Jan 13, 2019

ಒಂದು ಬೊಗಸೆ ಪ್ರೀತಿ - 1

ಡಾ. ಅಶೋಕ್. ಕೆ. ಅರ್. 
ಅವತ್ತು ಏಪ್ರಿಲ್ ಹದಿನಾಲ್ಕು. ನನ್ನ ಹುಟ್ಟಿದ ದಿನ. ಗಂಡ ಬೆಳಿಗ್ಗೆ ಬೆಳಿಗ್ಗೆ ಕೇಕ್ ತಂದಿದ್ದ, ಜೊತೆಗೆ ಹನುಮಂತು ಹೋಟೆಲ್ಲಿನಿಂದ ನಾಟಿ ಕೋಳಿ ಪಲಾವ್. ಒಂದು ಚಿಕ್ಕ ತುಂಡು ಕೇಕ್ ತಿಂದು ಒಂದೂವರೆ ಪ್ಲೇಟ್ ನಾಟಿ ಕೋಳಿ ಪಲಾವ್ ಮುಗಿಸಿ ಉಳಿದ ಕೇಕನ್ನು ಫ್ರಿಜ್ಜಿನಲ್ಲಿಟ್ಟು ಆಸ್ಪತ್ರೆಗೆ ಹೊರಟೆ. ಅವತ್ತು ಬೆಳಗಿನ ಡ್ಯೂಟಿಯಿತ್ತು. ಭಾನುವಾರವಾದ್ದರಿಂದ ಹೆಚ್ಚೇನೂ ಕೆಲಸವಿರಲಿಲ್ಲ. ಮೈಸೂರಿನ ಆರ್.ಬಿ.ಐ ಒಳಗಿರುವ ಪುಟ್ಟ ಆಸ್ಪತ್ರೆಯದು. ಆರ್.ಬಿ.ಐ ನಿವಾಸಿಗಳಷ್ಟೇ ಬರುತ್ತಿದ್ದುದು. ಶಿಫ್ಟಿನ ಮೇಲೆ ಮೂರು ಜನ ವೈದ್ಯರು ಕೆಲಸ ಮಾಡುತ್ತಿದ್ದೆವು. ಭಾನುವಾರ ಕೆಲಸ ಮಾಡುವುದೆಂದರೆ ಯಮಹಿಂಸೆ. ಸಾಮಾನ್ಯವಾಗಿ ನಾನು ಭಾನುವಾರ ರಜೆ ತೆಗೆದುಕೊಂಡುಬಿಡುತ್ತಿದ್ದೆ. ನಾಳೆ ಅತ್ತೆ ಮನೆಯಲ್ಲಿ ಸತ್ಯನಾರಾಯಣ ಸ್ವಾಮಿ ಪೂಜೆ ಇಟ್ಕೊಂಡಿದ್ದಾರೆ, ಹಾಗಾಗಿ ಭಾನುವಾರ ಬಂದಿದ್ದೆ. ಹನ್ನೊಂದರವರೆಗೆ ಒಂದಷ್ಟು ರೋಗಿಗಳಿದ್ದರು. ಮಾಮೂಲಿ ಜ್ವರ, ನೆಗಡಿ, ಕೆಮ್ಮು ಇತ್ಯಾದಿ. ಹನ್ನೊಂದರಿಂದ ಹನ್ನೆರಡರವರೆಗೆ ಯಾರೂ ಬರಲಿಲ್ಲ. ಹುಟ್ಟುಹಬ್ಬದ ಶುಭಾಷಯಗಳ ಮೆಸೇಜುಗಳು ಮೊಬೈಲು ತುಂಬಿಸಿತ್ತು. ಅವರಿಗೆಲ್ಲಾ ಒಂದು ಧನ್ಯವಾದ ಹೇಳಿದೆ. ತೀರ ಫೋನು ಮಾಡಿ ಶುಭಾಶಯ ಹೇಳುವಂತಹ ಗೆಳೆಯರ್ಯಾರು ಇರಲಿಲ್ಲ. ಅಪ್ಪ, ಅಮ್ಮ, ತಮ್ಮ ಬೆಳಿಗ್ಗೆಯೇ ಫೋನ್ ಮಾಡಿದ್ದರು. ಮಧ್ಯಾಹ್ನ ಅಲ್ಲಿಗೇ ಊಟಕ್ಕೆ ಹೋಗಬೇಕು. ಊಟ ಮುಗಿಸಿ ಅತ್ತೆ ಮನೆಗೆ. ಮೆಸೇಜು ಕಳುಹಿಸಿದವರಲ್ಲಿ ಅನೇಕರು ನಮ್ಮ ಮೇನ್ ಆಸ್ಪತ್ರೆಯವರು. ಒಂದು ವರುಷ ಅಲ್ಲಿ ಕೆಲಸ ಮಾಡಿದ್ದಾಗ ಪರಿಚಿತರಾಗಿದ್ದವರು. ಮೆಸೇಜು ಕಳುಹಿಸಿದ್ದೆಲ್ಲ ಮುಗಿದ ಮೇಲೆ ಆನ್ ಆಗಿದ್ದ ಕಂಪ್ಯೂಟರಿನಲ್ಲಿ ಒಪೆರಾ ಬ್ರೌಸರ್ ತೆರೆದು ಫೇಸ್ ಬುಕ್ ಪುಟವನ್ನು ತೆರೆದೆ. ಒಂದು ಮೂವತ್ತು ಜನ ಶುಭಾಶಕೋರಿದ್ದರು! ಬಹುತೇಕರು ಎಂಬಿಬಿಎಸ್ ಓದುವಾಗ ಸಹಪಾಠಿಗಳಾಗಿದ್ದವರು. ಲೈಕ್ ಒತ್ತಿ, ಥ್ಯಾಂಕ್ ಯೂ ಎಂದು ಕಮೆಂಟಿಸಿದೆ. ಶುಭಾಶಕೋರಿದವರಲ್ಲಿ ಅನೇಕರೊಡನೆ ಕಾಲೇಜು ದಿನಗಳಲ್ಲಿ ಮಾತನಾಡಿಯೇ ಇರಲಿಲ್ಲ. ನಿಟ್ಟುಸಿರುಬಿಟ್ಟು ಇನ್ನೇನು ಫೇಸ್ ಬುಕ್ಕಿನಿಂದ ಲಾಗ್ ಔಟ್ ಆಗಬೇಕೆಂದುಕೊಳ್ಳುವಷ್ಟರಲ್ಲಿ ಪರದೆಯ ಎಡಭಾಗದಲ್ಲಿ Sagar ವಿಶಾಲ sent you a friend request ಎಂದು ಕಾಣಿಸಿತು. ಯಾರಿದು ಸಾಗರ್ ವಿಶಾಲ್? ನನ್ನ ಎಂಬಿಬಿಎಸ್ ಕ್ಲಾಸ್ ಮೇಟ್ ಅಲ್ಲಾ ತಾನೇ? ಎಂದು ಸಂಶಯಿಸುತ್ತಾ ಆ ಹೆಸರಿನ ಮೇಲೆ ಕ್ಲಿಕ್ಕಿಸಿದೆ. ಓದಿದ್ದು ಜೆಎಸ್ಎಸ್ ಊರು ಬೆಂಗಳೂರು ಎಂದಿತ್ತು. ಓ ಅವನೇ ಇರಬೇಕು ಎಂದುಕೊಂಡೆ; ಆದರೆ ಅವನ ಹೆಸರು ಬರೀ ಸಾಗರ್ ಅಲ್ಲವಾ? ಪ್ರೊಫೈಲ್ ಫೋಟೋ ಮೇಲೆ ಕ್ಲಿಕ್ಕಿಸಿದೆ. ಸಮುದ್ರ ತೀರದಲ್ಲಿ ಅಲೆಗಳಿಗೆ ಮುಖವೊಡ್ಡಿ ಕುಳಿತಿದ್ದಾನೆ, ಎದುರಿಗಿನ ಸೂರ್ಯದೋಯ ನೋಡುತ್ತ. ಇಂಥಹ ಫೋಟೋನ ಪ್ರೊಫೈಲಿಗೆ ಹಾಕಿಕೊಂಡಿದ್ದಾನೆಂದರೆ ಇದು ಅವನೇ ಎಂದು ನಗು ಬಂತು. ಮನಸಾರೆ ನಕ್ಕೆ. ‘ರಿಕ್ವೆಸ್ಟ್ ಕಳುಹಿಸಿದ್ದಕ್ಕೆ ಥ್ಯಾಂಕ್ಸ್’ ಎಂದು ಮೆಸೇಜ್ ಟೈಪು ಮಾಡಿದೆ; ಕಳುಹಿಸಲಿಲ್ಲ. ಹುಟ್ಟಿದ ಹಬ್ಬಕ್ಕೆ ಶುಭಾಷಯ ತಿಳಿಸುತ್ತಾನೇನೋ ನೋಡೋಣ ಅಂದುಕೊಂಡು ಟೈಪಿಸಿದ್ದನ್ನು ಅಳಿಸಿಹಾಕಿದೆ. ಕಳೆದ ವಾರದಿಂದ ಚಿಕನ್ ಗುನ್ಯಾದಿಂದ ನರಳುತ್ತಿದ್ದ ರೋಗಿಯೊಬ್ಬರು ಒಳಬಂದರು. ಮೆಸೇಜು ಕಳುಹಿಸುತ್ತಾನೇನೋ ನೋಡೋಣ ಅಂದುಕೊಂಡು ಲಾಗ್ ಔಟ್ ಮಾಡದೆ ರೋಗಿಯ ಕಡೆ ಗಮನಕೊಟ್ಟೆ. ಎರಡು ಘಂಟೆಯವರೆಗೆ ರೋಗಿಗಳು ಬರುತ್ತಲೇ ಇದ್ದರು. ಭಾನುವಾರ ಡಾಕ್ಟರ್ ಇರ್ತಾರಲ್ಲ ಸುಮ್ನೆ ತೋರಿಸಿಕೊಂಡು ಹೋಗೋಣ ಎಂದು ಬಂದವರೇ ಹೆಚ್ಚು. ಎರಡು ಘಂಟೆಗೆ ಬರಬೇಕಿದ್ದ ಡಾ. ರವಿ ಎರಡೂ ಕಾಲಾದರೂ ಬರಲಿಲ್ಲ. ಈ ರವೀದು ಯಾವಾಗ್ಲೂ ಇದೇ ಗೋಳು. ಬರೋದು ಲೇಟು ಹೋಗೋದು ಬೇಗ. ನಾವೇನಾದರೂ ಐದು ನಿಮಿಷ ಲೇಟ್ ಬಂದುಬಿಟ್ರೆ ಆಕಾಶ ಭೂಮಿ ಒಂದು ಮಾಡ್ಬಿಡ್ತಾನೆ. ಹೆಚ್ ಆರ್ ಮ್ಯಾನೇಜರ್ರಿಗೆ ಫೋನು ಮಾಡಿ ದೂರು ನೀಡಿಬಿಡ್ತಾನೆ. ಇವತ್ತು ನಾನೂ ದೂರು ಕೊಟ್ಟುಬಿಡಬೇಕು ಎಂದುಕೊಂಡು ಕಂಪ್ಯೂಟರ್ ನೋಡಿದೆ. ಸಾಗರ್ ಆನ್ ಲೈನ್ ಇದ್ದ. ಯಾವ ಮೆಸೇಜೂ ಕಳುಹಿಸಿರಲಿಲ್ಲ. ಲಾಗ್ ಔಟ್ ಮಾಡಿದೆ. ಡಾ. ರವಿ ಒಳಬಂದ. “ಸಾರಿ ಧರಣಿ. ಸ್ವಲ್ಪ ಲೇಟ್ ಆಗೋಯ್ತು. ಮೆನಿ ಮೆನಿ ಹ್ಯಾಪಿ ರಿಟರ್ನ್ಸ್ ಆಫ್ ದಿ ಡೇ. ಇದನ್ನು ತರೋದಿಕ್ಕೆ ಲೇಟ್ ಆಗಿದ್ದು” ಎಂದ್ಹೇಳಿ ಹೂವಿನ ಬೊಕ್ಕೆ ಕೊಟ್ಟ. ಇವತ್ತು ಕಂಪ್ಲೇಂಟ್ ಮಾಡೋದು ಬೇಡ ಎಂದುಕೊಳ್ಳುತ್ತಾ ‘ಥ್ಯಾಂಕ್ಸ್ ರವಿ ಸರ್’ ಎಂದ್ಹೇಳಿ ಬೊಕ್ಕೆ ತೆಗೆದುಕೊಂಡು ಹೊರಟೆ.

ಒಂದೊಂದೇ ಎಪಿಸೋಡು ಹುಡುಕುಡುಕಿ ಓದೋಕೆ ಬೇಸರವಾ? ಪೂರ್ತಿ ಇ - ಪುಸ್ತಕ ತೆಗೆದುಕೊಳ್ಳಲು ಇಲ್ಲಿ ಕ್ಲಿಕ್ಕಿಸಿ.

ಅಪ್ಪ ಅಮ್ಮ ಇಬ್ಬರೂ ಬ್ಯಾಂಕಿನಲ್ಲಿ ಕೆಲಸಕ್ಕಿದ್ದರು. ಅಮ್ಮನಿಗೆ ಐದು ವರುಷದ ಹಿಂದೆ ಸೊಂಟ ನೋವು ಜಾಸ್ತಿಯಾಗಿ ಆಪರೇಷನ್ ಆಗಿತ್ತು. ಕೆಲಸ ಬಿಟ್ಟುಬಿಟ್ಟರು. ತಮ್ಮ ಈಗ ಒಂದು ವರ್ಷದಿಂದ ಹುಣಸೂರು ರಸ್ತೆಯಲ್ಲಿರುವ ಬೆಳಗೊಳದ ವಿಜಯಾ ಬ್ಯಾಂಕಿನಲ್ಲಿ ಕೆಲಸಕ್ಕೆ ಸೇರಿದ್ದಾನೆ. ಅಪ್ಪ ಆರು ತಿಂಗಳ ಹಿಂದೆ ಮ್ಯಾನೇಜರ್ ಆದರು. ಇನ್ನೆರಡು ವರುಷಕ್ಕೆ ನಿವೃತ್ತರಾಗುತ್ತಾರೆ. ಮನೆಗೆ ಹೋಗುವ ಹಾದಿಯಲ್ಲಿ ರಾಜೀವನಿಗೆ ಕರೆ ಮಾಡಿದೆ. ‘ರಾಜಿ. ನಾನು ಹೊರಟೆ ಆಸ್ಪತ್ರೆಯಿಂದ. ಸೀದಾ ಅಮ್ಮನ ಮನೆಗೆ ಹೋಗ್ಲಾ? ನೀವು ಬೈಕಲ್ಲೇ ಬರ್ತೀರಾ? ಅಥವಾ ಮನೆಗೆ ಬರ್ಲಾ? ಜೊತೆಗೇ ಹೋಗಿ ಊಟ ಮಾಡ್ಕೊಂಡು ನಿಮ್ಮ ಮನೆಗೆ ಹೋದರಾಯಿತು’
“ನಿನ್ನಿಷ್ಟ. ಏನಾದ್ರೂ ಮಾಡ್ಕೋ”
‘ನಿನ್ನಿಷ್ಟ ಅಂದ್ರೆ? ನೀವು ಬರೋಲ್ವ ಊಟಕ್ಕೆ?’
“ಬರಲ್ವಾ ಬರಲ್ವಾ ಅಂದ್ರೆ? ನನಗೇನ್ ನಿಮ್ಮಪ್ಪಾನೋ ಅಮ್ಮಾನೋ ನಿನ್ನ ತಮ್ಮಾನೋ ಫೋನ್ ಮಾಡಿ ಊಟಕ್ಕೆ ಬನ್ನಿ ಅಂದಿದ್ದಾರಾ? ಬಿಟ್ಟಿ ಊಟ ಮಾಡೋ ದರ್ದೇನು ಇಲ್ಲ ನನಗೆ”
‘ರೀ. ಇದ್ಯಾಕ್ರಿ ಹಿಂಗಾಡ್ತೀರಾ? ನಿನ್ನೇನೇ ನನಗೆ ಫೋನ್ ಮಾಡಿ ಹೇಳಿದ್ರಲ್ವ? ಮದುವೆಯಾಗಿ ಎರಡು ವರ್ಷ ಆಗ್ತಾ ಬಂತು ಇನ್ನೂ ಈ ಫಾರ್ಮಾಲಿಟಿ ಎಲ್ಲಾ ಬೇಕಾ? ನನಗೆ ಹೇಳಿದ್ರೆ ಸಾಕಲ್ವಾ?’
“ವಹಿಸ್ಕೊಂಡು ಮಾತಾಡು ಅಂದ್ರೆ ಚೆನ್ನಾಗಿ ಮಾತಾಡ್ತಿ”
‘ಬೆಳಿಗ್ಗೆ ನೀವು ಕೂಡ ಬರ್ತೀನಿ ಅಂದಿದ್ರಲ್ರಿ’
“ನೆಪ ಹೇಳೋದನ್ನು ನಿನಗೆ ಹೇಳ್ಕೊಡಬೇಕಾ?”
‘ಉಶ್ಯಪ್ಪ. ಜಗಳ ಆಡಬೇಕೂಂತ ತೀರ್ಮಾನ ಮಾಡಿಬಿಟ್ಟಿದ್ದೀರ. ನಾಳೆ ದಿನ ಸತ್ಯನಾರಾಯಣ ಸ್ವಾಮಿ ಪೂಜೆ ಇಟ್ಕೊಂಡಿದ್ದಾರಲ್ಲ ನಿಮ್ಮ ಮನೆಯಲ್ಲಿ….’
“ನಿನ್ದೂ ಅದೇ ಮನೆ. ನೆನಪಿರಲಿ”
‘ಸರಿ. ಸರಿ. ನನ್ನ ಮನೆಯಲ್ಲಿ, ಪೂಜೆ ಇದೆ ಬಾ ಅಂತ ಅತ್ತೆ ಮಾವ ಯಾರಾದ್ರೂ ನನಗೆ ಫೋನ್ ಮಾಡಿದ್ರಾ?’
“ನಮ್ ಮನೆಯವರನ್ನು ಬಯ್ಯೋದು ಅಂದ್ರೆ ಖುಷಿ ನಿನಗೆ. ಸರಿ ಬಾ. ಮನೇಲೇ ಬಿದ್ದಿದೀನಿ. ಹೋಗಿ ತಿಂದು ಸಾಯೋಣ” ಫೋನ್ ಕಟ್ ಮಾಡಿದ ರಾಜೀವ. ರಾಜೀವನ ನಿರ್ದಾಕ್ಷಿಣ್ಯಕ್ಕೆ ಎರಡು ಹನಿ ನೀರು ಬಂತು. ಎರಡು ಹನಿಯಷ್ಟೇ. ಮನಸ್ಸಿನ ಸ್ಥಿಮಿತ ಅಪರೂಪಕ್ಕೆ ಕಳೆದುಕೊಂಡಾಗ ರಾಜೀವ ಈ ರೀತಿ ಬಾಯಿಗೆ ಬಂದಂತೆ ಮಾತನಾಡುವುದು ಅಭ್ಯಾಸವಾಗಿಬಿಟ್ಟಿತ್ತು. ಸ್ಥಿಮಿತ ಕಳೆದುಕೊಳ್ಳುವುದು ಇತ್ತೀಚೆಗೆ ಅಪರೂಪವಲ್ಲ ಎನ್ನುವುದು ಬೇಸರ ಮೂಡಿಸುತ್ತದೆ. ನಿಟ್ಟುಸಿರುಬಿಟ್ಟು ಗೇರ್ ಬದಲಿಸಿದೆ. ಮುಂದಿನ ವಾರ ಈ ಸ್ಯಾಂಟ್ರೋ ಕಾರಿನ ಕಂತು ಬೇರೆ ಕಟ್ಟಬೇಕು ದಂಡಕ್ಕೆ. ನನ್ನ ಮೇಲೆ, ಅಪ್ಪ ಅಮ್ಮನ ಮೇಲೆ, ರಾಜೀವನ ಮೇಲೆಲ್ಲಾ ಕೋಪ ಉಕ್ಕಿಬಂತು. ಹುಟ್ಟುಹಬ್ಬದ ದಿನ ಯಾಕೆ ಕೋಪ ಎಂದುಕೊಂಡು ನಗು – ಧರಣಿಯ ಫೇಮಸ್ ನಗುವನ್ನು- ಮುಖದ ಮೇಲೆ ತಂದುಕೊಂಡು ರೇಡಿಯೋ ಹಚ್ಚಿದೆ.
ಕಿತನೇ ಅಜೀಬ್ ರಿಶ್ತೆ ಹೇ ಯಹಾ ಪೇ…… ಪೇಜ್ 3 ಚಿತ್ರದ ನನ್ನ ಮೆಚ್ಚಿನ ಹಾಡು ಬರುತ್ತಿತ್ತು.
ಮನೆ ತಲುಪಿದಾಗ ಮೂರಾಗಿತ್ತು. ರಾಜೀವ ತಯಾರಾಗಿ ಕುಳಿತಿದ್ದ. ಅಪ್ಪ ಆಗಲೇ ಫೋನ್ ಮಾಡಿದ್ದರು. ಊಟ ಮಾಡದೆ ಕಾಯುತ್ತಿದ್ದರಂತೆ. ‘ಡಯಾಬಿಟೀಸ್ ಇದೆ. ಮೊದಲು ಊಟ ಮಾಡ್ಕೊಳ್ಳಿ. ನಾವು ಬರೋದು ಮೂರೂವರೆ ನಾಲ್ಕಾಗುತ್ತೆ’ ಎಂದು ಬಯ್ದಿದ್ದೆ. ಕೋಪಗೊಂಡಿರುವ ಗಂಡನನ್ನು ರಮಿಸಿ ಸಮಾಧಾನ ಮಾಡಿ ಅಪ್ಪನ ಮನೆಗೆ ಹೋಗೋದಕ್ಕೆ ಆಗುತ್ತ ಎಂಬ ಅನುಮಾನದೊಂದಿಗೇ ಬಂದಿದ್ದೆ. ಇಲ್ಲಿ ನೋಡಿದರೆ ರಾಜಿ ಆಗಲೇ ರೆಡಿಯಾಗಿ ಕುಳಿತಿದ್ದಾನೆ.
“ಇದ್ಯಾಕೆ ಇಷ್ಟು ಲೇಟಾಯ್ತು” ಮುಖ ತೊಳೆದು ಹೊರಗೆ ಬರುತ್ತಿದ್ದಾಗ ಕೇಳಿದ.
‘ಆ ರವಿ ಡಾಕ್ಟ್ರು ಬಂದಿದ್ದತ್ತು ನಿಮಿಷ ತಡ ಆಯ್ತು. ಅದಕ್ಕೆ ಲೇಟು’ ಸ್ವಲ್ಪ ಮುಗುಮ್ಮಾಗೇ ಹೇಳಿದೆ.
“ಸರಿ ಸರಿ ಬೇಗ ರೆಡಿಯಾಗು. ಹೊಟ್ಟೆ ಹಸೀತಿದೆ. ಹೋಗೋಣ ಬೇಗ” ಅರ್ಧ ಘಂಟೆಗೆ ಮೊದಲು ಏನೇನೋ ಮಾತಾಡಿದ್ದು ಇವರೇನಾ ಎಂದುಕೊಂಡು ನಗುತ್ತಾ
‘ಓಹೋ. ಸಾಹೇಬ್ರು ಬರಲ್ಲ ಅಂತಿದ್ರು ಮಾವನ ಸಾರಿ ಸಾರಿ ನಮ್ಮಪ್ಪನ ಮನೇಗೆ’ ಎನ್ನುತ್ತಾ ಅವರ ಬಳಿ ಹೋಗಿ ತಬ್ಬಿಕೊಂಡೆ.
ಗಟ್ಟಿಯಾಗಿ ನನ್ನನ್ನು ತಬ್ಬಿಕೊಳ್ಳುತ್ತಾ “ಏನ್ ಮಾಡ್ತೀಯ ಚಿನ್ನು. ಏನೇನೋ ಯೋಚ್ನೆ. ಟೆನ್ಶನ್ನು. ಓದಿಗೆ ತಕ್ಕ ಕೆಲಸ ಸಿಗಲಿಲ್ಲ. ನನ್ನ ಓದಿಗೆ ಒಳ್ಳೆ ಸಂಬಳ ಸಿಗೋದು ಬೆಂಗಳೂರಿನಲ್ಲಿ. ಬೆಂಗಳೂರಿಗೆ ಹೋಗೋಣ ಅಂದ್ರೆ ನೀನು ಒಪ್ಪಲ್ಲ. ಬರೀ ಎಂಬಿಬಿಎಸ್ ಮಾಡಿ ಬೆಂಗಳೂರಲ್ಲಿ ಸೆಟ್ಲ್ ಆಗೋದು ಕಷ್ಟ ಅಂತೀಯ. ಇನ್ನು ನಮ್ಮ ಮನೆಯವರು ನಮ್ಮಿಬ್ಬರನ್ನು ನೋಡೋ ರೀತಿಗೆ ಮತ್ತಷ್ಟು ಸಿಟ್ಟು ಬರುತ್ತೆ. ಆ ಸಿಟ್ಟನ್ನು ನಿನ್ನ ಮೇಲೆ ತೀರಿಸ್ತೀನಿ. ಸಾರಿ”
‘ಸಾರಿ ಎಲ್ಲಾ ಯಾಕೆ ಪುಟ್ಟ. ಕೆಲ್ಸ ಸಿಗುತ್ತೆ ಸುಮ್ನಿರು. ನಾನ್ ದುಡೀತಾ ಇಲ್ವಾ? ನಾನೇನಾದರೂ ನೀವು ನನ್ನಷ್ಟು ದುಡಿಯೋದಿಲ್ಲ ಅಂತ ಕಂಪ್ಲೇಂಟ್ ಹೇಳ್ತೀನಾ? ಇಲ್ಲವಲ್ಲ. ನಿಮ್ಮ ಅಪ್ಪ ಅಮ್ಮ ನಮ್ಮ ಅಪ್ಪ ಅಮ್ಮ ಏನು ಮಾತನಾಡಿದರೆ ಏನಂತೆ. ಕೊನೆಗೆ ನಾವಿಬ್ಬರು ಖುಷಿಯಾಗಿರಬೇಕು ಅಷ್ಟೇ. ನಿನಗಿಷ್ಟವಿಲ್ಲಾಂದರೆ ಅಪ್ಪನ ಮನೆಗೆ ಹೋಗೋದು ಬೇಡ ಬಿಡು. ಇಲ್ಲೇ ಏನಾದ್ರೂ ಮಾಡೋಣ, ಅಥವಾ ಹೋಟೆಲ್ಲಿಗೆ ಹೋಗೋಣ. ಏನು ಬೇಡಾಂದರೆ ರೂಮಿಗೆ ಹೋಗೋಣ’ ಎಂದ್ಹೇಳಿ ತೋಳು ಕಚ್ಚಿದೆ.
“ಅಯ್ಯಪ್ಪ. ಈ ಬಿಸಿಲಲ್ಲಿ ಇದೆಲ್ಲಾ ಬೇಕಾ. ನಮ್ಮತ್ತೆ, ನನಗಿಷ್ಟ ಅಂತ ತಲೆಕಾಲು ಸಾರು ಮಾಡಿದ್ದಾರಂತೆ. ಭಾಮೈದ ಫೋನ್ ಮಾಡಿದ್ದ. ನಡೀ ಬೇಗ ಹೋಗಿ ಬಾರ್ಸೋಣ” ನಗುತ್ತ ತೋಳ ತೆಕ್ಕೆಯಿಂದ ಬಿಡಿಸಿಕೊಂಡ. ತುಟಿಗೊಂದು ಮುತ್ತು ಕೊಟ್ಟ. ಘಂಟೆಯ ಮುಂಚೆ ಹಿಂಗಿಹೋಗಿದ್ದ ಹುಟ್ಟುಹಬ್ಬದ ಉತ್ಸಾಹ ಮತ್ತೆ ಪುಟಿದೆದ್ದಿತು. ಹುಟ್ಟುಹಬ್ಬಕ್ಕೆ ಗಂಡ ಕೊಡಿಸಿದ್ದ ಸೀರೆ ಬಿಚ್ಹಾಕಿ ತಮ್ಮ ಕೊಡಿಸಿದ್ದ ಚೂಡಿದಾರ್ ಹಾಕಿಕೊಂಡು ಅಪ್ಪನ ಮನೆಗೆ ಬೈಕಿನಲ್ಲೇ ಹೊರಟೆವು
ಅಪ್ಪನಿಗೆ ಅಷ್ಟು ಬಯ್ದಿದ್ದರೂ ಊಟ ಮಾಡದೇ ಹಾಗೇ ಕುಳಿತಿದ್ದರು. ಅಮ್ಮ ಹಂಗೆಲ್ಲ ಕಾಯೋದಿಲ್ಲ, ಸರಿಯಾದ ಸಮಯಕ್ಕೆ ಊಟ ಮಾಡಿಬಿಡ್ತಾರೆ. ತಮ್ಮ ಶಶಿ ಊಟ ಮಾಡಿ ಟಿವಿ ಹಾಕ್ಕೊಂಡು ಕುಳಿತಿದ್ದ. ಡೈನಿಂಗ್ ಟೇಬಲ್ ಮೇಲೆ ಅಡುಗೆಯನ್ನೆಲ್ಲಾ ಜೋಡಿಸಿಟ್ಟಿದ್ದರು ಅಮ್ಮ. ಎರಡು ತಟ್ಟೆಗೆ ಮುದ್ದೆ ತಲೆಕಾಲು ಸಾರು ಹಾಕಿಕೊಂಡು, ಎರಡು ಚಿಕ್ಕ ತಟ್ಟೆಗೆ ಚಿಕನ್ ಚಾಪ್ಸ್ ಹಾಕಿಕೊಂಡು ಹಾಲಿಗೇ ತೆಗೆದುಕೊಂಡು ಬಂದೆ. ಅಪ್ಪನಿಗೆ, ರಾಜಿಗೆ ತಟ್ಟೆ ಕೊಟ್ಟು, ಇನ್ನೊಂದು ತಟ್ಟೆಗೆ ಅನ್ನ ಚಿಕನ್ ಚಾಪ್ಸ್ ಹಾಕಿಕೊಂಡು ಬಂದೆ. ನನಗೇನೋ ತಲೆಕಾಲಿನ ಸುಟ್ಟ ವಾಸನೆ ಮುಂಚಿನಿಂದಾನೂ ಇಷ್ಟವಾಗುವುದಿಲ್ಲ.
“ಹುಟ್ಟಿದಬ್ಬ ನನ್ದು. ಅಡ್ಗೆ ಮಾತ್ರ ಅಳಿಯನಿಗೆ ಬೇಕಾದದ್ದು” ಎಂದು ಅಮ್ಮನ ಮೇಲೆ ಗೊಣಗುತ್ತಲೇ ತಿಂದು ಮುಗಿಸಿದೆ. ಊಟ ಮುಗಿಸಿ ಐದು ನಿಮಿಷಕ್ಕೆಲ್ಲಾ ಹೊರಟುಬಿಟ್ಟೆವು. ನಮ್ಮಪ್ಪನದು ಮಾತು ಸ್ವಲ್ಪ ಜಾಸ್ತಿ. ಓತಪ್ರೋತವಾಗಿ ಏನೇನೋ ಮಾತಾಡ್ತಾರೆ. ಎದುರಿಗಿರುವವರು ಕೇಳುತ್ತಿದ್ದಾರ ಎನ್ನುವುದನ್ನೂ ಗಮನಿಸುವುದಿಲ್ಲ. ಇವರಿಗೆ ಅಷ್ಟೆಲ್ಲಾ ಮಾತು ಕೇಳಲು ತಾಳ್ಮೆಯೇ ಇಲ್ಲ. ಅದಕ್ಕೆ ಬೇಗ ಹೊರಟುಬಿಟ್ಟೆವು. ಮನೆಯಿಂದ ಹೊರಡುವಾಗ ಬೇಡ ಬೇಡವೆಂದರೂ ಕಣ್ಣು ಹಾಲಿನಲ್ಲಿದ್ದ ಶೋಕೇಸಿನ ಕಡೆಗೆ ಹೋಯಿತು. ನನ್ನ ಮದುವೆಯದೆರಡು ಫೋಟೋ ಇತ್ತು. ನಾವು ಚಿಕ್ಕವರಿದ್ದಾಗ ತೆಗೆಸಿಕೊಂಡಿದ್ದ ಫೋಟೋಗಳಿದ್ದವು. ಶಶಿಯ ಹುಟ್ಟುಹಬ್ಬಕ್ಕೆ ಬಂದಿದ್ದ ಮೂರು ಚೆಂದದ ಗೊಂಬೆಗಳಿತ್ತು; ಸೋನಿಯಾ ಕೊಟ್ಟಿರಬೇಕು. ಇನ್ನು ಶಶಿ ಮದುವೆ ಸಮಯದಲ್ಲಿ ಎಷ್ಟು ಗಲಾಟೆ ನೋಡಬೇಕೋ ಎಂದುಕೊಳ್ಳುತ್ತಾ ಹೊರಟೆ. ಶೋಕೇಸು ನೋಡಿದಾಗಲೆಲ್ಲ ಹಳೆಯ ನೆನಪುಗಳು ಕಾಡದೆ ಇರುವುದಿಲ್ಲ.

No comments:

Post a Comment