Jan 27, 2019

ಒಂದು ಬೊಗಸೆ ಪ್ರೀತಿ - 3

ondu bogase preethi
ಡಾ. ಅಶೋಕ್. ಕೆ. ಆರ್. 
ಕಾದಂಬರಿಯ ಹಿಂದಿನ ಭಾಗಗಳನ್ನು ಓದಲು ಇಲ್ಲಿ ಕ್ಲಿಕ್ಕಿಸಿ. 
ಡ್ಯುಟಿಯ ನಡುವೆ ಬಿಡುವಾದಾಗ ಕಂಪ್ಯೂಟರ್ ಆನ್ ಮಾಡಿ ಮೇಲ್ ತೆರೆದೆ. ಕ್ರೆಡಿಟ್ ಕಾರ್ಡ ತಗೊಳ್ಳಿ, ಸೈಟು ತಗೊಳ್ಳಿ, ಲೋನ್ ತಗೊಳ್ಳಿ, ನಿಮಗೆ ಇಪ್ಪತ್ತು ಕೋಟಿ ಡಾಲರ್ ಬಹುಮಾನ ಬಂದಿದೆ ತಕ್ಷಣ ಈ ಮೇಲಿಗೆ ಪ್ರತಿಕ್ರಿಯಿಸಿ – ಇಂತವೇ ಬೇಡದ ಮೇಲುಗಳು ತುಂಬಿತ್ತು. ಲಾಗ್ ಔಟ್ ಮಾಡಿ ಫೇಸ್ ಬುಕ್ ತೆರೆದೆ. ಪಿಯುಸಿಯಲ್ಲಿ ದಡ್ಡರೆಂದು ಬಯ್ಯಿಸಿಕೊಂಡ ಎಷ್ಟೋ ಜನ ವಿದೇಶದಲ್ಲಿ ಕೆಲಸ ಮಾಡುತ್ತಿರುವ ಫೋಟೋಗಳನ್ನು ಹಾಕಿಕೊಂಡಿದ್ದಾರೆ. ಮೆಡಿಕಲ್ಲಿನಲ್ಲಿ ವೇಸ್ಟ್ ಬಾಡಿಗಳೆನ್ನಿಸಿಕೊಂಡವರು ಒಳ್ಳೊಳ್ಳೆ ಪಿ.ಜಿ ಸೀಟ್ ತೆಗೆದುಕೊಂಡಿದ್ದಾರೆ. ಎಲ್ಲಾ ಕಡೆ ಬುದ್ಧಿವಂತೆ ಅನ್ನಿಸಿಕೊಂಡ ನಾನು ಇದ್ಯಾವುದೋ ಕಂಪನಿ ಆಸ್ಪತ್ರೆಯಲ್ಲಿ ದುಡೀತಾ ಇದ್ದೀನಿ. ನನ್ನೀ ಪರಿಸ್ಥಿತಿಗೆ ನಾನೇ ಅಲ್ವಾ ಕಾರಣ ಎಂದು ಸ್ವಲ್ಪ ಸಮಾಧಾನ ಮಾಡಿಕೊಂಡೆ. ಈ ಫೇಸ್ ಬುಕ್ಕಿಗೂ ಗ್ಯಾಸ್ಟ್ರೈಟಿಸ್ಸಿಗೂ ಏನಾದ್ರೂ ಸಂಬಂಧವಿರಬಹುದಲ್ವಾ ಅನ್ನಿಸಿತು. ಕ್ಲಾಸ್ ಮೇಟ್ಸು, ನೆಂಟ್ರು, ಫ್ರೆಂಡ್ಸು ಅವರವರ ಸಾಧನೆಗಳ ಬಗ್ಗೆ ವಿದೇಶಿ ಟ್ರಿಪ್ಪುಗಳ ಬಗ್ಗೆ ಕೊಚ್ಕೊಂಡಿದ್ದನ್ನು ನೋಡಿದಷ್ಟೂ ಹೊಟ್ಟೆಉರಿ ಜಾಸ್ತಿಯಾಗುತ್ತೆ. ಗೆಳೆಯರ ಸಾಧನೆ ಬಗ್ಗೆ ಖುಷಿಯಾಗೋದು ಅಪರೂಪ. ಲೈಕ್ ಒತ್ತಿ ಕಮೆಂಟ್ ಕೊಟ್ಟು ಹೊಟ್ಟೆ ಉರ್ಕೊಳ್ಳೋದು ಸಾಮಾನ್ಯವಾಗಿಬಿಟ್ಟಿದೆ! ಹಂಗೇ ಫೇಸ್ಬುಕ್ ಸ್ಕ್ರಾಲ್ ಮಾಡ್ತಿರಬೇಕಾದರೆ “If you are not a marxist at 20 then you don’t have heart; if you are a marxist at 25 then you don’t have brain” ಎಂಬ ಸ್ಟೇಟಸ್ ಕಾಣಿಸಿತು. ಹಾಕಿದ್ದು ಸಾಗರ್, ಸಾಗರ್ ವಿಶಾಲ್. ಮೂರು ದಿನದ ಹಿಂದೆ ಅವನು ಕಳುಹಿಸಿದ್ದ ಫ್ರೆಂಡ್ ರಿಕ್ವೆಸ್ಟ್ ನೆನಪಾಯಿತು. ಹುಟ್ಟಿದ ಹಬ್ಬಕ್ಕೆ ವಿಷ್ ಮಾಡಲಿಲ್ಲ ಎನ್ನುವುದೂ ನೆನಪಾಯಿತು. ಇವತ್ತಾದರೂ ಇವನಿಗೊಂದು ‘ಹಾಯ್’ ಹೇಳೋಣ ಎಂದುಕೊಂಡು ಮೆಸೇಜು ಟೈಪಿಸಿ ಕಳುಹಿಸಿದೆ. ಎರಡು ನಿಮಿಷದ ನಂತರ ‘ಹಾಯ್' ಎಂದು ಕಳುಹಿಸಿದ. ಏನಾದ್ರೂ ಕೇಳ್ತಾನೇನೋ ಅವನೇ ಎಂದು ಸುಮ್ಮನಾದೆ. ಏನೂ ಕೇಳಲಿಲ್ಲ. ಇರಲಿ ನಾನೇ ಕೇಳ್ತೀನಿ ಎಂದುಕೊಂಡು ‘ಹೇಗಿದ್ದೀಯ’ ಎಂದು ಕಳುಹಿಸಿದೆ. ಅಷ್ಟರಲ್ಲಿ ರೋಗಿಯೊಬ್ಬರು ಬಂದರು. ಅವರನ್ನು ನೋಡಿ ಕಳುಹಿಸಿ ಫೇಸ್ ಬುಕ್ ನೋಡಿದೆ. ಏನೂ ಉತ್ತರ ಬಂದಿರಲಿಲ್ಲ. ಸಾಗರ್ ಆಫ್ ಲೈನ್ ಆಗಿದ್ದ. ಮೆಸೇಜು ಮಾಡಲು ಇಷ್ಟವಿರಲಿಲ್ಲವೋ ಏನೋ. ನಾನಾಗೇ ಮೆಸೇಜು ಕಳುಹಿಸಬಾರದಿತ್ತು. ‘ಡಿಸ್ಟರ್ಬ್ ಆಗಿದ್ರೆ ಸಾರಿ’ ಎಂದು ಮೆಸೇಜಿಸಿದೆ. ಲಾಗ್ ಔಟ್ ಮಾಡಿದೆ.

ಒಂದೊಂದೇ ಎಪಿಸೋಡು ಹುಡುಕುಡುಕಿ ಓದೋಕೆ ಬೇಸರವಾ? ಪೂರ್ತಿ ಇ - ಪುಸ್ತಕ ತೆಗೆದುಕೊಳ್ಳಲು ಇಲ್ಲಿ ಕ್ಲಿಕ್ಕಿಸಿ.
ನನ್ನ ಸಹಪಾಠಿಗಳು ಸುಮಾರು ಜನರಿದ್ದಾರೆ ಫೇಸ್ ಬುಕ್ಕಿನಲ್ಲಿ. ಕೆಲವರಿಗೆ ನಾನೇ ರಿಕ್ವೆಷ್ಟ್ ಕಳುಹಿಸಿದ್ದೀನಿ. ಕೆಲವರು ಅವರಾಗೇ ಕಳುಹಿಸಿದ್ದಾರೆ. ಯಾರೊಂದಿಗೂ ಚಾಟ್ ಮಾಡದ ನಾನು ಇವತ್ಯಾಕೆ ಸಾಗರನಿಗೆ ಮೆಸೇಜು ಮಾಡಿದೆ. ಮೊನ್ನೇನೂ ಅವನ ಫ್ರೆಂಡ್ ರಿಕ್ವೆಸ್ಟ್ ನೋಡಿದ ತಕ್ಷಣ ಖುಷಿಯಾಗಿತ್ತು. ಕಳೆದುಹೋದ ಗೆಳೆಯನೊಬ್ಬ ಸಿಕ್ಕಿದಂತೆ. ಸರಿಯಾಗಿ ಹೇಳಬೇಕೂ ಅಂದ್ರೆ ಅವನು ನನ್ನ ಗೆಳೆಯನೂ ಆಗಿರಲಿಲ್ಲ, ಅಪರೂಪಕ್ಕೆ ಮಾತನಾಡುವ ಸಹಪಾಠಿಯೂ ಅಲ್ಲ. ಅಪರೂಪಕ್ಕೇನು, ಇಡೀ ಐದೂವರೆ ವರ್ಷದಲ್ಲಿ ಅವನ ಜೊತೆ ಮಾತನ್ನೇ ಆಡಿರಲಿಲ್ಲ. ಎದುರುಬದುರು ಸಿಕ್ಕಾಗ ಪರಿಚಯದ ನಗುವಿನ ವಿನಿಮಯವೂ ಆಗಿರಲಿಲ್ಲ! ಒಟ್ಟಿನಲ್ಲಿ ಅವನಿಗೆ ನಾನ್ಯಾರು ಅಂತ ಗೊತ್ತಿರುವುದೇ ಅನುಮಾನ. ನನಗೆ ಅವನ ನೆನಪಿರುವುದು ಕೂಡ ಅಚ್ಚರಿಯ ವಿಷಯವೇ! ಎರಡನೇ ವರ್ಷದಲ್ಲಿ ಓದುವಾಗ ಇವನ ಪರಿಚಯ ಮಾಡ್ಕೋಬೇಕು ಅಂದುಕೊಂಡಿದ್ದು ಸತ್ಯ. ಅದಾದ ಮೇಲೆ ನನ್ನ ಸುಖ ದುಃಖಗಳಲ್ಲೇ ಮುಳುಗಿಹೋಗಿ ಸಾಗರನನ್ನು ಪರಿಚಯ ಮಾಡ್ಕೋಬೇಕು ಅಂದುಕೊಂಡಿದ್ದೂ ಮರೆತುಹೋಗಿತ್ತು!

ಜನರು ಒಬ್ಬರಾದ ಮೇಲೆ ಒಬ್ಬರು ಬರಲಾರಂಭಿಸಿದರು. ಮನದಲ್ಲೇನೇ ಯೋಚ್ನೆ ಇರ್ಲಿ, ಎಷ್ಟೇ ಬೇಸರವಿರ್ಲಿ ರೋಗಿಗಳೊಡನೆ ಮಾತನಾಡಬೇಕಾದರೆ ಮಾತ್ರ ಅವೆಲ್ಲವನ್ನೂ ಮರೆತು ಮುಖದ ಮೇಲೆ ನಗು ತಂದುಕೊಂಡುಬಿಡುತ್ತೇನೆ. ಹೊರಗೆ ಫಿಸಿಷಿಯನ್ನತ್ರ, ನಮ್ಮದೇ ಆಸ್ಪತ್ರೆಯ ಎಂ.ಡಿ - ಡಿ.ಎಂ ಮಾಡಿರುವ ಡಾಕ್ಟರುಗಳ ಹತ್ರ ತೋರಿಸಿಕೊಂಡು ಬಂದರೂ ಒಮ್ಮೆ ನನ್ನತ್ರ ಬಂದು ಆ ಔಷಧಿಗಳನ್ನು ತೋರಿಸಿದರೇ ಅನೇಕರಿಗೆ ಸಮಾಧಾನ. ನಾನೇ ಮೇನ್ ಆಸ್ಪತ್ರೆಗೆ ರೆಫರ್ ಮಾಡಿರುತ್ತಿದ್ದೆ. ‘ನಾನೇ ಕಳುಹಿಸಿದ್ದಲ್ವ? ಅವರು ನನಗಿಂತ ದೊಡ್ಡ ಡಾಕ್ಟರ್ರು. ಅವರು ಬರೆದಿರೋದನ್ನು ನನಗೆ ತೋರಿಸೋದ್ಯಾಕೆ? ಅವರಷ್ಟು ನನಗೆ ಗೊತ್ತಿಲ್ಲ ಇನ್ನೂ’ ಎಂದು ನಗುತ್ತಾ ಹೇಳಿದರೂ ‘ಬಿಡಿ ಡಾಕ್ಟ್ರೇ ನಿಮಗಿನ್ನೂ ಚಿಕ್ಕ ವಯಸ್ಸು. ಹೋಗ್ತಾ ಹೋಗ್ತಾ ಅವರಷ್ಟೇನು ಅವರಿಗಿಂತ ಜಾಸ್ತೀನೇ ಕಲ್ತುಕೋಬೌದು. ನಿಮ್ ಥರ ನಗ್ತಾ ನಗ್ತಾ ಮಾತಾಡೋದನ್ನ ಆ ದೊಡ್ಡ ಡಾಕ್ಟ್ರು ಸಾಯೋವರ್ಗೂ ಕಲಿಯಲ್ಲ. ಯಾವಾಗಲೂ ಮುಖ ಸಿಂಡರಿಸಿಕೊಂಡೇ ಇರ್ತಾರವರು’ ಎಂದು ಹೊಗಳುವವರಿಗೇನೂ ಕಡಿಮೆಯಿರಲಿಲ್ಲ. ಇದು ಕೇಂದ್ರ ಸರಕಾರದ ಜಾಗವಾದ್ದರಿಂದ ವಿವಿಧ ರಾಜ್ಯದವರು ಹೆಚ್ಚಿದ್ದರು. ಇಂಗ್ಲೀಷನ್ನು ಸುಲಲಿತವಾಗಿ ಮಾತನಾಡುತ್ತಿದ್ದೆ. ನನ್ನ ವಾಕ್ ಚಾತುರ್ಯವನ್ನು ಅವರೂ ಮೆಚ್ಚುತ್ತಿದ್ದರು. ‘I think sometimes I come here just to listen to you’ ಎಂದು ಹೊಗಳುವ ಇಂಜಿನಿಯರ್ರುಗಳಿಗೂ ಆರ್.ಬಿ.ಐನಲ್ಲಿ ಕೊರತೆಯಿರಲಿಲ್ಲ. ಖುಷಿಯಾಗುತ್ತಿತ್ತು. ಬರೋಬ್ಬರಿ ಆರು ವರ್ಷ ನನ್ನೊಳಗಿನ ಮಾತುಗಳನ್ನೇ ಸಾಯಿಸಿಬಿಟ್ಟಿದ್ದೆ. ಬಹುಶಃ ಅವಾಗಿನ ಮಾತುಗಳನ್ನೆಲ್ಲ ಈಗಲೇ ಆಡುತ್ತಿರಬೇಕು, ಇನ್ನೆಷ್ಟು ದಿನವೋ ಎಂದು ಹೆಚ್ಚೇ ಮಾತನಾಡುತ್ತಿರಬೇಕು. ಒಂದಷ್ಟು ಖುಷಿ, ಒಂದಷ್ಟು ಬೇಸರ. ಡ್ಯೂಟಿ ಮುಗಿಯೋ ಸಮಯಕ್ಕೆ ಸೋನಿಯಾ ಫೋನ್ ಮಾಡಿದಳು.

“ಅಕ್ಕ ನಿಮ್ ಜೊತೆ ಮಾತನಾಡಬೇಕು”

‘ಈಗ ಡ್ಯೂಟಿ ಮುಗಿಸಿ ಹೊರಟೆ. ಎಲ್ಲಿ ಸಿಗ್ತೀಯಾ ಹೇಳು. ಮನೆಗೇ ಬರ್ತೀಯ’

“ಮನೇಲಿ ಬೇಡ ಅಕ್ಕ. ಕುಕ್ಕರಹಳ್ಳಿ ಕೆರೆ ಹತ್ರ ಬರ್ತೀರಾ? ಮನೆ ದಾರೀಲೇ ಅಲ್ವ ಅದು”

‘ಓಕೆ ಓಕೆ. ಬರ್ತೀನಿ. ಏನ್ ಸಮಾಚಾರ’

“ಇಲ್ಲೇ ಬನ್ನಿ ಹೇಳ್ತೀನಿ”

‘ಮ್. ಸರಿ. ಶಶೀನೂ ಬಂದಿದ್ದಾನಾ?’

“ಇಲ್ಲ ಅಕ್ಕ. ನಾನೊಬ್ಳೇ ಬರ್ತೀನಿ. ಅಪ್ಪ ಬಂದ್ರು ಅನ್ಸುತ್ತೆ. ಆಮೇಲೆ ಕಾಲ್ ಮಾಡ್ತೀನಿ ಕುಕ್ಕರಹಳ್ಳಿಯ ಹತ್ತಿರ ಬಂದು”

ನಾನು ಓಕೆ ಎನ್ನುವುದಕ್ಕೆ ಮೊದಲೇ ಕಟ್ ಮಾಡಿಬಿಟ್ಟಳು. ನಮ್ಮ ಮನೆಯಲ್ಲಿ ಮತ್ತೊಂದು ಬಿರುಗಾಳಿ ಏಳೋ ಸಮಯ ಬಂದಿದೆ ಅನ್ನಿಸುತ್ತಿದೆ. ಅಲ್ಲೇ ಆರ್.ಬಿ.ಐ ಕ್ಯಾಂಟೀನಿನಲ್ಲಿ ಎರಡು ಇಡ್ಲಿ ತಿಂದು ಹೊರಟೆ. ಕುಕ್ಕರಹಳ್ಳಿ ಕೆರೆಯ ಹತ್ತಿರ ಹೋಗುವಷ್ಟರಲ್ಲಿ ಸೋನಿಯಾ ಮತ್ತೆ ಫೋನ್ ಮಾಡಿದಳು.

“ಅಕ್ಕ ಇಲ್ಲೇ ಎಂಟ್ರೆನ್ಸ್ ಗೇಟ್ ಹತ್ರ ನಿಂತಿದ್ದೀನಿ. ಎಷ್ಟೊತ್ತಾಗುತ್ತೆ ನೀವು ಬರೋದು”

‘ಇನ್ನೆರಡು ನಿಮಿಷ ಅಷ್ಟೇ. ಹತ್ತಿರಾನೇ ಇದ್ದೀನಿ’

ಕಾರು ಪಾರ್ಕ್ ಮಾಡಿ ಗೇಟಿನೆಡೆಗೆ ನಡೆದೆ. ಅತ್ತಿಂದಿತ್ತ ಇತ್ತಿಂದತ್ತ ಓಡಾಡುತ್ತಿದ್ದಳು ಸೋನಿಯಾ. ನನ್ನನ್ನು ನೋಡುತ್ತಿದ್ದಂತೆ “ಅಕ್ಕ ನನ್ನನ್ನು ನೀವೇ ಕಾಪಾಡಬೇಕು ಎಂದಳು”

‘ಏನಾಯ್ತು ಸೋನಿಯಾ?’

“ನಮ್ಮ ಮನೆಯಲ್ಲಿ ಹುಡುಗ ಹುಡುಕಲು ಶುರುಮಾಡಿದ್ದಾರೆ. ನಿನ್ನೆ ಸಂಜೆ ಬ್ರೋಕರ್ ಬಂದುಬಿಟ್ಟಿದ್ದರು”

‘ಇದೊಳ್ಳೆ ಕಥೆಯಲ್ಲ. ಇಪ್ಪತ್ತಮೂರು ವರ್ಷವಾಗಿದೆ. ಬ್ಯಾಂಕಿನಲ್ಲಿ ಕೆಲಸಕ್ಕೆ ಬೇರೆ ಸೇರಿದ್ದೀಯಾ? ಈಗಲೂ ಗಂಡು ಹುಡುಕದಿದ್ದರೆ ಇನ್ಯಾವಾಗ ಹುಡುಕ್ತಾರೆ’ ತಮಾಷೆಯ ದನಿಯಲ್ಲಿ ಕೇಳಿದೆ.

“ಹೋಗಿ ಅಕ್ಕ. ಎಲ್ಲಾ ಗೊತ್ತಿದ್ದು ನೀವೇ ಹಿಂಗೆ ಹೇಳಿದ್ರೆ ಹೆಂಗೆ” ಕಣ್ಣಲ್ಲಿ ನೀರು ತುಂಬಿಕೊಂಡಳು.

‘ಸುಮ್ನೆ ಹೇ‍ಳ್ದೆ ಸೋನಿಯ. ನಡಿ ಒಳಗೆ ಕೂತು ಮಾತನಾಡೋಣ’ ಎಂದ್ಹೇಳಿ ಕೈಹಿಡಿದು ಕರೆದುಕೊಂಡು ಹೋದೆ. ಪರ್ಸಿನೊಳಗಿದ್ದ ಕೈಚೌಕದಿಂದ ಕಣ್ಣೀರು ಒರೆಸಿಕೊಂಡಳು.

‘ಮದುವೆ ಫಿಕ್ಸ್ ಆಗೋಯ್ತ?’

“ಛೀ ಛೀ ಇಲ್ಲಪ್ಪ. ನಿನ್ನೆ ಬ್ರೋಕರ್ ಬಂದಿದ್ದರು. ನನ್ನ ಜಾತಕ ತೆಗೆದುಕೊಂಡು ಒಂದಷ್ಟು ಹುಡುಗರ ಫೋಟೋ ಕೊಟ್ಟು ಹೋದರು. ನನ್ನ ಫೋಟೋ ಇತ್ತೀಚಿನದು ಯಾವುದೂ ಇರಲಿಲ್ಲ. ಬೇಗ ಒಂದು ಫೋಟೋ ತೆಗೆಸಿ ಗೌಡ್ರೆ ಅಂತ ನಮ್ಮಪ್ಪಂಗೆ ಹೇಳಿ ಹೋದರು. ಇವತ್ತು ಫೋಟೋ ತೆಗೆಸಿ ಅವರಿಗೆ ಕೊಟ್ಟುಬಿಡೋಣ. ಈ ಕೆಲ್ಸಾ ಎಲ್ಲಾ ಪಟಾಪಟ್ ಅಂತ ಆಗಿಬಿಡಬೇಕು ಅಂತ ಇವತ್ತು ನನ್ನನ್ನು ಬ್ಯಾಂಕಿಗೇ ಕಳುಹಿಸಲಿಲ್ಲ. ಬೆಳಿಗ್ಗೆ ಫೋಟೋ ತೆಗ್ಸಿ ಬ್ರೋಕರ್ರಿಗೆ ತಲುಪಿಸಿಬಿಟ್ಟರು”

‘ಅಷ್ಟೇನಾ! ಫೋಟೋ ತೆಗೆಸಿದ ತಕ್ಷಣ ಹುಡುಗ ಸಿಕ್ಕು ಮದುವೆಯಾಗಿಬಿಡುತ್ತಾ? ಸುಮ್ನಿರು ಇನ್ನೂ ಟೈಮಿದೆ ಏನಾದ್ರೂ ಮಾಡೋಣ’

“ಅದು ನನಗೂ ಗೊತ್ತು ಅಕ್ಕ. ನನಗೆ ಗಾಬರಿಯಾಗಿದ್ದೇ ಬೇರೆ ಕಾರಣಕ್ಕೆ. ನಿನ್ನೆ ರಾತ್ರಿ ಶಶಿಗೆ ಹೀಗೀಗೆ ಅಂತ ಮೆಸೇಜು ಹಾಕಿದರೆ, ‘ಹೌದಾ. ನೋಡು ನಿನ್ನಿಷ್ಟ’ ಅಂತ ರಿಪ್ಲೈ ಮಾಡ್ತಾನೆ. ಅಪ್ಪ ಮಲಗಿದ್ದು ಗ್ಯಾರಂಟಿ ಆದ ಮೇಲೆ ಫೋನು ಮಾಡಿದೆ”

‘ಮ್. ಏನಂದ’

“’ನನಗಿನ್ನೂ ಟೈಮ್ ಬೇಕು ಸೋನಿಯಾ. ನಿನಗೇ ವಿಷಯವೆಲ್ಲಾ ಗೊತ್ತಲ್ಲ. ಮೆಂಟಲಿ ಮನೆಯವರ ಜೊತೆ ವಾದ ಮಾಡೋಕೆ ನಾನಿನ್ನೂ ತಯಾರಾಗಿಲ್ಲ. ಅಪ್ಪ ಅಮ್ಮ ಒಪ್ಪೋದಿರಲಿ ಅಕ್ಕ ಒಪ್ಪೋದು ನನಗೆ ಅನುಮಾನವೇ. ಓಡಿ ಹೋಗಿ ಮದುವೆಯಾಗೋಣ ಅಂದ್ರೆ ನೀನದಕ್ಕೆ ತಯಾರಿಲ್ಲ. ಏನ್ ಮಾಡು ಅಂತಿ ನನ್ನ’” ಅಂತಾನೆ.

ಒಂದಷ್ಟು ನಗು ಬಂತು. ‘ಅಲ್ಲಾ ನಾನು ಒಪ್ಪೋದಿಲ್ಲ ಅಂದ್ನಾ?’

“ಹೌದು ಅಕ್ಕ”

‘ಯಾಕಂತೆ?’

“ಅದು ನಿಮಗೇ ಗೊತ್ತಲ್ಲಕ್ಕ”

‘ನಾನು ಅಷ್ಟೊಂದು ಚಿಕ್ಕ ಮನಸ್ಸಿನವಳಾ? ಹಂಗೇನೂ ಇಲ್ಲ. ನೀನೇನು ತಲೆ ಕೆಡಿಸ್ಕೋಬೇಡ. ನನ್ ತಮ್ಮ ಗೊತ್ತಲ್ಲ; ನೆಟ್ಟಗೆ ಮಾತಾಡೋಕೆ ಬಂದ್ರೆ ತಾನೇ ಅವನಿಗೆ. ನಾನವನ ಜೊತೆ ಮಾತನಾಡ್ತೀನಿ. ಎಲ್ಲರನ್ನೂ ಒಪ್ಪಿಸಿಯೇ ಮದುವೆಯಾಗುವಂತೆ ಮಾಡೋಣ ಸುಮ್ನಿರು’ ಸೋನಿಯಾಗೊಂದಷ್ಟು ಸಮಾಧಾನವಾಯಿತು. ನನಗಲ್ಲ.

ಮನೆಗೆ ಬಂದು ಒಂದಷ್ಟು ಮಲಗಿದೆ. ಇವರು ಬರೋದು ಆರರ ಮೇಲೆ. ಎಚ್ಚರವಾದಾಗ ಐದಾಗಿ ಹತ್ತು ನಿಮಿಷವಾಗಿತ್ತು. ಶಶಿ ಬ್ಯಾಂಕಿನಿಂದ ಹೊರಟಿರುತ್ತಾನೆ. ಮನೆ ತಲುಪೋ ಮುಂಚೆಯೇ ಫೋನ್ ಮಾಡಿಬಿಡಬೇಕು ಎಂದುಕೊಂಡು ಮೊಬೈಲ್ ಎತ್ತಿಕೊಂಡೆ. ಫೋನ್ ರಿಂಗಾಯಿತು. ತೆಗೆಯಲಿಲ್ಲ. ಇವನದು ಇದೇ ಗೋಳು. ಮೈಸೂರಿನಿಂದ ಬೆಳಗೋಳವೇನೂ ದೂರವಿಲ್ಲ. ಆದರೂ ಆ ರಸ್ತೆಯಲ್ಲಿ ದಿನಾ ಬೈಕನ್ನು ಓಡಿಸುವುದೆಂದರೆ ಸ್ವಲ್ಪ ರಿಸ್ಕೇ. ಇವನೋ ನೂರರ ಕೆಳಗೆ ಬೈಕು ಓಡಿಸುವ ಆಸಾಮಿಯೇ ಅಲ್ಲ. ಆ ವೇಗಕ್ಕೆ ಮೊಬೈಲು ರಿಂಗಾಗಿದ್ದು ತಿಳಿಯುವುದಾದರೂ ಹೇಗೆ. ಇನ್ನೊಮ್ಮೆ ಕರೆ ಮಾಡಿದೆ. ತೆಗೆಯಲಿಲ್ಲ. ಮನಸ್ಸಲ್ಲೇ ಒಂದಷ್ಟು ಬಯ್ದುಕೊಂಡು ಅಡುಗೆಮನೆಗೆ ಹೋದೆ. ಹೋಗುವುದೇನು ಅಡುಗೆಮನೆ ಹಾಲಿನೊಳಗೇ ಇರುವಂತಿದೆ ಈ ಮನೆಯಲ್ಲಿ. ಹುಡುಕಿ ಹುಡುಕಿ ಕಡಿಮೆ ಬಾಡಿಗೆಯ ಮನೆ ಮಾಡಿದ್ದು. ಸುತ್ತಮುತ್ತ ಈಗ ಅಲ್ಲೊಂದು ಇಲ್ಲೊಂದು ಮನೆ ಕಟ್ಟುತ್ತಿದ್ದಾರೆ. ಇದೋ ಗೂಡಿನಂತಹ ಮನೆ. ಒಂದು ಪುಟ್ಟ ಹಾಲು ಅದಕ್ಕೆ ಹೊಂದಿಕೊಂಡಂತೆ ಹೆಸರಿಗೆ ಎರಡು ರೂಮು. ಒಂದರಲ್ಲಿ ಡಬಲ್ ಕಾಟ್ ಮಂಚ ಹಾಕಿದ್ದೀವಿ. ಚೂರೇ ಚೂರು ಜಾಗ ಉಳಿದಿದೆ. ಇನ್ನೊಂದು ರೂಮು ಹೆಸರಿಗೆ ಮಾತ್ರ. ನೆಟ್ಟಗೆ ಒಂದು ಮಂಚ ಹಾಕಲೂ ಸ್ಥಳವಿಲ್ಲ. ಪುಟ್ಟ ಸ್ನಾನದ ಮನೆ, ಟಾಯ್ಲೆಟ್ ರೂಮ್ ದೇವರಿಗೇ ಪ್ರೀತಿ, ತಲೆ ಎತ್ತಿ ನಿಲ್ಲಲೂ ಆಗದಷ್ಟು ಚಿಕ್ಕದು. ಇರೋದು ಇಬ್ಬರೇ ಆದ್ದರಿಂದ ಅಂತಹ ತೊಂದರೆಯೇನಿಲ್ಲ. ಆದರೂ ಕೆಲವೊಮ್ಮೆ ಇವರ ಅಪ್ಪನ ಮನೆ ನೆನಪಿಗೆ ಬಂದು ಬೇಜಾರಾಗುತ್ತದೆ. ಎರಡಂತಸ್ತಿನ ಆರು ರೂಮಿನ ವಿಶಾಲ ಮನೆ. ಎದುರಿಗೆ ದೊಡ್ಡ ಕೈದೋಟ. ಮ್. ಅನುಭವಿಸಲೂ ಪಡೆದುಕೊಂಡು ಬಂದಿರಬೇಕು. ಫ್ರಿಜ್ಜಿನಲ್ಲಿದ್ದ ಬಿಸ್ಕೆಟ್ ಪ್ಯಾಕ್ ತೆಗೆದುಕೊಂಡೆ. ಗೋಡೆಗೆ ನೇತುಹಾಕಿದ್ದ ಕ್ಯಾಲೆಂಡರ್ ಇನ್ನೂ ಈ ಸಲ ಮುಟ್ಟಾಗಿಲ್ಲ ಎನ್ನುವುದನ್ನು ತಿಳಿಸಿತು. ಏನೇ ನಿಧಾನ ಅಂದ್ರೂ ಇಷ್ಟೊತ್ತಿಗೆ ಆಗಬೇಕಿತ್ತಲ್ಲ. ಪ್ರೆ‍ಗ್ನೆಂಟ್ ಆಗಿದ್ದೀನಾ ಎಂಬ ಅನುಮಾನ ಬಂತಾದರೂ ಅಂತ ಅನುಮಾನ ಹತ್ತಲವು ಸಲ ಬಂದು ನಿರಾಸೆಯಾಗುವುದು ಸಾಮಾನ್ಯವಾಗಿಬಿಟ್ಟಿರುವುದರಿಂದ ಜಾಸ್ತಿ ಯೋಚಿಸಲಿಲ್ಲ. ಹಾಲಿಗೆ ಬಂದು ಟಿವಿ ಹಾಕಿದೆ. ‘ಹುಚ್ಚ’ ಸಿನಿಮಾ ಬರುತ್ತಿತ್ತು. ನನ್ನ ನೆಚ್ಚಿನ ಸಿನಿಮಾಗಳಲ್ಲೊಂದು. ಸುದೀಪ್ ನನ್ನ ಫೇವರೇಟ್ ನಟ. ಸಿಗರೇಟ್ ಸೇದೋ ಸ್ಟೈಲು, ಕುರುಚಲು ಗಡ್ಡದ ಒರಟುತನ, ಪ್ರೀತಿಗೋಸ್ಕರ ಬದಲಾಗೋ ಹಂಬಲ ಎಲ್ಲವೂ ನನಗಿಷ್ಟ; ಕ್ಲೈಮಾಕ್ಸ್ ಮಾತ್ರ ಸ್ವಲ್ಪವೂ ಇಷ್ಟವಾಗಲಿಲ್ಲ. ನಾಯಕ ಹುಚ್ಚನಾಗಿ ನಾಯಕಿ ಸತ್ತುಹೋಗೋ ಕೊನೆ ಯಾರಿಗೆ ಇಷ್ಟವಾಗಲು ಸಾಧ್ಯ? ಫೋನ್ ರಿಂಗಣಿಸಿತು. ಶಶಿ ಫೋನ್ ಮಾಡಿದ್ದ.

“ಹೇಳಕ್ಕ”

‘ಎಲ್ಲಿದ್ದೀಯೋ’

“ಈಗ ಇಲವಾಲ”

‘ಸಿಗರೇಟ್ ಸೀದೋದಿಕ್ಕೆ ನಿಲ್ಸಿದ್ದೇನೋ’

“ಹೌದು. ಏನ್ ಸಮಾಚಾರ”

‘ಇವತ್ತು ಸೇದಿದ ಸಿಗರೇಟುಗಳ ಸಂಖೈ ಜಾಸ್ತಿಯಿರಬೇಕು. ಪೋನಲ್ಲೇ ವಾಸ್ನೆ ಬರ್ತಿದೆ’ ನಕ್ಕೆ.

“ಸೋನಿಯಾ ಫೋನ್ ಮಾಡಿದ್ಲಾ?”

‘ಮ್. ಸಿಕ್ಕಿದ್ಲು’

“ಏನಂತೆ ಕಥೆ ಅವಳ್ದು?”

‘ನಾನು ಕೇಳಬೇಕಿರೋ ಪ್ರಶ್ನೇನ ನೀನು ಕೇಳ್ತಿದ್ದಿ. ಚೆನ್ನಾಗಿದೆ. ರಾತ್ರಿ ಯಾಕೆ ನಿನ್ನಿಷ್ಟ, ಏನಾದ್ರೂ ಮಾಡ್ಕೋ ಅಂತೆಲ್ಲ ಹೇಳಿಬಿಟ್ಟಂತಲ್ಲ. ಸಪ್ಪಗಾಗಿಬಿಟ್ಟಿದ್ದಳು. ಪ್ರೀತಿಸಿದವಳ ಜೊತೆ ಈ ರೀತಿ ಮಾಡ್ತಾರ’

“ಇನ್ನೇನು ಮಾಡಬೇಕಿತ್ತು”

‘ನಮ್ಮ ಮನೇಲಿ ಅವರ ಮನೇಲಿ ಮಾತನಾಡಿ ಒಪ್ಪಿಸಬೇಕು’

“ಅವಳೂ ಇದೇ ಹೇಳ್ತಾಳೆ. ನೀನೂ ಇದೇ ಹೇಳ್ತೀಯ. ಇಬ್ಬರಿಗೂ ಎಲ್ಲಾ ವಿಷಯ ಗೊತ್ತಿದ್ದೂ ಇದೇ ಮಾತಾಡ್ತೀರ”

‘ಹಳೆಯದೆಲ್ಲ ಈಗ್ಯಾಕೆ. ಇನ್ನು ಮುಂದೇದು ನೋಡಬೇಕಷ್ಟೇ’

“ಅವಳು ಓಡಿ ಬರೋದಿಕ್ಕೆ ಸಿದ್ಧವಿಲ್ಲವಂತೆ”

‘ಓಡಿ ಹೋಗಿ ಅಂದ್ನಾ ನಾನು. ಮೊದಲು ಅಪ್ಪ ಅಮ್ಮನನ್ನು ಒಪ್ಪಿಸಿ ಅಂತ ಹೇಳಿದ್ದು’

“ನೀನು ಒಪ್ಪಿಸಿಯೇ ಮದುವೆಯಾಗಿದ್ದಾ?”

‘ನೋಡು ಶಶಿ. ನನ್ನ ವಿಷಯ ಈಗ ಬೇಡ ಅಂದ್ನಲ್ಲ’

“ಬೇಡ ಅಂದ್ರೆ ಹೆಂಗಕ್ಕ? ನನ್ದೂ ನಿನ್ದೂ ಒಂದೇ ಕಥೆ ಅಲ್ವ. ನೀನು ಇಷ್ಟಪಟ್ಟಿದ್ದು, ನಾನು ಇಷ್ಟಪಟ್ಟಿರೋದು ಗೌಡ್ರ ಹುಡುಗಿಯನ್ನ. ನಾವಿಬ್ರೋ ಅರ್ಧ ಎಸ್.ಸಿ ಅರ್ಧ ಗೌಡ್ರು. ನಿನ್ನ ಮದುವೆಗೇನು ಅಪ್ಪ ನಕ್ಕೋತಾ ನಕ್ಕೋತಾ ಒಪ್ಕೊಂಡ್ ಬುಟ್ರಾ? ಇಲ್ಲವಲ್ಲ. ಮತ್ತೆ ನನ್ನ ಮದುವೆಗೆ ಹೇಗೆ ಒಪ್ಪಿಬಿಡ್ತಾರೆ ಹೇಳು. ಇನ್ನು ಅವರಪ್ಪ ಜೆ.ಡಿ.ಎಸ್ಸಿಗೆ ಬಿಟ್ಟು ಇನ್ಯಾರಿಗೂ ವೋಟೇ ಹಾಕಲ್ಲ. ಅವರು ಒಪ್ಕೋತಾರ”

‘ಜೆ.ಡಿ.ಎಸ್ ಬರೋದಿಕ್ಕಿಂತ ಮುಂಚೆ ಅವರಪ್ಪಾನೂ ಕಾಂಗ್ರೆಸ್ಸಿಗೇ ಓಟ್ ಮಾಡ್ತಿದ್ರು ಸುಮ್ನಿರು’

“ಇರಬಹುದೇನೋಪ್ಪ” ನಕ್ಕ.

‘ಅವರ ಮನೇಲಿ ಸೋನಿಯಾನೇ ಮಾತಾಡ್ತಾಳಂತ?’

“ನಿನ್ನಷ್ಟು ಧೈರ್ಯವಂತೆ ಏನಲ್ಲ ಅವಳು. ನಾನೇ ಎರಡೂ ಮನೆಯಲ್ಲಿ ಒಪ್ಪಿಸಬೇಕಂತೆ. ಈ ತಲೆನೋವೆಲ್ಲ ಯಾಕೆ; ಯಾರ ಮನೇಲೂ ಹೇಳೋದೂ ಬೇಡ. ಸುಮ್ನೆ ಯಾವ್ದೋ ದೇವಸ್ಥಾನಕ್ಕೆ ಹೋಗಿ ತಾಳಿ ಕಟ್ಟಿಕೊಂಡು ರಿಜಿಸ್ಟ್ರಾರ್ ಆಫೀಸಿನಲ್ಲಿ ಸಹಿ ಹಾಕಿ ಮದುವೆ ಮಾಡ್ಕಂಡು ಜುಮ್ಮಂತ ಹನಿಮೂನ್ ಮುಗಿಸಿಕೊಂಡು ಬರೋಣ. ಒಪ್ಕೊಂಡ್ರೆ ಒಪ್ಕೊಳ್ಳಲಿ ಇಲ್ಲಾಂದ್ರೆ ಒಂದು ಮಗು ಆದ ಮೇಲಾದರೂ ಒಪ್ಪಿಕೊಳ್ಳುತ್ತಾರೆ ಅಂದ್ರೆ ಅವಳು ನನ್ನ ಮಾತೇ ಕೇಳಲ್ಲ. ಲವ್ ಮಾಡೋದಿಕ್ಕಿಂತ ಮುಂಚೇನೆ ಓಡೋಗದ್ದಿಕ್ಕೆ ರೆಡೀನ ಅಂತ ಕೇಳಬೇಕಿತ್ತು”

‘ಮ್. ಓಡಿ ಹೋಗಿ, To be specific ಹುಡುಗಿಯನ್ನು ಓಡಿಸಿಕೊಂಡು ಹೋಗಿ ಮದುವೆಯಾಗುವುದು ಹುಡುಗರಿಗೆ ಹೀರೋಯಿಸಮ್ ತರ ಅನ್ನಿಸುತ್ತೆ. ಹುಡುಗಿಗದು ನಾಚಿಕೆಯ ಸಂಗತಿ ಕಣೋ. ಓಡಿಹೋದವನು ಅಂತ ಯಾರೂ ಆಡಿಕೊಳ್ಳಲ್ಲ, ಓಡಿಹೋದವಳು ಅಂತ ನಿಂದಿಸೋರೇ ಹೆಚ್ಚು’

“ಅರ್ಥವಾಯ್ತು. ಸಾರಿ ಕಣಕ್ಕ”

‘ಈ ಭಾನುವಾರ ಅಪ್ಪನ ಜೊತೆ ನಾನು ಮಾತಾಡ್ತೀನಿ. ನೀನೂ ಇರಬೇಕು ಅಷ್ಟೇ. ನೀನಿಲ್ಲದಿದ್ದರೆ ಹಿರಿಯಕ್ಕನ ಚಾಳಿ ಮನೆಮಂದಿಗೆಲ್ಲ ಅಂತ ಅಪ್ಪ ನನಗೇ ಬಯ್ದುಬಿಡ್ತಾರೆ. ಅಮ್ಮನಿಗಾದರೂ ಹೇಳಿದ್ದೀಯ’

“ಅನುಮಾನ ಇದೆ. ಪೂರ್ತಿ ಗೊತ್ತಿಲ್ಲ. ಹುಡುಗಿ ಪಕ್ಕದ ಮನೆಯವಳು ಅನ್ನೋದು ಗೊತ್ತಿಲ್ಲ”

“ಭಾವನಿಗೆ ಗೊತ್ತ”

‘ಹ್ಞೂ. ನಾನೇ ಹೇಳಿದ್ದೆ. ಅಕ್ಕನ್ದೂ ಲವ್ ಸ್ಟೋರಿ. ತಮ್ಮನ್ದೂ ಲವ್ ಸ್ಟೋರಿ ಅಂತ ಕಾಮಿಡಿ ಮಾಡಿದ್ರು’

“ಮ್. ಅಪ್ಪನ ಜೊತೆ ನೀನು ಮಾತಾಡೋದೇನು ಬೇಡ. ಸುಮ್ನೆ ನನ್ನ ಸಲುವಾಗಿ ನೀನ್ಯಾಕೆ ಬೇಡದ ಮಾತುಗಳನ್ನು ಕೇಳ್ತಿ. ನಾನೇ ಮಾತಾಡ್ತೀನಿ. ನೀನು ಜೊತೇಲಿರು ಸಾಕು. ಭಾವ ಇದ್ರೆ ಇನ್ನೂ ಒಳ್ಳೆದೇನೋ”

‘ಇವರು ಬೇಡ. ಅಪ್ಪನ ಬಾಯಿ ಗೊತ್ತಲ್ಲ. ಏನೇನೋ ಮಾತಾಡಿಬಿಡ್ತಾರೆ. ಸುಮ್ನೆ ಇವರ್ಯಾಕೆ ಅದನ್ನೆಲ್ಲ ಕೇಳಿಸ್ಕೋಬೇಕು. ಅಪ್ಪನ ಹಾರಾಟ ಚೀರಾಟ ಎಲ್ಲ ಮುಗಿದು ಎರಡು ದಿನ ಆಗಲಿ. ಆಮೇಲೆ ಇವರ ಕೈಲಿ ಒಂದು ಮಾತು ಹೇಳಿಸಿದರಾಯಿತು’

“ಓಕೆ. ಮೇಡಮ್”

‘ಸರಿ ಸರಿ. ಸಿಗರೇಟ್ ಜಾಸ್ತಿ ಸುಡಬೇಡ. ಮನೆಗೆ ಹೋಗು. ಬಾಯ್’ 

ಮುಂದಿನ ಭಾಗವನ್ನು ಓದಲು ಇಲ್ಲಿ ಕ್ಲಿಕ್ಕಿಸಿ. 

No comments:

Post a Comment