Sep 15, 2019

ಒಂದು ಬೊಗಸೆ ಪ್ರೀತಿ - 31

ಡಾ. ಅಶೋಕ್.‌ ಕೆ. ಆರ್.‌
ಮುಂದೇನು ಅನ್ನೋ ಪ್ರಶ್ನೆ ಭೂತಾಕಾರದ ರೂಪ ಪಡೆದಿತ್ತು. ಮಾರನೇ ದಿನವೇ ಪರಶುನನ್ನು ಭೇಟಿ ಮಾಡಿದೆ. ಪರಿಸ್ಥಿತಿ ಗಂಭೀರವಾಗುತ್ತಿದೆ ಎಂದವನಿಗೆ ಅರಿವಾಯಿತು. ಮನೇಲಿ ಮಾತಾಡ್ತೀನಿ. ಯಾವಾಗ ಬರ್ತೀವಿ ಅಂತ ತಿಳಿಸ್ತೀನಿ ಅಂತೇಳಿದ. ಖುಷಿಯಾಯಿತು. ಅಪ್ಪ ಮತ್ತೊಂದು ಮಗದೊಂದು ಗಂಡು ತೋರಿಸುವ ಮುಂಚೆಯೇ ಪರಶುವಿನ ಮನೆಯವರು ಬಂದರೆ ಸಾಕಾಗಿತ್ತು ನನಗೆ. 

ಪರಶು ಮೊದಲು ಅವನ ಅಕ್ಕನ ಜೊತೆಗೆ ಮಾತನಾಡಿದ್ದ. ವಿಷಯ ಇಲ್ಲಿಯವರೆಗೆ ಮುಟ್ಟಿದೆಯೆಂದು ಅವರಕ್ಕನಿಗೂ ತಿಳಿದಿರಲಿಲ್ಲ. ತಿಳಿಯುತ್ತಿದ್ದಂತೆಯೇ ನನಗೆ ಫೋನ್ ಮಾಡಿದ್ದಳು. 

'ಹೇಳಿ ಅಕ್ಕ' ಅಂದೆ. 

“ನಾನೇನಮ್ಮ ಹೇಳೋದು. ಇಷ್ಟೆಲ್ಲ ಯಾಕ್ ಸೀರಿಯಸ್ಸಾಗಿ ಲವ್ ಮಾಡೋಕೋದ್ರಿ" 

'ಲವ್ ನ ಕಾಮಿಡಿಯಾಗೆಲ್ಲ ಕೂಡ ಮಾಡ್ಬೋದಾ?' ಆ ಮನಸ್ಥಿತಿಯಲ್ಲೂ ಅಕ್ಕನ ಮಾತುಗಳು ನಗು ತರಿಸಿತು. 

“ನೋಡು ಧರಣಿ. ಇರೋ ವಿಷಯ ಹೇಳಬೇಕಲ್ಲ ನಾನು. ನನ್ನ ಮದುವೆಗೆ ಮುಂಚೆ ಪರಶುವಿನ ಮದುವೆ ಮಾಡುವುದಕ್ಕೆ ಅಮ್ಮನಂತೂ ಒಪ್ಪುವುದಿಲ್ಲ. ....ಅದು ನಿನಗೂ ಗೊತ್ತಿರ್ತದೆ....” 

'ಈಗ್ಲೇ ಮದುವೆಯಾಗ್ಲಿ ಅನ್ನೋದು ನಮ್ಮ ಮನಸ್ಸಿನಲ್ಲೂ ಇಲ್ಲ ಅಕ್ಕ. ಒಮ್ಮೆ ಬಂದು ಮಾತಾಡಿಕೊಂಡು ಹೋಗಲಿ ಅಂತಷ್ಟೇ ಹೇಳ್ತಿರೋದು....' 

“ಹು. ಅದ್ ಸರಿ ಅನ್ನು. ಪರಶುಗೆ ಇನ್ನೂ ಕೆಲಸ ಬೇರೆ ಸಿಕ್ಕಿಲ್ಲ.....ನಿಂಗೇ ಗೊತ್ತಿರ್ತದಲ್ಲ.....ಇನ್ನೂ ಪೋಲಿ ಅಲ್ಕೊಂಡೇ ನಿಂತಿದ್ದಾನೆ....ನೀನು ನೋಡಿದ್ರೆ ಡಾಕ್ಟ್ರು....”

ಒಂದೊಂದೇ ಎಪಿಸೋಡು ಹುಡುಕುಡುಕಿ ಓದೋಕೆ ಬೇಸರವಾ? ಪೂರ್ತಿ ಇ - ಪುಸ್ತಕ ತೆಗೆದುಕೊಳ್ಳಲು ಇಲ್ಲಿ ಕ್ಲಿಕ್ಕಿಸಿ.

'ಅದೆಲ್ಲ ಗೊತ್ತಲ್ಲಕ್ಕ. ಅದೆಲ್ಲ ಒಂದ್ ಸಮಸ್ಯೇನೇ ಅಲ್ಲ. ನೀವ್ ಬಂದ್ ಮಾತಾಡಿದ್ರೆ ಚೂರ್ ಸಮಾಧಾನ....' 

“ಮ್. ಇದನ್ನೆಲ್ಲಾ ಬದಿಗೆ ಸರಿಸಿ ನೋಡಿದ್ರೂ ಅಮ್ಮನನ್ನು ಒಪ್ಪಿಸೋದು ಕಷ್ಟ.......” ಒಂದಷ್ಟು ಮೌನ. "ನಿಂಗೇ ಗೊತ್ತಿರ್ತದಲ್ಲ. ಅಮ್ಮ ಹಳೇ ಕಾಲದವಳು. ಜಾತಿ ಗೀತಿ ಅಂತ ನೋಡೋದು ಜಾಸ್ತಿ. ನೀವ್ ಎಸ್ಸಿ ಅಂತಿದ್ದ ಇವನು. ಅಮ್ಮ ಹೆಂಗ್ ಒಪ್ತಾಳೇಳು" 

'ಅದನ್ನೆಲ್ಲ ಹೇಳಿ ಒಪ್ಪಿಸಿ ಅಮ್ಮನನ್ನು ಕರೆತಾ ಅಂತಲೇ ಪರಶು ಹತ್ತಿರ ನಾ ಹೇಳಿರೋದು. ಆಗಲಿ ಇನ್ನೊಂದೆರಡು ತಿಂಗಳು. ತೊಂದರೆ ಇಲ್ಲ' 

“ನೋಡು ಧರಣಿ. ಹಳಬರ ಸಂಗತಿ ನಿಂಗೇ ಗೊತ್ತಿರ್ತದಲ್ಲ. ನಾವಾದ್ರೆ ಈ ಕಾಲದೋರು ಜಾತಿ ಗೀತಿ ಅಂತೆಲ್ಲ ಅಷ್ಟಾಗಿ ತಲೆಕೆಡಿಸಿಕೊಳ್ಳಲ್ಲ. ನೀನು ಎಸ್ಸಿಯಾದ್ರೂ ಬುದ್ವಂತೆ....ಎಸ್ಸಿಯಾದ್ರೂ ಡಾಕ್ಟರ್ ಆಗಿದ್ದೀಯ.......” 

'ಎಸ್ಸಿಯಾದ್ರೂ.... ಅಂದ್ರೆ ಏನು ನಿಮ್ಮ ಮಾತಿನ ಅರ್ಥ? ಎಸ್ಸಿಗಳಲ್ಲಿ ಬುದ್ಧಿವಂತರಿರಬಾರದಾ? ಇರುವುದಿಲ್ಲ ಅಂತಾನಾ?' ನಯವಾಗಿ ನಾಜೂಕಾಗಿ ಚೂರಿ ಚುಚ್ಚುವವಳು ಈ ಅಕ್ಕ ಅಂತ ಗೊತ್ತಾಗಿದ್ದೇ ಆಗ. 

“ನೋಡ್ದಾ.....ನಾವಿಬ್ರೇ ಜಾತಿ ವಿಷಯದಲ್ಲಿ ಎಷ್ಟು ಬೇಗ ಜಗಳದ ಬಾಗಿಲಿಗೆ ಬಂದುಬಿಟ್ಟೊ. ಇದೇ ಜಾತಿ ಮಹಿಮೆ ಅನ್ಸುತ್ತೆ. ಏನೋ ಒಂದಷ್ಟು ವರ್ಷ ಲವ್ ಮಾಡಿದ್ದೀರ, ಸುತ್ತಾಡಿದ್ದೀರ, ಸೆಕ್ಸೂ ಮಾಡಿರ್ಬೋದೋ ಏನೋ, ಈಗಿನ ಕಾಲದ ಹುಡ್ಗೀರು ದೇಹ ಬಲಿಯೋಕೆ ಮುಂಚೆಯೇ ಸೆಕ್ಸು ಮಾಡೋದು ಹೊಸತೇನಲ್ಲವಲ್ಲ …..ಮಕ್ಳೇನಾಗಿಲ್ಲವಲ್ಲ. ಎಲ್ಲ ಮರೆತು ಮನೆಯವರ ಮಾತು ಕೇಳಬೇಕಲ್ವ" ಅಕ್ಕನ ಯೋಚನೆಯ ಮಟ್ಟದ ಅರಿವಾಯಿತು. ಇನ್ನಿವರೊಡನೆ ಮಾತನಾಡಿ ಪ್ರಯೋಜನವಿಲ್ಲವೆಂದೂ ತಿಳಿಯಿತು. ರೇಗಾಡುವ, ಕೂಗಾಡುವ ಸಮಯವೂ ಇದಲ್ಲ. 

'ಅಕ್ಕ ನಾನೇನೋ ನಿಮಗೆ ಅಪರಿಚಿತೆ. ನಾ ಸೆಕ್ಸ್ ಗೋಸ್ಕರವೇ ಲವ್ ಮಾಡಿದ್ದೆ ಅಂತ ಅಂದ್ಕೊಂಡ್ರೆ ತಪ್ಪೇನಿಲ್ಲ. ಆದರೆ ನಿಮ್ಮ ತಮ್ಮನ ಪರಿಚಯ ಕೂಡ ನಿಮಗಿಲ್ಲ ಅಂತ ಇವತ್ತು ಗೊತ್ತಾಯ್ತು. ಅವನಿಗೇ ಕೇಳಿ ಪ್ರೀತಿ ಅಂದರೇನೆಂದು ಅರಿತುಕೊಳ್ಳಿ ಸಾಧ್ಯವಾದರೆ.....ಬಾಯ್ ಅಕ್ಕ. ಟೇಕ್ ಕೇರ್' ಎಂದ್ಹೇಳಿ ಫೋನ್ ಇಟ್ಟೆ' 

ಸತತವಾಗಿ ಮಾತನಾಡಿ ಗಂಟಲು ಒಣಗಿತ್ತು. 

“ಇಷ್ಟೆಲ್ಲ ನಡೆದುಹೋಗಿದೆಯೇನೇ ನಿನ್ನ ಜೀವನದಲ್ಲಿ!” 

'ಅಯ್ಯೋ. ಇನ್ನೂ ನಡೆದಿರೋದು ಬಹಳಷ್ಟು ಇದೆ ಕಣೋ. ಇರು ಒಂದ್ನಿಮಿಷ ಹಂಗೇ ಹೋಗಿ ನೀರು ತಗಂಡ್ ಬರ್ತೀನಿ' 

“ಸುಸ್ತಾಗಿದ್ರೆ ಇನ್ನೊಂದ್ಸಲ ಮಾತಾಡಿದ್ರಾಯ್ತು ಬಿಡೆ. ಮೊದಲೇ ಬೇಸರದಲ್ಲಿದ್ದೆ ಇವತ್ತು" 

'ಇಲ್ವೋ ಏನೋ ಹೇಳಿಬಿಡಬೇಕು ಅಂತ ಅನ್ನಿಸ್ತಿದೆ. ಹೇಳಿ ಮುಗಿಸಿಬಿಡ್ತೀನಿ. ವರ್ಷಗಳಿಂದ ಯಾರೊಡನೆಯೂ ಹೇಳದೆ ಹುಗಿದು ಹಾಕಿದ್ದ ವಿಷಯಗಳಿವು' ಅಡುಗೆಮನೆಗೆ ಬಂದು ಫ್ರಿಜ್ಜಿನಲ್ಲಿಟ್ಟಿದ್ದ ನೀರು ಬಾಟಲಿಯನ್ನು ತೆಗೆದುಕೊಂಡು ಅರ್ಧ ಬಾಟಲಿಯಷ್ಟು ಕುಡಿದು ರೂಮಿಗೆ ಬಂದೆ. 

“ಹು. ನಿನ್ನಿಷ್ಟ ಹೇಳು. ನಮ್ ಹುಡುಗಿ ಜೀವನದಲ್ಲಿ ಏನೇನು ಆಗಿದೆ ಅಂತ ತಿಳ್ಕೊಳ್ಳೋಕೆ ನನಗೂ ಕುತೂಹಲವಿದ್ದೇ ಇರ್ತದಲ್ಲ" ಸಾಗರ ಹೇಳಿದ. ಹೆಂಗೋ ನನ್ನ ಮನದ ಮಾತುಗಳನ್ನು ಕೇಳೋಕೆ ಇವನಾದರೂ ಒಬ್ಬ ಇದ್ದಾನಲ್ಲ ….. 

'ಎಲ್ಲಿಗ್ ನಿಲ್ಸಿದ್ನೋ?' 

“ಅದೇ ಪುರುಷೋತ್ತಮನ ಅಕ್ಕನ ಜೊತೆಗೆ ಮಾತನಾಡಿದ್ದೇಳ್ತಿದ್ದೆ" 

'ಹು. ಮನೇಲೇಳ್ದ. ಯಾವಾಗ ಬರ್ತೀರಾ? ಅಂತ ದಿನಕ್ಕತ್ತು ಮೆಸೇಜು ಮಾಡ್ತಿದ್ದೆ ಪರಶುಗೆ. ಹೊರಗಡೆ ಅಷ್ಟೆಲ್ಲ ಧೈರ್ಯವಂತನಂತೆ ತೋರುವವನು ಮನೆಯಲ್ಲಿ ಅಮ್ಮನಿಗೆ ಹೇಳುವುದಕ್ಕೆ ಹಿಂದೆ ಮುಂದೆ ನೋಡುತ್ತಿದ್ದ. ಅವನ ಮನಸ್ಸಿನೊಳಗೂ ನನ್ನ ಜಾತಿಯ ಪ್ರಶ್ನೆ ಈಗ ಭೂತಾಕಾರವಾಗಿ ಎದ್ದು ನಿಂತಿರಬೇಕು. ಎಸ್ಸಿ ಹುಡುಗಿ ಅಂತ ಅಮ್ಮನಿಗೆ ಹೇಗೆ ಹೇಳೋದು ಅಂತ ಯೋಚನೆ ಬೆನ್ನತ್ತಿರಬೇಕು. ನಾ ಕೇಳಿದಾಗಲೆಲ್ಲ ಇವತ್ ಹೇಳ್ತೀನಿ ನಾಳೆ ಹೇಳ್ತೀನಿ ಅಂತಲೇ ಹೇಳುತ್ತಿದ್ದ. ಇನ್ನು ನಮ್ಮ ಮನೇಲಂತೂ ನನಗೆ ಗಂಡು ಹುಡುಕೋ ವ್ಯವಹಾರವನ್ನು ಬಲು ಹುರುಪಿನಿಂದ ನಡೆಸಿದ್ದರು. ಒಂದೇ ವ್ಯತ್ಯಾಸವೆಂದರೆ ಈಗ ಅಪ್ಪನೇ ಖುದ್ದು ಗಂಡು ಬರುವ ಹಿಂದಿನ ದಿನವೇ ನನಗೆ ವಿಷಯ ತಿಳಿಸಿರುತ್ತಿದ್ದರು' 

“ಹ ಹ. ಒಟ್ಟು ಎಷ್ಟು ಜನ ಬಂದಿದ್ರು" 

'ಒಟ್ಟು ಐದು ಜನ ಬಂದಿದ್ರು ಅಷ್ಟೇ' 

“ಅವರಿಗೂ ಮೊದಲ ಗಂಡಿಗೆ ಮಾಡಿದೆಯೋ ಹೆಂಗೆ" 

'ಮ್. ತಪ್ಪಲ್ವ ಹಂಗ್ ಮಾಡಿದ್ದು' 

“ಮತ್ತಿನ್ನೇನು. ನಿಂದು ನಿಮ್ಮ ಮನೆಯವರದು ಸಮಸ್ಯೆ. ಪಾಪ ಆ ಹುಡುಗನಾಗಲೀ ಅವರ ಮನೆಯವರಾಗಲೀ ಈ ರೀತಿ ಅವಮಾನ ಎದುರಿಸೋಕೆ ಏನು ತಪ್ಪು ಮಾಡಿದ್ರು ಹೇಳು. ಪ್ರಬುದ್ಧತೆಯಿಂದ ವರ್ತಿಸಬಹುದಿತ್ತು ನೀನು" 

'ಹೌದು. ಈಗ ಯೋಚಿಸಿದಾಗ ನನ್ನ ಮೇಲೆ ನಂಗೇ ನಾಚಿಕೆಯಾಗ್ತದೆ. ಆದರೆ ಆ ದಿನಗಳಲ್ಲಿ ಅದೇ ಸರಿ ಎಂದು ತೋರುತ್ತಿತ್ತು. ನೈಟಿ ಹಾಕಿಕೊಂಡೇ ಅವರ ಮುಂದೆ ಬಂದು ಬಿಡ್ತಿದ್ದೆ. ಅವರು ಕುಳಿತಿರುತ್ತಿದ್ದರು. ನನ್ನ ಪಾಡಿಗೆ ನಾನು ಡ್ಯೂಟಿಗೆ ಹೊರಟುಬಿಡುತ್ತಿದ್ದೆ. ಅವರ ಕಡೆಗೆ ನೋಡುತ್ತಲೇ ಇರಲಿಲ್ಲ. ನಮ್ಮಪ್ಪ ಅಮ್ಮನಿಗೆ ಪಾಪ ಎಷ್ಟೆಲ್ಲ ಅವಮಾನವಾಗ್ತಿತ್ತೊ. ನನ್ನ ವರ್ತನೆಯಿಂದ ಕೊನೆಗೂ ಅಪ್ಪ ಸೋತರನ್ನಿಸುತ್ತೆ. ಐದನೇ ಗಂಡಿನ ನಂತರ ಮತ್ಯಾರೂ ಬರಲಿಲ್ಲ' 

“ಅದು ಅವರ ಸೋಲೇನಲ್ಲ. ನಿನ್ನ ವ್ಯಕ್ತಿತ್ವದ ಸೋಲು ಅಷ್ಟೇ" 

'ಇರಬಹುದೇನೋ. ಅವತ್ತಿಗದು ಸರಿ ಅನ್ನಿಸಿತ್ತು. ಮಾಡಿದ ತಪ್ಪುಗಳ ಬಗ್ಗೆ ಹೆಚ್ಚು ಪಶ್ಚಾತಾಪ ಪಡೋಳಲ್ಲ ನಾನು' 

“ಗೊತ್ತಾಗ್ತದೆ. ಅದ್ ಸರಿ ಬಂದಿದ್ದ ಗಂಡುಗಳೆಲ್ಲ ಯಾರು?" 

'ಎಲ್ರೂ ಡಾಕ್ಟ್ರುಗಳೇ ಇದ್ರು' 

“ಮ್" 

'ಇಷ್ಟೆಲ್ಲಾ ಗಂಡುಗಳು ಬಂದು ನೋಡ್ಕಂಡ್ ಹೋಗ್ತಿದ್ರೂ ಪರಶು ಅವರಮ್ಮನಿಗೆ ನಮ್ಮ ವಿಷಯ ತಿಳಿಸಲು ಹಿಂದೆ ಮುಂದೆ ನೋಡುತ್ತಿದ್ದ. 'ನೋಡ್ ಪರಶು. ನಿನ್ನ ಕೈಲಿ ಹೇಳೋಕ್ ಆಗಲ್ಲ ಅಂದ್ರೆ ಹೇಳಿಬಿಡು. ನಾನೇ ಬಂದು ಮಾತಾಡ್ತೀನಿ ನಿಮ್ಮಮ್ಮನ ಜೊತೆ. ಮನೇಲಿ ಟಾರ್ಚರ್ ಅನುಭವಿಸ್ತಿರೋದಲ್ಲದೆ ನಿನ್ನ ಟಾರ್ಚರ್ ಕೂಡ ಅನುಭವಿಸುವಂತಾಗಿದೆ ನನಗೆ' ಅಂತ ಖಡಕ್ಕಾಗಿ ಹೇಳಿದ ಮೇಲಷ್ಟೇ ಅವನು ಅಮ್ಮನ ಜೊತೆ ಮಾತನಾಡಿದ್ದು. 

* * *

ಅಂತೂ ಇಂತು ಒಂದು ಶುಭ ಭಾನುವಾರ ಪರಶು ಅವರಮ್ಮ, ಅಕ್ಕನ ಜೊತೆಗೆ ಮನೆಗೆ ಬಂದ. ಅವರಮ್ಮ ಮುಖ ಊದಿಸಿಕೊಂಡೇ ಬಂದಿದ್ದರು. ನಮ್ಮ ಮನೆಯನ್ನು ನಮ್ಮ ಮನೆಯವರನ್ನು ನನ್ನನ್ನು ನೋಡಿ ಒಂಚೂರು ಸಮಾಧಾನವಾಗಿರಬೇಕು. ಸ್ವಂತ ಮನೆ, ಮನೆ ಎದ್ರುಗೊಂದು ಕಾರು, ಬ್ಯಾಂಕು ಕೆಲಸ, ಡಾಕ್ಟರಿಕೆಗಳೆಲ್ಲ ಸಾಮಾಜಿಕವಾಗಿ ಎಷ್ಟು ಪ್ರಾಮುಖ್ಯತೆಯನ್ನು ತಂದುಕೊಡುತ್ತೆ ಅಂತ ಅರಿವಾಗಿತ್ತಾಗ. ಮೊದಲ ಸಲ ನಾನು ಸೀರೆ ಉಟ್ಟು ತಯಾರಾಗಿದ್ದೆ. ಆರು ವರ್ಷದಿಂದ ಪರಿಚಯವಿರುವ ಹುಡುಗನಿಗೆ ತಿಂಡಿ ಕೊಡಲು! ತಿಂಡಿ ಕಾಫಿ ಎಲ್ಲಾ ಟೇಬಲ್ ಮೇಲಿಟ್ಟೆ. 

ಅವರಮ್ಮನೂ ಮುಗುಮ್ಮಾಗಿದ್ದರು, ನಮ್ಮಪ್ಪನೂ ಮುಗುಮ್ಮಾಗಿದ್ದರು. “ಏನ್ ಓದಿಕೊಂಡಿದ್ದೀಯಪ್ಪ" ಻ಅಂತ ಻ಅಮ್ಮನೇ ಪರಶುನನ್ನು ಕೇಳಿದರು. 

“ಡಿಗ್ರಿ ಮುಗಿಸಿದ್ದೀನಿ. ಕೆಲಸ ಹುಡುಕ್ತಿದ್ದೀನಿ. ಬ್ಯುಸಿನೆಸ್ ಮಾಡೋ ಯೋಚನೇನೂ ಇದೆ" ಎಂದು ಹೇಳಿದ. ಅಮ್ಮನ ನಡವಳಿಕೆಯಿಂದ ಪರಶು ಅವಳಿಗೆ ಇಷ್ಟವಾಗಿದ್ದಾನೆ ಎಂದು ತೋರುತ್ತಿತ್ತು. 

ಮತ್ತೊಂದಷ್ಟು ಕ್ಷಣ ಮೌನ. ಆ ಮೌನ ಮುರಿದಿದ್ದು ಪುರುಷೋತ್ತಮನ ಅಮ್ಮನ ಕಂಚಿನ ಕಂಠ "ಯಾವ್ ಜನ ನೀವು?” ಪ್ರಶ್ನೆ ನೇರವಾಗಿತ್ತು. 

ಅಪ್ಪ ಅಮ್ಮ ನನ್ನೆಡೆಗೆ ನೋಡಿದರು. ನಾ ಅಚ್ಚರಿಯಿಂದ ಪರಶು ಕಡೆಗೆ ನೋಡಿದೆ. ಪರಶು ತಲೆ ತಗ್ಗಿಸಿದ. ಪರಶುವಿನ ಅಕ್ಕ ನಕ್ಕಳು, ಅಥವಾ ನನಗೆ ಹಾಗನ್ನಿಸಿರಬೇಕು. 

ಅಪ್ಪ ಮಾತನಾಡಲಿಲ್ಲ. ಮಾತನಾಡುವಂತೆ ತೋರಲೂ ಇಲ್ಲ. “ನಾನು ಒಕ್ಕಲಿಗ, ಇವರು ಎಸ್ಸಿ" ಅಮ್ಮನೇ ಹೇಳಿದರು. ದನಿಯಲ್ಲಿ ಬೇಸರವಿತ್ತಾ? ಇದ್ದಿರಲೇಬೇಕು. 

“ಓ! ಹೌದಾ" ಎಂದು ಉದ್ಗಾರ ತೆಗೆದವರು ಕೈಯಲ್ಲಿದ್ದ ಅರ್ಧ ತುಂಡು ಮೈಸೂರು ಪಾಕ್ ಅನ್ನು ಮತ್ತೆ ಪ್ಲೇಟಿನೊಳಗಾಕಿದರು. ಮತ್ತವರು ಮಾತನಾಡಲಿಲ್ಲ. ಪರಶು ಕಾಫಿ ಲೋಟವನ್ನು ಮತ್ತೆ ಟೇಬಲ್ಲಿನ ಮೇಲಿಡುವುದನ್ನೇ ಕಾಯುತ್ತಿದ್ದಂತೆ "ನಾವಿನ್ನು ಬರ್ತೀವಿ" ಅಂತ ಹೇಳಿ ಹೊರಟುಬಿಟ್ಟರು.' 

“ಇನ್ನೇನು ಮಾತನಾಡಲಿಲ್ಲವಾ?” ಸಾಗರ ಪ್ರಶ್ನಿಸಿದ. 

'ಉಹ್ಞು. ಇನ್ನೇನು ಮಾತನಾಡಲಿಲ್ಲ. ಸೀದಾ ಎದ್ದು ಹೊರಟೇ ಬಿಟ್ಟರು. ಅವರಿಂದೆಯೇ ಪರಶು ಮತ್ತವನಕ್ಕ ಕೂಡ ಹೊರಟರು. ಇಷ್ಟು ದಿನ ಬಂದ ಗಂಡುಗಳಿಗೆ ನಾ ಅವಮಾನಿಸಿದ್ದೆ. ಇವತ್ತು ಆ ಅವಮಾನ ಒಂದು ಸುತ್ತು ತಿರುಗಿ ಬಂದು ನನ್ನನ್ನು ಕುಬ್ಜಳನ್ನಾಗಿಸಿತು. ಕಣ್ಣೀರುಡುತ್ತಾ ಸೋಫಾದ ಮೇಲೊರಗಿದೆ. ಮನೆಯಲ್ಲಿನ ಮೌನ ಹಿಂಸೆಯ ಪ್ರತಿಬಿಂಬದಂತಿತ್ತು. ಒಂದು ಘಂಟೆ ಕಳೆದರೂ ಯಾರೊಬ್ಬರೂ ಏನನ್ನೂ ಮಾತನಾಡಲೊಲ್ಲರು. ಏನೂ ನಡೆದೇ ಇಲ್ಲವೆಂಬಂತೆ ಅಪ್ಪ ಪೇಪರು ಓದುತ್ತಾ ಕುಳಿತುಬಿಟ್ಟರು' 

“ಅವರು ಪೂರ್ತಿ ಖುಷಿಯಲ್ಲಿರ್ತಾರೆ. ಅನುಭವಿಸಲಿ ಅಂತ ಻ಅಂದ್ಕೊಂಡಿರ್ತಾರೆ" 

'ಹು. ಸತ್ಯ. ಒಂದು ಘಂಟೆಯ ನಂತರ ಹೊರಗೆ ಹೊರಟರು. ಬಾಗಿಲು ದಾಟುವ ಮುನ್ನ ನನ್ನೆಡೆಗೆ ತಿರುಗಿ "ಹೇಳಿದ್ನಲ್ಲ ನಿನಗೆ ಸಿಗೋ ಮರ್ಯಾದೆ ಯಾವ ರೀತಿಯದ್ದಿರುತ್ತೆ ಅಂತ. ನಮ್ಮ ಮನೆಯಲ್ಲಿ ಒಂದರ್ಧ ಸ್ವೀಟು ಕೂಡ ತಿನ್ನಲು ಇಚ್ಛೆಪಡದ ಜನರ ಮನೆಗೆ ಮುದ್ದಿನಿಂದ ಸಾಕಿರೋ ನನ್ನ ಮಗಳನ್ನು ಕೊಡುಲು ನನಗೆ ಮನಸ್ಸಾದರೂ ಹೇಗಾಗಬೇಕು ನೀನೇ ಯೋಚಿಸು" ಎಂದ್ಹೇಳಿ ಹೊರಟುಹೋದರು. ಇಷ್ಟು ದಿನ ಅವರೇಳಿದ್ದೆಲ್ಲ ತಪ್ಪೆಂಬಂತೆ ತೋರುತ್ತಿತ್ತು. ಸುಮ್ಮನೆ ಜಾತಿ ವಿಷಯ ಎತ್ತಿಕೊಳ್ತಾರೆ, ಮಗಳು ಲವ್ ಮ್ಯಾರೇಜ್ ಆಗೋದು ಇಷ್ಟವಿಲ್ಲದೆ ಇಂತಹ ಮಾತನಾಡುತ್ತಾರೆ. ಅಥವಾ ನಾನು ಡಾಕ್ಟರ್ ಆತ ಡಿಗ್ರಿ ಇನ್ನೂ ಕೆಲಸವಿಲ್ಲ ಎನ್ನುವುದೂ ಕಾರಣವಿರ್ತದೆ ಅಷ್ಟೇ ಅಂದುಕೊಂಡಿದ್ದೆ. ಇವತ್ತು ಅವರಮ್ಮ ನಡೆದುಕೊಂಡ ರೀತಿಯನ್ನು ಕಂಡು ಅಪ್ಪ ಯಾಕೆ ಅನ್ಯಜಾತಿಗೆ ಅದರಲ್ಲೂ ಸಮಾಜದ ದೃಷ್ಟಿಯಲ್ಲಿ ಮೇಲ್ಜಾತಿ ಎನ್ನಿಸಿಕೊಂಡವರ ಮನೆಗೆ ಕೊಡಲು ಯಾಕೆ ಒಪ್ಪುತ್ತಿಲ್ಲ, ಯಾಕಿಷ್ಟು ಹಟ ಸಾಧಿಸಲೆತ್ನಿಸುತ್ತಿದ್ದಾರೆ ಅಂದುಕೊಳ್ಳುತ್ತಿದ್ದೆ. ಕೈಯಲ್ಲಿದ್ದ ಅರ್ಧ ತುಂಡು ಮೈಸೂರು ಪಾಕ್ ಅನ್ನು ಪರಶುವಿನ ಅಮ್ಮ ಪ್ಲೇಟಿಗೆ ಇಟ್ಟಾಗ ಅಪ್ಪನ ಆತಂಕ, ಕಾಳಜಿಯ ಅರಿವಾಯಿತು. ಮನೆಯಲ್ಲಿ ಮೊದಲೇ ಈ ವಿಷಯ ತಿಳಿಸಿ ಕರೆದುಕೊಂಡು ಬರದ ಪರಶುವಿನ ಮೇಲೂ ಕೋಪವುಕ್ಕಿತು. ಮೊಬೈಲ್ ಕೈಗೆತ್ತಿಕೊಂಡು 'ಐ ಹೇಟ್ ಯು' ಅಂತ ಮೆಸೇಜು ಟೈಪ್ ಮಾಡಿ ಸೆಂಡ್ ಬಟನ್ ಒತ್ತುವಷ್ಟರಲ್ಲಿ "ಸಾರಿ" ಮೆಸೇಜು ಬಂತು. 'ಐ ಹೇಟ್ ಯು' ಅನ್ನುವುದನ್ನು ಅಳಿಸಿ ಹಾಕಿ 'ಮ್. ಮಾತಾಡ್ಬೇಕು ನಿನ್ನ ಜೊತೆ. ನಾಳೆ ಬೆಳಿಗ್ಗೆ ಆಸ್ಪತ್ರೆಯ ಬಳಿ ಸಿಗು' ಎಂದು ಮೆಸೇಜು ಕಳುಹಿಸಿದೆ. “ಸರಿ" ಎಂದ.

ಮಾರನೆ ದಿನ ಬೆಳಿಗ್ಗೆ ಎಂದಿಗಿಂತ ಸ್ವಲ್ಪ ಮುಂಚಿತವಾಗೇ ಹೊರಟೆ. ಮನೆಯವರಿಗೆ ಪರಶುನನ್ನು ಭೇಟಿಯಾಗಲು ಹೋಗುತ್ತಿದ್ದೇನೆ ಎನ್ನುವುದು ತಿಳಿದಿರ್ತದೆ ಆದರೂ ಏನೂ ಹೇಳಲಿಲ್ಲ ಅವರು. ನಾ ಹೋಗುವಷ್ಟರಲ್ಲಿ ಪರಶು ಬಂದಿದ್ದ. ನಮ್ ಆಸ್ಪತ್ರೆಯ ಎದುರಿಗಿದ್ದ ಹೋಟೆಲ್ಲೊಂದರ ಒಳಹೊಕ್ಕೆವು. ಕುಳಿತುಕೊಳ್ಳುತ್ತಿದ್ದಂತೆಯೇ ನಾ ರೇಗಲು ಪ್ರಾರಂಭಿಸಿದೆ. 'ನಿನಗೇನು ತಲೆ ನೆಟ್ಗಿದೆಯೋ ಇಲ್ವೋ. ಮೊದಲೇ ನಿಮ್ಮಮ್ಮನಿಗೆ ಜಾತಿ ವಿಷಯ ಹೇಳಿ ಕರಕೊಂಡು ಬಾ ಅಂತ ಎಷ್ಟು ಸಲ ಹೇಳಿದ್ದೆ ನಿನಗೆ. ಜಾತಿ ವಿಷಯ ಗೊತ್ತಿದ್ದು ಅದನ್ನವರು ಒಪ್ಪಿ ಬಂದಿದ್ದರೆ ಅರ್ಧ ಕೆಲಸ ಮುಗಿದಂತಾಗಿರೋದು. ನಮ್ಮ ಮನೆಯಲ್ಲಿ ಹೆಂಗೋ ಒಪ್ಪಿಕೊಂಡುಬಿಡುತ್ತಿದ್ದರು. ಻಻ಅಷ್ಟೆಲ್ಲ ವಿವರವಾಗಿ ಹೇಳಿದ್ದರೂ ಅದನ್ನ ಕೇಳದೆ ಈಗ ನಮ್ಮಿಬ್ಬರ ಮನೆಯವರು ಮಾತನಾಡದ ಹಂತಕ್ಕೆ ತಂದಿಟ್ಟು ಬಿಟ್ಟೆಯಲ್ಲ. ಈಗೆಂಗೆ ಸರಿ ಮಾಡೋದೋ ನಂಗಂತೂ ಗೊತ್ತಿಲ್ಲ' 

“ನಾವಿಬ್ರು ಮೇಜರ್ಸೇ. ಓಡಿ ಹೋಗಿ ಮದುವೆಯಾಗಿ ಪೋಲೀಸರ ಮೊರೆ ಹೋಗೋಣ ನಡಿ" ಗಂಭೀರವಾಗೇ ಹೇಳಿದ. ನನಗದು ಕಾಮಿಡಿ ತರ ಕೇಳಿಸ್ತು. 

'ನಿಂಗೊಳ್ಳೆ ತಮಾಷೆ....' 

“ತಮಾಷೆ ಏನು ಬಂತು? ಇದ್ದಿದ್ದನ್ನು ಇದ್ದ ಹಾಗೇ ಹೇಳ್ತಿದ್ದೀನಿ. ನಮ್ಮಮ್ಮ ಏನೇ ಮಾಡಿದ್ರೂ ಎಷ್ಟೇ ರೇಗಾಡಿ ರಂಪ ಮಾಡಿ ಕೂಗಾಡಿ ಅತ್ತು ಕರೆದು ಮಾಡಿದ್ರೂ ನಿನ್ನನ್ನು ಸೊಸೆಯಾಗಿಸಿಕೊಳ್ಳೋಕೆ ಒಪ್ಪುವುದಿಲ್ಲ.....” 

'ಯಾಕೆ?' 

“ಅದ್ ನಿಂಗೇ ಗೊತ್ತಲ್ಲ...” 

'ಇಲ್ಲ. ನಂಗೊತ್ತಿಲ್ಲ. ಯಾಕೆ ಅಂತ ನೀನೇ ಹೇಳು' 

“ಯಾಕೆ ಯಾಕೆ ಯಾಕೆ. ಬರೀ ನಿನ್ನ ಪ್ರಶ್ನೆಗಳಿಗೆ ಉತ್ತರಿಸೋದೇ ಆಗೋಗಿದೆ ನಂಗೆ. ನೀನ್ ಎಸ್ಸಿ ಅದಿಕ್ಕೆ...” 

ಇವನ ಬಾಯಲ್ಲೂ ಈ ಮಾತು ಕೇಳುವ ದಿನ ಬರ್ತದೆ ಅಂತ ನಾ ನಿರೀಕ್ಷೆ ಮಾಡಿರಲಿಲ್ಲ. ಕಣ್ಣಂಚಲ್ಲಿ ಎರಡನಿ ನೀರು ಪಟ್ಟಂತ ನನ್ನರಿವಿಗೆ ಬರುವುದಕ್ಕೆ ಮೊದಲೇ ಮೂಡಿಬಿಟ್ಟಿತು. 'ಥ್ಯಾಂಕ್ಸ್ ಕಣೋ' ಅನ್ನುವ ಎರಡು ಪದ ಕೂಡ ನನ್ನರಿವಿಗೆ ಮೊದಲೇ ಹೊರಬಂತು. 

ಅವನ ಮಾತು ಹೊರಡಿಸಿದ ತಪ್ಪಾರ್ಥದ ಅರಿವಾಯಿತವನಿಗೆ. ಕೈ ಹಿಡಿದುಕೊಂಡ. ನಾ ಬಿಡಿಸಿಕೊಳ್ಳಲು ಕೊಸರಾಡಿದರೂ ಬಿಡಲಿಲ್ಲ. “ಹಂಗಲ್ವೇ ಧರು..... ನೀ ಎಸ್ಸೀನೊ ನಾ ಗೌಡಾನೋ ಮತ್ತೊಂದೋ ಅದ್ಯಾವುದೂ ನನಗೂ ಮುಖ್ಯವಲ್ಲ ನಿನಗೂ ಮುಖ್ಯವಲ್ಲ ಅನ್ನೋದು ಇಬ್ಬರಿಗೂ ಗೊತ್ತಲ್ವ. ಆದರೆ ವಯಸ್ಸಾಗಿರೋ ಅಮ್ಮನ ಮನಸ್ಸನ್ನು ನಾ ಹೇಗೆ ಬದಲಿಸಲಿ ನೀನೇ ಹೇಳು. ಅವರು ಸುತಾರಾಂ ಒಪ್ಪೋದಿಲ್ಲ. ಮತ್ತವರು ಒಪ್ಪದೇ ಇರೋದಿಕ್ಕೆ ಜಾತಿಯೇ ಮುಖ್ಯ ಕಾರಣ. ಅದಕ್ಕೋಸ್ಕರವೇ ಅಲ್ಲವಾ ನಾ ಅಮ್ಮನ ಬಳಿ ವಿಷಯ ಹೇಳಲು ಇಷ್ಟು ದಿನ ತೆಗೆದುಕೊಂಡು ನಿನ್ನನ್ನು ಸತಾಯಿಸಿದ್ದು" ಅವನ ಸಾಂತ್ವನದ ಮಾತುಗಳು ಒಂದಿನಿತು ಸಮಾಧಾನ ತರುವಂತೆ ತೋರಿತು. 

'ನಿಮ್ಮಮ್ಮ ಒಪ್ಪೋದಿಲ್ಲ ಅಂತ ಅನುಮಾನವಿತ್ತು. ಅದಕ್ಕೆ ಅಲ್ವ ನಿಮ್ಮಮ್ಮನಿಗೆ ನನ್ನ ಜಾತಿಯ ವಿಷಯ ತಿಳಿಸು ಅಂತ ಪೀಡಿಸುತ್ತಿದ್ದಿದ್ದು. ನಿಮ್ಮಮ್ಮ ಆಗಲೇ ಉಲ್ಟಾ ಹೊಡೆದು ನಮ್ಮ ಮನೆಗೆ ಬರದೇ ಹೋಗಿದ್ದರೇ ಎಷ್ಟೊ ಒಳ್ಳೇದಿತ್ತಲ್ವ? ನಮ್ಮ ಮನೆಯವರಿಗೆ ನಾ ಹೇಗೆ ಮುಖ ತೋರಿಸಲಿ? ನಮ್ಮಿಬ್ಬರ ಮದುವೆ ನಡೆಯದೇ ಹೋದರೆ ಅದಕ್ಕೆ ನೀನೇ ಕಾರಣ ನೆನಪಿಟ್ಕೋ' 

ನಿಂಗ್ ಹೇಳಿದ್ನಲ್ಲ ಸಾಗರ್, ಪರಶು ಅವನ ಸ್ನೇಹಿತರಿಗೆ ನನ್ನನ್ನು ಪರಿಚಯಿಸುವಾಗೆಲ್ಲ 'ನನ್ನ ವೈಫು' ಅಂತಲೇ ಹೇಳುತ್ತಿದ್ದ. ನಮ್ಮಿಬ್ಬರ ಮದುವೆ ನಡೆಯದೇ ಹೋಗುವುದು ಅವನು ಕನಸು ಮನಸಲ್ಲೂ ಯೋಚಿಸದ ಸಂಗತಿಯಾಗಿತ್ತು. ನಮ್ಮಿಬ್ಬರ ಮದುವೆಗೆ ನಾನೇ ಅಡ್ಡಬಾಯಿ ಹಾಕಿದ್ದು ಅವನಿಗೆ ಸಹಿಸಲಸಾಧ್ಯವಾಯಿತು. 

“ನೀನೇ ಕಾರಣ ನೀನೇ ಕಾರಣ ಅಂದುಬಿಟ್ರೆ ಹೆಂಗೆ? ನಿಮ್ಮ ಮನೆಯವರನ್ನೇನು ನೀ ಪೂರ್ತಿ ಒಪ್ಪಿಸಿಬಿಟ್ಟವಳ ಹಾಗೆ ಮಾತಾಡ್ತೀಯಲ್ಲ! ನಿಮ್ಮಪ್ಪ ಒಂದು ಪದವನ್ನೂ ಆಡಲಿಲ್ಲ ನಿನ್ನೆ" 

'ಜಾತಿ ಸಂಗತಿ ಮಾತಾಡಿ ನಿಮ್ಮಮ್ಮನನ್ನು ಒಪ್ಪಿಸಿದ್ದರೆ ನಾ ಹೇಗೋ ನಮ್ಮ ಮನೆಯಲ್ಲಿ ಒಪ್ಪಿಸುತ್ತಿದ್ದೆ' 

“ಬರೀ ಅದೇ ಕತೆ ಹೊಡೀಬೇಡ" ಇಬ್ಬರ ತಾಳ್ಮೆಯೂ ಮುಗಿದಂತಿತ್ತು. “ನೀನ್ ಹೇಳಲಿಲ್ಲ ಜಾತಿ ವಿಷಯ ನೀನ್ ಹೇಳಲಿಲ್ಲ ಅಂತ ಆಗಿನಿಂದ ಬೊಂಬ್ಡ ಹೊಡೀತಿದ್ದೀಯಲ್ಲ ನೀನ್ ನಿಮ್ಮ ಮನೇಲಿ ನಮ್ಮಮ್ಮನಿಗೆ ಏಡ್ಸ್ ಇರೋ ವಿಷಯ ತಿಳಿಸಿದ್ದೀಯಾ?” ಅಂತ ಕೇಳಿದಾಗ.....' 

“ಏನು? ಏನಂದೆ ಧರು ನೀನೀಗ" ಸಾಗರನ ದನಿಯಲ್ಲಿ ಅಪನಂಬಿಕೆಯಿತ್ತು. ಕೇಳಿದ್ದು ಅದೇ ಪದವೋ ಅಲ್ಲವೋ ಎನ್ನುವುದರ ಕುರಿತಾದ ಅಪನಂಬುಗೆ. 

'ಓ! ನಿನಗಾ ವಿಷಯ ಹೇಳೇ ಇರಲಿಲ್ಲ ಅಲ್ಲವ..... ಹು ಕಣೋ ಪರಶುವಿನ ಅಮ್ಮನಿಗೆ ಏಡ್ಸ್ ಇತ್ತು. ಅವರಪ್ಪನ ದುಶ್ಚಟದಿಂದ ಬಂದಿತ್ತು' 

“ನಿನಗ್ಯಾವಾಗ ಈ ವಿಷಯ ಗೊತ್ತಾಗಿದ್ದು" 

'ನಾವವಾಗ ಮೂರನೇ ವರ್ಷದಲ್ಲಿದ್ದೋ ಅನ್ಸುತ್ತೆ. ಅವರಪ್ಪ ತೀರಿಹೋದರು. ನಾನೂ ಹೋಗಿದ್ದೆ ಮಣ್ಣಿಗೆ. ಅದೇ ದಿನ ಸಂಜೆ ಪರಶು ಸಿಕ್ಕಿದ್ದ. ಚಾಮುಂಡಿ ಬೆಟ್ಟಕ್ಕೆ ಕರೆದುಕೊಂಡು ಹೋದ. ನಂದಿಯ ಬಳಿ ಕುಳಿತಿದ್ದೊ. ಮೌನವಾವರಿಸಿತ್ತು. ಸ್ವಲ್ಪ ಸಮಯದ ನಂತರ "ಧರಣಿ.... ನಮ್ಮಪ್ಪ ಸತ್ತಿದ್ಯಾಕೆ ಅಂತ ಗೊತ್ತ ನಿನಗೆ" ಎಂದು ಕೇಳಿದ. 

'ನೀನೇ ಹೇಳಿದ್ಯಲ್ಲೋ ಸುಮಾರು ದಿನದಿಂದ ಹುಷಾರಿಲ್ಲ. ಸಿಗರೇಟು ಸೇದಿ ಸೇದಿ ಕುಡಿದು ಕುಡಿದು ಲಂಗ್ಸು ಲಿವರ್ರು ವರ್ಷದಿಂದೀಚೆಗೆ ಹಾಳಾಗಿದೆಯಂತ' 

“ಮ್. ಅದು ಅರ್ಧ ಸತ್ಯ ಅಷ್ಟೇ ಧರು" 

'ಹೌದಾ! ಇನ್ನೇನಾಗಿತ್ತು' 

“ವರುಷದ ಹಿಂದೆ ಅವರಿಗೆ ಏಡ್ಸ್ ಇದೆ ಅಂತ ಗೊತ್ತಾಗಿತ್ತು" 

'ಅಯ್ಯೋ ಹೌದಾ.... ಅದ್ಯಾಕೆ ಹೇಳಲಿಲ್ಲ ನೀನು' ನಾನು ಸಹಜವಾಗಿ ಕೇಳಿದೆ. ಅವನಿಗಚ್ಚರಿ. ಏಡ್ಸ್ ಅಂದ್ರೆ ಎಲ್ರೂ ಬೆಚ್ಚಿ ಬೀಳ್ತಾರೆ. ಪ್ರೀತಿಸಿದ ಹುಡುಗನ ಻ಅಪ್ಪನಿಗೆ ಏಡ್ಸ್ ಇದೆ ಅಂತ ತಿಳಿದ ಮೇಲೂ ಇವಳು ತಣ್ಣಗೇ ಇದ್ದಾಳಲ್ಲ ಻ಅಂತ ಻ಅವನಿಗಚ್ಚರಿ. ಅವತ್ತಿನಿಂದ ನನ್ನ ಮೇಲಿನ ಪ್ರೀತಿ ಮತ್ತಷ್ಟು ಹೆಚ್ಚಾಯಿತವನಿಗೆ. ನನಗೆ ಉಸಿರುಕಟ್ಟಿಸುವಿಕೆ ಮತ್ತಷ್ಟು ಹೆಚ್ಚಾಯಿತು. ಆಗಿನಿಂದಲೇ ಅವನ ಕಣ್ಗಾವಲು ಶುರುವಾಯಿತೆಂಬ ಗುಮಾನಿ ನನಗೆ. 

'ಬೇಸರ ಮಾಡ್ಬೇಡ. ನಿಮ್ಮಮ್ಮನಿಗೂ ಒಮ್ಮೆ ಪರೀಕ್ಷೆ ಮಾಡಿಸಿ. ಒಳ್ಳೇದು' ಅಂದೆ. 

“ಮಾಡಿಸಾಗಿದೆ. ಅವರಿಗೂ ಇದೆ. ಆದರೆ ತೀವ್ರವಾಗಿಲ್ಲ. ಚಿಕಿತ್ಸೆ ನಿರಂತರವಾಗಿ ತೆಗೆದುಕೊಳ್ಳಬೇಕು ಅಂದಿದ್ದಾರೆ" 

'ಹು. ಅಷ್ಟೇ ಸರಿಯಾಗಿ ತೋರಿಸಿಕೊಳ್ಳಿ' ಎಂದೆ' 

“ಏಡ್ಸ್ ಇರೋ ವಿಷಯಾನ ಅಷ್ಟೊಂದು ತಣ್ಣಗಿನ ಮನೋಭಾವದಲ್ಲಿ ಹೆಂಗೇ ಸ್ವೀಕರಿಸಿದೆ?” ಸಾಗರನಿಗೂ ನನ್ನ ನಡವಳಿಕೆಯ ಬಗ್ಗೆ ಅಚ್ಚರಿ. ಅದರಲ್ಲೇನು ಅಂತ ಮಹತ್ಕಾರ್ಯವಿದೆಯೋ ನನಗಂತೂ ತಿಳಿಯಲಿಲ್ಲ, ಈಗಲೂ ತಿಳಿಯುತ್ತಿಲ್ಲ. 

'ಅದರಲ್ಲೇನೋ ವಿಶೇಷ' 

“ಅದಿಕ್ಕೆ ಪುಟ್ಟ ನೀ ದೇವತೆಯಂತೋಳು ಅನ್ನೋದು ನಾನು" 

'ಏನ್ ದೇವತೇನೋ ಏನೋ..... ಅದ್ ಬಿಡು. ಅವತ್ತವನು ನಿಮ್ಮ ಮನೇಲಿ ನಮ್ಮಮ್ಮನಿಗೆ ಏಡ್ಸ್ ಇರೋ ವಿಷಯ ಹೇಳಿದ್ಯಾ ಅಂತ ಕೇಳ್ದಾಗಲೇ ಪರಶು ಯಾಕೆ ಜಾತಿ ವಿಷಯ ಮನೆಯಲ್ಲಿ ಮಾತಾಡೋಕೆ ಹಿಂಜರಿದ ಅಂತ ಅರಿವಾಗಿದ್ದು. ಏಡ್ಸ್ ಗೇನೋ ಮುಂದೊಂದು ದಿನ ಪೂರ್ತಿ ವಾಸಿಯಾಗುವ ಚಿಕಿತ್ಸೆ ದೊರಕಿದರೂ ದೊರಕಬಹುದು. ಜಾತಿಗೆ ದೊರಕುತ್ತೇಂತ ನನಗನಿಸೋಲ್ಲ. ಮುಂದೇನು ಅನ್ನುವ ಪ್ರಶ್ನೆ ನನ್ನೆದುರು ದುತ್ತೆಂದು ಎದುರಾಯಿತು. ಇಷ್ಟು ದಿನ ಮನೆಯಲ್ಲಿ ಒಪ್ಪಿಸ್ಕೋಬಹುದು ಎಂದು ಅಂದುಕೊಂಡಿದ್ದೆ. ಈಗ್ಯಾಕೋ ಅದು ಕಷ್ಟವೆಂದು ತೋರಲಾರಂಭಿಸಿತ್ತು. ಪರಶು ಏನೋ ನಾ ಮನೆಯಿಂದ ಬಂದರೆ ಮದುವೆಯಾಗೋಕೆ ರೆಡಿ. ಆದರೆ ಓಡಿ ಹೋಗಿ ಮದುವೆಯಾಗೋ ಸಂಭ್ರಮ ನನಗಂತೂ ಬೇಡವೇ ಬೇಡ. ಮದುವೆಯೇನಿದ್ರೂ ಗೆಳೆಯ ಗೆಳತಿಯರ ನೆಂಟರ ಸಮ್ಮುಖದಲ್ಲಿ ಅದ್ದೂರಿಯಾಗೇ ಆಗಬೇಕು ಅನ್ನುವವಳು ನಾನು. ಇನ್ನೊಂದಷ್ಟು ದಿನ ಹಿಂಗೇ ಕಳೀಲಿ. ಅಪ್ಪನೊಡನೆ ಮತ್ತೊಮ್ಮೆ ಮಾತನಾಡ್ತೀನಿ ಅಂದುಕೊಂಡೆ. ಮಾತನಾಡುವ ಸಂದರ್ಭವನ್ನು ಅಪ್ಪನೇ ಸೃಷ್ಟಿಸಿದರು. ಡ್ಯೂಟಿ ಮುಗಿಸಿ ಮನೆಗೋಗಿ ಹಾಸಿಗೆಯ ಮೇಲೆ ಅಡ್ಡಾಗಿದ್ದೆ. ಎಷ್ಟೋ ತಿಂಗಳ ಮೇಲೆ ಅಪ್ಪ ಬಂದು ನನ್ನ ಪಕ್ಕ ಕುಳಿತು ತಲೆ ಸವರಿದರು. ಕಣ್ಣೀರು ಬರಲು ಅದಕ್ಕಿಂತ ಪ್ರಶಸ್ತ ಸನ್ನಿವೇಶವೊಂದು ಇರಲು ಸಾಧ್ಯವೇ? ನನ್ನ ಕಣ್ಣೀರು ಒರೆಸುತ್ತಾ "ನೀ ಹಿಂಗೆ ಕಣ್ಣೀರು ಹಾಕಿಕೊಂಡು ನಾವಿಬ್ರು ಹಿಂಗೆ ಮಾತನಾಡದೆ ಮನೆಯನ್ನು ಸ್ಮಶಾನವನ್ನಾಗಿಸೋದು ಸರಿಯಾ ಕಂದ. ಇಲ್ಲ. ಇಬ್ರೂ ಕೂತು ಮಾತನಾಡಿ ಪರಿಹರಿಸಿಕೊಳ್ಳುವ ಅಂತ ಬಂದೆ". ಅಪ್ಪನೂ ಗದ್ಗದಿತರಾಗಿದ್ದರು. 

'ನಾ ತಪ್ಪು ಮಾಡಿದ್ನಾ ಅಪ್ಪ' 

“ತಪ್ಪೂಂತ ಹೇಳಲಾರೆ ಕಂದ. ಸರಿ ಅಂತಲೂ ಹೇಳಲಾರೆ. ನೀನೇ ನೋಡಿದ್ಯಲ್ಲ ಏನೇನು ಆಯ್ತು ಅಂತ" 

'ಮ್. ಅವರು ಬಂದು ಹೋದ ಮೇಲೆ ನನಗೂ ಏನು ಮಾಡಬೇಕು ಅಂತ ತಿಳಿಯುತ್ತಿಲ್ಲ. ನಿಮ್ಮ ಜೊತೆ ಮಾತನಾಡಬೇಕು ಅಂತ ಅಷ್ಟು ದಿನದಿಂದಲೂ ಅಂದುಕೊಳ್ಳುತ್ತಿದ್ದೆ. ಆಗುತ್ತಿರಲಿಲ್ಲ. ಏನ್ ಮಾಡ್ಲಿ ನೀವೇ ಹೇಳಿ. ನನ್ನ ಪರಶುವಿನ ಪ್ರೀತಿಗೆ ಆರು ವರ್ಷದ ಆಯಸ್ಸು ಅನ್ನೋದನ್ನು ಮರೆಯದೇ ಒಂದು ನಿರ್ಧಾರ ನೀವೇ ಹೇಳಿ' 

“ಮೊದಮೊದಲು ನನಗಂತೂ ಈ ಸಂಬಂಧ ಪೂರ್ತಿ ಬೇಡವೇ ಬೇಡ ಅಂತಿತ್ತು. ಈಗಲೂ ನನ್ನ ಮನಸ್ಸಿಗೆ ಹಾಗೇ ಇದೆ. ಬೇಸರ ಮಾಡಬೇಡ. ಯಾಕೋ ಆ ಹುಡುಗ ಕೂಡ ನನಗಿಷ್ಟವಾಗಲಿಲ್ಲ. ಕೆಲಸ ಇಲ್ಲ, ಡಿಗ್ರಿ ಅಷ್ಟೇ ಅನ್ನೋದೆಲ್ಲ ನೆಪವಿರಬಹುದಾದರೂ ಅದೇನೋ ಗಟ್ ಫೀಲೀಂಗ್ ಅಂತಾರಲ್ಲ ಆ ಲೆಕ್ಕದಲ್ಲಿ ನನಗವನು ಇಷ್ಟವಾಗಲಿಲ್ಲ. ಅವನನ್ನು ಮದುವೆಯಾದರೆ ನೀ ಖುಷಿಯಾಗಂತೂ ಇರೋದಿಲ್ಲ ಅಂತನ್ನಿಸುತ್ತೆ. ಅದ್ ಇರಲಿ ಬಿಡು. ಈಗೇನು ಎರಡೂ ಮನೆಯಲ್ಲಿ ಒಪ್ಪದೇ ಹೋದರೆ ಇಬ್ಬರೂ ಓಡಿ ಹೋಗಿ ಮದುವೆಯಾಗೋ ಯೋಚನೆಯೇನಾದರೂ ಇದೆಯಾ?” 

ಅವನಿಗಿದೆ, ನನಗಿಲ್ಲ ಎನ್ನಲೊರಟ ನಾಲಿಗೆ 'ಇಲ್ಲ' ಅಂದಷ್ಟೇ ಉದ್ಗರಿಸಿತು. 

“ಒಳ್ಳೇದು. ನನಗಂತೂ ಸುತಾರಾಂ ಈ ಮದುವೆ ಇಷ್ಟವಿಲ್ಲ. ಅವರ ಮನೆಯವರು ಒಪ್ಪಿ ಬಂದು ಮದುವೆ ಮಾಡಿಕೊಡಿ ಅಂತ ಕೇಳಿದರೆ ನನಗಿಷ್ಟವಿಲ್ಲದಿದ್ದರೂ ಮದುವೆ ಮಾಡಿಕೊಡುತ್ತೀನಿ. ಅವರ ಮನೆಯವರು, ಮನೆಯವರು ಅಂದರೆ ಇನ್ಯಾರು? ಜಾತಿ ನೆಪದಿಂದ ಅವರಮ್ಮ ಒಪ್ಪದೆ ಹೋದರೆ, ನಾ ತೋರಿಸಿದ ಹುಡುಗನನ್ನು ನೀ ಮದುವೆಯಾಗಬೇಕು. ಆರು ತಿಂಗಳಿಲ್ಲದಿದ್ದರೆ ಒಂದು ವರ್ಷವೇ ಆಗಲಿ ನನಗೇನೂ ಬೇಸರವಿಲ್ಲ. ಇದರ ಮಧ್ಯೆ ನೀವಿಬ್ಬರು ಓಡಿ ಹೋಗಿ ಮದುವೆಯಾದರೆ ಅದು ನಿಮ್ಮಿಬ್ಬರ ಹಣೆಬರಹ ಅಷ್ಟೇ ಅಂತ ಸುಮ್ಮನಾಗ್ತೀನಿ" ಅಪ್ಪ ಎಲ್ಲಾ ಆಯ್ಕೆಗಳನ್ನೂ ಮುಕ್ತವಾಗಿಟ್ಟಿದ್ದರು. ಅವರು ಕೊಟ್ಟ ಎರಡನೆಯ ಮೂರನೆಯ ಆಯ್ಕೆ ನನ್ನ ತಲೆಗೆ ಹೋಗಲೇ ಇಲ್ಲ ಆಗ. ಅವರಮ್ಮನನ್ನು ಹೇಗೋ ಒಪ್ಪಿಸಿಬಿಟ್ಟರೆ ಆಯ್ತಲ್ಲ ಮತ್ತಿನ್ನೇನು ಸಮಸ್ಯೆ ಇರಲಾರದು ಎಂದಷ್ಟೇ ಆಗ ಹೊಳೆದದ್ದು. ಆ ಕಾರಣಕ್ಕೇ ಅಪ್ಪನ ಮೇಲೆ ಪ್ರೀತಿ ಉಕ್ಕಿ ತಿಂಗಳುಗಳಿಂದ ಇದ್ದ ಬೇಸರ ಕೋಪ ತಾಪವೆಲ್ಲ ಕರಗಿಹೋಗಿದ್ದು. ಈಗ ನಿಧಾನಕ್ಕೆ ಯೋಚಿಸಿದಾಗ ತಿಳೀತದೆ, ಅಪ್ಪನಿಗೆ ಪುರುಷೋತ್ತಮನ ಅಮ್ಮ ಯಾವ ಕಾರಣಕ್ಕೂ ಈ ಮದುವೆಗೆ ಒಪ್ಪುವುದಿಲ್ಲ ಎಂದು ತಿಳಿದಿತ್ತು, ಹಾಗಾಗೇ ಆ ಮೊದಲ ಆಯ್ಕೆಯನ್ನು ಕೊಟ್ಟಿದ್ದರು ಎಂದು. ಎಷ್ಟೇ ಆಗಲಿ ಜಾತಿ ಸಂಬಂಧಿತ ತಾರತಮ್ಯವನ್ನು ನನಗಿಂತ ಚೆನ್ನಾಗಿ ಅನುಭವಿಸಿದ್ದವರಲ್ಲವೇ. ಮೊದಲ ಭೇಟಿಯ ವರ್ತನೆಯಲ್ಲೇ ಯಾರ್ಯಾರು ಹೆಂಗೆಂಗೆ ಅಂತ ಅರಿತುಕೊಂಡುಬಿಡುತ್ತಿದ್ದರೇನೋ.

ಮುಂದಿನ ಭಾಗವನ್ನು ಓದಲು ಇಲ್ಲಿ ಕ್ಲಿಕ್ಕಿಸಿ. 

No comments:

Post a Comment