Apr 14, 2015

ಲವ್ ಮೂಡಿತಣ್ಣ!.....ಹೀಗೆ ಮೂಡಿತಣ್ಣ!

iduvarege iddilla
ಆರಂಭ ಚಿತ್ರದ ‘ಲವ್ ಮೂಡಿತಣ್ಣ’ ಹಾಡು ಹುಟ್ಟಿದ ರೀತಿಯ ಬಗ್ಗೆ ಚಿತ್ರದ ನಿರ್ದೇಶಕ ಎಸ್. ಅಭಿ ಹನಕೆರೆ ಅವರು ನೆನಪುಗಳನ್ನು ಹಂಚಿಕೊಂಡಿದ್ದಾರೆ. ಪ್ರೀತಿ ಮೂಡುವ ಸಂದರ್ಭಕ್ಕೆ ತಕ್ಕಂತೆ ಒಂದು ಹಾಡಿಗೆ ಟ್ಯೂನ್ ಹಾಕಲು ಗುರುಕಿರಣ್ ಅವರ ಜೊತೆ ಕುಳಿತುಕೊಂಡಾಗ ಗುರುಕಿರಣ್ ಅನೇಕ ಟ್ಯೂನುಗಳನ್ನು ಮಾಡಿದರು. ಅದರಲ್ಲಿ ಒಂದು ಇಷ್ಟವಾಗಿ, ಅದರ ಮೇಲೆ ಎರಡು ತಿಂಗಳು ಕೆಲಸ ಮಾಡಿದರು. ಇದ್ದಕ್ಕಿದ್ದಂತೆ ಗುರುಕಿರಣ್ ಅವರಿಗೆ, ಈ ಚಿತ್ರ ಬೇರೆ ರೀತಿಯೆ ಇದೆ, ಇದಕ್ಕೆ ಇನ್ನೂ ವಿಭಿನ್ನವಾದ ಟ್ಯೂನ್ ಮಾಡೋಣವೆಂದು ಅಲ್ಲಿಯವರೆಗೆ ಮಾಡಿದ್ದ ಟ್ಯೂನುಗಳನ್ನೆಲ್ಲಾ ತೆಗೆದು ಹಾಕಿದರು, ಇಷ್ಟವಾದ ಟ್ಯೂನನ್ನೂ ತೆಗೆದುಹಾಕಿದರು. ಬೇರೆ ಆಲೋಚನೆಗೆ ತಡಕಾಡುವಾಗ , ಒಂದು ದಿನ ಬೆಳಿಗ್ಗೆ ಎಂಟರಿಂದ ಮಧ್ಯರಾತ್ರಿ ಎರಡು ಮೂವತ್ತರ ತನಕ ಗುರುಕಿರಣ್ ಮತ್ತು ಅಭಿ ಲೋಕಾರೂಢಿ ಮಾತುಗಳನ್ನು ಆಡುತ್ತ ಕಾಲ ಕಳೆದರು.
abhi hanakere
ಅಭಿಯವರು ಮನೆಗೆ ಹೋಗಿ ಇನ್ನೇನು ಮಲಗಬೇಕು, ಆಗ ಕರೆ ಮಾಡಿದ ಗುರುಕಿರಣ್ ಒಂದು ಸಾಲು ಹೊಳೆದಿದೆ ಎನ್ನುತ್ತ ಟ್ಯೂನ್ ಜೊತೆಗೆ ’ಲವ್ ಮೂಡಿತಣ್ಣ' ಎಂದರು (ಹಾಡು ಕೇಳಲು ಇಲ್ಲಿ ಕ್ಲಿಕ್ಕಿಸಿ). ಅಭಿಯವರು, ಚೆನ್ನಾಗಿದೆ; ಮೂರು ದಿನದ ನಂತರ ಮತ್ತೆ ಕಾಡುತ್ತಾ ನೋಡೋಣ ಎಂದರು. ಒಂದು ವಾರದ ನಂತರ ಗುರುಕಿರಣ್ ಭೇಟಿಯಾಗಿ , ಸಂಗೀತ ಮಾಡಲು ಕುಳಿತಾಗಲು, ಆ ಟ್ಯೂನ್ ಕಾಡಿತು. ಆದ್ದರಿಂದ ಅದನ್ನು ಅಂತಿಮ ಆಯ್ಕೆ ಮಾಡಿದರು. ಆ ಟ್ಯೂನ್‍ಗೆ ಗೊಟೂರಿಯವರ ಕೈಯಲ್ಲಿ ಸಾಹಿತ್ಯ ಬರೆಸಿದರೆ ಚೆನ್ನಾಗಿರುತ್ತೆ ಎಂದು ಗುರುಕಿರಣ್ ಸಲಹೆ ನೀಡಿದರು. ಅದರಂತೆ ಅಭಿಯವರು, ಗೊಟೂರಿಯವರನ್ನು ಭೇಟಿ ಮಾಡಿ, ಅವರ ಜೊತೆ ಕಾರಿನಲ್ಲಿ ಸುಮಾರು ಎರಡು ಗಂಟೆಗಳ ಕಾಲ , ಬೆಂಗಳೂರಿನ ಸುತ್ತಮುತ್ತಾ ಓಡಾಡುತ್ತ ಹಾಡಿನ ಸಂದರ್ಭವನ್ನು ವಿವರಿಸಿ, ಆಮೇಲೆ ಕಾಡುಹರಟೆ ಹೊಡೆಯುತ್ತ ಕಾಲ ತಳ್ಳಿದರು. ನಂತರ, ಗುರುಕಿರಣ್ ಮನೆಗೆ ಬಂದು ಮತ್ತೆ ಮೂರು ಗಂಟೆ ಹರಟೆ! ಹರಟೆ ಮುಗಿದ ಮೇಲೆ ಕೇವಲ ಹತ್ತು ನಿಮಿಷದಲ್ಲಿ, ಗೊಟೂರಿಯವರು ಲವ್ ಮೂಡಿತಣ್ಣ ಹಾಡನ್ನು ಬರೆದು ಅಭಿಯವರ ಕೈಗಿತ್ತು, “ಇದು ದೈವ ಪ್ರೇರಣೆ, ನನ್ನಿಂದ ಈ ಹಾಡು ಬರೆಯುವಂತಾಗಿದೆ. ಈ ಹಾಡಿನಲ್ಲಿ ನೀವು ಯಾವ ಒಂದು ಪದವನ್ನೂ ಬದಲಾಯಿಸದೆ, ಸಂಗೀತಕ್ಕೆ ಅಳವಡಿಸುತ್ತೀರ ಎನ್ನುವ ನಂಬಿಕೆ ನನಗಿದೆ” ಎಂದು ಹೇಳಿ ಹೊರಟು ಹೋದರು. ಈ ಸಾಹಿತ್ಯಕ್ಕೆ ಮಾಲ್ಗುಡಿ ಶುಭ ಅವರ ಧ್ವನಿ ಹೊಂದುತ್ತದೆ ಎಂದ ಗುರುಕಿರಣ್ ಮಾಲ್ಗುಡಿ ಶುಭಾರನ್ನು ಕರೆಸಿ, ಹಾಡಿಸಿದಾಗ, ಅವರು ಸಹ, ಹಾಡುವುದರಲ್ಲಿ ತಲ್ಲೀನರಾಗಿ “ಈ ಹಾಡು, ನಾನು ಹಾಡಿದ, ಅತ್ಯುತ್ತಮ ಹಾಡುಗಳಲ್ಲಿ ಒಂದಾಗಲಿದೆ” ಎಂದು ಸಂತಸ ವ್ಯಕ್ತಪಡಿಸುತ್ತ “ಶುಭವಾಗಲಿ” ಎಂದು ಹಾರೈಸಿದರು.

gurukiran
ಹಾಡು ಸಿದ್ಧವಾದ ನಂತರ, ಅಭಿಯವರಿಗೆ ಭಯ ಕಾಡುವುದಕ್ಕೆ ಶುರುವಾಗಿತ್ತಂತೆ, ಚಿತ್ರದಲ್ಲಿ ಈ ಹಾಡೇ ಹೈಲೈಟ್ ಆಗಿಬಿಟ್ಟು, ಉಳಿದಿದ್ದೆಲ್ಲಾ ಸಪ್ಪೆಯಾಗಬಹುದು ಎಂಬುದೇ ಆ ಭಯ.

ಇನ್ನು ಹಾಡಿನ ಚಿತ್ರೀಕರಣವನ್ನು ಮೂವತ್ತು ದಿನಗಳ ಕಾಲ ಪ್ರತಿನಿತ್ಯ, ಬೆಳಗ್ಗೆ ಮತ್ತು ಸಂಜೆ, ಹೊಂಬಣ್ಣದ ಬೆಳಕಿನಲ್ಲಿ (ಗೋಲ್ಡನ್ ಅವರ್ಸ್) ಒಂದೊಂದೆ ದೃಶ್ಯವನ್ನು ನೃತ್ಯ ಸಂಯೋಜಕರಿಲ್ಲದೆ, ಸ್ವತಃ ಅಭಿಯವರೇ ಚಿತ್ರೀಕರಣ ಮಾಡಿ ಮುಗಿಸಿದರು. ಹಾಡು ಕೇಳಿದವರೆಲ್ಲ, ಗುರುಕಿರಣ್ ಇಲ್ಲಿಯವರೆಗು ಕಂಪೋಸ್ ಮಾಡಿದ ಅತ್ಯುತ್ತಮ ಹಾಡುಗಳಲ್ಲಿ, ಲವ್ ಮೂಡಿತಣ್ಣ ಹಾಡು ಕೂಡ ಒಂದು ಎಂದು ಹೇಳುತ್ತಾರೆ.

ಈಗಾಗಲೇ, ಈ ಚಿತ್ರದ ಹಾಡುಗಳು, ಭಾರಿ ಸದ್ದು ಮಾಡಿವೆ. ಅದರಲ್ಲೂ ಲವ್ ಮೂಡಿತಣ್ಣ ಹಾಡು ತುಂಬಾ ಜನರ ಪ್ರೀತಿಗೆ ಪಾತ್ರವಾಗಿದೆ. ಡಿ.ಟಿ.ಎಸ್ ಹಂತದಲ್ಲಿರುವ ಆರಂಭ ಚಿತ್ರ ಇನ್ನು ಕೆಲವೇ ದಿನಗಳಲ್ಲಿ ಜನರ ಮುಂದೆ ಬರಲು ಸಿದ್ಧವಾಗುತ್ತಿದೆ.

No comments:

Post a Comment