Oct 14, 2015

ಶೂದ್ರರೆ ಅಲ್ಲವೇ ಹಿಂದೂತ್ವದ ಬ್ರಾಹ್ಮಣ್ಯದ ನಿಜವಾದ ಬಾಡಿಗಾರ್ಡುಗಳು? ಚಂದ್ರಶೇಖರ್ ಐಜೂರ್

ಚಂದ್ರಶೇಖರ್ ಐಜೂರ್.
ತುಂಬಾ ದಿನಗಳಿಂದ ನನ್ನೊಳಗೆ ಅವಿತು ಕೂತು ಮಿದುಳು ಸೇರಿ ತೂತು ಕೊರೆಯುತ್ತಿದ್ದ ಒಂದೆರಡು ಮಾತುಗಳನ್ನು ಈಗ ಹೇಳಬೇಕಿದೆ.

ದಲಿತರ ಬಗ್ಗೆ, ದಲಿತರ ಹೃದಯವಂತಿಕೆಯ ಬಗ್ಗೆ ಎರಡು ಮಾತು ಹೇಳಬೇಕಿದೆ:
ದಲಿತ ಸಂಘರ್ಷ ಸಮಿತಿ ಆಯೋಜಿಸುವ ಅಧ್ಯಯನ ಶಿಬಿರವನ್ನು ಜಿ.ಕೆ.ಗೋವಿಂದರಾವ್ ಉದ್ಘಾಟಿಸುತ್ತಾರೆ; ಬಹುಜನ ವಿದ್ಯಾರ್ಥಿ ಸಂಘದ ಅನೇಕ ಕಾರ್ಯಕ್ರಮಗಳ ಜೊತೆ ದಿನೇಶ್ ಅಮಿನ್ ಮಟ್ಟು, ಡಾ.ಸಿ.ಎಸ್.ದ್ವಾರಕಾನಾಥ್ ಹೆಜ್ಜೆ ಹಾಕುತ್ತಾರೆ; ಮೇಲ್ಜಾತಿಯ ಸತೀಶ್ ಚಂದ್ರ ಮಿಶ್ರಾ ಇವತ್ತಿನ ಬಿ.ಎಸ್.ಪಿ. ಜನರಲ್ ಸೆಕ್ರೆಟರಿ; ಕುರುಬ ಸಮುದಾಯದ ಕಾಂಚ ಐಲಯ್ಯನವರಿಲ್ಲದ ದಲಿತಪರ ಹೋರಾಟಗಳನ್ನು ಆಂಧ್ರ ಪ್ರದೇಶದಲ್ಲಿ ಕಾಣಲು ಸಾಧ್ಯವೇ ಇಲ್ಲ; ಸಂತ ಕಬೀರ್ ಮತ್ತು ಜ್ಯೋತಿಬಾ ಫುಲೆ ಅಂಬೇಡ್ಕರರ ಮಾನಸ ಗುರುಗಳು; ದ್ರಾವಿಡ ಸಮುದಾಯದ ಪೆರಿಯಾರ್, ಶೂದ್ರ ದೊರೆ ಶಾಹು ಮಹಾರಾಜ್, ಯಾದವ ದೊರೆ ನಾಲ್ವಡಿ ಕೃಷ್ಣರಾಜ ಒಡೆಯರ್, ಬ್ರಾಹ್ಮಣ ಸಮುದಾಯದ ಕುದ್ಮುಲ್ ರಂಗರಾವ್ ಇವತ್ತಿಗೂ ದಲಿತರ ಪ್ರಾತಃಸ್ಮರಣೀಯರು…

ಆದರೆ…

ಈ ಹಿಂದುಳಿದ, ಒಕ್ಕಲಿಗ, ಲಿಂಗಾಯತ… ಎಂಬಿತ್ಯಾದಿ ಹೆಸರುಗಳಲ್ಲಿ ಕರೆಸಿಕೊಳ್ಳುವ ಶೂದ್ರರ ಸಾರ್ವಜನಿಕ (ಸಾಹಿತ್ಯಕ, ಸಾಂಸ್ಕೃತಿಕ, ಸಾಮುದಾಯಿಕ, ರಾಜಕೀಯ) ವೇದಿಕೆಗಳಲ್ಲಿ ಮಾತ್ರ ಇವತ್ತಿಗೂ ದಲಿತರ ಪ್ರವೇಶ ನಿಷಿದ್ಧ. ಯಾಕಿಂಥ ದುಸ್ಥಿತಿಗೆ ಈ ಶೂದ್ರರು ತಲುಪಿದ್ದಾರೆ? ಇದು ಬ್ರಾಹ್ಮಣ್ಯದ ಇನ್ನೊಂದು ವರಸೆಯೇ ಅಲ್ಲವೇ?

ಒಕ್ಕಲಿಗರ ಸಂಘದಲ್ಲಿ ಒಕ್ಕಲಿಗನೇ ಶ್ರೇಷ್ಠ 
ಲಿಂಗಾಯತರ ಸಂಘದಲ್ಲಿ ಲಿಂಗಾಯತನೇ ಶ್ರೇಷ್ಠ 
ಕುರುಬರ ಸಂಘದಲ್ಲಿ ಕುರುಬನೇ ಶ್ರೇಷ್ಠ

ಕಡೆಗೆ ಈ ವಿಶ್ವಬ್ಯಾಂಕ್ನೋರೇನಾದ್ರೂ ‘ವಿಶ್ವ ಸುಂದರಿ’ ಸ್ಪರ್ಧೆ ನಡೆಸಿ ಅಂಥ ಇವರುಗಳ ಕೈಗೆ ಒಂದಿಷ್ಟು ಇಡುಗಂಟೇನಾದ್ರೂ ಕೊಟ್ರೆ… ಒಂದು ಕ್ಷಣವೂ, ಒಂದು ನಯಾ ಪೈಸೆಯೂ ವೇಸ್ಟಾಗದಂತೆ ತಮ್ಮತಮ್ಮ ಜಾತಿಯೊಳಗೆಯೇ ‘ಸುಂದ್ರಿ’ಯೊಬ್ಬಳನ್ನು ಆಯ್ಕೆಮಾಡಿ ಇವಳೇ ಜಗತ್ತಿನ ಏಕಮಾತ್ರ ‘ವಿಶ್ವಸುಂದರಿ’ ಎಂದು ಹೇಳಿ ಈ ಶೂದ್ರರು ಬೀಗಬಲ್ಲರು.

ಕರ್ನಾಟಕದಲ್ಲಿ ಆರ್ಥಿಕವಾಗಿ ಹಿಂದುಳಿದ ಜಾತಿಗಳ್ಯಾವುವು ಕೈಯೆತ್ತಿ ಅಂದ್ರೆ ಕ್ಷಣಕೂಡ ತಡಮಾಡದೆ ಕೈಯೆತ್ತುವುದು ಶೂದ್ರ ಜಾತಿಗಳೇ. ಹಾಗೇ, ಕರ್ನಾಟಕದಲ್ಲಿ ಸಾಮಾಜಿಕವಾಗಿ ಬಲಿಷ್ಠ ಜಾತಿಗಳ್ಯಾವುವು ಕೈಯೆತ್ತಿ ಅಂದ್ರೆ ಒಂದೇ ಒಂದು ಸೆಕೆಂಡ್ ಕೂಡ ತಡಮಾಡದೆ ಕೈಯೆತ್ತುವುದು ಇದೇ ಶೂದ್ರ ಜಾತಿಗಳು.

ಇಂಥ ಶೂದ್ರರೆ ಅಲ್ಲವೇ ಹಿಂದೂತ್ವದ ಬ್ರಾಹ್ಮಣ್ಯದ ನಿಜವಾದ ಬಾಡಿಗಾರ್ಡ್ ಗಳು. ಇಂಥ ಶೂದ್ರರಿಂದಲೇ ಅಲ್ಲವೇ ಬ್ರಾಹ್ಮಣ್ಯ ಉಸಿರಾಡುತ್ತಿರುವುದು? ಕರ್ನಾಟಕದಲ್ಲಿ ಇವತ್ತು ಕೋಮುಶಕ್ತಿಗಳು ಇಷ್ಟೊಂದು ಕೊಬ್ಬಲು ಲಿಂಗಾಯತರು ನೇರ ಕಾರಣ. ಅವರ ಸೊಂಟದ ಲಿಂಗ ಬ್ರಾಹ್ಮಣ್ಯದ ಜನಿವಾರದೊಳಗೆ ಬಿಗಿಯಾಗಿ ಬಿಗಿದುಕೊಂಡಿದೆ.

ಕರ್ನಾಟಕದಲ್ಲಿ ಕೋಮುವಾದ ಇನ್ನಷ್ಟು ಕೊಬ್ಬಬಹುದೇ ಹೊರತು ಶೂದ್ರರು ಬದಲಾಗುವುದಿಲ್ಲ. ಅವರು ಬದಲಾಗುವರು ಎಂಬ ನಂಬಿಕೆ ನನ್ನಲ್ಲಿ ಸಾಸಿವೆ ಕಾಳಿನಷ್ಟು ಇಲ್ಲ.
(ಚಂದ್ರಶೇಖರ್ ಐಜೂರರ ಫೇಸ್ ಬುಕ್ ಪುಟದಿಂದ ಹೆಕ್ಕಿ ತಂದದ್ದು)

1 comment:

 1. ಪ್ರಿಯ ಚಂದ್ರು,

  ದಲಿತ ಮತ್ತು ಶೂದ್ರರ ನಡುವೆ ಇಲ್ಲದ ಕಂದಕ ನಿರ್ಮಿಸಿ ಶುದ್ರರೇ ದಲಿತರ ಶತ್ರುಗಳು ಎಂದು ಬಿಂಬಿಸಿ ಬ್ರಾಹ್ಮಣರಿಗೆ 'ಬೈಲ್' ಕೊಡಿಸುವ ಈ ಸಂಪ್ರದಾಯವಾದಿ ವಾದಕ್ಕೆ ನನ್ನ ಸಂಪೂರ್ಣ ವಿರೋಧವಿದೆ.

  ಮಹಾತ್ಮಾ ಫುಲೆ ಈ ಸತ್ಯವನ್ನು ಸಾಕ್ಷಾತ್ಕರಿಸಿಕೊಂಡ ಅಪ್ರತಿಮ ಚಿಂತಕ. ಹೀಗಾಗಿಯೇ ತಮ್ಮ ಚಳುವಳಿಯ ಪ್ರಣಾಳಿಕೆಯಾದ "ಚಮಚ ಏಜ್" ಪುಸ್ತಕವನ್ನು ಮಾನ್ಯವರ ಕಾನ್ಶಿರಾಂ ಮಹಾತ್ಮಾ ಫುಲೆಯವರಿಗೆ ಸಮರ್ಪಿಸುತ್ತಾರೆ. ಅಷ್ಟೇ ಅಲ್ಲ, ಬುದ್ಧ, ಫುಲೆ, ಅಂಬೇಡ್ಕರ್ ಹಾದಿಯಲ್ಲೇ ಸಾಗಿ ತಮ್ಮ ಚಳುವಳಿಯನ್ನು ವೈದಿಕರ ಮೂರು ವರ್ಣಗಳನ್ನು ಬಿಟ್ಟು ಉಳಿದವರ ಮಧ್ಯೆ ಕಟ್ಟಿ ಅದನ್ನು ಬಹುಜನ ಸಮಾಜದ ಸಮಷ್ಥಿ ಆಶಯಗಳಿಗೆ ಮುಡಿಪಿಡುತ್ತಾರೆ.

  ಶೂದ್ರ ರು ನಮ್ಮ ದೇಶದಲ್ಲಿ ಬೌದ್ಧಿಕವಾಗಿ (ಗಮನಿಸಿ- ಬೌದ್ಧಿಕವಾಗಿ ಮಾತ್ರ) ಅತ್ಯಂತ ಹೆಚ್ಚು ಶೋಷಣೆಗೊಳಗಾದ ವರ್ಗ. ಇವರನ್ನು ಅನೇಕಾನೇಕ ವರ್ಷಗಳಿಂದ ಅನೇಕಾನೇಕ 'ಮಹಾತ್ಮರು' ಹಾದಿ ತಪ್ಪಿಸಿದ್ದಾರೆ. ಶೂದ್ರರು ಬಹುಜನ ಚಳುವಳಿಯ ಟ್ರಂಪ್ ಕಾರ್ಡ್ ಇದ್ದ ಹಾಗೆ, ಇವರನ್ನು ಬಿಟ್ಟರೆ ನಾವು ಮುಳುಗಿದ ಲೆಕ್ಕವೇ!

  ಶೂದ್ರರ ಮತ್ತು ದಲಿತರ ಸಾಂಸ್ಕೃತಿಕ ಐಕ್ಯತೆ ಮತ್ತು ತಾದಾತ್ಮ್ಯವನ್ನು ಕಾಂಚ ಐಲಯ್ಯ ತಮ್ಮ "Why I am not a Hindu" ಎಂಬ ಐತಿಹಾಸಿಕ ಪುಸ್ತಕದಲ್ಲಿ ಅತ್ಯಂತ ಸ್ಫುಟವಾಗಿ ದಾಖಲಿಸುತ್ತಾರೆ. ತಮ್ಮ ಕುರುಬ ಸಮಾಜಕ್ಕೂ ಮಾದಿಗರ ಸಮಾಜಕ್ಕೂ (ಒಂದು ಉದಾಹರೆಣೆಗಾಗಿ ಈ ನಿದರ್ಶನ) ಇರುವ ಸಾಂಸ್ಕೃತಿಕ ಮತ್ತು ಸಾಮಾಜಿಕ ಸಾಮ್ಯತೆಗಳನ್ನು ಹೇಳುತ್ತಾ, ನಾವೆಲ್ಲರೂ ಹೇಗೆ ಒಂದೇ ವರ್ಗ ಎಂಬುದನ್ನು ಬಹು ಚೆನ್ನಾಗಿ ಸಾಬೀತು ಪಡಿಸುತ್ತಾರೆ.

  ನಾವು ಸಂಘಟಿಸಬೇಕಿರುವ ವರ್ಗವನ್ನು ಬೇರೆಯವರ ತೆಕ್ಕೆಗೆ ನಾವು ಬಿಟ್ಟಿದ್ದರಿಂದ ನಮಗೆ ಈ ಸ್ಥಿತಿ ಬಂದಿದೆ. ನೋಡಿ, ಉತ್ತರ ಪ್ರದೇಶದಲ್ಲಿ ಶೂದ್ರರು ನಮ್ಮೊಂದಿಗೆ ಬರದಿರುವ ಕಾರಣದಿಂದ ಬ್ರಾಹ್ಮಣರನ್ನು ಸೇರಿಸಿಕೊಳ್ಳುವ ರಾಜಕೀಯ ಅನಿವಾರ್ಯತೆ ಸೃಷ್ಟಿಯಾಯಿತು. ಇದನ್ನು ಕೇವಲ ರಾಜಕೀಯ ಅನಿವಾರ್ಯವಾಗಿ ನೋಡಬೇಕೇ ವಿನಃ ಮೂಲ ತತ್ವಕ್ಕೆ ಚ್ಯುತಿಯಾಗಿ ಅಲ್ಲ.

  ಇಂದು ಶುದ್ರರಿಗೆ ನಾವು ಹೊರಗಿಟ್ಟ ಕಾರಣ ಅವರು ನಮ್ಮ ವಿರೋಧಿ ಪಾಳಯದಲ್ಲಿದ್ದಾರೆ. ಅದರಿಂದ ತಾತ್ಕಾಲಿಕ ಅಧಿಕಾರ ಸಿಕ್ಕಿರಬಹುದು ಆದರೆ ಮತ್ತಷ್ಟು ಸಾಂಸ್ಕೃತಿಕವಾಗಿ ಮತ್ತು ಬೌದ್ಧಿಕವಾಗಿ ಶೋಷಣೆಗೆ ಗುರಿಯಾಗಿದ್ದಾರೆ. ಇವರ ಚಮಚಾ ಯುಗ ಬಹುದಿನ ಸಾಗದು. ಹಾಗೆಯೇ ಶುದ್ರರನ್ನು ತಬ್ಬದ ನಮ್ಮ ಅಸ್ಪ್ರುಶ್ಯತೆಯೂ ಕೊನೆಯಾಗಲೇ ಬೇಕು.

  ಪೆರಿಯಾರ್, ಶಾಹು ಮಹಾರಾಜ್, ನಾಲ್ವಡಿ ಯಂಥಹ ಆದರಣೀಯರನ್ನು ಹೊರಗಿಟ್ಟ ಬಹುಜನ ಪರ ಚಿಂತನೆ ಇದೆಯೇ? ಬಹುಜನ ಚಳುವಳಿಯ ಮುಂಚೂಣಿಯಲ್ಲಿ ದಲಿತರು ಇರಬೇಕು ಎಂಬುದು ಎಷ್ಟು ಅನಿವಾರ್ಯವೋ ಅಷ್ಟೇ ಮುಖ್ಯ ಶೂದ್ರರ ನೇತೃತ್ವ ಮತ್ತು ಅಧಿಕಾರ ಹಂಚಿಕೆ.

  ಉತ್ತರ ಪ್ರದೇಶದ ಶುದ್ರರಿಗಿಂತ ನಮ್ಮವರು ಎಷ್ಟೋ ಮೇಲು. ಹಾಗಿದ್ದೂ,
  'ಜಿಸ್ ಕಿ ಜಿತ್ನಿ ಸಂಖ್ಯಾ ಭಾರಿ ಉಸ್ಕಿ ಉತನಿ ಭಾಗೇದಾರಿ' (ಅವರವರ ಸಂಖ್ಯೆಯಷ್ಟು ಅವರವರ ಅಧಿಕಾರ ಸಹಭಾಗಿತ್ವ) ಎಂದು ದಾರಿ ತೋರಿಸಿದ ಮಾನ್ಯವರರ ವಾಣಿ ನಾವು ಮರೆಯದಿರೋಣ.

  ReplyDelete

Related Posts Plugin for WordPress, Blogger...