Oct 1, 2015

ದನ ತಿಂದ್ರೆ ತಪ್ಪು ಜನಾನ್ ಬೇಕಾದ್ರೆ ತಿವ್ಕೊಳ್ಳಿ...

mohammad akhlaq
ಈ ಲೇಖನದ ಹೆಡ್ಡಿಂಗು ಇವತ್ತಿನದಲ್ಲ. ಬರೋಬ್ಬರಿ ಮೂರು ವರುಷದ ಹಿಂದೆ ಹೈದರಾಬಾದಿನ ಉಸ್ಮಾನಿಯ ವಿಶ್ವವಿದ್ಯಾಲಯದಲ್ಲಿ ನಡೆಯುವ ಬೀಫ್ ಫೆಸ್ಟಿವಲ್ ಎಂಬ ಊಟದ ಹಬ್ಬದ ಸಂದರ್ಭದಲ್ಲಿ ಆ ಫೆಸ್ಟಿವಲ್ಲಿನ ಪರವಾಗಿದ್ದ ಹುಡುಗನೊಬ್ಬನಿಗೆ ಹಬ್ಬವನ್ನು ವಿರೋಧಿಸುವವರು ಚೂರಿ ಹಾಕಿಬಿಟ್ಟಿದ್ದರು. ಆಗ ಬರೆದ ಲೇಖನ ಇವತ್ತು ಮತ್ತೆ ನೆನಪಾಗಿದ್ದು ಉತ್ತರಪ್ರದೇಶದ ದಾದ್ರಿಯ ಬಿಸಾರ ಎಂಬಲ್ಲಿ 'ಬೀಫ್' ತಿಂದರು ಎಂಬ ಅನುಮಾನದ ಮೇಲೆ ಒಂದಿಡೀ ಕುಟುಂಬವನ್ನು ಥಳಿಸಲಾಗಿದೆ. ಮನೆಯ ಹಿರಿಯ ಮೊಹಮದ್ ಅಕ್ಲಾಖನನ್ನು ಹೊಡೆದು ಬಡಿದು ಸಾಯಿಸಲಾಗಿದೆ. ಅವರ ಮಗ ಡ್ಯಾನಿಷ್ ಜೀವನ್ಮರಣದ ಮಧ್ಯೆ ಹೋರಾಡುತ್ತಿದ್ದಾನೆ. ಮೂರು ವರ್ಷದ ಕೆಳಗೆ ಚೂರಿ ಚುಚ್ಚುವವರೆಗಿದ್ದ ಮನಸ್ಥಿತಿ ಈಗ ಸಾಯಿಸಿಯೇಬಿಡುವಷ್ಟು ಹಾಳಾಗಿಬಿಟ್ಟಿದೆ. ಈ ಕೃತ್ಯದಲ್ಲಿ ಭಾಗಿಯಾಗಿರುವ ಕೆಲವು ಹಿಂದೂ ಉಗ್ರರನ್ನು ಬಂಧಿಸಲಾಗಿದೆ. ಯಾವ ಉಗ್ರಗಾಮಿ ಸಂಘಟನೆಗೂ ಅಧಿಕೃತವಾಗಿ ಸೇರಿದವರಲ್ಲ ಎಂದು ಪೋಲೀಸರು ಹೇಳಿದ್ದಾರೆ.


ಒಂದು ಕರು ಕಾಣೆಯಾಗುತ್ತದೆ. ಅದರ ಮಾಂಸವನ್ನು ಮೊಹಮದ್ ಅಕ್ಲಾಖ್ ತೆಗೆದುಕೊಂಡು ಹೋಗುತ್ತಿದ್ದ'ನಂತೆ' ಎಂದು ಸುದ್ದಿಯಾಗುತ್ತದೆ. ಅವರ ಮನೆಯವರು ದನದ ಮಾಂಸವನ್ನು ತಿಂದ'ರಂತೆ' ಎಂದು ಸ್ಥಳೀಯ ದೇವಸ್ಥಾನದಲ್ಲಿ 'ಘೋಷಿಸಲಾಗುತ್ತದೆ'. ಧರ್ಮರಕ್ಷಣೆಯ ಹೊಣೆ ಹೊತ್ತ ಹಿಂದೂ ಉಗ್ರರು ಅಕ್ಲಾಖನ ಮನೆಗೆ ನುಗ್ಗಿ ಸಾಯುವವರೆಗೂ ಬಡಿಯುತ್ತಾರೆ. ಫ್ರಿಜ್ಜಿನಲ್ಲಿದ್ದ ಮಾಂಸವನ್ನು ಪೋಲೀಸರು ಪರೀಕ್ಷೆಗೆ ಲ್ಯಾಬಿಗೆ ಕಳುಹಿಸುತ್ತಾರೆ! ಅಕ್ಲಾಖನ ಮಗಳು ಸಾಜ್ದಾಳ 'ಅದು ದನದ ಮಾಂಸವೇ ಅಲ್ಲ. ದನದ ಮಾಂಸ ಅಲ್ಲವೆಂದು ಲ್ಯಾಬ್ ರಿಪೋರ್ಟ್ ಹೇಳಿದರೆ ನನ್ನ ತಂದೆಯನ್ನು ವಾಪಸ್ಸು ಕೊಡುತ್ತಾರೆಯೇ?' ಎಂಬ ಪ್ರಶ್ನೆಗೆ ಉತ್ತರ ಕೊಡುವವರು ಯಾರು? ಅದು ದನದ ಮಾಂಸವೋ ಮತ್ತೊಂದೋ ಮನೆಗೆ ನುಗ್ಗಿ ಸಾಯ ಬಡಿಯುವಂತಹ 'ಹಕ್ಕನ್ನು' ಈ ಉಗ್ರರಿಗೆ ನೀಡಿದ್ದಾದರೂ ಯಾರು? ಮೊಹಮದ್ ಅಕ್ಲಾಖ್ ಕರುವನ್ನು ಕದ್ದಿದ್ದೇ ಹೌದಾದರೆ ಅದನ್ನು ವಿಚಾರಿಸಲು ಪೋಲೀಸರಿಲ್ಲವೇ? ಏನು ಊಟ ಮಾಡಬೇಕೆಂದು ಆದೇಶಿಸಲು ಇವರ್ಯಾರು? ಇವತ್ತು ದನದ ಮಾಂಸದ ಹೆಸರಿನಲ್ಲಿ ಹಿಂದೂ ಉಗ್ರರು ಸಾಬರ ಮನೆಗೆ ನುಗ್ಗಿದ್ದಾರೆ, ಸಾಬರ ಮನೆಗೆ ತಾನೇ ಎಂದು ನಾವು ಸುಮ್ಮನಿರುತ್ತೀವಿ; ನಾಳೆ ಮಾಂಸ ತಿನ್ನುವ ಹಿಂದೂಗಳ ಮನೆಗೆ ನುಗ್ಗಿ ಬಡಿಯುತ್ತಾರೆ.... ಈಗ ಸುಮ್ಮನಿದ್ದವರು ಆಗ ಮಾತನಾಡುತ್ತೀವಾ?
ದನಕ್ಕಿರುವ ಬೆಲೆ ಮನುಷ್ಯನಿಗಿಲ್ಲವೇ? ಅಂದಹಾಗೆ ಬಿಹಾರ ಚುನಾವಣೆ ಹತ್ತಿರದಲ್ಲಿದೆ....

4 comments:

  1. ಇದು ೨೦೧೭ರಲ್ಲಿ ಬಿಹಾರದಲ್ಲಿ ನಡೆಯಲಿರುವ ಚುನಾವಣೆಗೆ ನೆಲವನ್ನು ಬಿತ್ತಿ ಹದ ಮಾಡುವ ಹುನ್ನಾರದ ಒಂದು ಭಾಗವಷ್ಟೇ. ವಿವಿಧ ಜಾತಿಗಳಲ್ಲಿ ಹಂಚಿಹೋಗುವ ಹಿಂದೂಗಳ ಮತಗಳ ಕೊಯ್ಲು ಮಾಡಿ ಅಧಿಕಾರಕ್ಕೇರಲು ದನದ ಮಾಂಸ ಒಂದು ನೆಪ ಅಷ್ಟೇ. ಗುಜರಾತಿನಲ್ಲಿ ನಡೆಸಿದ ಪ್ರಯೋಗದ ಯಶಸ್ಸಿನಿಂದ ಉತ್ತೇಜಿತರಾಗಿ ಉಳಿಡೆದೆಯೂ ಅದೇ ಪ್ರಯೋಗ ನಡೆಸುವ ತನ್ಮೂಲಕ ಅಧಿಕಾರದ ಗದ್ದುಗೆ ಏರುವ ಮಾಸ್ಟರ್ ಪ್ಲಾನ್ ಈಗಲೇ ತಯಾರಾಗುತ್ತಿದೆ. ಇಂಥ ಹುನ್ನಾರಗಳ ಬಗ್ಗೆ ನಮ್ಮ ಜನ ಎಚ್ಚತ್ತುಕೊಳ್ಳುವುದೇ ಇಲ್ಲ. ಬೇರೆ ಪರ್ಯಾಯ ರಾಜಕೀಯ ಆಯ್ಕೆಗಳನ್ನು ನೀಡುವಲ್ಲಿ ನಮ್ಮ ರಾಜಕೀಯ ಪಕ್ಷಗಳು ವಿಫಲವಾಗುತ್ತಿವೆ. ಒಮ್ಮೆ ಭಾರೀ ಭರವಸೆಯನ್ನು ಮೂಡಿಸಿದ ಕೇಜ್ರಿವಾಲ್ ತಮ್ಮದೇ ದೌರ್ಬಲ್ಯಗಳಿಂದ ಇಡೀ ಆಂದೋಲನವನ್ನೇ ಒಡೆಯುವಂತೆ ಮಾಡಿ ದೇಶ ಇಂದು ಅನಾಥ ಸ್ಥಿತಿಗೆ ಬಂದು ನಿಂತಿದೆ.

    ReplyDelete
    Replies
    1. ಹೌದು.... ಮುಜಾಫರ್ ನಗರದಲ್ಲಿ ತಿಂಗಳುಗಳ ಪ್ಲಾನಿಂಗಿನಿಂದ ನಡೆಸಿದ ಕಾರಣಕ್ಕೆ ಲೋಕಸಭಾ ಚುನಾವಣೆಯಲ್ಲಿ ಉತ್ತರಪ್ರದೇಶದಲ್ಲಿ ಹೆಚ್ಚಿನ ಸ್ಥಾನ ಗೆದ್ದರು. ಈಗ ವಿಧಾನಸಭಾ ಚುನಾವಣೆಯ ಪ್ರಯುಕ್ತ ಪ್ಲ್ಯಾನಿಂಗ್ ನಡೆಯುತ್ತಿದೆ. ಇನ್ನೆಷ್ಟು ಹೆಣಗಳು ಉರುಳಬೇಕೋ. ... ನೀವ್ಯಾಕೆ ಹಿಂಗ್ಯಾಕೆಗೆ ಲೇಖನಗಳನ್ನು ಬರೆದುಕೊಡಬಾರದು? ನಿಮ್ಮ ಕಮೆಂಟುಗಳಲ್ಲಿ ವೈಚಾರಿಕ ಪ್ರಬುದ್ಧತೆ ಎದ್ದು ಕಾಣುತ್ತದೆ :-)

      Delete
    2. ಲೇಖನ ಬರೆಯಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ ಮತ್ತು ನಾನು ಪ್ರಗತಿಪರ ವಿಷಯಗಳನ್ನು ಬರೆಯುವುದು ನನ್ನ ಸುತ್ತ ಇರುವ ಪ್ರತಿಗಾಮಿ ಹಾಗೂ ಅತಿಧಾರ್ಮಿಕ ಮನೋಭಾವದ ಜನರಿಗೆ ಇಷ್ಟವಾಗುವುದಿಲ್ಲ. ಹಾಗಾಗಿ ಬರೆಯುವುದು ಸಾಧ್ಯವಾಗುವುದಿಲ್ಲ. ಕೆಲವೊಮ್ಮೆ ನನಗೆ ಹೇಳಬೇಕೆಂದೆನಿಸಿದ್ದನ್ನು ಕಮೆಂಟುಗಳಲ್ಲಿ ಬರೆಯುತ್ತೇನೆ, ಅದಕ್ಕಾದರೆ ಹೆಚ್ಚು ಸಮಯ ಬೇಕಾಗುವುದಿಲ್ಲ.

      Delete
  2. ತಿದ್ದುಪಡಿ: ಮೇಲಿನ ಪ್ರತಿಕ್ರಿಯೆಯಲ್ಲಿ ೨೦೧೭ರಲ್ಲಿ ನಡೆಯುವ ಉತ್ತರಪ್ರದೇಶ ಚುನಾವಣೆಗೆ ಎಂದಾಗಬೇಕಾಗಿತ್ತು, ಕಣ್ತಪ್ಪಿನಿಂದಾಗಿ ಬಿಹಾರ ಎಂದಾಗಿದೆ.

    ReplyDelete