Jan 9, 2016

ಅಸಹಾಯಕ ಆತ್ಮಗಳು - ಮದುವೆಯ ಕನಸ ಮರೆತು ಮಾರಿಕೊಂಡವಳು....

ಕು. ಸ. ಮಧುಸೂದನ್ 
ಅಪ್ಪ ಅದೇನು ಕೆಲಸ ಮಾಡ್ತಿದ್ದ ಅಂತ ನನಗಾಗ ಗೊತ್ತಿರಲಿಲ್ಲ. ಅಮ್ಮ ಮಾತ್ರ ಅಕ್ಕಪಕ್ಕದವರ ಮನೇಲಿ ಕೆಲಸ ಮಾಡಿ ಸಂಸಾರ ಸಾಗಿಸ್ತಿದ್ದಳು. ನಾನು ಹತ್ತಿರದಲ್ಲೆ ಇದ್ದ ಗವರ್ನಮೆಂಟ್ ಶಾಲೆಗೆ ಒಂದು ಬಟ್ಟೆ ಚೀಲ ನೇತಾಕಿಕೊಂಡು ಹೋಗ್ತಿದ್ದೆ. ಒಂದು ದಿನ ಸ್ಕೂಲಿಂದ ಮನೆಗೆ ಬರೊ ಹೊತ್ತಿಗೆ ಅಮ್ಮ ಸತ್ತೋಗಿದ್ದಳು. ಬೆಳಿಗ್ಗೆ ಸ್ಕೂಲಿಗೆ ಹೋಗಬೇಕಾದರೆ ಚೆನ್ನಾಗೆ ಇದ್ದ ಅವಳಿಗೆ ಸಾಯೊ ಅಂತಾದ್ದು ಏನಾಗಿತ್ತು ಅನ್ನೋದು ಎಂಟು ವರ್ಷದ ನನಗೆ ಅರ್ಥವಾಗಿರಲಿಲ್ಲ. ಹಳ್ಳಿಯಿಂದ ಅಮ್ಮನ ಅಪ್ಪ ಅಮ್ಮ ಅಂದರೆ ನಮ್ಮ ಅಜ್ಜ ಅಜ್ಜಿ ಬಂದರು . ಮಣ್ಣು ಮುಗಿಸಿ ತಿಥಿ ಕಾರ್ಯವನ್ನೆಲ್ಲ ಮುಗಿಸಿದ ಮೇಲೆ ಮಗೂನ ನಾವೇ ಕರಕೊಂಡು ಹೋಗ್ತೀವಿ ಅಂದಾಗ ಅಪ್ಪ “ಹು ಹಂಗೇ ಮಾಡಿ ನಾನು ಅಗಾಗ ಹಳ್ಳಿಗೆ ಬಂದು ನೋಡ್ಕೊಂಡು ಹೋಗ್ತಾ ಇರ್ತೀನಿ” ಅಂದು ನನ್ನ ಕೈಗೆ ಒಂದಿಷ್ಟು ಚಿಲ್ಲರೆ ತುರುಕಿದ. ಅಲ್ಲಿಗೆ ನನ್ನ ಓದು ಕೂಡ ಮುಗಿದು ಹೋಯ್ತು. ಹಳ್ಳೀಲಿ ಅಜ್ಜ ಅಜ್ಜಿಗೆ ಇದ್ದ ಒಂದರ್ದ ಏಕರೆ ಹೊಲವನ್ನು ರಾಗಿ ಬೆಳೆಯೋಕೆ ಗುತ್ತಿಗೆ ನೀಡಿದ್ರು. ಅದರಿಂದ ಬರೋ ದುಡ್ಡಲ್ಲೇ ನಾವು ಮೂರು ಜನದ ಜೀವನ ಸಾಗ ಬೇಕಿತ್ತು. ಮನೇಲಿ ಒಂದೆರಡು ಕುರಿಗಳಿದ್ದವು. ನಾನು ಬೆಳಿಗ್ಗೆ ಊಟ ಮಾಡಿ ಕುರಿ ಹೊಡ್ಕೊಂಡು ಹೋಗ್ತಾ ಇದ್ದೆ. ಮದ್ಯಾಹ್ನದ ಊಟ ಇರ್ತಾ ಇರ್ಲಿಲ್ಲ.ಸಾಯಂಕಾಲ ಮನೆಗೆ ಬಂದು ಕುರಿ ಕಟ್ಟಿ ಹಾಕಿ ಮನೆಗೆಲಸ ಮಾಡಿ ರಾತ್ರಿ ಊಟ ಮಾಡಿ ಮಲಗ್ತಾ ಇದ್ದೆ.ವರ್ಷದಲ್ಲಿ ಒಂದೆರಡು ಸಾರಿ ಅಪ್ಪ ಬರೋನು. ಬೆಳಿಗ್ಗೆ ಬಸ್ಸಿಗೆ ಬಂದು ಸಾಯಂಕಾಲದ ಹೊತ್ತಿಗೆ ವಾಪಸು ಹೋಗಿಬಿಡೋನು. ಯಾವತ್ತಿಗು ಅವನು ನನ್ನ ಅಷ್ಟೇನು ಪ್ರೀತಿಯಿಂದ ಮಾತಾಡಿಸ್ತಾ ಇರಲಿಲ್ಲ.ಚೆನ್ನಾಗಿದಿಯಾ ಅಂತ ಕೇಳಿ ತಂದ ಒಂದಷ್ಟು ಮಿಠಾಯಿ ಕೈಗಿಟ್ಟರೆ ಅವನ ಕೆಲಸ ಮುಗೀತು ಅಂತಹೊರಟುಹೋಗೋನು. ಹಾಗಾಗಿ ನನಗೂ ಅವನ ಮೇಲೆ ಅಪ್ಪ ಅನ್ನೋ ಮಮಕಾರ ಬೆಳಿಲೇ ಇಲ್ಲ.

ಹಂಗೇ ಒಂದೆರಡು ವರ್ಷ ಆದಮೇಲೆ ಒಂದು ಸಾರಿ ಬಂದಾಗ ಒಬ್ಬ ಹೆಂಗಸನ್ನು ಕರೆದುಕೊಂಡು ಬಂದಿದ್ದ. ಅವನು ಅದಾಗಲೆ ಮತ್ತೆ ಮದುವೆಯಾಗಿದ್ದ. ಅವನು ಇವಳೇ ನಿನ್ನ ಚಿಕ್ಕಮ್ಮ ಅಂತ ಹೇಳಿದ್ದ. ಅವನು ಹಾಗೆ ಮದುವೆಯಾಗಿದ್ದು ಅಜ್ಜ ಅಜ್ಜಿಯರಿಗೆ ಇಷ್ಟವಾಗದಿದ್ದರು ಪಾಪ ಒಂಟಿ ಗಂಡಸು ಒಂದು ಹೆಣ್ಣು ದಿಕ್ಕು ಬೇಕಲ್ವ ಅಂತ ಅವರವರೇ ಮಾತಾಡಿಕೊಂಡು ಸಮಾದಾನ ಮಾಡಿಕೊಂಡಿದ್ದರು. ಅದಾಗಿ ವರ್ಷಕ್ಕೆ ನಾನು ಮೈನೆರೆದೆ. ಪೇಟೇಲಿದ್ದ ಅಪ್ಪನಿಗೆ ಅಜ್ಜ ಅಜ್ಜಿ ಹೇಳಿ ಕಳಿಸಿದರು. ಒಂಭತ್ತನೇ ದಿನದ ಆರತಿ ಶಾಸ್ತ್ರದ ದಿನ ಅಪ್ಪ ಮತ್ತೆ ಚಿಕ್ಕಮ್ಮ ಬಂದರು. ಬರೋವಾಗ ನನಗೆ ಹೊಸ ಬಟ್ಟೆ, ಹೂವು, ಹಣ್ಣು ಎಲ್ಲ ತಂದಿದ್ದರು. ಅಷ್ಟು ವರ್ಷದಲ್ಲಿ ಮೊದಲ ಬಾರಿಗೆ ಅಪ್ಪ ನನಗಾಗಿ ಅಷ್ಟು ಖರ್ಚು ಮಾಡಿದ್ದ. ಅವನೀಗ ಮೊದಲಿನಂತಿರಲಿಲ್ಲ. ಬದಲಿಗೆ ಸಾಕಷ್ಟು ದುಡ್ಡು ಮಾಡಿದವನ ಹಾಗೆ ಕಾಣ್ತಿದ್ದ. ಚಿಕ್ಕಮ್ಮನ ಮೈಮೇಲೂ ಒಡವೆಗಳು ತುಂಬಾ ಇದ್ದವು ಅವತ್ತು ಸಾಯಂಕಾಲ ಶಾಸ್ತ್ರ ಮುಗಿಸಿ ಮಾರನೇ ದಿನ ಬೆಳಿಗ್ಗೆ ಅವರು ಹೊರಟು ಹೋದರು. ಅದಾಗಿ ಒಂದು ವರ್ಷದ ತನಕ, ತಿಂಗಳು ಎರಡು ತಿಂಗಳಿಗೊಮ್ಮೆ ಚಿಕ್ಕಮ್ಮ ಮಾತ್ರ ಬಂದು ಹೋಗಿ ಮಾಡೋದಿಕ್ಕೆ ಶುರು ಮಾಡಿದಳು. ಕೇಳಿದರೆ ಅಪ್ಪನಿಗೆ ಹುಷಾರಿಲ್ಲ. ಹಾಗಾಗಿ ಅವನಿಗೆ ಇಷ್ಟು ದೂರ ಬಸ್ಸಲ್ಲಿ ಬರೋಕೆ ಕಷ್ಟವಾಗುತ್ತೆ ಅಂತ ಹೇಳೋಳು. ಕೊನೆಗೆ ನಾನು ಮೈನೆರೆದ ಎರಡನೇ ವರ್ಷಕ್ಕೆ ಅಪ್ಪ ಸತ್ತು ಹೋದ ಸುದ್ದಿ ಬಂತು. ನಾವು ಪೇಟೆಗೆ ಹೋಗೊ ಅಷ್ಟರಲ್ಲಿ ಮಣ್ಣಾಗಿಬಿಟ್ಟಿತ್ತು. ಆ ದು:ಖದಲ್ಲೂ ಚಿಕ್ಕಮ್ಮ ನನ್ನ ಮದುವೆ ಮಾತಾಡಿದಳು. ನಿಮ್ಮ ಅಳಿಯ ಇಲ್ಲ ಅಂತ ಕೊರಗಬೇಡಿ ಇವಳು ನನ್ನ ಮಗಳಿದ್ದ ಹಾಗೇನೆ, ಇವಳಿಗೊಂದು ಗಂಡು ನೋಡಿ ಮದುವೆ ಮಾಡೋದು ನನ್ನಕರ್ತವ್ಯ, ನೀವೇನು ಚಿಂತೆ ಮಾಡಬೇಡಿ ಅಂತೆಲ್ಲ ಹೇಳಿದಳು. ಮೂರನೆ ದಿನದ ಕಾರ್ಯ ಮುಗಿಸಿ ನಾವು ಊರಿಗೆ ಹೊರಟಾಗ ಮಾತ್ರ ಇವಳು ಇಲ್ಲೇ ಇರಲಿ, ಪೇಟೇಲಿದ್ದರೆ ನಾಲ್ಕು ಗಂಡುಗಳಿಗೆ ಇವಳನ್ನು ತೋರಿಸಬಹುದು. ಯಾರಾದರು ಒಳ್ಳೆ ಹುಡುಗ ಸಿಕ್ಕರೆ ಮದುವೆ ಮಾಡೋಣ. ಇವಳನ್ನು ಸದ್ಯಕ್ಕೆ ಇಲ್ಲೇ ಬಿಟ್ಟು ಹೋಗಿ ಅಂತ ಅಜ್ಜ ಅಜ್ಜಿನ ಕೇಳಿದಾಗ ಪಾಪ ಅವರಿಗೂ ಸರಿಯೆನಿಸಿರಬೇಕು. ಮಲತಾಯಿ ಆದೋಳೇ ಇಷ್ಟು ಪ್ರೀತಿ ತೋರಿಸ್ತಿರಬೇಕಾದ್ರೆ ನಮ್ಮ ಮೊಮ್ಮಗಳು ತುಂಬಾ ಅದೃಷ್ಟವಂತೆ ಅನ್ಕೊಂಡು ನಾವು ಆಗಾಗ ಬಂದು ನೋಡ್ಕೊಂಡು ಹೋಗ್ತೀವಿ ಅಂತ ಹೇಳಿ ನನಗೊಂದಿಷ್ಟು ಬುದ್ದಿಮಾತು ಹೇಳಿ ಹಳ್ಳಿಗೆ ವಾಪಾಸು ಹೋದರು. 

ಚಿಕ್ಕಮ್ಮ ಈಗಿದ್ದಮನೆ ತುಂಬಾ ದೊಡ್ಡದಾಗಿ, ಎರಡು ಮೂರು ರೂಮುಗಳಿದ್ದವು. ಇಷ್ಟು ವರ್ಷಗಳಲ್ಲಿ ಅಪ್ಪ ಸಾಕಷ್ಟು ದುಡಿಮೆ ಮಾಡಿದ್ದಾನೆ ಅನಿಸ್ತು. ಚಿಕ್ಕಮ್ಮನಿಗೆ ಹತ್ತುವರ್ಷದ ಮಗಳೊಬ್ಬಳಿದ್ದು, ಅವಳು ಬೇರೆ ಊರಿನ ಹಾಸ್ಟೆಲ್ಲಿನಲ್ಲಿದ್ದಾಳೆ ಅಂತ ಅಲ್ಲಿ ಹೋದ ಮೇಲೇನೆ ನನಗೆ ಗೊತ್ತಾಗಿದ್ದು. ಹೀಗೆ ಒಂದಷ್ಟು ವಾರ ಅಲ್ಲಿದ್ದಾಗ ನನಗ್ಯಾಕೊ ಆ ಮನೆಯ ವ್ಯವಹಾರಗಳು ವಿಚಿತ್ರ ಅನಿಸತೊಡಗಿತು. ಬೆಳಿಗ್ಗೆ ತಿಂಡಿ ತಿಂದಮೇಲೆ ನಾನು ಮನೆಯ ಹಿಂದಿದ್ದ ಕೊನೆ ರೂಮಲ್ಲೇ ಇರಬೇಕು. ಏನಾದ್ರು ಬೇಕಿದ್ದರೆ ಮಾತ್ರ ಹೊರಗೆ ಬರಬೇಕು. ಅದು ಇದು ವ್ಯವಹಾರ ಅಂತ ಗಂಡಸರು ಬರ್ತಿರ್ತಾರೆ, ನೀನು ಅವರೆದುರಲ್ಲಿ ಓಡಾಡೋದು ಸರಿಯಲ್ಲ ಅಂತ ಚಿಕ್ಕಮ್ಮ ಹೇಳಿದಾಗ ಅದರಲ್ಲಿ ನಂಗೇನು ತಪ್ಪು ಕಂಡಿರಲಿಲ್ಲ. ಆದರೆ ಹಾಗೆ ಬಂದ ಗಂಡಸರು ಮನೆಯ ಬೇರೆ ರೂಮುಗಳಿಗೆ ಹೋಗಿ ಬಾಗಿಲು ಹಾಕಿಕೊಂಡು ಗಂಟೆಗಟ್ಟಲೆ ಇರೋದು ನನಗೆ ಆಶ್ಚರ್ಯವಾಗುತ್ತಿತ್ತು. ಬರಿ ಗಂಡಸರಲ್ಲದೆ ಬಹಳ ಹುಡುಗಿಯರು ಹೆಂಗಸರು ಸಹ ಆ ಮನೆಗೆ ಬರ್ತಿದ್ದರು. ಹಾಗೆ ಬಂದ ಹೆಂಗಸರ ಜೊತೆ ಗಂಡಸರು ರೂಮಿಗೆ ಹೋಗೋದನ್ನು ನೋಡಿದ ಮೇಲೆ ಮನಸ್ಸಿಗೊಂದು ಥರಾ ಕಸಿವಿಸಿ ಆಗತೊಡಗಿತು. ಗಂಡುಹೆಣ್ಣಿನ ಸಂಬಂದವಾಗಲಿ, ಈ ಸೆಕ್ಸ್ ಆಗಲಿ ಗೊತ್ತಾಗದಷ್ಟು ನಾನು ದಡ್ಡಿಯಾಗಿದ್ದೆ, ಈ ನಡುವೆ ಆಗಾಗ ನನ್ನನ್ನ ಮಾತನಾಡಿಸುತ್ತಿದ್ದ ಚಿಕ್ಕಮ್ಮ ಚೆನ್ನಾಗೇ ನೋಡಿಕೊಳ್ತಾ ಇದ್ದಳು. ನಾನೂ ಅವಳಿಗೆ ಬೇಜಾರಾಗದಂತೆ ಯಾವ ಪ್ರಶ್ನೆಗಳನ್ನು ಕೇಳದೆ ಇರತೊಡಗಿದ್ದೆ. ಏನೇ ಆದರು ನಾನು ವಯಸ್ಸಿಗೆ ಬಂದಿದ್ದ ಹುಡುಗಿ ಅಲ್ವಾ ನಿದಾನಾಗಿ ಅಲ್ಲೇನು ನಡೀತಾ ಇದೆ ಅನ್ನೋದು ಅರ್ಥವಾಗತೊಡಗಿತು.

ಎರಡು ತಿಂಗಳಾದ ಮೇಲೊಂದು ದಿನ ನನ್ನ ರೂಮಿಗೆ ಬಂದ ಚಿಕ್ಕಮ್ಮ ನೋಡು ಇವತ್ತು ಮದ್ಯಾಹ್ನ ನಿನ್ನ ನೋಡೋಕೆ ಒಬ್ಬ ಹುಡುಗ ಬರ್ತಾನೆ. ಒಳ್ಳೆ ಕೆಲಸದಲ್ಲಿದ್ದಾನೆ. ನೀನು ಮದ್ಯಾಹ್ನದ ಹೊತ್ತಿಗೆ ರೆಡಿಯಾಗಿರು. ನೀನು ಹೊರಗೇನು ಬರೋದು ಬೇಡ. ನಿನ್ನ ರೂಮಿಗೆ ಅವನನ್ನು ಕರಕೊಂಡು ಬರ್ತೀನಿ. ನಾಚಿಕೆ ಪಡದೆ ಅವನ ಜೊತೆ ಮಾತಾಡು. ಅವನು ಹೇಳಿದ ಹಾಗೆ ಕೇಳು. ಅವನು ಒಪ್ಪಿದರೆ ನಿನ್ನ ಪುಣ್ಯ ಅಂತ ಹೇಳಿ ಹೊರಟು ಹೋದಳು. ಮದುವೆ ಅನ್ನೋ ಮಾತು ಕೇಳಿ ನನಗೂ ಸಂತೋಷವಾಯ್ತು. ಸರಿ ಅಂತ ಎದ್ದು ಹನ್ನೆರಡು ಗಂಟೆಗೆಲ್ಲ ಸ್ನಾನ ಮಾಡಿ ಕೂತೆ. ಮತ್ತೆ ಬಂದ ಚಿಕ್ಕಮ್ಮ ನಾನು ಹಾಕಿದ್ದ ಲಂಗ ಜಾಕೀಟು ನೋಡಿ ಥೂ ಇದೇನೆ ಇದನ್ನು ಹಾಕಿಕೊಂಡಿದಿಯಾ ಅಂತೇಳಿ ಒಂದು ಒಳ್ಳೆ ಸೀರೆತಂದು ಕೊಟ್ಟಳು. ನನಗೆ ಉಡೋದಿಕ್ಕೆ ಬರಲ್ಲ ಅಂದಾಗ ಅವಳೇ ಉಡಿಸಿ, ನೋಡು ಹುಡುಗ ತುಂಬಾ ಒಳ್ಳೇನು. ಅವನೇನೇ ಕೇಳಿದರು ಸರಿಯಾಗಿ ಉತ್ತರ ಕೊಡು ಪ್ರೀತಿಯಿಂದ ಮಾತಾಡು. ಹಳ್ಳಿ ಹುಡುಗಿತರಾ ನಾಚಿಕೆ ಪಡಬೇಡ ಅಂತ ಹೇಳಿ ಹೋದಳು. ಅದಾಗಿ ಒಂದು ಗಂಟೆ ಆದ ಮೇಲೆ ಸುಮಾರು ಸುಮಾರು ಮುವತ್ತು ವರ್ಷದ ಒಬ್ಬ ಗಂಡಸು ಒಳಗೆ ಬಂದ. ಬಂದವನು ಮಂಚದ ಮೇಲೆ ಕೂತುಕೊಂಡು ಹೆಸರು ಕೇಳಿದ. ನಾನು ಹೇಳಿದಾಗ ಬಾ ಇಲ್ಲೆ ಮಂಚದ ಮೇಲೆ ಕೂರು ಅಂತ ತನ್ನ ಪಕ್ಕ ಕೂರುವಂತೆ ಹೇಳಿದ. ಚಿಕ್ಕಮ್ಮ ಹೇಳಿದ ಮಾತಿನಂತೆ ನಾನು ಅವನ ಪಕ್ಕ ಕೂತುಕೊಂಡೆ. ಅವನು ಅದು ಇದು ಮಾತಾಡುತ್ತ ನನ್ನ ಹೆಗಲ ಮೇಲೆ ಕೈ ಹಾಕಿದ. ನನಗೆ ಒಂಥರಾ ನಾಚಿಕೆ ಆಗಿ ಅವನ ಕೈ ತೆಗಿಯೋಕೆ ಹೇಳಿದೆ. ಅದಕ್ಕವನು ನಿಮ್ಮ ಚಿಕ್ಕಮ್ಮ ನೀನು ತುಂಬಾ ಒಳ್ಳೆ ಹುಡುಗಿ ಅಂತ ಹೇಳಿದಾಳೆ ಅಂತ ಹೇಳುತ್ತಾ ನನ್ನ ತಬ್ಬಿಕೊಂಡ. ನಾನು ಅವನಿಂದ ಬಿಡಿಸಿಕೊಳ್ಳಲು ಕೊಸರಾಡಿದೆ. ಆದರವನ ಕೈನಿಂದ ತಪ್ಪಿಸಿಕೊಳ್ಳಲಾಗಲಿಲ್ಲ. ಏನಾಗುತ್ತಿದೆ ಅಂತ ನನಗರ್ಥವಾಗುವಷ್ಟರಲ್ಲಿ ನನ್ನೆಲ್ಲ ಬಟ್ಟೆಗಳ್ನು ಬಿಚ್ಚಿ ಬೆತ್ತಲು ಮಾಡಿಬಿಟಿದ್ದ. ಜೋರಾಗಿಕೂಗಲು ಚಿಕ್ಕಮ್ಮನ ಭಯ. ಹಾಗಾಗಿ ಇದೆಲ್ಲ ಬೇಡ ಅಂತೇಳಿ ದೂರ ಹೋಗಲು ನೋಡಿದೆ. ಆದರವನು ಬಲವಂತದಿಂದ ನನ್ನನ್ನು ಹಾಳು ಮಾಡಿಬಿಟ್ಟ. ರಾತ್ರಿ ಎಂಟುಗಂಟೆಯವರೆಗು ಅವನು ರೂಮಿಂದ ಆಚೆ ಹೋಗದೆ ನನ್ನ ಹರಿದು ಮುಕ್ಕಿಬಿಟ್ಟ. ರಾತ್ರಿ ಹೋಗುವಾಗ ಮತ್ತೆ ನಾಳೆ ಬರುತ್ತೇನೆ ಅಂತೇಳಿ ಹೋದ. ನಾನು ಏನೋ ಕಳೆದುಕೊಂಡಂತೆ ಅಳುತ್ತಾ ಕೂತೆ. ಆಮೇಲೆ ಬಂದ ಚಿಕ್ಕಮ್ಮ ನನ್ನನ್ನು ಸಮಾದಾನ ಮಾಡುತ್ತಾ ಅವನಿಗೆ ತುಂಬ ಅವಸರ ನೋಡು, ಮದುವೆಗೆ ಮುಂಚೇನೆ ಇದೆಲ್ಲ ಮಾಡಿಬಿಟ್ಟಿದ್ದಾನೆ. ಹೋಗಲಿ ಬಿಡು ಅಳಬೇಡ. ಸಮಾದಾನ ಮಾಡಿಕೊ ಅಂದು ಅಲ್ಲಿಗೇ ಊಟ ತಂದು ಕೊಟ್ಟಳು. ಮೊದಲ ದಿನವೇ ಅವನು ನನ್ನ ಹಿಂಡಿ ಹಿಪ್ಪೆಮಾಡಿದ್ದ. ಮೈಯೆಲ್ಲ ನೋವಾಗಿದ್ದು ಅವನು ಮದುವೆಯಾಗುವ ಹುಡುಗ ಅಂತ ಅನ್ನಿಸಿ ಒಂಥರಾ ಸಮಾದಾನವೂ ಆಗಿತ್ತು.

ಮಾರನೇ ದಿನ ರಾತ್ರಿಯಾದರು ಅವನು ಮತ್ತೆ ಬರಲಿಲ್ಲ. ಯಾಕೊ ಗೊತ್ತಿಲ್ಲ ಅವನು ಬರಲಿಲ್ಲವೆಂಬುದು ಮನಸ್ಸಿಗೆ ಬೇಜಾರೆನಿಸಿತು. ಅದಾಗಿ ಮೂರನೆ ದಿನಕ್ಕೆ ನನ್ನ ರೂಮಿಗೆ ಬಂದ ಚಿಕ್ಕಮ್ಮ ರಾತ್ರಿ ಎಂಟುಗಂಟೆ ಹೊತ್ತಿಗೆ ರೆಡಿಯಾಗಿರು ಹುಡುಗ ಬರ್ತಾನೆ ಅಂತ ಹೇಳಿದಾಗ ನಾನು ಅವನೇ ಬರ್ತಾನೆ ಅಂತ ಆಸೆಯಿಂದ ಕಾಯ್ತಿದ್ದೆ. ಆದರೆ ರಾತ್ರಿ ಬೇರೊಬ್ಬ ಗಂಡಸು ಬಂದು ನನ್ನ ರೂಮಿನ ಬಾಗಿಲು ಹಾಕಿದಾಗ ಮಾತ್ರ ದಿಗ್ಬ್ರಮೆಯಾಯಿತು. ಬಂದವನು ನನ್ನ ಮೇಲೆರಗಿದಾಗ ನಾನು ವಿರೋಧಿಸಿ ಕೂಗಾಡಿದಾಗ ರೂಮಿಗೆ ಬಂದ ಚಿಕ್ಕಮ್ಮ ಬಾಯಿ ಮಚ್ಚಿಕೊಂಡಿರೆ ಸಾಕು ಅಂತ ನನ್ನ ಕೆನ್ನಗೆ ಎರಡು ಹೊಡೆದಳು. ಆ ಮೇಲೆ ನಾನು ಏನೂ ಮಾಡುವ ಸ್ಥಿತಿಯಲ್ಲಿರಲಿಲ್ಲ. ಅವತ್ತು ಎರಡನೆಯ ವ್ಯಕ್ತಿ ನನ್ನನ್ನು ಉಪಯೋಗಿಸಿಕೊಂಡ. ಅವತ್ತು ಇಡೀರಾತ್ರಿ ನಾನು ಊಟ ಮಾಡದೆ ಅಳುತ್ತಾ ಮಲಗಿದೆ. ಆದರೆ ಚಿಕ್ಕಮ್ಮ ನನ್ನ ಅಳುವಿಗೆಲ್ಲ ಕೇರ್ ಮಾಡೊ ಹೆಂಗಸಾಗಿರಲಿಲ್ಲ. ನಾನಾ ಹಿಂಸೆಗಳನ್ನು ಕೊಟ್ಟು, ಉಪವಾಸ ಹಾಕಿ ಅವಳ ಮಾತಿಗೆ ನಾನು ಹೂ ಅನ್ನುವಂತೆ ಮಾಡಿಬಿಟ್ಟಳು. ಆಮೇಲಾಮೇಲೆ ಅದು ಮಾಮೂಲಿಯಾಗತೊಡಗಿತು. ಎರಡು ಮೂರು ದಿನಕ್ಕೊಮೆ ಬರುತ್ತಿದ್ದವರು ಆಮೇಲೆ ದಿನಾ ಬರತೊಡಗಿದ್ದರು. ಒಟ್ಟಿನಲ್ಲಿ ಒಂದೇ ತಿಂಗಳಿಗೆ ನಾನು ಚಿಕ್ಕಮ್ಮನ ಅಡ್ಡೆಯೊಳಗೆ ಸೂಳೆಯಾಗಿ ಬದಲಾಗಿಬಿಟ್ಟಿದ್ದೆ. ಈ ನಡುವೆ ಒಂದು ಸಾರಿ ಅಜ್ಜ ಒಬ್ಬನೇ ಹಳ್ಳಿಯಿಂದ ನನ್ನ ನೋಡಲು ಬಂದಿದ್ದ. ಅವನು ಬಂದ ತಕ್ಷಣ ಚಿಕ್ಕಮ್ಮ ಏನೂ ಹೇಳಬಾರದೆಂಬಂತೆ ನನಗೆ ಪರೋಕ್ಷ ಎಚ್ಚರಿಕೆ ಕೊಟ್ಟಿದ್ದಳು. ಬಂದ ಅಜ್ಜನಿಗೆ ನಾನು ಚೆನ್ನಾಗಿರುವುದಾಗಿ ಹೇಳಿ ಕಳಿಸಿಕೊಟ್ಟೆ. ಅವನು ಹೋಗುವಾಗ ನನಗೆ ಗಿರಾಕಿಗಳು ಕೊಟ್ಟಿದ್ದ ಒಂದಿಷ್ಟು ದುಡ್ಡನ್ನೂ ಕೊಟ್ಟು ಕಳಿಸಿದೆ. ಇದ್ಯಾವ ದುಡ್ಡು ಅಂತ ಕೇಳಿದವನಿಗೆ ಚಿಕ್ಕಮ್ಮ ಕೊಟ್ಟಿದ್ದು ಅಂತೇಳಿದೆ.

ಮತ್ಯಾವತ್ತು ಚಿಕ್ಕಮ್ಮ ನನ್ನ ಮದುವೆಯ ಮಾತೆತ್ತಲಿಲ್ಲ. ನನಗೂ ಪರಿಸ್ಥಿತಿ ಅರ್ಥವಾಗಿತ್ತು. ನಿದಾನಕ್ಕೆ ಅವಳೊಂದಿಗೆ ಹೊಂದಿಕೊಂಡು ಬಿಟ್ಟೆ. ಹೀಗೇ ಮೂರು ವರ್ಷಗಳು ಕಳೆದು ಹೋದವು. ಹಾಸ್ಟೆಲ್ಲಿನಲಿದ್ದ ಚಿಕ್ಕಮ್ಮನ ಮಗಳು ವರ್ಷಕ್ಕೊಂದು ಸಾರಿ ಬಂದಾಗ ಮನೆಯ ಎಲ್ಲ ವ್ಯವಹಾರಗಳು ಬಂದ್ ಆಗುತ್ತಿದ್ದವು. ಆದರೆ ಆಕೆಗೆ ಇಲ್ಲಿಯ ಎಲ್ಲವೂ ಗೊತ್ತಿದ್ದವು ಅಂತ ಅವಳು ನನ್ನ ಹತ್ತಿರ ಮಾತನಾಡುವಾಗ ನನಗೆ ಗೊತ್ತಾಗುತ್ತಿತ್ತು. ಹೀಗಾಗಿಯೇ ಅವಳು ರಜಕ್ಕೆ ಅಂತ ಬಂದರೂ ಎರಡು ದಿನದ ಮೇಲೆ ಇರುತ್ತಿರಲಿಲ್ಲ. ಬರಬರುತ್ತ ಚಿಕ್ಕಮ್ಮನಿಗೆ ನನ್ನ ಮೇಲೆ ನಂಬಿಕೆ ಬರುತ್ತಿದ್ದಂತೆ ತಿಂಗಳಿಗೊಂದು ಸರಿ ಹಳ್ಳಿಗೆ ಹೋಗಿ ಅಜ್ಜ ಅಜ್ಜಿಯರನ್ನು ಮಾತಾಡಿಸಿಕೊಂಡು ಬರುತ್ತಿದ್ದೆ. ಅವರು ಮದುವೆಯ ಮಾತು ಎತ್ತಿದಾಗೆಲ್ಲ ಏನಾದರು ಒಂದು ಕಥೆ ಕಟ್ಟಿ ಮಾತು ಬದಲಾಯಿಸುತ್ತಿದ್ದೆ. ಅವರ ಜೀವನಕ್ಕಾಗುವಷ್ಟು ದುಡ್ಡನ್ನು ಕೊಟ್ಟು ಬರುತ್ತಿದ್ದೆ. 

ದಿನಗಳು ಉರುಳುತ್ತಾ ಹೋದವು ಈ ನಡುವೆ ಅಜ್ಜ ಅಜ್ಜಿ ಇಬ್ಬರು ತೀರಿಕೊಂಡರು. ಚಿಕ್ಕಮ್ಮನ ಮಗಳ ಓದು ಮುಗಿದು ಕಾಲೇಜಲ್ಲೇ ಯಾರನ್ನೊ ಪ್ರೀತಿಸಿ ಮದುವೆಯಾಗಿಬಿಟ್ಟಳು. ಮತ್ಯಾವತ್ತು ಆಕೆ ಮನೆ ಕಡೆ ತಲೆ ಹಾಕಲಿಲ್ಲ.. ಮೊದಲೆ ಕುಡಿಯುತ್ತಿದ್ದ ಚಿಕ್ಕಮ್ಮ ಮಗಳು ಕೈಬಿಟ್ಟು ಹೋದ ಮೇಲೆ ಬೆಳಿಗ್ಗೆ ಬೆಳಿಗ್ಗೆಯೇ ಕುಡಿಯೋಕೆ ಶುರು ಮಾಡಿದ್ದಳು. ಮಗಳ ಮದುವೆಯಾದ ಎರಡೇ ವರ್ಷಕ್ಕೆ ಚಿಕ್ಕಮ್ಮನಿಗೆ ಲಕ್ವಾ ಹೊಡೆದು ಹಾಸಿಗೆ ಹಿಡಿದಳು. ಮಲಗಿದಲ್ಲೆ ಮಲಗಿರುತ್ತಿದ್ದವಳು ಮನೆಯ ಎಲ್ಲ ವ್ಯವಹಾರವನ್ನೂ ನನಗೆ ಕೊಟ್ಟಿದ್ದಳು. ಚಿಕ್ಕಮ್ಮನ ದಂದೆಯ ವಾರಸುದಾರಳಾಗಿ ನಾನು ಗಿರಾಕಿಗಳನ್ನು ಸಂಬಾಳಿಸುವ, ಹೊಸ ಹುಡುಗಿಯರನ್ನು ಹೊಂದಿಸುವ ಕೆಲಸವನ್ನು ಮಾಡಬೇಕಾಗಿತ್ತು. ಇದರ ನಡುವೆ ಆಗಾಗ ಕಾಟ ಕೊಡುತ್ತಿದ್ದ ರೌಡಿಗಳನ್ನು, ಸ್ಥಳೀಯ ರಾಜಕಾರಣಿಗಳನ್ನು ಮಾಮೂಲಿ ಕೊಟ್ಟು ಸಮಾದಾನ ಮಾಡಬೇಕಾಗಿತ್ತು. ಇನ್ನು ಪೋಲಿಸರಿಗೆ ತಿಂಗಳು ತಿಂಗಳು ಮಾಮೂಲಿಕೊಟ್ಟರೂ ಅವಾಗವಾಗ ರೇಡು ಮಾಡುವುದನ್ನು ತಪ್ಪಿಸುತ್ತಿರಲಿಲ್ಲ. ಆಗೆಲ್ಲ ಪೋಲಿಸ್ ಸ್ಟೇಷನ್ನಿಗೆ ಹೋಗಿ ಅವರಿಗೆ ದುಡ್ಡು ಕೊಡಬೇಕಾಗಿತ್ತು. ಹೀಗೆ ಮನೆಯ ಎಲ್ಲ ವ್ಯವಹಾರಗಳನ್ನು ಕೈಗೆ ತೆಗೆದುಕೊಂಡ ಮೇಲೆ ತೀರಾ ಸುಸ್ತೆನಿಸುತ್ತಿತ್ತು. ಬರೋಬರಿ 21 ವರ್ಷ ಇದನ್ನೆಲ್ಲ ನಿಬಾಯಿಸಿದೆ. ಅಂದರೆ 16ನೇ ವಯಸ್ಸಿಗೆ ಶುರುವಾದ ಈ ಕಸುಬು ಮತ್ತು ಮನೆ ವ್ಯವಹಾರವನ್ನು ನನಗೆ ಮುವತ್ತೆಂಟು ಮುವತ್ತೊಂಭತ್ತು ವರ್ಷಗಳಾಗುವವರೆಗು ನೋಡಿಕೊಂಡೆ.

ನರಳಿ ನರಳಿ ಚಿಕ್ಕಮ್ಮ ಒಂದು ದಿನ ಸತ್ತು ಹೋದಳು. ಆದರೆ ಸಾಯುವ ಮುಂಚೆ ನಾವಿದ್ದ ಮನೆಯನ್ನು ತನ್ನ ಮಗಳ ಹೆಸರಿಗೆ ಬರೆದಿಟ್ಟು ಹೋಗಿದ್ದಳು. ತಾಯಿ ಸತ್ತಾಗಲು ಬರದ ಮಗಳು ಮನೆಯ ವಿಚಾರ ಗೊತ್ತದ ಕೂಡಲೆ ಬಂದು ನೀನಿದನ್ನು ಈ ಕೂಡಲೆ ಖಾಲಿಮಾಡಿ ಹೋಗು ನಾನಿದನ್ನು ಮಾರಬೇಕೆಂದು ಹಟ ಹಿಡಿದು ಕುಂತಳು. ಈ ವಿಷಯವಾಗಿ ನನಗೂ ಅವಳಿಗೂ ಜಗಳವಾಗಿ ಪೋಲಿಸ್ ಸ್ಟೇಷನ್ ಮೆಟ್ಟಿಲೂ ಹತ್ತಿದೆವು. ನಾನವಳಿಗೆ ಮನೆ ಕೊಡಲ್ಲ ಅಂತ ಹೇಳಿರಲಿಲ್ಲ. ಬದಲಿಗೆ ಬೇಕಾದರೆ ಬಾಡಿಗೆ ಕೊಡುತ್ತೇನೆ. ಮಾರಿದ ಮೇಲೆ ಅದನ್ನು ತಗೊಂಡೋರನ್ನು ಕೇಳಿಕೊಂಡು, ಅವರು ಹು ಅಂದರೆ ಮುಂದುವರೆಯುತ್ತೇನೆ ಇಲ್ಲವೆಂದರೆ ಬೇರೆ ಕಡೆ ಹೋಗುತ್ತೇನೆ ಅಂತ ಮಾತ್ರ ಹೇಳಿದ್ದೆ. ಆದರವಳಿಗೆ ನನ್ನ ಮೇಲೆ ಅದ್ಯಾವ ಸಿಟ್ಟೊ ಕಾಣೆ ನಿಂತ ಕಾಲಲ್ಲೇ ಮನೆ ಬಿಟ್ಟು ಹೋಗಲು ಹೇಳಿದಳು. ಪೋಲಿಸರು ಸಹ ಅವಳ ಪರವಾಗೇ ನಿಂತು ನನಗೆ ಹೆದರಿಸತೊಡಗಿದ್ದರು. ಆಯಿತು ಅಂತೇಳಿ ಎರಡು ತಿಂಗಳ ಟೈಮು ತಗೊಂಡೆ. 

ಪುಸ್ತಕ ಖರೀದಿಸಿ ವೆಬ್ ಸೈಟ್ ಬೆಂಬಲಿಸಿ! ಇಲ್ಲಿ ಕ್ಲಿಕ್ಕಿಸಿ
ಆದರೆ ವಿಧಿಯಾಟ ನೋಡಿ ಅವತ್ತೊಂದು ದಿನ ರಾತ್ರಿ ನನ್ನ ಮನೆಯಲ್ಲಿದ್ದ ಗಿರಾಕಿಗಳ ನಡುವೆ ಅದೇನೊ ಗಲಾಟೆಯಾಗಿ ಬಂದಿದ್ದ ಗಿರಾಕಿಯೊಬ್ಬ ಇನ್ನೊಬ್ಬನನ್ನು ಚಾಕುವಿನಿಂದ ತಿವಿದು ಸಾಯಿಸಿಬಿಟ್ಟ. ಇನ್ನೇನಾಗುತ್ತೆ? ಪೋಲಿಸರು ಬಂದು ನಮ್ಮನ್ನೆಲ್ಲ ಅರೆಸ್ಟ್ ಮಾಡಿದರು. ತಿಂಗಳುಗಟ್ಟಲೇ ಕೇಸು ನಡೆದು ನನಗೆ ಮೂರೂವರೆ ವರ್ಷಗಳ ಶಿಕ್ಷೆಯಾಯಿತು. 

ಶಿಕ್ಷೆಮಗಿಸಿಕೊಂಡು ಹೊರಗೆ ಬಂದಾಗ ನನಗೆ ಅಂತ ಯಾರೂ ಇರಲಿಲ್ಲ, ಏನೂ ಇರಲಿಲ್ಲ. ಇದ್ದಿದ್ದು ಹಳ್ಳಿಯಲಿದ್ದ ಅಜ್ಜನ ಒಂದು ಕರಿ ಹೆಂಚಿನ ಮುರುಕಲು ಮನೆ ಮತ್ತು ಅರ್ದ ಏಕರೆ ಹೊಲ. ಸರಿ, ಇನ್ನೇನು ವಯಸ್ಸಾಗುತ್ತಾ ಬಂತು ಅಂತ ಹಳ್ಳಿಗೇ ಹೋಗಿಬಿಡೋಣ ಅಂತ ಹಳ್ಳಿಗೆಹೋದೆ. ಪಾಳುಬಿದ್ದ ಮನೆಯನ್ನೆ ಒಂದಿಷ್ಟು ರಿಪೇರಿ ಮಾಡಿಕೊಂಡು ಇರೋಣವೆಂದರೆ ಹಳ್ಳಿಯವರಿಗೆಲ್ಲ ನನ್ನ ಕಥೆ ಗೊತ್ತಾಗಿತ್ತು. ಯಾರೂ ಅದಕ್ಕೆ ಅವಕಾಶ ಕೊಡಲಿಲ್ಲ. ಇನ್ನು ಹೊಲವನ್ನು ಗುತ್ತಿಗೆ ಮಾಡುತ್ತಿದ್ದವನೇ ಯಾವಾಗಲೊ ಅಜ್ಜನಿಂದ ಅದನ್ನು ತನ್ನ ಹೆಸರಿಗೆ ಬರೆಸಿಕೊಂಡಿದ್ದ. ಹಾಗಾಗಿ ಆ ಹಳ್ಳಿಯು ನನಗೆ ಇಲ್ಲವಾಯಿತು. ಹಾಗಾಗಿ ಮತ್ತೆ ಅದೇ ಹಳೆಪೇಟೆಗೆ ಬಂದೆ. ಅಲ್ಲಿ ಎಲ್ಲವೂ ಬದಲಾಗಿ ಹೋಗಿತ್ತು. ದಂದೆಗೆ ಹೊಸ ಹೊಸ ಹೆಂಗಸರು ಇಳಿದಿದ್ದರು. ವಿದಿಯಿಲ್ಲದೆ ಅಂತಹ ದಂದೆ ಮಾಡುವ ಒಬ್ಬ ಹೆಂಗಸಿನ ಮನೆಗೆ ಹೋದೆ. ಅವಳಿಗೆ ನನ್ನ ಕತೆಯೆಲ್ಲ ಹೇಳಿ ಆಶ್ರಯ ಕೇಳಿದೆ. ಆಯಿತೆಂದ ಅವಳು ತನ್ನ ಮನೆಕೆಲಸ ಮಾಡಲು ನನ್ನನ್ನು ಇಟ್ಟುಕೊಂಡಳು. ಸರಿ ಅಲ್ಲಿಯೂ ಸುಮಾರು ಐದು ವರ್ಷ ಕೆಲಸ ಮಾಡಿದೆ. ಆದರೆ ಮಾಡಿದ ಪಾಪ ಬಿಡಬೇಕಲ್ಲ. ನನ್ನ ಆರೋಗ್ಯ ಕೆಟ್ಟಿತು. ಆ ಮನೆಯ ಯಜಮಾನಿ ಸರಕಾರಿ ಆಸ್ಪತ್ರೆಗೆ ಸೇರಿಸಿದಳು. ಅವಳು ಎಷ್ಟು ದಿನ ಅಂತ ನೋಡಿಕೊಳ್ತಾಳೆ. ತಿಂಗಳಾದರು ಗುಣವಾಗಲಿಲ್ಲ. ಸರಿ ಒಂದು ದಿನ ಡಾಕ್ಟರ್ ನಿನಗೆ ಏಡ್ಸ್ ಕಾಯಿಲೆ ಬಂದಿದೆ, ನಾವು ಏನು ಮಾಡಕಾಗಲ್ಲ ಅಂತೇಳಿ ಡಿಸ್ ಚಾರ್ಜ್ ಮಾಡಿದರು. ಹೊರಗೆ ಬಂದು ಮನೆಗೆ ಹೋದರೆ ನನಗೆ ಆ ಕಾಯಿಲೆ ಇರುವ ವಿಷಯ ಗೊತ್ತಾಗಿದ್ದವಳು ಮನೆಗೆ ಸೇರಿಸಲಿಲ್ಲ. ಸರಿ ಇನ್ನೇನು ಮಾಡೋದು ಅಂತ ಪೇಟೆಯ ಬೀದಿ ತಿರುಗ ತೊಡಗಿದೆ. ಮೈಲಿ ಶಕ್ತಿಯಿರಲಿಲ್ಲ ತೀರಾ ಗುರುತು ಹಿಡಿಯಲಾರದಷ್ಟು ಸಣ್ಣವಾಗಿದ್ದೆ. ಮುಖ ಕಪ್ಪಿಟ್ಟು ವಿಕಾರವಾಗ ತೊಡಗಿದ್ದೆ. ಹೀಗೆ ಪೇಟೆಯ ಬೀದಿಗಳನ್ನು ತಿರುಗುವಾಗ ಜನರು ತಾವೇನೆ ನನಗೆ ಬಿಕ್ಷುಕಿ ಅಂತ ಹೆಸರಿಟ್ಟು ಬಿಕ್ಷೆ ಹಾಕತೊಡಗಿದರು. ಹೀಗೆ ಪೇಟೆಯ ಎರಡು ಮಾರ್ಕೆಟ್ ಬೀದಿಗಳಲ್ಲಿ ಎರಡು ಬಾರಿ ಅಡ್ಡಾಡಿದರೆ ಮೂರು ಹೊತ್ತು ಊಟಕ್ಕಾಗುವಷ್ಟು ದುಡ್ಡು ಸಿಗುತ್ತಿದೆ. 

ಇವತ್ತಿಗೂ ಹಾಗೇನೆ ಜೀವನ ಕಳೆಯುತ್ತಿದ್ದೇನೆ. ವ್ಯತ್ಯಾಸ ಏನೆಂದರೆ ಈಗ ಬೀದಿಗಳಲ್ಲಿ ತಿರುಗೊವಷ್ಟು ಶಕ್ತಿಯಿಲ್ಲ. ಹಾಗಾಗಿ ಈ ಬಸ್ ಸ್ಟ್ಯಾಂಡನ್ನು ಖಾಯಂ ಮಾಡಿಕೊಂಡಿದ್ದೇನೆ. ಇಲ್ಲೇ ಬಿಕ್ಷೆ ಬೇಡಿ ಇಲ್ಲೆ ತಿಂದು ಇಲ್ಲೇ ಮಲಗುತ್ತೇನೆ. 

ಇಷ್ಟೇ ಸರ್ ನನ್ನ ಜೀವನದ ಕಥೆ. ಹಳೆಯದನೆಲ್ಲ ನೆನೆಸಿಕೊಂಡರೆ ಒಂದಂತು ಬೇಜಾರಾಗುತ್ತೆ. ಅದೇನೆಂದರೆ ಚಿಕ್ಕಮ್ಮನ ಮನೇಲಿ ಮೊದಲ ದಿನ ನಾನು ಹಾಳಾದ ಕೂಡಲೆ ಹೇಳದೆ ಕೇಳದೆ ಹಳ್ಳಿಗೆ ಓಡಿ ಹೋಗಬೇಕಿತ್ತು ಅನಿಸುತ್ತೆ. ಆದರವತ್ತು ಯಾವುದನ್ನು ಯೋಚಿಸೋ ಪರಿಸ್ಥಿತಿಯಲ್ಲಿ ನಾನಿರಲಿಲ್ಲ. ಬಿಡಿ ಸರ್, ಈಗ ಯೋಚಿಸಿ ಏನೂ ಮಾಡೋಕ್ಕಾಗಲ್ಲ. ನಿಮ್ಮ ಹತ್ತಿರ ಎರಡು ಗಂಟೆ ಮಾತಾಡಿದ್ದಕ್ಕೆ ನನ್ನ ಮನಸ್ಸು ಹಗುರವಾಯ್ತು. ನಿಮಗೆ ಕೊಡಬೇಕೆನಿಸಿದರೆ ಒಂದು ನೂರುರೂಪಾಯಿ ಕೊಡಿ ಸರ್. ಯಾಕೊ ಹಳೆದೆಲ್ಲ ನೆನಪಾಗಿ ಬೇಜಾರಾಗ್ತಿದೆ. ಇವತ್ತು ಸಾಯಂಕಾಲ ಹೊಟ್ಟೆ ತುಂಬಾ ಕುಡಿಯಬೇಕು ಅನಿಸ್ತಿದೆ ಎಂದುಮಾತು ಮುಗಿಸಿದವಳ ದ್ವನಿಯಲ್ಲಿದ್ದ ಯಾತನೆ ನನಗರ್ಥವಾಯಿತು. ಪರ್ಸಿನಿಂದ ನೂರು ರೂಪಾಯಿಗಳ ಎರಡು ನೋಟುಗಳನ್ನು ಅವಳ ಕೈಲಿಟ್ಟು ಎದ್ದೆ.

ಸೀದಾ ಹೋಟೆಲಿನ ರೂಮಿಗೆ ಹೋಗಿ ಮಲಗಿದವನು ಮಾರನೆ ದಿನ ಬೆಳಿಗ್ಗೆ ಊರಿಗೆ ಹೋಗಲು ಬಸ್ ಸ್ಟ್ಯಾಂಡಿಗೆ ಬಂದೆ. ಒಂದು ಮೂಲೆಯಲ್ಲಿ ಸಾಕಷ್ಟು ಜನರ ಗುಂಪು ಸೇರಿದ್ದು, ಪೋಲಿಸರು ನಿಂತಿರುವುದನ್ನು ನೋಡಿ ಆ ಕಡೆ ನಡೆದೆ. ಗುಂಪನ್ನು ಸೀಳಿಕೊಂಡು ನೋಡಿದರೆ ಹಿಂದಿನ ದಿನ ಮದ್ಯಾಹ್ನ ನಾನು ಮಾತಾಡಿಸಿದ ಹೆಂಗಸು ಹೆಣವಾಗಿ ಬಿದ್ದಿದ್ದಳು. ಪಕ್ಕದಲ್ಲಿದ್ದವನಿಗೆ ಏನಾಯ್ತು ಅಂತ ಕೇಳಿದೆ. “ಯಾವಳೋ ಬೇವಾರ್ಸಿ ಸರ್. ಚೆನ್ನಾಗಿ ಶರಾಪು ಕುಡಿದು, ಜಾಸ್ತಿಯಾಗಿ ಸತ್ತಿದ್ದಾಳೆ” ಅಂದ. ಜಾಸ್ತಿ ದುಡ್ಡು ಕೊಟ್ಟು ಅವಳ ಸಾವಿಗೆ ನಾನೇ ಕಾರಣವಾಗಿಬಿಟ್ಟೆನಾ ಎಂಬ ಅಪರಾಧಿಪ್ರಜ್ಞೆ ಕಾಡತೊಡಗಿತು.ಹೊಟ್ಟೆ ತೊಳೆಸಿದಂತಾಗಿ ಅಲ್ಲಿಂದ ಬಾತ್ ರೂಮಿನ ಕಡೆಗೆ ಓಡಿದೆ.

No comments:

Post a Comment