Aug 18, 2019

ಒಂದು ಬೊಗಸೆ ಪ್ರೀತಿ - 27

ಡಾ. ಅಶೋಕ್.‌ ಕೆ. ಆರ್.‌
ಬೆಳಿಗ್ಗೆ ಮೂರರ ಸಮಯಕ್ಕೆ ಒಂದು ಆಕ್ಸಿಡೆಂಟ್ ಕೇಸ್ ಬಂದಿತ್ತು. ಇಷ್ಟೊತ್ತಿಗೆಲ್ಲ ಈ ಆರ್.ಬಿ.ಐ ಕ್ಯಾಂಪಸ್ಸಿನಲ್ಲಿ ಓಡಾಡುವವರ ಸಂಖೈ ಕಡಿಮೆ, ಕಡಿಮೆಯೇನು ಇಲ್ಲವೇ ಇಲ್ಲ ಻ಅಂತ ಹೇಳಬಹುದು. ನಾನಂತೂ ಇದುವರೆಗೂ ಇಲ್ಲಿ ಆಕ್ಸಿಡೆಂಟ್ ಕೇಸನ್ನು ನೋಡಿರಲಿಲ್ಲ, ಉಪಚರಿಸಿರಲಿಲ್ಲ. ಯಾರೋ ಟ್ರಿಪ್ಪಿಗೆ ಹೋಗಿ ವಾಪಸ್ಸಾಗ್ತಿದ್ರಂತೆ ನಿದ್ರೆಯ ಮತ್ತಲ್ಲಿದ್ರೋ ಏನೋ ಗಾಡಿ ಹಿಡಿತ ತಪ್ಪಿ ರಸ್ತೆ ಬದಿಯಿದ್ದ ಮರಕ್ಕೆ ಗುದ್ದಿಬಿಟ್ಟಿದ್ದಾರೆ. ಪುಣ್ಯಕ್ಕೆ ಯಾರಿಗೂ ಹೆಚ್ಚಿನ ಗಾಯಗಳಾಗಿಲ್ಲ. ಹಿಂದೆ ಕುಳಿತಿದ್ದ ತಾಯಿ ಮಗುವಿಗೆ ಚೂರೂ ಪೆಟ್ಟಾಗಿರಲಿಲ್ಲ. ಗಾಡಿ ಓಡಿಸುತ್ತಿದ್ದವರಿಗೆ ಮಾತ್ರ ಅಲ್ಲಲ್ಲಿ ಚರ್ಮದೊಳಗೆ ರಕ್ತ ಹೆಪ್ಪುಗಟ್ಟುವಂತೆ ಗಾಯಗಳಾಗಿವೆ. ಸಾಮಾನ್ಯ ಇಂತಹ ಸಮಯದಲ್ಲಿ ತಲೆ ಸ್ಟೀರಿಂಗ್ ವೀಲಿಗೆ ತಗುಲಿ ಪೆಟ್ಟಾಗಿರ್ತದೆ, ಗಾಡಿ ಓಡಿಸುತ್ತಿದ್ದವರು ಸೀಟ್ ಬೆಲ್ಟ್ ಹಾಕಿಕೊಂಡಿದ್ದರಿಂದಾಗಿ ಅಂತದ್ದೇನೂ ಆಗಿರಲಿಲ್ಲ. ಒಂದಷ್ಟು ನೋವಿನ ಮಾತ್ರೆ ಕೊಟ್ಟು ಕಳುಹಿಸಿ ರೂಮಿಗೆ ವಾಪಸ್ಸಾದೆ. ಇವನಿಗೊಂದು ಗುಡ್ ಮಾರ್ನಿಂಗ್ ಹೇಳೋಣ ಅಂತನ್ನಿಸಿತು. 'ಸುಸ್ತು ಕಡಿಮೆಯಾಯಿತಾ? ಗುಡ್ ಮಾರ್ನಿಂಗ್' ಅಂತೊಂದು ಮೆಸೇಜು ಕಳುಹಿಸಿದೆ. ಮೆಸೇಜು ತಲುಪಿತ್ತೋ ಇಲ್ಲವೋ "ಗುಡ್ ಮಾರ್ನಿಂಗ್. ಸುಸ್ತ್ಯಾಕೆ?” ಅಂತ ಉತ್ತರ ರೂಪದ ಪ್ರಶ್ನೆ ಬಂತು. 

'ಓಯ್! ಇಷ್ಟು ಬೇಗ ಎದ್ದು ಬಿಟ್ಟಿದ್ದಿ. ಓದ್ಕೋತಿದ್ದ' 

“ಇಲ್ಲ. ಬೇಗ ಎದ್ದಿರೋದಲ್ಲ. ಇನ್ನೂ ನಿದ್ರೇನೇ ಮಾಡಿಲ್ಲ"

ಒಂದೊಂದೇ ಎಪಿಸೋಡು ಹುಡುಕುಡುಕಿ ಓದೋಕೆ ಬೇಸರವಾ? ಪೂರ್ತಿ ಇ - ಪುಸ್ತಕ ತೆಗೆದುಕೊಳ್ಳಲು ಇಲ್ಲಿ ಕ್ಲಿಕ್ಕಿಸಿ.

'ಯಾಕೋ. ಓದ್ಕೋತಿದ್ದ' 

“ಇಲ್ಲ. ಒಂದಾದ ಮೇಲೊಂದು ಸಿಗರೇಟು ಸೇದ್ತಾ ಏನೋ ಬರೀತಾ ಕೂತಿದ್ದೆ" 

'ಏನ್ ಬರೀತಿದ್ದಪ್ಪ. ನಂಗೂ ಕಳಿಸು. ಓದ್ತೀನಿ' 

“ಮೆಸೇಜಲ್ ಕಳ್ಸೋಕೆಲ್ಲ ಆಗಲ್ಲ. ಎರಡ್ ಪೇಜಷ್ಟಿದೆ" 

'ಸರಿ ಫೋನ್ ಮಾಡ್ತೀನಿ ಓದಿ ಹೇಳು' 

“ಬೇಡ್ವೇ. ನೀ ಸುಮ್ನೆ ಬೇಜಾರಾಗ್ತಿ" 

ಸಿಟ್ಟು ಬಂತು. ಫೋನ್ ಮಾಡಿದೆ. 

'ಹಲೋ! ನಾನ್ ಬೇಜಾರಾಗ್ತೀನಿ ಅಂತ ನೀ ಹೇಳಬಾರದಾ? ಹಲೋ ಸಾರ್ ನಾವಿಬ್ರೂ ಸೋಲ್ ಮೇಟ್ಸು. ಹಿಂಗೆಲ್ಲ ಏನೂ ಮುಚ್ಚುಮರೆ ಮಾಡಂಗಿಲ್ಲ ನೆನಪಿಟ್ಕೋ....' 

“ಹ ಹ ಸರಿ ಮೇಡಂ. ಆದ್ರೂ ಇದೆಲ್ಲ ಸುಮ್ನೆ ನನ್ನ ಮನದ ಯೋಚನೆಗಳು. ಅದನ್ನೆಲ್ಲ ಹೇಳಿ ನಿಂಗ್ಯಾಕೆ ಬೇಸರ ಮಾಡಿಸ್ಬೇಕು ಅಂತ" 

'ಬೇಜಾರಾದ್ರೂ ಪರವಾಗಿಲ್ಲ ಹೇಳು ಪುಟ್ಟ' 

“ಮ್ ಸರಿ. ಕೇಳಿಸ್ಕೋ. ಆಮೇಲೆ ಬಯ್ಯೋದೆಲ್ಲ ಮಾಡ್ಬಾರ್ದು" 

'ನನ್ ಚಿನ್ನುಗೆ ಬಯ್ತೀನೇನೋ. ಓದು ಮೊದಲು' 

“ಉಹ್ಞೂ. ಅವಳೆಡೆಗೆ ನನ್ನಲ್ಲಿರುವ ಪ್ರೀತಿ, ಪ್ರೇಮದ ಭಾವನೆಗಳನ್ನು ಸುಳ್ಳೆಂದು ಹೇಳಲಾರೆ, ತಿರಸ್ಕರಿಸಲಾರೆ, ಪದಗಳನ್ನು ಸುಂದರವಾಗಿ ಜೋಡಿಸಿ – ಪೋಣಿಸಿ ಭಾವನೆಗಳನ್ನು ತೇಲಿಬಿಡಲಾರೆ. ಹೌದು, ಅವಳೆಂದರೆ ನನಗಿಷ್ಟ, ಅವಳ ಮಾತು, ನಗು, ವ್ಯಕ್ತಿತ್ವ, ಬುದ್ಧಿಮತ್ತೆ, ಯೋಚನಾಶಕ್ತಿ, ಆತ್ಮ, ದೇಹ ಎಲ್ಲವೂ ನನಗಿಷ್ಟ. ಆದರೆ ನಮ್ಮಿಬ್ಬರ ಮನಸ್ಸಿನ ಹಸಿವು ಮತ್ತೊಬ್ಬರಿಗೆ ನೋವುಂಟುಮಾಡುವ ಹಸಿವಾಗಿಬಿಟ್ಟರೆ ನನ್ನ, ಅವಳ, ಅವನ ಜೀವನದ ನೆಮ್ಮದಿ ಹಾಳಾಗುವುದು. ಒಪ್ತೀನಿ, ಅವಳನ್ನು ಸಂಪೂರ್ಣವಾಗಿ ಮರೆಯುವುದು ಅಸಾಧ್ಯ, ಮನಸ್ಸಿನ ಮೂಲೆ ಮೂಲೆಯಲ್ಲೂ ವ್ಯಾಪಿಸಿರುವ, ಆಳಕ್ಕೆ ಇಳಿದಿರುವ ಅವಳನ್ನು ಹೊರದಬ್ಬುವುದು ಕಷ್ಟದ ಕೆಲಸ ಮಾತ್ರವಲ್ಲ ಅಸಾಧ್ಯವೂ ಹೌದು. ಆದರದು ಸಾಧುವಾದ, ಅನಿವಾರ್ಯವಾದ ಕೆಲಸ. ಅವನಿಗೋಸ್ಕರ ನನಗೆ ಮತ್ತು ಅವಳಿಗೆ ನೋವಾಗುವುದಾದರೆ ಆಗಲಿ. ನಮ್ಮಿಬ್ಬರಿಗೂ ಆ ನೋವನ್ನು ತಡೆದುಕೊಳ್ಳುವ ಶಕ್ತಿಯಿದೆ ಎಂಬುದು ಉತ್ಪ್ರೇಕ್ಷೆಯ ಮಾತಾಗದಿರಲಿ ಎನ್ನುವುದೇ ನನ್ನ ಆಸೆ ಆಶಯ. 

ಇಷ್ಟು ದಿನದ ಗೊಂದಲಗಳಿಗೆ ತೆರೆಬೀಳಿಸಲು ಇವತ್ತಿನಿಂದಾದರೂ ಕಾರ್ಯ ಶುರುವಾಗಲಿ. ಮನಸ್ಸಿನ ಹಸಿವು ನೀಗಿಸಿದ ಈ ನಾಲ್ಕು ತಿಂಗಳು ನಿಜಕ್ಕೂ ಮರೆಯಲಾಗದಂಥಹುದು. ಮನಸ್ಸಿನ ಹಸಿವನ್ನು ಮೀರಿ ನಿಲ್ಲುವುದು ಮೇಲ್ನೋಟಕ್ಕೆ ತ್ರಾಸದಾಯಕವೆಂಬ ಭಾವನೆ ಇದೆಯಾದರೂ ಜೀವನದ ವ್ಯಾಪ್ತಿ ಈ ಮನಸ್ಸಿನ ಹಸಿವು, ಪ್ರೀತಿ, ಪ್ರೇಮದಿಂದಾಚೆಗೂ ವ್ಯಾಪಿಸಿದೆ ಎಂಬ ಸತ್ಯ (ಕೊನೇಪಕ್ಷ ನನಗೆ ಅರಿವಾಗಿರುವ ಸತ್ಯ) ನನ್ನನ್ನು ಈ ಒಂದು ಹೆಸರಿಡದ, ಹೆಸರಿಡಲಾಗದ ನಿಷ್ಕಾಮ, ಶುದ್ಧ ಸಂಬಂಧದಿಂದ ಹೊರಬರಲು ಸಹಕರಿಸುತ್ತದೆಂಬ ನಂಬಿಕೆಯಿದೆ. Soulmate ಎಂಬ ಈ ಆತ್ಮದ ಗೆಳೆತನದಿಂದ ಹೊರಬರಲು ನನಗೆ ಅತ್ಯಗತ್ಯವಾಗಿ ಬೇಕಾಗಿರುವ ಶಕ್ತಿ ನನ್ನ ಮನಸ್ಸಿನಾಳದಿಂದ ಉದ್ಭವಿಸಿ ಆತ್ಮ ದೇಹ ಮನಸ್ಸಿನಲ್ಲೆಲ್ಲ ಸಂಚರಿಸಲೆಂದು ಆಶಿಸುತ್ತೇನೆ. 

ಒಂದಷ್ಟು ದಿನ ಹಿಂಸೆಯಾಗಬಹುದು, ಪರೀಕ್ಷೆಗೆ ತಯಾರಾಗುವ ನೆಪದಲ್ಲಿ ಸದ್ಯಕ್ಕೆ ಈ ಹಿಂಸೆಯನ್ನು ಬದಿಗೆ ಸರಿಸಬಹುದು. ಪರೀಕ್ಷೆಯ ನಂತರ ಮತ್ತೆ ದುತ್ತನೆ ಎದುರಾಗುವ ಮನದ ಆ ಹಿಂಸ್ರಪಶುವನ್ನು ಸೋಲಿಸಲು ನಾನು ಕನಸಿರುವ ಕೆಲಸಗಳಲ್ಲಿ, ಗುರಿಗಳತ್ತ ಸಾಗುವ ಹಾದಿಯ ಏಳುಬೀಳುಗಳಲ್ಲಿ ಪ್ರಯತ್ನಿಸುವೆ. ಸಾಧ್ಯ ಅಸಾಧ್ಯಗಳು ನಮ್ಮ ಮನಸ್ಸಿನಲ್ಲಿದೆ. ಆಸೆಯನ್ನು ಸೋಲಿಸಿದರಷ್ಟೇ ಮುಕ್ತಿ ದಕ್ಕಲಾರದು. ನಿಜವಾಗಿಯೂ ನಾವು ಮುಕ್ತರಾಗಬೇಕಾದರೆ ಆತ್ಮವನ್ನೇ ಸಾಯಿಸಬೇಕೇನೋ. ಎಲ್ಲವನ್ನೂ ತೊರೆದು – ಮೀರಿ ನಿಲ್ಲುವುದೇ ಮುಕ್ತತನವಾದಲ್ಲಿ ಆತ್ಮ ಕೂಡ ಆ ಎಲ್ಲದರ ಒಂದು ಭಾಗವೇ ಇರಬೇಕೆನ್ನಿಸುತ್ತದೆ. 

ಇಲ್ಲಿ ಈ ಹಿಂಸೆ, ಪ್ರಶ್ನೆ ಕೇವಲ ನನಗೆ ಸೀಮಿತವಾಗಿರುವುದಲ್ಲ. ಅವಳಿಗೂ ಸಂಬಂಧಿಸಿದಂಥವು. ನನ್ನಲ್ಲಿನ ಗೊಂದಲಗಳು, ನೈತಿಕತೆಯ ಪ್ರಶ್ನೆ (ಆ ಪ್ರಶ್ನೆಗೆ ಉತ್ತರ ಕಂಡುಕೊಳ್ಳಲು ನಾನು ಸೋತಿರುವೆನೆಂಬುದು ನಿಜ) ಅವಳಿಗೆ ಯಾಕೆ ಕಾಡುತ್ತಿಲ್ಲ? ಪ್ರೀತಿಯ ಅರ್ಥ ನನಗೆ ತಿಳಿದಿಲ್ಲವೇ? ಅಥವಾ ಪ್ರೀತಿ, ಪ್ರೇಮ ಮತ್ತು ಸಮಾಜವನ್ನು ಅವಳ ಹಾಗೆ ಬೇರೆಬೇರೆಯಾಗಿ ನೋಡುವುದು ನನಗೆ ಸಾಧ್ಯವಾಗುತ್ತಿಲ್ಲವಾ? ಪ್ರಶ್ನೆಗಳಿಗೇನು ಸಾವಿರವಿದೆ. ಕೆಲವೊಂದು ಪ್ರಶ್ನೆಗೆ ನಮ್ಮ ಸಮಾಧಾನಕ್ಕೆ ತಕ್ಕಹಾಗೆ ಉತ್ತರ ಹುಡುಕುವುದೂ ಸುಲಭ. ಪ್ರಶ್ನೆಗಳ ನಡುವೆಯೇ ಸಿಕ್ಕಿಹಾಕಿಕೊಂಡು ಉತ್ತರ ಹುಡುಕುವ ಹಂಬಲವ್ಯಾಕೆ? ಆ ಪ್ರಶ್ನೆಗಳು ಹುಟ್ಟಿದ ಸಂದರ್ಭ ಸನ್ನಿವೇಶಗಳ ಯಾವ ದಡದಲ್ಲಿ ನಾವು ನಿಂತಿದ್ದೀವೆನ್ನುವುದರ ಮೇಲೆ ನಮ್ಮ ಉತ್ತರಗಳೂ ಹುಟ್ಟುತ್ತವೆ. ಒಂದು ದಡದಲ್ಲಿ ನಿಂತು ಇಷ್ಟು ದಿನ ಚಿಂತಿಸಿದ್ದಾಯಿತು. ಇನ್ನಿದು ಹೊರಡುವ ಸಮಯ. ಮತ್ತೊಂದು ದಡಕ್ಕೂ ನಾನೀಗ ನಿಂತಿರುವ ದಡಕ್ಕೂ ನಡುವೆ ಅಗಾಧ ಶಕ್ತಿಯ ಹರಿವಿರುವ ಗೊಂದಲಗಳ, ಯೋಚನೆ ಚಿಂತನೆಗಳ ನದಿಯಿದೆ. ಅದನ್ನು ಈಸಿ ದಾಟಬೇಕು. ಕೊಚ್ಚಿ ಹೋಗಬಹುದು, ಹುಚ್ಚು ರಭಸದ ನದಿ ಮತ್ತೆ ಹಳೆಯ ದಡಕ್ಕೇ ನನ್ನನ್ನು ಎಳೆತಂದು ಬಿಸಾಡಬಹುದು. ಮರೆತು ಮತ್ತೊಂದು ದಡಕ್ಕೂ ಎಸೆಯಬಹುದು. ಆ ನದಿಯ ಮೇಲಿನ ನಂಬುಗೆಯನ್ನು ಈ ದಡದಲ್ಲೇ ತೊರೆದು ಸ್ವಪ್ರಯತ್ನದಿಂದ ಮತ್ತೊಂದು ದಡ ಸೇರುವ ಪ್ರಯತ್ನ ಈಗಿನಿಂದಲೇ ಶುರುವಾಗಲಿ. ಆ ದಡ ತಲುಪಿ ಹೊಸ ಉತ್ತರಗಳು ಚಿಂತನೆಯ ಮೂಸೆಯಲ್ಲಿ ಅರಳಿದರೆ ನಾನು ಮುಕ್ತನಾಗಬಹುದು, ಮುಕ್ತನಾಗಬಲ್ಲೆ ಎಂಬ ಭರವಸೆಯಿದೆ. ತಲುಪಲು ವಿಫಲನಾದರೆ ಪ್ರಯತ್ನಪಟ್ಟ ನೆಮ್ಮದಿಯದರೂ ಉಳಿದೀತು” ಸಾಗರ್ ಓದಿ ಮುಗಿಸಿದ. ಆತನ ಧ್ವನಿಯಲ್ಲಿದ್ದ ಉದ್ವಿಗ್ನತೆ ಫೋನಿನಲ್ಲೂ ಸ್ಪಷ್ಟವಾಗಿ ಕೇಳುತ್ತಿತ್ತು. ಏನು ಪ್ರತಿಕ್ರಿಯಿಸಬೇಕೆಂದು ತಿಳಿಯಲಿಲ್ಲ. ಮೌನವಾಗಿದ್ದೆ. 

“ಏನಾದ್ರೂ ಹೇಳೇ ಧರು” ಸಾಗರ್ ಗೋಗರೆದ. 

“ಏನ್ ಹೇಳ್ಲೋ?” ಕಣ್ಣೀರಾಗಿದ್ದೆ. “ಒಟ್ನಲ್ಲಿ ಯಾರಿಗೂ ನೆಮ್ಮದಿ ಕೊಡೋ ಜನ್ಮವಾಗಲಿಲ್ಲ ನಂದು. ನಾಳೆ ಮಾತಾಡ್ತೀನಿ ಕಣೋ. ಸುಸ್ತಾಗಿ ಹೋಗಿದೆ, ದೇಹಕ್ಕೂ ಮನಸ್ಸಿಗೂ” ಕಾಲ್ ಕಟ್ ಮಾಡಿದೆ. ‘ಡಾಕ್ಟರ್ ಕೇಸ್ ಬಂದಿದೆ’ ರಾತ್ರಿ ಪಾಳಿಯಲ್ಲಿದ್ದ ನರ್ಸ್ ವಿಮಲಾ ಬಾಗಿಲು ಬಡಿದಳು. ‘ಹ್ಞಾಂ. ಬಂದೆ’ ಎಂದ್ಹೇಳಿ ಮುಖಕ್ಕೊಂದಷ್ಟು ನೀರು ಚಿಮುಕಿಸಿಕೊಂಡು ಕನ್ನಡಿ ನೋಡಿದೆ. ಧರಣಿಯ ಎಂದಿನ ನಗು ಮಾಯವಾಗಿತ್ತು. ಅರೆಕ್ಷಣದಲ್ಲಿ ಎಲ್ಲರೂ ಹೊಗಳುವ ಮಾಂತ್ರಿಕ ನಗುವನ್ನು ಮರಳಿ ಗಳಿಸಿ ರೋಗಿಯನ್ನು ಪರೀಕ್ಷಿಸಲು ಹೊರನಡೆದೆ.

ಮುಂದಿನ ಭಾಗವನ್ನು ಓದಲು ಇಲ್ಲಿ ಕ್ಲಿಕ್ಕಿಸಿ. 

No comments:

Post a Comment