Jun 28, 2019

ಒಂದು ಬೊಗಸೆ ಪ್ರೀತಿ - 20

ಡಾ. ಅಶೋಕ್.‌ ಕೆ. ಆರ್.‌
‘ಶಶಿ ವಿಷಯ ಶಶಿಯತ್ರಾನೇ ಮಾತನಾಡಿದ್ರೆ ಚೆಂದ ಅಲ್ವ. ಕೊನೇಪಕ್ಷ ಅವನು ಇದ್ದಾಗಲಾದರೂ ಮಾತನಾಡಬೇಕು. ಅವನಿಲ್ಲದೆ ಇದ್ದಾಗ ಮಾತನಾಡುವುದು ಸರಿಯಲ್ಲವೇನೋ’ ತಾಳ್ಮೆಯ ಪ್ರತಿರೂಪದಂತೆ ಮಾತನಾಡುತ್ತಿರುವ ಅಪ್ಪನ ದನಿ ಯಾವಾಗ ದಿಕ್ಕು ತಪ್ಪಿ ರೇಗುವಿಕೆಯಾಗಿ ಅಸಭ್ಯವಾಗಿ ಪರಿವರ್ತಿತವಾಗುತ್ತದೋ ಎಂಬ ಭಯ ನನಗೆ. 

“ನಿನಗೆ ಗೊತ್ತಾ ಹುಡುಗಿ ಯಾರು ಅಂತ?” 

‘ಮ್. ಗೊತ್ತು’ 

“ನೋಡಿದ್ದೀಯಾ?” 

‘ಮ್’ 

“ಮಾತನಾಡಿದ್ದೀಯ?” 

‘ಮ್’ 

“ನಿಮ್ಮಮ್ಮನಿಗೆ ಗೊತ್ತಾ?” 

‘ಮ್’ 

“ಎಲ್ಲರಿಗೂ ಗೊತ್ತು. ನಾನೊಬ್ನೇ ಬೇವರ್ಸಿ ಈ ಮನೇಲಿ” 

‘ಮತ್ತೆ ಶುರು ಮಾಡಬೇಡಿ ಅಪ್ಪ’ 

“ಸಾರಿ. ಯಾರು ಹುಡುಗಿ?” 

‘ನೀವೇಗಿದ್ರೂ ಮದುವೆಗೆ ಒಪ್ಪಲ್ಲ ಅಂದ ಮೇಲೆ ಹುಡುಗಿ ಯಾರಾದ್ರೇನು ಬಿಡಿ ಅಪ್ಪ’

ಒಂದೊಂದೇ ಎಪಿಸೋಡು ಹುಡುಕುಡುಕಿ ಓದೋಕೆ ಬೇಸರವಾ? ಪೂರ್ತಿ ಇ - ಪುಸ್ತಕ ತೆಗೆದುಕೊಳ್ಳಲು ಇಲ್ಲಿ ಕ್ಲಿಕ್ಕಿಸಿ.

“ನೋಡಮ್ಮ. ನನ್ನ ಗೊಂದಲಗಳು ನಿನಗೆ ತಿಳಿಯೋದಿಲ್ಲ. ನಿನ್ನ ಪ್ರೇಮ ಕತೆ ಗೊತ್ತಾದಾಗ್ಲೂ ಬೇಡ ಅಂದಿದ್ದಕ್ಕೆ ಆ ಹುಡುಗ....ಏನವನ ಹೆಸರು.....” 

‘ಪರಶು.....ಪುರುಷೋತ್ತಮ’ 

“ಹು. ಅವನೇ. ಆ ಮದುವೆಗೆ ಒಪ್ಪದಿರೋದಿಕ್ಕೆ ಮುಖ್ಯ ಕಾರಣ ಅವನ ಜಾತಿ. ಅವನು ಗೌಡರವನಾಗಿರದೆ ನಮ್ಮವರೇ ಆಗಿದ್ದರೆ ಒಪ್ತಿದ್ದೆ ಅಲ್ವ” 

‘ಹಳೇ ವಿಷಯ ಎಲ್ಲಾ ಯಾಕಪ್ಪ ಈಗ. ಆ ಮದುವೆ ನಡೆಯದೇ ಇರೋದಿಕ್ಕೆ ನೀವೊಬ್ಬರೇ ಕಾರಣರಲ್ಲ ಅಂತ ನನಗೂ ಗೊತ್ತು ನಿಮಗೂ ಗೊತ್ತು. ಎಲ್ಲಾ ಅಪವಾದವನ್ನೂ ನಿಮ್ಮ ಮೇಲೆ ಆರೋಪಿಸಿಕೊಂಡು ಹೀರೋ ಆಗೋದೇನೂ ಬೇಕಿಲ್ಲ ಈಗ’ 

“ಹ ಹ ಅಲ್ವ. ಹೋಗ್ಲಿ ಬಿಡು. ನಿನ್ನ ಮದುವೆಗೆ ಜಾತಿ ನೆಪ ಮಾಡಿಕೊಂಡೇ ನಾನು ಒಪ್ಪಿಗೆ ಕೊಟ್ಟಿರಲಿಲ್ಲ. ಇನ್ನು ಶಶಿ ಮದುವೆಗೆ ಹೇಗೆ ಒಪ್ಪಿಗೆ ಕೊಡಲಿ” 

‘ಹಳೇದ್ ಬಿಡಿ ಅಪ್ಪ. ಶಶಿ ಭಾವನೆಗೂ ಬೆಲೆ ಕೊಡಬೇಕು ಅಂತ ನನ್ನ ಭಾವನೆ’ 

“ಈ ಮದುವೆಗೆ ಒಪ್ಪಿಗೆ ಕೊಟ್ಟುಬಿಟ್ಟರೆ ಮಗಳಿಗೊಂದು ನ್ಯಾಯ ಮಗನಿಗೊಂದು ನ್ಯಾಯ ಮಾಡಿದಂತಾಗುವುದಿಲ್ಲವಾ?” 

‘ಹಂಗೆಲ್ಲ ಯೋಚಿಸಬೇಡಿ ಅಪ್ಪ. ಆಗಿದ್ದೆಲ್ಲ ಒಳ್ಳೆಯದಕ್ಕೇ ಅಂತ ನಂಬೋಳು ನಾನು. ಪರಶುನನ್ನು ಮದುವೆಯಾಗಿದ್ದರೆ ಎಷ್ಟು ಸುಖವಾಗಿರ್ತಿದ್ನೋ ಎಷ್ಟು ನೆಮ್ಮದಿಯಾಗಿರ್ತಿದ್ನೋ ಗೊತ್ತಿಲ್ಲ. ರಾಜಿ ಜೊತೆ ಸುಖ ನೆಮ್ಮದಿ ಎರಡೂ ಸಿಕ್ಕಿದೆ. ಅಷ್ಟು ಸಾಕು ಬಿಡಿ’ ಕೊನೆಯ ಸಾಲುಗಳ ಬಗ್ಗೆ ನನ್ನಲ್ಲೇ ವಿಶ್ವಾಸವಿರಲಿಲ್ಲ. ‘ನಿಮಗೇನೂ ಅಭ್ಯಂತರ ಇಲ್ಲಾಂದ್ರೆ, ಅಭ್ಯಂತರ ಇಟ್ಕೋಬೇಡಿ ಅನ್ನೋದು ನನ್ನ ವಿನಂತಿ. ಶಶಿ ಮದ್ವೆಗೆ ನೀವು ಒಪ್ಕೊಳ್ಳಿ. ಒಳ್ಳೆ ಹುಡುಗಿ ಅವಳು’ 

“ಮ್. ಅಂದ್ರೂ ನಿನಗ್ ಅನ್ಯಾಯ ಮಾಡಿದಂಗಾಗುತ್ತೇನೋ ಅಂತ....” 

‘ಹಂಗೇನಿಲ್ಲ ಅಂದ್ನಲ್ಲ’ 

“ಮ್. ಒಳ್ಳೆ ಹುಡುಗಿ ಅಂತ ಬೇರೆ ಹೇಳ್ತಿ. ಯಾರು ಹುಡುಗಿ” 

ಹೇಳುವುದೋ ಬೇಡವೋ ಗೊಂದಲ. ಮೊದಲೇ ಅಪ್ಪನಿಗೆ ಸೋನಿಯಾಳ ತಂದೆ ರಾಮೇಗೌಡರನ್ನು ಕಂಡರೆ ಅಷ್ಟಕಷ್ಟೇ. 

“ಯಾರ್ ಹೇಳಮ್ಮ?” 

‘ಸೋನಿಯಾ....’ 

“ಯಾರ್ ನಮ್ ಸೋನಿಯಾನೇ?.....ಚಿನ್ನದಂತ ಹುಡುಗಿ” ಎಂದ್ಹೇಳಿ ತುಟಿ ಕಚ್ಚಿಕೊಂಡರು. 

ಅಷ್ಟೊತ್ತು ಒಂದಷ್ಟು ಗಂಭೀರತೆಯಿಂದ ಮಾತನಾಡುತ್ತಿದ್ದವಳಿಗೆ ಅಪ್ಪನ ಮಾತು ಕೇಳಿ ನಗು ತಡೆಯಲಾಗಲಿಲ್ಲ. ಮುಗುಳುನಗೆ ಜೋರಾಗಿಯೇ ಇದ್ದಿರಬೇಕು, ನನ್ನ ನಗುವಿನೊಂದಿಗೆ ಅಪ್ಪನ ನಗುವೂ ಸೇರಿಕೊಂಡಿತು. ಎರಡ್ಮೂರು ನಿಮಿಷ ನಕ್ಕಿರಬೇಕೇನೋ. ನಮ್ಮ ನಗುವಿನಲೆ ನಾವಂದುಕೊಂಡಕ್ಕಿಂತ ಜೋರಾಗಿಯೇ ಇತ್ತು ಎನ್ನುವುದು ಅರಿವಾಗಿದ್ದು ರೂಮಿನಲ್ಲಿ ಮಲಗಿದ್ದ ಅಮ್ಮ ಕಣ್ಣುಜ್ಜಿಕೊಂಡು ಗೊಣಗಿಕೊಂಡು ಹೊರಬಂದಾಗ. 

“ಏನ್ ಅದು ಅಷ್ಟು ನಗು” ಎಂದು ಅಮ್ಮ ಹೇಳಿ ಮುಗಿಸುವಷ್ಟರಲ್ಲಿ ನಾವಿಬ್ಬರೂ ಗಂಭೀರರಾಗಿ ಕುಳಿತಿದ್ದೊ. 

“ನೋಡ್ದಾ ಅಪ್ಪ ಮಗ್ಳು ನಾಟಕವಾ? ನಾನೇನ್ ನಿಮ್ ಕೂಡ ಸೇರ್ಕಂಡು ನಗಲ್ಲ ಅಂತೀನಾ....” 

ಅಪ್ಪ ನನ್ನ ಕಡೆ ನೋಡಿ ಏನೂ ಹೇಳಬೇಡ ಅಂತ ಕಣ್ಣುಮಿಟುಕಿಸಿದರು. ಅಮ್ಮನ ಗಮನಕ್ಕದು ಬರದೇ ಇರಲಿಲ್ಲ. ಅಮ್ಮನ ಗಮನದಿಂದೊರತಾಗಿಸುವ ಬಯಕೆಯೂ ಅಪ್ಪನಿಗಿರಲಿಲ್ಲ. 

“ಸರಿ ಬಿಡ್ರಪ್ಪ. ನಿಮ್ ನಗು ನಿಮ್ ವಿಷಯ ನೀವೇ ಇಟ್ಕೊಳಿ. ನನಗ್ಯಾಕೆ” ಎಂದು ಅಡುಗೆ ಮನೆಯ ಕಡೆಗೆ ಎರಡೆಜ್ಜೆ ಹಾಕಿದರು. 

“ಹೇ. ಇಲ್ ಬಾ ಡಾರ್ಲಿಂಗ್. ನಿಂಗೇಳ್ದೇ ಇರೋ ವಿಷಯ ಯಾವ್ದಾದ್ರೂ ಇದ್ಯಾ ನನ್ನತ್ರ... ಬಾ ಇಲ್ಲಿ.....” 

ಅಪ್ಪ ಡಾರ್ಲಿಂಗ್ ಅಂದ ಮೇಲೆ ಅಮ್ಮ ಬರದೇ ಇರ್ತಾರೆಯೇ. ಬಂದು ಅಪ್ಪನ ಪಕ್ಕದಲ್ಲೇ ಕುಳಿತರು. ಅಮ್ಮನ ಹೆಗಲ ಮೇಲೆ ಕೈ ಹಾಕುತ್ತಾ ಅಪ್ಪ “ನಮ್ ಶಶಿ ವಿಷಯ ಮಾತನಾಡ್ತಿದ್ದೊ” ಅಮ್ಮನ ಮುಖದ ಮೇಲಿದ್ದ ನಗು ಇದ್ದಕ್ಕಿದ್ದಂತೆ ಮಾಯವಾಯಿತು. ಶಶಿ ವಿಷಯ ಮಾತನಾಡಿದ್ರೆ ಜಗಳವಾಗ್ಬೇಕು, ಇವರಿಬ್ರೇನೂ ನಗ್ತಾ ಕುಳಿತಿದ್ದಾರೆ ಅನ್ನೋ ಭಾವನೆಯನ್ನು ಮುಖದ ಮೇಲೆ ಹೊತ್ತಿಕೊಂಡಿದ್ದರು ಅಮ್ಮ. 

“ಮ್” ಎಂದಷ್ಟೇ ಪ್ರತಿಕ್ರಿಯಿಸಿದರು. 

“ಏನ್ ಮ್. ಗೊತ್ತಾಯ್ತು ಯಾರು ಹುಡುಗಿ ಅಂತ. ಹೇಳಿದ್ಲು ನಿನ್ ಮಗಳು” 

“ಮ್” 

“ಏನ್ ಮ್. ನಿಂಗೂ ಗೊತ್ತಿತ್ತಂತೆ ಕಳ್ಳಿ... ಹೇಳಲೇ ಇಲ್ಲ ನನಗೆ” 

“ನಿಮಗೇಳಿ ನಾನ್ಯಾಕೆ ಸುಖಾಸುಮ್ಮನೆ ಉಗಿಸಿಕೊಳ್ಳಲಿ ಅಂತ ಹೇಳಲಿಲ್ಲ” 

“ಮ್. ಕೋಪ ಬರ್ತದೆ. ಆಮೇಲ್ ಸಾವಾಕಾಶವಾಗಿ ಯೋಚಿಸಿದಾಗ ಕೋಪಕ್ಕೇನು ಅರ್ಥ ಇರಲಿಲ್ಲ ಅನ್ನೋದು ಅರ್ಥವಾಗ್ತದೆ. ನನ್ ಗೊಂದಲಗಳು ನಿಮಗೆಲ್ಲಿ ಅರ್ಥವಾಗಬೇಕು ಬಿಡಿ” 

ಅರ್ಥವಾಗ್ತದೆ ಕಣ್ರೀ ಎಂಬಂತೆ ಹೆಗಲ ಮೇಲಿದ್ದ ಅಪ್ಪನ ಕೈಗೊಂದು ಮುತ್ತು ಕೊಟ್ಟರು ಅಮ್ಮ. ನನ್ನ ಕಣ್ಣಲ್ಯಾಕೋ ನೀರು. 

‘ಸರಿ ಸರಿ. ನಿಮ್ ರೊಮ್ಯಾನ್ಸ್ ಶುರುವಾಯ್ತು. ನಾನಿನ್ನು ಹೊರಡ್ತೀನಿ. ಮನೆಗೆ ಹೋಗಿ ರೆಡಿಯಾಗಿ ಡ್ಯೂಟೀಗ್ ಹೊರಡಬೇಕು’ ಎಂದ್ಹೇಳಿ ಹೊರಟುಬಿಟ್ಟೆ.

* * *

ಶಶಿ ಸೋನಿಯಾರ ಮದುವೆಗೆ ಅಪ್ಪ ಒಪ್ಪಿದ್ದು ಖುಷಿಯನ್ನೇನೋ ಕೊಟ್ಟಿತ್ತು. ಆ ಖುಷಿಯ ಜೊತೆಜೊತೆಗೆ ತೃಣಮಾತ್ರದಷ್ಟಾದರೂ ಅಸೂಹೆ ಸಿಟ್ಟು ಇದ್ದಿದ್ದು ಸುಳ್ಳಲ್ಲ. ಇದೇ ಅಪ್ಪ ನನ್ನ ಪುರುಷೋತ್ತಮನ ಮದುವೆ ಮಾತಿನ ಸಂದರ್ಭದಲ್ಲಿ ಹೇಳಿದ್ದ ಅಸಹ್ಯಕರ ಮಾತುಗಳೆಲ್ಲ ನೆನಪಾದವು. ಮನುಷ್ಯ ಸಿಟ್ಟಿನಲ್ಲಿದ್ದಾಗಷ್ಟೇ ಸತ್ಯವಾಡೋದು ಎನ್ನುವ ಆಡುಮಾತು ನಿಜವೇ ಆಗಿದ್ದಲ್ಲಿ ಅಪ್ಪ ನನ್ನ ಬಗ್ಗೆ ಎಷ್ಟೆಲ್ಲ ಕೆಟ್ಟದಾಗಿ ಯೋಚಿಸುತ್ತಾರಲ್ವ ಎಂದನ್ನಿಸಿತ್ತು ಆಗ. ಏನೋ ಆ ಸಂದರ್ಭಕ್ಕೆ ಹಂಗೆ ಮಾತನಾಡಿದ್ದರಷ್ಟೇ ಎನ್ನುವ ಸಮಾಧಾನ ನನಗೇ ನಾನೇ ಮಾಡಿಕೊಂಡಿದ್ದೀನಿ. ಸುಳ್ಳು ಸುಳ್ಳೇ ಸಮಾಧಾನ ಮಾಡಿಕೊಳ್ಳದೇ ಹೋದರೆ ನೆಮ್ಮದಿ ಅರಸುವುದಾದರೂ ಹೇಗೆ? ಮಗನ ವಿಷಯದಲ್ಲಿ ಅದೇ ಜಾತಿ ಭೂತ ಅಡ್ಡಿಯಾಗಿದ್ದರೂ ಒಂದೇ ಸಲದ ಜಗಳಕ್ಕೆ ಎಲ್ಲವೂ ಸುಸೂತ್ರವಾಗಿಬಿಟ್ಟಿದೆ. ಇನ್ನು ಸೋನಿಯಾಳ ಅಪ್ಪ ರಾಮೇಗೌಡ ಅಂಕಲ್ ಒಪ್ಪುವುದೊಂದೇ ಬಾಕಿ ಉಳಿದಿರೋದು. ಇವತ್ತಲ್ಲ ನಾಳೆ ಅವರೂ ಒಪ್ಪಬಹುದು, ಒಪ್ಪಲಿ. ಖುಷಿಯಾಗಿರಲಿ. ಆದರೂ ಅಪ್ಪನ ಸ್ವಭಾವವಂತೂ ಒಪ್ಪುವಂತದ್ದಲ್ಲ. ಅಪ್ಪನಿಗೂ ಅವರ ದ್ವಂದ್ವದ ಅರಿವಾಗಿದೆ, ‘ಮಗಳಿಗೊಂದು ನ್ಯಾಯ ಮಗನಿಗೊಂದು ನ್ಯಾಯ’ ಮಾಡ್ತಿದ್ದಿನೇನೋ ಅನ್ನೋ ಭಾವನೆ ಅವರಿಗೇ ಬಂದಿದೆ. ಮನೆಗ್ ಬರೋ ಹುಡುಗೀನಾ ನಾವ್ ಚೆನ್ನಾಗೇ ನೋಡ್ಕೋತೀವಿ ನಮ್ ಮನೆ ಹುಡುಗೀನಾ ಹೋದ ಮನೆಯವರು ಚೆನ್ನಾಗಿ ನೋಡ್ಕೋತಾರೋ ಇಲ್ವೋ ಅನ್ನೋ ಯೋಚನೆ ಅಪ್ಪನಿಗೆ ಬಂದಿರಬಹುದಾ? ಏನೋ. ನನ್ ಬದುಕು ಹಿಂಗ್ ಆಗ್ಬೇಕು ಅಂತ ಬರ್ದಿದ್ರೆ ಯಾರ್ ಏನು ಮಾಡೋಕಾಗುತ್ತೆ. ಇಷ್ಟಕ್ಕೂ ನನಗೆ ಪುರುಷೋತ್ತಮನನ್ನು ಮದುವೆಯಾಗದೇ ಇರುವುದಕ್ಕೆ ನಿಜಕ್ಕೂ ಬೇಸರವಿದೆಯಾ? ಕೆಲವೊಮ್ಮೆ ಇಲ್ಲವೆನ್ನಿಸುತ್ತೆ, ಕೆಲವೊಮ್ಮೆ ಇದೆ ಅನ್ನಿಸುತ್ತೆ. ಒಟ್ಟಿನಲ್ಲಿ ನಾನೇ ಒಂದು ಗೊಂದಲದ ಗೂಡಾಗಿಬಿಟ್ಟಿದ್ದೀನೇನೋ. ಮನೆಯ ಗೇಟು ತೆರೆಯುವಾಗ ರಾಜಿಯ ಮೆಸೇಜು ಬಂತು. ‘ರಾತ್ರಿ ಊಟಕ್ಕೆ ಬರುವುದಿಲ್ಲ. ನೀ ಊಟ ಮಾಡ್ಕೊಂಡು ಹೊರಡು’. ‘ನನ್ ನೈಟ್ ಡ್ಯೂಟಿ ಅಂದ್ರೆ ಹಬ್ಬ ಇವರಿಗೆ. ಈ ಸಂಭ್ರಮಕ್ಕೆ ಮದುವೆಯಾದರೂ ಯಾಕಾಗಬೇಕಿತ್ತು. ಬ್ರಹ್ಮಚಾರಿಯಾಗೇ ಇದ್ಕಂಡು ದಿನಾ ಹಬ್ಬ ಮಾಡಿಕೊಂಡಿದ್ರಾಗ್ತಿರಲಿಲ್ವ’ ಗೊಣಗಾಡ್ಕಂಡು ಬಾಗಿಲು ತೆಗೆದು ಸೋಫಾದ ಮೇಲೆ ಮಲಗಿಕೊಂಡೆ. ಮಧ್ಯಾಹ್ನ ತಿಂದಿದ್ದೇ ಇನ್ನೂ ಅರಗಿರಲಿಲ್ಲ. ಹಸಿವಾದ್ರೆ ಆಸ್ಪತ್ರೇಲೇ ಏನನ್ನಾದರೂ ತರಿಸಿಕೊಂಡರಾಯಿತು ಎಂದುಕೊಂಡು ಮೊಬೈಲ್ ಕೈಗೆತ್ತಿಕೊಂಡು ಯಾವುದಾದರೂ ಮೆಸೇಜು ಬಂದಿದೆಯಾ ನೋಡಿದೆ. ಈ ಮೊಬೈಲ್ ಫೋನಿನದೊಂದು ಗೋಳು. ಮೆಸೇಜ್ ಬಂದಿರುತ್ತೋ ಇಲ್ವೋ ಪದೇ ಪದೇ ನೋಡ್ತಾನೇ ಇರೋದೇ ಗೀಳಾಗಿಬಿಟ್ಟಿದೆ ನನಗೆ. ಮೊಬೈಲ್ ತೆಗೆದು ಬಿಸಾಕಬೇಕೆನ್ನುವಷ್ಟು ಸಿಟ್ಟಾವರಿಸಿತು. ಇತ್ತೀಚೆಗೆ ಕೊಂಡುಕೊಂಡ ಮೊಬೈಲು, ಒಡೆದುಹೋದರೆ ಮತ್ತೊಂದು ತೆಗೆದುಕೊಳ್ಳೋಕೆ ಬ್ಯಾಂಕಲ್ಲಿ ದುಡ್ಡಿಲ್ಲ ಅನ್ನುವ ಸತ್ಯ ನೆನಪಾಗಿ ಸುಮ್ಮನಾದೆ. ಸಿಟ್ಯಾಕೆ ಅನ್ನೋದು ನನಗೇ ಅರ್ಥವಾಗ್ತಿರಲಿಲ್ಲ. ಹಾಳ್ ಬಿದ್ದೋಗ್ಲಿ ಟಿವೀನಾದ್ರೂ ನೋಡ್ಕಂಡು ಸಾಯೋಣ ಎಂದುಕೊಳ್ಳುತ್ತಾ ಮೇಲೇಳುವಷ್ಟರಲ್ಲಿ ಫೋನ್ ಕುಂಯ್ ಗುಟ್ಟಿತು. ಮೆಸೇಜು ಬಂದಿತ್ತು. “ಹಾಯ್....” ಎಂದು ಸಾಗರ ಮೆಸೇಜು ಮಾಡಿದ್ದ.ಮೇಲೇಳುತ್ತಿದ್ದವಳು ಮತ್ತೆ ಹಂಗೇ ಮಲಗಿ ‘ಹೇಳೋ’ ಎಂದುತ್ತರಿಸಿದೆ.

“ಮರ್ತೇಬಿಟ್ಟೆ ನನ್ನ.....”

ಹೌದಲ್ಲ. ನಿಜಕ್ಕೂ ಈ ಶಶಿ ಸೋನಿಯಾ ಅಪ್ಪ ರಾಜಿಯ ನಡುವೆ ಸಾಗರ ಮರೆತೇ ಹೋಗಿದ್ದ.

‘ಇನ್ನೇನಪ್ಪ ಮಾಡೋದು. ನಿಂಗ್ ಒಂದ್ ಮೆಸೇಜ್ ಮಾಡಿದ್ರೆ ಅದನ್ನ ನೂರು ತರ ಯೋಚಿಸಿ ತಪ್ಪು ದಾರಿ ಸರಿ ಹಾದಿ ಅಂತ ನಂಗ್ ಅರ್ಥ ಆಗದ ಭಾಷೇಲೆಲ್ಲ ಮಾತನಾಡ್ತಿ. ಸುಮ್ನೆ ಯಾಕೆ ಇವನಿಗೆ ನನ್ನಿಂದ ತೊಂದರೆ ಅಂತಂದುಕೊಂಡು ಸುಮ್ಮನಿದ್ದೆ’

“ಅದ್ ಹಂಗಲ್ವೇ...”

‘ಮತ್ತಿನ್ನೆಂಗೋ....’

“ಸರಿ ಬಿಡಪ್ಪ”

‘ಏನನ್ನೂ ಇಟ್ಕಂಡೇ ಇಲ್ಲ ಬಿಡೋದಿಕ್ಕೆ’

“ಥೂ ತರ್ಲೆ”

‘ಹ ಹ.... ನೀ ತರ್ಲೆ ಅಂದ್ರೆ ಖುಷಿ ನಂಗೆ’

“ಮ್.... ಏನ್ ಮಾಡ್ತಿದ್ದೆ”

‘ಏನಿಲ್ವೋ. ಈಗ ಅಪ್ಪನ ಮನೆಯಿಂದ ಬಂದೆ. ನೈಟ್ ಡ್ಯೂಟಿ ಇವತ್ತು’

“ಹು. ಹೇಳಿದ್ಯಲ್ಲ ಅವತ್ತು”

‘ಓಹೋ. ಪರವಾಗಿಲ್ಲ ಸಾಹೇಬ್ರು. ಇನ್ನೂ ನೆನಪಿಟ್ಕಂಡಿದಾರೆ’

“ಎರಡೇ ದಿನ ಆಗಿರೋದು ಹೇಳಿ”

‘ಅಲ್ವ. ಯಾಕೋ ಒಂದೊಂದು ದಿನಾನೂ ಒಂದೊಂದ್ ಯುಗುದ್ ತರ ಅನ್ನಿಸೋಕೆ ಶುರುವಾಗಿದೆ’

“ಏನಾಯ್ತೆ”

‘ಏನಿಲ್ವೋ. ಸುಮ್ನೆ ಹಂಗೆ ಬೇಸರ. ಹೋಗ್ಲಿ ಬಿಡು’

“ಏನನ್ನೂ ಇಟ್ಕಂಡೇ ಇಲ್ಲ ಬಿಡೋದಿಕ್ಕೆ”

‘ನೋಡ್ದಾ....ನನ್ ಮಾತ್ನೆ ಕಾಪಿ ಮಾಡೋದ’

ಸ್ಮೈಲಿ ಕಳುಹಿಸಿದ.

ಮುಂದಿನ ಭಾಗವನ್ನು ಓದಲು ಇಲ್ಲಿ ಕ್ಲಿಕ್ಕಿಸಿ. 

No comments:

Post a Comment