Jan 20, 2019

ಒಂದು ಬೊಗಸೆ ಪ್ರೀತಿ - 2

ಡಾ. ಅಶೋಕ್. ಕೆ. ಅರ್. 
ಒಂದು ಬೊಗಸೆ ಪ್ರೀತಿ ಭಾಗ ೧ ಅನ್ನು ಓದಲು ಇಲ್ಲಿ ಕ್ಲಿಕ್ಕಿಸಿ. 
ಸತ್ಯನಾರಾಯಣ ಸ್ವಾಮಿ ಪೂಜೆಯ ಸಂಭ್ರಮಗಳನ್ನೆಲ್ಲ ಮುಗಿಸಿ ಮನೆ ತಲುಪುವಷ್ಟರಲ್ಲಿ ಸಂಜೆ ಆರಾಗಿತ್ತು. ದೇಹಕ್ಕೇನು ದಣಿವಾಗಿರಲಿಲ್ಲ; ಅಡುಗೆ ಮಾಡೋದು, ಬಡಿಸೋದು ರೇಷ್ಮೆ ಸೀರೆ ಉಟ್ಟು ಮನೆಯಲ್ಲೆಲ್ಲಾ ಸುತ್ತಾಡಿ ಬಂದವರನ್ನೆಲ್ಲಾ ನಗುನಗುತ್ತಾ ಮಾತನಾಡಿಸುವ ಕೆಲಸವೆಂದರೆ ನನಗೆ ತುಂಬಾ ಇಷ್ಟ. ಸುಸ್ತೆಲ್ಲ ಮನಸ್ಸಿಗೆ. ಗಂಡನಿಗೂ ಅದು ಗೊತ್ತಾಗಿತ್ತು. ಮನೆಗೆ ಬಂದವಳೇ ಸೀರೆ ಬಿಚ್ಚಿ ಲಂಗ ಬ್ಲೌಸಿನಲ್ಲೇ ಹಾಸಿಗೆಯ ಮೇಲೆ ಅಡ್ಡಾದೆ. ಕಿವಿಗೆ ಹಿಯರ್ ಫೋನ್ ಸಿಕ್ಕಿಸಿಕೊಂಡು ಹಾಡು ಕೇಳುತ್ತಾ ಮಲಗಿದೆ. ಒಂದು ಘಂಟೆ ಅದೂ ಇದೂ ಓದ್ಕೊಂಡು ಟಿವಿ ನೋಡ್ಕೊಂಡು ಇದ್ದ ರಾಜಿ. ಘಂಟೆ ಏಳಾದರೂ ನಾನು ಎದ್ದು ಬರದಿದ್ದುದನ್ನು ನೋಡಿ ರೂಮಿಗೆ ಬಂದು ಪಕ್ಕದಲ್ಲಿ ಮಲಗಿದ. ನಿದ್ರಿಸುವವಳಂತೆ ಬೋರಲು ಬಿದ್ದು ಮಲಗಿದ್ದ ನನ್ನ ನಟನೆ ಕೂಡ ಅವನಿಗೆ ಗೊತ್ತು. ಸೊಂಟದ ಮೇಲೆ ಕಚಗುಳಿಯಿಟ್ಟ; ಅವನ ಕೈಹಿಡಿದು ಪಕ್ಕಕ್ಕೆಸೆದೆ. ಎಡಗಿವಿಯ ಹಿಯರ್ ಫೋನ್ ತೆಗೆದ.

“ಕೋಪ ಇನ್ನೂ ಕಡಿಮೆಯಾಗಲಿಲ್ವ"

‘ಕೋಪ ಯಾಕೆ. ಹಾಗೇನೂ ಇಲ್ಲ. ಸುಸ್ತು ಅಷ್ಟೇ’

ಒಂದೊಂದೇ ಎಪಿಸೋಡು ಹುಡುಕುಡುಕಿ ಓದೋಕೆ ಬೇಸರವಾ? ಪೂರ್ತಿ ಇ - ಪುಸ್ತಕ ತೆಗೆದುಕೊಳ್ಳಲು ಇಲ್ಲಿ ಕ್ಲಿಕ್ಕಿಸಿ.
“ನಿನ್ನಂತ ಸ್ಟ್ರಾಂಗ್ ಹುಡುಗಿಗೆ ಸುಸ್ತಾಗುತ್ತೆ ಅಂದ್ರೆ ನಂಬಿಕೆ ಬರಲ್ಲ ನನಗೆ”

‘ಸುಸ್ತು ಮನಸ್ಸಿಗೂ ಆಗುತ್ತೆ ಕಣ್ರೀ’

“ಗೊತ್ತು"

‘ಮತ್ತೆ. ಗೊತ್ತಿದ್ದಮೇಲೆ ನನ್ನ ಪಾಡಿಗೆ ಸ್ವಲ್ಪ ಹೊತ್ತು ಬಿಡಿ’

“ಒಂದು ಘಂಟೆ ಬಿಟ್ಟಿದ್ದನಲ್ಲ”

‘ಒಂದು ದಿನದ ಸುಸ್ತು ನಿವಾರಿಸಿಕೊಳ್ಳಲು ಒಂದು ಘಂಟೆ ಸಾಕೇನ್ರಿ’

“ಅಂಥದ್ದೇನಾಯ್ತು”

‘ಏನಿಲ್ಲ ಬಿಡಿ’

“ನನ್ನತ್ರಾನೂ ಹೇಳಬಾರದಾ?”

‘ಹೇಳಿದ್ರೆ ಏನ್ ಮಾಡ್ತೀರಾ? ಇವಾಗ ಏನೇನೋ ಹೇಳಿ ಸಮಾಧಾನ ಮಾಡ್ತೀರ. ನಾಳೆ ದಿನ ನಿಮಗೇ ನನ್ನ ಮೇಲೆ ಕೋಪ ಬಂದಾಗ ನಾನಿವತ್ತು ಹೇಳಿದ್ದೆಲ್ಲ ಮಹಾಪರಾಧ ಅನ್ನೋ ಹಾಗೆ ನನ್ನ ಮೇಲೇ ಗೂಬೆ ಕೂರಿಸ್ತೀರ. ಆ ಸಂಭ್ರಮಕ್ಕೆ ಯಾಕೆ ಹೇಳ್ಕೋಬೇಕು ಬಿಡಿ’

“ಹಂಗಲ್ಲ ಕಣೋ. ನನ್ನ ಮೂಡ್ ಸ್ವಿಂಗ್ಸ್ ನಿನಗೂ ಗೊತ್ತು. ಏನೋ ಆ ಟೈಮಲ್ಲಿ ಆ ರೀತಿ ಮಾತನಾಡಿಬಿಡ್ತೀನಿ. ಕೋಪದಲ್ಲಿ. ಈಗ ನಿನಗೇನಾಯ್ತು ಅಂತ ಹೇಳು ಚಿನ್ನು” ಬೆನ್ನಿಗೊಂದು ಮುತ್ತು ಕೊಟ್ಟ ರಾಜಿ.

‘ಮುದ್ದು ಮಾಡೋದು ಚೆನ್ನಾಗಿ ಕಲ್ತಿದ್ದೀರ. ಏನ್ ಹೇಳೋದ್ರಿ. ಎಲ್ಲಾ ಮಾಮೂಲಿ. ನಿಮ್ಮ ಅಣ್ಣಂಗೆ ಅತ್ತಿಗೇಗೆ ಹೊಸ ಹೊಸ ಬಟ್ಟೆ. ನಿಮ್ಮಕ್ಕನಿಗೂ ಹೊಸ ಸೀರೆ. ನಾನು ನೀವು ಮಾತ್ರ ಹಳೇ ಬಟ್ಟೇಲಿ. ನಿಮ್ಮತ್ತಿಗೆ ನಿಮ್ಮಕ್ಕ ಬಂದವರೆಲ್ಲರ ಮುಂದೆಲ್ಲ ‘ನೋಡಿ ಹೊಸ ಸೀರೆ ಹೊಸ ಸೀರೆ’ ಅಂತ ಮೆರೆದಿದ್ದೂ ಮೆರೆದಿದ್ದೇ’

“ನಿನಗೆ ಗೊತ್ತಲ್ಲ ನಮ್ಮ ಮನೆಯವರಿಗೆ ನನ್ನ ನಿನ್ನ ಕಂಡರೆ ಅಷ್ಟು ಆಗಲ್ಲ ಅಂತ”

‘ಅವರಿಗೆ ಆಗಲ್ಲ ಸರಿ. ಅವರು ನಮಗೆ ಬಟ್ಟೆ ಕೊಡಿಸಲಿಲ್ಲ ಅನ್ನೋ ಬೇಜಾರೂ ಇಲ್ಲ. ನಮಗೇನ್ ಬಟ್ಟೆ ತೆಗೆದುಕೊಳ್ಳೋಕೆ ದುಡ್ಡಿಲ್ವ? ಹಿಂಗೆ ಪೂಜೆ ಇಟ್ಕೊಂಡಿದ್ದೀವಿ ಅಂದ್ರೆ ನಾನೇ ಹೊಸ ಸೀರೆ ತೆಗೆದುಕೊಂಡುಬಿಡುತ್ತಿದ್ದೆ. ನೆಂಟ್ರು ಹೆಂಗುಸ್ರೆಲ್ಲ ನಿಂದೂ ಹೊಸ ಸೀರೆಯೇನಮ್ಮ ಅಂತ ಕೇಳ್ತಿದ್ರೆ ಎಷ್ಟು ಹಿಂಸೆ ಆಗ್ತಿತ್ತು ಗೊತ್ತ. ನನಗೆ ಅವಮಾನ ಮಾಡೋದಿಕ್ಕೆ ನಿಮ್ಮಮ್ಮ ಇದೆಲ್ಲ ಮಾಡ್ತಾರೇನೋ?’

“ಥೂ. ಈ ಹೆಂಗಸ್ರಿಗೆ ಮಾಡೋಕೆ ಬೇರೆ ಕೆಲ್ಸ ಇಲ್ಲಪ್ಪ” ರಾಜೀವ ಗೊಣಗಿಕೊಂಡ.

‘ಅದೇನ್ರೀ ಗೊಣಗ್ತೀರಾ?’

“ಮೊನ್ನೆ ಮೊನ್ನೆ ಹುಟ್ಟಿದಬ್ಬಕ್ಕೆ ಸೀರೆ ಕೊಡಿಸಿದ್ನಲ್ಲೇ?”

‘ಈ ಗಂಡಸ್ರಿಗೆ ಸೂಕ್ಷ್ಮಗಳೇ ಅರ್ಥ ಆಗಲ್ಲ. ವಿಷಯ ಸೀರೆದಲ್ಲ. ನಿಮ್ಮ ಮನೆಯವರು ತೋರಿಸೋ ಅಸಡ್ಡೇದು’

“ನೋಡು ಧರು. ನಮ್ಮ ಮನೆಯವರು ನನ್ನ ಮೇಲೆ ನಿನ್ನ ಮೇಲೆ ಅಸಡ್ಡೆ ತೋರ್ಸೋದು ಹೊಸತೇನಲ್ಲ. ಅದಕ್ಕಿರೋ ಕಾರಣಾನೂ ನಿನಗೇ ಗೊತ್ತು. ಮನೆ ಬಿಟ್ಟು ಹೋಗೋಣ ಅಂದ ತಕ್ಷಣ ಕುಣ್ಕೊಂಡು ಬರ್ಬೇಕಾದರೆ ಈ ಬುದ್ಧಿ ಇರಬೇಕಿತ್ತು. ಏನೋ ಭಾರೀ ದುಡ್ದು ಸಂಪಾದಿಸ್ತೀವಿ ಅನ್ನೋ ಅಹಂಕಾರದಲ್ಲಿ ಬಂದೆ. ಬಂದಿಲ್ಲಿ ಕಿತ್ತಾಕ್ತಿರೋದು ಅಷ್ಟರಲ್ಲೇ ಇದೆ. ಎಲ್ಲಾ ನನ್ನ ಕರ್ಮ” ಕೋಪದಿಂದ ಹೇಳಿ ರಾಜೀವ ರೂಮಿನಿಂದ ಹೊರನಡೆದ. ನಾನ್ಯಾವಾಗ ಕುಣ್ಕೊಂಡು ಬಂದೆ? ಬೇಡ ರೀ ಜೊತೆಲೇ ಇರೋಣ ಜೊತೇಲೇ ಇರೋಣ ಅಂತ ಆರು ತಿಂಗಳು ಮುಂದೆ ತಳ್ಳಿದ್ದು ನಾನೇ ಅಲ್ಲವಾ? ಇನ್ನೂ ಏನೇನು ಮಾತು ಕೇಳಬೇಕೋ ಈ ಜೀವನದಲ್ಲಿ ಎಂದುಕೊಂಡು ಮತ್ತೆ ಎಡಗಿವಿಗೆ ಹಿಯರ್ ಫೋನ್ ಸಿಕ್ಕಿಸಿಕೊಂಡೆ. ಬಾಗಿಲನ್ನು ದಡಾರನೆ ಹಾಕಿಕೊಂಡ ಶಬ್ದ, ಗೇಟು ತೆರೆದು ಮುಚ್ಚಿದ ಶಬ್ದ. ಸಿಗರೇಟು ಸೇದೋಕೆ ಹೋದನೇನೋ.

ಹಾಡು ಕೇಳುತ್ತಾ ಕಣ್ಣು ತೂಗಲಾರಂಭಿಸಿತು.

ಮುಂದಿನ ಭಾಗವನ್ನು ಓದಲು ಇಲ್ಲಿ ಕ್ಲಿಕ್ಕಿಸಿ. 

No comments:

Post a Comment