Mar 7, 2015

ಸಮಾನತೆಯ ಕನಸಿನೊಂದಿಗೆ....

ladai prakashana
ಡಾ. ಪ್ರೀತಿ ಶುಭಚಂದ್ರ ಮತ್ತು ಎಂ. ಎನ್. ಸುಮನ ಸಂಪಾದಿಸಿರುವ 'ಸಾಕಾರದತ್ತ ಸಮಾನತೆಯ ಕನಸು' ಪುಸ್ತಕ ಮಹಿಳಾ ದಿನಾಚರಣೆಯ ಅಂಗವಾಗಿ ಬೆಂಗಳೂರಿನಲ್ಲಿ ಬಿಡುಗಡೆಯಾಗುತ್ತಿದೆ. ಡಾ. ಪ್ರೀತಿ ಶುಭಚಂದ್ರರವರ ಪ್ರಸ್ತಾವಿಕ ಮಾತುಗಳು ಹಿಂಗ್ಯಾಕೆಯ ಓದುಗರಿಗಾಗಿ.

ಮಹಿಳಾ ದಿನದ ಆಚರಣೆಗೆ ಮಹಿಳಾ ಬಿಡುಗಡೆಯ ಮಹಾನ್ ಆಶಯವಿದೆ. ಈ ಆಶಯಕ್ಕೆ ಖಚಿತವಾದ ರಾಜಕೀಯ ಉದ್ದೇಶವಿದೆ. ಶೋಷಣಮುಕ್ತ ಬದುಕಿನೆಡೆಗೆ ಮಹಿಳಾ ಬದುಕು ಬದಲಾಗಬಲ್ಲದೆಂಬ ದೃಢ ನಂಬಿಕೆ ಮತ್ತು ಆತ್ಮವಿಶ್ವಾಸವಿದೆ. ಈ ನಂಬಿಕೆ ಮತ್ತು ಆತ್ಮವಿಶ್ವಾಸಕ್ಕೆ ತಳಹದಿಯಾಗಿ ಹಿಂಸಾಮುಕ್ತ ಸರ್ವ ಸಮಾನತೆಯುಳ್ಳ ಸಾಮಾಜಿಕ ಬದುಕನ್ನು ಕುರಿತ ಆರೋಗ್ಯಮುಖಿ ಕನಸುಗಳಿವೆ. ಈ ಕನಸುಗಳು ಕೇವಲ ಪಲಾಯನವಾದಿ ಕಲ್ಪಿತ ಭ್ರಮೆಗಳಲ್ಲ. ಏಕೆಂದರೆ ಸ್ತ್ರೀ-ಪುರುಷ ಅಸಮಾನತೆ ಅನಾದಿ ಕಾಲದಿಂದಲೂ ಇದೆ ಎಂಬ ವಿಧಿವಾದಿ ನಿಷ್ಕ್ರಿಯತೆಯ ಕಡೆ ದೂಡಬಲ್ಲ ಸರ್ವೇ ಸಾಮಾನ್ಯ ಜನಪ್ರಿಯ ನಿಲುವು ತಾಂಡವವಾಡುತ್ತಿದೆ. ಇದು ನಮ್ಮೆಲ್ಲರ ಬದುಕನ್ನು ನುಂಗಿ ನೊಣೆಯಬಲ್ಲ ಸಾಮಾಜಿಕ ಬದುಕಿಗೆ ಅನಾರೋಗ್ಯಕ್ಕೆ ಕಾರಣವಾಗಿದೆ. 
ಇಂಥ ಅನಾರೋಗ್ಯ ಪೀಡಿತ ಸಾಮಾಜಿಕ ಬದುಕನ್ನು ಗುಣಮುಖಗೊಳಿಸುವ ಹೊಣೆಗಾರಿಕೆಯನ್ನು ಮಹಿಳಾ ಹೋರಾಟಗಾರರು ಹೊತ್ತಿದ್ದಾರೆ. ಲಿಂಗ ಅಸಮಾನತೆಯ ಕೇಂದ್ರದಿಂದಲೇ ಅಧಿಕಾರ ಹಾಗೂ ಯಾಜಮಾನ್ಯದ ಪರಿಕಲ್ಪನೆಗಳು ಸೃಷ್ಟಿಗೊಂಡು ಕಾರ್ಯನಿರ್ವಹಿಸುತ್ತಿವೆ. ಸ್ತ್ರೀ-ಪುರುಷರ ಅಸಮಾನತೆಯ ಸ್ಥಾಪನೆಗಾಗಿ ಕಟ್ಟಲಾಗಿರುವ ತಾತ್ವಿಕ ಪರಿಭಾಷೆಯ ಸುತ್ತಲೇ ಸಾಹಿತ್ಯ, ಧರ್ಮ, ರಾಜಕೀಯ, ಯುದ್ಧ ಮೊದಲಾದ ವಲಯಗಳ ಮೀಮಾಂಸೆಗಳಲ್ಲಿ ಮಹಿಳಾ ವಿರೋಧಿ ಅಂಶಗಳು ಸೂಕ್ಷ್ಮಾತಿಸೂಕ್ಷ್ಮವಾಗಿ ಹಾಸುಹೊಕ್ಕಾಗಿವೆ. ಇಷ್ಟಾಗಿ, ತಮಗೆಂದೇ ನಿರ್ಮಿಸಲಾದ ಸಾಮಾಜಿಕ ಲಿಂಗ ಪಾತ್ರತೆಯ ಇಕ್ಕಟ್ಟಿನಲ್ಲೇ ಕೈಕಟ್ಟಿ ಕೂರದೆ ಮಹಿಳೆಯರು ಕ್ರಿಯಾಶೀಲರಾಗಿದ್ದಾರೆ. ವ್ಯಕ್ತಿತ್ವದ ಗುರುತಿಲ್ಲದ ಮುಖಹೀನ ಸ್ಥಿತಿಗೆ ದೂಡಿದ ಸಾಮಾಜಿಕ ನಿರ್ಬಂಧಗಳನ್ನು ಸ್ವಂತ ಆಯ್ಕೆ ಹಾಗೂ ಹೊಣೆಗಾರಿಕೆಯ ಜವಾಬ್ದಾರಿಯೊಂದಿಗೆ ಒಡೆಯಲೆತ್ನಿಸಿದ್ದಾರೆ. ಈ ಯತ್ನಕ್ಕೆ ಬಹುಮುಖಿ ಆಯಾಮಗಳಿವೆ. ಮೌನ, ರಾಜಿ-ಸಂಧಾನ, ಪ್ರಶ್ನೆ, ಪ್ರತಿಭಟನೆ ಪ್ರತಿಸ್ಪಂದನ, ಸಾಮೂಹಿಕ ಹೋರಾಟಗಳವರೆಗೂ ಹರಹಿದೆ. 

ಎಲ್ಲ ದಿನಾಚರಣೆ, ಸಂಭ್ರಮಗಳು ಸಾಂಕೇತಿಕವಾಗುತ್ತ, ಕೇವಲ ಸಂಭ್ರಮದ, ಸ್ವಾರ್ಥಪೂರಿತ, ರಾಜಕೀಯ ಲಾಭೋದ್ದೇಶವುಳ್ಳ ಸಾಂಸ್ಕೃತಿಕ ಅವನತಿ ಸೂಚಕವಾಗಿಯೂ ನಡೆಯುತ್ತಿರುವ ಅಪಾಯವನ್ನು ನಾವೆಲ್ಲ ಮನಗಾಣಬೇಕಿದೆ. ಮತ್ತೆಮತ್ತೆ ಮಹಿಳಾ ಬದುಕನ್ನು ಹಿನ್ನಡೆಗೊಳಿಸಬಲ್ಲ ಇಂಥ ಅಪಾಯಗಳ ಮಧ್ಯೆಯೇ ಮಹಿಳೆಯರಾಗಿ ನಮ್ಮ ಬದುಕನ್ನು ನಾವೇ ಅರ್ಥಪೂರ್ಣವಾಗಿ ವಿನ್ಯಾಸಗೊಳಿಸಿಕೊಳ್ಳಬೇಕಾದಾಗ ಕರ್ತವ್ಯ ಪ್ರಜ್ಞೆಯ ದ್ಯೋತಕವಾಗಿ ಅಂತಾರಾಷ್ಟ್ರೀಯ ಮಹಿಳಾ ದಿನಚರಣೆ ಇದೆ. ಚರಿತ್ರಾರ್ಹ ಫಾನ್ಸ್ ನ ಕ್ರಾಂತಿ, ರಾಷ್ಯದ ಕ್ರಾಂತಿಗೆ ನೇರ ಪ್ರೇರಣೆಯನ್ನೊದಗಿಸಿದ ಮಹಿಳಾ ಚಳುವಳಿಗಳ ಚರಿತ್ರೆಯೊಂದಿಗೆ ಸಾತತ್ಯ ಸಂಬಂಧ ಹೊಂದುವುದು ಮಹಿಳೆಯರಿಗೆ ಅತ್ಯಗತ್ಯವಾಗಿದೆ. ಮಹಿಳೆಯರ ಮೇಲಿನ ವಿವಿಧ ಸ್ವರೂಪದ ದೌರ್ಜನ್ಯದ ವಿರುದ್ಧ ಮಂಡಿಸಲಾದ ಪ್ರತಿಭಟನಾತ್ಮಕ ನಿರಾಕರಣೆಗೆ ಆಚರಣಾತ್ಮಕ ಸ್ವರೂಪವನ್ನು ಅಂತಾರಾಷ್ಟ್ರೀಯ ಮಹಿಳಾ ದಿನದ ಕಲ್ಪನೆ ನೀಡಿದೆ. ಮಹಿಳೆಯ ಸ್ಥಾನ ಚರಿತ್ರೆಯಲ್ಲಿದೆ. ಆ ಚರಿತ್ರೆಯನ್ನು ನಿರ್ಮಿಸುತ್ತಿರುವ ಸಾಮಾಜಿಕ ಕ್ರಾಂತಿಯಲ್ಲಿ ಆಕೆಯ ಪಾತ್ರ ಪ್ರಧಾನವಾದುದೆಂಬುದನ್ನು ಸಾರ್ವಜನಿಕ ಪ್ರಣಾಳಿಕೆಯಾಗಿಸುವಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಮಹತ್ವ, ಅರ್ಥಪೂರ್ಣತೆ ಇದೆ. ಹೋರಾಟವೆಂದರೆ ಅದು ಸ್ತ್ರೀ-ಪುರುಷರ ನಡುವಿನದೇ ಆಗಬೇಕೆಂದಿಲ್ಲ. ಸ್ತ್ರೀಪುರುಷರಿಬ್ಬರೂ ಜೊತೆಗೂಡಿ ಸಮಾನತೆ ಹಾಗೂ ವಿಮೋಚನೆಗಾಗಿ ನಡೆಸುವ ಅವಿರತ ಛಲವುಳ್ಳ ಹೋರಾಟವಿದು.

ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ರೂವಾರಿಯಾದ ಕ್ಲಾರಾ ಜೆಟ್ಕಿನ್‍ರ ವಿಚಾರಗಳು ಮನನೀಯ. ಜಾಗತಿಕ ಆರ್ಥಿಕತೆಯೊಂದಿಗೆ ಸಂಬಂಧಿಸಿದಂತೆ ಸಮಾಜದಲ್ಲಿ ಮಹಿಳೆ ವಹಿಸುವ ಪ್ರಮುಖ ಪಾತ್ರವನ್ನು ಅಧಿಕೃತವಾಗಿ ಗುರುತಿಸುವ ಕ್ರಿಯೆಯೇ ಮಹಿಳಾ ದಿನಾಚರಣೆ ಎಂದು ಕ್ಲಾರಾ ಜೆಟ್ಕಿನ್ ಹೇಳುತ್ತಾರೆ. ಅವರ ಪ್ರಕಾರ ಯುದ್ಧಗಳಿಂದ ಶ್ರಮಜೀವಿಗಳು ಏನನ್ನೂ ಗಳಿಸಲಾರರು. ಬದಲಿಗೆ ಆಪ್ತ, ಅತ್ಯಮೂಲ್ಯವಾದದ್ದೆಲ್ಲವನ್ನು ಅವರು ಕಳೆದುಕೊಳ್ಳುತ್ತಾರೆ. ಮಹಿಳೆಯ ಶ್ರಮಕ್ಕಿರುವ ಅತ್ಯಲ್ಪ ಬೆಲೆ ಹಾಗೂ ಮಹಿಳೆಯರ ಶರಣಾಗತಿಯೇ ಬಂಡವಾಳಶಾಹಿಗಳಿಗೆ ಮಹಿಳಾ ಶ್ರಮವು ಆಕರ್ಷಕ ಸಂಪನ್ಮೂಲವೆನಿಸಲು ಕಾರಣವಾಗಿವೆ. ಯುದ್ಧ, ಸ್ಪರ್ಧೆಗಳಲ್ಲಿ ಗಂಡಸರು ಕೊಲ್ಲುತ್ತಾ ಹೋದಂತೆ ಜೀವರಕ್ಷಣೆಗಾಗಿ ಮಹಿಳೆಯರು ಟೊಂಕಕಟ್ಟಿ ನಿಲ್ಲುತ್ತಾ ಹೋಗಬೇಕಾಗುತ್ತದೆ. 

ಚಳವಳಿಯ ಕಥನಗಳೆಲ್ಲ ಅದರಲ್ಲಿ ಭಾಗವಹಿಸಿದವರ ಸ್ವತಂತ್ರ ಸಂಕಲ್ಪ ಶಕ್ತಿಯ ಪ್ರಜ್ಞಾಪೂರಕ ಆಯ್ಕೆಯ ಫಲಿತಗಳನ್ನು ಒಳಗೊಂಡಿವೆ. ಮಹಿಳಾ ಬಿಡುಗಡೆಯ ಹಾದಿಯ ನಿರ್ಮಾಣದ ಹೊಣೆ ಹೊತ್ತು ಭಾರತದ ಸ್ವಾಯತ್ತ ಮಹಿಳಾ ಸಂಘಟನೆಗಳು ಆಸ್ತಿತ್ವಕ್ಕೆ ಬಂದವು. ಬಂಧನದ ಆತಂಕ, ಸಂಪನ್ಮೂಲಗಳ ಕೊರತೆ, ಸಾಮಾಜಿಕ ನಿಂದನೆ-ತಿರಸ್ಕಾರ, ಅಧಿಕಾರಶಾಹಿಯ ದಬ್ಬಾಳಿಕೆ, ಕ್ರೌರ್ಯಗಳಿಂದ ನಲುಗಿ ನೊಂದರೂ, ಭರವಸೆಯ ಬೆಳಕನ್ನು ಕಾಪಿಟ್ಟುಕೊಂಡ ಹೋರಾಟಗಾರ್ತಿಯರ ಕಥನಗಳು ನಮ್ಮ ಮುಂದಿವೆ. ಭಾರತೀಯ ಸಮಾಜದ ಸನಾತನವಾದಿ ಹಾಗೂ ಸುಧಾರಣವಾದಿಗಳಿಬ್ಬರೂ ಸ್ತ್ರೀವಾದಿ ಪ್ರಜ್ಞೆ ಸ್ಪಷ್ಟವಾಗಿ ನಮ್ಮಲ್ಲಿ ಮೈದಾಳದಂತೆ ಮಾಡಿದವು. ಸಂವಿಧಾನದತ್ತ ಕಾನೂನುಬದ್ಧ ನ್ಯಾಯಿಕ ಹೋರಾಟಕ್ಕೆ ಮಹಿಳೆಯನ್ನು ಸಜ್ಜುಗೊಳಿಸುವಲ್ಲಿ ಅಂಬೇಡ್ಕರ್‍ರವರ ಕೊಡುಗೆ ಅತ್ಯಮೂಲ್ಯವಾಗಿದೆ. 

ವಿವಿಧ ಕಾಲ, ದೇಶ, ಸಮಾಜಬದ್ಧ ಸನ್ನಿವೇಶಗಳಲ್ಲಿ ರೂಪುಗೊಂಡ ಆಯಾ ಮಹಿಳಾ ಸಮುದಾಯಗಳ ಅನುಭವಗಳನ್ನಾಧರಿಸಿದ ಸ್ತ್ರೀವಾದಿ ಜ್ಞಾನವನ್ನು ಭಾರತೀಯ ಸಾಮಾಜಿಕ ನೆಲೆಯಲ್ಲಿ ಅಂತರ್ಗತೀಕರಿಸಿಕೊಳ್ಳುವ ಯತ್ನ ಸವಾಲಿನದು. ತಮ್ಮ ವರ್ತಮಾನದ ಸಾಮಾಜಿಕ ಬದುಕಿನಲ್ಲಿನ ಮಹಿಳಾ ಶೋಷಣೆಯ ಸ್ವರೂಪವನ್ನು ಅರ್ಥಮಾಡಿಕೊಳ್ಳಲು ಬರೇ ಸೈದ್ಧಾಂತಿಕ ತಿಳಿವಳಿಕೆ ಇದ್ದರೆ ಸಾಲದು. ಮಹಿಳಾ ದೌರ್ಜನ್ಯದ ವಿರಾಟ್ ಸ್ವರೂಪವನ್ನು ಕಣ್ಣೆದುರಿಗಿನ ಜೀವಂತ ಕ್ಷಣಗಳಲ್ಲಿನ ಪ್ರಖರ ಅನುಭವಾತ್ಮಕ ಜ್ಞಾನವಾಗಿ ಪಡೆಯುವ ಪ್ರಕ್ರಿಯೆಯಾಗಿ ಮಹಿಳಾ ಚಳವಳಿಗಳಲ್ಲಿನ ಸಹಭಾಗಿತ್ವಕ್ಕೆ ಪ್ರಾಮುಖ್ಯತೆಯಿದೆ. ಇರುವಿಕೆಯಿಂದ ಆಗುವಿಕೆಯತ್ತ ಚಲಿಸುವ ಅಸ್ತಿತ್ವವಾದೀ ಜೀವ ಮಿಡಿತದ ಕ್ಷಣಗಳಿವು. 

ಇಂಥ ಜೀವ ಸ್ಪಂದನದ ನೆಲೆಯಲ್ಲಿಯೇ ಕರ್ನಾಟಕ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟವು ಮಂಗಳೂರಿನಲ್ಲಿ ಅಸ್ತಿತ್ವಕ್ಕೆ ಬಂದಿತು. ಬಿಡಿಬಿಡಿಯಾಗಿ ಮಹಿಳಾ ಸಂಘಟನೆಗಳು ಸ್ಥಳೀಯವಾಗಿ ನಡೆಸುವ ಮಹಿಳಾ ದಿನಾಚರಣೆಗಳ ಅರಿವು ಅನುಭವಗಳು ಏಕಕಾಲದಲ್ಲಿ ಎಲ್ಲರಿಗೂ ಸಂವಹನಗೊಳ್ಳುವುದು ಸಾಧ್ಯವಿರಲಿಲ್ಲ. ಸಂಘಟನೆಗಳೆಲ್ಲ ಒಟ್ಟಾಗಿ ಸೇರಿ ಒಂದು ದಿನ ಒಂದು ಪ್ರದೇಶದಲ್ಲಿ ಮಹಿಳಾ ದಿನಾಚರಣೆಯನ್ನು ಆಚರಿಸುವುದರ ಮೂಲಕ ಒದಗುವ ಗರಿಷ್ಠ ಪ್ರಮಾಣದ ಸಂವಹನ ಸಾಧ್ಯತೆಯಿಂದಾಗಿ ಹೋರಾಟದ ಅನುಭವ ಲೋಕ ಮತ್ತೂ ವಿಶಾಲಗೊಂಡು ಬಹುಮುಖಿ ಚಿಂತನೆಗಳನ್ನೊಳಗೊಳ್ಳಲು ಸಾಧ್ಯವಾಗಬಲ್ಲದೆಂಬ ಹಿರಿಯಾಸೆ ಈ ಒಕ್ಕೂಟದ್ದು. 

ಒಕ್ಕೂಟದ ವತಿಯಿಂದ ನಡೆಸಲಾಗುವ ಮಹಿಳಾ ದಿನಾಚರಣೆಗೆ ತನ್ನದೇ ಆದ ಕಾರ್ಯ ವಿನ್ಯಾಸವಿದೆ. ಮಾರ್ಚ್ 7, 8ರಂದು ನಡೆಯುವ ಆಚರಣೆಯ ಮೊದಲ ಭಾಗವಾಗಿ ಶೈಕ್ಷಣಿಕ ವಲಯದಲ್ಲಿ ನಡೆಯುವ ವಿಚಾರ ಸಂಕಿರಣವಿದೆ. ಅದರಲ್ಲಿ ಕಳೆದ ವರ್ಷ ನಡೆದ ಮಹಿಳಾ ದಿನಾಚರಣೆಯ ಸ್ಮøತಿ ಸಂಚಯವನ್ನು ಬಿಡುಗಡೆ ಮಾಡಲಾಗುತ್ತದೆ. ಈ ಬಾರಿ `ಇನ್ನು ಸಾಕು’ ಸ್ಮøತಿ ಸಂಚಯ ಬಿಡುಗಡೆಯಾಯಿತು. ವಿಚಾರಸಂಕಿರಣದ ಮೂಲಕ ಕರ್ನಾಟಕವಷ್ಟೇ ಅಲ್ಲ, ಭಾರತದಾದ್ಯಂತ ನಡೆಯುವ ಮಹಿಳಾ ಹೋರಾಟಗಳ ಮುಂಚೂಣಿಯ ನಾಯಕಿಯರನ್ನು ಸ್ಥಳೀಯ ನೆರೆಯಲ್ಲಿ, ಮುಖ್ಯವಾಗಿ ವಿದ್ಯಾರ್ಥಿಗಳಿಗೆ, ನಾಗರಿಕರಿಗೆ ಪರಿಚಯಿಸುವ; ಅವರ ನುಡಿಗಳನ್ನು ಕೇಳಿಸುವ ಅವಕಾಶವನ್ನು ಈ ಮೂಲಕ ಕಲ್ಪಿಸಲಾಯಿತು. ಮಹಿಳಾ ಶೋಷಣೆಯ ವಿವಿಧ ನೆಲೆಗಳನ್ನು ಕುರಿತಂತೆ ಹೋರಾಟದಲ್ಲಿ ತೊಡಗಿರುವ ಹೋರಾಟಗಾರರ ಪ್ರತ್ಯಕ್ಷಾನುಭವದ ಮೂಸೆಯಲ್ಲಿ ಮೂಡಿಬಂದ ಚಿಂತನೆಗಳನ್ನು ವಿಚಾರ ಸಂಕಿರಣ ಹಾಗೂ ಸಮಾವೇಶದ ವೇದಿಕೆಯಲ್ಲಿ ಹಂಚಿಕೊಳ್ಳಲಾಯಿತು. 

2014 ಮಾರ್ಚ್ 7 ರಂದು ಮೈಸೂರು ವಿಶ್ವವಿದ್ಯಾನಿಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯು ವಿಚಾರ ಸಂಕಿರಣವನ್ನು ಆಯೋಜಿಸುವ ಜವಾಬ್ದಾರಿಯನ್ನು ತೆಗೆದುಕೊಂಡಿತು. ಅದಕ್ಕೆ ಪೂರಕವಾಗಿ ಮೊದಲೇ ವಿದ್ಯಾರ್ಥಿಗಳಿಗೆ ಮಹಿಳಾ ವಿಷಯಗಳನ್ನೊಳಗೊಂಡ ಆಶುಭಾಷಣ ಸ್ಪರ್ಧೆ ಏರ್ಪಡಿಸಿ ಹುರಿದುಂಬಿಸಿತ್ತು. ಸಂಕಿರಣದ ದಿನ ಬಹುಮಾನ ನೀಡಲಾಯಿತು. ಕರ್ನಾಟಕದ ವಿವಿಧ ಭಾಗಗಳ ಮಹಿಳಾ ಸಂಘಟನೆಗಳಲ್ಲಿ ಸಕ್ರಿಯವಾಗಿ ತೊಡಗಿಕೊಂಡ ಹೋರಾಟಗಾರರು ಹಾಗೂ ಸಾಮಾಜಿಕ ಕಾರ್ಯತರ್ಕರು ವಿಚಾರ ಸಂಕಿರಣದ ಸಂಪನ್ಮೂಲ ವ್ಯಕ್ತಿಗಳಾಗಿ ಪಾಲ್ಗೊಂಡದ್ದು ವಿಚಾರ ಸಂಕಿರಣಕ್ಕೆ ಅಭೂತಪೂರ್ವ ಯಶಸ್ಸನ್ನು ನೀಡಿತು. ಸಾಮಾಜಿಕ ಹೋರಾಟಗಾರರ ನುಡಿಗಳಿಗೆ ಮೈಯಲ್ಲ ಕಣ್ಣಾಗಿ ವಿದ್ಯಾರ್ಥಿಗಳು, ನಾಗರಿಕರು, ಅಧ್ಯಾಪಕರು, ಸಂಶೋಧಕರು, ಸಂಘಟನೆಗಳ ಕಾರ್ಯಕರ್ತರು ಸ್ಪಂದಿಸಿದರು. ಆ ನುಡಿಗಳಿಗೆ ಅಕ್ಷರ ರೂಪವನ್ನು ಈ ಹೊತ್ತಿಗೆಯಲ್ಲಿ ಸಂಪಾದಿತವಾದ ಲೇಖನಗಳ ಮೂಲಕ ನೀಡಲಾಗಿದೆ. 

ಕಾನೂನು, ಸಾಮಾಜಿಕ ನ್ಯಾಯದ ಪ್ರಶ್ನೆ ಅತ್ಯಂತ ಜಟಿಲವೂ ತೊಡಕಿನದೂ ಆಗಿದೆ. ಇವುಗಳನ್ನು ಅನುಭವ ಆಧಾರಿತ ಚರ್ಚೆ-ಪ್ರಶ್ನೆಗಳ ಮೂಲಕವೇ ಅರಿಯಲು ಯತ್ನಿಸುವ ನಿಟ್ಟಿನಲ್ಲಿ ಈ ವಿಚಾರ ಸಂಕಿರಣ ಯಶಸ್ವಿಯಾಯಿತು. ಇವು ಶುದ್ಧ ಬೌದ್ಧಿಕ ನೆಲೆಯ ಭಾಷಣಗಳಾಗಿರಲಿಲ್ಲ. ಯಾವುದೇ ಕ್ಲೀಷೆ, ವೈಭವೀಕರಣಗಳಿಲ್ಲದ ಸ್ಪಟಿಕದ ಸಲಾಕೆಯಂತಹ ಮಾತೆಂಬ ಬೆಳಕು ಸಭೆಯನ್ನು ಆವರಿಸಿತ್ತು. ವಿಷಯ ವೈವಿಧ್ಯಗಳಿಗೆ ಅವಕಾಶವಿತ್ತು. ಹಾಡು, ರೂಪಕಗಳ ಕಲಾತ್ಮಕ ಅಭಿವ್ಯಕ್ತಿಯೊಂದಿಗೆ ಇಡೀ ವಿಚಾರ ಸಂಕಿರಣ ನೇಯ್ಗೆಗೊಂಡಿತ್ತು.

ಪುರುಷ ತನ್ನನ್ನು ಯಾವ ಮಟ್ಟಿನವರೆಗೂ ದ್ವೇಷಿಸುತ್ತಾನೆಂಬ ಕಲ್ಪನೆ ಮಾಡಿಕೊಳ್ಳಲು ಮಹಿಳೆಗೆ ಸಾಧ್ಯವಿಲ್ಲ ಎಂಬ ಮಾತಿಗೆ ನಿದರ್ಶನವೆಂಬಂತೆ ಊಹಾತೀತವಾಗಿ ಮಹಿಳಾ ದೌರ್ಜನ್ಯದ ಸ್ವರೂಪವಿದೆ. ಸಹನೆ, ಶಾಂತಿ, ತ್ಯಾಗ, ಕ್ಷಮೆಗಳಂಥ ಆದರ್ಶವಾದಿ ಒಮ್ಮುಖದ ಗುಣಗಳ ಹೇರಿಕೆಯಡಿ ಸಿಲುಕಿದ ಮಹಿಳೆಗೆ ತನ್ನನ್ನು ತಾನು ಹಿಂಸಿಸಿಕೊಳ್ಳುವುದು ಹಾಗೂ ಹಿಂಸೆಯನ್ನು ಸಹಿಸಿಕೊಳ್ಳುವುದು ರೂಢಿಯಾಗಿದೆ. ಸ್ವಯಂ ಹಿಂಸೆಯಿಂದ ಬಿಡುಗಡೆ ಹೊಂದದ ಹೊರತು ಆಕೆಗೆ ಅನ್ಯ ಹಿಂಸೆಯ ಅರಿವಾಗದು. ದ್ವೇಷದ, ಹಿಂಸೆಯ, ಪರಾಕಾಷ್ಠೆಯ ಸಾಂಕೇತಿಕ ರೂಪವದ ಮಹಿಳಾ ರೇಪ್ ಅನ್ನು ವಿಚಾರ ಸಂಕಿರಣದ ಗೋಷ್ಠಿಗಳು ಕೇಂದ್ರವಾಗಿಟ್ಟುಕೊಂಡವು. ದೆಹಲಿಯ ನಿರ್ಭಯಾ ಪ್ರಕರಣದ ಕ್ರೌರ್ಯವನ್ನು ಕೆ. ಸುಮತಿ ಅವರ ನಿರ್ದೇಶನದ ಕಿರು ರೂಪಕದ ಮೂಲಕ ವಿವಿಧ ವಿಭಾಗಗಳ ವಿದ್ಯಾರ್ಥಿಗಳು ಸಭಿಕರ ಅಂತರಾಳಕ್ಕೆ ತಲುಪಿಸುವಲ್ಲಿ ಯಶಸ್ವಿಯಾದರು. 

ಮಹಿಳಾ ಚಳುವಳಿಯಲ್ಲಿ ಯುವ ಪೀಳಿಗೆ ಸಕ್ರಿಯವಾಗಿ ಪಾಲ್ಗೊಳ್ಳುವಂತೆ, ಅವರಿಗೂ ಸಹ ಭಾಗಿತ್ವ ಕಲ್ಪಿಸುವಲ್ಲಿ ಈ ವಿಚಾರ ಸಂಕಿರಣ ಉಪಯುಕ್ತವಾಯಿತು. ಆ ದಿನ ಸಂಜೆ ಗಾಂಧಿ ಚೌಕದಲ್ಲಿ ನಡೆದ ವಿಮೆನ್ ಇನ್ ಬ್ಲ್ಯಾಕ್ ಪ್ರತಿಭಟನಾತ್ಮಕ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳೇ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದು ಗಮನಾರ್ಹ ಸಂಗತಿ. ತುಂತುರು ಮಳೆಯಲ್ಲಿಯೇ ನೆನೆಯುತ್ತಾ ಸಾವಿರ ಸಂಖ್ಯೆಯಲ್ಲಿ ಕಪ್ಪು ಉಡುಗೆ ತೊಟ್ಟ ಹೋರಾಟಗಾರರ ಕೈಯಲ್ಲಿ ಮಹಿಳಾ ದೌರ್ಜನ್ಯ ವಿರೋಧಿ ಘೋಷಣಾವಾಕ್ಯಗಳ ಫಲಕಗಳಿದ್ದವು. ಕತ್ತಲಾಗುತ್ತಿದ್ದಂತೆ, ಒಬ್ಬರಿಂದ ಒಬ್ಬರಿಗೆ ಮೇಣದ ಬತ್ತಿಗಳನ್ನು ಹಚ್ಚಿಕೊಟ್ಟು ಏಕ ಕಾಲದಲ್ಲಿ ಸಾವಿರ ಸಂಖ್ಯೆಯ ದೀಪದ ಕುಡಿಗಳನ್ನು ಗಾಂಧಿ ಪ್ರತಿಮೆಯ ಸುತ್ತಾ ಬೆಳಗಿಸಲಾಯಿತು. ಅರಿವಿನ ಬೆಳಕಿದ್ದಲ್ಲಿ ಅಜ್ಞಾನ – ಕ್ರೌರ್ಯದ ಕತ್ತಲೆಗೆ ಸ್ಥಾನವಿಲ್ಲ. ‘ಮಹಿಳಾ ಯುದ್ಧ’ದ ಹೊಸ ಚರಿತ್ರೆಯನ್ನೇ ರೂಪಿಸಿದ ಮಣಿಪುರದ ಮಹಿಳಾ ಹೋರಾಟಗಾರ್ತಿಯರಾದ ಇಮಾ ಲಾರೆಂಮ್‍ಬಮ್ ನಾನ್ಬಿ, ರೇಣುಬಾಲಾದೇವಿ ಹಾಗೂ ಚಿತ್ರ ಅಹೆಂತಮ್ ಕರ್ನಾಟಕದ ಮಹಿಳಾ ಹೋರಾಟಗಾರ್ತಿಯರೊಂದಿಗೆ ಮೇಣದ ಬತ್ತಿ ಬೆಳಗಿಸಿ ಎತ್ತಿ ಹಿಡಿದದ್ದು ಆ ಕಾರ್ಯಕ್ರಮವನ್ನು ಚರಿತ್ರಾರ್ಹವಾಗಿಸಿತು. ಹೀಗೆ ಹೊತ್ತಿಸಿದ ಆ ದೀಪದ ಬೆಳಕು ಮಹಿಳಾ ಕ್ರೌರ್ಯಕ್ಕೆ ಒಡ್ಡಿದ ಪ್ರತಿರೋಧವಷ್ಟೇ ಅಲ್ಲ; ಹಿಂಸೆ-ಕ್ರೌರ್ಯದ ಕತ್ತಲ ಹಾದಿಯಲ್ಲಿರುವವರನ್ನು ಸರಿಯಾದ, ಮಾನವಪರ ಪಥಕ್ಕೆ ಕರೆದೊಯ್ಯುವ ಮಾರ್ಗದರ್ಶಿಯೂ ಹೌದು. 

2014 ಮಾರ್ಚ್ 8ರಂದು ಮೈಸೂರಿನ ರಾಮಸ್ವಾಮಿ ವೃತ್ತದಿಂದ ವಸ್ತು ಪ್ರದರ್ಶನ ಮೈದಾನದಲ್ಲಿ ನಡೆಯುವ ಸಮಾವೇಶದ ಸ್ಥಳವಾದ ಬಿ.ವಿ. ಕಾರಂತ ವೇದಿಕೆಯವರೆಗೂ ಮಹಿಳಾ ಒಕ್ಕೂಟಗಳ ಬೃಹತ್ ರಾಲಿಯನ್ನು ಏರ್ಪಡಿಸಲಾಗಿದ್ದು ಒಕ್ಕೂಟಗಳ ಪ್ರತಿನಿಧಿಗಳು ಹಾಗೂ ಮಹಿಳಾ ಹೋರಾಟದ ಮುಂಚೂಣಿಯ ನಾಯಕಿಯರಾದ ಮೀರಾ ನಾಯಕ್, ವಿಜಯ ದಬ್ಬೆ, ದು. ಸರಸ್ವತಿ, ಇಳಾ ವಿಜಯ, ಸುಮತಿ, ಫಾತಿಮಾ ನಸೀಮಾ, ಅಕೈ ಪದ್ಮಶಾಲಿ, ಜಯಲಕ್ಷ್ಮಿ ಹಾಗೂ ಮಣಿಪುರದ ಮೂವರು ಹೋರಾಟಗಾರ್ತಿಯರಿಂದ ಬೆಲೂನು, ದೀಪದ ಬುಟ್ಟಿಯನ್ನು ಹಾರಿಸುವುದರ ಮೂಲಕ ರಾಲಿಗೆ ಚಾಲನೆ ನೀಡಲಾಯಿತು. ವಿವಿಧ ಸಂಘಟನೆಗಳ ಬ್ಯಾನರ್ ಹಾಗೂ ಮಹಿಳಾ ದೌರ್ಜನ್ಯ ವಿರೋಧಿ, ಮಹಿಳಾ ಪರ ಘೋಷಣೆ ಹೊತ್ತ ವಿದ್ಯಾರ್ಥಿಗಳು, ಕೂಲಿ ಕಾರ್ಮಿಕ ಮಹಿಳೆಯರು, ನಾಗರಿಕರು, ಮಧ್ಯಲಿಂಗಿಗಳು, ಹೋರಾಟಗಾರರು ಭಾಗವಿಹಿಸಿದ್ದ ರಾಲಿಯ ದೃಶ್ಯ ಅಭೂತಪೂರ್ವವಾಗಿತ್ತು. ಹಾಗೂ ಮಹಿಳಾ ಸಶಕ್ತತೆಯ ಸಂಕೇತವಾಗಿತ್ತು. ಮಧ್ಯೆ ಮಧ್ಯೆ ಕ್ರಾಂತಿಗೀತೆಗಳು, ಸ್ಲೋಗನ್‍ಗಳು ಮೊಳಗುತ್ತಾ ಹೋರಾಟದ ಬತ್ತದ ಉತ್ಸಾಹಕ್ಕೆ ಸಾಕ್ಷಿಯಾಗಿತ್ತು. ಮಹಿಳಾ ದೌರ್ಜನ್ಯದ ವಿಷಯವನ್ನೊಳಗೊಂಡ ಕಿರು ರೂಪಕ ಪ್ರದರ್ಶನವನ್ನು ನಾಗರೀಕರು ಸ್ಪಂದನೆಯೊಂದಿಗೆ ವೀಕ್ಷಿಸಿದರು. ಹೋರಾಟದ ಕೆಚ್ಚನ್ನು ಪ್ರತಿಧ್ವನಿಸುವಂತೆ ಲಯಬದ್ಧ ಹೆಜ್ಜೆ ಹಾಕುತ್ತಾ ಯುವತಿಯರಿಬ್ಬರೂ ಬಾರಿಸುತ್ತಿದ್ದ ತಮಟೆಯ ಸದ್ದು ಕಿವಿಗಡಚಿಕ್ಕುವಂತಿತ್ತು.

ಸರಿಸುಮಾರು 5 ರಿಂದ 6 ಸಾವಿರ ಸಂಖ್ಯೆಯಲ್ಲಿ ನೆರೆದಿದ್ದ ಬೃಹತ್ ಮಹಿಳಾ ಸಮುದಾಯವುಳ್ಳ ಸಮಾವೇಶಕ್ಕೆ ‘ತೂರಬೇಡಿ ಗಾಳಿಗೆ ಹೆಣ್ತನದ ಘನತೆಯ/ಜೀವಕೊಡುವ ಜೀವವಿದು ಕಡಿಮೆ ಯಾರಿಗೆ’ ಎಂಬ ಪಲ್ಲವಿಯುಳ್ಳ ಸಮತಾ ಗೀತೆಯಿಂದ ಚಾಲನೆ ದೊರಕಿತು. ಪ್ರಾಸ್ತಾವಿಕ ನುಡಿಗಳನ್ನು ಸುಮನಾ ಆಡಿದರು. ಒಕ್ಕೂಟದ ಧ್ಯೆಯೋದ್ದೇಶಗಳನ್ನು ಡಾ. ಸಬಿಹಾ ಭೂಮೀಗೌಡ ಮಂಡಿಸಿದರು. ಡಾ. ಎಚ್.ಎಸ್ ಅನುಪಮಾ ಮುಖ್ಯ ಅತಿಥಿಗಳಾದ ಇಮಾ ಲೋರೆಂಬಮ್ ನಾನ್ಬಿ, ರೇಣುಕಾಬಾಲದೇವಿ, ಚಿತ್ರಾ ಅಹೆಂತಮ್ ಅವರ ಸಾಧನೆಗಳನ್ನು ಪರಿಚಯಿಸಿದರು. ಸಮಾವೇಶದ ಕೇಂದ್ರಬಿಂದುವಾದ ಇಮಾ ಲೋರೆಂಬಮ್ ನಾನ್ಬಿ ಅವರು ಸುದೀರ್ಘವಾಗಿ ತಮ್ಮ ಬದುಕಿನೊಂದಿಗೆ ಹೆಣೆದುಕೊಂಡ ಮಣಿಪುರದ ಮಹಿಳಾ ಹೋರಾಟದ ಗಾಥೆಯನ್ನು ಕಂಚಿನ ಕಂಠದಲ್ಲಿ ನಿರೂಪಿಸಿದರು. ಆ ಮಾತುಗಳ ಸಾರವನ್ನು ಡಾ. ಸುಮಾ ಎಂಬಾರ್ ಕನ್ನಡದಲ್ಲಿ ಪ್ರಸ್ತುತಪಡಿಸಿದರು. ಈ ಕಾರ್ಯಕ್ರಮ ಕಳೆಗಟ್ಟುವಂತೆ ವಿವಿಧ ಸಂಘಟನೆ ಹಾಗೂ ಕಾಲೇಜು ವಿದ್ಯಾರ್ಥಿಗಳಿಂದ ಮಹಿಳಾ ವಿಷಯ ಸಂಬಂಧಿತ ನೃತ್ಯ, ರೂಪಕ, ಗೀತೆಗಳು ಪ್ರದರ್ಶನಗೊಂಡವು. ವಿವಿಧ ಮಹಿಳಾ ಸಂಘಟನೆಗಳ ಪ್ರಾತಿನಿಧಿಕ ವ್ಯಕ್ತಿಗಳು ತಮ್ಮ ಸಂಘಟನೆಗಳ ಧ್ಯೇಯೋದ್ದೇಶ, ಕಾರ್ಯಯೋಜನೆ ಹಾಗೂ ಮಹಿಳಾ ದಿನಾಚರಣೆಯ ತಮ್ಮ ಅನುಭವಗಳನ್ನು ಕುರಿತು ಮಾತನಾಡಿದರು. ಅಂತಿಮವಾಗಿ ಮಹಿಳಾ ಹೋರಾಟಗಾರ್ತಿಯರನ್ನು ವೇದಿಕೆಯಲ್ಲಿ ಹೃದಯಸ್ಪರ್ಶಿಯಾಗಿ ಸನ್ಮಾನಿಸಲಾಯಿತು. ಎಲ್ಲರಿಂದ ಅನುಮೋದಿತವಾದ ಸಮಾವೇಶದ ನಿರ್ಣಯಗಳ ಮಂಡನೆಯು ಸಮಾವೇಶದ ಅಂತಿಮ ಹಾಗೂ ಮಹತ್ವದ ಭಾಗವಾಗಿತ್ತು. ಅದು ಮಹಿಳಾ ಬಿಡುಗಡೆಯ ಕನಸನ್ನು ಸಾಕಾರಗೊಳಿಸುವ ನಿಟ್ಟಿನತ್ತ ಇಟ್ಟ, ದಿಟ್ಟ ಹಕ್ಕೊತ್ತಾಯವೂ ಆಗಿತ್ತು. 

ಒಂದು ವರ್ಷ ಹಿಂದೆ ಕರ್ನಾಟಕ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟವು ಮೈಸೂರಿನ ಎಂ. ಎನ್. ಸುಮನಾ, ರತಿ ರಾವ್, ಸುಮತಿ, ರೂಪಾ, ವೀಣಾ, ಲತಾ ಮೈಸೂರು ಮೊದಲಾದ ಹಲವು ಕ್ರಿಯಾಶೀಲ ವ್ಯಕ್ತಿ/ಸಂಘಟನೆಗಳೊಂದಿಗೆ ಅತ್ಯಂತ ವ್ಯವಸ್ಥಿತವಾಗಿ ವಿವಿಧ ಹಂತಗಳಲ್ಲಿ ಸಭೆಯನ್ನು ನಡೆಸಿ, ಸಮಿತಿಗಳನ್ನು ರಚಿಸಿ, ಕಾರ್ಯಕ್ರಮದ ರೂಪು ರೇಖೆ ಸಿದ್ಧಪಡಿಸಿಕೊಂಡಿತು. ಎರಡು ದಿನಗಳ ಅವಧಿಯ ಈ ಮಹಿಳಾ ದಿನಾಚರಣೆಯ ಕಾರ್ಯಚಟುವಟಿಕೆಗಳಲ್ಲಿ ಮೈಸೂರು-ಮಂಡ್ಯ-ಚಾಮರಾಜನಗರದ ಸಂಘಸಂಸ್ಥೆಗಳು, ಸಮಾನ ಮನಸ್ಕ ವ್ಯಕ್ತಿಗಳು, ವಿದ್ಯಾರ್ಥಿಗಳು, ಸಾರ್ವಜನಿಕರು ತನುಮನಧನ ಧಾರೆಯೆರೆದು ಅಭೂತಪೂರ್ವ ಒಗ್ಗಟ್ಟಿನ ಕೆಲಸ ಮಾಡಿದರು. ಈ ಸಮಾವೇಶಕ್ಕೆ ಚಾರಿತ್ರಿಕ ಮಹತ್ವವಿದೆ. ಚರಿತ್ರೆಯ ಭಾಗವಾಗಿ ಸಾಗಿಬಂದ ಮಹಿಳಾ ಹೋರಾಟಗಳ ಸಮೃದ್ಧ ಅನುಭವಗಳ ನೆನಪು-ವಿಸ್ತರಣೆಗಳು ವರ್ತಮಾನದ ಹೋರಾಟಕ್ಕೆ ಅತ್ಯಗತ್ಯ. ಹೋರಾಟಗಾರ್ತಿಯರ ನುಡಿಗಳನ್ನು ತಮ್ಮ ವರ್ತಮಾನದ ನಡೆಯಲ್ಲಿ ಸಾಕಾರಗೊಳಿಸಿಕೊಳ್ಳಬೇಕಾದ ಹೊಣೆಗಾರಿಕೆಯ ಪ್ರಜ್ಞೆ ಅತ್ಯಗತ್ಯ. ಹಾಗಾಗಿ ಎರಡು ದಿನಗಳು ನಡೆದ ಈ ಕಾರ್ಯಕ್ರಮಗಳನ್ನು ಮೈಸೂರಿನವರಲ್ಲದೆ, ಕರ್ನಾಟಕದ ಎಲ್ಲೆಡೆಯಿಂದ ಬಂದ ಜನತೆ ಶ್ರದ್ಧೆ ಆಸಕ್ತಿಯಿಂದ ಗಮನಿಸಿದೆ. ಮಹಿಳಾ ಪರ ನಿಲುವು ಸಾಮಾಜಿಕವಾಗಿ ಗಟ್ಟಿಗೊಳ್ಳುವತ್ತ ಇಂಥ ಕಾರ್ಯಕ್ರಮಗಳು ಪ್ರೇರಕವಾಗಬಲ್ಲವು. 

ಪ್ರಸ್ತುತ ಕೃತಿಯಲ್ಲಿ ವಿಚಾರ ಸಂಕಿರಣ ಹಾಗೂ ಸಮಾವೇಶ ಸಂದರ್ಭದ ನುಡಿಗಳನ್ನು ಬರಹರೂಪದಲ್ಲಿ ಸಂಕಲಿಸಿ ದಾಖಲಿಸಲಾಗಿದೆ. ಗತ ಹಾಗೂ ಭವಿಷ್ಯದ ಮಧ್ಯೆ ನಿಂತ ನಮ್ಮ ಹೋರಾಟದ ಅನುಭವಗಳು ಕಾಲದ ಕಠೋರ ಸತ್ಯಕ್ಕೆ ಒಳಗಾಗಿ ಲಯವಾಗಿ ಹೋಗದಿರಲೆಂಬ ಕಾಳಜಿಯಿಂದ ಅವುಗಳನ್ನು ದಾಖಲಿಸುವುದೇ ಈ ಕೃತಿ ಪ್ರಕಟನೆಯ ಒತ್ತಾಸೆಯಾಗಿದೆ. ದಿನದಿನಕ್ಕೂ ಮಹಿಳೆಯರ ಸಮಸ್ಯೆಗಳು ಹೊಸ ಹೊಸ ರೂಪ ತಾಳುತ್ತಿರುವ ಸಂದರ್ಭದಲ್ಲಿ ಮಹಿಳಾ ಹೋರಾಟಕ್ಕೆ ಹೊಸ ಬಿಕ್ಕಟು ಸವಾಲುಗಳು ಎದುರಾಗುತ್ತಿವೆ. ಇವುಗಳನ್ನು ಎದುರಿಸಲು, ಚರಿತ್ರೆಯಾಗಿ ದಾಖಲಾದ ಮಹಿಳಾ ಹೋರಾಟಗಳ ನೆನಪುಗಳು ಅತ್ಯಮೂಲ್ಯ ಆಕರ ಸಾಮಗ್ರಿ ಸಾಧನಗಳಾಗುತ್ತವೆ. 

ಹೀಗೆ, ಮಂಗಳೂರಿನಲ್ಲಿ ನಡೆದ ಒಕ್ಕೂಟದ ಮಹಿಳಾ ದಿನಾಚರಣೆಯ ಸ್ಮೃತಿ ಸಂಚಯ ‘ಇನ್ನು ಸಾಕು’ ಕೃತಿಯ ಹೆಜ್ಜೆ ಗುರುತಿನ ಹಾದಿಯನ್ನೇ ಅನುಸರಿಸಿ ಈ ಕೃತಿ ಸಂಪಾದಿತವಾಗಿದೆ. ಹೋರಾಟದ ಪಥದಲ್ಲಿನ ತಪ್ಪು-ಒಪ್ಪು, ಸಾಧಕ-ಬಾಧಕಗಳ ವಿಮರ್ಶೆ, ವಿಶ್ಲೇಷಣೆಗೆ ಬೇಕಾದ ಮಹಿಳಾ ಹೋರಾಟದ ಚರಿತ್ರೆಯ ನಿರ್ಮಿತಿಗೆ ‘ಸಾಕಾರದತ್ತ ಸಮಾನತೆಯ ಕನಸು’ ಕೃತಿಯು ಕಾಣಿಕೆ ಸಲ್ಲಿಸೀತೆಂಬ ಸದಾಶಯ ನಮ್ಮದು.

ಈ ಕೃತಿ ಪ್ರಕಟನೆಯ ಹೊಣೆಗಾರಿಕೆಯನ್ನು ನನ್ನೊಂದಿಗೆ ಹಂಚಿಕೊಂಡ ಸಹಸಂಪಾದಕರಾದ ಸುಮನಾ ಅವರಿಗೆ ಕೃತಜ್ಞತೆ ಸಲ್ಲಿಕೆಯ ಮಾತು ಔಪಚಾರಿಕ ಮಾತ್ರ. ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಬೃಹತ್ ಹೊಣೆಯನ್ನು ಹೊತ್ತ ಚೇತನ ಅವರು. ಸುಮನಾ ಹಾಗೂ ಅವರೊಡನೆ ಹೆಗಲೆಣೆಯಾಗಿ ನಿಂತು ಮೈಸೂರಿನ ಸಮಾವೇಶದಲ್ಲಿ ದುಡಿದ ಮೈಸೂರು-ಮಂಡ್ಯ-ಚಾಮರಾಜನಗರದ ಸಹಭಾಗಿಗಳಿಗೆ; ಒಕ್ಕೂಟದ ಎಲ್ಲಾ ಸೋದರಿ/ಸದಸ್ಯರಿಗೆ; ಕೃತಿ ಪ್ರಕಟನೆಯ ಹೊಣೆಗಾರಿಕೆಯಲ್ಲಿ ಕೈಜೋಡಿಸಿದ ಗೆಳತಿಯರಾದ ಎಚ್. ಎಸ್. ಅನುಪಮಾ ಹಾಗೂ ಸಬಿಹಾ ಭೂಮಿಗೌಡ ಅವರಿಗೆ; ಭಾಷಣಗಳನ್ನು ಬರಹ ರೂಪಕ್ಕಿಳಿಸಿಕೊಟ್ಟ ಮಂಗಳೂರು ವಿವಿ, ಕನ್ನಡ ವಿಭಾಗದ ಪ್ರಥಮ ಮತ್ತು ದ್ವಿತೀಯ ವರ್ಷದ ವಿದ್ಯಾರ್ಥಿಗಳು ಹಾಗೂ ಯು. ಶೈಲಾ ಅವರಿಗೆ; ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕರಾದ ಪ್ರೊ. ನೀಲಗಿರಿ ಎಂ. ತಳವಾರ್ ಹಾಗೂ ವಿಚಾರ ಸಂಕಿರಣದ ಸಹ ಸಂಯೋಜಕರಾದ ಡಾ. ಜಯಲಕ್ಷ್ಮೀ ಸೀತಾಪುರ ಅವರಿಗೆ ಮನದಾಳದ ಕೃತಜ್ಞತೆ ಅರ್ಪಿಸುತ್ತೇನೆ. 

ಒಂದೇ ದೀಪದ ಹಲವು ಕುಡಿಗಳಂತೆ ಮಹಿಳಾ ಚೇತನಗಳು ಸದಾ ಒಗ್ಗಟ್ಟಾಗಿ ಬೆಳಗಲಿ ಎಂದು ಹಾರೈಸುತ್ತಾ..

No comments:

Post a Comment