Jun 12, 2019

ಒಂದು ಬೊಗಸೆ ಪ್ರೀತಿ - 19


ಡಾ. ಅಶೋಕ್.‌ ಕೆ. ಆರ್.‌
‘ಅಡುಗೆ ಏನು ಮಾಡ್ಲಿ? ಮಧ್ಯಾಹ್ನ ಡ್ಯೂಟಿ ಇದೆ ನನಗೆ’ 

“ನನಗೇನೂ ತಿನ್ನೋ ಹಂಗೇ ಇಲ್ಲ. ಬೆಳಿಗ್ಗ ಹತ್ತಕ್ಕೆ ತಿಂಡಿ ತಿಂದಿದ್ದು. ದೋಸೆ ಕಾಲ್ ಸೂಪು ಕೈಮ ಗೊಜ್ಜು. ನಿನಗೆ ಏನು ಬೇಕ ಮಾಡ್ಕೊ. ಇಲ್ಲ ಪಾರ್ಸಲ್ ತಂದುಬಿಡ್ಲಾ?” 

‘ನೋಡ್ದಾ! ನನಗೂ ಎರಡು ಕೈಮ ಉಂಡೆ ತಂದಿದ್ರೆ ಬೇಡ ಅಂತಿದ್ನಾ?! ನನ್ನೊಬ್ಬಳಿಗೇ ಇನ್ನೇನು ಪಾರ್ಸಲ್ ತರ್ತೀರಾ ಬಿಡಿ. ಫ್ರಿಜ್ಜಲ್ಲಿ ಚಪಾತಿ ಹಿಟ್ಟಿರಬೇಕು. ಎರಡು ಚಪಾತಿ ಹಾಕ್ಕೋತೀನಿ. ನಿಮಗೂ ಹಾಕಿಡ್ಲಾ?’ 

“ಎರಡು ಹಾಕಿಡು. ಹಂಗೇ ಮೊಟ್ಟೆಯಿದ್ರೆ ಎರಡು ಆಮ್ಲೆಟ್ ಮಾಡು” 

‘ಎರಡು ಸಲ ಮಾಡಿದ್ದಕ್ಕೆ ಎರಡು ಚಪಾತಿ ಎರಡು ಮೊಟ್ಟೇನಾ?’ ನಗುತ್ತಾ ಕೇಳಿದೆ. ಅವರೂ ನಕ್ಕರು. 

ಊಟ ಮುಗಿಸಿ ಡ್ಯೂಟಿಗೆ ಹೊರಟಾಗ ರಾಜಿ ಮಲಗೇ ಇದ್ದರು. ಏಳಿಸುವ ಮನಸ್ಸಾಗಲಿಲ್ಲ. ಬಾಗಿಲು ಲಾಕ್ ಮಾಡಿಕೊಂಡು ಹೊರಟೆ. ಕಾರು ಓಡಿಸುತ್ತಾ ಆಸ್ಪತ್ರೆಯ ಕಡೆಗೆ ಹೊರಟರೆ ಕಣ್ಣಲ್ಲಿ ತೆಳ್ಳನೆಯ ನೀರಿನ ಪರದೆ. ಸೆಕ್ಸ್ ಮಾಡುವಾಗ ರಾಜೀವನ ಜಾಗದಲ್ಲಿ ಸಾಗರನನ್ನು ನೆನಪಿಸಿಕೊಂಡಿದ್ದು ಬೇಸರ, ಮುಜುಗರ, ಖುಷಿ, ದ್ವಂದ್ವದ ಮಿಶ್ರಭಾವವಗಳನ್ನು ಸ್ಪುರಿಸಿತು. ರಾಜೀವ್ ಅಷ್ಟೊಂದು ಪ್ರೀತಿಯಿಂದ, ಉತ್ಸುಕತೆಯಿಂದ ಸೆಕ್ಸ್ ಮಾಡೋದೇ ಅಪರೂಪ. ಇಂಥ ಅಪರೂಪದ ದಿನದಲ್ಲಿ ಸಾಗರನನ್ನು ಕಲ್ಪಿಸಿಕೊಂಡುಬಿಟ್ಟೆನಲ್ಲಾ? ಇದು ಸರಿಯಾ? ರಾಜಿಯಲ್ಲಿ ಉತ್ಕಟತೆ ಇಲ್ಲದಿದ್ದಾಗ ಸಾಗರನನ್ನು ನೆನಪಿಸಿಕೊಳ್ಳೋದು ಕೂಡ ತಪ್ಪೇ ಅಲ್ಲವಾ? ಗಂಡನ ಜೊತೆ ಸಮಾಗಮದಲ್ಲಿದ್ದಾಗ ಬೇರೊಬ್ಬ ಮನದಲ್ಲಿ ಮೂಡಿಬಿಟ್ಟಿದ್ದು ಇದೇ ಮೊದಲು. ಅಪ್ಪಿತಪ್ಪಿ ಕೂಡ ಪುರೋಷತ್ತಮ ಒಮ್ಮೆಯೂ ನೆನಪಾಗಿರಲಿಲ್ಲ. ಇವತ್ಯಾಕೆ ಈ ರೀತಿ ಆಗಿಹೋಯಿತು ಅನ್ನೋ ಕಾರಣಕ್ಕೆ ಮುಜುಗರ. ಆ ಕ್ಷಣದಲ್ಲಿ ಸಾಗರನ ನೆನಪಾಗಿದ್ದಕ್ಕೆ ಒಂದರೆ ಕ್ಷಣವಾದರ ಖುಷಿಯಾಗದೆ ಇರಲಿಲ್ಲ. ಇದು ಸರಿಯಾ? ಆತನ ನೆನಪಾಗಿದ್ದಾದರೂ ಯಾಕೆ? ಪ್ರಶ್ನೆಗಳಿಗೆ ಉತ್ತರ ಮೂಡುವ ಮೊದಲು ಕಾರು ಆಸ್ಪತ್ರೆಯ ಬಳಿ ಬಂದಿತ್ತ. ಪ್ರಶ್ನೆಗಳನ್ನೆಲ್ಲಾ ಕಾರಿನಲ್ಲೇ ಬಿಟ್ಟು ಆಸ್ಪತ್ರೆಯಲ್ಲಿದ್ದ ರೋಗಿಗಳೆಡೆಗೆ ಗಮನ ಹರಿಸಿದೆ. ಮನಸ್ಸು ಮತ್ತಷ್ಟು ಗೊಂದಲಗೊಳ್ಳದಿರಲೆಂಬ ಕಾರಣಕ್ಕೋ ಏನೋ ಅಂದು ವಿಪರೀತ ರೋಗಿಗಳು. ‘ಏನ್ ಮಾಡ್ತಿದ್ದೆ?’ ಎಂದು ಸಾಗರನಿಗೊಂದು ಮೆಸೇಜು ಕಳಿಸಲೂ ಪುರುಸೊತ್ತಾಗಲಿಲ್ಲ. ಎಂಟು ಘಂಟೆಗೆ ಕೆಲಸ ಮುಗಿಸಿ ಕಾರು ಹತ್ತಿದೊಡನೆ ಮಧ್ಯಾಹ್ನ ಬಿಟ್ಟು ಹೋಗಿದ್ದ ಪ್ರಶ್ನೆಗಳು ಕಾರಿನೊಳಗೆಲ್ಲ ಕುಣಿದು ಕುಪ್ಪಳಿಸಿ ರೊಳ್ಳೆ ತೆಗೆದು ಗಬ್ಬೆಬ್ಬಿಸಿದವು.

ಒಂದೊಂದೇ ಎಪಿಸೋಡು ಹುಡುಕುಡುಕಿ ಓದೋಕೆ ಬೇಸರವಾ? ಪೂರ್ತಿ ಇ - ಪುಸ್ತಕ ತೆಗೆದುಕೊಳ್ಳಲು ಇಲ್ಲಿ ಕ್ಲಿಕ್ಕಿಸಿ.
ಮನೆ ತಲುಪುವುಷ್ಟರಲ್ಲಿ ಅವುಗಳಿಗೆ ಉತ್ತರ ಕೊಡಲೇಬೇಕಿತ್ತು, ತಪ್ಪಿಸಿಕೊಳ್ಳುವುದು ಅಸಾಧ್ಯದ ಮಾತಾಗಿತ್ತು. ಕಾರನ್ನು ನಿಧಾನಕ್ಕೇ ಚಲಾಯಿಸಿದೆ. ನಾನೇನೇ ಸಮರ್ಥನೆ ಕೊಟ್ಟುಕೊಂಡರೂ, ಸುಳ್ಳು ಸುಳ್ಳೇ ಒಂದಷ್ಟು ನೆಪಗಳನ್ನು ಗುಡ್ಡೆ ಹಾಕಿಕೊಂಡರೂ ಸಾಗರನೆಡೆಗೆ ಸ್ನೇಹ ಮೀರಿಸುವ ಆತ್ಮೀಯತೆಯ ಭಾವ ಬೆಳೆದುಬಿಟ್ಟಿದೆಯೆಂಬ ಸತ್ಯವನ್ನು ಮರೆಮಾಚುವುದು ಸಾಧ್ಯವಿಲ್ಲ. ಫೇಸ್ ಬುಕ್ಕಿನ ಮೂಲಕ ಪರಿಚಿತವಾದೊಡನೆ ಅಗತ್ಯಕ್ಕಿಂತ ಹೆಚ್ಚು ಸಲುಗೆ ಬೆಳೆಸಿಕೊಂಡಿರುವುದಕ್ಕೆ ಅಪರೂಪಕ್ಕೆ ರಾಜೀವ ಮೂಡಿಸುವ ಬೇಸರ ಕಾರಣವಾ ಎಂದೊಂದು ಅನುಮಾನ ಮೂಡುತ್ತದಾದರೂ ಎಷ್ಟೇ ಬೇಸರ ಮೂಡಿಸಿದರೂ ರಾಜೀವ ‍ಒಳ್ಳೆ ಗಂಡ. ಪುರುಷೋತ್ತಮನಷ್ಟು ನನ್ನನ್ನು ಯಾರೂ ಪ್ರೀತಿಸಲಾರರು ಎನ್ನುವುದು ಎಷ್ಟು ಸತ್ಯವೋ ರಾಜೀವನಷ್ಟು ಒಳ್ಳೆ ಗಂಡ ಕೂಡ ಸಿಗಲಾರರು ಎನ್ನುವುದೂ ಅಷ್ಟೇ ಸತ್ಯ. ಪುರುಷೋತ್ತಮನನ್ನು ಮದುವೆಯಾಗಿದ್ದರೂ ಅವನು ರಾಜೀವನಷ್ಟು ಒಳ್ಳೆಯ ಗಂಡನಾಗಲು ಸಾಧ್ಯವಿರಲಿಲ್ಲ. ನನ್ನ ಬದುಕಿನ ಕೊರತೆಗಳನ್ನು ತುಂಬುವುದಕ್ಕೆ ಸಾಗರ್ ಅವಶ್ಯಕವಲ್ಲವಾದರೆ ಇಷ್ಟೊಂದು ಆತ್ಮೀಯತೆ ಬೇಕಿತ್ತೇ? 

ನನಗೆ ನಾನೇ ಸುಳ್ಳೇಳಿಕೊಳ್ಳುವುದರಲ್ಲಿ ಯಾವ ಸಂಪತ್ತಿದೆ? ಆತ್ಮೀಯತೆಯ ಭಾವವಷ್ಟೇ ಅಲ್ಲ, ನನಗೆ ಸಾಗರನ ಮೇಲೆ ಪ್ರೀತಿ ಇದೆ. ಹೌದು, ನಾನು ಸಾಗರನನ್ನು ಪ್ರೀತಿಸುತ್ತಿದ್ದೀನಿ. ಬಹುಶಃ ಕಾಲೇಜು ದಿನಗಳಲ್ಲೇ ಸಾಗರನೆಡೆಗಿದ್ದ ಆಕರ್ಷಣೆ ಈ ಕೆಲವು ತಿಮಗಳುಗಳ ಮಾತುಕತೆಯಿಂದ ಆತ್ಮೀಯತೆಯಾಗಿ ಪ್ರೀತಿಯಾಗಿ ಪರಿವರ್ತಿತವಾಗಿದೆ. ರಾಜೀವನ ಮೇಲಿನ ಪ್ರೀತಿ ಮರೆಯಾಗಿ ಹೋಗಿದೆಯಾ? ಹಾಗೇನೂ ಅನ್ನಿಸುತ್ತಿಲ್ಲ. ಅದೇನೇ ಇರಲಿ, ಇನ್ಯಾವತ್ತೂ ರಾಜೀವನ ಜೊತೆ ದೇಹಸುಖ ಅನುಭವಿಸುವಾಗ ಸಾಗರನನ್ನು ನೆನಪಿಸಿಕೊಳ್ಳಬಾರದು. ಇಬ್ಬರಿಗೂ ದ್ರೋಹ ಮಾಡಿದಂತದು. ಅದೇ ತರ ಸಾಗರನ ಜೊತೆ ದೇಹಸುಖ ........ ಅಯ್ಯೋ..... ಇದೇನೆಲ್ಲಾ ಯೋಚಿಸುತ್ತಿದ್ದೀನಿ ನಾನು. ಸಾಗರ ಎಲ್ಲೋ ದೂರದ ಮಂಗಳೂರಿನಲ್ಲಿದ್ದಾನೆ. ನಮ್ಮಿಬ್ಬರ ಭೇಟಿಯೇ ಅನುಮಾನ. ಜೊತೆಗೆ, ನಾನು ಸಾಗರನನ್ನು ಪ್ರೀತಿಸಿದ ಮಾತ್ರಕ್ಕೆ ಅವನು ನನ್ನನ್ನು – ಮದುವೆಯಾಗಿರದ ಅವನು ಮದುವೆಯಾಗಿರುವ ನನ್ನನ್ನು ಪ್ರೀತಿಸುತ್ತಾನೆ ಎಂದ್ಯಾಕೆ ಅಂದುಕೊಳ್ಳಬೇಕು? ಆದರೂ ಅವನು ಐ ಮಿಸ್ ಯೂ ಅನ್ನೋದ್ಯಾಕೆ? ಹಾಗಂದ ಮಾತ್ರಕ್ಕೆ ಆತ ನನ್ನನ್ನು ಪ್ರೀತಿಸುತ್ತಿದ್ದಾನೆ ಎಂದುಕೊಳ್ಳುವುದು ಅಪಕ್ವ ಯೋಚನೆ ಅಲ್ಲವೇ? ನನ್ನ ಮನಸ್ಸಲ್ಲಿ ಇಂತಹ ಯೋಚನೆಗಳೆಲ್ಲಾ ಹರಿದಾಡ್ತಿವೆ ಎಂದವನಿಗೆ ತಿಳಿದುಬಿಟ್ಟರೆ ಬಹುಶಃ ಇನ್ಯಾವತ್ತೂ ನನ್ನನ್ನಾತ ಮಾತಾಡಿಸುವುದೇ ಇಲ್ಲವೋ ಏನೋ. ಇವಳದೆಂತಹ ವ್ಯಕ್ತಿತ್ವ ಎಂದುಕೊಂಡುಬಿಡುತ್ತಾನೇನೋ. ಕಷ್ಟ ಸುಖಗಳನ್ನೆಲ್ಲಾ ಹಂಚಿಕೊಳ್ಳಲು ಅಪರೂಪಕ್ಕೆ ಒಂದು ಗೆಳೆತನ ಸಿಕ್ಕಿದೆ. ಆ ಗೆಳೆತನ ಶಾಶ್ವತವಾಗಿರಬೇಕು. ನನ್ನೊಳಗಿನ ಪ್ರೀತಿ ನನ್ನಲ್ಲಿಯೇ ಇರಲಿ. ಇರುವ ಗೆಳೆತನ ಗೆಳೆತನವಾಗೇ ಇರಲಿ. ಇನ್ಯಾವತ್ತೂ ರಾಜೀವನ ಜೊತೆಗಿರುವಾಗ ಸಾಗರನ ನೆನಪೂ ಬರಕೂಡದು ಎಂಬ ಧೃಡ ನಿಶ್ಚಯ ಮನದಲ್ಲಿ ಮೂಡಿದಾಗ ಕಾರು ಮನೆಯ ಗೇಟಿನ ಮುಂದೆ ನಿಂತಿತ್ತು. 

* * * 

ರಾಜೀವ ಮನೆಯಲ್ಲಿರಲಿಲ್ಲ. ಹೊರಗೆ ಹೋಗಿದ್ದರು, ಸಿಗರೇಟಿಗೆ. ಅವರಿಗೆ ಫೋನ್ ಮಾಡಿ ‘ಅಡುಗೆ ಏನೂ ಮಾಡೋದಿಲ್ಲಾ. ಸುಸ್ತು. ಹೊರಗೆ ಹೋಗುವಾ’ ಎಂದೆ. “ಸರಿ. ಅರ್ಧ ಘಂಟೆ ಬರ್ತೀನಿ” ಎಂದ್ಹೇಳಿ ಫೋನಿಟ್ಟರು. ಸಾಗರನಿಗೊಂದು ಮೆಸೇಜು ಮಾಡಿದೆ, ಹತ್ತು ನಿಮಿಷ ಕಾದೆ. ಪ್ರತ್ಯುತ್ತರ ಬರಲಿಲ್ಲ. ಫೋನ್ ಮಾಡಿದೆ, ರಿಸೀವ್ ಮಾಡಲಿಲ್ಲ. ಬ್ಯುಸಿ ಇರ್ಬೇಕು ಅಂದುಕೊಂಡೆ. ನಾಳೆ ಹೇಗಿದ್ರೂ ನೈಟ್ ಡ್ಯೂಟಿ. ಬೆಳಿಗ್ಗೆ ರಾಜೀವ ಕೆಲಸಕ್ಕೆ ಹೋದ ನಂತರ ಫೋನ್ ಮಾಡಿದರಾಯಿತು ಎಂದುಕೊಂಡು ಟಿವಿ ಹಾಕಿದೆ. ಹತ್ತು ನಿಮಿಷದ ನಂತರ ಮೊಬೈಲ್ ಸದ್ದಾಯಿತು. ಸಾಗರನ ಮೆಸೇಜು. “ಯಾಕೋ ನಾವಿಬ್ಬರೂ ಹಾದಿ ತಪ್ಪಿ ತಪ್ಪು ಮಾಡುತ್ತಿದ್ದೀವಿ ಅನ್ನಿಸ್ತಿದೆ” ನಗು ಮೂಡಿತು. ನಗುವಿನಿಂದೆಯೇ ನನ್ನ ಮೇಲೇ ಬೇಸರವಾಯಿತು. ಪಾಪದಂತಹ ಹುಡುಗನಿಗೆ ಸುಖಾಸುಮ್ಮನೆ ತೊಂದರೆ ಕೊಡುತ್ತಿದ್ದೀನೇನೋ ಅಂತ. ಪ್ರತಿಕ್ರಿಯಿಸುವಷ್ಟರಲ್ಲಿ ಗೇಟಿನ ಶಬ್ದವಾಯಿತು. ಸಾಗರನ ಮೆಸೇಜನ್ನು ಡಿಲೀಟ್ ಮಾಡಿ ಬಾಗಿಲು ತೆರೆದೆ. ಎರಡು ದೊಡ್ಡ ಕವರ್ ಹೊತ್ತು ತಂದಿದ್ದರು ರಾಜಿ. ಒಂದರ ತುಂಬಾ ತರಕಾರಿಯಿತ್ತು. ಮತ್ತೊಂದರಲ್ಲಿ ಆರ್.ಆರ್. ಮೆಸ್ಸಿನಿಂದ ಪಾರ್ಸಲ್ ತಂದಿದ್ದ ಊಟ. 

ಬೆಳಿಗ್ಗೆ ಎಂದಿಗಿಂತ ಬೇಗ ಎಚ್ಚರವಾಯಿತು. ಮುಂಜಾನೆಯ ಕನಸಿನಲ್ಯಾಕೋ ಪರಶು ಬಂದಿದ್ದ, ಜೊತೆಗೆ ಅಪ್ಪ. ಕನಸು ಗೋಜಲು ಗೋಜಲಾಗಿತ್ತು, ಥೇಟು ನನ್ನ ಜೀವನದ ಥರ. ಎದ್ದ ತಕ್ಷಣ ಕನಸಿನ ಬಗ್ಗೆ ಸಾಗರನಿಗೊಂದು ಮೆಸೇಜು ಹಾಕುವ ಮನಸ್ಸಾಯಿತು. ನಿನ್ನೆ ಅವನು ಕಳಿಸಿದ್ದ ಪಾಪಪ್ರಜ್ಞೆಯ ಮೆಸೇಜು ನೆನಪಾಗಿ ಅವನಿಗೂ ಮೆಸೇಜು ಕಳಿಸುವ ನಿರ್ಧಾರವನ್ನು ಅಳಿಸಿ ಹಾಕಿ ಸುಮ್ಮನೆ ರಾಜಿಯ ಎದೆಯ ಮೇಲೆ ಕೈಯಿಟ್ಟು ಅರ್ಧ ಘಂಟೆ ಮಲಗಿದೆ. ನಿನ್ನೆ ರಾತ್ರಿ ರಾಜಿ ತಂದಿದ್ದ ತರಕಾರಿ ಕವರ್ರಿನ ನೆನಪಾಗಿ ಹಾಸಿಗೆಯ ಮೇಲಿಂದೆದ್ದು ತರಕಾರಿ ಕವರನ್ನು ಹಾಲಿಗೆ ತಂದು ನೆಲದ ಮೇಲೆ ಹಳೆಯ ಪತ್ರಿಕೆಯೊಂದನ್ನು ಹಾಸಿ ಅದರ ಮೇಲೆ ತರಕಾರಿ ಸುರುವಿದೆ. ಅಡುಗೆಮನೆಗೆ ಹೋಗಿ ಮತ್ತಷ್ಟು ಚಿಕ್ಕ ಪುಟ್ಟ ಕವರುಗಳನ್ನು ತೆಗೆದುಕೊಂಡು ಬಂದು ತರಕಾರಿಗಳನ್ನು ವಿಂಗಡಿಸಿ ಬೇರೆ ಬೇರೆ ಕವರಿಗೆ ಹಾಕಿ ಕೊತ್ತಂಬರಿ, ಮೆಂತ್ಯ, ಪುದೀನ, ಸಬ್ಸಿಗೆ ಸೊಪ್ಪನ್ನು ಬಿಡಿಸಿ ಪುಟ್ಟ ಪುಟ್ಟ ಪ್ಲಾಸ್ಟಿಕ್ ಡಬ್ಬಿಗಳೊಳಗೆ ಹಾಕಿ ಫ್ರಿಜ್ಜಿಗೆ ಎತ್ತಿಡುವಷ್ಟರಲ್ಲಿ ಮುಕ್ಕಾಲು ಘಂಟೆ ಕಳೆದಿತ್ತು. ಮೆಂತ್ಯ ರೊಟ್ಟಿ ಉಪ್ಸಾರ್ ಖಾರ ಬೆಣ್ಣೆ ಅಂದ್ರೆ ರಾಜಿಗೆ ಬಲುಮೆಚ್ಚುಗೆ. ಮೆಂತ್ಯ ಸೊಪ್ಪನ್ನು ಮತ್ತೆ ಫ್ರಿಜ್ಜಿನಿಂದ ಹೊರತೆಗೆದು ತೊಳೆದು ರೊಟ್ಟಿ ತಯಾರಿಸುವಷ್ಟರಲ್ಲಿ ರಾಜಿ ಹಾಸಿಗೆಯಿಂದ ಎದ್ದಿದ್ದರು. “ಏಳ್ಸೋದಲ್ವಾ ಟೈಮೇ ಆಗೋಗಿದೆ ಆಗ್ಲೇ” ಎಂದು ಗೊಣಗಿಕೊಳ್ಳುತ್ತಾ ಸ್ನಾನಕ್ಕೆ ಹೋದರು. ನಾ ಏಳಿಸಿದ್ರೂ ಅವರು ಎದ್ದೇಳೋದು ಅಷ್ಟರಲ್ಲೇ ಇದೆ. ಅವರು ತಯಾರಾಗುವಷ್ಟರಲ್ಲಿ ಬಿಸಿ ಬಿಸಿ ರೊಟ್ಟಿ ತಟ್ಟೆಯ ಮೇಲಿತ್ತು. ಒಂದೂವರೆ ರೊಟ್ಟಿಯನ್ನು ಗಬಗಬನೆ ತಿಂದು ಮುಗಿಸಿ ಇನ್ನರ್ಧ ರೊಟ್ಟಿಯನ್ನು ಕಸದಬುಟ್ಟಿಗೆ ಸೇರಿಸಿ ಕೈತೊಳೆದುಕೊಂಡರು. ಅಷ್ಟು ಕಷ್ಟ ಪಟ್ಟು ಮಾಡಿದ ರೊಟ್ಟಿಯನ್ನು ಬಿಸಾಕಿದ್ದಕ್ಕೆ ಸಿಟ್ಟು ಬಂದಿತ್ತು, ಆದರ್ಯಾಕೋ ಇವತ್ತು ರೇಗಲೂ ಮನಸ್ಸಾಗಲಿಲ್ಲ. “ಬಾಗಿಲು ಹಾಕ್ಕೋ” ಎಂದ್ಹೇಳಿ ರಾಜಿ ಹೊರಟರು. ಅವರಿಗೂ ನನ್ನ ಮನಸ್ಥಿತಿ ಅರಿವಾಗಿತ್ತೋ ಏನೋ ಜಾಸ್ತಿ ಏನೂ ಮಾತನಾಡಲಿಲ್ಲ. ಎರಡು ರೊಟ್ಟಿಯನ್ನು ತಟ್ಟೆಗೆ ಹಾಕಿಕೊಂಡು ಬಂದು ‘ಸುಧಾ’ ಓದುತ್ತಾ ನಿಧಾನಕ್ಕೆ ತಿನ್ನಲಾರಂಭಿಸಿದೆ. ಒಂದು ರೊಟ್ಟಿಗೆ ತಟ್ಟೆಯಲ್ಲಿದ್ದ ಖಾರ ಬೆಣ್ಣೆ ಮುಗಿದಿತ್ತು. ಮತ್ತೆ ಎದ್ದು ಹೋಗಿ ಹಾಕಿಕೊಳ್ಳುವುದು ಉದಾಸೀನದ ಕೆಲಸವೆನ್ನಿಸಿ ಬರೀ ರೊಟ್ಟಿಯನ್ನೇ ತಿನ್ನುತ್ತಿದ್ದೆ, ಏನು ಓದುತ್ತಿದ್ದೆನೋ ನನಗೇ ತಿಳಿಯುತ್ತಿರಲಿಲ್ಲ. ಕಣ್ಣುಗಳು ಸುಮ್ಮನೆ ಅತ್ತಿಂದಿತ್ತ ಇತ್ತಿಂದತ್ತ ಸರಿಯುತ್ತಿದ್ದವಷ್ಟೇ. ಪರಶು ಬಗ್ಗೆ ಸಾಗರನಲ್ಲಿ ಅಷ್ಟೊಂದು ಹೇಳಿಕೊಂಡಿದ್ದಕ್ಕೇ ಈ ರೀತಿಯಾಗಿದೆಯಾ ಮನಸ್ಸು? ಅಥವಾ ಸಾಗರನ ಬಗ್ಗೆ ಮನದಲ್ಲಿ ಮೂಡುತ್ತಿರುವ ಪ್ರೀತಿ ಇದಕ್ಕೆ ಕಾರಣವಾ? ನಿನ್ನೆವರೆಗೂ ಚೆನ್ನಾಗೇ ಇದ್ದೆನಲ್ಲ, ಏನಾಯ್ತು ಇವತ್ತು ಎಂದುಕೊಳ್ಳುವಾಗ ರೂಮಿನಲ್ಲಿ ಹಾಸಿಗೆಯ ಮೇಲೆ ಬಿದ್ದಿದ್ದ ಫೋನು ರಿಂಗಣಿಸಿತು. ತಟ್ಟೆಯನ್ನು ಅಲ್ಲೇ ಸೋಫಾದ ಮೇಲಿಟ್ಟು ರೂಮಿಗೋಗಿ ಫೋನೆತ್ತಿಕೊಂಡೆ. ಅಪ್ಪನ ಕರೆ! ಮೊದಲೇ ಮೂಡ್ ಸರಿಯಿಲ್ಲ, ಇವತ್ತು ನನಗೆ. ಈಗ ಅಪ್ಪನ ಕೈಲಿ ಬಯ್ಯಿಸಿಕೊಳ್ಳೋ ಕಾರ್ಯಕ್ರಮ ಬೇರೆ ಇದ್ಯಾ? ಕರೆ ಕಟ್ ಮಾಡಿಬಿಡುವ ಮನಸ್ಸಾಯಿತು. ಬೆಳಿಗ್ಗೆ ಬೆಳಿಗ್ಗೆ ಫೋನ್ ಮಾಡೋರಲ್ಲ ಅಪ್ಪ, ಮನೆಯಲ್ಯಾರಿಗಾದ್ರೂ ಹುಷಾರಿಲ್ವಾ ಹೇಗೆ ಎಂದುಕೊಳ್ಳುತ್ತಲೇ ಫೋನ್ ರಿಸೀವ್ ಮಾಡಿದೆ. 

“ಏನಮ್ಮಾ ಕೊಬ್ ಲಕ್ಷ್ಮಿ. ನಾನ್ ರೇಗ್ದೆ ಅಂದ್ಬಿಟ್ಟು ಬದುಕಿದ್ದಾರೋ ಸತ್ತಿದ್ದಾರೋ ಅನ್ನೋದನ್ನೂ ವಿಚಾರಿಸಿಕೊಳ್ದೇ ಇರ್ತೀಯಲ್ಲ. ಅಪ್ಪ ಆದೋನಿಗೆ ರೇಗೋ ಅಧಿಕಾರವೂ ಇಲ್ಲ ಅನ್ನು” 

ಅಪ್ಪನ ದನಿ ಬೆಳಿಗ್ಗೆಯಿಂದ ಮನಸ್ಸಿಗೆ ಕವಿದಿದ್ದ ಬೇಸರವೆಲ್ಲವನ್ನೂ ದೂರ ಸರಿಸಿಬಿಟ್ಟಿತು. 

‘ಹೇ ಹೇ. ಹಂಗೇನಿಲ್ಲಪ್ಪ. ನಿನ್ ಮನಸ್ಸು ಸ್ವಲ್ಪ ಶಾಂತವಾಗ್ಲಿ ಅಂತ ಕಾಯ್ತಿದ್ದೆ ಅಷ್ಟೇ’ 

“ಹು. ಎಲ್ರೂ ಅಷ್ಟೇ ಕಣ್ ಬಿಡು. ಚೆನ್ನಾಗಿದ್ದಾಗ ಜೊತೇಲಿರ್ತಾರೆ. ಏನಾದ್ರೂ ಹೆಚ್ಚು ಕಡಿಮೆ ಆದ್ರೆ ದೂರ ಹೋಗಿಬಿಡ್ತಾರೆ. ಅಷ್ಟೇ” 

‘ಅಯ್ಯೋ ಹೋಗಪ್ಪ. ಯಾವ್ ದೂರ. ಈಗೇನು. ಬೆಳಿಗ್ಗೆ ಬೆಳಿಗ್ಗೆ ಜಗ್ಳ ಮಾಡೋದಿಕ್ಕಾ ಫೋನ್ ಮಾಡಿದ್ದು?’ 

“ಎಲಾ ಇವ್ಳ. ರೇಗೋದ್ ನೋಡು” 

‘ಮತ್ತೆ. ಯಾರ್ ಮಗ್ಳು ನಾನು!’ 

“ಹ ಹ ಅದು ಸರಿ ಅನ್ನು. ಮತ್ತೆ ಡ್ಯೂಟಿ ಎಷ್ಟೊತ್ತಿಗೆ ಇವತ್ತು” 

‘ನೈಟ್ ಡ್ಯೂಟಿ’ 

“ರಾಜೀವು” 

‘ಈಗ ಕಾಲ್ ಘಂಟೆ ಆಯ್ತು ಹೋಗಿ’ 

“ಮತ್ತೆ ಬಾ ಮನೆ ಕಡೆಗೆ” 

‘ಯಾಕೆ? ನಿಮ್ಮತ್ರ ಬಯ್ಯಿಸಿಕೊಳ್ಳೋಕಾ?’ 

“ಹೋ. ಹೋ. ಏನ್ ನಾನ್ ಮೊದಲ್ನೆ ಸಲ ಬಯ್ದಿದ್ದು. ಇವ್ಳು ಮೊದಲ್ನೇ ಸಲ ಬಯ್ಸಿಕೊಂಡಿದ್ದು. ಸ್ನಾನ ಗೀನ ಮಾಡ್ಕಂಡ್ ಬಾ ಬೇಗ. ಚಿಕನ್ ತರ್ತೀನಿ. ಬಿರಿಯಾನಿ ಮಾಡೋವಂತೆ” 

‘ಓ! ನಿಮುಗ್ ಬಿರಿಯಾನಿ ನೆನಪಾಗ್ ನನಗೆ ಫೋನ್ ಮಾಡಿದ್ದೀರ ಅನ್ನಿ!’ 

“ಏನಾದ್ರೂ ಅಂದ್ಕವ್ವ. ಬಾ. ಬಂದು ಬಿರಿಯಾನಿ ಮಾಡು ಅಷ್ಟೇ” 

‘ಸರಿ ಸರಿ. ಇನ್ನೊಂದರ್ಧ ಘಂಟೆಗೆ ಬರ್ತೀನಿ. ಒಂದ್ ಕೆಜಿ ಜೀರ್ಗೆ ಸಣ್ಣ ಅಕ್ಕಿ ತಗಂಡ್ ಬನ್ನಿ. ಹಂಗೆ ಒಂದ್ ಪ್ಯಾಕೆಟ್ ಶುಂಠಿ ಬೆಳ್ಳುಳ್ಳಿ ಪೇಸ್ಟು. ಸೊಪ್ಪೇನು ತರಬೇಡಿ. ಈಗಷ್ಟೇ ಬಿಡಿಸಿ ಇಟ್ಟಿದ್ದೆ. ನಾನೇ ತರ್ತೀನಿ’ 

“ಅಯ್ಯೋ. ಮಗಳ ಮನೆ ಸೊಪ್ಪು ನಮಗ್ಯಾಕವ್ವ. ಇಲ್ಲೂ ಸೊಪ್ಪು ತಂದಿಟ್ಟಿದ್ದೀನಿ ನಿನ್ನೆ ಸಂಜೇನೇ. ಕೈ ಬೀಸ್ಕೊಂಡ್ ಬಾ ಸಾಕು” 

‘ಓಹೋ! ಇದು ನಿನ್ನೇನೆ ಮಾಡಿರೋ ಪ್ಲ್ಯಾನು. ಫೋನ್ ಮಾತ್ರ ಈಗ ಮಾಡಿದ್ದು ಅನ್ನಿ’ 

“ಹಂಗೇ ಅನ್ಕೋ. ಕೇಬಲ್ನವನು ಬಂದ ಅಂತ ಕಾಣ್ತದೆ. ಇಡ್ತೀನಿ ಫೋನು” ಎಂದ್ಹೇಳಿ ಫೋನ್ ಕಟ್ ಮಾಡಿದರು. 

ಬೆಳಿಗ್ಗೆಯಿಂದ ಮುದುಡಿ ಬಿದ್ದಿದ್ದ ಮನಸ್ಸು ಅಪ್ಪನ ಕರೆಯಿಂದ ಪೂರ್ತ ಸರಿಯಾಯಿತು. ಮನಸ್ಸು ಮುದುಡಿ ಬಿದ್ದಿದ್ದಕ್ಕೆ ಪರಶು ಕಾರಣವಾ ಸಾಗರ್ ಕಾರಣವಾ ಎಂದೆಲ್ಲ ಯೋಚಿಸಿದ್ದೆ. ಅಸಲಿ ಕಾರಣ ಅಪ್ಪನೊಡನೆ ಬಹಳ ದಿನಗಳಿಂದ ಮಾತನಾಡದೇ ಹೋದದ್ದು ಎಂದರಿವಾಗಿ ಮುಗುಳ್ನಗು ಮೂಡಿತು. ಬೆಳಿಗ್ಗೆ ಬಿದ್ದಿದ್ದ ಗೋಜಲು ಗೋಜಲು ಕನಸಿನಲ್ಲಿ ಅಪ್ಪನೂ ಇದ್ದರು ಆದರೆ ನನ್ನ ಮನಸ್ಸು ಮಾತ್ರ ಕನಸಲ್ಲಿ ಬಂದಿದ್ದ ಪರಶುವಿನ ಬಗ್ಗೆಯಷ್ಟೇ ಯೋಚಿಸುತ್ತಿತ್ತು. ನಮ್ಮನುಕೂಲಕ್ಕೆ ತಕ್ಕಂತೆ ನಮ್ಮ ಮನಸ್ಸೂ ವರ್ತಿಸುತ್ತಾ ಅಥವಾ ಮನಸ್ಸಿನನುಕೂಲಕ್ಕೆ ತಕ್ಕಂತೆ ನಾವು ವರ್ತಿಸುತ್ತೀವಾ? 

ಅಮ್ಮನ ಮನೆ ತಲುಪಿದಾಗ ಘಂಟೆ ಹತ್ತೂವರೆಯಾಗಿತ್ತು. ತಮ್ಮ ಶಶಿ ಕೆಲಸಕ್ಕೋಗಿದ್ದ. ಬಿರಿಯಾನಿ ಮಾಡಿ ಊಟ ಮಾಡಿ ಟಿವಿ ನೋಡ್ಕೋಂತಾ ದಿವಾನದ ಮೇಲೆ ನಾಲ್ಕರವರೆಗೆ ಮಲಗಿಬಿಟ್ಟಿದ್ದೆ. ಅಪ್ಪನಾಗಲೀ ಅಮ್ಮನಾಗಲೀ ಶಶಿಯ ಮದುವೆಯ ಬಗ್ಗೆ ಒಂದಾದರೂ ಮಾತನಾಡದೇ ಹೋದದ್ದು ಅಚ್ಚರಿ ಮೂಡಿಸಿತ್ತು. ಅವರಾಗೇ ಮಾತನಾಡದಿದ್ದಾಗ ನಾನು ಆ ವಿಷಯ ಕೆದಕಿ ಸರಿಹೋಗಿದ್ದ ನನ್ನ ಮನಸ್ಥಿತಿಯನ್ನು ಮತ್ತೊಮ್ಮೆ ಕೆಡಿಸಿಕೊಳ್ಳುವ ಮನಸ್ಥಿತಿ ನನಗೂ ಇರಲಿಲ್ಲ. ದಿವಾನದಿಂದೆದ್ದು ಹೋಗಿ ಮುಖ ತೊಳೆದುಕೊಂಡು ಬಂದು ಮತ್ತೆ ದಿವಾನದ ಮೇಲೆ ಮಲಗಿ ಟಿವಿ ಹಾಕಿದೆ. ಅಪ್ಪ ಅಮ್ಮ ಇಬ್ಬರೂ ರೂಮಿನಲ್ಲಿ ಮಲಗಿಕೊಂಡಿದ್ದರು. ಮಧ್ಯಾಹ್ನವಾಗಲೀ ಬೆಳಿಗ್ಗೆಯಾಗಲೀ ರಾತ್ರಿಯಾಗಲೀ ಬಾಗಿಲು ಚಿಲಕ ಹಾಕೇ ಮಲಗಿಕೊಳ್ಳೋದವರು. ದಿನದೊತ್ತಿನಲ್ಲಿ ಬಾಗಿಲಾಕಿಕೊಳ್ತಾರಲ್ಲ, ಹೆಂಗ್ ಮಲಗ್ತಾರವರಿಬ್ಬರು ಅನ್ನೋ ಕೆಟ್ಟ ಕುತೂಹಲ ಬಹಳಷ್ಟು ವರ್ಷಗಳಿಂದ ನನ್ನನ್ನು ಕಾಡುತ್ತಲಿದೆ. ಇಣುಕಿ ನೋಡೇಬಿಡಬೇಕೆಂಬ ಕೆಟ್ಟಾಸೆ ಆಗೀಗ ಮಿಂಚಿ ಮರೆಯಾಗುತ್ತಿರುತ್ತದೆ, ಸಂಸ್ಕಾರದ ನೆನಪಾಗಿ ಸುಮ್ಮನಾಗುತ್ತೇನೆ. ಟಿವಿ ಸದ್ದು ಕೇಳಿ ಅಪ್ಪನಿಗೆ ಎಚ್ಚರವಾಗಿರಬೇಕು. ಬಾಗಿಲು ತೆಗೆದುಕೊಂಡು ಹೊರಬಂದರು. ಇನ್ನೂ ಮಲಗಿಕೊಂಡಿದ್ದ ಅಮ್ಮನಿಗೆ ಎಚ್ಚರವಾಗದಿರಲೆಂಬ ಎಚ್ಚರಿಕೆಯಿಂದ ಜಾಗೃತೆಯಿಂದ ಬಾಗಿಲನ್ನಾಕಿಕೊಂಡು ಹಾಲಿಗೆ ಬಂದು ಕುಳಿತರು. ಒಂದೆರಡು ನಿಮಿಷ ಏನೂ ಮಾತನಾಡಲಿಲ್ಲ. ಅಪ್ಪ ಹಿಂಗೆಲ್ಲ ಮೌನದಿಂದಿರುವವರಲ್ಲ. ಒಂದು ಗಂಭೀರ ಮಾತುಕತೆಗೆ ಈ ಮೌನ ಮುನ್ನುಡಿ. 

“ಚೆನ್ನಾಗಿತ್ತು ಬಿರಿಯಾನಿ” 

‘ಹು. ಮಗಳ ಮೇಲೆ ಮುನಿಸಿದ್ರೂ ಮಗಳು ಮಾಡೋ ಬಿರಿಯಾನಿ ಮೇಲೆ ಮುನಿಸಿಲ್ವಲ್ಲ ಬಿಡಿ’ ವ್ಯಂಗ್ಯವಾಗಿ ಹೇಳುತ್ತಾ ನಕ್ಕೆ. ನಗುವಿನಲ್ಲಿ ಅವರೂ ಜೊತೆಯಾದರು. ಸ್ವಲ್ಪ ಹೊತ್ತಿನ ನಂತರ “ಸಾರಿ” ಎಂದರು. ‘ಹೇ ಬಿಡಪ್ಪ. ಅದಕ್ಕೆಲ್ಲ ಏನ್ ಸಾರಿ ಕೇಳ್ತೀರ..... ನಮ್ಮಿಬ್ಬರಿಗೂ ಹೊಸತೇನಲ್ಲವಲ್ಲ ಇದು’ ಎಂದು ಹೇಳಿ ಮುಗಿಸುವಷ್ಟರಲ್ಲಿ ದನಿ ಗದ್ಗದಿತವಾಗಿತ್ತು. 

“ನಿನ್ನತ್ರ ಒಂದ್ ವಿಷಯ ಮಾತನಾಡಬೇಕಿತ್ತು” 

‘ಮ್. ಬಿರಿಯಾನಿ ಮಾಡೋದಿಕ್ಕಷ್ಟೇ ನನ್ನನ್ನು ಕರೆಸಿರೋದಲ್ಲ ಅಂತ ನಂಗೂ ಗೊತ್ತಿತ್ತು. ಏನ್ ವಿಷ್ಯ ಹೇಳಿ’ ಎದ್ದು ಕುಳಿತೆ. ಟಿವಿ ವಾಲ್ಯೂಮ್ ಕಡಿಮೆ ಮಾಡಿದೆ. 

“ಇನ್ಯಾವ ವಿಷ್ಯ ಇರ್ತದೆ. ಅದೇ ನಮ್ ಶಶಿ ವಿಷಯ”

ಮುಂದಿನ ಭಾಗವನ್ನು ಓದಲು ಇಲ್ಲಿ ಕ್ಲಿಕ್ಕಿಸಿ. 

No comments:

Post a Comment