Aug 5, 2019

ಒಂದು ಬೊಗಸೆ ಪ್ರೀತಿ - 25

ಡಾ. ಅಶೋಕ್.‌ ಕೆ. ಆರ್.‌
“ಬೇಗ ತಯಾರಾಗು. ಸೋನಿಯಾ ಮನೆಗೆ ಹೋಗಿ ಬರೋಣ" ಎಂದರು ರಾಜಿ. 

ಬೆಳಿಗ್ಗೆ ನಾ ಬಂದಾಗ ಶಶಿ ಜೊತೆಗೆ ಮಾತನಾಡಿದ ಬಗ್ಗೆ ಏನನ್ನೂ ತಿಳಿಸಿರಲಿಲ್ಲ ರಾಜಿ. ಸಂಜೆ ಬರಲಿ ಮನೆಗೆ ಒಂದ್ ಸುತ್ತು ಜಗಳವಾಡ್ತೀನಿ ಎಂದುಕೊಂಡಿದ್ದವಳಿಗೆ ಜಗಳವಾಡುವ ಮನಸ್ಸೂ ಇರಲಿಲ್ಲ. ಹುಂಗುಟ್ಟಿ ಹೋಗಿ ತಯಾರಾದೆ. ರಾಜಿ ಹಿಂದಿನಿಂದ ಬಂದು ಅಪ್ಪಿಕೊಂಡು "ಯಾಕೆ ಡಾರ್ಲಿಂಗ್ ಸಪ್ಪಗಿದ್ದಿ. ಅವರೇನೇನೋ ಮಾತನಾಡ್ತಾರೆ ಅಂತ ತಲೆ ಕೆಡಿಸಿಕೋಬೇಡ. ನಾನಿರ್ತೀನಲ್ಲ. ಮಾತಾಡ್ತೀನಿ" ಎಂದ್ಹೇಳುತ್ತ ಕತ್ತಿಗೊಂದು ಮುತ್ತನಿತ್ತರು. ಬೇಸರ ದೂರವಾಯಿತು. 'ಹು...ನೀವೇ ಮಾತಾಡಿ. ಅವರ ಬಾಯಲ್ಲಿ ಏನೇನು ಮಾತು ಕೇಳ್ಬೇಕೋ ಏನೋ' ಕತ್ತು ತಿರುಗಿಸಿ ಅವರ ಕೆನ್ನೆಗೊಂದು ಮುತ್ತು ಕೊಟ್ಟೆ. ಸೋನಿಯಾಗೆ ಬರುತ್ತಿರುವುದಾಗಿ ಒಂದು ಮೆಸೇಜು ಹಾಕಿದೆ. 

ಸೋನಿಯಾಳ ಮನೆ ತಲುಪಿದಾಗ ಏಳರ ಹತ್ತಿರವಾಗಿತ್ತು. ಅವರ ತಂದೆ ತಾಯಿ ಮನೆಯಲ್ಲೇ ಇದ್ದರು. ನಮ್ಮಿಬ್ಬರನ್ನು ಕಂಡು ಅವರಿಬ್ಬರಿಗೂ ಅಚ್ಚರಿಯಾಯಿತು. ಪಕ್ಕದ ಮನೆಯಲ್ಲೇ ಇದ್ದರೂ ನಾನು ಅವರ ಮನೆಗೆ ಹೋಗಿದ್ದು ಇಲ್ಲವೇ ಇಲ್ಲವೆನ್ನುವಷ್ಟು ಅಪರೂಪ. ಗೇಟಿನ ಬಳಿ ಕಂಡಾಗ ಕುಶಲೋಪರಿ ವಿಚಾರಿಸಿಕೊಂಡಿದ್ದೆಷ್ಟೋ ಅಷ್ಟೇ. ನಮ್ಮ ಮನೆಯಲ್ಲೇನೋ ಫಂಕ್ಷನ್ ಗಿಂಕ್ಷನ್ ಇರಬೇಕು, ಅದಕ್ಕೆ ಕರೆಯೋಕೆ ಬಂದಿದ್ದಾರೆ ಅಂದುಕೊಂಡಿರುತ್ತಾರೆ. ನಮ್ಮ ಅವರ ಮನೆಯವರು ಸೇರಿ ನಡೆಸೋ ಫಂಕ್ಷನ್ ಬಗ್ಗೆ ಮಾತನಾಡೋಕೆ ಬಂದಿದ್ದೀವಿ ಅನ್ನುವುದರ ಕಲ್ಪನೆ ಕೂಡ ಅವರಿಗಿರಲಿಕ್ಕಿಲ್ಲ.

ಒಂದೊಂದೇ ಎಪಿಸೋಡು ಹುಡುಕುಡುಕಿ ಓದೋಕೆ ಬೇಸರವಾ? ಪೂರ್ತಿ ಇ - ಪುಸ್ತಕ ತೆಗೆದುಕೊಳ್ಳಲು ಇಲ್ಲಿ ಕ್ಲಿಕ್ಕಿಸಿ.

ಹೋದ ಐದು ನಿಮಿಷಕ್ಕೆ ಸೋನಿಯಾ ಕಾಫಿ ಬಿಸ್ಕಟ್ಟು ತಂದಿಟ್ಟಳು. ಅವಳ ಮುಖದಲ್ಲಿ ಗಾಬರಿ ಯಾರಿಗಾದರೂ ಎದ್ದು ಕಾಣುವಂತಿತ್ತು. ಅದವರ ಹೆತ್ತವರ ಕಣ್ಣಿಗೆ ಗೋಚರಿಸದ್ದು ಅಚ್ಚರಿಯೇ ಸರಿ. ಸೋನಿಯಾ ನಮ್ಮೆದುರಿಗಿನ ಕುರ್ಚಿಯಲ್ಲಿ ಕುಳಿತಳು. ನಾ ಕಾಫಿ ಕುಡಿಯಲಾರಂಭಿಸಿದೆ. ಎರಡು ಬಿಸ್ಕೆಟ್ಟು ತಿಂದು ಮುಗಿಸಿದೆ. ಯಾರೊಬ್ಬರೂ ಮಾತನಾಡುತ್ತಿಲ್ಲ. ಟಿವಿಯಲ್ಲಿ ಉದಯ ಕಾಮಿಡಿಯಲ್ಲಿ ಬರುತ್ತಿದ್ದ ಯಾವುದೋ ಚಿತ್ರದ ದೃಶ್ಯ ವೀಕ್ಷಣೆಯಲ್ಲಿ ತೊಡಗಿದ್ದೆವು. ನನಗೆ ಆ ಗಂಭೀರ ಸನ್ನಿವೇಶದಲ್ಲೂ ನಗುವಂತಾಯಿತು. ನಮಗೇನೋ ಯಾಕೆ ಬಂದಿದ್ದೀವೆಂದು ಗೊತ್ತು. ಪಾಪ ಸೋನಿಯಾಳ ಅಪ್ಪ ಅಮ್ಮನಿಗೆ ಇದೇನು ಇವರು ಬಂದು ಹೀಗೆ ಕುಳಿತು ಕಾಫಿ ಹೀರುತ್ತ ಕುಳಿತುಬಿಟ್ಟರಲ್ಲ ಎಂದು ಎಷ್ಟು ಗೊಂದಲವಾಗಿರಬೇಡ. ಸೋನಿಯಾಳ ಅಪ್ಪ ರಾಮೇಗೌಡ ಅಂಕಲ್ ಮೌನ ಮುರಿಯುವ ನಿರ್ಧಾರ ಮಾಡಿ "ಮತ್ತೆ ಕೆಲಸ ಎಲ್ಲಾ ಆರಾಮವಾಗಿ ನಡೀತಿದ್ಯ" ಎಂದು ನನ್ನ ಕಡೆ ನೋಡುತ್ತ ಕೇಳಿದರು. 

'ಹು ಅಂಕಲ್. ಮಾಮೂಲಿಯಾಗಿ ನಡೀತಿದೆ' 

“ಸರ್. ನಿಮ್ಮ ಬಳಿ ಒಂದು ವಿಷಯ ಮಾತನಾಡಬೇಕಿತ್ತು" ರಾಜೀವ ನೇರವಾಗಿ ವಿಷಯಕ್ಕೆ ಬಂದರು. ಸದ್ಯ, ನನ್ನ ಮೇಲೆ ವಿಷಯ ಪ್ರಾರಂಭಿಸುವ ಜವಾಬ್ದಾರಿ ಹೇರಲಿಲ್ಲವಲ್ಲ ಎಂದು ರಾಜಿಯ ಮೇಲೆ ಪ್ರೀತಿ ಉಕ್ಕಿ ಹರಿದು ಬಂತು. 

“ಹೇಳಿ ಸರ್" ಎಂದರವರು. 

“ಸೋನಿಯಾ ವಿಷಯ" 

“ಹು ಹೇಳಿ" ಅವರ ದನಿಯಲ್ಲಿನ ಗಾಬರಿಗಿಂತ ಸೋನಿಯಾಳ ತಾಯಿ ಸುಶೀಲ ಆಂಟಿಯ ಮುಖದಲ್ಲಿನ ಗಾಬರಿ ಜೋರಿತ್ತು. ನನಗ್ಯಾಕೋ ಒಳಗೊಳಗೇ ನಗು! 

“ಕೆಲವು ದಿನಗಳ ಮುಂಚೆ ಸೋನಿಯಾ ಮತ್ತು ನನ್ನ ಭಾಮೈದ ಶಶಿ..... ಇವಳ ತಮ್ಮ..... ನಿಮಗೆ ಗೊತ್ತಿರಬೇಕಲ್ಲ.... ಇಬ್ಬರೂ ನನ್ನ ಬಳಿಗೆ ಬಂದರು. ಒಬ್ಬರನ್ನೊಬ್ಬರು ಇಷ್ಟಪಟ್ಟಿದ್ದೀವಿ. ಹೆತ್ತವರ ಬಳಿ ಹೇಳೋಕೆ ಭಯ. ನೀವೇ ಬಂದು ಮಾತನಾಡಿ ಒಪ್ಪಿಸಿ ಅಂತ ನಮ್ಮ ಮೇ......” 

“ಅಯ್ಯೋ ಗೂಬೆ ಮುಂಡೆ......” ಸುಶೀಲ ಆಂಟಿ ಜೋರು ದನಿಯಲ್ಲಿ ಅರಚಿದರು. ಶಶಿ ಮನೆಯಲ್ಲಿದ್ದರೆ ಖಂಡಿತವಾಗಿ ಅವನಿಗೆ ಈ ಅರುಚಾಟ ಕೇಳಿಸಿರುತ್ತೆ. “ಬಡ್ಕಂಡೆ ಸಾವಿರ ಸಲ.... ಕೆಲಸಕ್ಕೆ ಕಳಿಸಬೇಡಿ ಕಳಿಸಬೇಡಿ ಅಂತ.....ನನ್ನ ಮಾತನ್ನೆಲ್ಲಿ ಕೇಳ್ತೀರಾ ನೀವು.....ನನ್ನ ಮಾತಿಗೆಲ್ಲಿ ಬೆಲೆ ಇದೆ ಈ ಮನೇಲಿ.....ನನಗೊತ್ತಿತ್ತು..... ಈ ಹಲ್ಕಾ ರಂಡೆ ಇಂತದ್ದೇ ಏನಾದರೂ ಕೆಲಸ ಮಾಡಿಕೊಂಡು ಬಂದು ನಮ್ಮ ಮನೆ ಮರ್ವಾದೆ ಎಲ್ಲಾ ಬೀದಿ ಪಾಲು ಮಾಡ್ತಾಳೆ ಅಂತ.......ಆ ಹೊಲೇರ ಹುಡುಗ್ನೇ......” 

“ಶ್" ಎಂದಬ್ಬರಿಸಿದ ರಾಮೇಗೌಡ ಅಂಕಲ್ ದನಿಗೆ ಆಂಟಿ ಕ್ಷಣಮಾತ್ರದಲ್ಲಿ ನಿಶ್ಯಬ್ಧದ ಮೊರೆ ಹೋದರು. “ಮನೆಗೆ ಬಂದಿರೋರ ಮುಂದೆ ಈ ರೀತಿಯಾಗೆಲ್ಲ ಮಾತನಾಡಬಾರದು ಸುಶೀಲ. ಅವರು ಮರ್ಯಾದೆಯಾಗಿ ಬಂದು ಒಂದು ಗಂಭೀರ ವಿಷಯ ಹೇಳಬೇಕಾದರೆ ನಾವೂ ಗಂಭೀರವಾಗೇ ಕುಳಿತು ಕೇಳಬೇಕು. ಅವರು ಹೇಳೋ ವಿಷಯ ನಮಗೆ ಒಪ್ಪಿತವೋ ಅಲ್ಲವೋ ಅನ್ನುವುದು ಬೇರೆಯದೇ ಪ್ರಶ್ನೆ. ಅವಮರ್ಯಾದೆಯಾಗಿ ನಡೆದುಕೋಬಾರದು" ರಾಮೇಗೌಡ ಅಂಕಲ್ ಇಷ್ಟು ಸಮಾಧಾನವಾಗಿ ಮಾತನಾಡುತ್ತಾರೆ ಎಂಬ ನಿರೀಕ್ಷೆ ನನ್ನಲ್ಲಿರಲಿಲ್ಲ. ಪರಶು ಮತ್ತು ನನ್ನ ಪ್ರೇಮದ ವಿಚಾರ ಗೊತ್ತಾದಾಗ ನನ್ನಪ್ಪ ವರ್ತಿಸಿದ ನೆನಪು ಬಂದು ಕಣ್ಣಾಲಿಯಲ್ಲಿ ತೆಳು ನೀರಿನ ಪರದೆಯೊಂದು ಮೂಡಿತು. ಎದುರು ಕುಳಿತಿದ್ದ ಸೋನಿಯಾಳತ್ತ ನೋಡಿದೆ. ಕಣ್ಣೀರು ಅವಳ ಕೆನ್ನೆಯ ಮೇಲೆ ಹರಿಯುತ್ತಿದ್ದಿದ್ದು ಮಂಜು ಮಂಜಾಗಿ ಗೋಚರಿಸಿತು. ಸುಶೀಲ ಆಂಟಿಯ ಕಣ್ಣಲ್ಲೂ ನೀರಿತ್ತು. ದುಃಖವಿರಲಿಲ್ಲ, ಕ್ರೋಧವಿತ್ತು. 

“ನೀವು ಹೇಳಿ ಸರ್" ರಾಮೇಗೌಡ ಅಂಕಲ್ ರಾಜಿಯ ಕಡೆಗೆ ನೋಡುತ್ತಾ ಹೇಳಿದರು. ಅವರ ಮುಖದ ಭಾವನೆಯಲ್ಲೇನಿತ್ತು ಅನ್ನುವುದು ನನ್ನ ತಿಳಿವಿಗೆ ಬರಲಿಲ್ಲ. 

“...ಅದೇ ಸರ್. ಇಬ್ಬರೂ ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದೀವಿ. ಮನೆಯಲ್ಲಿ ಒಪ್ಪಿಸಿ ಮದುವೆಯಾಗಬೇಕು. ನಮಗೇ ಮಾತನಾಡೋಕೆ ಧೈರ್ಯ ಸಾಲದು. ನೀವು ಬಂದು ಮಾತನಾಡಿ ಒಪ್ಪಿಸಿ ನಮ್ಮಿಬ್ಬರ ಮದುವೆಯಾಗುವಂತೆ ನೋಡಿಕೊಳ್ಳಬೇಕು ಅಂತ ಹೇಳಿದರು. ತೀರ ಕಾಲೇಜ್ ಲವ್ ಸ್ಟೋರಿ ಏನೂ ಅಲ್ಲ ಇದು. ಇವತ್ ಪ್ರೀತಿಯಿರುತ್ತೆ ನಾಳೆ ಮರೆಯಾಗಿಹೋಗುತ್ತೆ ಅಂತೇಳೋದಿಕ್ಕೆ. ಇಬ್ಬರೂ ಪ್ರಬುದ್ಧರಿದ್ದಾರೆ. ಜೊತೆಯಾದರೆ ಉತ್ತಮ ಬದುಕು ಕಟ್ಟಿಕೊಳ್ಳುತ್ತಾರೆ ಅಂತ ನನಗೆ ವೈಯಕ್ತಿಕವಾಗನ್ನಿಸಿತು. ಅದಕ್ಕೆ ನಿಮ್ಮ ಕಿವಿಗೆ ಈ ವಿಷಯ ಹಾಕೋಣ. ನಿಮ್ಮಭಿಪ್ರಾಯ ತಿಳಿಯೋಣ ಅಂತ ಬರುವಂತಾಯಿತು" ಎಂದರು ರಾಜಿ. ಅರೆರೆ, ಇವರ್ಯಾವಾಗ ಇಷ್ಟೊಂದು ಜವಾಬ್ದಾರಿಯುತವಾಗಿ ಮಾತಾಡೋದು ಕಲಿತುಬಿಟ್ಟರು ಎಂದು ಅಚ್ಚರಿ ನನಗೆ, ಅಚ್ಚರಿಯ ಬೆನ್ನ ಹಿಂದೆಯೇ ಲೋಡುಗಟ್ಟಲೆ ಪ್ರೀತಿ ಉಕ್ಕಿತು. 

“ನೀವೀಗೆ ಹೇಳಿದ ತಕ್ಷಣ ಅಭಿಪ್ರಾಯ ತಿಳಿಸಿಬಿಡೋಕೆ ಇದೇನೂ ಸಣ್ಣ ವಿಷಯವಲ್ಲ. ಮಗಳ ಭವಿಷ್ಯದ ಪ್ರಶ್ನೆ. ಜೊತೆಗೆ …... ತಪ್ಪು ತಿಳ್ಕೋಬೇಡಿ..... ನಮ್ಮ ಸಾಮಾಜಿಕ ಸ್ಥಾನಮಾನದ ಪ್ರಶ್ನೆ ಕೂಡ ಹೌದು. ನಮ್ಮ ಒಪ್ಪಿಗೆ ಇಲ್ಲದೇ ಹೋದರೆ ಓಡಿ ಹೋಗಿ ಮದುವೆಯಾಗ್ತಾರಂತ.....” 

“ಆ ಉದ್ದೇಶವೇನೂ ಇಲ್ಲ.....” ರಾಜಿಯ ಮಾತು ಮುಗಿಯುವಷ್ಟರಲ್ಲಿ ಸೋನಿಯಾ "ಓಡಿ ಹೋಗೋ ಆಗಿದ್ದರೆ ನಿಮಗೆ ವಿಷಯ ತಿಳಿಸುವ, ನಿಮ್ಮ ಒಪ್ಪಿಗೆ ಪಡೆಯುವ ಯೋಚನೇನೆ ಬರುತ್ತಿರಲಿಲ್ಲ. ಇಷ್ಟೊತ್ತಿಗೆ ಓಡಿ ಹೋಗಿ ಮದುವೆಯಾಗೇ ಬಿಡುತ್ತಿದ್ದೋ. ನಿಮ್ಮ ಒಪ್ಪಿಗೆ ಇಲ್ಲದೆ ನಾ ಶಶೀನಾ ಮದುವೆಯಾಗಲ್ಲ ಅಪ್ಪ" ಎಂದ್ಹೇಳಿ ಕಣ್ಣೀರಾಕುತ್ತಲೇ ರೂಮಿಗೋಗಿ ಬಾಗಿಲಾಕಿಕೊಂಡಳು ಸೋನಿಯಾ. 

ಸೋನಿಯಾ ಮುಚ್ಚಿದ ಬಾಗಿಲನ್ನು ಅರೆಹೊತ್ತು ಗಮನಿಸಿದ ರಾಮೇಗೌಡರು ನಿಟ್ಟುಸಿರುಬಿಟ್ಟರು. ರಾಜಿ ಕಡೆಗೆ ತಿರುಗಿ "ಯಾವುದಕ್ಕೂ ವಿಚಾರ ಮಾಡಿ ಹೇಳ್ತೀವಿ. ನಮಗೂ ಇದು ಆಘಾತದ ಸಂಗತಿ. ಸುಧಾರಿಸಿಕೊಳ್ಳೋಕೆ ಸಮಯ ಬೇಕಲ್ಲ" ಎಂದು ಹೇಳಿ ನನ್ನ ಕಡೆಗೆ ತಿರುಗಿ "ಏನೇ ಅಂದ್ರೂ ಪಕ್ಕದ ಮನೇಲೇ ಇರೋ ನಿಮ್ಮಪ್ಪ ಅಮ್ಮ ಬಂದು ಈ ವಿಷಯ ಮಾತನಾಡಿದ್ರೆ ಒಂದು ಘನತೆ ಇರೋದು" ಎಂದ್ಹೇಳಿ ನಿಡುಸುಯ್ದರು. 

“ಸರಿ ಸರ್. ನಾವಿನ್ನು ಬರ್ತೀವಿ" ಎಂದು ರಾಜಿ ಮೇಲೆದ್ದರು. ಕುಳಿತಲ್ಲಿಂದಲೇ ರಾಮೇಗೌಡರು ಕೈ ಮುಗಿದರು. ಅವರ ಹಿಂದೆಯೇ ನಾನೂ ಹೊರಗೆ ಬಂದೆ. ರಾಜಿ ಗೇಟು ತೆಗೆಯುವಾಗ 'ಒಂದ್ನಿಮಿಷ ಬಂದೆ ಇರಿ' ಎಂದವಳೆ ಒಳಗೆ ಓಡಿದೆ. ರಾಮೇಗೌಡ ಅಂಕಲ್ ಪಕ್ಕದಲ್ಲಿ ಹೋಗಿ ಕುಳಿತು ಅವರ ಕೈಹಿಡಿದೆ. ಅಚ್ಚರಿಯಿಂದ ನೋಡಿದರು. “ನೀವು ಇಷ್ಟೊಂದು ತಾಳ್ಮೆಯಿಂದ ನಮ್ಮ ಮಾತು ಕೇಳ್ತೀರಾ ಅಂತ ಅಂದುಕೊಂಡಿರಲಿಲ್ಲ ಅಂಕಲ್. ನಿಮ್ಮ ಬಾಯಿಂದ ಕೆಟ್ಟ ಕೆಟ್ಟ ಬಯ್ಗುಳಗಳನ್ನ ಕೇಳಲೇ ನಾನು ಸಿದ್ಧಳಾಗಿ ಬಂದಿದ್ದೆ. ನಿಮ್ಮಂತ ತಂದೆ ಪಡೆದ ಸೋನಿಯಾ ಪುಣ್ಯವಂತೆ. ನೀವಾಗಲೀ ಆಂಟಿಯಾಗಲೀ ಈ ಮದುವೆಗೆ ಒಪ್ಪದೇ ಹೋದರೆ ಶಶಿ ಸೋನಿಯಾರ ಪ್ರೀತಿಯ ಸಂಬಂಧ ಅಂತ್ಯವಾಗುವಂತೆ ನೋಡಿಕೊಳ್ಳೋದು ನನ್ನ ಜವಾಬ್ದಾರಿ. ನಿಮ್ಮ ವ್ಯಕ್ತಿತ್ವಕ್ಕಿಂತ ಅವರಿಬ್ಬರ ಪ್ರೀತಿ ದೊಡ್ಡದು ಅಂತ ನನಗನ್ನಿಸೋದಿಲ್ಲ. ಬರ್ತೀನಿ ಅಂಕಲ್' ಎಂದ್ಹೇಳುವಷ್ಟರಲ್ಲಿ ಕಣ್ಣಾಲಿಯಲ್ಲಿದ್ದ ತೆಳು ನೀರಿನ ಪರದೆ ಎಡಗೆನ್ನೆಯ ಮೇಲೆ ಹರಿಯುತ್ತಿತ್ತು. ಕಣ್ಣು ಉಜ್ಜಿಕೊಳ್ಳುತ್ತಾ ಹೊರಬಂದೆ. ಯಾಕೋ ಗೊತ್ತಿಲ್ಲ ರಾಮೇಗೌಡ ಅಂಕಲ್ ಮೇಲೆ ಮಮತೆ ಹುಟ್ಟಿತ್ತು. ಶಶಿ ಸೋನಿಯಾ ಮದುವೆ ಹೆಚ್ಚು ವಿರೋಧವಿಲ್ಲದೆ ನಡೆಯುತ್ತದೆ ಎಂಬ ಭಾವನೆ ಗಟ್ಟಿಯಾಗತೊಡಗಿತ್ತು. 

ವಾಪಸ್ಸಾಗುವಾಗ ರಾಜಿಯೇ ಕಾರು ಓಡಿಸುತ್ತಿದ್ದರು. ನನ್ನ ಕಣ್ಣ ನೀರೆಲ್ಲ ಬತ್ತಿದ ಮೇಲೆ ಬಾಗಿ ರಾಜಿ ಕೆನ್ನೆಗೊಂದು ಮುತ್ತು ನೀಡುತ್ತಾ 'ಪರವಾಗಿಲ್ಲಾರೀ ನೀವು. ನಾನು ಏನೋ ಅಂತಿದ್ದೆ. ಚೆನ್ನಾಗೇ ಮಾತಾಡ್ತೀರಾ... ಇಷ್ಟೆಲ್ಲ ಬ್ಯಾಲನ್ಸ್ ಡ್ ಆಗಿ ನೀವು ಮಾತಾಡಬಲ್ಲಿರಿ ಅನ್ನೋದನ್ನು ನಾ ಊಹಿಸಿರಲಿಲ್ಲ' ಎಂದೆ. ನಕ್ಕರಷ್ಟೆ, ಪ್ರತಿಕ್ರಿಯೆ ನೀಡಲಿಲ್ಲ.

ಮುಂದಿನ ಭಾಗವನ್ನು ಓದಲು ಇಲ್ಲಿ ಕ್ಲಿಕ್ಕಿಸಿ. 

4 comments:

  1. ಮತ್ತೆ ಮತ್ತೆ ಕಾಯುವಂತೆ ಮಾಡ್ತಿದೀರಿ. ದೈನಿಕ ಧಾರಾವಾಹಿಯಂತೆ ಪ್ರಕಟಿಸಿಬಿಡಿ

    ReplyDelete
    Replies
    1. ಅಷ್ಟೊಂದ್ ಬೇಗ ಬರಿಯೋದ್ ಕಷ್ಟ ಸಾರ್!

      Delete