Sep 9, 2015

ಮಂಗಳೂರಿನ ಮತಿಗೆಟ್ಟ 'ಯುವಕರು'


Ashok K R
ದಕ್ಷಿಣ ಕನ್ನಡದಲ್ಲಿ ಬಿಜೆಪಿಯದೇ ಪಾರುಪತ್ಯವಿತ್ತು. ಬಿಜೆಪಿ ಬೆಂಬಲಿತ ಸಂಘಪರಿವಾರದ ವಿವಿಧ ಶಾಖೆಗಳ ಆಟೋಟಾಪಗಳು, ಸಾಮಾನ್ಯ ಜನರಿಗೆ ವಿನಾಕಾರಣವಾಗಿ ಅವರು ನೀಡಿದ ತೊಂದರೆ, ಅದರ ಜೊತೆಜೊತೆಗೇ ಬೆಳೆದ ಮುಸ್ಲಿಂ ಮೂಲಭೂತವಾದಿಗಳ ಕಾಟವೆಲ್ಲವೂ ಸೇರಿ ಜನರನ್ನು ಜಿಗುಪ್ಸೆಗೆ ತಳ್ಳಿತ್ತು. ಆ ಜಿಗುಪ್ಸೆಯ ಫಲವೆಂಬಂತೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಇಡೀ ದಕ್ಷಿಣ ಕನ್ನಡದಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಿತ್ತು, ಸುಳ್ಯ ಕ್ಷೇತ್ರವೊಂದನ್ನು ಹೊರತುಪಡಿಸಿ. ಓ! ಕಾಂಗ್ರೆಸ್ ಬಂತು, ಅದರಲ್ಲೂ ಸಿದ್ಧರಾಮಯ್ಯನಂತಹ 'ಸಮಾಜವಾದಿ' 'ಅಹಿಂದ' ನಾಯಕ ಈಗ ಮುಖ್ಯಮಂತ್ರಿ. ಇನ್ನೇನು ಇಡೀ ದಕ್ಷಿಣ ಕನ್ನಡ ಶಾಂತಿಯ ಬೀಡಾಗಿಬಿಡುತ್ತದೆ ಎಂದುಕೊಂಡಿರಾದರೆ ಅದು ಖಂಡಿತ ತಪ್ಪು. ತಪ್ಪೆಂದು ನಿರೂಪಿಸಲು ಮತ್ತೆ ಮತ್ತೆ ಅನೈತಿಕ ಪೋಲೀಸ್ ಗಿರಿಯಂತಹ ಕಾರ್ಯಗಳು ನಡೆಯುತ್ತಲೇ ಇವೆ. 
ಮುಸ್ಲಿಮನೊಬ್ಬ ಪರಿಚಯದ ಹಿಂದೂ ಹುಡುಗಿಯೊಂದಿಗೆ ಹೋಗುವುದು, ಹಿಂದೂವೊಬ್ಬ ಪರಿಚಯದ ಮುಸ್ಲಿಂ ಹುಡುಗಿಯೊಟ್ಟಿಗೆ ಹೋಗುವುದು ಇಲ್ಲಿ ಧರ್ಮದ್ರೋಹದ ಅಪರಾಧ! ಇಂತವರ ವಿರುದ್ಧ ಮಾತನಾಡಿದರೆ ಅದು ದೇಶದ್ರೋಹಕ್ಕೆ ಸಮ! ನಿನ್ನೆ ದಿನ ಹಿಂದೂ ಯುವಕೊನೊಬ್ಬನನ್ನು ನಡುಬೀದಿಯಲ್ಲಿ ಹೊಡೆಯಲಾಗಿದೆ. ಕಾರಣ ಆತ ಮುಸ್ಲಿಂ ಹುಡುಗಿಯೊಟ್ಟಿಗೆ ಹೋಗುತ್ತಿದ್ದ. ಹೆಣ್ಣುಮಕ್ಕಳ 'ರಕ್ಷಣೆಯ' ನೆಪದಲ್ಲಿ ಮುಸ್ಲಿಂ ಮೂಲಭೂತವಾದಿಗಳು ಇಂತಹ ಕೃತ್ಯವೆಸಗಿದ್ದಾರೆ! ಸಹಪಾಠಿಗಳೂ ಮಾತನಾಡದಂತಹ ಸ್ಥಿತಿಗೆ ಮಂಗಳೂರು ತಲುಪಿರುವುದಾದರೂ ಯಾಕೆ?
ಮೇಲಿನ ಚಿತ್ರ ಗಮನಿಸಿ, ಆ ಹಿಂದೂ ಹುಡುಗನ ಎದುರಿಗೆ ನಿಂತು ಬಹುಶಃ 'ಸಂಸ್ಕೃತಿ'ಯ ಪಾಠ ಮಾಡುತ್ತಿರುವವರೆಲ್ಲರೂ ಯುವಕರು. ಇಂತಹ ಯುವಕರಿಗೆ ಕೋಮುನಂಜನ್ನು ತುಂಬುತ್ತಿರುವವರಾರು? ಆ ಕೋಮು ವಿಷವನ್ನು ತುಂಬುವ ವ್ಯಕ್ತಿಗಳು ದೊಡ್ಡ ದೊಡ್ಡ ಭಾಷಣ ಬಿಗಿದು ಬೆಚ್ಚಗೆ ಮನೆ ಸೇರುತ್ತಾರೆ. ವಿಷದ ನಂಜೇರಿದ ಈ ಯುವಕರು ಬೀದಿಯಲ್ಲಿ ಓಡಾಡುತ್ತಿದ್ದ ಗೆಳೆಯರಿಬ್ಬರನ್ನೂ ಹಿಡಿದು ಚಚ್ಚುತ್ತಾರೆ. ಕೊನೆಗೆ ಜೈಲು ಪಾಲಾಗುವ ಸಂದರ್ಭ ಬಂದರೆ ಅದು ಈ ಹುಡುಗರಿಗೇ ಹೊರತು ಭೀಕರ ಭಾಷಣ ಕುಟ್ಟುವವರಿಗಲ್ಲ.
ಅಂದಹಾಗೆ ಕಾಂಗ್ರೆಸ್ ಸರಕಾರ ಬಂದ ಮೇಲೂ ಇದು ಯಾಕೆ ನಡೆಯುತ್ತಿದೆ ಎಂದಿರಾ? ಬಿಜೆಪಿ ಮಂಗಳೂರಿನಲ್ಲಿ ಉಗ್ರ ಹಿಂದೂ ಮೂಲಭೂತವಾದ ನಡೆಸಿದರೆ ಕಾಂಗ್ರೆಸ್ ನಡೆಸುವುದು ಸೌಮ್ಯ ಹಿಂದೂ ಮೂಲಭೂತವಾದ.... ಹಿಂದೂ ಮೂಲಭೂತ ಅಸ್ತಿತ್ವದಲ್ಲಿರಬೇಕಾದರೆ ಮುಸ್ಲಿಂ ಮೂಲಭೂತವಿಲ್ಲದಿದ್ದರೆ 'ಇಸ್ಲಾಮಿಗೆ' ಅವಮಾನವೆಂದು ಈ ಯುವಕರು ತಿಳಿದಿರಬೇಕು! ತನ್ನಲ್ಲಿರುವ ಅಪಾರ ಪ್ರಮಾಣದ ನೈಸರ್ಗಿಕ ಸೌಂದರ್ಯದಿಂದ ಗಮನ ಸೆಳೆಯಬೇಕಿದ್ದ ಮಂಗಳೂರು ಮತಿಗೆಟ್ಟವರ ಕಾರಣದಿಂದಲೇ ಸುದ್ದಿಯಾಗುತ್ತಿರುವುದು ಬೇಸರದ ಸಂಗತಿ.

ಈ ಇಡೀ ಲೇಖನವನ್ನು ಹೊಸದಾಗಿ ಬರೆದಿಲ್ಲ. ಅತ್ತಾವರದಲ್ಲಿ ಹಿಂದೂ ಮೂಲಭೂತವಾದಿಗಳು ನಡೆಸಿದ ದಾಂಧಲೆಯ ಸಂದರ್ಭದಲ್ಲಿ ಬರೆದ "ಮಂಗಳೂರಿನ ಮತಿಗೆಟ್ಟ ಹುಡುಗರು "ಲೇಖನವನ್ನೇ ಕಾಪಿ ಪೇಸ್ಟ್ ಮಾಡಲಾಗಿದೆ! ಹಿಂದೂ ಎನ್ನುವ ಜಾಗದಲ್ಲಿ ಮುಸ್ಲಿಂ ಎಂದು ಮುಸ್ಲಿಂ ಎಂದು ಬರೆದಿದ್ದ ಜಾಗದಲ್ಲಿ ಹಿಂದೂ ಎಂದು ತಿದ್ದಿದರೆ ಈ ಲೇಖನ ಸಿದ್ಧವಾಗಿಬಿಟ್ಟಿತು. ಮೂಲಭೂತವಾದಿಗಳ ಕಾರ್ಯವೈಖರಿಯಲ್ಲಿ ಅಷ್ಟರಮಟ್ಟಿಗೆ ಹೋಲಿಕೆಗಳಿವೆ.

1 comment:

  1. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಾರ್ವಜನಿಕ ಹಿತಾಸಕ್ತಿಯ ವಿಷಯಗಳಿಗೆ ಹೋರಾಡುವವರು ಯಾರೂ ಇಲ್ಲದೆ ಜಿಲ್ಲೆ ಅನಾಥವಾಗಿದೆ ಆದರೆ ಬೇಡದ ವಿಚಾರಗಳಿಗೆ ಹೋರಾಡಲು ಬೇಕಾದಷ್ಟು ಸಂಘಟನೆಗಳಿವೆ. ಇಲ್ಲಿನ ಜನರು ಕೂಡ ತೀರಾ ಸಂಕುಚಿತ ಮನೋಭಾವದವರು, ಅತಿಯಾದ ಧಾರ್ಮಿಕ ಮನೋಭಾವದವರು. ಉದಾರ ಚಿಂತನೆ ಉಳ್ಳವರಲ್ಲ. ಹೀಗಾಗಿ ಇಲ್ಲಿ ಇಂಥ ಘಟನೆಗಳು ನಡೆಯುತ್ತಲೇ ಇರುತ್ತವೆ. ಇದರ ವಿರುದ್ಧ ಸರಕಾರವು ಕೂಡಾ ಏನೂ ಮಾಡಲಾಗದ ಅಸಹಾಯಕತೆಗೆ ಸಿಲುಕಿಕೊಂಡಿರುವಂತೆ ಕಾಣುತ್ತದೆ ಏಕೆಂದರೆ ಇವುಗಳ ವಿರುದ್ಧ ಕ್ರಮ ಕೈಗೊಂಡರೆ ಹಿಂದೂಗಳ ಓಟು ಸಿಗುವುದಿಲ್ಲ ಎಂಬ ಹೆದರಿಕೆ ಕಾಂಗ್ರೆಸ್ ಪಕ್ಷಕ್ಕೆ ಇರುವುದು ಸಹಜ. ಹಿಂದೂಗಳ ಓಟು ಇಲ್ಲದೆ ಚುನಾವಣೆ ಗೆಲ್ಲುವುದು ಸಾಧ್ಯವಿಲ್ಲ. ಹೀಗಾಗಿ ಇಲ್ಲಿನ ಹಿಂದೂಗಳ ಸಂಕುಚಿತ ಮನೋಭಾವನೆಯಿಂದಾಗಿ ಹೀಗಾಗುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸ್ವಂತ ವಿಚಾರಶಕ್ತಿ ಇರುವ ಜನರು ಬದುಕುವುದು ಕಷ್ಟ ಏಕೆಂದರೆ ಇಲ್ಲಿ ವಿಚಾರಶೀಲ ಜನರ ಕೊರತೆ ಇದೆ. ಇಲ್ಲಿ ವಿಚಾರಶೀಲ ಜನರು ಏಕಾಂಗಿಗಳಾಗಬೇಕಾಗುತ್ತದೆ.

    ReplyDelete