Nov 24, 2019

ಒಂದು ಬೊಗಸೆ ಪ್ರೀತಿ - 41

ಡಾ. ಅಶೋಕ್.‌ ಕೆ. ಆರ್.‌
"ಇದು ನನ್ನ ಕೈಲಾಗೋ ಕೆಲಸವಲ್ಲ" ರಾಜೀವನ ಬಾಯಲ್ಲೀ ಮಾತುಗಳು ಬರೋಕೆ ಒಂದು ತಿಂಗಳ ಸಮಯವಾಗಿದ್ದು ಅಚ್ಚರಿಯೇ ಹೊರತು ಅವರ ಮಾತುಗಳಲ್ಲ. ಇಷ್ಟೊಂದ್ ದಿನ ತುರ್ತಿನಲ್ಲಿ ಹಣ ಬರದ ಯೋಜನೆಯೊಂದರಲ್ಲಿ ಅವರು ಶ್ರದ್ಧೆಯಿಂದ ಕೆಲಸ ಮಾಡಿದ್ದೇ ಅಪನಂಬುಗೆ ಮೂಡಿಸುವ ಸಂಗತಿ. ನನ್ನ ನಿರೀಕ್ಷೆಯನ್ನು ಮೀರಿ ಅವರು ನಡೆದುಕೊಳ್ಳಲಿಲ್ಲ ಎಂದು ಸಂಭ್ರಮಿಸಬೇಕೋ, ಯಾವ ಕೆಲಸವನ್ನೂ ಗಮನಕೊಟ್ಟು ಮಾಡದ ಅವರ ಬೇಜವಾಬ್ದಾರಿತನಕ್ಕೆ ಕನಿಕರಿಸಬೇಕೋ ತಿಳಿಯಲಿಲ್ಲ. ತೀರ ಕೆಟ್ಟಾನುಕೆಟ್ಟ ಪದಗಳನ್ನು ಬಳಸಿಕೊಂಡು ಅವರನ್ನು ಹೀಯಾಳಿಸಬೇಕೆಂದು ಹಾತೊರೆಯುತ್ತಿದ್ದ ಮನಸ್ಸಿಗೆ ಸುಳ್ಳು ಸುಳ್ಳೇ ಸಮಾಧಾನ ಮಾಡಿ 'ಹೋಗ್ಲಿ ಬಿಡಿ. ಇದಾಗಲಿಲ್ಲ ಅಂದ್ರೆ ಮತ್ತೇನಾದರೂ ಮಾಡಿದರಾಯಿತು. ಪ್ರಯತ್ನವನ್ನಂತೂ ಮಾಡಿದ್ರಲ್ಲ' 

“ನೀ ಬಂದ್ ಸಂಜೆ ಎರಡ್ ಘಂಟೆ ಕ್ಲಿನಿಕ್ಕಿನಲ್ಲಿ ಕುಳಿತಿದ್ದರೆ ಅದರ ಕತೆಯೇ ಬೇರೆಯಿರ್ತಿತ್ತು" ಇದವರ ಎಂದಿನ ಶೈಲಿ, ಸುತ್ತಿಬಳಸಿ ಕೊನೆಗೆ ಅವರ ವೈಫಲ್ಯಕ್ಕೆ ನಾ ಹೊಣೆಯೇ ಹೊರತು ಅವರಲ್ಲ ಎಂದನ್ನಿಸಿಬಿಡುವುದು. ಸಂಸಾರ ಹಳತಾಗುತ್ತಿದ್ದಂತೆ ಹೇಗೆ ಇಬ್ಬರ ವರ್ತನೆಯೂ ನಿರೀಕ್ಷಿತವಾಗಿಬಿಡ್ತದಲ್ಲ. ಆದರೆ ದೊಡ್ಡ ಜಗಳಗಳಾಗಬೇಕೆ ಹೊರತು ಸಣ್ಣ ಪುಟ್ಟ ಕಿರಿಪಿರಿಗಳು ಇಲ್ಲವೇ ಇಲ್ಲವೆನ್ನುವಷ್ಟು ಕಡಿಮೆಯಾಗಿಬಿಡ್ತದೆ. ನಾ ಏನ್ ಮಾಡಿದಾಗ ಅವರು ಕೋಪಗೊಳ್ಳುತ್ತಾರೆಂದು ನನಗೆ, ಅವರು ಏನು ಮಾಡಿದಾಗ ನನಗೆ ಕೋಪ ಬರ್ತದೆಂದು ಅವರಿಗೆ ತಿಳಿದುಬಿಟ್ಟಿದೆ. ಏನೋ ಜೊತೆಯಲ್ಲಿದ್ದೀವಿ ಅಷ್ಟೇ ಅನ್ನುವ ಭಾವನೆ ನನ್ನಲ್ಲಿ ಬಂದು ಎಷ್ಟು ತಿಂಗಳಾಯಿತು? 

'ಮ್. ಅದ್ ಆಗ್ತಿರಲಿಲ್ಲವಲ್ಲ. ಏನೋ ಪಿಜಿ ಮುಗಿದ ಮೇಲೆ ನೋಡಬಹುದು ಅಷ್ಟೇ'

ಒಂದೊಂದೇ ಎಪಿಸೋಡು ಹುಡುಕುಡುಕಿ ಓದೋಕೆ ಬೇಸರವಾ? ಪೂರ್ತಿ ಇ - ಪುಸ್ತಕ ತೆಗೆದುಕೊಳ್ಳಲು ಇಲ್ಲಿ ಕ್ಲಿಕ್ಕಿಸಿ.

“ಅದಕ್ಕಿನ್ನ ಮೂರು ವರ್ಷ. ನನ್ ಜೀವನದ ಕತೆಯೇ ಇಷ್ಟಾಯಿತು ಬಿಡು. ನನ್ನ ಹಣೆಬರಹಕ್ಕೆ ನೀ ಏನು ಮಾಡ್ಲಿಕ್ ಆಗ್ತದೆ" 

'ಸರಿ. ಮುಂದೆ' 

“ಇಲ್ಲೇ ಹೂಟಗಳ್ಳಿ ಹತ್ರ ಹೊಸದೊಂದು ಫಾರ್ಮಸಿ ಕಂಪನಿ ಬಂದಿದೆಯಂತೆ. ಒಂದ್ ಸೂಪರ್ ವೈಸರ್ ಪೋಸ್ಟ್ ಖಾಲಿಯಿದೆ ಅಂತ ಅಲ್ಲೇ ಕೆಲಸ ಮಾಡೋ ಗೆಳೆಯ ಹೇಳ್ತಿದ್ದ. ಅಲ್ಲಿಗೇ ಸೇರೋಣ ಅಂತಿದ್ದೀನಿ. ಸದ್ಯಕ್ಕೆ ಹದಿನೆಂಟು ಸಾವಿರ ಕೊಡ್ತಾರೆ ಅಂತಿದ್ದ" 

'ಓ ಪರವಾಗಿಲ್ಲ. ಒಳ್ಳೆ ಸಂಬಳವೇ ಸಿಕ್ಕಂಗಾಯ್ತಲ್ಲ' ಮುಂಚೆ ಬರ್ತಿದ್ದ ಸಂಬಳಕ್ಕಿಂತ ಆರು ಸಾವಿರ ಹೆಚ್ಚಿದು. ಅಷ್ಟರಮಟ್ಟಿಗೆ ಮನೆಯ ಖರ್ಚಿಗೆ ಅನುಕೂಲ. 

“ಏನ್ ಒಳ್ಳೇದು? ಸಿಗೋ ಜುಜುಬಿ ಸಂಬಳವಿದು. ಆಡ್ಕೊಳ್ಳೋಕೆ ಚೆನ್ನಾಗ್ ಕಲ್ತೆ" ಅಷ್ಟೊತ್ತಿನಿಂದ ಸಮಾಧಾನದಿಂದ ಮಾತನಾಡುತ್ತಿದ್ದವರು ಇದ್ದಕ್ಕಿದ್ದಂತೆ ಸಿಡುಕಿದರು. ನೋವಾಯ್ತು. 

'ಆಡ್ಕೊಳ್ಳೋದ್ ಏನ್ ಬಂತ್ರಿ. ನಿಜಾನೇ ಹೇಳಿದ್ದು. ಫಾರ್ಮಸಿ ಕಂಪನಿಯಲ್ಲೇ ಕೆಲಸ. ಮುಂದ್ ಮುಂದಕ್ಕೆ ಸಂಬಳವೂ ಚೆನ್ನಾಗ್ ಆಗ್ತದೆ. ನನ್ನದೂ ಪಿಜಿ ಎಲ್ಲಾ ಮುಗಿದು, ಬಾಂಡ್ ಮುಗಿದ ಮೇಲೆ ನಿಮ್ಮಾಸೆಯಂತೆ ಬೆಂಗಳೂರಿಗೇ ಹೋಗುವ' 

“ಹು ಹು... ಅಷ್ಟೊತ್ತಿಗೆ ನಂಗೂ ಸಾಯುವಷ್ಟು ವಯಸ್ಸಾಗಿರ್ತದೆ ಬಿಡು" 

'ಅಯ್ಯ. ಸುಮ್ನಿರಿ. ಇನ್ನೂ ಒಂದ್ ಮಗು ಆಗಿಲ್ಲ. ಸಾಯುವ ಮಾತ್ಯಾಕೆ' 

ಮಗುವಿನ ವಿಷಯ ಅವರಲ್ಲಿದ್ದ ಸಿಡುಕನ್ನು ಮರೆಯಾಗಿಸಿತು. ಅವರಿಗೂ ಒಂದು ಮಗು ಬೇಕು ಅನ್ನಿಸಿಬಿಟ್ಟಿತ್ತು. ಮಕ್ಕಳಾಗಿ ಏನ್ ನಮ್ ವಂಶ ಉದ್ಧಾರ ಮಾಡಬೇಕಿತ್ತ ಬಿಡೆ ಅಂತ ತಮಾಷೆ ಮಾಡುತ್ತಿದ್ದವರ ದನಿ ಇತ್ತೀಚಿನ ದಿನಗಳಲ್ಲಿ ಬದಲಾಗಿಬಿಟ್ಟಿತ್ತು. ಮಾತ್ರೆ ತಗಂಡ, ಮುಂದಿನ ಸಲ ಡಾಕ್ಟರ್ ಹತ್ರ ಹೋಗುವುದ್ಯಾವಾಗ ಅಂತೆಲ್ಲ ವಿಚಾರಿಸಿಕೊಂಡು ನನ್ನನ್ನು ಅಚ್ಚರಿಗೆ ದೂಡುತ್ತಿದ್ದರು. ಸಿಗರೇಟನ್ನೂ ಕಡಿಮೆ ಮಾಡಿಬಿಟ್ಟಿದ್ದರು ಸ್ಪರ್ಮ್ ಚೆನ್ನಾಗಿ ಬೆಳೆಯಲಿ ಎಂದು. ಮೊದಲ ಸಲ ಐ.ಯು.ಐ ಮಾಡಿಸಿಕೊಂಡಿದ್ದು ಫಲ ಕೊಟ್ಟಿರಲಿಲ್ಲ. ಮೊದಲ ಸಲವೇ ಅದು ಫಲ ಕೊಡುವುದೂ ಅಪರೂಪ. ಆರು ತಿಂಗಳಿನಿಂದ ಮುಟ್ಟಾಗುವುದು ಒಂದೆರಡು ದಿನ ತಡವಾದರೂ ಪ್ರೆಗ್ನೆನ್ಸಿ ಟೆಸ್ಟ್ ಕಿಟ್ ತಂದು ಬೆಳಿಗ್ಗೆ ಬೆಳಿಗ್ಗೆ ಮೂತ್ರದ ಪರೀಕ್ಷೆ ನಡೆಸೋದು, ಒಂದರೆ ಕ್ಷಣ ನಿಟ್ಟುಸಿರುಬಿಟ್ಟು ಕಣ್ಣೀರಾಗೋದು. ಗರ್ಭ ಧರಿಸ್ತೀನಿ ಅನ್ನೋ ನಂಬುಗೆಯೇ ಹೊರಟುಹೋಗಿತ್ತು. ಮೊದಲ ಸಲ ಐ.ಯು.ಐ ಮಾಡಿಸಿದಾಗ ಇನ್ನೇನು ಮಗುವಾಗಿಬಿಡ್ತಲ್ಲ ಅನ್ನುವಷ್ಟು ಸಂತಸವಾಗಿತ್ತು. ನಿರೀಕ್ಷಿತ ದಿನಕ್ಕಿಂತ ಎರಡು ದಿನ ಮುಂಚಿತವಾಗಿಯೇ ಮುಟ್ಟಿನ ರಕ್ತ ಚಿಮ್ಮಿ ಹರಿದು ನಗೆಸಾರ ಮಾಡಿತ್ತು. ಎರಡನೆ ಸಲದ ಐ.ಯು.ಐ ಪ್ರಕ್ರಿಯೆ ಮುಗಿದು ತಿಂಗಳ ಹತ್ತಿರವಾಗಿತ್ತು. ಅರೆ ಹೌದಲ್ಲ! ಈ ಪಿಜಿಗೆ ಸೇರಿ ಓದು ಸೆಮಿನಾರು ಜರ್ನಲ್ ಕ್ಲಬ್ಬು ಅಂತೆಲ್ಲ ಬ್ಯುಸಿಯಾಗಿ ಮುಟ್ಟಾಗಿಲ್ಲ ಅನ್ನೋ ಸಂಗತಿಯನ್ನೇ ಮರೆತುಬಿಟ್ಟಿದ್ದೇನಲ್ಲ! ಏನೇ ತಡ ಅಂದ್ರೂ ಮುಟ್ಟಾಗಿ ಒಂದೈದು ದಿನವಾದರೂ ಆಗಬೇಕಿತ್ತಲ್ಲ. 

'ರೀ. ಪಿರೀಯಡ್ಸೇ ಆಗಿಲ್ಲ ಇನ್ನೂ' 

“ನಿಂದ್ಯಾವಾಗ ಸರಿಯಾಗ್ ಆಗಿದೆ ಹೇಳು" ನಗುತ್ತಾ ಹೇಳಿದರು. 

'ನಿಮ್ ತಲೆ. ಪಿಸಿಒಡಿ ಇದ್ದಾಗ ಹಂಗಾಗ್ತಿತ್ತು. ಇತ್ತೀಚೆಗೆ ಸುಮಾರಾಗಿ ರೆಗ್ಯುಲರ್ ಆಗಿದ್ಯಲ್ಲ. ಏನೇ ತಡ ಅಂದ್ರೂ ಇಷ್ಟೊತ್ತಿಗೆ ಮುಟ್ಟಾಗಬೇಕಿತ್ತು. ಆಗಿಲ್ಲ. ಪ್ರೆಗ್ನೆನ್ಸಿ ಕಿಟ್ ತಗಂಡ್ ಬರೋಗಿ' 

“ತರ್ಬೇಕು ಅಂತೀಯ? ಸುಮ್ನೆ ಐವತ್ ರುಪಾಯ್ ದಂಡವಾಗ್ತದೇನೋಪ್ಪ" ನನ್ನನ್ನು ಚುಡಾಯಿಸುತ್ತಲೇ ತರಲು ಹೊರಗೋದರು. 

ರಾತ್ರಿಯ್ಯಾಕೋ ಸರಿ ನಿದ್ರೆಯೇ ಆಗಲಿಲ್ಲ. ಬೆಳಗಿನ ಜಾವದಲ್ಲಿ ನಿದ್ರೆ.... ಅಸ್ಪಷ್ಟ ಕನಸು.... ಕನಸಲ್ಲಿ ಸಾಗರ ಬಂದಿದ್ದ.... ಕಣ್ಣೀರಾಗಿದ್ದ.... ನನ್ನ ಕಣ್ಣಲ್ಲೂ ನೀರಿತ್ತು.... ಐದೂವರೆಗೆಲ್ಲ ಎಚ್ಚರವಾಯಿತು. ಹಾಲಿನಲ್ಲಿದ್ದ ಟೇಬಲ್ಲಿನ ಮೇಲಿಟ್ಟಿದ್ದ ಪ್ರೆಗ್ನೆನ್ಸಿ ಕಿಟ್ ಅನ್ನು ತೆರೆದಿಟ್ಟು ಅಡುಗೆಮನೆಯಲ್ಲಿ ಒಂದು ಪೇಪರ್ ಲೋಟವನ್ನು ತೆಗೆದುಕೊಂಡು ಬಚ್ಚಲಿಗೆ ಹೋಗಿ ಒಂದತ್ತು ಹನಿಯಷ್ಟು ಮೂತ್ರವನ್ನು ಲೋಟದಲ್ಲಾಕಿಕೊಂಡು ಬಂದು ಪ್ರೆಗ್ನೆನ್ಸಿ ಕಿಟ್‍‍ನಲ್ಲಿದ್ದ ಡ್ರಾಪರ್ ಬಳಸಿ ಎರಡು ತೊಟ್ಟನ್ನು ಪ್ರೆಗ್ನೆನ್ಸಿ ಕಿಟ್ ಸ್ಟ್ರಿಪ್‍‍ಗೆ ಹಾಕಿದೆ. ಸೆಕೆಂಡುಗಳು ಉರುಳುತ್ತಿದ್ದಷ್ಟೂ ಹೊತ್ತು ಉದ್ವಿಗ್ನತೆ. ಇನ್ನೇನಾಗಿರ್ತದೆ ಎಂದಿನಂತೆ ಗಾಢ ಗುಲಾಬಿ ವರ್ಣ ಮೂಡುವುದಿಲ್ಲ. ಎಲ್ಲವನ್ನೂ ಪ್ಲಾಸ್ಟಿಕ್ ಕವರ್ರಿಗಾಕಿ ಬಿಸುಟಬೇಕಷ್ಟೇ.... ಈ ಸಲಾನೂ ಇಲ್ಲ ಅಂದ್ರೆ ಮತ್ತೊಮ್ಮೆ ಐ.ಯು.ಐ.... ಅದಾದ ಮೇಲೆ ಐ.ವಿ.ಎಫ್ಫು..... ಮೂತ್ರದ ಹನಿಗಳು ನಿಧಾನಕ್ಕೆ ಕಂಟ್ರೋಲ್ ಲೈನನ್ನು ದಾಟುತ್ತಿತ್ತು..... ಕಂಟ್ರೋಲ್ ಲೈನನ್ನು ಮೂತ್ರ ಸ್ಪರ್ಷಿಸುತ್ತಿದ್ದಂತೆಯೇ ಅದು ಗಾಢ ಗುಲಾಬಿ ಬಣ್ಣಕ್ಕೆ ತಿರುಗಿಕೊಂಡಿತು.... ಐ.ವಿ.ಎಫ್ ಅಂದ್ರೆ ಇನ್ನೂ ನೋವಿನ ಸಂಗತಿ..... ದೈಹಿಕ ನೋವು.... ಜೊತೆಗೆ ಆರ್ಥಿಕವಾಗಿಯೂ ಹೊರೆ..... ಅದರಲ್ಲೆಷ್ಟು ಸಕ್ಸಸ್ ರೇಟಿದೆಯೋ ಏನೋ..... ಮಕ್ಳು ತಟ್ ಅಂತ ಆಗೋಗ್ತವೆ.... ನಂಗೇ ಯಾಕ್ ಹಿಂಗ್ ಆಗ್ತಿದೆ...... ಮೂತ್ರದ ಹನಿ ಟೆಸ್ಟ್ ಲೈನನ್ನು ತಲುಪಿ ದಾಟಿತು. ಕಂಟ್ರೋಲ್ ಲೈನು ತಟ್ಟಂತ ಬಣ್ಣ ಬದಲಿಸಿದಂತೆ ಟೆಸ್ಟ್ ಲೈನಿನಲ್ಲಿ ಬಣ್ಣ ಬದಲಾಗಲಿಲ್ಲ. ಎರಡು ಕ್ಷಣವಾಯಿತು, ನಾಲ್ಕು ಕ್ಷಣವಾಯಿತು.... ಹತ್ತು ಕ್ಷಣವಾಗುವಷ್ಟರಲ್ಲಿ ನಿಧಾನಕ್ಕೆ ಬಣ್ಣ ಬದಲಾದಂತೆ ತೋರಿತು..... ಅದು ನನ್ನ ಮನಸ್ಸಿನ ಭಾವನೆಯೂ ಇರಬಹುದೇನೋ.... ನಿಜಕ್ಕೂ ಬಣ್ಣದಲ್ಯಾವ ಬದಲಾವಣೆಯೂ ಆಗುತ್ತಿಲ್ಲವೇನೋ...... ಇಲ್ಲ ಮನದ ಭಾವನೆಯೇನಲ್ಲ.... ಬಣ್ಣ ಬದಲಾಗುತ್ತಿದೆ..... ಅಗೋ ಗಾಢ ಗುಲಾಬಿ ಬಣ್ಣ ಮೂಡೇ ಬಿಟ್ಟಿತಲ್ಲ..... ಅಬ್ಬ.... ಸದ್ಯ ಇನ್ನು ಮುಂದೆ ಐ.ಯು.ಐ ಅಂತೆಲ್ಲ ಅನುಭವಿಸೋ ಕರ್ಮವಿಲ್ಲ... ಪ್ರೆಗ್ನೆನ್ಸಿ ಕಿಟ್‍ ಅನ್ನು ಜೋಪಾನವಾಗಿ ಟೇಬಲ್ಲಿನ ಮೇಲಿಟ್ಟು ಲೋಟ ಡ್ರಾಪರುಗಳನ್ನು ಕಸದ ಬುಟ್ಟಿಗೆ ಹಾಕಿ ಬಂದು ಮೊಬೈಲೆತ್ತಿಕೊಂಡು ಸಾಗರನಿಗೆ ಎರಡು ಸಾಲಿಡೀ ಸ್ಮೈಲಿಯನ್ನು ಟೈಪಿಸಿ ಕಳುಹಿಸಿದೆ. ತತ್ ಕ್ಷಣದಲ್ಲೇ ಅವನು ನಾಲ್ಕು ಸಾಲು ಕಳುಹಿಸಿದ. ಫಟಿಂಗ ಅವನು, ನನ್ನ ಮೆಸೇಜನ್ನೇ ಕಾಪಿ ಮಾಡಿ ಎರಡೆರಡು ಸಲ ಪೇಸ್ಟು ಮಾಡಿ ಕಳುಹಿಸಿರುತ್ತಾನೆ. ಇಲ್ಲಾಂದ್ರೆ ಇಷ್ಟು ಬೇಗ ಅಷ್ಟೊಂದು ಸ್ಮೈಲಿಗಳನ್ನು ಕಳುಹಿಸುವುದು ಸಾಧ್ಯವಾ ಎಂದು ಮನದಲ್ಲೇ ನಗಾಡುತ್ತಾ 'ಏನಕ್ ಇಷ್ಟೊಂದು ಸ್ಮೈಲಿ ಕಳಿಸಿದ್ಯಾ? ನಂಗೇ ಕಾಂಪಿಟೇಶನ್ನಾ...' 

“ಕಾಂಪಿಟೇಶನ್ ಏನಿಲ್ಲ. ಖುಷಿಯಾಯ್ತು ವಿಷಯ ಗೊತ್ತಾಗಿ ಅದಿಕ್ಕೆ ನಾಲಕ್ ಸಾಲು" 

'ಯಾವ ವಿಷಯ ಗೊತ್ತಾಯ್ತು? ನಾನೇನು ಹೇಳೇ ಇಲ್ಲವಲ್ಲ....' 

“ಲೇ ಗೂಬೆ. ನಾನೂ ಡಾಕ್ಟರ್ರೇ ಅಲ್ವೇನವ್ವ. ಬೆಳಿಗ್ಗೆ ಬೆಳಿಗ್ಗೆ ಇಷ್ಟೊಂದು ಖುಷಿಯಿಂದ ಮೆಸೇಜು ಕಳಿಸಿದ್ದಿ ಅಂದ್ರೆ ಪ್ರೆಗ್ನೆಂಟ್ ಆಗಿರ್ತೀಯ ಅನ್ನೋದೂ ಗೊತ್ತಾಗಲ್ವ ನನಗೆ........” 

'ಅಲ್ವ! ಬಾಳಾ ದಿನದ ನಂತರ ಮನ್ಸು ಖುಷಿ ಖುಷಿಯಾಗಿದ್ಯೋ.....' 

“ಮ್. ಹಿಂಗೇ ಇರವ್ವ ಖುಷಿ ಖುಷಿಯಾಗಿ.... ಇನ್ಮೇಲ್ ಆರೋಗ್ಯ ಹುಷಾರು..... ಚೆನ್ನಾಗ್ ತಿನ್ನು.......” 

'ನೋಡ್ದಾ! ಅಷ್ಟು ದಿನದಿಂದ ಒಂದ್ ಸಲಕ್ಕಾದ್ರೂ ಚೆನ್ನಾಗ್ ತಿನ್ನು ಅನ್ನದೋನು ಪ್ರೆಗ್ನೆಂಟ್ ಆದ ತಕ್ಷಣ ಆರೋಗ್ಯ ವಿಚಾರಿಸಿಕೊಳ್ಳೋದಾ....' 

“ಅಯ್ಯೊ... ಮತ್ತಿನ್ನೇನು... ನಮ್ ಮಗು ಆರೋಗ್ಯ ನಂಗ್ ಜಾಸ್ತಿ ಮುಖ್ಯ.... ನಿಂದೇನ್ ಬಿಡು" 

'ಖುಷಿಯಾಯ್ತು ಕಣೋ. ನಮ್ ಮಗು ಅಂದಿದ್ದಕ್ಕೆ' 

“ಮ್....ಬಯಾಲಾಜಿಕಲ್ ತಂದೆಯಂತೂ ಆಗಲಿಕ್ಕಾಗಲ್ಲ.... ಆಗಲಿಲ್ಲ..... ಆದ್ರೇನಂತೆ ಹುಟ್ಟೋ ಮಗು ನನಗೂ ಮಗುವೇ ಹೌದು" 

'ಮ್. ಸರಿ ಕಣೋ. ಇವರಿನ್ನು ಮಲಗಿದ್ದಾರೆ. ಎಬ್ಬಿಸಿ ವಿಷಯ ತಿಳಿಸಿ ಹೊರಡ್ಬೇಕು ಆಸ್ಪತ್ರೆಗೆ' 

“ಓಕೆ ಓಕೆ. ಬಾಯ್" 

ಇವರನ್ನು ಎಬ್ಬಿಸೋಕೇ ಹತ್ತು ನಿಮಿಷ ಖರ್ಚಾಯಿತು. 

'ಪಾಸಿಟಿವ್ ಬಂತ್ರೀ... ಇನ್ಮೇಲೆ ಪ್ರೆಗ್ನೆನ್ಸಿ ಟೆಸ್ಟ್ ಗೆ ಐವತ್ತು ರುಪಾಯಿ ಖರ್ಚಾಗಲ್ಲ ನೋಡಿ... ಬೇರೆ ಖರ್ಚಿರ್ತವೆ ಅಷ್ಟೇ' ಇದ್ದಕ್ಕಿದ್ದಂತೆ ಹಿಂಗ್ ಎಬ್ಬಿಸಿ ಕೂರಿಸಿ ಹೇಳಿದ ಮಾತುಗಳ ಅರ್ಥ ಅವರೊಳಗಿಳಿಯಲು ಮತ್ತೈದು ನಿಮಿಷ ಖರ್ಚಾಯಿತು. ಅರ್ಥವಾದಾಗ ಮುಖದ ತುಂಬ ನಗು ಮೂಡಿಸಿಕೊಂಡು "ಕಂಗ್ರಾಟ್ಸ್ ಡಾರ್ಲಿಂಗ್. ಯಾವುದ್ಯಾವುದೋ ಆಸ್ಪತ್ರೆಯ ಬಾತ್ ರೂಮುಗಳಲ್ಲಿ ಹಸ್ತ ಮೈಥುನ ಮಾಡ್ಕೊಳ್ಳೋ ಕರ್ಮ ತಪ್ತು ಅನ್ನು" ಎನ್ನುತ್ತಾ ಕೆನ್ನೆ ಜಿಗುಟಿದರು. ಅವರ ಕೈ ಮೇಲೊಂದು ಏಟು ಕೊಟ್ಟು ಮೇಲೆದ್ದೆ. ಕೈ ಹಿಡಿದು ಕೂರಿಸಿಕೊಳ್ತಾರೆ, ಇನ್ನೊಂದಷ್ಟು ಮುದ್ದುಗರೆಯುತ್ತಾ ಮಗುವಿನ ಬಗ್ಗೆ ಮಾತನಾಡುತ್ತಾರೆ ಎಂದು ನಿರೀಕ್ಷಿಸಿದ್ದೆ. ನಿರೀಕ್ಷೆಯಾಗೇ ಉಳಿಯಿತು. ನಾ ಬಾಗಿಲು ದಾಟುವುದಕ್ಕೂ ಮೊದಲೇ ಮುಖದ ಮೇಲೆ ಹೊದಿಕೆಯನ್ನೆಳೆದುಕೊಂಡಿದ್ದರು. ಮ್...ಇದಕ್ಕೆಲ್ಲ ಬೇಸರ ಮಾಡಿಕೊಳ್ಳುವ ದಿನವಲ್ಲವಲ್ಲ ಇದು ಎಂದುಕೊಳ್ಳುತ್ತಾ ಡಾಕ್ಟರಿಗೆ ಹಿಂಗಿಂಗೆ ಪಾಸಿಟಿವ್ ಬಂದಿದೆ ಅಂತ ಮೆಸೇಜು ಮಾಡಿದೆ. ನಾಳೆ ಸಂಜೆ ಬನ್ನಿ ಒಂದ್ ಸ್ಕ್ಯಾನ್ ಮಾಡಿ ಕನ್ಫರ್ಮ್ ಮಾಡಿಕೊಳ್ಳುವ ಎಂದರು. 

* * *

ಯಾಕಾದ್ರೂ ಪ್ರೆಗ್ನೆಂಟ್‌ ಆದ್ನೋ ಅನ್ನಿಸೋಕೆ ಮೂರು ವಾರ ಸಾಕಾಗಿತ್ತು. ಬೆಳಿಗ್ಗೆ ಅನ್ನಂಗಿಲ್ಲ, ಮಧ್ಹ್ಯಾನ ಅನ್ನಂಗಿಲ್ಲ ಸಂಜೆ ಅನ್ನಂಗಿಲ್ಲ, ರಾತ್ರಿ ಅನ್ನಂಗಿಲ್ಲ ವಾಂತಿ ವಾಂತಿ ವಾಂತಿ. ಮೊದಲೆರಡು ವಾರ ಎಂತದೂ ಇರಲಿಲ್ಲ. ಒಂದು ವಾರ ಅಮ್ಮನ ಮನೆಯಲ್ಲೇ ಇದ್ದೆ. ತಿನ್ನಿಸಿ ತಿನ್ನಿಸಿ ಮತ್ತಷ್ಟನ್ನು ಪ್ಯಾಕ್‌ ಮಾಡಿ ಕಳಿಸಿಕೊಟ್ಟಿದ್ದರು. ವಾಪಸ್ಸು ಬಂದ ದಿನದಿಂದಲೇ ವಾಂತಿ. ತಿಂದರೂ ವಾಂತಿ, ತಿನ್ನದೇ ಹೋದರೂ ವಾಂತಿ, ತಿಂಡಿ ತಿನಿಸುಗಳ ವಾಸನೆ ಹತ್ತಿರ ಸುಳಿದರೂ ವಾಂತಿ, ತಿಂಡಿ ಕಣ್ಣಿಗೆ ಬಿದ್ದರೂ ವಾಂತಿ….. ವಾರ ಕಳೆಯುವಷ್ಟರಲ್ಲಿ ಮೂರು ಕೆಜಿ ತೂಕ ಕಳೆದುಕೊಂಡುಬಿಟ್ಟಿದ್ದೆ. ಅವತ್ತು ರಾತ್ರಿ ಇವರು ಆರ್.ಆರ್‌ ಹೋಟೆಲ್ಲಿನಿಂದ ಚಿಲ್ಲಿ ಚಿಕನ್‌, ಬಿರಿಯಾನಿ ಕಟ್ಟಿಸಿಕೊಂಡು ಬಂದಿದ್ದರು, ಅದರ ವಾಸನೆಗೂ ಹೊಟ್ಟೆ ತೊಳೆಸಿದಂತಾಗಿದ್ದೇನೋ ಹೌದು. ಆದರೂ ಬಾಯಿ ಚಪಲ ಕೇಳಬೇಕಲ್ಲ. ಒಂದೆರಡು ಪೀಸು ಚಿಕನ್ನು ಪುಟ್ಟ ಮುಷ್ಟಿಯಷ್ಟು ಅನ್ನ ತಿಂದು ಮಲಗಿದೆ. ಒಂದರಷ್ಟೊತ್ತಿಗೆ ಎಚ್ಚರವಾಯಿತು. ತಿಂದಿದ್ದೆಲ್ಲ ತೇಗಿ ಬಾಯಿ ಹುಳಿ ಹುಳಿಯಾಯಿತು. ಇವರು ಟಿವಿ ನೋಡುತ್ತಾ ಕುಳಿತಿದ್ದವರು ಎಷ್ಟೊತ್ತಿಗೆ ಮಲಗಿದ್ದರೋ ಗೊತ್ತಿಲ್ಲ. ಎದ್ದೋಗಿ ಬೌಲ್‌ ತೆಗೆದುಕೊಂಡು ಬನ್ನಿ ಎಂದ್ಹೇಳಲು ಎಬ್ಬಿಸಲು ಪ್ರಯತ್ನಿಸಿದ್ದು ವಿಫಲವಾಯಿತು. ಕಷ್ಟಬಿದ್ದು ಎದ್ದು ಬಚ್ಚಲುಮನೆಗೆ ಹೋಗುವಷ್ಟರಲ್ಲಿ ಅರ್ಧ ವಾಂತಿ ಬಾಯಿಯೊಳಗೆ ಬಂದುಬಿಟ್ಟಿತ್ತು. ತಿಂದಿದ್ದ ಎರಡು ಪೀಸಲ್ಲಿ ಒಂದೂವರೆ ಪೀಸು, ಅರ್ಧ ಮುಷ್ಟಿಯಷ್ಟು ಅನ್ನ ಬಚ್ಚಲಿಗೆ ಬಿತ್ತು. ಸುಸ್ತಾಗಿ ಬಂದು ಅಡುಗೆಮನೆಯಲ್ಲಿ ಒಂದೂವರೆ ಚಮಚದಷ್ಟು ನೀರು ಕುಡಿದು ಹಾಲಿನಲ್ಲಿ ಫ್ಯಾನು ಹಾಕಿಕೊಂಡು ಕುಳಿತೆ. ಮನೆಯಲ್ಲಿಷ್ಟೆಲ್ಲ ಗದ್ದಲವಾಗುತ್ತಿದ್ದರೂ ಇವರಿಗೆ ಗಡದ್ದು ನಿದ್ದೆ. ಅನುಭವಿಸಬೇಕಿರೋದೆಲ್ಲ ನಾನೇ. ಮೊಬೈಲ್‌ ಕೈಗೆತ್ತಿಕೊಂಡು ವಾಟ್ಸಪ್‌ ತೆರೆದೆ. ಗುಡ್‌ ನೈಟ್‌ ಮೆಸೇಜುಗಳು ಒಂದತ್ತಿಪ್ಪತ್ತು ಬಂದುಬಿದ್ದಿದ್ದವು ವಿವಿಧ ಗ್ರೂಪುಗಳಲ್ಲಿ. ಮುಂದಿನ ವಾರ ಮೆಡಿಕಲ್‌ ಕ್ಲಾಸ್‌ಮೇಟುಗಳ ಗೆಟ್‌ಟುಗೆದರ್‌ ಅಂತ ವಾಟ್ಸಪ್‌ ನೆನಪಿಸಿತು. 

ʼವಿಪರೀತ ವಾಂತಿ ಕಣೋʼ ಸಾಗರನಿಗೊಂದು ಮೆಸೇಜು ಕಳುಹಿಸಿ ಮೊಬೈಲನ್ನು ಮೇಜಿನ ಮೇಲಿಡುವಷ್ಟರಲ್ಲಿ ಕಿರುಗುಟ್ಟಿತು. “ಈ ಸಮಯದಲ್ಲಿದೆಲ್ಲ ಮಾಮೂಲಿ ಅಲ್ಲವೇನೆ” ಸಾಗರನ ಮೆಸೇಜು ಬಂದಿತ್ತು. 

ʼಅರೆ ಇನ್ನೂ ಎದ್ದಿದ್ದೀಯೇನೋ!ʼ ನನಗೆ ಅಚ್ಚರಿ. 

“ಇಲ್ವೇ ಮಲಗಿದ್ದೆ. ನಿನ್ನ ಮೆಸೇಜಿಗೆ ಎಚ್ಚರವಾಯಿತು” ಮ್.‌ ಇಲ್ಲಿ ನೋಡಿದ್ರೆ ನಾ ಕೂಗಿ ಕರೆದು ಎದ್ದು ಓಡಾಡಿ ಗದ್ದಲವೆಬ್ಬಿಸಿದರೂ ರಾಜೀವನಿಗೆ ಎಚ್ಚರವಾಗಲಿಲ್ಲ. ಒಂದು ಮೆಸೇಜಿನ ಸದ್ದಿಗೇ ಸಾಗರನಿಗೆ ಎಚ್ಚರವಾಗಿಬಿಟ್ಟಿತು….ಥೂ ಥೂ ಹಿಂಗೆಲ್ಲ ಹೋಲಿಕೆ ಮಾಡಬಾರದು ಅಂತ ಅಂದುಕೊಂಡಿದ್ದೆನಲ್ಲವೇ….. 

ʼಮ್.‌ ಇಲ್ವೋ. ಇದು ಮಾಮೂಲಿ ವಾಂತಿ ಅಲ್ಲ…. ವಿಪರೀತ ಅಂದ್ರೆ ವಿಪರೀತ…. ಒಂದ್‌ ವಾರದಲ್ಲೇ ಮೂರು ಕೆಜಿ ಕಮ್ಮಿ ಆಗೋಗಿದ್ದೀನಿʼ 

"ಸ್ಲಿಮ್‌ ಆಗಿ ಒಳ್ಳೆ ಫಿಗರ್‌ ಆಗೋಗಿದ್ದೀಯ ಅನ್ನು!" 

“ಒಬ್ಬೊಬ್ರಿಗೆ ಆಗ್ತದಲ್ಲೇ…. ಅದೇನೋ ಹೆಸರಿದೆಯಲ್ಲ ಅದಕ್ಕೆ….” 

ʼಹು. ಹೈಪರ್‌ ಎಮೆಸಿಸ್‌ ಗ್ರಾವಿಡೇರಮ್‌ ಅಂತಲ್ವʼ 

“ಹು ಅದೇ. ಹೋಗಿ ತೋರಿಸ್ಕೋಬೇಕಿತ್ತು. ಒಂದೇ ವಾರದಲ್ಲಿ ಮೂರು ಕೆಜಿ ಕಮ್ಮಿ ಆಗೋಗಿದ್ದಿ ಅಂದ್ರೆ ಹೆಚ್ಚು ಕಡಿಮೆ ಏನೂ ತಿಂದೇ ಇಲ್ಲಾಂತಾಯ್ತು. ಮಗೂ ಗತಿ ಆಮೇಲೆ” 

ʼನೋಡ್ದಾ. ವಾಂತಿ ಮಾಡ್ಕಂಡ್‌ ಸಂಕಟ ಅನುಭವಿಸ್ತಿರೋಳನ್ನ ಬಿಟ್ಟು ಇನ್ನೂ ಹುಟ್ಟದಿರೋ ಮಗು ಬಗ್ಗೆ ಚಿಂತಿಸೋದಾʼ 

"ಹೆ ಹೆ ಹಂಗಲ್ವೇ. ನಿನ್‌ ಹೆಲ್ತೂ ಮಗೂ ಹೆಲ್ತೂ ಎರಡೂ ಮುಖ್ಯಾನೇ ಅಲ್ವ. ಹೋಗಿ ತೋರಿಸು ಮೊದಲು. ಮಾತ್ರೆ ಏನೇನೋ ಇರ್ತವೆ. ತೀರ ಆಗ್ಲೇ ಇಲ್ಲ ಅಂದ್ರೆ ಅಡ್ಮಿಟ್‌ ಆಗಿ ಡ್ರಿಪ್‌ ಹಾಕಿಸ್ಕೋ” 

ʼಹುನೋ. ನಾಳೆ ಹೋಗ್ಬೇಕು. ಇದರ ಮಧ್ಯೆ ಈ ಡಿ.ಎನ್.ಬೀದು ಬೇರೆ ಗೋಳು. ಓದೋದು…ಸೆಮಿನಾರು ಜರ್ನಲ್ಲು ಅಂತ ತಲೆ ನೋವುʼ 

“ಅಯ್ಯೋ. ಹುಷಾರಾಗಿರೋದ್‌ ಮುಖ್ಯ. ಡಿ.ಎನ್.ಬಿ ಏನು ಹೆಚ್ಚು ಕಮ್ಮಿ ಮಾಡ್ಕೋಬೋದು” 

ʼಹು. ಅದೂ ಸರೀನೇ. ಮತ್ತೆ ಹೇಗಿದೆಯೋ ಹೊಸ ಕೆಲಸʼ 

“ಹೊಸ ಕೆಲಸ ಏನ್‌ ಬಂತೇ. ಮುಂಚೆ ಮಾಡ್ತಿದ್ದ ಅದೇ ಕೆಲಸ. ಒಂದೇ ವ್ಯತ್ಯಾಸ ಅಂದ್ರೆ ಈಗ ಜೋರ್‌ ಸಂಬಳ ಬರ್ತದೆ ಅಷ್ಟೇ" 

ʼಹ ಹ. ಅದೂ ಸರಿ ಅನ್ನು. ಸರಿ ಕಣೋ, ನಾನೂ ಮಲಗ್ತೀನಿ. ನೀನೂ ಮಲಗುʼ 

“ಮ್.‌ ಮಲಕ್ಕೋ ಮಲಕ್ಕೋ. ನಾಳೆ ಮರೀದೆ ಹೋಗಿ ತೋರ್ಸು” 

ʼಹುʼ 

ಇನ್ನೊಂದು ಸುತ್ತು ತೇಗು ಬಂತು, ಅದರಿಂದೆಯೇ ಬಾಯೆಲ್ಲ ಹುಳಿ ಹುಳಿ, ಬಚ್ಚಲಿಗೆ ಹೋಗಿ ಕಾರಿಕೊಂಡೆ. ಮೂರು ಚಮಚದಷ್ಟು ನೀರು ಬಂತಷ್ಟೇ. ಬಾಯಿ ಮುಕ್ಕಳಿಸಿಕೊಂಡು ರೂಮಿಗೆ ಬಂದು ಲೈಟ್‌ ಸ್ವಿಚ್‌ ಆಫ್‌ ಮಾಡುವಾಗ ಇವರಿಗೆ ಕೊಂಚ ಎಚ್ಚರವಾಯಿತು. 

“ಏನಾಯ್ತು?” 

ʼಇನ್ನೇನ್ರೀ ಅದೇ ವಾಂತಿ. ರಾತ್ರಿ ತಿಂದಿದ್ದೆಲ್ಲ ವಾಂತಿಯಾಗೋಯ್ತು. ಸುಸ್ತುʼ 

“ಬಡ್ಕಂಡೆ ಇಷ್ಟು ಬೇಗ ಮಕ್ಕಳ್ಯಾಕೆ. ನಾವೇ ಇನ್ನೂ ಸೆಟಲ್‌ ಆಗಿಲ್ಲ ಅಂತ. ಕೇಳಿದ್ಯಾ ನನ್ನ ಮಾತ್ನ. ಅನುಭವಿಸು. ನಾಳೆ ಹುಟ್ಟೋ ಮಗು ಜವಾಬ್ದಾರೀನೂ ನಿಂದೇ. ಅದ್‌ ತಕಂಡ್‌ ಬನ್ನಿ ಇದ್‌ ತಕಂಡ್‌ ಬನ್ನಿ ಅಂತ ನನ್ನ ತಲೆ ತಿಂದುಗಿಂದೀಯ ಮತ್ತೆ” ಮಗ್ಗುಲು ಬದಲಿಸಿದರು. ಸಾಗರನೊಡನೆ ಮತ್ತೆ ಹೋಲಿಕೆ ಮಾಡಲು ಆತುರಗೊಂಡಂತಿದ್ದ ಮನಸ್ಸನ್ನು ಸುಮ್ಮನಾಗಿಸಿ ಒಂದು ನಿಟ್ಟುಸಿರು ಬಿಟ್ಟು ರಾಜೀವನ ಪಕ್ಕ ಹೋಗಿ ಮಲಗಿದೆ. ಇವತ್ತಿಂದೂ ಸೇರಿಸಿಕೊಂಡು ನಾ ಗರ್ಭ ಧರಿಸಿದ್ದರ ಬಗ್ಗೆ ಹೀಯಾಳಿಕೆಯ ಮಾತನ್ನಾಡಿದ್ದಿದು ನಾಲ್ಕನೇ ಸಲ. ಪ್ರೆಗ್ನೆಂಟ್‌ ಅಂತ ಗೊತ್ತಾದ ಮೊದಲೆರಡು ದಿನವಷ್ಟೇ ಸಂತಸದಿಂದಿದ್ದದ್ದು. ಹೊಸ ಕೆಲಸದಲ್ಲಿನ ಒತ್ತಡವೋ, ಫಾರ್ಮಸಿ ತೆರೆಯುವ ಯೋಚನೆ ಅರ್ಧದಲ್ಲೇ ಕೈಕೊಟ್ಟ ಬೇಸರವೋ, ಅಥವಾ ಇವರು ನೀಡಿದ್ದ ದುಡ್ಡು ಇನ್ನೂ ವಾಪಸ್ಸಾಗದೇ ಹೋದದ್ದು ಮೂಡಿಸಿರುವ ಸಿಟ್ಟೋ ಒಟ್ಟಿನಲ್ಲಿ ಹೀಯಾಳಿಕೆಯ ಮಾತು ಪದೇ ಪದೇ ಕೇಳಿಬರುತ್ತಿತ್ತು. ಅದರಿಂದ ತಪ್ಪಿಸಿಕೊಳ್ಳಲೆಂದೇ ಅಲ್ಲವಾ ನಾ ಅಮ್ಮನ ಮನೆಗೆ ಹೋಗಿದ್ದಿದ್ದು. ಎರಡು ದಿನವಾಯಿತು ಮೂರು ದಿನವಾಯಿತು, ಒಂದು ಫೋನೂ ಇಲ್ಲ ಮೆಸೇಜೂ ಇಲ್ಲ. ಬರಲೂ ಇಲ್ಲ. ಮನೆಯಲ್ಲೇ ಸ್ನೇಹಿತರನ್ನು ಗುಡ್ಡೆ ಹಾಕಿಕೊಂಡು ಪಾರ್ಟಿ ಮಾಡಿದ್ದರು. ಅಮ್ಮ ಏನ್‌ ರಾಜೀವ್‌ ಬರಲೇ ಇಲ್ಲ ಎಂದು ಕೇಳಿದಾಗ ʼಇಲ್ಲ. ಹೊಸ ಕೆಲಸ ಅಲ್ಲವಾ…. ರಜೆ ಇಲ್ಲ ಕೆಲಸ ಜಾಸ್ತಿ. ಫೋನ್‌ ಮಾಡಿದ್ರು ಮಧ್ಯಾಹ್ನ ಅಂತೊಂದು ಸುಳ್ಳು ಹೇಳಿ ನಿಭಾಯಿಸಿದ್ದೆ. ಏನಾದರಾಗಲೀ ನಾನಾಗೇ ಫೋನು ಮಾಡಬಾರದೆಂದು ನಿರ್ಧರಿಸಿದ್ದೆ. ನಾಲ್ಕನೇ ದಿನ ರಾತ್ರಿ ಮನೆಗೆ ಬಂದಿದ್ದರು. ತಪ್ಪು ಮಾಡಿದವರಂತೆ ತಲೆ ತಗ್ಗಿಸಿಯೇ ಕುಳಿತಿದ್ದರು. ಮುಖಕ್ಕೆ ಮುಖ ಕೊಟ್ಟು ಮಾತನಾಡಲಿಲ್ಲ. ಇಲ್ಲೇ ಉಳೀರಿ ರಾತ್ರಿ ಅಂತ ಅಪ್ಪ ಹೇಳಿದ ಮಾತಿಗೆ ಇಲ್ಲ ನೈಟ್‌ ಶಿಫ್ಟಿವತ್ತು ಅಂತ್ಹೇಳಿ ಹೊರಟಿದ್ದರು. ನನಗೆ ತಿಳಿದ ಮಟ್ಟಿಗೆ ಇವರ ಈ ಹೊಸ ಕೆಲಸದಲ್ಲಿ ನೈಟ್‌ ಶಿಫ್ಟೇ ಇರಲಿಲ್ಲ. 

ಅವರು ಹೊರಟ ಮೇಲೆ ʼನೈಟ್‌ ಶಿಫ್ಟ್‌ ಎಲ್ಲಿ. ಫ್ರೆಂಡ್ಸ್‌ ಜೊತೆಗಾ? ʼ ಎಂದೊಂದು ಮೆಸೇಜು ಹಾಕಿದೆ. 

"ಸಾರಿ” 

ʼಯಾಕೆ? ʼ 

“ಏನೋ ಮನಸ್ಸು ಸರಿಯಿರಲಿಲ್ಲ. ಇಷ್ಟ್‌ ಬೇಗ ಮಗು ಬೇಕಿತ್ತಾ ಅನ್ನಿಸೋಕೆ ಶುರುವಾಗಿದೆ. ಬೇಕಿರಲಿಲ್ಲವೇನೋ ಅಲ್ವ” 

ʼಹಂಗ್ಯಾಕೆ ಯೋಚಿಸ್ತೀರ. ಏನೋ ನನ್ನ ದೇಹದಲ್ಲಿ ಎಲ್ಲಾ ನಾರ್ಮಲ್‌ ಇದ್ದಿದ್ರೆ ನೀವೇಳೋದು ಸರಿ ಇತ್ತು. ಏನ್‌ ಮಾಡೋದು, ಸಮಸ್ಯೆ ಇದೆಯಲ್ಲ. ತೀರ ತಡ ಮಾಡಿದ್ರೆ ಅಪ್ಪಿ ತಪ್ಪಿ ಆಗೋದೂ ಆಗದೇ ಹೋಗಿದ್ದರೆ ಏನು ಮಾಡಬಹುದಿತ್ತು? ʼ 

“ಹು. ಅದೂ ಸರೀನೆ” ಎಂದಿದ್ದರು. ಸಮಾಧಾನವಾದಂತೆ ಕಂಡರು. ಫೋನು ಮಾಡುತ್ತಿದ್ದರು, ಎರಡ್ಮೂರು ದಿನಕ್ಕೊಮ್ಮೆ ಮನೆಗೆ ಬರುತ್ತಿದ್ದರು. ನಡೀ ಮನೆಗೋಗೋಣ ಅಂತ ಬಲವಂತ ಮಾಡೋದು ಹೆಚ್ಚಾಗಿತ್ತು. ಮಧ್ಯೆ ಮಧ್ಯೆ ಇನ್ನೂ ಹುಟ್ಟದ ಮಗುವಿಗೆ ಬಯ್ಯುವುದೂ ನಡೆದಿತ್ತು. 

ಈಗಲೇ ಹೀಗೆ, ಮಗು ಹುಟ್ಟಿದ ಮೇಲೆ ಇನ್ನೇನೇನು ಕೇಳಬೇಕೋ……

ಮುಖಪುಟ ಚಿತ್ರ: ಚೇತನ ತೀರ್ಥಹಳ್ಳಿ. 
ಮುಂದಿನ ಭಾಗವನ್ನು ಓದಲು ಇಲ್ಲಿ ಕ್ಲಿಕ್ಕಿಸಿ. 

No comments:

Post a Comment