Feb 20, 2016

ಪಿ.ಸಾಯಿನಾಥ್: ನಿಮ್ಮ ಹೋರಾಟ ಭಿನ್ನಾಭಿಪ್ರಾಯಗಳನ್ನೇ ಅಪರಾಧ ಎಂದು ಸಾಧಿಸಲು ಹೊರಟಿರುವ ಶಕ್ತಿಗಳ ವಿರುದ್ಧ...ಭಾಗ 1

ದಿನಾಂಕ-19-02-2016 ರಂದು ಜೆ.ಎನ್.ಯು ನಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಪಿ. ಸಾಯಿನಾಥ್ ಮಾತನಾಡಿದ್ದರು. ಅದರ ಕನ್ನಡ ಭಾವಾನುವಾದದ ಮೊದಲ ಭಾಗ ಇಲ್ಲಿದೆ.
ಮೂಲ ಭಾಷಣ: ಪಿ ಸಾಯಿನಾಥ್ 
ಅನುವಾದ: ಡಾ.ಕಿರಣ್ ಎಂ ಗಾಜನೂರು
ಇದುವರೆಗೂ ನನ್ನನ್ನು ಪರಿಚಯಿಸಿದವರು ನನ್ನ ಕುರಿತು ಬಹಳಷ್ಟು ವಿಷಯಗಳನ್ನು ಹೇಳಿದ್ದಾರೆ; ಅದಕ್ಕೆ, ನಾನು ಸಹ ಒಬ್ಬ ಜೆ.ಎನ್.ಯು ದ ಹಿರಿಯ ವಿದ್ಯಾರ್ಥಿಯಾಗಿದ್ದೇನೆ ಎಂಬ ಹೆಮ್ಮೆಯ ವಿಷಯವನ್ನು ಸೇರಿಸ ಬಯಸುತ್ತೇನೆ. ಆ ನಂತರ ಸುಮಾರು 25 ರಿಂದ 30 ವರ್ಷಗಳ ನಂತರ ಈ ವಿಶ್ವವಿದ್ಯಾನಿಲಯದ ಕಾರ್ಯಕಾರಿ ಮಂಡಳಿಯ ಸದಸ್ಯನಾಗಿ 5 ವರ್ಷಗಳ ಕಾಲ ಸೇವೆ ಸಲ್ಲಿಸಲು ಮತ್ತೆ ಇಲ್ಲಿಗೆ ಬಂದೆ. ಆದರೆ ನನ್ನ ಸೇವೆಯ ಶೇ 80 ರಷ್ಟು ಸಮಯ ಸುಪ್ರೀಂ ಕೋರ್ಟ್ ತೀರ್ಪು, ಸಂಸತ್ತಿನ ಕಾಯ್ದೆ ಎಲ್ಲವನ್ನೂ ಧಿಕ್ಕರಿಸಿ ಹಿಂದುಳಿದ ವರ್ಗಗಳಿಗೆ ನೀಡಬೇಕಿದ್ದ 27ಶೇ ಮೀಸಲಾತಿಯನ್ನು ಅಲ್ಲಗಳೆಯುತ್ತಿದ್ದ ಕೆಲವು ಜನರನ್ನು ಎದುರಿಸುವುದರಲ್ಲಿಯೇ ಕಳೆದು ಹೋಯಿತು. ಅಂತಿಮವಾಗಿ ನಾವು ಗೆದ್ದೆವು, ಅದು ಬೇರೆ ವಿಚಾರ. ನಿಜ ಹೇಳಬೇಕು ಎಂದರೆ ನಾನು ವಿದ್ಯಾರ್ಥಿಯಾಗಿ ಇಲ್ಲಿನ ಗಂಗಾ ವಸತಿ ನಿಲಯದ ಅಧ್ಯಕ್ಷನಾಗಿದ್ದಾಗ ಇದ್ದಷ್ಟು ಸಂತೋಷ ಇಲ್ಲಿನ ಕಾರ್ಯಕಾರಿ ಮಂಡಳಿಯ ಸದಸ್ಯನಾಗಿದ್ದಾಗ ಇರಲಿಲ್ಲ . .

ನಾನು ಇಂದು ದೆಹಲಿಗೆ ನಿಮಗಾಗಿಯೇ ಬಂದಿದ್ದೇನೆ. ನನಗೆ ದೆಹಲಿಯಲ್ಲಿ ಬೇರೆ ಯಾವ ಕೆಲಸವೂ ಇಲ್ಲ. ನಾನು ಏಕೆ ಇಂದು ನಿಮ್ಮ ಎದುರು ನಿಂತಿದ್ದೇನೆ ಎಂದರೆ ಇಂದು ನೀವು ಮಾಡುತ್ತಿರುವ ಹೋರಾಟ ನಿಮ್ಮ ಬೇಡಿಕೆಗಳಿಗೆ ಮಾತ್ರ ಸೀಮಿತವಾಗಿರದೆ ಅದಕ್ಕಿಂತಲೂ ಮೀರಿದ ವಿಶಾಲವಾದ ಸಂಗತಿಯೊಂದರ ಕಡೆಗೆ ನಮ್ಮನ್ನು ಸೆಳೆಯುತ್ತಿದೆ.

ಈ ದೇಶದಲ್ಲಿ ಇಂದು ನಡೆಯುತ್ತಿರುವ ಹೋರಾಟಗಳ ಕುರಿತು ಅದ್ಯತಾ ಪಟ್ಟಿಯೊಂದನ್ನು ತಯಾರು ಮಾಡಿಕೊಂಡರೆ ನಿಮ್ಮ ಹೋರಾಟ 3ನೇ ಸ್ಥಾನದಲ್ಲಿ ಇದೆ. ಆದರೆ ನಿಮಗೆ ನೆನಪಿರಲಿ ಈ ಹೋರಾಟವನ್ನು ಈ ದೇಶದ ಸಾಮಾನ್ಯ, ಬಡವ, ದಲಿತ ಕಳೆದ ಎರಡು ದಶಕಗಳಿಂದ ನಡೆಸುತ್ತಲೇ ಬರುತ್ತಿದ್ದಾರೆ. ಇಂದು ಆ ಹೋರಾಟ ಜೆ.ಎನ್.ಯು ಅಂತಹ ಎಲೈಟ್ ವಿಶ್ವವಿದ್ಯಾನಿಲಯಗಳ ಅಂಗಳವನ್ನು ತಲುಪಿದೆ ಅಷ್ಟೆ! ಇದು ನಿಮಗೆ ಅರ್ಥವಾಗಬೇಕು. ನೀವು ನಿಜವಾಗಿಯೂ ಹೋರಾಡುತ್ತಿರುವುದು ಭಿನ್ನಾಭಿಪ್ರಾಯಗಳನ್ನೆ ಅಪರಾಧ ಎಂದು ಸಾಧಿಸಲು ಹೊರಟಿರುವ ಪ್ರಕ್ರಿಯೆಯ ವಿರುದ್ಧ. ನಮ್ಮ ನಡುವೆ ನಡೆಯುತ್ತಿರುವ ಈ ಸಂಗತಿ ಕೇವಲ ಸಂವಿಧಾನಿಕ ಕಾನೂನಿನ ವಿರೋಧ ಅಥವಾ ಅತಿಕ್ರಮಣದ ಪ್ರಕ್ರಿಯೆ ಮಾತ್ರ ಆಗಿ ನೋಡಲಾಗದು, ಬದಲಾಗಿ ಇದು ನಮ್ಮ ನಡುವಿನ ಅಭಿಪ್ರಾಯ ಭಿನ್ನತೆ ಹೊಂದುವುವವರನ್ನು ಅಪರಾಧಿಗಳೆಂದು ವಿವರಿಸುತ್ತಿರುವ ಮಾದರಿಯ ವಿರುದ್ಧದ ಹೋರಾಟ ಎಂಬ ವಿಶಾಲ ಅರ್ಥದಲ್ಲಿ ನೋಡಬೇಕಿದೆ.

ಇಂದು ನೀವು ಬದುಕುತ್ತಿರುವ ಕಾಲಘಟ್ಟ ಕೇವಲ ಅಸಮಾನತೆಯ ಕಾಲ ಮಾತ್ರವಲ್ಲ ಬದಲಾಗಿ ಕಾರ್ಪೊರೇಟ್ ಶಕ್ತಿಗಳ ದಮನಕಾರಿ ನೀತಿಯನ್ನು ಎದುರಿಸುತ್ತಿದ್ದ ಧ್ವನಿಗಳನ್ನು ಹತ್ತಿಕ್ಕುತ್ತಿರುವ ಕಾಲಘಟ್ಟವೂ ಹೌದು. ಜೀವನದಲ್ಲಿ ಎಂದಿಗೂ ಪೋಲಿಸ್ ಠಾಣೆಯ ಮೆಟ್ಟಿಲು ಹತ್ತಿರದ ಒರಿಸ್ಸಾದ ಕಳಿಂಗಾ ನಗರದಲ್ಲಿನ, ಉತ್ಕಲ್ ವಿಶ್ವವಿದ್ಯಾನಿಲಯದಿಂದ ಪದವಿ ಪಡೆದಿರುವ ಅದಿವಾಸಿ ಕುಟುಂಬವೊಂದು ಟಾಟಾ ಕಂಪೆನಿಯನ್ನು ತಮ್ಮ ಭೂಮಿಯ ಹಕ್ಕಿಗಾಗಿ ಎದುರಿಸುತ್ತದೆ ಮತ್ತು ಅನ್ನ ನೀಡುವ ಭೂಮಿಯನ್ನು ಕೊಡಲು ನಿರಾಕರಿಸುತ್ತದೆ. ಪರಿಣಾಮ ಇಂದು ಆ ಕುಟುಂಬದ ಮೇಲೆ 91 ಪ್ರಕರಣಗಳು ದಾಖಲಾಗಿವೆ! ಎಷ್ಟು 91 ಪ್ರಕರಣಗಳು!

ಒಡಿಸ್ಸಾದ ಜಗತ್ ಸಿಂಗ್ಪುರ್ ನಲ್ಲಿ ಪೋಸ್ಕೋ ವಿರುದ್ಧದ ಹೋರಾಟದ ನಾಯಕ ಅಭಯ್ ಸಾಹು, ನಿಮಗೆ ನೆನಪಿರಲಿ ಈತ ಹೋರಾಡಿ ಪೋಸ್ಕೋವನ್ನು ಮಣಿಸಿದ್ದಾನೆ; ಪ್ರತಿಬಾರಿ ಅವನನ್ನು ಬೇಟಿ ಮಾಡಿದಾಗ ನಾನು ಎಷ್ಟಾದವು ಎಂದು ಆತನನ್ನು ಕೇಳುತ್ತೇನೆ, ಆತ ತನ್ನ ಮೇಲೆ ದಾಖಲಾಗಿರುವ ಪ್ರಕರಣಗಳ ಮಾಹಿತಿಯನ್ನು ನೀಡುತ್ತಿರುತ್ತಾನೆ ಕಳೆದ ಬಾರಿಯ ಭೇಟಿಯಲ್ಲಿ ಆತನ ಮೇಲೆ 56 ರಿಂದ 58 ಪ್ರಕರಣಗಳು ದಾಖಲಾಗಿದ್ದವು. ಆ ಹಳ್ಳಿಯ ಜನ ಪ್ರಕರಣಗಳಿಗೆ ಹೆದರಿ ಹಳ್ಳಿಯಿಂದ ಹೊರಬರುವುದನ್ನೆ ಬಿಟ್ಟು ಬಿಟ್ಟಿದ್ದಾರೆ ಆ ಕಾರಣಕ್ಕೆ ಅವರುಗಳಿಗೆ ಅಣ್ಣ, ತಮ್ಮ ಬಂಧುಗಳನ್ನು ಭೇಟಿಯಾಗಲು ಸಾಧ್ಯವಾಗುತ್ತಿಲ್ಲ.

ನೀವು ರಿಲಯನ್ಸ್ ಮತ್ತು ಎಸ್.ಇ.ಝೆಡ್ (ವಿಶೇಷ ಆರ್ಥಿಕ ವಲಯ) ಪ್ರಾಜೆಕ್ಟ್ ಗಳನ್ನು ವಿರೋಧಿಸುತ್ತಿರುವ ದೇಶದ ಯಾವುದೇ ಭಾಗವನ್ನು ಸಂದರ್ಶಿಸಿ ಇದು ನಿಮಗೆ ಕಾಣಿಸುತ್ತದೆ. ಇಂದು ಪ್ರಕರಣಗಳನ್ನು ದಾಖಲಿಸಿ ಹೋರಾಟಗಳನ್ನು ಹತ್ತಿಕ್ಕುವುದು ಒಂದು ತಂತ್ರವಾಗಿಬಿಟ್ಟಿದೆ. ಇದು ಇಲ್ಲಿ ಮಾತ್ರ ನಡೆಯುತ್ತಿಲ್ಲ, ಬದಲಾಗಿ ದೇಶದ ಎಲ್ಲಾ ಕಡೆ ನಡೆಯುತ್ತಿದೆ ಉದಾಹರಣೆಗೆ ನೀವು ಒಂದು ಸಂಗತಿಯನ್ನು ಎದುರಿಸಿ ಪ್ರತಿಭಟನೆ ನಡೆಸಿದರೆ ಪೋಲಿಸರು ಕನ್ಹಯ್ಯ ಕುಮಾರ್ ಮತ್ತು 800 ಇತರರು ಎಂದು ಪ್ರಕರಣ ದಾಖಲಿಸಿಬಿಡುತ್ತಾರೆ. ಇದು ಅವರಿಗೆ ಸುತ್ತ ಮುತ್ತಲಿನ ಹಳ್ಳಿಗಳನ್ನು ಮುಂದಿನ ಮೂರು ವರ್ಷಗಳ ಕಾಲ ದಾಳಿ ಮಾಡಲು ಮತ್ತು ಜನರನ್ನು ಹೆದರಿಸಲು ಸಹಕಾರಿಯಾಗುತ್ತದೆ ಎ.ಬಿ.ಸಿ ಮತ್ತು 800 ಇತರರು ಪೋಲಿಸರ ಮೇಲೆ ಹಲ್ಲೆ ನಡೆಸಿದರು ಎಂದು ಪ್ರಕರಣ ದಾಖಲಾಗುತ್ತದೆ.

ಕೋರಾಪುರದ ಜೈಲಿನಲ್ಲಿ ನಾನು ಒಬ್ಬರನ್ನು ಬೇಟಿಯಾಗಲು ಹೋಗಿದ್ದೆ. ವೃತ್ತಿಯಲ್ಲಿ ಅವರು ರಸಾಯನಶಾಸ್ತ್ರದ ಪ್ರಾಧ್ಯಾಪಕರು. ಆದರೆ ನಮಗೆ ಅವರನ್ನು ಬೇಟಿಯಾಗಲು ಸಾಧ್ಯವಾಗಲಿಲ್ಲ. ಆದರೆ ಅವರ ವಕೀಲರು ನಮ್ಮೊಡನೆ ಮಾತನಾಡಿದರು. ನಿಮಗೆ ಕೇಳಿ ಆಶ್ಚರ್ಯವಾಗುತ್ತದೆ, ಒಬ್ಬ ರಸಾಯನ ಶಾಸ್ತ್ರದ ಪ್ರಾಧ್ಯಾಪಕರ ಮೇಲೆ ಎಮ್ಮೆ ಕದ್ದ ಆರೋಪ ಹೋರಿಸಿ ಪ್ರಕರಣ ದಾಖಲಿಸಲಾಗಿದೆ. ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಈ ರೀತಿಯ ಪ್ರಕರಣಗಳು ನಮ್ಮಗಳ ಮೇಲೆಯೂ ದಾಖಲಾಗಿವೆ. ಇಲ್ಲಿ ಆ ಪ್ರಾಧ್ಯಾಪಕರನ್ನು ಮತ್ತು ಎಮ್ಮೆಯನ್ನು ನಮಗೆ ಭೇಟಿಯಾಗಲು ಸಾಧ್ಯವಾಗಲಿಲ್ಲ ಅದು ಬೇರೆ ವಿಚಾರ.

ಸಿತಾಕುಲಂ ಜಿಲ್ಲೆಯಲ್ಲಿನ ಪೋರ್ಟ್ ವಿರುಧ್ಧದ ಹೋರಾಟದಲ್ಲಿ 78 ವರ್ಷದ ಮಹಿಳೆಯ ಮೇಲೆ, ಈ ವರ್ಷ ಆಕೆಗೆ 80 ವರ್ಷ ತುಂಬುತ್ತದೆ. ಆಕೆಯ ಮೇಲೆ ಪೋಲಿಸರನ್ನು ಕೊಲ್ಲುವುದಕ್ಕೆ ಪ್ರಯತ್ನಿಸಿದ್ದು ಸೇರಿದಂತೆ 23 ಪ್ರಕರಣಗಳು ದಾಖಲಾಗಿವೆ. ಆಕೆ ಸುಮಾರು ಐದು ಅಡಿ ಇರಬಹುದು. 35 ಕೆ.ಜಿ ತೂಕವನ್ನು ಹೊಂದಿರಬಹದು. ಆಕೆ ದಾಳಿ ಮಾಡಲು ಬಂದ 20 ರಿಂದ 23 ಜನ ಪೋಲಿಸರನ್ನು ಕೊಲ್ಲಲು ಯತ್ನಿಸಿದಳು ಎಂಬ ಆರೋಪವನ್ನು ಹೊರಿಸಲಾಗಿದೆ. ಈ ಪ್ರವೃತ್ತಿಯೀಗ ಎಲೈಟ್ ವಿಶ್ವವಿದ್ಯಾನಿಲಯವನ್ನು ತಲುಪಿರುವುದನ್ನು ಸ್ವಾಗತಿಸಬೇಕಿದೆ ಮತ್ತು ಇಂತಹದರ ವಿರುಧ್ಧ ನಾವು ಪ್ರತಿಭಟಿಸಬೇಕಿದೆ.

ನಾನು ನಾಳೆಗೆ ಎಲ್ಲವೂ ಸರಿಹೋಗಿಬಿಡುತ್ತದೆ ಎಂದು ಹೇಳುತ್ತಿಲ್ಲ. ನನಗೆ ಅನ್ನಿಸುವಂತೆ ಮುಂದಿನ ದಿನಗಳಲ್ಲಿ ಪರಿಸ್ಥಿತಿ ಇನ್ನೂ ಭೀಕರವಾಗಲಿದೆ. ಆದರೆ ಭವಿಷ್ಯದಲ್ಲಿ ಖಂಡಿತ ಪರಿಸ್ಥಿತಿ ಉತ್ತಮಗೊಳ್ಳುತ್ತದೆ, ಆದರೆ ಅದಕ್ಕೂ ಮುಂಚೆ ಅತ್ಯಂತ ದುರ್ಗಮ ದಾರಿಯನ್ನು ಪರಿಸ್ಥಿತಿಯನ್ನು ನಾವು ನೋಡಬೇಕಿದೆ. ಆದರೆ ಭವಿಷ್ಯ ಹೇಗೆ ಬದಲಾಗುತ್ತದೆ ಎಂಬುದು ನಾವು ಮತ್ತು ನಮ್ಮ ಕಾನೂನು ಹೇಗೆ ಕೆಲಸ ಮಾಡುತ್ತೇವೆ ಎಂಬುದು ನಿರ್ಧರಿಸಲಿದೆ. ನನಗೆ ಜೆ.ಎನ್.ಯು ವಿಧ್ಯಾರ್ಥಿ ಸಮುದಾಯದಲ್ಲಿ ಅಪಾರವಾದ ನಂಬಿಕೆಯಿದೆ. ಆ ಕಾರಣಕ್ಕೆ ನಾನು ನಿಮ್ಮೊಳಗೆ ಒಬ್ಬನಾಗಿ ಇಂದು ಇಲ್ಲಿ ನಿಂತಿದ್ದೇನೆ ಈ ಹೋರಾಟದಲ್ಲಿ ನೀವು ಗೆದ್ದೇ ಗೆಲ್ಲುತ್ತೀರಾ ಎಂಬ ನಂಬಿಕೆ ನನಗಿದೆ.

ನೀವು ಇಂದು ಈ ದೇಶದ ಎಂದೂ ಕಂಡಿರದ ಅಸಮಾನತೆಯ ಕಾಲದಲ್ಲಿ ನಿಂತಿದ್ದೀರಾ ಜೊತೆಗೆ ಹೆಚ್ಚುತ್ತಿರುವ ಮೂಲಭೂತವಾದಿ ಶಕ್ತಿಗಳು ನಮ್ಮ ಮುಂದಿವೆ. ನನ್ನ ದೃಷ್ಟಿಯಲ್ಲಿ ಇಂದು ಭಾರತ ಸಾಮಾಜಿಕ ಮತ್ತು ಧಾರ್ಮಿಕ ಮೂಲಭೂತವಾದಿಗಳು ಮಾರುಕಟ್ಟೆ ಶಕ್ತಿಗಳೊಂದಿಗೆ ಸೇರಿ ಮಾಡಿಕೊಂಡಿರುವ ಮೈತ್ರಿಕೂಟದಿಂದ ಆಳಲ್ಪಡುತ್ತಿದೆ, ಇದು ನನ್ನ ಅಭಿಪ್ರಾಯ ಆಗಿದೆ ಈ ಕುರಿತ ಚರ್ಚೆಗೆ ನಾನು ಸಿದ್ಧನಿದ್ದೇನೆ. ಆ ಎರಡು ಶಕ್ತಿಗಳು (ಸಾಮಾಜಿಕ ಮತ್ತು ಧಾರ್ಮಿಕ ಮೂಲಭೂತವಾದಿಗಳು ಮತ್ತು ಮಾರುಕಟ್ಟೆ ಶಕ್ತಿಗಳು) ಪರಸ್ಪರ ಹೊಂದಿಕೊಂಡೆ ಸಾಗುವ ಅನಿವಾರ್ಯತೆಯನ್ನು ಹೊಂದಿವೆ. ತುಂಬಾ ಸಾರಿ ಬಹಳ ದೊಡ್ಡ ಸಂಖ್ಯೆಯ ಜನರು ಮಾರುಕಟ್ಟೆ ಮೂಲಭೂತವಾದಿಗಳು ಮತ್ತು ಧಾರ್ಮಿಕ ಮೂಲಭೂತವಾದಿಗಳಾಗಿರುವುದನ್ನು ನಾವು ಕಾಣಬಹುದಾಗಿದೆ . . .

ಮೊದಲು ನಾವು ಮಾರುಕಟ್ಟೆ ಮೂಲಭೂತವಾದಿಗಳು, ಯಾವ ಧಾರ್ಮಿಕ ಮೂಲಭೂತವಾದಿಗಳಿಂದ ಕಡಿಮೆ ಇಲ್ಲ ಎಂಬುದನ್ನು ಅರ್ಥಮಾಡಿಕೊಳ್ಳಬೇಕಿದೆ. ಈ ಎರಡು ಶಕ್ತಿಗಳು ತಮ್ಮದೇ ಆದ ಪವಿತ್ರ ಗ್ರಂಥಗಳು, ಪುರಾಣಗಳು, ದೈವವಾಣಿಗಳು ಮತ್ತು ಪಂಡಿತರನ್ನು ಹೊಂದಿವೆ. ಮಾರುಕಟ್ಟೆ ಮೂಲಭೂತವಾದಿಗಳು, ಧಾರ್ಮಿಕ ಮೂಲಭೂತವಾದಿಗಳಿಗಿಂತ ಹೆಚ್ಚು ಟಿ.ವಿ ವಕ್ತಾರರನ್ನು ಹೊಂದಿದ್ದಾರೆ ಅವರು ಪ್ರತಿದಿನ ಸಂಜೆ ಎಲ್ಲಾ ಚಾನೆಲ್ ಗಳಲ್ಲಿಯೂ ಕಾಣಲು ಸಿಗುತ್ತಾರೆ. . .

ಅಭಿವೃದ್ಧಿ, ಆಯ್ಕೆ ಎಂಬ ಮಾರುಕಟ್ಟೆ ಮೂಲಭೂತವಾದಿಗಳ ದೈವವಾಣಿಗಳು ಜೆ.ಎನ್.ಯು ವಿಧ್ಯಾರ್ಥಿಗಳಾದ ನಿಮಗೆ ಗೊತ್ತಿರುತ್ತವೆ. ಮಾರುಕಟ್ಟೆ ನಿಜಕ್ಕೂ ನಮಗೆ ಆಯ್ಕೆಯ ಸ್ವಾತಂತ್ರ‍್ಯ ನೀಡುತ್ತದೆಯೇ? ಈ ಕುರಿತು ವಿಸ್ತೃತ ಚರ್ಚೆಗಳು ಆಗುತ್ತಿರುತ್ತವೆ, ಇತ್ತೀಚೆಗೆ ವಾರ ಅಥವಾ ಹತ್ತು ದಿನಗಳ ಹಿಂದೆ ನಮ್ಮ ನಡುವಿನ ಇಬ್ಬರು ಮಾರುಕಟ್ಟೆ ಮೂಲಭೂತವಾದಿಗಳು ಒಂದು ಟಿ.ವಿ ವಾಹಿನಿಯಲ್ಲಿ ಥಾಮೇಸ್ ಪೀಕೆಟಿ ಅವರೊಂದಿಗೆ ಚರ್ಚಿಸುತ್ತಾ ಅಸಮಾನತೆ ಎಂಬುದು ಅಂಥ ತಲೆಕೆಡಿಸಿಕೊಳ್ಳಬೇಕಾದ ಸಂಗತಿಯಲ್ಲ ಮತ್ತು ಜನರ ಸಂಪತ್ತು ಮುಳುಗುತ್ತಿರುವುದು ದೊಡ್ಡ ವಿಷಯವಾಗಬೇಕಿಲ್ಲ ಎಂದು ವಾದಿಸುತ್ತಿದ್ದರು. ಹೀಗೆ ವಾದಿಸುತ್ತಿದ್ದವರು ವಿವೇಕ್ ಡಿಬ್ರಾಯ್ ಮತ್ತು ನಮ್ಮ ಸರ್ಕಾರದ ಮುಖ್ಯ ಆರ್ಥಿಕ ಸಲಹೆಗಾರರಾದ ಅರವಿಂದ ಸುಬ್ರಮ್ಹಣ್ಯ. ನನಗೆ ನೀತಿ ಅಯೋಗದ ವಿವೇಕ್ ಡಿಬ್ರಾಯ್ ಅವರೊಂದಿಗೆ ಯಾವುದೇ ಸಮಸ್ಯೆಗಳಿಲ್ಲ, ತಮಿಳುನಾಡಿನ ನನ್ನ ಸ್ನೇಹಿತರು “ನೀತಿ ಅಯೋಗ”ವನ್ನು “ನೀತಿ ಅಯ್ಯೂ” ಎಂದು ಕರೆಯುತ್ತಾರೆ. ಇವರು ಹೇಳುತ್ತಿದ್ದರು ಇಂದು ಮಾರುಕಟ್ಟೆಯಲ್ಲಿ ಹೂಡಿದ ಹಣವನ್ನು ಜನರು ಕಳೆದುಕೊಳ್ಳುತ್ತಿದ್ದರೆ ಅದು ಅವರ ವ್ಯವಹಾರ, ಅದಕ್ಕೂ ನಮಗೂ ಸಂಬಂಧವಿಲ್ಲ ಎನ್ನುತ್ತಿದ್ದಂತೆ ಅರವಿಂದ ಸುಬ್ರಮ್ಹಣ್ಯ ಅವರು ‘ವಿವೇಕ್ ಸರಿಯಾಗಿ ಹೇಳುತ್ತಿದ್ದಾರೆ’ ಎನ್ನುತ್ತಿದ್ದರು. ಅವರ ಇಬ್ಬರ ಅಲೋಚನೆಗಳು ಒಂದೆ ಆಗಿವೆ . . .

ನಾವು ಮಾರುಕಟ್ಟೆ ಮೂಲಭೂತವಾದದ ಕುರಿತು ನಮ್ಮೆದುರು ಬರುತ್ತಿರುವ ಅಸಮಾನತೆಯ ಮಾದರಿಗಳ ಕುರಿತು ಮಾತನಾಡುವಾಗ ಯುಪಿಎ ಮತ್ತು ಎನ್.ಡಿ.ಎ ನಿಲುವುಗಳಲ್ಲಿ ಅಂತಹ ಅಂತರ ಕಾಣಲಾಗುವುದಿಲ್ಲ. ಈ ಸಂದರ್ಭದಲ್ಲಿ ವೃತ್ತಿಯಲ್ಲಿ ನನ್ನ ಸಹೋದ್ಯೋಗಿಯಾದ ಅರುಣ್ ಶೌರಿ ಅವರ ಮಾತೊಂದು ನೆನಪಿಸಿಕೊಳ್ಳಬೇಕು. ಅವರು ಬಿ.ಜೆ.ಪಿ ಎಂದರೆ ಕಾಂಗ್ರೆಸ್+ಗೋವು ಎಂಬ ವಿಮರ್ಶೆಯನ್ನು ಅರುಣ್ ಶೌರಿ ಮಾಡಿದ್ದರು. ಅವರ ಪ್ರಕಾರ ದೇಶದ ನೀತಿಗಳ ರಚನೆಯ ವಿಷಯದಲ್ಲಿ ಬಿ.ಜೆ.ಪಿ ಎಂದರೆ ದನದ ವಿಷ್ಯವನ್ನು ಸೇರಿಸಿಕೊಂಡ ಮತ್ತೊಂದು ಕಾಂಗ್ರೆಸ್ ಅಷ್ಟೆ ಎಂದುಬಿಟ್ಟಿದ್ದರು. . . .

ನಾವು ಮಹಾರಾಷ್ಟ್ರಕ್ಕೆ ಬಂದರೆ ನೀವು ಪತ್ರಿಕೆಗಳಲ್ಲಿ ನೋಡುತ್ತಲೇ ಇರುತ್ತೀರ, ಅಲ್ಲಿ ಗೋಮಾಂಸ ಸೇವನೆಯನ್ನು ನಿಷೇಧಿಸಲಾಗಿದೆ. ಈ ನಿಷೇಧದ ಹಿಂದಿರುವ ಬಹಳ ಪ್ರಮುಖವಾದ ನಂಬಿಕೆ ಮೂಲಭೂತವಾದಿಗಳು ಗೋವನ್ನು ಪವಿತ್ರ ಎಂದು ಭಾವಿಸುತ್ತಾರೆ ಎಂಬುದು. ಉಳಿದೆಡೆಗಳಲ್ಲಿಯೂ ಗೋವನ್ನು ಬಹಳ ಪವಿತ್ರ ಎಂದು ಗುರುತಿಸಲಾಗುತ್ತದೆ. ಅದಕ್ಕಿಂತ ಮುಖ್ಯವಾಗಿ ಕೃಷಿ ಪ್ರಧಾನ ಸಮುದಾಯಗಳನ್ನು ಹೊಂದಿರುವ ಭಾರತದಲ್ಲಿ ಗೋವು ಕೃಷಿ ಆರ್ಥಿಕತೆಯಲ್ಲಿ ಮಹತ್ವದ ಸ್ಥಾನ ಹೊಂದಿದೆ. ಅದರಲ್ಲಿ ಯಾವುದೇ ಸಂಶಯವಿಲ್ಲ. . .

ಅದರೆ ಇಂದು ಜಾರಿಯಲ್ಲಿರುವ ಗೋವುಗಳನ್ನು ಮಾಂಸಕ್ಕಾಗಿ ಕೊಲ್ಲುವುದು ಮತ್ತು ಮಾರಾಟ ಮಾಡುವುದರ ಮೇಲಿನ ನಿಷೇಧ (ಈ ನಿಷೇಧ ಎಮ್ಮೆ ಕೋಣಗಳ ಮೇಲೂ ಹೆರಲಾಗುತ್ತಿದೆ) ಮೂಲಭೂತವಾದಿಗಳ ಅಲೋಚನೆಯಾಗಿದೆ. ಈ ಕುರಿತಂತೆ ನಾವು ಸ್ಪಲ್ಪ ತಿಳಿದುಕೊಳ್ಳಬೇಕಿದೆ. ನೀವು ನಮ್ಮ ಇತ್ತೀಚಿನ ಜನಸಂಖ್ಯೆ ವರದಿಯ ಅಂಕಿ-ಅಂಶಗಳನ್ನು ನೋಡಿದರೆ ಐಡಿಯಾಲಜಿಕಲಿ ಮತ್ತು ಧಾರ್ಮಿಕವಾಗಿ ಈ ದೇಶದ ಶೇ 42ರಷ್ಟು ಜನಸಂಖ್ಯೆಗೆ ಗೋ ಮಾಂಸ ಸೇವನೆಗೆ ಯಾವುದೇ ತಕರಾರು ಇಲ್ಲ. ಅದರಾಚೆಗೆ ಹಿಂದೂ ಎಂದು ಕರೆಯಲ್ಪಡಬಹುದಾದ ಬಹುದೊಡ್ಡ ಜನಸಂಖ್ಯೆಯ ಬಹಳಷ್ಟು ಮಂದಿಗೆ ಗೋ ಮಾಂಸ ಒಂದು ಸಮಸ್ಯೆಯೇ ಅಲ್ಲ! ಕೇರಳದಲ್ಲಿ ಬಿ.ಜೆ.ಪಿಯ ನಾಯಕರು ಗೋ ಮಾಂಸ ತಿನ್ನುತ್ತಿರುವ ವೀಡಿಯೋ ಅಂತರ್ಜಾಲದಲ್ಲಿ ಸಂಚಲನ ಸೃಷ್ಟಿಸಿದೆ. ಅದಕ್ಕೆ ಪ್ರತಿಯಾಗಿ ನಾನು ಗೋ ಮಾಂಸ ತಿನ್ನುತ್ತಿರುವುದು ಮೂರು ವರ್ಷಗಳ ಹಿಂದೆ! ಇಲ್ಲ ಇಲ್ಲ ಇದು ಗೋ ಮಾಂಸ ಅಲ್ಲ ಇದು ಈರುಳ್ಳಿ ಪಕೋಡಾ! ಎಂಬ ಕೆಲವು ವೀಡಿಯೋಗಳನ್ನು ಹರಿಬಿಡಲಾಗಿದೆ. ಆದರೆ ಈ ಸಂಗತಿಯಿಂದ ನಾವು ಅರ್ಥಮಾಡಿಕೊಳ್ಳಬಹುದಾದ ವಿಷಯ ಕೇರಳದಲ್ಲಿ ಬಹುಪಾಲು ಜನ ಪಕ್ಷಾತೀತವಾಗಿ ಗೋ ಮಾಂಸ ಸೇವಿಸುತ್ತಾರೆ ಎಂಬುದು . . . .

ಇನ್ನು ಮಹಾರಾಷ್ಟ್ರಕ್ಕೆ ಬರುವುದಾದರೆ ಅಲ್ಲಿ ಗೋ ಮಾಂಸ ನಿಷೇಧಿಸಿದ ಮೊದಲ ವಾರ ಭಜರಂಗ ದಳದ ಹುಡುಗರು ಎಲ್ಲಾ ರಸ್ತೆಗಳಲ್ಲಿ ನಿಂತು ವಾಹನಗಳಲ್ಲಿ ಯಾವ ಮಾಂಸ ಇದೆ ಎಂದು ಪರಿಶೀಲಿಸುತ್ತಿದ್ದರಿಂದ ಮುಂಬಯಿಯ ಮೃಗಾಲಯಗಳಲ್ಲಿನ ಹುಲಿ ಮತ್ತು ಸಿಂಹಗಳಿಗೆ ಚಿಕನ್ ಸರಬರಾಜು ಮಾಡಲಾಯಿತು. ಇಲ್ಲಿ ಇನ್ನೊಂದು ವಿಷಯವಿದೆ. ಈ ಬಿ.ಜೆ.ಪಿ ಭಜರಂಗದಳ, ವಿಶ್ವಹಿಂದೂ ಪರಿಷದ್, ಆರ್.ಎಸ್.ಎಸ್ ಎಲ್ಲವೂ ಬೇರೆ ಬೇರೆ ಸಂಘಟನೆಗಳು ಎಂಬ ಒಂದು ವಾದವನ್ನು ಮುಂದಿಡಲಾಗುತ್ತದೆ. ನಮ್ಮ ಸೆಕ್ಯಲಾರ್ ಮಿತ್ರರು ಇಲ್ಲ ಇಲ್ಲ ಅವೆಲ್ಲವೂ ಒಂದೆ ಎಂದು ಗಟ್ಟಿಯಾಗಿ ಹೇಳುತ್ತಿರುತ್ತಾರೆ. ಆದರೆ ವಾಸ್ತವದಲ್ಲಿ ಈ ಎಲ್ಲಾ ಸಂಘಟನೆಗಳು ಒಂದೇ ಅಲ್ಲ ಬದಲಾಗಿ ಬೇರೆ ಬೇರೆ, ಈ ಸತ್ಯವನ್ನು ನಾವು ಅರ್ಥಮಾಡಿಕೊಳ್ಳಬೇಕಿದೆ. ಇವರೆಲ್ಲಾ ಯಾರು ಎಂದು ನಾವು ನೋಡಿದರೆ ಬಿ.ಜೆ.ಪಿ ರಾಜಕೀಯ ರಂಗದಲ್ಲಿನ ಆರ್.ಎಸ್.ಎಸ್ ಆಗಿದ್ದರೆ, ವಿಶ್ವಹಿಂದೂ ಪರಿಷತ್ ಹುಡುಗರ ತಲೆಯಲ್ಲಿ ಧಾರ್ಮಿಕ ನಶೆಯನ್ನು ತುಂಬುವಲ್ಲಿ ಬಿ.ಜೆ.ಪಿ ತರ ಕೆಲಸ ಮಾಡುತ್ತದೆ, ಇನ್ನು ಭಜರಂಗದಳ ಕಟ್ಟಡಗಳನ್ನು, ಬದುಕುಗಳನ್ನು ಒಡೆಯುವುದರಲ್ಲಿ ವಿಶ್ವಹಿಂದೂ ಪರಿಷದ್ ನಂತೆ ಕೆಲಸ ಮಾಡುತ್ತದೆ. ಆದ್ದರಿಂದ ನಾವು ಇವುಗಳ ನಡುವಿನ ಈ ವ್ಯತ್ಯಾಸವನ್ನು ಗುರುತಿಸಬೇಕಿದೆ. . ..

ಇನ್ನು ನಾವು ಹುಲಿ ಸಿಂಹಗಳಿಗೆ ಚಿಕನ್ ತಿನ್ನಿಸಿದ ಘಟನೆಗೆ ಮರಳುವುದಾದರೆ ಮುಂಬಯಿಯ ಮೃಗಾಲಯದಲ್ಲಿ ಒಂದು ವಾರಗಳ ಕಾಲ ಹುಲಿ ಸಿಂಹಗಳಿಗೆ ಚಿಕನ್ ತಿನ್ನಿಸಿದ ಪರಿಣಾಮ ಸಮಸ್ಯೆಯಾಗಿ ಇಡಿ ಮಹಾರಾಷ್ಟ್ರದಲ್ಲಿನ ಪಶುಗಳ ಮಾರುಕಟ್ಟೆ ಕುಸಿದು ಬಿತ್ತು. ಹಿಂದೂ, ಮುಸ್ಲಿಂ,ಕ್ರಿಶ್ಚಿಯನ್ ಮತ್ತು ದಲಿತರು ಸೇರಿದಂತೆ ಸಾವಿರ ಸಾವಿರ ಜನ ತೊಂದರೆಗೆ ಅತಂಕಕ್ಕೆ ಒಳಗಾದರು. ಇವರ‍್ಯಾರಿಗೂ ಗ್ರಾಮೀಣ ಆರ್ಥಿಕತೆಯಲ್ಲಿ ಗೋವಿನ ಪಾತ್ರದ ಕುರಿತ ಕೊಂಚವೂ ಅರಿವಿರಲಿಲ್ಲ. ಹಾಗೆ ನೋಡಿದರೆ ಗ್ರಾಮೀಣ ಭಾರತದ ಆರ್ಥಿಕತೆಯಲ್ಲಿ ಗೋವು ಮಹತ್ವದ ಪಾತ್ರ ವಹಿಸುತ್ತದೆ. . .

ಇದನ್ನೆಲ್ಲಾ ಆಧರಿಸಿ ಮೊನ್ನೆ ಟೈಮ್ಸ್ ಆಫ್ ಇಂಡಿಯಾ ಕೊಲ್ಲಾಪುರದ ಚಪ್ಪಲಿ ಉದ್ಯಮ ಕುಸಿದು ಬಿದ್ದಿರುವ ಕುರಿತು ಬಹಳ ಅಧ್ಬುತವಾದ ವರದಿಗಳನ್ನು ಪ್ರಕಟಿಸಿತು. ಇದು ಒಂದು ಅರ್ಥದಲ್ಲಿ ಮೇಕ್ ಇನ್ ಇಂಡಿಯಾ, ಬ್ರೇಕ್ ಇನ್ ಇಂಡಿಯಾ ಎನ್ನುವಂತಿದೆ. ನಿಮಗೆ ಗೊತ್ತಿರಲಿ ಕೊಲ್ಲಾಪುರದ ಚಪ್ಪಲಿಗಳು ಅಂತರಾಷ್ಟ್ರೀಯ ಬ್ರಾಂಡ್ ಹೊಂದಿವೆ, ಜಾಗತೀಕರಣ, ಉದಾರಿಕರಣಕ್ಕೂ ಪೂರ್ವದಲ್ಲಿಯೇ ಜಗತ್ತಿನ ಎಲ್ಲಾ ಭಾಗಗಳಿಗೆ ತಮ್ಮ ಉತ್ಪನ್ನಗಳನ್ನು ರಫ್ತು ಮಾಡಿದ ಹಿರಿಮೆ ಕೊಲ್ಲಾಪುರದ ಚಪ್ಪಲಿ ಉದ್ಯಮಕ್ಕೆ ಇತ್ತು. ಆದರೆ ಇಂದು ಪ್ರಾಣಿ ಮತ್ತು ಗೋ ಹತ್ಯೆ ನಿಷೇಧದಿಂದ ಅ ನಿಷೇಧವನ್ನು ಎಮ್ಮೆ ಮತ್ತು ಕೋಣಗಳಿಗೂ ವಿಸ್ತರಿಸಿರುವುದರಿಂದ ಕೊಲ್ಲಾಪುರದ ಚಪ್ಪಲಿ ಉದ್ಯಮ ನೆಲ ಕಚ್ಚಿದೆ. ನಿಜವಾಗಿಯೂ ಕೊಲ್ಲಾಪುರದ ಚಪ್ಪಲಿ ಉದ್ಯಮವನ್ನು ನಡೆಸುತ್ತಿದ್ದವರು ಮುಸ್ಲಿಂ ಜನರಲ್ಲ ಬದಲಾಗಿ ದಲಿತರು. ಸರ್ಕಾರದ ಈ ಕ್ರಮದಿಂದ ಒಂದು ಕಡೆ ಮುಸ್ಲಿಮರು ತೊಂದರೆಗೆ ಒಳಗಾದರೆ ಮತ್ತೊಂದು ಕಡೆ ದಲಿತರನ್ನು ತುಳಿದು ಹಾಕಲಾಗಿದೆ. ಅದರ ಜೊತೆಗೆ ಪಶುಗಳ ಉದ್ಯಮಗಳಲ್ಲಿ ತೊಡಗಿದ್ದ ಮರಾಠ ಇತ್ಯಾದಿ ಹಿಂದುಳಿದ ವರ್ಗಗಳನ್ನು ನಾಶಮಾಡಲಾಗಿದೆ. ಒಂದು ಗುಂಪಿನ ದಾಳಿಗೆ/ಕೆಲಸಕ್ಕೆ ಇಂದು ನಾವು ಎಲ್ಲಾ ಕಡೆಗಳಿಂದ ಬಂಧನಕ್ಕೆ ಒಳಗಾಗುತ್ತಿದ್ದೇವೆ. . .

ನಾನು ಇಲ್ಲಿನ ವಿಷಯಕ್ಕೆ ಮರಳುವುದಾದರೆ ಕಳೆದ ಕೆಲ ದಿನಗಳಿಂದ ಕೆಲ ಸ್ನೇಹಿತರು ನನಗೆ ಕರೆ ಮಾಡಿ ನಿಜಕ್ಕೂ ಈ ಸಂಗತಿಗಳು ಘಟಿಸುತ್ತಿವೆಯೇ ಎಂದು ಕೇಳುತ್ತಿದ್ದಾರೆ ನಾವು ಅವರಿಗೆ ಬನ್ನಿ ಗೊತ್ತಾಗುತ್ತದೆ ಇವು ನಮ್ಮ ನಡುವೆ ಘಟಿಸುತ್ತಿರುವ ಸಂಗತಿಗಳೆಂದು ಹೇಳುತ್ತಿದ್ದೇನೆ. . .

ನಾನು ಇದನ್ನು ಹೀಗೆ ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತೇನೆ. ಇಂದು ಜೆ.ಎನ್.ಯು ಮತ್ತು ದೇಶದ ಇತರ ಕಡೆಗಳಲ್ಲಿ ನಡೆಯುತ್ತಿರುವ ಹೋರಾಟಗಳಿಂದ ಕೆಲವು ಜನ ಅತಂಕಕ್ಕೆ, ಬೇಸರಕ್ಕೆ ಒಳಗಾದಂತೆ ಕಾಣುತ್ತಾರೆ. ಆದರೆ ಈ ಘಟನೆಗಳು ಅವರಿಗೆ ಆಶ್ಚರ್ಯ ಉಂಟು ಮಾಡಿಲ್ಲ. ಅವರಿಗೆ ಇಂತಹ ಘಟನೆಗಳಿಂದ ಅತಂಕವಾಗುತ್ತದೆ. ಆದರೆ ಆಶ್ಚರ್ಯಕ್ಕೆ ಆಗುವುದಿಲ್ಲ. ಇದನ್ನು ಅರ್ಥಮಾಡಿಕೊಳ್ಳಲು ನಾವು ಸಮಕಾಲೀನ ಭಾರತದ ರಾಜಕೀಯದಲ್ಲಿ ಆದ ಬದಲಾವಣೆಗಳನ್ನು ಗುರುತಿಸಬೇಕು. ದಶಕಗಳ ಕಾಲ ಭಾರತದ ರಾಜಕಾರಣದಲ್ಲಿ ಅನೇಕ ಬದಲಾವಣೆಗಳು ಆಗಿವೆ. ಆದರೆ ಇಂದು ಈ ದೇಶದ ರಾಜಕಾರಣದಲ್ಲಿ ಆಗಿರುವ ಬಹಳ ಬದಲಾವಣೆಯ ಕುರಿತು ನಾವು ಯೋಚಿಸಬೇಕು. ಚಿಂತಿಸಬೇಕು. ಆ ಬದಲಾವಣೆ ಒಬ್ಬ ಸಕ್ರಿಯ ಆರ್.ಎಸ್.ಎಸ್. ಪ್ರಚಾರಕ ಬಹುಮತ ಪಡೆದು ಪ್ರಧಾನಿಯಾಗಿರುವುದು. ಇದು ಭಾರತದ ರಾಜಕಾರಣದಲ್ಲಿ ಆಗಿರುವ ಬಹಳ ದೊಡ್ಡ ಬದಲಾವಣೆ. ಈ ಹಿಂದೆಯೂ ಆರ್.ಎಸ್.ಎಸ್. ಪ್ರಚಾರಕರು ನಮ್ಮ ನಾಯಕರಾಗಿದ್ದಾರೆ, 40 ವರ್ಷಗಳ ಕಾಲ ಪ್ರಚಾರಕರಾಗಿದ್ದವರು. ಆದರೆ ಅವರು ಬಹುಮತವಿಲ್ಲದ ಸರ್ಕಾರವನ್ನು ನಡೆಸುತ್ತಿದ್ದರು. ಆ ಕಾರಣಕ್ಕೆ ಅವರು ಏನು ಮಾಡಬೇಕು, ಏನು ಮಾಡಬಾರದು ಎಂಬುದರ ಕುರಿತು ಕೆಲವು ಮಿತಿಗಳು ಇದ್ದವು. ಆ ಕಾರಣಕ್ಕೆ ಅವರು “ಸಮ್ಮಿಶ್ರ ಸರ್ಕಾರದ ಧರ್ಮ” ಇತ್ಯಾದಿ ಮಾತುಗಳನ್ನು ಆಡುತ್ತಿದ್ದರು. ಆದರೆ ಇಂದು ನಾವು ಬಹುಮತ ಪಡೆದಿರುವ ಒಬ್ಬ ಸಂಘದ ಪ್ರಚಾರಕ ಪ್ರಧಾನಿಯಾಗಿರುವುದನ್ನು ನೋಡುತ್ತಿದ್ದೇವೆ. ಈ ಅಂಶ ಅವರನ್ನು ನಿಜವಾಗಿಯೂ ತಾವು ಏನು ಎಂಬುದನ್ನು ವ್ಯಕ್ತಪಡಿಸಲು ವಾತಾವರಣ ಸೃಷ್ಟಿಮಾಡಿಕೊಟ್ಟಿದೆ. ಅದನ್ನೆ ಅವರು ಮಾಡುತ್ತಿದ್ದಾರೆ ಮತ್ತು ಮಾಡುತ್ತಾರೆ ಕೂಡಾ. ಇದರಿಂದ ನಾವು ಈ ಕುರಿತು ಅತಂಕಕ್ಕೆ ಒಳಗಾಗಿ ಚರ್ಚೆ ಮಾಡಬಹುದೇ ಹೊರತು ಆಶ್ಚರ್ಯಕ್ಕೆ ಒಳಗಾಗುಗುವ ಅಗತ್ಯ ಇಲ್ಲ. ಏಕೆಂದರೆ ಇದು ನೀರಿಕ್ಷಿತ. . .

ನಾವು ಇಂದು ಎಲ್ಲಾ ಕಡೆಗಳಿಂದ ನಂಬಲಾರದಂತಹ ಅಸಮಾನತೆ ಇರುವ ದೇಶದಲ್ಲಿ ಬದುಕುತ್ತಿದ್ದೇವೆ. ನಿಮ್ಮ ನೀತಿ ಅಯೋಗದ ಜನ, ನಿಮ್ಮ ಆರ್ಥಿಕ ಸಲಹೆಗಾರರು ಈ ಹೆಚ್ಚುತ್ತಿರುವ ಅಸಮಾನತೆಯನ್ನು ದೊಡ್ಡ ಸಮಸ್ಯೆಯಾಗಿ ಪರಿಗಣಿಸುವುದೇ ಇಲ್ಲ ಬದಲಾಗಿ, ಮಾರುಕಟ್ಟೆ ಭಾರತವನ್ನು ಬಿಡುಗಡೆಗೊಳಿಸಿದೆ, ಅಲ್ಪ ಪ್ರಮಾಣದ ಅಸಮಾನತೆ ಇರಬೇಕು, ಇದರಿಂದ ಸ್ಪರ್ಧಾತ್ಮಕ ಮನೋಭಾವ ಬೆಳೆಯುತ್ತದೆ ಎಂಬಿತ್ಯಾದಿ ಮಾತುಗಳನ್ನು ಆಡುತ್ತಿದ್ದಾರೆ . .

ಇಂದು ಈ ದೇಶದಲ್ಲಿ 2011ರ ಜನಗಣತಿಯ ಅಂಕಿ-ಅಂಶಗಳನ್ನು ಮುಂದಿರಿಸಿ ಕಳೆದ ಇಪ್ಪತ್ತನಾಲ್ಕು ತಿಂಗಳಲ್ಲಿ ಮಹತ್ವ ಎನ್ನಿಸುವ ನಾಲ್ಕರಿಂದ ಐದು ಅಂಕಿ-ಆಂಶ ಮತ್ತು ಮಾಹಿತಿಗಳ ವರದಿಗಳು ಬಂದಿವೆ. ಅವುಗಳಲ್ಲಿ ಬಹಳ ಪ್ರಮುಖವಾದವು ಜಾತಿಗಳ ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆಯ ಅಂಕಿ-ಅಂಶ. ವಾಸ್ತವದಲ್ಲಿ ಜಾತಿಗಳ ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಗತಿಗಳ ಮಾಹಿತಿ ಬಿಡುಗಡೆಗೊಳಿಸಿಲ್ಲ. ಆ ಕಾರಣಕ್ಕೆ ನಮಗೆ ಜಾತಿ ಆಧಾರಿತ ವಿಶ್ಲೇಷಣೆ ಸಾಧ್ಯವಿಲ್ಲ. ಆದರೆ ಇಂದು ವರ್ಗಗಳ ಆಧಾರದಲ್ಲಿನ ಮಾಹಿತಿಗಳನ್ನು, ಅಂಕಿ-ಅಂಶಗಳನ್ನು ನೋಡಿದರೆ ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆಯ ಅಂಕಿ-ಅಂಶ ಗಳ ಪ್ರಕಾರ ಇಂದು ದೇಶದ ಶೆ 75 ರಷ್ಟು ಗ್ರಾಮೀಣ ಕುಟುಂಬಗಳ ಮುಖ್ಯಸ್ಥ ಐದು ಸಾವಿರಕ್ಕಿಂತ ಕಡಿಮೆ ಮಾಸಿಕ ಅದಾಯ ಹೊಂದಿದ್ದಾನೆ. ಇದನ್ನು ನಾವು 10 ಸಾವಿರಕ್ಕೆ ಏರಿಸಿದರೆ ಈ ದೇಶದ 90ಶೇ ಗ್ರಾಮೀಣ ಕುಟುಂಬಗಳು 10 ಸಾವಿರಕ್ಕಿಂತ ಕಡಿಮೆ ವರಮಾನ ಹೊಂದಿವೆ. ಆದರೆ ಇದೇ ದೇಶದಲ್ಲಿ ಪೋರ್ಬ್ ಸಮೀಕ್ಷೆಯ ಶ್ರಿಮಂತರ ಪಟ್ಟಿಯಲ್ಲಿ ಈ ದೇಶದ ಮಿನಿಮಮ್ ಶ್ರೀಮಂತ 3.5 ಕೋಟಿ ಡಾಲರ್ ಹೊಂದಿದ್ದಾನೆ ಅತಿ ಹೆಚ್ಚು ಸಂಪತ್ತನ್ನು ಹೊಂದಿರುವ ದೇಶಗಳ ಪಟ್ಟಿಯಲ್ಲಿ ಈ ದೇಶ 4 ರಿಂದ 5ನೇ ಸ್ಥಾನದಲ್ಲಿದೆ. ನನ್ನ ಪ್ರಕಾರ ನಾವು ಎರಡನೆಯ ಸ್ಥಾನದಲ್ಲಿ ಇದ್ದೇವೆ. ಸದ್ಯಕ್ಕೆ ಐದನೇ ಸ್ಥಾನ ಎಂದುಕೊಳ್ಳಿ. ಯಾವ ದೇಶ ಒಂದು ಕಡೆ ಜಗತ್ತಿನ ಶ್ರಿಮಂತರ ಪಟ್ಟಿಯಲ್ಲಿ 5ನೇ ಸ್ಥಾನ ಗಳಿಸಿದೆಯೋ ಅದೇ ದೇಶ ವಿಶ್ವ ಸಂಸ್ಥೆಯ ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ 135ನೇ ಸ್ಥಾನ ಹೊಂದಿದೆ. ಲ್ಯಾಟೀನ್ ಅಮೇರಿಕಾದ ಎಲ್ಲಾ ದೇಶಗಳು ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ ಭಾರತಕ್ಕಿಂತ ಮೇಲಿವೆ. 30 ವರ್ಷಗಳ ಕಾಲ ನಾಗರೀಕ ಯುದ್ಧವನ್ನು ಅನುಭವಿಸಿದ ಶ್ರೀಲಂಕಾ, ಅಭಿವೃದ್ಧಿ ಸೂಚ್ಯಂಕದಲ್ಲಿ ನಮಗಿಂತ 20 ಸ್ಥಾನ ಮೇಲಿದ್ದರೆ ಜಗತ್ತಿನಲ್ಲಿಯೇ ಅತ್ಯಂತ ಕ್ರೌರ್ಯಯುತ ಯುಧ್ಧಕ್ಕೆ ಒಳಗಾಗಿ ಯುದ್ಧದಲ್ಲಿ ಬಳಸಿದ ರಾಸಾಯನಿಕ ಮತ್ತು ಅಸ್ತ್ರಗಳ ಕಾರಣಕ್ಕೆ ಇಂದಿಗೂ ಹಲವು ಪೀಳಿಗೆಗಳು ತೊಂದರೆಗೊಳಗಾಗಿರುವ ವಿಯೆಟ್ನಾಂ ನಮಗಿಂತ 50 ಸ್ಥಾನ ಮೇಲಿದೆ. ಈ ಎಲ್ಲಾ ದೇಶಗಳು ಮಾನವನ ಅಭಿವೃದ್ಧಿ ಸೂಚ್ಯಂಕದಲ್ಲಿ ನಮಗಿಂತ ಮುಂದಿವೆ ಇದಕ್ಕೆ ಕಾರಣ ಆ ದೇಶಗಳಲ್ಲಿ ಡಾಲರ್ ಮಿಲೇನಿಯರ್ ಗಳ ಉತ್ಪಾದನೆ ಆಗುತ್ತಿಲ್ಲ . . .

ನಿಮಗೆ ಆಶ್ಚರ್ಯ ಆಗಬಹದು. ನಾರ್ಡಿಕ್ ಮತ್ತು ಸ್ಕಾಂಡಿನೇವಿಯನ್ ದೇಶಗಳಾದ ಡೆನ್ಮಾರ್ಕ್, ಸ್ವೀಡೆನ್, ಫೀನ್ಲೆಂಡ್, ಐಸ್ಲೆಂಡ್, ನಾರ್ವೆ ಎಲ್ಲಾ ದೇಶಗಳಲ್ಲಿ ಭಾರತದ ಒಟ್ಟು ಡಾಲರ್ ಬಿಲೇನಿಯರ್ ಗಳ ಪೈಕಿ ಶೇ 3 ರಷ್ಟ ಮಾತ್ರ ಬಿಲೆನಿಯರ್ಗಳಿದ್ದಾರೆ. ಚೀನಾದಲ್ಲಿ ನಮಗಿಂತ ಜಾಸ್ತಿ ಇರಬಹದು. ರಷ್ಯದಲ್ಲಿ ಪ್ರತಿ ಐದು ವರ್ಷಕ್ಕೂಮ್ಮೆ ಎಲ್ಲಾ ಬಿಲೇನಿಯರ‍್ಗಳನ್ನು ಜೈಲಿಗೆ ಕಳುಹಿಸುತ್ತಾರೆ, ನಾವು ಪಾರ್ಲಿಮೆಂಟಿಗೆ ಕಳುಹಿಸುತ್ತೇವೆ ಅಷ್ಟೆ ವ್ಯತ್ಯಾಸ. ಹೌದು ಈ ಅರ್ಥದಲ್ಲಿ ನಮ್ಮದು ಪ್ರೌಢ ಪ್ರಜಾತಂತ್ರ. . .

ಇದರ ಜೊತೆಯಲ್ಲಿಯೇ ಪಾರ್ಲಿಮೆಂಟಿನಲ್ಲಿ ಇರುವ ಅಸಮಾನತೆಯ ಕುರಿತು ಕೆಲವು ವಿಷಯಗಳನ್ನು ನಾನು ನಿಮಗೆ ಹೇಳುತ್ತೇನೆ. 2014ರ ಚುನಾವಣೆಯ ಪ್ರಮಾಣ ಪತ್ರದಲ್ಲಿ ಘೋಷಿಸಿಕೊಂಡಂತೆ ನಮ್ಮ ದೇಶದ ಲೋಕಸಭೆಯ ಶೇ 82 ಸಂಸದರು ಕೋಟ್ಯಾಧಿಪತಿಗಳು. ಇದು ಅವರೇ ಸ್ವ-ಘೋಷಿಸಿಕೊಂಡಿರುವ ಸಂಗತಿ. ಹಾಗಾದರೆ ಐದು ಮತ್ತು ಹತ್ತು ವರ್ಷಗಳ ಹಿಂದಿನ ಪ್ರಮಾಣ ಏನಿತ್ತು ಎಂದು ನೋಡಿದರೆ 2004ರ ಸಂಧರ್ಭದಲ್ಲಿ ಒಟ್ಟು ಸಂಸದರಲ್ಲಿ ಶೇ 32 ಮಂದಿ ಕೋಟ್ಯಾಧಿಪತಿಗಳಿದ್ದರೆ 2009 ರಲ್ಲಿ ಅದು 53 ಶೇ ಕ್ಕೆ ಏರಿದೆ. 2014ರಲ್ಲಿ ನಾನು ಆಗಲೇ ಹೇಳಿದಂತೆ 82 ಶೇ ಸಂಸದರು ಕೋಟ್ಯಾಧಿಪತಿಗಳಿದ್ದಾರೆ. ಇದು ಚುನಾವಣೆಯ ಸಂದರ್ಭದಲ್ಲಿ ಸಲ್ಲಿಸಬೇಕಾದ ಪ್ರಮಾಣ ಪತ್ರಗಳನ್ನು ಆಧರಿಸಿದ ಲೆಕ್ಕ. ಇಲ್ಲಿ ನೀವು ಎಷ್ಟು ಬೇಕಾದರು ಬರೆಯಬಹದು. ನಿಮ್ಮ ಆದಾಯ ತೆರಿಗೆಯ ದಾಖಲೆಗಳನ್ನೇನು ಇಲ್ಲಿ ಕೇಳುವುದಿಲ್ಲ. ನಮ್ಮ ನಡುವಿನ ಸತ್ಯವಂತ ರಾಜಕಾರಣಿಯಾದ ಚಂದ್ರಬಾಬು ನಾಯ್ಡು ಅವರು 2014 ರಲ್ಲಿ ಘೋಷಿಸಿಕೊಂಡಿರುವ ಆಸ್ತಿ 2004ಕ್ಕಿಂತ ಕಡಿಮೆ ಇದೆ. ಇದು ನಿಜವಾದ ನಿಸ್ವಾರ್ಥ ಜೀವನ ಇದಕ್ಕೆ ಅವರು ಕೊಡುವ ಕಾರಣ ಕಳೆದ ಸಾರಿ ನನ್ನ ಮನೆಯನ್ನು ಮಾರುಕಟ್ಟೆಯ ಮೌಲ್ಯದಲ್ಲಿ ಲೆಕ್ಕ ಹಾಕಿದ್ದರು, ಆದರೆ ಈ ಬಾರಿ ಅದನ್ನು ನಾನು ಕೊಂಡ ಬೆಲೆಯಲ್ಲಿ ಲೆಕ್ಕ ಹಾಕಿದ್ದಾರೆ ಎಂದಿದ್ದಾರೆ. ಅದಕ್ಕೆ ನಾನು ಹೇಳಿದ್ದು ಮಾರುಕಟ್ಟೆ ನಿಮಗೆ ಆಯ್ಕೆಗಳನ್ನು ಕೊಡುತ್ತದೆ ಎಂದು ಹೇಳಿದ್ದು. . .. . 

ನಾವು ಮಾರುಕಟ್ಟೆ ಕೊಡುವ ಆಯ್ಕೆಗಳ ಕುರಿತಂತೆ ಮಾತನಾಡುತ್ತಿದ್ದೆವು. ಇಂದು ಜಗತ್ತಿನಾದ್ಯಂತ ಒಂದು ಬಿಲಿಯನ್ ಜನರು (‌ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಮಂಡಳಿ ಬೇರೆ ಬೇರೆ ವ್ಯಾಖ್ಯೆಗಳನ್ನು ನೀಡುವ ಮೂಲಕ ಆ ಸಂಖ್ಯೆಯನ್ನು 850 ಮಿಲಿಯನ್ ಎಂದು ಹೇಳುತ್ತಿದೆ) ಪ್ರತಿ ರಾತ್ರಿ ಹಸಿವಿನಿಂದಲೇ ಮಲಗುತ್ತಿದ್ದಾರೆ. ನಿಜವಾಗಲೂ ಮಾರುಕಟ್ಟೆ ಹಸಿವಿನಿಂದ ಕಂಗೆಟ್ಟರುವ ಒಂದು ಬಿಲಿಯನ್ ಜನರಿಗೆ ಆಯ್ಕೆಯ ಸ್ವಾತಂತ್ಯವನ್ನು ನೀಡಿದ್ದರೆ ಅವರ ಆಯ್ಕೆ ಆ ಹೊತ್ತಿನ ಆಹಾರವಾಗಿರುತ್ತಿತ್ತು. ಆದರೆ ಅದು ಸಾಧ್ಯವಾಗುತ್ತಿಲ್ಲ. ಆ ಕಾರಣಕ್ಕೆ ನಾವು ಮಾರುಕಟ್ಟೆ ಆಯ್ಕೆಯ ಸ್ವಾತಂತ್ರ‍್ಯವನ್ನು ನೀಡಿದೆ ಎಂಬ ಮಿಥ್ಯೆಯನ್ನು ತಿರಸ್ಕರಿಸಬೇಕಿದೆ. . .

ನಾವು ಆಗಲೇ ಚರ್ಚಿಸಿದಂತೆ ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆಯ ಅಂಕಿ-ಅಂಶ ಗಳ ಪ್ರಕಾರ ಇಂದು ದೇಶದ ಶೆ 75 ರಷ್ಟು ಗ್ರಾಮೀಣ ಕುಟುಂಬಗಳ ಮುಖ್ಯಸ್ಥ ಐದು ಸಾವಿರಕ್ಕಿಂತ ಕಡಿಮೆ ಅದಾಯ ಹೊಂದಿದ್ದಾನೆ. ಈ ದೇಶದ 90ಶೇ ಗ್ರಾಮೀಣ ಕುಟುಂಬಗಳು 10 ಸಾವಿರಕ್ಕಿಂತ ಕಡಿಮೆ ವರಮಾನ ಹೊಂದಿವೆ. ಕೇವಲ ಶೇ 8 ರಷ್ಟು ಗ್ರಾಮೀಣ ಕುಟುಂಬಗಳ ಮುಖ್ಯಸ್ಥ 10 ಸಾವಿರಕ್ಕಿಂತ ಹೆಚ್ಚಿನ ಅದಾಯವನ್ನು ಪಡೆಯುತ್ತಿದ್ದಾನೆ. ಇದು ನಮ್ಮ ನಡುವಿನ ಸ್ಥಿತಿ. . .

ಇನ್ನು ನ್ಯಾಷನಲ್ ಸ್ಯಾಂಪೆಲ್ ಸರ್ವೇ ಇಂಡಿಯಾದ ಅಂಕಿ-ಅಂಶಗಳನ್ನು ನೋಡುವುದಾದರೆ ಭಾರತದಲ್ಲಿನ ಐದು ಸದಸ್ಯರುಳ್ಳ ಕೃಷಿ ಕುಟುಂಬ ಕೃಷಿ ಮತ್ತು ಕೃಷೀಯೇತರ ಮೂಲಗಳಿಂದ ಗಳಿಸುವ ಮಾಸಿಕ ಅದಾಯ 6426 ರೂಪಾಯಿಗಳು. ಇದು ಇಂದಿನ 97 ಯು.ಎಸ್ ಡಾಲರ್ ಗೆ ಸಮನಾಗಿದೆ. ಒಂದು ಕಡೆ ಈ 6426 ರುಪಾಯಿ ಕೇರಳ, ಪಂಜಾಬ್ ನ ಕುಟುಂಬಗಳ ಸರಾಸರಿ ಗಳಿಕೆಯನ್ನು ತೋರಿಸಿದರೆ ಇನ್ನೂಂದು ಕಡೆ ಛತ್ತಿಸ್ಗಡ್, ಬಿಹಾರ್ ಕಡೆ ಆ ಪ್ರಮಾಣ 3500/4000 ಸಾವಿರ ಇದೆ. ಇದರ ಅರ್ಥ 3500 ರಿಂದ 9000 ದಿಂದ ಹತ್ತು ಸಾವಿರದ ಮಧ್ಯದ ಸರಾಸರಿಯಲ್ಲಿ ಗಳಿಸುವ ಎಲ್ಲಾ ಕೃಷಿ ಕುಟುಂಬಗಳನ್ನು 6426 ರೂಪಾಯಿ ಗಳಿಸುತ್ತಿವೆ ಎಂಬ ಈ ಲೆಕ್ಕದಲ್ಲಿ ನೋಡಲಾಗುತ್ತಿದೆ. ನಮ್ಮ ಗ್ರಾಮೀಣ ಭಾರತದ ಸ್ಥಿತಿ ಇಷ್ಟು ಕೆಟ್ಟದಾಗಿದೆ. ಅದು ಹಳ್ಳಿಯಲ್ಲಿನ ಜನ ಕೃಷಿಕರಾಗಿರಿಲಿ, ಕೃಷಿ ಕಾರ್ಮಿಕರಾಗಿರಿ ಏನಾದರೂ ಆಗಿರಲಿ, ಇದು ಕೆಟ್ಟ ಸ್ಥಿತಿ ಈ ರೀತಿಯ ಅಸಮಾನತೆ ಒಂದು ಕಡೆ ಇದ್ದರೆ. . .

ಮತ್ತೊಂದು ಕಡೆ 1991 ರಲ್ಲಿ ನಮ್ಮ ದೇಶದಲ್ಲಿ ಒಬ್ಬೆ ಒಬ್ಬ ಡಾಲರ್ ಬಿಲೇನಿಯರ್ ಇರಲಿಲ್ಲ. ಆದರೆ 2015ರ ಹೊತ್ತಿಗೆ ಪೋರ್ಬ್ ಪಟ್ಟಿಯಲ್ಲಿ ಭಾರತದ ನೂರು ಡಾಲೆರ್ ಬಿಲೇನಿಯರ‍್ಗಳು ಸ್ಥಾನ ಪಡೆದಿದ್ದಾ.ರೆ ಇತ್ತೀಚಿಗಿನ ಮಾರುಕಟ್ಟೆಯ ಹೊಡೆತಕ್ಕೆ ಅದರಲ್ಲಿ ಕೆಲವರ ಸ್ಪಲ್ಪ ಪ್ರಮಾಣದ ಸಂಪತ್ತು ಕರಗಿರಬಹುದು. ಇದು ನಮ್ಮ ದೇಶದ ಸ್ಥಿತಿ . . .

ಇದನ್ನೆ ನಾನು ಬೆಂಗಳೂರಿನ ಐಐಎಮ್ ವಿಧ್ಯಾರ್ಥಿಗಳೊಂದಿಗೆ ಹಂಚಿಕೊಳ್ಳುತ್ತಿದ್ದೆ. ನಾನು ಗ್ರಾಮೀಣ ಭಾರತದ ಕುರಿತು ಮಾಹಿತಿಗಳನ್ನು ಒಟ್ಟಾಗಿಸುವ ಕೆಲಸವೊಂದನ್ನು ಮಾಡುತ್ತಿದ್ದೇನೆ. ನೀವು ಎಷ್ಟು ಸುಂದರವಾದ ಸಮುದಾಯಗಳನ್ನು ಹಾಳು ಮಾಡುತ್ತಿದ್ದೀರಾ ಎಂದರೆ ಇಲ್ಲಿ ನಾವು ಭಯಪಡುವ, ಅಯ್ಯೋ ಹೀಗಿದೆಯಲ್ಲ ಸ್ಥಿತಿ ಎನ್ನುವ ಸಂಗತಿಗಳು ಇವೆ ಮತ್ತು ನಾವು ಆಶ್ಚರ್ಯಕ್ಕೆ ಒಳಗಾಗುವ ನಮ್ಮನ್ನು ಚಕಿತತೆಯ ಕಡೆಗೆ ನೂಕುವ ಸಂಗತಿಗಳು ಇವೆ ಆಶ್ಚರ್ಯ ಎಂದರೆ ಎರಡೂ ಭಾರತೀಯ ಮೂಲದವುಗಳು ಮತ್ತು ಇವು ನಮ್ಮ ವಾಸ್ತವಗಳಾಗಿವೆ. . .

ಇಲ್ಲಿ 833 ಮಿಲಿಯನ್ ಜನರು 718 ಜೀವಂತ ಭಾಷೆಗಳನ್ನು ಮಾತನಾಡುತ್ತಿದ್ದಾರೆ. ಅವುಗಳಲ್ಲಿ ಐದು ಬಾಷೆಗಳನ್ನು 15 ಮಿಲಿಯನ್ ಗೂ ಹೆಚ್ಚು ಮಂದಿ ಮಾತನಾಡುತ್ತಿದ್ದಾರೆ. 3 ಭಾಷೆಗಳನ್ನು ಸುಮಾರು 80 ಮಿಲಿಯನ್ ಜನರು ಮಾತನಾಡುತ್ತಿದ್ದಾರೆ. ಒಂದು ಭಾಷೆಯನ್ನು 600 ಮಿಲಿಯನ್ ಜನರು ಮಾತನಾಡುತ್ತಿದ್ದಾರೆ. ಒಂದು ಬಾಷೆಯನ್ನು 1ಶೇ ಜನರು ಅಂಡಮಾನ್ ನಲ್ಲಿ ಮಾತನಾಡುತ್ತಿದ್ದಾರೆ. ಒಂದು ಭಾಷೆಯನ್ನು 7 ಮಿಲಿಯನ್ ಜನರು ಸೈಮಾರ್ ಮತ್ತು ತ್ರಿಪುರಾಗಳಲ್ಲಿ ಮಾತನಾಡುತ್ತಿದ್ದಾರೆ. ಇದು ನಿಜಕ್ಕೂ ಆಶ್ಚರ್ಯ ಉಂಟುಮಾಡಬಹುದಾದ ವಿಭಿನ್ನತೆಗಳನ್ನು ಒಳಗೊಂಡಿರುವ ಸಮಾಜ. ಈ ಮಾದರಿಯನ್ನು ಜಗತ್ತಿನ ಇನ್ನೆಲ್ಲೂ ಕಾಣಲು ಸಾಧ್ಯವಿಲ್ಲ. ಕೆಲವು ಜನರಿಗೆ ಈ ವಿಭಿನ್ನತೆ ಭಯವನ್ನು ಹುಟ್ಟಿಸುತ್ತಿದೆ. ಆ ಕಾರಣಕ್ಕೆ ಅವರು ಒಂದು ಭಾಷೆಯನ್ನು ಎಲ್ಲರ ಮೇಲೆ ಹೇರುವ ಪ್ರಯತ್ನ ಮಾಡುತ್ತಿದ್ದಾರೆ. ಅವರಿಗೆ ಅವರದೇ ಸಂಸ್ಕೃತಿಯ ಮಹತ್ವ ಅರ್ಥವಾಗುತ್ತಿಲ್ಲ. ಹಿಂದಿ ಇವರಿಗೆ ಭಾಷೆಯಂತೆ ಕಾಣುತ್ತದೆ, ಆದರೆ ಉತ್ತರ ಭಾರತದ ಅತ್ಯುತ್ತಮ ಭಾಷೆಗಳಾದ ಭೋಜ್ ಪುರಿ, ಮಿಥಿಲಾ,ಬ್ರೀಜ್ ಬಾಷಾ, ಅವಧಿ ಇವರಿಗೆ ಡಯಲೆಕ್ಟ್ ರೀತಿ ಕಾಣುತ್ತದೆ. ಹಾಗೆ ನೋಡಿದರೆ ಹಿಂದಿಗೆ 150 ವರ್ಷಗಳ ಇತಿಹಾಸವೂ ಇಲ್ಲ. ಉತ್ತರ ಭಾರತದ ಮಹತ್ವದ ಸಾಹಿತ್ಯ ರಚನೆಯಾಗಿರುವುದು ಭೋಜ್ ಪುರಿ, ಮಿಥಿಲಾ, ಬ್ರೀಜ್ ಬಾಷಾ, ಅವಧಿ ಭಾಷೆಗಳಲ್ಲಿ ಇವು ಉತ್ತರ ಭಾರತದ ಪ್ರಾಚೀನ ಭಾಷೆಗಳು ಅವುಗಳನ್ನು ಗೌರವಿಸಿ, ಹೆಮ್ಮೆಪಡಿ . . . .

ಆದರೆ ಎರಡು ಬದಿಯ ಮೂಲಭೂತವಾದಿಗಳು ಸ್ಥಳೀಯ ಭಾಷೆಗಳನ್ನು ಕಡೆಗಣಿಸಿ ಉರ್ದುವನ್ನೂ ಪರ್ಶಿಯನ್ ಗೆ ಹತ್ತಿರ ಮಾಡಿದ್ದಾರೆ. ಎಲ್ಲಾ ಉರ್ದು ಮತ್ತು ಪರ್ಶಿಯನ್ ಪದಗಳನ್ನು ತೆಗೆದುಕೊಂಡು ಹಿಂದೂಸ್ಥಾನಿ ಅಥವಾ ಹಿಂದಿಯನ್ನು ಕಟ್ಟಲು ಬಳಸಲಾಯಿತು. ಈ ಪ್ರಕ್ರಿಯೆ ಕಳೆದ 100 ವರ್ಷಗಳಿಂದ ನಡೆಯುತ್ತಲೇ ಇದೆ. 60ರ ದಶಕದಲ್ಲಿ ನಾನು ಹುಡುಗನಾಗಿದ್ದಾಗ ಆಲ್ ಇಂಡಿಯಾ ರೇಡಿಯೋದ ಕುರಿತಂತೆ ಒಂದು ಹಾಸ್ಯ ಪ್ರಚಲಿತದಲ್ಲಿತ್ತು. ಅದು ಏನೆಂದರೆ ಆಲ್ ಇಂಡಿಯಾ ರೇಡಿಯೋ ಯಾರು ಮಾತನಾಡದ ಮೂರು ಭಾಷೆಗಳಲ್ಲಿ ಪ್ರಸಾರವಾಗುತ್ತದೆ. ಅವು ಕ್ವೀನ್ಸ್ ಇಂಗ್ಲೀಷ್, ಪರ್ಶೀಯನ್ ಉರ್ದು ಮತ್ತು ಸಂಸ್ಕೃತಿಕರಣಗೊಂಡ ಹಿಂದಿ! ಮೂಲಭೂತವಾದಿಗಳು ವಿವಿಧತೆಗೆ ಹೆದರುತ್ತಾರೆ. ಅವರಿಗೆ ಅರ್ಥವಾಗದ ತ್ರಿಪುರಾ, ನಾಗಾಲ್ಯಾಂಡ್ ಜನರ ಭಾಷೆಗಳು ಭಯ ಹುಟ್ಟಿಸುತ್ತವೆ. ಆದರೆ ನಾನು, ನೀವು ಅವು ಎಷ್ಟು ಸಮೃದ್ಧವಾಗಿವೆ ಅಲ್ಲವೇ ಎಂದು ಅಲೋಚಿಸುತ್ತೇವೆ. ನಾನು ಇಲ್ಲಿ ಗಂಗಾ ಹಾಸ್ಟೆಲ್ಲಿನಲ್ಲಿ ಇದ್ದಾಗ 24 ಭಾಷೆ ಮಾತನಾಡುವ ಸ್ನೇಹಿತರಿದ್ದರು. ಎಷ್ಟು ಸುಂದರ ಪ್ರಪಂಚ ಅದು. ಇದು ಸಹ ಜೆ.ಎನ್.ಯು ಭಾಗವೇ. ಒಂದು ವಿಷಯ ನಾನು ನಿಮಗೆ ಹೇಳಲೇ ಬೇಕು. ನಾನು ಈ ಕಾಲೇಜಿನ ಅವರಣದಲ್ಲಿ ನನ್ನ ಸ್ವಂತಕ್ಕಿಂತ ಮಿಗಿಲಾಗಿ ಬದುಕುವ ಗುಣ ಕಲಿತಿದ್ದೇನೆ. ವೃತ್ತಿ ಎಂದರೆ ಕೇವಲ ನನ್ನ ಪರಿಚಯ ಪತ್ರವಲ್ಲ ಮತ್ತು ಜೀವನದಲ್ಲಿ ಬೆಳೆಯುವುದು ಯಶಸ್ವಿಯಾಗೋದು ಅಂದರೆ ಅದರ ಪುಟಗಳನ್ನು ಹೆಚ್ಚಿಸಿಕೊಳ್ಳುವುದಲ್ಲ ಎಂಬುದನ್ನು ನಾವು ಕಲಿಯಬೇಕಿದೆ. . .

ಮುಂದುವರೆಯುವುದು. . . .

1 comment: