Aug 25, 2019

ಒಂದು ಬೊಗಸೆ ಪ್ರೀತಿ - 28

ಡಾ. ಅಶೋಕ್.‌ ಕೆ. ಆರ್.‌
ಬಹಳ ದಿನಗಳ ಮೇಲೆ ಇವತ್ತು ರಜೆಯಿತ್ತು. ಮಧ್ಯಾಹ್ನ ಊಟದ ನಂತರ ನಿದ್ರೆ ಹೋಗಿದ್ದವಳಿಗೆ ಎಚ್ಚರವಾಗಿದ್ದು ನಾಲ್ಕರ ಸುಮಾರಿಗೆ ಕಾಲಿಂಗ್ ಬೆಲ್ ಬಹಳಷ್ಟು ಹೊತ್ತು ಬಡಿದುಕೊಂಡಾಗ. ರಾಜಿ ಕೂಡ ಇಷ್ಟು ಬೇಗ ಬರೋರಲ್ಲ. ಅವರೇನಿದ್ರೂ ಆರೂ ಆರೂವರೆಯ ನಂತರವೇ ಬರೋದು. ಇನ್ನು ಈ ತಿಂಗಳ ಕೇಬಲ್ ಬಿಲ್ಲು, ಪೇಪರ್ ಬಿಲ್ಲೆಲ್ಲ ಕೊಟ್ಟಾಗಿದೆ. ಅವರೂ ಇರಲಿಕ್ಕಿಲ್ಲ. ಇನ್ಯಾರಿರಬಹುದು ಇಷ್ಟೊತ್ತಿನಲ್ಲಿ ಅಂತ ಯೋಚಿಸುತ್ತಾ ಕೆದರಿಹೋಗಿದ್ದ ಕೂದಲನ್ನು ಒಟ್ಟು ಮಾಡಿ ಕ್ಲಿಪ್ ಹಾಕಿಕೊಳ್ಳುತ್ತಾ ಹೊರಬಂದು ಬಾಗಿಲು ತೆರೆದೆ. ರಾಜಿಯ ಅಮ್ಮ ಅಕ್ಕ ಬಾಗಿಲ ಬಳಿ ನಿಂತಿದ್ದರು. ಇದೇ ಮೊದಲ ಬಾರಿಗೆ ಇವರು ಈ ಮನೆಯ ಕಡೆಗೆ ಬಂದಿರೋದು. ಇದ್ದಕ್ಕಿದ್ದಂತೆ ಯಾವ ಮುನ್ಸೂಚನೆಯೂ ಇಲ್ಲದಂತೆ ಮನೆಗೆ ಬಂದವರನ್ನು ಕಂಡು ದಿಗಿಲಾಯಿತು. ದಿಗಿಲನ್ನು ಆದಷ್ಟೂ ಮರೆಮಾಚಲೆತ್ನಿಸುತ್ತಾ 'ಬನ್ನಿ ಅತ್ತೆ ಬನ್ನಿ ಅಕ್ಕ' ಎಂದಕ್ಕರೆಯ ಮಾತುಗಳನ್ನಾಡುತ್ತಾ ಒಳ ಕರೆದೆ. ಇಬ್ಬರೂ ಕಷ್ಟದಿಂದ ಒಂದಷ್ಟು ಮುಗುಳ್ನಕ್ಕು ಒಳಹೊಕ್ಕರು. ಮನೆಯ ಕುಬ್ಜ ಗಾತ್ರವನ್ನು ಪರಿವೀಕ್ಷಿಸುತ್ತಾ ವ್ಯಂಗ್ಯದ ನಗೆ ನಕ್ಕು ತಮ್ಮ ಮನದ ಕುಬ್ಜತನವನ್ನು ಜಾಹೀರುಗೊಳಿಸಿದರು. ಅಡುಗೆ ಮನೆ ಸೇರಿದೆ. ರಾಜಿಯ ಮನೆಯಲ್ಯಾರೂ ಟೀ ಕುಡಿಯುವುದಿಲ್ಲ, ಕಾಫಿಯಷ್ಟೇ ಅವರಿಗೆ ಪ್ರಿಯ. ಮೂರು ಲೋಟ ಕಾಫಿಗಿಟ್ಟೆ. ಹೊರಗಡೆ ಅಮ್ಮ ಮಗಳಿಬ್ಬರು ಗುಸು ಗುಸು ಮಾತನಾಡುತ್ತಿದ್ದಿದ್ದು ಕೇಳುತ್ತಿತ್ತು. ಏನ್ ವಿಷಯವಿರಬಹುದು? ಇಬ್ಬರೂ ಹೀಗೆ ಇದ್ದಕ್ಕಿದ್ದಂತೆ ಪ್ರತ್ಯಕ್ಷರಾಗಿಬಿಟ್ಟಿದ್ದಾರಲ್ಲ? ಎಂದು ಪ್ರಶ್ನಿಸಿಕೊಳ್ಳುತ್ತಲೇ ಕಾಫಿಯೊಡನೆ ಬಂದು ಕುಳಿತೆ. ಕಾಫಿ ಹೀರುತ್ತಾ ಅತ್ತೆ "ಮತ್ತೆ ಎಲ್ಲಾ ಆರಾಮ....ಡ್ಯೂಟಿ ಇಲ್ವಾ ನಿಂಗಿವತ್ತು" 

'ಇಲ್ಲ ಇವತ್ತು ನನಗೆ ವೀಕ್ಲಿ ಆಫ್ ಇತ್ತು ಅತ್ತೆ. ನೀವೆಲ್ಲ ಆರಾಮ. ಮಾವ ಹುಷಾರಾಗಿದ್ದಾರ' 

“ಮ್. ಏನೋ ಇಲ್ಲಿಗೆ ಬಂದಾಗ್ಲಾದ್ರೂ ವಿಚಾರಿಸಿಕೊಳ್ತೀಯಲ್ಲ ಸಂತೋಷವಮ್ಮ" ಅವರ ವ್ಯಂಗ್ಯಕ್ಕೆ ನನ್ನ ಮೌನವೇ ಉತ್ತರವಾಗಿತ್ತು. 

“ರಾಜೀವ?” ಅಕ್ಕ ಕೇಳಿದರು. 

'ಅವರು ಬರೋದು ಆರೂವರೆ ಏಳಾಗುತ್ತೆ'

ಒಂದೊಂದೇ ಎಪಿಸೋಡು ಹುಡುಕುಡುಕಿ ಓದೋಕೆ ಬೇಸರವಾ? ಪೂರ್ತಿ ಇ - ಪುಸ್ತಕ ತೆಗೆದುಕೊಳ್ಳಲು ಇಲ್ಲಿ ಕ್ಲಿಕ್ಕಿಸಿ.
ಈ ಪುಟ್ಟ ಮನೆಯಲ್ಲಿ ಸಂಸಾರ ನಡೆಸೋಕೆ ಎಷ್ಟು ಕಷ್ಟಪಡ್ತಾನವನು" ಅಕ್ಕನ ವ್ಯಂಗ್ಯಕ್ಕೂ ನನ್ನ ಮೌನವೇ ಉತ್ತರವಾಗಿತ್ತು. 

“ಮುಂದಿನ ತಿಂಗಳು ಬಂದ್ರೆ ನಿಮ್ಮ ಮದ್ವೆಯಾಗಿ ಮೂರು ವರ್ಷ ಆಗೋಯ್ತಲ್ವ?" ಅತ್ತೆಯ ಪ್ರಶ್ನೆ. 

'ಹು' 

“ಕಾಲ ಎಷ್ಟು ಬೇಗ ಓಡಿಹೋಗ್ತದಪ್ಪ...” 

'ಹೌದು' ಕಾಫಿ ಮುಗಿದಿತ್ತು. ನನ್ನೊಳಗಿನ ಮಾತುಗಳು ಸಹ. 

“ಮೂರ್ ವರ್ಷ ಆಯ್ತ ಬಂತು. ಎಲ್ಲಿ ನಿಮ್ಮಿಬ್ಬರ ಮಗುವಿನ ಸುದ್ದಿಯೇ ಇಲ್ಲವಲ್ಲ....” ಓಹೋ! ಮಗು ವಿಷಯ ಮಾತಾಡೋಕೆ ಬಂದಿರೋದಿವರು. ಮದುವೆಯಾಗಿ ವರ್ಷ ಕೂಡ ಕಳೆದಿರಲಿಲ್ಲ, ಆಗಲೇ ಮಗು ಎಲ್ಲಿ ಮಗು ಎಲ್ಲಿ ಅಂತ ಪೀಡಿಸುತ್ತಿದ್ದರು. ಆಗೆಲ್ಲ ಎಲ್ರೂ ಚೆನ್ನಾಗೇ ಇದ್ದೆವಲ್ಲ, ಅವರು ಪದೇ ಪದೇ ಕೇಳುತ್ತಿದ್ದಿದ್ದು ಪೀಡನೆ ಎಂದೇನೂ ಅನ್ನಿಸುತ್ತಿರಲಿಲ್ಲ. ಪಾಪ ಮೊಮ್ಮಕ್ಕಳನ್ನು ಕಾಣೊ ಆಸೆ ಅಂದಷ್ಟೇ ಅನ್ನಿಸುತ್ತಿತ್ತು. ಪ಻ದಗಳವವೇ ಇದ್ದರೂ ಸಂಬಂಧ ಸರಿಯಿಲ್ಲದ ದಿನಗಳಲ್ಲಿ ಪೀಡನೆಯಂತೆ ತೋರುತ್ತಿತ್ತು. 

'ಮ್. ಇನ್ನೂ ಆಗಿಲ್ಲ' 

“ಅದೇ ಯಾಕಾಗಿಲ್ಲ ಅಂತ" ಅಕ್ಕನ ದನಿ ಏರಿದ್ದ ಅನುಭವವಾಯಿತು. 

'ನಿಮಗೇ ಗೊತ್ತಲ್ಲ. ನಂಗ್ ಆಗಿನಿಂದಾನೂ ಪಿಸಿಒಡಿ ಇದೆ. ಅದಕ್ಕೇನೋ ಟ್ರೀಟ್ಮೆಂಟ್ ತೆಗೆದುಕೊಳ್ತಿದೀನಿ. ಈಗ ಮುಂಚಿಗಿಂತ ವಾಸಿ. ಪಿರೀಯಡ್ಸ್ ಯಾವಾಗ ಆಗ್ತದೆ ಅಂತ ಒಂದಷ್ಟಾದರೂ ಅಂದಾಜಿಸಬಹುದು. ತಲೆ ಕೆಡಿಸ್ಕೋಬೇಡಿ ಆಗ್ತದೆ ಅಂತ ಡಾಕ್ಟರ್ ಹೇಳಿದ್ದಾರೆ. ನೋಡ್ಬೇಕು ಯಾವಾಗ ಆಗ್ತದೆ ಅಂತ' ಸಮಾಧಾನದಿಂದಲೇ ಉತ್ತರಿಸಿದೆ, ತಲೆ ಸಿಡಿಯಲಾರಂಭಿಸಿತ್ತು. ಹೇಳಿದ್ದು ಪೂರ್ಣ ಸತ್ಯವಲ್ಲ ಅನ್ನೋ ವಾಸ್ತವದ ಅರಿವಿತ್ತು ನನಗೆ. 

“ಅದೆಲ್ಲಿಂದ ನಿನ್ನ ಇಷ್ಟಪಟ್ಟು ಕಟ್ಕೊಂಡ್ನೋ ನನ್ನ ಮಗ. ಒಂದು ಮಗು ಎತ್ ಕೊಡೋ ಯೋಗ್ಯತೆ ಕೂಡ ಇಲ್ಲದವಳನ್ನ ಕಟ್ಕೊಂಡ್ಬಿಟ್ಟ......” 

'ಮಗೂನ ನಾನೊಬ್ಳೇ ಎತ್ಕೊಡೋಕೆ ಆಗಲ್ಲ.....' ನಾಲಗೆಯ ತುದಿಗೆ ಬಂದಿದ್ದ ಮಾತುಗಳನ್ನು ಮತ್ತೆ ಗಂಟಲಿನೊಳಗಿಳಿಸಿ 'ಒಂದಷ್ಟು ಸಮಯ ಬೇಕನ್ನಿಸ್ತದೆ ಅಷ್ಟೇ ಅತ್ತೆ. ಆಗ್ತದೆ ಸುಮ್ನಿರಿ' ಎಂದು ನಗುತ್ತಲೇ ಹೇಳಿದೆ. 

“ಏನ್ ಆಗ್ತದೋ ಏನೋ.... ಎಂತೆಂಥ ಹೆಣ್ಣುಗಳು ಬಂದಿದ್ವು ನನ್ನ ತಮ್ಮನಿಗೆ. ಅವರನ್ನೆಲ್ಲಾ ಬಿಟ್ಟು ಕಂಡ್ ಕಂಡೋರ್ ಜೊತೆಯೆಲ್ಲ ಸುತ್ತಾಡ್ತಿದ್ದವಳನ್ನ ಬಯಸಿ ಬಯಸಿ ಮದುವೆಯಾಗಿ ಅನುಭವಿಸುವಂತಾಯ್ತು.....” 

'ಕಂಡ್ ಕಂಡೋರ್ ಜೊತೆಯೆಲ್ಲ ಸುತ್ತಾಡಿದ್ದನ್ನು ನೀವು ನೋಡಿದ್ರಾ? ಮಾತಲ್ ಹಿಡ್ತ ಇರಲಿ ಅಕ್ಕ. ನಿಮ್ ತಮ್ಮ ಮದುವೆಗೆ ಮುಂಚೆ ಹೇಗೆ ನನ್ನನ್ನು ಇಷ್ಟಪಟ್ಟಿದ್ರೋ ಅದೇ ತರ ನಾನೂ ಒಬ್ಬನನ್ನ ಇಷ್ಟಪಟ್ಟಿದ್ದೆ. ನಿಮ್ಮ ತಮ್ಮನಿಗೆ ಇಷ್ಟಪಟ್ಟವಳನ್ನೇ ಮದುವೆಯಾಗೋ ಅದೃಷ್ಟವಿತ್ತು ಅಷ್ಟೇ. ನಾನೇ ಮರೆತುಬಿಟ್ಟಿರೋ ನನ್ನ ಹಳೇ ಬಾಯ್ ಫ್ರೆಂಡ್ ಅನ್ನು ನೀವ್ಯಾಕೆ ಇನ್ನೂ ಮನಸ್ಸಲ್ಲಿಟ್ಟುಕೊಂಡಿದ್ದೀರಾ?' ಕೊಂಚ ಖಾರವಾಗೇ ಪ್ರತಿಕ್ರಿಯಿಸಿದೆ. ನನ್ನ ಪ್ರಶ್ನೆಗೆ ಅಕ್ಕನ ಬಳಿ ಉತ್ತರವಿರಲಿಲ್ಲ . 

“ಹೇ ನೀ ಸುಮ್ನಿರೆ" ಅತ್ತೆ ಅಕ್ಕನಿಗೆ ಗದರಿದಂತೆ ಮಾಡಿದರು "ಅದೆಲ್ಲ ಬಿಡಮ್ಮ. ಸರಿಯಾಗಿ ತೋರಿಸ್ಕೊಳ್ಳಿ. ಆದಷ್ಟು ಬೇಗ ಒಬ್ಬ ಮೊಮ್ಮಗನ್ನ ಕೈಗಾಕಿ. ನಮ್ ಕೈ ಕಾಲು ಗಟ್ಟಿ ಇರೋವಂಗೆ ನಾವೂ ಆಡಿಸ್ಬೇಕಲ್ವ" ಅತ್ತೆ ದೇಶಾವರಿ ನಗೆ ಬೀರುತ್ತಾ ಹೇಳಿದರು. ಅವರ ನಗೆಯಲ್ಲಿ ಅಸಲಿತನವಿರಲಿಲ್ಲ ಅಥವಾ ಇದ್ದಂತೆ ನನಗೆ ತೋರಲಿಲ್ಲ. 

'ಹು ಅತ್ತೆ. ತೋರಿಸ್ತಿದ್ದೀವಿ. ನಂಗೂ ಆಸೇನೇ ಅಲ್ವ ಮಕ್ಳು ಅಂದ್ರೆ' ಎಂದ್ಹೇಳುವಷ್ಟರಲ್ಲಿ ಕಣ್ಣಂಚಿನಲ್ಲಿ ನೀರು ತುಂಬಿತ್ತು. ಸರಿ ಇನ್ನು ಬರ್ತೀವಿ ಎಂದು ಹೊರಟರು. ಬಾಗಿಲಾಕಿಕೊಂಡು ಒಳಬಂದು ಕಾಫಿ ಲೋಟ ಎತ್ತಿಕೊಂಡೆ. ಅಕ್ಕನಿಗೆ ಕೊಟ್ಟಿದ್ದ ಲೋಟದ ತುಂಬ ಕಾಫಿಯಿತ್ತು, ತಣ್ಣಗಾಗಿತ್ತು. 

ಅಳುವುದಕ್ಕೂ ಮನಸ್ಸಾಗಲಿಲ್ಲ. ಟಿವಿ ಹಾಕಿಕೊಂಡು ಸುಮ್ಮನೆ ಕುಳಿತಿದ್ದೆ. ಮನದಲ್ಲಿ ಸಾವಿರಾರು ಯೋಚನೆಗಳು ಬೆಳಕಿನ ವೇಗದಲ್ಲಿ ಸರಿದಾಡುತ್ತಿದ್ದವು. ಮತ್ತೆ ಕಾಲಿಂಗ್ ಬೆಲ್ ಸದ್ದಾಯಿತು. ಇದ್ಯಾರು ಮತ್ತೆ ಇಷ್ಟೊತ್ತಲ್ಲಿ ಎಂದುಕೊಳ್ಳುತ್ತಾ ಬಾಗಿಲು ತೆರೆದರೆ ರಾಜೀವ. ತಿರುಗಿ ಸಮಯ ನೋಡಿದೆ. ಐದೂವರೆಯಾಗಿತ್ತಷ್ಟೇ. ಇಷ್ಟು ಬೇಗ ಬರೋರಲ್ಲ ಇವರು. ಅತ್ತೆ ಅಕ್ಕ ಬಂದು ಹೋದ ಮೇಲೆ ನನ್ನ ಮೂಡು ಹಾಳಾಗಿರ್ತದೆ ಸಮಾಧಾನ ಮಾಡುವ ಅಂತ ಬಂದಿರ್ತಾರೆ. 

'ಏನ್ ಸಾಹೇಬ್ರು ಇಷ್ಟು ಬೇಗ ಬಂದುಬಿಟ್ರಿ. ನಿಮ್ಮಮ್ಮ ಅಕ್ಕ ಏನೆಲ್ಲ ಹೇಳಿದ್ರು ಅಂತ ಕೇಳ್ಕಂಡು ಮಜಾ ತಗೊಳ್ಳೋಕೆ ಬಂದ್ರೇನೋ....' 

“ಓ! ಅಮ್ಮ ಅಕ್ಕ ಬಂದಿದ್ರಾ.....ನಂಗ್ ಗೊತ್ತಿರಲಿಲ್ಲ" 

'ರೀ ಸುಮ್ನೆ ನಾಟ್ಕ ಆಡ್ಬೇಡಿ. ಅವರಿಗೆ ಈ ಮನೆ ಎಲ್ಲಿದೆ ಅಂತಾನೂ ಗೊತ್ತಿಲ್ಲ. ಒಮ್ಮೆ ಕೂಡ ನಿಮ್ಮ ಮನೆಯವರ್ಯಾರೂ ಈ ಮನೆಗೆ ಬಂದೋರಲ್ಲ. ಮನೆ ಅಡ್ರೆಸ್ ಕೇಳ್ಕಂಡು ಬರಬೇಕಂದರೆ ಒಂದೋ ನನಗೆ ಫೋನ್ ಮಾಡಬೇಕು ಇಲ್ಲ ನಿಮಗೆ ಫೋನ್ ಮಾಡಬೇಕು. ನನಗೆ ಮಾಡಿಲ್ಲ ಅಂದ್ರೆ ನಿಮಗೇ ಮಾಡಿರ್ತಾರೆ' 

“ಭಲೇ ಬುದ್ವಂತೆ ಕಣೇ ನೀನು" ತಬ್ಬಿಕೊಳ್ಳಲು ಬಂದರು. ಸಿಟ್ಟೆಷ್ಟೇ ಇದ್ರೂ ಬೇಸರ ಎಷ್ಟೇ ಇದ್ರೂ ರಾಜಿ ತಬ್ಕೊಳ್ಳೋಕೆ ಬಂದಾಗ ತಡೆಯುವ ಗುಣ ನನ್ನದಲ್ಲ. ಅವರು ತಬ್ಬಿಕೊಳ್ಳುತ್ತಿದ್ದಾಗೆ ಅಷ್ಟೊತ್ತಿನಿಂದ ತಡೆಹಿಡಿದಿದ್ದ ಕಣ್ಣೀರು ಕೆನ್ನೆಯನ್ನು ತೇವವಾಗಿಸಿತು. “ಅಳೋದ್ಯಾಕೆ ಚಿನ್ನಿ" 

'ಇನ್ನೇನ್ ಮಾಡ್ಲಿ. ಹಿಂಗಿಂಗೆ ಫೋನ್ ಮಾಡಿದ್ದರು. ಬರ್ತಾರೆ ಮನೆಗೆ ಅಂತ ನೀವೂ ತಿಳಿಸೋದಿಲ್ಲ ನನಗೆ. ತಿಳಿಸಿದ್ರೆ ಮಾನಸಿಕವಾಗಿ ಒಂದಷ್ಟು ತಯಾರಾದ್ರೂ ಆಗಿರ್ತೀನಿ. ಅವರು ಬಂದು ಬಾಯಿಗೆ ಬಂದಂತೆ ಮಾತಾಡ್ತಾರೆ. ಏನೋ ಮಕ್ಳಾಗದೇ ಇರೋದಿಕ್ಕೆ ನಾನೊಬ್ಳೇ ಕಾರಣ ಅಂತ ದೂಷಿಸ್ತಾರೆ. ನಮ್ಮಿಬ್ಬರ ನಡುವಿನದೆಲ್ಲ ಅವರಿಗೆ ಹೇಳೋಕಾಗ್ತದಾ? ಮಕ್ಕಳಾಗಲಿಲ್ಲ ಅಂತ ಅವರಿಗಿಂತ ಹೆಚ್ಚು ದುಃಖ ನನಗಿರ್ತದೆ ಅನ್ನೋದು ಕೂಡ ಅರ್ಥವಾಗಲ್ವಾ ಅವರಿಗೆ. ನಿಮ್ಮಕ್ಕನಿಗೆ ಹೋಲಿಸಿದರೆ ಅತ್ತೆ ಎಷ್ಟೊ ವಾಸಿ. ನಿಮ್ಮಕ್ಕನ ಮಾತುಗಳನ್ನು ಕೇಳಿಕೊಂಡು ಅವರ ಮೇಲೆ ನಾ ಕೂಗಾಡದೇ ಇದ್ದಿದ್ದು ಹೆಚ್ಚು ಇವತ್ತು' 

“ಹೋಗ್ಲಿ ಬಿಡು ಡಾರ್ಲಿಂಗ್. ನಿನಗೆ ಪಿಸಿಒಡಿ ಇರೋ ವಿಷಯ ಅವರಿಗೂ ಗೊತ್ತಲ್ವ. ಅದ್ರಿಂದಾನೇ ಮಕ್ಳಾಗೋದು ತಡವಾಗಿದೆ ಅಂತಾನೂ ಗೊತ್ತಿರ್ತದಲ್ಲ ಅವರಿಗೆ. ಹಂಗಾಗಿ ಚೂರ್ ಏನೋ ಮಾತಾಡಿರ್ತಾರೆ. ಅದಕ್ಕೆಲ್ಲ ಯಾಕೆ ತಲೆ ಕೆಡಿಸಿಕೊಳ್ತಿ" 

ರಾಜೀವನ ಉತ್ತರ ಕೇಳಿ ಅಚ್ಚರಿಯಾಯಿತು. ಇವರ ಮನೆಯವರು ನೇರವಾಗಿ ಚಪ್ಪಲಿಯಲ್ಲಿ ಹೊಡೆದರೆ ಇವರು ಅದೇ ಚಪ್ಪಲಿಯನ್ನು ರೇಷ್ಮೆ ಬಟ್ಟೆಯೊಳಗಿಟ್ಟು ಹೊಡೆಯುತ್ತಿದ್ದಾರೆ. ಅವರ ತಬ್ಬುಗೆಯಿಂದ ಹೊರಬಂದೆ. 

'ಏನ್ ನಾನ್ ಸೆನ್ಸ್ ಅಂತ ಮಾತಾಡ್ತಿ ರಾಜೀವ್. ನಾನೊಬ್ಳೇ ಕಾರಣ ಮಕ್ಳಾಗದಿರೋಕೆ ಅನ್ನೋ ಅರ್ಥದಲ್ಲಿ ಮಾತಾಡ್ತೀಯಲ್ಲ! ಹೌದು ನಂಗ್ ಪಿಸಿಒಡಿ ಇದೆ, ಒಪ್ತೀನಿ. ಅದಕ್ಕೆ ಟ್ರೀಟ್ಮೆಂಟ್ ತೆಗೆದುಕೊಳ್ತಿದ್ದೀನಿ, ಅದನ್ನೂ ಒಪ್ತೀನಿ. ಆದರೆ ಮಗು ಆಗದೇ ಇರೋಕೆ ಅದೊಂದೇ ಕಾರಣವಾ? ಆರು ತಿಂಗಳ ಹಿಂದೆ ಡಾಕ್ಟರ್ ಹೇಳಿದ್ದೆಲ್ಲ ಮರೆತುಹೋಯ್ತಾ ನಿಮಗೆ? ಪಿಸಿಒಡಿ ಇದ್ದಾಗ ಓವುಲ್ಯೇಷನ್ ಯಾವಾಗ ಆಗ್ತದೆ, ಪಿರೀಯಡ್ಸ್ ಯಾವಾಗ ಆಗ್ತದೆ ಅಂತ ನಿಖರವಾಗಿ ಹೇಳೋಕಾಗಲ್ಲ. ಪೀರಿಯಡ್ಸ್ ಆಗಿ ವಾರ ಕಳೆದ ಮೇಲೆ ರೆಗ್ಯುಲರ್ರಾಗಿ ಸೆಕ್ಸ್ ಮಾಡ್ಬೇಕು ಕನಿಷ್ಟ ವಾರಕ್ಕೆರಡು ಸಲ ಅಂತ ಹೇಳಿದ್ದನ್ನ ನೀವು ಆರು ತಿಂಗಳಿನಿಂದ ಒಮ್ಮೆಯಾದರೂ ಪಾಲಿಸಿದ್ದೀರಾ?' 

“ತಲೇಲಿ ಸಾವಿರ ಚಿಂತೆಗಳಿದ್ದಾಗ ಸೆಕ್ಸು ಸೆಕ್ಸೂ ಅಂದ್ರೆ ಹೆಂಗಾಗ್ತದೆ" 

'ನಮಗಿನ್ನೂ ಮಕ್ಕಳಾಗದೇ ಇರೋದಿಕ್ಕೆ ಅದೂ ಒಂದು ಕಾರಣ ಅಂತ ಒಪ್ಕೊಳ್ಳಿ ಮತ್ತೆ' 

“ಒಂದ್ಸಲ ಸೆಕ್ಸ್ ಮಾಡಿದ್ರೇ ಮಕ್ಕಳಾಗ್ತವೆ. ಹೆತ್ಕೊಡೋಕು ಯೋಗ್ಯತೆ ಇರಬೇಕು ಅಷ್ಟೇ" 

'ನಾನ್ ಸೆನ್ಸ್. ಒಂದ್ ತಿಂಗಳಿಂದೆ ನಾ ಮುಟ್ಟಾಗಿದ್ದು. ಈ ತಿಂಗಳು ಡಾಕ್ಟರ್ ಸಲಹೆ ಮೇರೆಗೆ ಓವುಲ್ಯೇಷನ್ ಇಂಡಕ್ಷನ್ ಗೋಸ್ಕರ ಮಾತ್ರೆ ಬೇರೆ ತೆಗೆದುಕೊಂಡಿದ್ದೆ. ಮೂರು ಮೂರು ಸಲ ಟ್ರಾನ್ಸ್ ವೆಜೈನಲ್ ಸ್ಕ್ಯಾನ್ ಬೇರೆ ಮಾಡಿಸಿಕೊಂಡಿದ್ದೆ. ಅದನ್ನ ಮಾಡಿಸಿಕೊಳ್ಳೋ ಕಷ್ಟ ನನಗಷ್ಟೇ ಗೊತ್ತು. ಮೂರನೇ ಸ್ಕ್ಯಾನ್ ಆದ ಮಾರನೇ ದಿನದಿಂದ ಸತತ ಐದು ದಿನ ಸೆಕ್ಸ್ ಮಾಡಿ ಅಂತ ಡಾಕ್ಟರ್ ಹೇಳಿದಾಗ ನೀವೂ ತಲೆ ಆಡಿಸಿಕೊಂಡು ಬಂದಿದ್ರಿ. ಒಂದು ದಿನಕ್ಕಾದ್ರೂ ಮಾಡಿದ್ವಾ? ದಿನಾ ಒಂದೊಂದು ನೆಪ ಹೇಳಿ ತಳ್ಳಾಕಿದ್ರಿ. ಈಗ ನೋಡಿದ್ರೆ ನನ್ನ ಯೋಗ್ಯತೆ ಬಗ್ಗೆ ಮಾತಾಡ್ತೀರ' ಕಣ್ಣ ನೀರು ಹಿಂಗಿ ಹೋಗಿತ್ತು. 

“ನೋಡು ಸುಮ್ನೆ ನನ್ನ ಬಗ್ಗೆ ಗೂಬೆ ಕೂರಿಸೋಕೆ ಬರಬೇಡ. ನೀ ಹೇಳ್ದೆ ಅಂತ ಸೆಮೆನ್ ಅನಾಲಿಸಿಸ್ಸೂ ಮಾಡಿಸಿದೆ. ಅದೂ ನಾರ್ಮಲ್ಲೇ ಇತ್ತಲ್ಲ. ತೊಂದರೆ ಇರೋದು ನಿನ್ನಲ್ಲಿ. ನನ್ನಲ್ಲಲ್ಲ" 

'ಹೌದು ತೊಂದರೆ ಇರೋದು ನನ್ನ ದೇಹದಲ್ಲೇ. ನಾನೆಲ್ಲಿ ಇಲ್ಲ ಅಂದೆ? ಅದಿಕ್ಕೇ ಅಲ್ವ ಟ್ರೀಟ್ಮೆಂಟ್ ತೆಗೆದುಕೊಳ್ತಿರೋದು. ನಿಮ್ಮ ದೇಹದಲ್ಲೇನೂ ತೊಂದರೆ ಇಲ್ಲ, ಆದರೆ ನಿಮ್ಮ ಮನಸ್ಸಿನಲ್ಲಿರೋ ತೊಂದರೇನ ಏನು ಮಾಡೋದು? ಸ್ಪರ್ಮ್ ಕೌಂಟ್ ನಾರ್ಮಲ್ ಇದ್ದ ಮಾತ್ರಕ್ಕೇ ಮಕ್ಕಳಾಗಿಬಿಡಲ್ಲ. ಸೆಕ್ಸೂ ಮಾಡ್ಬೇಕು. ತೊಂದರೆಗಳಿದ್ದಾಗ ಸೆಕ್ಸನ್ನೂ ಟ್ರೀಟ್ಮೆಂಟ್ ತರಾನೇ ಮಾಡ್ಬೇಕು' 

“ಟೈಮ್ ಟೇಬಲ್ ಹಾಕಂಡು ಸೆಕ್ಸ್ ಮಾಡೋಕೆ ಆಗಲ್ಲ ನಂಗೆ" 

'ಅದನ್ನೇ ಹೋಗಿ ನಿಮ್ಮ ಮನೆಯವರಿಗೆ ಹೇಳಿ. ಇನ್ನೊಂದ್ಸಲ ಬಂದು ನಿನ್ನೊಬ್ಬಳಿಂದಾನೇ ಮಗು ಆಗಿಲ್ಲ ಅಂತ ಹೇಳಿದ್ರೆ ಜನ್ಮ ಜಾಲಾಡಿಸಿಬಿಡ್ತೀನಿ' 

“ಥೂತ್ತೇರಿಕೆ. ಕೆಲಸದಲ್ಲೂ ನೆಮ್ಮದಿಯಿಲ್ಲ. ಮನೆಯಲ್ಲೂ ನೆಮ್ಮದಿಯಿಲ್ಲ" ಎಂದು ಗೊಣಗಿಕೊಳ್ಳುತ್ತಾ ಬಾಗಿಲನ್ನು ದಡಾರೆಂದು ಮುಚ್ಚಿಕೊಳ್ಳುತ್ತಾ ಮನೆಯಿಂದ ಹೊರನಡೆದರು ರಾಜೀವ.

ಮುಂದಿನ ಭಾಗವನ್ನು ಓದಲು ಇಲ್ಲಿ ಕ್ಲಿಕ್ಕಿಸಿ. 

No comments:

Post a Comment