Apr 4, 2017

ಗದ್ದರ್ ನೆನಪಲ್ಲೊಂದು ಗೆಳೆಯರ ಕತೆ......

ಕು.ಸ.ಮಧುಸೂದನನಾಯರ್ ರಂಗೇನಹಳ್ಳಿ
ಗದ್ದರ್!
ಗದ್ದರ್ !!
ಕಳೆದೆರಡು ದಿನಗಳಿಂದ ಸುದ್ದಿಯಾಗುತ್ತಿರುವ ಗದ್ದರ್ ಇಷ್ಟು ವರ್ಷಗಳ ಕಾಲ ತಾವು ನಂಬಿಕೊಂಡಿದ್ದ ಮಾರ್ಕ್ಸ್ ವಾದವನ್ನು ಹಾಡುನೃತ್ಯಗಳ ಮೂಲಕ ಜನರಿಗೆ ಅದರಲ್ಲಿಯೂ ತಳ ಸಮುದಾಯಗಳ ಯುವಕರಿಗೆ ತಲುಪಿಸುತ್ತಿದ್ದ ಕ್ರಾಂತಿಕಾರಿ ನಾಯಕ. ಇದೀಗ ಇಂತಹ ಗದ್ದರ್ ಪುರೋಹಿತರ ಪಾದದ ಬಳಿ ಮಂಡಿಯೂರಿ ಕುಳಿತು ಪೂಜೆ ಸಲ್ಲಿಸಿದ ಬಗ್ಗೆ ಪರವಿರೋಧಗಳ ಚರ್ಚೆ ಬಿರುಸಿನಿಂದ ನಡೆಯುತ್ತಿದೆ.

ಯಾಕೆ ವ್ಯಕ್ತಿಯೊಬ್ಬ ಇದ್ದಕ್ಕಿದ್ದ ಹಾಗೆ ಹೀಗೆ ಬದಲಾಗಿ ಬಿಡುತ್ತಾನೆ? ಅಥವಾ ನಾವು ಅಂದುಕೊಳ್ಳುವ ಆ ‘ಇದ್ದಕ್ಕಿದ್ದಂತೆ’ ಎಂಬುದು ಆ ವ್ಯಕ್ತಿಯ ಒಳಗೆ ವರುಷಗಳಿಂದ ನಡೆಯುತ್ತಿದ್ದ ತಳಮಳಗಳ ಪ್ರತಿಫಲವೇ ಎಂಬುದನ್ನು ಯೋಚಿಸಲೂ ಕಾಯದೆ ತತ್ ಕ್ಷಣದ ಪ್ರತಿಕ್ರಿಯೆ ನೀಡುವ ಭರದಲ್ಲಿ ನಾವು ಎಡವುತ್ತಿದ್ದೇವೆಯೇ? ಗೊತ್ತಿಲ್ಲ!
ಹೋರಾಟದ ಸಾಗರದಲ್ಲಿದ್ದವನಿಗೆ ಕ್ಷೇಮವಾಗಿ ದಡ ತಲುಪಿ ನಿರಾಳವಾಗಿ ಉಳಿದ ಬದುಕು ಕಳೆಯುವ ಆಸೆಯಾಯಿತೇ? ಇಲ್ಲಾ, ಹೋರಾಟದ ಹಾದಿ ಎಂದೂ ಮುಗಿಯದ್ದು ಎನಿಸಿ ನಿರಾಸೆಯಾಗಿ ಈಜಿದ್ದು ಸಾಕೆನಿಸಿತೊ ಗೊತ್ತಿಲ್ಲ!

ಮೊನ್ನಮೊನ್ನೆವರೆಗು ಉರಿಯುವ ಬೆಂಕಿ ಚೆಂಡಾಗಿದ್ದ ಗದ್ದರ್!
ಈಗ ಮಂಜುಗಡ್ಡೆಯಂತೆ ದೀನನಾಗಿ ಪುರೋಹಿತರ ಮುಂದೆ ಮಂಡಿಯೂರಿ ಕುಳಿತ ಗದ್ದರ್! ಇಬ್ಬರೂ ಬೇರೆ ಬೇರೆಯೇ? ಇಲ್ಲಾ ಆ ಒಬ್ಬರೇ ಈ ಒಬ್ಬರೊ?
ನನಗಂತು ಗೊಂದಲವಾಗುತ್ತಿದೆ!

ಆದರೆ ಮನುಷ್ಯ ಯಾಕೆ ತನ್ನ ಸಿದ್ದಾಂತಗಳಿಂದ ದೂರವಾಗಿ, ವರುಷಗಳ ಕಾಲ ತಾನು ನಂಬಿದ್ದ ತತ್ವಗಳಿಗೆ ತದ್ವಿರುದ್ದವಾದ ಸಿದ್ದಾಂತವೊಂದನ್ನು ಒಪ್ಪಿಕೊಳ್ಳುತ್ತಾನೆ ಮತ್ತು ಅಪ್ಪಿಕೊಳ್ಳುತ್ತಾನೆ? ಇದೇನು ಜಗದ ಬದಲಾವಣೆಯ ನಿಸರ್ಗ ನಿಯಮವೊ ಅಥವಾ ಮನುಷ್ಯಸಹಜವಾದ ದೌರ್ಬಲ್ಯದ ಪ್ರತೀಕವೋ?

ಇದೀಗ ನನಗೆ ಆ ದಂಪತಿಗಳು ನೆನಪಾಗುತ್ತಿದ್ದಾರೆ.
ಅವನು ನನ್ನ ಗೆಳೆಯ. ಹರಯದಲ್ಲಿ ಕ್ರಾಂತಿಯ ಕನಸುಕಂಡು ನಕ್ಸಲಿಸಂನಿಂದ ಆಕರ್ಷಿತನಾಗಿ ಆಂದ್ರದ ಕಾಡುಗಳನ್ನು ಅಲೆದು ಬಂದವನು. ಅಪ್ಪಟ ನಾಸ್ತಿಕ. ದೇವರನ್ನು ಕಂಡರೆ ದೇವರೇ ಬೆಚ್ಚುವಷ್ಟು ಬಯ್ಯುತ್ತಿದ್ದವನು. ಹನ್ನೆರಡನೇ ವಯಸ್ಸಿಗೆ ಸೊಂಟದ ಉಡುದಾರ ಕಿತ್ತೆಸೆದು ಹದಿನಾರಕ್ಕೆ ಉಪನಯನಕ್ಕೆ ಸಿದ್ದತೆ ನಡೆಸಿದ ಅಪ್ಪ ಅಮ್ಮರನ್ನೇ ತೊರೆದು ಮನೆ ಬಿಟ್ಟು ಓಡಿ ಹೋದವನು. ಒಂದು ಸಾರಿ ಬೈಕಿಂದ ಬಿದ್ದು ಮಾರಣಾಂತಿಕ ಗಾಯವಾದಾಗಲೂ ಒಂದು ಬಾರಿಯೂ ದೇವರೆ ಕಾಪಾಡು ಅಂತ ಉಚ್ಚರಿಸದೆ ಬದುಕುತ್ತಿದ್ದವನು!

ಅವಳು ನನ್ನ ಗೆಳತಿ. ಪಿಯುಸಿ ಓದುವಾಗಲೇ ಎ.ಬಿ.ವಿ.ಪಿಯನ್ನು ಸೇರಿ ಹೋರಾಟ ಶುರುಮಾಡಿಕೊಂಡವಳು. ಪ್ರತಿದಿನ ಒಂದಾದರು ದೇವಸ್ಥಾನಕ್ಕೆ ಹೋಗಿ ಕೈಮುಗಿದು ಬರುವ ಅಪ್ಪಟ ದೈವಶ್ರದ್ದೆಯ ಹುಡುಗಿ. ಬೈರಪ್ಪನವರನ್ನು ಸಾಕ್ಷಾತ್ ದೇವರೆಂದು ನಂಬಿ ಓದುತ್ತಿದ್ದವಳು. ಮಾತೆತ್ತಿದರೆ ಹಿಂದು, ಹಿಂದೂ ಧರ್ಮದ ಶ್ರೇಷ್ಠತೆಯ ಕುರಿತಾಗಿ ಬಾಷಣ ಮಾಡುತ್ತಿದ್ದವಳು. ನಾನು ಬರೆಯುತ್ತಿದ್ದ ಬಂಡಾಯದ ಕವಿತೆಗಳನ್ನು ಅಕ್ಷರಶ: ದ್ವೇಷಿಸುತ್ತಿದ್ದವಳು….ವಿಶ್ವದಲ್ಲಿ ತನ್ನ ಧರ್ಮ ಮತ್ತು ತನ್ನ ಜಾತಿಯೇ ಮೇಲೆಂದು ನಂಬಿಕೊಂಡೆ ಬದುಕುತ್ತಿದ್ದವಳು. ಬಹುಶ: ಅವಳ ತಂದೆ ಸಾಯದೆ ಇದ್ದಿದ್ದರೆ ಅವಳಿಷ್ಟು ಹೊತ್ತಿಗೆ ಸನ್ಯಾಸಿನಿಯೊ, ಧರ್ಮ ಪ್ರಚಾರಕಳೊ ಆಗಿರುತ್ತಿದ್ದಳು ಅನಿಸುತ್ತೆ. ತಂದೆ ಸತ್ತ ಕೂಡಲೆ ದೊಡ್ಡ ಕುಟುಂಬದ ಹೊಣೆಗಾರಿಕೆ ಹೊತ್ತು, ತಾನು ಓದುತ್ತಿದ್ದ ಎಂ.ಎ ಅರ್ದಕ್ಕೆ ನಿಲ್ಲಿಸಿ ಬೆಂಗಳೂರಲ್ಲಿ ಕೆಲಸಕ್ಕೆ ಸೇರಿ ಕೊಂಡಳು. ಇಷ್ಟಾದರೂ ಧರ್ಮ ದೇವರೆಡೆಗಿನ ಅವಳ ಶ್ರದ್ದೆ ಕಡಿಮೆಯಾಗಿರಲಿಲ್ಲ.

ಇವೆಲ್ಲಾ ಆಗಿ ಹತ್ತು ವರ್ಷಗಳ ನಂತರ ಅವನ ಮತ್ತು ಅವಳ ಬೇಟಿಯಾಯಿತು. ಅವರ ಮೊದಲ ಬೇಟಿಗೆ ನಾನೂ ಸಾಕ್ಷಿಯಾಗಿದ್ದೆ. ಆ ಮೊದಲ ದಿನವೂ ಅವರಿಬ್ಬರು ಧರ್ಮದ, ದೇವರ, ಅಸ್ಥಿತ್ವದ ಬಗ್ಗೆ ಚರ್ಚೆ ನಡೆಸುತ್ತಲೇ ಇದ್ದರು. ಬೆಂಗಳೂರಲ್ಲೇ ಇದ್ದ ಅವರಿಬ್ಬರೂ ಆಗಾಗ ಬೇಟಿಯಾಗುತ್ತಿದ್ದರಂತೆ. ಇಬ್ಬರೂ ನನಗೆ ಆಗಾಗ ಪೋನು ಮಾಡುತ್ತಿದ್ದರು ವಾರಕ್ಕೊಂದರಂತೆ ಕಾಗದ ಬರೆಯುತ್ತಿದ್ದರು. ಹೀಗೆ ಐದು ವರ್ಷಗಳ ನಂತರ ಒಂದು ದಿನ ಇಬ್ಬರೂ ನಮ್ಮ ಹಳ್ಳಿಗೆ ಬಂದರು. ನಾವಿಬ್ಬರೂ ಮದುವೆಯಾಗುತ್ತಿರುವುದಾಗಿ ಹೇಳಿ ನನಗೆ ಆಘಾತ ಉಂಟು ಮಾಡಿದರು. ಪರಸ್ಪರ ವಿರುದ್ದ ದೃವಗಳಂತಿದ್ದ ಅವರ ಮದುವೆಯನ್ನು ನಾನು ಕನಸಿನಲ್ಲೂ ಕಲ್ಪಿಸಿಕೊಳ್ಳಲು ಸಾದ್ಯವಿರಲಿಲ್ಲ. ಇಬ್ಬರನ್ನೂ ಕೂರಿಸಿಕೊಂಡು ಅವರ ನಡುವಿರುವ ಅಭಿಪ್ರಾಯ ಬೇದಗಳ ಬಗ್ಗೆ ಸಿದ್ದಾಂತಗಳ ವ್ಯತ್ಯಾಸಗಳನ್ನು ಬಿಡಿಸಿ ಹೇಳಿದೆ. ಅವರಿಬ್ಬರೂ ಒಂದೇ ದ್ವನಿಯಲ್ಲಿ ಹೇಳಿದ ಮಾತು::-

“ನಾವು ಮೆಚ್ಯೂರ್ಡ ಇನಫ್! ಸಾದ್ಯವಾದರೆ ಬಂದು ರಿಜಿಸ್ಟರ್ ಆಫೀಸಿನಲ್ಲಿ ಸಾಕ್ಷಿಯಾಗಿ ಸಹಿ ಮಾಡು ಸಾಕು!: ನಾನು ಮತ್ತೆ ಮಾತನಾಡಲಿಲ್ಲ. ಹಣಗಿಣ ಬೇಕೆ ಅಂದೆ. ಇಬ್ಬರೂ ಮುಲಾಜಿಲ್ಲದೆ ‘ಬೇಕಾಗಿಲ್ಲ’ ಅಂದರು. ನಾನು ಮದುವೆಗೆ ಹೋಗಲಾಗಲಿಲ್ಲ. ಒಂದು ತಿಂಗಳಾದ ನಂತರ ಬೆಂಗಳೂರಿನ ಅವರ ಮನೆಗೆ ಹೋದೆ. ಪುಟ್ಟ ಮನೆಯಾದರು ನೀಟಾಗಿ ಇಟ್ಟುಕೊಂಡಿದ್ದರು.ಪುಟ್ಟ ಅಡುಗೆ ಮನೆಯ ಗೂಡಿನಲ್ಲಿ ಅವಳ ಎರಡು ದೇವರ ಪೋಟೊಗಳಿದ್ದವು ಪುಟ್ಟ ದೀಪವೊಂದು ಉರಿಯುತ್ತಿತ್ತು. ಇನ್ನೊಂದು ಸಣ್ಣ ರೂಮಲ್ಲಿ ಅವನವು ಒಂದಷ್ಟು ಪುಸ್ತಕಗಳು ಲೆನಿನ್ ಅಂಬೇಡ್ಕರ್ ಮುಂತಾದವರ ಪೋಟೊಗಳಿದ್ದವು. ಅವನೀಗ ಯಾವೊದೊ ಒಂದು ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ. ಅವಳು ಯಥಾಪ್ರಕಾರ ದುಡಿದ ಹಣದಲ್ಲಿ ಅರ್ದ ಮನೆಗೆ ಕಳಿಸುತ್ತಿದ್ದಳು. ಆಗಾಗ ಅವಳೇ ತಾಯಿಯ ಮನೆಗೆ ಹೋಗಿ ನೋಡಿಕೊಂಡು ಬರುತ್ತಿದ್ದಳು. ಅವರ್ಯಾರೂ ಇವರ ಮನೆಗೆ ಬರುತ್ತಿರಲಿಲ್ಲ ಬೆಳಿಗ್ಗೆ ಐದಕ್ಕೆ ಎದ್ದು ಸ್ನಾನಪೂಜೆ ಮಾಡಿ ತಿಂಡಿ ಅಡುಗೆ ಮಾಡಿ ಅವಳು ಕೆಲಸಕ್ಕೆ ಹೋಗುತ್ತಿದ್ದಳು. ಇವನು ನಿದಾನಕ್ಕೆ ಎದ್ದು ತಿಂಡಿತಿಂದು ಕೆಲಸಕ್ಕೆ ಹೋಗುತ್ತಿದ್ದ. ಸಂಜೆ ಇಬ್ಬರೂ ಒಂದೇ ಸಮಯಕ್ಕೆ ಮನೆಗೆ ಬರುತ್ತಿದ್ದರು. ನಾನಿದ್ದ ಒಂದು ವಾರದಲ್ಲಿ ಅವರನ್ನು ಕಂಡು ಖುಶಿಯಾಗಿತ್ತು. ಅವಳ ಪಾಡಿಗೆ ಅವಳು ತನ್ನ ಧರ್ಮಕಾರ್ಯಗಳಲ್ಲಿ ಮುಳುಗಿದ್ದರೆ ಇವನು ತನ್ನ ಬರವಣಿಗೆಯಲ್ಲಿ ತೊಡಗಿಕೊಂಡು ಕಾರ್ಖಾನೆಯ ಯೂನಿಯನ್ನಿನ ನಾಯಕನಾಗಿದ್ದ. ಆ ಎರಡೂ ದೃವಗಳೂ ತಾವಿದ್ದ ತಾಣ ಬದಲಿಸದೆಯೇ ಸೇರಿದಂತೆ ಕಂಡಿದ್ದವು.

ನಂತರ ವರುಷಗಳು ಉರುಳಿದವು. ಅವರಿಗೊಂದು ಹೆಣ್ಣು ಮಗುವಾಯಿತು. ಅದರ ಮೊದಲ ಹುಟ್ಟುಹಬ್ಬಕ್ಕೆ ಹೋಗಿಬಂದೆ. ಮಿಲಿ ಎಂದು ಹೆಸರಿಟ್ಟುಕೊಂಡ ಆ ಹೆಣ್ಣುಮಗು ಮುದ್ದಾಗಿತ್ತು. ಅವರ ಮನೆಯಿಂದ ಬಂದ ಒಂದೇ ವಾರದಲ್ಲಿ ನಾನು ಪಾರ್ಶ್ವವಾಯುವಿಗೆ ತುತ್ತಾದೆ. ಸತತ ಮೂರುವರ್ಷಗಳ ಕಾಲ ಒಂದು ಆಸ್ಪತ್ರೆಯಿಂದ ಇನ್ನೊಂದು ಆಸ್ಪತ್ರೆಗೆ ಅಲೆಯುವಂತಾಯಿತು. ಸ್ವತಂತ್ರವಾಗಿ ಓಡಾಡಲಾರದ ಸ್ಥಿತಿಯದು. ಅವರುಗಳಿಗೆ ವಿಷಯ ಮುಟ್ಟಿತೊ ಬಿಟ್ಟಿತೊ ಗೊತ್ತಿಲ್ಲ. ಅವರು ಬರಲಿಲ್ಲ. ಸ್ವಲ್ಪ ಚೇತರಿಸಿಕೊಂಡ ತರುವಾಯ ಅವರಿಗೆ ಪತ್ರಗಳನ್ನು ಬರೆದೆ, ವಿಳಾಸದಾರರು ಇಲ್ಲವೆಂದು ವಾಪಾಸು ಬಂದವು. ಹಲವು ಗೆಳೆಯರನ್ನು ಅವರ ಬಗ್ಗೆ ವಿಚಾರಿಸಲು ಹೇಳಿದೆ. ಆಗ ಗೊತ್ತಾಗಿದ್ದು ಅವರೀಗ ಬೆಂಗಳೂರಲ್ಲಿಯೇ ಇಲ್ಲ ಎಂಬುದು. ನಂತರ ಎಂಟು ವರ್ಷಗಳ ತರುವಾಯ ಒಂದು ಸಂಜೆ ದಿಡೀರನೆ ನಮ್ಮ ಮನೆಗೆ ಬಂದರು. ಜೊತೆಗೆ ಮಗಳಿರಲಿಲ್ಲ. ಕೇಳಿದೆ, “ಮೊದಲ ಹುಟ್ಟಿದ ಹಬ್ಬಕ್ಕೆಂದು ನೀನು ಬಂದು ಹೋದ ಒಂದೇ ವಾರಕ್ಕೆ ಮನೆಯ ಸಂಪಿನಲ್ಲಿ ಬಿದ್ದು ಸತ್ತು ಹೋದಳು. ನಾವಿಬ್ಬರೂ ಮನೆಯಲ್ಲೇ ಇದ್ದರೂ ಗೊತ್ತೇ ಆಗಲಿಲ್ಲ ಅಂತ ಇಬ್ಬರೂ ಅತ್ತರು. ಅವಳ ಸಾವು ನಮ್ಮನ್ನು ಬಹಳ ಕಾಡಿತು. ಬೆಂಗಳೂರನ್ನೇ ಬಿಡುವ ನಿರ್ದಾರಕ್ಕೆ ಬಂದುಬಿಟ್ಟೆವು. ನಿನಗೆ ಆರೋಗ್ಯ ಸರಿಯಿಲ್ಲದ ವಿಚಾರ ತಿಳಿಯುವಷ್ಟರಲ್ಲಿ ನಾವು ಹೈದರಾಬಾದಿಗೆ ಶಿಫ್ಟ್ ಆಗಿದ್ದೆವು. ಈಗಲೂ ಅಲ್ಲೇ ಇದ್ದೀವಿ” ಎಂದರು. ಮತ್ತೆ ಮಕ್ಕಳು? ಎಂದೆ.

ಆಗಲಿಲ್ಲ. ಎಲ್ಲ ಪ್ರಯತ್ನಗಳ ನಂತರವೂ ಏನೂ ಉಪಯೋಗವಾಗಲಿಲ್ಲ ಎಂದರು. ಆಯಿತು ಎಂದು ಅವರಿಗೆ ಸಮಾದಾನ ಮಾಡಿ ಒಂದಷ್ಟು ದಿನ ಇಲ್ಲಿದ್ದು ಹೋಗಿ ಎಂದೆ. ಒಂದು ವಾರ ನಮ್ಮ ಮನೆಯಲ್ಲಿಯೇ ಇದ್ದರು. ಆ ಏಳೂ ದಿನಗಳು ನನಗೆ ಮತ್ತಷ್ಟು ಅಚ್ಚರಿಯ ದಿನಗಳಾಗಿದ್ದವು. ಯಾಕೆಂದರೆ ಆ ವಿರುದ್ದ ದೃವಗಳು ತಮ್ಮ ಸ್ಥಾನಗಳನ್ನು ಅದಲು ಬದಲು ಮಾಡಿಕೊಂಡಿದ್ದವು. ಅವಳೀಗ ಬೆಳಿಗ್ಗೆ ಎದ್ದು ಸ್ನಾನಮಾಡಿ ಪೂಜೆ ಪುನಸ್ಕಾರಗಳನ್ನು ಮಾಡುತ್ತಿರಲಿಲ್ಲ. ಬದಲಿಗೆ ಅವನು ಬೇಗ ಎದ್ದು ಸ್ನಾನಪೂಜೆ ಮಾಡಿಯೇ ಮಿಕ್ಕ ಕೆಲಸ ಮಾಡುತ್ತಿದ್ದ. ಇಬ್ಬರನ್ನೂ ಕೂರಿಸಿಕೊಂಡು ಕೇಳಿದೆ. ನನಗೀ ದೇವರು ದಿಂಡರೆಲ್ಲ ಸುಳ್ಳು ಅನಿಸಿಬಿಟ್ಟಿದೆ. ನಾವು ದುಡಿಯಬೇಕು ತಿಂದು ಬದುಕಬೇಕು. ಅದರಾಚೆಗೇನಿದೆ ಅಂತ ಇಲ್ಲದ ದೇವರ ಕಲ್ಪಿಸಿಕೊಂಡು ನಾವ್ಯಾಕೆ ಸಾಯಬೇಕು? ಅಂದಳು. ಅವನೋ ನಮಗಿಂತ ದೊಡ್ಡ ಶಕ್ತಿಯೊಂದಿದೆ. ಕಣ್ಣಿಗೆ ಕಾಣದ ಆ ನಿರಾಕಾರನನ್ನು ಪ್ರಾರ್ಥಿಸುವುದು ನೆಮ್ಮದಿ ನೀಡುತ್ತೆ ಅಂದ. ಅವರಿಬ್ಬರೂ ಸಂಪೂರ್ಣವಾಗಿ ಬದಲಾಗಿದ್ದರು. ಅವನೊಳಗಿನ ಹೋರಾಟಗಾರ ಕಾಣೆಯಾಗಿದ್ದರೆ, ಅವಳೊಳಗಿನ ಆ ಮೃದುತ್ವ ನಾಶವಾಗಿ ಹೋಗಿತ್ತು

ಯಾಕೆ ಅವರಿಬ್ಬರೂ ಹಾಗೆ ತದ್ವಿರುದ್ದವಾಗಿ ಬದಲಾದರೊ ಗೊತ್ತಿಲ್ಲ. ಮಗುವಿನ ಸಾವು ಅವನನ್ನು ಧಾರ್ಮಿಕ ವ್ಯಕ್ತಿಯನ್ನಾಗಿಸಿತೆ? ಅದೇ ಸಾವು ಅವಳೊಳಗಿನ ಮೃದುತ್ವವನ್ನು ಸಾತ್ವಿಕತೆಯನ್ನು ಇಲ್ಲವಾಗಿಸಿತೆ? ಯಾಕೊ ಉತ್ತರ ಸಿಗಲಿಲ್ಲ. ಒಂದು ವಾರವಿದ್ದು ಹೋದ ಅವರು ಈಗಲೂ ನನ್ನನು ಕಾಡುತ್ತಿದ್ದಾರೆ. ಅವರನ್ನು ಹಾಗೆ ಬದಲಾಯಿಸಿದ ಶಕ್ತಿ ಯಾವುದು? ಯಾರಾದರೊಬ್ಬರು ಬದಲಾಗಿದ್ದರೆ ಕಾರಣ ತಿಳಿಯಬಹುದಿತ್ತು. ಆದರೆ ಇಬ್ಬರೂ ಬೇರೆಬೇರೆ ದೃವಗಳಲ್ಲಿದ್ದವರು ಮತ್ತೂ ಬೇರೆಬೇರೆ ದೃವಗಳಲ್ಲಿಯೇ ಇದ್ದಾರೆ.

ಮೊನ್ನೆ ತಾನೆ ಬೆಳ್ಳಂಬೆಳಿಗ್ಗೆ ಅವನಿಗೆ ಪೋನ್ ಮಾಡಿದೆ. ಅವನು ಎತ್ತಲಿಲ್ಲ. ಅವಳಿಗೆ ಮಾಡಿದೆ. ಪೋನ್ ಕರೆ ಸ್ವೀಕರಿಸಿದ ಅವಳು ದೇವಸ್ಥಾನಕ್ಕೆ ಹೋಗಿದ್ದಾರೆ ಅಂದಳು. ನೀನೇನು ಮಾಡುತ್ತಿದ್ದೀಯಾ ಎಂದೆ. ನಾನು ತಿಂಡಿಗೆ ರೆಡಿ ಮಾಡುತ್ತಿದ್ದೇನೆ ಎಂದು ಉತ್ತರಿದಳು. 

ಈಗ ಇಬ್ಬರೂ ಸುಖವಾಗಿ(?) ಬದುಕುತ್ತಿದ್ದಾರೆ- ತಮಗನಿಸಿದ ರೀತಿಯಲ್ಲಿ. ಸರಿ ತಪ್ಪು ಅನ್ನುವುದಕ್ಕೆ ನನಗೆ ಕಾರಣಗಳೇ ಇರಲಿಲ್ಲ. ಮನುಷ್ಯ ಯಾಕೆ ಬದಲಾಗುತ್ತಾನೆ ಎಂಬ ಪ್ರಶ್ನೆಗೆ ಮೂರನೇ ವ್ಯಕ್ತಿಗಳಾದ ನಾವು ಉತ್ತರ ನೀಡುವುದು ಕಷ್ಟ ಮತ್ತು ತಪ್ಪು. 

ಮೊನ್ನೆ ಬದಲಾಗಿದ್ದಾರೆಂದು ಹೇಳಲಾದ ಗದ್ದರ್ ಬಗ್ಗೆ ಓದಿದಾಗ ಈ ಇಬ್ಬರು ಗೆಳೆಯರ ನೆನಪಾಯಿತು, ಅಷ್ಟೇ. ಬರೆಯಬೇಕೆನಿಸಿತು. ಬರೆದೆ.

ತಾವ್ಯಾಕೆ? ಮತ್ತು ಹೇಗೆ? ಬದಲಾದೆ(ಬದಲಾಗಿದ್ದರೆ?) ಎನ್ನುವುದನ್ನು ಸ್ವತ: ಗದ್ದರ್ ಅವರೇ ಹೇಳಲೆಂದು ಕಾಯುತ್ತಿದ್ದೇನೆ…. ಎಂದಾದರೂ ಗದ್ದರ್ ಯಾವುದೇ ಆತ್ಮವಂಚನೆಯಿರದೆ ಹೇಳಿಯಾರೇ?
ಕಾಯೋಣ! 

No comments:

Post a Comment