Feb 10, 2019

ಒಂದು ಬೊಗಸೆ ಪ್ರೀತಿ - 5

ಡಾ. ಅಶೋಕ್. ಕೆ. ಆರ್
ಒಂದು ಬೊಗಸೆ ಪ್ರೀತಿಯ ಹಿಂದಿನ ಅಧ್ಯಾಯಗಳನ್ನು ಓದಲು ಇಲ್ಲಿ ಕ್ಲಿಕ್ಕಿಸಿ. 

ಮೀನು ಸಾರು ತಿನ್ನದೆ ಮನೆಗೆ ವಾಪಸ್ಸಾದೆ. ತಿನ್ನಮ್ಮ ಎಂದು ಹೇಳುವ ಮನಸ್ಸು ಯಾರಿಗೂ ಇರಲಿಲ್ಲ. ತಿನ್ನುವ ಮನಸ್ಸು ನನಗೂ ಇರಲಿಲ್ಲ. ರಾಜೀವ್ ಹೊರಗೆ ಸಿಗರೇಟ್ ಸುಡಲು ಹೋಗಿದ್ದರು. ಬಾಗಿಲು ತೆರೆದು ಸೋಫಾ ಮೇಲೆ ಮಲಗಿದೆ. ರಾಜೀವ್ ಫೋನಿನಲ್ಲಿ ಯಾರೊಡನೆಯೋ ಖುಷಿಖುಷಿಯಾಗಿ ಮಾತನಾಡುತ್ತಾ ಬರುತ್ತಿದ್ದರು. ಮನೆ ಬಾಗಿಲು ತೆಗೆದಿದ್ದನ್ನು ಕಂಡು ‘ಆಮೇಲೆ ಮಾಡ್ತೀನಿ’ ಅಂತ್ಹೇಳಿ ಫೋನ್ ಕಟ್ ಮಾಡಿದರು. ನನ್ನ ಮುಂದೆ ಅವರು ಮಾತನಾಡದೇ ಇರುವುದು ಅಶ್ವಿನಿಯೊಂದಿಗೆ ಮಾತ್ರ. ಅದು ನನಗೂ ಗೊತ್ತಿತ್ತು. ಎಲ್ಲರ ವಿಷಯಾನೂ ನನ್ನ ಬಳಿ ಹೇಳ್ತಾರೆ ಆದರೆ ಅಶ್ವಿನಿ ವಿಷಯ ಮಾತ್ರ ಯಾವೊತ್ತಿಗೂ ಮಾತನಾಡುವುದಿಲ್ಲ. ಹಂಗಂತ ಅವರ ಮೇಲೆ ಅನುಮಾನವೇನೂ ಇಲ್ಲ ನನಗೆ. ಸ್ವಲ್ಪ ಜಾಸ್ತೀನೇ ಕ್ಲೋಸ್ ಫ್ರೆಂಡ್, ಬಹುಶಃ ನಮ್ಮಿಬ್ಬರ ನಡುವಿನ ಜಗಳವನ್ನೂ ಹೇಳಿಕೊಳ್ಳುವಷ್ಟು ಕ್ಲೋಸ್. ಹಾಗಾಗಿ ನನ್ನ ಮುಂದೆ ಮಾತನಾಡುವುದಿಲ್ಲವೇನೋ ಎಂದುಕೊಂಡು ಸುಮ್ಮನಾಗಿದ್ದೆ. ಕೆಣಕಲು ಹೋಗಿರಲಿಲ್ಲ. ಸೋಫಾದ ಮೇಲೆ ಮಲಗಿ ತಾರಸಿ ನೋಡುತ್ತಿದ್ದವಳನ್ನು ಗಮನಿಸಿಯೇ ಅವರಿಗೆ ವಿಷಯದ ಅರಿವಾಗಿರಬೇಕು.

“ಬಯ್ಯಿಸಿಕೊಂಡು ಬಂದ”

‘ನಿಮಗೇಗ್ ಗೊತ್ತು’

“ನಿಮ್ಮಪ್ಪ ಬಯ್ದಾಗ ಉಪ್ ಅಂತಿರೋ ನಿನ್ನ ಮುಖ ನೋಡಿದ್ರೆ ಗೊತ್ತಾಗಿಬಿಡುತ್ತೆ ಡಾರ್ಲಿಂಗ್. ಯಾವ ವಿಷಯಕ್ಕೆ ಬಯ್ದರು”

‘ಶಶಿ – ಸೋನಿಯಾ ವಿಷಯ’
ಒಂದೊಂದೇ ಎಪಿಸೋಡು ಹುಡುಕುಡುಕಿ ಓದೋಕೆ ಬೇಸರವಾ? ಪೂರ್ತಿ ಇ - ಪುಸ್ತಕ ತೆಗೆದುಕೊಳ್ಳಲು ಇಲ್ಲಿ ಕ್ಲಿಕ್ಕಿಸಿ.


“ಅದಕ್ಕೆ ಬೇಜಾರಾಗೋದು ಏನಿದೆ? ಅನಿರೀಕ್ಷಿತವಾದರೆ ಬೇಜಾರಾಗಬೇಕಪ್ಪ. ಶಶಿ – ಸೋನಿಯಾ ವಿಷಯ ತಿಳಿದ ತಕ್ಷಣ ನಿಮ್ಮಪ್ಪ ಯಾವ ರೀತಿಯೆಲ್ಲ ವರ್ತಿಸುತ್ತಾರೆ ಅನ್ನೋದು ನಿನಗೆ ತಿಳಿಯದ ವಿಷಯವೇನಲ್ಲವಲ್ಲ. ಅದಕ್ಯಾಕೆ ಬೇಜಾರು ಮಾಡ್ಕೋತೀಯ ನಡಿ ನಡಿ. ಯಾವ್ದಾದ್ರೂ ಫಿಲಮ್ಮಿಗೆ ಹೋಗೋಣ”

‘ಯಾವ್ದಿದೆ?’

“ಜಸ್ಟ್ ಮಾತ್ ಮಾತಲ್ಲಿ ಪರ್ವಾಗಿಲ್ಲ ನೋಡ್ಬಹುದು ಅಂತಿದ್ದ ನನ್ನ ಫ್ರೆಂಡು. ಹೋಗೋಣ್ವಾ?”

‘ಯಾರ್ ಫಿಲಮ್ಮ’

“ರಮ್ಯಾ ಹೀರೋಯಿನ್ನು”

‘ಬರಲ್ಲಪ್ಪ’

“ರಮ್ಯಾ ಅಂದ್ರೆ ನಿಮಗೇನ್ ಹೊಟ್ಟೆ ಉರೀನೋ. ಹೀರೋ ಸುದೀಪು”

‘ಹೌದಾ! ಹಂಗಾದ್ರೆ ನಡೀರಿ ಹೋಗೋಣ’

“ಆಹಾ! ನೋಡ್ದಾ ಸಂಭ್ರಮಾನ. ರೆಡಿಯಾಗು ಹೋಗೋಣ” ನಗುತ್ತಾ ಹೇಳಿದರು.
* * * *

ಸಣ್ಣದಾಗಿ ಮಳೆ ಜಿನುಗುತ್ತಿತ್ತು. ಬೇಸಿಗೆಯ ಮೊದಲ ಮಳೆ. ನೈಟ್ ಡ್ಯೂಟಿ ಇತ್ತು. ಇಂತಹ ಮಳೆಯಲ್ಲಿ ಗಂಡನನ್ನು ತಬ್ಬಿ ಮಲಗೋದು ಬಿಟ್ಟು ಇದ್ಯಾವುದಿದು ಕರ್ಮ ಡ್ಯೂಟಿಗೋಗೋದು ಎಂದು ಬೇಸರವಾಗಿತ್ತು. ಏಳು ಘಂಟೆಗೆಲ್ಲ ಊಟ ಮುಗಿಸಿ ಗಂಡನಿಗೊಂದು ದೀರ್ಘ ಚುಂಬನ ಕೊಟ್ಟು ಹೊರಟೆ. ಮಳೆಯೆಂದರೆ ನನಗೆ ಮುಂಚಿನಿಂದಾನೂ ಅಚ್ಚುಮೆಚ್ಚು. ಮಳೆಯಲ್ಲಿ ನೆನೆಯುತ್ತ ಸ್ಕೂಟರ್ ಓಡಿಸುವುದೆಂದರೆ ಪ್ರಾಣ. ಈಗ ಅದೆಲ್ಲ ಮಾಡುವುದಕ್ಕಾಗುತ್ತದೆಯೇ. ತೆಪ್ಪಗೆ ಕಾರಿನೊಳಗೆ ಕುಳಿತು ಹೊರಟೆ. ಆರ್.ಬಿ.ಐನ ಆಸ್ಪತ್ರೆಯಲ್ಲಿ ನೈಟ್ ಡ್ಯೂಟಿ ಆರಾಮು. ಬರೋರು ತುಂಬಾ ಕಡಿಮೆ. ಬೇಸಿಗೆಯಾದ್ದರಿಂದ ಅಲ್ಲಿ ಇಲ್ಲಿ ತಿಂದು ವಾಂತಿ ಭೇದಿ ಅಂತ ಬರೋರು ಜಾಸ್ತಿ. ಹೆಚ್ಚೆಂದರೆ ಒಂದು ಡ್ರಿಪ್ ಹಾಕಿಸಿ ಕಳುಹಿಸುತ್ತಿದ್ದೆ. ಈ ಗೂಗಲ್ಲಿನಲ್ಲಿ ಅರ್ಧಂಬರ್ಧ ಓದಿ ಚೂರೇಚೂರು ಅರ್ಥ ಮಾಡಿಕೊಂಡು ತಲೆತಿನ್ನೋ ರೋಗಿಗಳನ್ನು ಆ್ಯಂಬುಲೆನ್ಸಿನಲ್ಲಿ ನಮ್ಮ ಮೇನ್ ಆಸ್ಪತ್ರೆಗೆ ಸಾಗಿಸಿಬಿಡುತ್ತಿದ್ದೆ. ಅದು ಬಿಟ್ಟರೆ ಹೊಟ್ಟೆನೋವು, ಎದೆ ನೋವು ಎಂದು ಬರುತ್ತಿದ್ದರು. ಪೂರ್ತಿ ಔಷಧಗಳು ಗೊತ್ತಿದ್ದರೂ ಎದೆನೋವು ಹೊಟ್ಟೆನೋವಿನ ರೋಗಿಗಳಿಗೆಲ್ಲ ಪ್ರಥಮ ಚಿಕಿತ್ಸೆ ಕೊಟ್ಟು ಕಳುಹಿಸಿಬಿಡಬೇಕು ಎನ್ನುವುದು ನಮ್ಮ ಆಸ್ಪತ್ರೆಯ ನಿಯಮ. ಗೊತ್ತಿದ್ರೂ ಗೊತ್ತಿಲ್ಲದಂತೆ ಕಳುಹಿಸಿಬಿಡುವುದು ಕೆಲವೊಮ್ಮೆ ಬೇಸರಕ್ಕೆ ಕಾರಣವಾಗುತ್ತಿತ್ತು; ಕೆಲವೊಮ್ಮೆ ಸರಿ ಎನ್ನಿಸುತ್ತಿತ್ತು. ನಮಗಿಂತ ತಿಳಿದವರು ಇರಬೇಕಾದರೆ ಸುಖಾಸುಮ್ಮನೆ ಯಾಕೆ ರೋಗಿಗಳ ಜೀವದೊಡನೆ ಆಟವಾಡಬೇಕು ಎಂದು. ಈ ಕಾರ್ಪೊರೇಟ್ ಆಸ್ಪತ್ರೆಗಳಲ್ಲಿ ಇಲ್ಲಸಲ್ಲದ ಭೀತಿಗಳನ್ನೆಲ್ಲ ಹುಟ್ಟಿಸಿ ರೋಗಿಗಳನ್ನು ಅಕ್ಷರಶಃ ಸುಲಿಯುತ್ತಿದ್ದರು. ಕಂಡೂ ಕಾಣದಂತೆ ನಾವು ಸುಮ್ಮನಿರಬೇಕಿತ್ತು. ರೋಗಿಗಳು ಅದರ ಬಗ್ಗೆ ಪ್ರಶ್ನಿಸಿದರೆ ಆಸ್ಪತ್ರೆಯ ಪರವಾಗೇ ಮಾತನಾಡಬೇಕು; ಹೊಟ್ಟೆ ಪಾಡು. ಕೆಲವೊಮ್ಮ ಅನ್ನಿಸಿಬಿಡುತ್ತೆ. ಈ ಆಸ್ಪತ್ರೆಯವರಿಗೆಲ್ಲ ಗೊಡ್ಡು ಸಲಾಮು ಹೊಡೆದುಕೊಂಡು ಇರೋದಕ್ಕಿಂತ ಎಲ್ಲಾದರೂ ಒಂದು ಕ್ಲಿನಿಕ್ ಇಟ್ಟುಕೊಂಡರೆ ಜೀವನ ನಡೆದುಹೋಗುತ್ತಲ್ಲ ಅಂತ. ಕಾರು ಲೋನು, ಮನೆ ಖರ್ಚುಗಳನ್ನೆಲ್ಲ ನೆನೆಸಿಕೊಂಡಾಗ ತಿಂಗಳ ಮೊದಲ ದಿನ ನಿಯಮಿತವಾಗಿ ದುಡ್ಡು ಬರುವ ಕೆಲಸವೇ ಒಳ್ಳೆಯದು ಎಂದು ಸುಮ್ಮನಾಗುತ್ತೇನೆ. ಯಾವುದಾದರೂ ಪಿ.ಜಿ ಮಾಡ್ಕೊಂಡು ಈ ಡ್ಯೂಟಿ ಡಾಕ್ಟರ್ ಕೆಲಸದಿಂದ ಮೊದಲು ಪಾರಾಗಬೇಕು ಎಂದು ಎರಡು ವರುಷದಿಂದ ಅಂದುಕೊಳ್ಳುತ್ತಲೇ ಇದ್ದೀನಿ. ಇನ್ನೂ ಸಾಧ್ಯವಾಗಿಲ್ಲ. ಎಲ್ಲಾ ನಾನು ಮಾಡಿದ ತಪ್ಪುಗಳ ಕಾರಣದಿಂದ. ಅವೆಲ್ಲಾ ತಪ್ಪುಗಳೆಂದು ಅಂದುಕೊಳ್ಳುವುದೂ ತಪ್ಪೆನ್ನಿಸುತ್ತೆ ಕೆಲವೊಮ್ಮ.

“ಏನ್ ಡಾಕ್ಟ್ರೇ ಏನೋ ಗಂಭೀರ ಯೋಚನೆಯಲ್ಲಿ ಬಿದ್ದಿದ್ದೀರಾ ಅನ್ನಿಸುತ್ತೆ” ನೈಟ್ ನರ್ಸ್ ರೋಷನ್ ನಗುತ್ತಾ ಹೇಳಿದಾಗ ಯೋಚನಾ ಲಹರಿಯಿಂದ ಹೊರಬಂದೆ.

‘ಏನಿಲ್ಲ. ಇರುತ್ತಲ್ಲ. ಅದೂ ಇದೂ’

“ನಮ್ ರಾಜೀವ್ ಸರ್ ಹೇಗಿದ್ದಾರೆ. ಸುಮಾರು ದಿನವಾಯ್ತು ಸಿಕ್ಕಿ ಅವರು”

‘ಮ್. ಚೆನ್ನಾಗಿದ್ದಾರೆ’

ಡಾಕ್ಟ್ರಿಗೆ ಇವತ್ತು ಮಾತಾಡೋ ಮೂಡ್ ಇಲ್ಲ ಎಂದು ಅರಿವಾಗಿ ರೋಷನ್ ಹೊರಗೋಗಿ ಆಂಬ್ಯುಲೆನ್ಸ್ ಡ್ರೈವರ್ ಜೊತೆ ಹರಟುತ್ತಾ ಕುಳಿತುಕೊಂಡ.

ಮಳೆ ಜೋರಾಗಿತ್ತು. ಇನ್ನು ಈ ಮಳೆಯಲ್ಲಿ ರೋಗಿಗಳು ಬರೋದು ಅಷ್ಟರಲ್ಲೇ ಇದೆ. ನನ್ನ ರೂಮಿಗೆ ಹೊಂದುಕೊಂಡಂತೆಯೇ ನೈಟ್ ಡ್ಯೂಟಿ ಡಾಕ್ಟರ್ ಮಲಗುವ ಕೋಣೆ. ಹೋಗಿ ಮಲಗಿಬಿಡೋಣ ಎಂದುಕೊಂಡು ಸಮಯ ನೋಡಿದೆ. ಇನ್ನೂ ಎಂಟೂ ಮೂವತ್ತು. ಇಷ್ಟು ಬೇಗ ನಿದ್ದೇನೂ ಬರಲ್ಲ. ಆನ್ ಆಗಿದ್ದ ಕಂಪ್ಯೂಟರಿನಲ್ಲಿ ಫೇಸ್ ಬುಕ್ ಪುಟ ತೆರೆದು ಲಾಗಿನ್ ಆದೆ. ಹೊಸ ಮೆಸೇಜು ಬಂದಿರುವುದನ್ನು ಐಕಾನ್ ಸೂಚಿಸುತ್ತಿತ್ತು. ಐಕಾನ್ ಮೇಲೆ ಕ್ಲಿಕ್ ಮಾಡಿದೆ. ಸಾಗರ್ ಮೆಸೇಜು ಕಳಿಸಿದ್ದ. ಶಶಿ – ಸೋನಿಯಾ ಗಲಾಟೆಯ ನಡುವೆ ನಾನವನಿಗೆ ಮೆಸೇಜು ಕಳಿಸಿದ್ದು, ಅವನದಕ್ಕೆ ರಿಪ್ಲೈ ಮಾಡದೇ ಆಫ್ ಲೈನ್ ಆಗಿದ್ದು, ನಾನು ಸಾರಿ ಕೇಳಿದ್ದೆಲ್ಲವೂ ಮರೆತೇ ಹೋಗಿತ್ತು.

“ನಾನ್ ಚೆನ್ನಾಗಿದ್ದೀನಿ. ನೀನು ಹೇಗಿದ್ದೀಯ” “ಡಿಸ್ಟರ್ಬೆನ್ಸೆಲ್ಲ ಏನೂ ಇಲ್ಲ. ವಾರ್ಡಿಂದ ಕಾಲ್ ಬಂದಿತ್ತು. ಹಾಗಾಗಿ ಲಾಗ್ ಆಫ್ ಆದೆ ಅಷ್ಟೇ” ಎಂದು ರಿಪ್ಲೈ ಮಾಡಿದ್ದ.

ಆನ್ ಲೈನ್ ಇದ್ದಾನ ನೋಡಿದೆ. ಇದ್ದ.

‘ನಾನು ಚೆನ್ನಾಗಿದ್ದೀನಿ’ ಎಂದು ಮೆಸೇಜಿಸಿದೆ. ಕ್ಷಣ ಬಿಟ್ಟು ‘ಥ್ಯಾಂಕ್ಸ್’ ಎಂದು ಕಳುಹಿಸಿದೆ.

“????” ಪ್ರಶ್ನೆಗಳನ್ನು ಕಳುಹಿಸಿದ. ‘ಇಷ್ಟು ವರುಷವಾದರೂ ನೆನಪಿಟ್ಟುಕೊಂಡು ಫೇಸ್ ಬುಕ್ಕಿನಲ್ಲಿ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿದೆಯಲ್ಲ ಅದಕ್ಕೆ ಥ್ಯಾಂಕ್ಸ್’

“ಅದಕ್ಯಾಕೆ ಥ್ಯಾಂಕ್ಸ್? ಫ್ರೆಂಡ್ ರಿಕ್ವೆಸ್ಟಿನಲ್ಲಿ ನಿನ್ನ ಹೆಸರನ್ನು ಫೇಸ್ ಬುಕ್ಕೇ ತೋರಿಸಿತು. ಕ್ಲಾಸ್ ಮೇಟ್ ಅಲ್ವ ಅಂತ ಕಳುಹಿಸಿದೆ” ನಾನೇನ್ ಹುಡುಕಿಲ್ಲ ಮೇಡಮ್ ಎಂದು ಮುಖಕ್ಕೆ ಹೊಡೆದಂತೆ ಹೇಳಿದ. ಅಯ್ಯಪ್ಪ ಅಂದುಕೊಂಡು ‘ಹಾಗಾದ್ರೆ ಹಳೆಯ ಕ್ಲಾಸ್ ಮೇಟಿಗೆ ಫ್ರೆಂಡ್ ರಿಕ್ವೆಸ್ಟ್ ಕಳುಹಿಸುವಂತೆ ಮಾಡಿದ ಫೇಸ್ ಬುಕ್ಕಿಗೆ ಥ್ಯಾಂಕ್ಸ್ ಹೇಳಬೇಕು’

“ಹ್ಹ ಹ್ಹ. ಅದು ಕರೆಕ್ಟೂ” ಸದ್ಯ ಎಂದುಕೊಂಡು ಸಮಾಧಾನ ಮಾಡಿಕೊಂಡೆ.

‘ನೀನೀಗ ಎಲ್ಲಿರೋದು’

“ಮಂಗಳೂರು”

‘ಓದ್ತಾ ಇದ್ದೀಯ’

“ಮ್. ಫಾದರ್ ಮುಲ್ಲರ್ಸ್ ನಲ್ಲಿ ಮೆಡಿಸಿನ್ ಮಾಡ್ತಿದ್ದೀನಿ”

“ನೀನು”

‘ನಾನಿಲ್ಲೇ ಮೈಸೂರಲ್ಲಿದ್ದೀನಿ. ಆರ್ ಬಿ ಐನಲ್ಲಿ “ಹೆಲ್ತ್ ಫಸ್ಟ್” ನವರದೊಂದು ಬ್ರ್ಯಾಂಚಿದೆ. ಅಲ್ಲಿ ಡ್ಯೂಟಿ ಡಾಕ್ಟರ್ ಆಗಿ ಕೆಲಸ ಮಾಡುತ್ತಿದ್ದೀನಿ’

“ಓಕೆ ಓಕೆ” ಮುಂದೆ ಏನು ಮೆಸೇಜು ಮಾಡಬೇಕೆಂದು ನನಗೆ ತಿಳಿಯಲಿಲ್ಲ. ಅವನಿಗೂ ತಿಳಿಯಲಿಲ್ಲವೆಂದು ಕಾಣುತ್ತೆ. ‘ನಿನ್ನ ಜೊತೆ ಮಾತನಾಡಿ ಖುಷಿಯಾಯಿತು’ ಒಂದು ಸ್ಮೈಲಿ ಕಳುಹಿಸಿದ. ‘ಗುಡ್ ನೈಟ್’ ಎಂದು ಮೆಸೇಜು ಮಾಡಿದೆ. ಆನ್ ಲೈನ್ ಇದ್ದ. ರಿಪ್ಲೈ ಮಾಡಲಿಲ್ಲ. ಯಾಕೋ ಅವನ ಪ್ರೊಫೈಲ್ ಪೂರ್ತಿ ನೋಡಬೇಕೆನ್ನಿಸಿತು. ಕ್ಲಿಕ್ ಮಾಡಿದೆ. ತುಂಬಾ active ಇಲ್ಲ ಫೇಸ್ ಬುಕ್ಕಿನಲ್ಲಿ. ಅಪರೂಪಕ್ಕೆ ಯಾವುದಾದರೂ ನ್ಯೂಸನ್ನೋ ಗೆಳೆಯರ ಕವಿತೆಯನ್ನೋ ಶೇರ್ ಮಾಡಿದ್ದಾನಷ್ಟೇ. ಅಲ್ಲಿ ಇಲ್ಲಿ ಪುಸ್ತಕಗಳಲ್ಲಿ ಓದಿರುವ ಕೆಲವೊಂದು ನುಡಿಮುತ್ತುಗಳಿವೆ. ಅವರಿವರ ಪ್ರೊಫೈಲಿನಲ್ಲಿ ಅಪರೂಪಕ್ಕೆ ಕಮೆಂಟ್ ಹಾಕಿದ್ದಾನೆ. ಪ್ರೊಫೈಲ್ ಫೋಟೋ ಕ್ಲಿಕ್ ಮಾಡಿದೆ. ಸಮುದ್ರದ ಅಲೆಗಳಿಗೆ ಮುಖವೊಡ್ಡಿ ಕುಳಿತಿರುವ ಚಿತ್ರವೇ ಇದೆ ಇನ್ನೂ. ಲೈಕ್ ಒತ್ತಿದೆ. ಹಳೆಯ ಫೋಟೋಗಳನ್ನು ನೋಡಿದೆ. ಮಂದಾಲಪಟ್ಟಿ ಬೆಟ್ಟದ ಮೇಲೆ ಬಂಡೆಯಿಂದ ಮೇಲೆ ಹಾರುತ್ತಿರುವ ಫೋಟೋ ಇದೆ. ಲೈಕ್ ಒತ್ತಿ, ಚೆನ್ನಾಗಿದೆ ಜಾಗ ಎಂದು ಕಮೆಂಟಿಸಿದೆ. ಎಂ.ಬಿ.ಬಿ.ಎಸ್ ಕಾಲದ ಗೆಳೆಯರ ಜೊತೆಗಿರುವ ಫೋಟೋ ಒಂದಿದೆ. ನೆಟ್ಟಗೆ ನಿಂತು ಕ್ಯಾಮೆರಾಕ್ಕೆ ಪೋಸ್ ಕೊಟ್ಟಿರುವ ಫೋಟೋ ಒಂದೇ ಒಂದಿದೆ. ಲೈಕ್ ಒತ್ತಿದೆ. ಹೆಚ್ಚು ಕಮ್ಮಿ ಆರಡಿ ಇದ್ದಾನೆ. ಜಿಮ್ಮಿಗೆ ಹೋಗಿರುವ ಬಾಡಿ ಎಂದು ಅವನು ನಿಂತಿರುವ ಭಂಗಿಯಿಂದಲೇ ಹೇಳಿಬಿಡಬಹುದು. ಬಲಿಷ್ಟ ತೋಳುಗಳು, ವಿಶಾಲ ಎದೆ, ಗೋಧಿ ಮೈಬಣ್ಣ, ಜಿಮ್ಮು ಬಿಟ್ಟು ಕೆಲವು ವರುಷಗಳಾಯಿತು ಎಂದು ತಿಳಿಸಲು ಚೂರೇ ಚೂರು ಇಣುಕುತ್ತಿರುವ ಹೊಟ್ಟೆ…… ಥೂ ಥೂ ನನಗೇನಾಯ್ತು ಇವತ್ತು. ಇಷ್ಟೊಂದು ವಿವರವಾಗಿ ಯಾಕೆ ಇವನ ಫೋಟೋ ಗಮನಿಸುತ್ತಿದ್ದೀನಿ ಎಂದು ಬಯ್ದುಕೊಂಡೆ. ಮತ್ತೊಮ್ಮೆ ಅವನ ಪ್ರೊಫೈಲ್ ಫೋಟೋಗಳನ್ನೆಲ್ಲಾ ನೋಡಬೇಕಿನ್ನಿಸಿತು. ನೋಡಲೋ ಬೇಡವೋ ಎಂದುಕೊಂಡು ಮತ್ತೆ ನೋಡಿದೆ. ಇಷ್ಟೊಂದ್ಯಾಕೆ ನೋಡ್ತಿದ್ದೀನಿ ಎಂದು ನಗುತ್ತ ಲಾಗ್ ಆಫ್ ಆದೆ. ಆಗುವ ಮುಂಚೆ ಮತ್ತೊಮ್ಮೆ ಫೋಟೋ ನೋಡಿದೆ. ಎಂ.ಬಿ.ಬಿ.ಎಸ್ ಸಮಯದಲ್ಲೇ ಇವನ ಪರಿಚಯ ಮಾಡಿಕೋಬೇಕು ಎಂದು ಬಹಳಷ್ಟು ಇಷ್ಟ ಪಟ್ಟಿದ್ದೆ. ಮೊದಲ ವರ್ಷದಲ್ಲೇನು ಅವನ ಬಗ್ಗೆ ತಿಳಿದಿರಲಿಲ್ಲ. ಮೂರನೇ ಬೆಂಚೋ ನಾಲ್ಕನೇ ಬೆಂಚಲ್ಲೋ ಕೂರ್ತಿದ್ದ. ನಾನು ಯಾವಾಗಲೂ ಕೊನೇ ಬೆಂಚು ಅಥವಾ ಕೊನೆಯಿಂದ ಎರಡನೆಯ ಬೆಂಚು. ಎರಡನೇ ವರ್ಷ ಇದ್ರೆ ಇಂಥ ಫ್ರೆಂಡ್ ಇರ್ಬೇಕು ಒಬ್ಬ ಎನ್ನಿಸಿದ್ದು ಗೆಳತಿಯೊಬ್ಬಳು ಕ್ಲಿನಿಕಲ್ ಪೋಸ್ಟಿಂಗ್ಸಿನಲ್ಲಿ ಅವನೊಮ್ಮ ನಡೆದುಕೊಂಡ ರೀತಿಯನ್ನು ಹೇಳಿದಾಗ. ಹೆಚ್ಚೇನು ಮಾತನಾಡುತ್ತಿರಲಿಲ್ಲ ಅವನು. ಅದೊಂದು ದಿನ ಆಸ್ಪತ್ರೆಯಲ್ಲಿ ರೋಗಿಯೊಬ್ಬರ ಬಳಿ ಇವರೆಲ್ಲ ಕೇಸ್ ತೆಗೆದುಕೊಳ್ಳುತ್ತಿದ್ದರಂತೆ. ಕಾಲು ಊತ ಬರಿಸುವ ವ್ಯಾರಿಕೋಸ್ ವೇನ್ಸ್ (Varicose Veins) ಕೇಸು. ಒಂದು ವಾರದಿಂದ ರೋಗಿ ಆಸ್ಪತ್ರೆಯಲ್ಲೇ ಇದ್ದರು. ಆಪರೇಷನ್ನಿಗೆ ವೈದ್ಯರು ತಯಾರಾಗಿದ್ದರೂ ರೋಗಿಯ ಬಡತನ ತಯಾರಾಗಿರಲಿಲ್ಲ. ಎಲ್ಲಾ ಸೇರಿಸಿ ಮೂರರಿಂದ ನಾಲ್ಕುಸಾವಿರದಷ್ಟು ಖರ್ಚಾಗುತ್ತಿತ್ತು. ಅದನ್ನು ಹೊಂದಿಸಲೂ ರೋಗಿಯ ಕಡೆಯವರು ಪರದಾಡುತ್ತಿದ್ದರು. ಸಾಗರ್ ಪರ್ಸು ತೆಗೆದು ನೋಡಿದನಂತೆ. ನೂರು ರುಪಾಯಿ ಇತ್ತು. ಇದನ್ನು ಇಟ್ಟುಕೊಂಡಿರಿ ಎಂದು ಕೊಟ್ಟು ಕೈಲಿದ್ದ ಪುಸ್ತಕಗಳನ್ನು ಅಲ್ಲೇ ಹಾಸಿಗೆಯ ಮೇಲೆ ಬಿಸುಟಿ ಎಲ್ಲಿಗೋ ಓಡಿದನಂತೆ. ವಾಪಸ್ಸಾದಾಗ ರೋಗಿಯ ಕೈಗೆ ಮೂರು ಸಾವಿರ ಕೊಟ್ಟನಂತೆ. ಅಷ್ಟೊಂದು ದುಡ್ಡು ಎಲ್ಲಿಂದ ತಂದೆ ಎಂದು ಕೇಳಿದಾಗ ‘ಎಲ್ಲಾ ದೇವರ ಕೃಪೆ. ಯಾರ ಕೈಯಿಂದಾನೋ ಕೊಡಿಸ್ತಾನೇ ಬಿಡಿ’ ಎಂದು ತೇಲಿಸಿದ ಉತ್ತರ ಕೊಟ್ಟನಂತೆ. ಈಗ ಯೋಚಿಸಿದರೆ ಅದೇನು ಅಂತ ದೊಡ್ಡ ಕೆಲಸವೇನಲ್ಲ. ನಾನೂ ಅವಾಗಿವಾಗ ಅಂತದ್ದೇನಾದರೂ ಮಾಡ್ತೀನಿ. ಆದರೆ ಆಗ ಅವನು ಮಾಡಿದ ಕೆಲಸ ಮಾನವೀಯತೆಯ ದರ್ಶನದಂತೆ ಕಂಡಿತ್ತು. I was Impressed. ಇಂತವನೊಬ್ಬ ನನ್ನ ಗೆಳೆಯನಾಗಿರಬೇಕು ಕಾಲೇಜು ದಿನಗಳಲ್ಲಿ ಎಂದು ಆಸೆಯಾಗಿತ್ತು. ಆಗ ಆಗಲಿಲ್ಲ. ಈಗಲಾದರೂ ಪರಿಚಯವಾಗಲಿ ಎಂಬ ಆಸೆಯಾ? ಗೊತ್ತಿಲ್ಲ. ಅವನ ರಿಪ್ಲೈಗಳನ್ನು ಗಮನಿಸಿದರೆ ಅವನಿಗೇನು ನನ್ನ ಫ್ರೆಂಡ್ ಆಗಬೇಕು ಎನ್ನುವ ಆಸೆಯಿದ್ದಂತಿಲ್ಲ. ಏನೋ ಒಂದು. ಕೊನೇಪಕ್ಷ ಇಷ್ಟಾದರೂ ಚಾಟ್ ಮಾಡುತ್ತೇನೆ ಅವನೊಟ್ಟಿಗೆ ಎಂದುಕೊಂಡಿರಲಿಲ್ಲ. ಥ್ಯಾಂಕ್ಸ್ ಟು ಫೇಸ್ ಬುಕ್.

ರಾತ್ರಿ ಹನ್ನೊಂದಕ್ಕೆ ಮಲಗಲು ಹೋದೆ. ನಿದ್ರೆ ಬಂದು ಹತ್ತು ನಿಮಿಷವಾಗಿತ್ತಷ್ಟೇ. ನರ್ಸ್ ರೋಷನ್ ಬಂದು ಬಾಗಿಲು ಬಡಿದ. ಟಿವಿ ನೋಡುತ್ತಿದ್ದವರು ಹಾಗೆಯೇ ತಲೆಸುತ್ತು ಬಂದಂತಾಗಿ ಸೋಫಾ ಮೇಲೆಯೇ ಬಿದ್ದುಬಿಟ್ಟರಂತೆ. ಎದೆ ನೋವು ಅಂತೇನೂ ಹೇಳಲಿಲ್ಲ ಎಂದರು. ಸಕ್ಕರೆ ಖಾಯಿಲೆ ಇದೆಯಾ ಕೇಳಿದೆ. ಇತ್ತು. ಇನ್ಸುಲಿನ್ ಮೇಲಿದ್ದರು. ರಾತ್ರಿ ಇನ್ಸುಲಿನ್ ತೆಗೆದುಕೊಂಡಿದ್ದಾರೆ, ಹಸಿವಿಲ್ಲವೆಂದು ಊಟ ಮಾಡಿಲ್ಲ. ದೇಹದಲ್ಲಿ ಸಕ್ಕರೆ ಅಂಶ ಕಡಿಮೆಯಾಗಿ ತಲೆಸುತ್ತು ಬಂದಿದೆ. ಶುಗರ್ ಟೆಸ್ಟ್ ಮಾಡಿಸಿದೆ. ಇಪ್ಪತ್ತೈದಿತ್ತು. ಡೆಕ್ಸ್ಟ್ರೋಸ್ ಇಪ್ಪತ್ತೈದು ಮಿಲಿ ಇಂಜೆಕ್ಷನ್ ಕೊಡಲು ಪ್ರಾರಂಭಿಸುತ್ತಿದ್ದಂತೆ ಎದ್ದು ಕುಳಿತರು. ಇನ್ಸುಲಿನ್ ತೆಗೆದುಕೊಂಡ ಮೇಲೆ ಊಟ ಮಾಡದೆ ಇದ್ದರೆ ಹೀಗೆ ಆಗೋದು. ಟಿವಿ ನೋಡುತ್ತಿದ್ದುದಕ್ಕೆ ಸರಿ ಹೋಯ್ತು. ಮಲಗಿಬಿಟ್ಟಿದ್ದರೆ ಮತ್ತೆ ಎದ್ದೇಳೋ ಸಂದರ್ಭಾನೇ ಬರುತ್ತಿರಲಿಲ್ಲ. ಇನ್ಮುಂದೆನಾದರೂ ಎಚ್ಚರದಿಂದಿರಿ ಎಂದು ಬುದ್ಧಿ ಹೇಳಿ ಕಳುಹಿಸಿಕೊಟ್ಟೆ. ಒಮ್ಮೆ ನಿದ್ರೆಯಿಂದ ಎದ್ದುಬಿಟ್ಟರೆ ಮತ್ತೆ ನಿದ್ರೆ ಸುಳಿಯೋದು ಕಷ್ಟ ನನಗೆ. ಸಾಮಾನ್ಯವಾಗಿ ಟೇಬಲ್ ಮೇಲಿರುವ ಯಾವುದಾದರೂ ಪತ್ರಿಕೆ ಓದಿ ಕುಳಿತುಕೊಳ್ಳುತ್ತಿದ್ದೆ. ಇವತ್ಯಾಕೋ ಕಂಪ್ಯೂಟರ್ ಆನ್ ಮಾಡಿದೆ. ಏನನ್ನೂ ಯೋಚಿಸುವುದಕ್ಕೆ ಮುಂಚೆ ಫೇಸ್ ಬುಕ್ಕಿಗೆ ಲಾಗ್ ಇನ್ ಆದೆ. ನಿದ್ರೆಗಣ್ಣಲ್ಲಿ ಮಾಡ್ತಿದ್ನೋ ಏನೋ ಎನ್ನುವಂತೆ ಯಾರ್ಯಾರು ಆನ್ ಲೈನ್ ಇದ್ದಾರೆ ನೋಡಿದೆ. ಸಾಗರ್ ಇದ್ದ. ಅವನನ್ನೇ ಹುಡುಕುತ್ತಿದ್ದೆ ಎಂದರದು ಸುಳ್ಳಲ್ಲ. ಏನು ಟೈಪಿಸುವುದು ತಿಳಿಯಲಿಲ್ಲ. ‘ಗುಡ್ ನೈಟ್ ಹೇಳಲೇ ಇಲ್ಲ’ ಅನ್ನಲಾ…. ತುಂಬಾ ಕಾಮಿಡಿಯಾಗಿಬಿಡುತ್ತೆ.

‘ಇನ್ನೂ ಮಲಗಿಲ್ಲ!’ ಎಂದು ಮೆಸೇಜಿಸಿದೆ.

“ಯಾಕೋ ನಿದ್ರೆ ಬಂದಿಲ್ಲ. ನೀನು”

‘ನೈಟ್ ಡ್ಯುಟಿ ಇತ್ತು’

“ಓಕೆ”

ಮತ್ತದೇ ಶೂನ್ಯ. ಮಾತನಾಡುವುದು ಹೇಗೆಂದೇ ಮರೆತು ಹೋದಂತಾಗಿದೆ. ರೋಗಿಗಳೊಟ್ಟಿಗೇನೋ ಸಲೀಸಾಗಿ ಮಾತನಾಡಿಬಿಡುತ್ತೇನೆ. ಪೂರ್ತಿ ಹೊಸ ಪರಿಚಯವೂ ಅಲ್ಲದ ನೆಟ್ಟಗೆ ಪರಿಚಯವೂ ಇಲ್ಲದ ಹಳೆಯ ಸಹಪಾಠಿಗಳೊಡನೆ ಮಾತನಾಡುವಾಗ ಮಾತ್ರ ಎಲ್ಲಿಲ್ಲದ ಹಿಂಜರಿಕೆ ಬಂದುಬಿಡುತ್ತೆ. ಒಂದು ಮಾತು ಮನಸ್ಸಿಗೆ ಹೊಳೆದರೆ ಅದನ್ನು ಹೇಳುವುದು ಸರಿಯಾಗುತ್ತದಾ ಅಥವಾ ಸುಮ್ಮನಿರುವುದು ಸರಿಯಾ? ಎಂದು ಪ್ರಶ್ನೆಗಳ ಮೇಲೆ ಪ್ರಶ್ನೆಗಳು ಹುಟ್ಟಿಕೊಂಡುಬಿಡುತ್ತವೆ.

“ಮತ್ತೆ ಇನ್ನೇನ್ ವಿಶೇಷ” ನನ್ನ ಗೊಂದಲಗಳನ್ನು ಅರಿತವನಂತೆ ಅವನೇ ಪ್ರಶ್ನೆ ಕೇಳಿದ.

‘ಹೇಳ್ಬೇಕು. ಎಂಬಿಬಿಎಸ್ ಕ್ಲಾಸ್ ಮೇಟ್ಸ್ ಇನ್ನೂ ಟಚ್ಚಲ್ಲಿದ್ದಾರಾ?’

“ಮ್. ನಮ್ಮ ಗೆಳೆಯರ ಬಳಗದವರೆಲ್ಲ Contact ಅಲ್ಲೇ ಇದ್ದೀವಿ. ನಿನಗೆ”

‘ನನಗೆ ಅಷ್ಟಿಲ್ಲ. ಒಂದಿಬ್ಬರು ಅಪರೂಪಕ್ಕೆ ಫೋನಿಗೆ ಸಿಗ್ತಾರೆ. ಮದುವೆಯಾದ ಮೇಲೆ ಹುಡುಗಿಯರ ಫ್ರೆಂಡ್ಸ್ ಸರ್ಕಲ್ ಕಡಿಮೆಯಾಗಿಬಿಡುತ್ತೆ’

“ಅದು ನಿಜ”

‘ನಿಮ್ ಹುಡುಗುರದೇ ಸರಿ. ಎಲ್ಲಿ ಅಲೆದರೂ ಎಲ್ಲಿ ತಿರುಗಿದರೂ ಹೇಳೋರಿಲ್ಲ ಕೇಳೋರಿಲ್ಲ. ಮದ್ವೆ ಆಗಿದೆಯಾ ಇಲ್ವಾ ಅನ್ನೋದೆಲ್ಲ ನಿಮ್ಮ ಗೆಳೆತನಕ್ಕೆ ಅಡ್ಡಿಯೇ ಬರೋದಿಲ್ಲ’

“ಅರ್ಧ ನಿಜ ಅಷ್ಟೇ. ಬೇಗ ಬೇಗ ಮದುವೆಯಾದ ನನ್ನ ಗೆಳೆಯರೇ ಈಗ ಫೋನಿಗೂ ಸಿಗದಂತಾಗಿದ್ದಾರೆ. ಬೆಳೀತಾ ಬೆಳೀತಾ ಗೆಳೆತನ ಕಡಿಮೆಯಾಗಿಬಿಡುತ್ತೋ ಏನೋ”

‘ಗೆಳೆತನ ಬೇಕೇ ಬೇಕು ಅನ್ನೋ ಕಡೆ ಇದ್ದೇ ಇರುತ್ತೆ ಬಿಡು. ದಿನಾ ಮಾತನಾಡಲು ಆಗದೇ ಇದ್ದರೂ ಗೆಳೆತನ ಅಂತೂ ಇರುತ್ತೆ – ಸಂತಸ ಹಂಚಿಕೊ‍ಳ್ಳಲು, ದುಃಖ ತೋಡಿಕೊಳ್ಳಲು’

“ಕರೆಕ್ಟ್ ಕರೆಕ್ಟ್”

‘ಮ್’

“ಮ್”

‘ನನ್ನ ಜೊತೆ ಹರಟಲು ನಿನಗೇನೂ ಬೇಜಾರಿಲ್ಲ ತಾನೇ’

“ಹಂಗ್ಯಾಕೆ ಕೇಳ್ತಿ? ಹರಟೋದು ಬೇಜಾರಾದ್ರೆ ನಿನಗೆ ನೇರವಾಗಿ ಹೇಳೇಬಿಡ್ತೀನಿ!. ಹರಟೋದಿಕ್ಕೇನು ಬೇಜಾರಿಲ್ಲ ಆದರೆ….”

‘ಆದರೆ ಏನು?’

“ದಯವಿಟ್ಟು ಗುಡ್ ಮಾರ್ನಿಂಗ್ ಗುಡ್ ನೈಟ್ ತರಹದ ಮೆಸೇಜುಗಳನ್ನು ಮಾತ್ರ ಕಳುಹಿಸಬೇಡ. ಇರಿಟೇಟ್ ಆಗಿಬಿಡುತ್ತೆ!”

‘ಯಾಕೆ?’

“ಏನೋ ಎದುರಿಗೆ ಸಿಕ್ಕಾಗ ಗುಡ್ ಮಾರ್ನಿಂಗ್, ಗುಡ್ ಆಫ್ಟರ್ ನೂನ್, ಗುಡ್ ಇವನಿಂಗ್ ಅಂತ ಹೇಳಿದರೆ ಅರ್ಥವಿರುತ್ತಪ್ಪ. ಅದನ್ನೆಲ್ಲಾ ಮೆಸೇಜ್ ಮಾಡ್ಕೊಂಡು ಕೂತರೆ ಹೇಗೆ? ಸುಮ್ನೆ ಸಮಯ ಹಾಳು”

‘ಹ್ಹ ಹ್ಹ ಹ್ಹ. ಸರಿ ಸಾಗರ್. ಇನ್ಮೇಲೆ ಕಳುಹಿಸಲ್ಲ. ಅದಕ್ಕೇನಾ ನೀನು ಆ ಮೆಸೇಜುಗಳಿಗ್ಯಾವುದಕ್ಕೂ ರಿಪ್ಲೈ ಮಾಡದೇ ಉಳಿದಿದ್ದು’

“ಹೌದು”

‘ಈಗ ನಿದ್ರೆ ಬರ್ತಿದೆ ನನಗೆ. ಗುಡ್ ನೈಟ್ ಹೇಳ್ಲಾ ಬೇಡ್ವಾ?’ ಒಂದು ಸಾಲಿಡೀ ಸ್ಮೈಲಿ ಕಳಿಸಿ ಕೇಳಿದೆ.

“ಇವತ್ತಿಗೆ ಓಕೆ. ನನ್ನ ಕಡೆಯಿಂದಾನೂ ಹಳೆಯ ಸಹಪಾಠಿಗೊಂದು ಗುಡ್ ನೈಟ್” ಅವನು ಎರಡು ಸಾಲು ಸ್ಮೈಲಿ ಕಳುಹಿಸಿದ.

‘ಸರಿ ಕಣೋ ಗುಡ್ ನೈಟ್’ ಎಂದು ಮೆಸೇಜಿಸಿದವಳಿಗೆ ಖುಷಿಯಾಗಿತ್ತು. ಎರಡು ಘಂಟೆಯ ಮುಂಚೆ ಇವನಿಗೆ ನನ್ನ ಗೆಳೆತನದಲ್ಲಿ ಆಸಕ್ತಿಯಿದ್ದಂತಿಲ್ಲ ಎಂದುಕೊಂಡಿದ್ದು ಸುಳ್ಳಾಗಿತ್ತು. ನಾನಂದುಕೊಂಡದ್ದು ಸುಳ್ಳಾಗಿದ್ದು ಖುಷಿ ಕೊಟ್ಟಿತು. ಕಂಪ್ಯೂಟರ್ ಆಫ್ ಮಾಡಿ ಕೋಣೆಗೆ ಹೋಗಿ ಮಲಗಿದೆ. ಅನೇಕ ವಿಷಯಗಳನ್ನು ರಾಜೀವನೊಡನೆ ಚರ್ಚಿಸಲು ಕಷ್ಟವಾಗುತ್ತೆ. ನಮ್ಮ ಮನೆಯಲ್ಲಿ ಹೇಳಿಕೊಳ್ಳಬಹುದು, ಅದಕ್ಕೆ ಪರಿಹಾರ ಹೇಳುವುದಕ್ಕಿಂತ ಹೆಚ್ಚಾಗಿ ನನಗೇ ಒಂದಷ್ಟು ಬಯ್ಗುಳ ಸಿಗುವ ಸಾಧ್ಯತೆಯೇ ಅಧಿಕ. ಎಂಬಿಬಿಎಸ್ ಸಮಯದಲ್ಲಿ ಮೂರು ಜನ ಜೀವದ ಗೆಳತಿಯರಿದ್ದರು ಭಾವನ, ದರ್ಶಿನಿ, ಐಶ್ವರ್ಯ. ಭಾವನ ಮತ್ತು ದರ್ಶಿನಿಯ ಜೊತೆಗಿನ ಗೆಳೆತನ ತುಂಡಾಯಿತು. ಐಶ್ವರ್ಯಾಳಿಗೆ ಈಗಲೂ ನನ್ನನ್ನು ಕಂಡರೆ ಅಕ್ಕರೆ; ನನಗೇ ಅವಳೆಡೆಗೆ ಸ್ವಲ್ಪ ಅಸಡ್ಡೆ. ಅವಳು ಮದುವೆಯಾದ ನಂತರ ಗಂಡನೊಡನೆ ಆಸ್ಟ್ರೇಲಿಯಾಕ್ಕೆ ಹೊರಟು ಹೋದಳು. ಫೇಸ್ ಬುಕ್ಕಿನಲ್ಲೂ ಇಲ್ಲ ಅವಳು. ಅಪರೂಪಕ್ಕೆ ಫೋನ್ ಮಾಡುತ್ತಾಳೆ. ಗೆಳೆತನ ಅಪರೂಪವಾದಾಗ ಮಾತುಗಳಿಗೂ ತಡಕಾಡುವಂತಾಗುತ್ತೆ. ದೊಡ್ಡದಾಗಿ ‘ದಿನಾ ಮಾತನಾಡಲು ಆಗದೇ ಇದ್ದರೂ ಗೆಳೆತನ ಅಂತೂ ಇರುತ್ತೆ – ಸಂತಸ ಹಂಚಿಕೊ‍ಳ್ಳಲು, ದುಃಖ ತೋಡಿಕೊಳ್ಳಲು’ ಎಂದು ಡೈಲಾಗ್ ಹೊಡೆದೆ ಸಾಗರನಿಗೆ! ನಗು ಬಂತು. ಅವನನ್ನು ರವಷ್ಟಾದರೂ ಇಂಪ್ರೆಸ್ ಮಾಡಬೇಕೆಂದು ಆ ಮಾತು ಹೇಳಿದೆನಾ? ಉತ್ತರ ತೋಚಲಿಲ್ಲ. ನನ್ನ ಕಷ್ಟಗಳನ್ನೇಳಿಕೊಳ್ಳಲು ಒಂದು ಕಿವಿ ಬೇಕು ಎಂದು ಸಾಗರನಿಗೆ ಮೆಸೇಜು ಮಾಡಿದೆನಾ? ಇರಬಹುದೇನೋ. ತಪ್ಪೇನಿಲ್ಲವಲ್ಲ ಅದರಲ್ಲಿ. ನನಗೆ ನಾನೇ ಸಮಾಧಾನ ಮಾಡಿಕೊಂಡೆ. ನಾಳೆ ಡ್ಯೂಟಿ ಇಲ್ಲ. ಮನೆಯಲ್ಲಿರೋ ಕಂಪ್ಯೂಟರ್ ಕೆಟ್ಟು ಕೂತಿದೆ. ರಿಪೇರಿ ಮಾಡಿಸಬೇಕು ಅಂದರೆ ಮುಂದಿನ ತಿಂಗಳ ಸಂಬಳದವರೆಗೆ ಕಾಯಬೇಕು. ಮತ್ತೆ ಸಾಗರ್ ಜೊತೆ ಮೆಸೇಜಿಸಲು ಸಾಧ್ಯವಾಗುವುದು ನಾಡಿದ್ದು. ನಾಡಿದ್ದು ಮತ್ತೆ ರಾತ್ರಿ ಡ್ಯೂಟಿ ಅಲ್ಲವಾ? ಅವನ ಫೋನ್ ನಂಬರ್ ಕೇಳಿ ತೆಗೆದುಕೊಂಡರೆ ಹೇಗೆ? ನಂಬರ್ ಇದ್ದರೆ ಮೆಸೇಜಿಸಲು ಇಂಟರ್ನೆಟ್ಟಿಗೆ ಕಂಪ್ಯೂಟರಿಗೆ ಕಾಯುವ ಅಗತ್ಯವಿಲ್ಲ. ಅವನೇನಾದರೂ ತಪ್ಪು ತಿಳ್ಕೋತಾನ? ಫೋನ್ ನಂಬರ್ ಕೇಳಿದ್ರೆ ತಪ್ಪು ತಿಳಿದುಕೊಳ್ಳುವುದಕ್ಕೇನಿರುತ್ತೆ? ಫೇಸ್ ಬುಕ್ಕಲ್ಲೇ ಫೋನ್ ನಂಬರ್ ಹಾಕಿದ್ದಾನಾ? ಸರಿಯಾಗಿ ಗಮನಿಸಲಿಲ್ಲ. ಈಗಲೇ ಹೋಗಿ ನೋಡಬೇಕೆನ್ನಿಸಿತು. ಯಾಕಿಷ್ಟು ಆತುರ? ಎಂಬ ಪ್ರಶ್ನೆಯೂ ಬಂತು. ಸರಿ ಬೆಳಿಗ್ಗೆ ನೋಡಿದರಾಯಿತು. ಇಲ್ಲಾಂದ್ರೆ ನಾಡಿದ್ದು ಕೇಳೇ ಬಿಡೋಣ. ಅದರಲ್ಲೇನಿದೆ ಎಂದುಕೊಳ್ಳುತ್ತಿರುವಾಗ ಮೊಬೈಲು ರಿಂಗಣಿಸಿತು. ಮೆಸೇಜು ಬಂದಿತ್ತು. ಸಾಗರ್ರೇನಾದ್ರೂ ಮೆಸೇಜ್ ಕಳುಹಿಸಿಬಿಟ್ಟಿದ್ದಾನ ಎಂದುಕೊಂಡು ಆತುರದಿಂದ ನೋಡಿದೆ. ರಾಜೀವ್ ‘ಗುಡ್ ನೈಟ್ ಡಾರ್ಲಿಂಗ್’ ಎಂದು ಮೆಸೇಜು ಮಾಡಿದ್ದ. ಸಾಗರ್ ಹತ್ತಿರ ನನ್ನ ನಂಬರ್ರೇ ಇಲ್ಲ, ಫೇಸ್ ಬುಕ್ಕಿನಲ್ಲೂ ನನ್ನ ನಂಬರ್ ಹಾಕಿಲ್ಲ, ಅವನ ಮೆಸೇಜ್ ಅಂತ ಯಾಕೆ ಅಂದುಕೊಂಡೆ ಎಂದು ನಗುತ್ತಾ ‘ಗುಡ್ ನೈಟ್ ರಾಜಿ’ ಎಂದು ಮರು ಮೆಸೇಜಿಸಿದೆ. ಇಷ್ಟೊತ್ತಿನವರೆಗೂ ರಾಜೀವ್ ಎದ್ದಿದ್ದಾರೆ ಅಂದರೆ ಗೆಳೆಯರೊಟ್ಟಿಗೆ ಯಾವುದೋ ಬಾರಿನಲ್ಲಿ ಕುಡಿಯುತ್ತಿದ್ದಾರೆ ಎಂದೇ ಅರ್ಥ. ನನಗೆ ನೈಟ್ ಡ್ಯೂಟಿ ಇದ್ದಾಗ ಅವರಿಗೂ ನೈಟ್ ಡ್ಯೂಟಿ. ಒಳ್ಳೇ ರಾಜೀವ್. ‘ಲವ್ ಯೂ ಚಿನ್ನು. ಕಮ್ಮಿ ಕುಡಿ’ ಎಂದು ಮತ್ತೆ ಮೆಸೇಜು ಮಾಡಿದೆ. ಮುತ್ತನಿಕ್ಕುವ ಒಂದು ಸ್ಮೈಲಿ ಕಳುಹಿಸಿದ. ಬೆಳಗಿನವರೆಗೂ ಯಾವ ರೋಗಿಗಳು ಬರದಿದ್ದುದರಿಂದ ಚೆನ್ನಾಗೇ ನಿದ್ರೆ ಮಾಡಿದೆ. ಆರೂ ಮೂವತ್ತಕ್ಕೆ ಎಚ್ಚರವಾಯಿತು. ಎದ್ದು ಬ್ರಷ್ ಮಾಡಿ ಮುಖ ತೊಳೆದುಕೊಂಡು, ಇರುವ ಪುಳ್ಳು ಕೂದಲನ್ನು ಬಾಚಿ ಮುಖಕ್ಕೊಂದಷ್ಟು ಫೇರ್ ಅಂಡ್ ಲವ್ಲಿ ಹಾಕಿಕೊಂಡು ಅದರ ಮೇಲೆ ಚೂರೇ ಚೂರು ಪೌಡರ್ ಬಳಿದುಕೊಂಡೆ. ಬಿಂದಿ ಖಾಲಿಯಾಗಿತ್ತು. ದಿಂಬಿನ ಬಳಿ ನಿನ್ನೆಯ ಬಿಂದಿ ಬಿದ್ದಿತ್ತು. ಅದನ್ನೇ ಎತ್ತಿಕೊಂಡೆ. ಇನ್ನೂ ಚೂರು ಗೋಂದಿತ್ತು. ಅದನ್ನೇ ಇಟ್ಟುಕೊಂಡು ಹೊರಬಂದೆ. ನರ್ಸ್ ರೋಷನ್ ಆಗಷ್ಟೇ ಎದ್ದಂತಿತ್ತು. ‘ಹೋಗ್ರೀ ರೋಷನ್. ಫ್ರೆಶ್ ಆಗಿ. ಕ್ಯಾಂಟೀನ್ ತೆಗೆದಿದೆಯಾ ನೋಡಿ. ಒಂದೊಳ್ಳೆ ಕಾಫಿ ಕುಡಿದು ಬರೋಣ’ ಎಂದೆ. ನಿನ್ನೆ ಸಂಜೆ ಸರಿಯಾಗಿಲ್ಲದ ಮೇಡಮ್ ಮೂಡು ಈಗ ಲವಲವಿಕೆಯಿಂದಿರುವುದು ಅವನಿಗೂ ಖುಷಿ ಕೊಟ್ಟಿತ್ತು. ಸರಿ ಮೇಡಮ್ ಎಂದವನು ಮುಖ ತೊಳೆಯಲು ಹೋದ. ನಾನು ಕಂಪ್ಯೂಟರ್ ಆನ್ ಮಾಡಿದೆ. ಸಾಗರ್ ಅವನ ಫೋನ್ ನಂಬರ್ ಹಾಕಿದ್ದಾನಾ ನೋಡಬೇಕಿತ್ತು. ನೋಡಿದೆ. ನಂಬರ್ ಇತ್ತು. ಮೊಬೈಲಿಗೆ ಸೇವ್ ಮಾಡಿಕೊಂಡೆ. ರೋಷನ್ ಹೊರಬಂದವನು ನಾನು ಕಂಪ್ಯೂಟರಿಗೆ ಕಣ್ಣು ನೆಟ್ಟು ಕುಳಿತಿರುವುದನ್ನು ಕಂಡು ‘ಮೇಡಮ್ ಕಾಫಿ ಇಲ್ಲಿಗೇ ತರಿಸಿಬಿಡ್ಲಾ’ ಎಂದು ಕೇಳಿದ. ಸರಿಯೆಂಬಂತೆ ತಲೆಯಾಡಿಸಿ ಒಂದೈದು ನಿಮಿಷ ಫೇಸ್ ಬುಕ್ಕಿನಲ್ಲಿ ಅವರಿವರ ಫೋಟೋಗಳನ್ನು ನೋಡುತ್ತ ಲೈಕ್ ಒತ್ತುತ್ತಾ ಕಾಲ ಕಳೆದೆ. ಸಾಗರನಿಗೆ ಈಗಲೇ ಕಾಲ್ ಮಾಡ್ಲಾ ಅಥವಾ ಮೆಸೇಜ್ ಕಳುಹಿಸಲಾ ಎಂದು ಯೋಚಿಸುತ್ತಿದ್ದೆ. ಸಮಯ ನೋಡಿದೆ ಏಳೂಕಾಲಾಗಿತ್ತು. ಇಷ್ಟು ಬೇಗ ಕಾಲ್ ಮಾಡೋದೆಲ್ಲ ಯಾಕೆ ಎಂದುಕೊಂಡು ‘ಗುಡ್ ಮಾರ್ನಿಂಗ್’ ಎಂದು ಮೆಸೇಜು ಟೈಪಿಸಿದೆ. ಓ! ಇವನಿಗೆ ಈ ಮೆಸೇಜುಗಳು ಬೇರೆ ಇಷ್ಟವಾಗಲ್ಲ. ಗುಡ್ ಮಾರ್ನಿಂಗ್ ಮುಂದೆ ಸಾರಿ ಎಂದು ಟೈಪಿಸಿ ಕಳುಹಿಸಿದೆ. ಮೆಸೇಜ್ ಡೆಲಿವರ್ಡ್ ಎಂದು ಬಂತು. ರಿಪ್ಲೈ ಬರಲಿಲ್ಲ. ಇನ್ನೂ ಮಲಗಿರಬೇಕು ಎಂದು ಸುಮ್ಮನಾದೆ. ಎರಡು ನಿಮಿಷಕ್ಕೊಮ್ಮೆ ಮೊಬೈಲು ತೆರೆದು ನೋಡುವುದು ನಿಲ್ಲಿಸಲು ಸಾಧ್ಯವಾಗಲಿಲ್ಲ.
ಮುಂದಿನ ಭಾಗವನ್ನು ಓದಲು ಇಲ್ಲಿ ಕ್ಲಿಕ್ಕಿಸಿ. 

No comments:

Post a Comment