Oct 15, 2015

ಬ್ರಾಹ್ಮಣರಿಗೆ 'ಬೈಲ್' ಕೊಡಿಸುವ ಈ ಸಂಪ್ರದಾಯವಾದಿ ವಾದ ಸರಿಯಲ್ಲ: ಶ್ರೀಧರ್ ಪ್ರಭು.

ನಿನ್ನೆ ಪ್ರಕಟಿಸಲಾಗಿದ್ದ ಚಂದ್ರಶೇಖರ್ ಐಜೂರರ ಲೇಖನಕ್ಕೆ (ಶೂದ್ರರೆ ಅಲ್ಲವೇ ಹಿಂದೂತ್ವದ ಬ್ರಾಹ್ಮಣ್ಯದ ನಿಜವಾದ ಬಾಡಿಗಾರ್ಡುಗಳು? ) ಶ್ರೀದರ್ ಪ್ರಭುರವರು ಈ ಕೆಳಗಿನಂತೆ ಪ್ರತಿಕ್ರಿಯಿಸಿದ್ದರು. ಪ್ರತಿಕ್ರಿಯೆ ಐಜೂರರ ಲೇಖನದ ಆಶಯಕ್ಕೆ ಪೂರಕವಾಗಿಯೂ ಇರುತ್ತಾ ಆ ಲೇಖನದ ಕೆಲವು ವಿಚಾರಗಳು ಯಾಕೆ ಸರಿಯಿಲ್ಲ ಎಂದು ತಿಳಿಸುತ್ತಿವೆ. ಹಾಗಾಗಿ ಪ್ರತಿಕ್ರಿಯೆಯನ್ನು ಹೆಚ್ಚು ಜನರಿಗೆ ತಲುಪಲಿ ಎಂಬ ಉದ್ದೇಶದಿಂದ ಲೇಖನವಾಗಿ ಪ್ರಕಟಿಸಲಾಗುತ್ತಿದೆ. 

ಪ್ರಿಯ ಚಂದ್ರು,

ದಲಿತ ಮತ್ತು ಶೂದ್ರರ ನಡುವೆ ಇಲ್ಲದ ಕಂದಕ ನಿರ್ಮಿಸಿ ಶುದ್ರರೇ ದಲಿತರ ಶತ್ರುಗಳು ಎಂದು ಬಿಂಬಿಸಿ ಬ್ರಾಹ್ಮಣರಿಗೆ 'ಬೈಲ್' ಕೊಡಿಸುವ ಈ ಸಂಪ್ರದಾಯವಾದಿ ವಾದಕ್ಕೆ ನನ್ನ ಸಂಪೂರ್ಣ ವಿರೋಧವಿದೆ.

ಮಹಾತ್ಮಾ ಫುಲೆ ಈ ಸತ್ಯವನ್ನು ಸಾಕ್ಷಾತ್ಕರಿಸಿಕೊಂಡ ಅಪ್ರತಿಮ ಚಿಂತಕ. ಹೀಗಾಗಿಯೇ ತಮ್ಮ ಚಳುವಳಿಯ ಪ್ರಣಾಳಿಕೆಯಾದ "ಚಮಚ ಏಜ್" ಪುಸ್ತಕವನ್ನು ಮಾನ್ಯವರ ಕಾನ್ಶಿರಾಂ ಮಹಾತ್ಮಾ ಫುಲೆಯವರಿಗೆ ಸಮರ್ಪಿಸುತ್ತಾರೆ. ಅಷ್ಟೇ ಅಲ್ಲ, ಬುದ್ಧ, ಫುಲೆ, ಅಂಬೇಡ್ಕರ್ ಹಾದಿಯಲ್ಲೇ ಸಾಗಿ ತಮ್ಮ ಚಳುವಳಿಯನ್ನು ವೈದಿಕರ ಮೂರು ವರ್ಣಗಳನ್ನು ಬಿಟ್ಟು ಉಳಿದವರ ಮಧ್ಯೆ ಕಟ್ಟಿ ಅದನ್ನು ಬಹುಜನ ಸಮಾಜದ ಸಮಷ್ಥಿ ಆಶಯಗಳಿಗೆ ಮುಡಿಪಿಡುತ್ತಾರೆ.

ಶೂದ್ರ ರು ನಮ್ಮ ದೇಶದಲ್ಲಿ ಬೌದ್ಧಿಕವಾಗಿ (ಗಮನಿಸಿ- ಬೌದ್ಧಿಕವಾಗಿ ಮಾತ್ರ) ಅತ್ಯಂತ ಹೆಚ್ಚು ಶೋಷಣೆಗೊಳಗಾದ ವರ್ಗ. ಇವರನ್ನು ಅನೇಕಾನೇಕ ವರ್ಷಗಳಿಂದ ಅನೇಕಾನೇಕ 'ಮಹಾತ್ಮರು' ಹಾದಿ ತಪ್ಪಿಸಿದ್ದಾರೆ. ಶೂದ್ರರು ಬಹುಜನ ಚಳುವಳಿಯ ಟ್ರಂಪ್ ಕಾರ್ಡ್ ಇದ್ದ ಹಾಗೆ, ಇವರನ್ನು ಬಿಟ್ಟರೆ ನಾವು ಮುಳುಗಿದ ಲೆಕ್ಕವೇ!

ಶೂದ್ರರ ಮತ್ತು ದಲಿತರ ಸಾಂಸ್ಕೃತಿಕ ಐಕ್ಯತೆ ಮತ್ತು ತಾದಾತ್ಮ್ಯವನ್ನು ಕಾಂಚ ಐಲಯ್ಯ ತಮ್ಮ "Why I am not a Hindu" ಎಂಬ ಐತಿಹಾಸಿಕ ಪುಸ್ತಕದಲ್ಲಿ ಅತ್ಯಂತ ಸ್ಫುಟವಾಗಿ ದಾಖಲಿಸುತ್ತಾರೆ. ತಮ್ಮ ಕುರುಬ ಸಮಾಜಕ್ಕೂ ಮಾದಿಗರ ಸಮಾಜಕ್ಕೂ (ಒಂದು ಉದಾಹರೆಣೆಗಾಗಿ ಈ ನಿದರ್ಶನ) ಇರುವ ಸಾಂಸ್ಕೃತಿಕ ಮತ್ತು ಸಾಮಾಜಿಕ ಸಾಮ್ಯತೆಗಳನ್ನು ಹೇಳುತ್ತಾ, ನಾವೆಲ್ಲರೂ ಹೇಗೆ ಒಂದೇ ವರ್ಗ ಎಂಬುದನ್ನು ಬಹು ಚೆನ್ನಾಗಿ ಸಾಬೀತು ಪಡಿಸುತ್ತಾರೆ.

ನಾವು ಸಂಘಟಿಸಬೇಕಿರುವ ವರ್ಗವನ್ನು ಬೇರೆಯವರ ತೆಕ್ಕೆಗೆ ನಾವು ಬಿಟ್ಟಿದ್ದರಿಂದ ನಮಗೆ ಈ ಸ್ಥಿತಿ ಬಂದಿದೆ. ನೋಡಿ, ಉತ್ತರ ಪ್ರದೇಶದಲ್ಲಿ ಶೂದ್ರರು ನಮ್ಮೊಂದಿಗೆ ಬರದಿರುವ ಕಾರಣದಿಂದ ಬ್ರಾಹ್ಮಣರನ್ನು ಸೇರಿಸಿಕೊಳ್ಳುವ ರಾಜಕೀಯ ಅನಿವಾರ್ಯತೆ ಸೃಷ್ಟಿಯಾಯಿತು. ಇದನ್ನು ಕೇವಲ ರಾಜಕೀಯ ಅನಿವಾರ್ಯವಾಗಿ ನೋಡಬೇಕೇ ವಿನಃ ಮೂಲ ತತ್ವಕ್ಕೆ ಚ್ಯುತಿಯಾಗಿ ಅಲ್ಲ.

ಇಂದು ಶುದ್ರರಿಗೆ ನಾವು ಹೊರಗಿಟ್ಟ ಕಾರಣ ಅವರು ನಮ್ಮ ವಿರೋಧಿ ಪಾಳಯದಲ್ಲಿದ್ದಾರೆ. ಅದರಿಂದ ತಾತ್ಕಾಲಿಕ ಅಧಿಕಾರ ಸಿಕ್ಕಿರಬಹುದು ಆದರೆ ಮತ್ತಷ್ಟು ಸಾಂಸ್ಕೃತಿಕವಾಗಿ ಮತ್ತು ಬೌದ್ಧಿಕವಾಗಿ ಶೋಷಣೆಗೆ ಗುರಿಯಾಗಿದ್ದಾರೆ. ಇವರ ಚಮಚಾ ಯುಗ ಬಹುದಿನ ಸಾಗದು. ಹಾಗೆಯೇ ಶುದ್ರರನ್ನು ತಬ್ಬದ ನಮ್ಮ ಅಸ್ಪ್ರುಶ್ಯತೆಯೂ ಕೊನೆಯಾಗಲೇ ಬೇಕು.

ಪೆರಿಯಾರ್, ಶಾಹು ಮಹಾರಾಜ್, ನಾಲ್ವಡಿ ಯಂಥಹ ಆದರಣೀಯರನ್ನು ಹೊರಗಿಟ್ಟ ಬಹುಜನ ಪರ ಚಿಂತನೆ ಇದೆಯೇ? ಬಹುಜನ ಚಳುವಳಿಯ ಮುಂಚೂಣಿಯಲ್ಲಿ ದಲಿತರು ಇರಬೇಕು ಎಂಬುದು ಎಷ್ಟು ಅನಿವಾರ್ಯವೋ ಅಷ್ಟೇ ಮುಖ್ಯ ಶೂದ್ರರ ನೇತೃತ್ವ ಮತ್ತು ಅಧಿಕಾರ ಹಂಚಿಕೆ.

ಉತ್ತರ ಪ್ರದೇಶದ ಶುದ್ರರಿಗಿಂತ ನಮ್ಮವರು ಎಷ್ಟೋ ಮೇಲು. ಹಾಗಿದ್ದೂ,
'ಜಿಸ್ ಕಿ ಜಿತ್ನಿ ಸಂಖ್ಯಾ ಭಾರಿ ಉಸ್ಕಿ ಉತನಿ ಭಾಗೇದಾರಿ' (ಅವರವರ ಸಂಖ್ಯೆಯಷ್ಟು ಅವರವರ ಅಧಿಕಾರ ಸಹಭಾಗಿತ್ವ) ಎಂದು ದಾರಿ ತೋರಿಸಿದ ಮಾನ್ಯವರರ ವಾಣಿ ನಾವು ಮರೆಯದಿರೋಣ.

No comments:

Post a Comment