Jul 22, 2019

ಒಂದು ಬೊಗಸೆ ಪ್ರೀತಿ - 23

ಡಾ. ಅಶೋಕ್.‌ ಕೆ. ಆರ್.‌
ಬೆಳಿಗ್ಗೆ ಮನೆ ತಲುಪುವವರೆಗೂ ಸಾಗರನಿಗೆ ಮೆಸೇಜ್ ಮಾಡಲು ಆಗಿರಲಿಲ್ಲ. ರಾಜಿ ಇನ್ನೂ ಆಫೀಸಿಗೆ ಹೊರಟಿರಲಿಲ್ಲ. ಸಾಗರನಿಗೆ ರಾತ್ರಿ ಮಾಡಿದ್ದ ಕಾಲ್ ಡೀಟೇಲ್ಸನ್ನು ಡಿಲೀಟ್ ಮಾಡಿದ್ದೀನಾ ಎಂದು ಮರುಪರಿಶೀಲಿಸಿದೆ. ರಾಜಿ ನನ್ನ ಮೊಬೈಲನ್ನು ತೆಗೆದು ಪರಿಶೀಲಿಸೋರೇನಲ್ಲ. ನಾನೂ ಅವರ ಮೊಬೈಲನ್ನು ಮುಟ್ಟುವವಳಲ್ಲ. ಆದರೂ ಸುಮ್ನೆ ಯಾಕೆ ರಿಸ್ಕು ಅಂತ್ಹೇಳಿ ಡಿಲೀಟ್ ಮಾಡ್ತಿದ್ದೆ. ರಾಜಿ ಆಫೀಸಿಗೆ ಹೊರಟ ಮೇಲೆ ಸಾಗರನಿಗೊಂದು 'ಗುಡ್ ಮಾರ್ನಿಂಗ್' ಮೆಸೇಜು ಕಳುಹಿಸಿದೆ. ಅರ್ಧ ಘಂಟೆಯ ನಂತರ ಉತ್ತರಿಸಿದ್ದ. ಻ಅಷ್ಟರಲ್ಲಿ ಗೇಟಿನ ಸದ್ದಾಯಿತು. ಮೆಸೇಜುಗಳನ್ನು ಡಿಲೀಟು ಮಾಡಿ ಬಾಗಿಲು ತೆರೆದರೆ ಶಶಿ ಬಂದಿದ್ದ, ಸೋನಿಯಾ ಕೂಡ ಜೊತೆಯಲ್ಲಿ ಬಂದಿದ್ದಳು. 

'ಏನ್ರಪ್ಪಾ ಯುವಪ್ರೇಮಿಗಳು. ಕೆಲಸಕ್ ಹೋಗೋದ್ ಬಿಟ್ಟು ಇಷ್ಟು ದೂರ. ಮದುವೆಯಾಗೋಕೆ ಓಡಿಬಂದಿದ್ದೀರಾ ಹೆಂಗೆ' ನಗುತ್ತಾ ಸೋನಿಯಾಳ ಹೆಗಲ ಮೇಲೆ ಕೈ ಹಾಕಿಕೊಂಡು ಒಳಗೆ ಕರೆದುಕೊಂಡೆ. 

“ಅಪ್ಪ ಅಮ್ಮ ಅಕ್ಕ ಭಾವ ಒಪ್ಕಂಡ ಮೇಲೆ ಓಡೋಗಿ ಮದುವೆಯಾಗೋ ದರ್ದು ನಮಗಿಲ್ಲಪ್ಪ" ಶಶಿಯ ದನಿಯಲ್ಲಿ ಒಂದಷ್ಟು ದಿನದಿಂದ ಕಾಣೆಯಾಗಿದ್ದ ಲವಲವಿಕೆ ಮರಳಿ ಬಂದಂತಿತ್ತು. ಸೋನಿಯಾಳ ಮುಖದಲ್ಲಿ ಮಾತ್ರ ಆ ಲವಲವಿಕೆ ಪ್ರತಿಫಲಿಸಲಿಲ್ಲ. 

ಒಂದಷ್ಟು ಸಮಯ ಮೂರೂ ಮಂದಿ ಸುಮ್ಮನೆ ಕುಳಿತಿದ್ದೆವು.

ಒಂದೊಂದೇ ಎಪಿಸೋಡು ಹುಡುಕುಡುಕಿ ಓದೋಕೆ ಬೇಸರವಾ? ಪೂರ್ತಿ ಇ - ಪುಸ್ತಕ ತೆಗೆದುಕೊಳ್ಳಲು ಇಲ್ಲಿ ಕ್ಲಿಕ್ಕಿಸಿ.
ಮೌನ ಮುರಿಯುತ್ತಾ 'ತಿಂಡಿ ತಿನ್ನಿ' ಎಂದೆ. 

“ತಿಂಡಿ ಆಯ್ತು" 

'ಮತ್ತೆ ಇನ್ನೇನ್ ಸಮಾಚಾರ. ಇಬ್ರೂ ಕೆಲಸಕ್ಕೆ ರಜಾನಾ ಇವತ್ತು' 

“ಹು" 

ಮುಂದಕ್ಕೆ ಏನು ಮಾತನಾಡಬೇಕೆಂದು ನನಗೆ ತೋಚಲಿಲ್ಲ. ಅವರಿಬ್ಬರು ಬಂದಿರುವ ಉದ್ದೇಶವೂ ನನಗೆ ತಿಳಿಯಲಿಲ್ಲ. ಹಿಂಗಿಂಗೆ ಅಂತ ಯಾರೊಬ್ಬರೂ ಮೆಸೇಜು ಮಾಡಿದಂತೆಯೂ ಇಲ್ಲ. ಕೆಲಸಕ್ ರಜಾ ಹಾಕಿ ಇದ್ದಕ್ಕಿದ್ದಂತೆ ಹಿಂಗೆ ಬಂದಿದ್ದಾರಂದ್ರೆ ಏನೋ ಮುಖ್ಯವಾದ ವಿಷಯವೇ ಇರ್ಬೇಕು. ಏನೂಂತ ಬಾಯಿಬಿಡೋಕೆ ಇಬ್ಬರಿಗೂ ಇನ್ನೂ ಒಂದಷ್ಟು ಸಮಯ ಬೇಕೋ ಏನೋ ಇರಲಿ ಎಂದುಕೊಳ್ಳುತ್ತಾ ಅಡುಗೆಮನೆಗೋಗಿ ಟೀ ಮಾಡಲು ಹಾಲಿಟ್ಟೆ. ಇಬ್ಬರೂ ಏನೋ ಗುಸು ಗುಸು ಮಾತನಾಡಿಕೊಳ್ಳುತ್ತಿರುವುದು ಕಿವಿಗೆ ಬಿತ್ತು. ಻ಅರೆಕ್ಷಣದ ನಂತರ ಸೋನಿಯಾ ಅಡುಗೆ ಮನೆಗೆ ಬಂದಳು. ಬಿಸಿಯಾಗುತ್ತಿದ್ದ ಹಾಲಿಗೆ ಒಂದಷ್ಟು ಸಕ್ಕರೆ ಒಂದಷ್ಟು ಟೀ ಪುಡಿ ಹಾಕಿದೆ. 

“ಅಕ್ಕಾ....” 

'ಹೇಳು ಸೋನಿಯಾ....' 

“ಅದೂ ಅದೂ....” 

'ಇದ್ಯಾಕವ್ವ ಹೊಸ ಪರಿಚಯದವರತ್ರ ಮಾತನಾಡಂಗೆ ನಾಚಿಕೊಳ್ತಿ? ಅದೇನ್ ಹೇಳು' 

“ಶಶಿ ಹೇಳ್ತಾನೆ. ನಮ್ಮನೇಲಿ ಒಪ್ಪಾಯ್ತು. ಇನ್ನು ನೀನು ನಿನ್ನ ಮನೆಯಲ್ಲಿ ಒಪ್ಪಿಸ್ಕೋ ಅಂತ. ನಂಗ್ ಅಷ್ಟು ಧೈರ್ಯ ಎಲ್ಲಿದೆ ನೀನೋ ನಿಮ್ಮ ಮನೆಯವರೋ ಬಂದು ಮಾತನಾಡಿ ಒಪ್ಪಿಸಿ ಅಂತ ನಾನೇಳ್ತಿದ್ದೀನಿ. ಅವರದಕ್ಕೆ ಒಪ್ತಿಲ್ಲ....” 

'ಯಾಕಂತೆ? ಅಷ್ಟೂ ಧೈರ್ಯ ಇಲ್ವಂತ ನಿಮ್ ವುಡ್ಬಿಗೆ' 

“ಧೈರ್ಯದ ಪ್ರಶ್ನೆಯೇನಲ್ಲ. ಮೊದಲು ನೀನು ಮಾತನಾಡು. ಆಮೇಲೆ ನಾ ಬಂದು ಮಾತನಾಡ್ತೀನಿ ಅಂತ ಹೇಳೋದು ನಾನು" ಶಶಿ ಸೋನಿಯಾ ಪಕ್ಕದಲ್ಲಿ ಬಂದು ನಿಂತ. ಇಬ್ಬರದೂ ಭಲೇ ಜೋಡಿ ಎಂದನ್ನಿಸಿತು. 

'ಯಾರ್ ಮಾತನಾಡಿದ್ರೆ ಏನಂತೆ? ಕೊನೆಗೆ ಒಪ್ಪಿಸಬೇಕಾಗಿರೋದಷ್ಟೇ ಇಲ್ಲಿರೋ ಗುರಿ. ಒಂದ್ ಕೆಲಸ ಮಾಡಿ ಇಬ್ಬರೂ ಒಟ್ಟಿಗೇ ಹೋಗಿ ಮಾತನಾಡಿ' 

“ಅದೆಂಗ್ ಆಗುತ್ತೆ" ಇಬ್ಬರೂ ಕೋರಸ್ಸಿನಲ್ಲಿ ಹೇಳಿದರು. ಹಾಲು ಕುದಿಯುತ್ತಿತ್ತು. ಗ್ಯಾಸ್‍‍ ಅನ್ನು ಸಿಮ್ಮಿಗೆ ಹಾಕಿ ಅವರೆಡೆಗೆ ನೋಡಿ ನಕ್ಕೆ. 

'ಅಲ್ಲಿಗೆ ನಿಮ್ಮ ಅಪ್ಪನತ್ರ ಮಾತಾಡೋಕೆ ಇಬ್ರಿಗೂ ಧೈರ್ಯ ಇಲ್ಲಾಂತ ಆಯ್ತು' 

ಇಬ್ಬರೂ ಹುಸಿ ನಗೆ ನಕ್ಕರು. 

'ಅದಕ್ಕೇನು ಮಾಡೋಣಾಂತ ಈಗ. ಹೆಂಗಿದ್ರೂ ಅಪ್ಪ ಅಮ್ಮ ಒಪ್ಪಿದ್ದಾರಲ್ಲ. ಅವರಿಗೇ ಹೋಗಿ ನೋಡೋದಿಕ್ಕೇಳು' ಶಶಿಗೆ ಹೇಳಿದ್ದಕ್ಕೆ ತಲೆ ಕೆರೆದುಕೊಂಡ. 

“ಅಪ್ಪನಿಗೆ ಹಂಗೇ ಹೇಳಿದೆ. ನೋಡಪ್ಪ. ನಾನ್ ಹೋಗ್ ಮಾತಾಡೋದು, ಅವರು ಬಾಯಿಗೆ ಬಂದಂತೆ ಹೇಳೋದು. ಮೊದಲೇ ನನ್ನ ಬಾಯಿ ಸರಿಯಿಲ್ಲ. ನಾನು ಅವರಿಗೆ ತಿರುಗಿಸಿ ಮುರುಗಿಸಿ ಮನಸೋ ಇಚ್ಛೆ ಬಯ್ಯೋದು. ಕೊನೆಗೆ ನಮ್ಮಿಬ್ಬರ ಜಗಳಕ್ಕೆ ನಿಮ್ಮ ಪ್ರೇಮ ಮದುವೆ ಎಲ್ಲಾ ಮುರಿದು ಬೀಳೋದು... ಆಮೇಲೆ ಎಲ್ರೂ ಸೇರಿ ನನಗೇ ಬಯ್ಯೋದು.... ನನಗವೆಲ್ಲಾ ತಲೆನೋವೇ ಬೇಡ. ಲವ್ ಮಾಡಿರೋರು ನೀವಿಬ್ಬರು. ನೀವಿಬ್ರೇ ಅವರ ಮನೆಯವರನ್ನು ಒಪ್ಪಿಸಿ. ಅವರು ಒಂದು ಮಟ್ಟಕ್ಕೆ ಒಪ್ಪಿದ್ದಾರೆ ಅಂತನ್ನಿಸಿದ ಮೇಲೆ ಬಂದು ಹೇಳಿ, ನಾನ್ ಬರ್ತೀನಿ. ಅದುಕ್ ಮುಂಚೆ ಕರೀಲೇಬೇಡಿ ಅಂತೇಳಿಬಿಟ್ರು" 

'ಮ್. ಈಗೇನೂ ಮಾಡೋದು ಅಂತ?' 

“ನೀವೂ ರಾಜೀವಣ್ಣ ಬಂದು ಮಾತನಾಡಿದ್ರೆ.....”ಸೋನಿಯಾ ಮಾತು ನಿಲ್ಲಿಸಿದಳು. 

'ಅಯ್ಯೋ ಇದೊಳ್ಳೆ ಚೆನ್ನಾಗಿದೆ. ಹುಡುಗನ ಕೈಲಿ ಮಾತಾಡೋಕಾಗಲ್ಲ, ಹುಡುಗಿ ಕೈಲಿ ಮಾತಾಡೋಕಾಗಲ್ಲ, ಹುಡುಗನ ಅಪ್ಪನಿಗೂ ಮಾತಾಡೋಕಾಗಲ್ಲ ಹುಡುಗನ ಅಕ್ಕ ಭಾವ ಹೋಗಿ ಹುಡುಗಿ ಅಪ್ಪನ ಬಳಿ ಬಯ್ಯಿಸಿಕೊಳ್ಳಬೇಕಾ? ಇದ್ಯಾವ ಸೀಮೆ ನ್ಯಾಯ ಅಂತ' ಸ್ಟೌವ್ ಆಫ್ ಮಾಡಿ ಹಾಲನ್ನು ಕೆಳಗಿಳಿಸಿ ಕೊಳದಪ್ಪಲೆಯ ಬಾಯಿಗೆ ಜಾಲರಿಯನ್ನಿಡಿದು ಟೀ ಸೋಸಿದೆ. ಕೊಳದಪ್ಪಲೆಯಿಂದ ಮೂರು ಲೋಟಕ್ಕೆ ಟೀ ಸುರುವಿದೆ. 

“ಹಂಗಲ್ಲಕ್ಕ. ನೀನಾದ್ರೆ ಚೆನ್ನಾಗಿ ಮಾತಾಡಿ ಮ್ಯಾನೇಜ್ ಮಾಡ್ತಿ......” ಶಶಿ ಹೇಳಿದ. 

ಇಬ್ಬರಿಗೂ ಒಂದೊಂದು ಲೋಟ ಕೊಡುತ್ತಾ ಸ್ವಲ್ಪ ಜೋರಾಗಿಯೇ ನಕ್ಕೆ. ನಗು ಅಸಹಜವಾಗಿತ್ತು, ಇಬ್ಬರೂ ನನ್ನೆಡೆಗೊಮ್ಮೆ ಅಚ್ಚರಿಯಿಂದ ನೋಡಿದರು. 

'ಅಲ್ಲಾ ಕಣೋ ನಾನು ಚೆನ್ನಾಗಿ ಮಾತಾಡಿ ಮ್ಯಾನೇಜ್ ಮಾಡೋ ಹಂಗಿದ್ದಿದ್ರೆ ನನ್ ಜೀವನ ಈ ಪುಟ್ಟ ಮನೆಯಲ್ಲಿ ಸಾಗುತ್ತಿತ್ತಾ?' ಅಸಹಜ ನಗುವಿನ ಹಿಂದಿನ ನೋವು ಅವನಿಗೂ ಅರ್ಥವಾಯಿತು. 

“ಸಾರಿ ಅಕ್ಕ" 

'ಹೋಗ್ಲಿ ಬಿಡು. ನಡೀರಿ ಹಾಲಿಗೆ' 

ಲೋಟದಿಂದ ಬಾಯಿಗೆ ಟೀ ಹರಿದು ಸಾಗುವ ಸದ್ದಷ್ಟೇ ಕೇಳಿಸುತ್ತಿತ್ತು. ಹೊರಗೆ 'ಮಲ್ಲಿಗೆ ಸೇವಂತಿಗೆ ಕನಕಾಂಬರ' ಻ಅಂತ ಹೂವಿನವ ಕೂಗುತ್ತಿದ್ದ. 

'ನಾನೇನೋ ತಮ್ಮ ಅಂತ ಬರ್ತೀನಿ. ಅವರು ಏನಂದ್ರೂ ಅನ್ನಿಸಿಕೊಳ್ತೀನಿ. ಆದರೆ ಇವರು ಬರೋದಿಕ್ಕೆ ಒಪ್ತಾರಾ? ಇವರು ಬಂದು ಒಂದಕ್ಕೊಂದು ಮಾತು ಬೆಳೆದು ಏನಾದ್ರೂ ಹೆಚ್ಚು ಕಮ್ಮಿ ಆದ್ರೆ ಯಾರು ಹೊಣೆ?' 

“ಆ ಚಿಂತೆ ಬೇಡಕ್ಕ. ನಿನ್ನೆ ರಾತ್ರೀನೇ ಭಾವನ ಜೊತೆ ಮಾತನಾಡಿದ್ದೀನಿ. ನೀ ಬಂದ್ರೆ ನಂದೇನೂ ತಕರಾರಿಲ್ಲ ಻ಅಂದ್ರು. ಅವರು ಒಪ್ಕಂಡಿದಾರೆ" 

'ಓಹೋ. ಎಲ್ರೂ ನಿರ್ಧಾರ ಮಾಡಾಗಿದೆ. ನಿನ್ ಭಾವ ನನ್ನತ್ರ ಬೆಳಿಗ್ಗೆ ಒಂದು ಮಾತೂ ಆಡದೆ ನಸುಗುನ್ನಿಕಾಯಿ ತರ ಇದ್ರು. ಇನ್ನೇನಪ್ಪ ನಂದೇನಿದೆ ಬಿಡು. ಗಂಡನ್ ಹಿಂದೆ ಬರ್ತಾ ಇರೋದು ಅಷ್ಟೇ' 

“ಹಂಗಲ್ಲಕ್ಕ" ಸೋನಿಯಾ ಗೋಗರೆದಳು. 

ಮುನಿದಿದ್ದ ಮುಖದ ಮೇಲೆ ನಗು ಮೂಡಿತು. 'ಸರಿ ಕಣ್ರಪ್ಪ. ಇವರೂ ಒಪ್ಪಿದ ಮೇಲೆ ನಂದೇನಿದೆ. ನನ್ ತಮ್ಮನ ಜೀವನದ ಜವಾಬ್ದಾರಿ ನನ್ನ ಮೇಲೂ ಇರ್ತದಲ್ಲ. ಇವತ್ತೆಂಗಿದ್ರೂ ನಂಗ್ ರಜೆ ಇದೆ. ಸಂಜೆ ಇವರು ಬಂದ ಮೇಲೆ ಫೋನ್ ಮಾಡ್ತೀನಿ. ಇರ್ತಾರಲ್ಲ ನಿಮ್ ತಂದೆ ಸಂಜೆ' 

“ಹು. ಇರ್ತಾರೆ" 

'ಅಮ್ಮ?' 

“ಅವರೂ ಇರ್ತಾರೆ" 

'ಸರಿ ಹಾಗಿದ್ರೆ. ಬರ್ತೀವಿ ಬಿಡಿ. ಹೆಂಗಿದ್ರೂ ರಜಾ ಹಾಕಿದಿರಲ್ಲೋ ಶಶಿ. ಹೋಗಿ ಚಿಕನ್ನೋ ಮಟನ್ನೋ ತಕೊಂಡ್ ಬಾ. ಬಿರಿಯಾನಿ ಮಾಡ್ತೀನಿ' 

“ಬೇಡ ಬಿಡಿ ಅಕ್ಕ....” ಸೋನಿಯಾ ನಾಚಿಕೊಂಡಳು. 

'ಮ್. ಹಂಗೆ. ಎಲ್ಲಿಗ್ ಹೊರಟ್ರಿ' 

“ಕೆ.ಆರ್.ಎಸ್ಸು" 

'ಸರಿ ಸರಿ ಹುಷಾರಾಗಿ ಹೋಗಿ ಬನ್ನಿ. ಇವರು ಬರೋದು ಐದರ ಮೇಲಾಗ್ತದೆ. ಐದೂವರೆ ಆರರಷ್ಟೊತ್ತಿಗೆ ಫೋನ್ ಮಾಡ್ತೀನಿ' 

ಇಬ್ಬರೂ ಹೊರಟರು. ಹೆಂಗೋ ಸೋನಿಯಾಳ ತಂದೆ ತಾಯಿ ಈ ಮದುವೆಗೆ ಒಪ್ಪಿಕೊಂಡುಬಿಟ್ಟರೆ ಸಾಕೆನ್ನಿಸಿತ್ತು ನನಗೆ. ಅಕಸ್ಮಾತ್ ಅವರು ಉಲ್ಟಾ ಹೊಡೆದರೆ ಮತ್ತೆ ನನ್ನ ಮದುವೆಯ ಸಂದರ್ಭದಲ್ಲಿ ನಡೆದ ಘಟನೆಗಳೇ ಪುನರಾವರ್ತಿತವಾಗಿಬಿಡುತ್ತೋ ಏನೋ ಎಂದು ಗಾಬರಿಯಾಯಿತು. ಶಶಿ ಪರಶುವಿನಂತಲ್ಲ, ಚಿಕ್ಕವನಾದರೂ ತುಂಬಾ ಪ್ರಬುದ್ಧ. ನನ್ನ ಕಷ್ಟಗಳನ್ನು ನೋಡೇ ಪ್ರಬುದ್ಧತೆ ಬಂತೋ ಏನೋ ಗೊತ್ತಿಲ್ಲ. ಒಂದು ವೇಳೆ ಸೋನಿಯಾಳ ಜೊತೆಗಿನ ಮದುವೆ ಮುರಿದುಬಿದ್ದರೂ ಪರಶುವಿನಂತೆ ಎಳಸು ಎಳಸಾಗಿ ಆಡಿ ಗಬ್ಬೆಬ್ಬಿಸುವ ಗುಣ ಇವನಲ್ಲಿಲ್ಲ. ಇಬ್ಬರ ಗೌರವಕ್ಕೂ ಚ್ಯುತಿ ಬರದಂತೆ ಸಂಬಂಧ ಕಳಚಿಕೊಳ್ಳಬಲ್ಲ. ಸಂಬಂಧ ಉಳಿಸಿಕೊಳ್ಳುವುದಕ್ಕೆ ಬೇಕಾದ ಜಾಣ್ಮೆಗಿಂತ, ಸಂಬಂಧವನ್ನು ಗೌರವಪೂರ್ಣವಾಗಿ ಕಡಿದುಕೊಳ್ಳುವುದಕ್ಕೆ ಹೆಚ್ಚಿನ ಜಾಣ್ಮೆ ತಾಳ್ಮೆ ಗುಣ ಬೇಕು. ಪುರುಷೋತ್ತಮನಿಗೂ ಆ ಗುಣಗಳಿದ್ದಿದ್ದರೆ ಇಬ್ಬರ ನಡುವೆ ಕೊನೇ ಪಕ್ಷ ಹೇಗಿದ್ದೀಯ ಅಂತ ಕೇಳುವಷ್ಟು ಸ್ನೇಹವಾದರೂ ಉಳಿದುಕೊಳ್ಳುತ್ತಿತ್ತೇನೋ. ಬಹುಶಃ ಅವನಲ್ಲಾ ಗುಣಗಳಿದ್ದಿದ್ದರೆ ನಾವಿಬ್ಬರೂ ಬೇರೆ ಬೇರೆಯಾಗುವ ಪ್ರಮೇಯವೇ ಬರುತ್ತಿರಲಿಲ್ಲವೇನೋ. 

"ಎಲ್ಲೋರಟೋದ್ಯೋ" ಸಾಗರನ ಮೆಸೇಜು ನನ್ನ ಯೋಚನೆಗಳಿಗೆ ತಡೆಯೊಡ್ಡಿತು. 

'ತಮ್ಮ ಬಂದಿದ್ದ. ಮಾತನಾಡ್ತಿದ್ದೆ. ಈಗ ಹೋದ. ನೀನು' 

“ಇವತ್ಯಾಕೋ ಲೈಬ್ರರಿಗೆ ಹೋಗೋಕೆ ಬೇಜಾಯ್ತು. ಇಲ್ಲೇ ರೂಮಲ್ಲೇ ಓದ್ಕೋತಿದ್ದೆ. ಈಗ ಸ್ನಾನ ಮುಗಿಸಿ ಬಂದು ಸಿಗರೇಟು ಹಚ್ಚಿದೆ!” 

'ಮ್. ಬಿಡುವಾಗಿದ್ರೆ ಫೋನ್ ಮಾಡ್ಲೇನೋ' 

ರಿಪ್ಲೈ ಬರಲಿಲ್ಲ. 'ಓದ್ಕೋ ಓದ್ಕೋ. ಇನ್ನೊಂದಿನ ಮಾತನಾಡೋಣ' ಅಂತ ಟೈಪಿಸಿ ಇನ್ನೇನು ಕಳುಹಿಸಬೇಕು ಫೋನ್ ರಿಂಗಣಿಸಿತು. ಸಾಗರನ ಫೋನು. ರೂಮಿಗೆ ಹೋಗಿ ಹಾಸಿಗೆಯ ಮೇಲೆ ಮಲಗಿಕೊಳ್ಳುತ್ತಾ ಫೋನ್ ರಿಸೀವ್ ಮಾಡಿದೆ. 

“ಫೋನ್ ಮಾಡ್ಬೇಕು ಅನ್ನಿಸಿದಾಗ ಮಾಡು. ಬಿಡುವಾಗಿದ್ರೆ ಮಾಡ್ಲಾ ಅಂತೆಲ್ಲ ಡೈಲಾಗ್ ಹೊಡೀಬೇಡ. ಬ್ಯುಸಿಯಾಗಿದ್ರೆ ನಾನೇ ಕಟ್ ಮಾಡ್ತೀನಿ" ಕೋಪದಲ್ಲಿ ಹೇಳಿದ. ನನಗೆ ನಗು ಬಂತು. 

'ಓಕೆ ಬಾಸ್' ಎಂದೆ. ಅವನ ನಗೆಯೂ ನನ್ನ ತಲುಪಿತು. 

“ಮತ್ತೆ ಇನ್ನೇನ್ ಸಮಾಚಾರ" 

'ಮ್. ವಿಶೇಷವೇನಿಲ್ಲ' 

“ನಿನ್ನ ದನಿ ಕೇಳಿದ್ರೆ ಹಂಗ್ ಅನ್ನಿಸೋದಿಲ್ವಲ್ಲ. ಏನೋ ವಿಶೇಷವಾದದ್ದೇನೋ ನಡೆದಂಗಿದೆ" 

'ಆಹಾ.... ಮುನ್ನೂರು ಕಿಲೋಮೀಟ್ರು ದೂರದಲ್ಲಿ ಕುಳಿತೇ ಎಲ್ಲಾ ಕಂಡುಹಿಡಿದು ಬಿಡೋನ ತರ ಆಡೋದ್ ನೋಡು' 

“ನಾವ್ ಹಂಗೆ ಬಲೇ ಬುದ್ವಂತ್ರು" 

'ಹೌದಾ. ಸರಿ ಹಂಗಾದ್ರೆ ಏನ್ ವಿಶೇಷ ಇರಬಹುದಂತ ಊಹಿಸು ನೋಡುವ' 

“ಮ್. ಏನೋ ಖುಷಿಯ ವಿಚಾರ. ಆದರೆ ನಿನಗೆ ಪೂರ್ತಿ ಖುಷೀನೂ ಇದ್ದಂಗಿಲ್ಲಪ್ಪ. ನಿನ್ ದನಿ ಕೇಳಿ ಇಷ್ಟ್ ಅನ್ನಿಸ್ತು ನೋಡು" 

ಅವನೇಳಿದ್ದು ಕೇಳಿ ನಂಗೋ ಭಯಂಕರ ಖುಷಿ ಆಯ್ತು. 

'ಹು ಕಣೋ. ಬರೋಬ್ಬರಿ ಹೇಳಿದೆ. ಅದೆಂಗೋ' 

“ಹೆಂಗೆ ಅಂದ್ರೆ. ನೀನೆ ಹೇಳಿದ್ಯಲ್ಲ ಅವತ್ತು ಟೆಲಿಪತಿ ಅಂತ!” 

'ಇರ್ಬೋದೇನೋಪ್ಪ'

“ಅಂತದ್ದೇನಿರಲ್ವೇ. ನನಗನ್ನಿಸೋದೇ ಬೇರೆ" 

'ಏನದು?' 

“ಗಂಡು ಹೆಣ್ಣು ಮೊದಮೊದಲು ಪರಿಚಿತರಾದಾಗ ಏನ್ ಮಾತಾಡಿದ್ರೂ ಏನ್ ಹೇಳಿದ್ರೂ ಅಯ್ಯ ಇವನು ಅಥವಾ ಇವಳು ಎಷ್ಟೊಂದ್ ನನ್ ತರಾನೇ ಇದಾರಲ್ಲ ಅಂತ ಅನ್ನಿಸುತ್ತೆ. ಪ್ರತಿಯೊಂದು ಮಾತು ನಮ್ಮದೇಯೇನೋ ಅಂತ ಅನ್ನಿಸುತ್ತೆ. ಹೋಗ್ತಾ ಹೋಗ್ತಾ ಅದು ಕಡಿಮೆ ಆಗಿಬಿಡುತ್ತೆ" 

'ಅದ್ಯಾಕ್ ಹಂಗೆ?' 

“ಮ್. ಪ್ರಕೃತಿ ಲೆಕ್ಕದಲ್ಲಿ ಹೆಣ್ಣು ಗಂಡು ಆಕರ್ಷಿತರಾಗಬೇಕು, ಸಂತತಿಯ ಉಳಿವಿಗೆ ಮುಂದುವರಿಕೆಗೆ. ಹೆಚ್ಚೆಚ್ಚು ಆಕರ್ಷಿತರಾಗಲಿ ಅಂತ ಮೊದಮೊದಲಿಗೆ ಇಂತವೆಲ್ಲ ಆಗ್ತವೆ ಅಂತ ನನಗನ್ನಿಸುತ್ತೆ" 

'ಮ್. ಅಂದ್ರೆ ಹೆಣ್ಣು ಗಂಡು ಹತ್ತಿರವಾಗೋದು ಸೆಕ್ಸ್ ಗೆ ಮಾತ್ರ ಅಂತ ಹೇಳ್ತೀಯ' 

“ಪ್ರಕೃತಿ ಪ್ರಕಾರ ಹೆಣ್ಣು ಗಂಡು ಅಂತ ಎರಡು ಜಾತಿಗಳಿರೋದೇ ಸೆಕ್ಸ್ ಮಾಡಿ ಮಕ್ಳು ಮಾಡಿಕೊಳ್ಳಲಿ ಅಂತ ಅಲ್ಲವಾ? ಸೋ ಅಷ್ಟರಮಟ್ಟಿಗೆ ಹೌದು. ಆದರೆ ನಾವು, ಅಂದರೆ ಮನುಷ್ಯರು ಪ್ರಕೃತಿಯನ್ನು ದಾಟಿ ಬಂದವರಂತೆ ಆಡುವುದರಿಂದ ಹತ್ತಿರವಾಗೋದು ಸೆಕ್ಸ್ ಗೆ ಮಾತ್ರ ಅಂತ ಅನ್ನಿಸೋದಿಲ್ಲ. ಮೇಲಾಗಿ ನಮಗೆ ಸೆಕ್ಸ್ ಮೂಲಕ ದೈಹಿಕವಾಗಿ ಒಂದಾಗುವುದರ ಜೊತೆಗೆ ಅಥವಾ ಕೆಲವೊಮ್ಮೆ ಒಂದಾಗುವುದಕ್ಕಿಂತ ಹೆಚ್ಚಾಗಿ ಮಾನಸಿಕವಾಗಿ ಒಂದಾಗುವುದರೆಡೆಗೆ ಹೆಚ್ಚು ಒಲವಿರುತ್ತೆ. ಈ ರೀತಿಯಾಗಿ ನಾವು ಏನೇ ಹೇಳಿಕೊಂಡರೂ ಕೊನೆಗೆ ಗಂಡು ಹೆಣ್ಣಿನ ನಡುವೆ ಮೂಡುವಷ್ಟು ಆತ್ಮೀಯತೆ ಗಂಡು ಗಂಡಿನ ನಡುವೆ ಹೆಣ್ಣು ಹೆಣ್ಣಿನ ನಡುವೆ ಮೂಡೋದು ಅಪರೂಪ. ಹೊಮೋಗಳನ್ನು ಹೊರತುಪಡಿಸಿ. ಈಗ ನೀನೇ ಹುಡುಗ ಆಗಿದ್ರೆ ಅಥವಾ ನಾನೇ ಹೆಣ್ಣಾಗಿದ್ದರೆ ಮಧ್ಯರಾತ್ರೀಲಿ ಘಂಟೆಗಟ್ಟಲೆ ಮಾತನಾಡ್ತಿದ್ವಾ?” 

'ಮ್. ಬಹುಶಃ ಮಾತನಾಡ್ತಿರಲಿಲ್ಲ. ಹುಡುಗಿಯಾಗಿ ಹುಡುಗೀರತ್ರ ಹೇಳ್ಕೊಳ್ಳೋಕಾಗದ ಎಷ್ಟೋ ವಿಷಯಗಳನ್ನು ನಿನ್ನೊಡನೆ ಹಂಚಿಕೊಳ್ಳಬಹುದು. ನಿನಗೂ ಹಂಗೇ ಅನ್ಸುತ್ತೆ ಅಂದ್ಕೋತೀನಿ' 

“ಹೌದು. ಅದೂ ಒಂದು ಕಾರಣಾನೇ. ಜೊತೆಗೆ ನಾವಿಬ್ಬರೂ ದಿನಾ ಮುಖಾಮುಖಿಯಾಗಲು ಸಾಧ್ಯವಿಲ್ಲದ ಪರಿಸ್ಥಿತಿಯಲ್ಲಿದ್ದೀವಿ. ದೂರದಲ್ಲಿರೋದು, ಫೋನಿನಲ್ಲಿ ಹರಟೋದು ಕೂಡ ಎಲ್ಲಾ ವಿಷಯ ಚರ್ಚಿಸಲು ಅನುವು ಮಾಡಿಕೊಟ್ಟಿದೆ ಅಂದ್ಕೋತೀನಿ. ನಿಯಮಿತವಾಗಿ ಸಿಗೋರತ್ರ ಇಷ್ಟೆಲ್ಲ ಹೇಳ್ಕೋಳ್ಳೋದು ಕಷ್ಟದ ಸಂಗತಿ ಅಲ್ವ?” 

'ಇರಬಹುದೇನೋ ಗೊತ್ತಿಲ್ಲಪ್ಪ. ನಂಗೇನೋ ನಿನ್ನ ಜೊತೆ ಸ್ನೇಹ ಬೆಳೆಸಬೇಕು ಅಂತ ಮೆಡಿಕಲ್ ಓದುವಾಗ್ಲಿಂದಲೇ ಆಸಕ್ತಿಯಿತ್ತು. ಅವತ್ತಿನ ಆಸಕ್ತಿ ಇವತ್ತಿನ ವಾಸ್ತವಕ್ಕೆ ಪೂರಕವಾಗಿ ಸ್ನೇಹದಿಂದಿರುವಂತೆ ಮಾಡಿದೆ ಅನ್ನಿಸುತ್ತೆ. ನಿನ್ನಲ್ಲೇನೂ ಆ ತರದ ಆಸಕ್ತಿ ಇರದ ಕಾರಣ …....' 

ನನ್ನ ಮಾತುಗಳನ್ನು ತುಂಡರಿಸುತ್ತಾ "ಸ್ನೇಹ ಪ್ರೀತಿ ಎಲ್ಲಾ ಆಸಕ್ತಿಯ ಕಾರಣದಿಂದಾಗ್ತದೆ ಅನ್ನೋದಕ್ಕಿಂತ ಆಕಸ್ಮಿಕವಾಗಿ ಆಗ್ತದೆ. ತಿಂಗಳುಗಳ ಮುಂಚೆ ನಾವಿಬ್ರೂ ಹಿಂಗ್ ಹರಟುತ್ತಿದ್ವಿ ಅಂತ ಯಾರಾದ್ರೂ ಹೇಳಿದ್ರೆ ನಕ್ಕುಬಿಡುತ್ತಿರಲಿಲ್ವ. ಆಕಸ್ಮಿಕವಾಗಿ ಪರಿಚಿತರಾಗ್ತೀವಿ. ಆಮೇಲೆ ಆಸಕ್ತಿಗಳಿಗನುಗುಣವಾಗಿ ಸ್ನೇಹ ಮೂಡ್ತದೇನೋ"

ಮುಂದಿನ ಭಾಗವನ್ನು ಓದಲು ಇಲ್ಲಿ ಕ್ಲಿಕ್ಕಿಸಿ. 

No comments:

Post a Comment