದೆ. ನನ್ನಿಷ್ಟದ ಕಾಜೂ ಬರ್ಫಿ. ಇಬ್ಬರೂ ನಾಲ್ಕು ನಾಲ್ಕು ಪೀಸು ತಿಂದು ಓದುವುದರಲ್ಲಿ ಮಗ್ನರಾದೆವು. ಓಪಿಡಿ ಕ್ಲೋಸ್‌ ಮಾಡಬೇಕು ಹೊರಡಿ ಮೇಡಂ ಎನ್ನುವವರೆಗೂ ಮತ್ತೊಂದು ಮಾತನಾಡದೆ ಓದುವುದರಲ್ಲಿ ಮುಳುಗಿಹೋದೆವು. 

* * *
ರಾಧಾಳಿಗೆ ಆರು ತಿಂಗಳು ತುಂಬಿದ ಸಂಜೆ ನಾಲ್ಕು ಚಮಚದಷ್ಟು ರಾಗಿ ಅಂಬಲಿಯನ್ನು ಹೊಳ್ಳಿ ಬಳಸಿ ಕುಡಿಸುವಾಗ ನನ್ನಲ್ಲಿ ವಿಪರೀತ ತಳಮಳ. ಮೇಲ್‌ ಆಹಾರ ಕೊಡಲು ಶುರುಮಾಡಲು ಸಮಯದಲ್ಲಿ ಸರಿಯಾಗಿ ಶುಚಿಗೊಳಿಸದ ಪಾತ್ರೆಗಳಿಂದಲೋ ಅಥವಾ ಸರಿಯಾಗಿ ಬೇಯಿಸದ ಆಹಾರದಿಂದಲೋ ಮಗುವಿನ ಹೊಟ್ಟೆ ಕೆಟ್ಟು ಭೇದಿ ಕಿತ್ಕೊಳ್ಳೋದು ಸಾಮಾನ್ಯ. ಮಕ್ಕಳಲ್ಲಿ ವಾಂತಿ ಬೇಧಿ ತೀರ ಎಲ್ಲಾ ತೀರ ಅಪರೂಪದ ಸಂಗತಿಗಳಲ್ಲವಾದರೂ ರಾಧಳಿಗೆ ಹುಷಾರು ತಪ್ಪಿದರೆ ರಜೆ ಹೆಂಗ್‌ ಹಾಕೋದು ಅನ್ನೋ ಚಿಂತೆ ನನಗೆ. ಮಾರನೇ ದಿನ ಆಸ್ಪತ್ರೆಗೆ ಹೊರಡುವ ಮುನ್ನ ಅಮ್ಮಿನಿಗತ್ತತ್ತು ಸಲ ಪಾತ್ರೆ ಸರಿ ತೊಳಿ, ಬಿಸಿ ನೀರಲ್ಲೇ ತೊಳಿ ಬೇಕಾದ್ರೆ, ಹೊಳ್ಳೇನಾ ನೀರಲ್ಲಾಕಿ ಕುದಿಸು, ಪ್ರತಿ ಸಲ ಹೊಸದಾಗಿ ಅಂಬಲಿ ಗಂಜಿ ಮಾಡ್ಕೋ, ಸೆರೆಲ್ಯಾಕ್‌ ಈಗ್ಲೇ ಬೇಡ ಎಂದು ಹೇಳುತ್ತಲೇ ಇದ್ದೆ. ಕೇಳುವವರೆಗೂ ಕೇಳುತ್ತಿದ್ದ ಅಮ್ಮನಿಗೆ ಕಡೆಗೆ ತಾಳ್ಮೆ ಖಾಲಿಯಾಗಿ "ಕಂಡಿದ್ದೀನ್‌ ಕಣ್‌ ಹೋಗೆ. ನೀನೊಬ್ಳೆ ಮಗೂನ್‌ ಹೆತ್ತೋಳ್‌ ತರ ಆಡ್ಬೇಡ. ನಾನೂ ಎರಡ್‌ ಎತ್ತಿ ಆಡ್ಸಿ ಸಾಕಿದ್ದೀನ್‌ ಕಣ" ಎಂದು ರೇಗಿದ ಮೇಲೆಯೇ ನಾ ಸುಮ್ಮನಾಗಿದ್ದು. ಅಮ್ಮ ಚೆನ್ನಾಗಿ ನೋಡ್ಕೋತಾರೆ ಅಂತ ಸುಮ್ಮನಾಗಿದ್ದಲ್ಲ, ಅಮ್ಮನ ಬಾಯಿಗೆದರಿ ಸುಮ್ಮನಾಗಿದ್ದು. 

ಆಸ್ಪತ್ರೆಗೋದಾಗ ಒಂದೆಡೆ ಬಿಡುಗಡೆಯ ಭಾವ. ಮಗಳಿಗೆ ಹಾಲು ಸಾಲ್ತೋ ಇಲ್ವೋ ಅನ್ನೋ ಚಿಂತೆಗಳಿನ್ನಿಲ್ಲ. ವಾರದಿಂದ ಎದೆಯಲ್ಲಿ ಹೆಚ್ಚು ಹಾಲೂ ಬರುತ್ತಿರಲಿಲ್ಲ. ಕುಡಿಸುವುದೆಷ್ಟೋ ಅಷ್ಟೇ. ಎದೆಹಾಲು ಹಿಂಡಿ ತೆಗೆಯಲು ಪ್ರಯತ್ನಪಟ್ಟರೆ ನಾಲ್ಕನಿ ಬರುತ್ತಿರಲಿಲ್ಲ. ಇನ್ನದರ ಬಗ್ಗೆ ಚಿಂತೆ ಮಾಡುವಂತಿಲ್ಲ. ಜೊತೆಜೊತೆಗೆ ಒಂಥರಾ ಮಗಳು ನನ್ನಿಂದ ದೂರವಾದ ಭಾವವೂ ಕಾಡ್ತಿದೆ. ಇನ್ನವಳು ಅರ್ಧಂಬರ್ಧ ಸ್ವತಂತ್ರಳೇ ಅಲ್ಲ? ನಾ ಇಲ್ಲದೇ ಹೋದರೂ ಅದೂ ಇದೂ ತಿನ್ಕೋತಾ ಬೆಳೆದುಬಿಡ್ತಾಳೆ. ಬೆಳೀಲಿ….ಬೇಗ ಬೇಗ. 

ಆಸ್ಪತ್ರೆಯಲ್ಲಿ ಸಿಗುವ ಬಿಡುವ ಸಮಯದಲ್ಲೀಗ ಹೆಚ್ಚು ಏಕಾಗ್ರತೆಯಿಂದ ಓದಲು ಸಾಧ್ಯವಾಗುತ್ತಿತ್ತು. ಮಗಳ ಚಿಂತೆ ಅರ್ಧಕ್ಕರ್ಧ ಕಡಿಮೆಯಾಗಿದ್ದು ಕಾರಣ. ಮಗಳು ಯಾವುದೇ ನೆಪ ಹೇಳದೆ ಕತ್ತತ್ತಿತ್ತ ಅಲುಗಾಡಿಸದೆ ಕೊಟ್ಟಿದ್ದನ್ನೆಲ್ಲ ಗಬಗಬನೆ ತಿನ್ನುತ್ತಿದ್ದಳು. ರಾಗಿ ಸ್ಸರಿ, ಗಂಜಿ, ಅಪರೂಪಕ್ಕೊಂದೊಂದು ಚಮಚ ಸೆರೆಲ್ಯಾಕಿಂದ ಚೆನ್ನಾಗಿ ಬೇಯಿಸಿ ಹಿಚುಕಿ ಕಲಿಸಿದ ಅನ್ನ – ಬೇಳೆಗೆ ಬಡ್ತಿ ಹೊಂದಿದ್ದಳು. “ಇಂಥದ್ದನ್ನ ತಿನ್ನದೆ ಹೊರಗೆ ಉಗುಳೋಲ್ಲ ನನ್ನ ಮೊಮ್ಮಗಳು” ಬಂದೋರಿಗೆಲ್ಲ ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದಳು ಅಮ್ಮ. ಚೆನ್ನಾಗಿ ತಿನ್ನುವ ಕಾರಣಕ್ಕೆ ಮುಂಚಿಗಿಂತ ಹೆಚ್ಚು ಆಟ, ಹೆಚ್ಚು ಹಟ. ಪುಣ್ಯಕ್ಕೆ ರಾತ್ರಿ ಹೊತ್ತು ಮೊದಲಿಗಿಂತ ಆರಾಮಾಗಿ ಮಲಗಿರುತ್ತಿದ್ದಳು. ಅಷ್ಟರಮಟ್ಟಿಗೆ ನನಗೆ ಆರಾಮು. ಬೆಳಿಗ್ಗೆ ಹೊತ್ತು ಆಟ ಆಟ ಆಟ. ಕೈಗೊಂದು ಗಿಲಕಿ ಕೊಟ್ಟರೆ ಸಾಕು. ಆದರೆ ಜೊತೆಗೊಬ್ಬರು ಕುಳಿತಿರಲೇಬೇಕು. ಅವರು ಚೂರು ಅತ್ತಿತ್ತ ಹೋದರೆ ಅಳು. ಅಮ್ಮ ಎರಡು ಕೆಜಿ ಕಳೆದುಕೊಂಡಿದ್ದರು. ನಾ ಒಂದು ಕೆಜಿ ಗಳಿಸಿಕೊಂಡಿದ್ದೆ! 

ನೈಟ್‌ ಡ್ಯೂಟಿ ಮಾಡಿದ ಮರುದಿನ ಹತ್ತು ಹನ್ನೊಂದಕ್ಕೆಲ್ಲ ಮನೆಗೆ ವಾಪಸ್ಸಾದಾಗ, ಭಾನುವಾರ ಹಬ್ಬ ಹರಿದಿನಗಳಲ್ಲಿ ಡ್ಯೂಟಿ ಇಲ್ಲದ ದಿನಗಳಲ್ಲಿ ರೌಂಡ್ಸು ಮುಗಿಸಿ ಬೇಗನೆ ಹಿಂದಿರುಗಿದಾಗ ಯಾಕಾದ್ರೂ ಮನೆಗೆ ಬೇಗ ಬಂದ್ನೋ ಅನ್ನಿಸಿಬಿಡೋದು. ನಾ ಇದ್ದರಂತೂ ಅಮ್ಮ ರಾಧಾಳೆಡೆಗೆ ಕತ್ತೆತ್ತಿಯೂ ನೋಡುತ್ತಿರಲಿಲ್ಲ. ಬಚ್ಚಲಿಗೆ ಹೋಗಬೇಕಾದರೆ ಐದು ಸಲ ಕೂಗಿದರಷ್ಟೇ ಹ್ಞೂಗುಟ್ಟುತ್ತಿದ್ದರು. ರಾತ್ರಿಯಷ್ಟೊತ್ತಿಗೆ ಸುಸ್ತೆದ್ದು ಹೋಗುತ್ತಿದ್ದೆ. ಅಮ್ಮ ಅಡುಗೆ ಮನೆ – ದೇವರ ಕೋಣೆ ಸ್ವಚ್ಛ ಮಾಡಿಕೊಂಡು ಅಕ್ಕಪಕ್ಕದವರ ಜೊತೆ ಒಂದಷ್ಟು ಹರಟಿ – ಈಗೀಗ ಸೋನಿಯಾಳ ಅಮ್ಮ ಕೂಡ ಅಮ್ಮನ ಜೊತೆ ಹರಟಲಾರಂಭಿಸಿದ್ದರು; ಅಲ್ಲಿಗೆ ಅವರಿಗೂ ಮದುವೆ ಬಗ್ಗೆ ಇದ್ದ ಮುನಿಸು ಕಡಿಮೆಯಾದಂತಾಗಿತ್ತು – ವಾಪಸ್ಸಾಗುತ್ತಿದ್ದುದೇ ರಾತ್ರಿಗೆ. ʼಯಪ್ಪ. ಯಾಕಾದ್ರೂ ಮನೆಗೆ ಬೇಗ ಬರ್ತೀನೋʼ ಅನ್ನಿಸಿಬಿಡುತ್ತಿತ್ತು. ನಿಧಾನಕ್ಕೆ ಓದುವ ನೆಪ ಹೇಳ್ತ ಒಂದೆರಡು ಘಂಟೆ ತಡವಾಗಿ ಬರ್ತಿದ್ದೆ. ಓದುವುದೂ ಇರುತ್ತಿತ್ತು ರಾಶಿ ರಾಶಿ. 

ಬೆಂಗಳೂರಿನ ಆಸ್ಪತ್ರೆಯೊಂದರಲ್ಲಿ ಕಾರ್ಯನಿರತ ವೈದ್ಯರ ಮೇಲೆ ಹಲ್ಲೆ ಮಾಡಿದ ಕಾರಣಕ್ಕೆ ಇಡೀ ಕರ್ನಾಟಕದಾದ್ಯಂತ ವೈದ್ಯರ ಮುಷ್ಕರ ಘೋಷಿಸಲಾಯಿತು. ತುರ್ತು ಸೇವೆ ಇರ್ತದೆ ಓಪಿಡಿ ಇರುವುದಿಲ್ಲ ಎಂದರು. “ಡ್ಯೂಟಿಗೆ ಮರಳಿ ಬಂದಾಗಿಂದ ನೀ ರಜಾನೇ ಹಾಕಿಲ್ವಲ್ಲಮ್ಮ. ನಾಳೆ ಬರೋಕೋಗಬೇಡ. ರೆಸ್ಟ್‌ ಮಾಡ್ಕೋ. ರಜದ ಲೆಕ್ಕವಲ್ಲ. ಪರ್ಮಿಷನ್‌ ಲೆಕ್ಕ" ಎಂದು ಮೋಹನ್‌ ಸರ್‌ ಹೇಳಿದಾಗ ʼಅಯ್ಯಯ್ಯೋ ಬೇಡ ಸರ್.‌ ನಾ ಡ್ಯೂಟಿಗೆ ಬಂದು ಸಂಜೆ ಹೋಗ್ತೀನಿʼ ಎಂದು ಕೂಗಿ ಹೇಳಬೇಕೆಂದವಳು ʼಥ್ಯಾಂಕ್ಸ್‌ ಸರ್‌ʼ ಎಂದೆ ಕಷ್ಟದಿಂದ ಮುಗುಳ್ನಗುತ್ತಾ. ಆಸ್ಪತ್ರೆಯಿಂದ ಮನೆಗೆ ದಡಬಡಾಯಿಸಿಕೊಂಡು ಹೊರಡುವ ಅನಿವಾರ್ಯತೆ ಈಗಿರಲಿಲ್ಲವಾಗಿ ಡ್ಯೂಟಿ ಮುಗಿಸಿಕೊಂಡು ಕ್ಯಾಂಟೀನಿಗೋಗಿ ಸುಮಳ ಜೊತೆಗೊಂದು ಕಾಫಿ ಕುಡಿಯುವುದು ರೂಢಿ. 

ʼಯಾಕಾದ್ರೂ ರಜೆ ಕೊಟ್ರೆ ನಂಗೆʼ ಸುಮಳ ಜೊತೆ ಗೊಣಗಾಡಿದೆ. 

“ರಜಾ ಕೊಟ್ರೆ ಯಾರಾದ್ರೂ ಗೋಳಾಡ್ತಾರ? ಆರಾಮಾಗಿ ರೆಸ್ಟ್‌ ಮಾಡ್ಕೊ ಹೋಗು” 

ʼರೆಸ್ಟಂತೆ ರೆಸ್ಟು ನಿನ್‌ ತಲೆ. ಆಸ್ಪತ್ರೇಲಿ ಓಪಿಡೀಲಿ ಬಿಡುವಾಗ್‌ ಕುಳ್ತಿರ್ತೀವಲ್ಲ ಆಗಷ್ಟೇ ನನಗೆ ರೆಸ್ಟು ಸಿಗೋದು. ಮನೇಲಿದ್ರೆ ಎಲ್ಲಿ ರೆಸ್ಟು? ಮಗಳನ್ನ ಎತ್ತಾಡಿಸ್ತಾನೇ ಇರಬೇಕು ಇಡೀ ದಿನ. ನಾ ಮನೇಲಿದ್ರೆ ಅಮ್ಮ ಮಗಳ ಕಡೆ ಸುಳಿಯೋದೂ ಇಲ್ಲ ಗೊತ್ತʼ 

“ನೋಡ್ದಾ!! ನಿನ್ನ ಮಗಳನ್‌ ನೀನ್‌ ನೋಡ್ಕೋಳ್ಳೋಕೇ ಕಷ್ಟವಾಗೋಯ್ತ" 

ʼಕಷ್ಟ ಅಂತಲ್ವೇ. ಇಲ್ಲೂ ಕೆಲಸ… ಅಲ್ಲಂತೂ ಬಿಡುವಿಲ್ಲದ ಕೆಲಸ. ನನ್ನ ಸ್ಪೇಸು ನನ್ನ ಟೈಮು ಕಳೆದೇಹೋಗಿದೆ ಅನ್ನಿಸಿಬಿಡುತ್ತೆʼ 

“ಮಕ್ಳು ನೋಡ್ಕೊಳ್ಳೋದು ಅಂದ್ರೆ ಹಂಗೇ ಅಲ್ಲ” 

ʼಬರೀ ನಮಗ್‌ ಮಾತ್ರ ಹಂಗೆ. ಗಂಡಸ್ರಿಗಲ್ಲ. ನನ್‌ ಗಂಡಾನೇ ಇದ್ದಾರಲ್ಲ. ಕೆಲಸ ಐದ್‌ ಘಂಟೇಗ್‌ ಮುಗಿದ್ರೂ ಪಿಚ್ಚರ ನೋಡ್ಕಂಡು ಫ್ರೆಂಡ್ಸ್‌ ಜೊತೆ ಸುತ್ತಾಡ್ಕಂಡು ಆರಾಮಾಗಿರ್ತಾರೆ. ನಾಕನಿ ವೀರ್ಯ ಕೊಟ್ರೆ ಅಪ್ಪನ ಜವಾಬ್ದಾರಿ ಮುಗಿದೋಯ್ತು ಅನ್ಕೋತಾರೋ ಏನೋʼ 

“ಹ ಹ ಹ…. ಚೆನ್ನಾಗ್‌ ಹೇಳ್ದೆ. ಪಿಚ್ಚರ್‌ ಡೈಲಾಗ್‌ ಇದ್ದಂಗಿದೆ" ಪಿಚ್ಚರ್ರು ಅಂದ ತಕ್ಷಣ ನಾ ಸಿನಿಮಾಗೆ ಹೋಗೆ ವರ್ಷದ ಹತ್ತಿರ ಆಗೋಯ್ತಲ್ಲ ಎನ್ನುವುದು ನೆನಪಾಗಿ ಇದ್ದಕ್ಕಿದ್ದಂತೆ ಯೋಚನೆಯೊಂದು ಹೊಳೆಯಿತು. 

ʼಸುಮ. ನಾಳೆ ನನಗೆ ರಜೆ ಸಿಕ್ಕಿದ ವಿಷಯ ಮನೆಯಲ್ಲಿ ಹೇಳುವುದೇ ಇಲ್ಲ. ಮಾಮೂಲಿ ಹೊರಡೋ ಟೈಮಿಗೆ ಹೊರಟು ಮೈಸೂರು ಸುತ್ತಾಡ್ಕಂಡು ಫಿಲಂ ಗಿಲಂಗೆ ಹೋಗುವ. ಬರ್ತಿಯಾ?ʼ 

“ನಾನೆಂಗ್‌ ಬರ್ಲಿ? ನಾಳೆ ನಂದೇ ಡ್ಯೂಟಿ. ಓಪಿಡಿ ಬೇರೆ ಇರಲ್ವಲ್ಲ. ಪೂರ್ತಿ ಬ್ಯುಸಿ ಇರ್ತದೆ ಎಮರ್ಜೆನ್ಸೀಲಿ” 

ʼಮ್.‌ ಪರವಾಗಿಲ್ಲ. ನಾನೊಬ್ಳೇ ಹೋಗ್ತೀನಂಗಾದ್ರೆʼ 

“ಅಯ್ಯ. ನಿನಗೇನಾಯ್ತೆ” 

ʼಹೇ ಸುಮ್ನಿರಪ್ಪ. ಏನೂ ಆಗಿಲ್ಲ. ನನ್ನ ಸಮಯಾನ ನಂಗೇ ಅಂತಲೇ ಒಂದ್‌ ಅರ್ಧ ದಿನಕ್ಕೆ ಬಳಸಿಕೋಬೇಕು ಅನ್ನಿಸಿಬಿಟ್ಟಿದೆ. ತಿರುಗಾಡ್ಕಂಡು ಮನೆಗೆ ಹೋಗ್ತೀನಿʼ 

“ಏನೋ ಮಾಡಿ ಬಾಸ್.‌ ಕೊನೇಪಕ್ಷ ಮಧ್ಯಾಹ್ನಕ್ಕಾದರೂ ಮನೆಗೆ ಹೋಗು" ನಗುತ್ತಾ ಹೇಳಿದಳು ಸುಮ. ಮನೆಯತ್ತ ಹೊರಟೆ. 

ಮಾರನೇ ದಿನ ಎಂತದೋ ಉತ್ಸಾಹ ಕಾತರ. ಮನೇಲಿ ಸುಳ್ಳುಪಳ್ಳು ಹೇಳಿಕೊಂಡು ತಿರುಗಾಡಲು ಹೋಗುತ್ತಿದ್ದಿದ್ದು ಎಷ್ಟೋ ವರ್ಷಗಳ ಹಿಂದೆ. ಪರಶು ಜೊತೆ ತಿರುಗಲು ಹೋಗುತ್ತಿದ್ದೆನೇ ಹೊರತು ಒಬ್ಬೊಬ್ಬಳೇ ಅಲೆದಿದ್ದಿಲ್ಲವೇ ಇಲ್ಲ. ʼಸರಿ ಕಣಮ್ಮ ಹೋಗಿ ಬರ್ತೀನಿʼ ಎಂದಮ್ಮನಿಗೆ ಹೇಳುವಾಗ ಒಳಗೊಳಗೇ ನಗುತ್ತಿದ್ದೆ. ಮಗಳ ಕೆನ್ನೆಗೊಮ್ಮೆ ಮುತ್ತನಿಕ್ಕುವಾಗ ಕ್ಷಣಮಾತ್ರ ಅಪರಾಧಿ ಭಾವ ಕಾಡಿತು. ಮಧ್ಯಾಹ್ನ ಬೇಗ ಬಂದ್ಬಿಡ್ತೀನಿ ಪುಟ್ಟ ಅಂತ ಇನ್ನೊಂದು ಕೆನ್ನೆಗೆ ಮುತ್ತು ಕೊಟ್ಟು ಯಾವುದಕ್ಕೂ ಇರಲಿ ಅಂತ ಹಣೆಗೂ ಒಂದು ಮುತ್ತು ಕೊಟ್ಟು ಹೊರಬಿದ್ದಾಗ ಗಡಿಯಾರ ಎಂಟೂ ಮೂವತ್ತು ತೋರಿಸುತ್ತಿತ್ತು. ನಮ್ಮ ಆಸ್ಪತ್ರೆಗೆ ಹತ್ತಿರವಿದ್ದ ಶಾಂತಲಾ ಥಿಯೇಟರಿನಲ್ಲಿ ಪುನೀತ್‌ ರಾಜ್‌ಕುಮಾರ್‌ನ ʼಜಾಕಿʼ ಸಿನಿಮಾ ಓಡ್ತಿತ್ತು. ಪುನೀತ್‌ ರಾಜ್‌ಕುಮಾರ್‌ ಏನ್‌ ನೆಚ್ಚಿನ ನಟನಲ್ಲ ನನಗೆ, ಆದ್ರೂ ಅವನ ಸಿನಿಮಾಗಳು ನೋಡಿಸ್ಕಂಡ್‌ ಹೋಗ್ತವೆ. ಜೊತೆಗಿದು ಸೂರಿ ನಿರ್ದೇಶನದ ಸಿನಿಮಾ. ಚೆನ್ನಾಗಿಲ್ಲದೇ ಹೋದ್ರೂ ಹೊಸದಾಗೇನೋ ಇರ್ತದೆ. ಅದಕ್ಕೇ ಹೋಗುವ ಅಂದುಕೊಂಡೆ. ಶೋ ಇದ್ದಿದ್ದು ಹತ್ತೂವರೆಗೆ ಸಿನಿಮಾ ಬಿಡುಗಡೆಯಾಗಿ ತಿಂಗಳ ಮೇಲಾಗಿತ್ತು. ತೀರ ಟಿಕೇಟು ಸಿಗದೆ ಇರೋಷ್ಟು ಜನರೇನಿರೋದಿಲ್ಲ. ಹತ್ತೂ ಹತ್ತೂ ಕಾಲಿಗೆ ಥಿಯೇಟರ್‌ ಹತ್ರ ಬಂದ್ರೂ ಸಾಕು. ಅಲ್ಲಿಯವರೆಗೇನು ಮಾಡೋದು, ಏನಾದ್ರೂ ಶಾಪಿಂಗ್‌ ಮಾಡುವ ಅಂದ್ರೆ ಹತ್ತರವರೆಗೆ ದೇವರಾಜ್‌ ಅರಸ್‌ ರಸ್ತೆ, ಸಯ್ಯಾಜಿ ರಾವ್‌ ರಸ್ತೆಯಲ್ಲಿರುವ ಅಂಗಡಿಗಳೂ ತೆಗೆದಿರುವುದಿಲ್ಲ, ಅಲ್ಲೊಂದಿಲ್ಲೊಂದಿರುವ ಹೋಟೆಲುಗಳನ್ನು ಬಿಟ್ಟು. ಆಸ್ಪತ್ರೆಗೇ ಹೋಗಲಾ? ಅಯ್ಯಪ್ಪ. ಇವತ್ಯಾರ್‌ ಅಲ್ಲಿಗ್‌ ಹೋಗ್ತಾರೆ. ಇನ್ನೆಲ್ಲಿ ಹೋಗೋದು..... ಚಾಮುಂಡಿ ಬೆಟ್ಟಕೋದ್ರೆ ಅನ್ನೋ ಯೋಚನೆ ಬಂದಿದ್ದೇ ತಡ ಗಾಡಿ ಬೆಟ್ಟದ ಕಡೆಗೆ ಹೊರಟೇ ಬಿಟ್ಟಿತು. ಚಾಮುಂಡಿ ಬೆಟ್ಟಕ್ಕೆ ಸ್ಕೂಟರಿನಲ್ಲಿ ಹೋಗೋ ಮಜಾನೇ ಮಜಾ. ಬೆಟ್ಟದ ತಪ್ಪಲು ತಲುಪುತ್ತಿದ್ದಂತೆ ಹೆಲ್ಮೆಟ್‌ ತೆಗೆದಿಟ್ಟು ಕೂದಲಿಗಾಕಿದ್ದ ಕ್ಲಿಪ್ಪನ್ನು ತೆಗೆದು ಬ್ಯಾಗಿನೊಳಗಾಕಿದೆ. ಬೆಟ್ಟವೇರುವಾಗ ತಣ್ಣನೆಯ ಗಾಳಿ ಮುಖಕ್ಕೆ ಮುತ್ತಿಡಬೇಕು, ಕೂದಲು ಪಟಪಟಾಂತ ಹಾರಾಡುತ್ತಿರಬೇಕು. ಎಷ್ಟು ವರ್ಷವಾಯ್ತು ಬೆಟ್ಟಕ್ಕೆ ಸ್ಕೂಟರಲ್ಲಿ ಬಂದು? ರಾಜೀವನ ಜೊತೆಗೊಮ್ಮೆ ಮಾತ್ರ ಬಂದಿದ್ದೆ, ಮದುವೆಯಾದ ಹೊಸತರಲ್ಲಿ. ಕಾರು ಖರೀದಿಸಿದ ಮೇಲೆ ಸ್ಕೂಟರಲ್ಲಿ ಬೈಕಲ್ಲಿ ಎಲ್ಲಿಗೋಗಲೂ ಅವರೊಪ್ಪುತ್ತಿರಲಿಲ್ಲ. ಸ್ಟೇಟಸ್‌ ಪ್ರಶ್ನೆಯಂತೆ ಮಣ್ಣು. ನಾನು ಪರಶು ತಿಂಗಳು ಎರಡು ತಿಂಗಳಿಗೊಂದು ಸಲವಾದರೂ ಬರುತ್ತಿದ್ದೊ. ಒಮ್ಮೆ ಮಾತ್ರ ನನ್ನ ಸ್ಕೂಟರಿನಲ್ಲಿ ಬಂದಿದ್ದೊ, ಅವನ ಬೈಕನ್ನು ಸರ್ವೀಸಿಗೆ ಬಿಟ್ಟಿದ್ದಾಗ. ಮಿಕ್ಕ ಸಮಯದಲ್ಲೆಲ್ಲ ನನ್ನ ಸ್ಕೂಟರನ್ನು ಬೆಟ್ಟದ ತಪ್ಪಲಿನಲ್ಲಿರುವ ಅವನ ಸ್ನೇಹಿತನ ಅಂಗಡಿಯ ಬಳಿ ಬಿಟ್ಟು ಅವನ ಬೈಕಿನಲ್ಲಿ ಹೊರಡುತ್ತಿದ್ದೊ. ಅವ ಬೈಕ್‌ ಓಡಿಸುವ ಸ್ಪೀಡು ನನಗೆ ಮೆಚ್ಚುಗೆ. ಗಟ್ಟಿ ತಬ್ಬಿಡಿದು ತಿರುವಿಗೊಂದೊಂದರ ಲೆಕ್ಕದಲ್ಲಿ ಅವನ ಕೆನ್ನೆಗೊಂದೊಂದು ಕತ್ತಿಗೊಂದೊಂದು ಮುತ್ತು ಕೊಡುತ್ತಿದ್ದೆ. ಬೆಟ್ಟದ ಪ್ರತೀ ತಿರುವೂ ನೆನಪಿನ ಮೂಟೆಯನ್ನೊತ್ತುಕೊಂಡು ನಿಂತಿದ್ದವು. ಅಗೋ ಅಲ್ಲಿ, ಆ ಆರನೇ ತಿರುವಿನಲ್ಲಿ ಅಲ್ಲವೇ ಆತ ಇದ್ದಕ್ಕಿದ್ದಂತೆ ಬೈಕು ನಿಲ್ಲಿಸಿ ಯಾವ ಮುನ್ಸೂಚನೆಯೂ ಇಲ್ಲದೆ ನನ್ನ ತುಟಿಗೆ ತುಟಿ ಸೇರಿಸಿದ್ದು. ಹತ್ತನೇ ತಿರುವಿನ ಬಳಿಯೇ ಅಲ್ಲವಾ ನಾ ನನ್ನ ಕ್ಲಾಸ್‌ಮೇಟ್‌ ಬರ್ತ್‌ಡೇ ಪಾರ್ಟಿಗೆ ಮಧ್ಯಾಹ್ನ ಊಟಕ್ಕೆ ಹೋಗಿದ್ದ ವಿಷಯ ತಿಳಿಸಿದಾಗ ಬೈಕನ್ನು ನಿಲ್ಲಿಸಿ ನನ್ನನ್ನು ಕೆಳಗಿಳಿಸಿ ಕೆನ್ನೆಗೊಂದು ಬಾರಿಸಿದ್ದು. ಅದೊಂದೇ ದಿನವೇನೋ ಅವನಿಗಂಟಿಕೊಳ್ಳದೆ ಬೈಕಿನಲ್ಲಿ ಕುಳಿತಿದ್ದು. ಥೂ ಥೂ ಇದೇನಿದು ನನ್ನ ಸಮಯ ನನಗೆ ಮೀಸಲು ಎಂದುಕೊಂಡು ತಿರುವು ತಿರುವಿಗೂ ಪುರುಷೋತ್ತಮನನ್ನೇ ನೆನೆಯುತ್ತಿದ್ದೀನಲ್ಲ ಎಂದು ನನಗೇ ನಾನೇ ಬಯ್ದುಕೊಂಡು ಬಲವಂತವಾಗಿ ಅವನ ಯೋಚನೆಯನ್ನು ಹೊರತಳ್ಳಿ ಬೆಟ್ಟ ತಲುಪಿದೆ. ಜನಸಂಚಾರ ವಿರಳವಾಗಿತ್ತು. ಐದು ನಿಮಿಷಕ್ಕೆ ದರ್ಶನ ಮುಗಿಯಿತು. ಇಳಿಯುವಾಗ ನಂದಿ ರಸ್ತೆಯನ್ನಿಡಿದು ನಂದಿಯ ಬಳಿ ಮಾರುವ ಕಬ್ಬಿನ ಹಾಲು ಕುಡಿದು ಅಲ್ಲೇ ಗಾಳಿ ತೆಗೆದುಕೊಳ್ಳುತ್ತಾ ಒಂದರ್ಧ ಘಂಟೆ ಕುಳಿತು ಒಂಭತ್ತೂವರೆಗೆ ಹೊರಟೆ. ಅದ್ಯಾಕೋ ಗೊತ್ತಿಲ್ಲ ಪರಶು ನನ್ನನ್ನು ಈ ದಾರಿಯಲ್ಲಿ ಕರೆತರುತ್ತಿರಲಿಲ್ಲ. ಅಲ್ಲೆಲ್ಲ ಚಿರತೆ ಇರ್ತಾವೆ ಬೇಡ ಅಂದಿದ್ದ. 

ʼನಮ್ಮನ್ನ ಕಂಡು ಚಿರತೆ ಭಯಪಡಬೇಕಷ್ಟೇʼ ಎಂದು ನಾ ನಗಾಡಿದರೆ “ನಿಂಗೊತ್ತಾಗಲ್ಲ ಸುಮ್ನಿರು” ಎಂದು ಸಿಡುಕಿಬಿಡುತ್ತಿದ್ದ. ಇನ್ನೆಲ್ಲಿ ಕೆನ್ನೆಗೆ ಹೊಡೆಯುತ್ತಾನೋ ಅಂತ ಸುಮ್ಮನಾಗುತ್ತಿದ್ದೆ. ರಾಜೀವನ ಜೊತೆ ಕಾರಲ್ಲಿ ಈ ರಸ್ತೆಯಲ್ಲೇ ವಾಪಸ್ಸಾಗುತ್ತಿದ್ದಿದ್ದು. ದಾರಿಯುದ್ದಕ್ಕೂ ಅಲ್ಲಲ್ಲಿ ಹುಡುಗರ ಗುಂಪುಗಳಿರುತ್ತಿತ್ತು. ಬೈಕಿನಲ್ಲಿ ಹುಡುಗ ಹುಡುಗಿ ಜೊತೆಯಲ್ಲೋಗುತ್ತಿದ್ದರೆ ಕೀಟಲೆಯ ದನಿಯಲ್ಲಿ ಕೂಗುತ್ತಿದ್ದರು. ಬಹುಶಃ ಈ ಕಾರಣಕ್ಕೇ ನನ್ನನ್ನು ಪರಶು ಈ ರಸ್ತೆಯಲ್ಲಿ ಕರೆದುಕೊಂಡು ಹೋಗುತ್ತಿರಲಿಲ್ಲ. ಚಿರತೆಯ ಭಯವಲ್ಲ. 

ಶಾಂತಲ ಥಿಯೇಟರ್‌ ತಲುಪಿದಾಗ ಹತ್ತೂ ಹತ್ತಾಗಿತ್ತು. ನನ್ನ ನಿರೀಕ್ಷೆಗಿಂತ ಹೆಚ್ಚಿನ ಜನರಿದ್ದರು. ಬಹುತೇಕರು ಕಾಲೇಜು ವಿದ್ಯಾರ್ಥಿಗಳಿದ್ದರು. ಜನ ಹೆಚ್ಚಿದ್ದರೂ ಟಿಕೇಟೇನೋ ಆರಾಮವಾಗಿಯೇ ಸಿಕ್ಕಿತು. ಹುಡುಗಿಯಗೆಂದೇ ಇದ್ದ ಕ್ಯೂನಲ್ಲಿ ನಿಂತಿದ್ದೆ. ನಾನ್ಯಾವ ಸೀಮೆ ಹುಡುಗಿಯೆಂದರಿವಾಗಿದ್ದು ಹಿಂದೆ ನಿಂತಿದ್ದ ಪಿಯು ಕಾಲೇಜಿನ ಯೂನಿಫಾರಂ ಹಾಕಂಡಿದ್ದ ಹುಡುಗಿಯೊಬ್ಬಳು “ಆಂಟಿ ಟಿಕೇಟೆಷ್ಟು ಬಾಲ್ಕನೀಗೆ” ಅಂತ ಕೇಳಿದಾಗ. ಆಂಟಿ ಅಂದ ಕರೆದ ಸಿಟ್ಟಿಗೆ ʼಗೊತ್ತಿಲ್ಲʼ ಎಂದೆ. 

ಪಿಚ್ಚರ್‌ ಹೆಂಗೆಂಗೋ ಇದೆ. ಹಾಡು ಚೆಂದ. ಪುನೀತ್‌ ಡ್ಯಾನ್ಸೂ ಚೆಂದ. ಆದ್ರೂ ಅಂತ ಆಸಕ್ತಿ ಮೂಡ್ತಿಲ್ಲ. ಲವ್‌ ಮಾಡಿದ ಹುಡುಗಿ ಹುಡುಗನೊಟ್ಟಿಗೆ ಓಡೋಗ್ತಾಳೆ ಸಿನಿಮಾದಲ್ಲಿ. “ಬಾ ಓಡಿ ಹೋಗಿ ಮದುವೆಯಾಗೋಣ” ಎಂದು ಪದೇ ಪದೇ ಪೀಡಿಸುತ್ತಿದ್ದ ಪುರುಷೋತ್ತಮನ ನೆನಪು. ನಾನು ನಾನಾಗಿರೋದಿಕ್ಕೊಂದಷ್ಟು ಸಮಯ ಮೀಸಲಿಡೋಣ ಅಂದ್ರೆ ಈ ಹಳೆ ನೆನಪುಗಳ್ಯಾಕಿಂಗೆ ಕಾಡ್ತವೆ? ನಾವು ನಾನಾಗಿರೋದೂಂದ್ರೆ ಹಳೆ ನೆನಪುಗಳನ್ನ ಮೆಲಕು ಹಾಕೋದಾ? ಒಂದು ಕಾಲದಲ್ಲಿ ಮುಖದಲ್ಲಿ ನಗು ಅರಳಿಸಿದ, ಕಣ್ಣಲ್ಲಿ ನೀರು ತರಿಸಿದ ಘಟನೆಗಳ ನೆನಪು ಇವತ್ತು ಯಾವ ಭಾವವನ್ನೂ ಸ್ಪುರಿಸೋದಿಲ್ಲವಲ್ಲ ಯಾಕೆ? ಕಣ್ಣ ಮುಂದಿನ ಸಿನಿಮಾಗಿಂತ ತಲೆಯೊಳಗೆ ಓಡಿದ ಸಿನಿಮಾ ಹೆಚ್ಚು ಕಾಡುತ್ತಿತ್ತು. ಸಿನಿಮಾ ಮುಗಿದಾಗ ಒಂದು ರೀತಿಯ ಅಪರಾಧಿ ಭಾವ. ಮಗಳನ್ನು ಹಿಂಗೆ ಸುಳ್ಳೇಳಿ ಬಿಟ್ಟು ಬರಬಾರದಿತ್ತೇನೋ? ಆತುರಾತುರದಲ್ಲಿ ಮನೆಯ ಕಡೆಗೋಗಿ ಮಗಳನ್ನು ಎತ್ತಿ ಮುದ್ದಾಡಿದೆ. ಏನಿವಳು ಮಾಮೂಲಿಗಿಂತ ಜಾಸ್ತಿ ಅಕ್ಕರೆ ತೋರಿಸ್ತಿದ್ದಾಳಲ್ಲ ಅಂತೊಂದು ಅನುಮಾನ ಅಮ್ಮನ ಕಣ್ಣುಗಳಲ್ಲಿತ್ತು.

ಮುಖಪುಟ ಚಿತ್ರ: ಚೇತನ ತೀರ್ಥಹಳ್ಳಿ. 
ಮುಂದುವರೆಯುವುದು

No comments:

Post a Comment