Nov 10, 2019

ಒಂದು ಬೊಗಸೆ ಪ್ರೀತಿ - 39

ಡಾ. ಅಶೋಕ್.‌ ಕೆ. ಆರ್.‌
ಬಹಳ ದಿನಗಳ ನಂತರ ನಮ್ಮ ಮೆಡಿಕಲ್ ಸೂಪರಿಂಟೆಂಡೆಂಟ್ ಫೋನು ಮಾಡಿದ್ದರು. ಬೆಳಗಿನ ಡ್ಯೂಟಿಯಲ್ಲಿದ್ದೆ ಅವರ ಫೋನು ಬಂದಾಗ. ಪುರುಷೋತ್ತಮನ ಜೊತೆ ಗಲಾಟೆ ನಡೆಯುವಾಗ ನನಗೆ ಬಹಳಷ್ಟು ಮಾನಸಿಕ ಬೆಂಬಲ ಕೊಟ್ಟು ಆರ್.ಬಿ.ಐಗೆ ವರ್ಗ ಮಾಡಿಕೊಟ್ಟಿದ್ದರವರು. ಹಿಂಗಾಗಿ ಒಂಚೂರು ಹೆಚ್ಚೇ ಗೌರವವೆಂದರೂ ತಪ್ಪಾಗಲಾರದು. ಸರ್ ಫೋನು ಮಾಡಿದವರೇ ನನಗೆ ಹಲೋ ಎನ್ನಲೂ ಪುರುಸೊತ್ತು ನೀಡದೆ "ನೋಡಮ್ಮ ಧರಣಿ. ನಮ್ಮಲ್ಲಿ ಒಂದ್ ಡಿ.ಎನ್.ಬಿ ಪೀಡಿಯಾಟ್ರಿಕ್ಸ್ ಸೀಟು ಖಾಲಿ ಉಳಿದುಕೊಂಡಿದೆ ಈ ವರ್ಷ. ನಾ ಮ್ಯಾನೇಜುಮೆಂಟಿನವರಿಗೆ ಹೇಳಿಟ್ಟಿದ್ದೀನಿ. ನಮ್ಮಲ್ಲೇ ಕೆಲಸ ಮಾಡೋ ಧರಣೀಗೇ ಆ ಸೀಟು ಕೊಡಬೇಕೆಂದು. ಇಲ್ಲೇ ಕೆಲಸ ಮಾಡ್ತಿರೋ ಒಳ್ಳೆ ಹುಡುಗಿ. ಫೀಸೆಲ್ಲಾ ಏನೂ ತಗೋಬೇಡಿ ಅಂತಾನೂ ಹೇಳಿದ್ದೀನಿ. ಒಪ್ಪಿಕೊಂಡಿದ್ದಾರೆ. ಈ ಸಲ ಯಾವುದೇ ನೆಪ ಹೇಳದೆ ಬಂದು ಸೇರ್ತಿದ್ದಿ ಅಷ್ಟೇ. ಇವತ್ತು ಸಂಜೆ ಐದರ ಸುಮಾರಿಗೆ ಆಸ್ಪತ್ರೆಯ ಹತ್ತಿರ ಬಂದು ಅದೇನೇನೋ ಫಾರಮ್ಮುಗಳಿದ್ದಾವೆ, ಅವನ್ನ ಫಿಲ್ ಮಾಡಿ ಹೋಗಬೇಕು ಅಷ್ಟೇ. ಆಯ್ತ. ಸರಿ ಇಡ್ತೀನಿ" ಎಂದವರೇ ಫೋನಿಟ್ಟೇ ಬಿಟ್ಟರು. 

ಒಳ್ಳೆ ಕತೆಯಲ್ಲ ಇವರದು. ನನ್ನಭಿಪ್ರಾಯ ಏನೂ ಅಂತಾನೂ ಕೇಳದೆ ಫೋನಿಟ್ಟುಬಿಟ್ಟರಲ್ಲ. ನನ್ನ ಕಷ್ಟ ಇವರಿಗೆ ಹೇಗೆ ಅರ್ಥ ಮಾಡಿಸೋದು. ನಂಗೇನೋ ಈ ಡಿ.ಎನ್.ಬಿಗಿಂತ ಮೇಲ್ಮಟ್ಟದ್ದು ಅಂತಲೆ ಪರಿಗಣಿಸೋ ಎಂ.ಡಿ ಮಾಡೋಕೇ ಹೆಚ್ಚು ಆಸೆ. ಆದರೆ ಈಗಿರೋ ಪರಿಸ್ಥಿತಿಯಲ್ಲಿ ಎಂ.ಡಿಗೆ ಪರೀಕ್ಷೆ ಕಟ್ಟಿ, ಅದಕ್ಕೆ ಬಹಳಷ್ಟನ್ನು ಓದಿ, ಕೊನೆಗೆ ಸೀಟು ಗಿಟ್ಟಿಸಿದರೂ ವರುಷ ವರುಷ ಕಟ್ಟಬೇಕಾದ ಫೀಸಿನ ದುಡ್ಡಿಗೆ, ಬೇರೆ ಊರಿನಲ್ಲಿ ಸೀಟು ದೊರೆತರೆ ಹಾಸ್ಟಲ್ ಫೀಸು ಮತ್ತೊಂದಕ್ಕೆ ಪುನಃ ಅಪ್ಪ ಅಮ್ಮನ ಮುಂದೆ ಕೈಚಾಚಬೇಕಾಗ್ತದೆ. ಜೊತೆಗೆ ಪ್ರೈವೇಟ್ ಕಾಲೇಜಲ್ಲಿ ಸೀಟು ಸಿಕ್ಕಿದರೆ ಸ್ಟೈಪೆಂಡೂ ನಾಸ್ತಿ. ರಾಜೀವನ ಸಂಬಳ ನೆಚ್ಚಿಕೊಂಡು ಅಂತಹ ರಿಸ್ಕು ತೆಗೆದುಕೊಳ್ಳುವುದು ಅಸಾಧ್ಯದ ಮಾತೇ ಸರಿ. ಆ ಲೆಕ್ಕಕ್ಕೆ ಡಿ.ಎನ್.ಬಿ ವಾಸಿ. ನಮ್ಮ ಆಸ್ಪತ್ರೆಯಲ್ಲೇ ಇರೋದು. ಇದರ ಫೀಸೂ ವರುಷಕ್ಕೆ ಐವತ್ತು ಸಾವಿರದಷ್ಟಿರಬೇಕಷ್ಟೇ. ಅದನ್ನೂ ಮಾಫಿ ಮಾಡಿಸ್ತೀನಿ ಅಂದಿದ್ದಾರೆ ಸರ್ರು. ಮಾಫಿ ಅಂದರೆ ಬಹುಶಃ ಒಂದು ವರುಷಕ್ಕೋ ಎರಡು ವರುಷಕ್ಕೋ ಬಾಂಡ್ ಬರೆಸಿಕೊಳ್ಳಬಹುದು. ತೊಂದರೆಯಿಲ್ಲ. ಗೊತ್ತಿರೋ ಜಾಗವೇ ಅಲ್ಲವೇ ಇದು. ಕೆಲಸ ಮಾಡುವುದಕ್ಕೆ ತಕರಾರಿಲ್ಲ. ಎಲ್ಲ ಸರಿ ಕಾಣ್ತದೆ ಅನ್ನುವಾಗ ಹಣದ ಕೊರತೆಯದ್ದೇ ಚಿಂತೆ. ಈಗ ಬರುವ ಸಂಬಳದಲ್ಲಿ ಅರ್ಧದಷ್ಟು ಸ್ಟೈಪೆಂಡ್ ಬಂದರೆ ಅದೇ ಪುಣ್ಯ. ಎಲ್ಲಾ ಸೇರಿ ಇಪ್ಪತ್ತು ಇಪ್ಪತ್ತೈದು ಸಾವಿರ ಬರ್ತದೇನೋ ಅಷ್ಟೇ. ನಲವತ್ತೈದು ಸಾವಿರದಿಂದ ತಟ್ಟಂತ ತಿಂಗಳಾ ತಿಂಗಳು ಬರೋದ್ರಲ್ಲಿ ಇಪ್ಪತ್ತು ಸಾವಿರ ಕಡಿಮೆಯಾಗಿಬಿಟ್ಟರೆ? ಕಾರು ಲೋನು, ಮನೆ ಬಾಡಿಗೆ, ಮನೆ ಖರ್ಚು......ಇದನ್ನೆಲ್ಲ ಹೇಗೆ ಸರಿದೂಗಿಸೋದು? ಉಹ್ಞೂ. ಸದ್ಯಕ್ಕೆ ಯಾವ ಡಿ.ಎನ್.ಬಿ ಕೂಡ ಬೇಡ. ಸಂಜೆ ಸರ್‍‍ನ ಭೇಟಿಯಾಗಲು ಹೋಗಲೇಬೇಕು. ಅದನ್ನು ತಪ್ಪಿಸಿಕೊಳ್ಳುವಂತಿಲ್ಲ. ಅವರಿಗೊಂದು ಸಶಕ್ತ ಕಾರಣವನ್ನೇಳದೆ ಹೋದರೆ ಬೇಸರಿಸಿಕೊಳ್ಳುತ್ತಾರೆ. ಕಷ್ಟದ ದಿನಗಳಲ್ಲಿ ಸಹಾಯ ಮಾಡಿದವರಿಗೆ, ಈಗಲೂ ನನ್ನ ಭವಿತವ್ಯವನ್ನು ದೃಷ್ಟಿಯಲ್ಲಿಟ್ಟುಕೊಂಡೆ ಸಹಾಯ ಮಾಡುತ್ತಿರುವವರಿಗೆ ಬೇಸರ ಮಾಡುವುದು ಕೂಡ ಸರಿಯಲ್ಲ. ಹಿಂಗಿಂಗೆ ಹಣದ ಸಮಸ್ಯೆಯ ಕಾರಣದಿಂದಾಗಿ ಸೇರಲಾಗುತ್ತಿಲ್ಲ ಅಂತ ನಿಜ ಹೇಳುವುದೇ ಒಳ್ಳೆಯದೇನೋ. ಯಾವೊಂದು ನಿರ್ಧಾರಕ್ಕೂ ಬರಲಾಗಲಿಲ್ಲ. ಇಂತಹ ಗೊಂದಲದ ಸಮಯದಲ್ಲಿ ಸಾಗರನಿಗಲ್ಲದೇ ಮತ್ಯಾರಿಗೆ ಫೋನು ಮಾಡುವುದು.

ಒಂದೊಂದೇ ಎಪಿಸೋಡು ಹುಡುಕುಡುಕಿ ಓದೋಕೆ ಬೇಸರವಾ? ಪೂರ್ತಿ ಇ - ಪುಸ್ತಕ ತೆಗೆದುಕೊಳ್ಳಲು ಇಲ್ಲಿ ಕ್ಲಿಕ್ಕಿಸಿ.
ಸಾಗರನಿಗೆ ಫೋನು ಮಾಡಿ ಹಿಂಗಿಂಗಾಗಿದೆ. ಏನ್ ಮಾಡೋದು? ಅಂದೆ. ಕ್ಷಣಮಾತ್ರವೂ ಯೋಚಿಸದೆ "ಅದರಲ್ ಮಾಡೋದೇನಿದೆ. ಕಣ್ಣು ಮುಚ್ಕಂಡು ಸೇರ್ಕೊ. ನಿಮ್ಮ ಆಸ್ಪತ್ರೆಗೆ ಹೆಸರೂ ಇದೆ. ಅಲ್ಲಿ ಡಿ.ಎನ್.ಬಿ ಮಾಡಿ ಮುಗಿಸಿಕೊಂಡರೆ ಈಗ ದುಡಿಯುವುದಕ್ಕಿಂತ ಹೆಚ್ಚಂತೂ ದುಡಿಯಬಹುದಲ್ಲ. ಜೊತೆಗೆ ಕೆಲಸದಲ್ಲೂ ಹೆಚ್ಚು ಆಸಕ್ತಿ ಮೂಡ್ತದೆ. ಎಷ್ಟು ದಿನ ಅಂತ ಕಾರ್ಪೋರೇಟ್ ಆಸ್ಪತ್ರೆಗಳಲ್ಲಿ ಸ್ವಂತಿಕೆ ಕಳೆದುಕೊಂಡು ಡ್ಯೂಟಿ ಡಾಕ್ಟರ್ ಆಗೇ ಕೆಲಸ ಮಾಡೋಕೆ ಸಾಧ್ಯ. ಮೂರು ವರ್ಷ ಹೆಂಗೋ ಕಷ್ಟಪಟ್ಟು ಖರ್ಚು ಕಡಿಮೆ ಮಾಡಿಕೊಂಡರೆ ಆಯ್ತಲ್ಲ. ಜೊತೆಗೆ ನಂದೂ ಇನ್ನೊಂದೆರಡು ತಿಂಗಳಿಗೆ ಪರೀಕ್ಷೆ ಮುಗಿದು ರಿಸಲ್ಟ್ ಬರ್ತದೆ. ಎಲ್ಲಾದರೂ ಕೆಲಸಕ್ಕೆ ಸೇರೇ ಸೇರ್ತೀನಲ್ಲ. ಹಣದ ಅವಶ್ಯಕತೆ ಇದ್ದಾಗ ನಾನೇ ಕೊಡ್ತೀನಿ ನಿಂಗೆ. ಮತ್ತೆಂತದೂ ಯೋಚನೆ ಮಾಡದೆ ಸೇರ್ಕೋ ಹೋಗು. ಆಲ್ ದಿ ಬೆಸ್ಟ್" ಎಂದ್ಹೇಳಿ ಫೋನಿಟ್ಟುಬಿಟ್ಟ. ಇತ್ತೀಚೆಗೆ ಇವನು ಹಿಂಗೆ. ಹೆಚ್ಚು ಮಾತನಾಡೋದಿಲ್ಲ. ಮೆಸೇಜೂ ಇಲ್ಲ. ಸೆಕ್ಸ್ ಆಯ್ತಲ್ಲ ಇನ್ನೇನು ಅಂತ ಹೀಗೆ ವರ್ತಿಸುತ್ತಿದ್ದಾನಾ ಅನ್ನೋ ಅನುಮಾನ ಆಗೀಗ ಬರುತ್ತಿತ್ತಾದರೂ "ಅಯ್ಯೋ ಗೂಬೆ. ಪರೀಕ್ಷೆ ಇದೆ ಕಣವ್ವ. ಓದಕ್ ರಾಶಿ ರಾಶಿ ಇದೆ. ಪರೀಕ್ಷೆ ಮುಗಿಸಿದ ಮೇಲೆ ನೀನೇ ಸಾಕು ಸಾಕು ಅನ್ನೋವರೆಗೂ ಮಾತಾಡ್ತೀನಿ ಸುಮ್ನಿರು" ಎಂದು ಹೇಳಿದ್ದನಾದ್ದರಿಂದ ನಾನೂ ಸಮಾಧಾನಿಸಿಕೊಳ್ಳುತ್ತಿದ್ದೆ. ಪರೀಕ್ಷೆಯ ಕಾರಣದ ಜೊತೆಗೆ ನನ್ನೊಡನೆ ಸೆಕ್ಸ್ ಮಾಡಿದ್ದು ಅವನಲ್ಲಿ ಹೆಚ್ಚೇ ಎನ್ನಿಸಬಹುದಾದಷ್ಟು ಗಿಲ್ಟ್ ಮೂಡಿಸಿದೆ ಎನ್ನುವುದು ನನಗೆ ಖಾತರಿಯಾಗಿತ್ತು. ನಾನೆಲ್ಲಿ ಬೇಸರ ಪಟ್ಟುಕೊಳ್ಳುತ್ತೀನೋ ಅಂತ ನೇರವಾಗಿ ಹೇಳಿರಲಿಲ್ಲ ಅಷ್ಟೇ. ನಾ ಗಮನಿಸಿದಂತೆ ಸಹಜ ಮಾತುಕತೆಗಳು ಸರಸಕ್ಕೆ ಬದಲಾಗ್ತಿವೆ ಅಂತಾದಾಗಲೆಲ್ಲ "ಓದ್ಕೋತಾ ಇದ್ದೀನಿ ಕಣೆ. ಆಮೇಲೆ ಮಾತಾಡ್ತೀನಿ" ಎಂದು ಬಿಡ್ತಿದ್ದ. ರಾಜೀವನಿಗೂ ಇವನಿಗೂ ವ್ಯತ್ಯಾಸವೇನಿದೆ ಅನ್ನಿಸಿಬಿಡೋದು. ಇಬ್ಬರಿಗೂ ಹೋಲಿಕೆ ಸಲ್ಲ ಎಂದು ಎಷ್ಟು ಬಡಕೊಂಡರೂ ಹೋಲಿಕೆ ಮಾಡದೆ ಇರಲು ಸಾಧ್ಯವಾಗುತ್ತಿರಲಿಲ್ಲ. ಹೆಣ್ಣುಮಕ್ಕಳ ಮನಸನ್ನು ಅರ್ಥೈಸಿಕೊಳ್ಳುವುದು ಈ ಗಂಡು ಜನ್ಮಕ್ಕೆ ಸಾಧ್ಯವೇ ಇಲ್ಲವೇನೋ. ಸಂಜೆ ಹೋಗಿ ಸರ್‍‍ನ ಭೇಟಿಯಾಗೋದಿಕ್ಕೆ ಮೊದಲು ರಾಜೀವನೊಡನೆ ಕೂಡ ಈ ವಿಷಯ ಮಾತನಾಡಬೇಕು. ಓದ್ತೀನಿ ಅಂದ್ರೇನೋ ಅವರಿಗೆ ಖುಷೀನೆ. ಆದರೆ ಬರೋ ದುಡ್ಡು ಕಡಿಮೆಯಾಗ್ತದೆ ಅಂದರೆ ಹೇಗೆ ಪ್ರತಿಕ್ರಿಯಿಸುತ್ತಾರೋ ನೋಡ್ಬೇಕು. ಬೇಡ್ವೇ ಬೇಡ ಅಂತೇಳಿದ್ರೂ ಹೇಳಿದ್ರೆ. ರಾಜೀವನಿಗೆ ಫೋನಾಯಿಸಿ ಹಿಂಗಿಂಗೆ ಏನ್ ಮಾಡೋದು, ನನ್ನ ಫ್ರೆಂಡು ಸಾಗರ ಕೂಡ ಸೇರೋದು ಒಳ್ಳೇದು ಅಂತಿದ್ದ ಎಂದು ಹೇಳಿದೆ. ಈಗಾಗಲೇ ರಾಜೀವನೊಡನೆ ಸಾಗರನ ಕುರಿತು ಒಂದಷ್ಟು ಹೇಳಿದ್ದೆ. ಮುಂದಿನ ಸಲ ಇಬ್ಬರನ್ನೂ ಭೇಟಿ ಮಾಡಿಸಬೇಕೆಂದಿದ್ದೆ. ಸಾಗರ ನನಗಷ್ಟೇ ಅಲ್ಲ ನನ್ನ ಕುಟುಂಬಕ್ಕೂ ಸ್ನೇಹಿತನಾಗಬೇಕು. ಕದ್ದು ಮುಚ್ಚಿ ಅಷ್ಟೇ ಅಲ್ಲ, ಎಲ್ಲರಿದ್ದಾಗಲೂ ಭೇಟಿಯಾಗಬೇಕು. 

“ನೋಡು ನಿನ್ನಿಷ್ಟ. ಹೆಚ್ಚು ಓದ್ಕೊಳ್ಳೋದೇನೋ ಒಳ್ಳೇದೇ. ಇಲ್ಲ ಅಂತಲ್ಲ. ಆದರೆ ಅಷ್ಟೊಂದು ಸಂಬಳ ಕಡಿಮೆಯಾದರೆ ಹೇಗೆ ಹೊಂದಿಕೊಳ್ಳೋದು. ನಾನೂ ಮುಂದಿನ ತಿಂಗಳು ಕೆಲಸ ಬಿಡುತ್ತಿದ್ದೀನಿ" ಅಂತೊಂದು ಬಾಂಬು ಹಾಕಿದ. 

'ಕೆಲಸ ಬಿಡ್ತಿದ್ದೀಯಾ?!! ನನಗೆ ಹೇಳಲೇ ಇಲ್ಲವಲ್ರೀ' 

“ಎಲ್ಲಾ ಕೆಲಸ ನಿನಗೆ ಹೇಳ್ಬಿಟ್ಟೇ ಮಾಡ್ಬೇಕು ಅಂತಿದೆಯಾ?” ಹಂಗಾದರೆ ನಾನೂ ನಿಮಗೆ ಹೇಳದೇನೇ ಡಿ.ಎನ್.ಬಿಗೆ ಸೇರಿಬಿಡಬಹುದಿತ್ತಲ್ಲ ಎಂದು ಹೇಳಬೇಕೆಂದವಳು ಇದಕ್ಕದು ಸಮಯವಲ್ಲ ಎಂದುಕೊಳ್ಳುತ್ತ 'ಸರಿ ಬಿಡಿ. ಈಗ ನಾ ಏನು ಮಾಡಲಿ ಹೇಳಿ' ಎಂದಷ್ಟೇ ಹೇಳಿದೆ. 

“ಇನ್ನೇನ್ ಮಾಡ್ತಿ. ಸೇರೋ ಆಸೆ ನಿಂಗೂ ಇದೆಯಲ್ಲ. ಸೇರ್ಕೊ. ನಿನ್ನ ಕಟ್ಟಿಕೊಂಡ ತಪ್ಪಿಗೆ ಏನೇನು ಅನುಭವಿಸಬೇಕೋ ಅನುಭವಿಸಿ ಸಾಯ್ತೀನಿ" ಎಂದ್ಹೇಳಿ ಫೋನಿಟ್ಟರು. ಮುಖಕ್ಕೆ ಹೊಡೆದಂತಾಯಿತು. ಹೊಸತೇನಿಲ್ಲವಲ್ಲ...... ಎಲ್ಲಾ ಮಾನಸಿಕ ಹಿಂಸೆ ಕೊನೆಗೆ ದೈಹಿಕ ಹಿಂಸೆ ಕೂಡ ಹೋಗ್ತಾ ಹೋಗ್ತಾ ಅಭ್ಯಾಸವಾಗಿಬಿಡುತ್ತದಲ್ಲ ಎಂದು ಅಚ್ಚರಿಗೊಳ್ಳುತ್ತಾ ಆಗಿದ್ದಾಗಲಿ ಡಿ.ಎನ್.ಬಿ ಸೇರಿಬಿಡುವ. ಮಿಕ್ಕ ಕಷ್ಟಗಳನ್ನೆಲ್ಲ ಆಮೇಲೆ ಅನುಭವಿಸಿಕೊಂಡರಾಯಿತು. ಏನಿಲ್ಲ ಅಂದ್ರೂ ಕೊನೆಗೆ ಕಾರು ಮಾರಿಬಿಟ್ಟರಾಯಿತು, ಅರ್ಧಕ್ಕರ್ಧ ಖರ್ಚು ನಿಂತೋಗ್ತದೆ. ಮತ್ತೆ ಸಾಧ್ಯವಾದಾಗ ತೆಗೆದುಕೊಂಡರಾಯಿತು. ತೆಗೆದುಕೊಳ್ಳದೇ ಹೋದರೂ ಕಳೆದುಹೋಗುವುದೇನಿಲ್ಲ. ಓಡಾಡೋಕೆ ಸ್ಕೂಟರಿದೆ, ಅನಿವಾರ್ಯ ಬೇಕು ಅಂತಾದ್ರೆ ಅಪ್ಪನ ಕಾರಿದೆ. 

ಸಂಜೆಯೇ ಆಸ್ಪತ್ರೆಗೆ ಹೋಗಿ ಎಂ.ಎಸ್ ಸರ್‍‍ನ ಭೇಟಿಯಾಗಿ ಮಾತಾಡಿ ಅಗತ್ಯವಿದ್ದ ಫಾರಮ್ಮುಗಳನ್ನೆಲ್ಲ ಅವರ ಕಛೇರಿಯಲ್ಲೇ ಕುಳಿತು ತುಂಬಿದೆ. ನನಗಿಂತಲೂ ಹೆಚ್ಚು ಸರ್‍‍ಗೇ ಖುಷಿಯಾದಂತಿತ್ತು. ನಿರೀಕ್ಷಿಸಿದಂತೆ ಡಿ.ಎನ್.ಬಿ ಮುಗಿಸಿದ ಮೇಲೆ ಒಂದು ವರ್ಷದ ಬಾಂಡ್ ಬರೆಸಿಕೊಂಡಿದ್ದರು. ಕನಿಷ್ಠ ಅರವತ್ತು ಸಾವಿರದ ಸಂಬಳವೆಂದು ಅದರಲ್ಲಿ ನಮೂದಿಸಲಾಗಿತ್ತು. ಉಚಿತವಾಗಿ ಡಿ.ಎನ್.ಬಿ ಸಿಕ್ಕಿದ್ದಕ್ಕೆ ಖುಷಿ ಪಡಬೇಕೋ ಇನ್ನು ಮೂರು ವರ್ಷ ಸಂಸಾರ ಸಾಗಿಸಲಿರುವ ಕಷ್ಟವನ್ನು ನೆನಪಿಸಿಕೊಂಡು ದುಃಖಿತಳಾಗಬೇಕೋ ತಿಳಿಯುತ್ತಿಲ್ಲ. ಮುಂದಿನ ತಿಂಗಳಿಂದ ಮತ್ತೆ ಮುಖ್ಯ ಆಸ್ಪತ್ರೆಗೆ, ಈ ಸಲ ಡ್ಯೂಟಿ ಡಾಕ್ಟರ್ ಆಗಲ್ಲ, ಪಿಜಿ ವಿದ್ಯಾರ್ಥಿಯಾಗಿ..... 

* * *

“ಕೆಲಸ ಬಿಟ್ಟೆ" ಹತ್ತರ ಸುಮಾರಿಗೆ ಮನೆಗೆ ಬಂದ ರಾಜೀವ ಕೈಕಾಲು ತೊಳೆದುಕೊಂಡು ಹೊರಬರುತ್ತಾ ಕೆಲಸ ಬಿಟ್ಟೆ ಎಂದು ಹೇಳಿದಾಗ ನಾನು ನಾಳೆಯಿದ್ದ ಸೆಮಿನಾರಿಗೆ ಪಿಪಿಟಿ ಮಾಡುತ್ತಾ ಕುಳಿತಿದ್ದೆ. ಡಿ.ಎನ್.ಬಿಗೆ ಸೇರಿ ಒಂದು ವಾರ ಆಗಿದೆಯಷ್ಟೇ. ಆಗಲೇ ಸೆಮಿನಾರು ಜರ್ನಲ್ಲು ಕ್ಲಬ್ಬು ಅಂತ ಹಾಕೊಂಡು ರುಬ್ತಿದ್ದಾರೆ. ಇಷ್ಟು ದಿನ, ಅದರಲ್ಲೂ ಆರ್.ಬಿ.ಐಗೆ ಹೋದ ಮೇಲಂತೂ ಸ್ವತಂತ್ರಳಾಗಿ ಕೆಲಸ ಮಾಡಿಕೊಂಡಿದ್ದವಳಿಗೆ ಮತ್ತೆ ಬೇರೆಯವರ ಬಳಿ ವಿದ್ಯಾರ್ಥಿಯಂತಿರುವುದು ಹಿಂಸೆಯೆನ್ನಿಸುತ್ತಿತ್ತು. ಇನ್ನೊಂದಷ್ಟು ದಿನ ಇದಕ್ಕೂ ಬದುಕು ಹೊಂದಿಕೊಂಡುಬಿಡ್ತದೆ ಎಂದುಕೊಂಡು ಪಿಪಿಟಿ ತಯಾರು ಮಾಡುತ್ತಿದ್ದವಳಿಗೆ ರಾಜೀವನ ಮಾತು ಬೆಚ್ಚಿ ಬೀಳಿಸಿತ್ತು. ಮೊದಲೇ ಸಂಬಳ ಕಡಿಮೆಯಾಗುವ ಚಿಂತೆ, ಅದರೊಟ್ಟಿಗೆ ಹೊತ್ತಲ್ಲದ ಹೊತ್ತಿನಲ್ಲಿ ಯಾವುದೇ ಮುನ್ಸೂಚನೆ ಇಲ್ಲದೆ ರಾಜೀವನ ಈ ದಿಡೀರ್ ನಿರ್ಧಾರ. ಏನು ಪ್ರತಿಕ್ರಿಯಿಸಬೇಕೆಂದೇ ತಿಳಿಯಲಿಲ್ಲ. 

“ಕೆಲಸ ಬಿಟ್ಟೆ ಅಂದೆ" 

'ಕೇಳಿಸ್ತಲ್ಲ' 

“ಕೇಳಿಸ್ಕೊಂಡು ಮೂಗಿ ತರ ಕೂತಿದ್ದೀಯಲ್ಲ" 

'ಏನ್ ಹೇಳಬೇಕೆಂದು ತೋಚುತ್ತಿಲ್ಲ..... ಇದೇನಿದು ಇಷ್ಟು ಸಡನ್ನಾಗಿ....' 

“ಸಡನ್ನಾಗೇನಲ್ಲ. ರಾಜೀನಾಮೆ ಕೊಟ್ಟು ಒಂದ್ ವಾರದ ಮೇಲಾಗಿತ್ತು" 

'ಮ್' 

“ಯಾಕೆ ಅಂತ ಕೇಳಲ್ವ?” 

'ನನಗೆ ಯಾಕೆ ಹೇಳಲಿಲ್ಲ ಅಂತ ಕೇಳಬೇಕಾ ಅಥವಾ ಕೆಲಸ ಯಾಕೆ ಬಿಟ್ರಿ ಅಂತ ಕೇಳಬೇಕಾ?' 

“ಈ ವ್ಯಂಗ್ಯದ ಮಾತಿಗೇನೂ ಕಮ್ಮಿಯಿಲ್ಲ" 

'ವ್ಯಂಗ್ಯ ಏನಿದೆ ಇದರಲ್ಲಿ? ನಾ ಡಿ.ಎನ್.ಬಿಗೆ ಸೇರಿದ ಮೇಲೆ ಬರೋ ದುಡ್ಡು ಅರ್ಧಕ್ಕರ್ಧ ಕಡಿಮೆಯಾಗ್ತದೆ ಅನ್ನೋದು ನಿಮಗೇ ಗೊತ್ತು. ಈ ಸಮಯದಲ್ಲಿ ನೀವೂ ಕೆಲಸ ಬಿಟ್ಟುಬಿಟ್ಟರೆ ದುಡ್ಡಿಗೆ ತೊಂದರೆಯಾಗಲ್ವ? ಒಂದ್ ಮಾತ್ ನನಗೂ ಕೇಳ...ಕೇಳದಿದ್ದರೆ ಹೋಗಲಿ ಹೇಳಬಹುದಿತ್ತಲ್ವ' 

“ನಿಂಗ್ ಹೇಳಿದ್ರೆ ಹಿಂಗೇ ಅದೂ ಇದೂ ಪ್ರಶ್ನೆ ಕೇಳಿ ಸುಮ್ಮನಾಗಿಸಿಬಿಡುತ್ತಿ ಅಂತಲೇ ಹೇಳಲಿಲ್ಲ. ಗಾಬರಿಯಾಗೋದೇನೂ ಬೇಡ. ನಾನೂ ನನ್ನ ಫ್ರೆಂಡು ಸೇರಿ ಒಂದ್ ಫಾರ್ಮಸಿ ಇಟ್ಟು ಪಕ್ಕದಲ್ಲಿ ಒಂದ್ ಪುಟ್ಟದಾಗಿ ಕ್ಲಿನಿಕ್ ಕೂಡ ಇಡ್ತಿದ್ದೀವಿ. ಅವನು ಐದು ಲಕ್ಷ ಬಂಡವಾಳ ಹಾಕ್ತಿದ್ದಾನೆ. ನಾನು ಒಂದ್ ಲಕ್ಷ ಹಾಕಿದ್ರೆ ಆಯ್ತು....” 

'ಒಂದ್ ಲಕ್ಷಾನಾ! ಅಷ್ಟೆಲ್ಲಿಂದ ತರೋದು....' 

“ನಿಮ್ಮಪ್ಪನ ಮನೆಯಿಂದ ತರೋಕೇನೂ ಹೇಳಲ್ಲ ಬಿಡು..........ಅಮ್ಮನಿಗೆ ಹೇಳಿದ್ದೆ. ಅವರು ಒಂದು ಲಕ್ಷ ನನ್ನ ಕೈಗಿಟ್ಟು ನಾನು ನನ್ನ ಫ್ರೆಂಡಿಗೂ ಕೊಟ್ಟಾಗಿದೆ" 

'ಮ್. ಸರಿ' 

“ನೀ ದಿನಾ ಸಂಜೆ ಆರರಿಂದ ಒಂಭತ್ತರವರೆಗೆ ಬಂದು ಕ್ಲಿನಿಕ್ಕಲ್ಲಿ ಕೂತರೆ ಆಯ್ತು" 

'ಏನಂದ್ರಿ' ಮತ್ತೊಮ್ಮೆ ಬೆಚ್ಚಿಬಿದ್ದೆ. 'ನಿಮಗೇನಾದ್ರೂ ತಲೆ ನೆಟ್ಟಗಿದೆಯಾ? ನಾನೀಗ ಡಿ.ಎನ್.ಬಿ ಸ್ಟೂಡೆಂಟು! ನಮ್ಮಲ್ಲಿರೋ ಕನ್ಸಲ್ಟೆಂಟಿಗೇ ಹೊರಗೆ ಪ್ರಾಕ್ಟೀಸ್ ಮಾಡೋಕೆ ಅನುಮತಿಯಿಲ್ಲ. ಇನ್ನು ನನಗೆ ಬಿಟ್ಟುಬಿಡ್ತಾರಾ? ಮೇಲಾಗಿ ನಂಗೆ ಓದೋಕೆ ಬರಿಯೋಕೆ ಬಹಳಷ್ಟಿರ್ತದಂತೆ. ಜೊತೆಗೆ ವಾರಕ್ಕೆರಡೋ ಮೂರೋ ನೈಟ್ ಡ್ಯೂಟಿ ಕೂಡ ಇರ್ತದೆ. ನಾನೆಂಗ್ ಬಂದು ಕ್ಲಿನಿಕ್ಕಲ್ಲಿ ಕೂರಲಿ' ಬೆಚ್ಚಿಬೀಳುವ ಸರದಿ ಈಗ ರಾಜೀವನದು. ರಾಜೀವ ಇಷ್ಟನ್ನೆಲ್ಲ ಯೋಚಿಸಿರಲಿಲ್ಲವೋ, ಏನೋ ಗೊತ್ತಿಲ್ಲ. ಅಥವಾ ನನ್ನ ಹೆಂಡತಿ ಬಂದು ಕೂರ್ತಾಳೆ ಅನ್ನೋ ಮಾತಾಡಿಯೇ ಫ್ರೆಂಡಿನ ಜೊತೆ ವ್ಯವಹಾರ ನಡೆಸಿದ್ದರಾ ಅದೂ ಗೊತ್ತಿಲ್ಲ. ಅವರು ಬಾಯಿಬಿಟ್ಟು ಏನನ್ನು ಹೇಳಲೂ ಇಲ್ಲ. ಏನೊಂದೂ ಮಾತನಾಡದೆ ಹೊರಗೋಗಿ ಅವರ ಫ್ರೆಂಡಿನ ಜೊತೆ ಒಂದರ್ಧ ಘಂಟೆ ಮಾತನಾಡಿದರು. ಆ ಫ್ರೆಂಡ್ ಯಾರೆಂದು ತಿಳಿಸುವ ಶ್ರಮವನ್ನು ತೆಗೆದುಕೊಳ್ಳಲಿಲ್ಲ. ನನಗೂ ಕೇಳಬೇಕೆನಿಸಲಿಲ್ಲ. ನಾ ಡಿ.ಎನ್.ಬಿಗೆ ಸೇರುವ ನಿರ್ಧಾರ ಹೇಳಿದ ಮೇಲೆ ನಮ್ಮಿಬ್ಬರ ನಡುವಿನ ಮಾತೇ ಸತ್ತು ಹೋದಂತಾಗಿದೆ. ನಾ ಹೆಚ್ಚೆಚ್ಚು ದುಡಿಯಬೇಕೆಂಬ ಆಸೆ ರಾಜೀವನಿಗೆ. ಒಂದೇ ಸಲ ಲಕ್ಷ ಲಕ್ಷದಷ್ಟು ದುಡ್ಡು ಸುರಿದುಬಿಡಬೇಕು. ಎಲ್ಲಿಂದ ಸಾಧ್ಯ. ನಾ ಡಿ.ಎನ್.ಬಿ ಮಾಡೋದೇನೋ ಅವರಿಗೂ ಖುಷಿಯೇ, ಆದರೆ ಬರೋ ದುಡ್ಡು ಕಡಿಮೆಯಾಗ್ತದಲ್ಲ ಅಂತ ಚಿಂತೆ. ಹೇಗೋ ಒಂದಷ್ಟು ಖರ್ಚುಗಳನ್ನೇ ಕಡಿಮೆ ಮಾಡಿ ನನಗೆ ಬರೋ ಸ್ಟೈಫೆಂಡು ಮತ್ತು ರಾಜೀವನಿಗೆ ಬರುವ ಸಂಬಳವನ್ನು ಬಳಸಿಕೊಂಡು ಹೇಗೋ ಮೂರು ವರ್ಷ ಕಳೆದುಬಿಡಬಹುದೆಂದು ಲೆಕ್ಕ ಹಾಕಿ ಇಟ್ಟುಕೊಂಡಿದ್ದೆ. ಈಗ ನೋಡಿದರೆ ಇರೋ ಕೆಲಸವನ್ನೂ ಬಿಟ್ಟು ಬಂದಿದ್ದಾರೆ. ಫಾರ್ಮಸಿ ಇಡೋದೇನೋ ಒಳ್ಳೇದೇ. ಆದರೆ ಫಾರ್ಮಸಿ ಶುರುವಾಗಿ ಅದು ದುಡ್ಡು ದುಡಿದು ಕೊಡೋಕೆ ಒಂದೈದಾರು ತಿಂಗಳಾದರೂ ಬೇಕೇ ಬೇಕಲ್ಲ. ಅಲ್ಲಿವರೆಗೆ ಹೇಗೆ ತೂಗಿಸೋದು? ಇವರ ಬಳಿ ಜೋರು ಮಾಡಿ ಮಾತನಾಡುವಂತೆಯೂ ಇಲ್ಲ. ಮತ್ತಷ್ಟು ಡಿಪ್ರೆಶನ್ಗೆ ಒಳಗಾಗ್ತಾರೆ. ಹೋದ ಸಲವೂ ಗರ್ಭ ಬೇರೆ ಕಟ್ಟಿಲ್ಲ. ಈ ಸಲ ಐ.ಯು.ಐ ಮಾಡಿ ನೋಡುವ ಅಂದಿದ್ದಾರೆ. ಅದಕ್ಕೆ ಮತ್ತಷ್ಟು ದುಡ್ಡು..... ಇವರನ್ನು ಸಮಾಧಾನ ಮಾಡೋದಾ? ನಾ ಸಮಾಧಾನ ಮಾಡಿಕೊಳ್ಳೋದಾ? ಸಾಕಪ್ಪ ಸಾಕು..... 

“ಇವತ್ ಪ್ರಾಕ್ಟಿಕಲ್ಸ್ ಮುಗೀತು ಕಣೇ. ಈಗಷ್ಟೇ ನಾವ್ ಹುಡುಗ್ರು ಹೋಗಿ ಹೊಟ್ಟೆ ತುಂಬಾ ತಿಂದ್ಕಂಡ್ ಬಂದೊ" ಸಾಗರನ ಮೆಸೇಜು ಮುಳುಗುವವಳಿಗೆ ಸಿಕ್ಕ ಹುಲ್ಲುಕಡ್ಡಿಯಂತಿತ್ತು. 

'ಹು. ಗುಡ್ ಕಣೋ' 

“ಏನಾಯ್ತು?” ನಾ ತೀರಾ ಫಾರ್ಮಲ್ ಆಗಿ ಮೆಸೇಜ್ ಮಾಡಿದ ತಕ್ಷಣ ಅದನ್ನು ಪತ್ತೆ ಹಚ್ಚಿಬಿಡ್ತಾನೆ ಫಟಿಂಗ. 

'ಏನಿಲ್ವೋ ಯಾಕೋ ಸಾಕಾಗಿದೆ ಜೀವನ' 

“ಅಂತದ್ದೇನಾಯ್ತೆ?”

ಮುಖಪುಟ ಚಿತ್ರ: ಚೇತನ ತೀರ್ಥಹಳ್ಳಿ. 

ಮುಂದಿನ ಭಾಗವನ್ನು ಓದಲು ಇಲ್ಲಿ ಕ್ಲಿಕ್ಕಿಸಿ. 

2 comments:

  1. ಕಳೆದ ಎಪಿಸೋಡ್ (ಅಧ್ಯಾಯ)ದಲ್ಲಿ ಧರಣಿ ಅಪ್ಪನ ಕರೆ ಬಂತೆಂದು ತವರುಮನೆಗೆ ಹೊರಟಿದ್ದಳು. ಈ ಅಧ್ಯಾಯದಲ್ಲಿ ಲಿಂಕ್ ಮಿಸ್ ಆಗಿದೆ ಅಂತ ಅನ್ನಿಸ್ತು. ಜೊತೆಗೆ ಈ ಬಾರಿ ವೈದ್ಯಕೀಯ ಪಾರಿಭಾಷಿಕ ಪದಗಳು ಹೆಚ್ಚಿವೆ. ಕೆಲವೊಂದು ಅರ್ಥ ಆಗಲಿಲ್ಲ.

    ReplyDelete
  2. Santhosh Kumar S Ssk ಇಲ್ಲ. ಅದು ಅಧ್ಯಾಯ ಬದಲಾಗಿದೆ. ಪೂರ್ತಿಯಾಗಿ ಓದುವಾಗ ವ್ಯತ್ಯಾಸ ಕಾಣಲ್ಲ, ಧಾರಾವಾಹಿ ತರ ಓದಿದ್ರೆ ನೀವೆಳಿದಂಗೆ ಮಿಸ್ ಆದಂಗೆ ಕಾಣ್ತಿದೆ!

    ReplyDelete