Jul 14, 2019

ಒಂದು ಬೊಗಸೆ ಪ್ರೀತಿ - 22

ಡಾ. ಅಶೋಕ್.‌ ಕೆ. ಆರ್.‌
“ನಿನಗೆ ಇಂಜಿನಿಯರಿಂಗ್ ಮಾಡ್ಬೇಕು ಅಂತಿತ್ತಾ?” 

'ಹು. ನಿಂಗೇ ಗೊತ್ತಲ್ಲ. ನಾವ್ ಪಿಯುಲಿದ್ದಾಗ ಇಂಜಿನಿಯರಿಂಗ್ ಬೂಮ್ ನಲ್ಲಿತ್ತು. ಸಾಫ್ಟ್ ವೇರು, ಇನ್ಫೋಸಿಸ್ಸು, ಅಮೆರಿಕಾ ಅಮೆರಿಕಾ ಬಹಳಷ್ಟು ಜನರ ಕನಸಾಗಿತ್ತಲ್ಲ. ನಂಗೂ ಹಂಗೇ ಇತ್ತು. ಇಂಜಿನಿಯರಿಂಗ್ ಮಾಡ್ಕಂಡು, ಒಂದಷ್ಟು ವರ್ಷ ಬೆಂಗಳೂರಿನಲ್ಲಿ ಕೆಲಸ ಮಾಡ್ಕಂಡು ಆಮೇಲೆ ಪರಶುವಿನ ಜೊತೆ ವಿದೇಶಕ್ಕೋಗಿ ದುಡಿದು ದುಡಿದು ಕೈತುಂಬಾ ದುಡ್ಡು ಮಾಡ್ಕಂಡು ಬಂದು ಸೆಟಲ್ ಆಗಿಬಿಡಬೇಕು ಅಂತಿತ್ತು. ನಿಂಗಿರಲಿಲ್ವಾ' 

“ಇಲ್ಲಪ್ಪ. ನಂಗೆ ಮೊದಲಿಂದಾನೂ ಡಾಕ್ಟರ್ ಆಗಬೇಕು ಅಂತಲೇ ಇತ್ತು" ಸಾಗರನ ಮಾತಿಗೆ ಮ್ ಎಂದೊಂದು ನಿಟ್ಟುಸಿರುಬಿಟ್ಟೆ. 

“ಮತ್ತೆ ನೀನ್ಯಾಕೆ ಇಂಜಿನಿಯರಿಂಗ್ ಬಿಟ್ಟು ಮೆಡಿಕಲ್ ಸೇರಿದೆ" 

'ಹು. ಅಲ್ಲಿಗೇ ಬಂದೇ ಇರು. ಪಿಯು ರಿಸಲ್ಟು ಬಂತು. ನಂಗೇ ಅಚ್ಚರಿಯಾಗುವಂತೆ ತೊಂಭತ್ತನಾಲ್ಕು ಪರ್ಸೆಂಟ್ ತೆಗೆದೆ. ಅಪ್ಪನ ಕೈಲಿ ಶಹಬ್ಬಾಸ್ ಅನ್ನಿಸಿಕೊಂಡೆ. ಪರಶು ಮೆಚ್ಚುಗೆಯಿಂದ ನೋಡಿದ. ಅವನು ಅರವತ್ತು ಪರ್ಸೆಂಟು ತೆಗೆದುಕೊಂಡು ಪಾಸಾಗಿದ್ದ. ನನ್ನ ತೊಂಭತ್ತನಾಲ್ಕಕ್ಕಿಂತಲೂ ಅವನ ಅರವತ್ತು ದೊಡ್ಡದೆಂದನ್ನಿಸಿತು ನನಗೆ' 

“ಮ್. ಅಶ್ವಿನಿಗಿಂತಾ ಜಾಸ್ತಿ ತೆಗೆದಾ ಇಲ್ಲವಾ?” ವ್ಯಂಗ್ಯದಲ್ಲೇ ಕೇಳಿದ ಸಾಗರ. 

'ಆಹಾ.... ವ್ಯಂಗ್ಯ ನೋಡು! ನಾವ್ ಒಂದ್ಸಲ ಡಿಸೈಡ್ ಮಾಡಿಬಿಟ್ರೆ ನಮ್ ಮಾತ್ ನಾವೇ ಕೇಳಲ್ಲ' 

“ಪಿಚ್ಚರ್ ಡೈಲಾಗು"

ಒಂದೊಂದೇ ಎಪಿಸೋಡು ಹುಡುಕುಡುಕಿ ಓದೋಕೆ ಬೇಸರವಾ? ಪೂರ್ತಿ ಇ - ಪುಸ್ತಕ ತೆಗೆದುಕೊಳ್ಳಲು ಇಲ್ಲಿ ಕ್ಲಿಕ್ಕಿಸಿ.

'ಅಂದ್ರೂ ಪರ್ವಾಗಿಲ್ಲ ಇಟ್ಕೋ! ಅಶ್ವಿನಿಗಿಂತ ಬರೋಬ್ಬರಿ ಎಂಟು ಪರ್ಸೆಂಟು ಹೆಚ್ಗೆ ತೆಗೆದಿದ್ದೆ. ನನ್ ಮಾರ್ಕ್ಸ್ ಹೇಳಿ ಅವಳಿಗೆ ಹೊಟ್ಟೆ ಉರಿಸಬೇಕೆಂದುಕೊಂಡಿದ್ದೆ. ನಾ ಹೇಳುವುದಕ್ಕೆ ಮುಂಚೆಯೇ ಅವಳಿಗೆ ನನ್ನ ಮಾರ್ಕ್ಸು ತಿಳಿದಿತ್ತು. 'ಹ್ಯಾಪಿ ಫಾರ್ ಯು ಧರು...' ಎಂದು ಜೋರಾಗಿ ಹೇಳುತ್ತಾ ನನ್ನ ತಬ್ಬಿ ಹಿಡಿದು ಕಿವಿಯ ಬಳಿ ಮೆಲ್ಲಗೆ 'ಲವ್ವಿಗೆ ಬಿದ್ದು ಎಲ್ಲಿ ನಿನ್ನ ಭವಿಷ್ಯ ಹಾಳು ಮಾಡ್ಕೋತೀಯೋ ಅಂತ ಗಾಬರಿಯಾಗಿತ್ತೆ ನನಗೆ. ಸದ್ಯ ನನ್ನ ಗಾಬರಿ ಸುಳ್ಳಾಯಿತು' ಎಂದಳು. ಛೇ ಈ ಹುಡ್ಗಿಗಿಂತ ಹೆಚ್ಚು ಅಂಕ ತೆಗ್ದು ಇವಳನ್ನ ಅವಮಾನಿಸಬೇಕೆಂದುಕೊಂಡಿದ್ದೆನಲ್ಲ ಎಂದು ನನ್ನ ಮೇಲೆ ನನಗೇ ಬೇಸರವಾಯಿತು. ಬೇಸರ ತೋರಿಸಿಕೊಳ್ಳದೆ ನಿಂಗೂ ಕಂಗ್ರಾಟ್ಸ್ ಕಣೇ ಅಂದವಳ ದನಿಯಲ್ಲಿ ನಿಜದ ಉತ್ಸಾಹವೇನಿರಲಿಲ್ಲ'. ಎಷ್ಟೋ ವರ್ಷಗಳ ಕಾಲ ಻ಅಶ್ವಿನಿ ಜೊತೆಗೆ ಹೆಚ್ಚಿನ ಸಂಪರ್ಕವೇ ಇರಲಿಲ್ಲ. ಮತ್ತೆ ಅವಳು ಒಂದಷ್ಟು ಆತ್ಮೀಯಳಾದ ಸಂದರ್ಭದಲ್ಲಿ ನನ್ನ ಬದುಕೂ ಒಂದಷ್ಟು ಬದಲಾಗಿತ್ತು, ಅಶ್ವಿನಿಯ ನಿರೀಕ್ಷೆಯಂತೆಯೇ ಬದಲಾಗಿತ್ತು. ಕಾಲ ಸವೆದಂತೆ ಸ್ನೇಹವೂ ಸವೆದುಹೋಗಿರುತ್ತೆ ಅನ್ನೋದಕ್ಕೆ ನನ್ನ ಅಶ್ವಿನಿಯ ಸ್ನೇಹವೇ ಸಾಕ್ಷಿ. 

“ಯಾಕೇ ಮಾತು ನಿಂತೋಗಿದೆ?” ಸಾಗರನ ದನಿ ಮರಳಿ ವಾಸ್ತವಕ್ಕೆ ಕರೆತಂದಿತು. 

'ಮ್. ಏನೇನೋ ಯೋಚ್ನೆ ಬಂತು. ಹಿಂಗ್ ಹಳೇದೆಲ್ಲ ಮಾತಾಡ್ಕಂಡ್ ಯಾಕಿರಬೇಕು. ಭೂತಕಾಲದ್ದು ಬಿಟ್ಟು ಬೇಕಾದ್ರೆ ವರ್ತಮಾನವನ್ನೂ ಬಿಟ್ಟು ಭವಿಷ್ಯದ ಕನಸುಗಳ ಬಗ್ಗೆ ಮಾತಾಡ್ಕಂಡಿದ್ರೆ ಸಾಕನ್ನಿಸೋಲ್ವ. ಭೂತಕಾಲದ ವಿಷಯಗಳನ್ನು ನೆನಪು ಮಾಡ್ಕಂಡು ಮಾಡ್ಕಂಡು ಹೇಳೋದೇ ಒಂದ್ ರೀತಿ ಹಿಂಸೆ ಅನ್ಸುತ್ತಪ್ಪ ನಂಗೆ' 

“ಪೂರ್ತಿ ಹಿಂಸೆ ಅಂತಾನೂ ಹೇಳೋಕ್ಕಾಗ್ದು. ಖುಷಿಯ ಸಂಗತಿಗಳೂ ಇರ್ತವೆ. ಅವತ್ತಿಗೆ ದುಃಖ ಕೊಟ್ಟ ಸಂಗತಿಗಳು ಇವತ್ತು ನೆನಪಿಸಿಕೊಳ್ಳುವಾಗ ನಗೆ ಮೂಡಿಸುತ್ತೆ. ಅವತ್ತು ನಕ್ಕು ನಲಿಸಿದ ವಿಷಯಗಳು ಅಳು ತರಿಸಬಹುದು. ಭವಿಷ್ಯದ ಕನಸುಗಳು ಸುಂದರವಾಗುವಲ್ಲಿ ಭೂತಕಾಲದ ಕೊಡುಗೆ ಇದ್ದೇ ಇರ್ತದಲ್ಲ. ವರ್ತಮಾನದ ಚಲನಶೀಲತೆಗೆ ಭೂತಕಾಲ ಻ಅಡ್ಡಿಯಾಗದಿದ್ದರೆ ಅಡ್ಡಿಯಿಲ್ಲ" 

ಎಲಾ ಇವ್ನ. ಎಷ್ಟ್ ಚೆಂದ ಮಾತಾಡ್ತಾನೆ....ನನ್ ಮುದ್ದು ಅಂತೊಂದು ಮುತ್ತನ್ನ ನನ್ನ ಕಲ್ಪನೆಯಲ್ಲೇ ಸಾಗರನ ಹಣೆಗೆ ನೀಡಿದೆ. 

'ಅದೂ ಸತ್ಯವೇ. ಹಳೇದೆಲ್ಲ ಮರೆತೋಗಿದೆ ಅನ್ನೋದೇ ಒಂದು ದೊಡ್ಡ ಮಿಥ್ಯೆ. ಮರೆತಂತಿರ್ತೀವಿ, ನೆನಪಾದ್ರೂ ಹೊಸ ಬದುಕಿನಲ್ಲಿರುವವರ ಬಳಿ ಹಂಚಿಕೊಳ್ಳದ ಪರಿಸ್ಥಿತಿಯಲ್ಲಿರ್ತೀವಿ. ನಾನೂ ರಾಜಿ ಎಷ್ಟೇ ಕ್ಲೋಸು ಅಂದ್ಕಂಡ್ರೂ ಅವರ ಬಳಿ ಇವೆಲ್ಲ ವಿಷಯಗಳನ್ನು ಚರ್ಚಿಸಲಾಗುವುದಿಲ್ಲ. ಅದಕ್ಕೆ ನಿನ್ನಂತ ಸೋಲ್ ಮೇಟ್ ಇರ್ಬೇಕು ಅಷ್ಟೇ' 

“ಸೋಲ್ ಮೇಟ್ಸ್ ಅನ್ನಪ್ಪ ನಾವಿಬ್ರೂ?!” ಸಾಗರನ ದನಿಯಲ್ಲಿ ಅಚ್ಚರಿ ಬೆರೆತ ಖುಷಿಯಿತ್ತು. 

'ಯಾಕಾಗಬಾರದಾ?' 

“ಆಗಬಹುದು.....ಖಂಡಿತ ಆಗಬಹುದು" 

'ಅಲ್ವ ಮತ್ತೆ. ಥ್ಯಾಂಕ್ಸ ಕಣೋ' 

“ಥ್ಯಾಂಕ್ಸ್ ಯಾಕೇ?” 

'ನೀ ನನ್ ಲೈಫಲ್ ಬಂದಿದ್ದಕ್ಕೆ' 

“ಹಲೋ ಮೇಡಂ. ನೀನೇ ಮೊದಲು ಮೆಸೇಜು ಮಾಡಿದ್ದು" 

'ಹಲೋ ಸರ್. ನೀನೇ ಮೊದಲು ಎಫ್.ಬಿ ಫ್ರೆಂಡ್ ರಿಕ್ವೆಷ್ಟ್ ಕಳುಹಿಸಿದ್ದು' 

ಇಬ್ಬರೂ ನಕ್ಕೆವು. 

“ಸರಿ ಸರಿ. ನಕ್ಕಿದ್ದು ಸಾಕು. ರಿಸಲ್ಟ್ ಬಂದ ಮೇಲೆ ಏನಾಯ್ತು? ಅವನ್ಯಾವ್ದಕ್ಕೆ ಸೇರಿದ? ನೀನ್ಯಾಕೆ ಇಂಜಿನಿಯರಿಂಗ್ ಬಿಟ್ಟು ಮೆಡಿಕಲ್ ಸೇರಿದೆ?” 

'ಅಯ್ಯೋ ಅದೊಂದ್ ದೊಡ್ಡ ಕತೆ ಕಣೋ. ಅವನೇನೋ ಅವನು ಆಸೆ ಪಟ್ಟಂಗೇ ಬಿ.ಎಸ್.ಸಿ ಸೇರಿಕೊಂಡ. ನನ್ನ ಮೆಡಿಕಲ್ ರ್ಯಾಂಕ್ ಚೆನ್ನಾಗಿತ್ತು, ಇಂಜಿನಯರಿಂಗ್ದು ಚೆನ್ನಾಗಿರಲಿಲ್ಲ. ಮೈಸೂರಿನಲ್ಲೇ ಒಂದ್ಯಾವುದಾದರೂ ಕಾಲೇಜಲ್ಲಿ ಸಿಕ್ಕಿರೋದೇನೋ ಆದರೆ ನನಗೆ ಬೇಕಿದ್ದ ಕಂಪ್ಯೂಟರ್ ಸೈನ್ಸ್ ಅಥವಾ ಎಲೆಕ್ಟ್ರಾನಿಕ್ಸ್ ಸಿಗುತ್ತಿರಲಿಲ್ಲ. ಬೆಂಗಳೂರಿನಲ್ಲಿ ಇಂಜಿನಿಯರಿಂಗ್ ಕಾಲೇಜುಗಳು ಜಾಸ್ತಿ ಅಲ್ವಾ, ಅಲ್ಲಿ ಬೇಕಾದ ಕೋರ್ಸ್ ಸಿಕ್ಕಿರೋದು. ನಮ್ಮ ಮನೇಲೂ ನಾ ಮುಂಚಿಂದಾನೂ ಇಂಜಿನಿಯರ್ರೇ ಆಗೋದು ಅಂತ ಹೇಳ್ಕೋತಿದ್ನಲ್ಲಾ ಅವರೂ ಮಾನಸಿಕವಾಗಿ ನನ್ನ ಬೆಂಗಳೂರಿಗೆ ಸೇರಿಸೋಕೆ ತಯಾರಾಗಿದ್ದರು. ಒಂದ್ ದಿನ ಪರಶು ಸಿಕ್ಕಾಗ, ಈಗ ಪುರುಸೊತ್ತಾಗಿದ್ವಲ್ಲ ಹೆಚ್ಚು ಕಡಿಮೆ ದಿನಾ ಭೇಟಿಯಾಗ್ತಿದ್ದೋ ಅನ್ನು, ಖುಷಿಯಿಂದ ಬೆಂಗಳೂರಿಗೆ ಹೋಗುವುದರ ಬಗ್ಗೆ ತಿಳಿಸಿದೆ. ಅವನಲ್ಲಿ ಖುಷಿ ಇರಲಿಲ್ಲ, ಻಻ಅದ್ಯಾಕೆ ಬೆಂಗಳೂರು? ಇಲ್ಲೇ ಮೈಸೂರಿನಲ್ಲೇ ನಾಲ್ಕೈದು ಕಾಲೇಜುಗಳಿವೆಯಲ್ಲ ಇಲ್ಲೇ ಸೇರು ಅಂದ. ಕೋಪದಿಂದಲೇ ಹೇಳಿದ. ಈಗ ನೆನಪಿಸಿಕೊಂಡಾಗ ಻ಅದು ಕೋಪವಲ್ಲ, ದರ್ಪದ ಆದೇಶ ಻ಅನ್ನೋದ್ ತಿಳೀತದೆ. ಆಗ ನಾ ದೂರ ಹೋಗೋದಿಕ್ಕೆ ಬೇಸರಿಸಿಕೊಂಡು ಕೋಪ ಮಾಡ್ಕಂಡಿದ್ದಾನೆ ಅಂತಲೇ ಅನ್ನಿಸುತ್ತಿತ್ತು. ಅದು ಸತ್ಯವೂ ಇರಬಹುದೇನೋ ಗೊತ್ತಿಲ್ಲ ಕಣೋ ನಂಗೆ. ಇಲ್ವೋ ಪರಶು ಇಲ್ಲಿ ಸಿಗೋ ಕೋರ್ಸುಗಳು ಅಷ್ಟು ಚೆನ್ನಾಗಿಲ್ಲ, ಕೆಲಸ ಸಿಗೋದು ಕಷ್ಟ ಅಂತಾರೆ ಅಂತ ಹೇಳಿದ್ದಕ್ಕೆ ನೀನು ಡಿಗ್ರಿ ಮಾಡೋದಿಕ್ಕೆ ಓದ್ಕೋ ಕೆಲಸ ಸಿಗೋದಿಕ್ಯಾಕೆ ಓದ್ತೀಯ. ನನ್ನ ಹೆಂಡತಿ ಕೆಲಸಕ್ಕೆಲ್ಲ ಹೋಗಿ ಶ್ರಮ ಪಡೋದು ಬೇಕಿಲ್ಲ. ಮನೆಯಲ್ಲಿ ಸುಖವಾಗಿದ್ದರೆ ಸಾಕು. ಮುದ್ದು ಮಾಡೋವಷ್ಟು ಮುದ್ದಾಗಿತ್ತು ಆಗ. ಹೋಟೆಲ್ಲಲ್ಲಿ ಕುಳಿತಿದ್ದೋ ಅನ್ನೋ ಕಾರಣಕ್ಕೆ ಮುದ್ದು ಮಾಡಿರಲಿಲ್ಲ ಅಷ್ಟೇ....' 

“ಯಾವಾಗ ಇಬ್ರೂ ಮುದ್ ಮಾಡ್ಕಂಡಿದ್ದು?” ನನ್ನ ಮಾತು ತುಂಡರಿಸಿ ಸಾಗರ ಕೇಳಿದ ಪ್ರಶ್ನೆಗೆ ಉತ್ತರ ಕೊಡಬೇಕಾ ಬೇಡವಾ ಗೊತ್ತಾಗಲಿಲ್ಲ. 

'ಅದೆಲ್ಲಾ ಬೇಕೇನೋ?' 

“ಸೋಲ್ ಮೇಟ್ ಅಂದ್ಮೇಲೆ ಎಲ್ಲಾ ಗೊತ್ತಿರಬೇಕಲ್ಲವಾ? ನಿಂಗ್ ಹೇಳೋದ್ ಬೇಡ ಅಂದ್ರೆ ಬೇಡ ಬಿಡು" 

'ಹಂಗಲ್ವೋ.... ಹೇಳ್ಬಾರ್ದು ಅಂತ ಅಲ್ಲ. ಹೇಳೋಕ್ ಮುಜುಗರಾನೂ ಆಗ್ತದೆ. ನಿಂಗ್ ಬೇಜಾರಾಗ್ತದೇನೋ ಅನ್ನೋದೂ ಕಾಡ್ತದೆ' 

“ಮುಜುಗರ ಆದರೆ ಬೇಡ ಬಿಡು. ನಂಗ್ಯಾಕ್ ಬೇಜಾರು?” 

ಥೂ ಇವನ ಯೋಗ್ಯತೆಗೆ. ಎಲ್ಲಾನೂ ಬಿಡಿಸಿ ಬಿಡಿಸಿ ಹೇಳಬೇಕು. 

'ಹೇಳ್ತೀನೋ. ನಿನ್ನ ಬಳಿ ಹೇಳ್ಕೊಳ್ಳದೆ ಇನ್ಯಾರ ಬಳಿ ಹೇಳಲಿ. ಇವತ್ತಿಗೆ ಬೇಡ, ಮತ್ತೊಂದು ದಿನ ಹೇಳ್ತೀನಿ ಆಯ್ತಾ?' 

“ಸರಿ ಕಣೆ. ನಿನ್ನನುಕೂಲ" 

'ಬೇಜಾರಾಯ್ತಾ?' 

“ಇಲ್ಲಪ್ಪ. ಮುಂದಕ್ಕೇನಾಯ್ತು ಹೇಳು" 

'ಹ.....ಮುಕ್ಕಾಲು ಘಂಟೆಯೋ ಒಂದು ಘಂಟೆಯಾಯ್ತೋ ಗೊತ್ತಿಲ್ಲ. ಅದನ್ನೇ ತಿರುಗಾ ಮುರುಗಾ ಮಾತನಾಡುತ್ತಿದ್ದೋ. ಕೊನೆಗೆ ನನ್ನ ಕಣ್ಣಲ್ಲಿ ನೀರೇ ಬಂತು. ಯಾಕೋ ಹಿಂಗ್ ಮಾಡ್ತಿ? ಅಷ್ಟೆಲ್ಲ ಮಾರ್ಕ್ಸ್ ತೆಗೆದ ಮೇಲೆ ನನ್ನಿಷ್ಟದ ಕೋರ್ಸ್ ಕೂಡ ಮಾಡಬಾರದಾ? ನನ್ನ ಯಾವ ವಾದಗಳೂ ಮಾಡದ ಕೆಲಸವನ್ನು ನನ್ನ ಕಣ್ಣೀರು ಮಾಡಿತು. ಅವನು ಕರಗಿದಂತೆ ಕಂಡ. 'ನೋಡು ಧರಣಿ. ನೀನು ಬೆಂಗಳೂರಿಗೆ ಹೋಗಿ ಓದೋದು ನನಗೇನೂ ಸಮಸ್ಯೆಯಲ್ಲ. ನಾವಿಬ್ರು ಎಷ್ಟೇ ದೂರ ಇದ್ರೂ ಹತ್ತಿರವೇ ಇರ್ತೀವಿ ಅನ್ನೋ ಸತ್ಯ ನನಗೆ ಗೊತ್ತಿದೆ. ಮೊನ್ನೆ ನಮ್ ಹುಡುಗ್ರತ್ರ ಮಾತನಾಡ್ತ ಹಿಂಗಿಂಗೆ ನನ್ ಹೆಂಡ್ತಿ ಬೆಂಗಳೂರಿಗೆ ಹೋಗ್ತಿದ್ದಾಳೆ ಓದೋಕೆ ಅಂದೆ. ಬೆಂಗಳೂರಿಗೆ ಹೋದ ಮೇಲೆ ನಿನ್ ಕೈಗೆ ಸಿಕ್ಕಂಗೆ ಬಿಡು ಮಗ ಅಂದುಬಿಟ್ರು. ಹೋಗ್ರೋ ಹೋಗ್ರೋ ನನ್ ಹೆಂಡ್ತಿ ಬಗ್ಗೆ ನಿಮಗೇನು ಗೊತ್ತು ಅಂತ ಅವರಿಗೆ ದಬಾಯಿಸಿ ಬಂದೆನಾದರೂ ಯಾಕೋ ನನ್ನ ಮನಸ್ಸಿಗೇ ಶಾಂತಿಯಿಲ್ಲ. ನೀ ಬೆಂಗಳೂರಿಗೇ ಹೋಗ್ತೀಯೋ ಅಥವಾ ನನ್ನ ಜೀವನದಿಂದಲೇ ದೂರ ಹೋಗಿ ಬಿಡ್ತಿಯೋ ಅನ್ನೋ ಭಯ ಕಾಡಲಾರಂಭಿಸಿದೆ. ಆ ಭಯಕ್ಕೆ ಅರ್ಥವಿಲ್ಲ ಅಂತ ನನ್ನ ಒಳಮನಸ್ಸು ಹೇಳ್ತಾನೇ ಇರ್ತದೆ ಆದ್ರೂ ಈ ಹಾಳು ಬುದ್ಧಿ ಅನುಮಾನ ತುಂಬ್ತದೆ. ನೀ ಯಾವ ಕೋರ್ಸಾದ್ರೂ ಮಾಡೇ, ಪ್ಲೀಸ್ ಪ್ಲೀಸ್ ಮೈಸೂರಲ್ಲಿದ್ದೇ ಮಾಡು' ಎಂದ್ಹೇಳಿ ಕೈಹಿಡಿದು ಅತ್ತುಬಿಟ್ಟ ಪರಶು. ಮ್ ಅತ್ತುಬಿಟ್ಟ ಪರಶು. ಆ ಅಳು ನನ್ನ ಅಷ್ಟೂ ವರುಷಗಳ ಕನಸನ್ನೇ ಮುರುಟಿ ಎಸೆಯುವಂತೆ ಮಾಡಿಬಿಟ್ಟಿತು. ಇವತ್ತು ಇಂಜಿನಿಯರಿಂಗ್ ಓದೋಕೆ ಬೆಂಗಳೂರಿಗೆ ಕಳುಹಿಸಲೇ ಪರಶು ಒಪ್ತಿಲ್ಲ. ಇನ್ನು ನಾನು ಇಂಜಿನಿಯರಿಂಗ್ ಓದಿದ ಮೇಲೆ ಬಹುತೇಕರಂತೆ ಬೆಂಗಳೂರಿಗೇ ಕೆಲಸಕ್ಕೆ ಹೋಗುವ ಪರಿಸ್ಥಿತಿ ಬಂದರೆ ಪರಶು ಕಳುಹಿಸುತ್ತಾನಾ? ಈಗಲೇ ಒಪ್ಪದವನು ಆಗ ಒಪ್ಪುತ್ತಾನಾ? ಬೆಂಗಳೂರಿಗೆ ಹೋದ ಮೇಲೆ ಇವನ ಮನಸ್ಸು ಶಾಂತವಾಗ್ತದೋ ಏನೋ, ಹೋಗೇಬಿಡ್ಲಾ ಬೆಂಗಳೂರಿಗೆ? ಹೀಗೆ ಏನೇನೋ ಗೊಂದಲ, ಗದ್ದಲ. ಅಕಸ್ಮಾತ್ ನಾನು ಬೆಂಗಳೂರಿಗೆ ಹೋದ ನೆಪ ಮಾಡಿಕೊಂಡು ಪರಶು ನನ್ನನ್ನು ಬಿಟ್ಟುಬಿಟ್ಟರೆ. ಪರಶು ಇಲ್ಲದ ಜೀವನ ನನ್ನ ಕಲ್ಪನೆಯಲ್ಲೂ ಮೂಡುತ್ತಿರಲಿಲ್ಲ. ಇಂಜಿನಿಯರಿಂಗ್ ಸೇರಿದ್ರೆ ತಾನೇ ಈ ಸಮಸ್ಯೆ, ಹೇಗಿದ್ರೂ ನನ್ನ ರ್ಯಾಂಕಿಂಗ್‍‍ಗೆ ಮೈಸೂರಿನಲ್ಲೇ ಮೆಡಿಕಲ್ ಸಿಗೋ ಸಾಧ್ಯತೆ ಹೆಚ್ಚಿದೆ. ಮೈಸೂರಿನಲ್ಲೇ ಇದ್ದಂಗೂ ಆಗುತ್ತೆ, ನಮ್ ಫ್ಯಾಮೀಲೀಲಿ ಮೊದಲ ಡಾಕ್ಟರ್ ಆದಂಗೂ ಆಗುತ್ತೆ. ಮೆಡಿಕಲ್ ಮುಗಿದ ಮೇಲೆ ಮೈಸೂರಿನಲ್ಲೇ ಕೆಲಸ ಹುಡುಕಿಕೊಂಡು ನೆಲೆ ಕಂಡುಕೊಳ್ಳೋದಕ್ಕೂ ಅನುಕೂಲವಾಗುತ್ತೆ. ಹೇಗಿದ್ರೂ ಪರಶು ಮೈಸೂರಿನಲ್ಲೇ ಬ್ಯುಸಿನೆಸ್ ಮಾಡ್ತೀನಿ ಡಿಗ್ರಿ ಆದ ಮೇಲೆ ಅಂತ ಹೇಳ್ತಿರ್ತಾನೆ. ಹೀಗೆ ಏನೇನಲ್ಲ ಲೆಕ್ಕ ಹಾಕಿ ಮನೆಯವರನ್ನು ಅಶ್ವಿನಿಯನ್ನು ಅಚ್ಚರಿಗೆ ದೂಡಿ ಮೆಡಿಕಲ್ಲಿಗೆ ಸೇರಿಬಿಟ್ಟೆ. ಮೊದಲೆರಡು ತಿಂಗಳು ಹಿಂಸೆ ಅನ್ಸೋದು. ಬಯಾಲಜೀನೇ ಇಷ್ಟ ಇರಲಿಲ್ಲ ನನಗೆ, ಈಗ ಪೂರ್ತಿ ಅದನ್ನೇ ಓದಬೇಕಾಗಿತ್ತು. ಹೆಂಗೋ ಕೊನೆಗೆ ಹೊಂದಿಕೊಂಡು ಓದಿಕೊಂಡೆ' 

“ಹೆಂಗೋ ಓದ್ಕಂಡೇ ಫಸ್ಟ್ ಕ್ಲಾಸು ಡಿಸ್ಟಿಂಕ್ಷನ್ನು ಅನ್ನಪ್ಪ" ಸಾಗರನ ನಗು ಮನದಲ್ಲಿ ಮೂಡುತ್ತಿದ್ದ ಬೇಸರದಲೆಗಳನ್ನು ಹಿಂದಕ್ಕೊಯ್ದಿತು. 

'ಹ...ಹ... ಏನ್ ಫಸ್ಟ್ ಕ್ಲಾಸೋ ಏನ್ ಡಿಸ್ಟಿಂಕ್ಷನ್ನೋ.... ಕೊನೆಗೆ ಬಂದು ಈ ಡ್ಯೂಟಿ ಡಾಕ್ಟರ್ ಕೆಲಸ ಮಾಡೋಕೆ.....ನನ್ನದೇ ತಪ್ಪು ಬಿಡು. ನಾನ್ ಸರಿ ಇದ್ದಿದ್ರೆ ಹಿಂಗೆಲ್ಲ ಆಗ್ತಿರಲಿಲ್ಲ' 

“ನೀನ್ ಸರಿ ಇಲ್ಲ ಅಂತ ಯಾರ್ ಹೇಳಿದ್ದು?” 

'ಹೋಗ್ಲಿ ಬಿಡೋ. ಇನ್ನೂ ಬಹಳಷ್ಟು ಹೇಳೋಕಿದೆ. ಅದೆಲ್ಲಾ ಕೇಳಿದ ಮೇಲೆ ನೀನೇ ಹೇಳ್ತೀಯ ನಾನ್ ಸರಿ ಇಲ್ಲ ಻ಅಂತ' 

“ನೋಡುವ ನೋಡುವ. ಸರಿ ಕಣವ್ವ. ಮಲಗೋಣ್ವಾ ನಿದ್ರೆ ಬರ್ತಿದೆ" ಆಕಳಿಸುತ್ತಾ ಹೇಳಿದ. 

'ಸರಿ ಕಣೋ. ನಂಗೂ ಕಣ್ ಎಳೀತಿದೆ. ಮಲಗ್ತೀನಿ. ನಾಳೆ ಬೆಳಿಗ್ಗೆ ಮೆಸೇಜ್ ಮಾಡ್ತೀನಿ. ನೀ ಪುರುಸೊತ್ತಾಗಿದ್ರೆ ಮೆಸೇಜ್ ಮಾಡು' ಫೋನಿಟ್ಟೆ. ಕಣ್ರೆಪ್ಪೆಗಳು ಮುಚ್ಚಲು ಹವಣಿಸುತ್ತಿದ್ದರೂ ನಿದ್ರೆ ಬರಲಿಲ್ಲ. ಪರಶುನೊಂದಿಗೆ ಕಳೆದ ದಿನಗಳು ಗೋಡೆಯ ಮೇಲೆ ಸಿನಿಮಾದಂತೆ ಮೂಡಲಾರಂಭಿಸಿತ್ತು. ಎಷ್ಟು ಪ್ರೀತಿ ಎಷ್ಟು ಪ್ರೇಮ ಎಷ್ಟು ಉತ್ಕಟತೆ. ಈಗಿತ್ತು ಈಗಿಲ್ಲ ಅನ್ನುವಂತೆ ಎಲ್ಲವೂ ಮರೆಯೇ ಆಗಿ ಹೋಯಿತಲ್ಲ. ಎಲ್ಲಿದ್ದಾನೆ ಈಗ ಪರಶು? ಡಿಗ್ರಿ ಮುಗಿಸಿದ್ನಾ ಇಲ್ವಾ? ಮದುವೆಗೆ ಮುಂಚೆಯೇ ನನ್ನ ನಂಬರನ್ನೂ ಬದಲಿಸಿಕೊಳ್ಳಬೇಕಾಯಿತು. ಇವತ್ತಿಗೂ ಅವನ ನಂಬರ್ ನನ್ನ ಬೆರಳ ತುದಿಯಲ್ಲಿಯೇ ಇದೆ. 9743006759. ಅವನು ಅದೇ ನಂಬರ್ ಉಪಯೋಗಿಸುತ್ತಿರುತ್ತಾನಾ? ಮೊಬೈಲ್ ತೆಗೆದುಕೊಂಡ ಹೊಸತರಲ್ಲಿ ಅವನ ಸಿಮ್ ನಂಬರನ್ನು ನಾನೇ ಆಯ್ಕೆ ಮಾಡಿದ್ದೆ. ಮೊದಲು ಹಾಗೂ ಕೊನೇಲಿ 9 ಅಂಕಿ ಇದ್ದರೆ ಅದೃಶ್ಟ ಕಣೋ ಅಂತೇಳಿದ್ದೆ. ನೀನ್ಯಾವ ಹೊಸ ಸಿಮ್ ತಗಂಡ್ರೂ ಇದನ್ನು ಇಟ್ಕಂಡಿರಲೇಬೇಕು ಆಯ್ತ ಎಂದ್ಹೇಳಿದ್ದೆ. ಹ್ಞುಂಗುಟ್ಟಿದ್ದ. ಇನ್ನೂ ಅದೇ ನಂಬರ್ ಬಳಸುತ್ತಿರುತ್ತಾನಾ? ಒಮ್ಮೆ ಫೋನ್ ಮಾಡಿ ನೋಡಿ ಬಿಡಲಾ ಎಂದು ದಿಂಬಿನ ಕೆಳಗಿಟ್ಟಿದ್ದ ಫೋನ್ ಎತ್ತಿಕೊಂಡವಳಿಗೆ ಇದ್ದಕ್ಕಿದ್ದಂತೆ ಬೆಚ್ಚಿಬಿದ್ದೆ. ಇದೇನ್ ಮಾಡ್ತಾ ಇದ್ದೀನಿ ನಾನು? ಮತ್ತೆ ಪರಶುಗೆ ಫೋನ್ ಮಾಡೋದು ತಪ್ಪಷ್ಟೇ ಅಲ್ಲ ಮಹಾಪರಾಧ. ಶಾಂತಂ ಪಾಪಂ ಶಾಂತಂ ಪಾಪಂ ಎಂದ್ಹೇಳಿಕೊಳ್ಳುತ್ತಾ ಮೊಬೈಲನ್ನು ಕಾಲಿನ ಬಳಿಗೆ ಎಸೆದು ನಿದ್ರೆಗೆ ಜಾರಿಕೊಂಡೆ.

ಮುಂದಿನ ಭಾಗವನ್ನು ಓದಲು ಇಲ್ಲಿ ಕ್ಲಿಕ್ಕಿಸಿ. 

No comments:

Post a Comment