Feb 24, 2016

ಪಿ.ಸಾಯಿನಾಥ್: ಗಾಂಧಿಯನ್ನು ಕೊಂದವರು ನಮ್ಮನ್ನು ದೇಶದ್ರೋಹಿಗಳು ಎನ್ನುತ್ತಿದ್ದಾರೆ!

ದಿನಾಂಕ 19-02-2016ರಂದು ಜೆ.ಎನ್.ಯುನಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಪಿ. ಸಾಯಿನಾಥ್ ಮಾತನಾಡಿದ್ದರು. ಅದರ ಕನ್ನಡ ಭಾವಾನುವಾದಾದ ಎರಡನೆಯ ಭಾಗ ಇವತ್ತಿನ ಹಿಂಗ್ಯಾಕೆಯಲ್ಲಿ.
ಮೂಲ ಭಾಷಣ-ಪಿ.ಸಾಯಿನಾಥ್
ಅನುವಾದ-ಕಿರಣ್. ಎಂ . ಗಾಜನೂರು

ನಮ್ಮ ನಡುವಿನ ಮೂಲಭೂತವಾದ ಬಹುತ್ವಕ್ಕೆ/ವಿವಿಧತೆಗೆ ಹೆದರುತ್ತದೆ. ಆ ಕಾರಣಕ್ಕೆ ಅದು ಯಾವಾಗಲೂ ಬಹುತ್ವವನ್ನು ಹತ್ತಿಕ್ಕಲು ಯತ್ನಿಸುತ್ತಿರುತ್ತದೆ. ಇಂದು ಅವನು ನಿನ್ನ ಉದ್ಯೋಗ ಕಿತ್ತುಕೊಂಡ, ಇವಳು ನಿನ್ನ ಉದ್ಯೋಗ ಕಿತ್ತುಕೊಂಡಳು, ನೀನು ಎಲ್ಲೋ ಇರಬೇಕಿತ್ತು ಇಂತವರ ಕಾರಣಕ್ಕೆ ಹೀಗೆ ಇಲ್ಲಿ ನಿಂತಿದ್ದೀಯ ಎಂಬ ಮೋಸದ ಮಾತಿನ ನೆಲೆಯಲ್ಲಿ ದೊಡ್ಡ ಸಂಖ್ಯೆಯ ಯುವಕರನ್ನು ಒಂದುಗೂಡಿಸಲು ಅಸಮಾನತೆಯನ್ನು ಬಳಸಿಕೊಳ್ಳುವ ಹಂತಕ್ಕೆ ಕೆಲವು ಜನ ಬಂದಿದ್ದಾರೆ. ಆದರೆ ವಾಸ್ತವ ಎಂದರೆ ಇಂದು ಉದ್ಯೋಗಗಳೇ ಇಲ್ಲ! ಅಧಿಕಾರಕ್ಕೆ ಬಂದ ಜನರು ಈ ದೇಶದ ಲಕ್ಷಾಂತರ ಜನರನ್ನು ಸ್ಥಳಾಂತರಿಸಿದ್ದಾರೆ, ಸಾವಿರಾರು ಜನರು ತಮ್ಮ ಮೂಲ ನೆಲೆ ಕಳೆದುಕೊಳ್ಳುವಂತೆ ಮಾಡಿದ್ದಾರೆ. ಆದರೆ ಒಂದೇ ಒಂದು ಉದ್ಯೋಗವನ್ನು ಸೃಷ್ಟಿಸಿಲ್ಲ. ಸೃಷ್ಟಿಸಿದ್ದರೆ ಅದು ನಮ್ಮ ನಿಮ್ಮ ಮನೆಗಳಲ್ಲಿ ಕೆಲಸ ಮಾಡುವ ಕೂಲಿಗಳನ್ನು ಸೃಷ್ಟಿಸಿದ್ದಾರೆಯೇ ಹೊರತು ಉದ್ಯೋಗಗಳನ್ನಲ್ಲ. . ..
ಮೊದಲ ಭಾಗವನ್ನೋದಲು ಇಲ್ಲಿ ಕ್ಲಿಕ್ಕಿಸಿ
ಒಂದು ಕಾಲದಲ್ಲಿ ಮುಂಬೈ ನಗರದ ಗಿರಣಿಗಳಲ್ಲಿ ಈ ದೇಶದ ಎಲ್ಲಾ ಭಾಗಗಳಿಂದ ಬಂದ ಜಾತ್ಯತೀತ ತತ್ವವನ್ನು ಬೆಂಬಲಿಸುವ ಬಹಳ ದೊಡ್ಡ ಕಾರ್ಮಿಕರ ವರ್ಗ ದುಡಿಯುತ್ತಿತ್ತು. ಆದರೆ ಇಂದು ಆ ಗಿರಣಿಗಳೇ ನಾಪತ್ತೆಯಾಗಿವೆ. ಆ ಜಾಗವೆಲ್ಲಾ ಇಂದು ರಿಯಲ್ ಎಸ್ಟೇಟ್ ಉದ್ಯಮಿಗಳ ಕೈ ಸೇರಿದೆ. ಅಲ್ಲಿರುವ ದೊಡ್ಡ ಸಂಖ್ಯೆಯ ರಿಯಲ್ ಎಸ್ಟೇಟ್ ಉದ್ಯಮಿ ಕಂಪೆನಿಯ ಹೆಸರು “ಪ್ಲಾನೇಟ್ ಗೋದ್ರೇಜ್” (ವಿಭಿನ್ನವಾದ ಗ್ರಹ). ಒಂದು ಅರ್ಥದಲ್ಲಿ ಅದು ನಿಜಕ್ಕೂ ಒಂದು ವಿಭಿನ್ನವಾದ ಗ್ರಹವೇ. . 

ಇಂದು ಮುಂಬಯಿಯ ಸ್ಮಾರಕವನ್ನು ಗೇಟ್ ವೇ ಆಫ್ ಇಂಡಿಯಾ ಬದಲಾಗಿ ಮುಖೇಶ್ ಅಂಬಾನಿಯ ಮನೆ ಎಂದು ಗುರುತಿಸಲಾಗುತ್ತಿದೆ. ನೀವು ನನ್ನಂತೆ ಹೆಮ್ಮೆಯ ಭಾರತೀಯರಾಗಿದ್ದರೆ ಯಾವುದೇ ಭಿನ್ನಭಿಪ್ರಾಯಗಳಿಲ್ಲದೆ ನಾವು ಹೆಮ್ಮೆಯಿಂದ ಅತಿ ಎತ್ತರಕ್ಕೆ ಕಟ್ಟಿದ ಅತ್ಯಂತ ಅಸಹ್ಯ ಕಟ್ಟಡ ಅದು ಎನ್ನುವುದನ್ನು ಒಪ್ಪುತ್ತೀರ ಅನ್ನಿಸುತ್ತದೆ .. 

40 ವರ್ಷಗಳ ಹಿಂದೆ ರಾಯಗಡದಿಂದ, ರತ್ನಗಿರಿಯಿಂದ ರೈತರು ಮುಂಬೈನ ಗಿರಣಿಗಳಲ್ಲಿ ಕೆಲಸ ಪಡೆದುಕೊಂಡು ಅಲ್ಲಿನ ತಮಿಳರು, ಮಲೆಯಾಳಿಗರು, ಮರಾಠರೊಂದಿಗೆ ಹೊಂದಿಕೊಂಡು ಕೆಲಸ ಮಾಡಿ ಸಂಸಾರ ಸಾಕುತ್ತಿದ್ದರು. ಆದರೆ ಇಂದು ಅದೇ ರೈತರು ಮುಂಬೈ ನಗರದ ಮನೆಗಳಲ್ಲಿ ಮನೆಗೆಲಸಕ್ಕೆ ಬರುತ್ತಿದ್ದಾರೆ. ನಾನು ನನ್ನದೇ ಅನುಭವವನ್ನು ಉದಾಹರಣೆಯಾಗಿಟ್ಟುಕೊಂಡು ಹೇಳುವುದಾದರೆ ಮುಂಬೈನ ನನ್ನ ಮನೆ ಮತ್ತು ಆ ಕಟ್ಟಡದ ಹತ್ತು ಮನೆಗಳನ್ನು ಸ್ವಚ್ಚಗೊಳಿಸಲು ಬರುವ ಹೆಣ್ಣುಮಗಳು ಒಂದು ಕಾಲದಲ್ಲಿ ತಾಲೇಗಾಂ ನ ಕೌಶಲ್ಯ ಹೊಂದಿದ ರೈತ ಮಹಿಳೆಯಾಗಿದ್ದವಳು! ಈಗ ಆಕೆ ನಮ್ಮೊಂದಿಗೆ ಇಲ್ಲ. ಆದರೆ ಈಗಲೂ ನಮ್ಮ ಮನೆಗೆ ಅತ್ಯುತ್ತಮ ಅಕ್ಕಿಯನ್ನು ವರ್ಷಕ್ಕೆ ಎರಡು ಬಾರಿ ನೀಡುತ್ತಿರುತ್ತಾಳೆ. . 

ನಾವು ಆರ್ಥಿಕತೆ ಮತ್ತು ನವ ಉದಾರವಾದಿ ನೀತಿಗಳು ಬೇರೆ ಬೇರೆ ವರ್ಗಗಳ ಜನರೊಂದಿಗೆ ಹೇಗೆ ವರ್ತಿಸುತ್ತವೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕಿದೆ. 80 ರ ದಶಕದಲ್ಲಿ ನಾನು ಮುಂಬೈ ತಲುಪಿದಾಗ ಕೋನೆಯ ಪತ್ರಿಕಾ ನೌಕರರ ಮುಷ್ಕರ ಇಂಡಿಯನ್ ಎಕ್ಸ್ ಪ್ರೆಸ್ಸಿನಲ್ಲಿ ನಡೆಯುತ್ತಿತ್ತು. ನನ್ನ ಸಹೋದ್ಯೋಗಿಗಳು 200 ರೂಪಾಯಿ ಹೆಚ್ಚುವರಿ ಭತ್ಯೆ ನೀಡಿ ಎಂದು ಹೋರಾಟ ಮಾಡುತ್ತಿದ್ದರು. ಆದರೆ ಸೇಠ್ ಜಿ ಅವರ ಬೇಡಿಕೆಯನ್ನು ಕೇಳಿಸಿಕೊಂಡೆ ಇರಲಿಲ್ಲ! ಸೇಠ್ ರು 200 ರೂಪಾಯಿ ಹೆಚ್ಚಿಸಿ ಎಂದು ಕೇಳಲು ನೀವು ಯಾರು ಎಂಬಂತೆ ವರ್ತಿಸುತ್ತಿದ್ದರು. ಅಂದು ನಾವು ನಮ್ಮ ಸಹೋದ್ಯೋಗಿಗಳ ಪರವಾಗಿ ಅಲ್ಲಿ ಕುಳಿತು ಅವರ ಹೋರಾಟದಲ್ಲಿ ಭಾಗಿಯಾಗಿದ್ದೆವು. ಅಂದು ಯಾರೆಲ್ಲಾ ಅಲ್ಲಿ ಕುಳಿತು ಹೋರಾಟ ಮಾಡಿದ್ದೆವೋ ಇಂದು ಅವರೆಲ್ಲರ ಬಳಿ ಖಾಸಗಿ ಕಾರಿದೆ. ಆದರೆ 80 ರ ದಶಕದಲ್ಲಿಯೇ ಬಂದು ನಮ್ಮ ಮನೆ ಸ್ವಚ್ಚ ಮಾಡುತ್ತಿದ್ದ ತಾಲೇಗಾಂ ನ ಆ ಕೌಶಲ್ಯ ಹೊಂದಿದ ರೈತ ಮಹಿಳೆಯ ಬದುಕು ದುರ್ಬರವಾಗಿದೆ; ನಮ್ಮ ಬದುಕಿಗೆ ಅಗತ್ಯವಾದ ಎಲ್ಲವೂ ಕಡಿಮೆ ಮೌಲ್ಯಕ್ಕೆ ಸಿಗುತ್ತಿದ್ದರೆ ಆಕೆಯ ಬದುಕಿಗೆ ಅಗತ್ಯವಾದ ಪ್ರತಿಯೊಂದು ವಸ್ತುವು ದುಬಾರಿಯಾಗುತ್ತಾ ಸಾಗುತ್ತಿದೆ. . 

ಇಂದು ಕಂಪ್ಯೂಟರ್, ಏರ್ ಕಂಡಿಷನರ್, ಕಾರುಗಳ ದರಗಳು ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದ್ದರೆ ಸಾಮಾನ್ಯರು ಓಡಾಡುವ ಬಸ್ ಪ್ರಯಾಣ ದರ ಅಧಿಕವಾಗುತ್ತಾ ಸಾಗುತ್ತಿದೆ. ಆಕೆ ಇಲ್ಲಿಗೆ ಬಂದಾಗ ಇಲ್ಲಿನ ಮಿನಿಮಮ್ ಬಸ್ಸಿನ ದರ 25 ಪೈಸೆ ಇತ್ತು. ಇಂದು ಅತಿ ಸಣ್ಣ ದೂರಕ್ಕೆ 7 ರಿಂದ 8 ರೂಪಾಯಿ ಇದೆ. ಇದರ ಅರ್ಥ ಒಂದು ಕಡೆ ಮಧ್ಯಮ ವರ್ಗದ ಬದುಕಿಗೆ ಅಗತ್ಯವಾದ ಎಲ್ಲಾ ಸರಕು ಸೇವೆಗಳ ಮೌಲ್ಯ ಇಳಿಮುಖವಾಗುತ್ತಿದ್ದರೆ ಸಾಮಾನ್ಯರ ಅಗತ್ಯಗಳ ಮೌಲ್ಯ ಎರಿಕೆಯಾಗುತ್ತಾ ಸಾಗುತ್ತಿದೆ. ನಾನು 1991 ರಲ್ಲಿ 24 ಎಂ.ಬಿ ಹಾರ್ಡ್‌ಡಿಸ್ಕ್ ಹೊಂದಿದ ಸುಂದರವಾದ ನನ್ನ ಮೊದಲ ಕಂಪ್ಯೂಟರ್ ತಂದಾಗ ನಮ್ಮ ಸುತ್ತಲಿನ ನಾಲ್ಕೈದು ಕಟ್ಟಡಗಳ ಜನ ಅದನ್ನು ನೋಡಲು ಸಾಲು ಗಟ್ಟಿ ನಿಂತಿದ್ದರು. ಇಂದು ನಾವು ನೀವು ಬಳಸುತ್ತಿರುವ ಮೊಬೈಲ್ಗಳು ಅದಕ್ಕಿಂತ ನೂರು, ಇನ್ನೂರು ಪಟ್ಟು ಹೆಚ್ಚು ಉತ್ತಮವಾಗಿವೆ. ಇದರ ಅರ್ಥ ಇಂದು ಈ ದೇಶದ ಮಧ್ಯಮ ವರ್ಗ ಮತ್ತು ಗಣ್ಯರನ್ನು ಕೇಂದ್ರವಾಗಿಟ್ಟುಕೊಂಡು ಎಲ್ಲವನ್ನೂ ತಯಾರಿಸಲಾಗುತ್ತಿದೆ, ಸರಳಗೊಳಿಸಲಾಗುತ್ತಿದೆ, ದರ ಕಡಿತಗೊಳಿಸಲಾಗುತ್ತಿದೆ. . 

ಇನ್ನೊಂದು ಕಡೆ ಈ ದೇಶದ 833 ಮಿಲಿಯನ್ ಜನರಿರುವ ಗ್ರಾಮೀಣ ಭಾರತದ ಶೇ 90 ರಷ್ಟು 5 ಸದಸ್ಯರನ್ನು ಹೊಂದಿದ ಕುಟುಂಬವೊಂದರ ಮುಖ್ಯಸ್ಥನ ಅದಾಯ ಕೇವಲ ೧೦ ಸಾವಿರ ರೂಪಾಯಿ ಮಾತ್ರ! ಯಾವ ರೀತಿಯ ಅಸಮಾನತೆಯನ್ನು ಸೃಷ್ಟಿಸಲಾಗಿದೆ ನಮ್ಮ ನಡುವೆ? ನಾವು ಆಶ್ಚರ್ಯಪಡುವಷ್ಟು ಅಸಮಾನತೆಯನ್ನು ಸೃಷ್ಟಿಸಲಾಗುತ್ತಿದೆ. ಜಾಗತಿಕ ಹಸಿವಿನ ಪಟ್ಟಿಯಲ್ಲಿ ನಮ್ಮ ಸ್ಥಾನ ನಿಜಕ್ಕೂ ನಾಚಿಕೆ ತರುವಂತಿದೆ. ನಾವು ಆಹಾರ ಭದ್ರತೆಯ ಹಿಂದಿನ ರಾಜಕೀಯದ ಕುರಿತು ಹೋರಾಡುತ್ತಿದ್ದೇವೆ, ಆದರೆ ನನಗೆ ಅನ್ನಿಸುವಂತೆ ಅದನ್ನು ಜಾರಿಗೆ ತರಬೇಕಿದೆ. 

ದೇಶದ ಅಂತರಿಕ ಸ್ಥಿತಿಯ ಕುರಿತಂತೆ ಸರ್ಕಾರದ ನ್ಯಾಷನಲ್ ಕ್ರೈಂ ರೆಕಾರ್ಡ್ ಬ್ಯುರೋದ ಅಂಕಿ-ಅಂಶಗಳು ನಿಜಕ್ಕೂ ಬಹಳ ಕೆಟ್ಟ ಸ್ಥಿತಿಯನ್ನು ನಮ್ಮೆದುರು ಇಡುತ್ತಿವೆ. ಆ ವರದಿಗಳು 1995ರ ನಂತರ ಮೂರು ಲಕ್ಷಕ್ಕೂ ಅಧಿಕ ಸಂಖ್ಯೆಯ ರೈತರು ಈ ದೇಶದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನುತ್ತಿವೆ. ಈ ಸ್ಥಿತಿಯನ್ನು ನಾವು ಇರುವುದರಲ್ಲಿಯೇ ಉತ್ತಮ ಎಂದುಕೊಳ್ಳುತ್ತಿದ್ದೇವೆ. 2001 ರಿಂದ 2011 ರ ಮಧ್ಯದ 10 ವರ್ಷಗಳಲ್ಲಿ ಪ್ರತಿ ಅರ್ಧ ಗಂಟೆಗೆ ಒಬ್ಬ ರೈತ ಆತ್ಮಹತ್ಯೆಗೆ ಶರಣಾಗುತ್ತಿದ್ದಾನೆ ಎಂದು ಅಂಕಿ-ಅಂಶಗಳು ವಿವರಿಸುತ್ತಿದ್ದರೆ ಇಂದಿನ ಪತ್ರಿಕೆಗಳ ಮುಖಪುಟಗಳಲ್ಲಿ ಬಿ.ಜೆ.ಪಿ ಶಾಸಕನೊಬ್ಬನ “ರೈತರಿಗೆ ಆತ್ಮಹತ್ಯೆ ಮಾಡಿಕೊಳ್ಳುವುದು ಒಂದು ಶೋಕಿಯಾಗಿ ಬಿಟ್ಟಿದೆ” ಎಂಬ ಹೇಳಿಕೆ ಕಣ್ಣಿಗೆ ರಾಚುತ್ತಿದೆ. . .

ಇವನೊಬ್ಬನೆ ಅಲ್ಲ ಹಲವಾರು ರಾಜಕಾರಣೆಗಳು ಹೀಗೆ ಮಾತನಾಡಿದ್ದಾರೆ. ಚಂದ್ರಬಾಬು ನಾಯ್ಡು ರೈತರು ಪರಿಹಾರದ ಆಸೆಗೆ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ ಎಂಬ ಹೇಳಿಕೆ ನೀಡಿದ್ದರು. ನಿಮಗೆ ಗೊತ್ತಿರಲಿ ರೈತ ಆತ್ಮಹತ್ಯೆ ಮಾಡಿಕೊಂಡರೆ ಒಂದು ಲಕ್ಷ ರೂಪಾಯಿಗಳ ಪರಿಹಾರ ನೀಡಲಾಗುತ್ತದೆ. ನಿಮಗೆ ಆಶ್ಚರ್ಯ ಆಗಬಹದು ಇದುವರೆಗೂ ಆತ್ಮಹತ್ಯೆ ಮಾಡಿಕೊಂಡ ರೈತರಲ್ಲಿ ಕೇವಲ 12ಶೇ ಕುಟುಂಬಗಳಿಗೆ ಪರಿಹಾರ ನೀಡಲಾಗಿದೆ. ಆಂಧ್ರ ಮತ್ತು ಮಹಾರಾಷ್ಟ್ರದಲ್ಲಿ ನಾವು ಸ್ವಲ್ಪ ಹೋರಾಟ ಮಾಡಿದ್ದರಿಂದ ಪರಿಹಾರ ಪಡೆದ ಕುಟುಂಬಗಳ ಸಂಖ್ಯೆ ಹೆಚ್ಚಿದೆ. ಆದರೂ ಆತ್ಮಹತ್ಯೆಗೆ ಒಳಗಾದ ರೈತರ ಒಟ್ಟು ಕುಟುಂಬಗಳಲ್ಲಿ ಶೇ 12 ರಷ್ಟು ಕುಟುಂಬಗಳಿಗೆ ಮಾತ್ರ ಪರಿಹಾರ ನೀಡಲಾಗಿದೆ. ಈ ಪರಿಹಾರ ಹೇಗೆ ವಿತರಿಸಲಾಗುತ್ತದೆ ಎಂಬುದನ್ನು ಕೇಳಿ ನಿಮಗೆ ಇನ್ನೂ ಆಶ್ಚರ್ಯ ಆಗಬಹದು. ಸತ್ತ ರೈತನ ಮಡದಿಗೆ ನೀಡಲಾಗುವ ಆ ಒಂದು ಲಕ್ಷದಲ್ಲಿ 30 ಸಾವಿರ ಹಣದ ರೂಪದಲ್ಲಿ ನೀಡಲಾಗುತ್ತದೆ. ಇನ್ನುಳಿದ 70 ಸಾವಿರ ಆಕೆಯ ಹೆಸರಿನಲ್ಲಿ ಎಫ್.ಡಿ ಮಾಡಲಾಗುತ್ತದೆ. ಈ ಎಫ್.ಡಿ ಮಾಡುವ ಕ್ರಮವನ್ನು ನಾನು ಸ್ವಾಗತಿಸುತ್ತೇನೆ. ಏಕೆಂದರೆ ಪೂರ್ತಿ ಹಣ ಆ ವಿಧವೆಯ ಕೈಗೆ ಸಿಕ್ಕರೆ ಅದನ್ನು ದೋಚಲು ಅಲ್ಲಿನ ಸ್ಥಳೀಯ ಬಡ್ಡಿ ವ್ಯಾಪಾರಿಗಳು ಕಾಯುತ್ತಿರುತ್ತಾರೆ. ಅದೇನೆ ಇರಲಿ ಐದು ಜನರ ಕುಟುಂಬ ಆ 70 ಸಾವಿರಕ್ಕೆ ಬರುವ 446 ರೂಪಾಯಿ ಬಡ್ಡಿ ಹಣದಲ್ಲಿ ಬದುಕು ಸಾಗಿಸಬೇಕಾದ ಸ್ಥಿತಿ ನಿಜಕ್ಕೂ ದಾರುಣ. . .

ಇದು ಪರಿಸ್ಥಿತಿ. ನಮ್ಮ ಸುತ್ತ ಇಂತಹ ದಾರುಣವೇ ತುಂಬಿ ಹೋಗಿದೆ. ನಾನು ಯಾವಾಗಲೂ ಕೇಳುತ್ತಿರುತ್ತೇನೆ. ನಿನ್ನೆಯೂ ಕೃಷಿ ಸಮೀಕ್ಷೆಯ ತಂಡವೊಂದನ್ನು ನಮ್ಮ ನೈತಿಕ ಪ್ರಜ್ಞೆ ಏನಾಗಿದೆ ಎಂದು ಕೇಳಿದೆ! ಮೂರು ಲಕ್ಷ ಸತ್ತ ರೈತರನ್ನು ಬಿಡಿ, ಅದಕ್ಕಿಂತಲೂ ಹತ್ತು ಪಟ್ಟು ಜನ ಇತ್ತ ಬದುಕಲಾರದೆ, ಅತ್ತ ಆತ್ಮಹತ್ಯೆಗೆ ಮನಸ್ಸು ಒಪ್ಪದೆ ಅದೇ ದಾರುಣ ಸ್ಥಿತಿಯ ಬದುಕು ನಡೆಸುತ್ತಾ ಹೋರಾಡುತ್ತಿದ್ದಾರಲ್ಲ ಅವರುಗಳ ಕುರಿತ ನಮ್ಮ ನೈತಿಕ ಅಭಿವ್ಯಕ್ತಿ ಎಲ್ಲಿ ಹೋಗಿದೆ ಎಂಬ ಪ್ರಶ್ನೆಗಳನ್ನು ನಾವು ಕೇಳಿಕೊಳ್ಳಬೇಕಿದೆ. . .

ಒಂದು ಆಸಕ್ತಿಕರ ವಿಷಯ ಹೇಳಬೇಕು. ಈ ಸಮಸ್ಯೆಯ ಕುರಿತ ಸರ್ಕಾರ, ಬೌದ್ಧಿಕ ವರ್ಗ, ಮಾಧ್ಯಮಗಳು ಮತ್ತು ಸಾಮಾನ್ಯ ನಾಗರೀಕರಲ್ಲಿ ಈ ಸ್ಥಿತಿಗೆ ನಿಜಕ್ಕೂ ಮರುಗುತ್ತಿರುವವರು ಸಾಮಾನ್ಯ ನಾಗರೀಕರೆ ಹೊರತು ಮತ್ತಿನ್ಯಾರೂ ಅಲ್ಲ. ನಾನು ಕಳೆದ ಕೆಲವು ವರ್ಷಗಳಲ್ಲಿ ಈ ದೇಶದ ಡಿಫೆನ್ಸ್ ಮಿಲಿಟರಿ ಕಾಲೇಜ್, ಐಡಿಎಸ್ಎ, ಸ್ಕೂಲ್ ಆಫ್ ಏರ್ ವಾರ್ ಫೇರ್ ಇತ್ಯಾದಿ ಐದು ಪ್ರತಿಷ್ಟಿತ ಸೈನಿಕ ಸಂಸ್ಥೆಗಳಲ್ಲಿ ಕೃಷಿ ಬಿಕ್ಕಟ್ಟಿನ ಕುರಿತು ಮಾತನಾಡಿದೆ. ನನಗೆ ನಿಜಕ್ಕೂ ಆಶ್ಚರ್ಯವಾಯಿತು. ಈ ದೇಶದ ಸರ್ಕಾರ, ಭೌದ್ದಿಕ ವಲಯ, ಮಾಧ್ಯಮಗಳಿಗಿಂತ ಸೈನಿಕ ಅಧಿಕಾರಿಗಳು ಕೃಷಿ ಬಿಕ್ಕಟ್ಟಿನ ಕುರಿತು ತೀರ್ವ ಕಳವಳ ಹೊಂದಿದ್ದಾರೆ. ಏಕೆಂದರೆ ಇಂದು ಸೈನಿಕನ ಸಮವಸ್ತ್ರದಲ್ಲಿರುವ ಬಹುಪಾಲು ಯೋಧರು ಈ ದೇಶದ ರೈತನ ಮಕ್ಕಳು. ಆ ಕಾರಣಕ್ಕೆ ಈ ಬಿಕ್ಕಟ್ಟಿನ ಪರಿಣಾಮವನ್ನು ಅವರು ಕಡೆ ಪಕ್ಷ ಗ್ರಹಿಸಬಲ್ಲವರಾಗಿದ್ದಾರೆ. ನಿಜಕ್ಕೂ ನಮ್ಮ ಯೋಧರು ಈ ದೇಶದ ಕೃಷಿ ಬಿಕ್ಕಟ್ಟಿನ ಕುರಿತು ಕಳವಳ ಹೊಂದಿದ್ದಾರೆ. ಊರಿನಿಂದ ಕರೆ ಬಂದರೆ ಕೆಟ್ಟ ಸುದ್ದಿಯೇನೋ ಎಂದು ಅಲೋಚಿಸುವ ಸ್ಥಿತಿಯಲ್ಲಿ ಅವರು ಇರುವುದು ನನ್ನ ಗಮನಕ್ಕೆ ಬಂತು. . . 

ಇದನ್ನೆಲ್ಲಾ ನೋಡಿದ ಮೇಲೆ ನನಗೆ ಸರ್ಕಾರ, ಭೌದ್ದಿಕ ವಲಯ, ಮಾಧ್ಯಮಗಳು ನಮ್ಮ ದೇಶದ ಕೃಷಿ ಬಿಕ್ಕಟ್ಟಿನ ಕುರಿತು ಹೊಂದಿರುವ ಧೋರಣೆಗಳು ಬೇಸರವನ್ನು ಉಂಟುಮಾಡುತ್ತಿದೆ. ನಾನು ಸರ್ಕಾರ, ಭೌದ್ದಿಕ ವಲಯ, ಮಾಧ್ಯಮ ಮೂರು ವಲಯಗಳಲ್ಲಿ ಕೆಲವರು ಕೃಷಿಯ ಸ್ಥಿತಿಯ ಕುರಿತು ಕಳವಳ ಹೊಂದಿದ್ದಾರೆ ಎಂಬುದನ್ನು ಒಪ್ಪುತ್ತೇನೆ. ಆದರೆ ಅವರುಗಳ ಸಂಖ್ಯೆ ಬೆರಳೆಣಿಕೆಯಷ್ಟು ಮಾತ್ರ. ಆದರೆ ಭೌದ್ದಿಕ ವಲಯದಲ್ಲಿ ಈ ದೇಶದ ಕೃಷಿ ಬಿಕ್ಕಟ್ಟಿನ ಕುರಿತು ಕಳವಳ ಇರುವ ಕೆಲವರಲ್ಲಿ ಶೇ 90 ರಷ್ಟು ಮಂದಿ ಜೆ.ಎನ್.ಯು ಕ್ಯಾಂಪೇಸ್ ನಲ್ಲಿ ಕಲಿತವರು ಎಂಬುದು ಹೆಮ್ಮೆಯ ವಿಷಯ. ನಾನಿನ್ನೂ ಕೃಷಿ ಬಿಕ್ಕಟ್ಟಿನ ಕುರಿತು ಮಾತನಾಡಲು ಹಿಂಜರಿಯುತ್ತಿದ್ದ ಕಾಲದಲ್ಲಿ, ಅದು ನಮಗೆ ಅರ್ಥವಾಗದಿದ್ದ ಕಾಲದಲ್ಲಿ ಈ ದೇಶದಲ್ಲಿ ಕೃಷಿ ಬಿಕ್ಕಟ್ಟಿನ ದಾರುಣ ಪರಿಣಾಮಗಳನ್ನು ಊಹಿಸಿದವರು ಜೆ.ಎನ್.ಯು ನ ಪ್ರೋ. ಉತ್ಸಾಹ್ ಪಟ್ನಾಯಕ್. ಕಳೆದ ವರ್ಷದವರೆಗೆ ವರ್ಷದ ೨೫೦ದಿನಗಳನ್ನು ಕೃಷಿ ಕ್ಷೇತ್ರಕಾರ್ಯದಲ್ಲಿ ಕಳೆಯುತ್ತಿದ್ದ ನನಗೆ ಭಾರತದ ಕೃಷಿ ಬಿಕ್ಕಟ್ಟಿನ ಕುರಿತು ಸ್ಪಷ್ಟ ಚಿತ್ರಣವನ್ನು ಕೊಟ್ಟವರು, ಅದನ್ನು ಇರುವಂತೆಯೇ ಗ್ರಹಿಸುವ ನೋಟ ಒದಗಿಸಿದವರು ಪ್ರೊ.ಉತ್ಸವ್ ಪಟ್ನಾಯಕ್ ರವರು. ಇಂದು ನಾನು ಬೇರೆ ಯಾವ ಬುದ್ದಿಜೀವಿಯ ಕೆಲಸವೂ ಪ್ರೋ ಪಟ್ನಾಯಕ್ ಅವರ ಕೆಲಸದಷ್ಟು ನಿಖರತೆಯನ್ನು ಹೊಂದಿರಲು ಸಾಧ್ಯವಿಲ್ಲ ಎಂಬುದನ್ನು ಧೈರ್ಯವಾಗಿ ಹೇಳಬಲ್ಲೆ.  ಇನ್ನು ಮಾಧ್ಯಮ ರಂಗದಲ್ಲಿಯೂ ಕೆಲವರು ಇದ್ದಾರೆ ಜೆ.ಡಿ ಹರ್ಡಿಕರ್, ಪುರುಶೋತ್ತಮ್ ಠಾಕೋರ್, ಪ್ರಿಯಾಂಕ ಠಾಕೋರ್, ಇಂದು ಕೃಷಿ ಬಿಕ್ಕಟ್ಟಿನ ಕುರಿತು ಟೈಮ್ಸ್ ಆಫ್ ಇಂಡಿಯಾದಲ್ಲಿ ಬರುತ್ತಿರುವ ಮುಖಪುಟದ ವರದಿಗಳು,  ಇವೆಲ್ಲವನ್ನೂ ನಾವು ಕಡೆಗಣಿಸುವಂತಿಲ್ಲ ಆದರೆ ಅವು ಬೆರಳೆಣಿಕೆಯಷ್ಟು ಮಾತ್ರ. . .

ಆದರೆ ಈ ಕೆಲವು ಜನರನ್ನು ಹೊರತುಪಡಿಸಿ ಸರ್ಕಾರ, ಭೌದ್ದಿಕ ವಲಯ, ಮಾಧ್ಯಮಗಳಲ್ಲಿ ಕೃಷಿ ಬಿಕ್ಕಟ್ಟಿನ ಕುರಿತು ನಾಚಿಕೆಗೆಟ್ಟ ಧೋರಣೆಯೊಂದು ಪ್ರಭಾವಿಸಿಕೊಂಡಿದೆ. ವಿಚಾರಣಾ ಆಯೋಗದ ಇಬ್ಬರು ಉಪಕುಲತಿಗಳು...... ಈ ದೇಶದಲ್ಲಿ ಕೃಷಿ ಬಿಕ್ಕಟ್ಟಿಗೆ ಸಂಬಂಧಿಸಿದಂತೆ ೩೦ಕ್ಕೂ ಹೆಚ್ಚು ವಿಚಾರಣಾ ಅಯೋಗಗಳು ರಚನೆಯಾಗಿವೆ. ಭಾರತದ ರಾಜಕಾರಣದ ಒಂದು ಒಳ್ಳೆಯ ಸಂಪ್ರದಾಯವಿದೆ. ಅದು ಯಾವುದೆಂದರೆ ಒಂದು ಸಮಸ್ಯೆಯ ಕುರಿತಂತೆ ಪ್ರಭುತ್ವ ನಿರೀಕ್ಷೆ ಮಾಡುವ ವರದಿಯನ್ನು ನೀಡುವ ಅಯೋಗವೊಂದು ಬರುವವರೆಗೂ ಆಯೋಗಗಳನ್ನು ರಚಿಸುತ್ತಲೇ ಹೋಗುವುದು. ಅವುಗಳ ಸಂಖ್ಯೆ ಎಷ್ಟಾದರೂ ಪರವಾಗಿಲ್ಲ! ನಾನು ಆಗಲೇ ಹೇಳುತ್ತಿದ್ದೆ ವಿಚಾರಣಾ ಆಯೋಗವೊಂದರ ಇಬ್ಬರು ಉಪಕುಲತಿಗಳು, ಒಬ್ಬರು ಕರ್ನಾಟಕದ ವಿರೇಶ್ ಎಂಬುವವರು ರೈತರ ಆತ್ಮಹತ್ಯೆಗೆ ಮೂಲ ಕಾರಣ ಕುಡಿತ ಎಂಬ ವರದಿಯನ್ನು ನೀಡಿದ್ದರು. ಇದನ್ನು ಆ ತಕ್ಷಣವೇ ಸುಮಾರು ಶೇ 90 ರಷ್ಟು ಮಾಧ್ಯಮಗಳು ಹೌದು ಹೌದು ಎಂದು ಬೆಂಬಲಿಸಿದ್ದವು. ಈ ವಾದದಲ್ಲಿನ ಸಮಸ್ಯೆ ಏನೆಂದರೆ ಆತ್ಮಹತ್ಯೆಗೆ ಒಂದು ಕಾರಣ ಅಂತ ಇರಬೇಕಿಲ್ಲ. ಒಬ್ಬ ವ್ಯಕ್ತಿಯ ಆತ್ಮಹತ್ಯೆಗೆ ಹಲವಾರು ಕಾರಣಗಳು ಇರುತ್ತವೆ ವೀರೇಶ್ ಹೇಳುವಂತೆ ವ್ಯಕ್ತಿಯ ಆತ್ಮಹತ್ಯೆಗೆ ಕುಡಿತವೇ ಮೂಲಕಾರಣ ಎಂಬುದು ಸತ್ಯವಾಗಿದ್ದರೆ ಅತಿಯಾದ ಕುಡುತ ಆತ್ಮಹತ್ಯೆಗೆ ವ್ಯಕ್ತಿಯನ್ನು ದೂಡುತ್ತದೆ ಎಂಬುದು ಸತ್ಯವಾಗಿದ್ದರೆ ಇಂದು ಜಗತ್ತಿನಲ್ಲಿ ಯಾವೊಬ್ಬ ಪತ್ರಕರ್ತನೂ ಬದುಕಿರುತ್ತಿರಲಿಲ್ಲ, ಕೆಲವೇ ಕೆಲವು ಬುದ್ದಿಜೀವಿಗಳು ಬದುಕಿರುತ್ತಿದ್ದರು, ಮಾನವ ಹಕ್ಕುಗಳ ಹೋರಾಟಗಾರರಂತೂ ಒಬ್ಬರು ಇರುತ್ತಿರಲಿಲ್ಲ. . .ಸೋ ಈ ಉಪಕುಲಪತಿಯನ್ನು ಬಿಡೋಣ ಮತ್ತೊಬ್ಬ ಉಪಕುಲಪತಿಯವರ ಬಳಿ ತೆರಳೋಣ. . .

ನಾನು ಮಹಾರಾಷ್ಟ್ರದ ವಿದರ್ಭದಲ್ಲಿನ ರೈತರ ಆತ್ಮಹತ್ಯೆಗಳ ಹಿನ್ನಲೆಯಲ್ಲಿ ವಿಲಾಸ್ ರಾವ್ ದೇಶ್ ಮುಖ್ ರವರನ್ನು ನನ್ನ ವರದಿಗಳ ಮೂಲಕ ತುಂಬಾ ಕಾಡುತ್ತಿದ್ದೆ. ನಿಮಗೆ ಗೊತ್ತಿರಲಿ ಸರ್ಕಾರಿ ವರದಿಗಳ ಪ್ರಕಾರವೇ ೯೫ರಿಂದ ಮಹಾರಾಷ್ಟ್ರಾದಲ್ಲಿ ಆತ್ಮಹತ್ಯೆಗೆ ಶರಣಾದ ರೈತರ ಸಂಖ್ಯೆ 63,000. ಆಗ ಇನ್ನೊಬ್ಬ ಮಹಾರಾಷ್ಟ್ರದ ಉಪಕುಲಪತಿ ಒಬ್ಬ ರೈತನನ್ನು ಭೇಟಿಯಾಗದೆ, ಒಂದೇ ಒಂದು ರೈತ ಕುಟುಂಬದ ಜೊತೆ ಸಂವಾದಿಸದೆ ವರದಿಯೊಂದನ್ನು ನೀಡಿದರು. ಅದರಲ್ಲಿ ಅವರು ಒಂದು ಪ್ಯಾರಾದ ಹೊರತಾಗಿ ರೈತರ ಆತ್ಮಹತ್ಯೆಗಳ ಕುರಿತು ಏನನ್ನೂ ಬರೆದಿರಲಿಲ್ಲ. ಅವರ ವರದಿಯ ಒಟ್ಟು ಪ್ರಯತ್ನ ನಾನು ರೈತರ ಆತ್ಮಹತ್ಯೆಗಳ ಕುರಿತು ಮಹಾರಾಷ್ಟ್ರದಲ್ಲಿ ಕೃತಕ ಭಯವೊಂದನ್ನು ಹುಟ್ಟುಹಾಕಿದ್ದೇನೆ ಎಂಬುದನ್ನು ಸಾಧಿಸುವುದಕ್ಕೆ ಸೀಮಿತವಾಗಿತ್ತು. ಅದನ್ನು ಅವರು ಸಾಧಿಸಿದರು. ಒಂದು ದಿನ ಬೆಳಗ್ಗೆ ಎದ್ದು ನೋಡುತ್ತೇನೆ. ಮುಂಬಯಿ ಮಿರರ್ ಪತ್ರಿಕೆಯ ಮೊದಲ ಪುಟದ ಮುಖ್ಯ ಹೆಡ್ ಲೈನ್ “ಸಾಯಿನಾಥ್ ರಾಜ್ಯದ ಶತ್ರು”!. ಆ ಅರ್ಥದಲ್ಲಿ ನನ್ನ ರಾಷ್ಟ್ರದ್ರೋಹ ಮಹಾರಾಷ್ಟ್ರಕ್ಕೆ ಸೀಮಿತವಾಗಿತ್ತು! ಇಡೀ ವರದಿ ಸಾಯಿನಾಥ್ ರಾಜ್ಯವನ್ನು ಅಪಮಾನಕ್ಕೆ ಈಡುಮಾಡಿದ್ದಾರೆ ಎನ್ನುವುದಾಗಿತ್ತು. ನಾನು ಆ ವರದಿಯನ್ನು ಗಂಭೀರವಾಗಿ ಪರಿಗಣಿಸಲಿಲ್ಲ. ನಾನ್ಯಾಕೆ ಯಾರೂ ಅದನ್ನು ಗಂಭೀರವಾಗಿ ಪರಿಗಣಿಸಲಿಲ್ಲ. ಏಕೆಂದರೆ ಅದು ಅಷ್ಟು ಮೂರ್ಖತನದಿಂದ ಕೂಡಿತ್ತು.  ಆ ವರದಿ ಮತ್ತು ಸುದ್ದಿಯಿಂದ ವಿಲಾಸ್ ರಾವ್ ಸಂತೋಷಗೊಂಡರು, ಆ ಕುಲಪತಿಗಳು ಸಂತೋಷಗೊಂಡರು. ಈ ವರದಿ ನೀಡಿದ ಮಹತ್ಕಾರ್ಯಕ್ಕೆ ಅವರನ್ನು ಮುಂದೆ ಯೋಜನಾ ಆಯೋಗದ ಸದಸ್ಯರನ್ನಾಗಿ ನೇಮಿಸಲಾಯಿತು.. .

ಇದು ನಮ್ಮ ಬೌದ್ಧಿಕತೆಯು ಬಿಕ್ಕಟ್ಟಿಗೆ ಸ್ಪಂದಿಸುತ್ತಿರುವ ರೀತಿ! ನೀವು ಕೃಷಿ ಕುಟುಂಬವೊಂದರ ಖರ್ಚು ವೆಚ್ಚಗಳನ್ನು ಒಮ್ಮೆ ಗಮನಿಸಬೇಕು. ಇಂದು ಕೃಷಿ ಕುಟುಂಬಗಳು ಅತಿ ಹೆಚ್ಚು ವೆಚ್ಚವನ್ನು ಆರೋಗ್ಯದ ಮೇಲೆ ಮಾಡುತ್ತಿವೆ.  ಪ್ರತಿಯೊಂದು ಕೃಷಿ ಕುಟುಂಬ ಶಿಕ್ಷಣಕ್ಕೆ ಮಾಡುತ್ತಿರುವ ವೆಚ್ಚದ ಎರಡರಷ್ಟನ್ನು ಆರೋಗ್ಯಕ್ಕೆ ವ್ಯಯಿಸುತ್ತಿವೆ. ನಿಮಗೆ ಗೊತ್ತಿರಲಿ ಜಗತ್ತಿನ ದೊಡ್ಡ ದೇಶಗಳಲ್ಲಿ ಆರೋಗ್ಯವನ್ನು ಖಾಸಗಿಕರಣ ಮಾಡಿದ ಮೋದಲ ರಾಷ್ಟ್ರ ಭಾರತ. ಈ ದೇಶದ ಆರೋಗ್ಯ ಉದ್ಯಮ ಗಳಿಸುತ್ತಿರುವ ಶೇ ೮೫ ರಷ್ಟು ಹಣ ಈ ದೇಶದ ಸಾಮಾನ್ಯನ ಜೇಬಿನ ಹಣ. ಇವರು ಸರ್ಕಾರಿ ಆಸ್ಪತ್ರೆಗಳು ಮತ್ತು ಪಾಥಮಿಕ ಆರೋಗ್ಯ ಕೇಂದ್ರಗಳನ್ನು ಖಾಸಗಿಕರಣ ಮಾಡುತ್ತಿದ್ದಾರೆ. ನಿಮಗೆ ಗೊತ್ತಿದೆಯೋ ಇಲ್ಲವೋ ಇ‌ತ್ತೀಚೆಗೆ 4000 ಅಂಗನವಾಡಿ ಕೇಂದ್ರಗಳನ್ನು ಖಾಸಗಿಕರಣಕ್ಕೆ ಒಳಪಡಿಸಲಾಗಿದೆ. ವೇದಾಂತ ಕಂಪೆನಿಯ ಮುಂಚೂಣಿಯ ಒಂದು ಸಂಸ್ಥೆಗೆ 4000 ಅಂಗನವಾಡಿಗಳನ್ನು ನೋಡಿಕೊಳ್ಳುವ ಹೊಣೆ ಹೊರಿಸಲಾಗಿದೆ. ಈ ವಿಷಯ ನಿಮ್ಮನ್ನು ಅಘಾತಕ್ಕೆ ಒಳಪಡಿಸುತ್ತದೆ ಎಂದು ನನಗೆ ಗೊತ್ತು. . .ಒಂದರಿಂದ ಆರು ವರ್ಷದ ವಯಸ್ಸೇನಿದೆ ಅದು ಈ ದೇಶ ಭವಿಷ್ಯದಲ್ಲಿ ಯಾವ ದಿಕ್ಕಿನಲ್ಲಿ ಕಟ್ಟಬೇಕು ಎಂಬುದನ್ನು ತಿಳಿಹೇಳುವ ವಯಸ್ಸಾಗಿದೆ. ಆ ಮಕ್ಕಳ ಆರೋಗ್ಯ, ಅಹಾರ, ಪೌಷ್ಟಿಕತೆಗಳನ್ನು ಸರ್ಕಾರವೆ ಖುದ್ದು ನಿರ್ವಹಿಸಬೇಕಾದ ಮಹತ್ವದ ಅಂಶವಾಗಿದೆ. ಏಕೆಂದರೆ ಅವರು ಈ ದೇಶದ ಭವಿಷ್ಯ! ಅಂತಹ ಜವಾಬ್ದಾರಿಯುತ ಸಂಸ್ಥೆಗಳನ್ನು ನೀವು ಲಾಭದ ಉದ್ದೇಶಹೊಂದಿರುವ ಒಂದು ಕಾರ್ಪೋರೇಟ್ ಕಂಪೆನಿಗೆ ನೀಡುತ್ತೀರ ಎಂಬುದೇ ಒಂದು ಸೋಜಿಗ. ಇಂದು 4000 ಅಂಗನವಾಡಿ ಕೊಟ್ಟಿರಬಹದು ಮುಂದೆ ಅವುಗಳ ಸಂಖ್ಯೆ ಏರಲಿದೆ. . .

ನಾವು ಇಂದು ಬೆಳೆಯ ವಿಮೆಯ ಕುರಿತು ಮಾತನಾಡುತ್ತಿದ್ದೇವೆ. ರೈತರು ಪರಿಹಾರದ ಆಸೆಗೆ, ವಿಮೆಯ ಆಸೆಗೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಎಂದು ಅರೋಪಿಸುತ್ತಿರುವವರು ಇಂದು ರೈತರು ಆತ್ಮಹತ್ಯೆಗೆ ಶರಣಾಗುತ್ತಿರುವುದು ಕಾರ್ಪೊರೇಟ್ ಕಂಪೆನಿಗಳಿಗಾಗಿ ಎಂಬ ವಾಸ್ತವ ಸಂಗತಿಯನ್ನು ಅರ್ಥಮಾಡಿಕೊಳ್ಳಬೇಕಿದೆ. ಆದರೆ ಆಶ್ಚರ್ಯ ಅಂದರೆ ಇನ್ನು ಮುಂದೆ ಕೃಷಿ ಮತ್ತು ಬೆಳೆ ವಿಮೆಗಳ ಲೆಕ್ಕವನ್ನು ನೀಡುವ ಜವಾಬ್ದಾರಿಯನ್ನು ಆ ಕಾಂರ್ಪೊರೇಟ್ ಕಂಪೆನಿಗಳಿಗೆ ನೀಡಲಾಗಿದೆ.

1991ರಿಂದ 2011ರ ಅವಧಿಯಲ್ಲಿ ಭಾರತದ ಕೃಷಿಕನ ಅತಂತ್ರ ಸ್ಥಿತಿ ಎರಡು ಪಟ್ಟು ಧ್ವಿಗುಣಗೊಂಡಿದೆ. ನ್ಯಾಷನಲ್ ಸ್ಯಾಂಪೆಲ್ ಸರ್ವೇ ಅಂಕಿ-ಅಂಶಗಳು 1991 ಕ್ಕೆ ಹೋಲಿಸಿದರೆ 2011 ರಲ್ಲಿ ಸಾವಿಗೆ ಶರಣಾದವರ ಸಂಖ್ಯೆ ದ್ವಿಗುಣಗೊಂಡಿದೆ ಎಂಬುದನ್ನು ಹೇಳುತ್ತಿವೆ. 10 ವರ್ಷಗಳಲ್ಲಿ ಶೇ 26 ರಿಂದ ಶೇ 56.8 ಗೆ ಏರಿಕೆಯಾಗಿದೆ ಎನ್ನಲಾಗುತ್ತಿದೆ. ಈ ಸಂಖ್ಯೆಯನ್ನು ಒಪ್ಪುವುದಿಲ್ಲ ಅದೊಂದು ದೊಡ್ಡ ಹಾಸ್ಯ ಎಂದು ಜನರೇ ನಗುತ್ತಾರೆ. . .

ಕಳೆದ ವಾರ ನಬಾರ್ಡ್ (ನ್ಯಾಷನಲ್ ಬ್ಯಾಂಕ್ ಫಾರ್ ಅಗ್ರೀಕಲ್ಚರ್ ಅಂಡ್ ರೂರಲ್ ಡೆಮೆಲಪ್ಮೆಂಟ್) ಮಹಾರಾಷ್ಟ್ರದ ಕುರಿತಂತೆ ಒಂದು ವರದಿಯನ್ನು ಬಿಡುಗಡೆ ಮಾಡಿದೆ.  ಮಹಾರಾಷ್ಟ್ರಾದ ಒಟ್ಟು ಕೃಷಿ ಸಾಲದಲ್ಲಿ 51ಶೇ ಕೃಷಿ ಸಾಲಗಳು ಮುಂಬೈ ಮತ್ತು ಅದರ ಸುತ್ತಮುತ್ತಲಿನ ಜನರಿಗೆ ನೀಡಲಾಗಿದೆ ಎಂಬ ಮಾಹಿತಿ ನೀಡಲಾಗಿದೆ. ಇದು ಸೋರಿಕೆಯಾದ ವರದಿಯಲ್ಲ ಬದಲಾಗಿ ನಬಾರ್ಡ್ ಬಿಡಿಗಡೆಮಾಡಿದ ಅಧಿಕೃತ ವರದಿ ಇದರ ಮೂಲಕ ಅವರು ನಮಗೆ ಈ ದೇಶದಲ್ಲಿ ಕೃಷಿಗಿಂತ ಕೃಷಿ ಆಧರಿತ ಉದ್ಯಮ ಹೆಚ್ಚು ಮುಖ್ಯ ಎಂಬುದನ್ನು ಹೇಳುತ್ತಿದ್ದಾರೆ. ಇದನ್ನು ಕೇಳಿ ನಿಮಗೆ ಅಘಾತ ಆಗಬಹುದು ಆಗಲೇ ಬೇಕು ಕೂಡಾ ನಾನು ನಿಮ್ಮನ್ನು ಈ ಎಲ್ಲಾ ಸಂಗತಿಗಳನ್ನು ಹೇಳಿ ಉದ್ರೇಕಿಸುತ್ತಿದ್ದೇನೆ ಎಂದುಕೊಳ್ಳುತ್ತಿದ್ದರೆ ಅರ್ಥಮಾಡಿಕೊಳ್ಳಿ ನನ್ನ ಉದ್ದೇಶವೂ ಅದೆ ಆಗಿದೆ. . .

ಟಾಟಾ ಇನ್ಸ್ಟಿಟ್ಯೂಟ್ ಆಫ್ ಸೋಪಿಯಲ್ ಸೈನ್ಸ್ ನ ಪ್ರೋ.ಆರ್ ರಾಮಕುಮಾರ್ ಅವರು 55ಶೇ ಗ್ರಾಮೀಣ ಪ್ರದೇಶ ಹೊಂದಿರುವ ಮಹಾರಾಷ್ಟ್ರದಲ್ಲಿ ನೀಡಿರುವ ಒಟ್ಟು ಕೃಷಿ ಸಾಲದಲ್ಲಿ ಶೇ 53 ರಷ್ಟು ಮೂರು ನಗರಗಳಿಗೆ ಹಂಚಲಾಗಿದೆ ಎಂಬ ಅಂಶವನ್ನೂ ಹೋರಗೆಡವಿದ್ದಾರೆ 53ಶೇ ಕೃಷಿ ಸಾಲ ಮಹಾರಾಷ್ಟ್ರಾದ ಮೂರು ನಗರಗಳ ಪಾಲಾಗಿದೆ ನಿಮಗೆ ಆಶ್ಚರ್ಯವಾಗಬಹುದು ಅದರಲ್ಲಿ 38ಶೇ ಕೃಷಿ ಸಾಲಗಳು ಗ್ರಾಮೀಣ ಶಾಖೆಗಳಿಂದಲೇ ನೀಡಲಾಗಿದೆ. ಇದು ಪರಿಸ್ಥಿತಿ. . .

ಕೃಷಿ ಸಾಲದ ಅರ್ಧಕ್ಕಿಂತ ಹೆಚ್ಚು ಸಾಲ ಮುಂಬೈ, ಪುಣೆ, ಮಲಬಾರ್ ಜಿಲ್ಲೆಗಳ ಪ್ರಮುಖ ನಗರಗಳನ್ನು ತಲುಪಿವೆ. ಒಂದು ಅರ್ಥದಲ್ಲಿ ಅವರೂ ಕೃಷಿ ಮಾಡುತ್ತಾರೆ. ಅವರು ಕೃಷಿಯ ಗುತ್ತಿಗೆದಾರರಲ್ಲ, ಬದಲಾಗಿ ಕೃಷಿ ವ್ಯವಸ್ಥೆಯ ಗುತ್ತಿಗೆದಾರರು. ಪ್ರೊ.ರಾಮಕುಮಾರ್ ತೋರಿಸುವಂತೆ 50,000 ಒಳಗಿನ ಕೃಷಿ ಸಾಲಗಳ ಸಂಖ್ಯೆಯಲ್ಲಿ ತೀರ್ವ ಇಳಿಮುಖವಾಗಿದೆ ಅಂದರೆ 50,000 ಸಾವಿರ ಸಾಲ ಪಡೆಯುವವರು ಸಣ್ಣ ರೈತರು ಆ ಸಾಲ ಇಳಿಮುಖವಾಗಿದೆ. ಆದರೆ ನಿಮಗೆ ಅಘಾತವಾಗುತ್ತದೆ 10 ರಿಂದ 20 ಕೋಟಿ ಕೃಷಿ ಸಾಲಗಳನ್ನು ಪಡೆಯುವವರ ಸಂಖ್ಯೆ ವಿಪರೀತ ಏರಿಕೆಯಾಗಿದೆ. ನೀವು ಎಂದಾದರೂ ಬ್ಯಾಂಕಿನ ಮುಂದೆ ಹೇ ಒಂದು ನಿಮಿಷ ತಾಳು ನಾನು ನನ್ನ ೨೫ ಕೋಟಿ ಕೃಷಿ ಸಾಲ ಪಡೆದು ಬರುತ್ತೇನೆ ಎಂದು ನಿಂತಿರುವ ಸಣ್ಣ ರೈತನನ್ನು ನೋಡಿದ್ದಿರೇನು? ಆದರೆ ನಾನು ಇಬ್ಬರನ್ನು ನೊಡಿದ್ದೇನೆ ಒಬ್ಬರು ಮುಖೇಶ್ ಮತ್ತೊಬ್ಬರು ಅನಿಲ್ ಕಳೆದ ಇಪ್ಪತ್ತು ವರ್ಷಗಳಿಂದ ಕೃಷಿ ಕ್ಷೇತ್ರಕ್ಕೆ ಮೀಸಲಿಟ್ಟ ಸಂಪನ್ಮೂಲದ ಅರ್ಧಕ್ಕಿಂತ ಹೆಚ್ಚು ಕಾರ್ಪೋರೇಟ್ ವ್ಯವಸ್ಥೆ ನುಂಗಿಹಾಕುತ್ತಿದೆ . . .

ಇವೆಲ್ಲ ಸಂಗತಿಗಳು ನಮಗೆ ತಿಳಿಸುವುದು ಏನೆಂದರೆ ಇಂದು ನಾವು ನಿಧಾನವಾಗಿ ಕಾರ್ಪೋರೇಟ್ ರಾಜ್ಯವ್ಯವಸ್ಥೆಯ ಕಡೆಗೆ ಚಲಿಸುತ್ತಿದ್ದೇವೆ. ನಮಗೆ ಅರ್ಥವಾಗಬೇಕಾದ ಸಂಗತಿ ಎಂದರೆ ನಾವು ಇಂದು ಸಾಮಾಜಿಕ, ಧಾರ್ಮಿಕ ಮೂಲಭೂತವಾದ ಮತ್ತು ಆರ್ಥಿಕ, ಮಾರುಕಟ್ಟೆ ಮೂಲಭೂತವಾದವೆಂಬ ಶತ್ರುಗಳನ್ನು ಎದುರಿಸಬೇಕಿದೆ. ಇದು ಭಾರತಕ್ಕೆ ಮಾತ್ರ ಸೀಮಿತವಾದ ವಿದ್ಯಮಾನವಲ್ಲ. ಮಾರುಕಟ್ಟೆ ಮೂಲಭೂತವಾದದ ವ್ಯಾಟಿಕನ್ (ಪವಿತ್ರ ಭೂಮಿ) ಎಂದು ಕರೆಯಲ್ಪಡುವ ಅಮೇರಿಕಾ ಇಂದು ಜಗತ್ತಿನ ಅತ್ಯಂತ ಸಂಪ್ರದಾಯಿಕ ಧಾರ್ಮಿಕ ಮೂಲಭೂತವಾದಿ ರಾಷ್ಟ್ರಗಳಾದ ಇಸ್ರೇಲ್ ಮತ್ತು ಸೌಧಿ ಅರೇಭಿಯಾಗಳನ್ನು ಆಧರಿಸಿದೆ. ಇಡಿ ಅಮೇರಿಕಾದ ನೀತಿಗಳು ನಿರ್ಧಾರವಾಗುತ್ತಿವೆ. ಸೋ, ಮಾರುಕಟ್ಟೆ ಮತ್ತು ಧಾರ್ಮಿಕ ಮೂಲಭೂತವಾದದ ಮೈತ್ರಿ ನಮ್ಮ ದೇಶಕ್ಕೆ ಮಾತ್ರ ಸೀಮಿತವಾಗಿದೆ ಎಂದುಕೊಳ್ಳಬೇಡಿ. ಅವರು ತಮ್ಮ ಅಸ್ಥಿತ್ವಕ್ಕಾಗಿ ಒಬ್ಬರನ್ನೊಬ್ಬರು ಬಿಟ್ಟಿರಲಾರದ ಸ್ಥಿತಿಯಲ್ಲಿ ಇದ್ದಾರೆ . . .

ಇನ್ನು ಮಾಧ್ಯಮಗಳು ನಿಜಕ್ಕೂ ಅತಂಕ ಹುಟ್ಟಿಸುತ್ತಿವೆ. ಅವು ಕಳೆದ ೨೦-೨೫ ವರ್ಷಗಳ ಹಿಂದೆ ಇದ್ದದ್ದಕ್ಕಿಂತ ಬಹಳಷ್ಟು ಬದಲಾಗಿವೆ. ಇದನ್ನು ಬಹಳ ಸರಳವಾಗಿ ನಿಮ್ಮ ಮುಂದೆ ಹೀಗೆ ವಿವರಿಸುತ್ತೇನೆ. ಇಂದು ಎರಡು ರೀತಿಯ ಪತ್ರಿಕೋದ್ಯಮಗಳು ನಮ್ಮ ನಡುವೆ ಇವೆ. ಒಂದು ಪತ್ರಿಕೋದ್ಯಮ, ಇನ್ನೊಂದು ಸ್ಟೆನೋಗ್ರಫಿ(ಟೈಪಿಸಿ ವರದಿ ಮಾಡುವುದು)! ಅದರಲ್ಲಿಯೂ ಕಾರ್ಪೋರೇಟ್ ಸ್ಟೆನೋಗ್ರಫಿ. ನಾನು ತಮಿಳುನಾಡಿನಲ್ಲಿ ಮಾಧ್ಯಮಗಳನ್ನು ಹೀಗೆ ಸ್ಟೆನೋಗ್ರಾಫರ್ಸ್ ಎಂದು ಹೇಳುತ್ತಿದ್ದಾಗ ಒಬ್ಬ ಕೇಳುಗ ಎದ್ದು ಸಾರ್ ದಯಮಾಡಿ ಸ್ಟೆನೋಗ್ರಾಫರ್ಸ್ ರನ್ನು ನೀವು ಹೀಗೆ ಪತ್ರಿಕೋದ್ಯಮಕ್ಕೆ ಹೋಲಿಸಿ ತೆಗಳಬೇಡಿ ಎಂದು ಕೂಗಿದ. ನಾನು ಏಕೆ ಎಂದು ಕೇಳಿದೆ. ಆದಕ್ಕೆ ಆತ ನಾನು ವೃತ್ತಿಯಲ್ಲಿ ಒಬ್ಬ ಸ್ಟೆನೋಗ್ರಾಫರ್ ಸಾರ್ ನನ್ನನ್ನು ಅವರೊಂದಿಗೆ ಹೋಲಿಸಿ ಮಾತನಾಡಿದರೆ ತುಂಬಾ ನೋವಾಗುತ್ತದೆ ಎಂದ . . .

ನಾನು ಆತನಲ್ಲಿ ಕ್ಷಮೆ ಕೇಳಿದೆ. ಅವನು ತಾವು ಕ್ಷಮೆ ಕೇಳುವ ಅಗತ್ಯವಿಲ್ಲ ಸಾರ್ ಇಂದು ಪತ್ರಿಕೋದ್ಯಮಕ್ಕಿಂತ ಸ್ಟೆನೋಗ್ರಫಿ ಮಾಡುವವರು ನೈತಿಕವಾಗಿ ತುಂಬಾ ಉನ್ನತ ಹಂತದಲ್ಲಿ ಇದ್ದಾರೆ ಅವರು ಅರೋಪಿ, ಆಪಾದಿತ, ಆರೋಪಿ ಪರ/ವಿರೋಧ ವಕೀಲರುಗಳ ವಾದಗಳನ್ನು ಯಾವುದೇ ಭಾವಾವೇಶಕ್ಕೆ ಒಳಗಾಗದೆ ಟೈಪಿಸುತ್ತಾರೆ. ಆದರೆ ಪತ್ರಕರ್ತರು ಬಲಾಢ್ಯರು ಎನು ಹೇಳುತ್ತಾರೋ ಅದನ್ನು ಟೈಪಿಸುತ್ತಾರೆ ಆ ಅರ್ಥದಲ್ಲಿ ಸ್ಟೆನೋಗ್ರಫಿ ಮಾಡುವವರು ಒಳ್ಳೆಯವರು ಸಾರ್. . .

ಇಂದು ನೀವು ಮಾಧ್ಯಮಗಳ ಮಾಲೀಕತ್ವವನ್ನು ನೋಡಬೇಕು. ನಿಮಗೆ ಗೊತ್ತಿರಲಿ ಭಾರತದಲ್ಲಿನ ಅತಿ ದೊಡ್ಡ ಮಾಧ್ಯಮ ಸಂಸ್ಥೆಗಳ ಒಡೆಯ ಮುಖೇಶ್ ಅಂಬಾನಿ ಆಗಿದ್ದಾರೆ. ಇಂದು ನಾವು ಮಾಧ್ಯಮ ಜಗತ್ತಿನ್ನು ಹಿಂದಿನಂತೆ ನೋಡಲು ಸಾಧ್ಯವಿಲ್ಲ. ಹಿಂದೆ ಸುದ್ದಿ ಪತ್ರಿಕೆಗಳು ಮತ್ತು ಟಿ.ವಿ ವಾಹಿನಿಗಳು ಕೆಲವು ಹಿತಾಸಕ್ತಿಗಳನ್ನು ಹೊಂದಿದ್ದವು. ಆದರೆ ಇಂದು ಇಡಿ ಮಾಧ್ಯಮವೆಂಬುದು ಬಹಳ ದೊಡ್ಡ ಕಾರ್ಪೋರೇಟ್ ಪ್ರಪಂಚದ ಹಿತಾಸಕ್ತಿಯ ಅತಿ ಸಣ್ಣ ವಿಭಾಗವಾಗಿ ಬದಲಾಗಿದೆ. ಇದು ನಮಗೆ ಅರ್ಥವಾಗಬೇಕು. ನೆಟ್ ವರ್ಕ್ 18 ದೇಶದಲ್ಲಿ ಮಾಧ್ಯಮಗಳನ್ನು ಒಗ್ಗೂಡಿಸುವ ಬಹಳ ದೊಡ್ಡ ಜಾಲವನ್ನು ಹೊಂದಿದ್ದರೂ ಅದು ರಿಲಯನ್ಸ್ ಕಂಪೆನಿಯ ಅತಿ ಸಣ್ಣ ಉದ್ಯಮವಾಗಿದೆ ಎಂಬ ಸತ್ಯವನ್ನು ನಾವು ತಿಳಿಯಬೇಕಿದೆ. ಇಂದು ನಿಜಕ್ಕೂ ಷೋರ್ಥ್ ಸ್ಟೇಟ್ ಮತ್ತು ರಿಯಲ್ ಎಸ್ಟೇಟ್ ಗಳ ನಡುವಿನ ವ್ಯತ್ಯಾಸವನ್ನು ಗುರುತಿಸುವುದು ಬಹಳ ಕಷ್ಟವಾದ ಕೆಲಸವಾಗಿದೆ. ಇಂದು ಅಸಮಾನತೆಯನ್ನು ಪೋಷಿಸುವ ವ್ಯವಸ್ಥೆ ನಮ್ಮನ್ನು ಅಳುತ್ತಿದೆ. ನಾನು ನಿಮ್ಮೊಂದಿಗೆ ಇರುತ್ತೇನೆ, ನಿಮ್ಮ ಬದ್ಧತೆಯ ಕುರಿತು ನನಗೆ ಗೌರವವಿದೆ ಆದರೆ ಈ ದೇಶದ ಬೇರೆ ಬೇರೆ ವಿಶ್ವವಿದ್ಯಾನಿಲಯಗಳ ಅವರಣದಲ್ಲಿ ನಡೆಯುತ್ತಿರುವ ಘಟನೆಗಳನ್ನು ನಾವು ಗಮನಿಸಬೇಕಿದೆ . . .

ನಿಮಗೆ ನೆನಪಿರಲಿ ಕಳೆದ 105 ದಿನಗಳಿಂದ “ಫಿಲ್ಮ್ ಅಂಡ್ ಟೆಲಿವಿಷನ್ ಇನ್ಸ್ಟಿಟ್ಯೂಟ್” ಪುಣೆ ವಿಧ್ಯಾರ್ಥಿಗಳು ಈ ಸರ್ಕಾರದ ವಿರುದ್ಧ ವಿಶ್ವವಿದ್ಯಾನಿಲಯದ ಮೇಲೆ ಯುಧಿಷ್ಟರನ ಹೇರಿಕೆಯನ್ನು ವಿರೋಧಿಸಿ ಹೋರಾಡುತ್ತಿದ್ದಾರೆ. ನಿಮಗೆ ಗೊತ್ತಾ? ನೈಜವಾದ ಮಹಾಭಾರತದಲ್ಲಿ ಯುಧಿಷ್ಟಿರ ಎಷ್ಟು ಪರಿಶುಧ್ಧ ಆತ್ಮ ಎಂದರೆ ಅವನು ಎಂದೂ ಸುಳ್ಳನ್ನೆ ಹೇಳಿರಲಿಲ್ಲ! ಆ ಕಾರಣಕ್ಕೆ ಆತನ ರಥ ಭೂಮಿಯಿಂದ 6 ಇಂಚು ಮೇಲಕ್ಕೆ ಚಲಿಸುತ್ತಿತ್ತು. ಅವನು ದ್ರೋಣರಿಗೆ “ಅಶ್ವಥಾಮ ಸತ್ತ” ಎಂದು ಸುಳ್ಳು ಹೇಳಿದ ದಿನ ಅವನ ರಥ ನೆಲವನ್ನು ತಾಕಿತಂತೆ. ಆದರೆ ಫಿಲ್ಮ್ ಅಂಡ್ ಟೆಲಿವಿಷನ್ ಇನ್ಸ್ಟಿಟ್ಯೂಟ್” ನ ಯುಧಿಷ್ಟರರ ರಥ ಭೂಮಿಯಿಂದ ಮೇಲೆ ಎದ್ದೆ ಇಲ್ಲ! ಅದು ಕೆಸರಿನಲ್ಲಿ ಹೂತು ಹೋಗಿದೆ. ಆ ಕಾರಣಕ್ಕೆ ಅವರನ್ನು ಯಾರು ಗೌರವಿಸುತ್ತಿಲ್ಲ. . 

ಇನ್ನೂ ರೋಹಿತ್ ವೇಮುಲಾ ಪ್ರಕರಣ, ನಾನು ಜನಸಂಖ್ಯೆಯ ಒಂದು ಅಂಕಿ-ಅಂಶವನ್ನು ನಿಮಗೆ ನೀಡುವುದು ಮರೆತೆ. ಈ ದೇಶದಲ್ಲಿ ಸುಮಾರು 400 ಮಿಲಿಯನ್ ಜನರು ಇದುವರೆಗೂ ಯಾವುದೇ ಹಂತದ ಶಿಕ್ಷಣ ಸಂಸ್ಥೆಗಳ ಒಳಭಾಗವನ್ನು ನೋಡಿಯೇ ಇಲ್ಲ ! ಭಾರತದಲ್ಲಿ ಕೇವಲ 3 ಶೇಕಡಾ, ಕೇವಲ ಮೂರೇ ಮೂರು ಶೇಕಡಾ ಗ್ರಾಮೀಣ ಕುಟುಂಬಗಳಲ್ಲಿ ಮಾತ್ರ ಪದವೀಧರರಿದ್ದಾರೆ. ಇದು ಭಾರತದ ಒಟ್ಟು ಜನಸಂಖ್ಯೆಯ ಸರಾಸರಿ. ಇದನ್ನು ಆದಿವಾಸಿ ಮತ್ತು ದಲಿತರ ಹಿನ್ನಲೆಯಲ್ಲಿ ನೋಡಿದರೆ ಆ ಸಂಖ್ಯೆ ಇನ್ನೂ ಕೆಳಹಂತದಲ್ಲಿದೆ. ಭಾರತದ ಜನಗಣತಿಯ ವರದಿಗಳು ತೋರಿಸುವಂತೆ ಆ ಹಿನ್ನಲೆಯಿಂದ ಬಂದ ರೋಹಿತ್ ಮೆರಿಟ್ ಕೋಟಾದಲ್ಲಿ ಪಿ.ಹೆಚ್.ಡಿ ಹಂತಕ್ಕೆ ಬರುತ್ತಾನೆ ಎಂದರೆ ಅದಕ್ಕಿಂತ ಸಾಧನೆ ಏನಿದೆ! ಆದರೆ ದುರಂತ ಎಂದರೆ ಇಂದು ಈ ಸಮಾಜದ ನಿರಂತರ ಶೋಷಣೆಯನ್ನು, ತಾರತಮ್ಯವನ್ನು ಜಯಿಸಿ ಮೆರಿಟ್ ಆಧಾರದಲ್ಲಿ ಕೇಂದ್ರೀಯ ವಿಶ್ವವಿದ್ಯಾನಿಲಯದಲ್ಲಿ ಪಿ.ಹಚ್.ಡಿ ಹಂತಕ್ಕೆ ಬಂದ ರೋಹಿತನ ವಿರುದ್ಧ ನಿಂತಿರುವುದು ಕಾಲೇಜು ಡ್ರಾಪ್ ಔಟ್ ಆದ ಶಿಕ್ಷಣ ಸಚಿವರು! ಇವರು ಇಂದು ಸಂಸ್ಕೃತ ಹೇರಿಕೆಯನ್ನು ನಮ್ಮ ಮೇಲೆ ಮಾಡುತ್ತಿದ್ದಾರೆ. ..

ನನಗೆ ಅನ್ನಿಸುವಂತೆ ನಮ್ಮ ಶಿಕ್ಷಣ ಸಚಿವೆಯಾದ ಮಿಸ್ ಇರಾನಿಯವರು ಈ ಹಿಂದೆ ನಟಿಸಿರುವ ಎಲ್ಲಾ ಧಾರವಾಹಿಗಳನ್ನು ಸಂಸ್ಕೃತಕ್ಕೆ ಅನುವಾದಿಸಿ ಪ್ರದರ್ಶಿಸಬೇಕು. ಅದು ಸಂಸ್ಕೃತವನ್ನು ಪ್ರೋತ್ಸಾಹಿಸಲು ಬಹಳ ಸಹಕಾರಿಯಾಗಿರುತ್ತದೆ ಎಂಬುದು ನನ್ನ ಭಾವನೆ. ಅಲಹಾಬಾದ್ ವಿಶ್ವವಿದ್ಯಾನಿಲಯದಲ್ಲಿ ನನ್ನ ಸ್ನೇಹಿತ ಸಿದ್ಧಾರ್ಥ್ ವರದರಾಜ್ ಅವರನ್ನು ಕಟ್ಟಡದಲ್ಲಿ ಬಂಧನಕ್ಕೆ ಒಳಪಡಿಸಿತ್ತು. ಒಬ್ಬರು ಕುಲಪತಿಗಳನ್ನು ಮನಬಂದಂತೆ ಧಳಿಸಲಾಗಿತ್ತು, ಬಿದ್ದ ಹೊಡೆತಗಳನ್ನು ತಾಳಲಾರದೆ ಅವರು ಅಸುನೀಗಿದ್ದರು.. .

ನೀವು ಈ ಹೋರಾಟದಲ್ಲಿ ಒಬ್ಬರೆ ಅಲ್ಲ ಅಥವಾ ದಾಳಿಗಳು ನಿಮ್ಮ ಮೇಲೆ ಮಾತ್ರ ನಡೆಯುತ್ತಿಲ್ಲ. ಇದು ಇವರ ನಿಜವಾದ ಮುಖ. ಈ ದೇಶದ ಪಿತಾಮಹನಾದ ಗಾಂಧಿಯನ್ನು ಕೊಂದು ಭ್ರಾತೃತ್ವದ ಮಾತನಾಡುವ ಇವರು ನಮ್ಮನ್ನು ದೇಶದ್ರೋಹಿಗಳು ಎನ್ನುತ್ತಿದ್ದಾರೆ, ದಯಮಾಡಿ ಸೆರೆಯಿಂದ ನಮ್ಮನ್ನು ಬಿಟ್ಟುಬಿಡಿ. ನಾವು ಎಲ್ಲಾ ಬಿಟ್ಟು ಒಳ್ಳೆಯ ಹುಡುಗರಂತೆ ವರ್ತಿಸುತ್ತೇವೆ ಎಂದು ಬ್ರೀಟಿಷರ ಮುಂದೆ ಬೇಡಿಕೊಂಡ ನಾಯಕರನ್ನು ಹೊಂದಿದ ಸಂಘಟನೆಯವರು ಇಂದು ದೇಶಭಕ್ತಿಯ ಪಾಠ ಮಾಡುತ್ತಿದ್ದಾರೆ . . .

ಇಂದು ನಾವು ಸಾಮಾಜಿಕ, ಧಾರ್ಮಿಕ/ಆರ್ಥಿಕ, ಮಾರುಕಟ್ಟೆ ಮೂಲಭೂತವಾದಿಗಳನ್ನು ಎದುರಿಸಬೇಕಿದೆ. ಒಂದು ಅಂಶ ನಾನು ಕಳೆದ ಕೆಲವು ವರ್ಷಗಳಿಂದ ನೋಡುತ್ತಿದ್ದೇನೆ. ಜೆ,ಎನ್.ಯು ವಿವಿಧತೆಗೆ, ಭಿನ್ನಾಬಿಪ್ರಾಯದ ಚರ್ಚೆಗೆ ಹೆಸರಾಗಿದೆ. ಇಲ್ಲಿರುವ ಎಲ್ಲಾ ಸಂಘಟನೆಗಳು ತಮ್ಮ ಭಿನ್ನಾಭಿಪ್ರಾಯಗಳನ್ನು ಇಟ್ಟುಕೊಂಡೆ ಕಳೆದ ಹತ್ತು ವರ್ಷಗಳಿಂದ ಅತ್ಯಂತ ಕೆಟ್ಟ ಆಡಳಿತದ ವಿರುದ್ಧ ತಾವುಗಳು ಮಾಡುತ್ತಿರುವ ಹೋರಾಟ ನಿಜಕ್ಕೂ ಹೆಮ್ಮೆಯ ವಿಷಯ. ದಯಮಾಡಿ ಈ ಒಗ್ಗಟ್ಟನ್ನೂ ಕಳೆದುಕೊಳ್ಳಬೇಡಿ.  ನಿಮ್ಮ ನಿಮ್ಮ ಭಿನ್ನಾಭಿಪ್ರಾಯಗಳನ್ನು ಇಟ್ಟುಕೊಂಡೆ ಈ ಸಾಮಾಜಿಕ, ಧಾರ್ಮಿಕ/ಆರ್ಥಿಕ, ಮಾರುಕಟ್ಟೆ ಮೂಲಭೂತವಾದಿಗಳನ್ನು ಎದುರಿಸಿ. ನನಗೆ ನಿಜಕ್ಕೂ ನಿಮ್ಮಗಳ ಮೇಲೆ ಹೆಮ್ಮೆ ಇದೆ. . .
ಧನ್ಯವಾದಗಳು . . .

No comments:

Post a Comment