Jul 28, 2019

ಒಂದು ಬೊಗಸೆ ಪ್ರೀತಿ - 24

ಡಾ. ಅಶೋಕ್.‌ ಕೆ. ಆರ್.‌
'ನಾ ನೇರ್ವಾಗಿ ಹೇಳಿದ್ನ ನೀ ಸುತ್ತಿ ಬಳಸಿ ಹೇಳಿದೆ ಅಷ್ಟೇ' ನಕ್ಕೆ. 

“ನಾವಂಗೆ ಚೂರ್ ಸುತ್ತಿ ಬಳಸೋದ್ ಜಾಸ್ತಿ" 

'ಎಲ್ಲಾದ್ರಲ್ಲೂನಾ' ತುಂಟ ನಗೆ ಮೂಡಿತು. 

“ಅಂದ್ರೆ" ಮುಗ್ಧನಂತೆ ನಾಟಕವಾಡಿದ. 

'ಅಂದ್ರೆ... ಎಲ್ಲಾ.....ದ್ರ.....ಲ್ಲೂ....ನಾ' ಅಂತ 

“ಏನೋ ಗೊತ್ತಿಲ್ಲಪ್ಪ. ಅನುಭವ ಇಲ್ಲ. ನಾನಿನ್ನೂ ವರ್ಜಿನ್ನು" 

'ಆಹಾ ವರ್ಜಿನ್ನಂತೆ....' 

“ಹು ಕಣೇ ನಿಜವಾಗ್ಲೂ" 

'No one is virgin by heart ಕಣೋ' 

ಒಂದ್ನಿಮಿಷ ಅವ ಮಾತನಾಡಲಿಲ್ಲ. 

“ಹೌದಲ್ಲ. ಭಯಂಕರ ಸತ್ಯ ಹೇಳಿದೆ ಮಾರಾಯ್ತಿ. ಮನಸ್ಸಿನಿಂದ ಯಾರೂ ವರ್ಜಿನ್ನುಗಳಾಗೋಕೆ ಸಾಧ್ಯವೇ ಇಲ್ಲ. ಆ ಲೆಕ್ಕಕ್ಕೆ ನಮ್ ವರ್ಜಿನಿಟಿ ಒಂಭತ್ತನೇ ಕ್ಲಾಸಿಗೇ ಮುಗಿದೋಯ್ತ ಅಂತ" 

'ಹ. ಹ. ಯಾರಪ್ಪ ಅದು ನಮ್ ಹುಡುಗುನ್ ವರ್ಜಿನಿಟಿ ಕಿತ್ಕೊಂಡೋರು' 

“ನೆನಪಿಲ್ವೇ. ಸುಮಾರ್ ಜನ ಇರ್ತಾರಲ್ಲ" ಇಬ್ಬರ ನಗು ಒಬ್ಬರಿಗೊಬ್ಬರಿಗಪ್ಪಳಿಸಿತು. 

“ಒಂದೆಂತದೋ ಕೇಳ್ಲಾ... ನೀ ಬೇಸರ ಮಾಡ್ಬಾರ್ದು" 

'ಕೇಳೋ... ಬೇಸರ ಯಾಕೆ' 

“ನೀನ್ಯಾವಾಗ ವರ್ಜಿನಿಟಿ..... ಮನಸ್ಸಿನ ವರ್ಜಿನಿಟಿ ಅಲ್ಲ.....ದೇಹದ ವರ್ಜಿನಿಟಿ ಕಳ್ಕಂಡಿದ್ದು"

ಒಂದೊಂದೇ ಎಪಿಸೋಡು ಹುಡುಕುಡುಕಿ ಓದೋಕೆ ಬೇಸರವಾ? ಪೂರ್ತಿ ಇ - ಪುಸ್ತಕ ತೆಗೆದುಕೊಳ್ಳಲು ಇಲ್ಲಿ ಕ್ಲಿಕ್ಕಿಸಿ.

'ನಿನ್ ಪ್ರಶ್ನೆ ಇದೇನಾ?' 

“ಅಂದ್ರೆ. ಇದೇ ಪ್ರಶ್ನೆ" 

'ಪ್ರಶ್ನೆಯ ಭಾವವೇನೋ ಇದೇನೇ. ಆದರೆ ನಿನ್ನ ಮನಸ್ಸಲ್ಲಿ ಮೂಡಿದ ಪ್ರಶ್ನೆ ಬೇರೆಯೇ ಇರಬೇಕಲ್ವ' 

“಻ಏನಿತ್ತು ಅಂತ ನಿನ್ನ ಭಾವನೆ?” 

'ನೀನೇ ಹೇಳು' 

“ನೀನೇ ಹೇಳು" 

'ಪರಶು ಜೊತೆ ಸೆಕ್ಸ್ ಮಾಡಿದ್ಯಾ ಅಂತ ಪ್ರಶ್ನೆ ಮೂಡಿರ್ತದೆ. ಅದೆಂಗ್ ಹಂಗ್ ನೇರವಾಗಿ ಕೇಳೋದು ಅಂತ ಹಿಂಗ್ ಕೇಳಿರ್ತಿ' 

“ಹ ಹ ಹೌದು" 

'ನೋಡ್ದಾ ಟೆಲಿಪತಿ ವರ್ಕ್ ಆಗ್ತಿದೆ!' 

“ಇಬ್ರುನ್ನೂ ಹತ್ರ ಮಾಡ್ಸಿ ಎಂತದೋ ಒಂದು ಆಗ್ಲಿಕ್ಕೆ ಟೆಲಿಪತಿ ಕೆಲಸ ಮಾಡ್ತಿದ್ಯೋ ಏನೋ" 

'ಏನೋ ಒಂದು. ಹೆಂಗೆಂಗ್ ಹೋಗ್ತದೋ ಹಂಗಂಗ್ ಹೋಗೋದು ಅಷ್ಟೇ' 

“ಅದೂ ಸರೀನೇ. ನನ್ನ ಪ್ರಶ್ನೆಗೆ ಉತ್ತರ ಹೇಳಲಿಲ್ಲ" 

'ಹೇಳಲೇಬೇಕಾ?' 

“ನೋಡು ನಿನ್ನಿಷ್ಟ" 

'ಥೂ ಹೋಗೋ ನೀನ್ ಸರಿಯಿಲ್ಲ. ಒಂದ್ಸಲಾನಾದರೂ ಹು ಹೇಳಲೇಬೇಕು ಅಂತ ಹೇಳೋನೇ ಅಲ್ಲ ನೀನು. ಯಾವಾಗ ನೋಡಿದ್ರೂ ನಿನ್ನಿಷ್ಟ ನಿನ್ನಿಷ್ಟ ಅನ್ನೋದು' 

“ನನ್ನಿಷ್ಟದಂಗೇ ನೀ ಇರು ಅಂತೆಲ್ಲ ಹೇಳೋ ಅಧಿಕಾರ ಇಲ್ವಲ್ಲಪ್ಪ ನಂಗೆ" ಸಾಗರನ ದನಿಯಲ್ಲಿ ಬೇಸರವಿತ್ತು. 

'ಅದ್ಯಾಕ್ ಇಲ್ಲ. ಸ್ನೇಹದ ಅಧಿಕಾರವಂತೂ ಇದ್ದೇ ಇದೆಯಲ್ಲ' 

“ಅಲ್ವ. ಸರಿ ಹಂಗಾದ್ರೆ ಹೇಳು" 

'ಮದುವೆಯಾದ ಮೇಲೆ ವಯನಾಡಿನ ಬಳಿಯ ಒಂದು ರೆಸಾರ್ಟಿನಲ್ಲಿ ನನ್ನ ದೈಹಿಕ ವರ್ಜಿನಟಿ ಕಳ್ಕೊಂಡಿದ್ದು' 

“ರೆಸಾರ್ಟಿಗೆಲ್ಲ ಹೋಗಿದ್ರಾ?!” 

'ಅಯ್ಯೋ. ಪರಶು ಜೊತೆ ಅಲ್ವೋ. ರಾಜೀವನ ಜೊತೆ ಹೋಗಿದ್ದು' 

“ಸೀರಿಯಸ್ಲಿ" 

'ಸೀರಿಯಸ್ಲಿ' 

“ನಿಂದು ಪರಶೂದು ಎಷ್ಟು ವರ್ಷದ ಲವ್ವು" 

'ಮ್. ನನ್ನ ಮದುವೆಗೆ ಹದಿನೈದು ದಿನ ಇದೆ ಅನ್ನುವವರೆಗೂ ಲವ್ವಿತ್ತು. ಹೆಚ್ಚು ಕಡಿಮೆ ಏಳೂ ಏಳೂವರೆ ವರ್ಷ ಻ಅನ್ನು' 

“ಅಷ್ಟ್ ವರ್ಷದ ಲವ್ವಿದ್ದರೂ ಸೆಕ್ಸ್ ಮಾಡಿರಲಿಲ್ಲವಾ?” 

'ರೊಮ್ಯಾನ್ಸ್ ಇರ್ತಿತ್ತು. ಫೋರ್ ಪ್ಲೇ ಇರ್ತಿತ್ತು. ಸೆಕ್ಸ್ ಮಾಡಬೇಕು ಅಂತ ಇಬ್ಬರಿಗೂ ಅನ್ನಿಸಿರಲಿಲ್ಲ. ಹೇಗಿದ್ರೂ ಮದುವೆಯಾಗ್ತೀವಲ್ಲ. ಈಗ್ಲೇ ಎಲ್ಲಾ ಮಾಡಿಬಿಟ್ರೆ ಆಮೇಲೆ ಏನ್ ಮಾಡೋದು ಅಂತ ನಗಾಡ್ತಿದ್ದೊ. Sometimes I feel ಅಷ್ಟು ವರ್ಷದ ಸಾಂಗತ್ಯದಲ್ಲಿ ಸೆಕ್ಸ್ ಮಾಡಬೇಕಿತ್ತು ಅನ್ನಿಸ್ತದೆ. ಅಷ್ಟೊಂದೆಲ್ಲ ಪ್ರೀತಿ ಇದ್ದವನ ಜೊತೆ ನನ್ನ ದೈಹಿಕ ವರ್ಜಿನಿಟಿ ಕಳ್ಕೋಬೇಕಿತ್ತೇನೋ ಅನ್ನಿಸ್ತದೆ' 

“ಅದೆಲ್ ಭೇಟಿಯಾಗ್ತಿದ್ರಿ ನೀನು ಪರಶು" 

'ನಮ್ಮ ಮನೆಯಲ್ಲಿ ಯಾರೂ ಇಲ್ಲದಾಗ ಅವನೇ ಮನೆಗೆ ಬರೋನು. ಒಂದೊಂದ್ಸಲ ನನ್ನ ತಮ್ಮ ಇರ್ತಿದ್ದ. ತಮ್ಮನಿಗೆ ಪರಶುನನ್ನು ಭಾವ ಅಂತಲೇ ಪರಿಚಯಿಸಿದ್ದೆ. ಒಂದೆರಡು ಸಲ ಪರಶು ಮನೆಗೂ ಹೋಗಿದ್ದೆ. ಸಿಕ್ಕಾಗೆಲ್ಲ ರೊಮ್ಯಾನ್ಸ್ ಇರ್ತಿರಲಿಲ್ಲಪ್ಪ. ಅಪರೂಪಕ್ಕಿರೋದು. ಹೆಚ್ಚಿನ ಸಲ ನಾ ಅವನ ತೊಡೆ ಮೇಲೆ ಮಲಕ್ಕೊಂಡೋ ಅವನು ನನ್ನ ತೊಡೆ ಮೇಲೆ ಮಲಕ್ಕೊಂಡೋ ಇರ್ತಿದ್ದೊ. ಸಿಕ್ಕಷ್ಟು ಸಮಯ ಹರಟೆ ಹೊಡೀತಿದ್ದೊ ಅಷ್ಟೇ. ಎರಡನೇ ವರ್ಷದ ಎಂಬಿಬಿಎಸ್ ನಲ್ಲಿದ್ದಾಗ ಅಂದ್ರೆ ಲವ್ ಶುರುವಾಗಿ ಮೂರು ವರ್ಷದ ನಂತರ ಮೊದಲ ಬಾರಿಗೆ ಮುತ್ತು ವಿನಿಮಯ ಮಾಡ್ಕಂಡಿದ್ದು' 

“ಪಾಪ ಪರಶು" 

'ಪಾಪ ಯಾಕೆ?' 

“ಯಾಕೂ ಇಲ್ಲ" 

'ಆ ವಿಷಯದಲ್ಲಿ ಅವನು ತುಂಬಾ ಭಿನ್ನ. ದೈಹಿಕ ಆಕರ್ಷಣೆಯ ಬಗ್ಗೆ ಯಾವತ್ತಿಗೂ ತಲೆಕೆಡಿಸಿಕೊಳ್ಳಲೇ ಇಲ್ಲ ಅವನು. ಹೇಗಿದ್ರೂ ಮದುವೆಯಾಗೇ ಆಗ್ತೀವಲ್ಲ ಅನ್ನೋ ನಂಬುಗೆ ಅಚಲವಾಗಿತ್ತು' 

“ಪ್ರೀತಿಸೋರಿಗೆಲ್ಲ ಆ ನಂಬಿಕೆ ಇದ್ದೇ ಇರ್ತದಲ್ಲ" 

'ಅದ್ ಹೌದು' 

“ಲೇ ಗೂಬೆ. ಅದೆಂತದೋ ವಿಶೇಷವಾದದ್ದು ನಡೆದಿದೆ ಇವತ್ತು ಅಂತ ಮಾತು ಶುರು ಮಾಡಿದ್ದು. ಎಲ್ಲೆಲ್ಗೋ ಹೊರಟೋದೋ. ಅದೆಂತದದು ನಿನ್ನಲ್ಲಿ ಖುಷಿ ಮತ್ತು ದುಃಖವೆರಡನ್ನೂ ಮೂಡಿಸಿದ ಸಂಗತಿ" 

'ಅಲ್ವಾ. ನಿನ್ ಜೊತೆ ಮಾತಾಡ್ತಿದ್ರೆ ಎಲ್ಲೆಲ್ಲೋ ಹೊರಟೋಗ್ತೀನಿ ನೋಡು. ಒಂಥರಾ ಟೈಮ್ ಮಿಶಿನ್ನಿನಲ್ಲಿ ಕುಳಿತ ಹಾಗಾಗುತ್ತೆ' ಎಂದ್ಹೇಳುತ್ತಾ ಶಶಿ ಸೋನಿಯಾಳ ವಿಷಯ, ಅಪ್ಪನ ದ್ವಂದ್ವ, ನಾನು ರಾಜೀವ ಹುಡುಗಿ ಮನೆಗೆ ಹೋಗಿ ಸೋನಿಯಾಳ ಅಪ್ಪನ ಜೊತೆ ಮಾತನಾಡಬೇಕಾದ ಕಷ್ಟದ ಪರಿಸ್ಥಿತಿಯ ಬಗ್ಗೆಯಲ್ಲ ಸಾಗರನಿಗೆ ವಿವರಿಸಿದೆ. 

“ಹಂಗೆ. ಅದೆಂಗೆ ನಿಮ್ಮಪ್ಪ ನಿನ್ನ ಮದುವೆಗೆ ಸುತಾರಾಂ ಒಪ್ಪದೆ ಮಗನ ಮದುವೆಗೆ ಒಪ್ಪಿಗೆ ನೀಡಿಬಿಟ್ಟಿದ್ದಾರೆ? ಲೆಕ್ಕದ ಪ್ರಕಾರ ಇಬ್ಬರೂ ಬೇರೆ ಜಾತಿಯವರನ್ನು ಇಷ್ಟಪಟ್ಟಿದ್ದೀರ ಅಂದ ಮೇಲೆ ಎರಡನ್ನೂ ಒಪ್ಪಬೇಕಿತ್ತು ಅಥವಾ ಎರಡನ್ನೂ ನಿರಾಕರಿಸಬೇಕಿತ್ತು ಅಲ್ವಾ?” 

'ಹಂಗೇನಪ್ಪ ಪ್ರಪಂಚ. ಹೆಣ್ಣು ಮಗಳಿಗೆ ಒಂದು ನ್ಯಾಯ ಗಂಡಿಗಿನ್ನೊಂದು ನ್ಯಾಯ. ಏನಾದ್ರೂ ಇದೇ ಪ್ರಶ್ನೇನ ಻ಅಪ್ಪನಿಗೆ ನಾ ಕೇಳಿದ್ರೆ ಅದಕ್ಕೂ ಯಾವುದಾದರೂ ಒಂದು ಸಿದ್ಧ ಉತ್ತರ....ಕೇಳಿದವರಿಗೆ ಅಹುದಹುದೆನ್ನಿಸಬೇಕು ಅಂತಹ ಉತ್ತರ ನೀಡುತ್ತಿದ್ದುದರ ಬಗ್ಗೆ ಅನುಮಾನವಿಲ್ಲ' 

“ಹೋಗ್ಲಿ ಬಿಡು. ಆಗಿದ್ದರ ಬಗ್ಗೆ ಚಿಂತಿಸಿ ಫಲವೇನು" 

'ಚಿಂತಿಸ್ತೀವೋ ಬಿಡ್ತೀವೋ ಆಗಿದ್ದರ ಪರಿಣಾಮಗಳಂತೂ ಇನ್ನೂ ನನ್ನನ್ನು ಕಾಡ್ತಿವೆ. ಬಹುಶಃ ಈ ಜೀವನ ಪೂರ್ತಿ ಕಾಡ್ತವೆ. ಮೇಲಾಗಿ ಪರಶು ಜೊತೆ ನನ್ನ ಮದುವೆ ಆಗದೇ ಇದ್ದಿದ್ದಕ್ಕೆ ಅಪ್ಪ ಒಬ್ಬರೇ ಕಾರಣ ಅಂತ ನನಗನ್ನಿಸೋದಿಲ್ಲ. ನಾನು ಪರಶು ಪರಶುವಿನ ಅಮ್ಮ, ಎಲ್ಲರೂ ಕಾರಣಕರ್ತರೇ' 

“ಮ್" 

'ಏನೋ. ಆಗಿದ್ದೆಲ್ಲ ಒಳ್ಳೇದಕ್ಕೆ ಅಂತ ಸುಳ್ಸುಳ್ಳೇ ಸಮಾಧಾನ ಮಾಡ್ಕಂಡು ಬದುಕಬೇಕು ಕಣೋ' 

“ಯಾಕೆ ಹಂಗಂತಿ. ರಾಜೀವ ಒಳ್ಳೆ ಗಂಡ ಅಂತ ನೀನೇ ಹೇಳ್ತಿದ್ದೆ ಅವತ್ತು. ಖುಷಿಯಾಗಿಲ್ವ ಈಗ ನೀನು" 

'ಖುಷಿಯಾಗಿದ್ದೀನಿ ಅಂದ್ಕೊಂಡ್ರೆ ಖುಷಿಯಾಗಿದ್ದೀನಿ. ಇಲ್ಲಾಂದ್ರೆ ಇಲ್ಲ' 

“ಹಂಗ್ಯಾಕೇಳ್ತಿ?” 

'ಇವರೇನೋ ಒಳ್ಳೆಯವರೇ ಕಣೋ. ನನ್ನ ಹಳೆ ಲವ್ ಸ್ಟೋರಿ ಬಗ್ಗೆ ಗೊತ್ತಿದ್ರೂ ನನ್ನ ಮದುವೆಯಾದ್ರು. ಅದರ ನೆಪ ಹೇಳಿಕೊಂಡು ನನ್ನನ್ನು ಅವಮಾನಿಸೋದಾಗ್ಲಿ ಮತ್ತೊಂದಾಗ್ಲಿ ಮಾಡೋರಲ್ಲ. ಆದರೆ ಇವರಿಗೆ ತುಂಬಾ ಕೀಳರಿಮೆ. ಎಂ.ಫಾರ್ಮ ಮಾಡಿಕೊಂಡಿದ್ದಾರೆ. ಅವರ ಓದಿಗೆ ತಕ್ಕ ಕೆಲಸ ಸಿಕ್ಕಿಲ್ಲ. ನನಗಿಂತ ಕಡಿಮೆ ಸಂಬಳ. ನಾನೇನೋ ಆ ವಿಚಾರವಾಗಿ ತಲೆ ಕೆಡಿಸಿಕೊಂಡಿಲ್ಲ. ಯಾರು ದುಡಿದರೆ ಏನು ಅನ್ನೋದು ನನ್ನ ಭಾವನೆ. Infact ನನ್ನ ಎ.ಟಿ.ಎಂ ಕಾರ್ಡೆಲ್ಲ ಻ಅವರ ಬಳೀನೇ ಇರುತ್ತೆ. ನನ್ನ ಖರ್ಚಿಗೆ ಬೇಕಾದಾಗ ಻ಅವರತ್ರ ಕೇಳಿ ಇಸ್ಕೋತೀನಿ. ಒಂದಷ್ಟು ದಿನ ಚೆನ್ನಾಗಿರ್ತಾರೆ. ಮತ್ತೊಂದಷ್ಟು ದಿನ ತುಂಬಾ ಗೊಂದಲದಲ್ಲಿರ್ತಾರೆ. ಗೊಂದಲದಲ್ಲಿರಬೇಕಾದರೆ ಮನಸ್ಸಿಗೆ ತೋಚಿದಮತೆ ಮಾತಾಡ್ತಾರೆ. ಹಂಗ್ ಮಾತಾಡಬೇಕಾದ್ರೂ ಪರಶು ವಿಷಯ ಎತ್ತಲ್ಲ ಪಾಪ. ನಿನ್ನಿಂದ ನನ್ನ ಜೀವನ ಹಿಂಗಾಗೋಯ್ತು, ಮನೆಯವರಿಂದಲೂ ದೂರವಾಗಬೇಕಾಯ್ತು. ಬ್ಯುಸಿನೆಸ್ ಮಾಡುವ ಅಂದ್ರೂ ಅಡ್ಡಗಾಲಾಕ್ತಿ ಅಂತ ಏನೇನೋ ಮಾತಾಡ್ತಾರೆ. ಸರಿ ಯಾವ ಬ್ಯುಸಿನೆಸ್ಸು ಅಂದ್ರೆ ಅವರ ಬಳಿ ಉತ್ತರ ಇರೋದಿಲ್ಲ. ಅದರ ಬಗ್ಗೆ ಅವರು ಯೋಚನೇನೂ ಮಾಡಿರೋದಿಲ್ಲ. ಹೇಳ್ಕೊಳ್ಳೋಕೆ ಒಂದ್ ವಿಷಯ ಅಷ್ಟೇ ಅವರಿಗೆ. ಹೋಗ್ಲಿ ಸಂಬಳ ಕಡಿಮೆ ಇದೆಯಂತ ಖರ್ಚು ಕಮ್ಮಿ ಮಾಡ್ತಾರಾ? ಇಲ್ಲ. ಬೇಡಾರೀ ಬೇಡಾರೀ ಅಂದ್ರೂ ಕಾರ್ ತೆಗೆಸಿದ್ರೂ. ಅರ್ಧದಷ್ಟು ಸಂಬಳ ಕಾರಿನ ಲೋನಿಗೇ ಹೋಗಿಬಿಡ್ತದೆ. ಹೋಟ್ಲು ಬಟ್ಟೆ ಅಂತ ಬೇಡದ ಖರ್ಚು ಮಾಡ್ತಾನೇ ಇರ್ತಾರೆ. ಅವರ ಜೊತೆ ಸೇರಿ ಸೇರಿ ನಾನೂ ಇತ್ತೀಚೆಗೆ ಹೆಚ್ಚು ಖರ್ಚು ಮಾಡಿಬಿಡ್ತೀನಿ. ತಿಂಗಳ ಕೊನೆಯಲ್ಲಿ ಅಮ್ಮನ ಬಳಿ ಒಂದಷ್ಟು ಕೈಸಾಲ ಮಾಡುವಷ್ಟರ ಮಟ್ಟಿಗೆ ಖರ್ಚು ಮಾಡಿಬಿಟ್ಟಿರ್ತೀನಿ. ಹಂಗ್ ನೋಡುದ್ರೆ ನಮ್ಮಿಬ್ಬರ ಸಂಬಳದಲ್ಲಿ ನೆಮ್ಮದಿಯಾಗೇ ಬದುಕಬಹುದು. ನೆಮ್ಮದಿಯಾಗಿ ಬದುಕೋ ಆಸೆ ರಾಜೀವನಿಗಿಲ್ಲ, ಇನ್ನು ನನ್ನಲ್ಲಂತೂ ನೆಮ್ಮದಿಯೇ ಇಲ್ಲ ಬಿಡು' ಕಣ್ಣಂಚು ತೇವವಾಗಿತ್ತು. 

“ಯಾಕೆ ಇಷ್ಟೊಂದು ದುಃಖದಲ್ಲಿ ಮಾತಾಡ್ತಿದ್ದಿ? ಇನ್ನೂ ಇಬ್ಬರಿಗೂ ಚಿಕ್ಕ ವಯಸ್ಸೇ ಅಲ್ಲವಾ. ಸರಿ ಹೋಗ್ತದೆ ಬಿಡು. ಪಿಜಿ ಏನಾದ್ರೂ ತಗೋಬೇಕಿತ್ತು" 

'ಎಲ್ಲಿಂದ ತಗೊಳ್ಳೋದೋ. ಕೆಲಸ ಬಿಟ್ಟು ಕುಳಿತು ಓದಬೇಕು. ಸದ್ಯದ ಪರಿಸ್ಥಿತಿಯಲ್ಲಿ ಅದಾಗೋದಿಲ್ಲ. ಸಂಸಾರ ರಥ ಸಾಗಬೇಕಲ್ಲಪ್ಪ' 

“ಕೆಲಸ ಮಾಡಿಕೊಂಡೇ ಓದಿಕೋಬಹುದಪ್ಪ. ಎಷ್ಟು ಜನ ಕೆಲಸ ಮಾಡ್ಕಂಡ್ ಪಿಜಿ ಸೀಟ್ ತಗೊಳೋದಿಲ್ಲ. ನೀನ್ ಬುದ್ವಂತೆ ಬೇರೆ. ಪಿಜಿ ಸೀಟ್ ಸಲೀಸಾಗೇ ಸಿಗುತ್ತೆ" 

'ಹು. ಸಿಗುತ್ತಪ್ಪ. ಸರಕಾರಿ ಕಾಲೇಜಲ್ ಸಿಕ್ರೆ ಫೀಸು ಕಡಿಮೆ ಸ್ಟೈಫಂಡೂ ಬರ್ತದೆ. ಪ್ರೈವೇಟ್ ಕಾಲೇಜಲ್ ಸ್ಟೈಫಂಡ್ ಸಿಕ್ರೂ ಕಡಿಮೆ. ಫೀಸೂ ಜಾಸ್ತಿ. ಅಷ್ಟೆಲ್ಲ ದುಡ್ಡು ಹೊಂದ್ಸೋಕೆ ಆಗಲ್ವೋ' 

“ಮ್. ಅಪ್ಪನ್ನ ಕೇಳ್ಬೇಕಿತ್ತು" 

'ಅಯ್ಯಪ್ಪ. ಅದಕ್ಕೆ ಮತ್ತೆ ಬಯ್ಯಿಸಿಕೊಳ್ಳಬೇಕಾಗ್ತದೆ ಅಪ್ಪನ ಕೈಲೂ ಗಂಡನ ಕೈಲೂ. ಬೇಡ್ವೇ ಬೇಡ ಆ ಸಹವಾಸ. ನೋಡ್ಬೇಕು ಕಣೋ. ನಮ್ ಆಸ್ಪತ್ರೇಲೆ ಎಮರ್ಜೆನ್ಸಿ ಮೆಡಿಸಿನ್ ದು ಎರಡು ವರ್ಷದ ಕೋರ್ಸ್ ಮುಂದಿನ ಸಲ ಶುರುವಾಗ್ತದೆ ಅಂತಿದ್ರು. ನಮ್ ಮೆಡಿಕಲ್ ಸೂಪರಿಡೆಂಟ್ಗೆ ನನ್ನ ಕಂಡ್ರೆ ಅಕ್ಕರೆ. ಅವರೇ ಫೋನ್ ಮಾಡಿ ಸೇರ್ಕೊಳ್ಳಮ್ಮ ಧರಣಿ. ಎಷ್ಟು ದಿನಾಂತ ಅದೇ ಡ್ಯೂಟಿ ಡಾಕ್ಟರ್ ಕೆಲಸ ಮಾಡಿಕೊಂಡಿರ್ತೀಯ. ಫೀಸೇನೂ ಇರೋದಿಲ್ಲ. ಮುಗಿಸಿದ ಮೇಲೆ ಇಲ್ಲೇ ಕೆಲಸ ಕೊಡಿಸ್ತೀನಿ ಅಂತಿದ್ರು. ರಾಜೀವನಿಗೆ ಹಿಂಗಿಂಗೆ ಅಂತ ಹೇಳಿದೆ. ಸ್ಟೈಫಂಡು ಎಷ್ಟು ಕೊಡ್ತಾರೆ ಅಂತ ಕೇಳಿದ್ರು. ಈಗ ಬರೋದ್ರಲ್ಲಿ ಅರ್ಧ ಬರ್ತದೆ ಅಂದೆ. ಹಂಗಾದ್ರೆ ಕಷ್ಟವಾಗುತ್ತಲ್ಲಾ ಅಂದ್ರು. ಎರಡ್ ವರ್ಷ ಅಲ್ವ ಹೆಂಗೋ ತಡಕೊಂಡ್ರೆ ಆಮೇಲೆ ಸಂಬಳ ಜಾಸ್ತಿಯಾಗ್ತದಲ್ಲ. ಬೆಂಗಳೂರಿಗೂ ಹೋಗಬಹುದು ಆಗ ಅಂತ ಹೇಳಿದ್ದೀನಿ. ನೋಡುವ ಬಿಡು ಕೋರ್ಸ್ ಶುರುವಾದ ಮೇಲೆ ಅಂತ ಹೇಳಿದ್ರೆ ಹೊರತು ಸೇರ್ಕೋ ಅಂತ ಇನ್ನೂ ಒಪ್ಪಿಗೆ ಕೊಟ್ಟಿಲ್ಲ. ನೋಡ್ಬೇಕು' 

“ಎಮರ್ಜೆನ್ಸಿ ಮೆಡಿಸಿನ್ನಿಗೆ ಈಗ ಬೇಡಿಕೆ ಹೆಚ್ಚಿದೆ ಬಿಡು. ಸೇರ್ಕಂಡ್ರೆ ಒಳ್ಳೇದೆ. ಆದರೆ ಯಾಕೋ ನಿನಗೇ ಆಸಕ್ತಿಯಿಲ್ಲ ಅನ್ನಿಸ್ತದೆ" 

'ಹು ಕಣೋ. ನನಗೆ ಒಬಿಜಿ ಮಾಡಬೇಕು ಅಂತಿತ್ತು. ಆಗಲಿಲ್ಲ. ನಮ್ ಆಸ್ಪತ್ರೇಲೆ ನನ್ನ ಪರಿಚಿತರೇ ಒಬಿಜಿ ಮಾಡ್ಕಂಡ್ ಓಡಾಡ್ತಿದ್ದಾರೆ. ಓದಿನಲ್ಲಿ ನನಗಿಂತ ಮುಂದಿದ್ದವರಲ್ಲ ಅವರು. ಅವರನ್ನೆಲ್ಲ ನೋಡ್ದಾಗ ಸಂಕಟವಾಗ್ತದೆ ಮನಸ್ಸಿಗೆ. ಒಬಿಜಿ ಸೇರೋದೆಲ್ಲ ಈಗ ಅಸಾಧ್ಯದಂತೇ ಕಾಣ್ತದೆ. ಆಸಕ್ತಿ ಇದೆಯೋ ಇಲ್ವೋ ಎಮರ್ಜೆನ್ಸಿ ಮೆಡಿಸಿನ್ನಿಗೇ ಸೇರಬೇಕು ಅಂತ ಅಂದ್ಕೊಂಡಿದ್ದೀನಿ. ಜೀವನ ಸಾಗಬೇಕಲ್ಲಪ್ಪ' 

“ಎಂತದೋ ಒಂದು ಕಣೆ. ಮಾಡಿದ ಮೇಲೆ ಆಸಕ್ತಿ ಮೂಡಿದರಾಯಿತು ಅಷ್ಟೇ" 

'ಆಸಕ್ತಿ ಇಲ್ಲಾಂದ್ರೆ ಮಾಡಬಾರದೋ....' 

“ಅಯ್ಯೋ ಎಲ್ರಿಗೂ ಅವರ ಇಷ್ಟದ ಕೋರ್ಸೇ ಸಿಕ್ಕಿಬಿಡ್ತದಾ?” 

'ನಾ ಕೋರ್ಸ್ ಬಗ್ಗೆ ಅಲ್ಲ ಹೇಳಿದ್ದು....' ನನ್ನ ನಗು ಅವನಲ್ಲಿ ಅರೆಕ್ಷಣ ಗೊಂದಲ ಮೂಡಿಸಿತು. ಆಮೇಲೆ ನನ್ನ ಮಾತಿನ ದ್ವಂದ್ವಾರ್ಥ ಅರ್ಥವಾಗಿ "ಥೂ ತರ್ಲೆ. ಅದೇ ಜ್ಞಾನ ನಿನಗೆ" 

'ಯಾಕ್ ಇರಬಾರದಾ?' 

“ವಯಸ್ಸು ಅಂದ ಮೇಲೆ ಇರಲೇಬೇಕಲ್ಲ" 

'ಮತ್ತೆ. ಹಂಗ್ ಬಾ ದಾರೀಗೆ' 

“ಸರಿ ಮೇಡಂ" 

'ಒಂದೆಂತದೋ ಕೇಳ್ಲಾ..... ನೀ ಬೇಸರ ಮಾಡ್ಬಾರ್ದು. ನಾಳೆ ಬೆಳಿಗ್ಗೆ ಹತ್ತತ್ತು ಮೆಸೇಜು ಕಳುಹಿಸಬಾರದು' 

“ಇಲ್ವೇ ಕೇಳು" 

'ನನ್ ಫೋಟೋ ಸೇವ್ ಮಾಡ್ಕಂಡಿದ್ದೀಯಾ ಫೋನಿನಲ್ಲಿ?' 

“ಹು. ಫೇಸ್ ಬುಕ್ಕಿಂದ ಡೌನ್ ಲೋಡ್ ಮಾಡ್ಕಂಡಿದ್ದೀನಿ" 

'ಹು ಸರಿ' 

“ಒಂದೆಂತದೋ ಹೇಳ್ಲಾ......ನೀ ಬೇಸರ ಮಾಡ್ಬಾರ್ದು" 

'ಇಲ್ವೋ ಹೇಳು' 

“ನಿನ್ ಫೋಟೋಗೆ ನಿನ್ನೆ ರಾತ್ರಿ …... ಎರಡು ಮುತ್ತು ಕೊಡ್ಬೇಕು ಅನ್ನಿಸಿ ಕೊಟ್ಬಿಟ್ಟೆ ಕಣೆ" 

'ಅಯ್ಯ ಅಷ್ಟೇನಾ. ಅದ್ರಲ್ಲೇನಿದೆ ಬಿಡೋ. ಫೋಟೋಗ್ಯಾಕೆ ನನಗೇ ಕೊಡು ಫೋನಲ್ಲಿ …. ಸಿಕ್ಕಾಗ ನೇರವಾಗೇ ಕೊಡು' 

“ತಪ್ಪಲ್ವ" 

'ಯಾಕೆ?' 

“ಅಲ್ಲ ನಿನಗೆ ಮದುವೆಯಾಗಿದೆಯಲ್ಲ....” 

'ಏನೋ ಗೊತ್ತಿಲ್ವೋ..... ಸ್ನೇಹದಿಂದಾನೂ ಮುತ್ತು ಕೊಡಬಹುದಲ್ವ. ಅದ್ರೆಲ್ಲೇನು ತಪ್ಪಿದೆ ಅಂತ ನನಗನ್ನಿಸೋದಿಲ್ಲಪ್ಪ' 

“ಮ್. ಏನೋ ನನಗೂ ಗೊತ್ತಾಗೋದಿಲ್ವೇ. ಸುಮಾರು ಸಲ ಇದೇನು ನಮ್ಮ ಗೆಳೆತನ ಇಷ್ಟೊಂದು ವೇಗವಾಗಿ ಎತ್ಲಾ ಕಡೆಗೆ ಸಾಗ್ತಿದೆ ಅಂತ ಗಾಬರಿಯಾಗ್ತದೆ. ಗಾಬರಿಗಿಂತ ಹೆಚ್ಚು ನಮ್ಮ ಗೆಳೆತನದ ವೇಗ ಖುಷಿ ಕೊಡ್ತದೆ. ನಿನ್ನ ಜೊತೆ ಇನ್ನೂ ಮಾತಾಡ್ಬೇಕು ಇನ್ನೂ ಮಾತಾಡ್ಬೇಕು ಅನ್ನಿಸ್ತದೆ. ಧರೂ......” 

'ಹೇಳೋ....' 

“ಯಾಕೆ ನೀ ನಂಗೆ ಮುಂಚೇನೇ ಸಿಗಲಿಲ್ಲ" 

'ಆ ಪ್ರಶ್ನೆ ನಾನೂ ಕೇಳ್ಕೊಂಡಿದ್ದೀನಿ ಕಣೋ. ಉತ್ತರ ಇನ್ನೂ ಸಿಕ್ಕಿಲ್ಲ. ಸಿಗೋದೂ ಇಲ್ಲ' 

“ಐ ಮಿಸ್ ಯು ಕಣೇ" 

'ಮಿಸ್ ಯು ಟೂ ಕಣೋ' 

ಇಬ್ಬರ ಮನಸ್ಸೂ ಭಾರವಾಗಿತ್ತು. ಮಾತು ಮುಂದುವರೆಸುವಷ್ಟು ಶಕ್ತಿ ಇಬ್ಬರಲ್ಲೂ ಇದ್ದಂತಿರಲಿಲ್ಲ. ಫೋನು ಕೆಳಗಿಡಲೂ ಮನಸ್ಸಿರಲಿಲ್ಲ. ಎರಡು ನಿಮಿಷ ಉಸಿರಾಟವನ್ನೇ ಕೇಳಿಸಿಕೊಳ್ಳುತ್ತಾ ಸುಮ್ಮನಿದ್ದೊ. “ಸರಿ ಕಣೇ. ಆಮೇಲೆ ಸಿಗ್ತೀನಿ. ಬಾಯ್" ಅಂತ್ಹೇಳಿ ಫೋನಿಟ್ಟ. 

'ಜಾಸ್ತಿ ತಲೆ ಕೆಡಿಸ್ಕೋಬೇಡ್ವೋ. ನಿನ್ನ ಮನಸ್ಸಲ್ಲಿ ಇಷ್ಟೆಲ್ಲ ಪ್ರಶ್ನೆಗಳನ್ನೆಬ್ಬಿಸಿ, ಗೊಂದಲಗಳನ್ನೆಬ್ಬಿಸಿ ನಮ್ಮ ಸಂಬಂಧ ಉಳಿಸಿಕೊಳ್ಳೋ ಅನಿವಾರ್ಯತೆ ಇಲ್ಲ. ಮೇಲ್ಮೇಲೆ ಮಾತಾಡಿಕೊಂಡು ಒಂದ್ ಗೆಳೆತನ ಉಳಿಸಿಕೊಂಡ್ರೂ ಸಾಕು ನನಗೆ. ನನ್ನಿಂದ ಈಗಾಗ್ಲೇ ಬೇಕಾದಷ್ಟು ಜನ ತೊಂದರೆ ಅನುಭವಿಸಿದ್ದಾರೆ. ಆ ಪಟ್ಟಿಗೆ ನಿನ್ನನ್ನೂ ಸೇರಿಸಿಕೊಳ್ಳೋಕೆ ನನಗಿಷ್ಟವಿಲ್ಲ. ಹಾಯ್ ಹಲೋ ಅಂತಷ್ಟೇ ಹೇಳುವಂತಹ ಗೆಳೆತನವೊಂದು ನಮ್ಮಿಬ್ಬರ ಮಧ್ಯೆ ಇದ್ದರೂ ಸಾಕೆನಗೆ' ಮೆಸೇಜು ಮಾಡಿದೆ. 

ಕಾಲು ಘಂಟೆಯ ನಂತರ ಅವನ ಮೆಸೇಜು ಬಂತು. ಸಿಗರೇಟು ಸೇದುತ್ತಿದ್ದನೇನೋ ಅಂದುಕೊಂಡೆ. “ಇಲ್ವೇ. ನನಗೆ ನೀನು ಬೇಕು. ಐ ನೀಡ್ ಯು. ನಿನ್ನ ಮನಸ್ಸು ನಿನ್ನ ಆತ್ಮ ನಿನ್ನ ದೇಹ …. ನೀ ನನಗೆ ಪೂರ್ತಿಯಾಗಿ ಬೇಕು. ಚೂರು ಚೂರಾಗಿ ಮೇಲ್ಮೇಲಲ್ಲ...... ಐ ಲವ್ ಯು ಧರು.... ಮಿಸ್ಡ್ ಯು.... ಇನ್ನು ಮೆಸೇಜ್ ಮಾಡೋ ಶಕ್ತಿ ನನ್ನಲ್ಲಿಲ್ಲ. ಈ ಮೆಸೇಜಿಗೆ ದಯವಿಟ್ಟು ರಿಪ್ಲೈ ಕೂಡ ಮಾಡಬೇಡ. ಬಾಯ್" ಸಾಗರನ ಮೆಸೇಜು ನನ್ನೊಳಗೆ ತುಂಬಿದ ಚೈತನ್ಯವನ್ನು ವಿವರಿಸಲು ಪದಗಳಿಲ್ಲ. ಮೆಡಿಕಲಿ ಹೇಳೋದಾದ್ರೆ ಎದೆ ಬಡಿತ ಜೋರಾಗಿತ್ತು, ಉಸಿರಾಟ ಪ್ರಜ್ಞಾಪೂರ್ವಕವಾಗಿತ್ತು, ಕೆಳಗೆ ಒದ್ದೆಯಾಗಿತ್ತು. ಹೌದು ನೀ ನನಗೆ ಪೂರ್ತಿಯಾಗಿ ಬೇಕು ಅನ್ನೋ ಸಾಲು ಓದುತ್ತಿದ್ದಂತೆಯೇ I was wet. ಅವನ ಮೆಸೇಜಿಗೆ ರಿಪ್ಲೈ ಮಾಡುವಷ್ಟು ಶಕ್ತಿ ನನ್ನಲ್ಲೂ ಇರಲಿಲ್ಲ. ಇನ್ನೊಂದತ್ತು ಸಲ ಅವನ ಮೆಸೇಜು ಓದಿ ಡಿಲೀಟ್ ಮಾಡಿದೆ. ಅವನು ಬರೆದ ಪ್ರತಿ ಸಾಲು, ಸಾಲಿನ ಹಿಂದಿದ್ದ ಭಾವನೆ ನನ್ನ ಮನಸ್ಸು ತುಂಬಿಕೊಂಡಿತ್ತು. ಇದು ಅನೈತಿಕವಾ? ಅನ್ನೋ ಪ್ರಶ್ನೆ ಕಾಡದೆ ಇರಲಿಲ್ಲ. ಹುಟ್ಟಿದ ಪ್ರೀತಿಯ ಭಾವನೆಯಂತೂ ಸುಳ್ಳಲ್ಲವಲ್ಲ. ಸುಳ್ಳಲ್ಲದ ಭಾವನೆಯನ್ನು ಅನೈತಿಕವೆಂದು ಕರೆಯುವುದೇ ಅನೈತಿಕವಲ್ಲವೇ? ರಾಜೀವನಿಗೆ ಮೋಸ ಮಾಡುತ್ತಿದ್ದೀನಾ? ರಾಜೀವನ ಮೇಲಿನ ಪ್ರೀತಿ ಕಡಿಮೆಯಾಗಿಬಿಟ್ಟಿದೆಯಾ? ಹಾಗೇನಿಲ್ಲವಲ್ಲ. ರಾಜೀವನ ಮೇಲೆ ಈಗಲೂ ಅಷ್ಟೇ ಗೌರವ ಪ್ರೀತಿ ಇದೆ. ಒಂದೇ ಸಮಯದಲ್ಲಿ ಇಬ್ಬರನ್ನು ಪ್ರೀತಿಸುವುದು ಹೇಗೆ ಸಾಧ್ಯ? ಅದು ಅಸಾಧ್ಯವಂತೇನೂ ಅನ್ನಿಸುತ್ತಿಲ್ಲವಲ್ಲ ನನಗೆ....ಯಾಕೀಗೆ? ಅವವೇ ಪ್ರಶ್ನೆಗಳು, ಸಮಾಜ ಸೃಷ್ಟಿಸಿದ ನೈತಿಕತೆಯ ಬೇಲಿಗೆ ಆಸರೆಯಾಗಿರುವ ಕಲ್ಲಿನ ಕಂಬಗಳಂತ ಪ್ರಶ್ನೆಗಳು. ಹೌದು ಇದು ಅನೈತಿಕವೆಂದು ಭಾವಿಸಿ ಸಾಗರನ ಮೇಲೆ ನನಗೆ ಪ್ರೀತಿಯೇ ಇಲ್ಲ ಅಂದುಕೊಂಡುಬಿಟ್ಟರೆ ಅದು ನನಗೆ ನಾನೇ ಸುಳ್ಳು ಹೇಳಿಕೊಂಡಂತಲ್ಲವೆ? ನೈತಿಕತೆಯ ಬೇಲಿಗೆ ಬೆಲೆ ಕೊಡಬೇಕೋ ನನ್ನ ಭಾವನೆಗಳಿಗೋ? ಪ್ರಶ್ನೆಗಳ ಒತ್ತಡಕ್ಕೆ ಸುಸ್ತಾಯಿತು. ಸಾಗರನ ಮೆಸೇಜಿಗೆ ಒಂದು ಪ್ರತ್ಯುತ್ತರ ಕೊಡದೆ ಹಾಸಿಗೆಯಿಂದೇಳುವ ಮನಸ್ಸಾಗಲಿಲ್ಲ. 'ಸರಿ ತಪ್ಪುಗಳ ಗೊಡವೆ ನಂತರದ್ದು. ನನ್ನ ಮನಸ್ಸಿಗಾಗಲೀ ನಿನ್ನ ಬಳಿಯಾಗಲೀ ಸುಳ್ಳು ಹೇಳಿಕೊಂಡು ಜೀವಿಸುವ ಜರೂರತ್ತಂತೂ ನನಗಿಲ್ಲ. ನನಗೂ ನೀನು ಇಡಿಯಾಗಿ ಬೇಕೋ. ಐ ಟೂ ಲವ್ ಯು. ನಿಜ್ಜ ಹೇಳಬೇಕೆಂದರೆ ನಿನ್ನ ಮೇಲೆ ಪ್ರೀತಿ ಮೂಡಿ ಬಹಳ ದಿನಗಳಾಗಿಬಿಟ್ಟಿತ್ತು. ಹೇಳೋದಿಕ್ಕೆ ಧೈರ್ಯವಾಗಿರಲಿಲ್ಲವಷ್ಟೇ. ಲವ್ ಯು ಪುಟ್ಟ' ಅಂತ ಟೈಪಿಸಿ ಕಳುಹಿಸಿದೆ. ಕ್ಷಣಹೊತ್ತಿನಲ್ಲಿ "ಸರಿ" ಎಂದು ಉತ್ತರ ಕಳುಹಿಸಿದ. ಗೊಂದಲದಲ್ಲಿದ್ದಾನವನು ಅನ್ನೋದು ನನಗೆ ಖಚಿತವಾಗಿತ್ತು. ಮತ್ತೆ ಮೆಸೇಜು ಕಳುಹಿಸಬೇಕೆನ್ನಿಸಿದರೂ, ಕರೆ ಮಾಡಿ ಮಾತನಾಡಬೇಕೆನ್ನಿಸಿದರೂ ತಡೆದುಕೊಂಡೆ. ಅವನಿಗೂ ಸಮಯ ಬೇಕು, ನನಗೂ ಕೊಂಚ ಕಾಲ ಬೇಕು ಮನಸ್ಸು ಸ್ಥಿಮಿತಕ್ಕೆ ಬರಲು ಎಂದುಕೊಳ್ಳುತ್ತಾ ಮೇಲೆದ್ದೆ, ಅಡುಗೆ ಮನೆಯಲ್ಲಿ ಒಣಗಿದ್ದ ಪಾತ್ರೆಗಳು ನನಗಾಗಿ ಕಾಯುತ್ತಿದ್ದವು. 

ಚಲನಶೀಲ ಮನಸ್ಸಿನ ಚಂಚಲತೆಗಳಿನ್ನೂ ಮುಗಿದಿರಲಿಲ್ಲ. ಅಷ್ಟೊತ್ತಿಗೆ ರಾಜೀವ ಮನೆಗೆ ಬಂದರು. ಮನದಲ್ಲಿ ಪೂರ್ತಿ ಸಾಗರನ ಜೊತೆಗೆ ನಡೆದ ಮಾತುಕತೆ, ಕೊನೆಯಲ್ಲಾಡಿದ ಪ್ರೀತಿ ಗೊಂದಲದ ಮಾತುಗಳೇ ತುಂಬಿತ್ತು. ರಾಜೀವನನ್ನು ಕಂಡಾಗಲೇ ಶಶಿ ಸೋನಿಯಾಳ ವಿಷಯ ನೆನಪಾಗಿದ್ದು.

ಮುಂದಿನ ಭಾಗವನ್ನು ಓದಲು ಇಲ್ಲಿ ಕ್ಲಿಕ್ಕಿಸಿ. 

No comments:

Post a Comment