Nov 17, 2019

ಒಂದು ಬೊಗಸೆ ಪ್ರೀತಿ - 40

ಡಾ. ಅಶೋಕ್.‌ ಕೆ. ಆರ್.‌
ಹಿಂಗಿಂಗಾಯ್ತು ಅಂತ ಮೆಸೇಜ್ ಮಾಡಿದೆ. “ಮ್" ಎಂದೊಂದು ಪ್ರತಿಕ್ರಿಯೆ ಕಳಿಸಿದನಷ್ಟೇ. ಅವನಾದರೂ ಏನು ಹೇಳಿಯಾನು? ಏನು ಹೇಳಿದರೂ ಅದರಿಂದ ನನಗುಪಯೋಗವಾಗುವುದು ಅಷ್ಟರಲ್ಲೇ ಇದೆ. ಮೆಸೇಜುಗಳಿಂದ ಸುಳ್ಳು ಸುಳ್ಳೇ ಸಮಾಧಾನ ಆಗಬಹುದೇನೋ ಅಷ್ಟೇ. “ಜಾಸ್ತಿ ತಲೆ ಕೆಡಿಸಿಕೊಳ್ಳಬೇಡವೇ. ಆದಂಗ್ ಆಗ್ತದೆ. ಒಂದೆರಡು ತಿಂಗಳು ಹೆಂಗೋ ನಿಮ್ಮ ಮನೆಯಲ್ಲೋ ನಿನ್ನ ತಮ್ಮನ ಹತ್ತಿರವೋ ಒಂದಷ್ಟು ದುಡ್ಡು ತೆಗೆದುಕೊಂಡು ಸಂಭಾಳಿಸು. ನೋಡುವ, ಅಷ್ಟರಲ್ಲಿ ನಿನ್ ಗಂಡನ ಫಾರ್ಮಸಿಯಿಂದ ಲಾಭ ಬರ್ತದೆ ಅನ್ಸುತ್ತೆ. ಅಷ್ಟರೊಳಗೆ ನಾನೂ ಕೆಲಸಕ್ಕೆ ಸೇರಿರ್ತೀನಿ. ಕೊಡ್ತೀನಿ" ಎಂದು ಮೆಸೇಜ್ ಮಾಡಿದ. 

'ಇಲ್ವೋ. ನಮ್ಮಿಬ್ಬರ ಸಂಬಂಧದಲ್ಲಿ ಹಣ ಬರೋದು ನನಗಿಷ್ಟವಿಲ್ಲ. ದುಡ್ಡು ಹೆಂಗೋ ಹೊಂಚಿಕೊಳ್ಳಬಹುದು ಬಿಡು. ನೀನೇ ಹೇಳಿದಂಗೆ ಅವರ ಮನೆಯವರು ನಮ್ಮ ಮನೆಯವರು ಇದ್ದೇ ಇದ್ದಾರಲ್ಲ. ಬೇಜಾರ್ ಅಂದ್ರೆ ಕೆಲಸ ಬಿಡೋ ದೊಡ್ಡ ನಿರ್ಧಾರವನ್ನು ಕೂಡ ನನಗೆ ತಿಳಿಸದೇ ಹೋದರಿವರು. ಅಷ್ಟೊಂದು ದೂರದವಳಾಗಿಬಿಟ್ಟೆ ನೋಡು. ನೀ ಇವರಂಗೆ ಆಗಬೇಡ್ವೋ. ನಿನ್ನ ಹೆಂಡತಿ ಒಪ್ತಾಳೋ ಬಿಡ್ತಾಳೋ ಅವಳಿಗೊಂದು ಮಾತು ಎಲ್ಲದರ ಬಗ್ಗೆಯೂ ಹೇಳು... ನೀ ಹೇಳ್ತಿ ಬಿಡು' 

“ಹ ಹ. ಅದೆಂಗೆ ಅಷ್ಟು ಖಡಕ್ಕಾಗಿ ಹೇಳ್ತಿ" 

'ಮ್. ನೀ ಚೆಂದ ಅರ್ಥ ಮಾಡ್ಕೋತಿ ಅದಿಕ್ಕೆ ಹೇಳ್ದೆ' 

“ಏನೋ ನೋಡುವ ಬಿಡು. ನೀ ಜಾಸ್ತಿ ಬೇಸರ ಮಾಡಬೇಡ್ವೆ. ನಂಗೂ ದುಃಖವಾಗ್ತದೆ" 

'ಹು ಕಣೋ. ಅದ್ಸರಿ ಪರೀಕ್ಷೆ ಹೆಂಗ್ ಆಯ್ತು. ನನ್ನ ಚಿಂತೆಯಲ್ಲೇ ಪರೀಕ್ಷೆ ಕೆಟ್ಟದಾಗಿ ಮಾಡಲಿಲ್ಲ ತಾನೆ'

ಒಂದೊಂದೇ ಎಪಿಸೋಡು ಹುಡುಕುಡುಕಿ ಓದೋಕೆ ಬೇಸರವಾ? ಪೂರ್ತಿ ಇ - ಪುಸ್ತಕ ತೆಗೆದುಕೊಳ್ಳಲು ಇಲ್ಲಿ ಕ್ಲಿಕ್ಕಿಸಿ.

“ಹೇ ಹೋಗೇ. ನಮ್ ಸಂಬಂಧ ಎಷ್ಟು ಕೆಟ್ಟದ್ದು, ಎಷ್ಟು ಅನೈತಿಕವಾದದ್ದು, ನಿನ್ನ ಗಂಡನಿಗೆ ಮಾಡ್ತಿರೋ ಮೋಸ ಇತ್ಯಾದಿ ಇತ್ಯಾದಿ ಅಂತ ತಲೇಲಿ ಓಡ್ತಾನೇ ಇರ್ತದೆ. ತಲೇಲೆಷ್ಟೇ ಓಟಗಳಿದ್ದರೂ ಪರೀಕ್ಷೆಯನ್ನೆಲ್ಲ ಇಗ್ನೋರ್ ಮಾಡಲ್ಲ ಬಿಡು" 

'ಒಳ್ಳೇದು. ಸರಿ ಕಣೋ. ನಾಳೆ ಮೆಸೇಜ್ ಮಾಡ್ತೀನಿ. ಮನೆಕೆಲಸವಿದೆ' 

“ಹು. ಬಾಯ್" 

ಮನೆಕೆಲಸವೇನೂ ಇರಲಿಲ್ಲ. ಪರೀಕ್ಷೆ ಮುಗಿಸಿ ಖುಷಿಯಲ್ಲಿರುವವನಿಗೆ ನನ್ನ ದುಃಖವನ್ನು ಮತ್ತಷ್ಟು ಹಂಚುವ ಇಷ್ಟವಿರಲಿಲ್ಲ. ರಾಜೀವ ರೂಮಿನಲ್ಲಿ ಮಲಗಿದ್ದರು. ಊಟಕ್ಕೆ ಬನ್ನಿ ಎಂದು ಕರೆದಿದ್ದಕ್ಕೆ ಆ ಊ ಎಂದೇನೂ ಹೇಳಲಿಲ್ಲ. ರೂಮಿಗೆ ನಾನೇ ಹೋದೆ. 

'ಜಾಸ್ತಿ ತಲೆ ಕೆಡಿಸ್ಕೋಬೇಡ್ರಿ.. ಆದಂಗ್ ಆಗ್ತದೆ. ಒಂದೆರಡು ತಿಂಗಳು ಹೆಂಗೋ ನಿಮ್ಮ ಮನೆಯಲ್ಲೋ ನಮ್ಮ ಮನೆಯಲ್ಲೋ ಒಂದಷ್ಟು ದುಡ್ಡು ತೆಗೆದುಕೊಂಡು ಸಂಭಾಳಿಸುವ. ನೋಡುವ, ಅಷ್ಟರಲ್ಲಿ ನಿಮ್ಮ ಫಾರ್ಮಸಿಯಿಂದ ಲಾಭ ಬರ್ತದೆ ಅನ್ಸುತ್ತೆ' 

“ಚಿಂತೆ ಅದಲ್ವೇ. ಕ್ಲಿನಿಕ್ಕಿನಲ್ಲಿ ಡಾಕ್ಟರ್ ಇಲ್ಲದೇ ಹೋದರೆ ಹೇಗೆ ಲಾಭವಾಗೋದು?” 

'ಯಾಕ್ ಆಗಲ್ಲ? ಎಷ್ಟು ಫಾರ್ಮಸಿಗಳು ಕ್ಲಿನಿಕ್ಕಿನ ಡಾಕ್ಟರನ್ನು ನಂಬಿಕೊಂಡಿವೆ ಹೇಳಿ? ಸ್ವಲ್ಪ ತಡವಾದ್ರೂ ಆಗ್ತದೆ ಬಿಡಿ' 

“ಅಂದ್ರೂ ಟೈಮ್ ಜಾಸ್ತಿ ಬೇಕು. ಯಾವಾಗ ಲಕ್ಷ ಲಕ್ಷ ಎಣಿಸೋದು" ಎಂದವರು ಹೇಳುವುದರೊಂದಿಗೆ ಇವರ ಈ ಪ್ರಯತ್ನದ ವಿಫಲತೆ ಕಣ್ಣ ಮುಂದೆ ರಾಚಿತು. ಯಾವುದೇ ಬ್ಯುಸಿನೆಸ್ ಆದ್ರೂ ಒಂದಾರು ತಿಂಗಳು ವರ್ಷದಷ್ಟು ಸಮಯವನ್ನೂ ಕೊಡದಿದ್ದರೆ ಹೇಗೆ? ಅದೂ ಲಕ್ಷ ಲಕ್ಷ ಎಣಿಸೋಕೆ ಎಷ್ಟು ವರ್ಷ ಬೇಕು ಅನ್ನುವುದನ್ನೂ ಚಿಂತಿಸದೆ ಮಾತಾಡ್ತಾರಲ್ಲ. ಕೊನೆಗೆ ಇವರ ಫ್ರೆಂಡ್ ಆದರೂ ಧೃಡ ಮನಸ್ಸಿನವರಾಗಿದ್ದರೆ ಸಾಕು. 

'ನೋಡ್ತೀನಿ. ನಮ್ಮ ಫ್ರೆಂಡ್ಸ್ ಸರ್ಕಲ್ಲಲ್ಲಿ ಯಾರಾದ್ರೂ ಇದ್ದರೆ ಕೇಳಿ ನೋಡ್ತೀನಿ. ಸಂಜೆ ಬಂದು ಕೂರೋರು ಯಾರಾದ್ರೂ ಸಿಕ್ಕರೂ ಸಿಗಬಹುದು' ಎಂಬ ನನ್ನ ಮಾತಿನಿಂದ ಖುಷಿಗೊಂಡು ಎದ್ದು ಬಂದು ಊಟ ಮಾಡಿ ನೆಮ್ಮದಿಯಿಂದಲೇ ಮಲಗಿದರು. ನನಗೆ ನಿದ್ರೆ ಬರಲಿಲ್ಲ. 

ಯಾವತ್ತೂ ಕಳಿಸದವನು ಸಾಗರ ಅವತ್ತು "ಗುಡ್ ನೈಟ್" ಎಂದು ಮೆಸೇಜು ಕಳುಹಿಸಿದ! 'ಏನಪ್ಪ, ಹುಷಾರಿಲ್ವ? ಗುಡ್ ನೈಟ್ ಎಲ್ಲಾ ಹೇಳ್ತಿದ್ದಿ' ಎಂದು ಕಾಲೆಳೆದೆ. 

“ಹಂಗೇನಿಲ್ವೇ. ನೀ ಬೇಸರದಿಂದ ಮಾತಾಡ್ತಿದ್ದಲ್ಲ ಇವತ್ತು. ಮನಸ್ಸು ತಡೀಲಿಲ್ಲ. ಮೆಸೇಜ್ ಮಾಡುವ ಅನ್ನಿಸ್ತು. ಮಲಗಿರ್ತೀಯೋ ಏನೋ ಗೊತ್ತಿರಲಿಲ್ಲವಲ್ಲ. ಅದಿಕ್ಕೆ ಚೆಕ್ ಮಾಡುವ ಅಂತ ಗುಡ್ ನೈಟ್ ಅಂತ ಕಳಿಸ್ದೆ" 

'ಮ್' 

“ಸರಿ ಹೋಯ್ತ ಮನಸ್ಸು" 

'ಬದುಕಬೇಕು ಅಂದರೆ ಸರಿ ಮಾಡಿಕೊಳ್ಳಲೇಬೇಕಲ್ಲ. ಆಯ್ತು' 

“ಹಸ್ಬೆಂಡು?” 

'ಊಟ ಮಾಡಿ ಮಲಗಿದ್ರು. ನಂಗ್ಯಾಕೋ ನಿದ್ರೆ ಹತ್ತಲಿಲ್ಲ. ಸುಮ್ನೆ ಟಿವಿ ಮುಂದೆ ಕೂತಿದ್ದೆ' 

“ಮ್. ಅಲ್ಲೇ ಇದ್ದಿದ್ರೆ ಮಡಿಲಲ್ ಮಲಗಿಸಿಕೊಂಡು ಸಮಾಧಾನ ಮಾಡ್ತಿದ್ದೆ...” 

'ಅಷ್ಟೆಲ್ಲ ಅದೃಷ್ಟವಂತಳಲ್ಲ ಬಿಡು ನಾನು' 

“ದುರದೃಷ್ಟ ನನ್ನದು ಅಷ್ಟೆ ಬಿಡು" 

'ಹೋಗ್ಲಿ ಬಿಡೋ. ಆ ವಿಷಯ ಎಷ್ಟು ಮಾತನಾಡಿದ್ರೂ ಅಷ್ಟೇ. ಮುಗಿಯಲ್ಲ. ಅದಕ್ಕೆ ಪರಿಹಾರವೂ ಇಲ್ಲವಲ್ಲ. ಮತ್ತೆ ಏನ್ ಪ್ರೋಗ್ರಾಮು ಪರೀಕ್ಷೆ ಮುಗಿದ ಮೇಲೆ' 

“ಪ್ರೋಗ್ರಾಂ ಏನ್ ಇರುತ್ತೆ. ಲಗೇಜೆಲ್ಲ ಪ್ಯಾಕ್ ಮಾಡ್ಕಂಡು ಊರು ಬಿಡೋದು ಅಷ್ಟೇ. ಬುಕ್ಸ್ ಎಲ್ಲಾ ಪಾರ್ಸಲ್ ಕಳಿಸಿಬಿಡ್ತೀನಿ. ಬಟ್ಟೆ ಗಿಟ್ಟೆ ತಗಂಡು ಊರಿಗೋಗುದು" 

'ಮ್' 

“ಒಂದೆಂತದೋ ಕೇಳ್ಬೇಕಿತ್ತೇ" 

'ಇದೇನೋ ಇಷ್ಟೊಂದು ಫಾರ್ಮಲ್ಲು ಇವತ್ತು.... ಕೇಳು...' 

“ನಿನ್ನ ನೋಡಬೇಕು ಅನ್ನಿಸ್ತಿದೆ ಕಣೇ. ಊರಿಗೋಗುವಾಗ ಬಂದ್ರೆ ಸಿಗ್ತೀಯ" 

'ಅಯ್ಯೋ ನಿನ್ನ. ಇಷ್ಟೇನಾ! ನಾ ಏನೋ ಅಂತಿದ್ದೆ. ಈಗ ನಾನೂ ಪಿಜಿ ಸ್ಟೂಡೆಂಟ್ ಅಲ್ಲಪ್ಪ. ಜಾಸ್ತಿ ರಜಾ ಗಿಜಾ ಇರೋದಿಲ್ಲ. ಇವರೂ ಈಗ ಕೆಲಸ ಬಿಟ್ಟಿದ್ದಾರೆ. ಮನೇಲೇ ಇರ್ತಾರೋ ಏನೋ....' 

“ಮ್. ಹೋಗ್ಲಿ ಬಿಡು" 

'ಯಾಕೋ ಬೇಜಾರ್ ಆಯ್ತ' 

“ಮ್. ಆಯ್ತು ಸ್ವಲ್ಪ. ಇಷ್ಟೆ ಅಲ್ವ ಈ ಸಂಬಂಧ ಅಂತ. ಹೋಗ್ಲಿ ಬಿಡು" 

'ಹಂಗಲ್ವೋ. ನೀ ಯಾವತ್ ಹೊರಡೋದು?' 

“ಇನ್ನೆರಡು ದಿನ ಬಿಟ್ಟು" 

'ಸರಿ ಹಂಗಾದ್ರೆ. ಅವತ್ತು ಬೆಳಿಗ್ಗೆ ನಾ ಹೆಂಗೋ ರಜಾ ಹಾಕೋತೀನಿ. ಇವರಿರ್ತಾರೋ ಏನೋ ಗೊತ್ತಿಲ್ಲ. ಇವರಿದ್ರೂ ನೀ ಮನೆಗೆ ಬಂದು ಹೋಗ್ಬೇಕು ಅಷ್ಟೇ' 

“ಹು. ನಂಗೂ ಅವರನ್ನು ಭೇಟಿಯಾಗಬೇಕು ಅಂತಿದ್ಯಲ್ಲ. ಬರ್ತೀನಿ" 

'ಮತ್ತೆ ಇವರಿದ್ರೆ ಅದೂ ಇದೂ ಇರಲ್ಲ ನೋಡು' ಕಣ್ಣೊಡೆದೆ. 

“ಹ...ಹ... ಅದೂ ಇದೂ ಇಲ್ಲದೇ ಹೋದ್ರೂ ಪರವಾಗಿಲ್ಲ. ನೋಡುವಂಗ್ ಆಗಿದೆ" 

'ಹಂಗಾದ್ರೆ ಸರಿ ಬಿಡು. ಸರಿ ಕಣೋ. ನಿದ್ರೆ ಬರ್ತಿದೆ' 

“ಓಕೆ ಪುಟ್ಟ ಬಾಯ್" 

ಇವನೆಂಗೆ ಹಿಂಗೆ? ನೋಡುದ್ರೆ ಸಾಕು, ಸೆಕ್ಸ್ ಎಲ್ಲಾ ಏನು ಬಿಡೇ ಅಂತಾನೆ. ರೋಮ್ಯಾನ್ಸ್ ಮುಖ್ಯ, ಪ್ರೀತಿ ಮುಖ್ಯ ಸೆಕ್ಸ್ ಬೇಕು ಅನ್ನಿಸಿದಾಗ ಮಾಡಿದ್ರೆ ಸಾಕು.... ಅದೊಂದೇ ಜೀವನಾನ ಅಂತಾನೆ. ಬೇರೆಯಾರಾದ್ರೂ ಇವನ ಜಾಗದಲ್ಲಿದ್ದಿದ್ದರೆ ಸೆಕ್ಸ್ ಮಾಡಲೆಂದೇ ಎಷ್ಟೋ ಸಲ ಬಂದು ಭೇಟಿಯಾಗುತ್ತಿದ್ದರೋ ಏನೋ. ಅದಿಕ್ಕೆ ಅಲ್ವ ಇವನಂದ್ರೆ ನನಗಿಷ್ಟ.
* * *
ಅನಾರೋಗ್ಯದ ನೆಪ ಹೇಳಿ ಅರ್ಧ ದಿನ ಅನುಮತಿ ತೆಗೆದುಕೊಂಡೆ. ರಾಜೀವನಿಗೆ ಇವತ್ತು ಮಧ್ಯಾಹ್ನದಿಂದ ಡ್ಯೂಟಿ ಎಂದು ಹೇಳಿದೆ. ಹೊಸ ಫಾರ್ಮಸಿ ಅಂಗಡಿಯ ಕೆಲಸವಿದೆ, ಮಧ್ಯಾಹ್ನ ಊಟಕ್ಕೂ ನಾನೇನು ಬರೋಲ್ಲ. ನೀ ಮಾಡ್ಕಂಡ್ ಹೋಗು ಎಂದ್ಹೇಳಿ ಒಂಭತ್ತರಷ್ಟೊತ್ತಿಗೆ ರಾಜಿ ಹೊರಟರು. ಯಾರಾದ್ರೂ ಡಾಕ್ಟರ್ ಸಿಗ್ತಾರಾ ಹುಡುಕಿ ನೋಡ್ತೀನಿ ಎಂದು ನಾ ಬಾಯುಪಚಾರಕ್ಕೆ ಹೇಳಿದ್ದು ಅವರಲ್ಲೊಂದು ಹೊಸ ಹುಮ್ಮಸ್ಸು ತುಂಬಿಸಿತ್ತು. ಅತ್ಯುತ್ಸಾಹದಿಂದಲೇ ಕೆಲಸದಲ್ಲಿ ತೊಡಗಿಸಿಕೊಂಡಿದ್ದರು. ಹೆಂಗೋ ಇದರಲ್ಲವರಿಗೆ ಯಶಸ್ಸು ಸಿಕ್ಕರೆ ಸಾಕು ಎಂದುಕೊಳ್ಳುತ್ತಾ ಸಾಗರನಿಗೆ ಫೋನು ಮಾಡಿದೆ. ನನ್ನ ಫೋನಿಗೇ ಕಾಯುತ್ತಿದ್ದವನಂತೆ ಅರ್ಧ ರಿಂಗಾಗುವುದಕ್ಕೆ ಮೊದಲೇ ಕರೆ ಸ್ವೀಕರಿಸಿದ. 

'ಇವರು ಹೊರಟ್ರು ಕಣೋ. ಬಾ ನೀನು' ಎಂದು ಹೇಳಾದ ಮೇಲೆ ಬೇರೆ ರೀತಿ ಹೇಳಬೇಕಿತ್ತೆಂದು ಹೊಳೆಯಿತು. ಅತ್ತ ಕಡೆಯಿಂದ ಯಾವ ಸದ್ದೂ ಇಲ್ಲ. ಕಾಲ್ ಕಟ್ ಆಗೋಯ್ತ ಅಂದುಕೊಂಡು ಫೋನ್ ನೋಡಿದೆ. ಕರೆಯಲ್ಲಿದ್ದ. 

'ಹಲೋ ಕೇಳ್ತಿಲ್ಲವೇನೋ' 

“ಕೇಳ್ತಿದೆ ಕಣೆ. ಇನ್ನೊಂದರ್ಧ ಘಂಟೇಲಿ ಬರ್ತೀನಿ" ಎಂದು ಹೇಳಿದ. ದನಿಯಲ್ಲಿ ಬೇಸರವಿತ್ತಾ? 

ಇವತ್ತೇನು ಧರಿಸಲಿ? ಮೊದಲ ಭೇಟಿಯಲ್ಲಾದರೆ ಅವನ ಮುಂದೆ ಚೆಂದ ರೀತಿಯಲ್ಲಿ ಕಾಣಿಸುವಂತೆ ತಯಾರಾಗಬೇಕೆಂಬ ಹುರುಪಿತ್ತು. ಇವತ್ತಾ ಹುರುಪಿಲ್ಲ. ಏನಾದ್ರೂ ಬೇರೆ ತರ ತಯಾರಾಗಿ ಅವನ ಕಣ್ಣಲ್ಲೊಂದು ಅಚ್ಚರಿಯ ಭಾವ ಮೂಡಿಸಬೇಕಲ್ಲ ಎಂದಾಸೆ. ಒಂದ್ ರೌಂಡ್ ಸ್ನಾನವಾಗಿತ್ತು. ಬಚ್ಚಲುಮನೆಗೆ ಹೋಗಿ ನೋಡಿದರೆ ನೀರು ಉಗುರುಬೆಚ್ಚಗಷ್ಟೇ ಇತ್ತು. ಗೀಸರ್ ಸ್ವಿಚ್ ಆನ್ ಮಾಡಿ ಹಾಕಿಕೊಂಡಿದ್ದ ನೈಟಿಯನ್ನು ಬಿಚ್ಚಿ ಹಾಕಿದೆ. ಹತ್ತು ನಿಮಿಷಕ್ಕೆ ನೀರು ಕಾದಿತ್ತು. ಸೋಪು ಗೀಪನ್ನೇನೂ ಹಚ್ಚಿಕೊಳ್ಳದೆ ಹತ್ತು ನಿಮಿಷಗಳ ಕಾಲ ಸುಡು ಸುಡು ನೀರನ್ನು ಸುರುವಿಕೊಂಡೆ. ಕರೆಘಂಟೆಯ ಸದ್ದಾಯಿತು. ನಿನ್ನೆಯಷ್ಟೇ ಒಗೆದಿಟ್ಟಿದ್ದ ಟರ್ಕಿ ಟವೆಲ್ಲನ್ನು ಅರ್ಧ ಎದೆ ಕಾಣಿಸುವಂತೆ ಸುತ್ತಿಕೊಂಡೆ. ತೊಡೆಯ ಕಾಲು ಭಾಗವನ್ನು ಟವೆಲ್ಲು ಆವರಿಸಿಕೊಂಡಿತ್ತು. ಮೈಯಿಂದ ಬಿಸಿ ನೀರಿನಾವಿ ಹೊರಹೊಮ್ಮುತ್ತಿತ್ತು. ಮೋಡಗಳ ನಡುವೆ ನಡೆಯುತ್ತಿರುವಂತಹ ಅನುಭವ. ಬಾಗಿಲಿನ ಬಳಿಗೆ ಹೋಗಿ ಕಿಂಡಿಯಿಂದ ಇಣುಕಿ ನೋಡಿದೆ, ಬಂದಿದ್ದವನು ಸಾಗರನೇ! ಬಾಗಿಲಿನ ಹಿಂದೆ ಮೂಲೆಯಲ್ಲಿ ಮರೆಯಾಗಿ ನಿಂತು ಬಾಗಿಲು ತೆರೆದೆ. ಅರ್ಧ ತೆರೆದುಕೊಂಡಿತು. ಸಾಗರ ಒಳಗೆ ಬರಲಿಲ್ಲ! ಇದೇನಿದು ಬಾಗಿಲು ತೆರೆದಿದೆ, ಆದರೆ ಮೊಕ ಕಾಣ್ತಿಲ್ಲ ಅಂದುಕೊಂಡನೋ ಏನೋ. ಚೂರೇ ಚೂರು ಇಣುಕಿ ನೋಡಿ ಬಾರೋ ಎಂದೆ. ನಗುತ್ತಾ ಒಳಬಂದವನ ಹಿಂದೆಯೇ ಪಟ್ಟಂತ ಬಾಗಿಲು ಮುಂದೆ ದೂಡಿದೆ. ತಿರುಗಿ ನನ್ನ ಕಡೆ ನೋಡಿದವನ ಕಣ್ಣಲ್ಲಿನ ಭಾವವನ್ನಾಸ್ವದಿಸುವುದಕ್ಕಾಗಿಯೇ ಅಲ್ಲವಾ ನಾ ಇಷ್ಟೆಲ್ಲ ತಯಾರಿ ನಡೆಸಿದ್ದು! ಮತ್ತೊಂದು ಮಾತನಾಡದೆ ಹತ್ತಿರ ಬಂದು ಗೋಡೆಯ ಮೂಲೆಗೆ ನನ್ನನ್ನು ಒತ್ತಿ ಹಿಡಿದು ತಬ್ಬಿಕೊಂಡ. ಕ್ಷಣಮಾತ್ರದಲ್ಲಿ ಅವನು ಗಡುಸಾಗಿಬಿಟ್ಟಿದ್ದ! ಇಷ್ಟು ಬೇಗ ಎಂದಚ್ಚರಿಯಾಯಿತು. ಹಣೆಗೆ ಮುತ್ತು ಕೊಟ್ಟು ಅಲ್ಲಿಂದ ನಿಧಾನಕ್ಕೆ ರೆಪ್ಪೆ, ಕೆನ್ನೆ ಮೂಗು ತುಟಿ ಗಲ್ಲ ಕತ್ತಿಗೆ ಮುತ್ತು ಕೊಟ್ಟು ತೆರೆದಿದ್ದ ಅರ್ಧ ಭಾಗ ಎದೆಗೆ ಮುತ್ತು ಕೊಡುವಾಗ ಟವೆಲ್ಲನ್ನು ಜಾರಿಸಿ ಬೀಳಿಸಿದ. ಎರಡೂ ಎದೆಗೆ ಮತ್ತೊಂದೊಂದು ಮುತ್ತು ಕೊಟ್ಟು ಹೊಟ್ಟೆಗೆ ಹೊಕ್ಕಳಿಗೆ ತೊಡೆಗೆ ಕಾಲಿಗೆ ಕೊನೆಗೆ ಹೆಬ್ಬೆರಳಿಗೆ ಮುತ್ತು ನೀಡಿ ಮತ್ತೆ ಕಾಲಿಗೆ ತೊಡೆಗೆ ಮುತ್ತು ನೀಡಿ ತೊಡೆಸಂದಿಯಲ್ಲಿ ಬೆಚ್ಚಗಾಗಿ ಕುಳಿತಿದ್ದ ಯೋನಿಗೆ ಮುತ್ತು ಕೊಡುವಷ್ಟರಲ್ಲಿ ನನ್ನೆದೆಯ ಬಡಿತ, ನನ್ನುಸಿರೆಲ್ಲವೂ ನನ್ನ ನಿಯಂತ್ರಣ ಮೀರಿ ಹೆಚ್ಚಾಗಿಬಿಟ್ಟಿತ್ತು. ಅವನ ತಲೆಯನ್ನು ಹಾಗೇ ಒತ್ತಿ ಹಿಡಿದೆ. ನಾಲಗೆಯನ್ನೊರಚಾಚಿ ಯೋನಿಯ ಸುತ್ತಲೆಲ್ಲ ತೇವಮಾಡಿದ. ಅವನ ಕೂದಲನ್ನಿಡಿದು ತಲೆಯನ್ನು ಮೇಲೆತ್ತಿದೆ. ಇಬ್ಬರ ಕಣ್ಣಲ್ಲೂ ಕಾಮದಾಹ್ವಾನ ಮಿತಿಮೀರಿತ್ತು. ಅವನನ್ನು ಮೇಲೆತ್ತಿ ನಿಲ್ಲಿಸಿಕೊಂಡು ರೂಮಿಗೆ ಕರೆದೊಯ್ದೆ. ರೂಮಿಗೆ ಹೋಗುವಷ್ಟರಲ್ಲಿ ಅವನ ಬಟ್ಟೆ ನೆಲ ಸೇರಿತ್ತು. ಆರೇಳು ನಿಮಿಷದ ನಂತರವಷ್ಟೇ ಇಬ್ಬರೂ ಒಬ್ಬರನ್ನೊಬ್ಬರು ಪೂರ್ಣ ಅನುಭವಿಸುವವರಂತೆ ನೋಡುತ್ತಾ ಬಂದಾಗಿನಿಂದ ಒಂದೂ ಮಾತೇ ಆಡಲಿಲ್ಲ ಎನ್ನುವುದನ್ನು ನೆನಪಿಸಿಕೊಂಡು ನಕ್ಕು ಒಬ್ಬರ ತಲೆಗೊಬ್ಬರು ಮೊಟಕಿಕೊಂಡಿದ್ದು! 

ಮಾತೆಲ್ಲ ರಾಜೀವನ ಹೊಸ ಸಾಹಸದ ಕುರಿತೇ ಹೆಚ್ಚಿತ್ತು. ರಾಜೀವನ ಬಗ್ಗೆ ನನಗೆ ನನ್ನದೇ ಆದಂತಹ ಅನುಮಾನಗಳು ಹೆಚ್ಚೇ ಇದ್ದವಾದರೂ ಈ ಸಲವೇಕೋ ಅವರು ಕೊಂಚ ಗಂಭೀರದಿಂದಿದ್ದಾರೆ ಅನ್ನಿಸಿತ್ತು. ನನ್ನಸಿಕೆ ನಿಜವಾಗಿದ್ರೆ ಸಾಕು ಕಣೋ ಎಂದೇಳಿದೆ ಸಾಗರನಿಗೆ. “ನಿಜವಾಗ್ತದೆ ಬಿಡೆ" ಎಂದು ಸಮಾಧಾನಿಸಿದ್ದ. 

'ಇನ್ನೇನೋ ರಿಸಲ್ಟ್ ಬಂದ ಮೇಲೆ ಮದುವೆ ಅನ್ನು' ಕಿಚಾಯಿಸಿದೆ. ಸಪ್ಪಗಾದ. 

“ಹೋಗೇ...ಸಿಗೋದ್ ಸಿಕ್ಕೆ...ಒಂದಷ್ಟ್ ಮುಂಚೆ ಸಿಗೋಕ್ ಏನಾಗಿತ್ತು....” 

'ಬಿಡೋ. ಆ ಮಾತುಗಳನ್ನು ಎಷ್ಟೇ ಆಡಿದರೂ ಕೊನೆಗೆ ಎಲ್ಲಿಗೂ ಮುಟ್ಟೋದಿಲ್ಲ. ಮದುವೆಯಾಗು....ನಿನ್ನ ಮದುವೆ ಎಲ್ಲಾ ಕಣ್ ತುಂಬ್ಕೋಬೇಕು ನಾನು' 

“ಹೋಗೇ. ಕರಿಯಲ್ಲ ನಿನ್ನ. ನಿನ್ ಮುಂದೆ ಹೆಂಗ್ ಬೇರೆಯವಳಿಗೆ ತಾಳಿ ಕಟ್ಟಲಿ....” 

'ಓಹೋ....ಇಷ್ಟೆಲ್ಲ ಡೈಲಾಗ್ ಬೇಡಿ ಬಾಸ್. ಜೀವನ ಅಂದ್ರೆ ಹಂಗೆ ಕಣೋ. ನಮಗ್ ಬೇಕೋ ಬೇಡ್ವೋ ನಡಿಯೋದ್ ನಡೀತಾನೇ ಇರ್ತವೆ' 

“ಅದೇನೋ ಸರಿ ಬಿಡು. ಲೇ. ನಮ್ ಕ್ಲಾಸಿನವರೇನೋ ಗೆಟ್ ಟುಗೆದರ್ ಬಗ್ಗೆ ಮಾತಾಡ್ತಿದ್ರಪ್ಪ. ಗೊತ್ತಾಯ್ತ ವಿಷಯ ನಿನಗೆ?” 

'ಹೌದಾ? ನಂಗ್ಯಾರೂ ಹೇಳಲಿಲ್ಲವಲ್ಲ. ಹೇಳುವಂತವರೂ ಯಾರೂ ಇಲ್ಲ ಬಿಡು' 

“ಅಯ್ಯೋ ಗೂಬೆ. ನಂಗೇನ್ ಹುಡಿಕಂಡ್ ಬಂದ್ ಹೇಳಿದ್ರಾ.... ಮೊನ್ನೆ ಮೊನ್ನೆ ಪರೀಕ್ಷೆ ಮುಗಿದ ಮೇಲೆ ಈ ಸ್ಮಾರ್ಟ್ ಫೋನ್ ತಗಂಡ್ ವಾಟ್ಸ್ ಅಪ್ ಹಾಕಂಡೆ. ನಮ್ ಕ್ಲಾಸಿನ ಗ್ರೂಪಿಗೆ ಸೇರಿಸಿದ್ರು. ಹಂಗಾಗ್ ಗೊತ್ತಾಯ್ತು. ಇನ್ನೊಂದು ತಿಂಗಳೋ ಎರಡು ತಿಂಗಳಿಗೋ ಇರಬಹುದೆನ್ನಿಸುತ್ತೆ. ನೀನೂ ಸ್ಮಾರ್ಟ್ ಫೋನ್ ತಗಂಡಿದ್ದೀನಿ ಅಂದಿದ್ಯಲ್ಲ. ಅದ್ಯಾಕ್ ಇನ್ನೂ ವಾಟ್ಸ್ ಅಪ್ ಹಾಕಂಡಿಲ್ಲ" 

'ಅದೇನದು ಅಂತಾನೇ ಗೊತ್ತಾಗಿಲ್ವೋ ಇನ್ನ. ನೀ ಹಾಕಂಡಿದ್ದೀನಿ ಅಂದ್ಯಲ್ಲ. ನಾನೂ ಹಾಕೋತೀನಿ ಬಿಡು. ಅಂದ್ರೂ ನಿಂಗ್ ನಿಜ್ಜ ಕ್ಲಾಸ್ ಮೇಟ್ಸ್ ನೆಲ್ಲ ಭೇಟಿಯಾಗ್ಬೇಕು ಅನ್ಸುತ್ತಾ?' 

“ಹು ಮತ್ತೆ. ಎಷ್ಟೋ ವರ್ಷದ ನಂತರ ಸಿಗೋದು ಅಂದ್ರೆ ಖುಷಿಯ ವಿಚಾರವೇ ಅಲ್ವ. ನಿಂಗ್ ಯಾಕೋ ಆಸಕ್ತಿ ಇಲ್ಲ ಅನ್ಸುತ್ತೆ" 

'ಏನ್ ಭೇಟಿಯಾಗೋದೋಪ್ಪ. ಜೊತೇಲಿದ್ದಾಗಲೇ ಯಾರೊಡನೆಯೂ ಹೆಚ್ಚು ಮಾತನಾಡಿದವಳಲ್ಲ ನಾನು. ಇನ್ನು ಈಗ ಸಿಕ್ಕಿ ಹಾಯ್ ಹಾಯ್ ಅನ್ನೋದರಲ್ಲಿ ಎಂತ ಸುಖವೋ ನಂಗಂತೂ ಗೊತ್ತಾಗೋದಿಲ್ಲ....' 

“ಹ...ಹ... ನಂದೂ ಅಷ್ಟೇ ಅಲ್ವ. ನಮ್ ಹುಡುಗ್ರು ಗ್ಯಾಂಗ್ ಬಿಟ್ರೆ ಇನ್ಯಾರ ಬಳಿಯೂ ಹೆಚ್ಚು ಮಾತನಾಡಿಲ್ಲ. ಅಂದ್ರೂ ಏನೋ ನೆನಪುಗಳು ಚೆನ್ನಾಗಿರ್ತವೆ ಅನ್ಸುತ್ತೆ ಸಿಕ್ಕಾಗ.....” 

'ನಿಂಗ್ ಕ್ಲಾಸ್ ಮೇಟ್ಸ್ ಗೆಟ್ ಟುಗೆದರ್ಗಿಂತ ಕಾಲೇಜವರ ಗೆಟ್ ಟುಗೆದರ್ ಇದ್ರೆ ಇನ್ನೂ ಚೆನ್ನಾಗಿರೋದೇನೋ' 

“ಯಾಕೆ.... ನೋಡ್ದಾ ರೇಗ್ಸೋದಾ.....” 

'ಏನ್ ರೇಗಿಸ್ದೆ?' ದನಿಯಲ್ಲಿನ ತರ್ಲೆತನಕ್ಕೆ ಗಟ್ಟಿಯಾಗಿ ತಬ್ಬಿಹಿಡಿದು "ಗೊತ್ತಾಯ್ತು ಬಿಡೆ. ಮಧು ವಿಷಯ ಹೇಳ್ತಿದ್ದಿ ಅಂತ" ಇಬ್ಬರೂ ರವಷ್ಟು ನಕ್ಕೆವು. ಒಂದರೆಕ್ಷಣ ನೆನಪುಗಳಲ್ಲಿ ಮುಳುಗಿಹೋದಂತಿದ್ದ ಸಾಗರ. 

'ಮತ್ತೆ ಬೆಂಗಳೂರಿಗೆ ಹೋಗಿ ಏನಪ್ಪ ಕೆಲಸ. ಈಗ್ಲೇ ಎಲ್ಲಾದರೂ ಸೇರಿಬಿಡ್ತೀಯಾ ಹೆಂಗೆ?' 

"ಅಯ್ಯೋ ಇಲ್ಲಪ್ಪ. ರಿಸಲ್ಟ್ ಬರೋಕೆ ಒಂದು ತಿಂಗಳಾದರೂ ಆಗ್ತದೆ. ಅಲ್ಲಿಯವರೆಗೆ ಆರಾಮಾಗಿ ಇರೋಣ. ಬೇಗ ಬೇಗ ದುಡ್ಡು ಕೂಡಾಕಿ ಯಾರನ್ನು ಸಾಕಬೇಕಿತ್ತೀಗ. ಮನೇಲಿ ಕಾರ್ ಡ್ರೈವಿಂಗ್ ಕಲುತ್ಕೋ ಅಂತ ಒಂದೇ ಹಟ. ನಂಗೇನೋ ಬೈಕಲ್ ಹೋಗೋದೇ ಇಷ್ಟ. ಅಂದ್ರೂ ಮನೆಯವರಿಗೋಸ್ಕರ ಕಲಿಯಬೇಕೀಗ" 

ಕಾರ್ ಡ್ರೈವಿಂಗಿನ ಹಳೆಯ ನೆನಪುಗಳೆಲ್ಲ ಮುತ್ತಿಕೊಂಡು ಬಂದು ಮುಖದ ಮೇಲೊಂದು ವಿಷಾದದ ನಗೆ ಮೂಡಿತು. 

“ಏನಾಯ್ತೆ?” 

'ಕಾರ್ ಡ್ರೈವಿಂಗ್ ಅಂದ್ಯಲ್ಲ. ಏನೇನೋ ನೆನಪಾಯ್ತು' 

ಏನು ಎನ್ನುವಂತೆ ನೋಡಿದ. 'ಇಂಟರ್ನ್ ಶಿಪ್ಪಿನ ಶುರುವಿನಲ್ಲಿ ನಾ ಕಾರ್ ಡ್ರೈವಿಂಗಿಗೆ ಸೇರಿದ್ದೆ. ನಮ್ಮ ಮನೆಯಲ್ಲಿ ಮೊದಲು ಕಾರ್ ಡ್ರೈವಿಂಗ್ ಕಲಿತಿದ್ದೆ ನಾನು. ಅಪ್ಪನಿಗೆ ತಮ್ಮನಿಗೆ ಕಾರ್ ಓಡಿಸಲು ನಾನೇ ಹೇಳಿಕೊಟ್ಟಿದ್ದೆ. ಪರಶುವಿಗೂ ಅರ್ಧಂಬರ್ಧ ನಾನೇ ಹೇಳಿಕೊಟ್ಟಿದ್ದೆ. ನಾ ಡ್ರೈವಿಂಗ್ ಕ್ಲಾಸಿಗೆ ಸೇರಿದಾಗ ಪರಶುವಿನದ್ದೂ ಒಂದೇ ವರಾತ. ಡ್ರೈವಿಂಗ್ ಕಲಿಸೋ ನೆಪದಲ್ಲಿ ಆ ಸ್ಕೂಲಿನವರು ಸುಖಾಸುಮ್ಮನೆ ಮೈಕೈ ಮುಟ್ತಾರೇನೋ, ಈಗ ಡ್ರೈವಿಂಗ್ ಕಲಿತು ಏನಾಗಬೇಕಿತ್ತು ಅಂತೆಲ್ಲ ದಿನಾ ಗೋಳಾಡೋನು. ನಾನೂ ಬಂದು ಕುಳಿತುಬಿಡಲಾ ಹಿಂದೆ ಅನ್ನೋನು. ಅಯ್ಯೋ ಮಾರಾಯ ಅಷ್ಟೆಲ್ಲ ಏನೂ ಆಗಲ್ಲ. ನನ್ ಜೊತೆ ಇನ್ನೂ ಇಬ್ಬರಿದ್ದಾರೆ, ಲೇಡೀಸು. ಹಂಗೆಲ್ಲ ಕೆಟ್ಟದಾಗಿ ವರ್ತಿಸಿದರೆ ಯಾರಾದ್ರೂ ಮುಂದಕ್ಕೆ ಅವರ ಬಳಿ ಡ್ರೈವಿಂಗ್ ಕಲಿಯೋದಿಕ್ಕೆ ಹೋಗ್ತಾರಾ? ಅವರದೂ ಹೊಟ್ಟೆ ಪಾಡಲ್ಲವ....ನೀ ಏನೇನೋ ಯೋಚಿಸದೆ ಸುಮ್ಮನಿರು ಎಂದು ಸಮಾಧಾನಿಸಿದ್ದೆ. ಸಮಾಧಾನಗೊಳ್ಳುತ್ತಿದ್ದ. ಆದರೆ ಇದ್ದಕ್ಕಿದ್ದಂತೆ ಯಾವತ್ತಾದರೂ ಒಂದು ದಿನ ನೀ ಅವನ ಕೈಯಲ್ಲಿ ಮೈಕೈ ಮುಟ್ಟಿಸೋಕೆ ಡ್ರೈವಿಂಗ್ ಕಲಿಯೋಕೆ ಹೋಗಿದ್ದಿ ಅಂತ ಗೊತ್ತು ನಂಗೆ ಅಂತ ಕೂಗಾಡುತ್ತಿದ್ದ. ಅವತ್ತೆಲ್ಲ ಅವನನ್ನು ಸಮಾಧಾನಿಸುವ ಸ್ಥಿತಿಯಲ್ಲಿ ನಾನಿರುತ್ತಿರಲಿಲ್ಲ. ಒಬ್ಬಳೇ ಕುಳಿತು ಕಣ್ಣೀರಾಗುತ್ತಿದ್ದೆ ಅಷ್ಟೆ' 

“ಮ್" ಅಂದಷ್ಟೇ ಹೇಳಿದವನಿಗೆ ನನ್ನ ಮಾತಿನಿಂದ ಬೇಸರವಾಗಿದೆ ಎಂದು ತಿಳಿಯುವುದು ಕಷ್ಟವಾಗಲಿಲ್ಲ. ಒಂದಷ್ಟು ಸಮಯ ಮೌನ. “ನಂಗನ್ಸುತ್ತೆ ನಿಂಗೆ ಆತ್ಮಸಂಗಾತಿ ಮಣ್ಣು ಮಸಿಗಿಂತ ಹೆಚ್ಚಾಗಿ ನಿನ್ನ ಕತೆಗಳನ್ನು ಕೇಳಿಸಿಕೊಳ್ಳಲು ಒಂದು ಕಿವಿಯಷ್ಟೇ ಬೇಕಿತ್ತು. ಆ ಕಿವಿ ಸಕ್ರಿಯವಾಗಿರಲಿ ಅನ್ನೋ ಒಂದೇ ಕಾರಣಕ್ಕೆ ಇಷ್ಟೊಂದು ಹತ್ತಿರವಾದೆಯೋ ಏನೋ. ನಾ ಯಾವುದೇ ವಿಷಯ ಮಾತಾಡಲಿ ಅದನ್ನ ಸುತ್ತಿ ಬಳಸಿ ಪರಶುವಿನೊಡನೆ ಜೋಡಿಸಿಬಿಡುತ್ತಿ. ಬಹುಶಃ ನಿನ್ನ ಗಂಡ ರಾಜೀವ ಮಾತನಾಡುವಾಗಲೂ ಇದೇ ರೀತಿ ಮಾತನಾಡುವ ಬಯಕೆ ಮೂಡ್ತದೆ ನಿನಗೆ. ಅಲ್ಲದಾಗುವುದಿಲ್ಲವಲ್ಲ ಅಂತ ನನ್ನನ್ನು ಇಟ್ಕಂಡಿದ್ದೀಯೋ ಏನೋ" ಎಂದು ಕಟುವಾಗಿ ಹೇಳಿದವನು ಹಾಸಿಗೆ ಬಿಟ್ಟು ಮೇಲೆದ್ದುಬಿಟ್ಟ. ಇಷ್ಟೊಂದು ಕಟುವಾಗಿಬಿಡಬಲ್ಲ ನನ್ನ ಸಾಗರ ಅನ್ನೋ ಕಲ್ಪನೆಯೂ ನನಗಿರಲಿಲ್ಲ. 

ಬೇಸರದಿಂದಲೇ ಅವತ್ತಿನ ಭೇಟಿ ಮುಕ್ತಾಯಗೊಂಡಿತು. ಮುಗಿಯುವುದಿನ್ನೂ ಬಹಳಷ್ಟಿತ್ತು. 

ಮನೆಯಿಂದ ಹೊರಟ ಅರ್ಧ ಘಂಟೆಗೆ "ಸಾರಿ ಕಣೇ. ನೀ ಇದ್ದಕ್ಕಿದ್ದಂತೆ ಪರಶುವಿನ ಬಗ್ಗೆ ಮಾತನಾಡಿದ್ದು ನನಗೆ ಎಲ್ಲಿಲ್ಲದ ಸಿಟ್ಟು ತರಿಸಿತು. ರಾಜೀವನ ಬಗ್ಗೆ ನೀನೆಷ್ಟೇ ಮಾತಾಡಿದರೂ ನನಗೆ ಕೋಪ ಬರುವುದಿಲ್ಲ. ಆದರೆ ಪುರುಷೋತ್ತಮನ ನೆನಪಿಸಿಕೊಂಡರೇ ಸಿಟ್ಟು ಬರ್ತದೆ. ಅವ ನಿನ್ನ ಜೀವನದಲ್ಲಿ ಬರದಿದ್ದರೆ ನಮ್ಮಿಬ್ಬರ ನಡುವೆ ಈ ರೀತಿ ಕಳ್ಳ ಸಂಬಂಧ ಇರುವ ಅವಶ್ಯಕತೆ ಇರುತ್ತಿರಲಿಲ್ಲವಲ್ಲ ಅನ್ನೋ ಕಾರಣಕ್ಕೆ ಸಿಟ್ಟು" ಎಂದು ಮೆಸೇಜು ಕಳುಹಿಸಿದ್ದ. 

'ನಿನ್ನ ಸಿಟ್ಟಿಗೆ ಅರ್ಥವಿದೆ. ಇಲ್ಲವೆನ್ನುವುದಕ್ಕಾಗುವುದಿಲ್ಲ. ಆದರೆ ನಮ್ಮದು ಕಳ್ಳ ಸಂಬಂಧ ಅಂತೆಲ್ಲ ಕರೀಬೇಡ್ವೋ. ಹಿಂಸೆಯಾಗ್ತದೆ' 

“ಮ್. ಹಿಂಸೆಯಾದ್ರೂ ಅದೇ ಸತ್ಯ ಅಲ್ವ. ನಿನ್ನ ಗಂಡ ಅತ್ಲಾಕಡೆಗೆ ಹೋಗ್ತಿದ್ದ ಹಾಗೆ ನಾವಿಬ್ರು ಸೇರೋದು ಕಳ್ಳ ಸಂಬಂಧವಾಗದೇ ಮತ್ತೇನಾಗ್ತದೆ?” 

'ಏನೋ ಗೊತ್ತಿಲ್ವೋ...ಆದರಿದು ಕಳ್ಳ ಸಂಬಂಧವಂತೂ ಅಲ್ಲ ಅನ್ನೋದು ನನ್ನ ನಂಬಿಕೆ. ಅಷ್ಟೇ' 

“ನಮ್ಮ ನಮ್ಮ ವೈಯಕ್ತಿಕ ನಂಬಿಕೆಗಳೆಲ್ಲ ಸತ್ಯವಾಗಿರಬೇಕೆಂದೇನೂ ಇಲ್ಲವಲ್ಲ ಬಿಡು" 

'ಸರಿ ಕಣೋ. ಡ್ಯೂಟಿಗೆ ಹೊರಟೆ. ಬಾಯ್' 

“ಮ್. ನಿನಗಿಷ್ಟವಾಗದ ಮಾತುಗಳನ್ನಾಡುವಾಗ ಇದ್ದಕ್ಕಿದ್ದಂತೆ ನೀ ಬ್ಯುಸಿಯಾಗಿಬಿಡೋ ರೀತಿ ಅಚ್ಚರಿ ಮೂಡಿಸ್ತದೆ. ಕೆಲಸ ಮಾಡ್ಕೋ. ಬಾಯ್" ಎಂದು ಕುಹಕವಾಡಿದವನಿಗೆ ಪ್ರತಿಕ್ರಿಯಿಸಬೇಕೆನ್ನಿಸಲಿಲ್ಲ. ನಿಜಕ್ಕೂ ಮಧ್ಯಾಹ್ನದ ಡ್ಯೂಟಿಗೆ ಸಮಯವಾಗಿತ್ತು. ಮೆಸೇಜು ಕಳುಹಿಸಲು ಸಮಯವಿರಲಿಲ್ಲ. ನಿಜಕ್ಕೂ ಸಮಯವಿರಲಿಲ್ಲವಾ?

ಮುಖಪುಟ ಚಿತ್ರ: ಚೇತನ ತೀರ್ಥಹಳ್ಳಿ. 
ಮುಂದಿನ ಭಾಗವನ್ನು ಓದಲು ಇಲ್ಲಿ ಕ್ಲಿಕ್ಕಿಸಿ. 

2 comments:

  1. ಕಹಿ ಅನ್ನಿಸಿದ್ರೂ ಸತ್ಯ ಸತ್ಯನೇ ಅಲ್ವಾ? ಅದು ಅನೈತಿಕ ಸಂಬಂಧ ಅನ್ನೋದಕ್ಕಿಂತ ವಿವಾಹೇತರ ಸಂಬಂಧ ಅಥ್ವಾ ಪರಪುರುಷನ ಜೊತೆಗಿನ ಸಂಬಂಧ ಅನ್ನಬಹುದು. ಆದರೆ ಸೆಕ್ಸ್ ಆದ್ಮೇಲೆ ಗಂಡನಾಗಲೀ ಪರಪುರುಷನಾಗಲೀ ಎಲ್ರೂ ಒಂದೇನೇ

    ReplyDelete
  2. ಮನಸ್ಸು ಹಾಗೂ ದೇಹಗಳ ಮಿಲನ ಆದಾಗ ಅದು ವಿವಾಹೇತರ ಸಂಬಂಧ ಆದರೂ ಅನೈತಿಕ ಆಗಲಾರದು. ವಿವಾಹಿತ ಗಂಡು ಹೆಣ್ಣಿನ ನಡುವೆ ನಡೆಯುವ ಕಾಮ ಮಾತ್ರವೇ ನೈತಿಕ ಎಂಬುದು ಸಮಾಜದ ದೃಷ್ಟಿಕೋನ. ಆದರೆ ವಿವಾಹಿತ ಗಂಡು ಹೆಣ್ಣಿನ ನಡುವೆ ಎಷ್ಟೋ ಸಂದರ್ಭಗಳಲ್ಲಿ ದೇಹದ ಮಿಲನ ಮಾತ್ರ ಆಗುವ ಸಂಭವವೂ ಇರುತ್ತದೆ. ಅಂತಹ ಸಂದರ್ಭಗಳಲ್ಲಿ ಕಾಮವು ತೃಪ್ತಿಯನ್ನು ನೀಡುವ ಸಾಧ್ಯತೆ ಕಡಿಮೆ. ಎಷ್ಟೋ ಸಂದರ್ಭಗಳಲ್ಲಿ ಪರಿಸ್ಥಿತಿಯ ಒತ್ತಡಕ್ಕೆ ಸಿಲುಕಿ ಸಮರ್ಪಕ ಹಾಗೂ ಮನೋಲ್ಲಾಸಕರ ಸಂಗಾತಿಗಳ ನಡುವೆ ಮದುವೆ ನಡೆದಿರುವುದಿಲ್ಲ. ಇಂಥ ಸಂದರ್ಭಗಳಲ್ಲಿ ಕಾಮದ ಅತೃಪ್ತಿ ಇದ್ದೇ ಇರುತ್ತದೆ, ಆದರೆ ಸಮಾಜದ ಕಟ್ಟುಪಾಡುಗಳಿಂದಾಗಿ ಇಂಥ ಅತೃಪ್ತಿಯಲ್ಲಿಯೇ ಜೀವನ ಕಳೆದುಹೋಗುತ್ತದೆ.

    ಕಾಮವು ಜೀವನದ ಅತ್ಯಂತ ಮುಖ್ಯವಾದ ಅಂಗವಾದರೂ ಸಾಹಿತ್ಯದಲ್ಲಿ ಕಾಮಕ್ರಿಯೆಯ ವರ್ಣನೆ ಸಾಂಪ್ರದಾಯಿಕ ಸಮಾಜದಲ್ಲಿ ಅಶ್ಲೀಲ ಎನಿಸಿಕೊಳ್ಳುತ್ತದೆ. ಆದರೆ ವೈಜ್ಞಾನಿಕ ಹಾಗೂ ವೈದ್ಯಕೀಯ ದೃಷ್ಟಿಕೋನದಿಂದ ನೋಡಿದಾಗ ಸಾಹಿತ್ಯದಲ್ಲಿ ಕಾಮದ ವರ್ಣನೆ ಸಹಜವಾಗಿ ಬರಬೇಕು. ಅಂಥ ವರ್ಣನೆ ಪ್ರಪ್ರಥಮವಾಗಿ ನಾನು ಕನ್ನಡದ ಸಾಹಿತ್ಯದಲ್ಲಿ ಈ ಕಾದಂಬರಿಯಲ್ಲಿ ನೋಡುತ್ತಿದ್ದೇನೆ.

    ReplyDelete