Mar 3, 2019

ಒಂದು ಬೊಗಸೆ ಪ್ರೀತಿ - 8

ondu bogase preeti
ಡಾ. ಅಶೋಕ್. ಕೆ. ಆರ್ 
ಸಾಗರ್ ಅವನಾಗಿದ್ದವನೇ ಮೆಸೇಜು ಮಾಡುತ್ತಿದ್ದುದು ಕಮ್ಮಿ. ನಾನಾಗೇ ‘ಹಾಯ್’ ಎಂದೋ ‘ಏನ್ ಮಾಡ್ತಿದ್ದೆ’ ಎಂದೋ ಮೆಸೇಜು ಮಾಡಿದರೆ ಪ್ರತಿಕ್ರಯಿಸುತ್ತಿದ್ದ. ಅವನಾಗೇ ಮೆಸೇಜು ಮಾಡ್ಲಿ ನೋಡೋಣ ಎಂದು ಕಾದರೆ ಎರಡು ಮೂರು ದಿನವಾದರೂ ಮೆಸೇಜು ಮಾಡುತ್ತಿರಲಿಲ್ಲ. ಕೊನೆಗೆ ನಾನೇ ಮೆಸೇಜು ಮಾಡುತ್ತಿದ್ದೆ. ಉಭಯ ಕುಶಲೋಪರಿಗಳೆಲ್ಲ ಮುಗಿದಿದ್ದವು. ದಿನ ಕಳೆದಂತೆ ವಿನಿಮಯವಾಗುತ್ತಿದ್ದ ಮೆಸೇಜುಗಳ ಸಂಖೈ ಕಡಿಮೆಯಾಗುತ್ತಿತ್ತು. ಅವತ್ತು ನನಗೆ ನೈಟ್ ಡ್ಯೂಟಿ. ಹತ್ತರ ನಂತರ ಹೆಚ್ಚೇನು ರೋಗಿಗಳಿರಲಿಲ್ಲ. ಫೇಸ್ ಬುಕ್ ನೋಡುತ್ತಿದ್ದಾಗೊಂದು ಆಕಳಿಕೆ ಬಂದು ರೂಮಿಗೆ ಹೋದೆ. ಇವನೇನು ಮಲಗಿದ್ದಾನೋ ಹೇಗೆ ಎಂದುಕೊಂಡು ‘ಆಯ್ತಾ ಊಟ’ ಎಂದು ಮೆಸೇಜಿಸಿದೆ.

ಹತ್ತು ನಿಮಿಷದ ನಂತರ ಮೊಬೈಲ್ ವೈಬ್ರೇಟ್ ಆದಾಗ ಅರೆಮಂಪರಿನಲ್ಲಿದ್ದವಳಿಗೆ ಎಚ್ಚರವಾಯಿತು.

“ಆಯ್ತು ನಿಂದು”

‘ಆಗಲೇ ಆಯ್ತು’

“ಮ್. ಏನ್ಮಾಡ್ತಿದ್ದೆ”

‘ಇವತ್ತು ನೈಟ್ ಡ್ಯೂಟಿ ಇತ್ತು. ಪೇಷೆಂಟ್ಸ್ ಕಡಿಮೆ ಇದ್ರು. ಡ್ಯೂಟಿ ಡಾಕ್ಟರ್ಸ್ ರೂಮಲ್ಲಿ ಮಲಗಿದ್ದೆ’

“ಅದೇ ಅಂದ್ಕೊಂಡೆ ಇಷ್ಟೊತ್ತಲ್ಲಿ ಮೆಸೇಜು ಮಾಡಿದ್ದಾಳೆ ಅಂದ್ರೆ ನೈಟ್ ಡ್ಯೂಟಿ ಇರಬೇಕು ಅಂತ”

‘ತಪ್ಪಾ?’

“ಹೇ ತಪ್ಪೇನಿಲ್ಲ. ನೀನು ಫ್ರೀ ಇದ್ದಾಗ ಮೆಸೇಜ್ ಮಾಡ್ತೀಯ. ನಾನು ಫ್ರೀ ಇದ್ದಾಗ ರಿಪ್ಲೈ ಮಾಡ್ತೀನಿ. ಇದರಲ್ಲಿ ತಪ್ಪೇನು ಬಂತು”

ಒಂದೊಂದೇ ಎಪಿಸೋಡು ಹುಡುಕುಡುಕಿ ಓದೋಕೆ ಬೇಸರವಾ? ಪೂರ್ತಿ ಇ - ಪುಸ್ತಕ ತೆಗೆದುಕೊಳ್ಳಲು ಇಲ್ಲಿ ಕ್ಲಿಕ್ಕಿಸಿ.

ಒಂದು ಸ್ಮೈಲಿ ಕಳುಹಿಸಿದೆ. ‘ಒಂದು ಮಾತು ಕೇಳಲಾ?’

“ಕೇಳು”

‘ನಿನಗೆ ನಿಜವಾಗಲೂ ನನ್ನ ಬಗ್ಗೆ ಕಾಲೇಜು ದಿನಗಳಲ್ಲಿ ಏನೂ ಗೊತ್ತಿರಲಿಲ್ಲವಾ?’

“ನಿನಗೇನು ಗೊತ್ತಿತ್ತು ನನ್ನ ಬಗ್ಗೆ”

‘ನೀನು ತುಂಬ ಸ್ಟೂಡಿಯಸ್ಸು. ಮಾತಾಡ್ತಿದ್ದಿದ್ದು ಕಡಿಮೆ. ಕಷ್ಟದಲ್ಲಿರುವವರಿಗೆ ಸಹಾಯ ಮಾಡೋದಿಕ್ಕೆ ಸಾಲ ಮಾಡೋದಿಕ್ಕೂ ಹಿಂದೆ ಮುಂದೆ ನೋಡುವವನಲ್ಲ. ಸ್ಮಾರ್ಟ್ ಫೆಲೋ ಅಂತ ಗೊತ್ತು. ‘ಕಮ್ಯುನಿಟಿ ಮೆಡಿಸಿನ್ನಿನಲ್ಲಿ ನನ್ನ ಸೆಮಿನಾರ್ ಇದ್ದಾಗ ಪೂರ್ತಿ ಆರು ನಿಮಿಷ ನನ್ನನ್ನೇ ಗಮನಿಸುತ್ತಿದ್ದೆ ಎಂದು ಗೊತ್ತು’

“ಕಮ್ಯುನಿಟಿ ಮೆಡಿಸಿನ್ನಿನ ಸೆಮಿನಾರಿನಲ್ಲಿ ನಿನ್ನನ್ನೇ ಗಮನಿಸುತ್ತಿದ್ದೆನಾ? ಸೆಮಿನಾರು ನಡೆದಿರೋದೇ ನನಗೆ ನೆನಪಿಲ್ಲ! ಪರಿಚಯ ಇಲ್ಲದೇ ಇದ್ರೂ ಸುಮಾರಾಗಿ ತಿಳ್ಕೊಂಡಿದ್ದೀಯಾ ನನ್ನ ಬಗ್ಗೆ”

‘ನಿನ್ನನ್ನ ಫ್ರೆಂಡ್ ಮಾಡ್ಕೋಬೇಕು ಅಂತ ತುಂಬ ಮನಸ್ಸಿತ್ತು. ಆಗ ಆಗಲಿಲ್ಲ. ಕೊನೇಪಕ್ಷ ಈಗ್ಲಾದ್ರೂ ಆಯ್ತಲ್ಲ. ಅದೇ ಖುಷಿ’

ಸ್ಮೈಲಿ ಕಳುಹಿಸಿದ.

‘ನನ್ನ ಬಗ್ಗೆ ನಿನಗೆ ನೆನಪಿರುವಂತದ್ದು ಏನೂ ಇಲ್ಲವಾ?’ ಬೇಸರದಿಂದಲೇ ಕಳುಹಿಸಿದೆ.

“ಅವತ್ತು ಹೇಳಿದ್ದೆನಲ್ಲ ನೀನು ಚೆನ್ನಾಗಿ ಮಾರ್ಕ್ಸ್ ತೆಗೀತಿದ್ದಿದ್ದೆಲ್ಲ ಗೊತ್ತಿತ್ತು ಅಂತ”

‘ಅದು ಬಿಡು. ಅದನ್ನು ಬಿಟ್ಟು’

“ಅದನ್ನು ಬಿಟ್ಟು ನಿನ್ನ ಬಗ್ಗೆ ತುಂಬ ನೆನಪಿರೋದು ನಿನ್ನ ನಗು. Your smile is very attractive and mesmerizing”

ಇಷ್ಟು ದಿನದ ಇವನ ಜೊತೆಗಿನ ಮಾತುಗಳಲ್ಲಿ ನನ್ನನ್ನು ಹೊಗಳುವ ಮಾತನ್ನಾಡಿದ್ದು ಇವತ್ತೇ ಮೊದಲು. ತುಂಬಾ ಖುಷಿಯಾಯಿತು. ನನ್ನ ನಗುವನ್ನು ಹೊಗಳುವವರಿಗೇನು ಕಡಿಮೆಯಿರಲಿಲ್ಲ. ಬಹಳಷ್ಟು ಸಲ ತೋರಿಕೆಗೆ ಹೇಳುತ್ತಿದ್ದಾರೆ ಎನ್ನಿಸುತ್ತಿತ್ತು. ಎದುರಿಗಿರುವ ಹುಡುಗಿಯ ಮುಖ ಸೊಂಟ ಎದೆ ಇಷ್ಟವಾದರೂ ‘ನಿನ್ನ ನಗು ತುಂಬ ಚೆನ್ನಾಗಿದೆ’ ಎನ್ನುವುದು ಸೌಜನ್ಯದ ವ್ಯಾಪ್ತಿ ಮೀರುವುದಿಲ್ಲವಲ್ಲ ಅದಕ್ಕೆ ಹೇಳುತ್ತಾರೆ ಎಂದುಕೊಂಡಿದ್ದೆ. ರಾಜೀವಂತೂ ಯಾವತ್ತೂ ನನ್ನ ನಗುವಿನ ಬಗ್ಗೆ ವಿಶೇಷವಾಗಿ ಹೇಳಿರಲಿಲ್ಲ. ಅವರಿಗೆ ನನ್ನ ಎದೆಯೆಂದರೆ ಇಷ್ಟ. ಘಂಟೆಗಟ್ಟಲೆ ಮೊಲೆಗಳ ನಡುವೆ ಮುಖವಿಟ್ಟು ಮಲಗಿಬಿಡುತ್ತಿದ್ದರು. ಅವರ ಬಿಸಿಯುಸಿರೇ ಸಾಕಿತ್ತು ನನ್ನ ಕಾಮನೆಗಳು ಕೆರಳಲು. ಎಷ್ಟು ದಿನವಾಯ್ತಲ್ಲ ಅವರು ಹಾಗೆ ಮಲಗಿ.

‘ಹುಡುಗಿಯನ್ನು ಹೊಗಳೋದಕ್ಕೆ ಎಲ್ಲಾ ಹುಡುಗರೂ ಹೇಳೋ ಕಾಮನ್ ಡೈಲಾಗಿದು ಬಿಡು’ ಎಂದು ಮೆಸೇಜಿಸಿದೆ.

“ಓಹೋ! ನಿಜ ಹೇಳಿದ್ರೆ ಜನಕ್ಕೆ ಕೊಬ್ಬು. ನಿನ್ನನ್ನು ಹೊಗಳಿ ಇಂಪ್ರೆಸ್ ಮಾಡಿ ನನಗೇನಾಗಬೇಕಿದೆ ಹೇಳು. ನನಗೆ ನಿನ್ನಲ್ಲಿ ಮೊದಲು ಇಷ್ಟವಾಗೋದು ನೆನಪಲ್ಲಿರೋದು ನಗೂನೆ. ಬೇರೆಯೇನಾದ್ರೂ ಮೊದಲು ಇಷ್ಟವಾಗಿದ್ರೆ ಅದನ್ನೇ ಹೇಳ್ತಿದ್ದೆ” ಕೋಪದಿಂದಲೇ ಉತ್ತರಿಸಿದ.

‘ಅಯ್ಯೋ ಸಾರಿ. ನನ್ನ ನಗುವನ್ನು ಬಹಳಷ್ಟು ಜನ ಹೊಗಳುತ್ತಾರೆ. ನನ್ನ ಗಂಡ ಹೊಗಳಿದ್ದೇ ಇಲ್ಲ. ಅದಕ್ಕೆ ಬೇರೆಯವರು ತೋರಿಕೆಗೆ ಹೊಗಳುತ್ತಾರೇನೋ ಅಂದುಕೊಂಡಿದ್ದೆ’

“ಗಂಡನಿಗೆ ಹೊಗಳಲು ಬೇರೆ ವಿಷಯಗಳಿರುತ್ತಲ್ಲ”

‘ಹ್ಹ ಹ್ಹ ಅದು ನಿಜ ಬಿಡು’

“ಸುಳ್ಳೇಳೋ ಅಭ್ಯಾಸ ನನಗೆ ಮೊದಲಿನಿಂದಾನೂ ಇಲ್ಲ. ನಿಜಕ್ಕೂ ನಿನ್ನ ನಗು ಚೆನ್ನಾಗಿದೆ ಕಣೇ” ಅಪರೂಪಕ್ಕೆ ಇವನು ಕಣೇ ಅಂತ ಮೆಸೇಜಿನಲ್ಲಿ ಕಳುಹಿಸಿದರೆ ನನಗೆ ಎಲ್ಲಿಲ್ಲದ ಸಂತಸವಾಗುತ್ತಿತ್ತು. ಮಾತಿನಲ್ಲೊಂದಷ್ಟು ಆಪ್ತತೆ ಮೂಡಿದಾಗ ಆ ರೀತಿ ಮೆಸೇಜು ಮಾಡುತ್ತಿದ್ದ.

‘ಥ್ಯಾಂಕ್ಸ್ ಕಣೋ. ಇವತ್ತಿನಿಂದ ನನ್ನ ನಗು ನಿಜಕ್ಕೂ ಚೆನ್ನಾಗಿದೆ ಅಂತ ನಾನೂ ನಂಬ್ತೀನಿ’

“ಸರಿ ಕಣೇ ನಿದ್ರೆ ಬರ್ತಿದೆ”

‘ಒಕೆ’

ನನಗೆ ನಿದ್ರೆ ಬರಲಿಲ್ಲ. ಇದೇನಿದು? ಸಾಗರ್ ನಗು ಚೆನ್ನಾಗಿದೆ ಅಂತ ಹೇಳಿದ್ದಕ್ಕೆ ಇಷ್ಟೊಂದು ಖುಷಿಯಾಗ್ತಿದೆ ಎಂದು ನನಗೇ ಅಚ್ಚರಿಯಾಯಿತು. ಆ ಮಾತನ್ನ ಎಷ್ಟೊಂದು ಹುಡುಗರು ಹೇಳಿದ್ದಾರೆ ಆದರೂ ಯಾಕೆ ಈ ಖುಷಿ? ಏನೊಂದೂ ತಿಳಿಯುತ್ತಿಲ್ಲ.

ಘಂಟೆ ಹನ್ನೆರಡಾಯಿತು. ಒದ್ದಾಡಿ ಒದ್ದಾಡಿ ಬೇಸರವಾಯ್ತು. ಮೊಬೈಲ್ ಕೈಗೆತ್ತಿಕೊಂಡೆ. ಸಾಗರನೊಡನೆ ಹಂಚಿಕೊಂಡಿದ್ದ ಮೆಸೇಜುಗಳನ್ನು ಮತ್ತೊಮ್ಮೆ ಓದಿಕೊಂಡೆ. ಇನ್ನಷ್ಟು ಖುಷಿಯಾಯಿತು.

‘ನಿದ್ರೆ ಮಾಡಿಬಿಟ್ಯಾ’ ಮಲಗಿ ಬಿಟ್ಟಿರ್ತಾನೆ ಎಂದು ಗೊತ್ತಿದ್ದೂ ಮಾಡಿದೆ.

“ಇಲ್ಲ. ನೀನು?” ಥಟ್ಟನೆ ಮೆಸೇಜು ಮಾಡಿದ.

‘ಇನ್ನೂ ಇಲ್ಲ. ಏನು ಮಾಡ್ತಿದ್ದೆ?’

“ನಿಜಾ ಹೇಳಲಾ ಸುಳ್ಳು ಹೇಳ್ಲಾ?”

‘ನಿನಗೆ ಸುಳ್ಳು ಹೇಳೋದಿಕ್ಕೆ ಬರೋಲ್ಲ ಅಂತ ಗೊತ್ತು. ಸುಳ್ಳೇ ಹೇಳು ನೋಡೋಣ’

“ನಾಳೆ ಸೆಮಿನಾರಿತ್ತು. ಓದ್ತಿದ್ದೆ”

‘ಹ್ಹ ಹ್ಹ. ನಿಜ ಹೇಳು ಈಗ’

“ಕತ್ಲಲ್ಲಿ ಒಬ್ನೇ ಸಿಗರೇಟು ಸೇದ್ತಾ ಹಾಡು ಕೇಳ್ತಿದ್ದೆ”

‘ಓಹೋ ಈ ದುರಭ್ಯಾಸವೆಲ್ಲ ಇದೆಯಾ ನಿನಗೆ. ಜೊತೆಗೆ ಗ್ಲಾಸೂ ಇದೆಯೋನೋ’

“ಇಲ್ಲಪ್ಪ. ಕುಡಿಯೋ ಚಟ ಇಲ್ಲ ನನಗೆ”

‘ಯಾವ ಹಾಡು ಕೇಳ್ತಿದ್ದೆ’

“ಕಿತನಿ ಅಜೀಬ್ ರಿಶ್ತೆ ಹೇ ಯಹಾ ಪೆ”

‘ದೋ ಪಲ್ ಮಿಲ್ತೇ ಹೈ ಸಾಥ್ ಸಾಥ್ ಚಲ್ತೇ ಹೈ’

“ಜಬ್ ಮೋಡ್ ಆಯೇ ಥೋ ಬಚಕೆ ನಿಖಲ್ತೆ ಹೈ”

‘ನನ್ನ ಫೇವರೇಟ್ ಹಾಡದು’

“ನನಗೂ ಅಷ್ಟೇ”

‘Same Pinch’

“ಅಯ್ಯಪ್ಪ”

‘ಏನಾಯ್ತು’

“ಅಷ್ಟು ಜೋರಾಗಾ ಗಿಂಡೋದು”

‘ಅಲ್ಲೇ ಇದ್ದಿದ್ರೆ ಒಬ್ನೇ ಸಿಗರೇಟು ಸೇದ್ಕೊಂಡು ಕೂತಿದ್ದೀಯ ಕೋತಿ ಎಂದು ಜೋರಾಗೇ ಗಿಂಡಿ ತಲೆ ಮೇಲೆ ಹಾಕ್ತಿದ್ದೆ’

ಯಾಕೋ ಸ್ವಲ್ಪ ಹೊತ್ತು ಏನೂ ಪ್ರತಿಕ್ರಿಯಿಸಲಿಲ್ಲ. ಸಲುಗೆಯಿಂದ ಸ್ವಲ್ಪ ಅತಿಯಾಗಿ ಮಾತನಾಡಿಬಿಟ್ಟೆನಾ ಎಂದುಕೊಂಡೆ. ರಿಪ್ಲೈ ಬರಲಿಲ್ಲ.

‘ಸಾರಿ ಬೇಜಾರಾಗಿದ್ರೆ’

ಸ್ವಲ್ಪ ಸಮಯದ ನಂತರ “ಸಾರಿ ಯಾಕೆ” ಎಂದು ಮೆಸೇಜು ಬಂತು.

‘ಸಲುಗೆ ಜಾಸ್ತಿ ತಗಂಡೆ ಅನ್ನಿಸ್ತು. ನೀನು ಬೇರೆ ರಿಪ್ಲೈ ಮಾಡಲಿಲ್ಲವಲ್ಲ. ಬೇಜಾರು ಮಾಡ್ಕೊಂಡ್ನೇನೋ ಅಂದ್ಕೊಂಡೆ’

“ಫ್ರೆಂಡ್ ಅಂದ್ಮೇಲೆ ಅಷ್ಟು ಸಲುಗೆ ಇಲ್ಲದಿದ್ರೆ ಹೇಗೆ. ಸಿಗರೇಟ್ ಮುಗೀತು. ಟಾಯ್ಲೆಟ್ಟಿಗೆ ಅರ್ಜೆಂಟ್ ಆಯ್ತು. ಹೋಗಿ ಬಂದೆ”

‘ತರ್ಲೆ…. ನಿನಗೊಂದು ವಿಷಯ ಕೇಳಬೇಕಿತ್ತು. ಕೇಳಬೇಕಿತ್ತು ಎನ್ನುವುದಕಿಂತ ಹೇಳಬೇಕಿತ್ತು. ನನ್ನ ಕಸಿನ್ ಲೈಫ್ ಬಗ್ಗೆ. ನಿನ್ನ ಅಭಿಪ್ರಾಯ ಏನು ಅಂತ ತಿಳಿದುಕೊಳ್ಳಬೇಕಿತ್ತು’

“ಕೇಳು”

‘ಇವರು ಮಧ್ಯಮ ವರ್ಗದವರು; ಹುಡುಗನ ಮನೆಯವರು ಶ್ರೀಮಂತರು. ಶ್ರೀಮಂತಿಕೆ ಬಂದಿದ್ದು ಭ್ರಷ್ಟ ದುಡ್ಡಿನಿಂದ ಬಿಡು. ಎರಡೂ ಮನೆಯವರು ಒಪ್ಪಿಯೇ ಮದುವೆಯಾಯಿತು. ಒಂದಷ್ಟು ತಿಂಗಳು ಎಲ್ಲವೂ ಚೆನ್ನಾಗೇ ಇತ್ತು. ಎಲ್ಲರೂ ಸೊಸೆಯನ್ನು ಮಗಳ ಸಮಕ್ಕೇ ನೋಡಿಕೊಂಡರು. ಇವಳೂ ಅಷ್ಟೇ ಅತ್ತೆ ಮನೆ ಅಪರಿಚಿತರು ಅನ್ನೋ ಭಾವನೆ ತೋರ್ಪಡಿಸದೆ ಚೆನ್ನಾಗೇ ಹೊಂದಿಕೊಂಡು ಹೋಗ್ತಿದ್ದಳು. ಕೆಲಸದಲ್ಲಿದ್ದಳು. ಆದರೂ ಬೆಳಿಗ್ಗೆ ಎದ್ದು ಮನೆಕೆಲಸಕ್ಕೆ ಏನೇನು ಸಹಾಯ ಮಾಡಬೇಕೋ ಎಲ್ಲವನ್ನೂ ಮಾಡಿಕೊಟ್ಟೇ ಹೋಗುತ್ತಿದ್ದಳು. ಎಲ್ಲವೂ ಚೆನ್ನಾಗಿಯೇ ನಡೆಯುತ್ತಿತ್ತು. ಹುಡುಗಿಯ ಗಂಡ ತುಂಬಾ ಒಳ್ಳೇ ಕೆಲಸದಲ್ಲೇನು ಇರಲಿಲ್ಲ. ದೊಡ್ಡ ಕೆಲಸ ಮಾಡಬೇಕು ದೊಡ್ಡ ಕೆಲಸ ಮಾಡಬೇಕು ಅನ್ನೋ ಹಪಾಹಪಿ ಯಾವಾಗಲೂ ಅವನಿಗೆ. ಹುಡುಗಿಗೆ ಅತ್ತೆ ಮನೆಯಲ್ಲಿ ಇದ್ದ ತೊಂದರೆಯೆಂದರೆ ಗಂಡನದೇ! ಗಂಡ ತುಂಬಾ ಪ್ರೀತಿಸುತ್ತಿದ್ದ. ಆದರೆ ಕೆಲಸದ ಬಗೆಗಿನ ಅಸಹನೆಯನ್ನು ಹೆಂಡತಿಯ ಮೇಲೆ ಅವರ ಅಪ್ಪ ಅಮ್ಮ ಅಣ್ಣ ಅತ್ತಿಗೆ ವಾರಕ್ಕೆರಡು ಸಲ ಬರುವ ಅಕ್ಕ ಭಾವನ ಮೇಲೆ ತೋರಿಸುತ್ತಿದ್ದ. ಹೆಂಡತಿಯ ಮೇಲೇನೋ ರೂಮಿನೊಳಗೆ ಸಿಟ್ಟು ಮಾಡಿಕೊಳ್ಳುತ್ತಿದ್ದ. ಬೇರೆಯವರ ಜೊತೆಗಿನ ಅಸಹನೆ ಅವರೆಲ್ಲರಲ್ಲಿ ಹೆಂಡತಿಯೇ ಗಂಡನ ತಲೆ ತಿಂದು ಈ ರೀತಿ ಆಡಿಸುತ್ತಿದ್ದಾಳೆ ಎಂಬ ಭಾವನೆ ಬರಿಸಿಬಿಟ್ಟಿತು. ಕಾರಣ ಮದುವೆಗೆ ಮುಂಚೆ ಅವನು ಅಷ್ಟೆಲ್ಲ ಸಿಟ್ಟಾಗುತ್ತಿದ್ದುದೇ ಇಲ್ಲವಂತೆ. ನಿಧಾನಕ್ಕೆ ಆ ಮನೆಯವರೆಲ್ಲರೂ ಹುಡುಗಿಯಿಂದ ದೂರಾಗಲಾರಂಭಿಸಿದರು. ಇದೇ ಸಮಯದಲ್ಲಿ ಗಂಡ ಬ್ಯುಸಿನೆಸ್ಸು ಮಾಡೋದಿಕ್ಕೆ ದುಡ್ಡು ಕೊಡಿ ಎಂದವರಪ್ಪನನ್ನು ಪೀಡಿಸಲಾರಂಭಿಸಿದರು. ಹುಡುಗನ ಮನಸ್ಥಿತಿ ಸ್ವಲ್ಪ ಚಂಚಲ, ಯಾವ ಕೆಲಸವನ್ನೂ ಪೂರ್ತಿ ಮಾಡೋದಿಲ್ಲ ಎಂಬುದರ ಅರಿವಿದ್ದ ಅಪ್ಪ ದುಡ್ಡು ಕೊಡಲು ನಿರಾಕರಿಸಿದರು. ಈ ಮನೇಲಿ ದುಡ್ಡೂ ಸಿಗಲ್ಲ ಮತ್ಯಾಕೆ ಇಲ್ಲಿರಬೇಕೆಂದು ಗಂಡ ಹೆಂಡತಿಗೆ ಬೇರೆ ಮನೆ ಮಾಡಿಕೊಂಡು ಹೋಗಿಬಿಡೋಣ ಎಂದು ಪೀಡಿಸಲಾರಂಭಿಸಿದ. ಹೆಂಡತಿಯಾದವಳು ಅಂತಹ ಸನ್ನಿವೇಶದಲ್ಲಿ ಏನು ಮಾಡಬೇಕು?’

“ಅವಳಿಗೆ ಬೇರೆ ಮನೆ ಮಾಡೋಕೆ ಇಷ್ಟವಿರಲಿಲ್ಲವಾ?”

‘ಉಹ್ಞೂ. ಅವಳಿಗೆ ಕೂಡು ಕುಟುಂಬವೇ ಇಷ್ಟ. ಜಗಳ ಎಲ್ಲಾ ಕಡೆ ಇರುತ್ತೆ. ಹೊಂದಿಕೊಂಡು ಹೋಗಬೇಕೆ ಹೊರತು ಬೇರೆಯಾಗಬಾರದು ಎಂದು ಹೇಳುತ್ತಿದ್ದಳು’

“ನೋಡಿ ನಿಮ್ಮ ಮಗ ಹಿಂಗೆಲ್ಲ ಹೇಳ್ತಿದ್ದಾರೆ. ಅವರಿಗೆ ಸ್ವಲ್ಪ ಬುದ್ಧಿ ಹೇಳಿ ಎಂದು ಅತ್ತೆಯ ಬಳಿಯೋ ಮಾವನ ಬಳಿಯೋ ಹೇಳಿದರಾಯಿತು”

‘ಮನೆಯವರಿಗ್ಯಾರಿಗೂ ನಾನು ಬೇರೆ ಮನೆ ಮಾಡಲು ಬಲವಂತ ಮಾಡ್ತಿದ್ದೀನಿ ಅಂತ ಹೇಳಬಾರದು. ಇದು ಇಬ್ಬರ ನಿರ್ಧಾರ ಅಂತಲೇ ಹೇಳಬೇಕು ಎಂದು ಗಂಡ ತಾಕೀತು ಮಾಡಿದ್ದ’

“ಮನೆಯ ವಿಷಯವಷ್ಟೇ ಅಲ್ಲ. ಗಂಡ ವಿನಾಕಾರಣ ಅಸಹನೆ ವ್ಯಕ್ತಪಡಿಸುತ್ತಿರುವುದನ್ನು ಮತ್ತು ಅದರ ಹಿಂದಿನ ಕಾರಣವನ್ನು ಹೆಂಡತಿ ಮೊದಲೇ ಮನೆಯವರಿಗೆ ವಿವರಿಸಿ ಹೇಳಬೇಕಿತ್ತು. ಹೇಳಿದ್ದರೆ ಇಲ್ಲಿಯವರೆಗೆ ಅದು ಬೆಳೆಯುತ್ತಲೇ ಇರಲಿಲ್ಲವೇನೋ. ಮಗ ಮನೆ ಬಿಟ್ಟು ಹೋಗುವುದಕ್ಕಿಂತ ಒಂದಷ್ಟು ದುಡ್ಡು ಪೋಲಾಗುವುದೇ ಉತ್ತಮ ಎಂದು ತಂದೆಯೂ ಬ್ಯುಸಿನೆಸ್ಸಿಗೆ ದುಡ್ಡು ಕೊಟ್ಟು ಬಿಡುತ್ತಿದ್ದರೇನೋ”

‘ಆದರೆ ಆ ರೀತಿ ಹೇಳಿದ್ರೆ ಗಂಡನ ಮರ್ಯಾದೆ ಹೋಗುತ್ತಿರಲಿಲ್ಲವಾ?’

“ಅರೆ ಬೀದೀಲಿ ನಿಂತು ಹೇಳ್ತಿರಲಿಲ್ಲವಲ್ಲ. ಮನೆಯವರಿಗೆ ತಾನೇ ಹೇಳುತ್ತಿದ್ದದ್ದು. ಇದರಲ್ಲಿ ಮರ್ಯಾದೆ ಹೋಗೋ ಪ್ರಶ್ನೆ ಏನು ಬಂತು”

‘ಅಲ್ವ ನನಗದು ಹೊಳೆಯಲೇ ಇಲ್ಲ’

“ಇನ್ನೂ ಜೊತೆಯಲ್ಲಿದ್ದಾರ. ಬೇರೆಯಾಗಿಬಿಟ್ರಾ?”

‘ಬೇರೆಯಾಗಿ ಎರಡು ತಿಂಗಳಾಯಿತು. ಗಂಡನ ಮನೆಯವರ ಪ್ರಕಾರ ಸೊಸೆಯೇ ಇದಕ್ಕೆಲ್ಲ ಕಾರಣ. ಮಗನನ್ನು ಹೆತ್ತವರಿಂದ ದೂರ ಮಾಡಿದ ಪಾಪ ಸೊಸೆಗೆ ತಟ್ಟಿತು’

“ಬೇರೆಯಾಗಲು ಗಂಡ ಕಾರಣವಾದರೂ ಹೆಂಡತಿ ಕೂಡ ತಪ್ಪಿತಸ್ಥಳೇ. ಅವಳ ತಪ್ಪೆಂದರೆ ನಿಜವನ್ನು ಮನೆಯವರಿಗೆ ತಿಳಿಸದೇ ಇದ್ದದ್ದು. ಗಂಡನಾದ್ರೂ ಹೇಳಬಹುದಿತ್ತಲ್ಲ ಇದು ಸೊಸೆಯ ನಿರ್ಧಾರವಲ್ಲ ನನ್ನದೇ ನಿರ್ಧಾರ ಅಂತ”

‘ಒಳ್ಳೆತನದ ಪಟ್ಟ ಬಿಟ್ಟುಕೊಡಲು ಗಂಡ ತಯಾರಿರಲಿಲ್ಲ ಅನ್ನಿಸುತ್ತೆ’

“ಅದರಲ್ಲೇನು ಮಣ್ಣು ಒಳ್ಳೇತನ! ಈ ಸಂಪತ್ತಿಗೆ ಜನ ಮದುವೆಯಾದರೂ ಯಾಕೆ ಆಗ್ತಾರೋ?”

‘ಹೋಗ್ಲಿ ಬಿಡು. ಸುಮ್ನೆ ಈ ತಡರಾತ್ರೀಲಿ ಏನೇನೋ ಹೇಳಿ ನಿನಗೆ ತಲೆ ತಿಂದೆ’

“ಹಂಗೆಲ್ಲ ಏನಿಲ್ಲಪ್ಪ. ಒಂದು ಮಾತು ಹೇಳಲಾ”

‘ಹೇಳು’

“ನೀನಿಷ್ಟೊತ್ತು ಹೇಳಿದ್ದು ನನಗನ್ನಿಸೋ ಹಾಗೆ ನಿನ್ನ ಕಸಿನ್ ಕತೆಯಲ್ಲ”

‘ನಿನಗೇಗೆ ಗೊತ್ತಾಯ್ತು?!!’ ಅಚ್ಚರಿಯಿಂದ ಕೇಳಿದೆ.

“ಇದು ನಿನ್ನದೇ ಕತೆ ಅಲ್ವಾ?”

‘ಮ್. ಹೌದು’

“ಮತ್ಯಾಕೆ ಸುಳ್ಳೇಳಿದ್ದು”

‘ನನ್ನದೇ ಕತೆ ಅಂದ್ರೆ ನೀನು ನನ್ನ ಪರವಾಗೇ ಮಾತನಾಡಿಬಿಡ್ತಿಯೇನೋ ಅಂತ’

“ಅಷ್ಟೆಲ್ಲ ಪಕ್ಷಪಾತಿ ಅಲ್ಲಮ್ಮ ನಾನು. ನಿನ್ನ ಕತೆಯಾದರೂ ನಿನ್ನ ಕಸಿನ್ ಕತೆಯಾದರೂ ನನಗೆ ಏನು ಸರಿ ಅನ್ಸುತ್ತೋ ಅದನ್ನೇ ಹೇಳೋದು ನಾನು”

‘ಸರಿ ಗುರುಗಳೆ. ಇನ್ಮುಂದೆ ಸುಳ್ಳು ಹೇಳೋದಿಲ್ಲ’

“ಕ್ಷಮಿಸಿದ್ದೀನಿ ಬಿಡು ಶಿಷ್ಯೆ”

‘ಹ್ಹ ಹ್ಹ. ಇದನ್ನು ತುಂಬ ದಿನದಿಂದ ನಿನ್ಜೊತೆ ಹೇಳ್ಕೋಬೇಕು ಅಂತಿದ್ದೆ. ಆಗಿರಲಿಲ್ಲ. ಇವತ್ತು ಏನೋ ಸಮಾಧಾನ ಸಿಕ್ಕಂಗಾಯ್ತು. ಥ್ಯಾಂಕ್ಸ್ ಕಣೋ ಸಾಗರ್’

“ಥ್ಯಾಂಕ್ಸ್ ಎಲ್ಲ ನೀನೇ ಇಟ್ಕೊ. ದಿನಾ ಬರೀ ತಿಂಡಿ ಆಯ್ತಾ ಏನ್ ಊಟ ಅಂತಷ್ಟೇ ಮೆಸೇಜ್ ಮಾಡಿ ನನಗೂ ಬೋರ್ ಹೊಡೀತಿತ್ತು. ಇವತ್ತು ನಮ್ಮ ಗೆಳೆತನ ಮತ್ತೊಂದು ಮೆಟ್ಟಿಲು ಮೇಲೆ ಏರಿತು ಎನ್ನಿಸುತ್ತೆ” ಸಾಲಿಡೀ ಸ್ಮೈಲಿಯಿತ್ತು.

‘ಹೌದು ನೀನೇಳೋದು ನಿಜ. ನಿನಗೊಂದು ಮಾತು ಕೇಳ್ಲಾ ನೀನು ತಪ್ಪು ತಿಳ್ಕೋಬಾರದು’

“ತಪ್ಪು ತಿಳ್ಕೊಂಡ್ರೂ ಪರವಾಗಿಲ್ಲ ಕೇಳು”

‘ನಾವಿಬ್ಬರು ಮೆಸೇಜು ಮಾಡಲು ಶುರುಮಾಡಿ ಎರಡು ತಿಂಗಳೇ ಆಗ್ತಾ ಬಂತು. ನಿನಗೆ ನನ್ನ ಜೊತೆ ಫೋನಿನಲ್ಲಿ ಮಾತನಾಡಬೇಕು ಅನ್ನಿಸಿಲ್ಲವಾ?’

“ಅನ್ನಿಸುತ್ತೆ. ನಿನಗೂ ಅನ್ನಿಸುತ್ತೋ ಇಲ್ಲವೋ ಅಂತ ಸುಮ್ಮನಿದ್ದೆ. ಮೇಲಾಗಿ ನೀನು ಡ್ಯೂಟಿಯಲ್ಲಿರ್ತೀಯೋ ಮನೆಯಲ್ಲಿರುತ್ತೀಯೋ ಗೊತ್ತಿರೋದಿಲ್ಲವಲ್ಲ. ನೀನು ಮನೆಯಲ್ಲಿದ್ದಾಗ ಫೋನ್ ಮಾಡಬಹುದೋ ಇಲ್ಲವೋ ಅನ್ನೋದೂ ಗೊತ್ತಿಲ್ಲ. ಹಾಗಾಗಿ ನೀನೇ ಫೋನ್ ಮಾಡೋವರೆಗೂ ಸುಮ್ಮನಿದ್ದೆ”

‘Atleast ಮೆಸೇಜಿನಲ್ಲಿ ಫೋನ್ ಮಾಡ್ಲಾ ಅಂತ ಕೇಳಬಹುದಿತ್ತಲ್ಲ’

“ಅಯ್ಯೋ ಅದೆಲ್ಲ ಎಂತ ಕೇಳೋದು. ಇಬ್ಬರೂ ಹೀಗೆ ಸರೊತ್ತಿನಲ್ಲಿ ಚಾಟ್ ಮಾಡ್ಕೊಂಡು ಕೂರ್ತೀವಿ ಅಂತ ಎರಡು ತಿಂಗಳ ಹಿಂದೆ ಅಂದುಕೊಂಡಿದ್ವಾ? ಇಲ್ಲವಲ್ಲ. ಹಂಗೇ ನಾಳೆ ಫೋನಲ್ಲೂ ಮಾತಾಡ್ತೀವಿ ಬಿಡು”

‘ಚೆನ್ನಾಗಿ ವಾದ ಮಾಡ್ತೀಯ. ನಾವಿನ್ನೇನು ಹೇಳೋ ಹಾಗೇ ಇಲ್ಲ’

“ವಾದ ಮಾಡಿದ್ರೆ ಗೆಲ್ಲೋದಿಕ್ಕೇ ಮಾಡ್ಬೇಕು ಅನ್ನೋದೆ ನನ್ನ ಪಾಲಿಸಿ”

‘ಹಾ ಹಾ...ನೋಡೋಣ ಮದ್ವೆ ಆದಮೇಲೆ ಗೊತ್ತಾಗುತ್ತೆ ಎಷ್ಟು ವಾದ ಮಾಡ್ತೀಯ ಅಂತ’

“ದೆವ್ವ ಬರೋ ಟೈಮಲ್ಲಿ ಈ ತರ ಎಲ್ಲಾ ಹೆದರಿಸ್ತೀಯಲ್ಲೇ! ಎರಡು ಘಂಟೆಯಾಯ್ತು ಮಲಕ್ಕೋ. ನಿದ್ರೆ ಬರ್ತಿದೆ. ಬೆಳಿಗ್ಗೆ ಕಾಲೇಜಿಗೆ ಬೇರೆ ಹೋಗ್ಬೇಕು”

‘ಸರಿ ಕಣೋ’


ಮುಂದಿನ ಭಾಗವನ್ನು ಓದಲು ಇಲ್ಲಿ ಕ್ಲಿಕ್ಕಿಸಿ. 

No comments:

Post a Comment