Feb 10, 2015

ಗೆಲುವು ಕಂಡ ಆಮ್ ಆದ್ಮಿಗಿದು ಜವಾಬ್ದಾರಿ ಪರ್ವ!

ದೆಹಲಿ ಚುನಾವಣೆಗೆ ಸಂಬಂಧಪಟ್ಟಂತೆ ಬರೆದಿದ್ದ ಹಿಂದಿನ ಲೇಖನದ ಕೊನೆಯಲ್ಲಿ ಅರವಿಂದ್ ಕೇಜ್ರಿವಾಲರ ಅರಾಜಕತೆ ಕಿರಣ್ ಬೇಡಿಯವರ ಅನುಕೂಲಸಿಂಧುತ್ವಗಳೇನೇ ಇದ್ದರೂ ಪ್ರಾಮಾಣಿಕತೆಯ ವಿಷಯದಲ್ಲಿ ಸದ್ಯದ ಮಟ್ಟಿಗೆ ಇಬ್ಬರಲ್ಲೂ ತುಂಬ ವ್ಯತ್ಯಾಸಗಳನ್ನುಡುಕುವುದು ಕಷ್ಟ. ಕಿರಣ್ ಬೇಡಿಯವರು ಮುಖ್ಯಮಂತ್ರಿ ಹುದ್ದೆಗೆ ಸ್ಪರ್ಧಿ ಎಂಬ ಕಾರಣಕ್ಕಾಗಿ ಆಮ್ ಆದ್ಮಿ ಪಕ್ಷಕ್ಕೆ ಬದಲಾಗಿ ಬಿಜೆಪಿಗೆ ಮತ ಚಲಾಯಿಸುವವರು ಇರುವ ಹಾಗೆಯೇ ಬಿಜೆಪಿಯ ಅವಕಾಶವಾದಿತನದ ರಾಜಕಾರಣದಿಂದ ಬೇಸತ್ತು ಆಮ್ ಆದ್ಮಿ ಪಕ್ಷಕ್ಕೆ ಮತ ಚಲಾಯಿಸುವವರೂ ಇರುತ್ತಾರೆ. ಒಟ್ಟಿನಲ್ಲಿ ದೇಶದ ರಾಜಧಾನಿಯ ಚುನಾವಣೆ ಹತ್ತಲವು ಕಾರಣಗಳಿಂದ ಗಮನ ಸೆಳೆಯುತ್ತಿದೆ. ಕೊನೆಗೆ ಪ್ರಜಾಪ್ರಭುತ್ವ ಗೆಲ್ಲಲಿ ಎಂಬುದಷ್ಟೇ ಆಶಯ - ಎಂದು ಬರೆದಿದ್ದೆ. ಚುನಾವಣೋತ್ತರ ಸಮೀಕ್ಷೆಗಳು ಆಪ್ ಗೆ ಸ್ಪಷ್ಟ ಬಹುಮತದ ನಿರೀಕ್ಷೆಯನ್ನು ಹುಟ್ಟುಹಾಕಿದ್ದವು. ಇಂದಿನ ಫಲಿತಾಂಶ ಕಾಂಗ್ರೆಸ್ಸಿನ ಧೂಳಿಪಟವನ್ನು ಖಚಿತಪಡಿಸಿ, ಬಿಜೆಪಿಗೂ ಅಘಾತಕಾರಿಯಾದಂತಹ ತೀರ್ಪು ನೀಡಿದ್ದಾರೆ ದೆಹಲಿಯ ಮತದಾರರು. ಇರುವ ಎಪ್ಪತ್ತು ಸೀಟುಗಳಲ್ಲಿ ಆಮ್ ಆದ್ಮಿ ಪಕ್ಷ 67ರಲ್ಲಿ ಜಯ ಗಳಿಸಿದ್ದರೆ, ಬಿಜೆಪಿ ಮೂರರಲ್ಲಿ ಮಾತ್ರ ಗೆಲುವು ಖಂಡಿದೆ. ಕಾಂಗ್ರೆಸ್ಸಿಗೆ ಒಂದೂ ಇಲ್ಲ!
2014ರ ಲೋಕಸಭಾ ಚುನಾವಣೆಯಲ್ಲಿ ಅಭೂತಪೂರ್ವ ಯಶಸ್ಸು ಗಳಿಸಿ ನಂತರ ನಡೆದ ವಿಧಾನಸಭಾ ಚುನಾವಣೆಗಳಲ್ಲೂ ಕಾಂಗ್ರೆಸ್ಸನ್ನು ಬಗ್ಗು ಬಡಿದು ಗೆಲುವು ಕಂಡಿದ್ದ ಬಿಜೆಪಿ ದೆಹಲಿಯನ್ನೂ ಅನಾಯಾಸವಾಗಿ ಗೆಲ್ಲುತ್ತದೆ ಎಂದಿದ್ದ ನಿರೀಕ್ಷೆ ಸುಳ್ಳಾಗಿದೆ. ಇದು ಬಿಜೆಪಿಗೆ ದೊಡ್ಡ ಸೋಲು. ಅವರ ಕಡೆಗೇ ತುಯ್ದಾಡುತ್ತಿದ್ದ ಗೆಲುವು ಕಾಲಕ್ರಮೇಣ ದೂರಾಗಿದ್ದಕ್ಕೇ ಅವರ ಅತಿಯಾದ ಆತ್ಮವಿಶ್ವಾಸ, ಪಕ್ಷಕ್ಕಾಗಿ ದಶಕಗಳಿಂದ ದುಡಿದ ಕಾರ್ಯಕರ್ತ, ನಾಯಕರನ್ನು ಕಡೆಗಣಿಸಿ ಇದ್ದಕ್ಕಿದ್ದಂತೆ ಕಿರಣ್ ಬೇಡಿಯನ್ನು ಮುನ್ನೆಲೆಗೆ ತಂದು ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಮಾಡಿದ್ದು ಬಿಜೆಪಿಯಿಂದ ಮತಗಳು ದೂರಾಗಿದ್ದಕ್ಕೆ ಕಾರಣ. ಗಣರಾಜ್ಯೋತ್ಸವದ ಸಂದರ್ಭದಲ್ಲಿ ತನ್ನದೇ ಹೆಸರು ನೂರಾರು ಬಾರಿ ಅಚ್ಚಾಗಿರುವ ಬಟ್ಟೆಯನ್ನು ಧರಿಸಿದ ಮೋದಿಯವರ ನಡೆನುಡಿಯೂ ಒಂದಷ್ಟು ಮತಗಳು ದೂರ ಮಾಡಿದ್ದರೆ ಅಚ್ಚರಿಯೇನಿಲ್ಲ. ಬಿಜೆಪಿಯ ಇದುವರೆಗಿನ ನಿರಾಡಳಿತಕ್ಕೆ ಇದು ಉತ್ತರ ಎಂಬುದು ಅವಸರದ ಹೇಳಿಕೆಯಾಗುತ್ತದೆ. ಕೇಂದ್ರದಲ್ಲಿ ಅಧಿಕಾರದಲ್ಲಿದ್ದು ರಾಜಧಾನಿಯಲ್ಲಿ ಗೆಲುವು ಕಾಣದೆ ಹೋದದ್ದು ಹಿನ್ನಡೆ ಎಂಬ ವಿಷಯವನ್ನು ಒಪ್ಪಬೇಕು; ಜೊತೆಗೇ ಇದು ಕೇಂದ್ರ ಸರಕಾರದ ಕಾರ್ಯವೈಖರಿಗೆ ಜನರು ನೀಡಿದ ಪ್ರತಿಕ್ರಿಯೆ ಎಂದು ಖಡಾಖಂಡಿತವಾಗಿ ಹೇಳುವಂತಿಲ್ಲ. ಲೋಕಸಭಾ ಚುನಾವಣೆಗೂ ವಿಧಾನಸಭಾ ಚುನಾವಣೆಗೂ ಇರುವ ವ್ಯತ್ಯಾಸವೇ ಅದು. ಕೆಲವು ರಾಜ್ಯಗಳಲ್ಲಿ ಮತದಾರರು ಎರಡೂ ಕಡೆ ಒಂದೇ ಸರಕಾರ ಇರಲಿ ಎಂದುಕೊಂಡರೆ ಇನ್ನು ಕೆಲವೆಡೆ ಸ್ಥಳೀಯ ಅಗತ್ಯತೆಗಳಿಗೆ ಸಿಗುವವರನ್ನು ಆರಿಸುತ್ತಾರೆ. ದೆಹಲಿಯಲ್ಲಿ ಎರಡನೆಯ ಆಯ್ಕೆಯಾಗಿದೆ.
ನಲವತ್ತೊಂಬತ್ತು ದಿನಗಳಿಗೆ ರಾಜೀನಾಮೆ ಕೊಟ್ಟುಬಿಟ್ಟಿದ್ದ ಕೇಜ್ರಿವಾಲರ ನಡೆ ಆಮ್ ಆದ್ಮಿ ಪಕ್ಷದ ಅಂತ್ಯಕ್ಕೆ ಮುನ್ನುಡಿ ಎಂದೇ ವಿಶ್ಲೇಷಿಸಲಾಗಿತ್ತು. ಅಂಬಾನಿಗಳ ವಿರುದ್ಧ, ಕಾರ್ಪೋರೇಟ್ ಉದ್ಯಮಿಗಳ ವಿರುದ್ಧ ಮಾತನಾಡಲಾರಂಭಿಸಿದ ಮೇಲೆ ಮಾಧ್ಯಮಗಳಲ್ಲೂ ಅರವಿಂದ್ ಕೇಜ್ರಿವಾಲ ಮತ್ತವರ ಪಕ್ಷಕ್ಕೆ ಮಹತ್ವವನ್ನು ಉದ್ದೇಶಪೂರ್ವಕವಾಗಿಯೇ ಕಡಿಮೆ ಮಾಡಲಾಗಿತ್ತು. ಕೊಟ್ಟ ಕುದುರೆಯನು ಏರಲಾರದೆ ಹೋದ ಕೇಜ್ರಿವಾಲರ ರಾಜಕೀಯ ಬದುಕು ಮುಗಿದಂತೆಯೇ ಎಂಬ ನಂಬುಗೆಯನ್ನು ಸಂಪೂರ್ಣವಾಗಿ ತೊಡೆದುಹಾಕಿದ್ದಾನೆ ದೆಹಲಿಯ ಮತದಾರ. ಬಹಿರಂಗವಾಗಿ ಬಹಳಷ್ಟು ಬಾರಿ ಕ್ಷಮಾಪಣೆ ಕೋರಿದ್ದು, ಇತರ ಪಕ್ಷಗಳ ವೈಯಕ್ತಿಕ ನಿಂದನೆಗೂ ಸಾವಧಾನದಿಂದಲೇ ವರ್ತಿಸಿದ್ದು, ಪ್ರಾಮಾಣಿಕತೆಯಿಂದ ದೂರ ಸರಿಯದೆ ಹೋದದ್ದು (ಮಧ್ಯರಾತ್ರಿಯ ಹವಾಲಾ ಕೇಸಿನಲ್ಲಿರುವ ಸತ್ಯ ಮಿಥ್ಯೆಯಷ್ಟು, ಇನ್ನು ಮುಂದೆ ತಿಳಿಯಬೇಕು), ಬುಖಾರಿಯಂತಹ ಧಾರ್ಮಿಕ ನಾಯಕನೆನ್ನಿಸಿಕೊಳ್ಳುವವರ ಬೆಂಬಲವನ್ನು ತತ್ ಕ್ಷಣವೇ ನಿರಾಕರಿಸಿದ್ದು ಕೇಜ್ರಿವಾಲರ ಮೇಲಿನ ನಂಬುಗೆ ಪ್ರೀತಿಯನ್ನು ಮತ್ತಷ್ಟು ಹೆಚ್ಚಿಸಿದ್ದವು. ಅವೆಲ್ಲದರ ಪರಿಣಾಮ 67 ಸೀಟುಗಳಲ್ಲಿ ಗೆಲುವು. ಈ ಗೆಲುವು ಒಳ್ಳೆಯದಾ?
vote share delhi 2015
ಮೂಲ: ಎಲೆಕ್ಷನ್ ಕಮಿಷನ್
ಖಂಡಿತವಾಗಿ ಇಂತಹ ಸ್ವೀಪ್ ಔಟ್ ಗೆಲುವು ಪ್ರಜಾಪ್ರಭುತ್ವಕ್ಕೆ ಒಳ್ಳೆಯದಲ್ಲ! ಈಗಿನ ಕೇಂದ್ರ ಸರಕಾರವನ್ನೇ ನೋಡಿದರೆ ಅಲ್ಲೊಂದು ಅಧಿಕೃತ ವಿರೋಧಪಕ್ಷವಿಲ್ಲ. ಒಂದು ಸಬಲ ವಿರೋಧಪಕ್ಷವಿಲ್ಲದ ಪ್ರಜಾಪ್ರಭುತ್ವ ಅಡ್ಡದಾರಿ ಹಿಡಿಯುವ ಸಾಧ್ಯತೆಗಳೇ ಅಧಿಕ. ವಿರೋಧವಿಲ್ಲದಾಗ ಮಾಡಿದ್ದೆಲ್ಲವೂ ಸರಿಯೆಂಬ ಭಾವ ಮೂಡಲಾರಂಭಿಸಿಬಿಟ್ಟರೆ ತಪ್ಪುಗಳ ಸಂಖೈ ಹೆಚ್ಚಾಗುತ್ತ ಹೋಗುತ್ತದೆ. ಅಭೂತಪೂರ್ವ ಗೆಲುವು ಹೆಚ್ಚಿನ ಜವಾಬ್ದಾರಿ ನೀಡುವುದು ಎಷ್ಟು ಸತ್ಯವೋ ಒಂದಷ್ಟು ಅಹಂಭಾವ ಮೂಡಿಸುವುದೂ ಅಷ್ಟೇ ಸತ್ಯ. ಗೆಲುವಿನ ನಂತರ ಅರವಿಂದ್ ಕೇಜ್ರಿವಾಲ್ 'ಮುಂಚಿನ ವಿನಯತೆಯೇ ಈಗಲೂ ಇರಬೇಕು. ಅಹಂಕಾರದಿಂದ ಕಾಂಗ್ರೆಸ್ ಸೋತಿತು. ಈ ಚುನಾವಣೆಯಲ್ಲಿ ಅಹಂಕಾರ ತೋರಿಸಿದ ಬಿಜೆಪಿ ಸೋತಿದೆ. ನಾಯಕರಾಗಲೀ ಕಾರ್ಯಕರ್ತರಾಗಲೀ ಅಹಂಕಾರ ತೋರಿಸಿದರೆ ಅವರಿಗಾದ ಗತಿಯೇ ನಮಗೂ ಆಗುತ್ತದೆ' ಎಂಬ ಎಚ್ಚರಿಕೆಯ ಮಾತುಗಳನ್ನಾಡಿದ್ದಾರೆ. ಗೆಲುವು ಕಂಡಾಯಿತು. ಇನ್ನೇನಿದ್ದರೂ ಕೆಲಸ ಮಾಡಿ ತೋರಿಸಿ ದೆಹಲಿಗರ ಜೊತೆಜೊತೆಗೆ ಉಳಿದ ದೇಶವಾಸಿಗಳ ವಿಶ್ವಾಸವನ್ನು ಪಡೆದುಕೊಳ್ಳುವ ಕೆಲಸವಾಗಬೇಕು. ದೊಡ್ಡ ಕೆಲಸವದು.
ಇನ್ನು ಕಾಂಗ್ರೆಸ್ ಒಂದು ಹಳ್ಳದಿಂದ ಮತ್ತೊಂದು ಹಳ್ಳಕ್ಕೆ ಬಿದ್ದಿದೆ; ಆಳವಾದ ಕಮರಿಗೆ ಬಿದ್ದಿದೆ. ಸೀಟುಗಳ ಸಂಖೈಯಲ್ಲಿ ಗಮನಾರ್ಹ ಕಡಿತವಾಗಿದ್ದರೂ ಬಿಜೆಪಿ ಕಳೆದ ಚುನಾವಣೆಯಲ್ಲಿ ಪಡೆದ ವೋಟ್ ಶೇರನ್ನೇ ಹೆಚ್ಚುಕಡಿಮೆ ಈ ಬಾರಿಯೂ ಪಡೆದಿದೆ. ಅಷ್ಟರಮಟ್ಟಿಗೆ ಬಿಜೆಪಿ ಸಮಾಧಾನ ಪಟ್ಟುಕೊಳ್ಳಬಹುದು. ಆದರೆ ಕಾಂಗ್ರೆಸ್ಸಿನ ವೋಟ್ ಶೇರ್ ಹತ್ತಕ್ಕಿಂತಲೂ ಕಡಿಮೆಯಾಗಿದೆ! ಇಷ್ಟೆಲ್ಲ ಆದಮೇಲೆ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ರಾಹುಲ್ ಗಾಂಧಿಯ ನಾಯಕತ್ವವನ್ನು ಬದಲಿಸಿ ಎಂದು ಘೋಷಣೆ ಕೂಗಿದ್ದಾರೆ. ಬದಲಿಗೆ ಯಾರನ್ನು ತರಬೇಕೆಂಬುದನ್ನು ಅವರೇ ಹೇಳಿದ್ದಾರೆ - ಪ್ರಿಯಾಂಕ ಗಾಂಧಿ! ಕಾಂಗ್ರೆಸ್ ಉದ್ಧಾರವಾಗುವ ಯಾವ ಲಕ್ಷಣಗಳೂ ಇಲ್ಲ!

2 comments:

  1. Onus now is entirely with 'AK-67' and his team . . .

    What should we expect from Kejriwal

    Expose people to a completely different form of government which is totally transparent(Delhi govt can afford to be a glass house since it does not deal with sensitive issues like security). Every tender contracted, every file passed should brought into public domain.

    Govt websites should become operational and interactive. Most of the govt websites are very passive and lackluster.

    It's priority should be to improve the human development index of Delhi. Delhi, like other cities is witness to a huge influx of rural immigrants from across the country, and their condition isnt any better from say a farmers of vidharbha. Their upliftment is a daunting task and , if achieved, becomes a model for other state governments with metros.

    Ofcourse AK's favorite Lokpal and Swaraj model should definitely be implemented. This takes government one step closer to the people.

    Delhi govt should also set a new model of guarantee of service delivery(Karnataka govt itself has Sakaal, but its efficiency is debatable). This should be operational and easy to understand for the common man.

    ReplyDelete
  2. There is huge expectations and one must admit AK has all the expertise to meet these expectations. But the dynamics of governance has many facets and to administer well, a leader has to succeed in all these facets.

    I hope the Delhi experience has lessons for other parts of the country.
    Once people experience the taste of 'Mysore dosa' from Mylari hotel , they might demand that quality from other venders as well

    ReplyDelete