Jun 18, 2016

ಕಾಂಗ್ರೆಸ್ ಪಕ್ಷದ ಪುನಶ್ಚೇತನ: ಕಾಂಗ್ರೆಸ್ಸಿನ ರಾಷ್ಟ್ರೀಯ ಅದ್ಯಕ್ಷರಾಗಲಿರುವ ರಾಹುಲ್‍ಗಾಂಧಿ?

ಕು. ಸ. ಮಧುಸೂದನ್
18/06/2016
ಚುನಾವಣೆಯ ಸೋಲಿನ ಹೊಣೆ ಹೊತ್ತುಕೊಳ್ಳುವುದರ ಜೊತೆಗೆ ಮುಂದಿನ ದಿನಗಳಲ್ಲಿ ಪಕ್ಷವನ್ನು ಪುನಶ್ಚೇತನಗೊಳಿಸಲು ಅಗತ್ಯವಾದ ಕ್ರಮಗಳನ್ನು ಕೈಗೊಳ್ಳಲಾಗುವುದು: ಶ್ರೀಮತಿ ಸೋನಿಯಾ ಗಾಂಧಿ, ಅದ್ಯಕ್ಷರು, ರಾಷ್ಟ್ರೀಯ ಕಾಂಗ್ರೆಸ್ ಪಕ್ಷ ನವದೆಹಲಿ, 19-05-2016.

ರಾಜಕೀಯ ಪಕ್ಷವೊಂದು ಸತತವಾಗಿ ಚುನಾವಣೆಗಳನ್ನು ಸೋಲುತ್ತಾ ಬಂದಾಗ, ಪಕ್ಷವನ್ನು ಪುನಶ್ಚೇತನಗೊಳಿಸುವ ಮತ್ತು ತಳ ಪಟ್ಟದಿಂದ ಪಕ್ಷವನ್ನು ಬಲಪಡಿಸುವ ನಿಟ್ಟಿನಲ್ಲಿ ಕಾರ್ಯಕ್ರಮ ರೂಪಿಸಲಾಗುವುದು ಎಂಬ ಹಳಸಲು ಹೇಳಿಕೆಯನ್ನು ನೀಡುವುದು ಸಾಮಾನ್ಯವಾಗಿ ಬಿಟ್ಟಿದೆ. ಪ್ರಜಾಪ್ರಭುತ್ವದಲ್ಲಿ ಇದು ಸಹಜವೂ ಕೂಡ. ಆದರೆ ಕಾಂಗ್ರೆಸ್ ಪಕ್ಷ ಕಳೆದ ಐದು ವರ್ಷಗಳಲ್ಲಿ ಬಹಳಷ್ಟು ಸಾರಿ ಇಂತಹ ಹೇಳಿಕೆಗಳನ್ನು ನೀಡಿದ್ದು, ಪುನಶ್ಚೇತನದ ಯಾವುದೇ ಲಕ್ಷಣಗಳು ಕಂಡುಬರದೇ ಇರುವುದರಿಂದ ಜನರಿರಲಿ, ಆ ಪಕ್ಷದ ಕಾರ್ಯಕರ್ತರೇ ಈ ಮಾತನ್ನು ಗಂಬೀರವಾಗಿ ತೆಗೆದುಕೊಂಡಂತೆ ಕಾಣುತ್ತಿಲ್ಲ. ಇದು ಆ ಪಕ್ಷದ ದುರಂತ ಮಾತ್ರವಲ್ಲ ಪ್ರಜಾಸತ್ತೆಯಲ್ಲಿ ನಂಬುಗೆಯಿಟ್ಟ ಭಾರತೀಯರ ದುರಂತವೂ ಹೌದು! 2011ರ ಕೆಲವು ರಾಜ್ಯಗಳ ವಿದಾನಸಭಾ ಚುನಾವಣೆಗಳ ನಂತರ ಸೋನಿಯಾ ಸೇರಿದಂತೆ ಹಲವು ಕಾಂಗ್ರೆಸ್ ನಾಯಕರುಗಳು ಇಂತಹುದೇ ಮಾತುಗಳನ್ನಾಡಿದ್ದರು. ಆದರೆ ನಂತರದ ದಿನದಲ್ಲಿ ಪಕ್ಷದಲ್ಲಾದ ಏಕೈಕ ಬದಲಾವಣೆ ಎಂದರೆ 2013ರ ಜವರಿಯಲ್ಲಿ ರಾಹುಲ್ ಗಾಂದಿಯವರನ್ನು ಕಾಂಗ್ರೆಸ್ ಪಕ್ಷದ ಉಪಾದ್ಯಕ್ಷರನ್ನಾಗಿ ನೇಮಕ ಮಾಡಿದ್ದು  ಮಾತ್ರ. ಆದರೆ ಈ ಬಾರಿಯಾದರೂ ಕಾಂಗ್ರೆಸ್ ತನ್ನ ಮಾತುಗಳನ್ನು ಗಂಬೀರವಾಗಿ ಪರಿಗಣಿಸಿ ಅಗತ್ಯ ಕ್ರಮಕೈಗೊಳ್ಳಬಹುದೆಂಬ ಭಾವನೆ ಮೂಡಿರುವುದು, ಅದು ಪಕ್ಷಾದ್ಯಕ್ಷರನ್ನು ಬದಲಾಯಿಸಲು ತೆಗೆದುಕೊಂಡಿದೆಯೆಂದು ಹೇಳಲಾಗುತ್ತಿರುವ ತೀರ್ಮಾನದ ಕಾರಣದಿಂದ. 

ಕೊನೆಗೂ ಪಕ್ಷವನ್ನು ಸಂಪೂರ್ಣವಾಗಿ ರಾಹುಲ್ ಗಾಂಧಿಯವರ ಕೈಗಿಡಲು ಕಾಂಗ್ರೆಸ್ ಪಕ್ಷ ನಿರ್ದರಿಸಿದಂತಿದೆ. ಇದು ಮೊನ್ನೆತಾನೆ ಮುಗಿದ ಐದು ರಾಜ್ಯಗಳ ವಿದಾನಸಭಾ ಚುನಾವಣೆಗಳ ಪಲಿತಾಂಶಗಳ ಪರಿಣಾಮವೆಂದರೆ ತಪ್ಪಾಗಲಾರದು. ಸೋನಿಯಾಗಾಂಧಿ ಪಕ್ಷದ ಅದ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಸರಿಸುಮಾರು ಹದಿನೆಂಟು ವರ್ಷಗಳ ನಂತರ ಮೊದಲ ಬಾರಿಗೆ ಅವರ ಸ್ಥಾನದಲ್ಲಿ ಮತ್ತೊಬ್ಬ ವ್ಯಕ್ತಿಯನ್ನು ಪ್ರತಿಷ್ಠಾಪಿಸುವ ಕಾರ್ಯಕ್ಕೆ ಪಕ್ಷ ಸಿದ್ಧವಾದಂತಿದೆ. 2014ರ ಲೋಕಸಭಾ ಚುನಾವಣೆಯಲ್ಲಿ ಬಾಜಪದ ಎದುರು ಅನುಭವಿಸಿದ ಹೀನಾಯ ಸೋಲು, ಮತ್ತದರ ನಂತರವೂ ಅನೇಕ ದೊಡ್ಡ ರಾಜ್ಯಗಳ ವಿದಾನಸಭಾ ಚುನಾವಣೆಗಳಲ್ಲಿ ಸೋತಿದ್ದು, ಮತ್ತೀಗ ಐದು ರಾಜ್ಯಗಳ ವಿದಾನಸಭಾ ಚುನಾವಣೆಗಳಲ್ಲಿ ಮುಖಭಂಗ ಅನುಭವಿಸಿ ಅಧಿಕಾರದಲ್ಲಿದ್ದ ಎರಡೂ ರಾಜ್ಯಗಳನ್ನು ಕಳೆದುಕೊಂಡು ಮುಂದೇನು ಎನ್ನುವ ಗೊಂದಲದಲ್ಲಿರುವ ಕಾಂಗ್ರೆಸ್ಸಿಗೆ ಒಂದಷ್ಟು ಪುನಶ್ಚೇಚೇತನ ನೀಡುವುದು ಅಗತ್ಯವೂ, ಅನಿವಾರ್ಯವೂ ಆಗಿತ್ತು. ಪಕ್ಷದಾಚೆಗಿನ ರಾಜಕೀಯ ಪಂಡಿತರುಗಳು, ರಾಜಕೀಯ ವಿಶ್ಲೇಷಕರು ಇಂತಹ ಮಾತುಗಳನ್ನಾಡಿದಾಗ ಕುಟುಂಬ ರಾಜಕಾರಣದ ಭಟ್ಟಂಗಿತನಕ್ಕೆ ಒಗ್ಗಿ ಹೋಗಿರುವ ಕಾಂಗ್ರೆಸ್ ನಾಯಕರುಗಳಿಗೆ, ಇದು ಆಳದಲ್ಲಿ ಸರಿಯೆನಿಸಿದರು, ಬಹಿರಂಗವಾಗಿ ಇದನ್ನು ಒಪ್ಪುವ ಮನಸ್ಥಿತಿಯಿರಲಿಲ್ಲ. ಗಾಂಧಿ ಕುಟುಂಬವನ್ನು ಹೊರತುಪಡಿಸಿ ರಾಜಕಾರಣ ಮಾಡುವ ಕೆಲವೇ ಕೆಲವು ಪ್ರಾದೇಶಿಕ ನಾಯಕರುಗಳನ್ನು ಹೊರತು ಪಡಿಸಿ ಉಳಿದವವರಿಗೆ ಸೋನಿಯಾ ನಾಯಕತ್ವ ಅಗತ್ಯವಾಗಿದ್ದಕ್ಕೆ ಕಾರಣ ಇಂದಲ್ಲಾ ನಾಳೆ ಅವರ ವರ್ಚಸ್ಸಿನಿಂದ ಮತ್ತೆ ಅಧಿಕಾರ ಹಿಡಿಯಬಹುದೆಂಬ ನಂಬಿಕೆ.

ಹಾಗೆ ನೋಡಿದರೆ ಕಾಂಗ್ರೆಸ್ಸಿನ ನಾಯಕರುಗಳಿಗೆ ಅದನ್ನು ಬಿಟ್ಟರೆ ಇವತ್ತಿಗೂ ಬೇರೆ ದಾರಿ ಇರುವಂತೆ ಕಾಣುತ್ತಿಲ್ಲ. ಇಂಡಿಯಾದ ರಾಜಕಾರಣದ ಮಟ್ಟಿಗೆ ವಾಸ್ತವತೆ ಏನೆಂದರೆ ಗಾಂಧಿ ಕುಟುಂಬದ ನಿಯಂತ್ರಣ ತಪ್ಪಿದೊಡನೆ ಕಾಂಗ್ರೆಸ್ ತನ್ನೆಲ್ಲ ರಾಷ್ಟ್ರೀಯ ಐಡೆಂಟಿಟಿಯನ್ನು ಕಳೆದುಕೊಂಡು ಚೂರು ಚೂರಾಗುತ್ತದೆ ಎಂಬ ಭ್ರಮೆ! 1991 ರಲ್ಲಿ ರಾಜೀವ್ ಗಾಂಧಿಯವರ ಹತ್ಯೆಯಾದ ನಂತರ ನರಸಿಂಹರಾಯರು ಪ್ರದಾನಿಯಾದರೂ, ಕಾಂಗ್ರೆಸ್ಸಿನ ಮೇಲೆ ಗಾಂಧಿ ಕುಟುಂಬದ ಹಿಡಿತ ತೆರೆಮರೆಯಲ್ಲಿ ಇದ್ದುದರಿಂದ ಮತ್ತು ಇಂದಲ್ಲ ನಾಳೆ ಸೋನಿಯಾ ಮುಂಚೂಣಿಗೆ ಬಂದು ಪಕ್ಷವನ್ನು ಮುನ್ನಡೆಸುತ್ತಾರೆಂಬ ನಂಬಿಕೆ ಕಾಂಗ್ರೆಸ್ಸಿಗರಿಗೆ ಇದ್ದುದರಿಂದಲೇ 1998 ರವರೆಗು ಶ್ರೀ ನರಸಿಂಹರಾಯರು ಮತ್ತು ಶ್ರೀ ಸೀತಾರಾಂ ಕೇಸರಿಯವರು ಅದ್ಯಕ್ಷರಾಗಿ ಕಾರ್ಯನಿರ್ವಹಿಸಲು ಸಾದ್ಯವಾಯಿತು. ಆದರೆ 1996ರಲ್ಲಿ ಕೇಂದ್ರದಲ್ಲಿ ಅಧಿಕಾರ ಕಳೆದುಕೊಂಡಾಕ್ಷಣ ಯಥಾ ಪ್ರಕಾರ ಕಾಂಗ್ರೆಸ್ ನಾಯಕನಿರದ ನಾವೆಯಂತಾಗಿ ಗುಂಪುಗಾರಿಕೆಗಳು ಶುರುವಾದವು. ಅಂದಿನ ಅದ್ಯಕ್ಷ ಸೀತಾರಾಂ ಕೇಸರಿಯವರ ವಿರುದ್ದ ತಾರೀಖ್ ಅನ್ವರ್, ಕುಮಾರಮಂಗಳಂ ಮುಂತಾದವರು ಬಂಡೆದ್ದು ಸೋನಿಯಾರವರು ಪಕ್ಷದ ಚುಕ್ಕಾಣಿ ಹಿಡಿಯಬೇಕೆಂದು ಒತ್ತಾಯಿಸತೊಡಗಿದರು. ಆದರೆ ಸೋನಿಯಾರವರು ಸುಲಭವಾಗಿ ಈ ಮಾತಿಗೆ ಒಪ್ಪದೆ, ಸೀತಾರಾಂ ಕೇಸರಿಯವರು ತಾವಾಗಿಯೇ ಅದ್ಯಕ್ಷ ಗಾದಿ ತೊರೆದು ತಮ್ಮನ್ನು ಆಹ್ವಾನಿಸಿದರೆ ಮಾತ್ರ ಪಕ್ಷಾದ್ಯಕ್ಷರ ಜವಾಬ್ದಾರಿಯನ್ನು ಹೊರುವುದಾಗಿ ಹೇಳಿದರು. ಆದರೆ ಕೇಸರಿಯವರು ಈ ಮಾತಿಗೆ ಮಣಿಯಲಿಲ್ಲ. ಈ ಸಂದರ್ಭದಲ್ಲಿ ಜಿತೇಂದ್ರಪ್ರಸಾದ್, ಏ.ಕೆ.ಆಂಟೋನಿ ಮತ್ತು ಪ್ರಣಬ್ ಮುಖರ್ಜಿಯವರು ರಹಸ್ಯ ಸಭೆಗಳ ಮೂಲಕ ಕೇಸರಿಯವರನ್ನುಇಳಿಸುವ ಕಾರ್ಯತಂತ್ರ ರೂಪಿಸತೊಡಗಿದರು. ಆಗ ಶರದ್ ಪವಾರ್ ಅವರು ಸಹ ಕೇಸರಿಯವರನ್ನು ಇಳಿಸಲು ಮುಂದಾದರು. ಎಲ್ಲಿಯವರೆಗೆ ಕೇಸರಿಯವರು ಅದ್ಯಕ್ಷರಾಗಿರುತ್ತಾರೊ ಅಲ್ಲಿಯವರೆಗು ಉದ್ಯಮಿಗಳ ಬೆಂಬಲ ಪವಾರ್ ಅವರಿಗೆ ಸಿಗಲಾರದೆಂಬ ಉದ್ಯಮಿಗಳ ಎಚ್ಚರಿಕೆಯ ಮಾತು ಪವಾರರು ಕಣಕ್ಕಿಳಿಯಲು ಕಾರಣವಾಯಿತು. ನಂತರ 1998 ರಲ್ಲಿ ಕಾಂಗ್ರೆಸ್ ಕಾರ್ಯಕಾರಿಣಿಗೆ ಕೆಲವೊಂದು ತಿದ್ದುಪಡಿ ತರುವುದರ ಮೂಲಕ ಲೋಕಸಭಾ ಸದಸ್ಯೆಯೂ ಆಗಿರದ ಶ್ರೀಮತಿ ಸೋನಿಯಾ ಗಾಂದಿಯವರನ್ನು ಪಕ್ಷದ ಅದ್ಯಕ್ಷರನ್ನಾಗಿ ಮಾಡಲಾಯಿತು.

ನಂತರ 1999ರಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ 21 ಪಕ್ಷಗಳ ಬಾಜಪ ನೇತೃತ್ವದ ಎನ್.ಡಿ.ಎ. ಗೆದ್ದರೂ 140 ಸ್ಥಾನ ಗಳಿಸಲು ಶಕ್ತವಾದ ಕಾಂಗ್ರೆಸ್ ತನ್ನ ಮತಬ್ಯಾಂಕು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿ, ಗೌರವ ಉಳಿಸಿಕೊಂಡಿತ್ತು. ಆಮೇಲೆ ಸುಮಾರು ಹದಿನಾಲ್ಕು ವರ್ಷಗಳ ಕಾಲ ಅಂದರೆ 2014ರ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲುವ ತನಕವೂ ಸೋನಿಯಾರವರು ಕಾಂಗ್ರೆಸ್ ಪಕ್ಷದ ಪ್ರಶ್ನಾತೀತ ನಾಯಕಿಯಾಗಿ ಆಡಳಿತ ನಡೆಸಿದರು. 2004ರಲ್ಲಿ ಪ್ರದಾನಿಯಾಗಬಹುದಾಗಿದ್ದ ಅವಕಾಶವನ್ನು ನಿರಾಕರಿಸಿದ ಸೋನಿಯಾರವರು ಸಾಮಾನ್ಯ ಭಾರತೀಯರ ದೃಷ್ಠಿಯಲ್ಲಿ ತ್ಯಾಗಮಯಿಯಂತೆ ಕಂಡಿದ್ದರು. ತದ ನಂತರದ ಯು.ಪಿ.ಎ. ಎರಡರ ಅವಧಿಯಲ್ಲಿ ನಡೆದ ಅಗಾಧವಾದ ಭ್ರಷ್ಟಾಚಾರ ಪ್ರಕರಣಗಳು ಮತ್ತು ಬಾಜಪದ ಆಕ್ರಮಣಕಾರಿ ಮತಾಂಧ ರಾಜಕಾರಣದಿಂದಾಗಿ ಹಾಗು ಬಲಪಂಥೀಯ ಮತ್ತು ಬಂಡವಾಳಶಾಹಿ ಹಿಡಿತದಲ್ಲಿದ್ದ ಮಾದ್ಯಮಗಳ ಬಾಜಪ ಪರವಾದ ಪ್ರಚಾರ ತಂತ್ರಗಳಿಂದಾಗಿ 2013ರಲ್ಲಿ ಕಾಂಗ್ರೆಸ್ ತೀರಾ ಅವಮಾನಕಾರಿಯಾಗಿ ಸೋಲುಂಡಿತಲ್ಲದೆ. ಅದರ ಜೊತೆ ಜೊತೆಗೆ ನಡೆದ ಕೆಲವು ರಾಜ್ಯ ವಿದಾನಸಭಾ ಚುನಾವಣೆಗಳಲ್ಲಿಯೂ ಕಾಂಗ್ರೆಸ್ ವಿಫಲವಾಯಿತು. ತೀರಾ ಇತ್ತೀಚೆಗೆ ನಡೆದ ಐದು ರಾಜ್ಯಗಳ ಚುನಾವಣೆಗಳಲ್ಲಿಯು ಕಾಂಗ್ರೆಸ್ ಸೋಲನ್ನಪ್ಪಿ ಪಕ್ಷದ ಕೆಲ ವಲಯಗಳಲ್ಲಿ ನಾಯಕತ್ವ ಬದಲಾವಣೆಯ ಮಾತುಗಳು ಕೇಳಿ ಬಂದವು. ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಬದಲಾವಣೆ ಎಂದರೆ ಅದ್ಯಕ್ಷರ ಹುದ್ದೆಯ ಬದಲಾವಣೆ ಮಾತ್ರ. ಅದೂ ಸೋನಿಯಾರವರಿಂದ ರಾಹುಲರಿಗೆ ಎಂದಷ್ಟೆ ಆಗಿದೆ.

ಮೊನ್ನೆಯ ಚುನಾವಣೆಗಳನ್ನು ಸೋತ ಕೂಡಲೆ ಕಾಂಗ್ರೆಸ್ಸಿನ ಹಿರಿಯ ನಾಯಕರಾದ ಶ್ರೀ ದಿಗ್ವಿಜಯಸಿಂಗ್ ಮತ್ತು ಕಮಲನಾಥ್ ಅವರುಗಳು ಮೊದಲ ಬಾರಿಗೆ ರಾಹುಲ್ ಗಾಂದಿಯವರನ್ನು ಪಕ್ಷದ ಅದ್ಯಕ್ಷರನ್ನಾಗಿ ಮಾಡುವ ಪ್ರಸ್ತಾಪ ಮಾಡಿದರು. ಈ ಬಗ್ಗೆ ಕಾಂಗ್ರೆಸ್ಸಿನ ಬಹುತೇಕ ನಾಯಕರುಗಳಿಗೆ ಅಭ್ಯಂತರವಿರದೇ ಹೋದರು, ಕೆಲವು ಹಳೆಯ ತಲೆಗಳಿಗಳಿಗೆ ಮತ್ತು ಸೋನಿಯಾರವರಿಗೆ ಬಹಳ ಆಪ್ತರಾಗಿರುವ ಕೆಲವರಿಗೆ ಮಾತ್ರ ಸೋನಿಯಾರವರೆ ಮುಂದುವರೆಯಬೇಕೆಂಬ ಬಯಕೆಯಿದೆ. ರಾಹುಲರನ್ನು ಅದ್ಯಕ್ಷರನ್ನಾಗಿಸಲು ತೀರ್ಮಾನಿಸುವುದರ ಹಿಂದೆ ಸ್ವತ: ರಾಹುಲರ ಬಯಕೆಯೂ ಕಾಣವಿದೆಯೆಂದು ನಂಬಲಾಗುತ್ತಿದೆ. ಯಾಕೆಂದರೆ ಅವರು ಉಪಾದ್ಯಕ್ಷರಾದ ನಂತರದ ಎಲ್ಲ ಸೋಲುಗಳಿಗೂ ಅವರನ್ನೇ ಗುರಿಯನ್ನಾಗಿಸಲಾಗುತ್ತಿದೆ. ಚುನಾವಣೆಗಳ ಕಾರ್ಯತಂತ್ರಗಳ ನಿರ್ದಾರ ತಮ್ಮದಲ್ಲವಾದರೂ, ಸೋಲಿಗೆ ಮಾತ್ರ ತಾವು ತಲೆಕೊಡಬೇಕಾಗಿ ಬಂದಿರುವುದು ರಾಹುಲರಿಗೆ ಬೇಸರ ಮೂಡಿಸಿರುವುದಂತು ಸತ್ಯ. ಈ ಕಾರಣಕ್ಕಾಗಿಯೇ ಅವರ ಅನುಮತಿಯಿಂದಲೇ ನಾಯಕರುಗಳು ಅವರಿಗೆ ಅದ್ಯಕ್ಷ ಸ್ಥಾನ ನೀಡಬೇಕೆಂದು ಧೈರ್ಯವಾಗಿ ಹೇಳುತ್ತಿರುವುದು. ರಾಹುಲರ ಅನಿಸಿಕೆಯಲ್ಲಿ ಯಾವುದೇ ತಪ್ಪಿಲ್ಲ. ಯಾಕೆಂದರೆ ಚುನಾವಣೆಯ ಕಾರ್ಯತಂತ್ರಗಳನ್ನು ರೂಪಿಸುವಲ್ಲಿ ಮತ್ತು ಟಿಕೇಟ್ ಹಂಚುವಲ್ಲಿ ನಿರ್ದಾರಗಳನ್ನು ತಗೆದುಕೊಳ್ಳುತ್ತಿದ್ದ ಕಾಂಗ್ರೆಸ್ಸಿನ ಹಿರಿಯ ನಾಯಕರುಗಳು ರಾಹುಲ್ ಗಾಂದಿಯವರ ಅಭಿಪ್ರಾಯಗಳಿಗೆ ಸಾಕಷ್ಟು ಮನ್ನಣೆ ನೀಡುತ್ತಿರಲಿಲ್ಲವೆಂಬುದಂತು ನಿಜ. ಉದಾಹರಣೆಗೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯಾದ ಮಮತಾ ಬ್ಯಾನರ್ಜಿಯವರ ಜೊತೆ ಸುಮಧುರ ಬಾಂದವ್ಯ ಹೊಂದಿರುವ ರಾಹುಲರಿಗೆ ಅವರ ಜೊತೆ ಮೈತ್ರಿಮಾಡಿಕೊಳ್ಳುವ ಇಚ್ಚೆಯಿದ್ದರೂ ಸ್ಥಳೀಯ ನಾಯಕರುಗಳ ಒತ್ತಾಯದ ಮೇಲೆ ಎಡರಂಗದ ಜೊತೆ ಹೋಗಿ ಸೋಲಬೇಕಾಯಿತು. ಅದೇ ರೀತಿ ಅಸ್ಸಾಮಿನಲ್ಲಿ ಎ.ಐ.ಡಿ.ಯಿ.ಎಫ್. ಜೊತೆ ಮೈತ್ರಿಗೆ ರಾಹುಲ್ ಸಿದ್ದರಿದ್ದರೂ ಗೋಗೋಯ್ ಅವರ ನಿರಾಕರಣೆಯಿಂದ ಅಲ್ಲಿಯೂ ಪಕ್ಷ ಸೋಲಬೇಕಾಯಿತು. ಇದು ಇತ್ತೀಚೆಗೆ ರಾಹುಲ್ ಗಾಂದಿಯವರಲ್ಲಿ ಅಸಮಾದಾನ ಮೂಡಿಸಿದ್ದನ್ನು ಅವರ ನಾಯಕರುಗಳೇ ಒಪ್ಪಿ ಕೊಳ್ಳುತ್ತಾರೆ. ಪಕ್ಷದಲ್ಲಿನ ಎರಡು ಅಧಿಕಾರ ಕೇಂದ್ರಗಳ ಪರಿಣಾಮವನ್ನು ಈಗ ಅರಿತಂತಿರುವ ಕಾಂಗ್ರೆಸ್ಸಿಗರಿಗೆ ರಾಹುಲರಿಗೆ ಪಕ್ಷದ ಸಂಪೂರ್ಣ ಜವಾಬ್ದಾರಿಯನ್ನು ಕೊಟ್ಟು ಪಕ್ಷ ಕಟ್ಟುವ ಆಸೆ ಬಂದಿದ್ದರೆ ತಪ್ಪೇನಲ್ಲ. ಅದೂ ಅಲ್ಲದೆ ಒಂದು ಪಕ್ಷದಲ್ಲಿ ಎರಡು ಅಧಿಕಾರ ಕೇಂದ್ರಗಳಿರುವುದರಿಂದ ಆಗಬಹುದಾದ ಮತ್ತು ಈಗಾಗಲೇ ಆಗಿರುವ ಅನಾಹುತಗಳ ಬಗ್ಗೆ ಕಾಂಗ್ರೆಸ್ ನಾಯಕರುಗಳಿಗೆ ಮನವರಿಕೆಯಾಗಿರುವುದು ಸಹ ಇಂತಹದೊಂದು ನಿರ್ದಾರಕ್ಕೆ ಕಾರಣವೆನ್ನಲಾಗುತ್ತಿದೆ. ಇದು ವಾಸ್ತವವೂ ಹೌದು. ಉದಾಹರಣೆಗೆ ಸೋನಿಯಾ ತೆಗೆದುಕೊಳ್ಳು ನಿರ್ಣಯಗಳ ರೀತಿ ಒಂದು ತರನದ್ದಾದರೆ ರಾಹುಲರ ರಾಜಕೀಯ ತೀರ್ಮಾನಗಳೇ ಬೇರೆ ರೀತಿಯಲ್ಲಿ ಇರುತ್ತಿದ್ದವು. ಇಂತಹ ಸಂದಿಗ್ದ ಸನ್ನಿವೇಶದಲ್ಲಿ ಸೋನಿಯಾರ ನಿರ್ದಾರಗಳೇ ಜಾರಿಯಾದರೂ ಅದರ ವೈಫಲ್ಯದ ಹೊಣೆಗಾರಿಕೆ ಮಾತ್ರ ರಾಹುಲರ ಹೆಗಲೇರುತ್ತಿತ್ತು. ಬಹಳಷ್ಟು ಬಾರಿ ಇಂತಹ ಮುಜುಗರಗಳಿಂದ ಪಾರಾಗಲೆಂದೇ ರಾಹುಲರು ಯಾರಿಗೂ ಮಾಹಿತಿ ನೀಡದೆ ವಿದೇಶಗಳಿಗೆ ತರಳಿ ಬಿಡುತ್ತಿದ್ದರು. ಇತ್ತೀಚೆಗೆ ಇದನ್ನು ಅರ್ಥಮಾಡಿಕೊಂಡಂತೆ ಕಾಣುತ್ತಿರುವ ಸೋನಿಯಾರವರು ತಮ್ಮ ಏರುತ್ತಿರುವ ವಯಸ್ಸು ಮತ್ತು ಅನಾರೋಗ್ಯಗಳ ಕಾರಣದಿಂದ ಇದಕ್ಕೆ ಹಸಿರು ನಿಶಾನೆ ತೋರಿಸಿದಂತಿದೆ.

ಆದರೆ ಕಾಂಗ್ರೆಸ್ಸಿನ ನಿಜವಾದ ಸಮಸ್ಯೆ ಇರುವುದೇ ಇಲ್ಲಿ ಕಾಂಗ್ರೆಸ್ಸಿನಂತಹ ದೊಡ್ಡ ಪಕ್ಷವನ್ನು ನಿಬಾಯಿಸುವಷ್ಟು ಶಕ್ತಿ ಮತ್ತು ರಾಜಕೀಯ ಚಾಣಾಕ್ಷತೆ ರಾಹುಲರಿಗಿದೆಯೇ ಎನ್ನುವುದಾಗಿದೆ. ಯಾಕೆಂದರೆ ಸೋನಿಯಾರವರಿಗಾದರೆ ತನ್ನ ಅತ್ತೆ ಮಾಜಿ ಪ್ರದಾನಿ ಶ್ರೀಮತಿ ಇಂದಿರಾಗಾಂದಿಯವರ ಕಾಲದಿಂದಲೂ ತೀರಾ ಹತ್ತಿರದಿಂದ ಕಾಂಗ್ರೆಸ್ಸಿನ ಬೆಳವಣಿಗೆಗಳನ್ನು ನೋಡಿದ ಅನುಭವವಿತ್ತು. ತದನಂತರ ತಮ್ಮ ಪತಿಯ ನಿಧನಾ ನಂತರವೂ ಪಕ್ಷದಲ್ಲಿ ಯಾವುದೇ ಅಧಿಕಾರ ಸ್ಥಾನವನ್ನು ಹಿಡಿಯದೇ ಇದ್ದರೂ ಪಕ್ಷದ ಆಗುಹೋಗುಗಳನ್ನು ಅವರ ಗಮನಕ್ಕೆ ತಂದು ಸೂಕ್ತ ಸಲಹೆ ಪಡೆಯುವ ಒಂದು ಅನಧಿಕೃತ ವ್ಯವಸ್ಥೆಯು ಪಕ್ಷದಲ್ಲಿತ್ತು. ಇದು ಮುಂದೆ ಸೋನಿಯಾರವರಿಗೆ ಅನುಕೂಲಕರವಾಗಿ ಪರಿಣಮಿಸಿತು. ಹೀಗಾಗಿಯೇ ಸುಮಾರು ಹದಿನೆಂಟು ವರ್ಷಗಳ ಕಾಲ ಅವರು ಯಶಸ್ವಿಯಾಗಿ ಪಕ್ಷವನ್ನು ಮುನ್ನಡೆಸಿಕೊಂಡು ಬಂದರು. ಬಹಳ ಜನ ಸೋನಿಯಾರವರು ಪಕ್ಷವನ್ನು ಯಶಸ್ವಿಯಾಗಿ ನಡೆಸಿಕೊಂಡು ಬಂದರು ಎನ್ನುವ ಮಾತನ್ನು ಒಪ್ಪದೇ ಇರಬಹುದು. ಹಲವು ಚುನಾವಣೆಗಳನ್ನು ಅವರು ಸೋತಿರಬಹುದು. ಆದರೆ ಕಾಂಗ್ರೆಸ್ಸಿನಂತಹ ದೊಡ್ಡ ಪಕ್ಷವೊಂದನ್ನು ಹದಿನೆಂಟು ವರ್ಷಗಳ ಕಾಲ ಒಗ್ಗೂಡಿಸಿ ಇಟ್ಟುಕೊಳ್ಳುವುದೇ ಒಂದು ಸಾಧನೆಯಾಗುವುದರ ನಡುವೆ, ಬಾಜಪದ ಮತಾಂಧ ರಾಜಕಾರಣವನ್ನು, ಪ್ರಾದೇಶಿಕ ಪಕ್ಷಗಳ ಪಾಳೇಗಾರಿಕೆಯ ಐಲುತನಗಳನ್ನು ಏಕಕಾಲಕ್ಕೆ ನಿಬಾಯಿಸುವುದು ನಿಜಕ್ಕೂ ಒಂದು ಸವಾಲೇ ಸರಿ. ಈಗ ರಾಹುಲ್ ಗಾಂದಿಯವರಿಗೆ ಕಾಂಗ್ರೆಸ್ಸಿನಂತಹ ರಾಷ್ಟ್ರೀಯ ಪಕ್ಷದ ಆಗುಹೋಗುಗಳನ್ನು ನಿಬಾಯಿಸುವಷ್ಟು ಪ್ರೌಢಿಮೆ ಬಂದಿದೆಯೇ ಎಂಬ ಪ್ರಶ್ನೆಗೆ ಉತ್ತರ ಕಂಡುಕೊಳ್ಳಬೇಕಾಗಿದೆ. ಹಾಗೆ ನೋಡಿದರೆ ರಾಹುಲರು ಅವರ ತಂದೆ ರಾಜೀವ್ ಗಾಂದಿಯವರಂತೆಯೇ ಸಂಕೋಚದ ಸ್ವಬಾವದವರು. ಅಷ್ಟು ಸುಲಭವಾಗಿ ಒಂದು ನಾಯಕತ್ವವನ್ನು ಒಪ್ಪಿಕೊಂಡು ಮುನ್ನಡೆಸುವ ತೆರೆದ ಮನಸ್ಸಿನ ಸ್ವಬಾವದವರೇನಲ್ಲ. ಆದರೆ ರಾಜೀವ್ ಗಾಂದಿಯವರು ಅಂದಿನ ಸನ್ನಿವೇಶವನ್ನು ಬೇಗ ಅರ್ಥಮಾಡಿಕೊಂಡು ಕಾಂಗ್ರೆಸ್ಸಿನ ಚುಕ್ಕಾಣಿ ಹಿಡಿದು ನಾಯಕತ್ವದ ಹೊಣೆ ನಿಬಾಯಿಸಿದ್ದರು. ಇದರ ಜೊತೆಗೆ ಅವತ್ತು ರಾಜೀವ್ ಗಾಂದಿಗೆ ಸವಾಲಾಗಿ ನಿಲ್ಲಬಲ್ಲ ವಿರೋದ ಪಕ್ಷಗಳಲ್ಲಿ ಯಾರದೇ ನಾಯಕತ್ವವೂ ಇರಲಿಲ್ಲ. ಹೀಗಾಗಿ ರಾಜೀವರು ಸುಲಭವಾಗಿ ರಾಜಕಾರಣದ ಕೇಂದ್ರಬಿಂದುವಾಗಿ ಎದ್ದು ನಿಲ್ಲಲು ಸಾದ್ಯವಾಗಿತ್ತು. ಆದರೆ ರಾಹುಲ್ ಗಾಂದಿಗೆ ತಕ್ಷಣಕ್ಕೆ ಅದ್ಯಕ್ಷತೆಯ ಯಾವ ಅನಿವಾರ್ಯತೆಯೂ ಇಲ್ಲವಾಗಿದೆ. ಜೊತೆಗೆ 2004ರಲ್ಲಿ ರಾಜಕೀಯ ಪ್ರವೇಶಿಸಿದಾಗಿನಿಂದಲೂ ಅವರು ಒಂದು ಹೆಜ್ಜೆ ಮುಂದಿಡಲೂ ಮೀನಾಮೇಷ ಎಣಿಸುತ್ತಲೇ ಬಂದಿದ್ದಾರೆ. ಅವರು ನಿಜಕ್ಕೂ ನಾಯಕತ್ವದ ಲಕ್ಷಣಗಳನ್ನು ತೋರಿಸುವವರಾಗಿದ್ದರೆ ಯು.ಪಿ.ಎ. ಸರಕಾರದಲ್ಲಿ ಯಾವುದಾದರು ಸಚಿವಗಿರಿಯನ್ನು ವಹಿಸಿಕೊಂಡು ಆಡಳಿತದ ಒಂದಿಷ್ಟು ಪಾಠಗಳನ್ನು ಕಲಿಯುತ್ತ ಜನರ ನಡುವೆ ಕೆಲಸ ಮಾಡಬಹುದಿತ್ತು. ಆದರೆ ತಮ್ಮ ಸರಕಾರದ ಎರಡು ಅವಧಿಯಲ್ಲೂ ಅವರು ಸರಕಾರಿ ಯಂತ್ರದ ಒಂದು ಭಾಗವಾಗಲೇ ಇಲ್ಲ. ಚುನಾವಣೆ ಬಂದಾಗ ಪ್ರಚಾರ ಮಾಡುವಷ್ಟಕ್ಕೆ ತಮ್ಮನ್ನು ಸೀಮಿತಗೊಳಿಸಿಕೊಂಡು ಬಿಟ್ಟರು. ಅದೂ ಅಲ್ಲದೆ ರಾಹುಲರು ರಾಜಕಾರಣಕ್ಕೆ ಪ್ರವೇಶಿಸುವ ಹೊತ್ತಿಗಾಗಲೇ ಶ್ರೀ ಎಲ್.ಕೆ. ಅದ್ವಾನಿ ಅಂತವರು ಬಹು ಎತ್ತರದ ನಾಯಕರಾಗಿ ಬೆಳೆದು ನಿಂತಿದ್ದರು. ತದ ನಂತರದಲ್ಲೂ ಇಂದಿನ ಪ್ರದಾನಿಗಳಾದ ಶ್ರೀ ನರೇಂದ್ರಮೋದಿಯವರು ಬಲಿಷ್ಠ ರಾಷ್ಟ್ರೀಯ ನಾಯಕರಾಗಿ ಬಳೆದು ನಿಂತು ರಾಹುಲ್ ಗಾಂದಿಯನ್ನು ರಾಷ್ಟ್ರೀಯ ನಾಯಕರದು ಒಪ್ಪಿಕೊಳ್ಳಲು ಜನ ಹಿಂದೆ ಮುಂದೆ ನೋಡುವಂತಹ ಸನ್ನಿವೇಶ ಸೃಷ್ಠಿಯಾಗಿತ್ತು. ಜೊತೆಗೆ ಮತಾಂಧ ರಾಜಕಾರಣದ ಆವೇಶದ ನಡುವೆ ರಾಹುಲರಂತ ಸೌಮ್ಯ ಸ್ವಬಾವದ ನಾಯಕರು ಎದ್ದು ನಿಲ್ಲುವುದು ದುಸ್ತರವಾಗುವಂತ ಪರಿಸ್ಥಿತಿ ಬಂದು ನಿಂತಿತ್ತು. ಈಗಲೂ ಸಹ ರಾಹುಲರು ಅಧ್ಯಕ್ಷರಾದ ತಕ್ಷಣ ಕಾಂಗ್ರೆಸ್ಸಿನ ಕಷ್ಟಗಳೆಲ್ಲ ಬಗೆಹರಿಯುತ್ತವೆಯೆಂಬ ಭ್ರಮೆಯನ್ನು ಯಾರೂ ಇಟ್ಟುಕೊಳ್ಳಲು ಸಾದ್ಯವಿಲ್ಲ. ಯಾಕೆಂದರೆ ಸೋನಿಯಾರವರಿಗಿದ್ದ ಪಕ್ಷದ ಮೇಲಿನ ಹಿಡಿತವನ್ನು ಸಾಧಿಸಲು ರಾಹುಲರು ಶಕ್ತರಾಗಿದ್ದಾರೆಯೇ ಎಂಬುದಿನ್ನು ಸಾಬೀತಾಗಿಲ್ಲ. ಜೊತೆಗೆ ರಾಹುಲರ ಸಮೀಪವರ್ತಿಗಳೇ ಹೇಳುವಂತೆ ಅವರು ಪೂರ್ವನಿಗದಿತ ವೇಳಾ ಪಟ್ಟಿಯ ಪ್ರಕಾರ ಕೆಲಸ ಮಾಡುವಲ್ಲಿ ಆಸಕ್ತಿ ತೋರುವುದಿಲ್ಲ. ಜೊತೆಗೆ ಯಾವುದೇ ನಾಯಕರುಗಳನ್ನು, ಅವರ ಹೆಸರುಗಳನ್ನು ನೆನಪಿಟ್ಟಿಕೊಂಡು ಅವರುಗಳು ಬಂದಾಗ ಬೇಟಿಯಾಗುವ ಸೌಜನ್ಯವನ್ನು ತೋರುವಲ್ಲಿಯೂ ಅವರು ನಿರ್ಲಕ್ಷ್ಯ ವಹಿಸುತ್ತಾರೆಂಬ ಮಾತಿದೆ. ಅದೂ ಅಲ್ಲದೆ ರಾಹುಲರಿಗೆ ಕಾಂಗ್ರೆಸ್ಸಿನ ಹಿರಿಯ ನಾಯಕರುಗಳ ಮಾತಿಗಿಂತ ತಮ್ಮ ಜೊತೆಯೇ ರಾಜಕಾರಣಕ್ಕೆ ಬಂದ ಯುವಪೀಳಿಗೆಯ ಜ್ಯೋತಿರಾದಿತ್ಯ ಸಿಂದಿಯಾ, ಸಚಿನ್ ಪೈಲಟ್ ಮುಂತಾದವರ ಅಪಕ್ವ, ಅನನುಭವಿ ಸಲಹೆಗಳಿಗೆ ಹೆಚ್ಚು ಮಾನ್ಯತೆ ನೀಡುತ್ತಾರೆ ಎಂಬ ಮಾತು ಕೇಳಿ ಬರುತ್ತಿದೆ. ಪದೇ ಪದೆ ಹೇಳದೆ ಕೇಳದೆ ವಿದೇಶಗಳಿಗೆ ಅನಧಿಕೃತವಾಗಿ ಹೋಗಿ ಪಕ್ಷದವರಲ್ಲಿ ಗೊಂದಲ ಸೃಷ್ಠಿಸುವುದು ಸಹ ರಾಹುಲರ ಅಬ್ಯಾಸವಾಗಿದೆ. ಇದೆಲ್ಲದರ ಪರಿಣಾಮವಾಗಿ ರಾಹುಲರು ಅದ್ಯಕ್ಷರಾಗಲಿ ಎಂದು ಬಯಸುವವರಿಗೇನೆ ಅವರ ಸಫಲತೆಯ ಬಗ್ಗೆ ಸಂಶಯವಿದೆ, ಇರಲಿ.

ಇದೀಗ ರಾಹುಲರನ್ನು ಪಕ್ಷದ ಅದ್ಯಕ್ಷ ಸ್ಥಾನಕ್ಕೆ ತಂದು ಪಕ್ಷದ ಸಂಘಟನೆಯಲ್ಲಿ ಅವರಿಗೆ ಸಂಪೂರ್ಣ ಸ್ವಾತಂತ್ರವನ್ನು ನೀಡಲು ತಯಾರಾಗಿರುವ ಮೂಲಕ ಕಾಂಗ್ರೆಸ್ ತನ್ನ ನೂರು ವರ್ಷಗಳ ಇತಿಹಾಸದಲ್ಲಿ ಮತ್ತೊಂದು ಹೊಸ ಅದ್ಯಾಯ ಬರೆಯಲು ಹೊರಟಿದೆ. ಆದರೆ ಪಕ್ಷದ ಅದ್ಯಕ್ಷತೆಯನ್ನು ರಾಹುಲ್ ಗಾಂದಿಯವರಿಗೆ ನೀಡುವುದರಿಂದ ಮಾತ್ರಕ್ಕೆ ಕಾಂಗ್ರೆಸ್ಸಿನ ಕಷ್ಟಗಳು ಇಲ್ಲವಾಗುತ್ತವೆಯೇ? ಎಂಬುದೆ ಎಲ್ಲರನ್ನೂ ಕಾಡುತ್ತಿರುವ ಮುಖ್ಯ ಪ್ರಶ್ನೆಯಾಗಿದೆ.  ಕೇವಲ ಪಕ್ಷದ ಅದ್ಯಕ್ಷರನ್ನು ಬದಲಾಯಿಸುವುದರಿಂದ ಪಕ್ಷದ ಬಲವರ್ದನೆ ಸಾದ್ಯವಿಲ್ಲ. ತಳಮಟ್ಟದಿಂದಲೂ ಈ ಬದಲಾವಣೆ ಪ್ರಾರಂಭವಾಗ ಬೇಕಾಗಿದೆ. ಜೊತೆಗೆ ಬದಲಾಗುತ್ತಿರುವ ಕಾಲಮಾನಕ್ಕೆ ತಕ್ಕಂತೆ ಅದು ತನ್ನ ಒಟ್ಟು ಸ್ವರೂಪದಲ್ಲಿಯೇ ಭಿನ್ನತೆಯತ್ತ ಸಾಗಬೇಕಿದೆ. ಇದು ಕೇವಲ ಕಾಂಗ್ರೆಸ್ ಎನ್ನುವ ಪಕ್ಷದ ಲಾಭದ ದೃಷ್ಠಿಯಿಂದ ಮಾತ್ರವಲ್ಲ, ರಾಷ್ಟ್ರ ರಾಜಕೀಯದ ಒಳಿತಿಗಾಗಿಯೂ ಆಗಬೇಕಾದ ಕಾರ್ಯವಾಗಿದೆ. ಯಾಕೆಂದರೆ ಇವತ್ತಿನ ರಾಜಕೀಯ ಪರಿಸ್ಥಿತಿ ಅಷ್ಟೊಂದು ಆಶಾದಾಯಕವಾಗಿಲ್ಲ. ಬಾಜಪ ಪ್ರಬಲವಾದ ಒಂದು ಶಕ್ತಿಯಾಗಿ ಬೆಳೆದು ಮತಾಂಧತೆ ಮತ್ತು ಖಾಸಗಿ ಬಂಡವಾಳಶಾಹಿ ಎಂಬೆರಡು ಶಕ್ತಿಗಳ ಅಭೂತ ಪೂರ್ವ ಬೆಂಬಲದೊಂದಿಗೆ ದೈತ್ಯಾಕಾರವಾಗಿ ಬೆಳೆದು ನಿಂತಿದ್ದರೆ, ಹಲವು ರಾಜ್ಯಗಳಲ್ಲಿ ಪ್ರಾದೇಶಿಕ ನಾಯಕರುಗಳು ರಾಷ್ಟ್ರೀಯ ಹಿತಾಸಕ್ತಿಯ ಬಗ್ಗೆ ಯೋಚಿಸಲೂ ಪುರುಸೊತ್ತಿಲ್ಲದವರಂತೆ ಮೆರೆಯುತ್ತಿದ್ದಾರೆ. ಇವೆರಡೂ ಶಕ್ತಿಗಳನ್ನು ಎದುರಿಸಿ ನಿಂತು ಜನಪರ ರಾಜಕೀಯ ಮಾಡುತ್ತ ಚುನಾವಣೆಗಳನ್ನುಗೆಲ್ಲುವುದು ಅಂದು ಕೊಂಡಷ್ಟು ಸುಲಭವಲ್ಲ. ಹೊಸತನದ ರಾಜಕಾರಣವನ್ನು ಕಾಂಗ್ರೆಸ್ ಶುರು ಮಾಡುವುದೇ ಆದಲ್ಲಿ 2019 ಅದರ ಗುರಿಯಾಗುವುದಕ್ಕಿಂತ 2024 ಅದರ ನೈಜ ಗುರಿಯಾಗಬೇಕು. ಯಾಕೆಂದರೆ ಅಸಾದ್ಯವಾದ ಸಮೀಪದ ಗುರಿಗಿಂತ ಸಾದ್ಯವಾಗಬಹುದಾದ ದೀರ್ಘಕಾಲೀನ ಗುರಿ ಅತ್ಯುತ್ತಮವಾದುದು.

ಈ ದಿಸೆಯಲ್ಲಿ ಆದಷ್ಟು ಬಗ ಕಾಂಗ್ರೆಸ್ ತನ್ನ ಬದಲಾವಣೆಯ ಕಾರ್ಯವನ್ನು ಪ್ರಾರಂಬಿಸುವುದು ಉತ್ತಮ!

1 comment:

  1. ಕಾಂಗ್ರೆಸ್ ಪಕ್ಷದ ಉನ್ನತ ನಾಯಕತ್ವವು ಜನರೊಂದಿಗೆ ನೇರ ಸಂಪರ್ಕ ಇಟ್ಟುಕೊಂಡಿಲ್ಲ. ಪಕ್ಷದ ಉನ್ನತ ನಾಯಕರ ಶೈಲಿ ಹಾಗೂ ವರ್ತನೆ ಹಿಂದಿನ ರಾಜಮಹಾರಾಜರ ವರ್ತನೆಯನ್ನು ಹೋಲುತ್ತದೆ. ಜನರೊಂದಿಗೆ ರಾಜ ಮಹಾರಾಜರಿಗೆ ನೇರ ಸಂಪರ್ಕ ಇರಲಿಲ್ಲ, ಸಂಪರ್ಕ ಏನಿದ್ದರೂ ಮಂತ್ರಿ ಮಾಗಧರ ಮೂಲಕ ಮಾತ್ರ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅದೂ ಬೇರೆ ರಾಜಕೀಯ ಪಕ್ಷಗಳು ಬೆಳೆದು ಏಕಪಕ್ಷೀಯ ವ್ಯವಸ್ಥೆ ತೊಲಗಿದ ನಂತರ ರಾಜರ ಶೈಲಿಯಲ್ಲಿ ವರ್ತಿಸುವುದು ಕಾಂಗ್ರೆಸ್ ಪಕ್ಷದ ಅವಸಾನಕ್ಕೆ ಪ್ರಧಾನ ಕಾರಣವಾಗಿದೆ. ಕಾಂಗ್ರೆಸ್ ಪಕ್ಷದ ವೆಬ್ ಸೈಟ್ ತೆರೆದು ನೋಡಿದರೆ ಅಲ್ಲಿ ಜನರಿಗೆ ಪಕ್ಷದ ಉನ್ನತ ನಾಯಕತ್ವ ಅರ್ಥಾತ್ ಸೋನಿಯಾ ಗಾಂಧಿ ಯಾ ರಾಹುಲ ಗಾಂಧಿಯವರನ್ನು ನೇರವಾಗಿ ಸಂಪರ್ಕಿಸುವ ವ್ಯವಸ್ಥೆಯೇ ಇಲ್ಲ. ಸೋನಿಯಾ ಗಾಂಧಿ ಹಾಗೂ ರಾಹುಲ ಗಾಂಧಿಜನರ ಸಮಸ್ಯೆಗಳ ಬಗ್ಗೆ ನೇರವಾಗಿ ಅವರಿಂದಲೇ ಅರಿಯುವ ನೇರ ವ್ಯವಸ್ಥೆ ಮಾಡಿಕೊಂಡೇ ಇಲ್ಲ. ಓರ್ವ ನಿಜವಾದ ಜನನಾಯಕ ಈ ವ್ಯವಸ್ಥೆಯನ್ನು ಮೊದಲು ಮಾಡಿಕೊಂಡಿರಬೇಕು. ಜನರ ಸಮಸ್ಯೆಗಳ ಬಗ್ಗೆ ಗಮನಹರಿಸುವುದು ತಮ್ಮ ಖಾಸಗಿ ಬದುಕಿಗೆ ತೊಂದರೆ ಎಂದುಕೊಳ್ಳುವವರು ರಾಜಕೀಯಕ್ಕೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಬರಲೇಬಾರದು. ಬಂದರೆ ಈಗ ಕಾಂಗ್ರೆಸ್ ಪಕ್ಷದ ನಿರ್ಲಜ್ಜ ಆಡಳಿತದಂಥ ವ್ಯವಸ್ಥೆ ರೂಪುಗೊಳ್ಳದೆ ಮತ್ತೇನು ಆಗುತ್ತದೆ? ಬೇರೆ ಎಲ್ಲಾ ರಾಜಕೀಯ ಪಕ್ಷಗಳ ಉನ್ನತ ನಾಯಕರೊಂದಿಗೆ ಅವರ ಪಕ್ಷದ ವೆಬ್ ಸೈಟ್ ಮೂಲಕ ಜನಸಾಮಾನ್ಯರು ನೇರ ಸಂಪರ್ಕ ಮಾಡಬಹುದಾದ ವ್ಯವಸ್ಥೆ ಇದೆ.

    ಕಾಂಗ್ರೆಸ್ ಪಕ್ಷದ ಉನ್ನತ ನಾಯಕತ್ವ ೭೦ರ ದಶಕದ ಮೊದಲು ದೇಶದಲ್ಲಿ ಇದ್ದ ಕಾಂಗ್ರೆಸ್ ಪಕ್ಷದ ಏಕಪಕ್ಷೀಯ ಆಡಳಿತ ಇದ್ದ ಮನಸ್ಥಿತಿಯಿಂದ ಹೊರಗೆ ಬಂದೇ ಇಲ್ಲ. ಆಗ ದೇಶದಲ್ಲಿ ಬೇರೆ ಹೇಳಿಕೊಳ್ಳುವಂತಹ ಬಲವಾದ ರಾಜಕೀಯ ಪಕ್ಷಗಳು ಇರಲಿಲ್ಲ. ಆದರೆ ಈಗ ಹಾಗಲ್ಲ. ಬಹುತೇಕ ರಾಜ್ಯಗಳಲ್ಲಿ ಪ್ರಾದೇಶಿಕ ಪಕ್ಷಗಳು ಬೆಳೆದು ನಿಂತಿವೆ. ಬಿಜಿಪಿ ದೇಶದ ಹಲವು ರಾಜ್ಯಗಳಲ್ಲಿ ಪ್ರಬಲ ರಾಜಕೀಯ ಪಕ್ಷವಾಗಿ ಬೆಳೆದು ನಿಂತಿದೆ. ಬಿಜೆಪಿಯನ್ನು ಒಡೆಯದಂತೆ ಒಂದಾಗಿ ಇರಿಸುವ ಸಂಘ ಪರಿವಾರ ಇದೆ. ಧಾರ್ಮಿಕ ಹಾಗೂ ಸಾಂಸ್ಕೃತಿಕ ಸಂಘಟನೆಗಳ ಮೂಲಕ ಸಂಘ ಪರಿವಾರ ದೇಶಾದ್ಯಂತ ಪಕ್ಷವನ್ನು ಬೆಳುಸುವಲ್ಲಿ, ಒಂದಾಗಿ ಇರಿಸುವಲ್ಲಿ ಯಶಸ್ಸು ಸಾಧಿಸಿದೆ. ಹಿಂದುತ್ವದ ತಾತ್ವಿಕ ರಾಜಕಾರಣವೇ ಬಿಜಿಪಿ ಪಕ್ಷವನ್ನು ಒಂದಾಗಿ ಇರಿಸುವ ಮೂಲದ್ರವ್ಯ. ಕಾಂಗ್ರೆಸ್ ಪಕ್ಷದಲ್ಲಿ ಅದನ್ನು ಒಂದಾಗಿ ಇರಿಸುವ ತಾತ್ವಿಕ ಅಂಶಗಳೇ ಇಲ್ಲ . ಕಾಂಗ್ರೆಸ್ ಪಕ್ಷವನ್ನು ಒಡೆಯದಂತೆ ಇರಿಸಬೇಕಾದರೆ ನೆಹರೂ ಕುಟುಂಬದ ಒಡೆತನ ಇದ್ದರೆ ಮಾತ್ರ ಸಾಧ್ಯ ಎಂಬ ಪರಿಸ್ಥಿತಿ ಹಿಂದಿನಿಂದಲೇ ಇದೆ. ನೆಹರೂ ಕುಟುಂಬದ ಸದಸ್ಯರಿಗೆ ದೇಶವನ್ನು ಇನ್ನಷ್ಟು ಉತ್ತಮಗೊಳಿಸಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬೆಳೆಸುವ, ಜನರ ಸಂಕಷ್ಟಗಳಿಗೆ ಪರಿಹಾರ ರೂಪಿಸುವ ಇಚ್ಛಾಶಕ್ತಿ ಇಲ್ಲ. ಹೀಗಾಗಿ ಕಾಂಗ್ರೆಸ್ ಪಕ್ಷವು ಮುಂದೆ ಅವಸಾನ ಹೊಂದುವ ಕಡೆಗೆ ದಾಪುಗಾಲಿಡುತ್ತಿದೆ. ಬಿಜೆಪಿಯ ಆಡಳಿತ ತೀರಾ ಹದಗೆಟ್ಟರೆ ಮಾತ್ರ ಕಾಂಗ್ರೆಸ್ ಪಕ್ಷವು ಚಿಗುರಿಕೊಳ್ಳುವ ಸಾಧ್ಯತೆ ಇದೆ. ಕಾಂಗ್ರೆಸ್ ಪಕ್ಷವು ಅವಸಾನದ ಕಡೆಗೆ ಸಾಗಿದರೆ ಆ ಸ್ಥಾನವನ್ನು ಆಮ್ ಆದ್ಮಿ ಪಕ್ಷವು ನಿಧಾನವಾಗಿ ತುಂಬಿಕೊಳ್ಳುವ ಸಾಧ್ಯತೆಯನ್ನೂ ಅಲ್ಲಗಳೆಯುವಂತಿಲ್ಲ. ಆಮ್ ಆದ್ಮಿ ಪಕ್ಷದ ಕೇಜ್ರಿವಾಲ್ ಸರ್ವಾಧಿಕಾರಿ ಮನೋಭಾವದ ವ್ಯಕ್ತಿಯಾದರೂ ಅವರಲ್ಲಿ ರಾಜಕೀಯದಲ್ಲಿ ಹಾಗೂ ಆಡಳಿತದಲ್ಲಿ ಹೊಸತನವನ್ನು ತಕ್ಕಮಟ್ಟಿಗೆ ಆದರೂ ತರುವ ಸ್ರಜನಶೀಲ ಪ್ರತಿಭೆ ಇದೆ. ಇಂಥ ಪ್ರತಿಭೆ ಹಾಗೂ ಇಚ್ಛಾಶಕ್ತಿ ಸೋನಿಯಾ ಅಥವಾ ರಾಹುಲ್ ಇಬ್ಬರಲ್ಲೂ ಇಲ್ಲ.

    ReplyDelete