Feb 3, 2019

ಒಂದು ಬೊಗಸೆ ಪ್ರೀತಿ - 4

ಡಾ. ಅಶೋಕ್. ಕೆ. ಆರ್ . 
ನಾನ್ ಸ್ವಲ್ಪ ಅಪ್ಪನ ಮನೆಗೆ ಹೋಗಿ ಬರ್ತೀನಿ ಅಂದಾಗ ಇವರು ‘ನಾನು ಬರ್ತೀನಿರು. ಒಬ್ಬನೇ ಏನ್ ಮಾಡ್ಲಿ’ ಅಂದ್ರು. ಬೇಡಾರೀ ಸ್ವಲ್ಪೇನೋ ಮಾತನಾಡೋದಿದೆ, ನಾನು ಬಂದು ನಿಮಗೆ ಎಲ್ಲ ವಿವರಿಸಿ ಹೇಳ್ತೀನಿ ಎಂದು ಸುಮ್ಮನಾಗಿಸಿ ಹೊರಟೆ. ಶಶಿ ಏನೂ ಆಗುತ್ತಿಲ್ಲವೆಂಬಂತೆ ಗಡದ್ದಾಗಿ ತಿಂದು ಟಿವಿ ನೋಡುತ್ತ ಕುಳಿತಿದ್ದ.

“ಇದೇನಮ್ಮ. ಏನೂ ಹೇಳದೆ ಬಂದುಬಿಟ್ಟೆ. ರಾಜೀವ್ ಬರಲಿಲ್ಲವಾ?” ಟಿವಿ ನೋಡುತ್ತ ಕುಳಿತಿದ್ದ ಅಮ್ಮ ಕೇಳಿದರು.

‘ಎಲ್ಲೋ ಫ್ರೆಂಡ್ಸ್ ನೋಡೋದಿಕ್ಕೆ ಹೋಗಿದ್ದರು. ಮನೇಲಿ ಒಬ್ಳಿಗೇ ಬೇಜಾರಾಗ್ತಿತ್ತು. ಹೊರಟು ಬಂದೆ’ ಎಂದು ಬಾಯಿಗೆ ಹೊಳೆದ ಸುಳ್ಳನ್ನು ಹೇಳಿದೆ.

“ಸರಿ. ಊಟ ಮಾಡ್ ನಡಿ”

‘ಇಲ್ಲಮ್ಮ. ಊಟ ಆಯ್ತು’

“ಮೀನ್ ಸಾರು ಮಾಡಿದ್ದೆ. ಸ್ವಲ್ಪ ತಿನ್ನು”

ಒಂದೊಂದೇ ಎಪಿಸೋಡು ಹುಡುಕುಡುಕಿ ಓದೋಕೆ ಬೇಸರವಾ? ಪೂರ್ತಿ ಇ - ಪುಸ್ತಕ ತೆಗೆದುಕೊಳ್ಳಲು ಇಲ್ಲಿ ಕ್ಲಿಕ್ಕಿಸಿ.

‘ಸಂಜೆ ಹೋಗ್ಬೇಕಾದ್ರೆ ತಿನ್ತೀನಿ ಬಿಡಿ. ಈಗ ಹಸಿವಿಲ್ಲ. ಅಪ್ಪ ಎಲ್ಲಿ’

“ಮನೆ ಸಾಮಾನು ಒಂದಷ್ಟು ಖಾಲಿಯಾಗಿತ್ತು. ತರೋದಿಕ್ಕೆ ಹೋದ್ರು. ಬರ್ತಾರೆ ಇನ್ನತ್ತದಿನೈದು ನಿಮಿಷಕ್ಕೆ”

‘ಈ ಕೋತೀನ ಕಳುಹಿಸಬೇಕಿತ್ತು’ ತಮ್ಮನ ಕೈಯಿಂದ ರಿಮೋಟು ಕಿತ್ತುಕೊಳ್ಳುತ್ತ ಹೇಳಿದೆ.

“ನಿಮ್ಮಪ್ಪ ಗೊತ್ತಲ್ಲ. ಅವರ ಸೆಲೆಕ್ಷನ್ನೇ ಗ್ರೇಟು ಅನ್ನೋರು. ನಾವ್ಯಾರಾದ್ರೂ ಹೋಗಿ ತಂದ್ರೆ ಅದು ಸರಿ ಇಲ್ಲ, ಇದು ಸರಿ ಇಲ್ಲ ಅಂತ ನೂರೆಂಟು ರಗಳೆ. ಅದಿಕ್ಕೆ ಅವರನ್ನೇ ಕಳಿಸಿ ನಾವು ನೆಮ್ಮದಿಯಾಗಿರೋದು”

‘ಏನೋಪ್ಪ. ಅವರ ಸೆಲೆಕ್ಷನ್ನೇ ಗ್ರೇಟು ಅಂತಾರೆ. ನಿಮ್ಮನ್ನೆಂಗೆ ಸೆಲೆಕ್ಟ್ ಮಾಡಿಬಿಟ್ರು ಮತ್ತೆ?’

“ಆಹಾ! ಸುಮ್ನಿರೆ ತರ್ಲೆ. ನಾನಾಗಿದ್ದಕ್ಕೆ ನಿಮ್ಮಪ್ಪನ ಜೊತೆ ಬಾಳ್ವೆ ಮಾಡಿದೆ. ಬೇರೆಯವರಾಗಿದ್ದರೆ ಯಾವಾಗ್ಲೋ ಬಿಟ್ಟೋಗಿರೋರು” ನಗುತ್ತ ಹೇಳಿದರು ಅಮ್ಮ.

“ಎಲ್ಲಾ ಹೆಂಗುಸ್ರುದು ಇದೇ ಡೈಲಾಗು” ತಮ್ಮ ಗೊಣಗಿದ.

ಎರಡು ದೊಡ್ಡ ಬಟ್ಟೆ ಬ್ಯಾಗಿನ ತುಂಬ ಸಾಮಾನು ತಂದರು ಅಪ್ಪ. “ಓ ಏನಮ್ಮ. ಯಾವಾಗ ಬಂದೆ” ಎಂದು ಕೇಳುತ್ತ ಸಾಮಾನು ತೆಗೆದುಕೊಂಡು ಹೋಗಿ ಅಡುಗೆಮನೆಯಲ್ಲಿ ಇಟ್ಟರು. “ಊಟ ಮಾಡ್ದಾ?” ಅಲ್ಲಿಂದಲೇ ಕೇಳಿದರು.

‘ಇಲ್ಲಪ್ಪ. ಮನೇಲೇ ಬಿರಿಯಾನಿ ಮಾಡಿದ್ದೆ. ತಿಂದು ಬಂದೆ’

“ಬಿರಿಯಾನಿ ಮಾಡಿದ್ದ? ಸ್ವಲ್ಪ ತಕ್ಕೊಂಡು ಬರೋದಲ್ವಾ. ನಿನ್ ಕೈ ಬಿರಿಯಾನಿನೇ ಚೆಂದ” ಎಂದರು ಅಪ್ಪ.

“ನೋಡ್ದಾ. ನೀನೇ ಕರ್ಕೊಂಡು ಹೋಗಿ ಇಟ್ಕವ್ವ ನಿಮ್ಮಪ್ಪನ್ನ” ಅಮ್ಮ ಮೆಲ್ಲಗಿನ ದನಿಯಲ್ಲಿ ಹೇಳುತ್ತ ನಕ್ಕರು. ನಗು ಮುಗಿದಿತ್ತು. ಅಪ್ಪ ಹಾಲಿಗೆ ಬಂದು ಕುಳಿತರು.

‘ಮತ್ತೆ ಶಶಿಗೆ ಮದ್ವೆ ಮಾಡೋ ಯೋಚನೇನೆ ಮಾಡ್ತಿಲ್ಲ ನೀವ್ಯಾರು’

“ಅಕ್ಕ ಭಾವ ಇದ್ದೀರಲ್ಲವ್ವ. ನೀವೇ ಜವಾಬ್ದಾರಿ ಹೊತ್ಕೊಂಡು ಮಾಡಿ”

‘ನೀವೊಳ್ಳೆ. ನಮ್ ಜೀವನದ ಜವಾಬ್ದಾರೀನೇ ಇನ್ನೂ ಸರಿಯಾಗಿ ಹೊತ್ತುಕೊಳ್ಳೋದಿಕ್ಕೆ ಆಗಿಲ್ಲ ನಮ್ಮಿಬ್ಬರಿಗೆ. ಇನ್ನು ಶಶಿ ಮದ್ವೆ ಜವಾಬ್ದಾರಿ ನಾವು ಹೊತ್ಕೊಂಡ್ರೆ ಪಾಪ ಅವನಿಗೆ ಮದುವೇನೇ ಹಾಗುವ ಆಗಿಲ್ಲ’

“ಹ್ಹ ಹ್ಹ. ಈಗವನಿಗೆ ಇಪ್ಪತ್ತೈದು ತುಂಬಿದೆ. ಇನ್ನೊಂದು ವರ್ಷ ಆಗಲಿ ಬಿಡು. ತಿರುಗಾಡ್ಕೊಂಡಿರಲಿ. ಆಮೇಲಿದ್ದೇ ಇದೆ ಹೆಂಡತಿ ಜೊತೆ ಏಗೋದು” ಎನ್ನುತ್ತಾ ಅಮ್ಮನ ಕಡೆ ನೋಡಿ ಕಣ್ಣೊಡೆದರು. ಹುಟ್ಟು ತರ್ಲೆ ನಮ್ಮಪ್ಪ.

“ಹೌದೌದು ಏಗ್ತಿರೋದು ನಾನು. ಹೇಳ್ಕೊಳ್ಳೋದು ಇವರು” ಅಮ್ಮ ಹುಸಿಮುನಿಸು ತೋರಿದರು.

‘ಥೂ ಥೂ. ಮದುವೆಯಾಗಿ ಮೂವತ್ತು ವರ್ಷ ಆದ್ರೂ ನಿಮ್ಮ ಕಷ್ಟ ಸುಖಾನೇ ಕೇಳ್ಬೇಕಾ? ಶಶಿ ವಿಷಯ ನಾನು ಹೇಳಿದ್ದು’

“ಏನ್ ಅರ್ಜೆಂಟು ಮುಂದಿನ ವರ್ಷದಿಂದ ಹುಡುಕಿದರಾಯಿತು”

‘ಎಲ್ಲಾ ನೀವೇ ಹೇಳಿದ್ರೆ ಹೇಗೆ? ಅವನ ಮಾತು ಕೇಳ್ಬಾರ್ದ?’

“ಅವನಿಗೇನ್ ಈಗ್ಲೇ ಮದ್ವೆ ಆಗ್ಬೇಕಂತೋ. ಏನಪ್ಪಾ ದೊರೆ ಮದ್ವೆ ಆಗ್ತೀಯೋ? ರೆಡೀನಾ ಯುದ್ಧಕ್ಕೆ”

“ಹ್ಞೂ”

“ಪರವಾಗಿಲ್ವೇ. ನಾವೇನೋ ಇನ್ನೂ ಚಿಕ್ಕ ಹುಡುಗ ಅಂದ್ಕೊಂಡಿದ್ದೋ. ಮದ್ವೆಗೆ ರೆಡಿಯಾಗಿಬಿಟ್ಟಿದ್ದಾನೆ. ಹುಡುಕೋದಿಕ್ಕೆ ಶುರು 
ಮಾಡಿ ಬಿಡೋಣ ಬಿಡು ಹಂಗಾದ್ರೆ” ಖುಷಿಯಾಗಿ ಹೇಳಿದರು ಅಪ್ಪ.

“ಮದ್ವೆಗೇನೋ ರೆಡಿಯಾಗಿದ್ದೀನಿ. ಹುಡುಕೋ ಅವಶ್ಯಕತೆಯಿಲ್ಲ” ಶಶಿ ಥಟ್ಟಂತ ಹೇಳಿದಾಗ ಅಪ್ಪನ ಖುಷಿ ಮಾಯವಾಗಿತ್ತು.

“ಅಂದ್ರೆ?” ಎಂದು ಕೇಳುವಷ್ಟರಲ್ಲಾಗಲೇ ಅಮ್ಮನ ಕಣ್ಣಿನಲ್ಲಿ ನೀರು ಜಿನುಗಲಾರಂಭಿಸಿತ್ತು. ಮುಂದೆ ನಡೆಯುವ ಮಾತುಕತೆಯನ್ನು ಊಹಿಸಲಾರಂಭಿಸಿದ್ದರು.

“ಅಂದ್ರೆ ಹುಡುಗಿ ಹುಡುಕೋ ತೊಂದರೆ ನಿಮಗೆ ಬೇಡಾಂತ ಹೇಳಿದೆ”

“ನೀನೇ ನೋಡ್ಕೊಂಡಿದ್ದಿಯೋ”

“ಹೌದು”

“ಮತ್ತೆ ನಮ್ಮನ್ಯಾಕೆ ಮದುವೆಗೆ ಕೇಳ್ತೀಯಪ್ಪ. ನಿನ್ನ ಪಾಡಿಗೆ ನೀನು ಮದುವೆಯಾಗಿಬಿಟ್ಟರಾಗುತ್ತಿತ್ತು”

“ಅವಳು ಒಪ್ಪಲಿಲ್ಲ ಅದಕ್ಕೆ. ಮನೆಯವರೆಲ್ಲ ಒಪ್ಪಿದ ಮೇಲೆಯೇ ಮದುವೆಯಾಗೋಣ ಅಂದಿದ್ದಾಳೆ”

“ಓಹೋಹೋ. ಸರಿನಪ್ಪ. ನಮ್ಮ ಮನೆಯಲ್ಲಿ ಒಪ್ಪಲಿಲ್ಲ ಅಂತ ಹೇಳಿಬಿಡು”

“ಹೇಳ್ತೀನಿ. ಮತ್ತೆ ನಾನು ಯಾರನ್ನು ಮದುವೆಯಾಗೋದಿಲ್ಲ ಅಷ್ಟೇ”

“ಹಂಗಾ. ಸರಿ. ಹುಡುಗಿ ಯಾವ ಜನ”

“ಹುಡುಗಿ ಯಾರು ಅಂತ ಕೇಳಲ್ವ?”

“ಯಾರಾದ್ರೆ ನನಗೇನು. ಯಾವ ಜನ ಅಂದೆ” ಅಪ್ಪನ ದನಿ ಸ್ಥಿಮಿತ ಕಳೆದುಕೊಳ್ಳಲಾರಂಭಿಸಿತ್ತು.

“ಗೌಡ್ರುಡುಗಿ”

“ಥೂ. ಥೂ. ಏನೋ ಬಂದಿರೋದು ನಿಮಗೆ. ನಿಮ್ಮಕ್ಕ ನೋಡುದ್ರೂ ಆ ಗೌಡ್ರುಡುಗನ ಲವ್ ಮಾಡುದ್ಲು. ನಿನಗೂ ಗೌಡ್ರುಡಿಗೀನೇ ಬೇಕಿತ್ತಾ? ನಿನಗಂದೇನು ಪ್ರಯೋಜನ ನಿಮ್ಮಕ್ಕನಿಗೆ ನಾಲಕ್ಕು ಬಾರಿಸಬೇಕು ಮೊದಲು. ಅವಳಿಂದ ನಮ್ಮ ಮರ್ಯಾದೆ ಅರ್ಧ ಹಾಳಾಗಿತ್ತು. ಮಿಕ್ಕರ್ಧ ಹಾಳು ಮಾಡೋಕೆ ನೀನು ಹುಟ್ಟಿದ್ದೀಯ. ಲೇ ಧರಣಿ ಎದ್ದೋಗೇ ಮೊದ್ಲು ಇಲ್ಲಿಂದ. ನೀನೇ ನನ್ನ ಮಗನ ತಲೆ ಕೆಡಿಸಿರಬೇಕು. ಅವನ ಪಾಡಿಗೆ ಅವನು ಇದ್ದವನು ಲವ್ ಗಿವ್ ಅಂತೆಲ್ಲ ಮಾಡ್ತಿರಲಿಲ್ಲ. ನಿನ್ನ ನೋಡಿ ನೋಡಿ ಅವನೂ ಹಾಳಾಗೋದ. ಎದ್ದೋಗು ಮನೆಯಿಂದ. ಇನ್ನೊಂದ್ಸಲ ಈ ಕಡೆ ಕಾಲು ಹಾಕಿದ್ರೆ ಕತ್ತರಿಸಿ ಹಾಕ್ತೀನಿ ಕತ್ತೆ ಮುಂಡೆ” ಅಪ್ಪನ ಕೋಪ ನನಗೇನು ಹೊಸದಲ್ಲ. ಅವರು ಬಯ್ಯುವಾಗ ನನ್ನ ಪಾಡಿಗೆ ನಾನು ಟಿವಿ ನೋಡುತ್ತ ಕುಳಿತಿದ್ದೆ.

“ಅಪ್ಪ. ಈ ವಿಷಯದಲ್ಲಿ ಅಕ್ಕನ ಬಗ್ಗೆ ಯಾಕೆ ಕೆಟ್ಟದಾಗಿ ಮಾತಾಡ್ತೀರ. ಅಕ್ಕನಿಗೂ ಇದಕ್ಕೂ ಸಂಬಂಧವಿಲ್ಲ. ಪ್ರೀತ್ಸಿರೋದು ನಾನು ಅವಳಲ್ಲ”

“ಅವಳೇ ಅಲ್ವೇನಪ್ಪ ಮೇಲ್ಪಂಕ್ತಿ ಹಾಕಿಕೊಟ್ಟಿರೋದು ನಿನಗೆ”

“ಅವಳ್ಯಾಕೆ ನನಗೆ ಮೇಲ್ಪಂಕ್ತಿ ಹಾಕ್ತಾಳೆ? ನನ್ನ ವಿಷಯ ಮಾತಾಡಿ ಅವಳ ಬಗ್ಗೆ ಮಾತಾಡಬೇಡಿ”

“ಹುಡುಗಿ ಎಸ್ಸಿಯಾಗಿದ್ರೆ ಒಪ್ತಿದ್ದೆ. ಗೌಡ್ರುಡುಗಿ ಸುತಾರಾಂ ಬೇಡ”

“ಯಾಕೆ ಬೇಡ ಗೌಡ್ರುಡುಗಿ?”

“ಬೇಡ ಅಂದ್ರೆ ಬೇಡ ಅಷ್ಟೇ. ಗೌಡ್ರುಡುಗಿ ಅಷ್ಟೇ ಅಲ್ಲ, ಬೇರೆ ಯಾವ ಜಾತಿಯ ಹುಡುಗಿಯಾದ್ರೂ ನಾನು ಒಪ್ಪುವುದಿಲ್ಲ”

“ಜಾತಿ ಜಾತಿ ಜಾತಿ. ನೀವು ಮದುವೆಯಾಗುವಾಗ ಎಲ್ಲಿಗೋಗಿತ್ತು ಜಾತಿ? ಆ ಕಾಲದಲ್ಲೇ ನೀವೇಗೆ ಗೌಡ್ರುಡುಗಿಯನ್ನು ಓಡಿಸಿಕೊಂಡು ಹೋಗಿ ಮದುವೆಯಾಗಿಬಿಟ್ಟಿರಿ? ನಿಮ್ಮ ಮದುವೆಗಿಲ್ಲದ ಜಾತಿ ನಮ್ಮ ಮದುವೆಗ್ಯಾಕೆ. ಲೆಕ್ಕ ನೋಡಿದ್ರೆ ನಾನು ಅರ್ಧ ಎಸ್.ಸಿ ಅರ್ಧ ಗೌಡ” ತೀರ ಇಷ್ಟೊಂದು ಕಠಿಣವಾಗಿ ಮಾತನಾಡಿಬಿಡುತ್ತಾನೆ ಶಶಿ ಎಂದು ಎಣಿಸಿರಲಿಲ್ಲ. ವಿಷಯದ ಚರ್ಚೆಗೆ ಮುಂಚೆಯೇ ಅಪ್ಪ ನನ್ನ ಬಗ್ಗೆ ಕಟುವಾಗಿ ಮಾತನಾಡಿದ್ದು ಕೇಳಿ ಮುಂದೆ ನಾನೇನು ಮಾತನಾಡಲಿಲ್ಲ. ವರುಷಗಳ ಹಿಂದೆ ಅನುಭವಿಸಿದ ಸಂಕಟಗಳನ್ನೇ ಇನ್ನೂ ಮರೆಯಲಾಗಿಲ್ಲ ನನಗೆ.

“ಅದಿಕ್ಕೆ ಕಣಪ್ಪ ಗೌಡ್ರುಡುಗಿ ಬೇಡ ಅನ್ತಿರೋದು. ನಿಮ್ಮಮ್ಮನ ಮದುವೆಯಾಗಿ ಅವರ ಮನೆಯವರಿಂದ ನಾನು ನನ್ನ ಮನೆಯವರು ಅನುಭವಿಸಿರುವ ಅವಮಾನ ನನಗೆ ಗೊತ್ತು. ನಾವು ಮನುಷ್ಯರೇ ಅಲ್ಲ ಅನ್ನೋ ತರ ಕೀಳಾಗಿ ನೋಡೋ ಅವರ ಸಂಬಂಧ ಬೆಳೆಸುವ ದರ್ದು ನಮಗ್ಯಾಕೆ? ನಮ್ಮಲ್ಲೇನು ಹೆಣ್ಣುಮಕ್ಕಳಿಲ್ಲವೇ” ಅಮ್ಮನ ಕಣ್ಣೀರು ಜೋರಾಗಿತ್ತು. ಏನೊಂದು ಮಾತನಾಡದೆ ರೂಮಿಗೆ ಹೋದರು. ನಾನೂ ಅಮ್ಮನ ಹಿಂದೆ ರೂಮಿಗೆ ಹೋದೆ.

‘ಸುಮ್ನಿರಮ್ಮ ಅಳಬೇಡ. ಅಪ್ಪನ ಬುದ್ಧಿ ಗೊತ್ತಿಲ್ವ ನಿನಗೆ. ಕೋಪದಲ್ಲೇನೋ ಹೇಳ್ತಾರೆ. ಆಮೇಲೆ ಅವರೇ ಕ್ಷಮಿಸಿಬಿಡು ಡಾರ್ಲಿಂಗ್ ಅಂತಾರೆ’ ಎಂದ್ಹೇಳಿ ನಕ್ಕೆ, ನಗುವ ಪ್ರಯತ್ನ ಮಾಡಿದೆ.

ಅಳುವಿನಲ್ಲೂ ಅಮ್ಮ ಒಮ್ಮೆ ನಕ್ಕರು. “ನಾನು ಅಳ್ತಿರೋದು ಅವರು ನನ್ನನ್ನೋ ನನ್ನ ತವರನ್ನೋ ಬಯ್ದರು ಅನ್ನೋ ಕಾರಣಕ್ಕಲ್ಲ ಕಣೇ. ನನ್ನ ಮನೆಯವರು ಅವರಿಗೆ ಅವಮಾನ ಮಾಡಿರೋದನ್ನ ನಾನು ಕಣ್ಣಾರೆ ಕಂಡಿದ್ದೇನೆ. ಅಂತಹ ಅವಮಾನ ಮಾಡುವ ಮನಸ್ಸು ಮನುಷ್ಯ ಮಾತ್ರದವನಿಗೆ ಬರಬಾರದು. ನಾನು ಅಳ್ತಿರೋದು ನಿಮ್ಮಿಬ್ಬರಿಗೋಸ್ಕರ. ನಮ್ಮೊಟ್ಟೇಲಿ ಹುಟ್ಟಿ ನೀವು ಪಾಪ ಮಾಡಿಬಿಟ್ಟಿರಿ. ನಾನು ಯಾರದ್ರೂ ಗೌಡರ ಹುಡುಗನನ್ನೇ ಮದುವೆಯಾಗಿದ್ದರೆ ನಿಮಗೀ ಪರಿಸ್ಥಿತಿ ಬರುತ್ತಿರಲಿಲ್ಲ ಅಲ್ಲವಾ?”

‘ಸುಮ್ನಿರಮ್ಮ. ದಡ್ಡಿ ಥರ ಮಾತಾಡ್ ಬೇಡ. ನೀನು ಬೇರೆಯರನ್ನ ಮದುವೆಯಾಗಿದ್ದರೆ ನಾವಿಬ್ಬರು ಎಲ್ಲಿ ಹುಟ್ಟುತ್ತಿದ್ದೋ. ಇನ್ಯಾರೋ ಇಬ್ಬರು ಹುಟ್ಟುತ್ತಿದ್ದರಷ್ಟೇ. ಏನೇನೋ ಮಾತನಾಡಬೇಡ ನೀನು’ ಅಮ್ಮನ ಮಡಿಲಲ್ಲಿ ಮಲಗಿ ಕಣ್ಣೀರಾದೆ.

ಹೊರಗೆ ಒಂದಷ್ಟು ಹೊತ್ತು ಮೌನವಿತ್ತು.

“ಹಿಂದಿನ ಕಾಲದ ಥರ ಜಾತಿ ಅವಮಾನ ಎಲ್ಲಾ ಇಲ್ಲ ಈಗ. ಇದ್ರೂ ಎಲ್ಲೋ ಕಾಡುಹಳ್ಳೀಲಿ ಇರುತ್ತೆ ಅಷ್ಟೇ”

“ಬಾಳಾ ಕಂಡುಬಿಟ್ಟಿದ್ದಾನೆ ಪ್ರಪಂಚಾನ. ಸಿಟಿ ಸ್ಕೂಲಲ್ಲಿ ಎಲ್ಲರೂ ಜೊತೆಗೆ ಓದಿ ಊಟ ಮಾಡಿಬಿಟ್ಟಾಕ್ಷಣ ಜಾತಿ ಬಿಟ್ಟೋಯ್ತು ಅನ್ಕೋಬೇಡ. ನಮ್ ಮನೆಗೆಲಸಕ್ಕೆ ಕೆಲಸದವರು ಸಿಗೋದು ಎಷ್ಟು ಕಷ್ಟ ಅಂತ ನಿಮ್ಮಮ್ಮನ್ನ ಕೇಳು. ಇರೋ ಒಡವೇನೆಲ್ಲ ಮಾರಿ, ಮೈತುಂಬಾ ಸಾಲ ಮಾಡ್ಕೊಂಡು ಈ ಮನೆ ಕಟ್ಸಿದ್ದು ಯಾಕೆ ಗೊತ್ತೇನೋ ನಿನಗೆ? ಗೊತ್ತಾ? ಎಸ್.ಸಿಗಳು ಅಂದ್ರೆ ನೆಟ್ಟಗೆ ಮನೇನೂ ಕೊಡಲ್ಲ ಇಲ್ಲಿ. ನನ್ ಮಾತಲ್ಲಿ ನಂಬಿಕೆ ಇಲ್ಲದೇ ಇದ್ರೆ ನಿಮ್ಮಮ್ಮನ್ನೇ ಕೇಳು ಮನೆ ಹುಡುಕೋಡು ಎಷ್ಟು ಕಷ್ಟವಾಗುತ್ತಿತ್ತೂ ಅಂತ. ಹಳೆ ಮಾತು ಬಿಡು. ನಮ್ ಪಕ್ಕದ್ ಮನೆ ರಾಮೇಗೌಡ್ರು ಮನೆಯವ್ರು. ಅತ್ತಕಡೆ ಇರೋ ಲಿಂಗಾಯತರ ಮನೆಯಿಂದ ಹಬ್ಬದ ತಿಂಡಿ ಎಲ್ಲಾ ಈಸ್ಕೋತಾರೆ. ನಮ್ ಮನೇದೂ ಈಸ್ಕೋತಾರೆ ಕಸಕ್ಕೆ ಹಾಕೋಕೆ. ಈ ಅವಮಾನವೆಲ್ಲ ನನ್ನ ಮಕ್ಕಳಿಗೆ ಬೇಡ ಅಂತ ತಾನೇ ನಾನು ಬಡ್ಕೋತಿರೋದು”

ಶಶಿ ಏನೂ ಮಾತನಾಡದೆ ಹೊರಗೆ ಹೋದ ಸದ್ದು ಕೇಳಿಸಿತು. ಬೈಕು ಸ್ಟಾರ್ಟಾಯಿತು.

“ಇಲ್ಲಿ ನಾನು ವಟವಟ ಅಂತ ಮಾತಾಡ್ತಿದ್ರೆ ಎಲ್ರೂ ಒಬ್ಬೊಬ್ಬರಾಗಿ ಹೋಗೇಬಿಟ್ರು. ಕೊನೆಗೆ ಎಲ್ಲಾ ತಪ್ಪೂ ನಂದೇ ಅಂತ ಮಾಡಬೇಕಲ್ಲ” ಸಿಟ್ಟಿನಿಂದ ರಿಮೋಟು ನೆಲಕ್ಕೆಸೆದರು. ನನ್ನ ಮದುವೆಗೆ ಮುಂಚೆ ಹೊಸ ರಿಮೋಟು ತರಲಾಗಿತ್ತು.
ಮೆಲ್ಲಗಿನ ದನಿಯಲ್ಲಿ “ಇದೇನೇ ಹೊರಟೇ ಬಿಟ್ಟ ಶಶಿ” ಅಂದರು ಅಮ್ಮ.

‘ಬರ್ತಾನೆ ಬಿಡಮ್ಮ. ಎಲ್ಲಿಗೋಗ್ತಾನೆ’

“ಹುಡುಗಿ ಯಾರು ಅಂತ ಗೊತ್ತ ನಿನಗೆ”

‘ರಾಮೇಗೌಡ್ರ ಮಗಳು’

“ಯಾರು? ನಮ್ ಸೋನಿಯಾನೇ. ಮುದ್ದಾಗಿದ್ದಾಳೆ. ಇವನಿಗೆ ಸರಿಯಾದ ಜೋಡಿ” ಹೇಳಬಾರದ್ದನ್ನೇನೋ ಹೇಳಿದಂತೆ ತುಟಿ ಕಚ್ಚಿಕೊಂಡರು ಅಮ್ಮ. ನಾನು ಸುಮ್ಮನೆ ನಕ್ಕು ಅಮ್ಮನ ಸೊಂಟವನ್ನು ಗಟ್ಟಿಯಾಗಿ ತಬ್ಬಿಕೊಂಡೆ. ಮನದ ತುಂಬ ಭಾವನೆಗಳ ಒಡಕಲು ಬಿಂಬ.

ಮುಂದಿನ ಭಾಗವನ್ನು ಓದಲು ಇಲ್ಲಿ ಕ್ಲಿಕ್ಕಿಸಿ. 

No comments:

Post a Comment