Jul 28, 2016

ಹೆಚ್ಚಾಗುತ್ತಿರುವ ದಲಿತರ ಮೇಲಿನ ದೌರ್ಜನ್ಯಗಳು: ಮೋದಿಯವರ ಮೌನ ಮತ್ತು ರಾಜಧರ್ಮ! ಒಂದು ಟಿಪ್ಪಣಿ.

ಕು.ಸ.ಮಧುಸೂದನನಾಯರ್ ರಂಗೇನಹಳ್ಳಿ
28/07/2016
ಇತ್ತೀಚೆಗೆ ಗುಜರಾತಿನಲ್ಲಿ ಸತ್ತ ದನದ ಚರ್ಮ ಸುಲಿದರೆಂಬ ಕಾರಣಕ್ಕೆ ದಲಿತ ಯುವಕರ ಮೇಲೆ ಸವರ್ಣಿಯರು ನಡೆಸಿದ ಅಮಾನುಷ ಹಲ್ಲೆಗಳ ಬಗ್ಗೆ ಹಾಗು ಉತ್ತರಪ್ರದೇಶದಲ್ಲಿ ಹೆಚ್ಚುತ್ತಿರುವ ದಲಿತರ-ಅಲ್ಪಸಂಖ್ಯಾತರ ಮೇಲಿನ ಹಲ್ಲೆಗಳ ಬಗ್ಗೆ ಪ್ರದಾನಿ ನರೇಂದ್ರಮೋದಿಯವರು ಮೌನ ಮುರಿದು ಮಾತಾಡಬೇಕೆಂದು ಬಹುಜನ ಪಕ್ಷದ ನಾಯಕಿ ಮಾಯಾವತಿಯವರು ಒತ್ತಾಯಿಸಿದ್ದಾರೆ. ಇದು ಕೇವಲ ಮಾಯಾವತಿಯವರ ಒತ್ತಾಯ ಮಾತ್ರವಾಗಿರದೆ ಈ ರಾಷ್ಟ್ರದ ಎಲ್ಲ ದಲಿತರ ಒತ್ತಾಯವೂ ಆಗಿದೆ. ಚುನಾವಣಾ ರ್ಯಾಲಿಗಳ ಬಾಷಣಗಳಲ್ಲಿ, ವಿದೇಶಿ ಪ್ರವಾಸಗಳ ಸಂದರ್ಭದಲ್ಲಿ, ಅನಿವಾಸಿ ಭಾರತೀಯರ ಸಭೆಗಳಲ್ಲಿ ಉಸಿರು ಎಳೆದುಕೊಳ್ಳಲು ಬಿಡುವು ಸಿಗದಂತೆ ಪುಂಕಾನುಪುಂಖವಾಗಿ ಮಾತಾಡುವ ಪ್ರದಾನಿಯವರದು ರಾಷ್ಟ್ರದ ಆಂತರಿಕ ವಿಚಾರಗಳಲ್ಲಿ, ಅದೂ ತಳ ಮಟ್ಟದವರ ಮೇಲೆ ನಡೆಯುವ ಇಂತಹ ದೌರ್ಜನ್ಯಗಳ ವಿಚಾರದಲ್ಲಿ ಮಾತ್ರ ದಿವ್ಯಮೌನ. ಇಂತಹ ವಿಷಯಗಳಲ್ಲಿ ಸರಕಾರದ ಕ್ರಮಗಳನ್ನು ಸಮರ್ಥಿಸಿಕೊಳ್ಳುವ ಮತ್ತು ವಿರೋಧಪಕ್ಷಗಳ ಆರೋಪಗಳನ್ನು ನಿರಾಕರಿಸುವ ಸಂಪೂರ್ಣ ಹೊಣೆಗಾರಿಕೆ ಬಾಜಪದ ಎರಡನೇ ಸಾಲಿನ ನಾಯಕರುಗಳಿಗೆ ನೀಡಿರುವ ಪ್ರದಾನಿಯವರು ಮಾತ್ರ ಯಾವ ಪ್ರತಿಕ್ರಿಯೆಯನ್ನು ನೀಡದೆ ಮೌನಕ್ಕೆ ಶರಣಾಗುವುದನ್ನು ಅವರ ಅಭಿಮಾನಿ ದೇವರುಗಳು ಪ್ರದಾನಿಯವರದು ಮೌನ ಮಾತ್ರವಲ್ಲ ದೇಶದ ಅಭಿವೃದ್ದಿಯ ಬಗೆಗಿನ ಏಕಾಗ್ರಚಿತ್ತದ ದ್ಯಾನವೆಂದು ಇನ್ನೂ ವರ್ಣಿಸದಿರುವುದು ನಮ್ಮ ಪುಣ್ಯ!

ದಲಿತರ ಮೇಲಾಗುತ್ತಿರುವ ಹಲ್ಲೆಗಳಿಗಿರುವ ಕಾರಣಗಳ ಬಗ್ಗೆ ಅದ್ಯಯನ ಮಾಡಿದರೆ ಸವರ್ಣಿಯರ ಕ್ರೂರತೆ ಮತ್ತು ಪ್ರಭುತ್ವದ ಮೌನದ ಹಿಂದಿರುವ ತಣ್ಣಗಿನ ಕ್ರೌರ್ಯ ಅರಿವಾಗುತ್ತದೆ. ಕೆಳಗಿನ ಕೆಲ ಘಟನೆಗಳನ್ನು ನೀವು ಓದಿದರೆ ದೌರ್ಜನ್ಯಗಳಿಗೆ ಕಾರಣವಾಗಿರುವ ತೀರಾ ಬಾಲೀಶ ಕಾರಣಗಳು ಗೊತ್ತಾಗುತ್ತವೆ:

ಮೇಲ್ಜಾತಿಯ ಹುಡುಗಿಯೊಬ್ಬಳನ್ನು ಪ್ರೀತಿಸಿದ ತಪ್ಪಿಗೆ ದಲಿತ ಯುವಕನನ್ನು ತುಂಡುತುಂಡಾಗಿ ಕತ್ತರಿಸಿ ಎಸೆಯಲಾಗುತ್ತದೆ.

ದಲಿತ ಕುಟುಂಬದ ಮೇಕೆಯೊಂದು ಸವರ್ಣಿಯರ ಜಮೀನಿನಲ್ಲಿ ಓಡಾಡಿದ ಕಾರಣಕ್ಕೆ ಆಡು ಕಾಯುವ ದಲಿತ ಹುಡುಗನನ್ನು ಜೀವಂತವಾಗಿ ಸುಡಲಾಗುತ್ತದೆ.

ದಲಿತ ಅಪ್ರಾಪ್ತೆಯನ್ನು ಅತ್ಯಚಾರ ಮಾಡಿ, ಆಕೆಯನ್ನು ಆಸ್ಪತ್ರೆಯಲ್ಲಿ ದಾಖಲಾಗದಂತೆ ನೋಡಿಕೊಳ್ಳಲಾಗುತ್ತದೆ.

ಭೂಮಾಲೀಕನ ಬಂಧನದಲ್ಲಿದ್ದ ಇಬ್ಬರು ದಲಿತ ಜೀತದಾಳುಗಳು ತಪ್ಪಿಸಿಕೊಳ್ಳುವ ಪ್ರಯತ್ನ ಮಾಡಿದ್ದಕ್ಕೆ ಅವರಿಬ್ಬರ ಕೈಗಳನ್ನು ಕತ್ತರಿಸಿ ಎಸೆಯಲಾಗುತ್ತದೆ.

ದೇವಸ್ಥಾನದ ಪ್ರಸಾದವನ್ನು ಕೇಳಿದ್ದಕ್ಕೆ ಎಂಟು ವರ್ಷದ ದಲಿತ ಬಾಲಕನಿಗೆ ರಕ್ತಸ್ರಾವವಾಗುವಂತೆ ಥಳಿಸಲಾಗುತ್ತದೆ.

ಹೀಗೆ ನಾಗರೀಕ ಸಮಾಜವೊಂದರಲ್ಲಿ ತೀರಾ ಕ್ಷುಲ್ಲಕವಾದ ಕಾರಣಗಳಿಗಾಗಿ ನಡೆಯುತ್ತಿರುವ ದಲಿತರ ಮೇಲಿನ ಹಲ್ಲೆಗಳ ಹಿಂದೆ ಮೇಲ್ಜಾತಿಗಳ ಶತಮಾನಗಳ ಕ್ರೌರ್ಯವಿರುವಂತೆ ಪ್ರಭುತ್ವದ ಮೌನ ಸಮ್ಮತಿಯ ಕಾರಣವೂ ಅಡಗಿದೆಯೆಂಬುದನ್ನು ನಾವು ಮರೆಯಬಾರದು. ದಲಿತರ ಮೇಲಿನ ದೌರ್ಜನ್ಯಗಳಲ್ಲಿ ಬಹಳ ಸುಲಭವಾಗಿ ತುತ್ತಾಗಿ ಸಿಕ್ಕಿ ಬೀಳುವವರು ದಲಿತ ಮಹಿಳೆಯರು. ಅತ್ಯಾಚಾರಗಳಂತಹ ಕ್ರೂರ ಕೃತ್ಯಗಳು ಬಹಳಷ್ಟು ಸಾರಿ ಬೆಳಕಿಗೆ ಬಾರದಂತೆ ತಡೆಯಲು ಮೇಲ್ಜಾತಿಗಳ ರಾಜಕೀಯ ಶಕ್ತಿಗಳು ತಾವು ಬೆಂಬಲಿಸುವ ಪ್ರಭುತ್ವದ ನೆರವನ್ನು ಪಡೆಯುವುದು ಮಾಮೂಲಿಯಾಗಿದೆ. ಯಾವುದೇ ಪಕ್ಷದ ಯಾವುದೇ ಸರಕಾರಗಳಿದ್ದರು ಪ್ರಭುತ್ವದ ಮೇಲಿನ ತಮ್ಮ ಪರೋಕ್ಷ ಹಿಡಿತವನ್ನು ಸಡಿಲಿಸದ ಮೇಲ್ಜಾತಿಗಳು ದಲಿತರ ದಮನಕಾರ್ಯವನ್ನು ಯಾವುದೆ ಎಗ್ಗಿಲ್ಲದೆ ಮುಂದುವರೆಸುತ್ತ ಬರುತ್ತಿವೆ.

ಈ ಹಿನ್ನೆಲೆಯಲ್ಲಿಯೇ ನಾವು ದಲಿತರ ಮೇಲಿನ ಹಲ್ಲೆಗಳನ್ನು ನೋಡಬೇಕಾಗುತ್ತದೆ. ಬಲಿಷ್ಠ ಶಾಸಕಾಂಗ ಮತ್ತು ಕಾರ್ಯಾಂಗಗಳ ಜಂಟಿ ಕಾರ್ಯಾಚರಣೆಗಳ ಮೂಲಕ ದಲಿತರನ್ನು ಹತ್ತಿಕ್ಕುವ ಕಾರ್ಯ ಮುಂದುವರೆಯುತ್ತಲೇ ಇದೆ. ವರ್ಷದಿಂದ ವರ್ಷಕ್ಕೆ ಇಂತಹ ಪ್ರಕರಣಗಳು ಹೆಚ್ಚಾಗುತ್ತಲೇ ಹೋಗುತ್ತಿವೆ.

ಅದರಲ್ಲೂ 2014ರ ನಂತರವಂತು ದಲಿತರ ಮೇಲಿನ ದೌರ್ಜನ್ಯ ಪ್ರಕರಣಗಳು ಹಿಂದೆಂದಿಗಿಂತಲೂ ಹೆಚ್ಚಾಗಿವೆ. ಹಿಂದಿನ ವರ್ಷಗಳಿಗೆ ಹೋಲಿಸಿದರೆ 2014ರಲ್ಲಿ ದಲಿತರ ಮೇಲಿನ ಹಲ್ಲೆ ಪ್ರಕರಣಗಳು ಶೇಕಡಾ 19 ರಷ್ಟು ಹೆಚ್ಚಾಗಿದ್ದು, 2013ರಲ್ಲಿ ದಲಿತರ ಕೊಲೆಗಳು 676 ಆಗಿದ್ದರೆ, 2014ರಲ್ಲಿ ಅದು 744 ಕ್ಕೆ ಏರಿವೆ. ಉತ್ತರ ಇಂಡಿಯಾದ ಹರಿಯಾಣ ಮತ್ತು ಉತ್ತರಪ್ರದೇಶಗಳಲ್ಲಿ ದಲಿತರ ಮೇಲಿನ ದೌರ್ಜನ್ಯ ಹೆಚ್ಚಿದ್ದರೆ, ದಕ್ಷಿಣದಲ್ಲಿ ತಮಿಳುನಾಡು ಇಂತಹ ದೌರ್ಜನ್ಯಗಳಗೆ ಹೆಸರಾಗಿದೆ.

ವಿಷಾದವೆಂದರೆ, ಹಿಂದೂಗಳೆಲ್ಲ ಒಂದು ಎಂಬ ಹುಸಿಘೋಷಣೆಯೊಂದಿಗೆ, ಹಿಂದೂ ಮತಗಳ ದೃವೀಕರಣದೊಂದಿಗೆ ಅಧಿಕಾರಕ್ಕೆ ಬಂದ ಪಕ್ಷವೊಂದು ಆಡಳಿತ ನಡೆಸುವಾಗ ಹೆಚ್ಚಾಗುತ್ತಿರುವ ಇಂತಹ ದಲಿತ ದೌರ್ಜನ್ಯ ಪ್ರಕರಣಗಳು ಹಿಂದುತ್ವದ ಪೊಳ್ಳುತನವನ್ನು ಬಯಲು ಮಾಡುತ್ತಿವೆ, ಈಗಾಗಲೇ ಬಾಹ್ಯದ ಭಯೋತ್ಪಾದಕ ಶಕ್ತಿಗಳು ನಮ್ಮ ರಾಷ್ಟ್ರವನ್ನು ವಿಭಜಿಸಲು ಯತ್ನಿಸುತ್ತಿವೆ. ಜಾತ್ಯಾತೀತವಾಗಿ ಬದುಕುತ್ತಿರುವ ಬಹುಸಂಸ್ಕೃತಿಯ ಈ ರಾಷ್ಟ್ರವನ್ನು ಅದರ ಉದಾತ್ತತೆಯನ್ನು ಸರ್ವನಾಶಗೊಳಿಸಲು ಹೊರಗಿನ ಶಕ್ತಿಗಳು ಪ್ರಯತ್ನಿಸುತ್ತಿರುವ ಈ ಸಮಯದಲ್ಲಿ ಜಾತಿಯ ಹೆಸರಲ್ಲಿ ನಡೆಯುವ ಇಂತಹ ದೌರ್ಜನ್ಯಗಳು ನಮ್ಮ ಸಮಾಜವನ್ನು ವಿಚ್ಛಿದ್ರಗೊಳಿಸುತ್ತ ಹೋಗುತ್ತವೆ. ದೇಶದ ಜಾತಿಗಳ ನಡುವಿನ ಸೌಹಾರ್ದತೆ, ಕೋಮುಸೌಹಾರ್ದತೆಗೆ ಭಂಗ ತರುವ ಇಂತಹ ಘಟನೆಗಳ ಬಗ್ಗೆ ಗಟ್ಟಿಯಾಗಿ ಮಾತಾಡಿ ಅವನ್ನು ಖಂಡಿಸುವುದು ಈ ರಾಷ್ಟ್ರದ ಜನತೆಯ ಕರ್ತವ್ಯವಾಗಿದೆ. ಅದರಲ್ಲೂ ಒಂದು ದೇಶದ ಪ್ರದಾನಿಯಾಗಿ ಮೋದಿಯವರು ಇಂತಹ ಪ್ರಕರಣಗಳನ್ನು ಖಡಾಖಂಡಿತವಾಗಿ ಖಂಡಿಸಿ ದಲಿತರಲ್ಲಿ ಆತ್ಮವಿಶ್ವಾಸವನ್ನು ತುಂಬ ಬೇಕಿರುವುದು ಅಗತ್ಯವಾಗಿದೆ. ಆದರೆ ನಮ್ಮ ಪ್ರದಾನಿಯವರದು ಮಾತ್ರ ದೀರ್ಘ ಮೌನ.

ಹಿಂದೆ ಅವರು ಗುಜರಾತಿನ ಪ್ರದಾನಿಯಾಗಿದ್ದಾಗ, ಅಲ್ಲಿ ನಡೆದ ಕೋಮು ಗಲಭೆಗಳ ಬಗ್ಗೆ ಮಾತಾಡುತ್ತ ಅಂದಿನ ಪ್ರದಾನಮಂತ್ರಿ ಅಟಲ್ ಬಿಹಾರಿ ವಾಜಪೇಯಿಯವರು ಮೋದಿಯವರಿಗೆ ರಾಜಧರ್ಮ ಪಾಲಿಸುವ ಸಲಹೆ ನೀಡಿದ್ದರು. ಈಗ ಅದೇ ಕುರ್ಚಿಯಲ್ಲಿ ಕುಳಿತಿರುವ ಮೋದಿಯವರು ತಮ್ಮ ಮೌನವನ್ನು ತೊರೆದು ರಾಜಧರ್ಮವನ್ನು ಪಾಲಿಸಬೇಕಾಗಿದೆ. ಇಲ್ಲದೇ ಹೋದರೆ ಮೋದಿಯವರ ಮೌನಕ್ಕೆ ಅಪಾರ್ಥಗಳು ಸೃಷ್ಠಿಯಾಗುವ ಸಾದ್ಯತೆಗಳಿವೆ.

ಮೌನಂ ಸಮ್ಮತಿ ಲಕ್ಷಣಂ ಎಂಬ ಮಾತು ಅವರಿಗೂ ತಿಳಿದಿರಬಹುದೆಂದು ಬಾವಿಸುತ್ತೇನೆ!

No comments:

Post a Comment