May 23, 2015

ಅಸಹಾಯಕ ಆತ್ಮಗಳು - ಮೋಸದ ಬಲೆಯೊಳಗೆ!

madhusudan
ಕು.ಸ.ಮಧುಸೂದನ್
ನಾಲ್ಕು ಹೆಣ್ಣುಮಕ್ಕಳನ್ನು ಹುಟ್ಟಿಸಿದ ಅಪ್ಪ ಕುಡಿಕುಡಿದೇ ಸತ್ತು ಹೋದ ಮೇಲೆ ನಮ್ಮನ್ನೆಲ್ಲ ಸಾಕಿದ್ದು ನಮ್ಮಮ್ಮನೇ! ನಾಲ್ಕೂ ಜನರಲ್ಲಿ ನಾನೇ ದೊಡ್ಡವಳು.ಇರೋದಕ್ಕೊಂದು ಅಜ್ಜನ ಕಾಲದ ಹಳೇ ಕೆಂಪಂಚಿನ ಮನೆ ಬಿಟ್ಟರೆ ಅಪ್ಪ ಮಾಡಿದ್ದು ಸಾಲ ಮಾತ್ರ. ಅದನ್ನೂ ಅವನು ಸತ್ತಮೇಲೆ ಪಟೇಲರ ಮನೇಲಿ ಕೂಲಿಮಾಡಿ ಅಮ್ಮನೇ ತೀರಿಸಿದ್ದಳು. ಸ್ಕೂಲಿನ ಮುಖವನ್ನ ನಾವ್ಯಾರು ಹೆಣ್ಣು ಮಕ್ಕಳು ನೋಡಲೇಯಿಲ್ಲ.ನಮ್ಮೆಲ್ಲರಿಗೂ ವಯಸ್ಸಲ್ಲಿ ಎರಡೆರಡು ವರ್ಷಗಳ ಅಂತರವಷ್ಟೆ ಇದ್ದಿದ್ದು. ನನಗೊಂದು ಹತ್ತು ವರ್ಷವಾದ ಮೇಲೆ ಅಮ್ಮನ ಜೊತೆ ನಾನೂ ಕೂಲಿಗೆ ಹೋಗ್ತಾ ಇದ್ದೆ. ನನ್ನ ಹಿಂದಿನವಳು ಮಾತ್ರ ಪಟೇಲರ ಮನೆ ಕಸಮುಸುರೆ ಮಾಡ್ತಾ ಇದ್ದಳು. ಇನ್ನು ಉಳಿದಿಬ್ಬರೂ ಮನೆಯಲ್ಲೆ ಇರೋರು. ನಮ್ಮೂರಲ್ಲಿ ಬಸಪ್ಪ ಅಂತ ಇದ್ದ. ಸಾಕಷ್ಟು ಮಟ್ಟಿಗೆ ದುಡ್ಡಿದ್ದವನೇ. ಮುಂಚಿಂದಲೂ ಅವರೇನು ದುಡ್ಡಿದ್ದೋರಲ್ಲ. ಆದರೆ ಅವರ ಅಕ್ಕ ಒಬ್ಬಳು ಮದುವೆಯಾಗಿ ಬೆಂಗಳೂರಲ್ಲಿದ್ದಳು. ಅವಳ ಸಹಾಯದಿಂದ ಬಸಪ್ಪನ ಮನೆಯವರು ಶ್ರೀಮಂತರಾಗಿದ್ದಾರೆ ಅಂತ ಜನ ಮಾತಾಡಿಕೊಳ್ತಾ ಇದ್ದರು. ಆ ಬಸಪ್ಪ ಒಂದು ದಿನ ನಮ್ಮ ಮನೆಗೆ ಬಂದ. ಅವಾಗ ನನಗೆ ಹದಿನಾರು ವರ್ಷ ಅನಿಸುತ್ತೆ. ಬಂದವನು ಅಮ್ಮನ ಹತ್ತಿರ ಮಾತಾಡ್ತಾ ನಮ್ಮ ಅಕ್ಕನಿಗೆ ಮೈಲಿ ಹುಷಾರಿಲ್ಲ. ಅವಳ ಜೊತೆಗಿದ್ದು ಮನೆಗೆಲಸಕ್ಕೆ ಸಹಾಯ ಮಾಡೋಕೆ ಅಂತ ಒಂದು ಹುಡುಗಿ ಹುಡುಕ್ತಾ ಇದ್ದೆ. ಈಗ ನಿನ್ನ ಮನೆಗೆ ಬಂದು ನಿನ್ನ ಮಗಳನ್ನು ನೋಡಿದ ಮೇಲೆ, ಯಾಕೆ ನಿನ್ನ ಮಗಳನ್ನೇ ನಮ್ಮಕ್ಕನ ಹತ್ತಿರ ಬಿಡಬಾರದು ಅನಿಸ್ತು ಅಂತ ಕೇಳ್ತಾ ಇದೀನಿ. ಅದು ಬೆಂಗಳೂರು, ಇಲ್ಲಿ ತರ ಸಗಣಿ ಬಾಚಬೇಕಾಗಿಲ್ಲ. ಎಲ್ಲ ಕರೆಂಟಿನ ಸಾಮಾನುಗಳು. ನಿನ್ನ ಮಗಳು ಹೆಚ್ಚೇನೂ ಕಷ್ಟ ಪಡಬೇಕಿಲ್ಲ.ನಮ್ಮಕ್ಕನ ಜೊತೆ ನೆಮ್ಮದಿಯಾಗಿರಬಹುದು. ಅಲ್ಲಿದ್ರೆ ನಿನ್ನ ಮಗಳೂ ಸ್ವಲ್ಪ ನಾಜೂಕು ಕಲೀಯ ಬಹುದು..ನಾನೇನು ತಿಂಗಳಿಗಿಷ್ಟು ಕೊಡ್ತೀನಿ ಅಂತಾ ಚೌಕಾಸಿ ಮಾಡಲ್ಲ. ಬದಲಿಗೆ ವರ್ಷಕ್ಕಿಷ್ಟು ಅಂತ ಒಂದೇ ಸಾರಿ ಕೊಡ್ತೀನಿ. ಇನ್ನು ಮಿಕ್ಕಂತೆ ನಿನಗೆ ಸಣ್ಣಪುಟ್ಟ ತೊಂದರೆಯಾದರೆ ನಾನು ನೋಡ್ಕೋತಿನಿ. ಅಂತೆಲ್ಲ ಮಾತಾಡಿದ. ಮೊದಮೊದಲು ಅಮ್ಮನಿಗೆ ವಯಸ್ಸಿಗೆ ಬಂದ ಮಗಳನ್ನು ಕಂಡವರ ಮನೆ ಚಾಕರಿಗೆ ಬಿಡೋದು ಇಷ್ಟವಿರಲಿಲ್ಲ. ಅವಳು ಆಗಲ್ಲ ಅಂತಾನೆ ಹೇಳಿದಳು. ಆದರೆ ಅವಾಗಾಗಲೆ ನಮ್ಮ ಮನೆಯ ಹಿಂದುಗಡೆಯ ಭಾಗ ಬೀಳೊಹಾಗಿತ್ತು. ಅದನ್ನ ರಿಪೇರಿ ಮಾಡಿಸ್ದೇ ಹೋದರೆ ಈ ಮಳೆಗಾಲಕ್ಕೆ ಅದು ತಡಿತಾ ಇರಲಿಲ್ಲ. ಹಂಗಾಗಿ ನಾನೇ ಅಮ್ಮನಿಗೆ ನೀನೇನು ಹೆದರಬೇಡ, ನಾನು ಹೋಗ್ತೀನಿ, ದುಡ್ಡು ಕಾಸಿನ ಬಗ್ಗೆ ನೀನು ಮಾತಾಡು ಅಂದೆ. ಆಗ ವಿಧಿಯಿಲ್ಲದೆ ಅಮ್ಮ ಒಪ್ಪಿಕೊಂಡಳು. ಆ ಕಾಲಕ್ಕೆ ಅಂದರೆ ಇಪ್ಪತ್ತು ವರ್ಷಗಳ ಹಿಂದೇನೆ ವರ್ಷಕ್ಕೆ ಆರು ಸಾವಿರ ಕೊಡೋದು ಅಂತ ತೀರ್ಮಾನ ಆಗಿ ಬಸಪ್ಪ ಆಗಲೇ ಐದು ಸಾವಿರ ಕೊಟ್ಟ. ಸದ್ಯಕ್ಕೆ ನೀನು ಮನೆ ರಿಪೇರಿ ಮಾಡಿಸು, ಸಾಲದೆ ಬಂದರೆ ಉಳಿದ್ದನ್ನು ನಾನು ಕೊಡ್ತೀನಿ ಅಂದ. ಎದ್ದು ಹೋಗುವ ಮುಂಚೆ ನನಗೆ, ನಾಳೆ ಸಾಯಂಕಾಲ ಆರುಗಂಟೆ ಬಸ್ಸಿಗೆ ಹೋಗೋಕೆ ರೆಡಿಯಾಗಿರು ಅಂದು ಹೋದ.

ಬೆಂಗಳೂರಿಗೆ ಹೋಗಲು ನನಗೇನು ಸಡಗರವಿರಲಿಲ್ಲ. ಆದರೆ ಮನೆ ರಿಪೇರಿಯಾಗುತ್ತೆ ಮತ್ತೆ ತಂಗಿಯರಿಗೇನಾದರು ಮಾಡಬಹುದು ಅನ್ನೋ ಕಾರಣಕ್ಕೆ ಒಪ್ಪಿಕೊಂಡಿದ್ದೆ.

ಒಟ್ನಲ್ಲಿ ನನ್ನ ಹದಿನಾರನೇ ವರ್ಷಕ್ಕೆ ಬೆಂಗಳೂರು ಸೇರಿಕೊಂಡೆ.

ಬೆಂಗಳೂರಿನಲ್ಲಿ ಬಸಪ್ಪನ ಅಕ್ಕನಿಗೆ ಯಾವುದೇ ಕಾಯಿಲೆ ಇದ್ದಂತೆ ಕಾಣಲಿಲ್ಲ. ಆದರೆ ವಿಪರೀತ ದಪ್ಪವಿದ್ದುದರಿಂದ ಎದ್ದು ಓಡಾಡಿದರೆ ಏದುಸಿರು ಬಿಡ್ತಾ ಇದ್ದಳು. ಅವಳ ಮನೇಲಿ ಅಂತಾ ಹೇಳಿಕೊಳ್ಳುವಂತ ಕೆಲಸವೇನೂ ಇರಲಿಲ್ಲ. ಮನೇಲಿದ್ದವರು ಅವಳ ಮತ್ತು ಅವಳ ಗಂಡ ಇಬ್ಬರೇ. ಮಕ್ಕಳು ಯಾವುದೋ ಬೇರೆ ಊರಲ್ಲಿ ಓದ್ತಾ ಇದ್ದರು. ಅವಳನ್ನು ನಾನು ಅಕ್ಕ ಅಂತ ಕರೆಯೋಕೆ ಶುರು ಮಾಡಿದೆ. ಅವಳು ಕೂತುಕೊಂಡೆ ಎಲ್ಲ ಕೆಲಸವನ್ನು ಹೇಳೋಳು, ನಾನು ಮಾಡ್ತಾ ಹೋಗ್ತಾ ಇದ್ದೆ. ಒಂದೇನು ಅಂದ್ರೆ ಅವಳ ಮನೆಗೆ ತುಂಬಾ ಜನರು ಬರ್ತಾ ಇದ್ದರು. ರಾಜಕೀಯ ಸಮಾಜಸೇವೆ ಅದೂ ಇದೂ ಅಂತ ಹೇಳಿಕೊಂಡು ಹೆಂಗಸರು ಗಂಡಸರು ಬೆಳಿಗ್ಗೆಯಿಂದ ಸಾಯಂಕಾಲದವರೆಗೂ ಬರ್ತಾನೆ ಇರ್ತಿದ್ದರು. ಅವರುಗಳಿಗೆ ಕಾಫಿ, ಟೀ ಮಾಡಿಕೊಡೋದೇ ಒಂದು ದೊಡ್ಡ ಕೆಲಸವಾಗ್ತಾ ಇತ್ತು. ಹೀಗೆ ಅಕ್ಕನ ಮನೇಲಿ ಒಂದು ತಿಂಗಳು ಕಳೆದೆ. ಆಮೇಲೊಂದು ದಿನ ಅಕ್ಕ ನನ್ನ ಹತ್ತಿರ, ಪುಟ್ಟಿ ಬೇಜಾರಾಗಬೇಡ, ನನಗೆ ಗೊತ್ತಿರೋ ಎಂ.ಎಲ್.ಎ. ಒಬ್ಬರ ಮನೆಗೆ ನಿನ್ನಂತ ಒಬ್ಬ ಹುಡುಗಿ ಬೇಕಂತೆ, ಸ್ವಲ್ಪ ದಿನದ ಮಟ್ಟಿಗೆ ಅವರ ಮನೇಲಿ ಕೆಲಸ ಮಾಡ್ತೀಯಾ? ಅವರಿಗೆ ಬೇರೆ ಕೆಲಸದವರು ಸಿಕ್ಕ ಕೂಡಲೇ ನೀನು ವಾಪಾಸು ಬಂದು ಬಿಡುವಂತೆ ಅಂದಳು. ನಾನು ಸ್ವಲ್ಪ ದಡ್ಡೀನೆ. ಕೆಲಸ ಮಾಡೋಕೆ ಯಾರ ಮನೆಯಾದರೇನು? ದುಡ್ಡು ಕೊಟ್ಟಿದ್ದಾರಲ್ಲ ಪಾಪ ಅಂದುಕೊಂಡು ಒಪ್ಪಿಕೊಂಡೆ.

ಅವತ್ತೇ ಸಾಯಂಕಾಲ ಒಬ್ಬ ಹೆಂಗಸು ಬಂದು ನನ್ನ ಕರೆದುಕೊಂಡು ಹೋಗಿ ಎಂ.ಎಲ್.ಎ. ಮನೆಗೆ ಬಿಟ್ಟಳು. ಆ ದೊಡ್ಡ ಮನೆಯಲ್ಲಿ ಅಡುಗೆಗೆ ಸಾಕವ್ವ ಅನ್ನೊ ಹೆಂಗಸಿದ್ದಳು. ಪರಿಚಯ ಮಾಡಿಕೊಂಡ ಅವಳು, ಸಾಹೇಬರ ಹೆಂಡತಿ ಅವರ ಅಕ್ಕನ ಮಗಳ ಮದುವೆಗೆ ಅಂತ ಊರಿಗೆ ಹೋಗಿದಾರೆ. ಇನ್ನೊಂದೆರಡು ತಿಂಗಳಲ್ಲಿ ಬರ್ತಾರೆ. ನೀನು ಅಡುಗೆ ಮನೆಗೇನು ಬರೋದೇನು ಬೇಡ, ಹೊರಗಡೆ ಕೆಲಸ ನೋಡಿಕೊಂಡು, ಸಾಹೇಬರಿಗೇನು ಬೇಕು ಅಂತ ವಿಚಾರಿಸಿಕೊಳ್ಳೋ ಕೆಲಸ ಮಾಡು ಸಾಕು ಅಂದಳು. ಅವತ್ತು ರಾತ್ರಿ ಹತ್ತು ಗಂಟೆ ಸುಮಾರಿಗೆ ಸಾಹೇಬ್ರು ಬಂದ್ರು. ನನ್ನ ಹತ್ತಿರ ಹೆಚ್ಚಿಗೇನೂ ಮಾಡಲಿಲ್ಲ. ಚೆನ್ನಾಗಿ ಕೆಲಸ ಮಾಡಿಕೊಂಡು ಹೋಗು ಅಂತ ಹೇಳಿ ಅವರ ರೂಮಿಗೆ ಹೋದರು. ಅಡುಗೆ ಮನೆ ಪಕ್ಕದಲ್ಲಿದ್ದ ಒಂದು ರೂಮಲ್ಲಿ ನಾನು ನನ್ನ ಬಟ್ಟೆ ಬರೆ ಇಟ್ಟುಕೊಂಡು ಮಲಗಿದೆ. ಹೀಗೇ ಎರಡು ದಿನ ಕಳೆದ ಮೇಲೆ ಮೂರನೇ ರಾತ್ರಿ ಹತ್ರ ನನ್ನ ಕೈಲಿ ಹಾಲು ಕೊಟ್ಟ ಅಡುಗೆಯವಳು ತಗೊಂಡು ಹೋಗಿ ಯಜಮಾನರಿಗೆ ಕೊಡು ಅಂದಳು. ಅವರ ರೂಮಿಗೆ ಹೇಗೆ ಹೋಗೋದು ಅಂತ ಹೆದರಿಕೊಂಡೆ ಒಳಗೆ ಹೋದೆ. ಮಂಚದ ಮೇಲೆ ಮಲಗಿದ್ದ ಅವರು ಟೇಬಲ್ಲಿನ ಮೇಲೆ ಹಾಲಿಟ್ಟು ಹತ್ತಿರ ಬಾ ಅಂತ ಕರೆದರು. ಅವರಿಗೆ ಸುಮಾರು ನಲವತ್ತೈದು ವರ್ಷವಾಗಿತ್ತು ಅನಿಸುತ್ತೆ. ಮಂಚದ ಹತ್ತಿರ ಹೋದ ತಕ್ಷಣ ನನ್ನನ್ನು ಗಟ್ಟಿಯಾಗಿ ತಬ್ಬಿಕೊಂಡು ಮುತ್ತು ಕೊಡಲು ಶುರು ಮಾಡಿದ್ರು.ನಾನು ಬೇಡ ಅಂತ ಜೋರಾಗಿ ಕಿರುಚಿಕೊಂಡು ಬಾಗಿಲ ಹತ್ತಿರ ಓಡಿದೆ. ಅವರು ನಗುತ್ತಾ ಬಾಗಿಲು ಹೊರಗಡೆಯಿಂದ ಮುಚ್ಚಿದೆ ಸುಮ್ಮನೇ ಹತ್ತಿರ ಬಂದು ನಾನು ಹೇಳಿದ ಹಾಗೆ ಕೇಳು ಅಂತ ನನ್ನ ಮಂಚಕ್ಕೆ ಎಳೆದುಕೊಂಡು ಹೋದರು. ಬಹಳ ಹೊತ್ತು ನಾನವರಿಂದ ಬಿಡಿಸಿಕೊಳ್ಳಲು ಕೊಸರಾಡಿದೆ. ಆದರೆ ಸಾದ್ಯವಾಗಲಿಲ್ಲ. ಅವತ್ತು ರಾತ್ರಿ ನಾನು ನನ್ನದೆಲ್ಲವನ್ನು ಕಳೆದುಕೊಂಡು ಬಿಟ್ಟಿದ್ದೆ. ಎಲ್ಲ ಮುಗಿದಾದ ಮೇಲೆ ಅವರು ನೋಡು ನಾನು ಅಧಿಕಾರದಲ್ಲಿರೋ ದೊಡ್ಡ ವ್ಯಕ್ತಿ, ನಿನಗೋಸ್ಕರ ಏನು ಬೇಕಾದರು ಮಾಡ್ತೀನಿ. ನೀನು ಹೂಂ ಅಂದರೆ ನಾನು ನಿನ್ನ ಮದುವೆಯಾಗ್ತೀನಿ. ನನ್ನ ಹೆಂಡತಿ ಊರಿಂದ ಬರೋಕ್ಕೆ ಇನ್ನೊಂದೆರಡು ತಿಂಗಳಾಗುತ್ತೆ. ಅಷ್ಟರಲ್ಲಿ ನಿನ್ನ ಮದುವೆಯಾಗಿ ಬೇರೆ ಮನೆ ಮಾಡ್ತೀನಿ. ಅಲ್ಲಿಯವರೆಗೂ ನಮ್ಮಿಬ್ಬರ ವಿಚಾರ ಗುಟ್ಟಾಗಿರಲಿ. ಅಂತೆಲ್ಲ ಸಮಾದಾನ ಮಾಡಿದರು. ಎಲ್ಲ ಮುಗಿದು ಹೋದಮೇಲೆ ಅವನು ಏನು ಹೇಳಿದರೆ ನನಗೇನು ಅಂತ ಸುಮ್ಮನೇ ಕೂತಿದ್ದೆ.

ಅವರು ಬೆಳಿಗ್ಗೆ ಹೊರಗೆ ಹೋದಮೇಲೆ ಅಡುಗೆಯವಳನ್ನು ಮಾತಾಡಿಸಿದರೆ ಅವಳು, ಸುಮ್ಮನೆ ಸಾಹೇಬರನ್ನು ನಂಬು, ಅವರು ನಿನ್ನ ಕೈ ಬಿಡಲ್ಲ. ಅವರಿಂದ ನಿನ್ನ ಕಷ್ಟ ಎಲ್ಲ ಬಗೆಹರಿಯುತ್ತೆ ಅಂದಳು. ವಾಪಾಸು ಅಕ್ಕನ ಮನೆಗೆ ಹೋಗೋ ದಾರೀನು ಗೊತ್ತಿರಲಿಲ್ಲ. ಅದೂ ಅಲ್ಲದೆ ಆ ಬಂಗಲೆಯ ಕಾವಲುಗಾರರರನ್ನು ಮೀರಿ ಹೋಗೋದು ಸಾದ್ಯವಿರಲಿಲ್ಲ. ಅವತ್ತು ಹಗಲಿಡೀ ಅಳುತ್ತಲೇ ಇದ್ದೆ. ರಾತ್ರಿ ಅವರು ಬಂದಾಗ ಅಡುಗೆಯವಳು ಸಾಹೇಬರಿಗೆ ನೀನೆ ಊಟ ಬಡಿಸಬೇಕಂತೆ ಅಂತ ಹೇಳಿ ಅಡುಗೆ ಮನೆಯಲ್ಲೆ ಇದ್ದುಬಿಟ್ಟಳು. ನಾನು ವಿಧಿಯಿಲ್ಲದೆ ಅವರಿಗೆ ಊಟ ಬಡಿಸಿದೆ. ನಂತರ ಅವರ ರೂಮಿಗೆ ಹಾಲು ತೆಗೆದುಕೊಂಡು ಹೋದೆ. ಹಿಂದಿನ ದಿನದಂತೆ ಅವರು ಆತುರ ಪಡಲಿಲ್ಲ. ಬಾ ಅಂತ ಪಕ್ಕದಲ್ಲಿ ಕೂರಿಸಿಕೊಂಡು ನನ್ನ ಮನೆಯವರ ಬಗ್ಗೆಯೆಲ್ಲ ವಿಚಾರಿಸಿ ತಿಳಿದುಕೊಂಡರು. ಅವರಷ್ಟು ಸಮಾಧಾನದಿಂದ ಎಲ್ಲವನ್ನೂ ಕೇಳಿಸಿಕೊಂಡದ್ದನ್ನು ನೋಡಿ ನನಗೆ ಅವರ ಮೇಲೆ ನಂಬಿಕೆ ಬಂತು. ಇವರು ನನ್ನನ್ನು ಮದುವೆಯಾದರೆ, ಎರಡನೇ ಹೆಂಡತಿಯಾದರು ಪರವಾಗಿಲ್ಲ, ನಮ್ಮ ಮನೆಯವರಿಗೆಲ್ಲ ಒಂದು ದಾರಿಯಾಗುತ್ತೆ ಅನಿಸಿತು. ಅವತ್ತು ಸಂತೋಷದಿಂದ ನಾನೇ ಅವರಿಗೆ ನನ್ನನ್ನು ಒಪ್ಪಿಸಿಕೊಂಡು ಬಿಟ್ಟೆ. 

ಹೀಗೇ ಎರಡು ತಿಂಗಳಾದ ನಂತರ ಒಂದು ದಿನ ರಾತ್ರಿ ಅವರು ನಾಳೆ ಸಾಯಂಕಾಲ ನನ್ನ ಹೆಂಡತಿ ಊರಿಂದ ಬರ್ತಾಳೆ. ಅವಳು ಬಂದಾಗ ನೀನಿಲ್ಲಿದ್ದರೆ ಅಷ್ಟು ಚೆನ್ನಾಗಿರೊಲ್ಲ. ನಾಳೆ ಬೆಳಿಗ್ಗೆ ನನ್ನ ಪರಿಚಯದವರೊಬ್ಬರ ಮನೇಲಿ ಬಿಡ್ತೀನಿ.ಇನ್ನೊಂದು ವಾರದಲ್ಲಿ ಎಲೆಕ್ಷನ್ ಶುರುವಾಗುತ್ತೆ. ಅದು ಮುಗಿದ ಕೂಡಲೇ ಮದುವೆಯಾಗೋಣ. ಹೇಗಾದ್ರು ಮಾಡಿ ಅಲ್ಲೀತನಕ ಅವರ ಮನೇಲಿರು ಅಂತ ಹೇಳಿದರು. ಹೇಳಿದ ಹಾಗೇನೆ ಮಾರನೇ ದಿನ ಒಂದು ದೊಡ್ಡ ಮಹಡಿ ಮನೆಗೆ ಕರೆದುಕೊಂಡು ಹೋಗಿಬಿಟ್ಟರು. ಅಲ್ಲಿ ಅಕ್ಕ ಸಹ ಇದ್ದಳು. ಅವಳ ಜೊತೆಯಲ್ಲಿ ಐವತ್ತು ವರ್ಷದ ವಿಮಲಾ ಅನ್ನುವ ಹೆಂಗಸು ಸಹ ಇದ್ದಳು. ಅಕ್ಕ ನನ್ನ ನೋಡಿದೊಡನೆ ಏನೇ ಪುಟ್ಟಿ ಸಾಹೇಬರ ಮನೆಯವಳಾಗಿಬಿಟ್ಟೆ. ನಿನ್ನ ಅದೃಷ್ಟ ನೋಡು ಅಂತ ಹೇಳಿ ಊರಲ್ಲಿ ನಿಮ್ಮ ಮನೆಯವರೆಲ್ಲ ಚೆನ್ನಾಗಿದ್ದಾರೆ ಅವರ ಬಗ್ಗೆ ಯೋಚನೆ ಮಾಡಬೇಡ ಅಂತ ಹೇಳಿ ಹೊರಟು ಹೋದಳು. ಆ ಮನೆಯ ಮಹಡಿಯಲ್ಲಿ ನನಗೊಂದು ರೂಮು ಕೊಟ್ಟರು. ಆ ಮನೆಯಲ್ಲಿ ತುಂಬಾ ಜನ ಹುಡುಗಿಯರು ಹೆಂಗಸರು ಇದ್ದರು. ಯಾಕೋ ಆ ಮನೆಯ ವಾತಾವರಣ ನೋಡಿನನಗೆ ಅನುಮಾನ ಶುರುವಾಯಿತು. ಒಂದು ವಾರ ಯಾರ ಜೊತೆಗೂ ಮಾತಾಡದೆ ಕಾಲ ಕಳೆದೆ. ರಾತ್ರಿ ಎಷ್ಟೊತ್ತಾದರು ಕೆಳಗಿನ ರೂಮುಗಳ ದೀಪ ಆರುತ್ತಿರಲಿಲ್ಲ. ಆಗಾಗ ಯಾರ್ಯಾರೊ ಗಂಡಸರು ಬಂದು ಹೋಗುವುದನ್ನೆಲ್ಲ ನೋಡಿ ನನಗೆ ಯಾರನ್ನಾದರು ಕೇಳಬೇಕು ಅನ್ನಿಸಿತು. ವಯಸ್ಸಲ್ಲಿ ನನಗಿಂತ ಸ್ವಲ್ಪ ದೊಡ್ಡವಳಾದ ಹೆಂಸೊಬ್ಬಳು ನನ್ನ ಜೊತೆ ಸಲಿಗೆಯಿಂದ ಮಾತಾಡುತ್ತಿದ್ದಳು. ಒಂದು ದಿನ ನಾವಿಬ್ಬರೇ ಇದ್ದಾಗ ಅವಳನ್ನು ಇದರ ಬಗ್ಗೆ ಕೇಳಿದೆ. ಆಗವಳು ಆ ಮನೆಯೊಳಗೆ ನಡೆಯುವ ವ್ಯವಹಾರದ ಬಗ್ಗೆ. ಅಲ್ಲಿರುವ ಅಷ್ಟೂ ಹೆಣ್ಣುಮಕ್ಕಳ ಬಗ್ಗೆ ಹೇಳಿದಳು. ನನಗದೆಲ್ಲ ಹೊಸದು. ಆದರೆ ಇವತ್ತಲ್ಲ ನಾಳೆ ಅವರು ಬಂದು ನನ್ನ ಕರೆದುಕೊಂಡು ಹೋಗ್ತಾರೆ ಅನ್ನೊ ನಂಬಿಕೆಯಲ್ಲೇ ಇದ್ದೆ. ಆದರೆ ಆ ಮನೆಯವರಿಗೆ ಅವರು ಬರುವುದಿಲ್ಲವೆಂಬುದು ಮುಂಚೆಯೇ ಗೊತ್ತಿತ್ತೇನೋ ಅನಿಸುತ್ತೆ. ಒಂದು ತಿಂಗಳಾದ ಮೇಲೆ ಮನೆ ಯಜಮಾನಿ ನನ್ನ ರೂಮಿಗೆ ಬಂದು, ನೋಡು, ನಿಮ್ಮ ಸಾಹೇಬರಿಗೆ ಎಲೆಕ್ಷನ್‍ಗೆ ಟಿಕೇಟ್ ಸಿಗಲಿಲ್ಲವಂತೆ. ಇನ್ನವರು ಬೆಂಗಳೂರಿಗೆ ಬರೋದೆ ಅನುಮಾನ, ಇಂತದ್ದರಲ್ಲಿ ಅವರು ಮತ್ತೆ ಬಂದು ಕರೆದುಕೊಂಡು ಹೋಗೋದು ಸಾದ್ಯವಿಲ್ಲ. ಅವರಿಗಿದೆಲ್ಲ ಹೊಸದೇನಲ್ಲ. ಸುಮ್ಮನೆ ನಿನ್ನ ಇಲ್ಲಿ ಸಾಕಿಕೊಳ್ಳೋಕೆ ಆಗಲ್ಲ. ನೀನೂ ಬೇರೇಯವರ ತರಾ ಬದುಕೊದನ್ನ ಕಲಿ ಅಂದಳು. ನಾನು ಅಕ್ಕನ ಮನೆಗೆ ಕಳಿಸಿ ಅಂತ ಅವಳಿಗೆ ಗೋಗರೆದೆ. 

ಮಾರನೇ ದಿನ ಸಂಜೆ ನೋಡು ನಿಮ್ಮಕ್ಕನ ಕಡೆಯವರು ಬಂದಿದ್ದಾರೆ, ಅವರ ಜೊತೆ ಹೋಗು. ನಿನ್ನ ಬಟ್ಟೆಯೆಲ್ಲ ಆಮೇಲೆ ನಾನೇ ಕಳಿಸ್ತೀನಿ ಅಂತ ಯಾವುದೋ ಕಾರಿಗೆ ಹತ್ತಿಸಿಕಳಿಸಿದಳು. ಕಾರಿನಲ್ಲಿದ್ದ ವ್ಯಕ್ತಿ ನನ್ನ ಊರ ಹೊರಗಿನ ಯಾವುದೋ ತೋಟದ ಮನೆಗೆ ಕರೆದುಕೊಂಡು ಹೋಗಿಬಿಟ್ಟ. ನನ್ನ ಈ ದಂಧೆಗೆ ನೂಕಲು ಅವರೆಲ್ಲ ಸೇರಿ ಮಾಡಿದ ಪ್ಲಾನ್ ಅದು. ಒಟ್ಟಿನಲ್ಲಿ ಅವತ್ತು ರಾತ್ರಿ ಅವನೊಂದಿಗೆ ಮಲಗಿ ಜಗತ್ತಿನ ದೃಷ್ಠಿಯಲ್ಲಿ ನಾನು ಸೂಳೆಯಾಗಿ ಬಿಟ್ಟಿದ್ದೆ.

ಇನ್ನೇನು ಉಳಿದಿತ್ತು, ಸರಿ ಸುಮಾರು ಮೂರು ವರ್ಷಗಳ ಕಾಲ ಅದೇ ಮನೆಯಲ್ಲಿ ದಂಧೆ ಮಾಡಿದೆ. ಈ ನಡುವೆ ಇಷ್ಟವಿಲ್ಲದೇ ಹೋದರು ಅಕ್ಕನನ್ನು ಬೇಟಿಯಾಗಿ ಮನೆಯವರ ಬಗ್ಗೆ ವಿಚಾರಿಸಿಕೊಳ್ಳುತ್ತಿದ್ದೆ. ಅವರ ಮೂಲಕವೇ ಊರಿಗೆ ತಿಂಗಳು ತಿಂಗಳು ದುಡ್ಡು ಕಳಿಸುತ್ತಿದ್ದೆ. ಊರಲ್ಲಿ ಮನೆಯವರಿಗೆ ನಾನೀಗ ಒಂದು ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದೇನೆಂದು ಅಕ್ಕನ ಮೂಲಕವೇ ನಂಬಿಸಿ ಬಿಟ್ಟಿದ್ದೆ. 

ಆ ಮನೆಯಲ್ಲಿ ಮೂರು ವರ್ಷಗಳನ್ನು ಕಳೆಯೊವಷ್ಟರಲ್ಲಿ ಈ ದಂಧೆಯ ಎಲ್ಲ ಪಟ್ಟುಗಳನ್ನೂ ಕಲಿತು ಬಿಟ್ಟಿದ್ದೆ. ಅದೇ ಸಮಯದಲ್ಲಿ ಸಿನಿಮಾದಲ್ಲಿ ನಟಿಯರಾಗಲು ಬಂದು ದಂಧೆಗೆ ಇಳಿದಿದ್ದ ಒಂದಿಬ್ಬರು ನನಗೆ ಪರಿಚಯವಾಗಿದ್ದರು. ನಾವು ಮೂರೂಜನ ಮಾತಾಡಿಕೊಂಡು ಆ ಮನೆಯಿಂದ ಹೊರಬಂದು ಒಂದು ಒಳ್ಳೆಯ ಏರಿಯಾದಲ್ಲಿ ಮನೆ ಮಾಡಿಕೊಂಡು ಕೆಲಸಕ್ಕೆ ಹೋಗುವ ಹೆಣ್ಣಮಕ್ಕಳ ರೀತಿಯಲ್ಲ ಬದುಕತೊಡಗಿದೆವು. ಹಗಲು ಹೊತ್ತು ಮಾತ್ರ ಕಾಲ್‍ಗರ್ಲಗಳ ರೀತಿಯಲ್ಲಿ ಕೆಲಸ ಮಾಡತೊಡಗಿದ್ದೆವು. ಆಮೇಲೆ ಅಮ್ಮನ ಒತ್ತಾಯದ ಮೇಲೆ ವರ್ಷಕ್ಕೆ ಒಂದುಸಾರಿ ಊರಿಗೆ ಹೋಗಿಬರಲು ಶುರು ಮಾಡಿದೆ. ಏನೂ ಓದದ ನಾನು ಸಾಕಷ್ಟು ದುಡ್ಡು ಖರ್ಚು ಮಾಡಿ ತಂಗಿಯರ ಮದುವೆ ಮಾಡಿದ್ದು ಊರವರಲ್ಲಿ ಅನುಮಾನ ಮೂಡಿಸಿದಂತೆ ಅಮ್ಮನಿಗೂ ಅನುಮಾನ ಮೂಡಿಸಿತು. ಒಂದು ದಿನ ಅವಳನ್ನು ಕೂರಿಸಿಕೊಂಡು ಎಲ್ಲ ವಿಷಯಗಳನ್ನು ಹೇಳಿಬಿಟ್ಟೆ. ಕೇಳಿದ ಅಮ್ಮ ಮೊದಮೊದಲು ಎದೆ ಬಡಿದುಕೊಂಡು ಅತ್ತಳು. ಆದರೆ ನಂತರದಲ್ಲಿ ನನ್ನ ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡು ಸುಮ್ಮನಾದಳು. ಕೊನೆಗೆ ಅಲ್ಲಿ ಊರಲ್ಲಿ ಅವಳೊಬ್ಬಳಿದ್ದು ಏನು ಮಾಡುವುದು ಅಂತ ಹೇಳಿ ಅವಳನ್ನೂ ಬೆಂಗಳೂರಿಗೆ ಕರೆದುಕೊಂಡು ಬಂದು ಬಿಟ್ಟೆ. ಈಗ ನನಗೆ ನಲವತ್ತು ನಡೆಯುತ್ತಿದೆ. ಸೆಕ್ಸ್ ವಿಷಯದಲ್ಲಿ ನನ್ನಂತವಳಿಗೆ ಸುಖದ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಈಗ ನಾನು ಎಲ್ಲದರಿಂದ ದೂರವಾಗಿ ಬದುಕುತ್ತಿದ್ದೇನೆ. ವಯಸಿದ್ದಾಗ ಉಳಿಸಿದ ಒಂದಷ್ಟು ದುಡ್ಡನ್ನು ಬ್ಯಾಂಕಿನಲ್ಲಿ ಹಾಕಿದ್ದೀನಿ ಅದರಲ್ಲಿ ಬರೋ ಬಡ್ಡಿಯಲ್ಲಿ ಇಬ್ಬರ ಜೀವನ ಮಾಡೋದು ಕಷ್ಟ ಅಂತಾ ನಾನೊಂದು ಪ್ರೈವೆಟ್ ಕಂಪನಿಯಲ್ಲಿ ಅಟೆಂಡರ್ ಕೆಲಸಕ್ಕೆ ಸೇರಿಕೊಂಡಿದಿನಿ.

ನೀವು ಹೇಳೋದು ನಿಜಾನೆ. ಊರಿನ ಬಸಪ್ಪನ ಅಕ್ಕ ಆಗ ಮಾಡ್ತಾ ಇದ್ದದ್ದು ಹಳ್ಳಿಗಳಿಂದ ಮನೆಗೆಲಸಕ್ಕೆ ಅಂತ ಹುಡುಗಿಯರನ್ನು ಕರೆದುಕೊಂಡು ಹೋಗಿ ಸಾಹೇಬರಂತ ದೊಡ್ಡವರಿಗೆ ಸಪ್ಲೈ ಮಾಡೋ ಕೆಲಸ. ಆಮೇಲವಳು ಅವರೆಲ್ಲ ಉಪಯೋಗಿಸಿದ ಹುಡುಗಿಯರನ್ನ ಇನ್ನೊಂದು ಮನೆಗೆ ತಲುಪಿಸಿ ಕಸುಬಿಗೆ ಇಳಿಸ್ತಾ ಇದ್ದಳು ಅಂತ. ಇಂತದ್ದೊಂದು ಕೆಲಸದಲ್ಲಿ ಆ ಎಂ.ಎಲ್.ಎ. ಅವನ ಮನೆ ಅಡುಗೆಯವಳು ಎಲ್ಲರೂ ಬಾಗಿಗಳು. ಆದರೆ ಆ ಚಿಕ್ಕ ವಯಸ್ಸಲ್ಲಿ, ಒಂದಕ್ಷರವನ್ನು ಓದಿರದ ನನ್ನಂತ ಹಳ್ಳಿ ಹುಡುಗೀಗೆ ಆಗ ಇವೆಲ್ಲ ಹೇಗೆ ಅರ್ಥವಾಗಬೇಕು ಹೇಳಿ. ಈಗ ಅದನ್ನೆಲ್ಲ ಯೋಚಿಸಿ ಏನು ಮಾಡಬೇಕಾಗಿದೆ, ಬಿಡಿ. ಮಾತು ಮುಗಿಸಿ ಎದ್ದವಳು ಅವರಮ್ಮನನ್ನು ಪರಿಚಯಿಸಿದಳು. ಅವರಿಗೆ ನಮಸ್ಕಾರ ಮಾಡಿ ಎದ್ದು ಬರುವಾಗ ಬದುಕು ನಾವಂದುಕೊಂಡಷ್ಟು ಸುಂದರವೇನಲ್ಲವೆನಿಸಿತು!

No comments:

Post a Comment