Aug 17, 2016

ಉನ್ನತ ಶಿಕ್ಷಣದ ಮೋಹದಲ್ಲಿ ದುರ್ಗತಿ ಕಾಣುತ್ತಿರುವ ಪ್ರಾಥಮಿಕ ಶಿಕ್ಷಣ ವ್ಯವಸ್ಥೆ!

ಸಾಂದರ್ಭಿಕ ಚಿತ್ರ; ದಿ ಹಿಂದೂ
ಕು.ಸ.ಮಧುಸೂದನನಾಯರ್ ರಂಗೇನಹಳ್ಳಿ
17/08/2016
ಇಂಡಿಯಾದಂತಹ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿನ ಸರಕಾರವೊಂದಕ್ಕಿರಬಹುದಾದ ಜನಪರ ಕಾಳಜಿಯನ್ನು ಅರ್ಥ ಮಾಡಿಕೊಳ್ಳಲು ಆ ಸರಕಾರ ಸೇವಾ ಕ್ಷೇತ್ರಗಳಿಗೆ ನೀಡಿರುವ ಆಧ್ಯತೆಯನ್ನು, ಕೊಡಮಾಡಿರುವ ಅನುದಾನದ ಪ್ರಮಾಣಗಳನ್ನು ಅವಲೋಕಿಸಬೇಕಾಗುತ್ತದೆ. ಕರ್ನಾಟಕದಂತಹ ಕಲ್ಯಾಣರಾಜ್ಯದ ಮಟ್ಟಿಗೆ ಇಲ್ಲಿನ ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಗಳಿಗೆ ಸರಕಾರ ನೀಡುತ್ತಿರುವ ಪ್ರಾಮುಖ್ಯತೆಯ ಆಧಾರದ ಮೇಲೆ ಸರಕಾರವೊಂದಕ್ಕಿರುವ ಜನಪರ ಕಾಳಜಿಯ ಪ್ರಮಾಣ ಅನಾವರಣವಾಗುತ್ತದೆ. ಕರ್ನಾಟಕದ ಶಿಕ್ಷಣ ಕ್ಷೇತ್ರದ ಬಗ್ಗೆ ಅದ್ಯಯನ ಮಾಡುತ್ತಾ ಹೋದರೆ ತೀರಾ ವಿಚಿತ್ರವಾದ ಅಂಶವೊಂದು ಬೆಳಕಿಗೆ ಬರುತ್ತದೆ, ಯಾವುದೇ ರಾಜ್ಯವೊಂದು ಶೈಕ್ಷಣಿಕವಾಗಿ ನಿಜವಾದ ಪ್ರಗತಿ ಸಾದಿಸಲು ಅದು ಪ್ರಾಥಮಿಕ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕಾಗುತ್ತದೆ. ಭದ್ರ ಬುನಾದಿಯ ಪ್ರಾಥಮಿಕ ಶಿಕ್ಷಣವನ್ನು ತನ್ನ ಜನಸಮುದಾಯಕ್ಕೆ ನೀಡುವ ಮೂಲಕ ಅದು ಇತರೇ ಕ್ಷೇತ್ರಗಳಲ್ಲಿ ಪ್ರಗತಿಯನ್ನು ಸಾದಿಸಬಹುದಾಗಿದೆ. ಇಂದು ನಾಡನ್ನು ಆಧುನಿಕವಾಗಿ ಕಟ್ಟಲು ಬೇಕಾದ ಉನ್ನತ ಶಿಕ್ಷಣವನ್ನು ನೀಡುವ ಮುನ್ನ ಪ್ರಾಥಮಿಕ ಶಿಕ್ಷಣವನ್ನು ಗುಣಮಟ್ಟದ ಆಧಾರದಲ್ಲಿ ನೀಡಬೇಕಾಗುತ್ತದೆ. ಕರ್ನಾಟಕದ ಮಟ್ಟಿಗೆ ನಮ್ಮ ಪ್ರಾಥಮಿಕ ಶಿಕ್ಷಣಕ್ಕೆ ನಮ್ಮ ರಾಜ್ಯ ಸರಕಾರ ನೀಡಿರುವ ಪ್ರಾಮುಖ್ಯತೆಯನ್ನು ಗಮನಿಸುತ್ತಾ ಹೋದರೆ ನಮ್ಮ ಎದೆ ಒಡೆಯುವಂತಹ ಆಂಶಗಳು ಬೆಳಕಿಗೆ ಬರುತ್ತವೆ.

ಇವತ್ತು ಕರ್ನಾಟಕದ ಶಿಕ್ಷಣ ನೀತಿ ಸಂಪೂರ್ಣವಾಗಿ ಉನ್ನತ ಶಿಕ್ಷಣ ನೀತಿಯಾಗಿ ಮಾತ್ರ ಕೆಲಸ ಮಾಡುತ್ತಿದೆ. ಯಾವ ಸರಕಾರ ಪ್ರಾಥಮಿಕ ಶಿಕ್ಷಣಕ್ಕೆ ಹೆಚ್ಚಿನ ಗಮನ ನೀಡಬೇಕಾಗಿತ್ತೊ ಆ ಸರಕಾರ ಇಂದು ಪ್ರಾಥಮಿಕ ಶಿಕ್ಷಣವನ್ನು ಸಂಪೂರ್ಣವಾಗಿ ಕಡೆಗಣಿಸಿ ಉನ್ನತ ಶಿಕ್ಷಣ ನೀಡುವ ದಲ್ಲಾಳಿಯಂತೆ ಕೆಲಸ ಮಾಡುತ್ತಿದೆ. ಸರಕಾರಿ ಕನ್ನಡ ಶಾಲೆಗಳನ್ನು ನಡೆಸಲು ಬೇಕಾದ ಇಚ್ಚಾಶಕ್ತಿಯನ್ನೆಂದೊ ಕಳೆದುಕೊಂಡಿರುವ ಸರಕಾರ ಕೇವಲ ಇಂಜಿನಿಯರಿಂಗ್ ಮತ್ತು ವೈದ್ಯಕೀಯ ಶಿಕ್ಷಣಗಳಿಗೆ ಪ್ರಾದಾನ್ಯತೆ ನೀಡುತ್ತಿದೆ. ಇದರಿಂದಾಗಿ ರಾಷ್ಟ್ರ ಮಟ್ಟದಲ್ಲಿ ಕರ್ನಾಟಕವೆಂದರೆ ಉನ್ನತ ಶಿಕ್ಷಣದ ದಂದೆ ನಡೆಸುವ ರಾಜ್ಯವೆಂಬಂತಾಗಿ ಹೋಗಿದೆ. 1980ರವರೆಗು ಇದ್ದ ಸರಕಾರಿ ಇಂಜಿನಿಯರಿಂಗ್ ಕಾಲೇಜುಗಳು ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ್ದವು ಹಾಗಾಗಿ ಹೊರಗಿನವರು ಕರ್ನಾಟಕದಲ್ಲಿ ಶಿಕ್ಷಣ ಪಡೆಯಲು ಹಾತೊರೆಯುತಿದ್ದರು. ಇದನ್ನು ಬಳಸಿಕೊಂಡ ಸರಕಾರಗಳು ತದನಂತರದಲ್ಲಿ ನೂರಾರು ಖಾಸಗಿ ಇಂಜಿನಿಯರಿಂಗ್ ಹಾಗು ವೈದ್ಯಕೀಯ ಕಾಲೇಜುಗಳನ್ನು ಪ್ರಾರಂಬಿಸಲು ಅನುಮತಿ ನೀಡಿದವು. ಎಂಬತ್ತರ ದಶಕದ ನಂತರ ಎಲ್ಲ ಸರಕಾರಗಳು ರಾಜಕಾರಣಿಗಳಿಗೆ, ಹಲವು ಜಾತಿಯ ಮಠಗಳಿಗೆ, ಇತರೇ ಕ್ಷೇತ್ರಗಳ ಉದ್ಯಮಪತಿಗಳಿಗೆ ಇಂಜಿನಿಯರಿಂಗ್ ಮತ್ತು ವೈದ್ಯಕೀಯ ಶಿಕ್ಷಣ ಕಾಲೇಜು ಶುರು ಮಾಡಲು ಅನುಮತಿ ನೀಡುವ ಮೂಲಕ ಉನ್ನತ ಶಿಕ್ಷಣದ ವ್ಯಾಪಾರಿಕರಣಕ್ಕೆ ರಹದಾರಿ ನೀಡಿದವು ಇವತ್ತು ನೋಡಿ: ಬಹುತೇಕ ಮೇಲ್ಜಾತಿಗಳ ಮಠಗಳು ವೈದ್ಯಕೀಯ ಮತ್ತು ಇಂಜಿನಿಯರಿಂಗ್ ಕಾಲೇಜುಗಳನ್ನು ನಡೆಸುತ್ತಿವೆ. ಇನ್ನು ಎಲ್ಲಾ ಪಕ್ಷಗಳಲ್ಲಿರುವ ಬಲಿಷ್ಠ ರಾಜಕಾರಣಿಗಳು ಕೂಡ ಇದೇ ಕೆಲಸ ಮಾಡುತ್ತಿದ್ದಾರೆ. ಶಿಕ್ಷಣ ಕ್ಷೇತ್ರದ ಗಂಧಗಾಳಿಯೂ ಇಲ್ಲದ ಹತ್ತಾರು ಉದ್ಯಮಿಗಳು ಸಹ ಇವತ್ತು ಉನ್ನತ ಶಿಕ್ಷಣದ ಕಾಲೇಜುಗಳ ಒಡೆಯರಾಗಿ ತಮ್ಮ ಕಪ್ಪು ಹಣವನ್ನು ಬಿಳಿಯನ್ನಾಗಿ ಪರಿವರ್ತಿಸಿಕೊಳ್ಳುತ್ತಿದ್ದಾರೆ. ಹೀಗಾಗಿ ಇವತ್ತು ಇಂಜಿನಿಯರಿಂಗ್ ಮತ್ತು ವೈದ್ಯಕೀಯ ಕಾಲೇಜುಗಳನ್ನು ನಡೆಸುವುದು ಪ್ರತಿಷ್ಠೆಯ ಪ್ರಶ್ನೆಯಾಗಿದೆ. ಈ ಬಗ್ಗೆ ಒಂದಷ್ಟು ಅಂಕಿಅಂಶಗಳನ್ನು ಗಮನಿಸಿದರೆ ಮಾತ್ರ ನಿಮಗೆ ನಿಜಸ್ಥಿತಿ ಅರ್ಥವಾಗುತ್ತದೆ.

ಇವತ್ತು ಕರ್ನಾಟಕದಲ್ಲಿ ಸರಿಸುಮಾರು 205 ಇಂಜಿನಿಯರಿಂಗ್ ಕಾಲೇಜುಗಳಿವೆ. ಅಚ್ಚರಿಯ ಸಂಗತಿಯೆಂದರೆ ಇವುಗಳಲ್ಲಿ ಕೇವಕ 8 ಕಾಲೇಜುಗಳು ಮಾತ್ರ ಸರಕಾರಿ ಒಡೆತನದ್ದಾಗಿದ್ದು, ಉಳಿದವು ಖಾಸಗಿಯವರ ಕೈಲಿವೆ. ಇನ್ನು ನಮ್ಮ ರಾಜ್ಯ ಪ್ರತಿವರ್ಷ ಸುಮಾರು 83 ಸಾವಿರ ಇಂಜಿನಯರಿಂಗ್ ಪದವೀಧರರನ್ನು ತಯಾರು ಮಾಡುತ್ತಿದೆ. ದೇಶದ ಒಟ್ಟು ಜನಸಂಖ್ಯೆಯ ಶೇಕಡಾ ಎಂಟರಷ್ಟನ್ನು ಮಾತ್ರ ಹೊಂದಿರುವ ಕರ್ನಾಟಕ ರಾಷ್ಟ್ರದ ಒಟ್ಟು ಇಂಜಿನಿಯರಿಂಗ್ ಪದವೀಧರರಲ್ಲಿ ಶೇಕಡಾ 40ರಷ್ಟನ್ನು ಉತ್ಪಾದಿಸುತ್ತಿದೆ. ಇನ್ನು ವೈದ್ಯಕೀಯ ಶಿಕ್ಷಣ ಕ್ಷೇತ್ರಕ್ಕೆ ಬಂದರೆ 47 ವೈದ್ಯಕೀಯ ಕಾಲೇಜುಗಳಿದ್ದು ಪ್ರತಿವರ್ಷ 7 ಸಾವಿರದಷ್ಟು ವೈದ್ಯರು ಪದವಿ ಪಡೆದು ಹೊರಬರುತ್ತಿದ್ದಾರೆ.

ಯಾಕೆ ಹೀಗೆ? ಹೇಳುತ್ತಾ ಹೋದರೆ ಅದೇ ಒಂದು ಸುದೀರ್ಘ ಪ್ರಬಂದ ಬರೆಯಬೇಕಾಗುತ್ತದೆ. ಇಂತಹ ಉನ್ನತ ಶಿಕ್ಷಣ ಸಂಸ್ಥೆಗಳಿಂದ ಅದರ ಮಾಲೀಕರಿಗೆ ಅಪಾರ ಲಾಭವಿದೆ. ಸರಕಾರದ ಕೋಟಾ ಕಳೆದು ಉಳಿಯುವ ಆಡಳಿತ ಮಂಡಳಿಯ ಸೀಟುಗಳನ್ನು ಹಣಕ್ಕಾಗಿ ಮಾರಿಕೊಳ್ಳಲಾಗುತ್ತಿದೆ. ಜೊತೆಗೆ ಸರಕಾರದ ಯಾವುದೇ ನಿಯಮಗಳಿಗು ಬೆಲೆ ಕೊಡದೆಖಾಸಗಿ ಕಾಲೇಜುಗಳಲ್ಲಿ ಹೆಚ್ಚುವರಿ ಶುಲ್ಕವನ್ನು ಸುಲಿಗೆ ಮಾಡಲಾಗುತ್ತಿದೆ.ಖಾಸಗಿ ಕಾಲೇಜುಗಳ ಕ್ಯಾಪಿಟೇಶನ್ ದಂದೆ ತಡೆಯಲು ಯಾವ ಸರಕಾರಗಳಿಗುಸಾದ್ಯವಿಲ್ಲ ಮತ್ತು ಮನಸ್ಸೂ ಇಲ್ಲ. ಯಾಕೆಂದರೆ ಎಲ್ಲ ಪಕ್ಷಗಳಲ್ಲೂ ಖಾಸಗಿ ಸಂಸ್ಥೆಗಳ ಮಾಲೀಕರು ಶಾಸಕರಾಗಿಯೊ ಸಚಿವರಾಗಿಯೊ ಇದ್ದೇ ಇರುತ್ತಾರೆ. ಹೇಗೆ ಸರಕಾರದ ವ್ಯವಸ್ಥೆಯಲ್ಲಿ ಈಗಿರುವ ಸಕ್ಕರೆ ಲಾಬಿ ಸರಕಾರವನ್ನು ನಿಯಂತ್ರಿಸುತ್ತಿದೆಯೊ ಅದೇ ರೀತಿ ಖಾಸಗಿ ಶಿಕ್ಷಣ ಸಂಸ್ಥೆಗಳ ಲಾಬಿ ಸಹ ಕೆಲಸ ಮಾಡುತ್ತಿದೆ, ಕಳೆದ ಎರಡು ದಶಕಗಳಿಂದಲೂ ನಮ್ಮನ್ನಾಳುತ್ತ ಬಂದಿರುವ ಎಲ್ಲ ಸರಕಾರಗಳು ಈ ಉನ್ನತ ಶಿಕ್ಷಣ ದಂದೆಯ ನೆರವಿಗೆ ನಿಂತು ಪ್ರಾಥಮಿಕ ಶಿಕ್ಷಣವನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿರುವುದು ಎದ್ದು ಕಾಣುತ್ತಿದೆ. ಪ್ರತಿವರ್ಷದ ಆಯವ್ಯಯದಲ್ಲಿ ಪ್ರಾಥಮಿಕ ಶಿಕ್ಷಣಕ್ಕೆ ಶೇಕಡಾ ಹತ್ತಕ್ಕಿಂತ ಹೆಚ್ಚು ಅನುದಾನ ದೊರೆಯುತ್ತಿಲ್ಲ. ಮತ್ತು ಹೀಗೆ ದೊರೆತ ಅನುದಾನ ಕೂಡ ಸಿಬ್ಬಂದಿಯ ಸಂಬಳ ಇತ್ಯಾದಿಗಳಿಗೆ ಬಹುಪಾಲು ಖರ್ಚಾಗುತ್ತಿದೆ.ಸರಿ ಸುಮಾರು 57 ಸಾವಿರದಷ್ಟಿರುವ ಸರಕಾರಿ ಪ್ರಾಥಮಿಕ ಶಾಲೆಗಳ ದುಸ್ಥಿತಿಯನ್ನು ತಿಳಿಯಲುಅವುಗಳ ಕಟ್ಟಡಗಳನ್ನು ನೋಡಿದರೆ ಸಾಕು. ಬಹಳಷ್ಟು ಶಾಲೆಗಳು ದಶಕಗಳ ಹಿಂದೆ ಕಟ್ಟಲ್ಪಟ್ಟವಾಗಿದ್ದು ಅವುಗಳ ಒಳ ಹೋಗುವ ಯಾವ ಆಕರ್ಷಣೆಯು ಮಕ್ಕಳಿಗೆ ಉಳಿದಿರುವಂತೆ ಕಾಣುವುದಿಲ್ಲ. ಸುಸ್ಥಿತಿಯಲ್ಲಿರುವ, ಮಕ್ಕಳಿಗೆ ಆಕರ್ಷಕವಾಗಿರುವ ಕಟ್ಟಡಗಳನ್ನು ಹೊಂದಿರದ ಶಾಲೆಗಳನ್ನು ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಹೋಲಿಸಿ ನೋಡಿ. ಇವತ್ತು ಬಹುತೇಕ ಖಾಸಗಿ ಸಂಸ್ಥೆಗಳ ಕಾಲೇಜುಗಳು ಪಂಚತಾರಾ ಹೋಟೆಲುಗಳ ರೀತಿಯಲ್ಲಿ ವಿನ್ಯಾಸಗೊಂಡಿರುತ್ತವೆ. ನಮ್ಮ ಸರಕಾರಿ ಶಾಲೆಗಳ ಹೆಂಚಿನ ಕಟ್ಟಡಗಳು ಸುಣ್ಣಬಣ್ಣ ಕಾಣದೆ, ಮಳೆ ಬಂದರೆ ಸೋರುವ ಸ್ಥಿತಿಯಲ್ಲೇ ಇರುತ್ತವೆ. ಮಕ್ಕಳು ಸ್ವಯಂಆಕರ್ಷಣೆಯಿಂದ ಶಾಲೆಗೆ ಬಂದು ಕಲಿಯುವಂತಹ ಕಟ್ಟಡಗಳನ್ನಾಗಲಿ, ಅವರ ಪಠ್ಯಕ್ಕೆ ಪೂರಕಾದ ಮತ್ತು ಪಠ್ಯೇತರ ಚಟುವಟಿಕೆಗಳಿಗೆ ಬೇಕಾದ ಉಪಕರಣಗಳ ಸೌಲಭ್ಯಗಳಾಗಲಿ ಇರದ ಸರಕಾರಿ ಶಾಲೆಗಳನ್ನು ಸರಕಾರ ತನ್ನ ಅನಿವಾರ್ಯ ಕರ್ಮವೆಂಬಂತೆ ನಡೆಸುತ್ತಿದೆ. ಪ್ರಾಥಮಿಕ ಶಿಕ್ಷಣ ಸೃಜನಶೀಲವಾಗಿದ್ದರೆ ಮಾತ್ರ ಮಕ್ಕಳ ಬೌದ್ದಿಕ ಬದುಕು ಚೆನ್ನಾಗಿರುತ್ತದೆ. ಆದರೆ ನಾನು ಕಂಡಂತೆ ಸರಕಾರಿ ಶಾಲೆಗಳಲ್ಲಿರುವ ಅವ್ಯವಸ್ಥೆಗಳು ಮಕ್ಕಳು ಶಾಲೆಯಿಂದ ವಿಮುಖರಾಗುವಂತೆ ಮಾಡುತ್ತಿವೆ. ಇದರ ಜೊತೆಗೆ ಇವತ್ತಿಗೂ ಬಹಳಷ್ಟು ಶಾಲೆಗಳು ಏಕೋಪಾದ್ಯಾಯ ಶಾಲೆಗಳಾಗಿದ್ದು ಅವುಗಳಲ್ಲಿ ಕರ್ತವ್ಯ ನಿರ್ವಹಿಸುವ ಶಿಕ್ಷಕನೊಬ್ಬ ಶಿಕ್ಷಕ ವೃತ್ತಿಯ ಜೊತೆಜೊತೆಗೆ ಆಡಳಿತದ ವಿಷಯಗಳನ್ನೂ , ಈಗೀಗ ಬಿಸಿಯೂಟದ ಜವಾಬ್ದಾರಿಗಳನ್ನು ನಿಬಾಯಿಸಬೇಕಾಗಿದ್ದು ಆತ ಕ್ರಿಯಾಶೀಲನಾಗಿ ಮಕ್ಕಳಿಗೆ ಪಾಠಮಾಡುವ ಉತ್ಸಾಹವನ್ನೇ ಕಳೆದುಕೊಂಡಿರುತ್ತಾನೆ. ಇನ್ನು ಶಿಕ್ಷಕರುಗಳ ಪಾಡು ಹೇಳ ತೀರದು ಯಾವುದೇ ಗಣತಿಯ ಕಾರ್ಯವಿರಲಿ, ಚುನಾವಣೆಯ ಕಾರ್ಯವಾಗಲಿ ಆತನೇ ಮಾಡಬೇಕಾದ ಒತ್ತಡಗಳಿವೆ. ಒಂದು ಹಳ್ಳಿಯಲ್ಲಿ ಏಕ ಉಪಾದ್ಯಾಯ ಶಾಲೆಯಿದೆ ಅಂದುಕೊಂಡರೆ, ಆ ಶಾಲೆಯ ಶಿಕ್ಷಕಬೆಳಿಗ್ಗೆ ಎದ್ದು ಶಾಲೆಗೆ ಬಂದು, ಮೊದಲಿಗೆ ಬಿಸಿಯೂಟದ ಸಿಬ್ಬಂದಿಗೆ ದವಸದಾನ್ಯ ನೀಡಿ ಅದರ ಉಸ್ತುವಾರಿಯನ್ನು ನೋಡುತ್ತಲೇ ಪಾಠ ಮಾಡಬೇಕು. ಇನ್ನು ವರ್ಷದ ಆರಂಭದಲ್ಲಿ ಮಕ್ಕಳನ್ನು ದಾಖಲಾತಿ ಮಾಡುವ ಮತ್ತು ಉತ್ತೀರ್ಣರಾಗಿ ಹೊರಹೋಗುವ ಮಕ್ಕಳಿಗೆ ಟಿ.ಸಿ. ನೀಡುವುದನ್ನೂ ಮಾಡಬೇಕು. ಇದೆಲ್ಲದರ ಜೊತೆಗೆ ತಾಲ್ಲೂಕು ಕೇಂದ್ರಕ್ಕೆ ಹೋಗಿ ಮಕ್ಕಳಿಗೆ ಬಂದಿರುವ ಉಚಿತ ಪುಸ್ತಕಗಳನ್ನು ಸಮವಸ್ತ್ರಗಳನ್ನು ಹೊತ್ತು ತರಬೇಕು. ಒಮ್ಮೊಮ್ಮೆ ಇಂತಹ ಕೆಲಸಗಳಿಗಾಗಿ ಆತ ಬಹಳಷ್ಟು ಸಾರಿ ಅಲೆದಾಡಬೇಕು. ಈ ಅವಧಿಯಲ್ಲಿ ಆತ ಲಭ್ಯವಿರುವ ಪಕ್ಕದ ಶಾಲೆಯ ಶಿಕ್ಷಕನನ್ನು ಓಓಡಿ ಹಾಕಿಸಿಕೊಳ್ಳಬೇಕು ಇದು ಸಾದ್ಯವಾಗದೇ ಹೋದರೆ ಶಾಲೆಯನ್ನು ಆ ದಿನ ಮುಚ್ಚ ಬೇಕು. ಇದರ ಅರಿವಿರದ ಪೋಷಕರಿಂದ ಆತ ಬಯ್ಗುಳಗಳನ್ನು ಕೇಳಬೇಕಾಗುತ್ತದೆ. ಹೀಗೆ 21ನೇ ಶತಮಾನದಲ್ಲೂ ನಮ್ಮ ಸರಕಾರಗಳು ಏಕೋಪಾದ್ಯಾಯ ಶಾಲೆಗಳನ್ನು ನಡೆಸುತ್ತಿವೆಯೆಂದರೆ ಅದಕ್ಕಿಂತ ನಾಚಿಕೆಗೇಡಿನ ಮಾತು ಬೇರಿಲ್ಲ. ವಿದ್ಯಾರ್ಥಿಗಳ ಸಂಖ್ಯೆಗನುಗುಣವಾಗಿ ಶಿಕ್ಷಕರನ್ನು ನೇಮಿಸದೆ ಕಾಲಕಳೆಯುವ ಸರಕಾರ ಇಲಾಖೆಗೆ ಹೊಸದಾಗಿ ಬರುವ ಶಿಕ್ಷಣ ಮಂತ್ರಿಯ ಮರ್ಜಿಗನುಗುಣವಾಗಿ ಬದಲಿಸುವ ಪರೀಕ್ಷಾಕ್ರಮಗಳಿಂದ ಶಿಕ್ಷಕರು ಮತ್ತು ಮಕ್ಕಳಿಗೆ ತೊಂದರೆಯಾಗುತ್ತಿದೆ. ಇವತ್ತಿಗು ಶಾಲೆಗಳಲ್ಲಿ ಅಗತ್ಯ ಪೀಠೋಪಕರಣಗಳಾಗಲಿ, ಶೌಚಾಲಯಗಳಾಗಲಿ, ಆಟದ ಮೈದಾನಗಳಾಗಲಿ ಇಲ್ಲ. ಮನಸ್ಸು ಮಾಡಿದ್ದರೆ ಕಳೆದ ಅರವತ್ತು ವರ್ಷಗಳಲ್ಲಿ ಪ್ರಾಥಮನಿಕ ಶಿಕ್ಷಣವನ್ನು ವಿಶ್ವ ದರ್ಜೆಗೇರಿಸಬಹುದಾಗಿದ್ದ ಸರಕಾರಗಳು ಕೇವಲ ಉನ್ನತ ಶಿಕ್ಷಣಕ್ಕೆ ಮಹತ್ವ ನೀಡುತ್ತ ಪದವೀಧರರನ್ನು ಉತ್ಪಾದಿಸುವ ಕಾರ್ಖಾನೆಗಳನ್ನು ಪ್ರಾರಂಬಿಸಿದೆಯಷ್ಟೆ!

ಪ್ರಾಥಮಿಕ ಶಾಲೆಗಳು ಮಕ್ಕಳ ವಯೋಸಹಜ ಕುತೂಹಲಗಳನ್ನು ತಣಿಸಿ, ಅವರ ಬೌದ್ದಿಕ ಬೆಳವಣಿಗೆಗಳಿಗೆ ಸಹಕಾರಿಯಾಗಿ ಕಾರ್ಯನಿರ್ವಹಿಸಬೇಕಾಗಿದ್ದ ನಮ್ಮಲ್ಲಿರುವ ಶಾಲೆಗಳು ಸೂಕ್ತ ಕಟ್ಟಡಗಳಿರದೆ, ಸಾಕಷ್ಟು ಶಿಕ್ಷಕರುಗಳಿರದೆ- ಶಿಕ್ಷಕರುಗಳ ಮೇಲಿರುವ ಪಠ್ಯೇತರ ಚಟುವಟಿಕೆಗಳ ಒತ್ತಡಗಳಿಂದಾಗಿ ಅಂತಹ ಮಹತ್ವಪೂರ್ಣ ಕೆಲಸಗಳಾಗುತ್ತಿಲ್ಲ. ಇದಕ್ಕೆ ಪೂರಕವೆಂಬಂತೆ ಶಾಲೆಗಳು ಪ್ರಾರಂಬವಾಗಿ ಮೂರು ತಿಂಗಳಾದರು ಮಕ್ಕಳ ಕೈ ತಲುಪಬೇಕಾದ ಪಠ್ಯಪುಸ್ತಕಗಳು ತಲುಪಿಯೇ ಇರುವುದಿಲ್ಲ. ಇನ್ನು ಸರಕಾರ ನೀಡುವ ಸಮವಸ್ತ್ರ ತಲುಪುವಾಗ ಕನಿಷ್ಠ ಐದಾರು ತಿಂಗಳಾದರು ಆಗಿರುತ್ತದೆ.

ಪ್ರಾಥಮಿಕ ಶಿಕ್ಷಣ ಕ್ಷೇತ್ರದಲ್ಲಿನ ಸರಕಾರದ ಇಂತಹ ವೈಫಲ್ಯಗಳನ್ನು ತಮ್ಮ ಬಂಡವಾಳ ಮಾಡಿಕೊಂಡ ಖಾಸಗಿಯವರು ಕಾನ್ವೆಂಟುಗಳೆಂಬ ಅಂಗಡಿಗಳನ್ನು ತೆಗೆದು ಶಿಸ್ತಿನ ಹೆಸರಲ್ಲಿ, ಉತ್ತಮ ಇಂಗ್ಲೀಷ್ ಶಿಕ್ಷಣದ ಹೆಸರಲ್ಲಿ ಪೋಷಕರನ್ನು ಸುಲಿಗೆ ಮಾಡುತ್ತಿವೆ. ಇದನ್ನು ಕಂಡು ಪ್ರಭಾವಿತರಾದ ಮದ್ಯಮವರ್ಗ ಮತ್ತು ಬಡವರು ಸಾಲಸೋಲ ಮಾಡಿ ಖಾಸಗಿ ಶಾಲೆಗಳಿಗೆ ತಮ್ಮ ಮಕ್ಕಳನ್ನು ಸೇರಿಸುತ್ತಿದ್ದಾರೆ. ಇವತ್ತು ಹಳ್ಳಿಗಳ ಬಹಳಷ್ಟು ಜನರು ಇಂತಹ ಖಾಸಗಿ ಶಾಲೆಗಳ ಆಕರ್ಷಣೆಗೆ ಬಲಿಯಾಗಿ ತಮ್ಮ ಮಕ್ಕಳನ್ನು ಪಟ್ಟಣಗಳ ಶಾಲೆಗಳಿಗೆ ಕಳಿಸುತ್ತಿದ್ದಾರೆ. ಹೀಗಾಗಿ ಬಹುತೇಕ ಸರಕಾರಿ ಶಾಲೆಗಳಲ್ಲಿನ ಮಕ್ಕಳ ದಾಖಲಾತಿ ಕಡಿಮೆಯಾಗುತ್ತಿದೆ. ಇದನ್ನೇ ಕಾಯುತ್ತಿದ್ದವರಂತೆ ಸರಕಾರ ಕಡಿಮೆ ಮಕ್ಕಳ ನೆಪ ಹೇಳಿ ಸರಕಾರಿ ಶಾಲೆಗಳನ್ನು ಮುಚ್ಚುತ್ತಿವೆ. ಅಥವಾ ಸಚಿವರ ಬಾಷೆಯಲ್ಲಿಯೇ ಹೇಳುವುದಾದರೆ ವಿಲೀನಗೊಳಿಸುತ್ತಿವೆ.

ಒಟ್ಟಿನಲ್ಲಿ ನಮ್ಮ ಸರಕಾರಗಳು ಉನ್ನತ ಶಿಕ್ಷಣಕ್ಕೆ ನೀಡುತ್ತಿರುವ ಪ್ರದಾನ್ಯತೆಯನ್ನು ಪ್ರಾಥಮಿಕ ಶಿಕ್ಷಣಕ್ಕೆ ನೀಡದೆ ನಮ್ಮ ಮಕ್ಕಳ ಭವಿಷ್ಯದ ಜೊತೆ ಆಟವಾಡುತ್ತಿದ್ದಾರೆ.

No comments:

Post a Comment